ನಿನ್ನೊಡನೆ ಮಾಡುವ ಹೃದಯಾಲಾಪವು
ಪ್ರೇಯಸಿಯ ಪಿಸುಮಾತಿಗಿಂತಲೂ ಮಧುರ
ನಿನ್ನ ಸಂತೈಕೆ ಯಾವುದೇ ಪ್ರವಾದಿಯ ಬೋಧೆಗಿಂತ ಶಾಂತಿದಾಯಕ
ನೀನು ಮುನಿದು ಮೌನವಾಗಿ ಬಯ್ಯುವುದು
ಯಾವ ತಾಯಿಯ ಮುನಿಸಿಗಿಂತಲೂ ತಾಪದಾಯಕ
ನಿನ್ನ ಸರಳ ಸುಂದರ ವಾಣಿ ಯಾವುದೇ ಕಾವ್ಯಧ್ವನಿಗಿಂತ ರಸಮಯ
ನಿನ್ನ ದನಿ ಕೇಳಿಸದಷ್ಟು ಅಂತರಾಳದಲ್ಲಿ ಒಳನುಡಿಯುತ್ತಿದ್ದರೂ
ಯಾವುದೇ ಭೀಷಣ ಭಾಷಣದಂತೆ ಕಿವಿಗಪ್ಪಳಿಸುತ್ತದೆ
ನಿನ್ನ ನುಡಿಸಿಡಿಲು ಯಾವುದೇ ಕ್ರಾಂತಿಕಾರಿಗಿಂತಲೂ
ಹೆಚ್ಚು ಪರಿಣಾಮಕಾರಿಯಾಗಿ ನನ್ನಸ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತದೆ
ನನ್ನ ನೂರು ತಪ್ಪು ಹೆಜ್ಜೆಗಳಲ್ಲೊಂದು ಒಪ್ಪು ಹೆಜ್ಜೆಯಿಂದ ಹರ್ಷಿತಳಾಗಿ
ನೀನು ನನ್ನ ಭುಜತಟ್ಟಿ ಹುರಿದುಂಬಿಸುವುದು
ಯಾವುದೇ ವಿಶ್ವ ಸನ್ಮಾನ-ಪದಕ-ಪ್ರಶಸ್ತಿಗಿಂತಲೂ ಹೆಚ್ಚು ಸ್ಪೂರ್ತಿದಾಯಕ
ಆಗೊಂದೀಗೊಂದು ಸೆಳೆಮಿಂಚಿನಂತೆ ನೀನು ತೋರುವ ನವಕಿರಣ
ಯಾವುದೇ ಋಷಿಯ ಕಾಣ್ಕೆಯಂತೆ ವಿಜ್ಞಾನಿಯ ನವ ಶೋಧದಂತೆ
ಜೀವಿತವ ಸಾರ್ಥಕಗೊಳಿಸುತ್ತದೆ
ಇಷ್ಟಾದರೂ ನಿನ್ನ ನನ್ನ ಮುಖಭೆಟ್ಟಿ ಆಗಿಲ್ಲ
ನೀನಾರೆಂದು ನನಗೆ ತಿಳಿದಿಲ್ಲ.