ಸುಡುಗಾಡು ಸಿದ್ದನ ಪ್ರಸಂಗ

ಸುಡುಗಾಡು ಸಿದ್ದನ ಪ್ರಸಂಗ

ಹೂವಿನ ಹಾರಗಳ ಗಮಗಮ ಊದುಕಡ್ಡಿಯ ಘಾಟು ಬೆಂಕಿಯಲ್ಲಿ ಉರಿದ ಕಟ್ಟಿಗೆಗಳ ಕಮರು ವಾಸನೆ ಸುಟ್ಟ ಹೆಣಗಳ ಕಮಟು ವಾಸನೆ ಬೂದಿಯ ಹಸಿಬಿಸಿ ವಾಸನೆ ಚೆಲ್ಲಾಡಿದ ತೆಂಗಿನಕಾಯಿ ನೀರಿನ ಮುಗ್ಗಲು ವಾಸನೆ ಸುಂಯ್ಯನೆ ಬೀಸುವ ಗಾಳಿ ಹೊತ್ತು ತರುವ ಗಂಜಲು ವಾಸನೆ ಎಲ್ಲಾ ಒಟ್ಟಿಗೆ ಸೇರಿ ವಾತಾವರಣದಲ್ಲಿ ಸಹಜವಾಗಿ ಇರಬೇಕಾದ ಸ್ವಚ್ಛಂದ ವಾಸನೆಯನ್ನು ಹದಗೆಡಿಸಿದೆ. ದಿವಿನಾದ ಸೌದೆ ತುಂಡುಗಳನ್ನು ಆರಿಸಿ ತಂದು ಜೋಡಿಸಿ ಚಿತೆ ಸಿದ್ದಪಡಿಸುವ ಸಿದ್ದನಿಗೆ ಅದೊಂದು ನಮೂನೆ ಸಡಗರ. ಯಾರದೋ ಶವ ಸ್ಮಶಾನಕ್ಕೆ ಬರಲಿದೆ ಎಂಬ ಸುದ್ದಿ ಮುಟ್ಟಿದೊಡನೆ ಹಳೆ ರಗ್ ಬಿಸಾಡಿ ಮೈ ಕೊಡವಿಕೊಂಡದ್ದು ಒಂದು ಬುಂಡೆ ಸಾರಾಯಿ ಏರಿಸಿ ಒಂದು ‘ಧಂ’ ಬೀಡಿ ಎಳೆದ. ಶವವನ್ನು ಚಿತಾಗ್ನಿಗೆ ಒಪ್ಪಿಸಿ ಬೆಂಕಿ ಸರಿಸಿ ಕೊರಡುಗಳನ್ನೆತ್ತಿ ಸರಿಯಾಗಿ ಬೆಂಕಿ ಹರಡುವಂತೆ ಮಾಡುವ ಅವನು. ಶವದ ತಲೆ ಬುರುಡೆ ’ಡಬ್’ ಎನ್ನುವವರೆಗೂ ಇರುವ ಸಂಬಂಧಿಗಳು ಶವವನ್ನಲ್ಲೇ ಬಿಟ್ಟು ಹೋಗುವವರೆಗೆ ತುಂಬಾ ಬಿಜಿ. ಆಗೆಲ್ಲಾ ಮಾತು ಕಡಿಮೆ. ಎಲ್ಲರೂ ಹೊರಟುಹೋಗಿ ಶವ ಮತ್ತು ತಾನು ಮಾತ್ರವೇ ಉಳಿದಾಗ ಶವದೊಂದಿಗೆ ಮಾತಿಗಿಳಿದುಬಿಡುವ. ನರಮನುಷ್ಯನ ಜನ್ಮದ ಬಗ್ಗೆ ತಾತ್ಸಾರವಾಗಿ ತೆಗಳುವ ಅವನು ಹಲವೊಮ್ಮೆ ‘ಮಾನವ ಜಲ್ಮ ಬಲು ದೊಡ್ಡದು ಇದ ಹಾನಿ ಮಾಡಬ್ಯಾಡಿರಿ ಹುಚ್ಚಪ್ಪಗಳಿರಾ’ ಎಂದು ಹಾಡಿ ಹೊಗಳುವುದುಂಟು. ಮುಡಿ ಕಟ್ಟಿದ ತಲೆ ಮುಖದ ತುಂಬಾ ಗಡ್ಡ ಮೀಸೆ ಹುರಿಗಟ್ಟಿದ ಮೈ ನೋಡುವ ಅನೇಕರು ಅವನ ಮೈನಿಂದ ಹೆಣದ ವಾಸನೆ ಬರುತ್ತದೆಂದು ಹೆದರುವುದುಂಟು. ಅವನಿಂದ ಯಾರೂ ಮಾರು ದೂರ.

ಚಿತೆಗೆ ಅವನು ಸೌದೆಗಳನ್ನು ಹೊಂದಿಸುವಾಗ ಮುರುಕಲು ಮನೆಯಲ್ಲಿ ಶೇಖರಿಸಿಟ್ಟು ಸೌದೆಗಳನ್ನು ಹೊತ್ತು ತಂದುಕೊಡುತ್ತ ಅವನಿಗೆ ನೆರವಾಗುವ ಹೆಣ್ಣು ಜೀವ ಒಂದಿದೆ. ಅದನ್ನವನು ಜುಂಜಿ ಎಂದು ಕರೆಯುತ್ತಾನೆ. ಸಿದ್ದನಿಗೆ ಹುಟ್ಟಿದನೆನ್ನುವ ಆರೇಳು ವರ್ಷದ ಹುಡುಗನೂ ಜೊತೆಗಿರುತ್ತಾನೆ. ಬಲು ಚುರುಕು. ಚೆಲ್ಲಾಪಿಲ್ಲಿಯಾಗಿದ್ದ ತೆಂಗಿನಕಾಯಿ ಹೋಳುಗಳನ್ನು ಹೂ ಹಾರಗಳನ್ನು ಚಟ್ಟಕ್ಕೆ ಕಟ್ಟಿದ ಬಿದಿರು ಬೊಂಬುಗಳು ಹೊಸ ಬಟ್ಟೆ, ಇತ್ಯಾದಿಗಳನ್ನೆಲ್ಲಾ ನೀಟಾಗಿ ಎತ್ತಿಡುವ ಕೆಲಸ ಅವನದೆ. ಸಿದ್ದನ ನಂತರ ಸ್ಮಶಾನದ ಭಾವಿ ಅಧಿಪತಿ ಅಂವಾ. ಚಿಕ್ಕ ಹುಡುಗ ಭಯಪಟ್ಟಾನು ಅಂತ ಮೊದಲು ಸಿದ್ದ ಅವನನ್ನು ಮನೆಯ ಒಳಗೇ ಇರಿಸುತ್ತಿದ್ದ. ಮೀನಿನ ಮರಿ ಈಜದಿರಲು ಸಾಧ್ಯವೆ. ಸ್ಮಶಾನದಲ್ಲಿ ಆಟವಾಡಲು ಅವನಿಗೇನಿದೆ? ತಂದುಕೊಟ್ಟ ಮಣ್ಣಿನ ಬೊಂಬೆಗಳು ಹಳತಾಗಿದೆ.

ಮರಗಳನ್ನೇರಿ ಎಷ್ಟು ಜಿಗಿದಾಡಿಯಾನು, ಬಳಿಯೇ ಇರುವ ಕೆಂಚಪ್ಪನ ಗುಡಿಯ ಗಂಟೆಯನ್ನು ಅದೆಷ್ಟು ಸಲ ಬಡಿದಾನು. ಅವನಿಗೋ ಮೈ ಪರಚಿಕೊಳ್ಳುವಷ್ಟು ಬೇಸರ. ಮಾತನಾಡಿಸಲೊಂದು ಜೀವ ಕೂಡ ಅಲ್ಲಿರಲಿಲ್ಲ. ಅಲ್ಲಿಗೆ ಬರೋಲ್ಲ. ಆಗೆಲ್ಲಾ ‘ಈವತ್ತು ಯಾವನೂ ಊರ್‍ನಾಗೆ ಸಾಯಲೆ ಇಲ್ವೆ ಅಯ್ಯಾ?’ ಎಂದು ಸಿದ್ದನನ್ನು ಪೀಡಿಸುತ್ತಾನೆ. ವಾರವಾದರೂ ಶವ ಬಾರದೆಹೋದರೆ ಸಿದ್ದನ ಮುಖವೂ ಬಿಕೋ ಅನ್ನುತ್ತದೆ. ಆಗ ಗುಡಿಯಲ್ಲಿರುವ ಕೆಂಚಪ್ಪನಿಗೆ ಸಿದ್ದನೂ ಇದೇ ಪ್ರಶ್ನೆ ಎಸೆಯುತ್ತಾನೆ. ಸ್ಮಶಾನಕ್ಕೆ ಹೆಣವೇ ಭೂಷಣ ಅದಿಲ್ಲದ ಮೇಲೆ ಅದನ್ನೇಕೆ ಸ್ಮಶಾನ ಅನ್ನಬೇಕು. ಶವ ಬಂದರೇನೇ ದುಡಿತ ಕುಡಿತ ಎಲ್ಲಾ.

