Home / ಕಥೆ / ಸಣ್ಣ ಕಥೆ / ಬೀರನ ಬಾವಿ

ಬೀರನ ಬಾವಿ

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನಿಸಿತು. ಅದಕ್ಕೆ ಸರಕಾರದವರು ಧನಸಹಾಯ ಮಾಡುವರು. ಅದನ್ನು ಇಸಿದುಕೊಡಲಿಕ್ಕೆ ತಾನು ನೆರವಾಗುವೆ ಎಂದು ಮನೋಹರ ಪಂತರು ಹೇಳಿದಾಗಿನಿಂದಲೂ ಬೀರಪ್ಪನ ಎನಿಸಿಕೆ ಇನ್ನಷ್ಟು ಬಲಗೊಂಡಿತು. ಅದೇ ವಿಚಾರದಲ್ಲಿ ಆ ಇರುಳೆಲ್ಲ ಅವನಿಗೆ ನಿದ್ರೆಯಿಲ್ಲ. ದಣಿದ ದೇಹ ಮೈ ಮರೆತ ಮನಸ್ಸುಗಳಿ೦ದ ನಡುವೆ ಒಮ್ಮೊಮ್ಮೆ ಕಣ್ಣು ಮುಚ್ಚಿದಾಗಲೂ ಬಾವಿಯನ್ನು ತೋಡುವ ಕನಸೇ ಕನಸು! ಹಿರಿಯ ಮಗ ಯಾತ ಹೂಡಿದ್ದಾನೆ. ಕಿರಿಯ ಹುಡಗ ನೀರುಣಿಸುತ್ತಿದ್ದಾನೆ. ಹಸರು ಪೈರಿನಿಂದ ತೋಟ ಸುಂದರವಾಗಿ ಕಂಗೊಳಿಸುತ್ತಿದೆ, ಬೀರ ಹರ್ಷ ಗೊಂಡ; ಅಭಿಮಾನದಿಂದ ತೋಟದ ಮೇಲೆ ಸುತ್ತಲೂ ಕಣ್ಣಾಡಿಸಿದ. ಅಷ್ಟರಲ್ಲಿ ಅದೇನಾಯಿತೋ ಯಾತಕ್ಕೆ ಹೂಡಿದ ಎತ್ತುಗಳು ಧಡ್ ಧಡ ಮುಂದೆ ಓಡಿದವು. ಹುಡುಗ ಜಾರು ನೆಲಕ್ಕುರುಳಿದ. ಮರು ಕ್ಷಣದಲ್ಲಿ “ಢಂ” ಎಂದು ಸಪ್ಪಳ ಮಾಡಿ ಯಾತ ನೀರಿನಲ್ಲಿ ಬಿದ್ದಿತು. ಎದ್ದು ಮುಂಡ ಧಾವಿಸಿದ ಬೀರ. ಗಾಬರಿಯಾಗಿ ಕಣ್ದೆರೆದ. ಇನ್ನೂ ಹಾಸಿಗೆಯಲ್ಲಿ ಹೊರಳಾಡುತ್ತಿದ್ದಾನೆ! ದೂರದಲ್ಲಿ ಕೊರವರ ಕೇರಿಯಲ್ಲಿ ನಾಯಿಗಳು ಬೊಗಳುತ್ತಿವೆ. ಕತ್ತೆಯೆಂದು ಅಸಯ್ಯ ದನಿತೆಗೆದು ಒದರುತ್ತಿದೆ. ಕಣ್ಣು ಒರಸಿ ಕೊಂಡು ಇನ್ನೊಂದು ಮಗ್ಗುಲಿಗೆ ಹೊರಳಿದ ಬೀರ.

“ಇಂದು ನಿದ್ದೀನಽ ಮಾಡುವಂತೆ ಕಾಣುದಿಲ್ಲ”, ಬೀರನ ಹೆಂಡತಿ ಚಿನ್ನವ್ವ ಕೇಳಿದಳು. ಧ್ವನಿಯು ಜಡವಾಗಿತ್ತು.

“ಯಾವದಾದರೊಂದ ಲೆಕ್ಕದಲ್ಲಿ ಇರುವಾಗ ಕಣ್ಣಿಗೆ ನಿದ್ದೆ ಹ್ಯಾಗ ಬರಬೇಕು?” ಸ್ವಲ್ಪ ತಡೆದು ಬೀರ ಕೇಳಿದ.

“ಲೆಕ್ಕದೊಳಗಽ ಹೋಯಿತು ಪ್ರಪಂಚ ನಿಮ್ಮದು”.

“ಲೆಕ್ಕ ಹಾಕಿ ಮಾಡಿದಾಗಽ ಕೂಲಿ ಮಾಡುವ ನಾವು ಹತ್ತ ಎಕರೆ ಹೊಲಾ ಗಳಿಸಿದೆವು; ಹೊಸಮನೆ ಕಟ್ಟಿಸಿದೆವು…”

ಚಿನ್ನವ್ವ ನಡುವೆಯೆ ಬಾಯಿ ಹಾಕಿ ಮುಂದೆ ಅಂದಳು; “ಇನ್ನು ಮಕ್ಕಳ ಮದುವೆಯೊಮ್ಮೆ ಮಾಡೋಣ೦ದರಾಯಿತು, ನಮ್ಮ ಕಣ್ಣು ಮುಂದೆ”

“ಮದುವೆ ಮೊದಲ ಮಾಡಬೇಕೋ ಬಾವಿ ಮೊದಲ ತೆಗೆಯಬೇಕೋ ಅನ್ನೋದನ್ಽನ ವಿಚಾರ ಮಾಡತಾ ಇದ್ದೇನೆ…”

“ಎಲ್ಲಿ ಬಾವಿ ಗೀವಿ, ಇದ್ದಷ್ಟ ಮಾಡಿ ತಿನ್ನೋಣ, ಇನ್ನು ಹೆಚ್ಚಿನ ಹಂಬಲ ಬೇಡ, ಇಲ್ಲದ್ದೊಂದು ಮಾಡಲಿಕ್ಕೆ ಹೋಗಿ, ಕಲ್ಲಿಗೆ ಹತ್ತಿ ಬೆಲ್ಲೂ ಹೋಯಿತಂತ”, ಸ್ವಲ್ಪ ತಡೆದು “ಬಾವಿ ತೋಡುವಂಥ ಹೊಲ ಎಲ್ಲಿ ಅದ ನಮ್ಮದು? ಒಂದು ಮೊರಡಿ, ಇನ್ನೊಂದು ಹೊಳೆಯ ನೀರು ಬರು ವಂತಹದು….”

“ಅದಕ್ಕಽ ಇಷ್ಟು ವಿಚಾರ ಮಾಡಬೇಕಾಗೇದ.”

“ವಿಚಾರ ಮಾಡಿ ಏನಾಗೋದದ? ಹಾಲಿಲ್ಲ, ಬಟ್ಟಲಿಲ್ಲ, ಗುಟುಕು ಅ೦ದ ಹಾಗೇನಽ ಅಲ್ಲ.”

“ಅಷ್ಟ ಲೆಕ್ಕ ಇಲ್ಲದ ಇಲ್ಲ ನಾ.”

“ಇನ್ನೇನ ಲೆಕ್ಕ ನಿಮ್ಮದು.”

ತುಸು ಕುತೂಹಲದಿಂದ ಚಿನ್ನವ್ವ ಗಂಡನ ಮುಂದಿನ ಮಾತನ್ನು ಕೇಳಲಿಕ್ಕೆ ಸಿದ್ದವಾಗಿದ್ದಳು, ಬೀರ ಹೇಳತೊಡಗಿದ.

“ಸಂಜೆ ದಾವಲ ಭೆಟ್ಟಿಯಾಗಿದ್ದ. ಅವನ ಹೊಲ ಐದು ಎಕರೆ ಇದೆ. ತರೀ ಅಡವಿ, ಅದರಲ್ಲಿ ಬಾವಿ ಹೊರಡುವಂತೆಯೂ ಇದೆ. ಆದರೆ ಅವನ ಮನೆಯಲ್ಲಿ ಮಾಡುವವರಿಲ್ಲ. ಅವನೇ ಮನೋಹರಪಂತರ ಮನೆಯಲ್ಲಿ ಕೆಲಸಕ್ಕೆ ಇದ್ದಾನೆ. ಅಂದಮೇಲೆ ಬಾವಿ ತೋಡಿ, ತೋಟ ಮಾಡುವ ಮಾತು ಎಲ್ಲಿ? ಆ ಹೊಲ ಒಂದು ವರ್ಷ ಮಳೆ ಆದರ ಬೆಳೀತದ. ಇನ್ನೊಂದು ವರ್ಷ ಮಳೆ ಹೋದರ ತರೀದ ಬೀಳತದ. ಅದಕ್ಕೆ ಅದನ್ನ ಕೊಟ್ಟು ನಮ್ಮ ಹೊಳೆ ಮುಳುಗುವ ಮರ ಎಕರೆ ಹೊಲ ತಗೋಲಿಕ್ಕೆ ಒಪ್ಪಿದಾನ ಆತ. ಅದನ್ನೂ ಮಾಡಿಸಿಕೊಡತೇನಂತ ಪಂತರು ಹೇಳಿದಾರ. ಅವನಿಗೂ ಚಿಂತೆಯಿಲ್ಲದೆ ಬೆಳೆ ಬರುವ ಹೊಲ ಆಯ್ತು. ನಮಗೂ ತೋಟ ಆಯ್ತು, ಎರಡು ಎಕರೆ ಹೊಲ ವೊಂದ ಹೆಚ್ಚಿಗೆ ಬಂತು.”

“ಬಂಗಾರ ತುಂಡಿನಂಥ ನಮ್ಮ ಡೋಣಿ ಹೊಲ ಹೋಗತದಲ್ಲ!”

“ಮೂರು ಎಕರೆ ಕೊಟ್ಟರೂ ಮತ್ತೆ ಮೂರು ಎಕರೆ ಅಲ್ಲಿ ಉಳಿತದಲ್ಲ. ಸಾಕು.”

“ಏನ ಮಾಡತೀರಿ ನೋಡಿ! ಇಷ್ಟೆಲ್ಲ ಆಗಿ, ನಾವು ತೋಟದ ಸುಖ ಉಣ್ಣೋದ ಬಹಳ ದೂರ ಅದ. ಮದುವೆಗೆ ಬಂದ ಮಕ್ಕಳೂ ಮನೆಯೊಳಗ ಇದ್ದಾರ,” ಎಂದು ಅನುಮಾನದ ಸ್ವರದಲ್ಲಿ ಚಿನ್ನವ್ವ ನುಡಿದು ಸುಮ್ಮನಾದಳು.

