ಬಕೆಟ್ ಸವಾರ

ಬಕೆಟ್ ಸವಾರ

ಇದ್ದಿಲು ಎಲ್ಲವೂ ಖರ್ಚಾಗಿದೆ: ಬಕೆಟ್ ಖಾಲಿ. ಸಲಿಕೆ ನಿಷ್ಟ್ರಯೋಜಕ: ಒಲೆ ತಣ್ಣಗಾಗಿದೆ. ಕೋಣೆ ತಣ್ಣಗೆ ಕೊರೆಯುತ್ತಿದೆ. ಕಿಟಕಿಯ ಹೊರಗೆ ಮಂಜು ಮುಚ್ಚಿದ ಎಲೆಗಳು ಸ್ತಬ್ಧವಾಗಿ ನಿಂತಿವೆ; ಆಕಾಶ ಬೆಳ್ಳಿಯ ಪರದೆಯಾಗಿದೆ. ನನಗೆ ಇದ್ದಿಲು ಬೇಕಾಗಿದೆ. ನಾನು ಹೆಪ್ಪುಗಟ್ಟಿ ಸಾಯಲಾರೆ. ನನ್ನ ಹಿಂದೆ ನಿರ್ದಯಿ ಒಲೆ: ನನ್ನ ಮುಂದೆ ನಿರ್ದಯ ಆಕಾಶ, ಅವುಗಳ ನಡುವೆ ಪ್ರಯಾಣ ಬೆಳೆಸಿ ಇದ್ದಿಲು ವ್ಯಾಪಾರಿಯ ಬಳಿಗೆ ಹೋಗಬೇಕು. ಆದರೆ ಅವನು ಸಾಮಾನ್ಯ ಬೇಡಿಕೆಗೆ ಕಿವುಡಾಗಿದ್ದಾನೆ. ನಾನು ಅವನಿಗೆ ಖಚಿತಪಡಿಸಬೇಕು ನನ್ನಲ್ಲಿ ಚೂರೂ ಇದ್ದಿಲು ಇಲ್ಲವೆಂದು, ಭಿಕ್ಷುಕರಂತೆ ಅವನ ಬಳಿ ಯಾಚಿಸಬೇಕು. ಇಲ್ಲದಿದ್ದರೆ ನಿನ್ನ ಬಾಗಿಲಿನಲ್ಲಿಯೇ ಸಾಯುತ್ತೇನೆ ಎನ್ನಬೇಕು; ಆಗ ಸಿಟ್ಟಿನಿಂದಾದರೂ ಒಂದು ಸಲಿಕೆ ತುಂಬ ಇದ್ದಿಲು ನನ್ನ ಬಕೆಟ್ಟಿನಲ್ಲಿ ಎಸೆಯುತ್ತಾನೆ.

ನನ್ನ ಪ್ರಯಾಣದ ರೀತಿಯೇ ಪರಿಸ್ಥಿತಿಯ ಗಂಭೀರತೆಯ ಅರಿವು ಮಾಡಿಕೊಡಬೇಕು; ಅದಕ್ಕಾಗಿ ಬಕೆಟ್ಟಿನಲ್ಲಿ ಕುಳಿತು ಸವಾರಿ ಮಾಡುತ್ತೇನೆ; ಬಕೆಟ್ಟಿನಲ್ಲಿ ಕುಳಿತು ಎರಡೂ ಕೈಗಳಿಂದ ಹ್ಯಾಂಡಲ್ ಹಿಡಿದುಕೊಳ್ಳುತ್ತೇನೆ. ಮೆಲ್ಲ ಮೆಲ್ಲನೆ ಕಷ್ಟಪಟ್ಟು ಕುಪ್ಪಳಿಸುತ್ತ ಮೆಟ್ಟಿಲನ್ನು ಇಳಿಯುತ್ತೇನೆ ಕೆಳಗಿಳಿಯುತ್ತಲೇ ನನ್ನ ಬಕೆಟ್ ಮೇಲ ಮೇಲಕ್ಕೆ ಹೋಗುತ್ತದೆ; ಮೇಲೇರುತ್ತ ಮಹಡಿ ಮನೆಯ ಎತ್ತರಕ್ಕೂ ಏರುತ್ತೇನೆ, ಕಡೆಗೆ ಎತ್ತರಕ್ಕೆ ತೇಲುತ್ತ ಇದ್ದಿಲು ವ್ಯಾಪರಿಯ ಮನೆಯ ಮೇಲೆ ಬಂದೆ. ಕೆಳಗೆ, ತನ್ನ ಮನೆಯಲ್ಲಿ ಟೇಬಲ್ಲಿನ ಮುಂದೆ ಕುಳಿತು ಏನೋ ಬರೆಯುತ್ತಿದ್ದಾನೆ ವ್ಯಾಪಾರಿ; ಬಾಗಿಲು ತೆರೆದಿದೆ ಹೆಚ್ಚಿನ ಶಾಖವನ್ನು ಹೊರಬಿಡಲು.

“ಇದ್ದಿಲು ವ್ಯಾಪಾರಿ!” ಕೂಗುತ್ತೇನೆ.