ಇಲ್ಲದಿದ್ದರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ, ಸಿದ್ದ ಬೆಳಗಿನಜಾವವೇ ಕತ್ತಲಲ್ಲಿ ಎದ್ದು ಆರು ಮೈಲಿ ದೂರವಿರುವ ಜೋಗಿ ಮರಡಿ ಕಾಡಲ್ಲಿ ನಡೆದು ದಿಂಡಿಗದ ಮರಗಳನ್ನೇ ಆರಿಸಿ ಕಡಿದು ಹೊರೆ ಕಟ್ಟಿ ಹೊತ್ತು ತಂದುಬಿಡುವನು. ತಲೆ ಮೇಲೆ ತಲೆ ಬಿದ್ದರೂ ಹತ್ತು ಗಂಟೆಗೆಲ್ಲಾ ಸಿದ್ದ ಸ್ಮಶಾನದಲ್ಲಿ ಸಿದ್ದ. ಅವನಿಲ್ಲದಾಗ ಯಾರಾದರೂ ಹುಡುಕಿಕೊಂಡು ಬಂದರೆ ಜುಂಜಿ ಸಂಭಾಳಿಸುತ್ತಾಳೆ. ‘ಸವ ಹೊತ್ಕಂಬನ್ನಿ ಬುದ್ದಿಯೊರ… ನಮ್ಮ ಮನೆಯೋನು ಈಗ ಬಂದು ಬಿಡ್ತವ್ನೆ’ ಎಂದು ಅದೊಂದು ಬಗೆಯ ಗತ್ತಿನಿಂದಲೇ ಅಪ್ಪಣಿಸುತ್ತಾಳೆ. ಸೀರೆಗೆ ಕಚ್ಚೆ ಹಾಕಿ ನಿಂತಳೆಂದರೆ ಅರ್ಧ ತಾಸಿನಲ್ಲೇ ಚಿತೆ ಸಿದ್ದ. ಅವಳೂ ದಿಂಡಗದ ತರಾ ಗಟ್ಟಿ ಹೆಂಗಸು. ಅವಳೆದುರು ಸಿದ್ದನೇ ಪೀಚು. ಆದರೆ ಸೋಂಬೇರಿಯಲ್ಲ. ದಿನವೂ ಕಾಡಿಗೆ ಹೋಗಿ ಫಾರೆಸ್ಟ್‌ನವರ ಕಣ್ಣು ತಪ್ಪಿಸಿ ಕಟ್ಟಿಗೆ ಹೊರೆಯೋ ಇಲ್ಲ ಕೊರಡನ್ನೂ ಹೊತ್ತು ತಾರದೆ ಮುದ್ದೆ ಮುರಿಯುವವನಲ್ಲ. ಜುಂಜಿಯೂ ವ್ಯರ್ಥವಾಗಿ ಕಾಲ ಕಳೆಯುವವಳಲ್ಲ. ಕಾಡಿಗೆ ಮೇಯಲು ಹೋಗುವ ದನಗಳು ಸ್ಮಶಾನ ಹಾಗೇ ಹೋಗಬೇಕಲ್ಲ. ಈಕೆ ಹಿಂದೆ ಮುಂದೆ ಹೋಗಿ ದನ ಎಮ್ಮೆಗಳ ಸೆಗಣಿ ಹಿಡಿದು ಬುಟ್ಟಿಯಲ್ಲಿ ತುಂಬಿ ತಂದು ಬೆರಣಿ ತಟ್ಟುತ್ತಾಳೆ, ಅವು ಒಣಗಿದಾಗ ಬೆರಣಿಗಳನ್ನು ಪೇರಿಸಿಡುತ್ತಾಳೆ. ಇದರಿಂದಾಗಿ ಅವರಿಗೆ ಕಾಸು ಮಿಗುತ್ತದೆ. ಹೆಣ ಸುಡಲು ಆರು ನೂರರಿಂದ ಎಂಟು ನೂರರವರೆಗೂ ಡಿಮಾಂಡ್ ಮಾಡುತ್ತಾರೆ. ಉರಿವ ಹೆಣವನ್ನು ಸಿದ್ಧನಿಗೊಪ್ಪಿಸಿ ನೆಮ್ಮದಿಯಾಗಿ ಹೋಗುವ ಮಂದಿ ‘ಸರಿಯಾಗಿ ಸುಡಪ್ಪ’ ಎಂದು ಅಂಗಲಾಚದೆಯಿರುವುದಿಲ್ಲ. ಸಿದ್ದ ಹಲ್ಲು ಗಿಂಜಿ ಪರಪರ ತಲೆ ಕೆರೆದಾಗ ಅವರಿಗೆ ಅವನ ನೋಟ ಐಲಾಟ ಅರ್ಥವಾಗುತ್ತೆ. “ಸರಿಯಾಗಿ ಸುಡಲೂ ಲಂಚ ಕೊಡಬೇಕೇನಯ್ಯಾ?” ಕೆಲವು ಪಿಸಣರು ರೇಗುತ್ತಾರೆ. ‘ಆಫೀಸ್ನಾಗೆ ನೀವು ತಗಂಬಲ್ಪಾ ದೇವ್ರು’ ಎಂದವನು ಪಿಸಕ್ಕನೆ ನಗುವಾಗ ಈ ಕ್ಷುಲ್ಲಕನ ಬಳಿ ಏನು ಮಾತೆಂಬಂತೆ ಐವತ್ತೋ ನೂರೋ ಪೀಕುತ್ತಾರೆ. ಕೆಲವರು ಶವದ ಮೇಲಿನ ಕಕ್ಕುಲತೆಯಿಂದ ತಾವಾಗಿಯೇ ಅವನ ಕೈ ಬಿಸಿ ಮಾಡುತ್ತಾರೆ. ಚೆನ್ನಾಗಿ ಸುಡಪ್ಪ ದೊರೆ ನಾಯಿ ನರಿ ಎಳೆದಾಡ್ದದ್ಹಾಗೆ ನೋಡೋ ಮಾರಾಯ’ ಎಂದು ದೀನರಾಗುತ್ತಾರೆ.

ಈ ಪರಿಯಲ್ಲಿ ಸಿದ್ದನ ಕೈಗೆ ಹೆಂಗಾದರೂ ಎಕ್ಸಟ್ರಾ ಕಾಸು ಬಿದ್ದೆ ಬೀಳುತ್ತದೆ. ಹೆಣದ ವಾರಸುದಾರರು ಹೋಗುತ್ತಲೆ ಉರಿವ ಕಟ್ಟಿಗೆಗಳಲ್ಲಿ ಅರ್ಧದಷ್ಟನ್ನು ಎಳೆದು ಬೆಂಕಿ ಆರಿಸಿ ಎತ್ತಿಟ್ಟುಕೊಳ್ಳುವ ಬೆಂಕಿ ಬೈರನಂತೆ ಸಿದ್ದ ಆಶೆಬುರುಕನಲ್ಲ. ಬೆಂಕಿ ಬೈರ ಈಗ ಬದುಕುಳಿದಿಲ್ಲ. ಅವನ ಹೆಣವನ್ನು ನಾಯಿ ನರಿ ಪಾಲು ಮಾಡದೆ ಸುಟ್ಟು ಭಸ್ಮ ಮಾಡಿದವನು ಬೆಂಕಿ ಬೈರನ ಶಿಷ್ಯ ಇದೇ ಸಿದ್ಧನೇ. ಗುರುವಿನಂತೆ ಸುಡುವ ಕಟ್ಟಿಗೆಗಳನ್ನು ಚಿತೆಯಿಂದ ಇರಿಯುವ ಬದ್‌ನಿಯತ್ತಿನ ಮನುಷ್ಯನಲ್ಲ. ಶವ ಸರಿಯಾಗಿ ಸುಡದಿದ್ದರೆ ಮತ್ತೆ ಸೌದೆ ತಂದು ಹಾಕಿ ಚೆನ್ನಾಗಿ ಸುಡುತ್ತಾನೆ. ಮುಂಜಾನೆಯೇ ಕೆಂಚಪ್ಪನ ಹೊಂಡದಲ್ಲಿ ಜಳಕ ಮಾಡುವ ಸಿದ್ದ ಹಣೆಗೆ ಶವದ ಬೂದಿಯನ್ನೇ ಭಸ್ಮದಂತೆ ಲೇಪಿಸಿಕೊಂಡು ವಿಗ್ರಹಕ್ಕೆ ಶಣ್ಣು ಮಾಡಿದ ತರುವಾಯವೇ ದಿನಚರಿ ಆರಂಭ. ಅದಕ್ಕೂ ಮೊದಲು ಶವವೇನಾದರೂ ಬಂದರೆ ಅದೂ ಅವನಿಗಾಗಿ ಕಾಯಬೇಕು. ಜನ ಅವನನ್ನು ಸುಡುಗಾಡು ಸಿದ್ದನೆಂದು ಕರೆದರೂ ಅದೊಂದು ಬಗೆಯ ಶಿಸ್ತು ರೂಢಿಸಿಕೊಂಡಿದ್ದಾನೆ ಬದುಕಿನಲ್ಲಿ, ಬಡವರ ಮನೆಯ ಶವವೆಂದು ತಿಳಿದಾಗ ಹೆಚ್ಚು ಕಾಸಿಗಾಗಿ ಗುಂಜಾಡುವುದಿಲ್ಲ. ಬಂದಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವ ಸಹನಾವಂತ. ಬಂದು ನಿಲ್ಲುವ ಕಾರುಗಳ ಸಂಖ್ಯೆ ಜನ ಜಾತ್ರೆ ಶವಕ್ಕೆ ಬಿದ್ದ ರಾಶಿಗಟ್ಟಲೆ ಹಾರ ಲೆಕ್ಕವಿಲ್ಲದಷ್ಟು ಒಡೆದ ತೆಂಗಿನಕಾಯಿಗಳು ದಂಡಿಗಟ್ಟಲೆ ಉರಿಸುವ ಕರ್ಪೂರ ಊದುಬತ್ತಿಯ ಮೇಲೆಯೇ ಶವದ ‘ವಜನ್’ ಎಷ್ಟೆಂದು ಅಜಮಾಸು ಮಾಡಿ ರೇಟು ಏರಿಸುತ್ತಾನೆ. ಆದರೂ ಶ್ರೀಮಂತರು ಮಹಾ ಜಿಪುಣರೆಂದೇ ಅವನ ಲೆಕ್ಕಾಚಾರ. ತಂದೆಯ ಶವ ಸುಡಲು ಕೊಡುವ ಕಾಸಿಗೂ ಮಾಡುವ ತಿಥಿ ಕರ್ಮಗಳಿಗೂ ಗಂಡು ಮಕ್ಕಳು ತಮ್ಮ ತಮ್ಮಲ್ಲೇ ಚಂದಾ ಎತ್ತುವುದನ್ನವನು ನೋಡಿದ್ದಾನೆ. “ನಿನ್ನ ಎಂ.ಬಿ.ಬಿ.ಎಸ್. ಓದಿಸ್ದ ನನ್ಗೇನ್ ಓದಿಸ್ದ? ನಾನೊಬ್ಬ ಗುಮಾಸ್ತ ಕಣೋ ನಾನಿಷ್ಟೇ ಕೊಡೋದು” ಎಂದು ನೋಟು ಹಿಚುಕುವ ಮಕ್ಕಳ ಸಣ್ಣತನವನ್ನೂ ಕಂಡಿದ್ದಾನೆ. ಸ್ಮಶಾನದಲ್ಲಿ ತಂದೆಯ ಶವದ ಎದುರೇ ಜಗಳ ಮಾಡುವ ಗಂಡು ಮಕ್ಕಳ ನಿರ್ಲಜ್ಜತೆಯ ಪ್ರಮಾಣ, ಅಳುತ್ತಾ ಪಿಳಿಪಿಳಿಸುವ ಹೆಣ್ಣು ಮಕ್ಕಳ ನೋವಿನ ಆಳ ಎಷ್ಟಿರುತ್ತದೆಂದು ಊಹಿಸಬಲ್ಲ. ಉದ್ದನೆಯ ಬೊಂಬಿನಿಂದ ಬೆಂಕಿ ದೂಡುತ್ತ ತುಟಿಯಂಚಿನಲ್ಲೇ ನಗುತ್ತ ಅವರತ್ತ ತಾತ್ಸಾರ ತೋರುವ ಸಿದ್ದ ಜ್ಞಾನಿಯ ಪೋಜ್ ಕೊಡುತ್ತಾನೆ.
ಏನೋ ಆಗಬೇಕಾಗಿದ್ದ ಸಿದ್ದ ಏನೋ ಆಗಿ ಸುಡುಗಾಡು ಸೇರಿದ ಬಗ್ಗೆ ಅವನಿಗೀಗ ಮೊದಲಿನಂತೆ ಪಶ್ಚಾತ್ತಾಪವೇನಿಲ್ಲ. ಬದುಕಲು ದುಡ್ಡು ಬೇಕು. ಮತ್ತೊಬ್ಬರ ಹಂಗಿಗೆ ಬೀಳದೆ ಹೆತ್ತವರಿಗೆ ಭಾರವಾಗದೆ ಬದುಕಬೇಕೆಂಬ ಹಠವಾದಿ, ದುಡ್ಡು ದುಡಿಯಲೊಂದು ಕಾಯಕ ಬೇಕು. ಸರ್ಕಾರಿ ನೌಕರಿ ಸಿಗದಿದ್ದಾಗ ಸ್ವಂತ ನೌಕರಿಯನ್ನು ಹುಡುಕಿಕೊಳ್ಳಬೇಕು ಎಂದು ಪರಿತಪಿಸುವ ಸಿದ್ದ ಸ್ಮಶಾನ ಕಾಯುವ ನೌಕರಿ ಆರಿಸಿಕೊಂಡಿದ್ದೂ ಆಕಸ್ಮಿಕವೆ. ನೌಕರಿಗಾಗಿ ಅಲೆದಲೆದು ಊರು ಊರು ತಿರುಗಿ ಬವಳಿ ಬಂದು ಪೇಟೆ ಬೀದಿಯಲ್ಲಿ ಬಿದ್ದಿದ್ದ ಸಿದ್ದನನ್ನು ನೋಡಿದ ಬೆಂಕಿ ಬೈರ ಎತ್ತಿ ಮುಖಕ್ಕೆ ನೀರು ಚಿಮುಕಿಸಿ ಉಪಚರಿಸಿದ್ದ ದೋಸೆ ಕೊಡಿಸಿದ್ದ. ‘ಯಾರು ನೀನು?’ ಅಂದಾಗ ಸಿದ್ದ ತಾನೊಬ್ಬ ಪರದೇಶಿ ಎಂದು ಬಿಕ್ಕಿದ್ದ. ‘ಕೆಲಸ ಹುಡುಕ್ಕೊಂಡು ಊರೂರು ಅಲಿತಾ ಇಲ್ಲಿಗೆ ಬಂದೆ. ಉಪವಾಸ ಸಾಯ್ತಾ ಇದೀನಿ’ ಅಂತ ಅಲವತ್ತುಕೊಂಡಿದ್ದ. ‘ಸಾಯೋದ್ಯಾಕೆ ಬದುಕ್ಕೋವಂತೆ ಬಾ ಮಗಾ’ ಎಂದ ಬೆಂಕಿ ಬೈರ ಕರೆತಂದದ್ದು ಸ್ಮಶಾನಕ್ಕೆ. ‘ನನ್ಗೂ ವಯಸ್ಸಾತು ಈ ಶವಗಳ ಜೊತೆ ಬೆಂದು ಸಾಕಾಗದೆ ಸರೀರದಾಗ ಮೊದ್ಲಿನ ಸಗ್ತಿ ಇಲ್ ಮಗಾ ನನ್ನ ಜೊತೆನಾಗಿರು ಸ್ಮಶಾನ ನಂಬು ಅದೆಂದೂಗ ಉಪಾಸಕೆಡವಲ್ಲ’ ಅಂತ ಜೊತೇಲಿಟ್ಟುಕೊಂಡ. ಆತ್ಮಹತ್ಯೆ ಮಾಡಿಕೊಂಡು ಸಾಯುವ ಹಂತ ತಲುಪಿದ್ದ ಸಿದ್ದನ ಬದುಕು ಶವಗಳ ಜೊತೆ ತಳಕು ಹಾಕಿಕೊಂಡಿದ್ದು ಹಿಂಗೆ.

