ಕಾದ ಹೆಂಚಿನ ಮೇಲೆ ಪೂರಕೆಯಿಂದ ಸವರುತ್ತಾ ಹಣೆ ಮೇಲಿನ ಬೆವರನ್ನು ಸೆರಗಿನಿಂದ ಒತ್ತಿಕೊಂಡ ಕೌಸಲ್ಯ ದೊಡ್ಡ ಪಾತ್ರೆಯಲ್ಲಿದ್ದ ಹಿಟ್ಟನ್ನು ಸವುಟಿನಿಂದೆತ್ತಿ ಹೆಂಚಿನ ಮೇಲೆ ಎರಡು ಮೂರು ಕಡೆ ಹಾಕಿದಳು. ಚುಂಯ್ ಎನ್ನುವ ಶಬ್ದ ಕಿವಿಗೆ ತುಂಬಿಕೂಳ್ಳುತ್ತಿರುವಾಗಲೆ ಸವರಿ ದೊಡ್ಡದು ಮಾಡುತ್ತಾ ದೋಸೆಯ ಆಕಾರಕ್ಕೆ ತಂದಳು. ಪಕ್ಕದಲ್ಲಿಟ್ಟುಕೊಂಡಿದ್ದ ಜಗ್‌ನಲ್ಲಿ ಕೈ ಅದ್ದಿ ನೀರನ್ನು ಚಿಮುಕಿಸಿದಳು- ನೀರ ಹನಿಗಳು ಚಟಪಟಗುಡುತ್ತಿದ್ದವು. ಬಗಬಗನೆ ಉರಿವ ಬೆಂಕಿ ಅದರ ಝಳಕ್ಕೆ ಬೆವತ ಅವಳ ಕೆಂದಾವರೆಯಂತಹ ಮುಖ ಕೆಂಡದಂತೆಯೇ ಭಾಸವಾಯಿತು. ಇದನ್ನೆಲ್ಲಾ ನೋಡಲೋಸುಗ ನಾನು ಬರಬೇಕಾಯಿತೆ ಎಂದು ನಿಡುಸುಯ್ದನು ಸುಬ್ಬು.
ಅವನು ಕೂತ ಟೀಬಲ್ಲಿಗೆ ಎದುರಾಗಿ ಚೌಕಾಕಾರದ ಗೂಡಿನಾಚೆಗೆ ಅಡಿಗೆ ಕೋಣೆ. ಅದನ್ನು ತುಂಬಿದ ಕತ್ತಲು ಬೆಂಕಿಯ ಎದುರು ನಿಂತ ಬಸರಿ ಹೆಂಗಸು ಕೌಸಲ್ಯ ಒಂದು ಕಡೆ. ಇನ್ನೊಂದು ಕಡೆ ಹಿಟ್ಟು ರುಬ್ಬುವವರು, ತರಕಾರಿ ಹೆಚ್ಚುವವರು, ಜಗುಲಿಯ ಮೇಲೆ ಇಟ್ಟುಕೊಂಡು ಟೀ ಕಾಫೀ ಬಸಿಯುವವರು, ಎಲ್ಲವನ್ನೂ ಒಟ್ಟಿಗೆ ನೋಡಿದ ಸುಬ್ಬು ಕರುಳು ಚುರುಗುಟ್ಟಿತು.
ಗಲ್ಲದ ಮೇಲೆ ಕೂತಿದ್ದ ಸ್ಥೂಲಕಾಯದ ಬಿಳಿ ಮನುಷ್ಯ; ಅವನ ಹಣೆಯ ಮೇಲಿನ ಕುಂಕುಮ ಗಂಧ ಕಂಡವು. ಕೊರಳಲ್ಲಿ ಚಿನ್ನದ ಸರ ಬೇರೆ. ಧರ್ಮಸ್ಥಳ ದೇವರ ಚಿತ್ರ ಪಟ, ಮಂತ್ರಾಲಯ ಗುರುಗಳ ಚಿತ್ರ ಪಟಗಳು, ಅದಕ್ಕೆ ಮುತ್ತಿರುವ ಸೀರಿಯಲ್ ಬಲ್ಬುಗಳ ಒಟ, ತೂಗುಬಿದ್ದ ಮಲ್ಲಿಗೆಯ ಹಾರ, ಉರಿಯುವ ಊದುಬತ್ತಿ ಪುಟ್ಟ ದೀಪಗಳ ಹಿನ್ನೆಲೆ ಅವನ ಮೋರೆಗೆ ಅದೊಂದು ಬಗೆಯ ಸೊಬಗು ಹೋಟೆಲ್ ಮಾಲೀಕನ ಗತ್ತನ್ನು ಪ್ರಸಾದಿಸಿತ್ತು ಹೆಸರೇನೋ! ನೆನಪಿಗೆ ಬಾರದೆ ಹೊಯ್ದಾಡಿದ ಸುಬ್ಬು.
ಪುನಃ ಚೌಕಾಕಾರ ಗೂಡಿನಾಚೆ ಕಾಣುವ ದೋಸೆ ಕಾವಲಿ, ಉರಿವ ಬೆಂಕಿ, ಅದರೊಂದಿಗಿನ ಕೌಸಲ್ಯ, ಕಣ್ಣಂಚಿನಲ್ಲಿ ನೀರು ಕವಿದಿದ್ದರಿಂದಲೋ ಏನೋ ಮಂಜು ಮಂಜಾಗಿ ಕಂಡಳು. ಆಗಲೆ ಎಂಬಂತೆ ಇವನತ್ತ ನೋಡಿದ ಕೌಸಲ್ಯಳ ಮುಖದಲ್ಲಿ ಮಿಂಚು ಮೂಡಿದ್ದು ಆರೆಗತ್ತಲಲ್ಲಿ ಕಂಡಿತು. ಅವಳನ್ನು ಕರೆದು ಮಾತನಾಡಿಸಬೇಕೆಂಬ ಹಂಬಲವಿತ್ತಾದರೂ ಸಂಕೋಚದಿಂದ ಚಡಪಡಿಸುತ್ತ ಕೂತಿದ್ದ ಸುಬ್ಬುವಿಗೆ ಅವಳೇ ಅವನತ್ತ ನೋಡಿದಾಗಲೂ ಕರೆದು ಮಾತನಾಡಿಸುವ ತ್ರಾಣ ನಾಲಿಗೆಯನ್ನೇರಲೇ ಇಲ್ಲ.
ಆಕೆ ಕಂಗಳಿಂದ ನೋಡುತ್ತಾ ಸೆರಗಿನಲ್ಲಿ ಕೈ ಒರೆಸಿಕೊಳ್ಳಿತ್ತ ಅವಳೇ ದುಡು ದುಡು ಬಂದಳು. ಅಗಲೇ ಬಂದು ನಿಂತ ಮಾಣಿ ‘ಏನ್ ಬೇಕು ಸಾರ್?’ ಅಂದ. ‘ಚೆನ್ನಾಗಿದ್ದೀಯೇನೋ ಸುಬ್ಬು?’ ಕೇಳಿದ ಅವಳ ಹಿಟ್ಟು ಹತ್ತಿದ ಮೋರೆಯಲ್ಲಿ ಹಿಗ್ಗು ತುಂಬಿಕೊಂಡಿತ್ತು ಸುಬ್ಬು ಗಲ್ಲದ ಕಡೆ ನೋಡಿದ. ತಡಬಡಿಸಿ ‘ರೀ… ಬನ್ನಿ ಇಲ್ಲಿ’ ಕೌಸಲ್ಯ ಗಲ್ಲದ ಮೇಲಿನ ಸ್ಥೂಲಕಾಯನನ್ನು ಕರೆದಳು. ಆಕೆ ನಗುತ್ತಾ ಕರೆವಾಗ ಕಮಕ್ ಕಿಮಕ್ ಎನ್ನದೆ ಎದ್ದು ಬಂದ ಆತ, ‘ಎಂತದು ಮಾರಾಯಳೇ?’ ಎಂಬಂತೆ ಅವಳ ಮೋರೆ ನೋಡಿದ. ‘ಇವರು ಗೊತ್ತುಂಟಲ್ಲವೋ? ನಮ್ಮೂರಿನೋರು ಕಣ್ರಿ. ಹೆಸರು ಸುಬ್ಬು ನಮ್ಮ ಬೀದಿಯಲ್ಲೇ ಇದ್ದ ಜನ. ತುಂಬಾ ಇಂಟಲಿಜೆಂಟು, ಕಾಲೇಜಿನಲ್ಲಿ ಒದ್ತಾ ಇದಾರೆ’ ಅವಳು ಏನೇನೋ ಹೇಳುತ್ತಿರುವಾಗ ಇವನು ‘ನಮಸ್ಕಾರ’ ಎಂದು ಜೋಡಿಸಿ ಎದ್ದು ನಿಂತ.
