ಮಿಸ್ ೧೯೫೪

ಮಿಸ್ ೧೯೫೪

೧೯೫೪ನೇ ಇಸವಿಯ ದಶಂಬರ ತಿಂಗಳಲ್ಲೊಂದು ದಿವಸ, ಮಿಸ್, ಮೇರಿಯು ಹವಾನಾ (Havana)ದ ಕಡಲ ದಂಡೆಯಲ್ಲಿ ನಿಂತಿರುವಳು – ಹದಿನೆಂಟು ವರುಷದ ಹುಡುಗಿ. ಮೊದಲೇ ಚಂದದ ಗೊಂಬೆ; ಚೆನ್ನಾಗಿ ಆಡಿ, ಓಡಿ ಕೂಡಿಬಂದ ಮೈ ಅವಳದು. ಅದರ ಮೇಲೆ ನಿಸರ್ಗವು ಹರೆಯಕ್ಕೆ ಕೊಡುವ ಮೋಹಜನಕವಾದ ಒಪ್ಪೆ ಬಿದ್ದಿದೆ. ಉದ್ದಕ್ಕೆ ತಕ್ಕ ತೋರ; ತೋರಕ್ಕೆ ತಕ್ಕ ಉದ್ದ. ಮುದ್ದು ಮೋರೆ, ಉಬ್ಬಿದ ಎದೆ, ತಗ್ಗಿದ ಉದರ, ತುಂಬಿದ ಕೈಕಾಲು, ಚಿತ್ರಕನ ನೆನಸಿನ, ಶಿಲ್ಪಿಯ ಮನಸಿನ, ಕವಿಯ ಕನಸಿನ ಆದರ್ಶ ರೂಪವು, ಅಂಗಸೌಷ್ಟವವು ಆ ಮೇರಿಯಲ್ಲಿ.

ಅವಳ ಆ ಜಲವಿಸರಣದ (ಈಜುವ) ತೊಡಿಗೆಯು ಆಕೆಯ ನೈಸರ್ಗಿಕ ಸೌಂದರ್ಯವನ್ನು ಮತ್ತಷ್ಟು ಉಜ್ವಲಗೊಳಿಸಿದೆ- ನಡುವಿಗೆ ಜಟ್ಟಿಯ ದಟ್ಟ, ಮೇಲೆ ಉಬ್ಬಿದೆದೆಗಂಟಿದ್ದ ಅರೆ ಯೆದೆಯ ಒದ್ದೆ ಕೊರ್ಸೆಟ್, ಹಣೆಯ ಮೇಲ್ಗಡೆ ತುಂಟ ಮುಂಗುರುಳುಗಳನ್ನು ಸೆರೆಗೈದು ಬಿಗಿದಿದ್ದ ರಿಬ್ಬನ್, ಹೀಗೆ ನಗ್ನತೆಯಲ್ಲೆಂದರೂ ಸಲ್ಲುವ ಆ ಅಡಾಮನ ಈವಿನಂತೆ ನಿಸರ್ಗದ ಬಾಲೆಯಾಗಿ ಮಿಸ್ ಮೇರಿಯು ಕಡಲ ತಡಿಯಲ್ಲಿ ಸಾಂವೇಲನ ಎದುರು ನಿಂತಿರುವಳು. ನಲ್ವತ್ತರ ಆಚೆಯವನಾದರೂ ಇಪ್ಪತೈದರ ಮೈಗಟ್ಟ, ಅಂದವೂ ಸಾ೦ವೇಲನಲ್ಲಿ ಅಚ್ಚಳಿಯದೆ ಉಳಿದಿವೆ. ಮಲ್ಲಕಾಳಗಕ್ಕಿಳಿಯುವ ಜಟ್ಟಿಯಂತೆ ದಟ್ಟ ಕಟ್ಟಿ ಮಳಲಲ್ಲಿ ಒರಗಿರುವನು ಆತ. ಅವನೇ ಮೇರಿಗೆ ಜಲವಿಸರಣ ವಿದ್ಯಾ (ಈಜಿನ) ರಹಸ್ಯವನ್ನು ಕಲಿಸುವ ಗುರುವು.

