ಮಂಜುಳ ಗಾನ

ಮಂಜುಳ ಗಾನ

ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ನಡುವಿನ ಸಂಬಂಧ ಬಹಳ ಚೆನ್ನಾಗಿದ್ದವು. ಅದಕ್ಕೆ ಮುಖ್ಯ ಕಾರಣ, ಅಲ್ಲಿ ಕೆಲಸ ಮಾಡುತ್ತಿದ್ದ ಹೆಚ್ಚಿನ ಉಪನ್ಯಾಸಕರು ಅತ್ಯಂತ ಕಡಿಮೆ ವಯಸ್ಸಿನವರಾಗಿದ್ದರು. ಆಗ ತಾನೆ ತಮ್ಮ ಸ್ನಾತಕೋತ್ತರ ಪದವಿ ಮುಗಿಸಿ, ಕೂಡಲೇ ಈ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದ್ದರು. ಹೆಚ್ಚಿನ ಉಪನ್ಯಾಸಕರು ಅದೇ ಕಾಲೇಜಿನಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳಾಗಿದ್ದರು. ಹಾಗೆಂದು ಆ ಕಾಲೇಜಿನ ಎಲ್ಲಾ ಉಪನ್ಯಾಸಕರೂ ಯುವಕರೇ ಎಂದೇನಿಲ್ಲ. ಪ್ರಾಂಶುಪಾಲರು ಮತ್ತು ಇತರ ಹಲವಾರು ಪ್ರಾಧ್ಯಾಪಕರು ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು ಐವತ್ತು ವರ್ಷ ದಾಟಿದ್ದವರಾಗಿದ್ದರು.

ಒಂದು ದಿನ ಮಧ್ಯಾಹ್ನ ಭೋಜನ ವಿರಾಮದ ಹಿಂದಿನ ಪೀರಿಯಡ್ ಮುಗಿದು, ವಿರಾಮದ ಗಂಟೆ ಮೊಳಗಿತು. ವಿದ್ಯಾರ್ಥಿಗಳು ತಮ್ಮ ತಮ್ಮ ಊಟದ ಡಬ್ಬಿಗಳನ್ನು ಹಿಡಿದು ಊಟಕ್ಕೆ ಹೊರಟರು. ಮುಂದಿನ ಬೆಂಚಿನಲ್ಲಿ ಕೂರುತ್ತಿದ್ದ ಮನೋಹರ ಮತ್ತು ವಿಶ್ವನಾಥ ಕೂಡ ಊಟದ ಡಬ್ಬಿ ಹಿಡಿದು ಊಟಕ್ಕೆ ಹೊರಟರು. ಉಪನ್ಯಾಸಕರು ಇನ್ನೂ ತರಗತಿಯಿಂದ ಹೊರಕ್ಕೆ ಹೋಗಿರಲಿಲ್ಲ, ಫಿಸಿಕ್ಸ್ ಮಾಸ್ಟರ್ ಮಂಜುನಾಥರವರು ಮನೋಹರನ ಬಳಿ ಬಂದು, “ಊಟ ಆದ ಮೇಲೆ ಒಂದು ನಿಮಿಷ ನನ್ನ ವಿಭಾಗಕ್ಕೆ ಬಂದು ನನ್ನನ್ನು ಭೇಟಿ ಮಾಡಿ ಹೋಗು” ಎಂದು ಹೇಳಿ ತರಗತಿಯಿಂದ ಹೊರನಡೆದರು. ಈ ಮೇಸ್ಟರು ನನ್ನನ್ನೇಕೆ ಬರಹೇಳಿದರು ಎಂದು ಯೋಚಿಸಿದ. ಏನೂ ಉತ್ತರ ಹೊಳೆಯಲಿಲ್ಲ. ಊಟ ಆದ ಮೇಲೆ ಹೋಗಿ ನೋಡಿದರಾಯಿತು. ಎಂದು ಊಟಕ್ಕೆ ಹೊರಟ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಊಟ ಮಾಡಲು ವಿಶೇಷ ಸ್ಥಳವೇನೂ ಇರಲಿಲ್ಲ. ಕಾಲೇಜಿನಲ್ಲಿ ಒಂದು ಕ್ಯಾಂಟೀನೇನೋ ಇತ್ತು. ಅಲ್ಲಿ ಐವತ್ತು ಜನ ಕುಳಿತು ತಿಂಡಿ ತಿನ್ನುವುದಕ್ಕೆ ಮಾತ್ರ ಅನುಕೂಲವಿತ್ತು. ಎರಡು ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದ ಈ ಕಾಲೇಜಿನಲ್ಲಿ ಕ್ಯಾಂಟೀನು ಸಾಕಾಗುತ್ತಿರಲಿಲ್ಲ. ವಿದ್ಯಾರ್ಥಿಗಳು ಪ್ರಾರ್ಥನಾ ಮಂದಿರದಲ್ಲಿ, ತರಗತಿಯ ಮುಂದಿನ ವರಾಂಡದಲ್ಲಿ ನೆಲದಮೇಲೆ ಕುಳಿತು ಊಟ ಮಾಡುತ್ತಿದ್ದರು. ಊಟ ಮಾಡಿ ಸ್ವಲ್ಪ ಹೊತ್ತು ತಿರುಗಾಡಿಕೊಂಡು ಬರುತ್ತಿದ್ದರು. ಈ ದಿನ ಮನೋಹರ ಮತ್ತು ವಿಶ್ವನಾಥ ಬೇಗ ಬೇಗ ಊಟ ಮುಗಿಸಿ ಮಂಜುನಾಥ ಸರ್‌ರವರನ್ನು ಭೇಟಿ ಮಾಡಲು ಫಿಸಿಕ್ಸ್ ವಿಭಾಗಕ್ಕೆ ಹೋದರು. ಅವರು ತಮ್ಮ ಇತರ ಸಹೋದ್ಯೋಗಿಗಳೊಂದಿಗೆ ಕುಳಿತು ಊಟ ಮಾಡುತ್ತಿದ್ದರು. ಮನೋಹರನ ಜೊತೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಸಂಜೆ ಐದು ಗಂಟೆಗೆ ಭೇಟಿಯಾಗೋಣ ಎಂದು ಹೇಳಿ ಕಳಿಸಿಬಿಟ್ಟರು. ಸಂಜೆ ತರಗತಿಗಳು ಮುಗಿದ ನಂತರ ಮನೋಹರ ಮತ್ತೆ ಫಿಸಿಕ್ಸ್ ವಿಭಾಗಕ್ಕೆ ಹೋದ. ಮಂಜುನಾಥರವರು ತಮ್ಮ ಚೀಲ ತೆಗೆದುಕೊಂಡು ಮನೆಗೆ ಹೊರಟಿದ್ದರು. ಮನೋಹರನನ್ನು ನೋಡಿದವರೇ, “ಅರೆ ನೀನು ಈಗಲೇ ಬಂದೆಯಾ, ಸರಿ ನನ್ನ ಜೊತೆ ಬಾ ರಸ್ತೆಯಲ್ಲೇ ಮಾತನಾಡೋಣ” ಎಂದು ಹೇಳಿ ಕಾಲೇಜಿನಿಂದ ಹೊರನಡೆದರು. ಗಾಂಧಿ ಬಜಾರ್‌ ಸರ್ಕಲ್ಲಿನ ಬಳಿ ಬಂದರು. ಇಲ್ಲೇ ಮಾತನಾಡುವುದೋ ಇಲ್ಲಾ ಎಲ್ಲಾದರೂ ಕುಳಿತು ಮಾತನಾಡುವುದೋ ಎಂದು ಯೋಚಿಸಿ, ಕೊನೆಗೆ ಹತ್ತಿರದಲ್ಲೇ ಇದ್ದ “ವಿದ್ಯಾರ್ಥಿ ಭವನ್” ಹೋಟೆಲಿಗೆ ಹೋಗಿ ಕುಳಿತರು. ಮಂಜುನಾಥರವರು ನೇರವಾಗಿ ವಿಷಯಕ್ಕೆ ಬಂದರು.

“ನಿಮ್ಮ ಕ್ಲಾಸಲ್ಲಿ ಮಂಜುಶ್ರೀ ಅಂತ ಒಬ್ಬ ವಿದ್ಯಾರ್ಥಿ ಇದ್ದಾಳಲ್ಲ ಅವಳು ನಿನ್ನ ಫ್ರೆಂಡಾ?”

“ಹೌದು ನನ್ನ ಕ್ಲಾಸ್‌ಮೇಟ್, ಒಳ್ಳೆ ಫ್ರೆಂಡ್” ಎಂದು ಉತ್ತರಿಸಿದ.

“ನೀನು ಅವಳನ್ನು ಪ್ರೀತಿಸ್ತಿದ್ದೀಯಾ?”

“ಪ್ರೀತಿಸ್ತೀನಿ ಅಂತ ಹೇಳೋಕ್ಕಾಗೋಲ್ಲ, ಆದ್ರೆ ಮಂಜು ಅಂದ್ರೆ ನನಗೆ ತುಂಬಾ ಇಷ್ಟ. ಅವಳ ಜೊತೆ ಮಾತನಾಡಬೇಕು, ತಿರುಗಾಡಬೇಕು ಅಂತ ಆಸೆ ಆಗುತ್ತೆ.”

“ಈ ವಯಸ್ಸಿನಲ್ಲಿ ಅದೆಲ್ಲ ಸಹಜ. ಆದ್ರೆ ನೀನಿನ್ನು ತುಂಬಾ ಚಿಕ್ಕವನು. ಚೆನ್ನಾಗಿ ಓದಬೇಕು. ಓದಿ ಡಿಗ್ರಿ ತಗೊಂಡು, ಮುಂದೆ ಓದೋಕೆ ಅನುಕೂಲ ಆದ್ರೆ ಇನ್ನೂ ಚೆನ್ನಾಗಿ ಓದಿ, ಒಳ್ಳೆ ಕೆಲಸ ಹಿಡಿದು, ನಂತರ ಪ್ರೀತಿ, ಪ್ರೇಮ, ಮದುವೆ ಇತ್ಯಾದಿ. ಆದ್ದರಿಂದ ಈಗ ಸ್ವಲ್ಪ ಕಂಟ್ರೋಲ್ ಮಾಡ್ಕೋ. ಅವಳು ನಿನಗೆ ಇಷ್ಟ ಆದ್ರೆ ಒಳ್ಳೆ ಫ್ರೆಂಡ್ ಆಗಿರು. ಮಾತಾಡು ಆದ್ರೆ ಹುಷಾರಾಗಿ ಮಾತಾಡು, ಹುಡುಗೀರಿಗೆ ಇಷ್ಟ ಆಗದೇ ಇರೋ ವಿಷಯ ಮಾತಾಡಬೇಡ. ಅವಳಿಗೆ ಏನು ಇಷ್ಟ ಏನು ಇಷ್ಟ ಇಲ್ಲ ಅನ್ನೋದನ್ನ ನೀನೇ ಸೂಕ್ಷ್ಮವಾಗಿ ತಿಳ್ಕೊ, ಲೆಟರ್ ಬರೆಯೋದು, ಅವರ ಬಗ್ಗೆ ಕವನ ಬರಿಯೋದು ಅದೆಲ್ಲಾ ಹುಡುಗಿಯರಿಗೆ ಇಷ್ಟ ಆಗೋದಿಲ್ಲ ಎಂದು ಹೇಳಿ ತಮ್ಮ ಲೆದರ್ ಬ್ಯಾಗ್‌ನಿಂದ ಒಂದು ಪತ್ರ ತೆಗೆದು ಮನೋಹರನ ಕೈಲಿಟ್ಟರು!

ಆ ಪತ್ರವನ್ನು ಕಂಡು ಮನೋಹರ ಗಾಬರಿಯಾದ! ಆ ಕಾಗದ ಅವನು ಮಂಜುಶ್ರೀಗೆ ಬರೆದಿದ್ದ ಪ್ರೇಮ ಪತ್ರವಾಗಿತ್ತು. ಎಲಾ ಹುಡುಗಿ! ಹೀಗೇಕೆ ಮಾಡಿದಳು. ನಾನು ಅವಳಿಗೆ ಕಾಗದ ಬರೆದದ್ದು ಅವಳಿಗೆ ಇಷ್ಟವಾಗದಿದ್ದರೆ ತಾನೇ ನನಗೆ ನೇರವಾಗಿ ಹೇಳಬಹುದಿತ್ತಲ್ಲ? ಲೆಕ್ಚರರ್‌ಗೆ ಏಕೆ ಕಂಪ್ಲೇಂಟ್ ಮಾಡಿದಳು! ಅಯ್ಯೋ ದೇವರೇ ಈಗೇನು ಮಾಡುವುದು? ಈ ಮೇಸ್ಟರು ಪ್ರಿನ್ಸಿಪಾಲರಿಗೆ ತಿಳಿಸಿದರೆ, ಅಥವಾ ತರಗತಿಯಲ್ಲಿ ಎಲ್ಲರ ಮುಂದೆ ಹೇಳಿದರೆ ನನ್ನ ಮಾನ ಮರ್ಯಾದೆ ಹೋಗುತ್ತದೆ!

“ಸಾರಿ ಸರ್. ನೀವೇ ಹೇಳಿದಂತೆ ಈ ವಯಸ್ಸಿನಲ್ಲಿ ಇದೆಲ್ಲಾ ಸಹಜ. ಏನೋ ಆಸೆ ಆಗಿ, ಅವಳ ಮೇಲೆ ಪ್ರೀತಿ ಬಂದಿದ್ದರಿಂದ ಲೆಟರ್ ಬರೆದುಬಿಟ್ಟೆ, ತಪ್ಪಾಯ್ತು ಸರ್. ನಾನು ಬಹಳ ಬಡ ಕುಟುಂಬದವನು ಸಾರ್. ನಮ್ಮ ತಂದೆಯವರಿಗೆ ಕೆಲಸವಿಲ್ಲ. ನಮ್ಮ ತಾಯಿ ಒಬ್ಬರ ಮನೇಲಿ ಅಡುಗೆ ಕೆಲಸ ಮಾಡಿ ನನ್ನನ್ನು ಓದಿಸ್ತಿದಾರೆ ಸಾರ್. ಇನ್ನು ಮೇಲೆ ಎಂದೂ ಇಂತಹ ಕೆಲಸ ಮಾಡೋದಿಲ್ಲ ಸಾರ್. ನನಗೆ ಏನೂ ತೊಂದರೆ ಮಾಡಬೇಡಿ ಸಾರ್” ಎಂದು ಹೇಳಿ ಅವರ ಕೈ ಹಿಡಿದು ಅಳತೊಡಗಿದ. ಮತ್ತು ಕ್ಷಣಾರ್ಧದಲ್ಲಿ ಆ ಪತ್ರವನ್ನು ಹರಿದು ತುಂಡು ತುಂಡು ಮಾಡಿದ. ಇವನ ಪಶ್ಚಾತ್ತಾಪವನ್ನು ನೋಡಿ ಮೇಸ್ಟರಿಗೆ ಸಮಾಧಾನವಾಯಿತು.