“ಮದುವೀನೂ ಮಾಡತೀನಿ, ಬಾವೀನೂ ತೆಗೆಯಿಸತೇನಿ, ನೋಡ೦ತ”, ಸ್ವಲ್ಪ ಆಢ್ಯಯತೆಯಿಂದಲೇ ಬೀರ ನುಡಿದ.

ಹಾಗೆ ನುಡಿಯುವಂತೆ ಬೀರ ಮನದಲ್ಲಿ ಮಂಡಿಗೆಯನ್ನೂ ಮಾಡಿಯೇ ಇದ್ದ. ಪಂತರು ಹೊಲವನ್ನು ಅದಲು-ಬದಲು ಮಾಡಿಸಿ ಕೊಡುವರು; ಸರಕಾರದಿಂದ ಸಹಾಯಧನವನ್ನು ಮಾಮಲೇದಾರರಿಗೆ ಹೇಳಿಸಿ ಕೊಡಿ ಸುವರು, ಏನಿಲ್ಲೆಂದರೂ ಮೂರು ಸಾವಿರ ರೂಪಾಯಿ ಸಾಲ ಸರಕಾರದಿಂದ ಸಿಕ್ಕುವುದು, ಮಕ್ಕಳೂ ನಾನೂ ಕೂಡಿ ಚನ್ನಾಗಿ ದುಡಿದರೆ ಎರಡೇ ಸಾವಿರದಲ್ಲಿ ಬಾವಿ ಸಿದ್ದವಾಗಿಬಿಡುವುದು. ಉಳಿದ ಸಾವಿರದಲ್ಲಿ ಮಕ್ಕಳ ಮದುವೆ. ಹೊಲದಲ್ಲಿ ಹೇಗೂ ಕಡಲೆ-ಗೋದಿಗಳನ್ನು ಬಿತ್ತಿರುವೆ. ಇನ್ನೇನು ಮದುವೆಗಷ್ಟು ಅರಿವೆ ಅ೦ಚಡಿಗಳನ್ನು ಕೊಂಡರಾಯಿತು. ಹೀಗೇನೇನೊ ವಿಚಾರಿಸುತ್ತ ಬೆಳಗಿನ ಜಾವದಲ್ಲಿ ಬೀರ ನಿದ್ದೆ ಹೋದ.

ಮನೋಹರಪಂತರೆಂದರೆ ಆ ಊರಿಗೊಂದು ಕಣ್ಣಿದ್ದಂತೆ. ಊರ ಜನರ ಹಿತಾಹಿತಗಳೆಲ್ಲ ಅವರನ್ನೇ ಕೂಡಿವೆ. ಅಜ್ಞ ಜನರಿಗೆ ಮಾರ್ಗ ದರ್ಶನ ಮಾಡುವುದು, ಸರಕಾರದ ಚಟುವಟಿಕೆಗಳಿಗೆಲ್ಲ ತನ್ನ ಊರಲ್ಲಿ ಮೂರ್ತ ಸ್ವರೂಪ ಕೊಡುವುದೂ ಮೊದಲಾದ ಕಲಸಗಳೆಲ್ಲ ಪಂತರನ್ನೆ ಸೇರಿವೆ. ಸರಕಾರಕ್ಕೂ ಜನತೆಗೂ ಒಂದು ಸೇತುವೆಯಂತೆ ಮನೋಹರ ಪಂತರಿದ್ದಾರೆ. ಅವರ ಅ೦ಗವಿಲ್ಲದೆ ಆ ಊರಲ್ಲಿ ಯಾವ ಕಾರ್ಯಗಳೂ ಆಗವು. ಅದರಲ್ಲಿ ಪಂತರು ಈಗೀಗ ದೇಶಭಕ್ತ ಬೇರೆ ಆಗಿದ್ದಾರೆ. ಬ್ರಿಟಿಶರು ಭಾರತವನ್ನು ಆಳುವ ಕಾಲಕ್ಕೇನೋ ತನ್ನ ಮಾನವನ್ನು ಕಾಯ್ದುಕೊಳ್ಳಲಿಕ್ಕೆಂದು ಅವರ ಹಸ್ತಕನಾಗಿ ಕೆಲಸ ಮಾಡಿದ್ದರು. ಬಿರುದು ಬಾವುಲಿಗಳನ್ನು ಪಡೆದಿದ್ದರು. ಈಗ ಭಾರತ ಸ್ವತಂತ್ರವಾಯಿತು, ಕಾಂಗ್ರೆಸ್ ಸರಕಾರ ಅಧಿಕಾರ ಸ್ವೀಕರಿಸಿತು, ಕೂಡಲೇ ಸಂತರು ಖದ್ದರ ಧರಿಸಿದರು, ದೇಶಭಕ್ತರಾದರು. ರಾಷ್ಟ್ರೋದ್ಧಾರದ ರಥವನ್ನು ನಡೆಯಿಸುವ ಸಾರಥಿಗಳಾದರು.

ಪಂತರಿಗೆ ಬಹಳ ದಿನಗಳಿ೦ದ ತನ್ನ ದನಗಳಿಗೊಂದು ಕೊಟ್ಟಿಗೆಯನ್ನು ಕಟ್ಟಿಸುವ ಯೋಚನೆಯಿದ್ದಿತು. ಆದರೆ ಅದು ಅವರ ದುಡ್ಡು ವೆಚ್ಚವಾಗದೆ ಆಗಬೇಕು. ಊರೊಳಗಿನ ಒಕ್ಕಲಿಗರು ಕಲ್ಲು ಮಣ್ಣುಗಳನ್ನು ತಂದು ಹಾಕಬೇಕು. ಊರ ಉಪ್ಪಾರರು ಕೂಲಿ ತಕ್ಕೊಳ್ಳದೆ ಕಟ್ಟಿಕೊಟ್ಟಿರಬೇಕು. ಕೆಲವರು ತಮ್ಮ ತೋಟ ಪಟ್ಟಿಗಳೊಳಗಿನ ಗಿಡಕಟ್ಟಿಗೆಗಳನ್ನು ಕೊಟ್ಟು ಸಹಕರಿಸಬೇಕು. ಎಂದರೆ ಪಂತರ ಭವ್ಯ ಕೊಟ್ಟಿಗೆ ಸಿದ್ದವಾಗುವುದು. ಪಂತ ದೇಶಭಕ್ತನಲ್ಲವೇ? ದೇಶಕ್ಕಾಗಿ ತನ್ನ ದೇಹವನ್ನು ತೆಯ್ದು ಸಣ್ಣಾಗ ಮುಖಂಡನಾದ, ಖಾದಿಯನ್ನು ಧರಿಸಿ, ದೇಶಭಕ್ತನೆಂಬ ಪ್ರಮಾಣ ಪತ್ರವನ್ನು ಈಗಾಗಲೇ ಜನತೆಯಿಂದ ಪಡೆದುಕೊಂಡಿದ್ದ. ಅಂದಮೇಲೆ ಇದೆಲ್ಲ ಆಗಬೇಕು.

ಮೊನ್ನೆ ಪಂತರು ತನ್ನ ಹೊಲದ ಬೆಳೆಯನ್ನು ನೋಡಲಿಕ್ಕೆ ಹೋದಾಗ ದಾರಿಯಲ್ಲಿ ಬೀರನ ಡೋಣೀ ಹೊಲದಲ್ಲಿ ನಾಲ್ಕು ಸುಂದರ ಗಿಡಗಳನ್ನು ಕಂಡರು. ಆಗಲೇ ಅವರಿಗೆ ತನ್ನ ಕೊಟ್ಟಿಗೆಗೆ ಈ ಗಿಡಗಳು ಅವಶ್ಯವಾಗಿ ಬೇಕೆಂಬ ವಿಚಾರ ಬಂದು ಬಿಟ್ಟಿತು. ಒಂದೊಂದು ಗಿಡದಲ್ಲಿಯೂ ನಾಲ್ಕಾರು ತೊಲೆಗಳೂ, ಕಂಬಗಳೂ ಹೊರಡುವಂತಿವೆ. ಈಗಲೇ ಗಿಡಗಳನ್ನು ಕಡಿಸಿ ಒಗೆದರೆ ಬೇಸಿಗೆಗೆ ಮನೆ ಹಾಕಲಿಕ್ಕೆ ತಕ್ಕವಾಗುವವು ಎಂದು ಲೆಕ್ಕವನ್ನೂ ಹಾಕಿದರು. ಅಂದಿನಿಂದ ಆ ಗಣಿತವನ್ನು ಬಿಡಿಸುವುದರಲ್ಲಿಯೇ ಅವರ ಮನಸ್ಸು ತೊಡಗಿತು.

ಇಂಥ ಸಂದರ್ಭದಲ್ಲಿ ಬೀರ-ದಾವಲರಲ್ಲಿ ಹೊಲಗಳ ಅದಲು-ಬದಲುಗಳ ಪ್ರಶ್ನೆಯೆದ್ದಿತು. ಅದನ್ನು ಯಶಸ್ವಿಯಾಗಿ ಮಾಡುವುದು ಮನೋಹರ ಪಂತರನ್ನೇ ಕೂಡಿದ್ದಿತು. ಅದಕ್ಕಾಗಿ ಇಬ್ಬರೂ ಅವರ ಮನೆಗೆ ಎಡತಾಗಹತ್ತಿದರು. ದಾವಲನಂತೂ ಅವರ ಮನೆಯ ಆಳು ಮನುಷ್ಯ. ಅವನ ಹಿತ ಮಾಡುವುದು ಪಂತರ ಕರ್ತವ್ಯವಾಗಿದ್ದಿತು. ಅದರಂತೆ ದಾವಲನ ಮುಂದೆ ಆಡಿಯೂ ತೋರಿಸಿದ್ದರು. ಬೀರನ ದೋಣಿಯ ಹೊಲದಲ್ಲಿ ಯಾವ ಭಾಗವು ನದಿಯ ನೀರಿನಿಂದ ಬೇಗ ತೊಯ್ಯುವದೋ ಅದೇ ಭಾಗವನ್ನು ಇಸಿದುಕೊಡುವುದಾಗಿ ಪಂತರು ದಾವಲನಿಗೆ ಆಶ್ವಾಸನವಿತ್ತಿದ್ದರು. ಹಾಗೆ ಮಾಡಿದಲ್ಲಿ ದಾವಲ ಇನ್ನೊಂದು ವರ್ಷ ನಂತರ ಮನೆಯಲ್ಲಿ ಪುಕ್ಕಟೆ ದುಡಿಯಲು ಸಿದ್ದವಾಗಿದ್ದ. ನದಿಯ ನೀರು ಸ್ವಲ್ಪ ಏರಿದ ಕೂಡಲೇ ನೀರುಣ್ಣುವಂತಹ ಹೊಲವನ್ನು ತನಗೆ ಸಿಗುವಂತೆ ಮಾಡುವನೆಂದ ಮೇಲೆ ಯಾವ ಆಳು ಒಂದು ವರ್ಷ ದುಡಿಯಲಿಕ್ಕೆ ಸಿದ್ದವಾಗಲಿಕ್ಕಿಲ್ಲ!