ನನ್ನ ಸ್ವರ ಹೆಪ್ಪುಗಟ್ಟಿದ ಚಳಿಯಲ್ಲಿ ಕ್ಷೀಣವಾಗಿದೆ.

“ಇದ್ದಿಲು ವ್ಯಾಪಾರಿ! ದಯವಿಟ್ಟು ನನಗಿಷ್ಟು ಇದ್ದಿಲು ಕೊಡು. ನನ್ನ ಬಕೆಟ್ ಎಷ್ಟು ಹಗುರವಾಗಿದೆ ಎಂದರೆ ನಾನು ಅದರಲ್ಲಿ ಸವಾರಿ ಮಾಡಬಲ್ಲೆ, ದಯೆತೋರು. ನನಗೆ ಅನುಕೂಲವಾದಾಗ ದುಡ್ಡು ಕೊಡುತ್ತೇನೆ.”

ವ್ಯಾಪಾರಿ ಕಿವಿಗೆ ಕೈಯಿಟ್ಟು ಆಲಿಸುತ್ತಾನೆ.

“ಸರಿಯಾಗಿ ಕೇಳಿಸುತ್ತಿದೆಯೇ” ತನ್ನ ಹೆಂಡತಿಯ ಕಡೆಗೆ ತಿರುಗಿ ಕೇಳುತ್ತಾನೆ. “ಸರಿಯಾಗಿ ಕೇಳಿಸುತ್ತಿದೆಯೇ? ಗಿರಾಕಿ ಇದ್ದಂತಿದೆ.”

“ನನಗೇನೂ ಕೇಳಿಸುತ್ತಿಲ್ಲ.” ಹೆಂಡತಿ ಹೇಳುತ್ತಾಳೆ ತನ್ನ ಹೊಲಿಗೆಯನ್ನು ಮುಂದುವರೆಸುತ್ತ.

“ಹೋ! ಕೇಳಿಸಿಕೊಳ್ಳಲೇಬೇಕು.! ನಾನು ….. ನಿಮ್ಮ ಹಳೆಯ ಗಿರಾಕಿ….. ಈಗ ಕೈ ಬರಿದಾಗಿದೆ.”

ಅದು ಯಾರೋ ಕರೆಯುತ್ತಿರುವ ಹಾಗಿದೆ. ವ್ಯಾಪಾರಿ ಹೇಳುತ್ತಾನೆ, “ನನ್ನ ಹಳೆಯ ಗಿರಾಕಿಗಳಾರೋ ಇರಬೇಕು. ನನ್ನ ಕಿವಿಗಳು ಮೋಸಹೋಗುವುದಿಲ್ಲ.”

“ಯಾಕೆ ಸುಮ್ಮನೆ ಪೇಚಾಡುತ್ತೀರಿ?” ಹೆಂಡತಿ ಹೊಲಿಯುವುದನ್ನು ನಿಲ್ಲಿಸಿ ಹೇಳುತ್ತಾಳೆ. “ಯಾರೂ ಇಲ್ಲ, ರಸ್ತೆ ನಿರ್ಜನವಾಗಿದೆ. ನಮ್ಮ ಎಲ್ಲ ಗಿರಾಕಿಗಳಿಗೂ ಸಾಕಷ್ಟು ಇದ್ದಿಲು ಕೂಟ್ಟಾಗಿದೆ. ಕೆಲವು ದಿವಸ ಅಂಗಡಿ ಮುಚ್ಚಿ ವಿಶ್ರಾಂತಿ ತೆಗೆದುಕೊಳ್ಳಬಹುದು.”

ಇಲ್ಲಿ, ಬಕೆಟ್ ಮೇಲೆ ಕುಳಿತಿದ್ದೇನೆ. ನಾನು ಕಿರುಚುತ್ತೇನೆ. ನನ್ನ ಕಣ್ಣು ಮಂಜಾಗುತ್ತದೆ. “ದಯವಿಟ್ಟು ಒಂದು ಸಲ ಇಲ್ಲಿ…. ಮೇಲೆ ನೋಡಿರಿ. ಒಂದೇ ಒಂದು ಸಲಿಕೆ ಇದ್ದಿಲು…. ದಯ ತೋರಿ…..”

“ಬಂದೆ ನಿಲ್ಲು…” ವ್ಯಾಪಾರಿ ಎದ್ದು ನಿಲ್ಲುತ್ತಾನೆ. ಅವನ ಹೆಂಡತಿ ಅವನನ್ನು ತಡೆಯುತ್ತಾಳೆ.

“ನೀವು ಇಲ್ಲೇ ಇರಿ. ನಿಮ್ಮ ಆರೋಗ್ಯ ಚೆನ್ನಾಗಿಲ್ಲ, ನಿನ್ನೆ ರಾತ್ರಿ ಎಷ್ಟು ಕಮ್ಮುತ್ತಿದ್ದಿರಿ! ಒಂದು ಸಣ್ಣ ಗಿರಾಕಿಗಾಗಿ ಈ ಕೊರೆಯುವ ಚಳಿಯಲ್ಲಿ ಹೊರಗೆ ಹೋಗಿ ಆರೋಗ್ಯ ಕೆಡಿಸಿಕೊಳ್ಳುವುದು ಬೇಡ, ಹೆಂಡತಿ, ಮಕ್ಕಳ ಬಗ್ಗೆ ಯೋಚಿಸಿ. ಅದಾರೋ ನಾನು ನೋಡುತ್ತೇನೆ.”