“ಹೋಗಲಿ ಬಿಡಯ್ಯ, ಅದಕ್ಯಾಕೆ ಅಳತೀಯ. ನಾನು ಆಗಲೇ ಹೇಳಿದಂತೆ ಈ ವಯಸ್ಸಿನಲ್ಲಿ ಇದೆಲ್ಲಾ ಸಹಜ ಕಣಯ್ಯ. ಆದರೆ ಸ್ವಲ್ಪ ಹುಷಾರಾಗಿರಬೇಕು ಓದಿನ ಬಗ್ಗೆ ಗಮನ ಕೊಡು. ಚೆನ್ನಾಗಿ ಓದಿ ಮುಂದಕ್ಕೆ ಬರುವ ದಾರಿ ನೋಡು. ನೀನು ಬುದ್ಧಿವಂತ ವಿದ್ಯಾರ್ಥಿ. ನಿನಗೆ ಒಳ್ಳೆಯ ಭವಿಷ್ಯವಿದೆ. ಚರ್ಚಾಕೂಟ, ಕ್ರೀಡೆ, ನಾಟಕ, ಸಮಾಜ ಸೇವೆ ಮುಂತಾದ ಚಟುವಟಿಕೆಗಳಲ್ಲಿ ಸ್ವಲ್ಪ ಉತ್ಸಾಹ ತೋರಿಸು. ಆದರೆ ನಿನ್ನ ಸಂಪೂರ್ಣ ಆದ್ಯತೆ ಓದಿನ ಕಡೆ ಇರಲಿ.”

ಅಷ್ಟರ ವೇಳೆಗೆ ಮಂಜುನಾಥರವರು ಆರ್ಡರ್ ಮಾಡಿದ್ದ ಮಸಾಲೆ ದೋಸೆಗಳು ಬಂದವು. ಇಬ್ಬರೂ ಪೂರ್ತಿ ಗಮನವಿಟ್ಟು ಮಸಾಲೆ ದೋಸೆ ತಿನ್ನುವುದರಲ್ಲಿ ಮಗ್ನರಾದರು. ದೋಸೆ ತಿಂದು, ಕಾಫಿ ಕುಡಿದು ಹೊರಬಂದರು. ಮನೋಹರ್ ಮತ್ತೊಮ್ಮೆ ಕ್ಷಮೆ ಕೇಳಿ, ಏನೂ ತೊಂದರೆ ಮಾಡಬೇಡಿರಿ ಎಂದು ಕೇಳಿಕೊಂಡ. ಮಂಜುನಾಥರವರೇ ಇವನನ್ನು ಸಮಾಧಾನಪಡಿಸಿದರು.

“ನೀನೇನೂ ಯೋಚನೆ ಮಾಡಬೇಡಪ್ಪ, ನಾನು ನಿನಗೇನೂ ತೊಂದರೆ ಮಾಡೋದಿಲ್ಲ. ಈ ವಿಷಯ ಯಾರ ಮುಂದೇನೂ ಹೇಳೋದಿಲ್ಲ ಸರೀನಾ? ನೀನು ಈ ಹುಡುಗಿ ವಿಷಯ ಮರೆತು ಓದಿನಲ್ಲಿ ಗಮನ ಇಡು, ನಿನಗೆ ದೇವರು ಒಳ್ಳೇದು ಮಾಡಲಿ, ನಡಿ ಹೊರಡೋಣ.” ಎಂದು ಹೇಳಿ ಹೋಟಲಿನ ಬಿಲ್ ಪಾವತಿ ಮಾಡಿ ಹೊರನಡೆದರು.

ಮನೋಹರ್ ಮನೆಗೆ ಹೋಗಿ ಕೈ ಕಾಲು ತೊಳೆದುಕೊಂಡು, ಕಾಫಿ ಕುಡಿದು ಓದಲು ಕುಳಿತ. ಆದರೆ ಓದಿನಲ್ಲಿ ಗಮನ ಉಳಿಯಲಿಲ್ಲ. ಅವನ ಮನಸ್ಸು ಮಂಜುಶ್ರೀಯ ಕಡೆಗೇ ಹೋಗುತ್ತಿತ್ತು. ನಾನೇನು ತಪ್ಪು ಮಾಡಿದೆ? ಸಹಪಾಠಿ ಗೆಳತಿಯನ್ನು ಇಷ್ಟಪಡುವುದು ತಪ್ಪೇ? ಪ್ರೀತಿಸುವುದು ಅಪರಾಧವೇ? ಈ ಹುಡುಗಿಗೆ ದೇವರು ಸೌಂದರ್ಯ ಕೊಟ್ಟಿರುವನೇ ವಿನಃ ಪ್ರೀತಿಸುವ ಹೃದಯವನ್ನು ಏಕೆ ಕೊಡಲಿಲ್ಲ? ಮೇಷ್ಟರು ಹೇಳಿದಂತೆ ಈ ವಯಸ್ಸಿನಲ್ಲಿ ಇದೆಲ್ಲಾ ಸಹಜ ತಾನೇ? ಸರಿ, ಇನ್ನು ಮೇಲೆ ಅವಳ ಜೊತೆ ಮಾತನಾಡುವುದಿಲ್ಲ, ನನ್ನ ಓದಿನ ಬಗ್ಗೆ ಹೆಚ್ಚು ಗಮನ ವಹಿಸುತ್ತೇನೆ ಎಂದು ನಿರ್ಧರಿಸಿ ಪೂರಾ ಗಮನಕೊಟ್ಟು ಓದತೊಡಗಿದ.

ಕಾಲೇಜಿನ ಟೆಸ್ಟ್‌ಗಳಲ್ಲಿ ಮತ್ತು ಅರ್ಧ ವಾರ್ಷಿಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಂಡ. ಜನವರಿ ತಿಂಗಳಿನಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳು ವಾರ್ಷಿಕ ಕ್ರೀಡಾಕೂಟ, ತತ್ಸಂಬಂಧ ಕ್ರೀಡಾ ಸ್ಪರ್ಧೆಗಳು, ನಂತರ ಚರ್ಚಾ ಸ್ಪರ್ಧೆಗಳು, ಅಂತರ ವರ್ಗೀಯ ನಾಟಕ ಸ್ಪರ್ಧೆಗಳು ಹೀಗೆಯೇ ಹಲವಾರು ಕಾರ್ಯ ಚಟುವಟಿಕೆಗಳು, ಮನೋಹರ್ ಎಲ್ಲಾ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ. ಸಾಕಷ್ಟು ಬಹುಮಾನಗಳು ಬಂದವು, ಇವರ ಕಾಲೇಜಿನಲ್ಲಿ ಗಂಡು ಮಕ್ಕಳು ಹೆಣ್ಣು ಮಕ್ಕಳು ಕೂಡಿ ನಾಟಕ ಮಾಡುವಂತಿಲ್ಲ! ಪೂರ್ತಿ ಗಂಡು ಹುಡುಗರೇ ನಾಟಕ ಪ್ರದರ್ಶನ ನೀಡಬೇಕು. ಅಥವಾ ಪೂರ್ತಿ ಹೆಣ್ಣು ಮಕ್ಕಳೇ ಒಂದು ನಾಟಕ ಪ್ರದರ್ಶನ ನೀಡಬೇಕು. ಗಂಡು ಹುಡುಗರ ನಾಟಕದಲ್ಲಿ ಹೆಣ್ಣು ಪಾತ್ರಗಳಿದ್ದರೆ ಅದನ್ನು ಗಂಡು ಹುಡುಗರೇ ಮಾಡಬೇಕಿತ್ತು. ಅದೇ ರೀತಿ ಹೆಣ್ಣು ಮಕ್ಕಳು ಮಾಡುವ ನಾಟಕದಲ್ಲಿ ಬರುವ ಗಂಡು ಪಾತ್ರಗಳನ್ನು ಹೆಣ್ಣು ಮಕ್ಕಳೇ ಮಾಡಬೇಕು. ಅದಕ್ಕಾಗಿ ಹುಡುಗರು ಮಾಡುವ ಹೆಣ್ಣು ಪಾತ್ರಕ್ಕೆ ಮತ್ತು ಹೆಣ್ಣು ಮಕ್ಕಳು ಮಾಡುವ ಗಂಡು ಪಾತ್ರಕ್ಕೆ ವಿಶೇಷ ಬಹುಮಾನಗಳಿರುತ್ತಿದ್ದವು.

ಮನೋಹರ ಬೆಳ್ಳಗೆ ತೆಳ್ಳಗೆ ಒಳ್ಳೆಯ ಸುಂದರ ಹುಡುಗಿಯಂತಿದ್ದ! ಆದುದರಿಂದ ಇವನಿಗೆ ನಾಟಕದಲ್ಲಿ ನಾಯಕಿಯ ಪಾತ್ರ ಕೊಟ್ಟರು. ಇವರ ತರಗತಿಯ ನಾಟಕವನ್ನು ಇವರ ಕ್ಲಾಸ್ ಟೀಚರ್ ಮಂಜುನಾಥ್‌ರವರೇ ನಿರ್ದೇಶಿಸಿದರು. ನಾಟಕದಲ್ಲಿ ಭಾಗವಹಿಸುವ ಎಲ್ಲಾ ಹುಡುಗರಿಗೂ ಇವರೇ ಅಭಿನಯವನ್ನು ಹೇಳಿ ಕೊಡುತ್ತಿದ್ದರು. ಇವರ ಜೊತೆಗೆ ಇನ್ನೂ ಕೆಲವು ಉಪನ್ಯಾಸಕರೂ, ಸಹಪಾಠಿಗಳೂ ಬಂದು ಪ್ರತಿದಿನ ನಾಟಕದ ರಿಹರ್ಸಲ್‌ಗಳಲ್ಲಿ ಸಹಾಯ ಮಾಡುತ್ತಿದ್ದರು. ಹತ್ತಾರು ದಿನಗಳ ಕಾಲ ರಿಹರ್ಸಲ್ ಮಾಡಿ ಮಾಡಿ ಎಲ್ಲಾ ಕಲಾವಿದರೂ ತಮ್ಮ ತಮ್ಮ ಡೈಲಾಗ್‌ಗಳನ್ನು ಚೆನ್ನಾಗಿ ಬಾಯಿ ಪಾಠ ಮಾಡಿಕೊಂಡ ಮೇಲೆ ಚಲನವಲನಗಳನ್ನು, ಮುಖದ ಭಾವನೆಗಳನ್ನೂ, ಮಾತಿನ ಏರಿಳಿತಗಳನ್ನು ಹೇಳಿಕೊಡಲಾಯಿತು. ಇವರ ನಾಟಕದ ರಿಹರ್ಸಲ್‌ಗಳಿಗೆ ಇವರ ಸಹಪಾಠಿಗಳಾದ ಮಂಜುಳಾ ಮತ್ತು ಭಾಗ್ಯಲಕ್ಷ್ಮಿ ಪ್ರತಿದಿನ ಬರುತ್ತಿದ್ದರು. ಮನೋಹರ “ಜಯಶ್ರೀ” ಎಂಬ ಹೆಣ್ಣು ಮಗಳ ಪಾತ್ರ ಮಾಡುತ್ತಿದ್ದ. ಅವನ ಡೈಲಾಗ್‌ಗಳು, ಚಲನವಲನಗಳೂ ಎಲ್ಲವೂ ಹೆಣ್ಣಿನಂತೆಯೇ ಇದ್ದವು. ಇನ್ನು ನಾಟಕಕ್ಕೆ ಉಡುಪುಗಳನ್ನು ಸಿದ್ಧಮಾಡಿಕೊಳ್ಳಬೇಕಾಗಿತ್ತು. ಸಾಮಾನ್ಯವಾಗಿ ಈ ಕಾಲೇಜಿನ ಎಲ್ಲಾ ತರಗತಿಯ ಎಲ್ಲಾ ವಿಭಾಗಗಳೂ ಸಾಮಾಜಿಕ ನಾಟಕಗಳನ್ನೇ ಮಾಡುತ್ತಿದ್ದರು. ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳನ್ನು ಯಾವ ತರಗತಿಯವರೂ ಮಾಡುತ್ತಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಖರ್ಚು ವೆಚ್ಚದ ಬಾಬತ್ತು.

ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳಿಗೆ ಯಾವುದೇ ಧನ ಸಹಾಯ ಸಿಗುತ್ತಿರಲಿಲ್ಲ. ರಂಗ ಮಂಟಪ, ರಂಗಮಂದಿರ ಮತ್ತು ಪರದೆಗಳು ಇರುತ್ತಿದ್ದವು. ನಾಟಕಗಳಿಗೆ ಬೇಕಾಗುವ ವಿಶೇಷ ವಿದ್ಯುತ್ ದೀಪಗಳು, ಸೌಂಡ್ ಸಿಸ್ಟಂ ಕಾಲೇಜಿನ ಸ್ಟೇಜಿನಲ್ಲಿ ಇದ್ದೇ ಇದ್ದವು. ಆದರೆ ನಾಟಕಕ್ಕೆ ಬೇಕಾಗುವ ಆರಮನೆಯ ಸೆಟ್‌ಗಳು, ಪರ್ಣ ಕುಟೀರದ ಸೆಟ್‌ಗಳು ಇವೆಲ್ಲಾ ಇರುತ್ತಿರಲಿಲ್ಲ. ಸಾಧಾರಣವಾದ ಒಂದು ಮನೆಯ ಸೆಟ್ ಮಾತ್ರ ಇತ್ತು.

