ಆಗ ಮಲೆನಾಡಿನ ಕೇಂದ್ರವಾದ ಸಾಗರದಲ್ಲಿ ಬ್ಯಾಂಕ್ ನೌಕರಿಯಲ್ಲಿದ್ದೆ. ಸಾಗರದಲ್ಲಿನ ಜಡಿಮಳೆಯಿಂದ ಬೇಸತ್ತ ನಾನು ಮೈಸೂರಿಗೆ ವರ್‍ಗವಾಗುವ ಬಗ್ಗೆ ಮನದಲ್ಲಿಯೇ ಕಲ್ಪನೆ ಮಾಡಿಕೊಂಡು ಮಂಡಿಗೆ ಮೆಯ್ಯುತ್ತಿದ್ದೆ.
ಅದೊಂದು ದಿನ ಚಿಂತೆ ಮಾಡುತ್ತಲೇ ನಿದ್ದೆ ಆವರಿಸಿತ್ತು. ನನಗೆ ಮೈಸೂರಿಗೆ ವರ್‍ಗವಾಗಿ ರೈಲಿನಲ್ಲಿ ನಾನು ನನ್ನವಳ ಸಂಗಡ ಪ್ರಯಾಣಿಸಿ ಮೈಸೂರು ನಿಲ್ದಾಣದಲ್ಲಿ ಇಳಿದೆ. ನಮ್ಮ ಮಾವನವರು ನಮ್ಮನ್ನು ಸ್ವಾಗತಿಸಲು ಫ್ಲಾಟ್ ಫಾರಂನಲ್ಲಿ ಕಾಯುತ್ತಿರುವುದರ ಬಗ್ಗೆ ಕನಸು ಕಂಡೆ.
ಬೆಳಗ್ಗೆ ಎದ್ದೊಡನೆ ಕನಸಿನ ಬಗ್ಗೆ ನನ್ನವಳಿಗೆ ಹೇಳಿದೆ. “ರ್ರೀ, ನೀವು ಈಗಲೇ ಬೆಂಗಳೂರಿಗೆ ಹೋಗಿ ಹೆಡ್ ಆಫೀಸ್ನಲ್ಲಿ ಮೇಲಧಿಕಾರಿಯನ್ನು ಕಂಡು ಸಾಗರದ ಹವಾ ನನಗೆ ಒಗ್ಗುತ್ತಿಲ್ಲ. ಮೈಸೂರಿಗೆ ವರ್‍ಗಾ ಮಾಡಿ” ಎಂದು ಕೇಳಿಕೊಳ್ಳಿ ಎಂದು ಆಕೆ ಸಲಹೆ ನೀಡಿದಳು.
ಅವಳು ಹೇಳಿದ್ದು ಸರಿ ಎಂದೆನಿಸಿ ಕೂಡಲೇ ಬೆಂಗಳೂರಿಗೆ ಹೊರಟೆ. ಮೇಲಧಿಕಾರಿಗಳಲ್ಲಿ ವಿನಂತಿಸಿದೆ.
“ಏನು? ನಿಮಗೆ ಮೈಸೂರೇ ಆಗ ಬೇಕೋ? ನಿಮಗಿಂತ ಸೀನಿಯರ್ ಎಷ್ಟೋ ಜನ ವರ್‍ಗ ಬೇಕೆಂದು ಹಾರಾಡುತ್ತಿದ್ದಾರೆ. ಅದೆಲ್ಲ ಆಗೋದಿಲ್ಲ ಬೇಕಾದರೆ ಹತ್ತಿರದ ಯಾವುದಾದರೂ ಹಳ್ಳಿಗೆ ಹಾಕೋಣ” ಎಂದು ಆಧಿಕಾರಿ ಗುಡುಗಿದರು.
ಕನಸು ನನಸಾಗಿದ್ದರೆ, ಎಷ್ಟು ಚಿನ್ನಾಗಿರುತ್ತಿತ್ತು. ಬಂದ ದಾರಿಗೆ ಸುಂಕವಿಲ್ಲವಾಯಿತಲ್ಲ ಎಂದುಕೊಂಡು ಸಾಗರಕ್ಕೆ ಮರಳಿದೆ. ಒಂದು ವಾರ ಕಳದಿರಬಹುದು. ಬೆಳಿಗ್ಗ ಬ್ಯಾಂಕಿಗೆ ಹೋದಾಗ ಅಚ್ಚರಿಯೊಂದು ಕಾದಿತ್ತು. ಮ್ಯಾನೇಜರ್ ನನ್ನನ್ನು ಕರೆದು “ಎಲ್ಲರಿಗೂ ಸ್ವೀಟ್ ತರಿಸಿ” ಎಂದರು. ನನಗೆ ತಳಬುಡ ಏನೂ ತಿಳಿಯಲಿಲ್ಲ.
“ನೋಡಿ ನಿಮ್ಮ ವರ್‍ಗದ ಆರ್‍ಡರ್” ಎನ್ನುತ್ತಾ ನನ್ನ ಕೈಯಲ್ಲಿತ್ತರು. ನನಗೆ ಮೈಸೂರು ಹತ್ತಿರದ ಹಳ್ಳಿ ಯಾವುದಾದರೂ ಇರಬಹುದು ಎಂಬ ಆತಂಕ ಅದರೆ ದೈವವಶಾತ್ ಮೈಸೂರಿಗೇ ವರ್‍ಗವಾಗಿತ್ತು! ಮನಸ್ಸಿನಲ್ಲಿ ಮೇಲ್ನೋಟಕ್ಕೆ ತೀಕ್ಷ್ಣವಾಗಿ ಅಂತರಂಗದಲ್ಲಿ ಮೃದುವಾಗಿಯೂ ಇದ್ದ ಅಧಿಕಾರಿಯನ್ನು ಮನಸಾರೆ ವಂದಿಸಿದೆ.
*****


















