ಮಾದಿತನ

ಮಾದಿತನ

ಚಿತ್ರ: ಬರ್‍ನ್ಡ

ಮುಂಗೋಳಿ… ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ… ವಂದೇ ಸಮ್ನೆ ಅಳುತ್ತಾ, ವುರೀಲೋ… ಬ್ಯಾಡೋ… ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ ಕಡ್ದೆಂಗೆ, ಕೇರಿಗ್ರ ಮಾತುಗ್ಳು ಸಿಟ್ಗಿಮುಳ್ಳಾಗಿದ್ದುವು. ಕುಂತ್ರು… ನಿಂತ್ರು.. ಅವೆಂಥಾ ಮಾತುಗ್ಳು??…

ವಮ್ಮೆ, ಅಂದ್ಕೊಂಡಿದ್ದು ಯಷ್ಟೆ ಕಷ್ಟವಾಗ್ಲಿ, ಜಲ್ದಿ ಜಲ್ದಿ… ಮಾಡಿ, ಮುಗ್ಸಿ ಬಿಡ್ತಿವೋ…? ಅಷ್ಟು ವಳ್ಳೆದೆಂದೂ… ಪೆರ್‍ಲಜ್ಜ, ಕೇರ್ಯಾಗ್ಳು ಜನ್ರು ಮಣೆಗಾರ್‍ನ, ಸಿವುರಾತ್ರಿ ಮುಂಚಿನಿಂದಾ ವತ್ತಾಯ ಯೇರ್ತಾ… ಕೂಗಾಡ್ತಾ… ಬಂದಿದ್ದ.

‘ಯೀ… ಪೆರ್‍ಲಜ್ಜನೇ ಕೂಗಾಡ್ಲಿ, ಅವ್ರಪ್ಪ ಸಿದ್ಧಪ್ಪ್ನೆ ಆರಾಡ್ಲಿ, ಯೀ ವೂರು ಕೇರ್‍ನೆ ವುರ್ದು ಆಳಾಗ್ಲಿ, ನಾವ್ ಅರಳಯ್ಯನ್ರೋ… ಯಾವ್ಗಾ ವಸಾಕಾಲ್ಮುರಿಗಳ್ನ ವೂರ್ಗಾಳ್ರೀಗೆ, ಮಾಡಾಕ್ತೀವೋ… ಆವಾಗ್ಲೆ ಅವ್ರು ಆಕ್ಕೊಳ್ಬೇಕು…! ಯೇನ್ ಸಿವುರಾತ್ರಿ ಅಬ್ಬಾದ್ ಮಂಚ್ನೇ ದಿನ್ಕೆ, ಅದೂ ಸಾಮಾರ್ದಿನನೇ ಮಟ್ಮಾಟಾ ಮಧ್ಯಾನ್ಕೆಲ್ಲ, ವೂರ ಧಣಿಗಳ ಕಾಲ್ಗೆಲ್ಲಾ… ವಸಾಕಾಲ್ಮರಿಗ್ಳು ಯಿರ್ರೇಕೆಂಬಾ ಕಾನೂನೈತೇನು?! ನಮ್ಮಪ್ಪ… ನಮ್ ಪಾಲ್ನಿ ಕಲಿಯುಗ್ದಾ… ದೇವ್ರು, ಆ ಅಂಬೇಡ್ಕರಪ್ಪ ಮಾಡ್ದಿ, ಸಂಗ್ನಿ ರೂಲಿಸುಗಳೇ ಜಾರ್‍ಗೆ ಬರೋದಿರ್ಲಿ, ಶಾನೆ ಕಾನೂನುಗಳ್ನ, ಯೀ ದೇಸ್ದ ದಗಡಿಗಂಡ್ರು, ಅದ್ಸೆಲಾ ಕೈಯೆತ್ತಿ, ಕಾಲೆತ್ತಿ, ಮಕ್ಳು ಪಾಟೇಗ ತಿದ್ದಿದಂಗೇ ಯಂಗ್ಬೇಕಾದ್ರೆ.. ಅಂಗೆ ಅದೆಶ್ಟೋಸಲ… ತಿದ್ದಿಲ್ಲಾ?! ಅಂತಾದ್ರಲ್ಲಿ ಯೀ ಪುಡುಗೋಸಿಯಂತಾ ವೂರುಕೇರ್ಯಾಗೇನು… ಯಿಲ್ದಾ ಅಳೇ ರೂಲ್ಸು, ಪರಂಗ್ರಿ ಕಾಲ್ದ ಕಾಯ್ದೆ, ಕಾನೂನು, ಅವರಿಂದೇ ವೋಗ್ಬೇಕಾಗಿತ್ತು…!’ ಯೆಂದು, ಕರೀ ಕಲ್ಲುಕುಟಿಗ್ರಂತಾವ್ನು ವೂರಿಂದೂರ್ಗೇ… ಯತ್ಗೆಂಡು ತಿಂಬಾಕೆ ಬಂದ, ವೀರಬಾವುನಂತಾ ಬಮ್ಮಕ್ಕ್ನಳ್ಳಿ ಬಜ್ಜೇಪ್ಪ ಅಲಿಯಾಸ್ ವನ್ನೂರಪ್ಪ, ನಿತ್ಯ ಸಂಜೆ ಕಡೆ, ಪದಮಾಡಿ, ಮಾಡಿ… ಕುಡ್ದಿ ನಿಸೆಯೊಳ್ಗೆ, ಆಡಿದ್ದು ಕೇಳಿ, ಪೆರ್‍ಲಜ್ಜನ ವಟ್ಯಾಗೆ… ವಣಕಾರ ಕಲ್ಸಿದಂಗಾಗಿ, ಯೆದ್ದು ಯೆದ್ದು ಬಿದ್ದು ಬಡೆದಂದೇ ಬಾಕಿ…

‘ಯೇನೋ… ಕುಡ್ದುನೇ ಬಿಡು! ಪೆರ್‍ಲಜ್ಜ, ಅವ್ನು ಗೊಡ್ವಿಯೇನು? ಅಣ್ಣಿನ ಪುಟ್ಯಾಗೆ, ವಂದು ಕೆಟ್ಟಣ್ಣು ಅವ್ನು! ನಾಯ್ನ ಬಡ್ಯಾಕೆ ಬಣ್ದ ಕೋಲ್ಯಾಕೇ?!’ ಯೆಂದು. ತಳವಾರ್ಕೆ ಮಾಡೋ ಸಂಗಣ್ಣ ಸಣ್ಗೆ ಅಂದಿದ್ಕೆ… ಪೆರ್‍ಲಜ್ಜನೂ ಕಂಡೂ ಕಾಣ್ದಂಗೇ… ಕೇಳಿಯೂ ಕೇಳ್ದಂಗೇ ಯಿದ್ದದ್ದು… ಯೀಗಿಷ್ಟು ನಿದೂರೆ ಕೆಡ್ಸಿ, ‘ನಿಟ್’ ಬಿಳಂಗ್ತಾತೈತೀ ಅಂದ್ಕೊಂಡಿರಲಿಲ್ಲ…?! ಯೆಂದು, ‘ತಲ್ತಾಲೀ…’ ಕೊಡ್ವಿಕೊಂಡ.

ಯೀ ವೂರು, ಕೇರಿ, ನಡ್ವೆ, ಯೀ ಪೆರ್‍ಲಜ್ಜ ಅಂತ್ರ ಯಿದ್ದಂಗೆ. ಯೀ ಅಂತ್ರ ಯೆಚ್ಚಿಗೂ ಯಿರ್ಬಾರ್ದು, ತ್ವಟ್ಗು ಯಿರ್ಬಾರ್ದು. ಯಿವೆರ್ಡೂ ಅಪಾಯ್ನೆ. ತಂತ್ಮೇಲೆ ನಡ್ದೆಂತೆ, ಪೆರ್‍ಲಜ್ಜ ನಿತ್ಯಾ… ದೊಂಬ್ರಾಟ್ನ ನಡ್ಸಿ, ಯಿ ಯಪ್ಪತ್ತು ವರುಸದಿಂದ ವೂರು ಕೇರಿಗೂ ಬೇಡದಜ್ಜನಾಗಿ, ವೂರು ದನ ಕಾದೂ, ಯಿಡೀ ಕೇರ್ಗೆ ‘ಗೌಡ’ ಅನ್ಸಿಕೊಂಡಿದ್ದು, ತನ್ಗೇ ಯೀಗೀಗಾ… ವಾಕ್ರಿಕೆ ಬರ್ತೊಡಗಿತ್ತು.

ಯಿದ್ಯಾವುದ್ನೂ ತೋರ್ಗೊಡ್ದೆ ‘ವಯಸ್ಗಾಗಿದೆಯೆಂತಾ… ವುಲಿ ಬೇಟೆಯಾಡ್ದ್ನ ಬಿಡುತ್ತೈತೇನು? ಮಾಸ ಸಿಗ್ಲಿಲ್ಲಾಂತ ವುಲ್ಲು ತಿನ್ನುತ್ತೇನು? ಸಾಸಂತ್ರ ವೋರಾಟಗಾರ್ನು! ಬಿಟ್ಸಿರ್‍ನ ವೊಡ್ಸಿದವ್ನು. ಯೀ ವೂರುಕೇರಿ ನನ್ನೆರ್ಡು ಕಣ್ಗುಳು. ಕೈಕಾಲ್ಗುಳ್ದಿಂತೆ. ವುಸ್ರಿರೋತನ್ಕ ಜನ್ರ್ನ ಜತ್ನ ಮಾಡ್ತೀನಿ. ಕೇರಿ ಗೌಡ್ಕೇನ ಯಾರ್‍ಗೆ ಕೊಡಂಗಿಲ್ಲ…’ ಯೆಂದು, ಪೆರ್‍ಲಜ್ಜ ಆಗಾಗ ಮುಂಗಾರ್‍ನಿ ಮಳೆಯಂಗೇ… ಗುಡುಗಿದ್ದ.

ಯಿತ್ತ ಯೆಂಡ್ತಿ, ಲಕ್ಕಿಪೇಟೆ ಲಕ್ಕಮ್ಮ, ಅಡ್ಗೆ ಕ್ವಾಣ್ಗಿಲಿ ತಸ್ತ್ನಿ ತುಂಬಾ ನೀರಿಟ್ಟು, ಚಳ್ಮಾಳಾ ಯೆಸ್ರು ಕಾಸ್ದಿಂಗೆ ಕಾಸಿ, ಬಚ್ಲಿಗಿಳ್ಸಿ ಪೆರ್‍ಲಜ್ಜ್ನ ಪಿರೂತಿಯಿಂದ ‘ಯೇ ಪಾರುಽ… ಪೆರ್‍ಲು… ಕುಂತಲ್ಲೇ… ನೀ ಮುಗ್ಳಿ ಸೆದ್ಲುಯಿಡಂಗೆ, ಕುಂತ್ರೆಂಗೇ?! ಕೆಂಡ ಕಾದಂಗೆ, ಕಾದ ನೀರು. ಮಂಜ್ಗುಡ್ಡೆಯಾದ್ವು! ಯೆದ್ದು ಬಾ ಬಾರ್‍ದೇ ಮಂಜಾಳ್ಗಾ…’ ಯೆಂದು, ಗಂಟ್ಲು ಅರೊಂಡ್ಳು.

ಪೆರ್‍ಲಜ್ಜ್ನ ಪಿಸ್ಪಾಸಾ ಮಾತುಗಳು, ಆಕ್ಷಣ ಅರಿದು ತಂತಿಯಂಗೆ, ತುಂಡಾದ್ವು!! ಯೆದ್ದು ನಿಂತ, ‘ಯೇ ಬಂದೇ ಕಣ್ಲೀ ಲಕ್ಕಿಽ…’ ಸಿಂಹಾನಾದದ್ಲೀ… ಕೂಗ್ತಾ… ಬಚ್ಲು ಮೂಲೆಗ್ಹೋಗಿ ಗೋಮ್ಮಟನಾದ.

‘ಯೇ… ನೀ… ಮುದ್ಕುನಾದ್ರು ಮುಗುಳಾಗ ಮತಿಯಿಲ್ಲ…! ಯೆಂಬಂತೆ, ನಿಂತೇ ನೀರೆರ್ಕಬೇಡಾ! ರವ್ವಾಟು ಕುಂತ್ಗಾ. ಬಗ್ಗಿ ನೀರ್‍ಯಾಕ್ಕೋ… ಆಸ್ರಾದಾತು’ ಯೆಂದು ಯೆಂಡ್ತಿ… ಪ್ರತಿ ನಿತ್ಯದಂತೆ, ತೋಡಿರಾಗ, ತಾಳ, ಪಲ್ವಿ… ತೆಗೆದ್ಲು.

