ಕುಂದಾಪುರ ಶಿವಮೊಗ್ಗ ರಸ್ತೆಯಲ್ಲಿ ನನ್ನ ಕನ್ನಡಕದ ಅಂಗಡಿ ತೆರೆದಿದ್ದೆ. ಅಲ್ಲಿಗೆ ಸಿದ್ದಾಪುರ, ಶಂಕರನಾರಾಯಣ, ಇತರ ಹತ್ತಾರು ಹಳ್ಳಿಗಳಿಂದ ನನ್ನ ಕನ್ನಡಕದ ಅಂಗಡಿಗೆ ನಿತ್ಯವೂ ನೂರಾರು ಗಿರಾಕಿ ಬರುತ್ತಿದ್ದರು. ಕನ್ನಡಕದ ಅಂಗಡಿ ಪಕ್ಕದಲ್ಲೇ ಸಣ್ಣದೊಂದು ಕಣ್ಣಿನ ಪರೀಕ್ಷೆಗೆ ಒಂದು ಕ್ಲಿನಿಕ್ ಸಹ ಹಾಕಿಕೊಂಡಿದ್ದೆ.

ದೇಶ ವಿದೇಶಗಳ ಹೊಸ ಮಾದರಿಯ ಕನ್ನಡಕದ ಜೊತೆಯಲ್ಲಿ ಕೂಲಿಂಗ್ ಗ್ಲಾಸ್‌ಗಳು ಕಡಿಮೆಯ ದರದಲ್ಲಿ ಕನ್ನಡಕ ದೊರೆಯುವ ಏಕಮೇವ ಅಂಗಡಿ ನನ್ನದಾಗಿತ್ತು.

“ಸೀಮಾ” ಕನ್ನಡಕದ ಅಂಗಡಿ ಎನ್ನುವುದು ನನ್ನ ಅಂಗಡಿಯ ಹೆಸರಾಗಿತ್ತು. ನನ್ನ ಮಲೆನಾಡು ಭಾಗದ ಆಗುಂಬೆಸೀಮೆಯವನಾಗಿದ್ದೆ. ನಾನು ಕಾಲೇಜು ವಿಧ್ಯಾಭ್ಯಾಸವೆಲ್ಲ ಶಿವಮೊಗ್ಗದಲ್ಲಿ ಮಗಿಸಿದ್ದೆ. ನಂತರ ಅಲ್ಲಿ ಇಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಿದರೂ ಉದ್ಯೋಗ ಸಿಗದೆ ಈ ಕಣ್ಣು ಪರೀಕ್ಷೆ ಶಾಪಿನ ಜೊತೆಯಲ್ಲಿ ಕನ್ನಡಕದ ಅಂಗಡಿ ತೆರೆದೆ. ನನ್ನ ಈ ಸೀಮಾತೀತವಾದ ಸಾಧನೆಗಾಗಿ ನನ್ನ ಅಂಗಡಿಗೆ ನಾನೇ ನಾಮಕರಣ ಮಾಡಿದ್ದು “ಸೀಮಾ”.

ಅದೊಂದು ಮಧ್ಯಾಹ್ನ ಸಮಯಕ್ಕೆ ನಾನು ಊಟ ಮುಗಿಸಿ ಕುಳಿತಾಗ ಸುಮಾರು ನಲವತ್ತರ ಪ್ರಾಯದ ಹೆಂಗಸೊಬ್ಬರು ಅಂಗಡಿಗೆ ಬಂದರು.

– “ಏನಮ್ಮ? ಏನಾಗಬೇಕಿತ್ತು?”

“ಸಾರ್ ನನಗೆ ಕನ್ನಡಲ ಬೇಕಾಗಿತ್ತು, ನಾನು ದೂರ ಹಳ್ಳಿಯಿಂದ ಬಂದಿರುವೆ?”