‘ಇವರು ಗೊತ್ತುಂಟಲ್ಲ.. ನಮ್ಮ ಯಜಮಾನರು’ ಅಂದಳು ಕೌಸಲ್ಯ.
‘ಹೌದು ಮದುವೆಯಲ್ಲೊಮ್ಮೆ ನೋಡಿದ್ದು’ ಬಡಬಡಿಸಿದ ಸುಬ್ಬು ‘ಕೂತ್ಕೊಳಿ ಸಾರ್’ ಎಂದು ಕಿವಿಯಗಲದ ನಗೆ ಬೀರಿದರು ಯಜಮಾನರು. ‘ಆಯಿತು..- ಸಾರ್‌ಗೆ ಏನ್ ಬೇಕು’? ಉಪಚಾರಕ್ಕೆ ನಿಂತರು. ‘ಬೇಡ ಬೇಡ ಎಂತದೂ ಬೇಡ’ ಅಂದ. ಸಾರ್ ಬಂದದ್ದು ಕೌಸಲ್ಯ ನೋಡಲಿಕ್ಕಾ?’ ಸುಬ್ಬು ಬೆಚ್ಚಿದ. ‘ಇಲ್ಲ ಸಾರ್… ಕಾಫೀ ಬೇಕಿತ್ತು’ ತೊದಲ್ನುಡಿದ. ‘ಉಂಟೆ ನಮ್ಮ ಕೌಸಲ್ಯ ಕಡೆಯ ಜನರಲ್ಲವೋ ಮೊದಲ ಬಾರಿಗೆ ಬಂದದುಂಟಲ್ಲ.. ಏಯ್ ಒಂದು ಮಸಾಲೆ ರೋಸ್ಟ್’ ಕಿವಿಗಡಚಿಕ್ಕುವಂತೆ ಆತ ಕೂಗಿದ. ಅಡಿಗೆ ಮನೆಯತ್ತ ಇವನು ನೋಡಿದ. ಕೌಸಲ್ಯಳ ಜಾಗದಲ್ಲೀಗ ಭಟ್ಟನೊಬ್ಬ ಹಾಜರಿದ್ದ.
‘ನೀವು ಮಾತಾಡಿ… ಕೂತ್ಕೋ ಕೌಸಿ’ ಎಂದಾತ ಹೇಳಿದವನೇ ತನ್ನ ಗಲ್ಲದತ್ತ ನಡೆದ. ಒಂದಿಷ್ಟು ಸಂಕೋಚ ಜೊತೆಗಿಷ್ಟು ಅಂಜಿಕೆ ಅದರೊಂದಿಗೆ ನಾಚಿಕೆ ಸೇರಿ ರೂಪುಗೊಂಡಂತಿದ್ದ ಕೌಸಲ್ಯ ‘ಎದುರುಗಡೆಯ ಕುರ್ಚಿಯಲ್ಲಿ ಗಲ್ಲಕ್ಕೆ ಕೈ ಹಚ್ಚಿ ಕೂತಳು. ನಿಮ್ಮ ತಾಯಿ ಚೆನ್ನಾಗಿದ್ದಾರಾ?’ ಮತ್ತೆ ರುಕ್ಕು ನಾಗು? ಕೇಳಿದಳು.
ತಲೆಯಾಡಿಸಿದ. ‘ನಿನ್ನ ಓದು ಮುಗಿಯಿತೇನೋ?’ ಇಲ್ಲವೆಂಬಂತೆ ತಲೆಯಾಡಿಸಿದ. ‘ಇನ್ನು ಎಷ್ಟು ಓದ್ತಿ ಮಾರಾಯ’ ನಕ್ಕಳು- ‘ಯಾಕೋ ತೆಳ್ಳನ ಒಣಗಿಕೊಂಡಿಯಾ?’ ಅವಳ ಕಣ್ಣುಗಳು ತನ್ನ ಮೇಲೆ ಹರಿದಾಡುವಾಗ ಸುಬ್ಬು ಹಿಡಿಯಷ್ಟಾದ- ‘ಹ್ಹಿ ಹ್ಹಿ ಹಿ ಹಿ… ನಾನೆಂದು ದಪ್ಪ ಇದ್ದೆ ಕಣೆ’ ಪಿಸುಗಿದ. ಜೋರಾಗಿ ನಗಲು ಅಂಜಿ, ಗಲ್ಲದ ಮೇಲೆ ವಿರಾಜಮಾನರಾದ ಯಜಮಾನರತ್ತ ನೋಡಿದ. ಅವರು ಬಿಲ್ ತಕ್ಕೊಂಡು ದಬ್ಬಳಕ್ಕೆ ಸಿಕ್ಕಿಸಿ ನೋಟು ಎಣಿಸುವ ಕಾಯಕದಲ್ಲಿ ಮಗ್ನರಾಗಿದ್ದರು.
‘ನನ್ನಮ್ಮ ಅಪ್ಪಯ್ಯಾ ತಂಗಿಯರು ಚೆಂದ ಉಂಟಲ್ಲ?’ ಮತ್ತೆ ಅವಳದ್ದೇ ಮಾತು ‘ಭೇಷ್ ಅದಾರೆ ಬಿಡು.. ನೀನು ಹೇಗಿದ್ದೀಯ?’ ಉಗುಳು ನುಂಗುತ್ತಾ ಪಿಳಿಪಿಳಿಸಿದ. ‘ನೋಡ್ತಾ ಇದ್ದೀಯಲ್ಲೋ’ ಕುಲು ಕುಲು ನಕ್ಕಳು. ಆರೋಗ್ಯ ತುಂಬಿ ತುಳುಕುವಂತಹ ನಗು ಅವಳಲ್ಲಿ ಉಳಿದಿದೆಯಲ್ಲ ಅನ್ನಿಸುವಾಗ ಅದೊಂದು ಬಗೆಯ ತೃಪ್ತಿ ಜೊತೆ ಜೊತೆಗೆ ಅಸೂಯಯೂ ಅವನಲ್ಲಿ ಮೂಡಿತು. ‘ಮತ್ತೇನು ಉರ್ಕಡೆ ಸುದ್ದಿ?’ ಅವಳೇ ಮಾತು ತೆಗೆದಳು. ಇವನಿಗೆ ಮಾತು ಬೇಕಿರಲಿಲ್ಲ ಅವಳಲ್ಲೂ ಈಗ ಮಾತಿಲ್ಲ ಮಾತುಗಳೇ ಕಳೆದು ಹೋದ ಅನುಭವ. ಗಂಟೆಗಟ್ಟಲೆ ಗುಡಿಯ ಪಾಗರದಲ್ಲಿ ಕೂತು, ಬಾವಿಯಕಟ್ಟೆಯ ಬಳಿ ನಿಂತು ಮಾತನಾಡುತ್ತಿದ್ದುದು ನೆನಪಿಗೆ ಬಂದರೂ ಆಗ ಮಾತನಾಡುತ್ತಿದ್ದ ಒಂದು ವಿಷಯವೂ ಈಗ ಮನದಲ್ಲಿ ಉಳಿದಂತಿಲ್ಲ ಮನಸ್ಸೆಲ್ಲಾ ಖಾಲಿ. ಒಬ್ಬರನ್ನೊಬ್ಬರು ನಿರಾಳವಾಗಿ ನೋಡಿಕೊಳ್ಳಲೂ ಅಂಜಿಕೆ.