ಮೊದಮೊದಲು ವಿಪರೀತ ಭಯ ವಿಚಿತ್ರ ಸಂಕಟ ಅನುಭವಿಸುತ್ತಿದ್ದ ಸಿದ್ದ. ರಾತ್ರಿ ಹೊತ್ತು ಕೆಂಚಪ್ಪನ ಗುಡಿಯ ಕತ್ತಲಲ್ಲಿ ಬೆಂಕಿ ಬೈರನ ಸನಿಯದೆ ಮಲಗಿದರೂ ಸಿದ್ದನಿಗೆ ಇನ್ನಿಲ್ಲದ ಭಯ. ಬೆಳಕು ಬೇಕೆನಿಸುತ್ತಿತ್ತು. ಒಮ್ಮೊಮ್ಮೆ ಶವ ಉರಿವ ಬೆಂಕಿಯ ಬೆಳಕು ಗುಡಿಯನ್ನೂ ಬೆಳಗಿಸುತ್ತಲಿತ್ತು. ಆಗಲೂ ಸಿದ್ದನಿಗೆ ಮತ್ತೆ ತಾಯ ಗರ್ಭವನ್ನು ಸೇರಿಬಿಡುವಷ್ಟು ಭಯ. ದೂರದಲ್ಲೆಲ್ಲೋ ನರಿ ನಾಯಿ ತೋಳಗಳ ಕೆಟ್ಟ ಕೂಗು ಊರಿನಿಂದ ಕೇಳುವ ಗದ್ದಲ ಗುಜು ಗುಜು ಸಿನೆಮಾ ರೆಕಾರ್ಡ್‌ಗಳ ಸದ್ದು ಎಲ್ಲಾ ಸೇರಿ ಕಲಸು ಮೇಲೋಗರವಾದಾಗ ರಾತ್ರಿ ಅವನ ಪಾಲಿಗೆ ದುಸ್ವಪ್ನ, ಕಣ್ಣು ಮುಚ್ಚಿದರೂ ಹೆಣ. ತೆರೆದರೂ ಹೆಣ. ಜೀವಭಯದಿಂದ ಓಡಿ ಹೋಗಬೇಕೆನಿಸಿದ್ದು ಅನೇಕ ಬಾರಿ ಬೆಳಕು ಹರಿವಾಗ ಹೋದ ಜೀವ ಬಂದ ಭಾವ, ಓಡುವುದಾದರೂ ಎಲ್ಲಿಗೆ? ಹೇಗೋ ಹೊಟ್ಟೆ ಹೊರೆಯುತ್ತಿದೆ ಇರಲು ಪುಕ್ಕಟೆ ಜಾಗ ಸಿಕ್ಕಿದೆ ಯಾರಾದರೂ ತನ್ನ ನೌಕರಿ ಕಸಿದುಕೊಳ್ಳುತ್ತಾರೆಂಬ ಆತಂಕ ಇಲ್ಲ. ಜನ ಇಲ್ಲಿಗೆ ಬರಲೇ ಅಂಜುತ್ತಾರೆ. ತಮ್ಮ ಪ್ರೀತಿ ಪಾತ್ರರನ್ನು ಹೊತ್ತು ತಂದವರೂ ಸಹ ಶವ ಸುಟ್ಟು ಬೂದಿಯಾಗುವ ಮೊದಲೆ ಕಂಬಿ ಕೀಳುತ್ತಾರೆ. ಆದರೂ ಪೂಜಿಸಿ ಸಿಂಗಾರಗೊಂಡು ವಿಕಾರವಾದ ಹೆಣಗಳನ್ನು ನೋಡುವಾಗ ಹೊಟ್ಟೆಯಲ್ಲೆಲ್ಲಾ ತೊಳೆಸಿಬರುತ್ತದೆ. ದಿನವೂ ಜೀವವಿರುವವರನ್ನು ನೋಡುವುದಕ್ಕಿಂತ ನಿರ್ಜಿವಿಗಳನ್ನು ನೋಡುವುದೇ ಹೆಚ್ಚು. ಊರೊಳಗೆ ಹೋಗೋದೇ ವಿರಳ. ಬೈರ ಕೆಂಚಪ್ಪನ ಗುಡಿಯಲ್ಲೇ ಮೂಲೆಯಲ್ಲಿ ಕಲ್ಲು ಹೂಡಿ ಹಿಟ್ಟು ಬೇಯಿಸುತ್ತಿದ್ದ. ಇದುವರೆಗೂ ‘ಮಗಾ’ ಎನ್ನುತ್ತಿದ್ದ ಬೈರ ‘ಏನ್ ಮಗಾ ನಿನ್ನ ಹೆಸರು?’ ಅಂತ ಕೇಳಿದ್ದ. ಎಲ್ಲದಕ್ಕೂ ಸಿದ್ಧನಾಗಿ ಸ್ಮಶಾನ ಸೇರಿಕೊಂಡಿದ್ದ ಇಂವಾ ‘ಸಿದ್ದ’ ಅಂದಿದ್ದ. ದುಡ್ಡು ಹೆಚ್ಚು ಸಿಕ್ಕಿದ ದಿನ ಅನ್ನ ಮಾಡುತ್ತಿದ್ದ ಬೈರ, ರಾತ್ರಿ ಮಾತ್ರ ಸಾರಾಯಿ ಕುಡಿಯುವುದನ್ನವನು ತಪ್ಪಿಸಿದವನಲ್ಲ.

