ನಾನಾಗ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದೆ.  ಪ್ರಥಮ ದರ್ಜೆಯಲ್ಲಿ ಪಾಸಾಗಿ ತೋರಿಸಬೇಕೆಂದು ಹಗಲಿರುಳೂ ಕಷ್ಟಪಟ್ಟು ಅಭ್ಯಾಸಮಾಡಿದ್ದೆ.  ಮೊದಲೆರಡು ಕನ್ನಡ ಮತ್ತು ವಿಜ್ಞಾನ ಪರೀಕ್ಷೆಗಳನ್ನು ಚೆನ್ನಾಗಿಯೇ ಬರೆದಿದ್ದೆ.  ಮೂರನೆಯದು ಇಂಗ್ಲೀಷ್ ಪರೀಕ್ಷೆ ಅಂದಿನ ಪ್ರಶ್ನೆಪತ್ರಿಕೆ ನೋಡಿ ಸಂತೋಷದಿಂದ ಹಿಗ್ಗಿದ್ದೆ. ಏಕೆಂದರೆ ನಾನು ಓದಿದ್ದನ್ನೇ ಕೇಳಿದ್ದರು.  ಮೊದಲೆರಡು ಪ್ರಶ್ನೆಗಳಿಗೆ ಚೆನ್ನಾಗಿಯೇ ಉತ್ತರ ಬರೆದೆ.  ಮೂರನೆಯ ಪ್ರಶ್ನೆಯು ಕನ್ನಡದಲ್ಲಿ ಕೊಟ್ಟಿದ್ದ ಒಂದು ಪ್ಯಾರಾಗ್ರಾಫನ್ನು ಇಂಗ್ಲೀಷ್‌ಗೆ ಅನುವಾದ ಮಾಡಿ ಬರೆಯಬೇಕಿತ್ತು.  ಸಂಘಜೀವಿಗಳ ಬಗೆಗೆ ಆ ಪ್ಯಾರಾ ಇತ್ತು.  ಸಂಘಜೀವಿಗಳೆಂದ ಮೇಲೆ ಜೇನ್ನೊಣ, ಇರುವೆ ಮುಂತಾದವುಗಳ ಉದಾಹರಣೆ ಅದರಲ್ಲಿತ್ತು.  ಅನುವಾದವೇನೋ ಸರಿಯಾಗಿಯೇ ಮಾಡುತ್ತಾ ಬಂದೆ.  ಆದರೆ ಅರ್ಧಕ್ಕೆ ಬಂದಾಗ ಒಂದು ವಿಚಿತ್ರ ತೊಡಕಿನಲ್ಲಿ ಸಿಲುಕಿದಂತೆ ಅನಿಸಿತು.  ಇರುವೆಗಳ ಬಗ್ಗೆ ನಾನಾಗ ಬರೆಯಬೇಕಿತ್ತು.  ಇರುವೆಗೆ ಇಂಗ್ಲೀಷ್ ಪದ ನನಗಾಗ ನೆನಪು ಬರಲಿಲ್ಲ!  ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.  ಗಡಿಯಾರದ ಸೆಕೆಂಡಿನ ಮುಳ್ಳು ಟಿಕ್… ಟಿಕ್… ಟಿಕ್… ಎಂದು ಶಬ್ದ ಮಾಡುತ್ತಾ ನನ್ನ ಹೃದಯದ ಬಡಿತ ಹೆಚ್ಚಿಸುತ್ತಿತ್ತು.  ಇರುವೆಯ ಇಂಗ್ಲೀಷ್ ನನಗೆ ಪೂರ್ತಿ ಮರೆತೇ ಹೋಗಿದೆಯೇನೋ ಎಂದೆನಿಸಿತು.  ನನ್ನ ಚುರುಕು(?) ಮೆದುಳು ಹಾಗೆ ಕೈಕೊಡುತ್ತದೆಂದು ನಾನು ತಿಳಿದಿದ್ದಿರಲಿಲ್ಲ.  ನಿರಾಶನಾಗಿ ಪಕ್ಕದ ಗೋಡೆಯನ್ನು ದಿಟ್ಟಿಸಿದಾಗ ಇರುವೆಗಳ ಸಾಲು ಕಾಣಿಸಬೇಕೆ?  ಸುಮ್ಮನೆ ಅವನ್ನು ದಿಟ್ಟಿಸತೊಡಗಿದೆ.  ಆದರೂ ನನಗೆ ನೆನಪು ಬರಲಿಲ್ಲ!  ಹೀಗೆ ಬರೆಯದೇ ಕುಳಿತದ್ದನ್ನು ನೋಡಿದ ನಮ್ಮ ಗುರುಗಳೊಬ್ಬರು “ಏನೋ ಇರುವೆಗಳನ್ನು ನೋಡುತ್ತಲೇ ಕೂಡ್ತಿಯೋ ಉತ್ತರ ಬರೀತಿಯೋ?” ಎಂದು ಇಂಗ್ಲೀಷ್‌ನಲ್ಲಿ ಬೈದರು.  ಉತ್ತರ ಸಿಕ್ಕ ನಾನು ಅವರು ಬೈದುದಕ್ಕೆ ಸಿಟ್ಟಾಗದೇ ಅವರಿಗೆ ಮತ್ತು ಇರುವೆಗಳಿಗೆ ಥ್ಯಾಂಕ್ಸ್ ಹೇಳಿ ಉತ್ತರ ಮುಂದುವರಿಸಿದೆ!