“ಹೊತ್ತಾಯಿತು, ಇನ್ನೊಮ್ಮೆ ಇಳಿಯೋಣ!” ಎಂದು ವೈಯಾರದಿಂದ ನುಡಿದು ನಸುನಗು ವಿಂದಾತನನ್ನು ನೋಡುತ್ತ ನಿಂತಳು ಮೇರಿ. ಸಾಂವೇಲನು ಆ ತೊಯ್ದ ಅರೆಯುಡುಗೆಯ ಹರೆಯದ ಹುಡುಗಿಯ ಬೆಡಗನ್ನು ನೋಡಿದನು. ಅವಳ ಆ ತುಂಟಕಣ್ಣಿನಲ್ಲಿ, ಕೊಂಕಿನತುಟಿಯಲ್ಲಿ, ನಗುಮುಖದಲ್ಲಿ ನೆಟ್ಟ ನೋಟವನ್ನು ಹಿಂತೆಗೆಯಲಾರದೆ, ಒಂದು ವಿಧವಾಗಿ ಅವಳನ್ನೇ ನೋಡುತಲಿದ್ದ, ಅವನ ದೃಷ್ಟಿಯಲ್ಲಿ ಆ ಹುಡುಗಿಯು ಏನನ್ನು ಕಂಡಳೋ, ತಟ್ಟನೆ ಅವನ ಕೆನ್ನೆಗೆ ಮೃದುವಾಗಿ ಏಟನ್ನಿಟ್ಟು “ಈ ಹುಚ್ಚಾಟ ಬೇಡ, ಇಳಿಯೋಣ ಬಾ” ಎಂದು ಕಿಲಕಿಲನೆ ನಕ್ಕು ಬಿಟ್ಟಳು. ಸಾಂವೇಲನು ಹುಚ್ಚರ ಹುಚ್ಚನಾದ. ಆನಂದದಿದದ್ದು ಅವಳನ್ನು ಅಡ್ಡಲಾಗಿ ತನ್ನ ಕೈಗಳಲ್ಲೆತ್ತಿಕೊಂಡು “ಹೌದು, ಈ ಸಾಗರದಲ್ಲಿ ಈಜುವ ಹುಚ್ಚಾಟ ಬೇಡ; ಇಳಿಯೋಣ ಬಾ ಸಂಸಾರ ಸಾಗರಕ್ಕೆ!” ಎನ್ನುತ್ತ ಅಪ್ಪುಗೆಗೈಯುತ್ತ, ಮುದ್ದಿಕ್ಕುತ್ತ ಕಡಲಿಗೆ ಇಳಿದ. ಈಜುವ ಪಾಠ ಮಾಡಿಸುವುದನ್ನು ಬಿಟ್ಟು ಅವಳೊಡನೆ ನೀರಾಟವಾಡಿದ. ಬಹಳ ಹೊತ್ತು ಜಲಕೇಳಿಯಾಡಿ ತಿರುಗಿ ತಡಿಯನ್ನು ಸೇರಿದಾಗ ಅವರು ಗುರು ಶಿಷ್ಯೆಯರಲ್ಲ – ಪತಿಪತ್ನಿಯರು!