ಅದರಲ್ಲಿ ಮನೆಯ ಒಳಭಾಗದ ಒಂದು ತಿಳಿನೀಲಿ ಬಣ್ಣದ ಗೋಡೆ, ಸೆಟ್‌ನ ಮಧ್ಯೆ ಒಂದು ಬಾಗಿಲು ಮತ್ತು ಒಂದು ಮೂಲೆಯಲ್ಲಿ ಒಂದು ಕಿಟಕಿ ಇವಿಷ್ಟು ಮಾತ್ರ ಇರುತ್ತಿದ್ದವು. ಎಲ್ಲಾ ಸಾಮಾಜಿಕ ನಾಟಕಗಳಿಗೂ ಇದೇ ಮನೆಯ ಸೆಟ್ಟನ್ನು ಬಳಸಲಾಗುತ್ತಿತ್ತು. ಇನ್ನು ಆಫೀಸ್ ಮತ್ತು ಹಾಸ್ಟೆಲ್‌ನ ನಾಟಕಗಳಿಗೂ ಹಾಗು ರಸ್ತೆಯ ದೃಶ್ಯಕ್ಕೂ ಈ ಮೇಲೆ ಹೇಳಿದ ಮನೆಯ ಸೆಟ್‌ನ ಮುಂದೆ ಒಂದು ನೀಲಿ ಪರದೆ ಕಟ್ಟಿ, ಅದಕ್ಕೆ ಒಂದೆರಡು ಕ್ಯಾಲೆಂಡರ್‌ಗಳನ್ನು ಒಂದು ಮಹಾತ್ಮ ಗಾಂಧೀಜಿಯವರ ಚಿತ್ರಪಟವನ್ನೂ ನೇತುಹಾಕಿ ಆಫೀಸ್‌ನ ಗೋಡೆಯ ಪರಿಕಲ್ಪನೆಯನ್ನು ತೋರಿಸಲಾಗುತ್ತಿತ್ತು. ಇನ್ನು ನಾಟಕಕ್ಕೆ ಬೇಕಾಗುವ ಪೀಠೋಪಕರಣಗಳನ್ನು ಕಾಲೇಜಿನ ಆಫೀಸು, ಹಾಸ್ಟೆಲ್ಲು, ಕ್ಯಾಂಟೀನು ಮುಂತಾದ ಕಡೆಯಿಂದ ತಂದು, ಬಳಸಿ ನಂತರ ಜೋಪಾನವಾಗಿ ಹಿಂತಿರುಗಿಸಲಾಗುತ್ತಿತ್ತು.

ಇನ್ನು ನಾಟಕಕ್ಕೆ ಬೇಕಾಗುವ ಉಡುಪುಗಳನ್ನು ವಿದ್ಯಾರ್ಥಿಗಳು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಆದುದರಿಂದಲೇ ಸಾಮಾನ್ಯವಾಗಿ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳನ್ನು ಯಾರೂ ಮಾಡುತ್ತಿರಲಿಲ್ಲ. ಎಲ್ಲಾ ವಿಭಾಗದವರೂ ಸಾಮಾಜಿಕ ನಾಟಕಗಳನ್ನೇ ಮಾಡುತ್ತಿದ್ದರು. ಆ ನಾಟಕಗಳಿಗೆ ಬೇಕಾಗುವ ಕೋಟು, ಪ್ಯಾಂಟು, ಪಂಚೆ, ಟೋಪಿ, ಕಾವಿ ಮುಂತಾದ ಉಡುಪುಗಳು ಎಲ್ಲರ ಮನೆಗಳಲ್ಲಿ ಧಾರಾಳವಾಗಿ ಸಿಗುತ್ತಿದ್ದವು.

ಪ್ರಸ್ತುತ ನಾಟಕದಲ್ಲಿ ಮನೋಹರ ಸ್ತ್ರೀ ಪಾತ್ರ ಮಾಡುತ್ತಿದ್ದ. ಅವನ ಮನೆಯಲ್ಲಿ ಅವನಿಗೆ ಯಾರೂ ಅಕ್ಕ ತಂಗಿಯರಾಗಲಿ, ಅತ್ತಿಗೆಯಾಗಲಿ ಇರಲಿಲ್ಲ. ಹಾಗಾಗಿ ನಾಟಕದ ತನ್ನ ಪಾತ್ರಕ್ಕೆ ಡ್ರೆಸ್‌ಗಳನ್ನು ಎಲ್ಲಿಂದ ತರುವುದು ಎಂದು ಚಿಂತಾಕ್ರಾಂತನಾದ. ಆ ವಿಷಯವನ್ನು ಮಂಜುನಾಥ ಸರ್ ಮುಂದೆಯೂ ತನ್ನ ಸಹಪಾಠಿಗಳ ಮುಂದೆಯೂ ಹೇಳಿಕೊಂಡ. ಮಂಜುಳಾ ಮುಂದೆ ಬಂದು, ಮನು ನಿನಗೆ ಬೇಕಾಗೋ ಡ್ರೆಸ್‌ಗಳನ್ನು ನಾನು ಕೊಡ್ತೀನಿ ಎಂದಳು. ಅದೇ ದಿನ ಸಂಜೆ ನಾಟಕದ ರಿಹರ್ಸಲ್ ಮುಗಿದ ಮೇಲೆ ಭಾಗ್ಯ, ಮನೋಹರ ಮತ್ತು ಮಂಜುನಾಥ್‌ರವರು ಎಲ್ಲರೂ ಮಂಜುಳಾ ಜೊತೆ ಅವಳ ಮನೆಗೆ ಹೋದರು. ಮಂಜುಳಾ ಮನೋಹರನನ್ನು ತನ್ನ ಬೆಡ್‌ರೂಮಿಗೆ ಕರೆದುಕೊಂಡು ಹೋಗಿ ಅವನ ಪ್ಯಾಂಟು, ಶರಟು ಬಿಚ್ಚಿ, ತನ್ನ ಲಂಗ, ದಾವಣಿ, ಲಂಗ-ರವಿಕೆ, ಲಂಗ ಸೀರೆ ಮುಂತಾದ ಉಡುಪುಗಳನ್ನು ತೊಡಿಸಿ ನೋಡಿದಳು. ಅವನ ದೇಹಕ್ಕೆ ಸರಿ ಹೊಂದುವಂತೆ ತನ್ನ ಬ್ಲೌಸುಗಳನ್ನು ಸರಿ ಮಾಡಿಸಿದಳು. ಮರುದಿನ ಇವರೆಲ್ಲರೂ ವಿಶ್ವೇಶ್ವರಪುರದ “ಪ್ರಭಾತ್ ಕಲಾವಿದರು” ಸಂಸ್ಥೆಗೆ ಭೇಟಿ ನೀಡಿ ಮನೋಹರನಿಗೆ ಸರಿಹೊಂದುವ ವಿಗ್‌ಗಳನ್ನು ಬಾಡಿಗೆಗೆ ಪಡೆದು ತಂದರು. ಕಾಲೇಜಿನ ಕಡೆಯಿಂದ ಇಬ್ಬರು “ಮೇಕಪ್ ಮ್ಯಾನ್”ಗಳು ಪ್ರತಿದಿನ ಕಾಲೇಜಿಗೆ ಬಂದು, ಆಯಾ ದಿನದ ನಾಟಕದಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೂ ಚೆನ್ನಾಗಿ ಮೇಕಪ್ ಮಾಡುತ್ತಿದ್ದರು. ಇವರ ನಾಟಕದ ದಿನ ಗಂಡು ಪಾತ್ರಗಳ ಡ್ರೆಸ್ಸಿಂಗ್ ಮತ್ತು ಮೇಕಪ್ ಆದಮೇಲೆ, ಮನೋಹರನಿಗೆ, ತಲೆಗೆ ವಿಗ್ ಹಾಕಿ, ಮುಖಕ್ಕೆ ಸುಂದರ ಹುಡುಗಿಯಂತೆ ಮೇಕಪ್ ಮಾಡಿ ಕಳುಹಿಸಿದರು. ನಂತರ ಮಂಜುಳ ಮತ್ತು ಭಾಗ್ಯ ಮನೋಹರನನ್ನು ಲೇಡೀಸ್ ರೂಮಿಗೆ ಕರೆದೊಯ್ದು, ಅವನ ಪ್ಯಾಂಟು, ಶರಟು, ಬನಿಯನ್ನು ಎಲ್ಲಾ ತೆಗೆದು ಚಡ್ಡಿಯೊಂದನ್ನು ಬಿಟ್ಟು, ವಿವಸ್ತ್ರಗೊಳಿಸಿ, ಅವನಿಗೆ ಒಳಲಂಗ, ಬಾಡಿಲಂಗ, ರವಿಕೆ ತೊಡಿಸಿ, ಸುಂದರವಾದ ಯುವತಿಯಂತೆ ತಯಾರು ಮಾಡಿ ಹೊರಗೆ ಕರೆತಂದರು. ಕತ್ತಿಗೆ ಮುತ್ತಿನ ಸರ, ಕಿವಿಗಳಿಗೆ ರಿಂಗ್, ಕೈಗಳಿಗೆ ಬಳೆಗಳು, ಕಾಲಿಗೆ ಗೆಜ್ಜೆ ಎಲ್ಲಾ ತೊಟ್ಟ ಮನೋಹರ ಮೋಹನಾಂಗಿಯಾಗಿ, ಸುಂದರ ಕನ್ಯೆಯಾಗಿ ಬಹಳ ಚೆನ್ನಾಗಿ ಅಭಿನಯಿಸಿದ. ಎರಡನೆಯ ಮತ್ತು ಮೂರನೆಯ ದೃಶ್ಯದಲ್ಲಿ ಇವನ ಪಾತ್ರವಿರಲಿಲ್ಲ. ನಾಲ್ಕನೆಯ ದೃಶ್ಯದಲ್ಲಿ ಇವನು ಸೀರೆಯುಟ್ಟು ಮದುಮಗನ ಮುಂದೆ ಕುಳಿತು ಹಾಡುವ ದೃಶ್ಯ. ಮೊದಲನೆಯ ದೃಶ್ಯ ಮುಗಿದ ಕೂಡಲೇ ಮಂಜುಳ ಇವನನ್ನು ಗ್ರೀನ್ ರೂಮಿಗೆ ಎಳೆದೊಯ್ದು ಇವನ ಲಂಗ ಬ್ಲೌಸ್ ಬಿಚ್ಚಿ ಬೇರೆ ಒಳಲಂಗ ತೊಡಿಸಿ, ಬೇರೆ ರವಿಕೆ ತೊಡಿಸಿ, ಸೀರೆಯುಡಿಸಿ ತಯಾರು ಮಾಡಿದಳು. ಈ ದೃಶ್ಯದಲ್ಲಿ ಹುಡುಗಿ ಹಾಡು ಹೇಳುವ ದೃಶ್ಯ ಇವನಿಗೆ ಹಿನ್ನೆಲೆ ಗಾಯಕಿಯಾಗಿ ಗಾಯಿತ್ರಿ ಹಾಡಿದಳು. ನಾಟಕ ಅದ್ಭುತವಾಗಿ ಮೂಡಿ ಬಂತು. ನಿರೀಕ್ಷಿಸಿದಂತೆಯೇ ಇವರ ನಾಟಕಕ್ಕೆ ಮೊದಲನೇ ಬಹುಮಾನ, ಬೆಸ್ಟ್ ಡ್ರಾಮಾ ಆಫ್ ದ ಇಯರ್ ಶೀಲ್ಡ್ ಬಂದಿತು. ಮನೋಹರನಿಗೆ ಬೆಸ್ಟ್ ಮೇಲ್ ಪ್ಲೇಯಿಂಗ್ ಫೀಮೇಲ್ ರೋಲ್ ಬಹುಮಾನ, ಪಾರಿತೋಷಕ, ಗೋಲ್ಡ್ ಮೆಡಲ್, ಪ್ರಶಸ್ತಿ ಪತ್ರ ಎಲ್ಲಾ ಲಭಿಸಿದವು. ಈ ಅದ್ಭುತವಾದ ಗೆಲುವಿನಿಂದ ಸಂತೋಷಗೊಂಡ ಮಂಜುನಾಥ ಸರ್‌ರವರು ನಾಟಕದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ನಾಟಕಕ್ಕೆ ಸಹಾಯ ಮಾಡಿದ ಮಂಜುಳಾ, ಭಾಗ್ಯಾ, ಗಾಯತ್ರೀ ಮತ್ತು ಮಂಜುಶ್ರೀರವರಿಗೆ ಎಲ್ಲರಿಗೂ ಹೋಟಲಿನಲ್ಲಿ ಊಟ ಹಾಕಿಸಿ ಪಾರ್ಟಿ ಕೊಟ್ಟರು.

ತರಗತಿಯ ಎಲ್ಲಾ ಹುಡುಗರೂ, ಹುಡುಗಿಯರೂ ಮನೋಹರನ ಕೈಕುಲುಕಿ ಅಭಿನಂದಿಸಿದರು. ಮನೋಹರನ ಪ್ರೇಮವನ್ನು ತಿರಸ್ಕರಿಸಿ, ಅವನ ಮೇಲೆ ದೂರು ಕೊಟ್ಟಿದ್ದ ಮಂಜುಶ್ರೀ ಕೂಡಾ, ಮನೋಹರನನ್ನು ನಗುನಗುತ್ತಾ ಮಾತನಾಡಿಸಿ, ನಾಟಕದಲ್ಲಿ ಬಹುಮಾನ ಬಂದುದಕ್ಕೆ ಕೈ ಕುಲುಕಿ ಅಭಿನಂದಿಸಿದಳು. ಎಷ್ಟೋದಿನ ಎಲ್ಲಾ ವಿದ್ಯಾರ್ಥಿಗಳು ಇದೇ ಗುಂಗಿನಲ್ಲಿದ್ದರು.

