ಮಕ್ಕಳಿಗೆ ಎಂಥಾ ಕತೆಗಳು ಬೇಕು?

ಮಕ್ಕಳಿಗೆ ಎಂಥಾ ಕತೆಗಳು ಬೇಕು?

ಮಕ್ಕಳಿಗೆ ಎಂಥಾ ಕತೆಗಳು ಬೇಕು? ಅಜ್ಜಿಕತೆಗಳು ಬೇಕು. ಅಜ್ಜಿಯಂದಿರೇ ಹೇಳಿದರೆ ಉತ್ತಮ. ಆದರೆ ಅಂಥ ಅಜ್ಜಿಯಂದಿರು ಈಗ ಇಲ್ಲ. ಅಥವಾ ಸದ್ಯವೇ ಇಲ್ಲದಾಗುತ್ತಾರೆ. ಯಾಕೆಂದರೆ ಮುಂದಿನ ಕಾಲದ ಅಜ್ಜಿಯಂದಿರಿಗೆ ಅಜ್ಜಿಕತೆಗಳು ಗೊತ್ತಿರುವುದಿಲ್ಲ! ಆದ್ದರಿಂದ ಅಜ್ಜಿಕತೆಗಳಂಥ ಕತೆಗಳನ್ನು ಬರೆಯುವವರು ಬೇಕು. ಅವುಗಳು ಪತ್ರಿಕೆಗಳಲ್ಲೋ ಪುಸ್ತಕರೂಪದಲ್ಲಿಯೋ ಪ್ರಕಟಗೊಂಡು ಎಲ್ಲರಿಗೂ ಓದಲು ಸಿಗಬೇಕು. ಇಲ್ಲಿ ‘ಎಲ್ಲರಿಗೂ’ ಎಂದುದರ ಔಚಿತ್ಯವೆಂದರೆ, ಮಕ್ಕಳ ಕತೆಗಳನ್ನು ದೊಡ್ಡವರೂ ಆಗಾಗ್ಗೆ ತಾವು ಓದುವುದು, ಮಕ್ಕಳಿಗೆ ಓದಿಹೇಳುವುದು ಅಗತ್ಯ.

ಅಜ್ಜಿಕತೆಗಳೆಂದರೆ ಅವು ಅಸಾಧ್ಯ ಕತೆಗಳು. ಅವು ನೀತಿಕತೆಗಳೇ ಆದರೂ ಅವುಗಳಲ್ಲಿ ಅಸಾಧ್ಯವಾದ ಸಂಗತಿಗಳು ನಡೆಯುತ್ತವೆ. ಬಡವನು ರಾತ್ರಿ ಬೆಳಗಾಗುವುದರಲ್ಲಿ ಶ್ರೀಮಂತನಾಗುತ್ತಾನೆ. ಹಳ್ಳಿಗನು ರಾಜಕುಮಾರಿಯನ್ನು ಮದುವೆಯಾಗುತ್ತಾನೆ, ದುಷ್ಟರು ಕೊನೆಯಲ್ಲಿ ಯಾವಾಗಲೂ ಸೋಲುತ್ತಾರೆ. ಆದರೆ ಈ ನೀತಿ ಕೇವಲ ನೆಪ. ಕತೆಯ ನಿಜವಾದ ಸ್ವಾರಸ್ಯವಿರುವುದು ಅದರಲ್ಲಿನ ಅಸಂಭವನೀಯ ಘಟನಾವಳಿಗಳಲ್ಲಿ, ಪಾತ್ರಗಳಲ್ಲಿ. ನಾನು ಶಾಲೆಗೆ ಹೋಗಲು ಸುರುಮಾಡಿ ಓದಲು ಕಲಿತ ವೇಳೆಗೆ ‘ಚಂದಮಾಮ’ ಎಂಬ ತಿಂಗಳ ಪತ್ರಿಕೆಯ ಪರಿಚಯವಾಯಿತು. ಅವನ್ನು ನಾನಾಗಿ ಕೊಂಡುಕೊಳ್ಳುವ ಆರ್ಥಿಕ ಪರಿಸ್ಥಿತಿಯಿರಲಿಲ್ಲವಾದರೂ ಯಾರ ಕೈಯಿಂದಲಾದರೂ ಇಸಿದುಕೊಂಡು ಓದುತ್ತಿದ್ದೆ. ಆ ಕಾಲದ ಮಕ್ಕಳು ಬಹುಶಃ ಓದುವ ಆಸಕ್ತಿ ಬೆಳೆಸಿಕೊಂಡದ್ದೇ ‘ಚಂದಮಾಮ’ದಿಂದ. ಮದರಾಸಿನ ವಡಪಳನಿ ಎಂಬಲ್ಲಿಂದ ಇದು ಪ್ರಕಟವಾಗುತ್ತಿತ್ತು. ಎಕ್ಸರ್‌ಸೈಸ್ ಪುಸ್ತಕ ಗಾತ್ರದಲ್ಲಿ ಈ ಪತ್ರಿಕೆ ಭಾರತದ ಇತರ ಭಾಷೆಗಳಲ್ಲೂ ಪ್ರಕಟವಾಗುತ್ತಿತ್ತು. ಇದು ಈಗಲೂ ಮುಂದುವರಿಯುತ್ತ ಬಂದಿದೆಯೆಂದು ಕೇಳಿದ್ದೇನೆ. ಆಗಿನ ಕಾಲಕ್ಕೇ ವರ್ಣರಂಜಿತವಾಗಿ ಬರುತ್ತಿದ್ದ ‘ಚಂದಮಾಮ’ ಎರಡುಮೂರು ರೀತಿಯ ಕತೆಗಳಿಂದ ಒಳಗೊಂಡಿತ್ತು. ಕೆಲವು ಕತೆಗಳು ಅದ್ಭುತರಮ್ಯವಾಗಿದ್ದುವು. ಇವು ಧಾರಾವಾಹಿಯಾಗಿಯೂ ಬರುತ್ತಿದ್ದುವು. ‘ಬಾಲ ನಾಗಮ್ಮ’, ‘ಅವಳಿ ಸೋದರರ ಕತೆ’ ಮುಂತಾದುವು ಎಷ್ಟೊಂದು ರೋಚಕವಾಗಿರುತ್ತಿದ್ದುವೆಂದರೆ ಪ್ರತಿ ತಿಂಗಳು ಇವುಗಳ ಮುಂದರಿದ ಭಾಗ ಓದುವುದಕ್ಕೆ ನನ್ನಂಥ ಮಕ್ಕಳು ಕಾದಿರುತ್ತಿದ್ದರು. ಇನ್ನೊಂದು ತರದ ಕತೆಗಳೆಂದರೆ ಗ್ರಾಮಾಂತರ ಪಾತ್ರಗಳ ಕುರಿತಾದವು. ಅವು ಹೆಚ್ಚಾಗಿ ನೀತಿ ಕತೆಗಳ ರೂಪದಲ್ಲಿರುತ್ತಿದ್ದುವು. ಇವೆರಡಕ್ಕೂ ಸೇರದ ‘ಬೇತಾಳ ವಿಕ್ರಮಾದಿತ್ಯ’ ಕತೆಗಳು, ರಾಮಾಯಣ ಮಹಾಭಾರತದ ಕತೆಗಳು, ಅರೇಬಿಯನ್ ನೈಟ್ಸ್‌ನ ಕತೆಗಳು ಮೂರನೆಯ ರೀತಿಯವಾಗಿದ್ದುವು. ಇವೆಲ್ಲವುಗಳಲ್ಲೂ ನನಗೆ ಹೆಚ್ಚು ಪಿಯವಾದುವು ಅದ್ಭುತರಮ್ಯ ಕತೆಗಳೇ. ‘ಚಂದಮಾಮ’ನಿಗೆ ಪೈಪೋಟಿ ಎನ್ನುವಂತೆ ಕೆಲವೇ ಸಮಯದಲ್ಲಿ ‘ಬಾಲಮಿತ್ರ’ ಎಂಬ ಅಂಥದೇ ಮಾಸಿಕ ಪತ್ರಿಕೆಯೊಂದು ಸುರುವಾಯಿತು. ಹೀಗೆ ಮಕ್ಕಳಿಗೆ ಇಮ್ಮಡಿ ಸಂತೋಷ! ಆದರೆ ‘ಬಾಲಮಿತ್ರ’ ಬಹುಕಾಲ ಬಾಳಲಿಲ್ಲವೆಂದು ತೋರುತ್ತದೆ.