ಹೋಟೆಲ್ ತುಂಬಾ ಗದ್ದಲ. ಹೋಗುವವರು ಜಾಸ್ತಿಯಾದಾಗ ಕೌಸಲ್ಯಳಿಗೆ ಮುಜುಗರ. ‘ದೋಸೆ ಆಯ್ತೇನೋ ಮಡೆಯಾ’ ಗಂಡ ಕೂಗಾಡುವಾಗ ಈಕೆ ಕತ್ತು ಹಣೆ ಒರೆಸಿಕೊಳ್ಳುತ್ತಾ ಸುಬ್ಬುವಿನ ಮುಖ ಮುಖ ನೋಡಿದಳು. ‘ನಿಂಗೆ ಕೆಲಸವೇನೋ?’ ಅವನು ಕೂತಲ್ಲೇ ಮಿಟುಕಿದ. ‘ಹೌದು ಮಾರಾಯ’ ಅಂದವಳೇ ಅಡುಗೆ ಮನೆಯತ್ತ ದಡಬಡಿಸಿ ಹೋದಳು. ಇವನ ಮುಂದೀಗ ಹಬೆಯಾಡುವ ದೋಸೆ ಬಂದು ಕೂತಿತು. ತಿನ್ನಲಾರ ತಿನ್ನದೆ ಇರಲಾರ. ಮೆಲುಕು ಆಡಿತೆ ವಿನಹ ಗಂಟಲಲ್ಲಿ ಇಳಿಯಬಲ್ಲದು. ಕಣ್ಣುಗಳು ಹನಿಗೂಡಿದವು. ಕಣ್ಣೀರನ್ನು ಹನಿಯಗೊಡದೆ ಕಣ್ಣುಗಳಲ್ಲೇ ಹಿಂಗಿಸುವ ಪ್ರಯತ್ನ ಮಾಡಿದ.
***
ಕೌಸಲ್ಯಳ ಇಂದಿನ ಸ್ಥಿತಿಗೆ ತಾನೇ ಕಾರಣವೆನ್ನಿಸಿತು. ಒಂದೇ ಬೀದಿಯ ಜನ. ಅವಳ ಮನೆಯವರು ಇವನ ಮನೆಯವರಲ್ಲಿ ಅತಿ ಹೆಚ್ಚಿನ ಒಡನಾಟವು ಇತ್ತು. ಜಾತ್ರಗೆ ಹೋದರೆ, ಬೆಟ್ಟದ ಮೇಲಿನ ರಂಗನಾಥನ ಸನ್ನಿಧಿಗೆ ಹೊರಟರೆ, ಕಡೆಗೆ ಟೆಂಟ್ ಸಿನಿಮಾಕ್ಕೂ ಇವನ ಅಕ್ಕಂದಿರೂ ಕೌಸಲ್ಯ ಜೊತೆ ಜೊತೆಗೇ ಹೋದಾರು. ಆಗೀಗ ಇವನೂ ಜೊತೆಯಾಗುತ್ತಿದ್ದ ಸುಬ್ಬುವಿನ ತಾಯಿಗೂ ಕೌಸಲ್ಯಳೆಂದರೆ ಅಚ್ಚು ಮೆಚ್ಚು. ಕೌಸಲ್ಯ ಯಾರೂ ಇಷ್ಟಪಡುವಂತಹ ಸ್ಪುರದ್ರೂಪಿ. ಸೊಬಗಿಗೆ ಕಳಸವಿಟ್ಟಂತೆ ಸರಳ ನಡೆನುಡಿ. ಸದಾ ಏನಾದರೊಂದು ಕೆಲಸ ಮಾಡುತ್ತಾ ನೆರೆಮನೆಯವರಿಗೆ ನೆರವಾಗುತ್ತಾ ಎಲ್ಲರೂಳಗೊಂದಾಗುವ ಹುಡುಗಿ. ಸುಬ್ಬು ಕೌಸಲ್ಯ ಹೈಸ್ಕೂಲಲ್ಲಿ ಜೊತೆಗೇ ಓದಿದವರು. ಎಸ್‌ಎಸ್‌ಎಲ್‌ಸಿಗೆ ಬಂದಾಗ ರಾತ್ರಿ ಅವಳು ಸುಬ್ಬುವಿನ ಮನೆಗೇ ಓದಲೆಂದು ಬಂದು ಬಿಡುತ್ತಿದ್ದಳು. ಸರಿ ರಾತ್ರಿಯವರೆಗೂ ಓದಿಕೊಳ್ಳುತ್ತಿದ್ದಳು. ಸುಬ್ಬು ಮ್ಯಾಥ್ಸ್ ಹೇಳಿಕೊಡುತ್ತಿದ್ದ ನಂತರ ಸುಬ್ಬುವಿನ ಅಕ್ಕಂದಿರ ಕೋಣೆಗೆ ಹೋಗಿ ಮಲಗುತ್ತಿದ್ದ. ಕೌಸಲ್ಯ, ಸುಬ್ಬು ಏಳುವ ಮೊದಲೇ ಹೊರಟು ಹೋಗಿರುತ್ತಿದ್ದಳು. ಅವನು ಫಸ್ಟ್‌ಕ್ಲಾಸಿನಲ್ಲಿ ಪಾಸಾದರೆ ಅವಳಿಗೆ ತಾನು ಪಾಸಾದದ್ದೇ ಖುಷಿ. ಅವಳಪ್ಪನೇ ಸ್ವತಃ ಸುಬ್ಬು ಮನೆಗೆ ಸಿಹಿ ಹಂಚಿದ್ದರು.
‘ಕೌಸಲ್ಯನ್ನೂ ಕಾಲೇಜಿಗೆ ಹಾಕಿ. ಹೇಗೂ ನಮ್ಮ ಹುಡ್ಗ ಇರ್ತನಲ್ಲ’ ಸುಬ್ಬುವಿನ ಆಪ್ಪಯ್ಯ ಅಂದಿದ್ದರು. ‘ಅವಳು ಹೆಚ್ಚಿಗೆ ಓದಿದರೆ ಅವಳಿಗಿಂತ ದುಪ್ಪಟ್ಟು ಓದಿದ ವರನನ್ನೆಲ್ಲಿ ತರೋಣ ಅಚ್ಯುತರಾಯರೆ.. ಕಾಲೇಜು ಓದಿಸುವುದೆಂದರೆ ನಮಗೂ ತ್ರಾಸವಾಗುತ್ತೆ ಮೇಲಾಗಿ ಪುರೋಹಿತ್ಕೆ ಕೂಡ ಮೊದಲಿನ ಹಾಗೆ ನಡೀತಿಲ್ಲ ಜನ ಶಾಸ್ತ್ರ, ಸುಂಪ್ರದಾಯ ಮರೀತಿದಾರೆ. ಮೂರು ಎಕರೆ ನೆಲ ನೆಚ್ಚಿಕೊಂಡು ನಾನಾಗೋ ಹೊತ್ಗೆ ದೊಡ್ಡ ಸಂಸಾರನ ಹೇಗೋ ನಿಭಾಯಿಸ್ತಿದೀನಿ’ ಅಂದವಳ ಓದಿಗೆ ಅವಳಪ್ಪನೇ ಅಂತ್ಯ ಹಾಡಿದ್ದರು.