ಮತ್ತೆರಡು ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳು, ಉಪನ್ಯಾಸಕರು ತಮ್ಮ ತಮ್ಮ ಪಾಠ ಪ್ರವಚನಗಳನ್ನು ಮುಗಿಸುವ ತರಾತುರಿಯಲ್ಲಿದ್ದರು. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದರು. ಪರೀಕ್ಷೆಗಳು ಆರಂಭವಾದವು. ವಿದ್ಯಾರ್ಥಿಗಳು ಬಹಳ ಗಮನವಿಟ್ಟು ಓದಿ, ಪರೀಕ್ಷೆಯಲ್ಲಿ ತಮ್ಮ ಶಕ್ತಿಮೀರಿ ಉತ್ತರಿಸಿದರು. ಕೆಲವರಿಗೆ ಪ್ರಾಕ್ಟಿಕಲ್ ಪರೀಕ್ಷೆಗಳಿರುತ್ತಿದ್ದವು, ಎಲ್ಲಾ ಪರೀಕ್ಷೆಗಳು ಸಾಂಗವಾಗಿ ಮುಗಿದವು. ಪರೀಕ್ಷೆಗಳು ಮುಗಿದ ಖುಷಿಯಲ್ಲಿ ವಿದ್ಯಾರ್ಥಿಗಳು ತಿರುಗಾಡಲು ಹೊರಟರು. ಕೆಲವರು ತಿರುಪತಿ, ಮೈಸೂರು, ಧರ್ಮಸ್ಥಳ ಮುಂತಾದ ಕ್ಷೇತ್ರಗಳಿಗೆ ಹೋಗಿ ಬಂದರು. ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬಂದು ಓದುತ್ತಿದ್ದ ವಿದ್ಯಾರ್ಥಿಗಳು ಮತ್ತು ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದ ಉಪನ್ಯಾಸಕರು ತಮ್ಮ ತಮ್ಮ ಊರುಗಳಿಗೆ ಹೊರಟರು. ಮಂಜುನಾಥ್‌ರವರೂ ಕೂಡ ತಮ್ಮ ತಂದೆ-ತಾಯಿಯರನ್ನು ನೋಡಲು ದಾವಣಗೆರೆಗೆ ಹೊರಟರು. ತಮ್ಮ ಬಂಧು ಬಳಗದವರು, ಗೆಳೆಯರು, ಮನೆಯ ಸುತ್ತ ಮುತ್ತಲಿನ ಗೆಳೆಯರು ಎಲ್ಲರನ್ನು ಭೇಟಿ ಮಾಡಿ ನಾಲ್ಕಾರು ದಿನ ಸಂತೋಷವಾಗಿ ಕಳೆದರು.

ಒಂದು ದಿನ ಕಾಲೇಜಿನ ಪ್ರಿನ್ಸಿಪಾಲರಿಂದ ಒಂದು ಕಾಗದ ಬಂದಿತು. ಈ ವರ್ಷದ ಬೇಸಿಗೆ ರಜಾದಿನಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ಸಮಾಜಸೇವಾ ಶಿಬಿರವನ್ನು ಏರ್ಪಡಿಸಬೇಕೆಂದು ವಿಶ್ವವಿದ್ಯಾಲಯದಿಂದ ಆದೇಶ ಬಂದಿದೆ. ಶಿಬಿರವನ್ನು ಎಲ್ಲಿ ನಡೆಸುವುದು ಯಾವಾಗ ನಡೆಸುವುದು ಎಂಬ ವಿಷಯಗಳನ್ನು ಚರ್‍ಚಿಸಲು ಒಂದು ಸಭೆ ಕರೆಯಲಾಗಿದೆ. ತಾವು ಈ ಕೆಳಗೆ ನಮೂದಿಸಿರುವ ದಿನಾಂಕ ಸಭೆಗೆ ತಪ್ಪದೆ ಹಾಜರಾಗಬೇಕೆಂದು ಆದೇಶಿಸಲಾಗಿದೆ ಎಂದು ತಿಳಿಸಿ ಪತ್ರ ಬರೆದಿದ್ದರು. ಮಂಜುನಾಥ್‌ರವರ ತಾಯಿಯವರಿಗೆ ಆರೋಗ್ಯ ಸರಿ ಇರಲಿಲ್ಲ. ಅವರನ್ನು ಆಗಾಗ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಈಗ ಶಿಬಿರದ ಬಗ್ಗೆ ಮೀಟಿಂಗ್ ಇದ್ದುದ್ದರಿಂದ ಕೂಡಲೇ ಬೆಂಗಳೂರಿಗೆ ಹೊರಟರು. ಮರುದಿನವೇ ಮೀಟಿಂಗ್ ಇತ್ತು. ಸುಮಾರು ಹತ್ತು ಜನ ಉಪನ್ಯಾಸಕರು, ಪ್ರಾಧ್ಯಾಪಕರು, ಉಪ ಪ್ರಿನ್ಸಿಪಾಲರು ಮತ್ತು ಪ್ರಿನ್ಸಿಪಾಲರು ಸಭೆಯಲ್ಲಿ ಭಾಗವಹಿಸಿದ್ದರು.

ಸಮಾಜ ಸೇವಾ ಶಿಬಿರವನ್ನು ಬೆಂಗಳೂರು ಜಿಲ್ಲೆಯ ಮಾಗಡಿ ಗ್ರಾಮದಲ್ಲಿ ನಡೆಸುವುದಾಗಿಯೂ, ಶಿಬಿರ ಹತ್ತುದಿನಗಳು ನಡೆಯುವುದೆಂದೂ, ಶಿಬಿರದಲ್ಲಿ ಶ್ರಮದಾನ, ಸೋಷಿಯೋ – ಎಕನಾಮಿಕ್ ಸರ್ವೆ, ಬಡ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದು, ಪ್ರತಿನಿತ್ಯ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚೆಗಳು, ಆಹ್ವಾನಿತ ವಿದ್ವಾಂಸರ ಭಾಷಣಗಳು ಇತ್ಯಾದಿ ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ವರ್ಷವಿಡೀ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಸುಮಾರು ಅರವತ್ತು ವಿದ್ಯಾರ್ಥಿಗಳಿಗೆ ಪತ್ರಗಳನ್ನು ಕಳಿಸಲಾಯಿತು.

ಒಂದು ದಿನವನ್ನು ಸೂಚಿಸಿ ಮೀಟಿಂಗ್ ಕರೆಯಲಾಯಿತು. ಕೇವಲ ಇಪ್ಪತ್ತೈದು ವಿದ್ಯಾರ್ಥಿಗಳು ಮತ್ತು ಆರು ಜನ ವಿದ್ಯಾರ್ಥಿನಿಯರು ಮಾತ್ರ ಮೀಟಿಂಗ್‌ಗೆ ಬಂದರು. ಶಿಬಿರಕ್ಕೆ ಬರಲು ಒಪ್ಪಿಗೆ ಪತ್ರ ಬರೆದುಕೊಟ್ಟು ಹೋದರು. ಮಂಜುನಾಥ್‌ರವರು ಶಿಭಿರಾಧಿಕಾರಿಗಳಾಗಿ ಜವಾಬ್ದಾರಿ ವಹಿಸಿಕೊಂಡರು. ವೇಣುಗೋಪಾಲ್ ಮತ್ತು ನಾಗೇಂದ್ರರಾವ್‌ರವರುಗಳು ಇವರ ಸಹಾಯಕರಾಗಿ ಬರಲು ಒಪ್ಪಿಕೊಂಡರು. ಮಹಿಳಾ ಉಪನ್ಯಾಸಕರ ಪರವಾಗಿ ಮೀರಾ ಮೇಡಂರವರು ಶಿಬಿರಕ್ಕೆ ಬರಲು ಒಪ್ಪಿಕೊಂಡರು. ಶಿಬಿರಕ್ಕೆ ಹೊರಡುವ ದಿನ ವಿದ್ಯಾರ್ಥಿಗಳ ಪೋಷಕರು ಕಾಲೇಜಿಗೆ ಬಂದು ತಮ್ಮ ಮಕ್ಕಳನ್ನು ಉಪನ್ಯಾಸಕರ ಜವಾಬ್ದಾರಿಗೆ ಒಪ್ಪಿಸಿ, ಹುಷಾರಾಗಿ ಹೋಗಿ ಬನ್ನಿ ಎಂದು ಬುದ್ಧಿ ಹೇಳಿ ಕಳಿಸಿಕೊಟ್ಟರು. ಪ್ರಿನ್ಸಿಪಾಲರು ಮತ್ತು ಹಲವಾರು ಶಿಕ್ಷಕರು ಬಂದು ಇವರುಗಳಿಗೆ ಶುಭ ಕೋರಿ ಕಳಿಸಿಕೊಟ್ಟರು. ವಿಶ್ವವಿದ್ಯಾಲಯದವರು ಒಂದು ಬಸ್ಸನ್ನು ಕಳಿಸಿಕೊಟ್ಟರು. ಅತ್ಯಂತ ಉತ್ಸಾಹದಿಂದ ವಿದ್ಯಾರ್ಥಿಗಳು ಮಾಗಡಿ ಗ್ರಾಮ ತಲುಪಿದರು. ಒಂದು ಶಾಲಾ ಕಟ್ಟಡದಲ್ಲಿ ಇವರುಗಳಿಗೆ ತಂಗಲು ವಸತಿ ಕಲ್ಪಿಸಲಾಗಿತ್ತು. ಗಂಡು ಮಕ್ಕಳಿಗೆ ಎರಡು ಕೊಠಡಿಗಳು ಹೆಣ್ಣು ಮಕ್ಕಳಿಗೆ ಒಂದು ಕೊಠಡಿ, ಶಿಬಿರದ ಕಛೇರಿಗೆ ಒಂದು ಕೊಠಡಿ, ಅಡುಗೆ ಮನೆಗೆ ಒಂದು ಕೊಠಡಿ, ಬೆಂಗಳೂರಿನಿಂದ ಬಂದ ಈ ಶಿಬಿರಾರ್ಥಿಗಳನ್ನು ಗ್ರಾಮದ ಛೇರ್ಮನ್ನರು ಪಂಚಾಯಿತಿಯ ಇತರೆ ಸದಸ್ಯರು ಗ್ರಾಮದ ಹಿರಿಯರು ಮತ್ತು ಗ್ರಾಮದ ಯುವಕರು ಬಂದು ಭೇಟಿ ಮಾಡಿ ತಮ್ಮ ಕಡೆಯಿಂದ ಎಲ್ಲಾ ರೀತಿಯ ಸಹಾಕಾರ ಕೊಡುವುದಾಗಿ ತಿಳಿಸಿದರು. ಗ್ರಾಮದವರೇ ಆದ ಇಬ್ಬರು ಅಡುಗೆ ಭಟ್ಟರು ಬಂದು ಇವರ ಶಿಬಿರದಲ್ಲೇ ಉಳಿದು ವಿದ್ಯಾರ್ಥಿಗಳಿಗೆ ಪ್ರತಿದಿನ ಕಾಫಿ, ತಿಂಡಿ, ಊಟ ಎಲ್ಲಾ ತಯಾರು ಮಾಡುತ್ತಿದ್ದರು. ಆದರೆ ತರಕಾರಿಗಳನ್ನು ಹೆಚ್ಚುವುದು, ಊಟ ಬಡಿಸುವುದು, ಚಪಾತಿ ಲಟ್ಟಿಸುವುದು, ಪಾತ್ರೆಗಳನ್ನು ತೊಳೆಯುವುದು ಮುಂತಾದ ಕೆಲಸಗಳನ್ನು ವಿದ್ಯಾರ್ಥಿಗಳೇ ಮಾಡಬೇಕಾಗಿತ್ತು. ಆರು ಜನ ಹುಡುಗರು ಮತ್ತು ಒಂದು ಹುಡುಗಿಯ ಒಂದು ತಂಡಕ್ಕೆ ಒಂದು ದಿನದ ಅಡುಗೆ ಡ್ಯೂಟಿ ಇರುತ್ತಿತ್ತು. ಮರುದಿನ ಅಡುಗೆ ಡ್ಯೂಟಿ ಇರುವ ವಿದ್ಯಾರ್ಥಿಗಳು ಮೊದಲನೆಯ ದಿನ ರಾತ್ರಿಯೆ ಅಡುಗೆ ಕೋಣೆಗೆ ಹೋಗಿ ಅಲ್ಲಿಯೇ ಮಲಗಬೇಕು. ಮರುದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಎಲ್ಲರಿಗೂ ಕಾಫಿ, ತಿಂಡಿ ರೆಡಿ ಮಾಡಬೇಕು. ಕಾಫಿ, ತಿಂಡಿ, ಮತ್ತು ಊಟಕ್ಕೆ ಎಲ್ಲರೂ ಪ್ರಾರ್ಥನಾ ಮಂದಿರದಲ್ಲಿ ಸೇರಬೇಕು. ಪ್ರಾರ್ಥನೆ, ಸಭೆ, ತಿಂಡಿ, ಕಾಫಿ ಎಲ್ಲಾ ಮುಗಿಸಿ ಶ್ರಮದಾನಕ್ಕೆ ಹೋಗಬೇಕು. ಇವರ ಕಾಲೇಜಿನ ವತಿಯಿಂದ, ಗ್ರಾಮದ ಸರಕಾರಿ ಶಾಲೆಗೆ ನಾಲ್ಕು ಶೌಚಾಲಯಗಳನ್ನು ಕಟ್ಟುವ ಯೋಚನೆ ಹಾಕಿಕೊಳ್ಳಲಾಯಿತು. ಗ್ರಾಮದ ರೈತರು, ವ್ಯಾಪಾರಿಗಳು ಮತ್ತು ದೇವಾಲಯದ ಧರ್ಮಕರ್ತರು, ಶೌಚಾಲಯಗಳನ್ನು ಕಟ್ಟಲು ಬೇಕಾಗುವ ಕಲ್ಲು, ಇಟ್ಟಿಗೆ, ಸಿಮೆಂಟ್, ಮರಳು, ಜಲ್ಲಿಕಲ್ಲು, ವಾಷ್ ಬೇಸಿನ್‌ಗಳು, ಕಮೋಡುಗಳು, ಬಾಗಿಲುಗಳು ಎಲ್ಲವನ್ನೂ ದಾನವಾಗಿ ಕೊಟ್ಟರು. ಒಬ್ಬ ಮೇಸ್ತ್ರಿ ಮತ್ತು ಇಬ್ಬರು ಗಾರೆ ಕೆಲಸದವರು ಬಂದು ಯಾವ್ಯಾವ ಕೆಲಸ ಹೇಗೆ ಮಾಡಬೇಕು ಎಂದು ಮಾರ್ಗದರ್ಶನ ಮಾಡುತ್ತಿದ್ದರು. ಎಲ್ಲಾ ಕೆಲಸಗಳನ್ನು ಬೆಂಗಳೂರಿನಿಂದ ಬಂದ ವಿದ್ಯಾರ್ಥಿಗಳಿಂದಲೇ ಮಾಡಿಸುತ್ತಿದ್ದರು. ಕಡೆಗೆ ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್ ಮತ್ತು ಕಾರ್ಪೆಂಟರ್‌ಗಳು ಬಂದು ಕೆಲಸ ಮುಗಿಸಿಕೊಟ್ಟರು. ಶಿಬಿರದ ಕೊನೆಯ ದಿನ ಇವರ ಕಾಲೇಜಿನ ಪ್ರಿನ್ಸಿಪಾಲರು ಆಗಮಿಸಿ, ತಮ್ಮ ವಿದ್ಯಾರ್ಥಿಗಳು ಕೈಯಾರ ಕಟ್ಟಿದ ಶೌಚಾಲಯ ಸಂಕೀರ್ಣವನ್ನು ಗ್ರಾಮದ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.