‘ತಗಾ ಮಗಾ ಇದ್ದ ಕುಡಿ ಎಲ್ಲಾ ನೋವು ಸುಟ್ಟು ಭಸ್ಮಾ ಆಯ್ತಾದೆ’ ಎಂದು ಪೀಡಿಸುತ್ತಿದ್ದ. ಬೈರ ಕುಡಿದು ಗೊರಕೆ ಹೊಡೆದಾಗ ನಿದ್ರೆ ಬಾರದೆ ಪ್ರಾಣಭೀತಿಯಿಂದ ತತ್ತರಿಸುವ ಸಿದ್ದ ಅನ್ಯಮಾರ್ಗ ಕಾಣದೆ ಸಾರಾಯಿಗೆ ಬಾಯಿ ಕೊಟ್ಟಿದ್ದ. ಆಮೇಲೆ ಸ್ಮಶಾನದಲ್ಲಿ ಬದುಕುವ ಧೈರ್ಯವನ್ನು ಅವನಿಗದು ಕಲಿಸಿಕೊಟ್ಟಿತ್ತು. ಬೈರ ಭಂಗಿಯನ್ನು ಸೇದುತ್ತ ನಿದ್ದೆ ಬರುವವರೆಗೂ ಭಜನೆ ಮಾಡಿ ಕಿರಿಕಿರಿಯುಂಟು ಮಾಡುತ್ತಿದ್ದನಾದರೂ ಸಿದ್ದ ಭಂಗಿಗೆ ಶರಣಾಗಲಿಲ್ಲ.

ಬೆಳಿಗ್ಗೆಯೇ ಕಾಡಿಗೆ ಹೋಗಿ ಕೊರಡುಗಳನ್ನು ಹೊತ್ತು ತಂದುಬಿಟ್ಟರೆ ಅವನ ಅರ್ಧ ಕೆಲಸ ಮುಗಿದಂತೆ. ಶವವೇನಾದರು ಬಂದರೆ ಮಿಕ್ಕಂತೆ ಶವವನ್ನು ಚಿತೆಗೇರಿಸಿ ನೆಟ್ಟಗೆ ಮಲಗಿಸೋದು ಬೆಂಕಿ ದೂಡುವುದು ಹಾರುವ ಬೆಂಕಿಯ ಕಿಡಿಗಳೊಡನೆ ಆಟವಾಡುವುದು ದಗದಗಿಸುವ ಶವದೊಂದಿಗೆ ಮಾತನಾಡುವುದು ದಾಸರ ಪದ ಹೋಡೋದು ಬೈರನ ಕೆಲಸ.

‘ಹೆದರಬ್ಯಾಡ ಕಣ್ ಮಗಾ. ಮನುಷ್ಯ ಅಂಬೋ ನರಪ್ರಾಣಿ ಬದುಕಿದ್ದಾಗ ತೊಂದರೆಕೊಡ್ತಾನೆ ಆಟೆಯಾ. ಸತ್ತ ಅಂದಮ್ಯಾಗೆ ಹಿಂಗ್ ಬಂದು ಬೆಂಕಿನಾಗೆ ಮಲಗಿಬಿಡ್ತಾನೆ. ಸುಟ್ಟು ಭಸ್ಮ ಆಯ್ತಾನೆ ಬೂದಿಯಾಗೋದೋನು ಯಾರೇನ್ ಮಾಡ್ಯಾನು?’ ಬೈರ ಧೈರ್ಯ ತುಂಬುತ್ತಿದ್ದ.

‘ಇಲ್ಲಪ್ಪ. ಮನುಷ್ಯ ಸತ್ತ ಮೇಲೂ ಕೇಡು ಮಾಡ್ತಾನೆ ದೆವ್ವ ಪಿಶಾಚಿ ಆಗಿ…..’ ಸಿದ್ದ ಶವವನ್ನೇ ನೋಡುತ್ತ ಪಿಸುಗುಡುತ್ತಿದ್ದ.

‘ಅದೆಲ್ಲಾ ಬರಿ ಬರ್‍ಮೆ ಕಣ್ ಮಗಾ ನಮ್ಮ ಮೈನಾಗ್ಳ ಭೀತಿನೆ ಭೂತ ಪಿರೇತ….. ದುಡ್ಕೊಂಡು ತಿಂಬೋಕೆ ಒಂದ್ ದಾರಿ ಸಿಕ್ಕಿತ್ ನಿನ್ಗೆ ಉದಾಸೀನ ಮಾಡಬ್ಯಾಡ. ಇದಕ್ಕಾಗೆ ನಿಯತ್ತಿನಿಂದ ದುಡಿ. ದೇಸದಾಗೆ ಕಾಂಪಿಟೇಸನ್ನು ಇಲ್ಲದ ಜಾಗ ಇದೊಂದೇ ಕಣಾ. ಇಲ್ಲಿ ನೆಮ್ದಿ ಐತೆ, ಸುಖ ಐತೆ. ಏಕಾಂತ ಐತೆ. ಅದ್ಕೆ ಇಲ್ಲಿ ಪರಸಿವ ಅವ್ನೆ ಅದ್ಕೆ ಇದ್ನ ರುದ್ರಭೂಮಿ ಅಂಬ್ತಾರೆ ಕಾಣಾ. ಸ್ಮಸಾನಾವ ನಾವ್ ಕಾದರೆ ಸ್ಮಸಾನ ನಮ್ಮನ್ನು ಕಾಯ್ತದೆ ಈ ಮಾತು ದಿಟ ತಿಳ್ಕಾ.

ಕುಡಿದ ಅಮಲಿನಲ್ಲಿ ಈವಜ್ಜ ಏನೇನೋ ಬಡಬಡಿಸ್ತಾನೆ ಅಂದುಕೊಂಡರೂ ದಿನಗಳೆದಂತೆ ಸಿದ್ದನಿಗೆ ಕಳೆದುಹೋದ ಜೀವನ ಮತ್ತೆ ಸಿಕ್ಕಿತ್ತು. ವಾತಾವರಣ, ಪರಿಸ್ಥಿತಿಗೆ ತಕ್ಕಂತೆ ವೇಷ ಭಾಷೆ ಬದಲಿಸಿಕೊಂಡು ಕಾಲ ಹಾಕಿದ್ದ. ಹದಿಹರೆಯವೆಲ್ಲಾ ಸ್ಮಶಾನದಲ್ಲೇ ಕರಗಿ ಮುಪ್ಪು ಚಿಗುರೊಡೆಯಲು ಕಾತರಾಗಿತ್ತು. ಒಂದಿನ ಬೈರ ಮಲಗಿದ್ದಲ್ಲೇ ಸತ್ತಿದ್ದ. ಅವನಿಗೂ ಹೆಂಡತಿ ಇದ್ದಳಂತೆ ಅಂತವನೊಂದಿಗೆ ಏಗಲಾರದೆ ಹೆದರಿ ಓಡಿಹೋಗಿದ್ದಳಂತೆ. ಆದರೆ ಸಿದ್ದನಿಗೆ ಸಿಕ್ಕ ಜುಂಜಿ ಓಡಿಹೋಗಲಿಲ್ಲ ಎದೆಗಾತಿ ಸ್ಮಸಾನವನ್ನೇ ತನ್ನ ಮನೆ ಮಾಡಿಕೊಂಡಳು ಸಿದ್ದನ ಮೈನಲ್ಲಿ ಗೂಡು ಕಟ್ಟಿಕೊಂಡಳು ಅವಳು ಅವನಿಗೆ ದಕ್ಕಿದ್ದು ಸಹ ವಿಚಿತ್ರ ಪ್ರಸಂಗದಲ್ಲೆ.