ವರ್ಷಗಳು ಉರುಳಿದರೂ ಕೌಸಲ್ಯಳಿಗೆ ಗಂಡು ಗೊತ್ತಾಗಲಿಲ್ಲ ತಂಗಿಯರೂ ಆಗಲೆ ಮದುವೆಗೆ ಸಿದ್ದವಾಗಿದ್ದರು. ಹೇಗಾದರು ಈ ವರ್ಷ ಅವಳ ಮದುವೆ ಮುಗಿಸಬೇಕೆಂದು ತರಾತುರಿಯಲ್ಲಿ ಅವಳ ತಂದೆ ಊರೂರು ಅಲೆವಾಗ ಸುಬ್ಬುವಿನಲ್ಲಿ ಎಂತದೋ ಚಡಪಡಿಕೆ. ಓದಿದ ಟೆನ್ಶನ್ನಲ್ಲಿ ಮೊದಲಿನಂತೆ ಅವಳ ಜೊತೆ ಹರಟಲು ವೇಳೆ ಸಿಗದಿದ್ದರು ಹಬ್ಬ ಹರಿ ದಿನಗಳಲ್ಲಿ ರಜೆಗಳಲ್ಲಿ ಅಕ್ಕಂದಿರೊಂದಿಗೆ ಸೇರುತ್ತಿದ್ದ ಕೌಸಲ್ಯಳನ್ನು ಅವನೇ ಹಿಂದೆ ಬಿದ್ದು ಮಾತನಾಡಿಸಿ ಸ್ನೇಹವನ್ನು ‘ರಿನಿವಲ್’ ಮಾಡಿಕೊಳ್ಳುತ್ತಿದ್ದ ಈಗಂತು ಅವಳು ಮಾಗಿದ ರಸಪೂರಿ ಮಾವು. ನನಗೊಂದು ಕೆಲಸ ಅಂತ ಸಿಕ್ಕಿ ಬಿಟ್ಟಿದ್ದರೆ ಕಾಲೇಜಿಗೆ ಗುಡ್‌ಬೈ ಹೇಳಿ ಮದುವೆ ಆಗಿ ಬಿಡಬಹುದಿತ್ತು ಅಂತ ಅವನು ಕನಸು ಕಂಡಿದ್ದೆಷ್ಟೋ? ಕನಸಲ್ಲೇ ಭೋಗಿಸಿ ಕಲ್ಪಿಸಿದ್ದೆಷ್ಟೋ? ಬೆಳಗಾಗೆದ್ದು ಕಾಲೇಜಿಗೆ ಓಡುವಾಗ ಮಾತ್ರ ಸುಬ್ಬುವಿಗೆ ಓದು, ದೊಡ್ಡ ನೌಕರಿಯಷ್ಟೇ ಮುಖ್ಯ ಅನಿಸುತ್ತಿತ್ತು.
ಮನೆಯ ಸ್ಥಿತಿಯೂ ಹೇಳಿಕೊಳ್ಳುವಂತಿರಲಿಲ್ಲ. ಅಪ್ಪನ ಗುಮಾಸ್ತಿಕೆಯಲ್ಲೇ ಮನೆಯನ್ನು ಸಂಭಾಳಿಸಬೇಕು. ಪಿಡಬ್ಲುಡಿ ಇಲಾಖೆಯಲ್ಲಿದುದರಿಂದ ಮೇಲ್ ಸಂಪಾದನೆ ಉತ್ತಮವಾಗಿದ್ದುದೇನೋ ನಿಜ. ಆದರೆ ಮದುವೆಗೆ ಬಂದು ನಿಂತ ಅಕ್ಕಂದಿರು ಬೇರೆ. ಅವರ ಲಗ್ನ ಲಾಯಕ್ಕಾದ ಕಡೆ ಮಾಡುವ ಆಸೆ. ಮಗನನ್ನು ಓದಿಸಿ ಆಫೀಸರ್ ಗಿರಿಯಲ್ಲಿ ಕಾಣುವ ಹಂಬಲ ತಂದೆಗಿತ್ತು. ಸುಬ್ಬುವೂ ಓದಿನಲ್ಲಿ ಹಿಂದಿರಲಿಲ್ಲ. ಕೌಸಲ್ಯಳನ್ನು ನೋಡುವಾಗ ಯಾವ ಆಫೀಸರ್‌ಗಿರಿ ಎಂತಕ್ಕೆ ಅನ್ನಿಸುತ್ತಿತ್ತಾದರೂ ಆಸೆಗಳಿಗೆ ಕಡೆವಾಣ ಹಾಕುತ್ತಿದ್ದ.
ಕಡೆಗೂ ಕೌಸಲ್ಯಳನ್ನು ಒಪ್ಪಿಕೊಂಡಿದ್ದು ಉಡುಪಿಯ ಬ್ರಾಹ್ಮಣರ ಕಾಫೀ ಕ್ಲಬ್‌ನ ಪದ್ಮನಾಭ. ಸಾಮಾನ್ಯವಾಗಿ ಬ್ರಾಹ್ಮಣರು ಗಟ್ಟದ ತಗ್ಗಿನ ಬ್ರಾಹ್ಮಣರೂಂದಿಗೆ ಅಷ್ಟಾಗಿ ಸಂಬಂಧ ಬೆಳೆಸುವುದಿಲ್ಲ, ಆದರೆ ಕೌಸಲ್ಯಳ ತಂದೆಯದು ಅಸಹಾಯಕತೆ. ಕೌಸಲ್ಯಳ ರೂಪಿಗೆ ಮರುಳಾದ ಪದ್ಮನಾಭ ಬಿಡಿಗಾಸೂ ಕೇಳದೆ ಯಾವುದಾದರೂ ದೇವಸ್ಥಾನದಲ್ಲಿ ಧಾರೆ ಎರೆದು ಕೊಟ್ಟರೂ ಸಾಕೆಂದಿದ್ದ ಬಲೂನಿನಂತೆ ಊದಿಕೊಂಡಿದ್ದ ಪುಟ್ಟಿಯಂಥ ಹೊಟ್ಟೆಯ ಬಾಲ್ಡಿ ಪದ್ಮನಾಭ ಕೌಸಲ್ಯಳಿಗೆ ತಕ್ಕ ವರನಲ್ಲವೆಂಬ ಮಾತಾಗ ಊರಲ್ಲಿ ಚಾಲ್ತಿಯಲ್ಲಿತ್ತು. ಸುಬ್ಬುಗಂತೂ ಪದ್ಮನಾಭನನ್ನು ಕೊಲ್ಲುವಷ್ಟು ರೊಚ್ಚು ಮಾಡಿದ್ದು ಕಡೇಗೆ ಒಬ್ಬನೇ ಕೂತು ಅತ್ತು ಬಿಟ್ಟಿದ್ದಷ್ಟೆ.
ಮನೆಯವರೆಲ್ಲಾ ಬೆಟ್ಟದ ರಂಗನಾಥನ ರಥೋತ್ಸವಕ್ಕೆ ಹೊರಟಿದ್ದರು. ದೇವರ ಮೇಲೂ ಮುನಿದ ಸುಬ್ಬು ಮಾತ್ರ ಮನೆಯಲ್ಲೇ ಉಳಿದಿದ್ದ. ಉತ್ಸವಕ್ಕೆ ಹೋಗದಿದ್ದರೆ ಕೌಸುಲ್ಯಳನ್ನಾದರೂ ಕಣ್ತುಂಬಿಕೊಳ್ಳಬಹುದಿತ್ತಲ್ಲ ಅನ್ನಿಸಿದಾಗ ಎದ್ದು ಬಟ್ಟೆ ತೊಟ್ಟು ಹೊರಟಾಗಲೇ ಕೌಸಲ್ಯ ಒಳನುಗ್ಗಿ ಬಂದಿದ್ದಳು. ಇವನನ್ನು ನೋಡಿದೊಡನೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ್ದಳು. ಇವನಂತು ತಬ್ಬಿಬ್ಬು. ‘ಯಾಕೆ, ಏನಾಯ್ತು ಕೌಸಲ್ಯ, ರಥೋತ್ಸವಕ್ಕೆ ಹೋಗಲಿಲ್ಲವೆ?’ ಅವಳ ಬಳಿ ನಿಂತು ಗಾಬರಿಗೊಂಡಿದ್ದ.