ಈಜುವ ಹುಚ್ಚು ಅಮೆರಿಕದಲ್ಲಿ ಹರಡಿದೆ. ಅದೂ ಹೆಂಗಳಲ್ಲಿ ಹೆಚ್ಚು. ಮಿಸಿಸಿಪೀ ಎಮಝಾನ್ ನದಿಗಳನ್ನು ದಾಟುವ, ಫ್ಲೋರಿಡಾ, ಯುಕಾತನ್ ಜಲಸಂದುಗಳನ್ನು ಪಾರಾಗುವ, ನ್ಯೂಯೋರ್ಲಿನ್ಸಿನಿಂದ ಹವಾನಾಕ್ಕೆ, ಜಮಿಕಾ ದಿಂದ ಹಯಾಟ್ಟಿಗೆ, ಫೋರ್ಟೊರಿಕೋದಿಂದ ತ್ರಿನಿದಾದಿಗೆ ಈಜಾಡುವ ಸ್ಪರ್ಧೆಗಳನ್ನು ಅಲ್ಲಿಯ ಮಹಿಳಾ ಸಂಘಗಳು ಏರ್ಪಡಿಸಿರುವವು. ಅವುಗಳಲ್ಲೊಂದು ನ್ಯೂಯೋರ್ಕದಿಂದ ಲೇಂಡ್ಸೆಂಡಿಗೆ ಈಜಲಾಪ ಸ್ತ್ರೀಗೆ ಪ್ರಪಂಚವನ್ನು ೨೪ ತಾಸುಗಳಲ್ಲಿ ಸುತ್ತಿ ಬರುವ ವಿಮಾನಯಾನದ ಬಹುಮಾನವನ್ನು ಕೊಡುವುದಾಗಿ ಸಾರಿರುವುದು, ಅದರ ಕಾರಣ ಎಷ್ಟೋ ಸಮುದ್ರ ವಿಸರಣ ತಲೆಯೆತ್ತಿವೆ. ಅಂತಹವುಗಳಲ್ಲಿ ಕ್ಯೂಬಾ ದ್ವೀಪದ ಹವಾನಾದಲ್ಲಿಯ ಸಾಂವೇಲನ ಜಲವಿಸರಣ ಮಹಾಶಾಲೆಯೇ ಪ್ರಸಿದ್ಧವಾದುದು. ಖಂಡದಿಂದ ಜಲವಿಸರಣ ವಿದ್ಯಾರ್ಥಿನಿಯರೆಷ್ಟೋ ಮಂದಿ ಅಲ್ಲಿಗೆ ಬಂದು, ತಕ್ಕ ಶಿಕ್ಷಣ ಹೊಂದಿ ಹಿಂತೆರಳಿರುವರು. ಮಿಸ್ ಮೇರಿಯು ವಿಮಾನ ಯಾನದ ಬಹುಮಾನಕ್ಕೆ ಸ್ಪರ್ಧಿಸಲೋಸುಗ ತಕ್ಕ ಶಿಕ್ಷಣವನ್ನು ಹೊಂದುವುದಕ್ಕಾಗಿ ನ್ಯೂಯೋರ್ಕ ದಿಂದ ಸಾಂವೇಲನ ಬಳಿಗೆ ಬಂದಿದ್ದಳು. ಆದರೆ ಆ ಮಹಾಶರಧಿಯನ್ನು ಏಕಾಂಗಿಯಾಗಿ ದಾಟಬೇಕೆಂಬ ಅವಳ ಕೆಚ್ಚನ್ನು ಕೆಡಿಸಿ ತನ್ನೊಡನೆ ಸಂಸಾರಶರಧಿಯಲ್ಲಿ ಧುಮುಕುವ ಹುಚ್ಚನ್ನು ಹಿಡಿಸಿ ಅವಳನ್ನು ಅಪ್ಪಿ ಒಪ್ಪಿಸಿಕೊಂಡನು ಸಾಂವೇಲ್, ಕ್ರಮವಾಗಿ ವಿವಾಹವೂ ಆದನು.