ಊರು ಆಚೆ ಇಟ್ಟಿದ ಅವಳ ತಡಿಕೆ ಹೋಟಲ್ಲು ಸ್ಮಶಾನಕ್ಕೆ ಒಂದಿಷ್ಟು ಸನಿಯ, ಗಂಡ ಮಹಾ ಕುಡುಕ. ಎಲ್ಲಾ ರೀತಿ ವಹಿವಾಟು ಜುಂಜಿಯದೆ, ಚೆಂದಾಗಿ ‘ಟೀ’ ಇಳಿಸುವ ಜುಂಜಿ ಅವಳು ಮಾಡುವ ಖಾಲಿ ದೋಸೆ ಹಂಗೆ ಬೀಸಿ ಬಿಸಿಯಾಗಿದ್ದಳು. ಒಳ್ಳೆ ಮೈಕಟ್ಟು, ಮೈಕಟ್ಟು ಮುರಿಯಬೇಕಾದ ಗಂಡ ಕುಡಿದು ಚರಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಳ್ಳುತ್ತಿದ್ದದ್ದೇ ಹೆಚ್ಚು. ಹೋಟಲ್ಲೂ ಕೈ ಹತ್ತಲಿಲ್ಲ ಸಾಲ ತೀರಂಗಿಲ್ಲ. ಆದರೂ ಅದನ್ನೇ ನಂಬಿದ್ದಳು ಜುಂಜಿ. ಸಿದ್ದ ದಿನದ ಗಿರಾಕಿ. ನಲವತ್ತರ ಅಂಚಿನಲ್ಲಿದ್ದ ಅವನು ಒಂಟಿತನದಲ್ಲಿ ಸಿಕ್ಕಿ ಒಣಗಿ ಹೋಗುತ್ತಿದ್ದ ದಿನಗಳವು. ಕರಗಿದ್ದರೂ ಹರೆಯ ತುಂಬಿ ತುಂಬಿಕೊಂಡಿದ್ದ ಜುಂಜಿಯನ್ನು ಕಣ್ಣುಗಳಲ್ಲಿ ತಿನ್ನಲೆಂದೇ ಹೋಟಲ್ಲಿಗೆ ಬರುತ್ತಿದ್ದ. ಹೋಟಲ್ಲಿಗೆ ಬರುವವರಾರು ಎಂತಹವರು. ಹಂದಿ ಕಾಯೋರು. ಬೀದಿ ಗುಡಿಸೋರು ಮಿಲ್ಲಿಗೋಗೋ ಮಂದಿ ಸಾಲ ಬರೆಸಿ ತಿಂದು ಕುಡಿದು ಕೈ ಎತ್ತುವವರಲ್ಲಿ ಗಂಡಸರಷ್ಟೇ ಅಲ್ಲ ಹೆಂಗಸರೂ ನಿಸ್ಸಿಮರು. ದುಡ್ಡು ಕೇಳಿದರೆ ಜಗಳ ಕಾಯೋರೇ ಹೆಚ್ಚು. ನೆಟ್ಟಗೆ ದುಡ್ಡು ಕೊಡುತ್ತಿದ್ದವನೊಬ್ಬನೆ. ಅವನನ್ನು ಕಂಡರೆ ಅವಳಿಗೊಂದು ತರಾ ಭಯ. ಅವನು ಸಂನ್ಯಾಸಿಗಳಂತೆ ಕಟ್ಟಿದ ಮುಡಿ ಹಣೆಗೆ ಭಸ್ಮ ಮುಖದ ತುಂಬಾ ಗಡ್ಡ ಮೀಸೆ. ಅಲ್ಲಲ್ಲಿ ಬಿಳಿ ಕೂದಲಾಗಿ ಮಿಂಚುತ್ತಿದ್ದವು. ಬೈರನನ್ನೇ ನೆನಪಿಗೆ ತರುತ್ತಿದ್ದ ಸಿದ್ದನ ದೇಹದಲ್ಲಿನ್ನೂ ಹರೆಯ ಖರ್ಚಾಗದೆ ಉಳಿದಿದ್ದರಿಂದ ಅದೊಂದು ಬಗೆಯ ಸೆಳೆತ ಅವಳನ್ನೂ ಕಾಡುತ್ತಿತ್ತು. ಆದರೆ ಕುಡುಕ ಗಂಡನ ಭಯ. ಜೊತೆಗೆ ಸ್ಮಶಾನದಲ್ಲಿ ಇರೋ ಸಿದ್ದ ಮಾಯಾ ಮಂತ್ರ ಕಲಿತು ಸರಿ ರಾತ್ರಿನಾಗೆ ದೆವ್ವಗಳ ಜೊತೆ ಕುಣಿತಾನೆಂದೆಲ್ಲಾ ಜನ ಆಡಿಕೊಳ್ಳುತ್ತಿದ್ದುದನ್ನವಳು ಕೇಳಿಸಿಕೊಂಡಿದ್ದಳು. ದೆವ್ವ ಪೀಡೇನಾ ವಶ ಮಾಡ್ಕೊಂಡಿದ್ದಾರೆ ಕಣೆ ಜುಂಜಪ್ಪ ಎಂದು ಭಯಭೀತರಾಗುವ ಹೆಂಗಸರನ್ನವಳು ಕಂಡಿದ್ದಳು. ಅವನನ್ನು ನೋಡಲೂ ಭಯಪಡುವವರಿದ್ದರು. ಯಾರೂ ತಾವಾಗಿಯೇ ಮಾತಾನಾಡಿಸುವ ಗೊಡವೆಗೆ ಹೋಗುತ್ತಿರಲಿಲ್ಲ.

ದಿನವೂ ಗಲ್ಲ ಪೆಟ್ಟಿಗೆಯಿಂದ ದುಡ್ಡು ಎಗರಿಸಿಕೊಂಡು ಹೋಗಿ ಕುಡಿದು ಬರುವ ಜುಂಜಿಯ ಗಂಡ ಕುಡಿದ ಅಮಲಿನಲ್ಲಿ ಒಂದು ಲಾರಿಗೆ ಸಿಕ್ಕಿ ಸತ್ತ. ಆಗ ಅವಳ ಸಹಾಯಕ್ಕೆ ಬಂದವ ಸಿದ್ದನೆ. ದುಡ್ಡಿಲ್ಲದ ಅವಳಿಗೆ ದುಡ್ಡು ಕೊಟ್ಟ ತಾನೇ ಮುಂದೆ ನಿಂತು ಅವಳ ಗಂಡನ ಸಂಸ್ಕಾರ ತಿಥಿಮತಿ ಮಾಡಿಸಿದ. ‘ದಿಕ್ಕಿಲ್ಲದ ಪರದೇಶಿಯಾಗೋದೇ ಸಿದ್ದಣ್ಣ’ ಎಂದು ಬಿಕ್ಕಿಬಿಕ್ಕಿ ಅಳುವ ಅವಳ ಮೈ ಕೈ ಮುಟ್ಟಿ ಕನ್ನೆ ಒರೆಸಿ ಸಂತೈಸಿದ. ದುಃಖ ತಾಳಲಾರದೆ ಅವನ ಮೈಗೆ ಒರಗಿದಳು ಜುಂಜಿ. ತಬ್ಬಿಕೊಂಡು ಮೈದಡವಿದ. ಇಬ್ಬರೂ ಕಾದ ಕಾವಲಿಯಂತಾದರು. ತಣ್ಣಗಾಗುವವರೆಗೂ ಒಬ್ಬರನ್ನೊಬ್ಬರು ಬಿಡಲಿಲ್ಲ. ಹೀಗಾಗಿ ತಡಿಕೆ ಹೋಟಲ್ ಮುಚ್ಚಿ ಸಿದ್ದನ ಅರಮನೆ ಅಂಬೋ ಮುರುಕಲು ಮನೆಗೆ ಬಂದಿದ್ದಳು ಜುಂಜಿ.

ಅವಳಲ್ಲಿ ಎರಡು ದಿನ ಇದ್ದು ಹೆದರಿ ಪಲಾಯನ ಮಾಡುತ್ತಾಳೋ ಎಂದು ಅಂಜಿದ್ದ ಕನಲಿದ್ದ ಸಿದ್ದ. ಗಟ್ಟಿಗಿತ್ತಿ ಜುಂಜಿ ಸತ್ತವರಿಗೆಲ್ಲಾ ಹೆದರುವಂತಹ ಅಳ್ಳೆದೆಯವಳಲ್ಲ. ಸಿದ್ದನ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಳು. ಸ್ಮಶಾನದಲ್ಲೇ ಜೋಲಿ ಕಟ್ಟಿ ಜೋಗುಳ ಹಾಡಿದಳು.

ತನಗೆ ಬದುಕು ಕೊಟ್ಟು ಸಂಸಾರವಂದಿಗನನ್ನಾಗಿ ಮಾಡಿದ ಸ್ಮಶಾನದ ಮೇಲೆ ಸಿದ್ದನಿಗೀಗ ಇನ್ನಿಲ್ಲದ ಪ್ರೀತಿ. ಜುಂಜಿ ಮಹಾ ಚಲಾಕಿ ಹೆಂಗಸು. ಜಾಣತನವಿದ್ದರೆ ಸ್ಮಶಾನದಲ್ಲೂ ಸಂಪಾದಿಸಬಹುದೆಂಬುದನ್ನು ತೋರಿಸಿಕೊಟ್ಟ ಬೆರ್‍ಕಿ ಹೆಣ್ಣು. ಶವ ಹೊತ್ತು ತಂದವರು ಬಿಸಾಡಿದ ಯಾವುದೂ ಉಪಯೋಗಕ್ಕೆ ಬಾರದ್ದಲ್ಲ ಶವವೊಂದನ್ನುಳಿದು ಎಂಬ ಸತ್ಯವನ್ನು ಸ್ವಲ್ಪ ದಿನಗಳಲ್ಲಿ ಅರಿತವಳು. ಚಟ್ಟ ಎಸೆದು ಹೋದರೆ ಅದರಲ್ಲಿನ ಬಿದಿರು ಬೊಂಬುಗಳನ್ನು ಕಿತ್ತಿಟ್ಟು ಬುಟ್ಟಿ ಹೆಣೆವ ಮೇದಾರರಿಗೆ ಮಾರಿ ಪುಡಿಗಾಸು ಮಾಡಿಕೊಳ್ಳುತ್ತಿದ್ದಳು. ಹೆಣದ ಮೇಲೆ ಹೊದಿಸಿದ ಬಿಳಿ ಹೊಸ ಬಟ್ಟೆಯನ್ನು ಒಗೆದು ಉಡುವುದನ್ನು ಸಿದ್ದನಿಗೆ ಕಲಿಸಿಕೊಟ್ಟಳು. ಸ್ಮಶಾನದಲ್ಲೇ ಸೀರೆ ಬಿಟ್ಟು ಬಿಡಾಸಿ ಬೇರೆ ಸೀರೆ ಉಟ್ಟು ಹೋಗುವ ಹೆಂಗಸರ ಸೀರೆಯನ್ನು ಎತ್ತಿಟ್ಟುಕೊಳ್ಳುತ್ತಿದ್ದಳು. ಕಾಯಿ ಹೋಳುಗಳನ್ನು ಎಷ್ಟು ಬೇಕೋ ಅಷ್ಟು ಮನೆಗಿಟ್ಟುಕೊಂಡು ಉಳಿದವನ್ನು ಹೋಟಲಿನವರಿಗೆ ಮಾರಾಟ ಮಾಡುತ್ತಿದ್ದಳು. ರಾಶಿಗಟ್ಟಲೆ ಹಾರಗಳನ್ನು ಹೂ ಬೀಳದಂತೆ ಜೋಪಾನ ಮಾಡಿ ಹೂವಿನ ಅಂಗಡಿಗೇ ಹಿಂದಿರುಗಿಸಿಯೂ ಕಾಸು ಮಾಡುವ ಕಲೆ ಸಿದ್ದನಿಗೆ ತೋರಿಸಿಕೊಟ್ಟವಳೇ ಜುಂಜಿ, ಅವಳ ಎದೆಗಾರಿಕೆ ವ್ಯವಹಾರದಲ್ಲಿನ ಶಾಣ್ಯಾತನಕ್ಕೆ ಸಿದ್ದ ಮಾರುಹೋಗಿದ್ದ. ಯಾವನೋ ಹೂವಿನ ಅಂಗಡಿಯ ಹುಡುಗ ಬುಟ್ಟಿ ತಂದು ಹೂವಿನ ಹಾರಗಳನ್ನು ಸೈಕಲ್ ಮೇಲೆ ಹೊಯ್ದರೆ. ಕಾರು ತಂದ ಹೋಟಲಿನವ ಗೋಣಿಚೀಲದಲ್ಲಿ ಕಾಯಿ ಹೋಳುಗಳನ್ನು ತುಂಬಿ ಡಿಕ್ಕಿಯಲ್ಲಿ ಹಾಕಿಕೊಂಡು ಪರಾರಿಯಾಗುತ್ತಿದ್ದ. ಶವದ ಬೆಂಕಿಯ ಬೆಳಕಲ್ಲೇ ಜುಂಜಿ – ಸಿದ್ದ ಮೈಕಾಯಿಸಿಕೊಳ್ಳುವಾಗ ಬದುಕು ಅರಳಿತ್ತು. ಯಾವ ಊರು? ನೀನ್ಯಾಕೆ ಇಲ್ಲಿಗೆ ಬಂದು ಸೇರಿಕೊಂಡೆ ಎಂದವಳು ಆಗಾಗ ಪೀಡಿಸಿದಾಗ ನಗೆಯೆ ಅವನ ಉತ್ತರ. ಅವಳ ಕೈಲಿ ಪುಡಿಗಾಸು ಹೆಚ್ಚಿದಾಗ ಮತ್ತೆ ಹೋಟಲ್ ಮಡಗುವ ಅಂತ ಹಿರಿ ಹಿರಿ ಹಿಗ್ಗಿದ್ದಳು.

