ನನಗೆ ಇಬ್ಬರು ಮಕ್ಕಳು
ಒಬ್ಬ ಈಶ್ವರ ಒಬ್ಬ ಅಲ್ಲಾ

ಎಲ್ಲಿರುವೆಯೋ ಕಂದಾ?
ಇಲ್ಲಮ್ಮಾ ಕಾಬಾದಲ್ಲಿ ಕಲ್ಲಾಗಿ….

ಕಲ್ಲಾಗಿ ?!
ಕಲ್ಲಾಗಿಯೇ ಇರದಿರು ಕಂದಾ
ಸದಾ ಓಗೊಡು ಕರುಳ ಕರೆಗೆ;
ಕರಗು ಅಷ್ಟಿಷ್ಟು
ಕಂಗೆಟ್ಟವರ ಕಣ್ಣೀರೊರೆಸು
ದರವೇಶಿಗಳಿಗೆ ದಿಕ್ಕಾಗು
ದುಃಖಿತರ ದಡ ಸೇರಿಸು.

ನನಗೆ ಇಬ್ಬರು ಮಕ್ಕಳು
ಒಬ್ಬ ‘ಈಶ್ವರ’ ಒಬ್ಬ ‘ಅಲ್ಲಾ’

ಎಲ್ಲಿರುವೆಯೋ ಕಂದಾ?
ಇಲ್ಲಿ ಕೈಲಾಸದಲಿ ಮಂಜಾಗಿ….

ಮಂಜಾಗಿ?!
ಕರಗುತ್ತಲೇ ಇರದಿರು ಕಂದಾ
ಸದಾ ಓಗೊಡದಿರು ಕೃತ್ರಿಮ ಮೊರೆಗೆ;

ಕಲ್ಲು ಮಾಡಿಕೋ ಹೃದಯ
ಕೇಡಿಗರ ಕಾಯದಿರು
ಪುಂಡರನು ಪೊರೆಯದಿರು.

ನನಗೆ ಇಬ್ಬರೂ ಮಕ್ಕಳು
ಈಶ್ವರ ಅಲ್ಲಾ ಮೇರೆ ಲಾಲ್….
*****