ಸಾಂವೇಲನು ಈಗ ಸಂಸಾರಿ, ಒಂದು ಮಗುವಿನ ತಂದೆ. ಹವಾನಾದಲ್ಲಿ ಅವನಿಗೊಂದು ಚಿಕ್ಕ ಚೊಕ್ಕ ಬಂಗಲೆ, ಮಗುವಿಂದೊಪ್ಪುವ ಮೇರಿಯಿಂದ ಅದು ಬೆಳಗುತ್ತಿದೆ. ಅಮೆರಿಕದ ತರುಣಿಯರ ಈಜುವ ಮರುಳಿಂದ ಅವನಿಗೆ ದುಡ್ಡಿನ ಒರತೆಯಲ್ಲದೆ ಕೊರತೆಯಿಲ್ಲ. ಅವನ ಜೀವನವು ಸರಾಗವಾಗಿ, ಸುಖಮಯವಾಗಿ ಸಾಗುತ್ತಿದೆ. ಒಮ್ಮೊಮ್ಮೆ ಆತನಿಗೆ ಇಪ್ಪತ್ತು ವರುಷಗಳ ಹಿಂದಿನ (೧೯೩೪) ತನ್ನ ಆ ಜೀವನ ಚಿತ್ರವು ಕಣ್ಣೆದುರಿಗೆ ಬಂದು ನಿಲ್ಲುವುದು.