‘ಅದೆಲ್ಲ ಬ್ರಾಂಬ್ರಿಗೆ ಲಾಯಕ್ಕು. ನೀನು ಹೋಲತಿ, ಬರೋ ಗಿರಾಕಿಗಳೂ ಎಂತೆಂಥವರೋ ಆಗಿರ್ತಾರೆ ಅದೆಲ್ಲಾ ಕಷ್ಟ ಕಣೆ ಬ್ಯಾಡ’ ಅಂತ ಸಿದ್ದ ತಿಳಿಸಿ ಹೇಳಿದ್ದ. ಅವಳು ಕಾಡಿಸಿ ಪೀಡಿಸುತ್ತಿದ್ದಾಗ ಅವನು ಸುತ್ರಾಂ ಒಪ್ಪಲಿಲ್ಲ. ನಿನ್ನ ಬೇಕಾರೆ ಬಿಟ್ಟೇನು ಸ್ಮಶಾನ ಬಿಡಾಕಿಲ್ಲ ಹೊಂಟೋಗ್ ಆಚೆ’ ಎಂದು ಅಬ್ಬರಿಸಿದ್ದ. ಅವತ್ತೆ ಕೊನೆ ಮತ್ತೆಂದೂ ಅವಳು ಹೋಟೆಲ್ ಸುದ್ದಿ ಎತ್ತಲಿಲ್ಲ.

ಆರೇಳು ವರ್ಷದ ಮಗನನ್ನು ಶಾಲೆಗೆ ಹಾಕುವ ಹೊಸ ಆಶೆ ಹುಟ್ಟಿಕೊಂಡಿತ್ತು ಸಿದ್ದನಿಗೆ. ಮಗನಾದರೂ ದೊಡ್ಡ ಮನುಷ್ಯನಾಗಲಿ ಎಂಬಾಶೆ ದಗದಗಿಸುವ ಚಿತಾಗ್ನಿಯಂತೆ ಮನದ ತುಂಬಾ ದಗ್ಗನೆ ಹತ್ತಿಕೊಂಡಿತ್ತು.

‘ಗೋವಿಂದ – ಗೋವಿಂದ’ ಎನ್ನುತ್ತ ಗೋವಿಂದನ ಧ್ಯಾನ ಮಾಡುತ್ತ ಹಲವರು ಶವವೊಂದನ್ನು ಹೊತ್ತು ತಂದಾಗ ಸಿದ್ದ ತನ್ನ ಕನಸಿನಿಂದ ಜಾರಿದ. ಶವ ತಂದವರ ಸೇವೆಗೆ ನಿಂತ. ಮೊದಲೆ ಸುದ್ದಿ ತಿಳಿಸಿದ್ದರಿಂದ ಚಿತೆ ರೆಡಿ ಮಾಡಿದ್ದ. ಬರಿ ಗಂಡಸರ ಪುಟ್ಟ ಗುಂಪು ವಾಚು ಉಂಗುರ ಕೊರಳ ಚೈನು ಜರಿ ಪಂಚೆ ಶಲ್ಯ ಬಂದು ನಿಂತ ಕಾರುಗಳನ್ನು ನೋಡಿಯೇ ಚುರುಕಾದ. ರಾತ್ರಿಯಾಗಿ ಒಂಭತ್ತರ ಮೇಲಾಗಿತ್ತು. ರಕ್ತ ಹೆಪ್ಪುಗಟ್ಟಿಸುವಂತಹ ನಿಶ್ಯಬ್ಬ, ಸ್ಮಶಾನದ ಹಾದಿಯಲ್ಲೇ ಇದ್ದ ಬೀದಿ ದೀಪ ಒಂದು ಮಂಕಾಗಿ ಉರಿದು ಇನ್ನೂ ಕತ್ತಲನ್ನು ಹೆಚ್ಚಿಸಿತ್ತು. ಬಂದವರ ದನಿಗಳನ್ನು ತಾನೆಲ್ಲೋ ಕೇಳಿದ್ದೇನೆನಿಸಿತು ಸಿದ್ದಂಗೆ. ಜುಂಜಿಯನ್ನು ಚಿತೆಯ ಉಸ್ತುವಾರಿಗೆ ಬಿಟ್ಟು ಶವದ ಬಂಧುಗಳ ಸನಿಯವೆ ಸುತ್ತಾಡಿದ – ಬೆಚ್ಚಿಬಿದ್ದ. ಅವರು ಏನೇನೋ ಶಾಸ್ತ್ರ ಮಾಡುತ್ತಿದ್ದರು.

‘ಫಾರಿನ್ನಿಂದ ಬರಬೇಕಾದ ಕೇಶವ ಬರಲಿಲ್ವಾ? ವಿಷಯ ತಿಳಿಸಿದಿರೋ ಹೇಗೆ?’ ಯಜಮಾನರೊಬ್ಬರು ವಿಚಾರಿಸುತ್ತಿದ್ದರು.

‘ವಿಷಯ ತಿಳಿಸಿದೀವಿ ಅವನೆಲ್ಲಿ ಬರ್ತಾನೆ ಸಾರ್. ಅಲ್ಲಿಗೆ ಹೋದ ಮೊದಮೊದಲು ಒಂದಿಷ್ಟು ಹಣ ಕಳಿಸಿದ್ದ. ಅದ್ಯಾವುದೋ ಬಿಳಿ ಹುಡ್ಗಿ ಗಂಟುಹಾಕ್ಕೊಂಡೇ ಅಂತ ಒಮ್ಮೆ ಪತ್ರ ಬರ್‍ದ. ನಂತರ ಅವನಿಂದ ಹಣವೂ ಇಲ್ಲ ಪತ್ರವೂ ಇಲ್ಲ. ಅವನ ಮೇಲೆ ಭಾಳ ಆಶೆ ಇಳ್ಕೊಂಡಿದ್ದ ಚಿಕ್ಕಮಗಾಂತ ಈ ಮುದ್ಯ’ ಒಬ್ಬನೆಂದ ಆಕ್ಷೇಪಿಸುವ ಪರಿ.

ನಿಮ್ಮ ಮೇಲೂ ಆ ಮುದ್ಕನಿಗೆ ಅಷ್ಟೆ ಆಶೆ ಕಣಯ್ಯ. ನೀವು ಓದಿ ದೊಡ್ಡವರಾಗ್ಲಿ ಅಂತ ತನ್ನ ಜೀವಾನೇ ತೇಯ್ದ… ಪಾಪ’ ಅಂದನೊಬ್ಬ ಜರಿ ಶಲ್ಯದವ.

ಬರೀ ಫ್ರೀಶಿಪ್‌ನಲ್ಲಿ ಓದ್ದೋನು ನಾನು. ಹಗಲು ರಾತ್ರಿ ಓದಿ ಮೆರಿಟ್‌ನಲ್ಲಿ ಪಾಸಾಗಿ ಕಾಲೇಜ್ ಮೇಷ್ಟ್ರು ಆದೆ ಈ ಮುದ್ಯ ಮಾಡಿದ್ದೇನ್ರಿ?’ ಮಗನೊಬ್ಬನ ತಾತ್ಸಾರ.

‘ನನ್ನ ಓದಿಸೋಕೆ ಖರ್ಚು ಮಾಡಿದ್ದು ಅಷ್ಟರಲ್ಲೇ ಇದೆ ಬಿಡೋ, ಏನೋ ನನ್ನ ಅದೃಷ್ಟ. ಕೆ.ಪಿ.ಎಸ್.ಸಿ, ಎಕ್ಸಾಂ ಪಾಸಾದೆ ಕೆಲ್ಸ ಸಿಗ್ತು. ಈ ಮುದ್ಕನ್ನ ನಂಬಿಕೊಂಡಿದ್ದರೆ ಬರಿ ಅರೆ ಹೊಟ್ಟೆ, ಹರುಕು ಬಟ್ಟೆನೇ ಗತಿಯಾಗೋದು. ಮೂರೂ ಹೊತ್ತು ಓದೋ ಓದಿಕೊಳ್ಳೋ ದಂಡ ಪಿಂಡಗಳೇ ಅಂತ ಹಂಗಿಸ್ತಿದ್ದ’ ಇನ್ನೊಬ್ಬ ಮಗನ ಉವಾಚ.

‘ಹೌದೌದು, ಈ ಮನೇಲಿ ದುಡಿಯೋರ್‍ಗೆ ಮಾತ್ರವೇ ಊಟ ಅಂತ ದಿನಾ ಊಟದ ಟೈಂನಲ್ಲಿ ಚುಚ್ಚಿ ಮಾತಾಡಿ ಅನ್ನ ಹಾಕಿದ್ದ’ ಅಣ್ಣನ ಮಾತಿಗೆ ತಮ್ಮನ ಬೆಂಬಲ.