ಅಂದಿನಿಂದ ನೋಡಿ ನನಗೆ ಮರೆವು ದಿನೇ ದಿನೇ ಕಾಡುತ್ತಿದೆ.  `ಮರೆಯದೇ ಇದ್ದವನು ಮಾನವನಲ್ಲ ಕಚ್ಚದೇ ಇದ್ದುದು ಕೆರವಲ್ಲ’ ಎಂಬ ಗಾದೆ ಮಾತೊಂದು ಮೊನ್ನೆ ಓದಿದ್ದೇನೆ. ಓದಿದ್ದಷ್ಟೇ ನೆನಪಿದೆ.  ಯಾವ ಪತ್ರಿಕೆ/ಪುಸ್ತಕ ಎಂಬುದು ಈಗ ಮರೆತು ಹೋಗಿದೆ.  ಅದನ್ನು ಓದಿದಾಗಿನಿಂದ ನನಗೆ ಮರೆವು ಹೆಚ್ಚಾಗಿದೆ-ಹತ್ತು ಮುಖವಾಗಿ ಕಾಡುತ್ತಿದೆ.  ಸಾವಿರ ಕಾಲುಗಳಾಗಿ ಕುಟುಕುತ್ತಿದೆ.  ಬಹುಶಃ ನಾನು ಹೆಚ್ಚು ಹೆಚ್ಚು ಮಾನವನಾಗುತ್ತ ಬರುತ್ತಿದ್ದೇನೆಂದು ಕಾಣುತ್ತಿದೆ.  ನನ್ನ ಕೆರ(ಎಕ್ಕಡ)ವಿಗೂ ಬಹುಶಃ ಈ ಗಾದೆ ಕೇಳಿಸಿರಬೇಕು ಏಕೆಂದರೆ ಅದೂ ಈಚೀಚಿಗೆ ಹೆಚ್ಚೆಚ್ಚು ಕಚ್ಚುತ್ತಿದೆ!

