Home / ಕಥೆ / ಸಣ್ಣ ಕಥೆ / ಕೆಸರಿನ ಜನರ ನಡುವೆ

ಕೆಸರಿನ ಜನರ ನಡುವೆ

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವಿತ್ತು.

ಎಂಟು ಹತ್ತು ವೈದ್ಯರು ಮೇಜಿನ ಸುತ್ತಲೂ ಕುಳಿತಿದ್ದರು… ಮೇಜಿನ ಮೇಲೆ ಎಂಥದ್ದೋ ಹಾಳೆಗಳು, ರೆಪ್ರೆಸೆಂಟೆಟೀವುಗಳು ನೀಡಿದ ಔಷಧಿ ಟಾನಿಕ್ಕುಗಳ ಬಾಟಲಿಗಳು, ಕೇಸುಷೀಟುಗಳು, ರೆಕಾರ್‍ಡ್ ಪುಸ್ತಕಗಳು ಹರಡಿದ್ದವು. ಜ್ಯೂನಿಯರ್ ವೈದ್ಯೆಯರು, ಪ್ರಮುಖ ವೈದ್ಯರು ಮುಂತಾದ ಫಲಕಗಳು ಅವರುಗಳು ಹಾಕಿದ್ದ ಬಿಳಿ ಕೋಟಿನ ಮೇಲೆ ರಾರಾಜಿಸುತ್ತಿದ್ದವು.

ಪ್ರಮುಖ ವೈದ್ಯೆ ಕಮಲಾಬಾಯಿ ತಮ್ಮ ಅನುಭವದ ಯಾವುದೋ ವಿಷಯವನ್ನು ಅತ್ಯಂತ ಗಂಭೀರವಾಗಿ ಹೇಳುತ್ತಿದ್ದರು. ಉಳಿದವರು ಇಷ್ಟವಿರಲಿ ಬಿಡಲಿ ಆಲಿಸಬೇಕಾಗಿತ್ತು. ತುಂಬು ಗರ್‍ಭಿಣಿಯರು ತಾಮುಂದು ನಾಮುಂದು ಎಂದು ಆದಷ್ಟು ಬೇಗನೆ ತೋರಿಸಿಕೊಂಡು ಮನೆಗೆ ಹೋಗಲು ಆತುರಪಡುತ್ತಿದ್ದರು. ಅವರಲ್ಲಿಯೇ ತಿಕ್ಕಾಟ ನಡೆದಿತ್ತು.

“ನಾನು ಕೆಲಸ ಮಾಡ್ತಿದ್ದ ಆ ಊರಿನಲ್ಲಿ ನಾನೆಷ್ಟು ಪಾಪ್ಯುಲರ್ ಆಗಿದ್ದೇಂದ್ರೆ, ಕೇಳಿದರೆ ಈಗ ನೀವ್ಯಾರೂ ನಂಬಲ್ಲಾರಿ, ಡಾಕ್ಟರುಗಳೂಂದ್ರೆ ಅದೆಷ್ಟು ಗೌರವ, ಆದರ ಪ್ರೀತಿ…!! ಆಕೆ ಹಳೆಯ ನೆನಪುಗಳ ಹಳಸಿದ ಬುತ್ತಿಯನ್ನು ಅಂಥ ಬಿಸಿಯಾದ ವಾತಾವರಣದಲ್ಲೂ ಬಿಚ್ಚಿದ್ದರು.

“ಯಾವುದಾದರೂ ಹಳ್ಳಿಯಲ್ಲಿ ಕೆಲ್ಸ ಮಾಡ್ತಿದ್ರಾ ಮೇಡಂ?” ಜ್ಯೂನಿಯರ್ ವೈದ್ಯ ಮೀರಾ ಕೇಳಿದಳು. ಆದಷ್ಟು ಬೇಗ ಅವರು ಅಲ್ಲಿಂದೆದ್ದು ಛೇಂಬರಿಗೆ ಹೋದರೆ ತಾವು ಬೇಗ ಬೇಗ ರೋಗಿಗಳನ್ನು ನೋಡಬಹುದೆಂಬ ಅವಸರ ಅವಳಿಗಿತ್ತು.

“ಏನ್ರಿ ಹಾಗಂತ್ತೀರಾ?… ನನ್ನ ಡಿಗ್ರಿ.. ನನ್ನ ಕ್ವಾಲಿಫಿಕೇಶನ್ಗೆ ಹಳ್ಳಿಗೆ ಹಾಕ್ತಾರಾ?… ವ್ಹಾಟ್ ನಾನ್ಸೆನ್ಸ್ ಯೂ ಆರ್ ಟಾಕಿಂಗ್? ಮೇಜರ್ ಹಾಸ್ಪಿಟಲ್ನಲ್ಲೇ ಇದ್ದೆ. ಎಂತೆಂಥಾ ರೋಗಿಗಳು ಬರೋರು… ಎಲ್ಲವನ್ನೂ ನಾನೇ ಟ್ರೀಟ್ ಮಾಡ್ತಿದ್ದೆ.” ಡಾಕ್ಟರ್ ಕಮಲಾಬಾಯಿಯವರು ತಡೆಯಿಲ್ಲದೆ ಮಾತನಾಡುತ್ತಿದ್ದರು. ಅವರ ಉತ್ಸಾಹ ಹುಮ್ಮಸ್ಸು ನೋಡಿದರೆ ಸದ್ಯದಲ್ಲಿ ಅವರು ಅಲ್ಲಿಂದ ಎದ್ದು ಹೋಗುವ ಸೂಚನೆ ಕಾಣಲಿಲ್ಲ.

