ಕತ್ತಲೆ ರಾತ್ರಿ
ಘನಘೋರ ಕಡುರಾತ್ರಿ
ದಶ ದಿಕ್ಕುಗಳೆಲ್ಲ
ಕಪ್ಪು ಹಚ್ಚಡ ಹೊದ್ದು
ಮೌನದ ಮಂಜುಗಡ್ಡೆ
ಕರಗಿ ಹನಿಹನಿಯಾಗಿ
ಒಂದೊಂದಾಗಿ ತೊಟ್ಟಿಕ್ಕಿ
ಹೆಪ್ಪುಗಟ್ಟಿದ ಕಪ್ಪು
ಕರಾಳತೆಯನು ಘನೀಕರಿಸಿ
ಪಟಪಟನೆ ಬೀಳುವ
ಮಳೆ ಹನಿಗಳ ಶಬ್ದ
ಸಮುದ್ರ ತೀರದ ಅಲೆಗಳ ಅಬ್ಬರ
ಹಬ್ಬಿದ ಮರಳ ಗುಡ್ಡೆದಾಟಿ ಬರಲು
ಅಲೆಗಳ ಅವಿರತ ಪ್ರಯತ್ನ
ಏರುಪೇರುಗಳ ಸಮವಾಗಿಸಲು
ನದಿಯ ಅಂತರಂಗದ ಲೋಕ
ಕಪ್ಪೆಗಳ ವಟಗಟ್ಟುವಿಕೆ
ಜೀಕಿದ ತೊಟ್ಟಿಲ ಹಗ್ಗದ ಶಬ್ದ
ಜೀರುಂಡೆಗಳ ಝೇಂಕಾರ
ಹೆಪ್ಪುಗಟ್ಟಿದ ಕತ್ತಲೆ ಸೀಳಿ
ಮಿಂಚು, ಗುಡುಗು, ಸಿಡಿಲು
ತೆಂಗಿನ ತೋಪುಗಳ ನಡುವಲ್ಲಿ
ನಡುಕ ಹುಟ್ಟಿಸಿದ ರಾತ್ರಿ
ಸುಳಿಬಾಳೆ ಎಳೆಬಾಳೆ ಎಲೆ ತೋಟ
ಕಂಪಿಸಿದ ಕಡು ರಾತ್ರಿಯಲಿ
ಬೆಚ್ಚನೆಯ ಹಚ್ಚಡ ಸುಖ ಬಯಸಿದ
ಕಪ್ಪು ನೆರಳುಗಳು ಅಪ್ಪಿಕೊಂಡವು.
ರಾತ್ರಿ ದೀಪ ಆರದ್ದಿದ್ದರೆ
ಬೈರಾಗಿ ದೀಪಗಳ ತಕರಾರೇನು?
ದಿನವೋ ಹಗಲು ರಾತ್ರಿಗಳು
ಹುಟ್ಟುತ್ತವೆ ಸಾಯುತ್ತವೆ
ಹಿಗ್ಗುತ್ತವೆ ಕುಗ್ಗುತ್ತವೆ ನೆರಳು
ಕತ್ತಲೆಯ ತಕರಾರೇನು?
*****



