ಮೊನ್ನೆ ಹೀಗೆಯೇ ಆಯಿತು.  ಅಂದು ನಾನು ಆಫೀಸಿಗೆ ಹೊರಡಲು ಅಣಿಯಾದಾಗ ಈಕೆ ಮುಖ ಇಂಡಿಯಾದಷ್ಟು ವಿಶಾಲ ಮಾಡಿ ಮೆಲ್ಲನೆ ಹತ್ತಿರ ಬಂದು “ರೀ ರೀ” ಎಂದಳು.  “ಏನೆ” ಎಂದೆ “ರೀ” ಅಮಿತಾಬನ ಹೊಸ ಚಿತ್ರ ಬಂದಿದೆಯಂತೆ ನಾವೂ ಇವತ್ತಿನ ಫಶ್ಟ್ ಶೋಗೆ ಹೋಗೋಣರೀ, ಪಕ್ಕದ್ಮನೆ ಸೀತಮ್ನೊರು ನೋಡಿದ್ದಾರೆ, ಬಹಳ ಚೆನ್ನಾಗಿದೆಯಂತೆ ನೀವು ತಪ್ಪದೇ ಐದು ಗಂಟೆಗಿಂತ ಮೊದಲೇ ಆಫೀಸಿನಿಂದ ಬನ್ನಿ ನಾನು ರೆಡಿಯಾಗಿ ನಿಮಗಾಗಿ ಕಾಯುತ್ತಿದ್ದೇನೆ” ನನ್ನಂತೆಯೇ ಅಮಿತಾಬನ ಅಭಿಮಾನಿಯಾದ, ಅವನ ಒಂದೂ ಚಿತ್ರ ಬಿಡದ ನನ್ನವಳು ಹೇಳಿದ್ದಳು.  ಸಾಲದ್ದೆಂಬಂತೆ ಮಗ “ಪಪ್ಪ, ಪೆನ್ಸಿಲ್ ಮುಗಿದುಹೋಗಿದೆ ಬರುವಾಗ ಖಂಡಿತವಾಗಿಯೂ ತರಬೇಕು” ಆಜ್ಞಾಪಿಸಿದ್ದ.

ಆಫೀಸ್‌ನಿಂದ ಕೆಲಸವೆಲ್ಲ ಮುಗಿಸಿ ಎಂದಿನಂತೆ ಐದೂವರೆಗೆ ಮನೆಗೆ ವಾಪಾಸ್ಸಾದೆ.  ಇವಳೂ ಕಾಲಿನಿಂದ ತಲೆಯವರೆಗೆ ಸಿಂಗರಿಸಿಕೊಂಡು ಬಾಗಿಲಲ್ಲೆ ನಿಂತಿದ್ದಳು.  ಆದರೆ ಮುಖ ಮಾತ್ರ ಸೊಟ್ಟಗಾಗಿತ್ತು!  “ಏನು! ಎಲ್ಲಿಗೋ ಹೊರಟಂತಿದೆಯಲ್ಲ?” ಎನ್ನುತ್ತ ಒಳಬಂದು “ಉಶ್ ಇಂದು ಬಹಳ ದಣಿವಾಗಿದೆ ಒಂದು ಕಪ್ ಟೀ ಅರ್ಜೆಂಟಾಗಿ ಮಾಡಿಕೊಡ್ತೀಯಾ” ಎಂದೆ ಷೂ ಬಿಚ್ಚುತ್ತ “ಈಗ ಟೈಮೆಷ್ಟು?” ಅವಳು ಕೇಳಿದ್ದಕ್ಕೆ “ಐದೂವರೆ” ಎಂದೆ.  “ಆಫೀಸಿಗೆ ಹೋಗುವಾಗ ನಾನು ಹೇಳಿದ್ದು ಮರೆತು ಹೋಯಿತಾ?”  ಉಹ್ಞುಂ!  ನೆನಪಾಗಲೇ ಇಲ್ಲ.  ಕೊನೆಗೆ ಏನೆಂಬಂತೆ ಧೈರ್ಯ ಮಾಡಿ ಕೇಳಿಯೇ ಬಿಟ್ಟೆ.  “ಅದೇ ರೀ ಸಿನಿಮಾಕ್ಕೆ ಹೋಗೋ ವಿಷಯ…” ಸಿಟ್ಟಿನಿಂದ ಗದರಿದಾಗ ನೆನಪಾಯಿತು.  “ಓ!  ಸಿನಿಮಾಕ್ಕೆ ಹೋಗೋ ವಿಷಯಾನಾ ಆಫೀಸ್ ಕೆಲಸದಲ್ಲಿ ಮರೆತೇ ಹೋಯಿತು ನೋಡು…!”  ಎಂದಿದಕ್ಕೆ ಟೀ ಕೊಡದೇ ಮುಖಕ್ಕೆ ಮಂಗಳಾರತಿ ಮಾಡಿದ್ದಳು ಬೈಗಳಿಂದ.  ಪೆನ್ಸಿಲ್ ತರಲೂ ಮರೆತಿದ್ದರಿಂದ ಮಗನೂ ಧ್ವನಿಗೂಡಿಸಿ ಸಪೋರ್ಟ ಕೊಟ್ಟಿದ್ದ.