“ಇಲ್ಲಿಂದ ಎದ್ದೂ ಹೋಗಲ್ಲ. ಪೇಶಂಟ್‍ಸ್ಗಳನ್ನೂ ನೋಡೋದಿಲ್ಲ…. ನಮ್ಗೂ ನೋಡೋಕೆ ಬಿಡಲ್ಲ. ಇವರು ಹೇಳೋ ಕತೇನಾ ಕೇಳುತ್ತಾ ಕೂತ್ಕಬೇಕು.” ಡಾಕ್ಟರ್ ಅಂಜನಾ…. ಪಕ್ಕದಲ್ಲಿದ್ದ ಮೀರಾಳಿಗೆ ಪಿಸುಗುಟ್ಟಿ ಹೇಳಿದಳು.

ಜನಜಂಗುಳಿ… ಗಲಾಟೆಯ ಮಾತುಕತೆಯಲ್ಲಿ ಅವಳು ಗೊಣಗುಟ್ಟಿದ್ದು ಯಾರಿಗೂ ಕೇಳಿಸಲಿಲ್ಲ. “ಇದೇನು ಸಂತೇನೋ… ಮೀನಿನ ಮಾರ್‍ಕೆಟ್ಟೋ? ಸಾಲಾಗಿ ನಿಂತ್ಕಳ್ಳಿ ದೊಡ್ಡಮ್ಮಾವ್ರು ಕೂತವ್ರೆ.. ಮೈ ಮೇಲೆ… ನುಗ್ಗಿ ಬರ್‍ತೀರಲ್ಲ…” ಆಯಾ, ಅಧಿಕಾರಯುತ ಸ್ವರದಿಂದ ಗದರುತ್ತಾ ಎಲ್ಲರನ್ನೂ ಹಿಂದಕ್ಕೆ ಸರಿಸತೊಡಗಿದಳು. ಕಟ್ಟಿದ್ದ ಗುಂಪು ತಂತಾನೇ ಸಾಲು ಮಾಡಿಕೊಳ್ಳತೊಡಗಿತು.

“ಅಮ್ಮಾವ್ರೇ” ಚಿಕ್ಕಣ್ಣ ಮುಂದೆ ಬಂದು ಮಾತನಾಡಲು ಯತ್ನಿಸಿದ.

ಕನ್ನಡಕ ಧರಿಸಿ, ಹರೆಯದ ತರುಣಿಯಂತೆ ಅಲಂಕರಿಸಿಕೊಂಡಿದ್ದ ಡಾಕ್ಟರ್ ವನಜಮ್ಮ, “ಏನಯ್ಯಾ, ಅಷ್ಟು ತಿಳಿಯೋಲ್ವಾ? ಹೆಂಗ್ಸರನ್ನು ತಳ್ಕೊಂಡು ಬರ್‍ತಾ ಇದ್ದೀಯಲ್ಲ ನಾಚ್ಗೆ ಆಗೋಲ್ವಾ? ನಡೀ ಆಕಡೆ, ನಿನ್ ಹೆಣ್ತೀನಾ ಕಳ್ಸು ಹೋಗು” ದರ್‍ಪದಿಂದ ಗುರುಗುಟ್ಟಿ.

“ಮಂತ್ರಕ್ಕಿಂತ ಉಗುಳು ಮೊದಲು ಅನ್ನೋ ಹಾಗೆ ಬಸುರಿ ಹೆಂಗ್ಸು ಎಲ್ಲೊ ಇರ್‍ತಾರೆ… ಇವರುಗಳು ಮುಂದೆ ಬಾರ್‍ತಾರೆ ಎಲ್ರೂ ದರ್‍ಪ ತೋರಿಸೋಕ್ಕೆ ಬರ್‍ತಾರೆ” ತಾತ್ಸಾರದಿಂದ ಮಾತನಾಡುತ್ತಾ ಡಾಕ್ಟರ್ ಕಮಲಾ ಬಾಯಿಯವರತ್ತ ನೋಡಿ.

