ಸ್ವಪ್ನಹರಿಣ ಚಪಲ ಚರಣ
ಕಂಗಳಲ್ಲಿ ಇಳಿಯೆ ಹರಣ
ಓಡುತಿಹುದು ವಿಧಿಗೆ ಭೀತ
ಎದೆಯ ಕಾಡೊಳು!
ಜೀವನ ನಿರ್ದಯ ನಿಷಾದ
ದುರ್ದೈವದ ಧನು ಸಜ್ಜಿತ
ಚಿಂತೆಯ ನಂಜಲಗ ತಿವಿದು
ಬೆನ್ನ ಹತ್ತಿದ!
ಭೀತಿಯಿಂದ ತನುಕಂಪಿತ
ನಯನಂಗಳು ಅಶ್ರುಭರಿತ
ಬಂದಿತೆಂದಿತದೊ ಸಮೀಪ
ಕೊನೆಯಗಳಿಗೆಯು
ಕರುಣಾಶ್ರಯವಿಲ್ಲದಾಯ್ತು
ನಿಷ್ಕರುಣಿಯ ಜಗವಾಯಿತು
ಕೆನ್ನೀರಿನ ಮಡುವಾಯಿತು
ಮೃದುಲ ದೇಹವು!
ಕಂಗಳ ಬಟ್ಟಲುಗಳಲ್ಲಿ
ಜಗದಾಸೆಯ ಮದಿರೆಯಲ್ಲಿ
ತುಂಬಿದರೂ ತುಳುಕಿ ತಿಂದು
ದುಃಖಸಾಗರ!
ಪ್ರಕೃತಿಯೆಲ್ಲ ಪ್ರತಿಬಿಂಬಿತ
ನಯನಂಗಳಲತಿ ರಂಜಿತ
ಅದನೊರಸುತ ತೇಲಿ ಬಂತು
ದುಗುಡ ಬೆಂತರ!
ಓಡಿದತ್ತ ಬೆಂಬತ್ತಿದೆ
ನೋಡಿದತ್ತ ನೆಗೆದೆದ್ದಿದೆ
ಮೂರ್ತಿಮಂತ ಮರಣದಂತೆ
ಬಾಳ ರಕ್ಕಸ!
ಸ್ವಪ್ನಹರಿಣ, ನಿಲ್ಲರೆ ಚಣ,
ದಿನ ಸತ್ತಿತು ಇದೆ ಈ ಕ್ಷಣ
ಬಿಸಿಲು ಬಾಣ ತಾಗೆ, ಬಾನ್ಗೆ-
ರಕ್ತ ಚಿಮ್ಮಿತು!
ಕಲ್ಪನೆಯುತ್ತುಂಗ ಶಿಖರ
ಮನದಾಸೆಯ ಸೌಖ್ಯ ಶಿಬಿರ
ಕೈಯ ಚಾಚಿ ಕರೆಯುತಿಹುದು
ತನ್ನ ಎಡೆಯಲಿ!
ಇರುಳಿನ ತೋಳ್ ತೊಟ್ಟಿಲಲ್ಲಿ
ಬೆಳುಂದಿಗಳ ಸೆರಗಿನಲ್ಲಿ
ವಿರಮಿಸಿ ಆ ಕರುಣೆಯಲ್ಲಿ
ಬೆಳೆಸು ಬಲವನು.
ನೀನಿರುತಿರೆ ಇದೆ ಸಂಸ್ಕೃತಿ
ನೀ ಬೆಳೆದರೆ ಅವ ಸಾಹಿತಿ
ಮನ ಮಂದಿರದಲಿ ಮೂರುತಿ
ಚೆಲುವು ನಿನ್ನದು!
ಮುನ್ನಡೆಯಲಿ ನೀ ಪ್ರೇರಣೆ
ಪ್ರತಿ ಯತ್ನಕೆ ನೀ ಚೇತನೆ
ನಿತ್ಯ ನೂತ್ನ ರಮ್ಯವದನೆ
ಕಹಿಯ ಕಳೆಯುವೆ!
ಸಾಯಬಾರದೆಂದು ನೀನು
ಕರಿಯಿರುಳಲಿ ಬೆಳಕು ನೀನು
ಬೆಂದ ಬಾಳ ಹಾಳಿನಲ್ಲಿ
ತಣಿವಿನೂಟೆಯು!
ನಿನ್ನುಳಿಸಲು ಜನ ಕೂಡಿದೆ
ದೇವರನ್ನು ಜಗ ಬೇಡಿದೆ
ಚಿಂತಾಕುಲ ಜೀವಿತದಲಿ
ನಿನಗೆ ಕಾದಿದೆ!
ಕ್ಷುಬ್ಬವಿದ್ಧ ಮಾನವ ಕುಲ
ಅದರ ದುಃಖವಾಯಿತಚಲ
ಅದಕ ಯತ್ನವೆಲ್ಲ ವಿಫಲ
ವಿರಸ ಬಾಳುವೆ!
ಪಾಪದ ಕೋಳ್ ಗೋಣ್ ಬಿಗಿಯಲು
ಶಾಪದ ಕೈ ಅಲುಗಿರಿಯಲು
ನಿನ್ನೊಡಲಿನ ಕಸ್ತೂರಿಯು
ಪ್ರಾಣದಾನ ಮಾಡಲಿ!
ನಮ್ಮೊಡಲಿನ ಚಿಂತೆಯನ್ನು
ನೀಗದಿರುವ ಶಂಕೆಯನ್ನು
ಸ್ವಪ್ನ ಸಜಲ ನಯನ ನೀರ
ತಣಿವ ತೋರಲಿ!
ಚೆಲುವದೋರು ಒಲವನೀಡು
ಕೆಡುಕಳಿಯುವ ಹಾಗೆ ಮಾಡು
ಚಿರಮಂಗಲ ಸುರಸುಂದರ
ಬಾಳ ಕೊನರಿಸು.
*****

