ಮತ್ತೊಂದು ತಂಡದ ವಿದ್ಯಾರ್ಥಿಗಳು ಮಾಗಡಿ ಮತ್ತು ಸುತ್ತಮುತ್ತಲ ಗ್ರಾಮಗಳ ಮನೆ ಮನೆಗೆ ತೆರಳಿ ಸಾಮಾಜಿಕ ಮತ್ತು ಆರ್ಥಿಕ ಸರ್ವೇ ನಡೆಸಿದರು. ಮತ್ತೊಂದು ತಂಡದ ವಿದ್ಯಾರ್ಥಿಗಳು, ಕಾಗದ, ಪುಸ್ತಕ ಮತ್ತು ಪೆನ್ಸಿಲುಗಳನ್ನು ತೆಗೆದುಕೊಂಡು ಗ್ರಾಮದ ಮನೆ ಮನೆಗೆ ತೆರಳಿ ರೈತರಿಗೆ ಮತ್ತು ರೈತಾಪಿ ಕುಟುಂಬದ ಎಲ್ಲರಿಗೂ ಸಾಕ್ಷರತೆಯ ಬಗ್ಗೆ ತಿಳಿಸಿ ಹೇಳಿ ಕನಿಷ್ಠ ಅವರವರ ಹಸ್ತಾಕ್ಷರವನ್ನಾದರೂ ಮಾಡಲು ಕಲಿಯಬೇಕು, ಹೆಬ್ಬೆಟ್ಟು ಒತ್ತುವುದು ತೀರಾ ನಾಚಿಕೆಯ ವಿಷಯ ಎಂದು ಹೇಳಿ, ಸಹಿ ಮಾಡುವುದನ್ನು ಕಲಿಸಿದರು.

ಕಾಲೇಜಿನ ವತಿಯಿಂದ ಅಂಗವಿಕಲರಿಗೆ ಹತ್ತು ಜೊತೆ ಕಂಕುಳಲ್ಲಿಟ್ಟು ನಡೆಯುವ ಕ್ರೆಚೆಸ್ ಮತ್ತು ನಾಲ್ಕು ಜೊತೆ ವಾಕರ್‌ಗಳನ್ನು ಮತ್ತು ಅಂಧರಿಗೆ ವಿಶೇಷವಾದ ಮಡುಚುವ ಕೋಲುಗಳನ್ನು ಕಪ್ಪು ಕನ್ನಡಕಗಳನ್ನೂ ಉಡುಗೊರೆಯಾಗಿ ಕೊಡಲಾಯಿತು. ಶಿಬಿರ ನಡೆಯುವ ಕಾಲದಲ್ಲಿ ಪ್ರತಿದಿನ ಸಂಜೆ ಸಂಗೀತ, ಭಜನೆ, ಚರ್ಚೆಗಳು, ಹಾಡುಗಾರಿಕೆ, ವೃಂದಗಾನ, ನಾಟಕ, ಹರಿಕಥೆ ಮುಂತಾದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದವು. ಶಿಬಿರದ ಮುಕ್ತಾಯದ ದಿನ ವಿಶ್ವವಿದ್ಯಾಲಯದ ಉಪಕುಲಪತಿಗಳು ಆಗಮಿಸಿ, ಶಿಬಿರದಲ್ಲಿ ಭಾಗವಹಿಸಿದ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಈ ವರ್ಷದ ಸಮಾಜ ಸೇವಾ ಶಿಬಿರ ಬಹಳ ಯಶಸ್ವಿಯಾಗಿ ಕೊನೆಗೊಂಡದ್ದಕ್ಕೆ ಕಾಲೇಜಿನ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಪ್ರಿನ್ಸಿಪಾಲರಿಗೆ ಮತ್ತು ಗ್ರಾಮಸ್ಥರಿಗೆ ಎಲ್ಲರಿಗೂ ಬಹಳ ಸಂತೋಷವಾಗಿತ್ತು. ಹೃದಯತುಂಬಿ ಬಂದು ಎಲ್ಲರೂ ಗ್ರಾಮಸ್ಥರಿಗೆ ವಿದಾಯ ಹೇಳಿ ಬೆಂಗಳೂರಿಗೆ ಹೊರಟರು. ದಾರಿಯುದ್ದಕ್ಕೂ ವಿದ್ಯಾರ್ಥಿಗಳು ಹಾಡುತ್ತಾ ನಲಿಯುತ್ತಾ ಪ್ರಯಾಣ ಮಾಡಿದರು. ಕಾಲೇಜು ತಲುಪುವ ವೇಳೆಗೆ ಪ್ರಿನ್ಸಿಪಾಲರು ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ, ಇಡ್ಲಿ, ವಡೆ ಮತ್ತು ಕಾಫಿ ತರಿಸಿಕೊಟ್ಟರು. ಕೆಲವು ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯಲು ಕಾಲೇಜಿಗೆ ಬಂದು ಕಾಯುತ್ತಿದ್ದರು. ಶಿಬಿರದ ಸವಿ ನೆನಪಿನ ಗುಂಗಿನಲ್ಲಿದ್ದ ವಿದ್ಯಾರ್ಥಿಗಳಿಗೆ ಮನೆಗೆ ಹೋಗುವ ಆತುರವೇ ಇಲ್ಲ. ಎಷ್ಟೋ ಹೊತ್ತು ಕಾಲೇಜಿನಲ್ಲಿಯೇ ಇದ್ದು ನಿಧಾನವಾಗಿ ಮನೆಗೆ ತೆರಳಿದರು.

ಮಂಜುನಾಥರವರು ಹಾಸ್ಟೆಲಿನ ತಮ್ಮ ಕೊಠಡಿಗೆ ಹೋಗಿ ತಮ್ಮ ಕಿಟ್ ಬ್ಯಾಗನ್ನು ಇಟ್ಟು ಬರಲು ಹೋದರು. ಆಗ ಅವರಿಗೊಂದು ಅಚ್ಚರಿ ಕಾದಿತ್ತು. ನಾಲ್ಕು ದಿನಗಳ ಹಿಂದೆಯೇ ಅವರಿಗೊಂದು ಟಿಲಿಗ್ರಾಂ ಬಂದಿತ್ತು. ತಾಯಿಯವರಿಗೆ ಹುಷಾರಿಲ್ಲ ಕೂಡಲೇ ಹೊರಡುವು ಎಂದಿತ್ತು. ತಾನೆ ಹತ್ತು ದಿನಗಳ ಶಿಬಿರ ಮುಗಿಸಿ ಸುಸ್ತಾಗಿ ಬಂದಿದ್ದರು. ಇನ್ನು ಕೂಡಲೇ ಮುರ್‍ನಾಲ್ಕು ಗಂಟೆಗಳ ಪ್ರಯಾಣ ಮಾಡಬೇಕೆ? ಯಾವುದಕ್ಕೂ ಮನೋಹರನ ಜೊತೆ ಈ ವಿಷಯ ಸ್ವಲ್ಪ ಚರ್ಚೆ ಮಾಡೋಣವೆಂದು ತಮ್ಮ ಕೊಠಡಿಯಿಂದ ಹೊರಬಂದರು. ವಿದ್ಯಾರ್ಥಿಗಳು ಅಲ್ಲಲ್ಲಿ ನಿಂತು ಮಾತನಾಡುತ್ತಿದ್ದರು. ಮಂಜುನಾಥ್‌ರವರನ್ನು ಕಂಡು ನಾಲ್ಕೈದು ವಿದ್ಯಾರ್ಥಿಗಳು ಇವರ ಬಳಿಗೆ ಬಂದರು. ಅದರಲ್ಲಿ ಮನೋಹರ, ಶ್ರೀನಾಥ, ಮಂಜುಳ, ಮಂಜುಶ್ರೀ ಎಲ್ಲರೂ ಇದ್ದರು. ಮಂಜುನಾಥ್‌ರವರು ತಮ್ಮ ತಾಯಿಯ ಅನಾರೋಗ್ಯದ ವಿಷಯ ಮತ್ತು ತತ್ಸಂಬಂಧವಾಗಿ ಬಂದಿರುವ ಟೆಲಿಗ್ರಾಂನ ಬಗ್ಗೆ ಹೇಳಿದಾಗ ಮನೋಹರ್ ಹೇಳಿದ; “ಸಾರ್ ಇವತ್ತು ತಾನೆ ಸಮಾಜ ಸೇವಾ ಶಿಬಿರ ಮುಗಿಸಿ ಬಂದಿದ್ದೇವೆ. ಈದಿನ ಮನೆಗೆ ಹೋಗಿ ಆರಾಮ ಮಾಡಿ, ನಾಳೆ ಬಂದು ನಿಮ್ಮನ್ನು ಭೇಟಿಯಾಗುತ್ತೇವೆ. ನೀವೂ ಕೂಡ ಇವತ್ತು ರಾತ್ರಿ ಸ್ವಲ್ಪ ಆರಾಮ ಮಾಡಿರಿ. ನಾಳೆ ಬೆಳಿಗ್ಗೆ ನಾವೆಲ್ಲರೂ ದಾವಣಗೆರೆಗೆ ಹೋಗೋಣ ಸರೀನಾ, ಏನಪ್ಪಾ ನೀವುಗಳೂ ಬರ್‍ತೀರಾ ತಾನೇ?” ಎಂದು ತನ್ನ ಗೆಳೆಯರ ಕಡೆ ನೋಡಿದ. “ಆಗಲಿ ಬರೀವಿ” ಎಂಬಂತೆ ಅವರೆಲ್ಲರೂ ತಲೆ ಅಲ್ಲಾಡಿಸಿದರು. ಮಂಜುಶ್ರೀ ಮಾತ್ರ ನಾನು ಮನೆಗೆ ಹೋಗಿ ನಮ್ಮ ತಂದೆ ತಾಯಿಯವರನ್ನು ಒಂದು ಮಾತು ಕೇಳಿ ಹೇಳ್ತೀನಿ.” ಎಂದಳು. ಎಲ್ಲಾ ವಿದ್ಯಾರ್ಥಿಗಳೂ ತಮ್ಮ ತಮ್ಮ ಮನೆಗಳಿಗೆ ಹೋಗಿ ಆರಾಮ ಮಾಡಿದರು.

ಮರುದಿನ ಬೆಳಿಗ್ಗೆ ಒಂಭತ್ತು ಗಂಟೆಗೆ ಸರಿಯಾಗಿ ಮಂಜುಳ, ಮಂಜುಶ್ರೀ, ಶ್ರೀನಾಥ ಮತ್ತು ಮನೋಹರ ಕಾಲೇಜು ಹಾಸ್ಟೆಲಿಗೆ ಬಂದು ಮಂಜುನಾಥ್ ಸರ್ ಅವರ ಕೋಣೆಗೆ ಬಂದರು. ಎಲ್ಲರೂ ಹಾಸ್ಟೆಲಿನಲ್ಲಿ ತಿಂಡಿ ತಿಂದು ಬಸ್ ನಿಲ್ದಾಣಕ್ಕೆ ಹೋದರು. ಮನೆ ತಲುಪುವ ವೇಳೆಗೆ ಸಂಜೆ ಆರೂವರೆಯಾಗಿತ್ತು. ಮಂಜುನಾಥ್ ರವರ ತಂದೆ ಶಿವಪ್ಪನವರೇ ಎಲ್ಲರಿಗೂ ಚಹಾ ಮಾಡಿಕೊಟ್ಟರು. ತಾಯಿ ಗೌರಮ್ಮನವರು ಹಾಸಿಗೆಯಿಂದ ಎದ್ದು ನಿಧಾನವಾಗಿ ನಡೆದು ಬಂದು ಸೋಫಾದ ಮೇಲೆ ಕುಳಿತರು. ಮಂಜುನಾಥ್‌ರವರು ತಮ್ಮ ವಿದ್ಯಾರ್ಥಿಗಳನ್ನು ತಮ್ಮ ತಂದೆ ತಾಯಿಯವರಿಗೆ ಪರಿಚಯ ಮಾಡಿಕೊಟ್ಟರು. ಮಂಜುಶ್ರೀ ಗೌರಮ್ಮನವರ ಪಕ್ಕದಲ್ಲಿ ಕುಳಿತು ಅವರ ಕೈ ಹಿಡಿದುಕೊಂಡು ಹೇಳಿದಳು.

“ಅಮ್ಮ ನಾವೆಲ್ಲರೂ ನಿಮ್ಮ ಮಕ್ಕಳಿದ್ದಂತೆ. ಇಂದಿನಿಂದ ನಾವು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ನಾನೇ ಎಲ್ಲರಿಗೂ ಅಡುಗೆ ಮಾಡಿ, ಊಟ ಬಡಿಸುತ್ತೇನೆ. ಮಂಜುಳ, ಶ್ರೀನಾಥ, ಮನೋಹರ ಎಲ್ಲರೂ ನಿಮ್ಮ ಸೇವೆ ಮಾಡುತ್ತಾರೆ. ನೀವು ಸಂಪೂರ್ಣ ಆರೋಗ್ಯವಂತರಾದ ಮೇಲೆ ನಾವುಗಳು ಬೆಂಗಳೂರಿಗೆ ಹಿಂತಿರುಗುತ್ತೇವೆ” ಎಂದಳು. ಗೌರಮ್ಮನವರು ಅಶ್ರು ತುಂಬಿದ ಕಣ್ಗಳಿಂದ, ಆಗಲಿ ತಾಯಿ ಎಂದು ತಮ್ಮ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಮಂಜುನಾಥರವರು ಒಂದು ಕೋಣೆಯನ್ನು ಹೆಣ್ಣು ಮಕ್ಕಳಿಗೆ ಬಿಟ್ಟುಕೊಟ್ಟರು. ಮತ್ತೊಂದು ಕೋಣೆಯಲ್ಲಿ ತಾವು, ತಮ್ಮ ತಂದೆಯವರು, ಮನೋಹರ ಮತ್ತು ಶ್ರೀನಾಥ ಮಲಗುವುದಾಗಿ ಹೇಳಿದರು.