‘ನನಗೇನು ಬೇಡ ಕಣೋ, ಜೀವಾನೇ ರೋಸಿ ಹೋಗಿದೆ. ನನಗೀ ಲಗ್ನ ಸುತ್ರಾಂ ಇಷ್ಟವಿಲ್ಲ. ಎಲ್ಲಾದ್ರೂ ಓಡಿ ಹೋಗೋಣ ಕಣೊ’ ಅಳುತ್ತಾ ಬಿಗಿದಪ್ಪಿದಳು. ಅವಳ
ತುಂಬಿದೆದೆಯ ಮೆದುವಿಗೆ ಉನ್ಮತ್ತನಾದ ಸುಬ್ಬು ತಾನು ಗಟ್ಟಿಯಾಗಿ ತಬ್ಬಿ ಅವಳ ಬಿಸಿಯುಸಿರಿಗೆ ಬೆರೆವಾಗ ಅವಳ ತುಟಿಗಳನ್ನು ಚುಂಬಿಸಿದ್ದ ಇಬ್ಬರೂ
ಬಿಡಿಸಲಾಗದಂತೆ ಒಂದೇ ದೇಹವಾದರು. ಬೇಗ ಚೇತರಿಸಿಕೊಂಡ ಕೌಸಲ್ಯ ಅನಾವುತಕ್ಕೆಡೆ ಕೊಡಲಿಲ್ಲ.
‘ಬಿಡೋ ನನ್ನಾ. ಎಲ್ರೂ ಉತ್ಸವದ ಗದ್ದಲದಾಗ ಅವರೆ ಕಣೋ… ನಡಿಯೋ ಇಲ್ಲಿಂದ ಪಾರಾಗೋಣ’ ಅವನ ತೋಳುಗಳನ್ನು ಹಿಡಿದು ಗುಂಜಾಡಿದಳು. ಸುಬ್ಬು ಬೆವತು ಹೋದ. ‘ಹುಚ್ಚು ಹುಚ್ಚಾಗಿ ಆಡಬೇಡ. ಓಡಿ ಹೊಗ್ಬಿಟ್ಟು ಬದುಕೋದು ಅಂದ್ರೆ ಹುಡುಗಾಟವಾ?’ ಸಿಡುಕಿದ.
‘ಬದುಕೋಕೆ ಆಗ್ದೆ ಹೋದ್ರೆ ಸಾಯೋಣ ಕಣೋ’ ಅವಳು ಗುಡುಗಿದಳು.
‘ಸತ್ತರೇನು ಸಾಧಿಸಿದಂಗಾತು? ನೀನು ಓಡಿ ಹೋದ್ರೆ ನಿನ್ನ ತಂಗಿಯರ ಭವಿಷ್ಯದ ಗತಿಯೇನು?’
‘ಏನಾದ್ರೂ ಹಾಳಾಗ್ಲಿ ಕಣೋ… ಬಾರೋ’ ಮಗುವಿನಂತೆ ಹಠ ಹಿಡಿದಳು.
‘ಸಾರಿ ಕಣೆ. ನನಗೆ ಅಕ್ಕಂದಿರಿದ್ದಾರೆ. ನಾನು ಓದಿ ದೊಡ್ಡ ಆಫೀಸರ್ ಆಗಬೇಕಂತ ನನ್ನ ತಂದೆ ಆಸೆ ಇಟ್ಟುಕೊಂಡಿದಾರೆ ಕಣೆ. ನಂಗೂ ತುಂಬಾ ಓದಬೇಕು, ದೊಡ್ಡ ಕೆಲಸ ಹಿಡಿಬೇಕು ಸಂಪಾದಿಸಬೇಕು ಅಂತ ಏನೇನೋ ಆಸೆಗಳು’ ಅವನ ಕಣ್ಣುಗಳು ಹೊಳೆದವು.
‘ಹಾಗಾದ್ರೆ ನಂಜೊತೆ ಬರೋಲ್ವೇನೂ?’ ಅವಳ ದನಿಯಲ್ಲಿ ಆರ್ತನಾದವಿತ್ತು,
‘ಹುಚ್ಚಿ, ಬದುಕು ಅಂದ್ರೆ ಹುಡುಗಾಟ ಅಂದ್ಕೊಂಡ್ಯಾ? ಲಗ್ನ ಆದೋರನ್ನೇ ಇಷ್ಟಪಡೋದನ್ನ ಕಲಿಬೇಕು… ಅದೇ ಬದುಕು ಕಣೆ’ ನೀತಿ ಹೇಳಿದ.
‘ಹಾಗಾದ್ರೆ ನೀನು ನನ್ನ ಪ್ರೇಮಿಸ್ತಿಲ್ವೇನೋ?’ ತರತರನೆ ನಡುಗಿದಳು.
‘ಯಾರಿಲ್ಲ ಅಂದ್ರು? ಹಾಗಂತ ನಮ್ಮನ್ನು ನಂಬಿದವರನ್ನು ನಡು ನೀರಿನಲ್ಲಿ ಕೈ ಬಿಡ್ತಾರೇನು? ಹೋಗು ದೇವರು ಎಲ್ಲಾ ಒಳ್ಳೇದೇ ಮಾಡ್ತಾನೆ’ ಅವಳತ್ತ ನೋಡದೆ ಬಡಬಡಿಸಿದ್ದ ಸುಬ್ಬು. ‘ಅಲ್ವೋ! ಈಗಿನ್ನ ನನ್ನನ್ನು ತಬ್ಬಿ ಮುತ್ತಿಟ್ಯಲ್ಲೋ ಮೈಲಿಗೆ ಆತಲ್ಲೋ… ಹಿಂಗ್ಯಾಕ್ ಮಾಡಿದ್ಯೋ?’ ಕಾಲರ್ ಹಿಡಿದು ಜಗ್ಗಿ ಸುಟ್ಟುಬಿಡುವ ಪರಿ ನೋಡಿದಳು. ‘ಸಾರಿ ಕಣೆ’ ಅಂದವನೆ ಬುಳುಬುಳು ಅಳಲಾರಂಭಿಸಿದ. ಅಂಥ ಪರಿಸ್ಥಿತಿಯಲ್ಲೂ ಕೌಸಲ್ಯಳಿಗೆ ನಗು ಬಂತು. ಎಷ್ಟು ಸುಲಭವಾಗಿ ‘ಸಾರಿ’ ಹೇಳಿಬಿಟ್ಯಲ್ಲೋ… ನೀನು ದೊಡ್ಡ ಓದು ಓದಿ ದೊಡ್ಡ ಮನುಷ್ಯನೇ ಆಗು. ಆದರೆ ನನ್ಗೆ ಮಾಡ್ದಂಗೆ ಬೇರೆ ಯಾರಿಗೂ ವಂಚನೆ ಮಾಡ್ಬೇಡ್ವೋ’ ಅಂದವಳೇ ಓಡಿ ಹೋಗಿದ್ದಳು. ಅವಳೆಲ್ಲಿ ಅಪಾಯ ಮಾಡಿಕೊಳ್ಳುತ್ತಾಳೊ ಎಂದವನು ಎರಡು ದಿನ ನಿದ್ದೆಗೆಟ್ಟಿದ್ದ. ಹಾಗೇನು ಆಗಲಿಲ್ಲ. ಅವಳು ಮದುವೆ ಆಗಿ ಊರನ್ನು ಬಿಟ್ಟರೂ ಇವನನ್ನು ಬಿಡಲಿಲ್ಲ ‘ಕಾಫಿಯೋ ಟೀಯೋ ಮಾರಾರ್ಯೆ’ ಎಂದು ಯಜಮಾನನೇ ಬಂದು ನಿಂತಾಗ ಸುಬ್ಬು ಬೆಚ್ಚಿಬಿದ್ದ. ‘ಯಾವುದಾದ್ರು ಸರಿ’ ಅಂದ. ಕಾಫೀ ಬಂತು ಗುಟುಕರಿಸಿ ಮೇಲೆದ್ದ. ಕೌಸಲ್ಯಳಿಗೆ ಹೇಳಿಹೋಗೋಣವೆಂದರೆ ಅವಳೋ ಬಿಜಿ. ಆಸೆಯನ್ನು ಮಡಿಚಿಟ್ಟು ಅಲ್ಲಿಂದ ಕಾಲ್ತೆಗೆದ.