ಮಕ್ಕಳಿಗೆ ಎಲ್ಲ ತರದ ಕತೆಗಳೂ ಬೇಕು. ಅವು ನೀತಿಪರವೂ ಆಗಿರಬೇಕು. ಆದರೂ ಮಕ್ಕಳ ಮನಸ್ಸನ್ನು ಪ್ರಸನ್ನಗೊಳಿಸುವುದು ಕತೆಗಳ ಅದ್ಬುತರಮ್ಯತೆ. ಉದಾಹರಣೆಗೆ ಮೇಲೆ ಹೇಳಿದ ಅವಳಿ ಮಕ್ಕಳ ಕತೆಯಲ್ಲಿ ಒಬ್ಬಾತನ ಹೆಸರು ಗಡ್ಡದವ ಎಂದು. ಯಾಕೆಂದರೆ ಈತನ ಗಡ್ಡ ನಿಂತರೆ ನೆಲಮುಟ್ಪುತ್ತಿತ್ತು! ಅದೇ ರೀತಿ, ಕೆಲವು ಪಾತ್ರಗಳು ಕುಳ್ಳು. ಕೆಲವರು ಮಣ್ಣಿನ ಭಾರೀ ಹಂಡೆಗಳೊಳಗೆ ಅವಿತುಕೊಳ್ಳುತ್ತಿದ್ದರು. ಮಾಯಾವಿಗಳು, ಮಂತ್ರಮಾಟಗಾರ್ತಿಯರು, ಜಾದೂಗಾರರು, ಸುಂದರಿಯರಾದ ರಾಜಕುಮಾರಿಯರನ್ನು ಅಪಹರಿಸಿಕೊಂಡು ಹೋಗುತ್ತಿದ್ದರು; ಅವಳನ್ನು ಬಿಡಿಸುವುದಕ್ಕೆ ಶೂರರಾದ ಯುವನಾಯಕರು ಆಗಮಿಸುತ್ತಿದ್ದರು. ಆದರೆ ಅವರಿಗೂ ರಾಜಕುಮಾರಿಯರನ್ನು ಬಿಡುಗಡೆಗೊಳಿಸುವುದು ಅಷ್ಟೊಂದು ಸುಲಭದ ಸಾಹಸವಾಗಿರಲಿಲ್ಲ! ಹ್ಯಾನ್ಸ್ ಆಂಡರ್ಸನ್ ಕತೆಗಳನ್ನು ಓದಿದವರಿಗೆ ಈ ಅದ್ಧುತರಮ್ಯತೆಯ ಪರಿಚಯವಿರುತ್ತದೆ. ‘ಚಂದಮಾಮ’ದ ಈ ಕತೆಗಳು ಅಂತೆಯೇ ಇರುತ್ತಿದ್ದುವು. ಇವುಗಳನ್ನು ಯಾರು ಬರೆಯುತ್ತಿದ್ದರೋ ತಿಳಿಯದು. ಆದರೆ ಕ್ರಮೇಣ ‘ಚಂದಮಾಮ’ ಬದಲಾಗತೊಡಗಿತು. ಹೆಚ್ಚೆಚ್ಚು ಚಾರಿತ್ರಿಕ, ಭೌಗೋಳಿಕ ಮಾಹಿತಿಗಳನ್ನು ನೀಡುವತ್ತ ಅದು ಒಲವು ತೋರಿಸಲು ಸುರುಮಾಡಿತು. ಅಯ್ಯಾ ಚಂದಮಾಮ, ನಾವು ಮಾಹಿತಿಗಾಗಿ ನಿನ್ನ ಬಳಿ ಬರುತ್ತೇವೇನೋ? ಶಾಲೆಯ ಓದಿನಲ್ಲಿ ಸಿಗದೆ ಇರುವುದನ್ನು ಪಡೆಯಲಿಕ್ಕೆ ಬರುತ್ತೇವೆ, ಆದ್ದರಿಂದ ನೀನು ಮೊದಲಿನಂತೆಯೇ ಇದ್ದರೆ ಚೆನ್ನ-ಎಂದು ಮಕ್ಕಳು ಸಾಧ್ಯವಿದ್ದರೆ ಚಂದಮಾಮನಿಗೆ ಹೇಳುತ್ತಿದ್ದರು.