ಮರುದಿನ ಮಂಜುನಾಥರವರು ತಮ್ಮ ತಾಯಿಯವರನ್ನು ಒಂದು ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಹೊರಟರು. ಮಂಜುಶ್ರೀ ಕೂಡಾ ಅವರ ಜೊತೆಗೆ ಹೊರಟಳು. ಮತ್ತೊಂದು ಆಟೋರಿಕ್ಷಾದಲ್ಲಿ ಮನೋಹರ ಮತ್ತು ಶ್ರೀನಾಥ ಕೂಡಾ ಹೊರಟರು. ಮಂಜುಳ, ತಂದೆಯವರ ಜೊತೆಗೆ ಮನೆಯಲ್ಲಿಯೇ ಉಳಿದಳು. ಆಸ್ಪತ್ರೆಯಲ್ಲಿ ವೈದ್ಯರು, ಗೌರಮ್ಮನವರ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಕಫದ ಪರೀಕ್ಷೆ ಎಲ್ಲಾ ಮಾಡಿದರು. ಎಕ್ಸ್‌ರೇ ತೆಗೆಸಿದರು. ಸುದೀರ್ಘವಾದ ಪರೀಕ್ಷೆಗಳಾದ ಮೇಲೆ ತಕ್ಷಣಕ್ಕೆ ಒಂದೆರಡು ಮಾತ್ರೆಗಳನ್ನು ಬರೆದುಕೊಟ್ಟರು. ನಾಳೆ ರಕ್ತ ಪರೀಕ್ಷೆಯ ಫಲಿತಾಂಶಗಳು ಬಂದ ಬಳಿಕ ಇನ್ನುಳಿದ ಟ್ರೀಟ್‌ಮೆಂಟ್ ಆರಂಭಿಸುವುದಾಗಿ ಹೇಳಿದರು. ಅಂದಿನಿಂದ ಮಂಜುಶ್ರೀ ಮತ್ತು ಮಂಜುಳ ಅಡುಗೆ ಮಾಡಿ ಬಡಿಸುತ್ತಿದ್ದರು. ನಾಲ್ಕು ದಿನಗಳಲ್ಲಿ ಗೌರಮ್ಮನವರು ಎಷ್ಟೋ ಚೇತರಿಸಿಕೊಂಡರು. ಒಂದು ವಾರದ ಬಳಿಕ ಮನೋಹರ ಮತ್ತು ಶ್ರೀನಾಥ ಬೆಂಗಳೂರಿಗೆ ಹೊರಟರು, ಇನ್ನೆರಡು ದಿನಗಳ ಬಳಿಕ ಮಂಜುಶ್ರೀ ಮತ್ತು ಮಂಜುಳ ಬೆಂಗಳೂರಿಗೆ ಹೊರಟರು. ಮಂಜುನಾಥ ಸರ್ ಮತ್ತು ಅವರ ತಂದೆ ತಾಯಿಯವರು ಈ ನಾಲ್ಕು ಜನ ವಿದ್ಯಾರ್ಥಿಗಳಿಗೆ ತಮ್ಮ ಮನದಾಳದಿಂದ ಕೃತಜ್ಞತೆಗಳನ್ನು ಅರ್ಪಿಸಿ ತಮ್ಮ ಆಶೀರ್ವಾದಗಳನ್ನು ಕೊಟ್ಟರು ತಾಯಿಯವರು ಸಂಪೂರ್ಣ ಆರೋಗ್ಯವಾಗಿ ತಮ್ಮ ಮನೆಯ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಮಟ್ಟಿಗೆ ಚೇತರಿಸಿಕೊಂಡ ಮೇಲೆ ಮಂಜುನಾಥರವರೂ ಬೆಂಗಳೂರಿಗೆ ಹೊರಟರು.

ವಾರ್ಷಿಕ ಪರೀಕ್ಷೆಗಳ ಫಲಿತಾಂಶಗಳು ಹೊರಬಿದ್ದವು. ಎಲ್ಲೋ ಒಂದೆರಡು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಕಿರಿಯ ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ಹೋದರು. ಅಂತಿಮ ವರ್ಷದ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪದವೀಧರರಾದರು. ಕೆಲವರು ಮಾತ್ರ ಸ್ನಾತಕೋತ್ತರ ಪದವಿ ಪಡೆಯಲು ವಿಶ್ವವಿದ್ಯಾಲಯ ಸೇರಿದರು. ಹೆಚ್ಚಿನ ವಿದ್ಯಾರ್ಥಿಗಳು ಬ್ಯಾಂಕುಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಮತ್ತು ಖಾಸಗಿ ಕಂಪನಿಗಳಲ್ಲಿ ನೌಕರಿಗಳಿಗೆ ಪ್ರಯತ್ನಿಸ ತೊಡಗಿದರು. ಎಷ್ಟೋ ದಿನಗಳ ಕಾಲ ತಮ್ಮ ಸಹಪಾಠಿಗಳ ಜೊತೆ ಹಾಗೂ ಉಪಾಧ್ಯಾಯರುಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದರು. ಬರುಬರುತ್ತಾ ಸಂಪರ್ಕಗಳು ಕಡಿಮೆಯಾಗುತ್ತಾ ಹೋದವು. ಉಪಾಧ್ಯಾಯರು ಹಳೆಯ ವಿದ್ಯಾರ್ಥಿಗಳನ್ನು ಮರೆಯಲಿಲ್ಲ. ಆದರೆ ಈಗಿನ ವಿದ್ಯಾರ್ಥಿಗಳ ಜೊತೆ ಹೆಚ್ಚು ಬೆರೆಯುತ್ತಿದ್ದರು. ಮನೋಹರ ಮತ್ತು ಅವನ ಗೆಳೆಯರು ಕೆಲಸಗಳಿಗೆ ಸೇರಿ ಜೀವನದಲ್ಲಿ ಸೆಟ್ಲ್ ಆಗತೊಡಗಿದರು. ಮನೋಹರ ಒಂದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಎರಡು ವರ್ಷಗಳ ಕಾಲ ಕೆಲಸ ಮಾಡಿ ಹಣ ಸಂಪಾದಿಸಿದ. ತನ್ನ ತಂದೆ ತಾಯಿಯರಿಗೆ ಮನೆ ಖರ್ಚಿಗೆಂದು ತಿಂಗಳು ತಿಂಗಳು ಸ್ವಲ್ಪ ಹಣ ಕೊಡುತ್ತಾ ಇದ್ದ. ತನಗಾಗಿ ಸ್ವಲ್ಪ ಹಣ ಕೂಡಿಸಿಟ್ಟುಕೊಂಡ. ಎರಡು ವರ್ಷಗಳಾದ ಮೇಲೆ ಆ ನೌಕರಿ ಬಿಟ್ಟು ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ, ತರಗತಿಗೆ ಸೇರಿದ, ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣನಾದ. ಮುಂಬೈ ಮೂಲದ ಒಂದು ಕಂಪನಿಯಲ್ಲಿ ಕೆಲಸ ಸಿಕ್ಕಿತು. ಕೂಡಲೇ ಟ್ರೈನಿಂಗ್‌ಗಾಗಿ ಮುಂಬೈಗೆ ತೆರಳಿದ. ತರಬೇತಿಯ ನಂತರ ಅವನಿಗೆ ಹೈದರಾಬಾದಿನ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ವರ್ಗವಾಯಿತು. ಎರಡು ವರ್ಷಗಳ ನಂತರ ಹೈದರಾಬಾದಿನಲ್ಲಿ ಒಂದು ಅಪಾರ್ಟ್‌ಮೆಂಟ್ ಕೊಂಡುಕೊಂಡ. ಬೆಂಗಳೂರಿನ ಮನೆಯನ್ನು ಖಾಲಿ ಮಾಡಿ ತಂದೆ-ತಾಯಿಯರನ್ನೂ ಹೈದರಾಬಾದಿಗೆ ಕರೆದುಕೊಂಡು ಹೋದ, ತೆಲುಗು ಮತ್ತು ಉರ್ದು ಭಾಷೆಗಳನ್ನು ಚೆನ್ನಾಗಿ ಮಾತನಾಡಲು ಕಲಿತ, ನಿಧಾನವಾಗಿ ಹೈದರಾಬಾದಿನವನೇ ಆಗಿಬಿಟ್ಟ. ಮನೋಹರನ ತಂದೆತಾಯಿ ಅವನನ್ನು ವಿವಾಹವಾಗಲು ಬಲವಂತ ಮಾಡುತ್ತಿದ್ದರು. ಆದರೆ ಅವರ ಇಚ್ಛೆ, ಅವನು ಕರ್ನಾಟಕದ ಅದರಲ್ಲಿಯೂ ಬೆಂಗಳೂರಿನ, ಅದರಲ್ಲಿಯೂ ತಮ್ಮ ಜಾತಿಯ ಹುಡುಗಿಯನ್ನೇ ಮದುವೆಯಾಗು ಎಂದು ಹೇಳುತ್ತಿದ್ದರು. ಹೀಗಿರುವಾಗ, ಇವರ ಬಳಗದವರೇ ಆದ ವಿರೂಪಾಕ್ಷಯ್ಯನವರು ಒಮ್ಮೆ ಹೈದರಾಬಾದಿನ ಇವರ ಮನೆಗೆ ಬಂದರು. ತಮ್ಮ ಸಂಬಂಧದ ಇಬ್ಬರು ಹುಡುಗಿಯರ ಜಾತಕ ಮತ್ತು ಫೋಟೋ ತಂದು ಕೊಟ್ಟರು. ಮನೋಹರನ ತಾಯಿ ಆ ಜಾತಕಗಳನ್ನು ಮತ್ತು ಫೋಟೋಗಳನ್ನು ತೆಗೆದುಕೊಂಡರು. ಜೋಯಿಸರಿಗೆ ತೋರಿಸಿ, ಯಾವ ಹುಡುಗಿಯ ಜಾತಕ ಮನೋಹರನ ಜಾತಕಕ್ಕೆ ಚೆನ್ನಾಗಿ ಹೊಂದುತ್ತದೋ ಆ ಹುಡುಗಿಯನ್ನು ಅವಳ ತಂದೆತಾಯಿಯರನ್ನು ಕರೆಸೋಣವಂತೆ ಎಂದರು. “ಇನ್ನು ನೀವು ಸ್ವಲ್ಪ ಹೊತ್ತು ಆರಾಮ ಮಾಡಿರಿ, ನಮ್ಮ ಮನು ಮನೆಗೆ ಬಂದ ಮೇಲೆ ಮದುವೆಯ ವಿಷಯ ಮಾತಾಡೋಣ” ಎಂದರು.

ಮನೋಹರ್ ರಾತ್ರಿ ಎಂಟು ಗಂಟೆಗೆ ಬಂದ. ಬಂದವನೇ ಕೈ ಕಾಲು ತೊಳೆದು ಕೊಂಡು, ಬಟ್ಟೆ ಬದಲಾಯಿಸಿ ಟಿ.ವಿ. ಆನ್ ಮಾಡಿ ಕುಳಿತ. ಅಮ್ಮ ಚಹಾ ತಂದುಕೊಟ್ಟರು, ಮತ್ತು ವಿರೂಪಾಕ್ಷಯ್ಯನವರು ಬಂದಿರುವ ವಿಷಯ ತಿಳಿಸಿದರು. ಇವರ ಮಾತು ಕೇಳಿ, ಒಳಗೆ ಮಲಗಿದ್ದ ವಿರೂಪಾಕ್ಷಯ್ಯನವರು ಎದ್ದು ಬಂದರು. ಅದೇ ಸಮಯಕ್ಕೆ ತಿರುಗಾಡಲು ಹೋಗಿದ್ದ ಮನೋಹರನ ತಂದೆ ಶಿವಲಿಂಗಪ್ಪನವರೂ ಬಂದರು. ತಾಯಿಯವರು, ವಿರೂಪಾಕ್ಷಯ್ಯನವರು ತಂದಿದ್ದ ಎರಡು ಹುಡುಗಿಯರ ಫೋಟೋಗಳನ್ನು ಮತ್ತು ಜಾತಕಗಳನ್ನೂ ಇವನ ಕೈಗೆ ಕೊಟ್ಟರು. “ನಿನಗೆ ಯಾವ ಹುಡುಗಿ ಇಷ್ಟವಾಗಿದೆ ಹೇಳು. ಆ ಹುಡುಗಿಯ ಜಾತಕವನ್ನು ಜೋಯಿಸರಿಗೆ ತೋರಿಸಿ ಜಾತಕ ಸರಿ ಹೊಂದಿದರೆ, ಹುಡುಗಿಯನ್ನು, ಅವಳ ತಂದೆ-ತಾಯಿಯರನ್ನು ಕರೆದುಕೊಂಡು ಬರೋದಕ್ಕೆ ಹೇಳ್ತೀನಿ” ಎಂದರು. ಮನೋಹರ ಎರಡೂ ಫೋಟೋಗಳನ್ನು ಮತ್ತು ಜಾತಕಗಳನ್ನೂ ನೋಡಿದ. ಒಂದು ಹುಡುಗಿಯ ಫೋಟೋ ನೋಡಿ ಒಂದು ಕ್ಷಣ ಆಶ್ಚರ್ಯ ಚಕಿತನಾದ ಮತ್ತು ಮುಗುಳು ನಕ್ಕ. ಆ ಫೋಟೋವನ್ನು ತಾಯಿಯ ಕೈಗೆ ಕೊಟ್ಟು, “ಈ ಹುಡುಗಿ ನನಗೆ ಇಷ್ಟವಾಗಿದ್ದಾಳೆ. ಇವಳ ತಂದೆ ತಾಯಿಯರನ್ನು ಕರೆಸಿ, ನಾನು ಇವಳನ್ನು ಮದುವೆ ಆಗೋದಕ್ಕೆ ಒಪ್ಪಿಕೊಂಡಿದ್ದೀನಿ” ಎಂದನು. ಅವನ ತಾಯಿಯವರಿಗೆ ಇವನ ಆತುರದ ನಿರ್ಧಾರ ಇಷ್ಟವಾಗಲಿಲ್ಲ.