ಯೆಂಡ್ತಿ ಮಾತು ಆರೋಡ್ದು, ‘ಲಕ್ಕಿ ಪೇಟೆ ಲಕ್ಕಮ್ಮ, ಯೀ ಲುಕ್ಕು ಯಾಕಮ್ಮ? ಯಾವೋ… ಗಡ್ಗಾಡಾ… ಮೈಯೆಲ್ಲ… ನೀ ಬಂದು ಮೈಯುಜ್ಜು ಮೆಲ್ಲಗೆಽ ಲಕ್ಕಮ್ಮಾ…’ ಯೆಂದು, ಪೆರ್‍ಲಜ್ಜ ಮೈ, ಕೈ, ಕಾಲುಗಳಿಗೆಲ್ಲ ‘ಸವಳು’ ಹಾಕಿ, ಗಸ್ಗಾಸಾ ಯಮ್ಮೆ ಮೈ ತಿಕ್ಕುವಂತೆ, ವುಜ್ಜುತ್ತಾ ಆಡಾವುಡ್ಗುನಂತೇ… ಪದ ಗುನುಗ್ದಿ.

ತೆಂಗಿನ ಪೀಸು ಯಿಡ್ದು, ಲಕ್ಕಮ್ಮ ದಿನಾ ವೈಯಾರ್‍ದಾಲಿ… ಬರುವಂತೆ ಬಂದು, ವೋಪಾಽ…. ವೋಽ…. ವೋರ್ಗಿರಾ ಯೀಗೀಗಾ ಯಳೇಗರವಾಗಿದೆ. ತೂತ್ಗೂ ಮೂತ್ಗೂ ಬೆಳ್ಳಿಗಡ್ಡ, ವುರಿಯುತ್ತಿರುವ ಕಣ್ಗುಳು ಬಂದಿದ್ರೂ… ಯೀ ವುಡುಗಾಟ್ಕೆಗೇನು ಕಮ್ಮಿಯಿಲ್ಲ! ಬರೀ ಮಾತುಗ್ಳು ಕೋಟಿ ದಾಟ್ತಾವೆ’ ಯೆಂದು, ಮೈ ಮನವೆಲ್ಲ ವಕ್ಕಂತಾ, ಕಮಲ್ದ ಮಕ ಮಾಡ್ಕೊಂಡು, ಯಮ್ಮೆ ಬಗ್ಸಿಗೊಂಡಂಗೆ, ಬಗ್ಸಿಗೊಂಡು ಪರ್ಪರಾಽ ಕರೀ ಮೈಯ್ನ ವುಜ್ಜುತ್ತಾ, ನೀರ್‍ಹಾಕಿ ತಟ್ಟಿ ತಟ್ಟಿ… ಸವುಳಾಕಿ, ಕೆರೆಯುತ್ತಾ… ತಲ್ಗೆ ಸವುಳು ನೀರ್ಹಾಕಿ, ಗಸ್ಗಾಸಾ ತಿಕ್ಕಿ ತಿಕ್ಕಿ… ಮೀನಿನಂತೆ… ವುಜ್ಜಿ… ವುಜ್ಜಿ ‘ವುಸ್ಸಾಪ್ಪೋ’ ಯೆಂದು. ಯಿಂಜಿನ್ ವಗೆ ಬಿಟ್ಟು, ಪೆರ್‍ಲಜ್ಜ್ನ ತಿಂಬಾಳು ನೋಡ್ದಂಗೇ… ನೋಡ್ತಾ… ನಿಂತ್ಳು.

‘ಯೇ… ಅಂಗ್ಯಾಕೆ ನೊಡ್ತೀಯ್ಲೇ?! ಆಸ್ರೂಗೀಸ್ರೂ ಆದಾತು! ಜ್ವರಾಗಿರಾ ಬಂದು ಮಲ್ಗ್ಯಾನು’ ಯೆಂದು, ಪೆರ್‍ಲಜ್ಜ ಯೆಂಡ್ತ್ನಿ ‘ನಗ್ಸಟ್ಗೆ’ ಮಾಡ್ದಿ.

‘ಯೇ, ಕರ್ರಗೆ ದೇವ್ರು ಕ್ವಾಣ ಆಗೀಗಿ ಬಿಡು, ನಿನ್ಗೆಲ್ಲಿ ಆಸ್ರಾದೀತು?! ವಳ್ಳೆ ಗರ್‍ಡುಗಂಬಾಗೀಗಿ…’ ಯೆಂದು, ಲಕ್ಕಮ್ಮ, ಯೇಟ್ಗೆ ಯದಿರೇಟು, ಕೊಟ್ಳು.

ಪೆರ್‍ಲಜ್ಜ ಬಚ್ಲು ಮನೆ ದಾಟಿ, ಪಡ್ಸಾಲ್ಗಿ ಬಂದು, ಬಿಳಿ ಕಚ್ಛೆ ಪಂಚೆ, ಕೆಂಪಂಗಿ, ಅದ್ರ್ಮೇಲೆ ಕರೀಕೋಟು, ತಲೆಗೊಂದು ಬಿಳಿರುಮಾಲು ಸುತ್ತಿ, ಯೆಗ್ಮೇಲೆ ನೀಲಿ ಶಾಲು ಯಿಳಿಬಿಟ್ಟು, ಅಣ್ಗೆ ಯಿಭೂತಿ, ಚಂದ್ರಬುಕ್ಕಿಟ್ಟು ಯಿಟ್ಗೊಂಡು, ಬಲಗೈಗೆ ಬೆಳ್ಳಿ ಕಡ್ಗು, ಕಾಲ್ಗೆ ಗಗ್ರೀ ಧರ್‍ಸಿ, ಮೂಲ್ಯಾಗಿದ್ದ ಬಿದ್ರ ಕೋಲ್ಹಿಡಿದ.

‘ಯಂಗ್ದೆ ನನ್ಲುಕ್ಕು… ಲಕ್ಕು?!’ ಯಂಡ್ತಿ ಲಕ್ಕಿ ಕಡೆ, ವುಬ್ಬು ಆರ್‍ಸಿ, ಬೆಳ್ಳಿ ಮೀಸ್ಮೇಲೆ ಸವ್ರುತ್ತಾ, ಕಣ್ಣಲ್ಲಿ ಕಣ್ಣಿಟ್ಟು, ಜೆಟ್ಕಿ ಆಕಿ ಕೇಳ್ದಿ. ‘ಯೇ… ಯೇಳ್ಲಾ… ಥೇಟ್, ನಮ್ ದಾವಣ್ಗೆರೆ ಕಡ್ಲೆ ದಾಸಯ್ಯನಂಗೆ ಕಾಣ್ತೀಯಾ…’ ಯೆಂದು, ರೇಗ್ಸಿದ್ಲು.

‘ಅವುದಾ…? ಯೀಗಾ ನೀ ಕೈಗೆ ಸಿಗ್ಬೇಕು… ಕೈಯಾಗಿ ಯಂಗಿದೆ, ಬಿದ್ರಕೋಲುಽ…. ಸರಿ ಯೇಳಿದ್ರೆ, ಯೀಗ ವುಳುಕೊಂಡೆ… ಯಿಲ್ಲಾಂದ್ರೆ.. ಪೂಜೆ ತಪ್ಪಿದ್ದಲ್ಲಾ’ ಪೆರ್‍ಲಜ್ಜ ಕೋಲು ಯೆತ್ತಿ ವಳ್ಗಾಳ ಮನ್ಗೆಲ್ಲ ವೋಡ್ಸಿದ.

‘ಯಿಲ್ಲಿಲ್ಲಾ… ನೀ… ಅರಿಸಂದ್ರ ಸಿನಿಮ್ದಾಗ್ನಿ, ಯೀರಬಾವು ಆಗೀಗಿ…’ ಅಂತಾ ಬಿರ್ಬೀರಾನೆ, ಅಡ್ಗೇ ಮನಿಂದಾ… ಅಂಗ್ಳಕೆ… ಯೆಂಡ್ತಿ ವೋಡಿದ್ಲು.

ರವ್ಹಾಟ್ಹೊತ್ತಾಯಿತು. ಲಕ್ಕಮ್ಮ… ಪರಿಯಾಣ್ದ ತುಂಬಾ… ಕಟ್ಲಂಬ್ಲಿ, ವುಳಿಮಜ್ಗೆ, ಕೈ ತುಂಬಾ, ವುಣ್ಸೆಕಾಯ್ದು ತೊಕ್ಕು, ತಂದು ಯೆಂದಿನಂತೆ, ಪಡ್ಸಾಲೆ ಮೂಲ್ಗೆ, ಪೆರ್‍ಲಜ್ಜ್ನ ಮುಂದಿಟ್ಲು. ‘ಚಕ್ಕಾಲುಬಕ್ಲು’ ಆಕ್ಕೊಂಡು, ಕೈಯಿಂದ ಭೇಷ್ ನುಣ್ಗು ಕಿವಿಚುಗೊಂಡು, ಅಂಗೈಯಿಂದ ಬಾಯಿಗೆಳೆದುಕೊಂಡು, ‘ಸುರ್ರು ಸುರ್ರು…’ ಯೀದೆಮ್ಮೆ ಮುಸ್ರೆ ಕುಡ್ದಿಂಗೇ ಗುಟ್ಕುರ್ಸಿದ. ಮಗಿ ತುಂಬಾ… ನೀರ್‍ನ ಗಟ್ಗಟ್ನೇ ಯೆತ್ತಿ, ಕೈ, ಬಾಯಿ, ಸವ್ರಿಕಂಡು… ಬೆಳ್ಳು… ನೆಕ್ಕಂಡು, ನಂತ್ರಾ ವಾರ್ಣಾಗಿ, ತೊಳ್ಕೊಂಡು, ಮರ್ದಿಂಗೇ ಮೀಸ್ನೆಗ್ಳ್ನ ಸಾಪು ಮಾಡಿಕೊಂಡು, ಅಂಗ್ಳುಕೆ ಜಿಂಕೆಯಂಗೆ ಜಿಗಿದು, ಕೇರಿಯನ್ನೊಮ್ಮೆ ಸಿಂಹದಂತೆ ನೋಡಿ, ಕಟ್ಗೆ ಆನ್ಕೊಂಡು… ಆನಿಯಂಗೇ, ಕುಂತ.

ಕೇರಿಯಿನ್ನು ಅಸಿಗೂಸಿನಂಗೇ ಪಚ್ಚಿಗೊಂಡಿತ್ತು! ಬಾಲ್ಯ ಸೂರ್ಯ, ಯಳೆ ಬಿಸ್ಲಿಗೆ, ‘ಅಲ್ಗೆ’ ಕಾವೇರ್ದಿಂತೆ, ಪೆರ್‍ಲಜ್ಜ ಮೆಲ್ಗೆ, ಕಾವೇರ್ದಿ. ‘ಹಗ್ಲು ಜನನ. ಯಿರ್ಳು ಮರಣ, ಯಿದ್ವೆ ಜೀವ್ನ. ಯಿದ್ರ ನಡ್ವೆ ಮಂಗ್ನಾಟ ಕಣ್ರಣ್ಣ…’ ಪೆರ್ಲಾಜ್ನ… ಕುಂತಲ್ಲಿಂದ್ಲೇ ತಳ್ತಾರ್ಕೆ ಮಾಡೋ, ಯದ್ರು ಮನೆ ಸಂಗಣ್ಣನ, ಪೂಜಾರ್ಕೆ ಮಾಡೋ, ಪಕ್ಕದ್ಮನೆ ರಂಗಣ್ಣನ, ಯೇತ್ಗುಂಬಂಗೆ ಕೂಗ್ದಿ. ಆತ್ನ ಕಂಜ್ನಿ ಕಂಠಕ್ಕೆ, ಜನ್ರು ಅತ್ತುಕೊತ್ಲಾದ್ರು.