“ನಮ್ಮ ಜನಕ್ಕೆ ಎಷ್ಟು ಹೇಳಿದ್ರೂ ಅಷ್ಟೇ ಮೇಡಂ. ದನ ನುಗ್ಗಿದ ಹಾಗೆ ನುಗ್ಗಿ ಬರ್‍ತಾರೆ ಸ್ನಾನ ಮಾಡಿ ಎಷ್ಟು ದಿನವಾಯ್ತೋ ಏನೋ?… ಗಬ್ಬು ವಾಸನೆ ಬೇರೆ. ಮೈಮೇಲೆ ಬಂದುಬಿಡ್ತಾರೆ… ಛೀ…! ಜೇಬಿನಿಂದ ಕರ್ಚೀಫನ್ನು ತೆಗೆದುಕೊಂಡು ತಮ್ಮ ಮೊಂಡು ಮೂಗನ್ನು ಒಮ್ಮೆ ಒತ್ತಿಕೊಂಡರು.

ಅವಮಾನವಾದಂತಾದರೂ ಚಿಕ್ಕಣ್ಣ ಅಲ್ಲೇ ನಿಂತಿದ್ದ. ತಮ್ಮಂತಹ ಬಡ ಜನರಿಗೆ ಈ ವಿಧದ ಅವಮಾನ ತಾತ್ಸಾರ ಸಾಮಾನ್ಯ ಸಂಗತಿ ಎಂಬಂತೆ ನಿಂತಿದ್ದ.

ಅಷ್ಟರಲ್ಲಿ ಮಧ್ಯೆ ಬಾಯಿಹಾಕಿದ ಮೀರಾ,

“ಏನಪ್ಪಾ? ಮೇಡಂ ಹೇಳಿದ್ದು ಅರ್‍ಥವಾಗಲಿಲ್ವಾ? ಹೋಗು ನಿನ್ನ ಹೆಂಡ್ತೀನಾ ಕಳುಹಿಸು” ಎಂದಳು.

“ಅವ್ಳು ಇಲ್ಲೇ ನಿಂತವ್ಳೆ… ಭಾಳ ನೋವು ಅಂತಾ ಅವ್ಳೆ ಡಾಕ್ಟ್ರೆ ಆದ್ಕೆ ನಾನೇ ಬಂದೆ..” ಆತ ವಿವರಣೆ ನೀಡುತ್ತಾ ಹೋದಂತೆ ಸ್ವರ ಒದ್ದೆಯಾದಂತೆ ಕಂಡಿತು.

“ಸರಿ ಆ ಚೀಟಿ ಕೊಡು ಆಕೇನಾ ಕಳ್ಸು ನೋಡ್ತೀವಿ… ಇಷ್ಟು ಜನ ಹೆಂಗ್ಸರನ್ನ ತಳ್ಕೊಂಡ್ ಬಂದ್ರೆ ಅವರಿಗೇ ಒಂಥರಾ ಆಗೋಲ್ವಾ?” ಎಂದ ಮೀರಾ ಚೀಟಿಯಲ್ಲಿದ್ದ ಹೆಸರನ್ನು ರಿಜಿಸ್ಟರ್‍ಗೆ ಬರೆದು ಎದ್ದು ನಿಂತು

“ಮಕ್ಕಳೆಷ್ಟು?”

“ನನಗಾ?” ಯುವತಿ ಕೇಳಿದಳು.

ವನಜಮ್ಮ ಸಿಟ್ಟಿನಿಂದ ತಲೆ ಎತ್ತಿ ನೋಡಿ.

“ಮತ್ತೆ ನನಗಾ? ಬಸ್ರಿಯಾಗಿರೋದು ನೀನೋ ನಾನೋ? ಒಳ್ಳೆ ಸಿನಿಮಾ ನಟಿ ತರಹಾ ಸೀರೆ ಉಟ್ಕೊಂಡು ಬಂದಿದ್ದೀಯಾ ಅಷ್ಟೂ ತಿಳಿಯೋಲ್ವಾ?” ವ್ಯಂಗ್ಯವಾಡಿದಳು.

ರೋಗಿಗಳ ಗುಂಪು ತನ್ನ ಮಾತನ್ನು ಆಲಿಸುತ್ತಿದೆ. ತನ್ನ ರೇಷ್ಮೆ ಸೀರೆ, ವಜ್ರದ ವಡವೆಗಳಿಂದ ಆಕರ್‍ಷಕ ಬಿಂದುವಾಗಿದ್ದೇನೆ ಎಂಬುದನ್ನು ಅನುಭವದಿಂದ ಮನಗಂಡಿದ್ದ ಆಕೆ ಅತ್ಯಂತ ದರ್‍ಪದಿಂದಲೇ ಅಧಿಕಾರದಿಂದಲೇ ಮಾತನಾಡುತ್ತಿದ್ದರು.

ಯುವತಿಯ ಮುಖ ಕೆಂಪಾಯಿತು. ಕಣ್ಣುಗಳಲ್ಲಿ ನೀರಾಡಿತು. ಅಷ್ಟರಲ್ಲಿ ಅವಳ ಜೊತೆಯಲ್ಲಿ ಬಂದಿದ್ದ ಮಹಿಳೆ.