“ಆತುರ ಪಡಬೇಡ ಮನು, ಇಬ್ಬರನ್ನೂ ನೋಡು, ಯಾವ ಹುಡುಗಿಯ ಜಾತಕ ನಿನ್ನ ಜಾತಕದೊಂದಿಗೆ ಸರಿಹೊಂದುವುದೋ ಅವರನ್ನು ಕರೆಸೋಣ.

ಆದರೆ ಮನೋಹರ ನಿರ್ಧರಿಸಿಬಿಟ್ಟಿದ್ದ. ಖಡಾಖಂಡಿತವಾಗಿ ಹೇಳಿಬಿಟ್ಟ.

“ಇಲ್ಲಮ್ಮ ಬೇರೆ ಯಾವ ಹುಡುಗಿಯನ್ನು ನೋಡುವುದು ಬೇಡ. ನಾನು ಈ ಹುಡುಗಿ, ಮಂಜುಳನ್ನೇ ಮದುವೆ ಆಗ್ತಿನಿ. ಇನ್ನು ಜಾತಕ, ಕುಂಡಲಿ ನೋಡೋದು ಅವೆಲ್ಲಾ ಬೇಡ. ನನಗೆ ಅದರಲೆಲ್ಲಾ ನಂಬಿಕೆಯಿಲ್ಲ. ಹುಡುಗ ಹುಡುಗಿ ಆರೋಗ್ಯವಾಗಿದ್ದರೆ ಸಾಕು.

“ಸ್ವಾಮಿ, ತಾವು ಮತ್ತೆ ಬೆಂಗಳೂರಿಗೆ ಹೋಗಿ, ಅವರನ್ನು ಕರೆದುಕೊಂಡು ಬರೋದು ಬೇಡ. ಫೋನುಮಾಡಿ ಅವರನ್ನೇ ಕರೆಸಿ, ನೀವು ನಾಲ್ಕು ದಿನ ನಮ್ಮ ಮನೆಯಲ್ಲೇ ಇದ್ದು ಮದುವೆ ನಿಶ್ಚಯ ಮಾಡಿಯೇ ಬೆಂಗಳೂರಿಗೆ ಹೋಗೂವ್ರಂತೆ” ಎಂದು ಮುಗುಳ್ನಕ್ಕ.

ಸ್ವಲ್ಪ ಹೊತ್ತಿಗೆ ವಿರೂಪಾಕ್ಷಯ್ಯನವರು ಮಂಜುಳ ಎಂಬ ಹುಡುಗಿಯ ತಂದೆ ಚಂದ್ರಶೇಖರರವರಿಗೆ ಫೋನ್ ಮಾಡಿ, ನಾಳೆಯೇ ತಮ್ಮ ಪತ್ನಿ ಮತ್ತು ಪುತ್ರಿಯನ್ನು ಕರೆದುಕೊಂಡು ಹೈದರಾಬಾದಿಗೆ ಬರಬೇಕೆಂದು ತಿಳಿಸಿದರು.

ಚಂದ್ರಶೇಖರ್‌ರವರು, “ಆಗಲಿ ನನ್ನ ಮಗಳು ಮನೆಗೆ ಬಂದ ಮೇಲೆ ನಾವು ಮೂವರೂ ಕುಳಿತು ಚರ್ಚೆ ಮಾಡಿ ತಿಳಿಸುತ್ತೇನೆ.” ಎಂದರು.

ಅದೇ ರೀತಿ ರಾತ್ರಿ ಒಂಭತ್ತೂವರೆಗೆ ಫೋನ್ ಮಾಡಿ, ನಾಳೆ ರಾತ್ರಿ ಬಸ್ಸಿಗೆ ಬೆಂಗಳೂರಿನಿಂದ ಹೊರಟು ನಾಳಿದ್ದು ಬೆಳಗ್ಗೆ ಹೈದರಾಬಾದ್‌ಗೆ ಬಂದು ತಲುಪುವುದಾಗಿ ತಿಳಿಸಿದರು. ಎಲ್ಲರಿಗೂ ಬಹಳ ಸಂತೋಷವಾಯಿತು.

ಚಂದ್ರಶೇಖರ್ ರವರ ಕುಟುಂಬ ಹೈದರಾಬಾದಿಗೆ ಬಂದು, ಹೋಟೆಲಿನಲ್ಲಿ ಒಂದು ಕೊಠಡಿ ಬಾಡಿಗೆಗೆ ತೆಗೆದುಕೊಂಡು, ಸ್ವಲ್ಪ ಹೊತ್ತು ವಿಶ್ರಮಿಸಿದರು. ನಂತರ ಸ್ನಾನ ಮಾಡಿ, ತಿಂಡಿ ತಿಂದು ಒಂದು ಟ್ಯಾಕ್ಸಿ ಗೊತ್ತು ಮಾಡಿಕೊಂಡು ಮನೋಹರನ ಮನೆಗೆ ಬಂದರು. ಆ ದಿನ ಭಾನುವಾರವಾದುದರಿಂದ ಮನೋಹರ ಮನೆಯಲ್ಲಿಯೇ ಇದ್ದ. ಮನೋಹರ, ಅವನ ತಾಯಿ, ತಂದೆ ಮತ್ತು ವಿರೂಪಾಕ್ಷಯ್ಯನವರು ಎಲ್ಲರೂ ಒಳ್ಳೆಯ ಶುಭ್ರವಾದ ಇಸ್ತೀ ಮಾಡಿದ ಬಟ್ಟೆಗಳನ್ನು ಧರಿಸಿ, ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಲು ಸಿದ್ಧರಾಗಿ ಕುಳಿತಿದ್ದರು. ಮನೆಯ ಕರೆಗಂಟೆಯ ಶಬ್ದವಾಗುತ್ತಿದ್ದಂತೆ ವಿರೂಪಾಕ್ಷಯ್ಯನವರು ಬಾಗಿಲ ಬಳಿ ಹೋಗಿ ಬಂದ ಅತಿಥಿಗಳನ್ನು ಸ್ವಾಗತಿಸಿ ಒಳಕ್ಕೆ ಕರೆ ತಂದರು. ಮನೋಹರ ಮತ್ತು ಅವನ ತಂದೆ ತಾಯಿಯರು ಬಂದ ಅತಿಥಿಗಳನ್ನು ಸ್ವಾಗತಿಸಿ ಒಳಕ್ಕೆ ಕರೆದೊಯ್ದು, ಹಾಲಿನ ಸೋಫಾದ ಮೇಲೆ ಕೂರಿಸಿದರು. ಹಿರಿಯರು ಉಭಯ ಕುಶಲೋಪರಿ ಮಾತನಾಡುವ ವೇಳೆಗೆ ಮನೋಹರನ ತಂದೆಯವರು ತಮ್ಮ ಹೆಂಡತಿಯನ್ನು ಕರೆದು ಬಂದ ಅತಿಥಿಗಳಿಗೆ ಕುಡಿಯಲು ಸಿಹಿ ಪಾನಕ ತರಲು ಹೇಳಿದರು. ಆದರೆ ಹುಡುಗಿ ಮಂಜುಳಳೇ ಎದ್ದು ಅಡುಗೆ ಮನೆಗೆ ಹೊರಟಳು. ಮನೋಹರನ ತಾಯಿ ಅವಳಿಗೆ ಪಾನಕದ ಹೂಜಿ ಮತ್ತು ನಾಲ್ಕು ಗಾಜಿನ ಲೋಟಗಳನ್ನು ಕೊಟ್ಟರು. ಅವಳೇ ಎಲ್ಲರಿಗೂ ಪಾನಕ ವಿತರಣೆ ಮಾಡಿದಳು. ಮನೋಹರನನ್ನು ನೋಡಿ ಮೋಹಕವಾಗಿ ಮುಗುಳ್ನಕ್ಕಳು. ಮನೋಹರನೂ ಅವಳ ಮುಖ ನೋಡಿ ಮುಗುಳ್ನಕ್ಕ, ಹಿರಿಯರು ತಮ್ಮ ಊರು, ಹಿರಿಯರ ಹೆಸರು, ಮಠ ಇತ್ಯಾದಿ ವಿಷಯ ತಿಳಿಸಿದರು. ಹುಡುಗಿಯ ತಂದೆಯವರು ಮನೋಹರನ ಓದು, ಕೆಲಸ, ಸಂಬಳ ಎಲ್ಲಾ ಕೇಳಿ ತಿಳಿದುಕೊಂಡರು.

ಮನೋಹರನ ತಾಯಿ ಮಂಜುಳಳಿಗೆ ಒಂದು ಹಾಡು ಹೇಳಮ್ಮ ಎಂದರು. ಅವಳು ನಿಧಾನವಾಗಿ ಆರಂಭಿಸಿದಳು. ಮನೋಹರನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹಾಡಿದಳು.

“ನಾನೇ ವೀಣೆ, ನೀನೇ ತಂತಿ, ಅವನೇ ವೈಣಿಕ… ಅವನೇ ವೈಣಿಕ….” ಅದ್ಭುತವಾಗಿ ಹಾಡಿದಳು. ಅವಳ ಗಾನಕ್ಕೆ ಹಿರಿಯರೆಲ್ಲರೂ ತಲೆದೂಗಿದರು. “ತುಂಬಾ ಚೆನ್ನಾಗಿ ಹಾಡಿದೆಯಮ್ಮಾ ಇನ್ನೊಂದು ಹಾಡು ಹೇಳು ತಾಯಿ” ಎಂದರು ಮನೋಹರನ ತಾಯಿ, ಸ್ವಲ್ಪ ಹೊತ್ತು ತಡೆದು ಮಂಜುಳಾ ಹಾಡಿದಳು. “ದೋಣಿ ಸಾಗಲಿ ಮುಂದೆ ಹೋಗಲಿ, ದೂರ ತೀರವ ಸೇರಲಿ, ಬೀಸು ಗಾಳಿಗೆ ಬೀಳು ತೇಲುವ ತೆರೆಯ ಮೇಲ್ಗಡೆ ಸಾಗಲಿ….” ಎಂದು ಅತ್ಯಂತ ಮಧುರವಾಗಿ ಹಾಡಿದಳು. ಒಂದು ಘಟ್ಟದಲ್ಲಿ ಮೈಮರೆತು ಮನೋಹರ ಕೂಡಾ ದನಿಗೂಡಿಸಿದ. ಅವನೂ ಬಹಳ ಚೆನ್ನಾಗಿ ಹಾಡಿದ. ಈ ಗೀತೆ ಮುಗಿದ ಮೇಲೆ “ನೀವು ಒಂದು ಹಾಡು ಹಾಡಿ ಸಾರ್” ಎಂದರು ಮಂಜುಳಾಳ ತಂದೆ. ಅದನ್ನೇ ಕಾಯುತ್ತಿದ್ದಂತೆ ಮನೋಹರ ಹಾಡಲುತೊಡಗಿದ.

“ಮಧುರ ಮಧುರವೀ ಮಂಜುಳ ಗಾನ…..” ಎಂಬ ಗೀತೆಯನ್ನು ಹಾಡಿದ. ಮಂಜುಳಳೂ ಆ ಹಾಡಿಗೆ ದನಿಗೂಡಿಸಿದಳು. ನಂತರ ಮುಂದಿನ ಗೀತೆಯನ್ನು ಅವಳೇ ಹಾಡಿದಳು.

“ಫಲಿಸಿತೆ ಒಲವಿನ ಪೂಜಾಫಲ… ಎನಗಿಂದು ಕೂಡಿಬಂತೆ ಕಂಕಣಬಲ…” ಆ ಸುಂದರ ಗೀತೆಯನ್ನು ಮೆಚ್ಚಿ ಎಲ್ಲರೂ ಕೈ ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆ ಸೂಚಿಸಿದರು.

ಮನೋಹರ ಎದ್ದು ನಿಂತು ಮಂಜುಳಾಳ ತಂದೆಯವರನ್ನು ಕಂಡು, “ನಾನು ನಿಮ್ಮ ಹುಡುಗಿಯ ಜೊತೆ ಸ್ವಲ್ಪ ಮಾತನಾಡಬೇಕು” ಎಂದನು. ಅವರು ತಮ್ಮ ಪತ್ನಿಯ ಮುಖ ನೋಡಿದರು. ಅಷ್ಟರಲ್ಲಿ ಮಂಜುಳ ಎದ್ದು ನಿಂತು, “ಬನ್ನಿ” ಎಂದು ಮನೋಹರನನ್ನು ಕರೆದುಕೊಂಡು ಒಂದು ಕೋಣೆಗೆ ಕರೆದೊಯ್ದಳು. ಮನೋಹರ ಮಂಜುಳಾಳ ಕೈ ಹಿಡಿದು “ಚೆನ್ನಾಗಿದ್ದೀಯಾ ಮಂಜು” ಎಂದು ಕೇಳಿದ.

“ನಾನು ಚೆನ್ನಾಗಿದ್ದೀನಿ, ನೀನು ಚೆನ್ನಾಗಿದ್ದೀಯಾ “ಮನು?” ಎಂದಳು.

ನಂತರ ಅವನಿಗೆ ಇಷ್ಟವಾದ ತಮಿಳು ಗೀತೆ ಹಾಡಿದಳು. “ನಲಂದಾನಾ ನಲಂದಾನಾ ಉಡಲುಂ ಉಳ್ಳಮುಂ ನಲಂದಾನಾ?” ಎಂದು ಮನೋಜ್ಞವಾಗಿ ಹಾಡಿದಳು. ಐದು ನಿಮಿಷ ಮಾತನಾಡಿ ಹೊರಬಂದರು. ಮನೋಹರ ನಗುನಗುತ್ತಾ ಹೇಳಿದ.

“ನಾವಿಬ್ಬರೂ ಈ ಮದುವೆಗೆ ಒಪ್ಪಿಕೊಂಡಿದ್ದೇವೆ… ಇನ್ನು ಮುಂದಿನ ವಿಷಯಗಳನ್ನು ನೀವು ಹಿರಿಯರು ಮಾತನಾಡಿ, ಮದುವೆ ಏರ್ಪಾಟು ಮಾಡಿ” ಎಂದನು.