‘ಯೇನ್ರಲೇ. ಅಡ್ಗೆ ಮನ್ಯಾಗೆ ಸೇರ್ಕೊಂಡು, ಯಂಗ್ಸರಂಗೆ ಯೇನು ಮಾಡ್ತೀರಲೇ? ಕೈಗಳಿಗೇನು ಬಳ್ಗಿಳಿ ಆಕ್ಕೊಂಡ್ರೆನ್ಲೇ? ಕುಡುದ್ಗಾ ಕೇಜಿಗಟ್ಲೆ ಮಾತಾಡ್ತೀರಾ? ಯೀಗ ಗ್ರಾಂನಷ್ಟು ಮಾದಿಗ್ರ ಕೆಲ್ಸ ಮಾಡಿ ತೋರ್‍ಸಿಲ್ರೇ?! ಕೂಗಿ ಕೂಗಿ ಕರ್‍ಯಾಕೆ ನನ್ನೇನು ದಕ್ಕಲಾರ್ರ್ನ ಮಾಡ್ರಿಲೇನ್ರಲೇ? ಆಗ್ಲೇ ಸಂಗಿನೊತ್ತಾಯ್ತು… ಯೇನು ಸವುಣುಸ್ತೀರಾಲೇ? ಕೆಲ್ಸ ಮಾಡಿದ್ರೆ ಯದೆಗೊದ್ದಂಗಿರ್ಬೇಕು. ಅಳ್ತಾ ಅಳ್ತಾ ಮಾಡ್ದೊಲ್ಲ. ನಗ್ತಾ ನಗ್ತಾ ಮಾಡ್ದೋ’ ಯೆಂದು, ಪೆರ್‍ಲಜ್ಜ. ಕೇರಿಯ ಮಣೆಗಾರ್‍ನ, ಕೂಗಿ… ಕೂಗಿ… ಕರ್ದು, ಬೈದು, ಗಂಟ್ಲು ವಣಗ್ಸಿಗೊಂಡ.

ಕೇರಿ ಮಣೆಗಾರರಾದ ಸಂಗಣ್ಣ, ರಂಗಣ್ಣ… ಬೆವ್ರುತ್ತಾ… ವೊಡೋಡಿ ಬಂದು, ಪೆರ್‍ಲಜ್ಜನ್ಮುಂದೆ ಬಿಲ್ಲಾದ್ರು.

‘ಮೊರ್ನಾಲ್ಕು ದಿನ್ದಿಂದಾ… ದಿನ್ಪಿರ್‍ತಿ, ಅದ್ನಾರು ಜನ ಮಣೆಗಾರ್‍ನ ಯಚ್ರಿಸ್ತಾಯಿದ್ದೀವಿ! ಯಣ್ಣೋ… ವಸಕಾಲ್ಮರಿಗ್ಳು ಯೀಗಾದ್ವು, ಸಂಜಿಕಾದ್ವು, ನಾಡಿಕ್ಬಾವುದು… ಅಂತಾ ಸಿಟ್ಗಿ ಮುಳ್ಳಾಡ್ಸಿ, ವಂಗ್ಟು, ಪೆನ್ನೆ, ಬಾರಿಡಾದು, ಮಿಗ್ಸವ್ರಿ, ಕಾಚಿಕ್ಕಿ… ಆರ್‍ಸಾಕಿಟ್ಪಾರಣ್ಣೋ…’ ಯಂದು, ತಳವಾರ್‍ಕೆ ಮಾಡೋ ಸಂಗಣ್ಣ, ಕೇರಿ ಮುಕಂಡ, ಗೌಡ್ಕೆ ಮನೆತನ್ದ ಪೆರ್‍ಲಜ್ಜನ್ಮುಂದೆ ವರ್ದಿ ವಪ್ಸಿದ.

‘ಯೇನ್ ಯೇಳ್ದ್ರೆ ಯೇನ್ಬಾಂತು?! ಕತ್ತೆ ಮುಂದೆ ಕಿನ್ರೀ ಭಾರ್‍ಸಿದಂಗೆ, ಯೆದ್ಗೆ ವದ್ದಂಗೆ ಮಾದಿತನ ಮಾಡಿ, ವುಂಬ್ರಿ ಯೆಂದ್ರೆ ಕೇಳ್ಯಾರೇ? ವೂರ್‍ಗಾಳ ಮನ್ಗೆಳ್ನ ಸಮ್‌ನಾಗಿ ಅಂಚುವಾಗ್ಲೇ ನಾ ಯೆಳೀನಿ. ನೀಗಂಗಿದ್ರೆ ಮಾದಿತನ ಮಾಡ್ರೀ! ಯಿಲ್ಲಾಂದ್ರೆ ಬ್ಯಾರೆ ಮಣಿಗಾರ್ರುರು ಮಾಡ್ತಾರೆಂದ್ರೆ ಕೇಳಿದ್ರಾ?!

ವರ್ಸು ವರ್ಸು ಯಿವ್ರುದು ವಳ್ಳಿ ಮಳ್ಳಿ ಯಿದೇ ಗೋಳೇ, ಯೀ ಮಾದಿಗ್ರು ಯೆಂದ್ರೆ… ಸುಳ್ರು, ಮಾತಿಗೆ ತಪ್ಪೋರು… ಅನ್ನೋದು ಸುಳ್ಳೇ? ರವ್ವಾಟುಕ್ಕೆಲ್ಲ ಸುಳ್ಳಾಡ್ಬಾರ್ದು. ಯಿಂದೆ… ಯೀ ಲೋಕ ಕಲ್ಯಾಣಾರ್ಥವಾಗಿ, ನಮ್ಮ ಮೂಲ ಪುರುಷ ಆದಿಜಾಂಬುವಂತ ಕೈಲಾಸುಕೆ ವೋಗಿ, ತನ್ನ ಯೇಳು ಜನ ಮುಕ್ಳು ವಟ್ಟೀಗಿಲ್ದೆ ಸಾಯ್ತಾರೆ… ಕಾಮಧೇನು ಕೊಡ್ರಿಽ…. ತುಸು ದಿನ್ಕೆ ಕಳ್ಸವೆ ಅಂತಾ ಬ್ರಹ್ಮಾ ದೇವ್ನ ಕೇಳ್ದೆ. ಅದ್ಕೆ ಆಯ್ತು ಅಂದ. ಆದ್ರೆ ಕಾಮಧೇನು ಸೂದ್ರ್ನ ಯಿಂದೆ ಬರ್ಲಿಲ್ಲ. ಯುದ್ಧ ಮಾಡಿ, ವತ್ತು ಭೂಮ್ಗಿ ತಂದ! ಮತ್ತೆ ವಾಪಾಸ್ಸು ಕಳ್ಸಿಲಿಲ್ಲ. ಸುಳ್ಳುಗಾರ್‍ದಾ!! ಅಂದಿನಿಂದ ಯಿಂದ್ನಿತನ್ಕ ಮಾದಿಗ್ರ್ನ ಸುಳ್ಳುಗಾರ್ರು ಅಂತಾರೆ! ಅದ್ನ ಯೀ ದಗಡಿಗಂಡ್ರು ವುಳ್ಸಿ, ಬೆಳ್ಸಿ ಯಾಂತಾ… ವಂಟಾರೆ. ಯೀವತ್ತೇ ವಸಾಕಾಲ್ಮರಿಗ್ಳನ ಮಾಡಿ ಆಕೋ ದಿನ! ನಗ್ಸುತ್ತು, ಗಳೇವು, ಬಾರ್ಕೋಲು, ಆಣಿಸುತ್ತು, ಮೂಗ್ದೂರ, ಗಂಡ್ಸೆರ, ಕೊಡಣ್ಸು… ಕಣ್ಕಿ, ಕಣ್ಪಿಟ್ಟೆ, ಕಂಪ್ಲಿಬಾನೆ, ಬಿಲ್ಲೆ… ವಂದೇ…?! ಯೆರ್ಡೇ?! ವಕ್ಲುತನ್ಕ ಯೇನೇನು ಬೇಕೋ… ಅದ್ನೆಲ್ಲ ಮಾದಿತನ ಮಾಡೋ…ಯೀ ಮಣಿಗಾರ್ರುರೇ ಮಾಡಿ, ಮಾಡಿ… ಕಾಲ್ಮಾನಕ್ಕೆ ತಕ್ಕಂತೆ, ಮಾತ್ಗೆ ತಪ್ದೆಂಗೆ ಮಾಡಿ… ಮಾಡಿ… ಕೊಡ್ಬೇಕಲ್ಲಾ?!’ ಪೆರ್‍ಲಜ್ಜ ಸಿಡ್ಮಿಡಿಗೊಂಡ.

‘ಅವುದ್ಮತ್ತೇ! ಯೀಗ, ಬೇಸ್ಗೆ ಕಾಲ್ದಾಗೆ ಕಾಲ್ಮುರಿಗಳ್ನ ಮಾಡಿ ಕೊಡ್ದೆ… ಯಿನ್ನೇನು ಮಳೆಗಾಲ್ದಾಗೆ ಮಾಡಿ ಆಕ್ತಾರಾ?’ ತಳವಾರ್ಕೆ ಸಂಗಣ್ಣ, ಪೆರ್‍ಲಜ್ಜನ ಮಾತ್ಗೆ ಮಾತು… ಕೋಪು ಕಲ್ಯಾಕ್ದಿ.

‘ವೂರು ಗೌಡ್ರು… ಮಣೆಗಾರ್ರಿಗೆ, ತಮ್ ವಲ್ದಾಗೆ, ಕಣ್ದಾಗೆ, ಅಗೇವುದಾಗೆ, ಗರ್ಸೆ, ಗುಮ್ಮಿ, ಟೆಕ್ಕಿ, ವಾಡೇವ್ದಾಗೆ… ಸೀಲ್ಗಾಟ್ಲೆ ರಾಗಿ, ಜೋಳ, ಸಜ್ಜೆ, ನವುಣೆ, ಗೋಧಿ, ಆರ್ಕಾ, ಮುಳ್ಳೆಲ್ಲು, ಸಣ್ಣೆಲ್ಲು, ಕುಸುಮಿ, ಅಕ್ಡಿಕಾಳು, ಉಳ್ಳಾಗಡ್ಡೆ, ನೆಂಗಡ್ಲೆ… ಯೇನೆಲ್ಲಾ… ನೆಲ್ದ ಪಾಲು, ರಾಶಿಪಾಲು, ವಲ್ಮೇರಿ ಪಾಲು, ಮಾದ್ತಿನ್ದಪಾಲು, ಸಾಸುದ್ದಿ ಪಾಲು, ಕುಣಿತೆಗ್ದೆಪಾಲು, ಬಿಟ್ಟಿಸರ್ತಿಪಾಲು… ಸಕ್ಪಾಲು, ಅಬ್ಬಬ್ಬಾ…! ಕಣ್ಮುಚ್ಚಿ ನೀಡಲ್ವೇನು?? ವತ್ತು ತಂದು ತಿಂದು… ತಿಂದು, ಯೀಗ ವಸಾಕಾಲ್ಮರಿಗಳ್ನ ಮಾಡಿ, ಆಕಾಕಿಷ್ಟು ‘ಅಟ್ಟಾಸ’ ಮಾಡಿದ್ರೆಂಗೇ? ವೂರಾಗಿನ ಮಂದಿ, ಆಲುತುಪ್ಪಾ ವುಣ್ಣೋರು, ನಿನ್ನಾ ಕೇರಿ ಮಣೆಗಾರ್‍ನ, ವೂರು ಮುಂದ್ಕು ಕರ್ಸಿ ಅಂಗ್ಸಾತ್ತಾರೆ! ಸತ್ ದನಾ ತಿನ್ನೋ… ಮಾದ್ಗಿಮುಂಡೇ ಮಕ್ಳಿಗೆ ಅರ್‍ವಿಲ್ವೇನು?’ ಪುಜಾರ್‍ಕೆ ರಂಗಣ್ಣ, ತ್ವಟ್ಗು ನಾಲ್ಗೆ ಅರ್‍ಬೀಟ್ಟಿದ್ನ, ಗಮಿನ್ಸಿದ ಪೆರ್‍ಲಜ್ಜ, ವಾರ್ಗೆಣ್ಣಿನಿಂದ ರಂಗಣ್ಣನನ್ನು… ದುರ್ರುಽಗುಟ್ಟಿ ನೋಡಿ, ಕಣ್ಣುಗುಡ್ಡೆಗಳ್ನ ಕುಡ್ದೋರು ಮಾಡಿಕೊಂಡಂಗೇ… ಮಾಡಿಕೊಂಡಾ!

‘ಯೇಽ…. ಬಿಡಣ್ಣೋ ನೀ… ವಬ್ನೇ, ವಾರ್ದಿಂದ ರಕುತ ಸುಟ್ಟುಗೊಂಡು, ಕೇರ್ಯಾಗೆ ಮನ್ಮೆನೆಗಳ ಗುಂಟಾ, ಅಡ್ಡಾಡಿ… ಅಡ್ಡಾಡಿ… ಕಾಲ್ಗುಳ ಸೋಲ್ಸಿಗೊಂಡ್ರಿ… ವಬ್ರಾದ್ರು, ಕೊಟ್ಟು ವಚುನ್ದಂಗೇ ವರಬಂದ್ರಾ? ಅದ್ಕೆ ನಿನ್ಪರ್ವಾಗಿ, ಕೇರಿ ಮಣೆಗಾರ್ರ, ಬೈದದ್ದು!’ ಪೂಜಾರ್ಕೆ ರಂಗಣ್ಣ, ಪೆರ್‍ಲಜ್ಜನ ಮುಂದೆ, ಮತ್ತೆ ಕೊಸ್ರಾಡಿ ತಿಪ್ಪೇ ಸಾರ್ಸಿದ.