“ಮೊದಲನೆಯದು ನೋಡಿ ಡಾಕ್ಟ್ರೆ ನಾಚ್ಕೆ ಅಷ್ಟೆ” ಎಂದು ಸಮಜಾಯಿಷಿ ನೀಡಲು ಯತ್ನಿಸಿದಳು.

“ಬಸ್ರಿಯಾದ್ಮೇಲೆ ನಾಚಿಕೆ ಎಂಥಾದ್ದು? ಅಷ್ಟಕ್ಕೂ ವಕೀಲಿ ವಹಿಸಿಕೊಂಡು ಬರೋಕೇ ನೀವೇನಾಗಬೇಕು?

“ನಾನು ಅವರ ಪಕ್ಕದ ಮನೆಯಾಕೆ, ಗಂಡ ಬೆಳಿಗ್ಗೇನೇ ಫ್ಯಾಕ್ಟ್ರಿಗೆ ಹೋಗಿದ್ದಾರೆ. ಅಕ್ಕಪಕ್ಕದವರೂಂದ್ರೆ ಇಷ್ಟೂ ಮಾಡದಿದ್ರೆ ಹೇಗೇಂತಾ ಬಂದೆ” ಅತ್ಯಂತ ಸಹನೆಯಿಂದ ಆಕೆ ಮಾತನಾಡುತ್ತಿದ್ದಳು.

“ನೀವು ಮಾತನಾಡೋದನ್ನ ನೋಡಿದ್ರೆ ತೀರಾ ಸಂಬಂಧಿಕರೇನೋ ಅಂದ್ಕೊಂಡಿದ್ದೆ. ನೀವು ಆಚೆ ಹೋಗಿ. ಇಲ್ಲಿ ಯಾರ ಮಧ್ಯಸ್ಥಿಕೇನೂ ಬೇಡಾ. ಬಂದವರಿಗೇನು ಮಾತನಾಡಲು ಬಾಯಿ ಇರೋಲ್ವಾ?” ಡಾಕ್ಟರ್ ವನಜಮ್ಮನವರ ವಾಗ್ಜರಿ ಮುಂದುವರೆದಿತ್ತು.

ಯುವತಿಯ ಕಣ್ಣುಗಳಲ್ಲಿ ಭೀತಿ ಕಾಣಿಸಿಕೊಂಡಿತ್ತು.

“ಹೋಗೋಣ ನಡೀರಿ” ಎಂದಳು ಮಲುವಾಗಿ ಮಹಿಳೆಯ ಸಹನೆಯ ಕಟ್ಟೆಯೊಡೆಯಿತು.

“ಡಾಕ್ಟರಾಗಿ ಹೀಗೆ ಏನ್ರಿ ನೀವುಗಳು ಮಾತನಾಡೋದು? ಜೀವದಾನ ಮಾಡ್ತೀರೀಂತ ವಿಶ್ವಾಸದಿಂದ ಬಂದ್ರೆ ಪ್ರಾಣಭಯ ಹುಟ್ಟಿಸೋ ನೀವೆಂಥಾ ಡಾಕ್ರ್ಟುಗಳ್ರಿ? ಒಳ್ಳೇ ಕೋಟು ಹಾಕ್ಕೊಂಡು ಕುರ್‍ಚಿಲಿ ಕೂತಿದ್ದೀರೀಂತಾ ನೀವು ಅಂದಿದ್ದನ್ನೆಲ್ಲಾ ಕೇಳಿಸಿಕೊಂಡಿದ್ದಾಯಿತು. ಆಚೆ ಬಂದು ಮಾತಾಡಿ ಗೊತ್ತಾಗುತ್ತೆ” ದನಿ ಏರಿಸಿ ಜಗಳಕ್ಕಿಳಿಯುವರಂತೆ ಮಾತನಾಡಿದಾಗ ಎಲ್ಲರೂ ಆಶ್ಚರ್‍ಯದಿಂದ ಗಾಬರಿಯಿಂದ ಇವರತ್ತ ನೋಡಿದರು.

ವನಜಮ್ಮನವರ ಮುಖ ಬಣ್ಣ ಕಳೆದುಕೊಂಡಿತ್ತು. ಡಾಕ್ಟರ್ ಮೀರಾ ಏನೂ ತಿಳಿಯದವಳಂತೆ ತನ್ನ ಕೆಲಸ ಮುಂದುವರೆಸಿದ್ದಳು. ಪ್ರತಿದಿನ ಒಂದಲ್ಲ ಒಂದು ರೀತಿಯಿಂದ ಸೊಕ್ಕಿನಿಂದ ಮಾತನಾಡುತ್ತಿದ್ದ ವನಜಮ್ಮನಿಗೆ ಸರಿಯಾಗಿ ಕೊಡುತ್ತಿದ್ದ ಮಹಿಳೆಯ ಮುಖ ನೋಡಿ ಪುನಃ ತನ್ನ ರೋಗಿಯತ್ತ ಗಮನ ಹರಿಸಿದಳು.

