ಸ್ಫರದ್ರೂಪಿ ಯವಕನೊಬ್ಬ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದ. ಅವನು ತನ್ನ ತಾಯಿ ತಂದೆ ಸಂಬಂಧಿಕರೊಂದಿಗೆ ಬಂದು ಆ ಚೆಲುವಾದ ಹುಡುಗಿಯನ್ನು ನೋಡಿದ. ಅವಳ ಮಾತು, ಅರ್ಹತೆಗಳೆಲ್ಲ ಅವನಿಗಿಷ್ಟವಾದವು. ಹುಡುಗಿಯೂ ಅವನನ್ನು ಮೆಚ್ಚಿಕೊಂಡಳು.

ಎರಡೂ ಕಡೆಯ ಹಿರಿಯರು ಮಾತುಕತೆ ಆರಂಭಿಸಿಯೇಬಿಟ್ಟರು.

“ನಮ್ಮ ಮಗನಿಗೆ ಒಂದು ಲಕ್ಷ ವರದಕ್ಷಿಣೆ ಕೊಡಬೇಕು” ಹುಡುಗನ ತಾಯಿ ಮೊದಲು ಬೇಡಿಕೆ ಇತ್ತಳು.

“ಕಿಮ್ಮತ್ತಿನ ಎರಡು ಜತೆ ಬಟ್ಟೆ, ಉಂಗುರ, ಚೈನು, ವಾಚು ಕೊಡಬೇಕು” ಸಂಬಂಧಿಕರಲ್ಲಿ ಒಬ್ಬರು ತಮ್ಮ ಅಹವಾಲು ಸಲ್ಲಿಸಿದರು.

“ನನಗೆ ಓಡಾಡಲು ಇಂಡಿಕಾ ಕಾರು ಬೇಕು” ಹುಡುಗ ತನ್ನ ಡಿಮ್ಯಾಂಡ್ ಮುಂದಿಟ್ಟ.

“ನಮ್ಮ ಹುಡುಗ ದೊಡ್ಡ ಸ್ಥಾನದಲ್ಲಿದ್ದವನು. ಅವನ ಮದುವೆಯನ್ನು ನಾವು ಹೇಳಿದ ಕಲ್ಯಾಣ ಮಂಟಪದಲ್ಲಿಯೇ ಮಾಡಿಕೊಡಬೇಕು” ಎಂದು ಕರಾರು ಹಾಕಿದರು ಹುಡುಗನ ತಂದೆ.

ಇದುವರೆವಿಗೂ ಸುಮ್ಮನೆ ಕುಳಿತಿದ್ದ ಹುಡುಗಿಯ ಕಡೆಯ ಹಿರಿಯರೊಬ್ಬರು: “ವರೋಪಚಾರದಲ್ಲಿ ಕೊರತೆ ಇರುವುದಿಲ್ಲ. ನಿಮ್ಮ ಮರ್ಯಾದೆಗೆ ಕುಂದು ಬಾರದಂತೆ ನಾವು ಮದುವೆ ಮಾಡಿಕೊಡುತ್ತೇವೆ. ಆದರೆ ಇಂಥದ್ದೆ ಬೇಕು. ಇಷ್ಟು ಬೇಕು ಎಂದು ಗೆರೆಕೊರೆದು ಹೇಳಬೇಡಿರಿ” ಎಂದರು.

ಅವರು ಮಾತಿನಿಂದ ವ್ಯಗ್ರಗೊಂಡ ಹುಡುಗನ ತಾಯಿ “ನಾವೇನು ಭಿಕಾರಿಗಳಲ್ಲ” ಎಂದಳು.

“ಅಂಥವರಾಗಿದ್ದರೆ ಎಷ್ಟೊ ಒಳ್ಳೆಯದಿತ್ತು. ಕನಿಷ್ಟ ಪಕ್ಷ ಅವರಿಗೆ ಮನುಷ್ಯತ್ವವಾದರೂ ಇರುತ್ತಿತ್ತು. ನೀವು ದರೋಡೆಕೋರರು!” ಬಾಗಿಲಲ್ಲಿ ನಿಂತು ಹೇಳಿದಳು ಹುಡುಗಿ.

ಅವಳ ಮಾತಿನಿಂದ ಅಪಮಾನಿತರಾದ ಹುಡುಗನ ಕಡೆಯವರ ಮೂಗಿನ ಹೊರಳೆ ಹಿಗ್ಗಿದವು. “ಹುಡುಗಿ ಮದುವೆ ಮೊದಲೆ ಹೀಗೆ. ನಾಳೆ ಏನು ಗತಿ?” ಅವರ ಜತೆಗೆ ಬಂದ ಮುದುಕ ಮುಖದ ಮೇಲೆ ಹೊಡೆದಂತೆ ಹೇಳಿದ.

“ಹುಡುಗಿ ಒಳ್ಳೆಯವಳು. ಆದರೆ ನೇರ” ಮೊಮ್ಮಗಳನ್ನು ಸಮರ್ಥಿಸಿಕೊಂಡಳು ಅಜ್ಜಿ.

“ನೀವು ನ್ಯಾಯವಾಗಿ ಮಾತಾಡಿರಿ” ಎಂದರು ಹುಡುಗಿಯ ತಂದೆ.

“ಅಪ್ಪ ಇವರೊಂದಿಗೆ ಚೌಕಾಸಿ ವ್ಯವಹಾರ ಬೇಡ” ನಿಷ್ಠುರವಾಗಿ ಹೇಳಿದಳು ಹುಡುಗಿ.

ಹುಡುಗನ ಕಡೆಯವರು ಎದ್ದು ಬಿರುಗಾಳಿಯಂತೆ ಹೊರಟರು. ಹುಡುಗನ ತಾಯಿ ಹೊಸ್ತಿಲು ದಾಡುವಾಗ “ಈ ಜನ್ಮದಲ್ಲೇ ನಿನಗೆ ಮದುವೆ ಆಗುವುದಿಲ್ಲ” ಎಂದು ಶಪಿಸಿದಳು.

“ಆಗದಿದ್ದರು ಚಿಂತೆಯಿಲ್ಲ. ನಾನು ಬದುಕುತ್ತೇನೆ” ಗಟ್ಟಿಯಾಗಿ ಹೇಳಿದಳು ಹುಡುಗಿ.

*****

Latest posts by ಅಬ್ಬಾಸ್ ಮೇಲಿನಮನಿ (see all)