‘ನೀ ಯೆಷ್ಪಿರ್ಬೇಕು, ಅಷ್ಟ್ರಲ್ಲಿರ್ಬೇಕು ಮಣೆಗಾರ್‍ನ ಬೈಯೋ ಅಧಿಕಾರ್‍ನ ನಿನ್ಗೆಲ್ಲಿ ಕೊಟ್ಟೀನಿ?! ಬ್ರಿಟ್ಸಿರ ಕಾಲ್ದ ಮನ್ಸು, ನಾನೇ ಯಿವ್ರ್ನ, ಅಂಗೆಲ್ಲ ಬೈಯಲ್ಲ! ನಿನ್ಗೇನು ರವ್ವಾಟು ಸದ್ರಾ ಕೊಟ್ರೇ, ಬಾಯಿ ವಲ್ಸು ಮಾಡ್ಕೊಂತೀಯಾ ವುಸಾರು’ ಯೆಂದು, ಪೆರ್‍ಲಜ್ಜ… ರಂಗಣ್ಣನಿಗೆ, ದೆವ್ವ ಬಿಡ್ಸಿದ.

‘ಯಷ್ಟೇ ಆಗ್ಲಿ… ಜಾಂಬುವಂತ್ನ ರಕುತ…! ಅಂಚ್ಕೊಂಡು ವುಟ್ಟಿಯಾ… ಅವ್ರ್ನೆಲ್ಲ ಯಂಗೆ ಬಿಟ್ಕೊಟ್ಟಿಯಾ?!’ ತಳವಾರ್ಕೆ ಸಂಗಣ್ಣ, ಪೆರ್‍ಲಜ್ಜನ ಮಾತ್ಗೇ ತಾಳ ಕುಟ್ದಿ.

‘ಯೀನ್ನೊಂದು ಅರ್‍ಗೆಳಿಗೆ ಕಾಯನಲ್ಲ! ಯೀ ಬಿಸ್ಲಿಗಿಟ್ಟಿರ್‍ವು ಯೀ ಐದಾರು, ಅಲ್ಗೆಗಳೂ… ಯಂಗೇ ‘ಝಣಾ ಝಣಾ’ ಕಾದ್ಕೂದೂ… ಬಾಯ್ಬಾಯಿ ಬಿಡ್ತೀವೋ… ಅಂಗೇ ನಾನೀಗ. ಮಣೆಗಾರ್‍ನ ಸಲ್ವಾಗಿ ಕೆಂಡವಾಗೀನಿ! ಬಿರ್ರ್ನಾ ಬರಾಕೇಳ್ರೊ’ ಯೆಂದು, ಪೆರ್‍ಲಜ್ಜ ತಳವಾರ್‍ಕೆ ಸಂಗಣ್ಣನ ಕೈಲಿ, ಕೊನ್ಗೊಂದ್ಸುಲವೆಂಬಂತೆ, ಮನ್ಮೆನ್ಗುಂಟಾ… ಜೋರು ಮಾಡ್ಲು, ಕಳ್ಸಿಕೊಟ್ಟ.

ತಳವಾರ್ಕೆ ಸಂಗಣ್ಣ, ಅದಿನಾರು ಮನೆಯವ್ರಿಗೆ, ವಂದೇ ವುಸ್ಸಿರ್ಗೇ ವಸಾ ಕಾಲ್ಮರಿಗಳೊಂದಿಗೆ, ‘ಜಗ್ಗನೆ’ ವರಬರ್‍ಲು ಸಾರಿ, ಪೆರ್‍ಲಜ್ಜನ ಮುಂದ್ಬೆಂದು ನಿಲ್ಲುವುದಕ್ಕೂ, ಮನ್ಮೆನೆಗುಂಟಾ ಯೆಂಡ್ತಿ, ಮಕ್ಳು, ಮುದುಕ್ರು, ಮುಪ್ಪ್ರು… ವಬ್ಬೊಬ್ರೇ ಸಾಲು… ಸಾಲಿ ಯಿವ್ರ್‍ಎಯಂಗೆ, ಪರ್ಲೆರ್ಲೆಜ್ಜನ ಮನೆ ಮುಂದೆ, ಮೆರವಣ್ಗೆ ನಿಂತ್ರು.

ಅದಿನಾರು ಜನ್ರು… ಮಣೆಗಾರ್ರು… ಆದ್ರೂ, ಯಲ್ರು ತಲ್ಮೇಲೆ ದೊಡ್ಡ ದೊಡ್ಡ ಜಲ್ಲೀಪುಟ್ಟಿ, ತಟ್ಟಿಗಳು, ಸಿಬ್ಲಿ, ಪರಿಯಾಣ, ಕ್ವಣಿಗೆ, ತಣಿಗೆ, ಗಂಗಳ, ಮಡಿಕೆ, ಗಡ್ಗೆ, ಸ್ವಾರೆ, ಮಗಿಗಳು, ದೊಡ್ಡೋರುವು, ಸಣ್ಣೋರ್‍ವು, ಸಂಬ್ಬುದಾಳ್ಗುಳ ವಸಾಕಾಲ್ಮರಿಗಳು ರಾಶಿ ರಾಶಿ ತಲ್ಮೇಲೆ ವತ್ತು, ಕೈಯಲ್ಲಿ ಗಂಟ್ಸೆರ, ನಗ್ಸುತ್ತು, ಅಣಿಸುತ್ತುಗಳು, ಕೊಡಣ್ಸುಗಳು ಬಾರ್ಕೋಲ್ಗುಳು, ಬಾರ್ಗುಳು, ತ್ವಗ್ಗಿನ ಜೂಲ್ಗುಳು, ಜೀನ್ಗುಳು… ಯಗ್ಲಿಗೆ ರಬ್ಬರ್‍ನಿ ಸೀಲ, ಅದ್ರಾಗೆ… ವುಳಿ, ಕೊಡ್ತಿ, ರಂಪಿಗೆ, ಯಿಕ್ಳ, ಮಿಗ್ಗು, ಕಾಚು, ಮೊಳ್ಗೆಳು, ಪಾಲಿಸು ಬುಡ್ಗಿಳೂ… ವಳ್ಳೇ ‘ಯಡ್ಗೆ ಜಾತ್ರೆ’ ವಂಟಂಗೇ… ಸಾಲುಸಾಲಾಗಿ, ಗುಂಪುಗುಂಪಾಗಿ… ಯಲ್ರ್ಮುಂದೆ ಐದಾರು ‘ಅಲ್ಗೆಳ’ ಬಡಿಯುತ್ತಾ… ವೂರ್ಕಡೆ, ಮೆಲ್ಲೆಮೆಲ್ಗೆ…ಯೆಜ್ಜೆಯಿಟ್ರು.

ಅಲ್ಗೆಗಳ ಆರ್ಭಟಕೆ… ಕಿವಿ ಪೋಟಾದವು. ವೂರು ಕೇರಿ ಅಂತ್ರ ಕಿರಿದಾಯ್ತು. ಸಿಳ್ಳಿ, ಕೇಕೆ, ಸುತ್ಲ ಪೊಸ್ಗೆ… ಯಂಡ, ಸಾರಾಯಿಯ ವಾಸ್ನೇ, ಮುಗಿಲು ದಾಟಿತು. ಮೆರ್‍ವಣ್ಗೆ ವೂರು ಬಾಗ್ಲು ದಾಟಿ, ಯೀರಭದ್ರ ದೇವಸ್ಥಾನ್ದ ಜಗ್ಲಿಕಟ್ಟೆ ಮೇಲೆ, ಸಾಲಾಗಿ ಜಲ್ಲೆ, ಪುಟ್ಟಿ, ತಟ್ಟಿಗಳೂ… ವಕ್ಲುತನ್ದ, ಸಾಮಾನುಗಳನ್ನು ಯಿಟ್ಟು, ದೇವ್ರಿಗೆ ಕೈ ಮುಗಿದು, ಯಲ್ರು ಅಡ್ಡಾದ್ರು.

ವಾಡೇವಿಗೆ… ಸುದ್ದಿ ವೊಯ್ತು. ದೊಡ್ಡ ಧಣಿಗಳೂ, ಕಲಿಯುಗ್ದ ಅಣ್ಣ ಬಸವಣ್ಣನವ್ರು… ಗೌಡ್ರೂ… ಸಿನ್ನರಾಯರೂ ಮಣೆಗಾರ್ರು ಯಿದ್ದಲ್ಲಿಗೆ ಬಂದ್ರು, ವಸಕಾಲ್ಮರಿಗಳ್ನ ವಂದ್ಸುತ್ತು ನೋಡಿ… ದಂಗಾದ್ರು. ಅಂದದ, ಚಂದದ, ಆನಂದ ತುಂದಿಲರಾಗಿ, ಕಾಲ್ಮರಿಗಳಿಗೂ ಜಡೆ ಅಣೆದು ಮಾಡಿದ, ಕುಸರಿ ಕಲೆಗೆ, ಮೆಚ್ಚಿದ್ರು. ವಸಾಕಾಲ್ಮುರಿಗಳಿಗೆ ನೀವಾಳ್ಸಿ ಜೋಡುಗಾಯಿ ವಡ್ದೆ, ತೀರ್ಥದ ನೀರ್‍ನ ಮಣೆಗಾರು ಮೇಲೆ ಯರ್‍ಚಿ, ನಿಂಬೆಣ್ಣು, ಬೂದ್ಗುಂಬ್ಳಕಾಯ್ನಿ ನೀವಾಳ್ಸೀ, ಆರ್‍ತಿ ಯೆತ್ತಿ, ನೆಲ್ದ್ಮೇಲೆ ಆಕಿ, ವಡ್ದು, ಅದ್ರ್ಮೇಲೆ ಚಂದ್ರುಬುಕ್ಕಿಟ್ಟು, ಭಂಡಾರ ಅಚ್ಚಿ, ವೂದ್ಗುಡ್ಡಿ ಬೆಳ್ಗಿ… ‘ಜಯಮಂಗಳಂ… ನಿತ್ಯ ಸುಭಮಂಗಳಂ…’ ಪದವಾಡಿದ್ರು. ಯಿದ್ನೇಯಿರ್ಬೇಕು: ಯೆಕತೆಯಲ್ಲಿ ಅನೇಕತೆ, ಅನೇಕತೆಯಲ್ಲಿ ಯೆಕತೆಯೆಂದಿರುವುದು. ಯೀ ವೂರು, ಕೇರಿ, ವೊಂದಾಗಿದ್ರೆ… ಸ್ವರ್ಗಸೋಪಾನಯೆಂದಿರುವುದು. ಸೂಜಿ ಬಿದ್ರೂ ಕೇಳಿಸುವಷ್ಟು ನಿಶ್ಶಬ್ಧ. ಯಿಡೀ ವೂರು ಕೇರಿ ಜನ್ರ ಜಾತ್ರೆಯಾಯಿತು. ಅವುದು… ವರ್ಸು ಸೇರುವ ಕಾಲ್ಮರಿ ಜಾತ್ರೆ! ದೊಡ್ಡ ಧಣಿಗಳು… ಪ್ರತಿ ವರುಸದಂತೆ, ಮೂರು ಬವುಮಾನಗಳೆಂದೂ… ಬೆಳ್ಳಿತಟ್ಟೆ, ಕಂಚಿನ ಚಂಬು, ಲೋಟಗಳನ್ನು ಮಣೆಗಾರರಾದ ಪೆರ್‍ಲಜ್ಜ, ಸಂಗಣ್ಣ, ರಂಗಣ್ಣನಿಗೆ ನೀಡಿದರಲ್ಲದೆ, ಪ್ರತಿಯೊಬ್ಬರಿಗೂ ನೂರರ ವಂದೊಂದು… ನೋಟುಗಳನ್ನು ಯಿನಾಮಾಗಿ ನೀಡಿ, ಬೆನ್ನು ತಟ್ಟಿ… ಆಲಿಂಗ್ಸಿಗೊಂಡು… ಅರ್‍ಸಿದ್ರು.