‘ಸಾಕು ಸುಮ್ನಿರಯ್ಯ’ ಮುದುಕನೊಬ್ಬ ಗದರಿಕೊಂಡ. ‘ಒಬ್ಬ ಬಡ ಮೇಷ್ಟ್ರು ನಾಲ್ಕು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳ ಓದ್ಸಿ ಬರ್ಸಿ ಮದುವೆ ಮಾಡ್ದ ಅಂದ್ರೆ ಸುಮ್ಮೇನಾ? ನಾಳೆ ನೀವೂ ನಿಮ್ಮ ಮಕ್ಕಳಿಗೆ ಮಾಡೋದನ್ನ ಜೀವದಿಂದ ಇದ್ದರೆ ನಾನೂ ನೋಡ್ತೀನಿ’ ಜಾಡಿಸಿದ.

‘ನಿಮ್ಗೇನ್ ಗೊತ್ತು ಶಾಸ್ತ್ರಿಗಳೆ. ಈ ಮನುಷ್ಯನ ಕಾಟ ತಡಿಲಾರ್ದೆ ಬಿಟ್ಟಿ ಕೂಳು ತಿನ್ನಲಾರ್ದ ನಮ್ಮ ದೊಡ್ಡಣ್ಣ ಕಾಶಿ ಮನೆ ಬಿಟ್ಟು ಓಡಿಹೋದ ಗೊತ್ತಾ. ಪಿ.ಯು.ಸಿ. ಫಸ್ಟ್ ಕ್ಲಾಸ್ ಬಂದಿದ್ದ. ರ್‍ಯಾಂಕ್ ಬರದಿದ್ದ ಮೇಲೆ ಫೇಲಾದಂಗೆ ಕಣೋ ಅಂತ ಕಾಶಿನಾ ಕೆರದಿಂದ ಹೊಡೆದಿದ್ದ ಈ ಮುದ್ಕ. ‘ಕಾಶಿಗೆ ಮುಂದೆ ಓದೋ ಆಶೆ…… ಈವಯ್ಯ’ ಕೆಲ್ಸ ಹುಡ್ಕೊ ಅಂದ. ಬ್ರಾಹ್ಮಣರಿಗೆ ಕೆಲಸ ಸಿಗೋದು ಹುಡುಗಾಟವೆ? ಅಣ್ಣ ಸ್ವಾಭಿಮಾನಿ ಈತನ ಕಿರುಕುಳ ತಡಿಲಾರ್‍ದೆ ನಾಪತ್ತೆಯಾಗಿ ಹೋದ. ಎಲ್ಲಿ ಹೋದ್ನೋ ಏನಾದ್ನೊ ಅವನು ಹೋದ ಕೊರಗಲ್ಲೆ ನಮ್ಮ ತಾಯಿ ತೀರ್‍ಕೊಂಡ್ಳು. ಮಹಾ ಕೋಪಿಷ್ಟ……….. ವಿಶ್ವಾಮಿತ್ರ ಗೋತ್ರ, ಬದುಕಿರೋವರ್ಗೂ ಎಲ್ಲರ್‍ನೂ ಉರ್‍ಕೊಂಡು ಮುಕ್ದ ಈ ಮೇಷ್ಟ್ರು’ ಮಗನೊಬ್ಬ ಶಾಸ್ತ್ರಿಗಳಿಗೆ ತಕ್ಕ ಸಮಜಾಯಿಷಿ ಕೊಟ್ಟ ಹುರುಪಿನಲ್ಲಿ ವಿಷಾದ ನಗೆ ನಕ್ಕ.

‘ಪಾಪ…… ಮೇಷ್ಟ್ರೀಗೇನಾಗಿತ್ತು?’ ಸಿದ್ದ ದೂರದಲ್ಲೇ ನಿಂತು ಕೇಳಿದ.

‘ವಯಸ್ಸಾಗಿತ್ತಯ್ಯ, ಎಂಬತ್ತೈದು ವರ್ಷ. ಇನ್ನೆಷ್ಟು ದಿನ ಬದುಕು’ ಮಗನೊಬ್ಬ ಅಷ್ಟಕ್ಕೇ ಕುಪಿತಗೊಂಡು ಸಿಡುಕಿದ.

‘ಹೋಗ್ಲಿ ಬಿಡಿ. ಸತ್ತ ಮೇಲೆ ಎಂತ ಹಗೆ ಜನ್ಮ ಕೊಟ್ಟವನ ಮೇಲೆ….. ಮಲಗಿದ ಮಗ್ಗಲಲ್ಲೇ ಪರಮಾತ್ಮ ತಗೊಂಡು ಹೋಗಿದ್ದಾನೆ. ಮೇಷ್ಟ್ರುದು ಒಳ್ಳೆ ಸಾವು’ ಅಂದರೊಬ್ಬರು.

‘ಇದೊಂದೇ ನೋಡು ಚಿಕ್ಕಪ್ಪ ಈತ ನಮ್ಗೆ ಮಾಡಿದ ಉಪಕಾರ’ ನಿಟ್ಟುಸಿರುಬಿಟ್ಟನೊಬ್ಬ ಮಗ.
ಶವವನ್ನು ಚಿತೆಗೇರಿಸಿ ಬೆತ್ತಲೆ ಮಾಡಿದರು. ಹತ್ತಿ ಕಾಳು ಕರ್ಪೂರ ಸೌದೆಗಳ ಮಧ್ಯೆ ತುಂಬಿ ಸೀಮೆ‌ಎಣ್ಣೆ ಸುರಿದರು. ಮತ್ತೆ ಪೂಜಿಸಿ ಮಡಿಕೆ ಹೊತ್ತು ಬಂದು ಮಡಿಕೆ ಒಡೆದನೊಬ್ಬ ಮಗನೀಗ ಚಿತೆಗೆ ಬೆಂಕಿಯಿಡಲು ಅಣಿಯಾದ. ಸಿದ್ದ ಎರಡು ಸೌದೆಗೆ ಬಟ್ಟೆ ಸುತ್ತಿ ಪಂಜು ಮಾಡಿದ. ಸೀಮೆ‌ಎಣ್ಣೆ ಸುರಿದು ಬೆಂಕಿ ಹಚ್ಚಿ ಮಗನ ಕೈಗೆ ಒಂದನ್ನಿತ್ತ. ಅಂವಾ ತಲೆ ಕಡೆ ಬೆಂಕಿ ಮುಟ್ಟಿಸಿದಾಗ ಸಿದ್ದ ಕಾಲಿನ ಕಡೆ ತನ್ನ ಕೈಲಿದ್ದ ಬೆಂಕಿ ಮುಟ್ಟಿಸಿದೊಡನೆ ಚಿತೆ ದಿಗ್ಗನೆ ಹತ್ತಿಕೊಂಡಿತು. ಎಲ್ಲರೂ ದೂರ ಸರಿದರು. ವಿಚಿತ್ರ ಮೌನ ಆವರಿಸಿತು. ಚಟಚಟನೆ ಸಿಡಿದು ಕಿಡಿ ಕಾರುತ್ತಾ ಭಗಭಗನೆ ಬೆಂಕಿ ಉರಿಯಹತ್ತಿದಾಗ ಸುಂಯ್ಯನ್ನುವ ಶಬ್ದ ಮೌನದಲ್ಲೆಲ್ಲಾ ಹರಡಿತು……. ‘ಮನುಷ್ಯ ಜೀವ ಇಷ್ಟೇ ನೋಡ್ರಪಾ’ ಯಾರೋ ಲೊಚಗುಟ್ಟಿದರು. ಸಿದ್ದನ ಕಣ್ಣುಗಳು ತೇವಗೊಂಡವು. ಚಿತೆಗೆ ಮತ್ತಷ್ಟು ಸೌದೆ ತಂದುಹಾಕಿದ. ‘ಸಾಕು ಬಿಡಯ್ಯ. ಆತನೇನು ದೊಡ್ಡ ಆಳಲ್ಲ’ ಮಗನೊಬ್ಬ ಸಿಡಿಮಿಡಿಗೊಂಡ. ಆದರೆ ಮತ್ತೆಮತ್ತೆ ಸಿದ್ದ ಸೌದೆ ಕೊರಡು ತಂದುಹಾಕಿ ಬೊಂಬಿನಿಂದ ಬೆಂಕಿ ಸರಿಪಡಿಸಿದ.
‘ಸಾಕು ಅಂತ ಹೇಳಲಿಲ್ವೇನಯ್ಯ’ ಮತ್ತೊಬ್ಬ ಮಗ ರೇಗಿ ಮೇಲೇರಿ ಬಂದ ‘ಇದಕ್ಕೇನು ನೀವು ಕಾಸು ಹೆಜ್ಗೆ ಕೊಡಬೇಡ್ರಿರೀ’ ಎಂದು ಸಿದ್ದ ಸಿಡುಕಿ ಮುಖದ ಬೆವರೊರೆಸಿಕೊಂಡಾಗ ತೆಪ್ಪಗಾದರು. ‘ದೂರ…… ದೂರ ನಿಂತು ಮಾತಾಡೋ’ ಎಂದು ಅಸಹ್ಯಿಸಿದರು.

‘ಎಲ್ಲೋ ಹುಟ್ಟಿದ ಮೇಷ್ಟ್ರು ಇಲ್ಲಿಗೆ ಬಂದು ಸದ್ದತಿ ಪಡೆದರು’ ಅನ್ನುತ್ತಿದ್ದ ವಯಸ್ಸಾದವನೊಬ್ಬ.

‘ಎರಡ್ನೆ ಮಗಳು ಇಲ್ಲಿ ಇರೋದು. ಕಡೆಗಾಲದಲ್ಲಿ ಅವಳೆ ನೋಡಿಕೊಂಡಿದ್ದು……’ ಪಾಪ ಯಾರೋ ಅಂದರು ನಿಟ್ಟುಸಿರ್‍ಗರೆಯುತ್ತ.