“ನಾನೂ ನೋಡ್ತಾಯಿದ್ದೀನಿ, ಬೆಳಿಗ್ಗೆ ಏಳೆಂಟು ಗಂಟೆಗೆ ಮನೆ ಮಠ ಬಿಟ್ಟು ಬಂದೂ ಕೂತಿರ್‍ತೀವಿ. ನೀವು ಬಂದು ಕಾಫಿ ಕುಡಿದು, ಹರಟೆ ಹೊಡೆದು ರೋಗಿಗಳನ್ನು ನೋಡೋದು ಹತ್ತು ಗಂಟೆ ಮೇಲಾಗಿರುತ್ತೆ ಆದರೂ ಸುಧಾರಿಸಿಕೊಂಡು ಕೂತು ಕಾದು ತೋರಿಸಲು ಬಂದರೆ ಮಾತಾಡೋ ರೀತಿ ನೋಡಿ?”

“ಹೋಗ್ಲಿ ಬಿಡಿ ಪಂಕಜಮ್ನೋರೇ, ಜಗಳ ಬೇಡ. ಬೇರೆ ಆಸ್ಪತ್ರೆಗೆ ಹೋದರಾಯ್ತು” ಯುವತಿ ಮಧ್ಯೆ ಬಾಯಿ ಹಾಕಿ ಸಮಾಧಾನಪಡಿಸಲು ಯತ್ನಿಸಿದಳು.

“ಇಷ್ಟು ಸೊಕ್ಕಿರೋ ನೀವು ಯಾವುದಾದ್ರೂ ನರ್‍ಸಿಂಗ್ ಹೋಮ್ಗೆ ಹೋಗ್ಬೇಕಾಗಿತ್ತು?” ಪೆಟ್ಟು ಬಿದ್ದರೂ ಪಟ್ಟು ಬಿಡದವರಂತೆ ವನಜಮ್ಮ ಕೇಳಿ ನುಡಿದರು.

“ಅದನ್ನ ಕೇಳೋಕೆ ನೀವ್ಯಾರ್ರಿ, ಎಲ್ಲಿಗೆ ಬೇಕಾದ್ರೂ ಹೋಗ್ತೀವಿ, ಮೊದಲು ನೀವು ಎಲ್ಲಿಗೆ ಹೋಗಲು ಲಾಯಕ್ಕೂಂತ ಯೋಚಿಸಿ.”

ಕೋಲಾಟದಂತೆ ಜಗಳ ಮುಂದುವರಿಯುತ್ತಿರುವುದನ್ನು ಕಂಡ ಮೀರಾ ಅಲ್ಲಿಂದೆದ್ದು ಒಳಗೆ ಬಂದಳು. ಆಯಾ ನರ್‍ಸ್‍ಗಳು ಮಧ್ಯೆ ಹೋಗಿ ಏನೇನೋ ಮಾತನಾಡಿ ಸಮಾಧಾನಪಡಿಸಿ ಕದನವನ್ನು ನಿಲ್ಲಿಸಿದರು.

ಚಿಕ್ಕಣ್ಣನ ಹೆಂಡತಿಗೆ ನೋವು ಜಾಸ್ತಿಯಾಗತೊಡಗಿತ್ತು. ಒಮ್ಮೆಲೆ ಹುಟ್ಟಿದ ಜಗಳ, ಗಲಾಟೆ ಕಂಡು ಹೆದರಿದ. ಇಂತಹ ಜಾಗದಲ್ಲಿ ತನ್ನ ಹೆಂಡತಿಗೆ ಅದೆಷ್ಟು ಸುರಕ್ಷತೆ ಸಿಗಬಹುದು?

ಗೋಡೆಗೊರಗಿ ನಿಂತಿದ್ದ ಹೆಂಡತಿಯ ಬಳಿ ಬಂದ ಚಿಕ್ಕಣ್ಣ.

“ಡಾಕ್ಟ್ರುಗಳೇ ಸರಿಯಿಲ್ಲ ಕಣೆ, ಬ್ಯಾರೆ ದೊಡ್ಡ ಆಸ್ಪತ್ರೆಗೆ ಓಗೋಣ ನಡಿ” ಎಂದ ಆತಂಕದಿಂದ.

ಹೊಟ್ಟೆಪಾಡಿಗಾಗಿ ದೂರದ ಊರಿನಿಂದ ಬಂದು ಕೂಲಿ ಮಾಡಿ ಜೀವಿಸುತ್ತಿದ್ದ ಚಿಕ್ಕಣ್ಣನಿಗೆ ಹೆಂಡತಿ, ಮಕ್ಕಳೇ ಸರ್‍ವಸ್ವವಾಗಿದ್ದರು.