ಆ ಕಾಲದಲ್ಲಿ ಅವನು ನ್ಯೂಯೋರ್ಕದ ನಿರುದ್ಯೋಗಿಗಳ ತಂಡದಲ್ಲೊಬ್ಬನಾಗಿದ್ದನು. ಬಲದಲ್ಲೇನೋ ಭೀಮ. ಆದರೇನು? ಕೆಲಸ ಕೊಡುವವರಿಲ್ಲ. ಕೈಯಲ್ಲಿ ಕಾಸಿಲ್ಲ. ಹಾಗೆಂದು ಆ ಭೀಮನ ಹೊಟ್ಟೆಯು ಸುಮ್ಮಗಿರುತ್ತಿತ್ತೇ? ಇಲ್ಲ. ಒಂದು ದಿನ ಅದರ ಕೂಗಾಟವನ್ನು ತಡೆಯಲಾರದೆ ಸಾ೦ವೇಲನು ಡಾಕ್ಟರ್ ಹರ್ಬಟ್ರರನ್ನು ಅಂಗಲಾಚಿ ಬೇಡಿಕೊಂಡ “ಸ್ವಾಮಿ, ದಯಮಾಡಿ ಈ ಹೊಟ್ಟೆಯ ಚೀರಾಟವನ್ನು ನಿಲ್ಲಿಸಿ!” ಎಂದ. ಹರ್ಬಟ್ರರು ಸಾಂವೇಲನನ್ನು ದಿಟ್ಟಿಸಿ ನೋಡಿದರು. ಆ ಅರೆಹೊಟ್ಟೆಯ ಪೆಟ್ಟಿಗೂ ಹಿಮ್ಮೆಟ್ಟಿದ ದಷ್ಟಪುಷ್ಟವಾಗಿ ಬೆಳೆದಿತ್ತು ಸಾ೦ವೇಲನ ದೇಹ. ತೇಜಸ್ಸು, ಓಜಸ್ಸು, ವೀರ್ಯಸಮೃದ್ಧಿ ಎಲ್ಲವೂ ತುಂಬಿದ್ದ ಆದರ್ಶ ಆರೋಗ್ಯಕಾಯನಾಗಿದ್ದನು ಆತ. ಪುರುಷ ಸಂಪರ್ಕವಿಲ್ಲದೆಯೇ ಗರ್ಭೋತ್ಪಾದನೆ ಮಾಡುವ, ಕ್ಲಿನಿಕನ್ನು (ಚಿಕಿತ್ಸಾಲಯ) ತೆರೆಯುವ ಯೋಚನೆಯು ಆ ಡಾಕ್ಟರರಿಗಿತ್ತು. ಅದಕ್ಕಾಗಿ ಟ್ಯೂಬ್ ಇಂಜಕ್ಷನ್ ಸಫಲವಾಗುವಂತಹ ವೀರ್ಯವಂತನನ್ನು ಅವರು ಅರಸುತ್ತಿದ್ದರು. ಸಾ೦ವೇಲನಂತೂ ಸುಲಭವಾಗಿ ದೊರೆತ. ಕ್ಲಿನಿಕ್ ಸ್ಥಾಪಿತವಾಯಿತು. ಅಲ್ಲಿಗೆ ಗರ್ಭಾ ಕಾಂಕ್ಷಿಗಳಾಗಿ ಟ್ಯೂಬ್ ಇಂಜಕ್ಷನ್ ಹೊಂದಲು ಬರುವ ಸ್ತ್ರೀಯರಿಗೆ ಅಪ್ರತ್ಯಕ್ಷವಾದ ಗೂಳಿಯಾಗಿ ಬಾಳಿದನು ಸಾಂಮೇಲ್. ಅಂತಹ ಹೀನ ವೃತ್ತಿಯಿ೦ದ ಹೊಟ್ಟೆ ಹೊರುವುದು ಸಾ೦ವೇಲನಿಗೆ ಸರಿದೋರದಿದ್ದರೂ ನಿರುಪಾಯನಾಗಿ ೧೦-೧೨ ವರುಷಗಳನ್ನು ಕಳೆದ; ಹಲವು ಮಕ್ಕಳಿಗೆ ಪರೋಕ್ಷದ ತಂದೆಯಾದ. ಅಷ್ಟರಲ್ಲಿ ಅಮೆರಿಕದ ಹೆಂಗಳಿಗೆ ಈಜಿನ ಹುಚ್ಚುಗಟ್ಟಿತು. ಸಾ೦ವೇಲನು ಈ ಸುಸಂದರ್ಭವನ್ನು ಬಿಗಿಹಿಡಿದು ನ್ಯೂಯಾರ್ಕ್‌ನಲ್ಲಿಯೇ ಸ್ವಿಮ್ಮಿಂಗ್ ಮಾಸ್ತರನಾಗಿ ಪ್ರಖ್ಯಾತನಾದ. ಆಮೇಲೆ ಈ ಹವಾನಾಕ್ಕೆ ಬಂದು ಜಲವಿಸರಣ ಮಹಾಶಾಲೆಯನ್ನು ತೆರೆದ. ಇಲ್ಲಿ ಉಷ್ಣೋದಕ ಮಹಾವಾಹಿನಿಯ ದೆಸೆಯಿಂದ ಈಜಲನುಕೂಲ ವಾತಾವರಣವೂ, ದ್ವೀಪಗಳಿಂದ ದ್ವೀಪಗಳಿಗೆ ಈಜಲಿಕ್ಕೆ ಸೌಕರ್ಯವಿರುವ ನಡುಗಡ್ಡೆಗಳ ಸಮೂಹವೂ ಇದ್ದುದರಿಂದ ಆರೋಗ್ಯಕ್ಕೆಂದು, ಸ್ಪರ್ಧೆಗೆಂದು ಬಾಲೆಯರೆಷ್ಟೋ ಮಂದಿ ತಂಡತಂಡವಾಗಿ ಬಂದು ಸಾಂವೇಲನ ಶಿಷ್ಯಯರಾಗುತ್ತಿದ್ದರು. ಇಂದಿನ ಗೃಹಸ್ಥಾಶ್ರಮದ ಸುಖಮಯವಾದ ಜೀವನದೆದುರಿಗೆ ಅಂದಿನ ಆ ಜೀವನವು ಗೂಳಿಯ ಬಾಳಿಗಿಂತಲೂ ಕೀಳಾಗಿ ತೋರುತ್ತಿತ್ತು ಸಾಂವೇಲನಿಗೆ.