ಮೊನ್ನೆಯ ಮಾತು, ಸರಿಯಾದ ದಿನಾಂಕ ಮರೆತು ಹೋಗಿದೆ.  ಇವಳೂ ಮಗನೊಂದಿಗೆ ತನ್ನೂರಿಗೆ ಹೋಗಿದ್ದಳೂ.  ಮನೆಯಲ್ಲಿ ಹಾಯಾಗಿ ನಾನೊಬ್ಬನೇ ಇದ್ದೆ ಎಂದಿನಂತೆ ಮುಂಜಾನೆ ಬೇಗನೇ ಎದ್ದು ಮೆನಯ ಎಲ್ಲಾ ಕೆಲಸ ಮುಗಿಸಿದೆ.  ಸರಿಯಾದ ಸಮಯಕ್ಕೆ ಆಫೀಸಿಗೆ ಹೋಗಿ ಬಾಸ್‌ಗೆ ಶಾಕ್ ಟ್ರೀಟ್‌ಮೆಂಟ್ ಕೊಡಬೇಕು, ತಡಮಾಡ್ತಿನಿ ಅಂತ ದಿನಾಲೂ ಬೈತಿರ್ತಾನೆ ಸೂ… ಮಗ ಎಂದು ಗಡಬಡಿಸಿ ಆಫೀಸಿಗೆ ಹೋದೆ.

ವಾಚಮನ್ ನನ್ನ ನೋಡುತ್ತಲೇ ನಗಲು ಶುರುಮಾಡಿದ.  ಅರೆ!…. ದಿನಾಲೂ ಅಭಿಮಾನದಿಂದ ಬರಮಾಡಿಕೊಳ್ಳುವವ ಇವತ್ತೇಕೆ ಹೀಗೆ ಎಂದು ಬೆರಗಾದೆ.  ನಿಲ್ಲದ ಅವನ ನಗು ನೋಡಿ ಏನಾದರೂ ಎಡವಟ್ಟಾಗಿರಬಹುದೆಂದು ತಿಳಿದೆ.  ನನ್ನ ನಾನೇ ಪರೀಕ್ಷಿಸಲಣಿಯಾದೆ.  ಮೇಲಿನಿಂದ ಕೆಳಗಿನವರೆಗೆ ನೋಡಿದೆ.  ಕಾಲರ್‍, ಅಂಗಿ, ಬೆಲ್ಟ್, ಪ್ಯಾಂಟ್ಸ್, ಚೈನ್ ಎಲ್ಲವೂ ಸರಿಯಾಗಿಯೇ ಇದೆ.  ಇನ್ನೂ ಕೆಳಗೆ ನೋಡಿದೆ.  ಎಲ್ಲಿ ಎಡವಟ್ಟಾಗಿದ ಎಂಬುದು ಆಗ ತಿಳಿದು ನಾಚಿಕೆ ಬಂತು!  ನಾನು ಆಫೀಸಿಗೆ ಬೇಗನೇ ಬರುವ ತರಾತುರಿಯಲ್ಲಿ ಸಾಕ್ಸ್‌ನ್ನಷ್ಟೆ ಹಾಕ್ಕೊಂಡಿದ್ದೆ ಶೂ ಹಾಕ್ಕೊಳಲು ಮರೆತೇ ಬಿಟ್ಟಿದ್ದೆ!

ಬಾಸ್‌ಗೆ ಶಾಕ್ ಟ್ರೀಟ್‌ಮೆಂಟ್ ಕೊಡಬೇಕೆಂದಿದ್ದ ನಾನು, ನನಗೇ ಶಾಕ್ ಆಯಿತು.