ಈಗ ಮಕ್ಕಳಿಗೆ ಓದುವುದಕ್ಕೆ ಹಲವಾರು ಪತ್ರಿಕೆಗಳಿವೆ. ಆದರೆ ಹೆಚ್ಚಿನ ಕಥನಗಳೂ ಕಾಮಿಕ್ ರೂಪದಲ್ಲಿವೆ. ಇವೂ ಮಕ್ಕಳಿಗೆ ಮನರಂಜನೆ ಒದಗಿಸಬಲ್ಲುವು ನಿಜ. ಆದರೆ ಸೀದಾ ಕತೆಯ ರೂಪದಲ್ಲಿರುವ ಕತೆಗಳೂ ಧಾರಾವಾಹಿಗಳೂ ಮಕ್ಕಳಿಗೆ ಬೇಕು. ನೀತಿಯನ್ನೂ ಮಾಹಿತಿಯನ್ನೂ ಸ್ವಲ್ಪ ಬದಿಗೆ ಸರಿಸಿ ಅದ್ಭುತರಮ್ಯತೆಯನ್ನು ಮುಂದೊತ್ತುವಂಥ ಕತೆಗಳೇ ಮಕ್ಕಳಿಗೆ ಯಾವಾಗಲೂ ಇಷ್ಟವಾಗುವಂಥವು. ಕೆಲವು ‘ವಿಚಾರವಾದಿ’ಗಳ ಪ್ರಕಾರ ಇಂಥ ಅಜ್ಜಿಕತೆಗಳು, ಅದ್ಭುತರಮ್ಯ ಕತೆಗಳು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಮೂಢನಂಬಿಕೆಗಳನ್ನು ಬೆಳೆಸುತ್ತವೆ! ಯಾಕೆಂದರೆ ಇಂಥ ಕತೆಗಳಲ್ಲಿ ಯಕ್ಷಿಗಳು, ಕಿನ್ನರರು, ರಾಕ್ಷಸರು, ದೇವತೆಗಳು, ಲೋಕದಲ್ಲಿ ಅಸಾಧ್ಯವೆನಿಸುವ ಪ್ರಾಣಿಗಳು ಮುಂತಾದುವು ಬರುತ್ತವೆ; ವರ, ಶಾಪ, ಹರಕೆ ಮುಂತಾದುವುಗಳಿಗೆ ಇಲ್ಲಿ ಸ್ಥಾನವಿರುತ್ತದೆ; ಮಾಯಾವಿಗಳು ಯಾವ ರೂಪಗಳನ್ನು ಬೇಕಾದರೂ ತಳೆಯಬಲ್ಲುವು, ಎಂಥ ಜಾದೂವನ್ನೂ ಮಾಡಬಲ್ಲುವು. ಇದು ಅಸಾಧ್ಯತೆಗಳು ಸಾಧ್ಯವಾಗುವ ಪ್ರಪಂಚ. ಅರ್ಥಾತ್ ವಾಸ್ತವದ ಸಾಮಾಜಿಕ ಜಗತ್ತಲ್ಲ. ಹಾಗಿದ್ದರೆ, ‘ವಿಚಾರವಾದ’ ಒಪ್ಪುವಂಥ ಮಕ್ಕಳ ಕತೆಗಳು ಹೇಗಿರುತ್ತವೆ? ಇದಕ್ಕೆ ಉತ್ತರವೇ ಇಲ್ಲ. ಮಕ್ಕಳ ಕತೆಗಳಿಂದ ವಿಚಾರವಾದವನ್ನು ಆದಷ್ಟೂ ದೂರವಿಡುವುದು ಒಳ್ಳೆಯದು. ಅದ್ಭುತರಮ್ಯ ಕತೆಗಳೇ ಅವರ ಕಲ್ಪನಾಶಕ್ತಿಯನ್ನು ಕೆರಳಿಸುವುದು. ಆದರೆ ಇದೇ ಮಾತನ್ನು ನೈತಿಕತೆಯ ಬಗ್ಗೆ ಹೇಳುವಂತಿಲ್ಲ. ಯಾಕೆಂದರೆ ಮಕ್ಕಳೂ ಕೂಡಾ ಒಳಿತು-ಕೆಡುಕು, ಸರಿ-ತಪ್ಪು, ನ್ಯಾಯ-ಅನ್ಯಾಯ ಮುಂತಾದ ಪಾತಳಿಗಳ ಮೇಲಿಂದಲೇ ಲೋಕವ್ಯಾಪಾರಗಳನ್ನು ಅರ್ಥಮಾಡಿಕೊಳ್ಳುವವರು. ಕತೆಯೊಂದರಲ್ಲಿ ಕೆಟ್ಟವನಿಗೆ ಕೊನೆಯಲ್ಲಿ ಒಳ್ಳೆಯದಾಗಿ ಒಳ್ಳೆಯವನಿಗೆ ಕೆಡುಕಾದರೆ ಮಕ್ಕಳಿಗೆ ಅದು ಹಿಡಿಸದು. ಆದರೂ, ನೀತಿ ನಿರೂಪಣೆಗೆಂದೇ ಕತೆಯೆಂಬ ರೀತಿಯಲ್ಲೂ ಕತೆ ಇರಬಾರದು. ಮಕ್ಕಳು ಕತೆಗೋಸ್ಕರವೇ ಕತೆ ಓದುತ್ತಾರಲ್ಲದೆ ಉಪದೇಶ ಕೇಳುವುದಕ್ಕೆಂದಲ್ಲ. ಉಪದೇಶಗಳು ಮಕ್ಕಳಿಗೆ ಬೇಸರ ತರಿಸುತ್ತವೆ.

ವೈಜ್ಞಾನಿಕತೆ, ತಾಂತ್ರಿಕತೆ ಮತ್ತು ವೈಚಾರಿಕತೆಗಳು ತೀವ್ರವಾಗಿ ಮುನ್ನೊತ್ತುತ್ತಿರುವ ಮುಗ್ಧತಾನಂತರದ ಈ ಕಾಲದಲ್ಲಿ ನಿಜವಾದ ‘ಕತೆ’ಗಳನ್ನು-ಅರ್ಥಾತ್ ಕಟ್ಟುಕತೆಗಳನ್ನು- ಕಲ್ಪಿಸುವ ಅದ್ಭುತರಮ್ಯ ಅಥವಾ ಪೌರಾಣಿಕ ಕಾಲ್ಪನಿಕತೆಯನ್ನು ನಾವು ಕಳೆದುಕೊಂಡಿದ್ದೇವೆಯೇ? ಮುಗ್ಧತೆಗೆ ಮತ್ತೆ ಮರಳುವುದು ಹೇಗೆ? ಮಕ್ಕಳ ಕತೆ ಕವಿತೆಗಳಲ್ಲಿ, ಮಾತುಗಳಲ್ಲಿ, ಆಟಗಳಲ್ಲಿ ದೊಡ್ಡವರು ಆಸಕ್ತಿವಹಿಸುವುದೊಂದೇ ಇದಕ್ಕಿರುವ ದಾರಿ. ಕಾಲ್ಪನಿಕ ಶಕ್ತಿಯ ಬೆಳವಣಿಗೆಗೆ ಮಕ್ಕಳ ಮುಗ್ಧತೆ ಅತ್ಯಗತ್ಯ. ಇದಿಲ್ಲದಿದ್ದರೆ ವಿಜ್ಞಾನವಾಗಲಿ ತಾಂತ್ರಿಕತೆಯಾಗಲಿ ಬೆಳೆಯುವುದು ಸಾಧ್ಯವಿಲ್ಲ. ಇಪತ್ತನೆ ಶತಮಾನದ ಆದಿಯಲ್ಲಿ ಇಂಗ್ಲೆಂಡ್‌ನಲ್ಲಿದ್ದ ಪ್ರಸಿದ್ಧ ತತ್ವಜ್ಞಾನಿ ಲುಡ್ವಿಗ್ ವಿಟ್‌ಗೆನ್‌ಸ್ಟೈನ್‌ಗೆ ಪತ್ತೇದಾರಿ ಕಾದಂಬರಿಗಳನ್ನೋದುವುದು ಮತ್ತು ಸಿನಿಮಾ ನೋಡುವುದು