***
ಆಗಾಗ ಊರಿಗೆ ಬರುತ್ತಿದ್ದ ಅವಳು ಇವನ ತಾಯಿಯ ಒತ್ತಾಯಕ್ಕೆ ಇವನ ಮನೆಗೂ ಬರುತ್ತಿದ್ದಳು. ‘ಚೆನ್ನಾಗಿದ್ದಿಯೇನೋ? ಈಗೇನ್ ಓದ್ತಾ ಇದ್ದಿ?’ ಎಂದೆಲ್ಲಾ ಅವಳೇ ಮಾತನಾಡಿಸುತ್ತಿದ್ದಳು- ಇವನಿಗೋ ಅದೆಂತದೋ ಅಳುಕು. ಅವಳೊಮ್ಮೆ ಚೊಚ್ಚಲ ಹೆರಿಗೆಗೆ ಬಂದಿದ್ದಳು. ಕೌಸಲ್ಯ ತಾಯಿಯಾಗುವಳೆಂಬ ಸುದ್ದಿ ಕಿವಿಗೆ ಬಿದ್ದಾಗ ಬಹು ಸಂಕಟಪಟ್ಟ ಏಕೈಕ ವ್ಯಕ್ತಿ ಎಂದರೆ ಸುಬ್ಬು. ಅವನು ಅಂತಿಮ ಡಿಗ್ರಿಗೆ ಬರುವಷ್ಟರಲ್ಲಿ ಕೌಸಲ್ಯ ಮೂರು ಮಕ್ಕಳ ತಾಯಿಯಾಗಿದ್ದಳು. ಮೈ ತುಂಬಾ ಚಿನ್ನದ ಒಡವೆಗಳೂ ಬಂದಿದ್ದವು. ತಂಗಿಯರ ಮದುವೆಗೂ ಅವಳ ಗಂಡನೇ ಸಹಾಯ ಮಾಡಿದನಂತೆ.
ಶಿವಮೊಗ್ಗದಲ್ಲಿದ್ದ ಹೋಟೆಲ್ ಜೊತೆಗೆ ಬೆಂಗಳೂರಿನಲ್ಲಿ ಹೋಟೆಲ್ ಮಾಡಿದ್ದಾನಂತೆ. ಅವಳು ಸುಖವಾಗಿದ್ದಾಳೆಂಬ ಸುದ್ದಿ ಕೇಳಿದಾಗಲೆಲ್ಲಾ ಸುಬ್ಬು ಅಸುಖಿಯಾಗುತ್ತಿದ್ದ. ಅವಳು ತನ್ನ ತಾಯಿ ತಂದೆಯರನ್ನು ಬೆಂಗಳೂರಿಗೆ ಕರೆಸಿಕೊಂಡ ಮೇಲೆ ಅವಳ ಸುದ್ದಿ ಹೆಚ್ಚಾಗಿ ಇವನ ಕಿವಿ ಇರಿಯಲಿಲ್ಲ. ಸುಬ್ಬು ಡಿಗ್ರಿ ಮುಗಿಸುವ ಹೊತ್ತಿಗೆ ಅವನ ಅಕ್ಕಂದಿರನ್ನು ಒಳ್ಳೆಯ ಸಂಬಂಧಕ್ಕೆ ಕೊಟ್ಟು ತಂದೆ ಬರಿ ಗೈ ಆಗಿದ್ದರು. ಕಾರಿನಲ್ಲಿ ಮದುವೆಗೆ ಬಂದಿದ್ದ ಕೌಸಲ್ಯ ಇವನ ಅಕ್ಕಂದಿರಿಗೆ ಚಿನ್ನದ ಉಂಗುರ ತೊಡಿಸಿದಳು. ‘ಓದು ಮುಗಿತೇನೋ?’ ಎಂದು ಗದ್ದಲದಲ್ಲೂ ವಿಚಾರಿಸಿಕೊಂಡಿದ್ದಳು. ಮೂರು ಮಕ್ಕಳ ತಾಯಿಯಾಗಿದ್ದರೂ ಸೌಂದರ್ಯ ಮಾಸಿರಲಿಲ್ಲ ಅವಳನ್ನು ಮರೆತು ಎಂ.ಎ. ಓದಲು ಮೈಸೂರನ್ನೇ ಆರಿಸಿಕೊಂಡ. ಎಷ್ಟೇ ನಿಗಾ ಇಟ್ಟು ಓದಿದರೂ ಎಂ.ಎ. ಫಸ್ಟ್ ಕ್ಲಾಸಿನಲ್ಲಿ ಪಾಸು ಮಾಡಲಾಗಲಿಲ್ಲ. ಹಲವು ಇಂಟರ್‌ವ್ಯೂ ಮುಗಿಸಿದ. ಖಾಸಗಿ ಕಾಲೇಜುಗಳಲ್ಲಿ ಸಹ ಲಕ್ಙರರ್ ಪೋಸ್ಟ್ ದಕ್ಕಲಿಲ್ಲ. ತಂದೆ ಬೇರೆ ರಿಟೈರ್ಡ್ ಆಗಿದ್ದರು. ಬಂದ ಹಣ ಅಕ್ಕಂದಿರ ಮದುವೆ ಸಾಲ ತೀರಿಸಲು ಜಮಾ ಆಗಿತ್ತು. ವರ್ಷಗಳು ಉರುಳಿದವು, ಕೆಲಸ ಮಾತ್ರ ಗಗನ ಕುಸುಮ. ತಾಯಿಗೋ ಅವನ ಮದುವೆ ಮಾಡುವ ಆಸೆ. ‘ನಲವತ್ತಾಗಿ ಹೋಯ್ತಲ್ಲೋ ಮಗಾ’ ಎಂದಾಕೆ ಪೀಡಿಸುತ್ತಿದ್ದಳು. ‘ಕೆಲಸ ಸಿಗ್ಲಿ ತಾಳಿ’ ಎಂದವನು ಜಗಳಕ್ಕೆ ಇಳಿಯುತ್ತಿದ್ದ. ಕಡೆಗೂ ಸರ್ಕಾರಿ ಕಬೇರಿಯಲ್ಲಿ ಎಫ್. ಡಿ. ಸಿ. ಪೋಸ್ಟಿಗೆ ಇಂಟವ್ಯೂ ಬಂತು. ಒಂದಿಷ್ಟು ಹಣ ಕೈ ಬಿಟ್ಟ ಮೇಲೆ ಅಗ್ರಕಲ್ಚರ್ ಆಫೀಸಿನಲ್ಲಿ ಗುಮಾಸ್ತನಾಗಿ ಕೂತಾಗ ಹತಾಶಯೇ ನಿಟ್ಟುಸಿರಾಗಿತ್ತು.
ಇಷ್ಟಾದರೂ ಲಕ್ಚರರ್ ಆಗುವ ಅವಕಾಶವನ್ನರಸಿ ಅರ್ಜಿ ಹಾಕುವುದು ಯೂನಿವರ್ಸಿಟಿಗಳನ್ನು ಎಡತಾಕುವುದನ್ನೂ ಬಿಡಲಿಲ್ಲ. ಪ್ರಿನ್ನಿಪಾಲರೊಬ್ಬರ ಪರಿಚಯವಾಯಿತು. ತುಂಬಾ ಪೊಲಿಟಿಕಲ್ ಇನ್‌ಫ್ಲೂಯನ್ಸ್ ಇರೋ ಮನುಷ್ಯ. ಅವರಿಗೊಬ್ಬ ಮಗಳು. ಕುರೂಪಿಯೇನಲ್ಲ. ಅವಳನ್ನು ಮದುವೆಯಾಗುವುದಾದರೆ ಕಾಲೇಜಿನಲ್ಲಿ ನೌಕರಿ ಕೊಡಿಸುತ್ತೇನೆಂದು ಷರತ್ತು ಹಾಕಿದ. ಅನ್ಯತಾ ಶರಣಂ ನಾಸ್ತಿ. ಒಂದೆರಡು ತಿಂಗಳಿನಲ್ಲೇ ಮದುವೆ ನಡೆದೇ ಹೋಯಿತು. ಅಲ್ಲೂ ಅವನಿಗೆ ನಿರಾಸೆ ಕಾದಿತ್ತು. ಪ್ರಿನ್ಸಿಪಾಲರ ಮಗಳು ಗಾಯಿತ್ರಿಗೆ ಬಾಹ್ಯ ಸೌಂದರ್ಯವಿರಲಿ ಆಂತರಿಕ ಸೌಂದರ್ಯವೂ ಇರಲಿಲ್ಲ ಎಂಬುದನ್ನು ತಿಂಗಳಲ್ಲೇ ಹಚ್ಚಿದ್ದ.