ಇತ್ತ ಬೀರನನ್ನು ಕರೆದು, ಮನೋಹರಪಂತರು ತನ್ನ ಕೊಟ್ಟಿಗೆಗಾಗಿ ಅವನ ಡೋಣಿಯ ಹೊಲದೊಳಗಿನ ನಾಲ್ಕು ಗಿಡಗಳನ್ನು ಕೇಳಿದರು. ಅವನಿಗೆ ತಾನು ಹೊಲದ ಕೆಲಸ ಮಾಡಿ ಕೊಡುವವನಿರುವದರಿಂದ ತನ್ನ ಮಾತಿಗೆ ಯಶ ಸಿಕ್ಕೇ ಸಿಗುವುದೆಂದು ಪಂತರು ನಂಬಿದ್ದರು. ಆದರೆ ಬೀರನೂ ಆ ಗಿಡಗಳನ್ನು ನೋಡಿ, ತನ್ನ ಮುಂದಿನ ಯೋಜನೆಗಳನ್ನು ಹಾಕಿಟ್ಟಿದ್ದನು. ತೋಟದಲ್ಲಿ ಬಾವಿಯಮೇಲೆ ಚಿಕ್ಕ ಮನೆ ಕಟ್ಟಿಸಬೇಕು ಯಾತದ ವ್ಯವಸ್ಥೆಗಾಗಿ ಕಟ್ಟಿಗೆಗಳು ಬೇಕು. ಇವೆಲ್ಲ ಆ ಗಿಡಗಳಲ್ಲಿ ಹೊರಡುವವು. ಇನ್ನು ಮೇಲಿನ ಬರಲುಗಳು ಮಕ್ಕಳ ಮದುವೆಯಲ್ಲಿ ಉರುವಲ ಆಗುವವು. ಹೀಗೆ ಅವನ ಪ್ರಪಂಚದ ಲೆಕ್ಕವಿದ್ದಿತು, ಆದ್ದರಿಂದ ಪಂತರ ಮಾತಿಗೆ ಅವನು ಒಪ್ಪುವಂತಿರಲಿಲ್ಲ. ಅವರು ಕೆಲಸ ಮಾಡಿಕೊಟ್ಟ ಮೇಲೆ ಏನಾದರೂ ಕಾಣಿಕೆ ಕೊಟ್ಟರಾಯಿತೆಂದು ಮಾತ್ರ ಯೋಚಿಸಿದ್ದನು. ಅದರಂತೆ ಪಂತರ ಮುಂದೆ ಆಡಿಯೂ ಬಿಟ್ಟನು.

ಇದು ಪಂತರಿಗೆ ಸರಿಬೀಳಲಿಲ್ಲ. ಬರ ಕೊಡುವ ಕಾಣಿಕೆಯ ದ್ರವ್ಯಕ್ಕಿಂತ ಆ ಗಿಡಗಳ ಬೆಲೆ ಎಷ್ಟೋ ಹೆಚ್ಚಾಗುತ್ತಿದ್ದಿತು. ಒಕ್ಕಲಿಗ ಲೆಕ್ಕವಿಲ್ಲದೆ ಕೊಟ್ಟುದೇ ಚೆನ್ನು. ಅಳತೆಯ ದ್ರವ್ಯ ಪಾಪ? ಅವನೆಷ್ಟು ಕೊಟ್ಟಾನು ಆ ಆಯದ ಲೆಕ್ಕ ಏನಿದ್ದರೂ ಬೀರ ತನ್ನ ಮಾತಿಗೆ ಇಲ್ಲವೆಂದನಲ್ಲಾ, ಎಂಬ ಸಂಗತಿಯೇ ಪಂತರ ಮನಸ್ಸನ್ನು ಬಹಳ ಕೆರಳಿಸಿತು ಅದರಿಂದ ಅವರೂ ಯೋಚನೆಯಲ್ಲಿ ಬಿದ್ದರು. ಇನ್ನು ಹೊಲಗಳ ವ್ಯವಹಾರವನ್ನು ಮುರಿಯುವಂತಿರಲಿಲ್ಲ. ತನ್ನ ಆಳು ದಾವಲನಿಗೆ ಹೇಳಿ ಇಡಲಾಗಿದ್ದಿತು. ಅಲ್ಲದೆ ತಾನು ನೆರವಾಗದಿದ್ದರೂ ಇನ್ನು ಮೇಲೆ ಆ ಕೆಲಸ ಆಗಿಯೇ ತೀರುವುದು. ಅಂದಮೇಲೆ ಮಾಡುವುದೇನು? ಪಂತರು ಬಹಳ ವಿಚಾರಿ ಸಿದರು. ವಿಚಾರಿಸಿ, ವಿಚಾರಿಸಿ ಒಂದು ನೆಲೆಗೆ ಬಂದು ಬಿಟ್ಟರು. ಆ ಗಿಡಗಳನ್ನಂತೂ ಬಿಡತಕ್ಕದ್ದಲ್ಲ. ಬಡ ಬುದ್ಧಿಯ ಬೀರನ ಮುಂದೆ ಬಿದ್ದು ಹೊದರೆ ಇಷ್ಟು ದಿನ ಊರನ್ನಾಳಿ ಬಂದ ಭಾಗ್ಯವೇನು? ಎಂದು ತನ್ನನ್ನೇ ತಾನು ಕೇಳಿಕೊಂಡ. ಹೆಮ್ಮೆಯ ನಗೆಯೊಂದನ್ನು ಬೀರಿ ದಾವಲನನ್ನು ಕರೆದು ಹೇಳಿದ:-

ನಾಳೆ ಬೀರನ ಡೋಣಿ ಹೊಲ ಹೋಗಿ ನೋಡಿ ಬರಬೇಕು. ಹೇಗೆ ಹಂಚಿ ತಕ್ಕೊಂಡರೆ ನಮಗೆ ಒಳ್ಳೆಯ ನೆಲ ಬರುವುದು ನೋಡಬೇಕು..”

ದಾವಲ ತನ್ನೊಡೆಯನು ಹೇಳಿದ ತನ್ನ ಹಿತದ ಮಾತನ್ನು ಕೇಳಿ ಹಿರಿ ಹಿರಿ ಹಿಗ್ಗಿದ. ಮನದಲ್ಲಿಯೇ ಕೃತಜ್ಞತೆಯನ್ನು ಸಲ್ಲಿಸಿದ.

ಪಂತರ ಮಾತಿನಂತೆ ಮರುದಿನ ಇಬ್ಬರೂ ಹೋಗಿ ಹೊಲವನ್ನು ನೋಡಿಬಂದರು. ಪಂತ ಮನದಲ್ಲಿಯೇ ಲೆಕ್ಕ ಹಾಕಿ ನೋಡಿದ, ಹೊಲವನ್ನು ಹೇಗೆ ತುಂಡುಗಡಿದರೆ ಆ ಗಿಡಗಳು ದಾವಲನ ಪಾಲಿಗೆ ಬರುವುವು, ಎಂಬುದೇ ಅವನ ಗಣಿತವಾಗಿದ್ದಿತು. ಅದರಲ್ಲೂ ಹೊಳೆಯಿಂದ ಬೇಗ ಮುಳುಗುವ ಭೂಮಿಯೂ ದಾವಲನ ಪಾಲಿಗೆ ಬರಬೇಕು. ಈ ಎರಡೂ ಯೋಜನೆಗಳು ಸಾಧಿಸುವಂತಿರಲಿಲ್ಲ. ಒಳ್ಳೆಯ ಜಮೀಾನು ಬಂದರೆ ಗಿಡಗಳಿಲ್ಲ; ಗಿಡಗಳು ಬಂದರೆ ಒಳ್ಳೆಯ ನೆಲವಿಲ್ಲ. ಹೀಗೆ ವ್ಯಸ್ತ ತ್ರೈರಾಶಿಕವಾಗುತ್ತಿದ್ದಿತು. ಅದರಿಂದ ಪಂತ ಚಿಂತೆಯಲ್ಲಿ ಬಿದ್ದ. ತನ್ನ ಮರಗಳ ಸಂಪಾದನೆಗಾಗಿ ಕೆಟ್ಟ ಅಡವಿಯನ್ನು ದಾವಲನ ಪಾಲಿಗೆ ಹಾಕಲಿಕ್ಕೆ ಒಂದು ಕ್ಷಣ ಅವನ ಮನಸ್ಸು ಒಪ್ಪದು, ಒಪ್ಪಿದರೂ ಈಗ ದಾವಲನಿಗೆ ಹೇಳಿದರೆ ಅಂಥ ಹೊಲವನ್ನು ತಕ್ಕೊಳ್ಳುವಷ್ಟು ಅವನೂ ಹುಚ್ಚನಾಗಿರಲಿಲ್ಲ. ಆ ಒಳ್ಳೆಯ ಅಡವಿ ತನಗೆ ಪಂತನ ಪ್ರಯತ್ನದಿಂದಲೇ ಸಿಗತಕ್ಕದೆಂದು ಅವನು ಒಂದು ವರ್ಷ ಅವನ ಮನೆಯಲ್ಲಿ ಸಂಬಳವಿಲ್ಲದೆ ದುಡಿಯಲಿಕ್ಕೂ ಸಿದ್ಧನಾಗಿದ್ದ.

ಅದರಿಂದ ದಾವಲನ ವಿಚಾರವನ್ನು ತಿರಿಗಿಸುವಂತಿರಲಿಲ್ಲ.