“ಹಾಗಾದರೆ ನಮ್ಮಲ್ಲಿ ದೊರೆಯುವ ಎಲ್ಲ ವಿಧದ ಇದ್ದಿಲನ್ನು ತೋರಿಸು ಗಿರಾಕಿಗೆ ಬೆಲೆಯನ್ನು ನಾನು ಇಲ್ಲಿಂದಲೇ ಕೂಗಿ ಹೇಳುತ್ತೇನೆ.”

“ಆಗಲಿ” ಎನ್ನುತ್ತ ಆಕೆ ಹೊರಗೆ ಬರುತ್ತಾಳೆ. ನನ್ನನ್ನು ನೋಡುತ್ತಾಳೆ.

“ಇದ್ದಿಲು ವ್ಯಾಪಾರಿ!” ನಾನು ಗೋಗರೆಯುತ್ತೇನೆ. “ಒಂದೇ ಒಂದು ಸಲಿಕೆ ತುಂಬ ಇದ್ದಿಲು ಸಾಕು. ತೀರ ಕೆಳಮಟ್ಟದ್ದಾದರೂ ಸರಿ. ಬಕೆಟ್ಟಿನಲ್ಲಿ ಹಾಕಿ. ನಾನೇ ಹೊತ್ತುಕೊಂಡು ಹೋಗುತ್ತೇನೆ. ಪೂರ್ತಿ ದುಡ್ಡು ಕೊಡುತ್ತೇನೆ. ಈಗ ಮಾತ್ರ ಇಲ್ಲ.”

ಈಗ ಮಾತ್ರ ಇಲ್ಲ! ಎಷ್ಟು ಕರ್ಕಶವಾದ ಶಬ್ದಗಳು!

ಸಮೀಪದ ಚರ್ಚಿನ ಗಂಟೆ ಬಾರಿಸುತ್ತದೆ. ಈ ಗಂಟೆಯ ನಾದದಲ್ಲಿ ನನ್ನ ಶಬ್ದಗಳು ಲೀನವಾಗಿ ಹೋಗುತ್ತವೆ.

“ಏನು ಬೇಕಾಗಿತ್ತಂತೆ?” ಕೂಗಿ ಕೇಳುತ್ತಾನೆ ಒಳಗಿನಿಂದ ವ್ಯಾಪಾರಿ.

“ಏನೂ ಇಲ್ಲ” ಹಿಂದೆಯೇ ಹೇಳುತ್ತಾಳೆ ಮಡದಿ. ಇಲ್ಲಿ ಯಾರೂ ಇಲ್ಲ. ನನಗೇನೂ ಕಾಣಿಸುತ್ತಿಲ್ಲ, ಕೇಳಿಸುತ್ತಿಲ್ಲ, ಚರ್ಚಿನ ಗಂಟೆ ಅಷ್ಟೇ, ಚಳಿ ವಿಪರೀತವಾಗಿದೆ. ನಾಳೆಯಿಂದ ಅಂಗಡಿ ಮುಚ್ಚಿಬಿಡುವೆ.”

ಅವಳಿಗೆ ಏನೂ ಕಾಣಿಸುವುದಿಲ್ಲ. ಏನೂ…. ಕಾಣಿಸುವುದಿಲ್ಲ. ಆದರೆ, ತನ್ನ ಏಪ್ರನ್ ಬಿಚ್ಚಿ ಝಾಡಿಸುತ್ತಾಳೆ ನನ್ನನ್ನು ಓಡಿಸಲು ನನ್ನ ಬಕೆಟ್ ತುಂಬಾ ಹಗುರವಾಗಿದೆ. ಹೆಂಗಸಿನ ಏಪ್ರನ್ ಕೂಡ ನನ್ನ ಬಕೆಟನ್ನು ಗಾಳಿಯಲ್ಲಿ ಹಾರಿಸಬಲ್ಲುದು.

“ಏ, ದುಷ್ಟ ಹೆಂಗಸೇ,” ನಾನು ಕಿರುಚುತ್ತೇನೆ. “ಏ, ದುಷ್ಟ ಹೆಂಗಸೇ! ನಾನು ಕೇವಲ ಒಂದು ಸಲಿಕೆ ತುಂಬ ಇದ್ದಿಲು ಬೇಡಿದೆ. ತೀರ ಕೆಳಮಟ್ಟದ್ದಾದರೂ ಸರಿ ಎಂದೆ. ಆದರೆ ನೀನು ಕೊಡಲಿಲ್ಲ.”

ಹಾಗೆ ಹೇಳಿ ನಾನು ಮೇಲೆ ಹಾರುತ್ತ ಹಿಮಪರ್ವತಗಳಲ್ಲಿ ಕಳೆದು ಹೋಗುತ್ತೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿ
Next post ಮನವಿ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…