ಹಿರಿಯರೆಲ್ಲರೂ ಏನೂ ಅರ್ಥವಾಗದೆ ಮುಖ ಮುಖ ನೋಡುತ್ತಿದ್ದರು. “ಯಾಕೆ ಮಾವ, ನಾವಿಬ್ಬರೂ ಮದುವೆಗೆ ಒಪ್ಪಿಕೊಂಡಿದ್ದು ನಿಮಗೆ ಇಷ್ಟವಾಗಲಿಲ್ಲವೇ?” ಎಂದು ಕೇಳಿದ. ಅವರು ಏನು ಹೇಳುವುದೆಂದು ತಿಳಿಯದೆ, ಸ್ವಲ್ಪವೇ ಮುಗುಳು ನಕ್ಕು, “ನೀವು ನಮ್ಮ ಹುಡುಗಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದು ಬಹಳ ಸಂತೋಷ. ಇನ್ನು ಮಿಕ್ಕ ವಿಷಯ ಹಿರಿಯರು ಮಾತನಾಡಿ ನಿರ್ಧರಿಸಲಿ” ಎಂದರು. ಮನೋಹರನೇ ಮುಂದುವರೆಸಿ ತಿಳಿಸಿದ.

ಈ “ನಾನು ಮತ್ತು ಮಂಜುಳ ಬಾಲ್ಯ ಸ್ನೇಹಿತರು. ಎಲ್.ಕೆ.ಜಿ. ಯಿಂದ ಬಿ.ಎಸ್ಸಿ.ವರೆಗೆ ನಾವಿಬ್ಬರೂ ಒಟ್ಟಿಗೆ ಓದಿದವರು. ವೃಂದಗಾನ, ನಾಟಕ, ಸಮಾಜ ಸೇವೆ ಎಲ್ಲಾ ಚಟುವಟಿಕೆಗಳಲ್ಲಿ ಒಟ್ಟಿಗೆ ಭಾಗವಹಿಸಿದವರು. ಬಿ.ಎಸ್ಸಿ, ಮಾಡಿದ ಮೇಲೆ ನಾವು ಭೇಟಿಯಾಗಲಿಲ್ಲ. ನಾನು ಎಂ.ಎಸ್ಸಿ. ಓದಲು ವಿಶ್ವವಿದ್ಯಾಲಯ ಸೇರಿದೆ. ನಂತರ ಮುಂಬೈಗೆ ಹೋಗಿ ಕೆಲಸಕ್ಕೆ ಸೇರಿದೆ. ಅಲ್ಲಿಂದ ಮುಂದೆ ಹೈದರಾಬಾದಿಗೆ ವರ್ಗವಾಗಿ ಬಂದು ಈಗ ಇಲ್ಲಿ ನೆಲೆಸಿದ್ದೇವೆ. ಶಾಲಾ ಕಾಲೇಜಿನ ಸಹಪಾಠಿ, ಬಾಲ್ಯದ ಗೆಳತಿ ಬಾಳ ಸಂಗಾತಿಯಾಗಿ ಬರ್ತಾಳೆ ಅಂದರೆ ಅದಕ್ಕಿನ್ನಾ ಸಂತೋಷ ಇನ್ನೇನು ಬೇಕು. ಹೇಳಿ.” ಎಂದು ಅತ್ಯಂತ ಸಂತೋಷದಿಂದ ಮಂಜುಳ ಕಡೆ ನೋಡಿ ಮುಗುಳ್ನಕ್ಕ.

ಚಂದ್ರಶೇಖರ್ ಅವರು ಮನೋಹರನ ತಂದೆಯವರ ಬಳಿ ಬಂದು ಕೇಳಿದರು. “ಮಗಳು ಮದುವೆಗೆ ಒಪ್ಪಿಕೊಂಡಿದ್ದಾಳೆ, ನಿಮ್ಮ ಮಗನೂ ಒಪ್ಪಿಕೊಂಡಿದ್ದಾರೆ. ಇನ್ನು ನೀವು ಹಿರಿಯರು ಒಪ್ಪಿಕೊಂಡರೆ ಇನ್ನು ವರದಕ್ಷಿಣೆ, ವರೋಪಚಾರದ ವಿಷಯ ಮಾತಾಡೋಣ.”

ಮನೋಹರನ ತಂದೆಯವರು ತಮ್ಮ ಪತ್ನಿಯಕಡೆ ನೋಡಿದರು. ತಾಯಿಯವರು ಎದ್ದು ನಿಂತು, “ಒಂದು ನಿಮಿಷ ಬನ್ನಿ” ಎಂದು ತಮ್ಮ ಪತಿದೇವರನ್ನು ಕರೆದುಕೊಂಡು ಕೋಣೆಯೊಳಕ್ಕೆ ಹೊರಟರು. ತಂದೆಯವರು ಮನು ನೀನೂ ಬಾ ಎಂದು ಮನೋಹರನನ್ನು ಕರೆದರು. ಕೋಣೆಯೊಳಗೆ ಹೋದ ಕೂಡಲೇ ಮನೋಹರ ಅತ್ಯಂತ ಉತ್ಸಾಹದಿಂದ ತಾಯಿಯನ್ನು ಕೇಳಿದ, “ಏನಮ್ಮ ನಾನು ಮಂಜುಳಾನ ಮದುವೆಯಾಗೋದು ನಿನಗೆ ಇಷ್ಟವಾಯಿತಾ? ಅವರು ಮುಗುಳ್ನಕ್ಕು ಸಂತೋಷದಿಂದ ಹೇಳಿದರು.

“ಹೂನಪ್ಪ, ಹುಡುಗಿ ನನಗೆ ಇಷ್ಟವಾದಳು. ಏ… ನಿಮಗೆ ಈ ಮದುವೆ ಒಪ್ಪಿಗೇನಾ?” ಎಂದು ಕೇಳಿದರು. ಅವರೂ ಮುಗುಳ್ನಗುತ್ತಾ “ಓ ಧಾರಾಳವಾಗಿ ಮಾಡಿಕೋ ಮನು. ಹುಡುಗಿ ಒಳ್ಳೆಯವಳಾಗಿದ್ದಾಳೆ, ಓದಿದ್ದಾಳೆ, ನಿನ್ನ ಸಹಪಾಠಿ ಆಗಿದ್ದವಳು. ತಂದೆ-ತಾಯಿಯರೂ ಸಭ್ಯರಾಗಿ ಕಾಣ್ತಾರೆ. ಇನ್ನೇನು ಬೇಕು? ನಮ್ಮ ಒಪ್ಪಿಗೆ ತಿಳಿಸಿಬಿಡೋಣ” ಎಂದರು. ಮನು ಹೇಳಿದ. ಅಪ್ಪ ನನಗೆ ವರದಕ್ಷಿಣೆ ವರೋಪಚಾರ, ಸೂಟು, ಬೂಟು, ಉಂಗುರ, ಚೈನು ಅದೆಲ್ಲಾ ಏನೂ ಇಷ್ಟ ಇಲ್ಲ. ಸಿಂಪಲ್ಲಾಗಿ ಮದುವೆ ಮಾಡಿಕೊಡಲಿ ಸಾಕು.”

“ಸರಿಯಪ್ಪ ನನಗೂ ಅದ್ಧೂರಿ ಮದುವೆ ಇಷ್ಟ ಇಲ್ಲ. ವರದಕ್ಷಿಣೆ, ವರೋಪಚಾರ ಅವೆಲ್ಲಾ ಖಂಡಿತ ಬೇಡ, ಸರಿ ನಡೀರಿ, ಅವರಿಗೆ ನಮ್ಮ ಒಪ್ಪಿಗೆ ತಿಳಿಸಿಬಿಡೋಣ.” ಎಂದು ಎದ್ದು ಕೋಣೆಯಿಂದ ಹೊರನಡೆದರು.

ಮನೋಹರನೇ ಹೇಳಿದ, “ನನಗೆ ಮತ್ತು ಮಂಜುಳಾಗೆ ಈ ಮದುವೆ ಇಷ್ಟ ಆಗಿದೆ. ನಮ್ಮ ತಂದೆ-ತಾಯಿಯರೂ ಈ ಮದುವೆಗೆ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ನನಗೆ ಜಾತಕ ಪಾತಕ ಅದೆಲ್ಲಾ ನಂಬಿಕೆ ಇಲ್ಲ. ಅದೆಲ್ಲಾ ನೋಡೋದೇನೂ ಬೇಡ, ಇನ್ನು ವರದಕ್ಷಿಣೆ, ವರೋಪಚಾರ ಅವೆಲ್ಲಾ ಏನೂ ಬೇಡ, ಕಾಲೇಜಿನ ದಿನಗಳಲ್ಲಿ ನಾವೆಲ್ಲಾ ವರದಕ್ಷಿಣೆಯಂತಹ ಸಾಮಾಜಿಕ ಪಿಡುಗಿನ ವಿರುದ್ಧ ದೊಡ್ಡ ಆಂದೋಲನ ನಡೆಸಿದವರು. ನಮಗೆ ನಿಮ್ಮಿಂದ ಏನೂ ಬೇಡಾ. ಬೆಂಗಳೂರಿನಲ್ಲಿ ಸರಳವಾಗಿ ಮದುವೆ ಮಾಡಿಕೊಡಿ ಅಷ್ಟು ಸಾಕು” ಎಂದು ಹೇಳಿ ಸರೀನಾ ಎಂಬಂತೆ ತಂದೆ-ತಾಯಿಯರ ಕಡೆ ನೋಡಿದ. ಸರಿ ಎಂಬಂತೆ ಅವರೂ ತಲೆ ಅಲ್ಲಾಡಿಸಿ ತಮ್ಮ ಒಪ್ಪಿಗೆ ಸೂಚಿಸಿದರು.

ಬಂದ ಕೆಲಸ ಸುಲಭವಾಗಿ ಸಫಲವಾದುದಕ್ಕೆ ಎಲ್ಲರೂ ಅತ್ಯಂತ ತೃಪ್ತಿಯಿಂದ ಬೆಂಗಳೂರಿಗೆ ಹಿಂತಿರುಗಿದರು. ಹೊರಡುವಾಗ ಮಂಜುಳ ಮತ್ತು ಮನೋಹರ ತಮ್ಮ ತಮ್ಮ ಮೊಬೈಲ್ ಫೋನಿನ ಸಂಖ್ಯೆಗಳನ್ನು ತಪ್ಪದೆ ತೆಗೆದುಕೊಂಡರು.

ಒಂದು ತಿಂಗಳ ಬಳಿಕ ಬೆಂಗಳೂರಿನಲ್ಲಿ, ಚಂದ್ರಶೇಖರ್‌ರವರ ಮನೆಯಲ್ಲಿಯೇ ಇವರ ಮದುವೆಯ ನಿಶ್ಚಿತಾರ್ಥ ನಡೆಯಿತು. ಅದಾದ ಎರಡು ತಿಂಗಳ ಬಳಿಕ, ಬೆಂಗಳೂರಿನಲ್ಲಿಯೇ, ಮಂಜುಳ ಮತ್ತು ಮನೋಹರ್ ಅವರುಗಳ ಮದುವೆ ಸರಳ ಸಂಭ್ರಮದಿಂದ ನೆರವೇರಿತು. ಮನೋಹರ ತನ್ನ ಕಾಲೇಜಿನ ಸಹಪಾಠಿಗಳನ್ನೂ ಲೆಕ್ಚರರ್‌ಗಳನ್ನು ಮತ್ತೆ ಇತರ ಎಲ್ಲಾ ಗೆಳೆಯರನ್ನು ತನ್ನ ಮದುವೆಗೆ ಆಮಂತ್ರಣ ನೀಡಿ ಅತ್ಯಂತ ಪ್ರೀತಿಯಿಂದ ಕರೆದಿದ್ದ. ಕರೆದವರೆಲ್ಲರೂ ಬಂದಿದ್ದರು. ಮದುವೆಯ ದಿನ ಮನೋಹರನಿಗೆ ಒಂದು ಆಶ್ಚರ್ಯ ಕಾದಿತ್ತು ಕಾಲೇಜಿನ ದಿನಗಳಲ್ಲಿ ಇವನ ನೆಚ್ಚಿನ ಉಪಾಧ್ಯಾಯರಾಗಿದ್ದ ಮಂಜುನಾಥ್‌ರವರು ತಮ್ಮ ಪತ್ನಿ ಮತ್ತು ಮಗಳನ್ನು ಕರೆದುಕೊಂಡು ಇವರ ಮದುವೆಗೆ ಬಂದರು. ಅವರ ಪತ್ನಿ ಮನೋಹರ್ ಕಾಲೇಜಿನ ದಿನಗಳಲ್ಲಿ ಇಷ್ಟಪಟ್ಟಿದ್ದ “ಮಂಜುಶ್ರೀ” ಆಗಿದ್ದಳು.

ಮಂಜುನಾಥ್‌ರವರ ತಾಯಿಯವರು ಸೌಖ್ಯವಿಲ್ಲದೆ ಮಲಗಿದ್ದಾಗ ಮನೋಹರ, ಶ್ರೀನಾಥ, ಮಂಜುಳಾ ಮತ್ತು ಮಂಜುಶ್ರೀ ಮಂಜುನಾಥ್‌ರವರ ಮನೆಗೆ ಹೋಗಿ ಅವರ ತಾಯಿಯವರ ಸೇವೆ ಮಾಡಿದ್ದರು. ಆ ಸಮಯದಲ್ಲಿ ಮಂಜುನಾಥ್‌ರವರಿಗೆ ಮಂಜುಳ ಬಹಳ ಇಷ್ಟವಾಗಿದ್ದಳು. ಈಗ ಮನೋಹರ ಇಷ್ಟಪಟ್ಟಿದ್ದ ಮಂಜುಶ್ರೀಯನ್ನು ಅವರು ಮದುವೆಯಾಗಿದ್ದರು. ಮಂಜುನಾಥ್‌ರವರು ಇಷ್ಟಪಟ್ಟಿದ್ದ ಮಂಜುಳಳನ್ನು ಮನೋಹರ ಮದುವೆಯಾಗಿದ್ದ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಂತಿಕೆ
Next post ಚೋದ್ಯದ ಹುಡುಗಿ

ಸಣ್ಣ ಕತೆ

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…