ಪಂತನಿಗೆ ಇದು ಒಳ್ಳೆ ಸಮಸ್ಯೆಯಾಗಿಬಿಟ್ಟಿತು. ಬೀರ-ದಾವಲ ರಿಬ್ಬರೂ ಬೇಗನೆ ಸಬ್-ರಜಿಸ್ಟಾರರ ಕಚೇರಿಗೆ ಹೋಗಿ, ಹೊಲಗಳ ಬದಲಾವಣೆಯ ಕಾಗದವನ್ನು ರಜಿಸ್ಟರ ಮಾಡಿಸಿಕೊಂಡು ಬರಲಿಕ್ಕೆ ಆತುರ ತೋರಿಸ ಹತ್ತಿದರು. ಬೀರನಿಗೆ ಬಾವಿ ತೆಗೆಯಿಸುವ ಆತುರ. ದಾವಲನಿಗೆ ಒಳ್ಳೆಯ ಹೊಲವು ಸಿಗುವ ಸಂಧಿ ಹೋದೀತಲ್ಲ ಎಂಬ ಹೆದರಿಕೆ. ಬೀರನ ಡೋಣಿ ಹೊಲಕ್ಕೆ ಊರಲ್ಲಿ ಮತ್ತೂ ಕೆಲವರು ತಮ್ಮ ಹೊಲಗಳನ್ನು ವಿನಿಮಯ ಮಾಡಿಕೊಳ್ಳಲಿಕ್ಕೂ ಸಿದ್ಧರಿದ್ದರು, ಅವೂ ಬಾವಿ ಹೊರಡುವಂಥ ಹೊಲಗಳು. ಅದರಿಂದಲೇ ಬೀರ ಪಂತನಿಗೆ ಗಿಡಗಳನ್ನು ಕೊಟ್ಟೂ ತನ್ನ ಹೊಲದ ವಿನಿಮಯ ಮಾಡಿಕೊಳ್ಳಲಿಕ್ಕೆ ಸಿದ್ಧನಿರಲಿಲ್ಲ. ಆದರೂ ಯಾವುದಾದರೊಂದು ಹೊಲವನ್ನು ಮಾತ್ರ ಅವನಿಗೆ ಕೂಡಲೇ ದೊರಕಿಸಬೇಕಾಗಿದ್ದಿತು, ಬೇಗನೆ ಬಾವಿಯನ್ನು ತೋಡಿ, ಹೆಚ್ಚಿಗೆ ಆಹಾರ ಧಾನ್ಯವನ್ನು ಬೆಳೆಯಿಸಿ, ಸ್ವತಂತ್ರ ಭಾರತದ ಆಹಾರ ಸ್ವಾವಲಂಬನಕ್ಕೆ ತನ್ನ ಕೈಯಿಂದಾದಷ್ಟು ನೆರವಾಗಬೇಕೆಂದು ಅವನ ಹಂಬಲವಿದ್ದಿತು: ಈ ಹಂಬಲವು ಬಲಗೊಳ್ಳಲಿಕ್ಕೆ ಅವನ ಮನೆತನದ ಸ್ವಾರ್ಥವೂ ಸ್ವಲ್ಪ ಕಾರಣವಾಗಿತ್ತು. ಅದೂ ಸಹಜವಾದುದೇ, ದೇಶಕ್ಕಾಗಿ ತನ್ನ ಮನೆತನವನ್ನೇ ಸೂಕ್ತ ನೋಡದೆ ಇರುವಂಥ ಚೇತನ ಎಷ್ಟು ಜನರಿಗಿರುವುದು? ತನ್ನ ಕೌಟುಂಬಿಕ ಜೀವನದಲ್ಲಿ ರಾಷ್ಟ್ರೀಯ ದೃಷ್ಟಿಯಿದ್ದರಾಯಿತು ಎನ್ನುವ ಸಂಸ್ಕೃತಿ ಬೀರನದು. ಅದು ಯಾರ ವ್ಯಾಖ್ಯಾನವನ್ನೂ ಕೇಳಿ ಬಂದ ಸಂಸ್ಕೃತಿಯಲ್ಲ, ಹುಟ್ಟಿನಿಂದಲೇ ಭಾರತೀಯ ಬೇಸಾಯಗಾರನು ಪಡೆದುಬಂದ ಭಾಗ್ಯವದು! ದುಡಿದುಣ್ಣುವರ ಧೀರ ದಾರಿಯದು!

ಪಂತನ ತಂತ್ರ ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮವು. ಅವನು ಒಕ್ಕಲಿಗರಿಬ್ಬರನ್ನೂ ಕರೆಯಿಸಿ ಹೇಳಿದ- “ಹೀಗೆ ಅವಸರ ಮಾಡಿದರೆ ಕೆಲಸ ಆಗದು, ಅದು ಸರಕಾರೀ ಕೆಲಸ. ಒಮ್ಮೆ ಆದಮೇಲೆ ಮುಂದೆ ಯಾವ ತರದ ತೊಂದರೆಯೂ ಉಂಟಾಗಬಾರದು. ಹಾಗೆ ಮಾಡಿಸಿಕೊಡಬೇಕಾಗುತ್ತದೆ, ದಾವಲ ನನ್ನ ಮನೆಯ ಆಳಿದ್ದರೇನಾಯಿತು. ಬೀರನನ್ನು ಹೊರಕೈಯಿಂದ ಹೊಡೆಯುವಂತಿಲ್ಲ. ಇಬ್ಬರೂ ನನಗೆ ಸಮಾನರು, ಬೇಕಾದವರು ಅದಕ್ಕೆ ಊರೊಳಗಿನ ಪಂಚರ ಸಮಕ್ಷಮವೂ ಮಾತು ಕತೆಗಳಾಗಲಿ!”

ನೀವಿದ್ದೀರಿ ಆಯಿತಲ್ಲ! ನಮ್ಮಿಬ್ಬರಿಗೂ ಒಪ್ಪಿಗೆಯಿದ್ದ ಮೇಲೆ ನಡುವೆ ಇನ್ನೊಬ್ಬರ ಅವಶ್ಯಕತೆ ಏನಿದೆ? ನಿಮಗೆ ಸವಡು ನೋಡಿಕೊಂಡು ಒಂದು ದಿನ ಕಚೇರಿಗೆ ಹೋಗಿ ಮಾಡಿಕೊಂಡು ಬಂದು ಬಿಟ್ಟರಾಯಿತು.

ದಾವಲನ ಮುಖದ ಕಡೆಗೆ ನೋಡುತ್ತ ಬೀರ ನುಡಿದ. ದಾವಲ ಸುಮ್ಮನಿದ್ದು, ಬೀರನ ಮಾತಿಗೆ ತನ್ನ ಒಪ್ಪಿಗೆಯನ್ನು ಸುಚಿಸಿದ.

ಬೀರನ ಮಾತನ್ನು ಕೇಳಿ, ಪಂತ ಸ್ವಲ್ಪ ಕೆರಳಿ ನುಡಿದ. “ಎಷ್ಟಾದರೂ ಹುಂಬ ಒಕ್ಕಲಿಗರು ನೀವು! ಕೆಲಸದ ಖರ್ಚು ವೆಚ್ಚಗಳ ವಿಚಾರವಿಲ್ಲ. ಕಚೇರಿಯ ಕಟ್ಟೆ ಹತ್ತುವದೆಂದರೆ ಸುಮ್ಮನೆ ಆಗುವದಿಲ್ಲ. ಬಾಗಿಲದ `ಪಟ್ಟೇವಾಲಾ’ ನನ್ನು ಹಿಡಿದುಕೊಂಡು ಎಲ್ಲರ ಕೈಯನ್ನೂ ಬೆಚ್ಚಗೆ ಮಾಡಬೇಕಾಗುತ್ತದೆ. ಕಾಗದ, ರಜಿಸ್ಟರದ ಖರ್ಚು ಎಲ್ಲ ಕೂಡಿ ನೂರಾರು ರೂಪಾಯಿಗಳಾದರೂ ಬೇಡವೆ? ಇದನ್ನು ನಿಮ್ಮಿಬ್ಬರಲ್ಲಿ ಯಾರು ವಹಿಸಿಕೊಳ್ಳಬೇಕೆಂಬುದು ನಿರ್ಣಯವಾಗಬೇಡವೆ? ಇದೀಗ ಆಶ್ವಿನ ತಿಂಗಳು, ನಾಳೆಯೇ ಹೊಲಗಳನ್ನು ಅದಲು ಬದಲು ಮಾಡತಕ್ಕವರು ನೀವು, ಈ ವರ್ಷದ ಬೆಳೆಗಳನ್ನು ಯಾರು ಯಾವ ಹೊಲದಿಂದ ತಕೊಳ್ಳಬೇಕು, ಡೋಣೀ ಹೊಲದ ಯಾವ ಭಾಗ ದಾವಲನಿಗೆ ಕೊಡ ಬೇಕು, ಇವೆಲ್ಲ ವಿಚಾರ ನಾಲ್ಕು ಜನರ ಎದುರಿಗೆ ಆಗಲಿಕ್ಕೆ ಬೇಡವೆ? ನಾನೊಬ್ಬನೇ ನಿಮ್ಮಂಥ ಹುಂಬರ ನಡುವೆ ಸಿಕ್ಕಿ ಎಲ್ಲಿ ಒದ್ದಾಡಲಿ? ಈ ಮಾತುಗಳೆಲ್ಲ ಕಚೇರಿಯಲ್ಲಿ ಆಗತಕ್ಕುವೆ? ಅದಕ್ಕೆ ನಾಲ್ಕು ದಿನ ಹೋಗಲಿ, ಒಂದು ದಿನ ಸವಡು ಮಾಡಿಕೊಂಡು, ಒಂದಿಬ್ಬರನ್ನು ಕರೆದು ಮಾತಾಡಿ ಮುಗಿಸೋಣ. ಆಮೇಲೆ ನಿಮ್ಮ ನಿಮ್ಮ ಹೊಸ ಹೊಲಗಳಲ್ಲಿ ಹೋಗಿ ಕೆಲಸಕ್ಕೆ ಆರಂಭಿಸಬಹುದು. ರಜಿಸ್ಟರ ಮಾಡುವುದೇನು ಮಹಾ ಕೆಲಸ! ಮುಂದೆ ಬೇಕಾದಾಗ ಒ೦ದು ದಿನ ಹೋಗಿ ಮಾಡಿ ಕೊಂಡು ಬಂದು ಬಿಟ್ಟರಾಯಿತು”

ಪಂತರ ಈ ಉದ್ದ ಉಪನ್ಯಾಸದ ವಿಷಯವು ಶೋತೃಗಳಿಬ್ಬರಿಗೂ ವಿಚಾರಣೀಯವೆನಿಸಿತು. ಆದರೆ ಹೊಸದೆನಿಸಲಿಲ್ಲ. ಈ ಎಲ್ಲ ಮಾತುಗಳ ಬಗ್ಗೆ ಬೀರ ದಾವಲರಿಬ್ಬರೂ ತಮ್ಮ ತಮ್ಮಲ್ಲಿ ವಿಚಾರ ಮಾಡಿಯೂ ಇಟ್ಟು ಕೊಂಡಿದ್ದರು.

ಬೀರ ತನ್ನಲ್ಲಿಯೇ ಲೆಕ್ಕ ಹಾಕಿದ್ದ : ಹೊಲ ತಂಡ ಮರುದಿನ ಬಾವಿಯ ಕೆಲಸ ಆರಂಭಿಸಬೇಕು. ಸರಕಾರದಿಂದ ಹಣ ಬರುವವರೆಗೆ ಮನೆಯೊಳಗಿದ್ದ ಐದಾರು ನೂರು ರೂಪಾಯಿಗಳನ್ನು ಅದಕ್ಕೆ ವೆಚ್ಚ ಮಾಡಿದರಾಯಿತು. ಅದಕ್ಕಾಗಿ ದಾವಲನ ಹೊಲವು ಕೂಡಲೇ ತನ್ನ ವಶಕ್ಕೆ ಬರಬೇಕು. ಹಾಗಾಗಬೇಕಾದರೆ ತನ್ನ ಡೋಣೀ ಹೊಲವನ್ನು ಈಗಲೇ ಬೆಳೆಯ ಸಹಿತ-ದಾವಲನಿಗೆ ಒಪ್ಪಿಸಬೇಕಾಗುವುದು. ಹೀಗೆ ಮಾಡುವದರಿಂದ ತನಗೇ ಹಾನಿ. ಡೋಣಿ ಹೊಲದಲ್ಲಿ ಬೆಳೆ ಚನ್ನಾಗಿದ್ದಿತು, ದಾವಲನ ಹೊಲದ ಬೆಳೆಗಿಂತ ಹೆಚ್ಚಾಗಿ ಬರುವಂತಿದ್ದಿತು, ಇದರಲ್ಲಿ ನೂರಾರು ರೂಪಾಯಿಗಳ ಅ೦ತರವಾಗುವಂತಿದ್ದಿತು. ಅದನ್ನರಿತು ದಾವಲ ಕಚೇರಿಯ ವೆಚ್ಚ ನೋಡಿಕೊಂಡು ಬಿಟ್ಟರೆ ಸರಿಹೋಯಿತು.

ಈ ವಿಚಾರಸರಣಿಗೆ ದಾವಲನೂ ವಿರೋಧ ಮಾಡುವಂತಿರಲಿಲ್ಲ. ಆದರೆ ಆತ ಬಡವ ಕಚೇರಿಯ ವೆಚ್ಚಕ್ಕೆ ರೋಖ ಹಣವನ್ನು ಕೊಡುವ ಸ್ಥಿತಿ ಅವನದಿರಲಿಲ್ಲ. ಅದನ್ನು ಈಗ ಪಂತರೇ ಹಾಕಿ, ಮುಂದೆ ಸುಗ್ಗಿ ಯಾದಮೇಲೆ ಬಡ್ಡಿ ಸಹಿತ ತಕೊಂಡರೂ ಅವನಿಗೆ ಒಪ್ಪಿಗೆಯಿತ್ತು. ಇದಾಗುವಂತಿರದಿದ್ದರೆ ಬೀರ ಖರ್ಚು ಹಾಕಿ ಮಾಡಿಕೊಡಬೇಕು, ಆ ಹಣವನ್ನು ಕಳೆದುಕೊಳ್ಳಲಿಕ್ಕೆ ಹೆಚ್ಚಿಗೆ ಬೆಳೆದ ಡೋಣೀ ಹೊಲದ ಬೆಳೆಯನ್ನು ಇದೊಂದು ವರ್ಷ ಅವನೇ ತಕೊ೦ಡರೂ ಅಡ್ಡಿಯಿಲ್ಲ. ಕಡಿಮೆ ಕಾಳು ಬರುವ ತನ್ನ ಹೊಲದ ಬೆಳೆ ತನಗಿದ್ದರಾಯಿತು. ಹೀಗೆ ಮಾಡಿ ದಾಗಲೂ ಬೀರ ತಾನು ತಕೊ೦ಡ ಹೋಲದಲ್ಲಿ ಬಾವಿಯನ್ನು ಈಗಲೇ ತೋಡಲು ಆರಂಭಿಸಬಹುದು. ಅದರಿಂದ ಆಗುವ ಅಲ್ಪ ಸ್ವಲ್ಪ ಬೆಳೆ ಹಾನಿಯನ್ನು ತಾನು ತಾಳಿಕೊಂಡರಾಯಿತು. ಇದೇ ಬೀರನು ಮಾಡುವ ವೆಚ್ಚಕ್ಕೆ ಪ್ರತಿಫಲವೆಂದು ತನ್ನಿಂದ ಸಂದ೦ತಾಯಿತು ಎಂಬ ಯೋಚನೆಯು ದಾವಲನದಾಗಿದ್ದಿತು. ಇದನ್ನು ಕೇಳಿದ್ದರೆ ಬೀರನೂ ಒಪ್ಪುತ್ತಿದ್ದನು.

ಆದರೆ ಇವರಿಬ್ಬರಿಗೂ ತಮ್ಮ ವಿಚಾರಗಳನ್ನು ಪ್ರಕಟಿಸಲಿಕ್ಕೆ ಪಂತನು ಅವಕಾಶವನ್ನೇ ಕೊಡಲಿಲ್ಲ. ತಾನೇ ದಾವಲನ ಪರವಾಗಿ ಹೇಳಿ ಬಿಟ್ಟ, ತನ್ನ ಮಾತು ದಾವಲನ ಮಾತುಗಳಾಗಿವೆಯೆಂಬ ಭಾವವನ್ನು ಪ್ರದರ್ಶಿಸಿದ, ಅವನೊಡನೆ ಆಲೋಚಿಸಿಯೇ ತಾನು ಹೇಳುತ್ತಿರುವಂತೆ ನಟಿಸಿದ, ಪಂತನ ಮಾತಿನ ಭಾವ ಹೀಗಿದ್ದಿತು…. “ಬೀರನು ಇಬ್ಬರ ಕಾಗದಗಳ ರಜಿಸ್ಟರದ ಖರ್ಚು, ತಾಲೂಕಿಗೆ ಹೋಗಿ ಬರುವ ವೆಚ್ಚ ನೋಡಿಕೊಳ್ಳಬೇಕು, ಯುಗಾದಿ ಆದ ತರುವಾಯ ಬೀರ ಬಾವಿಯ ಕೆಲಸ ಆರಂಭಿಸಬಹುದು, ಅದರಿಂದ ಅವರವರ ಹೊಲದ ಉತ್ಪನ್ನ ಅವರಿಗೆ ಈ ವರ್ಷ ಸೇರುವುದು, ಬೀರನಿಗೆ ಈಗಲೇ ಹೋಲವು ಸ್ವಾಧೀನವಾಗಬೇಕಿದ್ದರೆ ಹಾಗೂ ಮಾಡಿಕೊಳ್ಳಬಹುದು. ರಜಿಸ್ಟರ ಆದ ಮರು ದಿನದಿಂದ ತಮ್ಮ ತಮ್ಮ ಹೊಸ ಹೊಲಗಳಲ್ಲಿ ತಾವು ಹೋಗಬಹುದು. ಆಯಾ ಹೊಲಗಳ ಬೆಳೆಗಳನ್ನೂ ತಾವೇ ತಕ್ಕೊಳ್ಳ ಬೇಕಾಗುವದು.” ಈ ವಿಚಾರಕ್ಕೆ ಬೀರ ಒಮ್ಮೆಲೇ ಒಪ್ಪುವದಿಲ್ಲವೆಂದು ಪಂತನಿಗೆ ಗೊತ್ತಿದ್ದಿತು. ದಾವಲನಿಗೂ ಗೊತ್ತಿದ್ದಿತು, ಬೀರ ಒಪ್ಪದಿದ್ದರೆ ಎಲ್ಲಿ ಈ ವ್ಯವಹಾರವೇ ನಿಲ್ಲುವುದೇನೋ ಎಂದು ದಾವಲ ಹೆದರಿದ್ದ. ಆದರೂ ತನ್ನ ಒಡೆಯನ ಎದುರಿಗೆ ಸ್ಪಷ್ಟವಾಗಿ ಮಾತನಾಡಿದ್ದಕ್ಕೆ ಸುಮ್ಮನಾಗಿಬಿಟ್ಟ.

ಬೀರನಿಗೆ ಪಂತರು ಹೀಗೇಕೆ ಮಾತನಾಡುವರೆಂಬುದು ಗೊತ್ತಾಯಿತು. ಆದರೂ ಆತ ವಿಚಾರಮಾಡಿ ತಿಳಿಸುವೆನೆಂದು ಹೇಳಿ ಮನೆಗೆ ಹೋದ.

“ನಿನ್ನ ಹೊಲದ ಅಗತ್ಯವಿದೆ ಅವನಿಗೆ ಎಲ್ಲಿ ಹೋಗುವ. ಮೂರು ಎಕರೆ ಕೊಟ್ಟು ಐದು ಎಕರೆ ತಕ್ಕೊಳ್ಳಲಿಕ್ಕೆ ಅವನದೇನು ಹೋಗತದೆ? ನೀ ಸುಮ್ಮನಿರು, ನಾನೆಲ್ಲ ಮಾಡಿಸಿಕೊಡುವೆ” ಎಂದು ಪಂತ ದಾವಲನಿಗೆ ಆಶ್ವಾಸನೆ ಕೊಟ್ಟು ಕೆಲಸಕ್ಕೆ ಕಳಸಿಕೊಟ್ಟ.