‘ಅಳಿಯಂದಿರು ಮಾತ್ರ ತುಂಬಾ ಒಳ್ಳೇರು ಸಿಕ್ಕರು ಮೇಷ್ಟ್ರಿಗೆ’

‘ನಾವೇನು ಕತ್ತು ಹಿಡಿದು ತಳ್ಳಲಿಲ್ಲಾರಿ ಈವಯ್ಯನ್ನ…… ತಾನೇ ಹೋದ. ಸೊಸೇನ್ನೂ ಮಕ್ಕಳಂಗೆ ನೋಡ್ಕೊಬೇಕು. ಯಾವಾಗೂ ಕಿರಿ ಕಿರಿ ಮಾಡ್ತಿದ್ದರೆ ಯಾರ್ ತಾನೆ ಸೈರಿಸ್ತಾರ್‍ಹೇಳಿ’ ಮಗದೊಬ್ಬ ಗೊಣಗಿದ.

‘ಹೋಗಲಿ ಬಿಡಿ ಭಾವ. ಇರೋರಿಗಿಂತ ಹೋದೋರೆ ಪುಣ್ಯವಂತರು’ ತಂಗಿಯ ಗಂಡನೇ ಸಾಂತ್ವನ ಹೇಳಿದ. ಚಿತಾಗ್ನಿಯ ಬೆಳಕಲ್ಲಿ ಸಿದ್ದ ಅವರ್‍ನೆಲ್ಲಾ ದಿಟ್ಟಿಸಿದ. ಒಬ್ಬರ ಕಣ್ಣಲ್ಲೂ ಹನಿ ನೀರಿಲ್ಲ ಪ್ರೇತಗಳಂತೆ ಕಂಡರು.

ಎಲ್ಲರಿಗೂ ಆಗಲೆ ಹೋಗುವ ಆತುರ ‘ತಲೆಯೊಂದು ಸಿಡೀಲಿ ತಾಳಪ್ಪ’ ಅಂದ ಮುದುಕನೊಬ್ಬ. ‘ಆಗಲೆ ದಬ್ ಅಂತ ಸೌಂಡ್ ಬಂತಲ್ಲ ರಾತ್ರಿ ಹನ್ನೊಂದಾಯ್ತು ನಡೀರಿ’ ಮಕ್ಕಳ ಆತುರ.

‘ನಿನಗೆಷ್ಟು ಕೊಡಬೇಕಯ್ಯ?’ ಮೇಷ್ಟ್ರು ಮಗನೊಬ್ಬ ಸಿದ್ದನಿಗೆ ಕೇಳಿದ

‘ನೀನು ಅರ್ಧ ದುಡ್ಡು ಕೊಡಬೇಕಯ್ಯಾ’ ಇನ್ನೊಬ್ಬ ಮಗ ಅಣ್ಣನಿಗೆ ತಾಕೀತು ಮಾಡಿದ. ‘ಏನು ಬೇಡ. ಬ್ಯಾಡ ಬುದ್ದಿ’ ಸಿದ್ದ ಹಣ ಮುಟ್ಟಲಿಲ್ಲ.

‘ನಿನ್ನ ಋಣ ಯಾವನಿಗಯ್ಯಾ ಬೇಕು ತಗೋ’ ಸಣ್ಣವ ರೇಗಿದ.

‘ಹಂಗಲ್ರಪ್ಪಾ – ಇವರ್‍ತಾವ ನಾ ಶಾಲಿ ಕಲಿತಿವ್ನಿ. ನನ್ನ ಗುರುಗಳು ಇವರು… ತಂದೆ ಸಮಾನ ಅಲ್ವಾ – ಕಡಿಗಾಲದಾಗೆ ನನ್ನ ಸೇವೆನೂ ಅವರಿಗೆ ಮುಟ್ಲಿ?’ ಎಂದ ಸಿದ್ದ ಕಣ್ಣೊರೆಸಿಕೊಂಡ.

‘ಹಂಗೇ ಆತು ಬಿಡು’ ಎಂದ ಮಕ್ಕಳಲ್ಲಿ ಒಬ್ಬರೂ ಕಾಸು ತಗೋ ಎಂದು ಒತ್ತಾಯಿಸಲಿಲ್ಲ. ತಿರುಗಿ ನೋಡದೆ ಕಾರುಗಳನ್ನು ಹತ್ತಿ ಹೊರಟೇ ಹೋದರು. ಧಗ ಧಗಿಸುವ ಶವವನ್ನೇ ದಿಟ್ಟಿಸಿದ ಸಿದ್ದ ತನ್ನಲ್ಲಿ ತಾನೇ ಮತಾಡಿಕೊಳ್ಳುತ್ತ ಒಬ್ಬನೇ ಕೂತ. ಅವನ ಪಾಡಿಗೆ ಅವನನ್ನು ಬಿಟ್ಟ, ಜುಂಜಿ ಎಂದಿನಂತೆ ಹೋಗಿ ಮಗನ ಮಗ್ಗುಲಲ್ಲಿ ಅಡ್ಡಾದಳು. ಬೆಳಕು ಹರಿವವರೆಗೂ ಸಿದ್ದ ಕುಂತ ಜಾಗ ಬಿಟ್ಟು ಮೇಲೇಳಲಿಲ್ಲ. ಉರಿವ ಚಿತೆ ಈಗ ಅಗ್ನಿ ಕುಂಡವಾಗಿ ಹಬೆಯಾಡುತ್ತಲಿತ್ತು. ಕೊಳಕು ವಾಸನೆ ಪರಿಸರವನ್ನೆಲ್ಲಾ ವ್ಯಾಪಿಸಿಕೊಂಡಿತ್ತು. ಎದ್ದು ಹೋದವನೆ ಕೆಂಚಪ್ಪನಗುಡಿಯ ಹಿಂದಿನ ಹೊಂಡಕ್ಕೆ ಹಾರಿ ಸಮಾಧಾನವಾಗುವವರೆಗೂ ಈಜು ಬಿದ್ದ.
ಮೂರನೆ ದಿನ ಮಕ್ಕಳು ಕರ್ಮ ಮಾಡಲು ಬಂದರು ತಲೆ ಬೋಳಿಸಿಕೊಂಡರು. ಸಿದ್ದನೂ ತಲೆ ಬೋಳಿಸಿಕೊಳ್ಳುವಾಗ ಜುಂಜಿಗೆ ಅಚ್ಚರಿ……! ಹಿಂಗ್ಯಾಕ್ ಆಡ್ತಿ ಸಿದ್ದ! ಹುಚ್ಗಿಚ್ ಹಿಡಿತೇನ್ ನಿನ್ಗ?’ ಅಂತ ಸಿಡುಕಿದರೂ, ‘ಆ ಗಡ್ಡನೂ ತೆಗೆಸಿಬಿಡತ್ತ ಚೆಂದಾ ಕಾಣ್ತಿ’ ಅಂದಳು. ಮೇಷ್ಟ್ರು ಮಕ್ಕಳು ಅಸ್ತಿ ಹೊಯ್ದ ಮೇಲೆ ತಾನು ಆಸ್ತಿಯನ್ನು ಬೊಗಸೆಯಲ್ಲಿ ಕೊಂಡೊಯ್ದು ಹೊಂಡದ ನೀರಿಗೆ ಬಿಟ್ಟ ಸಿದ್ದ, ನೇಸರನಿಗೆ ವಂದಿಸಿ ದೊಡ್ಡದಾಗಿ ಉಸಿರ್‍ಗರೆದ. ಎರಡು ದಿನ ಮಂಕಾಗಿದ್ದ ಯಾರೊಂದಿಗೂ ಮಾತಿಲ್ಲ ಕತೆಯಿಲ್ಲ.
* * * *

ಅಂಗಡಿಯೊಂದರಲ್ಲಿ ಬೀಡಿ ಪೊಟ್ಟಣ ಕೊಳ್ಳುವಾಗ ಮಕ್ಕಳನ್ನು ಶಾಲೆಗೆ ಸೇರಿಸಲು ಕಡೆ ದಿನವೆಂದು ಯಾರೋ ಮಾತಾಡಿಕೊಳ್ಳುವಾಗ ಅವನನ್ನು ಕವಿದಿದ್ದ ಮಂಕು ಹರಿದಿತ್ತು. ಮಗನನ್ನು ಅಂದೆ ಶಾಲೆಗೆ ಕರೆದೊಯ್ದ. ಅರ್ಜಿಯನ್ನು ಅವನೇ ಭರ್ತಿ ಮಾಡಿ ಕೊಟ್ಟಾಗ ಅಲ್ಲಿದ್ದವರಿಗೆ ಸೋಜಿಗ. ‘ಜಾತಿ ಕಾಲಂ ತುಂಬಿಲ್ಲವಲ್ಲಯ್ಯಾ?’ ಹೆಡ್ ಮಾಸ್ಟರ್ ಗದರಿಕೊಂಡ. ‘ಇದು ಜಾತ್ಯತೀತ ದೇಶ ಅಲ್ರಾ?’ ಉಬ್ಬೇರಿಸಿ ಕೇಳಿದ ಸಿದ್ದ.

‘ತಲೆಹರಟೆ ಮಾಡೇಡ, ತಿಕಮುಚ್ಕೊಂಡು ಜಾತಿಯಾವ್ದು ಅಂತ ಬರಿಯೋ’ ರೇಗಿದ ಹೆಚ್.ಎಮ್. ‘ಎಸ್‌ಸಿ ನೋ? ಎಸ್ ಟಿ ನೋ?’ ಎಂದು ಮುಖ ಗಂಟಿಕ್ಕಿದ. ಸಿದ್ದನಿಗೆ ಜುಂಜಿ ನೆನಪಿಗೆ ಬಂದಳು.

‘ಎಸ್‌ಸಿ ಅಂತ್ಲೆ ಬರ್‍ಕಳಿಸಾ, ನನ್ನ ಮಗನೂ ನನ್ನಂಗೆ ಸುಡುಗಾಡು ಸಿದ್ಧ ಆಗೋದು ಬ್ಯಾಡ ಓದಿ ದೊಡ್ಡೊನಾಗ್ಲಿ……. ದೊಡ್ಡ ನೌಕರಿದಾರನಾಗ್ಲಿ ಸಿವ’ ಎಂದು ಕೈ ಮುಗಿದ. ಹನಿಗಣ್ಣಾದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪ
Next post ಈಶ್ವರ ಅಲ್ಲಾ ಮೇರೆ ಲಾಲ್

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…