“ಊಹುಂ… ಬ್ಯಾಡ… ಯಾರೋ ಒಬ್ಬಿಬ್ರು ಹಂಗಿರ್‍ಬೇಕು. ಒಳ್ಳೇವ್ರು ಇರ್‍ತಾರೆ. ಮೊದ್ಲಿಂದಾನೂ ನಾನು ಇಲ್ಲೇ ತೋರಿಸ್ಕಂಡಿದ್ದು… ಇವಂದೂ ಇಲ್ಲೇ ಅಲ್ವಾ ಆಪ್ರೇಸನ್ ಆಗಿದ್ದು?” ಗಂಗಾ ಹೆದರಿದ್ದ ಗಂಡನಿಗೆ ಸಾಂತ್ವನಗೊಳಿಸಲು ಯತ್ನಿಸಿದಳು.

“ಸರ್‍ಯಾಗಿ ಮುಖ ಕೊಟ್ಟು ಮಾತೇ ಆಡ್ಸಲ್ಲ. ಇನ್ನು ನೋಡ್ತಾರೇಂತ ಏನು ಗ್ಯಾರಂಟಿ?”

“ಅಗೋ ಅಲ್ಲಿ ನಿಂತಾಳಲ್ಲ. ಅವಳ ಕೈಗೆ ಒಂದ್ಹತ್ತು ರೂಪಾಯಿ ಕೊಟ್ಬಿಡಿ… ಅವಳೇ ಕರ್‍ಕೊಂಡು ಹೋಗಿ ತೊರಿಸಿಬಿಡ್ತಾಳೆ”

“…”

“ನರ್‍ಸಿಂಗ್ ಹೋಂ ಅಂತ ಹೋದ್ರೆ.. ಸಾವಿರಾರು ರೂಪಾಯಿ ಖರ್‍ಚಾಗುತ್ತೆ. ಇವಂದು ಆಪ್ರೇಸನ್ನು ಈ ಆಸ್ಪತ್ರೇಲೇ ಅಲ್ವಾ ಆಗಿದ್ದು? ನಮ್ಮ ದುರಾದೃಷ್ಟ ಆ ಡಾಕ್ಟ್ರು ಈಗ ಇಲ್ಲ…” ನಿಟ್ಟುಸಿರು ಬಿಟ್ಟಳು.

ತನಗಿಂತ ಹೆಚ್ಚಿಗೆ ಓದಿದ್ದ ಸಣ್ಣ ಸಂಬಳವನ್ನು ತರುತ್ತಿದ್ದ ಹೆಂಡತಿಯ ಮಾತು ಹೌದೆನ್ನಿಸಿತು ಚಿಕ್ಕಣ್ಣನಿಗೆ. ಆದರೂ ಅವನ ಹೃದಯದಲ್ಲಿ ಆತಂಕ. ಭಯ..

ಯಾಕೋ ಗಂಗಾ… ಇಲ್ಲಿರೋ ಡಾಕ್ಟ್ರು ನೋಡಿದ್ರೆ ನಂಬಿಕೆ. ವಿಶ್ವಾಸಾನೇ ಬರಲ್ಲ… ನಿಂಗೇನಾದ್ರೂ ಆದ್ರೆ…. ನಾನು ಏನು ಮಾಡ್ಲೇ?” ಚಿಕ್ಕಣ್ಣನಿಗೆ ಗಂಟಲುಬ್ಬಿ ಬಂದಿತು.

“ಜನ ನೋಡ್ತಾರೆ ಅಳಬೇಡ್ರಿ.. ಏನೂ ಆಗೋಲ್ಲ. ಅಲ್ಲಿ ನೀಲಿ ಸೀರೆಯುಟ್ಟುಕೊಂಡು ನಿಂತಿದ್ದಾಳಲ್ಲ. ಆಕೇನಾ ಕರ್‍ದು ಕೇಳೋಣ ಸುಮ್ಕಿರಿ…” ಎನ್ನುತ್ತಾ ಹೊಟ್ಟೆ ಹೊತ್ತ ಗಂಗಾ ನಿಧಾನವಾಗಿ ಪರೀಕ್ಷಾ ಕೋಣೆಯತ್ತ ಜನಸಂದಣಿಯ ಮಧ್ಯೆ ತೂರಿಕೊಂಡು ಪ್ರಯಾಸದಿಂದ ಬಂದು ನಿಂತಳು.

ಡಾಕ್ಟರ್ ಕಾಂತಮ್ಮ ಗ್ಲೌಸ್ ಹಾಕಿಕೊಂಡು ಒಳಗೆ ಮಹಿಳೆಯೊಬ್ಬಳ ಪರೀಕ್ಷೆ ಮಾಡುತ್ತಿದ್ದರು. ನಿಂತಿದ್ದ ಜ್ಯೂನಿಯರ್ ಡಾಕ್ಟರಿಗೆ ಏನೋ ಹೇಳಿದರು. ಆಕೆ ಏನನ್ನೋ ತಲೆಯಾಡಿಸುತ್ತಾ ಬರೆದುಕೊಂಡಳು. ಅವರು ಮತ್ತೊಂದು ರೋಗಿಯತ್ತ ನಡೆದರು.