‘ಬುದ್ಧಿಯವ್ರೇ, ಅಣ್ಣ ಬಸವಣ್ಣನವ್ರ್ನ ಕಂಡಷ್ಟು, ನಿಮ್ನಕಂಡು… ಕುಸಿಯಾಯ್ತು ಧಣಿಗಳೇ! ಪ್ರತಿ ವೂರಿಗೊಬ್ರು, ಕೋಟಿಗೊಬ್ರು ನಿಮ್ಮಂಥವರಿದ್ರೆ… ಮಣೆಗಾರರ ಸ್ರಮ, ಅವಮಾನ, ಕಮ್ಮಾಗ್ತಾದೆ. ಅಗ್ಲುರಾತ್ರಿ ಅಂಬ್ದೆ, ವಸಾಕಾಲ್ಮರಿಗಳ್ನ ಮಾಡ್ಮಿಡಿ… ಜೀವ ರೋಸಿತ್ತು ಕೈಗಳೋ ಮಡ್ಸು, ನೀಸ್, ಕೆಟ್ ವಾಸ್ನೆಯೆದ್ದು… ಯೇಳು ಕೆರೆ, ಬಾವಿ, ಸಾಗರ್‍ದ ನೀರಿಂದಲ್ಲ! ಯೇಳು ರಾಷ್ಟ್ರಗಳ, ದೇಸ್ಗಳ, ಸುಗಂಧ ಪರಿಮಳ ದ್ರವ್ಯದಾ ರಾಶಿಯಿಂದ ತಿಕ್ಕಿ ತಿಕ್ಕಿ ತೊಳೆದ್ರು, ವಾಸ್ನೆ ವೋಗುತ್ತಿದ್ದಿಲ್ಲ. ಯೀಗ ನಿಮ್ಮ ಆಲಿಂಗನದಿಂದ ಜೇನಿನಾ ನುಡ್ಗಿಳಿಂದಾ… ವೋಯ್ತು ಧಣಿಗಳೇ… ನಿಮ್ಮೊಟ್ಟಗಿದ್ವಿ ಯೆನ್ನುವುದೇ ನಮಗಾನಂದ. ನಿಮ್ ಪಾದಗಳಿಗೆ ಕೋಟಿ ಕೋಟಿ… ನಮನಗಳು’ ಯೆಂದೂ ಪೆರ್‍ಲಜ್ಜ, ಪೆನ್ನಪ್ಪ, ಸಂಗಣ್ಣ, ರಂಗಣ್ಣ… ಯಲ್ಲರು ಅಡ್ಡಬೀಳಲು ವೋದವ್ರ್ನ, ಧಣಿಗಳು ಭುಜವಿಡಿದೆತ್ತಿ, ಬಾಚಿ ತಬ್ಬಿ… ವೂರುಕೇರಿಗ್ರ್ನ ಮತ್ತೂ ತಬ್ಲಿಬ್ಬುಗೊಳ್ಸಿದ್ರು.

ಅದಿನಾರು ಜನ್ರು… ಮಣೆಗಾರ್ರು, ತಂತಮ್ಮ ತಲ್ಮೇಲೆ ಜಲ್ಲೆ ಪುಟ್ಟಿ ತಟ್ಟಿಗಳನ್ನು ವತ್ತು, ವುಳ್ದಿ ಸಾಮಾನುಗಳೊಂದಿಗೆ, ಅವ್ರರವ್ರಾ ವಕ್ಲು ಮನೆಗಳಿಗೆ ತೆರ್‍ಳಿದಂತೆ, ಪೆರ್‍ಲಜ್ಜ ಕೂಡಾ, ಸಿನ್ನರಾಯರ ಮನೆ ಮುಂದ್ಗುಡೆ ನಿಂತ. ಮೂರು ಸಾರಿ ‘ಮಣೆಗಾರ ಬಂದ್ವೀನಿ. ವಸಾಕಾಲ್ಮರಿಗಳ ತಂದ್ವೀನಿ, ಉಂಬಾಕೆ ನೀಡ್ರೀ ಬುದ್ಧೇರಾ… ಗೌಡ್ಸಾನಿ…’ ಯೆಂದು, ಕೂಗ್ದಿ. ಧಂದಕ್ಲಿ ಕಟ್ಮೇಲೆ, ಜಲ್ಲೆ, ಪುಟ್ಟಿ, ತಟ್ಟಿ, ಯಿಳ್ಸಿದ್ರು.

‘ಯಣ್ಸಿಕೊಳ್ರೀ ಬುದ್ಧೀ… ಯಿಪ್ಪತ್ತು ಜೊತೆ ವಸಾಕಾಲ್ಮರಿಗಳು ಮಕ್ಳುಮರಿವುಯೆಲ್ಲ… ನಾಲ್ಕು ಗಂಟ್ಸೆರಗ್ಳು… ಬಾರ್ಕೋಲುಗಳು, ಯೆಂಟು ಕೋಡಣ್ಸುಗ್ಳು, ಯಲ್ಡು ನಗಸುತ್ತು, ಅಣಿಸುತ್ತು, ಮೂಗ್ದೂರಗ್ಳು, ಗಳೇವು ಬಾರುಗ್ಳು…’ ಯೆಣ್ಸಿ… ಯಣ್ಸಿ… ಪೆರ್‍ಲಜ್ಜ ಕಟ್ಮೇಲೆ, ವಸ್ತು ಪ್ರದರ್ಶನದಲ್ಲಿಟ್ಟಂತೆ… ಸಾಲ್ಸಾಲಾಗಿ… ವಳ್ಳೆ ಗೊಂಬ್ಮೆನೆಯಲ್ಲಿಡ್ವೂಂತೆ ಯಿಡುತ್ತಾ ವೋದ. ಸಿನ್ನರಾಯ್ರು ಪೆನ್ನು, ಪುಸ್ತಕ ಯಿಡ್ಪು, ಬರೆದಿಡುತ್ತಿದ್ರು ಮೂಲೆಗೆ ಮುದುಡಿ ಕುಳಿತಿದ್ದ, ಮುರ್ಕು ಅರ್ಳೆಣ್ಣೆ ಮಗಿಗೆ ಗೌಡ್ಸಾನಿ ‘ದುಬ್ದೂಬೂ…’ ಯೆಣ್ಣೆ ಸುರ್ವಿದ್ನ, ಅತ್ತಿಯಿಂದ… ಅದ್ದೆದ್ದಿ… ಕಾಲ್ಮರಿಗಳಿಗೆ, ಯಂಡ್ತಿ ಲಕ್ಕಮ್ಮ, ತನ್ನ ಮಕ್ಳು ಸವ್ರೀ… ಸವ್ರೀ ಸಾಲಿಗೆ ವಣಿಗಿಕ್ಕತೊಡ್ಗಿದ್ರು.

ಮಿರಾ ಮಿರಾ ಮಿಂಚುತಿದ್ದ, ವಸಾಕಾಲ್ಮರಿಗಳಿಗೆ ಕಾಲಿಡುವುದು ‘ಪುಟು ಪುಟು..’ ಅತ್ತಾ… ಯಿತ್ತಾ… ಯಲ್ಲರು ಅಡ್ಡಾಡಿ, ಅಡ್ಡಾಡಿ.. ಸಂಗ್ನಿವತ್ನಿಂದಾ… ಮೋಜು ತಿರ್ಸಿಗೊಂಡ್ರು,

‘ಬುದ್ಧೇರಾಽ…. ನೀವೂ ರವ್ವಾಟು ಕಾಲಿಟ್ಟು ಪೆನ್ನೆ, ವುಂಗ್ಟು, ಬಾರು, ಯಿಂಬ್ಡಾ… ಸರಿಯಂತಾ… ನೀವೊಮ್ಮೆ ನೊಡ್ಬಿಡ್ರೀ ದ್ಯಾವ್ರೇ…’ ಯೆಂದು ಪೆರ್‍ಲಜ್ಜ ಸಿನ್ನರಾಯರ್‍ನ, ಸಹಜವಾಗಿ… ಬೇಡಿಕೊಂಡ.

‘ಯಲ್ರುವೂ ಪಾಡಿದವೇ ಬಿಡೋ ಪೆರ್‍ಲಾಽ…. ನನ್ನವು ಯಿರ್ತಾವೇ…’ ಯೆಂದು, ಸಿನ್ನರಾಯರು, ವಸಾಕಾಲ್ಮರಿಯೊಳಕ್ಕೆ ಬಲಗಾಲಿಟ್ರು. ಸೋಜಿಗ ಕಾದಿತ್ತು. ಪೆನ್ನೆ, ವುಂಗ್ಟು, ಬಾರೂ… ಆಗ್ಲೇವಲ್ದು. ಯಿಂಬ್ಡಾ ಕಾಲ್ಮರಿಯಿಂದ ವರ್ಗಿದೆ. ಯಂಟ್ನೆ ಅದ್ಭುತ! ಯಡಗಾಲು ತೆಗ್ದು ಕಾಲ್ಮರಿ ವಳಕ್ಕಿಟ್ಟ! ಅದೂ ಸಣ್ಣದಾಯ್ತು. ಪೆರ್‍ಲಜ್ಜ ಭೂಮಿಗಿಳಿದ. ತಲೆ ‘ಪರ್ಪರಾ’ ಕೆರೆದುಕೊಂಡು, ಬುದ್ಧೇರ್‍ನ ‘ಮಕ್ಮಾಕಾ ನೋಡ್ದಿ. ಅವ್ರೇ… ಅವೇ… ಕಾಲ್ಗುಳೂ… ಯಲ್ಲ… ಅವೇ… ಕಾಲ್ಮರಿಗಳೂ ಅವೇ! ಯಲ್ರುವು ಅಳ್ತೆ ಸರಿಗ್ವೆ. ಸಿನ್ನರಾಯರ ಅಳ್ತೆ ಸಣ್ದಾಗುತ್ತಿವೆ. ಕಾಲ್ಗುಳು ಬೆಳೆದಿವೆ. ಪೆರ್‍ಲಜ್ಜ ಭಾಳಾ ವರ್ಸುಗಳಿಂದ ವುಡುಕುತ್ತಿದ್ದ ಕಾಲ್ಗುಳು ಇವೇ…! ಸಿಕ್ಕುವು! ಅಬ್ಬಾ! ಕೊನೆಗೂ ಸಿಕ್ಕವು…. ವಳೊಳ್ಗೆ ಕುಸಿಯಾದ. ಯೆಗ್ಲಿಗೆ, ಜೋತಾಡಂಗೆ ಆಕಿಕೊಂಡಿದ್ದ, ರಬ್ದರ್‍ನಿ ಸೀಲಕ್ಕೆ ಕೈ ಆಕಿ, ರಂಪ್ಗೆ ವರ ತೆಗ್ದೆ. ವಳ್ಳೆ ಮಿಣಿ ಮಿಣಿ, ಸಿವ್ನು ಕೈ ಅಲುಗಿನಂಗೇ, ಅರಿತವಾಗಿತ್ತು. ಪೆರ್‍ಲಜ್ಜ, ಸಿನ್ನರಾಯರ ಪಾದ್ನ ಗಟ್ಟಿಯಾಗಿ ಯಿಡ್ಕೊಂಡು, ಕಟಿಕಟಿ ಅಲ್ಲುಗಳ ಕಡೀತಾ… ರಂಪ್ಗೆ ತಗೊಂಡು, ಕಾಲ್ನ ಪರಾಽ ಪರಾಽ ಕೊಯ್ಯತೊಡ್ಗಿದಾ…

‘ಯಿವೇ ಪಾದ್ಗಳು ನೋಡ್ರೀ… ನಮ್ಮ ಬಲಿಚಕ್ರವರ್‍ತ್ನಿ ತುಳ್ದಿ ಪಾದ್ಗಳು! ಯಿವು ದಿನಾ ಬೆಳೆಯೋ ಪಾದ್ಗಳು! ಆವತ್ತು ಅಳ್ತ್ನೆ ನಾನೇ ತಗೊಂಡೀನಿ. ಯೀವತ್ತಾಗ್ಗೆ ಯಿಷ್ಟೆ ಬೆಳ್ದೆಬಿಟ್ವೆ ಯಿವು ವಾಮ್ನ ವಂಸಸ್ಥರ ಪಾದ್ಗುಳು. ಪರಂಪರೆಯವು… ಯಿವ್ನು ಯಿಗ್ಲೆ ಕತ್ರಿಸಿ ಕತ್ರಿಸಿ… ಬಿಡ್ತೀನಿ’ ಯೆಂದು ಪೆರ್‍ಲಜ್ಜ… ‘ಗಸ್ಗಾಸಾ…’ ಕೊಯ್ಯತೊಡ್ಗಿದ. ಸಿನ್ನರಾಯ್ರು ಪೆರ್‍ಲಜ್ಜನ ಜಾಡ್ಸಿ ತಳ್ಳಿದ್ರು. ಗಾಬ್ರಿಯಿಂದ ಕಟ್ಟೆ ಮೇಲೇರಿ ಕುಳಿತು…

‘ಯೇಽ ಪೆರ್ಲಾಽ…. ಲೇ ನಿನ್ಗೆ ಭೂತ, ಗೀತ, ದಯ್ಯ ಬಡಿದೈತೇನ್ಲೇ? ಭಲೇ ವುಚ್ಚಾ… ಮಂಜೇಳಾಗ ಯಾಕಿಂಗೆ ಕೂಗ್ದೇ? ಅಗ್ಲುಗನ್ಸು ಕಂಡೇನ್ಲೇ? ಅಂಗೇಕೆ ಕಾಲ್ಗುಳ್ನ ಬಿಮ್ಗ ಬಿಗಿ ಯಿಡ್ದು ಕುಯ್ಲು ಬಂದೆ? ನನ್ಗಂತೂ ಬಲು ಯದ್ರಿಕೆಯಾಯ್ತು ನೋಡ್ಲೇ?!’ ಯೆಂದು, ಯಿಳಿಯುತ್ತಿದ್ದ ಬೆವ್ರ್ನು ಟುವ್ವಾಲಿಂದ, ವರ್‍ಸಿಕೊಳ್ತಾ… ಗದ್ಗಾದಾ… ನಡುಗುತ್ತಿದ್ದ!! ಗರಬಡಿದವ್ರಂತೆ… ಯಲ್ರು ಪೆರ್‍ಲಜ್ಜನ, ನೋಡುತಾ… ನಿಂತ್ರು.