“ಹೊಸನಗರ ತಾಲ್ಲೂಕಿನ ಮೇಲುಸುಂಕ ಎಂಬ ಹಳ್ಳಿಯಿಂದ ಬಂದಿರುವೆ. ಅಲ್ಲಿಂದ ಹತ್ತಾರು ಮೈಲಿ ನಡೆದುಕೊಂಡು ಬಂದು ನಂತರ ಬಸ್ಸಿನಲ್ಲಿ ಬಂದಿರುವೆ”

“ಸರಿ ನಿಮ್ಮ ಸಮಸ್ಯೆ ಹೇಳು”

“ನೀವು ಕೊಡುವ ಕನ್ನಡಕ ಹಾಕಿಕೊಂಡರೆ ಸರಿಯಾಗಿ ಓದಬಹುದಂತೆ ಹೌದ”

ನಾನು ನಗುತ್ತಾ ಉತ್ತರಿಸಿದೆ

– “ಹೌದಮ್ಮ”

“ಸ್ವಾಮಿ ಹಾಗಾದರೆ ನನಗೂ ಒಂದು ಒಳ್ಳೆಯ ಕನ್ನಡಕ ಕೊಡಿ”.

ನಾನು ಅವಳನ್ನು ನನ್ನ ಶಾಪಿನೊಳಗೆ ಕರೆದುಕೊಂಡು ಹೋಗಿ ಅವಳಿಗೆ ನೂರಾರು ಕನ್ನಡಕ ಕೊಟ್ಟು ಅವಳನ್ನು ಪರೀಕ್ಷೆ ಮಾಡಿದೆ. ಎಷ್ಟು ರೀತಿಯ ಕನ್ನಡಕ ಕೊಟ್ಟರು ಅವಳಿಗೆ ಎದುರುಗಡೆ ಇಟ್ಟ ಬೋರ್ಡಿನಲ್ಲಿ ಇರುವ ಅಕ್ಷರ ಒಂದೇ ಒಂದನ್ನು ಓದಲಾಗಲಿಲ್ಲ.

ಕೊನೆ ಪ್ರಯತ್ನವೆಂಬಂತೆ ಉಳಿದ ಒಂದೇ ಒಂದು ಕನ್ನಡಕವನ್ನು ಕೊಟ್ಟು ಬೋರ್ಡ್ ನ್ನು ಎದುರುಗಡೆ ಇಟ್ಟು ಕೇಳಿದೆ.

“ಈಗಲಾದರೂ ಇದನ್ನು ಓದುತ್ತಿಯಾ?”

ಆಗ ಆಕೆ ಕೋಪದಿಂದ ಹೇಳಿದ್ಲು

– “ಎನ್ ಸ್ವಾಮಿ ಇಷ್ಟು ಕನ್ನಡಕ ಹಾಕಿದ್ರೂ ಸಹ ಓದೋಕೆ ಆಗ್ತಾ ಇಲ್ಲ…”

“ನಿನಗೆ ಕನ್ನಡ ಅಕ್ಷರ ತಿಳಿದಿದೆಯಾ?”

“ಏನ್ ಸ್ವಾಮಿ ಮಾತಾಡ್ತೀರಾ ನೀವು. ನಾನು ನಿಮ್ಮ ಅಂಗಡಿಗೆ ಬಂದಿರುವುದೇ ಕನ್ನಡಕ ಹಾಕಿಕೊಂಡು ಓದೋಣ ಅಂತ. ನೀವು ಕೊಡುವ ಕನ್ನಡಕವನ್ನು ಹಾಕಿದರೆ ಯಾವ ಭಾಷೆ ಬೇಕಾದರೂ ಸುಲಭವಾಗಿ ಓದಬಹುದು ಅಂತಾ ನಮ್ಮೂರ ಶೇಷಯ್ಯ ಹೇಳುತ್ತಾ ಇದ್ದರು ಅದಕ್ಕಾಗಿ ನಾನು ನಿಮ್ಮ ಅಂಗಡಿಯನ್ನು ಹುಡುಕಿಕೊಂಡು ಯಡೂರಿಗೆ ನಡೆದೇ ಬಂದು ಅಲ್ಲಿಂದ ಇಲ್ಲಿಗೆ ಬಸ್ಸಿನಲ್ಲಿ ಬಂದೆ” ಎಂದಾಗ ನಾನಂತೂ ಸುಸ್ತಾಗಿ ಬೀಳುವುದೊಂದು ಬಾಕಿ.
*****