ತನಗೇನು ಕಾಯಿಲೆ? ಏನಾಗ್ತಿದೇಂತಾ ಏನನ್ನೂ ಕೇಳದೆ ಗುಂಪಿನಲ್ಲಿದ್ದವಳನ್ನು ತಂದು ಮಲಗಿಸಿ ಪರೀಕ್ಷಿಸಿ, ಚೀಟಿ ಬರೆದುಕೊಟ್ಟ ವೈದ್ಯೆಯತ್ತ ನೋಡಿದ ಆ ಮಹಿಳೆ

“ಏನೂಂತ ಕೇಳ್ದೆ, ಯಾವ ಕಾಯಿಲೆಗಂತ ಔವುಸ್ದಿ ಕೊಡ್ತೀರಿ ಡಾಕ್ಟ್ರೆ?” ಕೇಳಿದಳು. “ನಮ್ಮ ಮೇಡಂಗೆ… ಎಲ್ಲಾ ಗೊತ್ತಾಗುತ್ತೆ. ಸುಮ್ಮನೆ ಈ ಮಾತ್ರೆ ತಗೊಂಡು ಹೋಗಿ” ಜ್ಯೂನಿಯರ್ ವೈದ್ಯ ಮೆಲುವಾಗಿ ಹೇಳಿದಳು.

“ಏನಂತೆ ಅವಳದು?” ಅಧಿಕಾರವಾಣಿಯಿಂದ ಕೇಳಿದರು. ಅಷ್ಟರಲ್ಲಿ ಒಳಗೆ ನುಸುಳಿ ಬಂದು ನಿಂತಿದ್ದ ಗಂಗಾ,

“ನಂಗೆ ಸಣ್ಣಗೆ ನೋವು ಬರ್‍ತಾಯಿದೆ…” ಎಂದಳು,

“ನಿನಗಲ್ಲಮ್ಮ ಕೇಳಿದ್ದು… ನೀನು ಸ್ವಲ್ಪ ಆಚೆಯಿರು..” ಎನ್ನುತ್ತಾ ಗಂಗಾಳವನ್ನು ಪಕ್ಕಕ್ಕೆ ಕಳುಹಿಸಿದಳು ಆಯಾ.

“ನಿನ್ನಂತಹವರನ್ನು ದಿನಕ್ಕೆ ನುರಾರು ಜನರನ್ನು ನೋಡ್ತೀವಿ. ಮುಟ್ಟಿದ ಕೂಡ್ಲೇ ಏನೂಂತ ಗೊತ್ತಾಗುತ್ತೆ… ತಿಳಿಯಿತಾ?” ಮಲಗಿದ್ದ ಮತ್ತೊಬ್ಬ ರೋಗಿಯ ಉದರವನ್ನು ಸ್ಟೆತಾಸ್ಕೋಪಿನಿಂದ ನೋಡುತ್ತಾ ನುಡಿದ ಕಾಂತಮ್ಮ ಇನ್ನು ನಿಂತೇ ಇದ್ದ ಆ ಮಹಿಳೆಯತ್ತ ನೋಡಿ.

“ಮತ್ತೇನಾಗ್ಗೇಕು…” ಎಂದು ಕೇಳಿದಳು.

“ಆಯ್ಯೋ ದೇವ್ರೇ… ಪುನಃ ಅವರತ್ತ ಹೋಗಿ ವಾದ ಮಾಡ್ಬೇಡಾ… ನಾನೇ ಹೇಳ್ತೀನಿ. ಈ ಕಡೆ ಬಾ… ನಿಂಗೀಗ ಎರಡು ತಿಂಗಳು ಗರ್ಭ ನಿಂತಿದೆ ಅಷ್ಟೇ…” ಜ್ಯೂನಿಯರ್ ವೈದ್ಯೆ ಕೈಯಲ್ಲಿದ್ದ ಚೀಟಿಯನ್ನು ಕೊಟ್ಟರು.

“ನಂಗೇ ಈ ಮಗು ಬೇಡಾ, ಅಬಾರ್‍ಷನ್ ಮಾಡಿಬಿಡಿ…” ಎಂದ ಆಕೆಯತ್ತ ಸರ್ರನೆ ತಿರುಗಿದ ಡಾಕ್ಟರ್ ಕಾಂತಮ್ಮ. “ಅದಕ್ಕೇ ನೀನು ಕಾಡಿಸ್ತಾ ಇರೋದು… ಯಾಕೆ ಮದ್ವಯಾಗಿಲ್ವಾ?” ಎಂದು ಕೇಳಿದರು.