ಸತ್ಮಾನಗಳಿಂದೆ, ಬಲಿಚಕ್ರವರ್ತಿ ರಾಜ್ನ… ಅನ್ಯಾಯವಾಗಿ, ಅಸೂಯೆಪಟ್ಟು, ಸಹಿಸದೆ, ಬಲಿತೆಗೆದುಕೊಂಡ ವಂಶಸ್ಥರ ಪಾದಗಳಿವು! ಕಾಲಿಡಿದು ಯಳೆಯಳೆದು ಕತ್ತರ್‍ಸಿ ಬಿಡಬೇಕೆಂದು ನಿಂತ. ವಸಾಕಾಲ್ಮರಿಗಳ ಮೆಟ್ಟಿ ನಿಂತು, ಜನ್ರು ಬಲು ಖುಷಿಯಲ್ಲಿದ್ದರು. ಅವುದು ಬಲಿ ಸಹ ಸಂತೋಷದಲ್ಲಿದ್ದಾಗಲೇ ಬಲಿಯಾದದ್ದು! ದುಕ್ಕ, ಕೋಪ, ಆನಂದ, ದೊಡ್ಡ ಅನರ್ಥಗಳು. ಯಿವು ಬಲಿ ಕೇಳುತ್ತವೆ. ಪೆರ್‍ಲಜ್ಜ, ಕರಿನಾಗ್ರ ಬುಸುಗುಡುವಂತೆ, ಗರುಡ್ಗಂಬ್ದಂತೆ ನಿಂತಿದ್ದ.

ಅಷ್ಟರಲ್ಲಿ: ಸಿನ್ನರಾಯರ್ರ ಹಿರಿ ಯೆಂಡ್ತಿ, ಸೀತಮ್ಮ ಸಿಡಿಮಿಡಿಯಿಂದ, ತಟ್ಟೆ ತುಂಬಾ ನವಣೆಬಾನ, ವುಣ್ಣೇಕಾಯಿ ತ್ವಕ್ಕು, ನಾಲ್ಕೈದು ಕಟಿಕಟಿ ರಟ್ಟಿ, ಪುಂಡಿಪಲ್ಲೆ, ಮಜ್ಜಿಗೆ ಮೆಣ್ಸಿನಕಾಯಿ, ಮಜ್ಜಿಗೆ ಆಂಬ್ರಾಽ…. ಕುಚ್ಚಿದ್ವು ಕುಂಬ್ಳಾಕಾಯಿ ವೋಳು ತಂದ್ಳು… ‘ಯಿಡೀಽ ಲಕ್ಕಿಽ ನಿಮ್ ಪರ್‍ಯಾಣ, ಕ್ವಣಿಗೆ, ಸ್ವಾರೆ, ಮಗೀನ ಯಿತ್ತಾ…’ ಯೆಂದು, ಯದ್ಮೇಲೆ ನಿಂತು, ಅವುಸ್ರ ಮಾಡಿದ್ಲು.

‘ಅಮ್ಮೋ, ದೊರ್‍ಸೇನಿ… ತಾಯೀ… ಯದಿಕಿಷ್ಟು ಅವುಸ್ರವಮ್ಮೊ. ವಂದೆಲೆ, ಅಡುಕೆ, ಕುಸ್ಗೆ ಕಾಸಿಲ್ಲ. ಹಸ್ನಾದ ವುಂಬ್ಳೆಲ್ಲ. ಅಕ್ಕಿ, ಬೇಳೆ, ಬೆಲ್ದಚ್ಚು, ವಣಾಕಬ್ರಿ… ವಸಾ ಪಂಚೆ, ಸೀರೆ, ಟುವ್ಹಾಲು… ಪಲ್ಲಾ ನೆಲ್ಲು… ಸಜ್ಜೆ, ಜ್ವಾಳ, ನವುಣೆ, ವುಳ್ಳೀ… ಯೇನ್ದೀ, ಬಿರ್‍ಬ್ರಾರ್‍ನೇ ತುತ್ತು ಬಾನ, ಗುಕ್ಕು ಸಾರು ಕ್ವಟ್ಟು, ಕೈ ತೊಳ್ಕೊಂಡ್ರೇ… ನಮ್ನ ಮಣೆಗಾರರು. ನಿಮ್ನ ವಕ್ಲು ಮನೆತ್ನ ಅಂಬ್ತಾರೇನ್ರಮ್ಮಾ?! ಯೀ ಮನೆ… ಮಾದಿಗ ಮಕ್ಳು ನಾವು! ವರ್‍ಸುದತನ್ಕ ಯೇನು ತಿಂಬಾನು? ಮಕ್ಳು ಮರೀನಾ ಪುಟ್ಯಾಗೆ ಮುಚ್ಚಿಡ್ನಾ?! ಯೇಳು ಬುದ್ಧೇರಾ??’ ಪೆರ್‍ಲಜ್ಜ, ವಟ್ಟೇಗ್ಳು ವುರೀನಾ… ವರ್ಗಿಟ್ಟ.

ಯಲ್ರು… ಆ ಕ್ಷಣ, ತಣ್ಗೀ ಕುಂತ್ರು, ಪ್ರಶ್ನೆಗಳು ಯಂತಾವ್ರ್ನು ತಣ್ಗೆ ಮಾಡ್ತಾವೆ. ಸಿನ್ನರಾಯರು ಮೆಲ್ಗೆ ಸ್ವರ ಸರಿಮಾಡಿಕೊಂಡು ‘ಪೆರ್‍ಲ… ನೀ ಯಿನ್ನು ಪರಂಗಿಯವ್ರ ಕಾಲ್ದಾಗೆ ಯಿದ್ದೀಯಾ? ಯೀಗೀಗಾ ವಕ್ಲುತ್ನ ಮಾಡ್ದೋಷ್ಟು ಕಷ್ಟವೈತಿ ಗೊತ್ತಾ?? ಮಳಿ, ಬೆಳಿಲ್ಲ. ಬಾವ್ಯಾಗೆ ಗುಕ್ಕು ನೀರಿಲ್ಲ, ಕರೆಂಟಿಲ್ಲ, ವುತ್ತತ್ತಿ ಯೆಷ್ಟಿದ್ರೂ ಕುಟುಂಬಕ್ಕೇ ಸಾಲ್ವುಲ್ದು. ನನ್ಗಂತೂ ಮಣೆಗಾರಿರಿಗೆ ಕೈಯೆತ್ತಿ, ವಲ್ದಲ್ಲಿ, ಕಣ್ದಲ್ಲಿ, ಮನೆಯಲ್ಲಿ ನೀಡಿ, ಅಭ್ಯಾಸವಿಲ್ಲ!! ನಮ್ಮಪ್ಪ, ತಾತ, ಮುತ್ತಾತರೂ ನನ್ನಂಗೇ ಯಂಜ್ಲು ಕೈಲಿ ಕಾಗೆ ವೋಡ್ಸಿದವ್ರಲ್ಲ! ಮುಂದ್ಲುರ್‍ಸು ನೋಡೋಣ! ಯೀಗ ಕೊಟ್ಟಿದ್ನ, ವುಳ್ಗಾ ತಗೊಂಡು, ವೋಗಾದು ಕಲೀ’ ಕಡ್ದಿಮುರ್ದಂಗೆ, ಸಿನ್ನರಾಯರ್ರು ಬಲು ತಗುದಾಕಿ… ಮಾತಾಡಿದ್ರು,

‘ನಾ ಗತಿಗೆಟ್ಟು…. ನಿಮ್ಮತ್ರ ಭಿಕ್ಷೆ, ತಿರುಪೆಗೆ, ಬಂದಿಲ್ಲ ದೊರೇಽ…. ನಾ ಯೀ ಮನೇ ಹಿರೇ ಮಣೆಗಾರಽ…! ಹಿರೇ ಮಗ…! ಪಾಲುಗಾರ, ಮನೆ ಮಾದಿಗ, ನನ್ ಪಾಲ್ಗೆ ನಿಮ್ ಮನೆ ಬಂದೈತಿ. ವರ್ಸುದಿಂದ, ಯೀ ಮನೇಲಿ, ನಾನೂ, ನನ್ನೆಂಡ್ತಿ, ಮಕ್ಳು… ಅಗ್ಲುರಾತ್ರಿ ವಕ್ಲುತನ, ಮಾದಿತನ, ಕೂಲೀ ಮಾಡ್ತಿದ್ದೀವಿ, ಯೀ ಮಕ್ಳಿಗೆ ಭೇಸ್ ವರ್‍ಸಿ ಕಳ್ಸಿರೀ…. ನಿಮ್ಗೆ, ಮನ್ಗೇ, ಯೀ ವೂರ್‍ಗೊ, ವಳ್ಳೇದಾಗುತ್ತೇ! ಕಣ್ದಾಗ ಜೋಳ್ದ, ರಾಗಿಯ, ಮುಸ್ಕೀನ ಜ್ವಾಳ್ದ ರಾಶಿ ತುಂಬಾಗ, ನೆಲ್ಕೆ ಅಂಗೈಯಿಟ್ಟು ನೀವೇ ಬಾಚಿ, ಬಾಚಿ ತುಂಬ್ದಿರಿ. ಯಿಂಕಟ್ಟು ಮುಂಕ್ಕಟ್ಟು ಬಿಡ್ದೆ ತೂರ್‍ಕೊಂಡ್ರೀ… ಸಳ್ಳು ಯಿಡ್ದು, ಕಾಳೂ ಕಡೀನಾ ಬಳ್ದು ಬಾಚಿಕೊಂಡ್ರಿ, ಮಣ್ಣಾಗೆ ಮಸ್ಯಾಗೆ ಯಿದ್ದ ಬಿದ್ದ ನಾಲ್ಕು ಸೀರ್‍ಗಾಳ್ನ ಸಪ್ರಿರ್‍ಸಿ ಕೇರ್ಕೊಂಡ್ರಿ, ಗಗ್ಗಿನ ಬರ್‍ಲು ತಗೊಂಡು ಬಡುಕೊಂಡ್ರಿ… ಮಣೆಗಾರರ್ರು ಮಾಡೋ ಕೆಲ್ಸಾನ, ನೀವೇ ಮಾಡ್ಕೊಂಡ್ರೇ… ಯೀ ಮಣೆಗಾರರ್ರು ಬೇಕೇ?? ಯೀ ಮಾದಿತನ್ದ ಕುಲಕಸ್ಬು ಯಿನ್ಯಾಕೇ?? ನೆಲದ, ವಲ್ದ ಮೇರೇ ‘ಸರ್‍ಗಾ’ ವುಗ್ಗೋ ಸಾಸುದ್ದಿ, ಬಿಟ್ಟಿಸರ್‍ತಿ… ಪಾಲುಗಳೂ ನಿಮ್ಮತ್ರ ಯೆಲ್ಲಿವುಳಿದುವು??’ ಪೆರ್‍ಲಜ್ಜ, ಸಿನ್ನರಾಯರ್‍ನ ಸಿಟ್ಗೆಮುಳ್ಳಾಡ್ಸಿದ. ಯಲ್ಲರೆದ್ರುಗೇ… ಸಿನ್ನರಾಯರ ಮುಖ, ತೂತು ಬೊಟ್ಟಾಗಿತು.