ಇಂದು ಮೇರಿಗೆ ಸಂತೋಷವೇ ಸಂತೋಷ. ಅವಳ ಮಗು ಹುಟ್ಟಿದ ದಿನವಲ್ಲವೇ? ನೋಡಿ, ಆ ಮುದ್ದು ಮಗುವನ್ನು ತೊಡೆಯ ಮೇಲೆ ನಿಲ್ಲಿಸಿ ಕುಣಿಸುತ್ತಿದ್ದಾಳೆ. ಸಾಗರವನ್ನು ಈಜಲು ಹೊರಟ ತನ್ನ ಮಗಳು ಸಂಸಾರ ಸುಖಸಾಗರದಲ್ಲಿ ತೇಲಾಡುತ್ತಿರುವುದನ್ನು ನೋಡಬೇಕೆಂದು ನ್ಯೂಯೋರ್ಕ್‌ನಿಂದ ಬಂದಿದ್ದ ಅವಳ ತಾಯಿ ಮೇಯೊಳು ಬಳಿಯಲ್ಲಿ ಕುಳಿತು ಮೊಮ್ಮಗುವಿನ ಅಂದಚಂದವನ್ನು ನೋಡಿ ಹಿಗ್ಗುತ್ತಿದ್ದಾಳೆ. ಇವರಿಗೆದುರಾಗಿ ಮೇಜಿನ ಆಚೆಕಡೆಯಲ್ಲಿ ಸಾಂವೇಲನು ಕುಳಿತಿದ್ದಾನೆ. ಮಗುವಿನ ಬಾಲಲೀಲೆಯನ್ನು ನೋಡುತ್ತ, ಸುಖಿಗೋಷ್ಠಿಯಾಡುತ್ತ, ಚಹಾಪಾನ ಮಾಡುತಲಿರುವರು ಅವರೆಲ್ಲ.

ತನ್ನ ಮೊಮ್ಮಗುವಿನ ಸೊಬಗಿಂದ ಹಿಗ್ಗಿದ ಮೇಯೊಳು ವಿನೋದಕ್ಕಾಗಿ “ಇಂತಹ ಮುದ್ದಿನ ಮುದ್ದೆಯನ್ನು ಹೆತ್ತ ನನ್ನ ಮಗಳು ಭಾಗ್ಯವಂತೆಯಲ್ಲವೇ?” ಎಂದು ಅಳಿಯನನ್ನು ಕೆಣಕಿದಳು. ಅಳಿಯನು ಬಿಟ್ಟುಕೊಡುವನೇ? “ನನ್ನಂತಹ ಮಾರನ ಕೈ ಹಿಡಿದುದರಿಂದಲ್ಲವೆ ಆ ಸೌಭಾಗ್ಯ?” ಎಂದ. ತೊಡಗಿತು ಸಂವಾದ. “ಹೊಂದುವ ಸೌಭಾಗ್ಯವೇ ಮುಖ್ಯ. ಇದರಲ್ಲಿ ಗಂಡನಿಗೆ ಪ್ರಾಮುಖ್ಯತೆ ಇಲ್ಲ.”

“ಏನೂ ಇಲ್ಲವೇ?”

“ಏನೂ ಇಲ್ಲ; ನಾನು ಮದುವೆ ಯಾಗದೆಯೇ ಇಂತಹ ಮುದ್ದು ಮಗಳನ್ನು ಹೆರಲಿಲ್ಲವೇ?”

“ಅ೦ದರೆ ಈ ನನ್ನ ಮುದ್ದು ಮೇರಿಯು….”

“ಅಯ್ಯೋ ನನ್ನನ್ನು ಅವಮಾನಿಸುವಿರಾ? ಹಾಗಲ್ಲ, ಇವಳು ಬರೇ ಟ್ಯೂಬ್ ಬೇಬಿ ಎಂದೆನಷ್ಟೆ.”

“ಏನು! ಟ್ಯೂಬ್ ಬೇಬಿ! ಇವಳು ಟ್ಯೂಬ್ ಬೇಬಿ! ನಿಜವೇ?”

“ಸಂಶಯವೇಕೆ? ನ್ಯೂಯಾರ್ಕ್‌ನ ಪ್ರಖ್ಯಾತ ಡಾಕ್ಟರ್ ಹರ್ಬಟ್ರ…”

“ಡಾಕ್ಟರ್ ಹ-ರ್ಬ-ರ್ಟ! ಹ-ರ್ಬ-ರ್ಟ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಮ್ಮನ ಸೇವೆ
Next post ಸಿರಿಗನ್ನಡ ತಾಣ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…