ಸುಬ್ಬು ಮಾವನ ಬಲವಂತಕ್ಕೆ ಹೆಂಡತಿಯನ್ನು ಹನಿಮೂನ್‌ಗೆಂದು ಬೆಂಗಳೂರಿಗೆ ಕರೆತಂದ- ಊರ್ವಶಿಯಂತಹ ದೊಡ್ಡ ಹೋಟೆಲಲ್ಲೇ ಇಳಿದುಕೊಂಡ. ಟ್ಯಾಕ್ಸಿ ಮಾಡಿಕೊಂಡು ಲಾಲ್‌ಬಾಗ್, ಕಬ್ಬನ್ ಪಾರ್ಕ್, ವಿಧಾನ ಸೌಧ ಎಲ್ಲವನ್ನೂ ಗಾಯಿತ್ರಿಗೆ ತೋರಿಸಿದ. ‘ನಾನು ನೋಡ್ದೆ ಇರೋ ಬೆಂಗಳೂರೇನ್ರಿ!’ ಆಕೆ ಕೊಂಕು ನುಡಿದಾಗ ನಿಡುಸುಯ್ದ. ಹೋಟೆಲ್‌ಗೆ ಹಿಂದಿರುಗಿ ಬಟ್ಟೆ ಬದಲಿಸಿ ಊಟಕ್ಕೆಂದು ಲಿಫ್ಟ್‍ನಲ್ಲಿ ಕೆಳಗಿಳಿದಾಗ ಕಾರೊಂದು ಬಂದು ಕಾರಿಡಾರ್‌ನಲ್ಲಿ ನಿಂತಿತು. ಅದರಿಂದ ಸುಂದರಿಯೊಬ್ಬಳು ಇಳಿದು ಬರುವಾಗ ಕ್ಷಣ ನಿಂತು ನೋಡಬೇಕೆನಿಸಿತು. ಆಕೆಯ ಹಿಂದಿರುವ ಹುಡುಗಿಯರಿಬ್ಬರೂ ಮುದ್ದಿನ ಬೊಂಬೆಗಳೆ. ತಂಗಿಯರಿರಬಹುದೇನೋ ಅಂದುಕೊಳ್ಳುವಾಗಲೇ, ‘ಆರೆ ಸುಬ್ಬು ಯಾವಾಗ ಬಂದ್ಯೋ?’ ಅನ್ನುತ್ತಾ ಆ ಸುಂದರಿ ಸನಿಹವೇ ಬಂದಳು. ಚೂಡಿದಾರ್ನಲ್ಲಿ ಕೌಸಲ್ಯ! ಸಾದ್ಯವಾಗದ ಸಂಗತಿ. ‘ಚೆನ್ನಾಗಿದಿಯೇನೋ ಇವಳು ನಿನ್ನ ವೈಫಾ!’ ಬಿಡುವಿಲ್ಲದೆ ಮಾತನಾಡಿದಳು. ‘ಇದು ನಮ್ಮದೇ ಹೋಟೆಲ್ ಕಣೋ- ಇವರಿಬ್ಬರೂ ನನ್ನ ಮಕ್ಕಳು’ ಪಕ್ಕದಲ್ಲಿರುವ ಸುಂದರಿಯರನ್ನು ಪರಿಚಯಿಸಿದಳು. ಅವರು ‘ಹೆಲೋ’ ಹೇಳಿ ಹೊರಟು ಹೋದರು. ದಂಪತಿಗಳನ್ನೀಗ ಎ.ಸಿ ರೂಮಿಗೆ ಕರೆದೊಯ್ದಳು. ಬಗೆ ಬಗೆಯ ತಿಂಡಿಗಳನ್ನು ಆರ್ಡರ್ ಮಾಡಿದಳು- ಅವಳ ಗಂಡ ಪದ್ಮನಾಭನೂ ಬಂದು ವಿನಯವಾಗಿ ಮಾತನಾಡಿಸಿದ. ‘ಹೊಸ ದಂಪತಿಗಳಲ್ಲವೋ ನೀವು ನಮ್ಮ ಗೆಸ್ಟುಗಳು. ಎಷ್ಟು ದಿನ ಬೇಕಾದ್ರು ಇರಿ ಮಾರಾಯರೆ ನಿಮಗೆ ಎಲ್ಲಾ ಫ್ರೀ, ಕೌಸಿ ಊರಿನವರಲ್ಲವೋ’ ಅಂತ ಬೀಗಿದ. ವುಲ್ ಸೂಟಿನಲ್ಲಿದ್ದ ಬಲ್ಲೇರಿಯನ್ ಗಡ್ಡ ಬೇರೆ! ಸ್ಲಿಮ್ ಆಗಿದ್ದಾನೆ! ಡಯಾಬಿಟಿಕ್ ಇರಬಹುದೆಂದು ಸಮಾಧಾನಪಟ್ಟುಕೊಂಡ ಸುಬ್ಬು ‘ಸೀ ಯು ಐ ಆಮ್ ಬಿಜಿ’ ಎಂದು ಆತ ಹೊರಟು ಹೋದ. ವಿವಿಧ ಬಗೆಯ ಭಕ್ಷ್ಯ ಭೋಜ್ಯಗಳು ಬಂದು ಟೇಬಲನ್ನಲಂಕರಿಸಿದವು.
‘ಇಷ್ಟೆಲ್ಲಾ ಯಾಕೆ ತರಿಸಿದ್ರಿ….? ನಾವೇನು ರಾಕ್ಷಸರಾ’ ಮೋರೆ ಕಿವುಚಿಕೂಳ್ಳುತ್ತಲೇ ರುಚಿ ನೋಡಿದಳು ಗಾಯಿತ್ರಿ. ಸುಬ್ಬುವಿನ ಗಂಟಲಲ್ಲಿ ಏನೊಂದು ಇಳಿಯದು. ಓಡಬೇಕೆನಿಸಿತ್ತು. ‘ಈಗ ನೀನೇನ್ ಮಾಡ್ತಿದ್ದೀಯಪ್ಪಾ ದೊಡ್ಡ ಮನುಷ್ಯಾ? ಯಾವ ಕಾಲೇಜಲ್ಲಿದ್ದಿ?’ ಏನ್ ಹೇಳಬೇಕೋ ತೋಚದೆ ಹ್ಹಿ ಹ್ಹಿ ಹ್ಹಿ ಮಾಡಿದ. ‘ಎಕ್ಯೂಸ್ ಮಿ. ಸ್ವಲ್ಪ ಬಾತ್ ಹೋಗಿ ಬರ್ತೀನಿ’ ಎಂದೆದ್ದು ಆಚೆ ಹೋದಳು ಗಾಯಿತ್ರಿ. ಮಾತುಗಳಿಗಾಗಿ ತಡಕಿದ ಸುಬ್ಬು ‘ಮಗನ ಬಗ್ಗೆ ಹೇಳಲೇ ಇಲ್ವೆ?’ ಅಂದ.
‘ಹೆಣ್ಣು ಮಕ್ಕಳಿಬ್ಬರೂ ಎಂಬಿಎ ಓದುತ್ತಿದ್ದಾರೆ. ಮಗನ ತಲೆಗೆ ಓದು ಹತ್ತಲಿಲ್ಲ ಕಣೋ. ಬಿಸಿನೆಸ್ ನೋಡ್ಕೊತಿದಾನೆ. ಕೌಂಟರ್ನಲ್ಲಿ ಕೂತಿದಾನೆ ನೋಡು’. ಇವನೇನು ನೋಡಲಿಲ್ಲ ‘ನಿನಗೊಂದು ವಿಷಯ ಗೊತ್ತುಂಟಾ? ಅವನಿಗೆ ನಿನ್ನ ಹೆಸರನ್ನೇ ಇಟ್ಟಿದೀನಿ ಸುಬ್ಬು’ ಈಗ ಸುಬ್ಬು ಬೆಚ್ಚಿ ಬಿದ್ದ ‘ಮೋಸಗಾರನ ಹೆಸರು ಮಗನಿಗೆ ಇಡು ಎಂದಿದಾರಲ್ವೆ ದಾಸರು’ ಅಂತ ಪೆಚ್ಚಾಗಿ ನಕ್ಕ.