ಬೀರ ಮತ್ತೆ ಚಿಂತೆಗೆ ಒಳಗಾದ. ತಾನು ಪಂತನಿಗೆ ಗಿಡಗಳನ್ನು ಕೊಡಲಿಕ್ಕೆ ಒಪ್ಪದುದರಿಂದ ಅವನು ದಾವಲನ ಕಡೆಗಾಗಿ ಮಾತಾಡಿದನೆಂಬದು ಅವನಿಗೆ ಗೊತ್ತಾಯಿತು. ಆದರೂ ಆ ಮರಗಳನ್ನು ಪಂತನಿಗೆ ಲಂಚವೆಂದು ಕೊಡಲಿಕ್ಕೆ ಅವನು ಮನಸ್ಸು ಮಾಡಲಿಲ್ಲ. ಈಗ ಪಂತನು ಹೇಳಿದ ಮಾತಿಗೆ ಒಪ್ಪಿ ಹೊಲವನ್ನು ವಿನಿಮಯ ಮಾಡಿಕೊಳ್ಳ ಬೇಕೋ ಇಲ್ಲವೆ ಬಿಟ್ಟು ಬಿಡಬೇಕೋ ಎಂಬ ನಿರ್ಣಯ ಮಾಡುವುದೊಂದೇ ಉಳಿದಿದ್ದಿತು. ಊರಲ್ಲಂತೂ ಈಗಾಗಲೇ ಬೀರ ಬಾವಿ ತೊಡುವನೆಂದು ಸುದ್ದಿ ಹರಡಿದ್ದಿತು, ಕಂಡವರೆಲ್ಲ ಬಾವಿಯ ವಿಷಯ ಕೇಳುವವರೇ. ಅವರಲ್ಲಿ ಕೆಲವರಿಗೆ ಬೀರ ಸ್ವಲ್ಪ ಆಧ್ಯತೆಯಿಂದಲೇ ತನ್ನ ಬಾವಿ ತೋಡುವ ಸಂಗತಿಯನ್ನು ಮಂಡಿಸಿದ್ದ. ತನ್ನ ಆದರ್ಶವನ್ನೂ ವಿವರಿಸಿದ್ದ. ಅದರಿಂದ ಈಗ ಯಾವುದಕ್ಕೂ ಅವನು ಹಿಂದೆ ಸರಿಯುವಂತಿರಲಿಲ್ಲ. ಹಿಡಿದ ಕಾರ್ಯವನ್ನು ಅರ್ಧಕ್ಕೇ ಬಿಟ್ಟು, ಹೇಡಿ ಎಂದೆನಿಸಿಕೊಳ್ಳಲಿಕ್ಕೆ ಅವನ ಮನಸ್ಸು ಒಪ್ಪದು. ಸದ್ಯಕ್ಕೆ ಸ್ವಲ್ಪ ಹಾನಿಯಾದರೂ ಮುಂದೆ ಲಾಭದಾಯಕವಾಗುವ ತನ್ನ ಯೋಜನೆಯನ್ನು ಬಿಟ್ಟು ಕೊಡಲಿಕ್ಕೆ ಒಪ್ಪಲಿಲ್ಲ. ಚಿನ್ನವ್ವ ಪತಿಗೆ ತಿಳಿಸಿಹೇಳಿದಳು: ಹೊಲ ಬದಲು ಮಾಡಿಕೊಳ್ಳಲಿಕ್ಕೆ ನೂರಾರು ರೂಪಾಯಿ ವೆಚ್ಚ ಮುನ್ನೂರು ನಾನೂರು ರೂ. ಗಳು ಬೆಳೆಯಲ್ಲಿ ಹಾನಿ, ಇದು ನನಗೆ ಬೇಡ. ನಮ್ಮ ಹೊಲ ನಮಗಿರಲಿ. ಅದೇ ಹಣದಿಂದ ಮಕ್ಕಳ ಮದುವೆಮಾಡಿ ಸುಖದಿಂದ ಇರೋಣ, ಜನರ ಮುಂದೆ ಮಾತಾಡಿರುವೆವೆಂದು ಹಾನಿ ಮಾಡಿಕೊಳ್ಳುವುದು ತಕ್ಕದೆ? ಅಭಿಮಾನಕ್ಕೆ ಬಿದ್ದು ಹಾಳು ಬಾವೀ ಬಿದ್ದರೆ ಕೈ ಕಾಲು ಮುರಿದುಕೊಳ್ಳುವವರು ನಾವೇ ಅಲ್ಲವೆ? ಬೀರನ ಹೆಂಡತಿ ಹೀಗೆ ವಿರೋಧಿಸಿದರೂ ಮದುವೆಗೆ ಬಂದ ಅವನ ಮಕ್ಕಳು ತಂದೆಯ ಮಾತಿಗೆ ಎದುರಾಡಲಿಲ್ಲ. ತಂದೆಯ ಕಾರ್ಯ ಈಗ ಹಾನಿಕರವಾಗಿದ್ದರೂ ಅದನ್ನು ತಾವು ದುಡಿದು ಬೆಳೆಸಲಿಕ್ಕೆ ತೋಟವೊಂದು ಸಿಗುವದೆಂಬ ಕನಸನ್ನು ಕಂಡರಾತರುಣರು. ಅದರಂತೆ ತಾವು ತಂದೆಯ ಕಾರ್ಯವನ್ನು ಕಟುವಾಗಿ ವಿಮರ್ಶಿಸಿದರೆ ದುಡಿಯಲಿಕ್ಕೆ ಒಲ್ಲದುದಕ್ಕೆ ಮಕ್ಕಳು ಹೀಗೆ ಮಾಡುವರೆಂದು ತಂದೆಯು ತಿಳಿದುಕೊಳ್ಳಬಹುದೆಂದು ವಿಚಾರಿಸಿ ಸುಮ್ಮನಾದರು.

ಮಕ್ಕಳಲ್ಲಿ ಮಾಡುವ ಹುಮ್ಮಸ್ಸಿದೆ, ಹೆಂಗಸಿಗೆ ಧೈರ್ಯ ಸಾಲದು. ಅವಳ ಮಾತನ್ನೇನು ಕೇಳುವುದು? ಎಂದುಕೊಂಡು ಬೀರ ಮು೦ದುವರಿದ. ಆಗ ತನ್ನಲ್ಲಿಯೇ ಒಂದು ವಿಚಾರವನ್ನು ಮಾಡದೆ ಮಾತ್ರ ಇರಲಿಲ್ಲ. ದಾವಲನು ತನ್ನ ಡೊಣೀ ಹೊಲದಲ್ಲಿ ಯಾವ ಮಗ್ಗಲಿಗೊ ಮೂರು ಎಕರೆ ಹೊಲ ತಕ್ಕೊಳ್ಳಬಹುದು. ಸ್ವಲ್ಪ ಹೊಳೆ ಏರಿದ ಕೂಡಲೇ ನೀರುಣ್ಣುವ ಹೊಲದ ಭಾಗ ತಕ್ಕೊಂಡರೂ ಅಷ್ಟೆ; ಉಳಿದ ಇನ್ನೊಂದು ಭಾಗ ಹಿಡಿದರೂ ಅಷ್ಟೆ, ನೀರು ನಿಲ್ಲದ ಭಾಗದಲ್ಲಿಯೇ ದೊಡ್ಡ ದೊಡ್ಡ ನಾಲ್ಕು ಮರೆಗಳಿದ್ದುವು. ಅವುಗಳ ಬೆಲೆ ಈಗ ಆರೇಳು ನೂರು ರೂಪಾಯಿ ಯಾಗುವುದು. ಆ ಗಿಡಗಳ ಆಶೆಗೆ ಬಿದ್ದು, ಆ ಭಾಗ ಹಿಡಿದರೆ ತನಗೆ ಒಳ್ಳೆಯ ನೆಲ ಉಳಿಯುವುದು. ಇಲ್ಲ, ಒಳ್ಳೆಯ ನೆಲ ಹೋದರೆ ಗಿಡಗಳು ತನ್ನ ಪಾಲಿಗೆ ಇರುವುವು. ದೈವದಲ್ಲಿ ಇದ್ದದ್ದು ಉಳಿಯಲೆಂದು ಭಾವಿಸಿ, ಪಂತರಿಗೆ ನಾಲ್ಕು ಜನರ ಎದುರಿಗೆ ಮಾತುಕೊಟ್ಟು ಬಂದ, ಅದನ್ನರಿತು ದಾವಲನಿಗೂ ಸಂತಸವಾಯಿತು. ಮನದಲ್ಲಿಯೇ ಪಂತರ ಚಾತುರ್ಯಕ್ಕೆ ತಲೆದೂಗಿದ. ಆ ಹುಮ್ಮನಸ್ಸಿನಲ್ಲಿ ಪಂತರ ಹೊಲದಲ್ಲಿ ದಿನಕ್ಕೆ ಎರಡಾಳಿನಷ್ಟು ದಾವಲ ದುಡಿಯದಿರಲಿಲ್ಲ.

ಬೀರನ ಮನೆತನದಲ್ಲಿಯೇ ಒಂದು ನವಚೇತನ ಉ೦ಟಾದ೦ತಾಯಿತು. ಮನೆಯವರೆಲ್ಲರೂ ಕೂಡಿಕೊಂಡು ಹೋಗಿ ತಮಗೆ ಬರುವ ಹೊಸ ಹೊಲವನ್ನು ಮತ್ತೊಮ್ಮೆ ನೋಡಿಕೊಂಡು ಬಂದರು. ಎಲ್ಲಿ ಬಾವಿ ತೆಗೆಯಬೇಕು, ಯಾವ ಮಗ್ಗಲಿಗೆ ಯಾತದ ಕಟ್ಟೆ ಹಾಕಬೇಕು, ಎಲ್ಲೆಲ್ಲಿ ಯಾವ ಯಾವ ಬೆಳೆ ಮಾಡಬೇಕು ಇವನ್ನೆಲ್ಲ ಲೆಕ್ಕ ಹಾಕಿದರು. ಆಗೆಲ್ಲ ಬೀರನ ಉತ್ಸಾಹ ಹೇಳತೀರದು. ತೋಟದಲ್ಲಿ ಗೊಬ್ಬರದ ಅವಶ್ಯಕತೆ ಇದೆಯೆಂದು ಈಗಾಗಲೇ ತನ್ನ ಮಕ್ಕಳನ್ನು ಹಚ್ಚಿ, ಹತ್ತಿಪ್ಪತ್ತು ಬಂಡಿ ಗೊಬ್ಬರ ಒಯ್ದು, ಹೊಲದಲ್ಲಿ ಒಟ್ಟಿಗೆ ಕೂಡಹಾಕಿಸಿದನು. ಬಾವಿಯನ್ನು ತೋಡಲಿಕ್ಕೆ ಬೇಕಾಗುವ ಹಾರಿ, ಗುದ್ದಲಿ, ಹೆಡಿಗೆ ಬುಟ್ಟಿಗಳನ್ನು ಸಂತೆಯಿಂದ ಕೊಂಡು ತರಿಸಿದನು. ನೆರಿಯೂರದ ಒಡ್ಡರನ್ನು ಕರೆದು ತಂದು, ಬಾವಿಯನ್ನು ತೋಡುವುದಕ್ಕೆ ಗುತ್ತಿಗೆ ಕೊಟ್ಟನು. ಅದರ ಕರಾರು ಪತ್ರವನ್ನು ಕೂಡ ಪಂತರಿಂದಲೇ ಬರೆಯಿಸಿ, ಕೆಲಸಗಾರರಿಗೆ ಇನ್ನೂರು ರೂಪಾಯಿಗಳನ್ನು ಮುಂಗಡಕೊಟ್ಟನು. ಆ ಕಾಲಕ್ಕೆ ಬಾವಿಯ ಕೆಲಸದಲ್ಲಿ ತಾನೂ ತನೊಬ್ಬ ಮಗನೂ ಇರತಕ್ಕವರೆಂದೂ ಅದಕ್ಕಾಗಿ ಗುತ್ತಿಗೆಯವರಿಗೆ ತಮ್ಮಾಳಿನ ಹಣವನ್ನು ಹಿಡಿದುಕೊಂಡೇ ಕೊಡತಕ್ಕವರೆಂದೂ ಪಂತನ ಸಮಕ್ಷಮ ಮಾತುಮಾಡಿದನು. ಬೀರನ ಯುಕ್ತಿಯನ್ನು ಕಂಡು ಪಂತನು ಮನದಲ್ಲಿಯೇ ನಗುವ. ಒಕ್ಕಲಿಗನ ಆನೆ ಹೋದರೂ ಕೇಳುವುದಿಲ್ಲ, ಬಾಲಕ್ಕೆ ಬಡಿದಾಡುವ ಎಂದು ಮನದಲ್ಲಿಯೇ ಅಂದುಕೊಂಡು ನಕ್ಕ.