ನಿನ್ನೆ ಒಂದು ಹೆಸರಾಂತ ಪತ್ರಿಕೆಗೆ ಲೇಖನ ಕಳಿಸಿದ್ದೆ.  ಪೋಸ್ಟ್ ಮಾಡಿ ಬಂದ ನಂತರ ಒಳ್ಳೆಯ ಲೇಖನ ಕಳಿಸಿದ್ದೇನೆ ಎಂದು ನನ್ನ ನಾನೇ ಬಿಂಕದಿಂದ ಹೇಳಿಕೊಂಡು, ಬರೆದ ಲೇಖನವನ್ನೊಮ್ಮೆ ಜ್ಞಾಪಿಸಿಕೊಂಡೆ.  ನನಗಾಗ ನೆನಪಾಯಿತು ಆ ಲೇಖನಕ್ಕೆ ನಾನು ಹೆಸರೇ ಕೊಟ್ಟಿದ್ದಿಲ್ಲ!  ಗೆಳೆಯರೊಂದಿಗೆ ಅಥವಾ ಯಾರೊಂದಿಗಾದರೂ ಮಾತಾಡಿದ್ದಾಗಲಿ, ಏನಾದರೂ ಓದಿದ್ದಾಗಲಿ ಈಗೀಗ ನನಗೆ ನೆನಪಿನಲ್ಲಿರುತ್ತಿಲ್ಲ!  ಹ್ಞಾ! ಗೆಳೆಯ ಅಂದಮೇಲೆ ನೆನಪಿಗೆ ಬಂತು ನೋಡಿ ಅದನ್ನು ಬರೆಯಲು ಮರೆತೇಬಿಟ್ಟಿದ್ದೆ.  ಮೆಲ್ಲಗೆ ಓದಿ `ಗೆಳೆಯನಿಗೆ ಹಣ ಸಾಲ ಕೊಡಬೇಡಿ ಅದು ಆತನ ಜ್ಞಾಪಕ ಶಕ್ತಿಯನ್ನು ಕಡಿಮೆ ಮಾಡುವುದಂತೆ!”

ನಾವು ನೀವೇನು ಬಿಡಿ ಸಾಮಾನ್ಯರು.  ಮರೆವು ಎಂಥೆಂಥ ಜ್ಞಾನಿ ವಿಜ್ಞಾನಿಗಳನ್ನು ಸುಮ್ಮನೆ ಬಿಟ್ಟಿಲ್ಲ.  ಜಗತ್ಪ್ರಸಿದ್ಧ ವಿಜ್ಞಾನಿ ನ್ಯೂಟನ್ನನೂ ಇದರಿಂದ ಹೊರತಲ್ಲ. ಅವನ್ನೊಮ್ಮೆ ಲೆಕ್ಕ ಮಾಡುವುದಲರಲ್ಲಿ ತಲ್ಲೀನನಾಗಿ ಕುಳಿತಿದ್ದನಂತೆ.  ಅವನ ಅಡಿಗೆಯವಳು ಬಂದು ಅವನ ಉಪಹಾರಕ್ಕಾಗಿ ಒಂದು ಮೊಟ್ಟೆ, ಸ್ಟೋವ್, ಪಾತ್ರೆಯೊಂದರಲ್ಲಿ ಸ್ವಲ್ಪ ನೀರು ಹಾಗೂ ಗಡಿಯಾರ ಮುಂತಾದವುಗಳನ್ನು ಆತನ ಮುಂದಿರಿಸಿ ಮೊಟ್ಟೆಯನ್ನು ಐದು ನಿಮಿಷ ನೀರಿನಲ್ಲಿ ಬೇಯಿಸಿ ತಿನ್ನಬೇಕೆಂದು ಹೇಳಿ ಹೊರಟು ಹೋದಳಂತೆ.

ಕೆಲನಿಮಿಷದ ನಂತರ ಪುನಃ ಆಕೆ ಬಂದು ನೋಡುತ್ತಾಳೆ.  ನ್ಯೂಟನ್ ಗಡಿಯಾರವನ್ನು ನೀರಿನಲ್ಲಿ ಹಾಕಿ ಅಂಗೈಯಲ್ಲಿ ಮೊಟ್ಟೆಯನ್ನು ಹಿಡಿದು ಅದನ್ನೇ ದಿಟ್ಟಿಸಿ ನೋಡುತ್ತಾ ಕುಳಿತಿದ್ದನಂತೆ!