ಹವ್ಯಾಸವಾಗಿತ್ತು. ಎತ್ತಣ ಸಿನಿಮಾ ಎತ್ತಣ ತತ್ವಜ್ಞಾನ ಎಂದು ಆಶ್ಚರ್ಯವಾಗುತ್ತದೆ. ಆದರೆ ವಿಟ್‌ಗೆನ್‌ಸ್ಟೈನ್‌ನ ಕಲ್ಪನಾಶಕ್ತಿಗೆ ಇಂಥ ಹೊರದಾರಿಗಳು ಬೇಕಾಗಿದ್ದುವು. ನಿಜವಾಗಿ ನೋಡಿದರೆ ಅವು ನಮಗೆಲ್ಲರಿಗೂ ಬೇಕು! ಯಾವುದೋ ಹುಸಿ ಪೋಜುಗಳನ್ನು ಕೊಡುತ್ತ ನಾವೀ ಸತ್ಯವನ್ನು ಒಪ್ಪುವುದಿಲ್ಲ ಅಷ್ಟೆ. ಮುಂದುವರಿದ ದೇಶವಾದ ಇಂಗ್ಲೆಂಡಿನಲ್ಲಿ ‘ಹ್ಯಾರಿ ಪಾಟರ್’ ಪ್ರಸ್ತುತವಾದರೆ, ಕನ್ನಡದಲ್ಲಿ ಯಾಕೆ ಇಂಥ ರಚನೆಗಳು ಅಪ್ರಸ್ತುತವಾಗಬೇಕು?

ವೈಜ್ಞಾನಿಕ ಕತೆ ಕಾದಂಬರಿಗಳು ಎಂಬ ಸಾಹಿತ್ಯ ಪ್ರಕಾರವೊಂದಿದೆ. ಈ ಕತೆ ಕಾದಂಬರಿಗಳು ವೈಜ್ಞಾನಿಕ ರಂಗದಲ್ಲಿ ಈಗಾಗಲೇ ಆಗಿರುವ ಬೆಳವಣಿಗೆಯೊಂದಿಗೆ ಕಾಲ್ಪನಿಕತೆಯನ್ನೂ ಸೇರಿಸಿಕೊಂಡು ಹೊಸೆಯುವ ಕಥಾನಕಗಳು. ಇವನ್ನೇ ಬಳಸಿಕೊಂಡು ಮಾಡಿದ ಸಿನಿಮಾಗಳೂ ಸೀರಿಯಲುಗಳೂ ಇವೆ. ಈ ಕಾಲ್ಪನಿಕ ವೈಜ್ಞಾನಿಕ ಸಾಹಿತ್ಯ ಕೂಡಾ ಕಲ್ಪನೆಯ ಸೃಪ್ಟಿಶೀಲತೆಯನ್ನು ಆಧರಿಸಿ ರಚಿತವಾಗುವಂಥವು. ಮಾತ್ರವಲ್ಲ, ಇಂದಿನ ವೈಜ್ಞಾನಿಕ ಕಾಲ್ಪನಿಕತೆ ನಾಳೆ ವಾಸ್ತವವಾಗುವುದನ್ನು ಸಹಾ ಅಲ್ಲಗಳೆಯಲಾಗುವುದಿಲ್ಲ! ಪುರಾತನ ವಿಮಾನದ ಕಲ್ಪನೆ ಇಂಥದೇ ಆಗಿರಬೇಕಲ್ಲವೇ? ಆದ್ದರಿಂದ ಈ ಕಲ್ಪನಾಶಕ್ತಿಯನ್ನು ಮಕ್ಕಳಲ್ಲಿ ಆರಂಭದಿಂದಲೇ ಪ್ರಚೋದಿಸುವುದು ಅತ್ಯಗತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೧
Next post ತಪ್ಪಲ್ಲವೆ?

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…