ಸದ್ಯ ಬೀರನ ಹತ್ತರಿದ್ದ ಹಣವೆಲ್ಲ ತೀರಿತು. ಇನ್ನು ಸರಕಾರದವರಿಂದ ಸಾಲದ ದುಡ್ಡು ಸಿಕ್ಕಮೇಲೆ ಮುಂದಿನ ಕೆಲಸ ನಡೆಯಬೇಕು. ಅದಕ್ಕಾಗಿ ಪಂತನನ್ನು ಒಂದೆರಡು ಸಲ ಕೇಳಿದ ಬೀರ. ಆಗ ಪಂತ ಬೀರನಿಗೆ ಹೇಳಿದ-

“ಈಗಲೇ ಅವಸರ ಮಾಡಿ ಉಪಯೋಗವಿಲ್ಲ. ಮೊದಲು ಹೊಲದ ವಿನಿಮಯದ ಕಾಗದ ಮಾಡಿಕೊಂಡು ಬರೋಣ. ಆ ಮೇಲೆ ಆ ಹೊಲದ ನಂಬರು ಮೊದಲಾದವುಗಳನ್ನು ಹಾಕಿ ಅರ್ಜಿ ಮಾಡಬೇಕು. ಅಂದರೆ ಸರಕಾರದವರು ನೋಡಿಕೊಂಡು ಹೋಗುವರು, ಅವರು ಪಾಸುಮಾಡಿದ ಮೇಲೆ ತಿ೦ಗಳೆರಡು ತಿಂಗಳಲ್ಲಿ ಹಣ ಸಿಗುವುದು. ಸರಕಾರದ ಹಣವೇನು ಹಾದಿಯ ಮೇಲೆ ಬಿದ್ದಿದೆಯೇ? ನಾಲ್ಕೆಂಟು ದಿನ ಹೋಗಲಿ, ಒಂದು ದಿನ ಸವಡು ಮಾಡಿ ತಾಲೂಕಿಗೆ ಹೋಗಿಬರೋಣ.”

ಬೀರ ಸುಮ್ಮನಾದ, ಉತ್ಸಾಹ ತಗ್ಗಿತು. ನಾಲ್ಕೆಂಟು ದಿನ ತನ್ನ ಹೊಲಗಳ ಸುಗ್ಗಿಯ ಕೆಲಸಕ್ಕೆಂದು ಮನಸ್ಸು ತೊಡಗಿಸಿದ. ತನ್ನ ಒಬ್ಬ ಮಗ ಮನೆತನದ ಒಕ್ಕಲತನ ನೋಡುವ, ತಾನು ಇನ್ನೊಬ್ಬ ಮಗನೊಡನೆ ಬಾವಿಯ ಕೆಲಸಕ್ಕೇನೇ ಮೀಸಲೆ೦ದು ಆತ ಯೋಚಿಸಿದ್ದ. ಸದ್ಯಕ್ಕೆ ಬಾವಿಯ ಕೆಲಸ ಇಲ್ಲವಾಯಿತು. ಎಲ್ಲರೂ ಒಕ್ಕಲತನಕ್ಕೆ ತೊಡಗಿದರು.

ಹತ್ತೆಂಟು ದಿನಗಳು ಉರುಳಿದವು. ಊರೊಳಗಿನ ಐದಾರು ತಾಲೂಕಿಗೆ ಹೋಗಬೇಕಾದ ಕೆಲಸಗಳು ಕೂಡಿದ ಮೇಲೆ ಪಂತನು ಬೀರನಿಗೆ ಹೇಳಿ ಕಳಿಸಿದ, ಇನ್ನೆರಡು ದಿನಗಳಲ್ಲಿ ಕಚೇರಿಗೆ ಹೋಗತಕ್ಕದ್ದು. ವೆಚ್ಚದ ಹಣ ಸಿದ್ಧವಿರಲಿ ಎಂದು. ಅದರಂತೆ ಬೀರನೂ ಸಿದ್ಧತೆಯಲ್ಲಿಯೇ ಇದ್ದ. ಮನೆಯಲ್ಲಿ ಚೆನ್ನವನಿಗೆ ಹೇಳಿ, ಪಂತನಿಗಾಗಿ ಸಿಹಿಸಿಹಿ ತಿಂಡಿಯನ್ನು ಮಾಡಿಸಿಕೊಂಡ. ಪಂತನೂ ಕೂಡ ಚಾವಡಿಗೆ ಹೋಗಿ ಹೊಲಗಳ ನಂಬರು, ತೆರಿಗೆಯ ಹಣ ಎಷ್ಟು? ಮೊದಲಾದವುಗಳನ್ನು ಟಿಪ್ಪಣೆ ಮಾಡಿಕೊಂಡ. ದಾವಲನನ್ನು ಕರೆದುಕೊಂಡು ಕಚೇರಿಯ ದಾರಿ ಹಿಡಿದ. ಎಲ್ಲರ ಹೋಗು ಬರುವ ವೆಚ್ಚವನ್ನೂ ಮೊದಲೇ ನಿಶ್ಚಯಿಸಿದ ಪ್ರಕಾರ ಬೀರನೇ ನೋಡಿಕೊಂಡ.

ಸಬ್ ರಿಜಿಸ್ಟಾರರ ಕಚೇರಿಯಲ್ಲಿ ಕಾಗದ ರಜಿಸ್ಟರ ಮಾಡುವ ಕಾಲಕ್ಕೆ ರೈತರಿಬ್ಬರಿಗೂ ಕಾಗದಗಳನ್ನು ಓದಿ ಹೇಳಲಾಯಿತು. ದಾವಲನ ಲಕ್ಷ್ಯ ಅತ್ತ ಇರಲಿಲ್ಲ. ಪಂತರ ಮನೆಯ ಆಳು ಆತ, ಪಂತರೇ ಎದುರಿಗೆ ಇರುವಾಗ ತಾನು ಕೇಳುವುದೇನು ಎಂದು ಭಾವಿಸಿದ್ದ. ಕಾಗದ ಓದುವಾಗ ಬೀರನಿಗೆ ಏನೋ ಸಂಶಯ ಬಂದಂತಾಯಿತು. ಕೇಳಲಿಕ್ಕೆ ಬಾಯ್ದೆರೆದ.

“ಹಾಗೇ ಬರೆಯಬೇಕಾಗ್ತದ, ಮುಂದೆ ಕೇಳು” ಎಂದು ಹೇಳಿ ಪಂತರು ಸುಮ್ಮನಾಗಿಸಿದರು. ಪಂತರೇ ಮುಂದೆ ಕುಳಿತು ಬರೆಯಿಸಿದಾರೆಂದ ಮೇಲೆ ಇರಬೇಕು, ತನ್ನ ತಿಳುವಳಿಕೆಯಂತೆ ಸರಿಯಾಗಿಯೇ ಇರಬೇಕು ಎಂದು ಬೀರನು ಸುಮ್ಮನಾದ. ಕಾಗದದ ಮೇಲೆ ಸರಕಾರದ ಮುದ್ರೆ ಬಿದ್ದಿತು. ಕೆಲಸ ತೀರಿತೆಂದು ಎಲ್ಲರೂ ಆನಂದದಿಂದ ಊರಿಗೆ ಬಂದರು.

ನಾಲ್ಕಾರು ದಿನಗಳು ಕಳೆದ ಮೇಲೆ ದೋಣಿ ಹೊಲದೊಳಗಿನ ಗಿಡಗಳನ್ನು ಕಡಿಸಲಿಕ್ಕೆ ಪಂತ ಆಳುಗಳನ್ನು ಕಳಿಸಿದ. ಬೀರನ ಮಗ ಅದನ್ನು ಕಂಡು ಓಡಿ ಮನೆಗೆ ಬಂದು ತಂದೆಗೆ ಹೇಳಿದ. ಅವನು ಗಿಡಗಳು ತಮ್ಮ ಪಾಲಿನ ಹೊಲದಲ್ಲಿ ಇವೆಯೆಂದು ಈ ಮೊದಲು ತಂದೆಯನ್ನು ಕೇಳಿ ತಿಳಿದುಕೊಂಡಿದ್ದ. ಮಗನ ಮಾತನ್ನು ಕೇಳಿ, ಬೀರನಿಗೂ ದಿಗಿಲುಂಟಾಯಿತು. ಪಂತ ಮನೆಗೆ ಓಡಿಹೋದ. ಪಂತ ಗಂಭೀರವಾಗಿಯೇ ಹೇಳಿದ.

“ಅವು ದಾವಲನ ಪಾಲಿಗಿವೆ. ಅದಕ್ಕೆ ಆಳುಗಳನ್ನು ಕಳಿಸಿದೆ, ನಿನ್ನ ಗಿಡಗಳಿಗೆ ಕೈ ಹಚ್ಚಲಿಕ್ಕೆ ಮುಂಚೆಯೇ ಒಂದು ಮಾತು ಕೇಳಿ. ನೋಡಿದ್ದೆನಲ್ಲ ನಿನ್ನ?”

ಕೊನೆಗೆ ಪ್ರಶ್ನೆ ಹಾಕಿ ಪಂತ ಮಾತು ಮುಗಿಸಿದ. ಬಾಯೊಳಗಿನ ತಾಂಬೂಲವನ್ನು ಮತ್ತೆ ಜಗಿಯಲಿಕ್ಕೆ ಆರಂಭಿಸಿದ.

ಬೀರ ಮನೆಗೆ ಬಂದು ಮಗನಿಗೆ ನಡೆದ ಸಂಗತಿಯನ್ನು ತಿಳಿಸಿದ. ಅದರೊಡನೆ ನೀರುಣ್ಣುವ ಜಮೀನು ನನ್ನ ಪಾಲಿಗೆ ಉಳಿಯಿತು, ನೆಟ್ಟಗಾಯಿತೆಂದೂ, ಉಪ್ಪು ಕಾರ ಹಚ್ಚಿ ಮಕ್ಕಳಿಗೆ ಹೇಳಿದ. ಇದು ತೋಟ, ಅದು ಹೊಳೆಯ ನೀರುಣ್ಣುವ ಜಮೀನು, ಬರಗಾಲೆಂಬುದೇ ನಮಗಿಲ್ಲ. ಎಂದು ಪ್ರತಿಪಾದಿಸಿದ ಮಕ್ಕಳು ಸುಮ್ಮನಾದರು. ಚಿನ್ನವ್ವ ಮಾತ್ರ ಸಂಶಯ ಎತ್ತಿದಳು.

“ಕಚೇರಿಯಿಂದ ಬಂದ ದಿನ ಗಿಡಗಳಿದ್ದ ಪಾಲು ನಮ್ಮದು ಎಂದಿರಿ. ಈಗ ಹೊಳೆ ಮುಳುಗುವ ಹೊಲ ನಮ್ಮದು ಎನ್ನುವಿರಿ! ಯಾವುದು ನಿಜವೋ ಏನೋ! ಈಗ ಗಿಡಗಳನ್ನು ಕಡಿದು ಒಯ್ಯುವರು. ನಾಳೆ ಅದೇ ಸಾಲು ನಿನ್ನದು ಅಂದರೆ?”