‘ಲೇ… ಪೆರ್‍ಲಾ… ನೀ ಬಲು… ತರ್‍ಲೇ… ಅಂತಾ ಗೊತ್ತು! ಪರಂಗಿಯವ್ರ ಕಾಲ್ದಿಂದ ನಮ್ಮಪ್ಪ, ತಾತನವ್ರ ಕಾಲ್ದಿಂದ, ನಿನ್ ಬಗ್ಗೆ ಕೇಳ್ತಾ ಬಂದೀನಿ! ನಾವು ವೇದ, ಶಾಸ್ತ್ರ, ಪುರಾಣ… ಪಂಚಾಂಗ, ಪೂಜಾರ್‍ಕೆ ಬಲ್ಲವ್ರಿಗೆ ಗುಣಪಾಠ ಹೇಳೀಯೇನು? ಯೀ ನಿನ್ ಅತೀ ಜಾಣತನ ನಮ್ಮತ್ರ ಬ್ಯಾಡನೋಡೋ…! ವಟ್ಟೆ, ಬಟ್ಟೆ, ನೆತ್ತಿ ತುಂಬಂಗಿದ್ರೆ… ನಮ್ ಮಾದಿತನ ಮಾಡ್ಲೇ…! ಯಿಲ್ಲಾಂದ್ರೆ.. ಕೈ ಬಿಟ್ಟು, ತೆಪ್ಗೆ ಕೇರ್ಯಾಗಿರು. ನೀ ಅಲ್ದಿದ್ರೆ ಮತ್ತೊಬ್ಬ, ಯಿಗೋ ನನ್ಗೆ ಪುಗ್ಸಟ್ಟೆ ಮಾದಿತನ, ಕಾಲ್ಮರಿ, ಬೇಕಾದ್ದೇ… ಮಾಡಿಕೋಡೋರಿದ್ದಾರೆ. ಬೇರೆಯವ್ರ ಕೈಲಿ ಯಂಗೆ ಜೀತಾ ಮಾಡ್ಸಿಕ್ಬೇಕೋ… ಅಂಗೇ… ಪುಗ್ಸಟ್ಟೆ ನನ್ಗೇ… ಬೇಕಾದಂಗೆ ಮಾಡ್ಸಿಕೊಳ್ತೇನೆ. ಯಿಷ್ಣು ವರ್ಸು, ನಮ್ಮ ವಂಶಸ್ಥರು, ಯಿದೇ… ವೂರು ಕೇರ್ಯಾಗ ಆಲುತುಪ್ಪಾ ವುಂಡು ಕೈತೊಳೆದಿಲ್ಲೆ?? ನಿನ್ಗೇ ಯೀಗ ಕೊಟ್ಟಿರ್‍ದೋ ಬಲು… ಜಾಸ್ತಿ ನೋಡು! ಆಯ್ತು ಬೇಗ ಜಾಗ ಖಾಲಿ ಮಾಡ್ಲೇ’ ಯೆಂದು, ಸಿನ್ನರಾಯರ್ರು ಯದೆಗಿರ್ದೋನ ಬಾಯ್ಬಿಟ್ರು.

‘ನಂಬ್ದಿಮ್ಮೆ ಕ್ವಾಣ್ಗರ ಯೀದಂಗಾತು… ಬುದ್ಧೀ…! ಯೀ ವೂರು ಕೇರ್ಯಾಗೆ ನಿಮ್ದೂ ಗುಣಗಾನವೈತಿ. ನಮ್ ಮಣೆಗಾರ್ರು ಸುಳ್ಳು ಯೇಳ್ತಾರೆ. ನಿಮ್ನ ಸುಮ್ಮಸುಮ್ಮ್ನೆ ಸುಟ್ಟುಗೊಂಡು ಹರ್ಕೊಂಡು… ತಿನ್ತಾರೆ ಅಂದ್ಕೊಂಡಿದ್ದು ತಪ್ಪಾತು! ಯೀಗ ಕಣ್ಣಾರೆ, ಕಿವಿಯಾರೆ, ಅನುಭವ್ಸುದ್ದಾಯ್ತು. ನಿಮ್ದು ‘ಯದ್ರುಚವುರ’ ಅಂತಾ ತಿಳೀತು ಬಿಡ್ರೀ… ಯೀ ಮಣೆಗಾರ್‍ನ, ಅಯ್ಯೋ ಅನ್ಸಿದ್ರೆ ನಿಮ್ಗೇ ವಳ್ಳೇದಾಗಲ್ಲ ದೊರೇಽ…. ಕೊನೇ ಮಾತು ನೆಪ್ಪಿಟ್ಕೋಳ್ರೀ… ನೀವು ನನ್ಗೆ, ವುಪಾಸ ಮಾಡಿದ್ರೆ, ನಾನು ವುಪಾಸಾಗಲ್ಲ. ಆ ದೇವ್ರು ನನ್ಗೆ ವುಪಾಸ ಯಿಡ್ಬೇಕಲ್ಲಾ?? ಮಣೆಗಾರರ ಶಾಪ… ಆ ಶಿವುಗೂ ತಪ್ಪಿಲ್ಲ. ಆ ಕತಿ ಯೇಳ್ಲೇ? ಯೀಗೋ… ನಾ ಸತ್ರು, ನನ್ನ ಯಡ್ಗಾಲು ಕೂಡಾ, ಯೀ ಮನೆ ವಸ್ಲು ತುಳಿಯಲ್ಲಾ ದೊರೇ…’ ಯೆಂದು ಪೆರ್‍ಲಜ್ಜ… ತನ್ನ ಯೆಂಡ್ತಿ, ಮಕ್ಳ ಕೈ… ಯಿಡ್ದು… ಬಲು ಸೆಡ್ವಿಲಿ… ವರ ಬಂದ.

ಸಿನ್ನರಾಯರ ಯೆಂಡ್ತಿ ಸೀತಮ್ಮ… ‘ಯೇ ಪೆರ್‍ಲಜ್ಜ, ವಂದು ತ್ವಟುಗು ನಿಲ್ಲು! ಯಿದು ನಿಮ್ ಬಾನ, ಸಾರು, ನಿಮ್ ಯಂಜ್ಲು… ಯಿದ್ರಾ ಮೇಲೆ ನಿಮ್ ಯೆಸ್ರಿದೆ… ಯಿಗೋ ನೀಡ್ಸಿಗೊಂಡು ವೋಗ್ರೀ…’ ಯೆಂದು, ಪಡ್ಸಾಲೆಯಿಂದ ಕಳ್ಕಳಿಯಿಂದಾ… ಕೂಗಿದ್ಲು.

‘ಯೇ ವೋಗ್ಲಿ ಬಿಡೇಽ…. ಯಿವ್ರೆಲ್ಲ, ವೂರ್‍ಗಾಳ ವಾಡೇದ, ದೊಡ್ಡ ಧಣಿಗಳೂ, ಕಲಿಯುಗ್ದ ಅಣ್ಣಬಸಣ್ಣನ ಯೆಸ್ರಲಿಷ್ಟು ಆರಾಡ್ತಾರೆ! ಮಾತೆತ್ತಿದ್ರೆ ಸಾಕು ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲೋಹಿಯಾ, ಪೆರಿಯಾರ್, ಮೆಂಡೆಲಾ ಯೆಸ್ರುಗ್ಳು ಯೀ ಜನ್ರ ಪಿತ್ರಾರ್ಜಿತ ಆಸ್ತಿಯಾಗಿವೆ! ಯಿವ್ರಾಕಾಲ್ಗಾರೋಸ್ಗೆ ಬಂದೈತಿ… ಯೆಲ್ಲಿಗೆ ವೋಗ್ತಾರೋ ವೋಗ್ಲಿ… ಯೇನು ಮಾಡ್ತಾರೋ ಮಾಡ್ಲಿ…! ನೀನೀಗ ರವ್ವಾಟು ತೆಪ್ಗಿರು’ ಯೆಂದು, ಸಿನ್ನರಾಯರು, ತನ್ನೆಂಡ್ತಿ ಸೀತಮ್ಮನ, ಬಾಯ್ನಿ ಗದ್ರಿ…… ಗದ್ರಿ… ಮುಚ್ಚಿಸಿದ್ರು.

ಪೆರ್‍ಲಜ್ಜ… ಅಂಗಳ್ದಾಗೆ ನಿಂತು, ಮಕ ವಣಿಗ್ಸಿಕೊಂಡು, ‘ಯೀ ನಿಮ್ಮ ಆಸ್ತಿ ನಂಗೊತ್ತಿಲ್ವೇ? ಯೀ ಜಾತಿ, ಮತ, ಧರ್ಮ, ದೇವು, ಪಂಚಾಂಗ, ಪುರಾಣ… ಮಠ, ಬರೀ ವಣ… ಮಾತು? ಯಿನ್ನೊಬ್ರ್ನ ‘ಗೊಬ್ರ’ ಅನ್ನೋ ಮದ್ಲು, ಅವ್ರು ‘ಸಬ್ರಾ’ ಅದಾರೇ… ಮದ್ಲು ನೋಡಿಕ್ಕೊಳ್ಲೀ?? ತಮ್ದೇ ವುಳ್ಕು ಬಾಳೈತಿ! ಮಂದಿಗೇನು ಯೇಳೀರಿ?!’ ಪೆರ್‍ಲಜ್ಜ ಗಲಗಲಾಂತ ಬಾಯಿ ಮಾಡ್ಕೊಂತಾ, ವೂರಾಗಳಿಂದ ಕೇರಿ ಕಡೆ, ನಡೆದ.

ಜನ್ರು ಅಲ್ಲು ಮೇಲೆ, ಬಟ್ಟೆ ಆಕಿಕೊಂಡು, ನೋಡ್ತಾ ನಿಂತ್ರು. ಸುದ್ದಿ ಯೇಳು ಅಳ್ಳಿ, ಕಟ್ಟೇಮನ್ಗೆ ತಲುಪಿ, ಪರ, ವಿರೋಧಗಳ ಮಹಾ ಪೂರಗಳೇ ಅರಿದಾಡಿದ್ವು!! ಯಿಬ್ರಾ ಮಧ್ಯೆ ಸಿಕ್ಕಿ ಯಾರ್‍ಗೇ ಯಿಷ್ಟವಾಗ್ಲಿಲ್ಲ. ಯರ್ಡು ಕ್ವಾಣಗಳೇ, ವಬ್ರು ವಿಶ್ವಾಮಿತ್ರ, ಮತ್ತೊಬ್ರು ವಶಿಷ್ಠರಂತೆ! ಯಿಡೀ ವೂರು ಕೇರಿಯೇನು? ಯೇಳು ಅಳ್ಳಿಗಳೇ ತೆಪ್ಪಗಾದ್ವು.

ಯಿತ್ತಾ… ಪೆರ್‍ಲಜ್ಜ, ನಿತ್ಯ ಯೆಂಡ, ಸಾರಾಯಿ ಕುಡಿದು, ಹಗ್ಲುರಾತ್ರಿ… ಅಲ್ಗೆ ಬಡಿಯುವುದು ಕಂಡು, ಜನ್ರು ‘ಯೇನೋ… ಕೇಡುಗಾಲ ಕಾದೈತೆಂದು’ ‘ಗುಸು ಗುಸು…’ ಮಾಡತೊಡಗಿದರು.