‘ಇಲ್ಲಪ್ಪಾ ನನಗೇ ನಾನೇ ಮೋಸ ಮೊಡ್ಕೊಂಡ್ ಬಿಡ್ತಿದ್ದೆ ಕಣೋ. ನೀನು ಅದನ್ನು ತಪ್ಪಿಸಿದ ಮಹಾನುಭಾವ. ನಿನ್ನ ಫೋಟೋ ಇಟ್ಕೊಂಡು ಪೂಜೆ ಮಾಡೋದಂತೂ ಈ ಸಮಾಜದಲ್ಲಿ ಇಲ್ಲದ ಕಲ್ಪನೆಗಳಿಗೆ ಅವಕಾಶ ಮಾಡಿಕೂಡುತ್ತಲ್ವಾ? ಉಪಕಾರ ಸ್ಮರಣೆಗಂತ ಮಗನಿಗೆ ನಿನ್ನ ಹೆಸರನ್ನೇ ಇಟ್ಟು ಬಿಟ್ಟೆ.’ ಅವಳು ಕಷ್ಟದಲ್ಲಿದ್ದಾಗ ಅದಕ್ಕೆ ತಾನೇ ಕಾರಣವೆಂದು ಖಿನ್ನನಾಗಿದ್ದ ಸುಬ್ಬು ಈಗ ಸುಪ್ಪತ್ತಿಗೆಯಲ್ಲಿ ಮೆರಿತಿದಾಳೆ. ಅದಕ್ಕೆ ತಾನೇ ಕಾರಣವೆಂದು ಅವಳೇ ಹೇಳಿದಾಗಲೂ ಒಪ್ಪಿಕೊಳ್ಳಲಾರ. ಅಪಮಾನ ಮಾಡುವ ಹೊಸ ಶೈಲಿ ಇರಬಹುದೆ ಎಂದುಕೊಂಡ.
‘ನೀನು ಸಂತೋಷವಾಗಿದ್ದೀಯಾ ಸುಬ್ಬು’ ಅವಳೇ ಕೇಳಿದಳು. ಸ್ವಲ್ಪ ಹೊತ್ತು ಮೌನವಾಗಿದ್ದು ತನಗೆ ತಾನೇ ಎಂಬಂತೆ ಹೇಳಿಕೊಂಡ- ‘ನಾನು ಬಯಸಿದ್ದು ಏನೂ ಆಗಲಿಲ್ಲ. ಕನಿಷ್ಠ ಇಷ್ಟಪಟ್ಟವಳನ್ನು ಕೂಡಾ ಲಗ್ನ ಮಾಡಿಕೊಳ್ಳಲಾಗಲಿಲ್ಲ’. ಈಗ ದೊಡ್ಡದಾದ ನಿಟ್ಟುಸಿರೊಂದನ್ನು ಹೂರ ಚೆಲ್ಲಿದವಳು ಕೌಸಲ್ಯ. ಇಷ್ಟ ಪಟ್ಟೋರನ್ನ ಆಗಲಿಲ್ಲವೆಂದು ಸೋತು ಕೂತರೆ ಬದುಕು ಪನ್ನೀರು.’ ತಾನು ಹಿಂದೆ ಆಡಿದ ಮಾತನ್ನೇ ಅವಳದೆಷ್ಟು ಚೆಂದವಾಗಿ ಪಾಲಿಶ್ ಮಾಡಿ ಹಿಂದಿರುಗಿಸಿದಳಲ್ಲ ಅಂದುಕೊಂಡ. ಬದುಕು ಅವಳಲ್ಲಿ ಪ್ರಬುದ್ಧತೆಯನ್ನು ತಂದಿದೆ ಅನ್ನಿಸದಿರಲಿಲ್ಲ.
ಗಾಯಿತ್ರಿ ಕರವಸ್ತ್ರದಿಂದ ಕೈ ಒರೆಸಿಕೊಳ್ಳುತ್ತಾ ಬಂದಳು. ಇವನು ಬವಲ್ಸ್‌ನಲ್ಲಿ ಕೈ ಅದ್ದಿ ತೊಳೆದ. ‘ಸೀಯು ಟುಮಾರೋ’ ಕೌಸಲ್ಯ ನಗು ನಗುತ್ತಾ ನಿಂತಳು. ‘ಹಳೇದನ್ನೆಲ್ಲಾ ಮರೆತುಬಿಡಬೇಕು ಕಣೋ’ ಅವಳೇ ಅನ್ನುತ್ತಾ ಮುಗುಳ್ನಕ್ಕಳು. ‘ಆದರೂ ನಾನು… ನಿನಗೆ’ ಬೇಕೆಂದೇ ಮುಜುಗರವಾಗಲೆಂದೇ ಹಳೇದನ್ನ ಕೆದಕಿ ಕುಹುಕ ನಗೆ ಬೀರಿದ. ‘ತುಟಿಯ ಮೇಲೆ ನೊಣ ಕೂತ್ಕೊಂತು ಅಂತ ಯಾರಾದ್ರು ತುಟಿನೇ ಕೂಯ್ಕೋತಾರೇನೋ ದಡ್ಡಾ’ ಎಂದವಳು ಪ್ರತಿಕ್ರಿಯಿಸಿದಾಗ ಕೆನ್ನಗೆ ರಾಚಿದಂತಾಯಿತು. ನಾಳೆ ನಮ್ಮ ಮನೆಗೆ ನೀವಿಬ್ಬರೂ ಟಿಫನ್ಗೆ ಬಂದುಬಿಡಿ. ಕಾರ್ ಕಳಿಸ್ತೀನಿ… ಓಕೆನಾ. ಎಲ್ಲರೂ ಒಟ್ಟಿಗೆ ಕೂತು ಟಿಫನ್ ಮಾಡೋಣ’ ಅಕ್ಕರೆ ತೋರಿದ ಕೌಸಲ್ಯ ‘ಬರ್ತೀನಿ’ ಎಂದು ಹೋಗುವಾಗೊಮ್ಮೆ ಸುಬ್ಬುವಿನತ್ತ ನೋಡಿದಳು. ಅವಳತ್ತ ಹೋಗುತ್ತಲೇ ಹೆಂಡತಿಯನ್ನು ಏಳಿಸಿಕೊಂಡು ಹೊರಟೇಬಿಟ್ಟ.
‘ನಾಳೆಯೇ ರೂಮ್ ಖಾಲಿ ಮಾಡಿಬಿಡೋಣ ಗಾಯಿತ್ರಿ’ ಅಂದ ಸುಬ್ಬು ಓಡುವವನಂತೆ ನಡೆದ. ‘ಎಲ್ಲಾ ಫ್ರೀ! ರಾಜೋಪಚಾರ ಸಿಗುವಾಗ ಇಷ್ಟು ಬೇಗ ಯಾಕ್ರಿ ರೂಮ್ ಖಾಲಿ ಮಾದೋದು!?’ ವಿಸ್ಮಯಳಾದ ಗಾಯಿತ್ರಿ ಅವನತ್ತ ನೋಡಿದಳು.
‘ನೋ… ನೋ… ನಾಳೆಯಾಕೆ… ಈಗ್ಲೆ ಈಗ್ಲೆ ಖಾಲಿ ಮಾಡೋಣ್ವೆ’ ಚೀರಿದ ಅವನು ಹುಚ್ಚನಂತೆ ಲಿಫ್ಟ್‍ನತ್ತ ಓಡಿದ.
*****