“ಅದೇನು ಹುಡುಗಾಟಿಕೆ ಇದೆ ಏನು? ಸರಕಾರದಲ್ಲಿ ಕಾಗದಪತ್ರ ಆಗೇದ, ನಾಲ್ಕು ಕಡೆ ಚಕಬಂದಿ ಹಚ್ಚಿ.”

ಬೀರ ಹೆಂಡತಿಗೆ ಸಮಾಧಾನ ಹೇಳಿದ. ಆದರೆ ಅವನಿಗೇ ಸಮಾಧಾನವಾಗಲಿಲ್ಲ. ಆದರೂ ಕಾಗದ ಬರುವವರೆಗೆ ಏನೂ ತಿಳಿಯುವಂತಿರಲಿಲ್ಲ.

ನಡುವೆ ಬಾವಿಯ ಕೆಲಸಗಾರರು ಬಂದು ಎಡತಾಕ ಹತ್ತಿದರು ಸರಕಾರದ ಸಾಲಕ್ಕಾಗಿ ಅರ್ಜಿ ಹಾಕಲಿಕ್ಕೆ ಪಂತನ ಕಡೆಗೆ ಬೀರ ಹೋದ. ಆಗ ಪಂತ ಹೇಳಿದ. ನಿಮ್ಮ ಕಾಗದ ಬರಲಿ! ಚಾವಡಿಯೊಳಗಿನ ನಿಮ್ಮ ನಿಮ್ಮ ಖಾತೆಗಳಿಗೆ ದಾಖಲ ಮಾಡೋಣ. ಅನಂತರ ನಿನ್ನ ಖಾತೆಯ ನಕ್ಕಲು ತೆಗೆದುಕೊಡುವೆ. ಆದನ್ನು ಜೊತೆಗೆ ಇಟ್ಟು ಅರ್ಜಿ ಮಾಡಬೇಕು. ಅಂದರೆ ಸಾಲ ಮಂಜೂರು ಆಗುವುದು.” ಈ ಮಾತಿನಿಂದ ಬೀರ ಮತ್ತಷ್ಟು ಅಧೀರನಾಗಿ ಕಾಗದ ಬರುವ ದಾರೀ ಕಾಯಹತ್ತಿದ. ದಿನಾಲು ಅಂಚೆಯ ಆಳಿಗೆ ಕೇಳಹತ್ತಿದ, ಕಾಗದ ಬಂದೊಡನೆಯೆ ತಂದು ಕೊಡು ನಿನಗೆ ನಾಲ್ಕಾರು ಆಣೆ ಮೆಚ್ಚು ಕೊಡುವೆನೆಂದೂ ಆಶೆ ಹಚ್ಚಿ ಬಿಟ್ಟ. ಬಾವಿಯನ್ನು ಗುತ್ತಿಗೆ ಹಿಡಿದವರು ದಿನಾ ಬೆಳಗಾದರೆ ಬೀರನ ಮನೆಗೆ ಎಡತಾಕಹತ್ತಿದರು, ಬಾವಿಯ ಕೆಲಸ ತೋರಿಸು, ಇಲ್ಲಿ ನಾವು ಎರಡನೆಯವರ ಕೆಲಸ ಹಿಡಿಯುವೆವು ಎಂದು ದುಂಬಾಲಬಿದ್ದರು. ಅವರಿಗೆ ಹೇಳಿಸಲಿಕ್ಕೆಂದು ಬೀರ ಪಂತನ ಹತ್ತಿರ ಕರೆದುಕೊಂಡು ಹೋದ. ಆಗ ಕೆಲಸಗಾರರಿಗೆ ಪಂತ ಹೇಳಿದ- “ಸದ್ಯ ನಮ್ಮ ಕೊಟ್ಟಿಗೆಯ ಕೆಲಸ ಆರಂಭಿಸಿರಿ! ಕಟ್ಟಿಗೆಯಂತೂ ಬಂದು ಬಿದ್ದಿವೆ. ಬೀರನ ಬಾವಿಯ ಕೆಲಸ ಆರಂಭ ಆದಾಗ ಅಲ್ಲಿ ಹೋದೀರಂತ. ಈಗ ಅವನು ಕೊಟ್ಟ ಎರಡುನೂರು ರೂಪಾಯಿ ಕಳೆಯುವ ತನಕ ಇಲ್ಲಿ ದುಡಿಯಿರಿ!”

ಪಂತರ ಮಾತಿಗೆ ಬೀರ ನಡುವೆ ಏನನ್ನೂ ಹೇಳಬೇಕೆಂದ. ಅಷ್ಟರಲ್ಲಿ ಕೆಲಸಗಾರರೇ ಮುಂದಾಗಿ ಒಪ್ಪಿಕೊಂಡು ಬಿಟ್ಟರು, ಒಪ್ಪಿದಂತೆ ಮರು ದಿನದಿಂದ ಪಂತರಲ್ಲಿ ಕೆಲಸಕ್ಕೂ ಆರಂಭಿಸಿದರು.

ಮುಂದೆ ಒಂದೆರಡು ದಿನಗಳಲ್ಲಿ ಸರಕಾರದ ಕಚೇರಿಯಿಂದ ದಾವಲನಿಗೂ ಬೀರನಿಗೂ ಎರಡು ಲಕ್ಕೊಟೆಗಳು ರಜಿಸ್ಟರ ಆಗಿ ಬಂದುವು. ಆನಂದದಿಂದ ಇಬ್ಬರೂ ಹೆಬ್ಬರಳಿನ ಮುದ್ರೆಯೊತ್ತಿ ಕೊಟ್ಟು, ಅಂಚೆ ಯಾಳಿಗೆ ನಾಲ್ಕಾರು ಆಣೆಗಳನ್ನು ಚಹಕ್ಕೆ ಕೊಟ್ಟು, ತಕ್ಕೊಂಡರು. ದಾವಲ ಕಾಗದ ಒಯ್ದು ಪಂತರ ಕೈಯಲ್ಲಿ ಕೊಟ್ಟ. ಬೀರ ಮನೆಗೆ ಬಂದು, ಕನ್ನಡ ನಾಲ್ಕು ತರಗತಿ ಓದಿದ ತನ್ನ ಹಿರಿಯ ಮಗನ ಕೈ ಯಿಂದ ಓದಿಸಿ ಕೇಳಿದ. ಹೊಲದ ಸಾಲುಗಳು ಯಾವ ರೀತಿ ಆದವೆಂಬ ಕಲ್ಪನೆ ಒಮ್ಮೆಲೇ ಅವನಿಗೆ ಬರಲಿಲ್ಲ. ಚೆನ್ನವ್ವನು ಲಕ್ಷಗೊಟ್ಟು ಕೇಳಿದ್ದರೂ ಅವಳಿಗೂ ಹೊಳೆಯಲಿಲ್ಲ. ದಂಪತಿಗಳಿಬ್ಬರೂ ಗೊಂದಲದಲ್ಲಿ ಬಿದ್ದವರಂತೆ ಹುಡುಗನ ಮುಖದ ಕಡೆಗೆ ನೋಡಹತ್ತಿದರು.

“ಹೀಗೇಕೆ ಹೊಲ ಒಡೆದಿರಿ?”

ಮದುವೆಗೆ ಬಂದ ಮಗ ತಂದೆಗೆ ಕೇಳಿದ.

“ಹೇಗೆ ಬರೆದಿದೆ?” ತಂದೆಯ ಪ್ರಶ್ನೆಯಿದು!

ಮಗ ಇದ್ದಲಿಯ ಚೂರೊಂದನ್ನು ತಂದು ನೆಲದ ಮೇಲೆ ತಮಗೆ ಉಳಿದ ಡೋಣಿಯ ಹೊಲದ ನಕ್ಷೆಯನ್ನು ಬರೆದು ತೋರಿಸಿದ. ಮೂರ, ಎಕರೆ ಹೊಲ ಮೂರು ತುಂಡಾಗಿ ಉಳಿದಿದ್ದಿತು. ದಾವಲನಿಗೆ ಅಖಂಡವಾಗಿದ್ದಿತು. ಅದು ಹೆಚ್ಚು ನೀರುಣ್ಣುವದೂ ಆಗಿತ್ತಲ್ಲದೆ, ಅದರಲ್ಲಿಯೇ ಆ ನಾಲ್ಕು ಹೆಮ್ಮರಗಳೂ ಬಂದಿದ್ದವು!

ಬೀರನ ಕಣ್ಣುಗಳು ಕೆಂಪಾದುವು. ತುಟಿಗಳು ಅದುರಿದವು, ಕೆರಳಿದ ಕಾದ ರಕ್ತ ನೆತ್ತಿಗೇರಿತು. ನೆಟ್ಟಗೆ ಪಂತನ ಮನೆಗೆ ಹೋಗಿ ಕೇಳಿದ-

“ಇದೇನ ಹೊಲಸ ಕೆಲಸ ಮಾಡಿದಿರಿ? ಬಡವನ ಕುತ್ತಿಗೆ ಕೊಯ್ಯುವ ಕೆಲಸ ನಿಮ್ಮದು?”

ಶಾಂತನಾಗಿಯೇ ಸಂತರು ನುಡಿದರು-
“ನಿನಗೆ ಬೇಡವಾಗಿದ್ದರೆ ನಿನ್ನ ಹೊಲ ನೀ ತಿರುಗಿ ಮಾಡಿಕೊಳ್ಳು ಹೋಗು! ದಾವಲನಿಗೆ ಕರೆದು ಹೇಳತೀನಿ.”

ಬೀರನನ್ನು ಹಾಳು ಬಾವಿಯಲ್ಲಿ ಎತ್ತಿ ಒಗೆದಂತಾಯಿತು.

“ಅಯ್ಯೋ ಹಾಳು ಬಾವಿ!” ಎಂದು ಕಿರುಚಿದ ಬೀರ.

ಇಂದು ಬೀರ ಊರಲ್ಲೊಬ್ಬ ಹುಚ್ಚ. “ಬಾವಿ ತೋಡುವೆ, ಕಬ್ಬಾ ಹಚ್ಚುವೆ, ಗಾಣ ಹೂಡಿದ ಮೇಲೆ ಊರ ಜನರಿಗೆ ರಸ ಕುಡಿಸುವೆ. ದೊಡ್ಡ ಹೋರೀ ಹೂಡಿದ ಗಾಡಿ ತಂದು ಪಂತನ ಗಾಣಕ್ಕೆ ಕರದೊಯ್ಯವೆ ಹಃ! ಹಃ! ನನ್ನ ತೋಟ! ನನ್ನ ನನ್ನ ಬಾವಿ!” ಎಂದು ಬಡಬಡಿಸುತ್ತ ತಿರುಗುವ ಬೀರ.
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...