ಯಿಂಗೆ… ದಿನಗ್ಳು ವಾರಗಳ್ದಾವು. ವಾರಗ್ಳು ತಿಂಗ್ಳಾದವು. ಯಿಡೀ ವೂರು ಕೇರಾಗ್ಳ ಮಂದಿ, ಯಿದ್ದಕ್ಕಿದ್ದಂತೆ, ಮೂಗ್ಬಾಯಿ ಮುಚ್ಗೊಂಡು ವೋಡಾಡತೊಡಗಿದ್ರು ಗಾಳಿ ಬೀಸಿದ್ರೆ ಗಬ್ಬುನಾಥ, ಜನ್ರು ಅವ್ವಾರಿದ್ರು. ಮಾತಿಲ್ಲ, ಕತಿಲ್ಲ, ದಾರಿಗುಂಟಾ ವಾಂತಿ, ಭೇದಿ, ವಾಸ್ನೇ… ವಾಸ್ನೇ ಕೆಟ್ಟು ದುರ್ನಾಥ. ಸಿನ್ನರಾಯರ್‍ನ ಕೆಲವ್ರು ಯಿಂದ್ಗುಡೆಯಿಂದ ಬೈದ್ರೆ… ಕೇರಿಯ ಕೆಲ ಮಣೆಗಾರರು… ಪೆರ್‍ಲಜ್ಜನ, ವಳೋಳ್ಗೆ ಬೈಕೊಂಡ್ರು…

‘ಕೈಗ್ಬೆಂದ ತುತ್ತು… ಬಾಯ್ಗೆ ಬರ್ಲಿಲ್ಲಲ್ಲಾ?! ಸಿನ್ನರಾಯರ ಕ್ವಟ್ಗೆಯೊಳ್ಗೆ ಆನೆಯಂತಾ ಯೆರ್ಡು ‘ಅನ್ವಾದ’ ಸೀಮೆ ವೋರಿಗ್ಳು ಸುಳಿಬಿದ್ದ, ಬಿಳಿ ಜ್ವಾಳ್ದಂಟು ತಿಂದು, ಯಿದ್ದಕ್ಕಿದ್ದಂಗೆ ‘ನಾಮೇರಿ’ ವಂದು ಗಳಿಗೆಯೊಳ್ಗೆ… ‘ವಿಲವಿಲ’ ವೊದ್ದಾಡಿ… ವೊದ್ದಾಡಿ… ಸತ್ತು ವೋದ ಸುದ್ದಿ, ಯಿಡೀ ವೂರು ಕೇರಿಗೆ, ಕಾಡ್ಗಿಚ್ಚಿನಂತೆ ಅಬ್ಬಿತು. ರಣ ಅದ್ದುಗ್ಳು… ಯೆಣ ತಿಂಬೋ ರಣಪಾತ್ಗುಳು, ಕಾಗೆ, ಆಳಾಗದ್ದಗ್ಳು… ಸಿನ್ನರಾಯ್ರ ಕ್ವಟ್ಗೆ ಮೇಲೆ ಯಿಂಡು ಯಿಂಡಾಗಿ ಬಂದು ಹಗ್ಲುರಾತ್ರಿ… ಕುಂತು, ತಂತಮ್ಮ ಬಳಗವನ್ನೆಲ್ಲ ಕೂಡ್ಕಂಡು ಕುಪೆಕ್ಕಂಡು… ‘ಕೌವ್… ಕೌವ್’ ಮಾಡತೊಡ್ಗಿದ್ದವು…

‘ಅಯ್ಯೋ… ಬಾಳಾ ಸತುವಾದ, ಕೊಬ್ದಿ… ಮುಟ್ಟಿದ್ರೆ.. ಮಾಸಂಗಿದ್ದ ಸೀಮೆ ವೋರಿಗ್ಳು. ಯಾರಿಗುಂಟು, ಯಾರ್ಗಿಲ್ಲ. ಕೊಯ್ಯುದು ಪಾಲಾಕಿದ್ರೆ… ತುಪ್ಪಾನೇ… ಇಳಿಯೋದು! ವಾರಗಟ್ಲೆ ಕುಚ್ಚಿಗೊಂಡು ಸುಟ್ಗುಂಡು, ವುರ್ಕುಂಡು… ತಿಂದೂ ತಿಂದೂ ಬಾಯಿ ನೀಸ್ಕುಳಿಬವುದಿತ್ತಲ್ಲಾ? ವುಗಾದಿ ಅಬ್ಬಾ ಮಾಡೋದು, ಪೆರ್‍ಲಜ್ಜನಿಂದ್ಲೆ… ಕೈ ತಪ್ಪಿತಲ್ಲಾ? ಯೀಗ್ಲು ರಾಜಿಗೆ ರೆಡೀ, ವೋರಿಗಳ್ನ ಭುಜದ್ಮೇಲೆ ವೊತ್ತು ತರ್‍ತೀವೆಂದ್ರೆ ಸಿನ್ನರಾಯರು ಮಣೆಗಾರರ… ಕಾಲ್ಗೆ ಬಿದ್ದು, ವಪ್ಪಿಯಾರು! ಆದ್ರೆ ಯೀ ಮಣೆಗಾರರೇ ವಪ್ತಾಯಿಲ್ಲವಲ್ಲಾ?’ ಯೆಂದು. ಕೇರಿ ಮಣೆಗಾರ ರಂಗಣ್ಣ, ಜ್ವಲ್ಲು ಸುರ್ಸಿ ಕುಂತ!! ಮತ್ತೇ ತಾನೇ… ಮಾತಿಗಾರಂಭ್ಸಿದ.

‘ಆ ವೋರಿಗ್ಳು ವಟ್ಟೇವಳ್ಗೆ ಜೋಡಿ, ಯರ್ಡೆರ್ಡು ಬಾಳ… ಬೆಲೆ ಬಾಳ್ವು ಗೋರ್‍ಜೇಣ್ದ ಗಡ್ಡೆಗ್ಳು ಸಿಗೋವ್ನ ಕೆಡ್ಸಿಕುಪ್ಪೆ ಆಕ್ದಿನಲ್ಲಾ?? ಯಲ್ಡು ದೊಡ್ ತ್ವಗ್ಲುಗ್ಳು ತಲೆಕಾಯಿಗ್ಳು, ಆನೆದಂತದಂತಾ… ನಾಲ್ಕು ಕೊಂಬುಗ್ಳು… ಯಮುಕೆಗಳೂ, ಕಾಲ್ಗೆಟ್ಟೆಗಳೂ… ಕೈ ತಪ್ದಿವಲ್ಲಾ…?! ಕೈಗ್ಬೆಂದಾ ತುತ್ತು ಬಾಯ್ಗೆ ಬರ್‍ಲಿಲ್ಲಾವಲ್ಲ…?!’… ಯೆಂದು, ರಂಗಣ್ಣ ವಂದ್ಸೆಮ್ನೇ… ಪೇಸ್ಡಾತೊಡಗ್ದಿ.

ವುಳ್ದಿ ಮಣೆಗಾರರೂ.. ‘ಬಾಯ್ಬಾಯಿ ತಡಿಪ್ಗೊಂತಾ’ ಗುಟ್ಕು ನೀರು ಕುಡ್ಕೊಂತಾ… ಕೇರಿ ಮುಂದ, ಹದ್ದು, ಕಾಗೆ, ತ್ವಾಳ, ನರ್‍ಗಿಳು… ಮಕ್ವಣ್ಸಿ ಗಂಡು ಕುಂತಂಗೇ… ಕುಂತ್ರು.

ಪೆರ್‍ಲಜ್ಜನ ವಿಪ್ರೀತಾ… ಅಲ್ಗೆ ಬಡಿತ, ಯಿಡೀ ಕೇರಿಗರನ್ನೇಕೆ, ಯೇಳು ಅಳ್ಳಿ ಮಣೆಗಾರ್‍ನೆಲ್ಲ… ಹಗ್ಲೂಯಿರ್‍ಳು.. ಕಟ್ಟಾಕಿತು. ಸಿನ್ಣರಾಯರು ವೂರೂರು ಅಲೆದು, ಮಣೆಗಾರರ ಮನವೊಲ್ಸಿಲು, ಅಗ್ಲುರಾತ್ರಿ ಸ್ರಮ್ಸಿ ವಿಲವಿಲ ವದ್ದಾಡಿ… ವದ್ದಾಡಿ, ತುಂಬಾ ಅತಾಸೆಗೊಂಡು, ಮಣೆಗಾರರ ವಮ್ಮತ, ವಗ್ಗಟ್ಗೆ… ಸೋತು ಸುಣ್ಣಾಗಿ… ತಲೆಗೆ ಕೈಯಿಟ್ಟು ಕುಳಿತರು. ಅನ್ವಾದ ಯೆತುಗ್ಳು, ಸತ್ತು ವೋದ, ನಷ್ಟದ ದುಕ್ಕಕ್ಕಿಂತಾ… ಅವುಗಳ್ನ ಕ್ವಟ್ಗೆಯಿಂದ ಸಾಗ್ಸೋ… ಯಾತ್ನೆ… ಯದೆಯಲ್ಲಿ ಮುಳ್ಳಾಯಿತು!! ನಿದ್ದಿಯಿಲ್ದೆ ವೂಟ, ತಿಂಡಿ, ಮಡಿ, ಪೂಜಿಲ್ದೆ, ಸೂತ್ಕದಲ್ಲಿ ಮನೆಮಂದಿ ನರ್‍ಳಿತು.

ಮಣೆಗಾರರಿಗೆ ಯೇನೆಲ್ಲ… ಆಸೆ, ಆಮಿಷಗಳೊಡ್ಡಿದ್ದೂ ಯೆಳ್ಳುಕಾಳು – ಮುಳ್ಳು ಮೊನೆಯಶ್ಟು… ಫಲಕಾರಿಯಾಗಲಿಲ್ಲ. ಸಿನ್ನರಾಯರು ಅಗ್ನಿಪರೀಕ್ಷೆಗೆ ಗುರಿಯಾದ್ರು, ತಲ್ತಾಲಾಂತರದಿಂದ ಬಳಸುತ್ತಿದ್ದ, ಓಡೆದು ಆಳುವ ನೀತಿನ, ಪ್ರಯೋಗಿಸಿದ್ದು ಅವರೀಗೇ ಮುಳುವಾಯಿತು. ಜನ್ರ್ನ ಯತ್ತಿಗಟ್ಟಿ ವಡಕನ್ನುಂಟು ಮಾಡಿ, ವಿಭಜಿಸಿ ಸುಸ್ತಾದ. ಸಾವಿಗೆ ಮದ್ದಿಲ್ಲವೆಂಬಂತೆ ಪರಿಹಾರ ಮಾತ್ರ… ಸಿಗಲಿಲ್ಲ. ಅವಮಾನದಿಂದ ಕುಸಿದ.

‘ಯಿಡೀ ವೂರುಕೇರಿಯೇನು? ಸುತ್ತೇಳು ಅಳ್ಳಿಗರಿಂದಲೂ… ಬಹಿಷ್ಕೃತಗೊಂಡ ಮನೆಯಾಯಿತು! ಯರ್‍ಡು ದಿನ ಯುಗವಾಯಿತು. ವಂದು ವುಲ್ಲುಕಡ್ಡಿಗೆ ಬೆಲೈತೆ. ಮಣೆಗಾರ್‍ನ ಯದ್ರು ಆಕ್ಕೋಬಾರ್ದಿತ್ತು.’ ಯೆಂದು ಸಿನ್ನರಾಯರು, ಮಕಕೆ ಬಟ್ಟೆಯಿಟ್ಟು ಅತ್ತರು.

‘ಯೀಗ ಕಡಾಣೆ ಯಲ್ಲಿದೆ? ಬಂಡಿಯಣ್ಣೆ ಎಲೈತಿ? ಯಂದ್ರೆ ನಾ ಯೇನೇಳ್ಲೀ… ಸೌಟು, ಸಕ್ರಿ, ಆಲು, ಸಕ್ರಿ, ಹಣ್ಣು… ಮಸ್ರು ಕೇಳ್ರೀ ಯೇಳೀನಿ’ ಯೆಂದು, ಸಿನ್ನರಾಯರಿಗೆ, ಯೆಂಡ್ತಿ ಸೀತಮ್ಮ, ತನ್ನ ಅಸ್ಸಾಯಕತೇನ ಮೆರುದ್ಲು.

ಯೆಂಡ್ತಿ, ಮಕ್ಳು, ಸಿನ್ನರಾಯರೂ ಸಂಬ್ಳುದಾಳುಗಳನ್ನು ಸಿಡಿಸಪ್ಸಿ, ಬಂಡೀನ ಯೆಳದು ತಂದು, ಕ್ವಟಿಗೆ ತಾಗ ನಿಲ್ಸಿ, ಯೇದ್ಸುರ್ರು ಬಿಟ್ರು. ವೂರು ಕೇರಿಯ ಪಾಪಕೂಪವೆಂಬಂತೆ, ತ್ರಾಸುಪಟ್ಟು, ಗುಡ್ಡದಂತಾ ತಮ್ಮೆರ್ಡು ಸತ್ತು ನಾರುತ್ತಿದ್ದ, ಸೀಮೆ ವೋರಿಗಳೆರಡನ್ನು ಬಂಡಿಗೆ, ತುಂಬಿದರು. ನೊಗಕೆ ಯೆಗ್ಲು ಕೊಟ್ರು, ವೂರು ಕೇರಿಗುಂಟಾ ತಲೆ ತಗ್ಸಿಗೊಂಡು, ಕಣ್ಣೀರ್‍ಹಾಕುತ್ತಾ… ಬಂಡಿಯೆಳೆಯುತ್ತಾ, ನೂಕುತ್ತಾ, ತಳ್ಳುತ್ತಾ… ಗುಂಡೇರ ಅಳ್ಳದ ಕಡೆ, ಕರಗಿದರು. ಜನ… ತೇಟ್ ದನ್ಗಳಂಗೇ ನಿಂತು… ಮೂಗು, ಬಾಯಿ… ಮುಚ್ಚಿಗೊಂಡು, ಗ್ವಂಬೆಗಳಂಗೆ… ನೋಡುತ್ತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೌವನದ ಯುವತಿ
Next post ಕನ್ನಡ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…