ಇನ್ನು ಪುರಾಣಗಳ ಕಡೆಗೆ ತಲೆಹಾಕಿ ನೋಡಿದರೆ ಅಲ್ಲಿಯೂ ಮರೆವು, ಮರೆತಿದ್ದನ್ನು ಕಾಣಬಹುದು.  ಮುಗ್ಧ ಶಕುಂತಲೆಯನ್ನು ಪ್ರೀತಿಸಿ, ನೆನಪಿಗಾಗಿ ಉಂಗುರ ಕೊಟ್ಟು ಆಮೇಲೆ ಎಲ್ಲವನ್ನೂ ಮರೆತು ಅವಳ ಕನಸನ್ನು ಭಗ್ನಗೊಳಿಸಿದ್ದ ದುಷ್ಯಂತ ಮಹಾರಾಜ, ತನ್ನ ಮೈಯ ಮಣ್ಣಿನಿಂದ ಮಗ ಗಣಪನ್ನು ಸೃಷ್ಟಿಸಿ ಶಿಶ್ನಮಾಡಲು ಮರತೇ ಬಿಟ್ಟ ಪಾರ್ವತಿಯ ಕಥೆ ನೆನಪಾಯಿತು.

ನಾನು ಆಗಾಗ್ಗೆ ವಿಚಾರಮಾಡುತ್ತೇನೆ.  ಈ ವಿಜ್ಞಾನಿಗಳೂ ಏನೇನೆಲ್ಲ ಆವಿಷ್ಕಾರ ಮಾಡಿದ್ದಾರೆ. ಆದರೆ ಈ ಮರೆವಿಗೇಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ ಎಂದು.  ಹಾಗೇನಾದರೂ ಮಾಡಿದರೆ ನಾನು ಮತ್ತು ನನ್ನಂತಹ ಅಸಂಖ್ಯಾತ ಮರೆಗುಳಿಗಳು ಅವರಿಗೆ ಚಿರಋಣಿ!  ಒಂದು ವೇಳೆ ನಾನೇನಾದರೂ ವಿಜ್ಞಾನಿಯಾದರೆ ಮೊದಲು ಅದೇ ಕೆಲಸ ಮಾಡುವೆ.  ಅರೇ…!  ಮರೆತೇ ಬಿಟ್ಟೆ.  ಔಷಧಿ ಅಂದಮೇಲೆ ನೆನಪಿಗೆ ಬಂತು ನೋಡಿ.  ದಿನಕ್ಕೊಂದು ಚಮಚ ತುಪ್ಪ ತಿನ್ನುತ್ತಾ ಬಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದು ಮೊನ್ನೆ ಯಾರೋ ಹೇಳಿದ್ದನ್ನು ಕೇಳಿದ್ದೇನೆ.  ಯಾರು ಎಂಬುದನ್ನು ಎಷ್ಟು ತಲೆಕೆರೆದುಕೊಂಡರೂ ನೆನಪಾಗುತ್ತಿಲ್ಲ.  ಈ ಉಪಾಯವೂ ಮಾಡಿ ನೋಡುತ್ತಿದ್ದೇನೆ.  ನನ್ನ ಜೇಬೇ ಖಾಲಿಯಾಗುತ್ತಿದೆ ವಿನಹ ಮರೆವು ಕಡಿಮೆಯಾಗಿಲ್ಲ.  ನಿಮಗೇನಾದರೂ ಔಷಧಿ ಗೊತ್ತಿದ್ದರೆ ತಪ್ಪದೇ ತಿಳಿಸಿ ಮರೆತೀರಿ ಮತ್ತೇ ಹ್ಞಾಂ!

ಹೀಗೆಯೇ ಪುಟಗಟ್ಟಲೇ ಬರೆಯುತ್ತಿರುವುದನ್ನು ನೋಡಿ ನಾನು ಈ ಲೇಖನವನ್ನು ಮುಗಿಸುವುದನ್ನೂ ಮರೆತೇನೋ ಏನೋ ಎಂದು ನೀವು ಭಾವಿಸಿರಬಹುದು.  ಆ ಚಿಂತೆ ನಿಮಗೆ ಕಾಡುತ್ತಿದ್ದರೆ ಅದನ್ನು ದೂರ ಮಾಡಿ ಇನ್ನೂ ಎಷ್ಟೋ ವಿಷಯ ಬರೆಯಬೇಕೆಂದು ನೆನಪು ಮಾಡಿಕೊಂಡಿದ್ದೆ.  ಆದರೆ ಅವೆಲ್ಲ ಈಗ ಮರೆತುಹೋಗಿ ತಲೆ ಖಾಲಿಯಾಗಿರುವುದರಿಂದ ಮುಗಿಸುತ್ತೇನೆ!

*****