ಕಾನೂನುಬದ್ಧ ಗರ್‍ಭಪಾತಕ್ಕಾಗಿ ಬರುವ ಯಾವ ಮಹಿಳೆಯೇ ಆಗಲಿ ಅಪ್ಪಿತಪ್ಪಿ ಆಕೆಯ ಬಳಿ ಹೋದರೆ ಯಾವುದೋ ಘೋರವಾದ ಅಪರಾಧ ಮಾಡಿಬಂದ ಅಪರಾಧಿಯಂತೆ ನೋಡಿ ಕಟುವಾಗಿ ಮಾತನಾಡುತ್ತಿದ್ದ ರೀತಿ ಅಲ್ಲಿಯವರಿಗೆ ಚಿರಪರಿಚಿತ. ಹೊಸಬರಿಗೆ ಕಾದ ಸೀಸವನ್ನು ಕಿವಿಗೆ ಸುರಿದಂತಾಗುತ್ತಿತ್ತು. ಅವರ ಮುಂದಿನ ಪ್ರಶ್ನಾವಳಿಗಳು.

“ಯಾಕೆ ಗರ್‍ಭ ಧರಿಸೋಕೆ ಮುಂಚೆ ತಿಳೀಲಿಲ್ವಾ?”

“…”

“ಮಕ್ಕಳನ್ನು ಹೆತ್ತು ಬಿಸಾಕೋದು ಅಂದ್ರೆ ಕೋಳಿಮೊಟ್ಟೆ ಹಾಕಿದ ಹಾಗೇ ಅಂಡ್ಕೊಂಡಿದ್ದೀಯಾ ಹೇಗೆ?”

“ಆಪರೇಷನ್ ಮಾಡಿಸಿಕೊಂಡ್ರೆ ಮಾತ್ರ ಅಬಾರ್‍ಷನ್ ಮಾಡ್ತೀವಿ, ನಮಗಿದೇ ದಂಧೆ ಅಂದ್ಕೊಂಡಿದ್ದೀರಾ?”

ಮೇಲಿನ ಮಾಮೂಲಿ ಮಾತುಗಳನ್ನು ಕೇಳಿ ಕೇಳಿ ಮೀರಾಳಿಗೆ ತಲೆ ಚಿಟ್ಟುಹಿಡಿದು ಹೋಗಿತ್ತು. ಆಕೆ ವಯಸ್ಸಿನಲ್ಲಿ ಹಿರಿಯಳಂತೆ ಮೌನ ವಹಿಸಬೇಕಾಗುತ್ತಿತ್ತು. ಒಂದು ವೇಳೆ ಅಂತಹ ಸಂದರ್‍ಭ ಬಂದರೆ,

“ಏಯ್… ಅಂಜನಾ ನೀನೇ ಮಾಡಿಬಿಡು, ನಂಗೀ ಗರ್‍ಭಪಾತ ಮಾಡೋ ಕೆಲ್ಸಾ ತೀರಾ ಅಸಹ್ಯ ಪಾಪಭೀತಿ” ಎಂದು ಬೇರೆಯವರಿಗೆ ಒಪ್ಪಿಸಿಬಿಡುತ್ತಿದ್ದರು.

“ಮಾಡೋ ವಯಸ್ಸಿನಲ್ಲಿ ಎಲ್ಲಾ ತರಹಾನೂ ಮಾಡಿ ಮುಗಿಸಿದ್ದಾಳೆ. ಗರ್‍ಭಪಾತಗಳನ್ನು ಮಾಡಿಯೇ ದಿನಾ ಒಂದೊಂದು ಸೀರೆ ಕೊಂಡ್ಕೊಂಡು ಬರ್‍ತಾ ಇದ್ಳು ವಯಸ್ಸಾಯ್ತು ನೋಡು… ಈಗ ಕಾಶಿ ರಾಮೇಶ್ವರದ ನೆನಪು ಮಾಡ್ಕೊತಿದ್ದಾಳೆ” ಡಾಕ್ಟರ್ ವನಜಮ್ಮ ಆಕೆಯ ಬೆನ್ನ ಹಿಂದೆ ವ್ಯಂಗ್ಯವನ್ನಾಡಿ ವೃತ್ತಿಮತ್ಸರವನ್ನು ವ್ಯಕ್ತಪಡಿಸುತ್ತಿದ್ದರು.

ಇವರ ರೀತಿ ನೀತಿಗಳು ಹೊಸದಾಗಿ ಬಂದಿದ್ದ ಮೀರಾ ಮತ್ತು ಅಂಜನಾಗೆ ಅರ್‍ಥವಾಗಲು ಬಹಳ ಕಾಲ ಹಿಡಿದಿದ್ದವು. ಅನುಭವ, ವಯಸ್ಸು ಶಿಕ್ಷಣ ಎಲ್ಲದರಲ್ಲೂ ಹೆಚ್ಚಿರುವ ಇವರುಗಳು ಕಚ್ಚಾಡುವುದನ್ನೂ, ರೋಗಿಗಳೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿಯನ್ನು ಕಂಡು ನಿಜಕ್ಕೂ ನಮ್ಮ ಪ್ರೊಫೆಶನ್ ನೋಬಲ್ ಪ್ರೊಫೆಶನ್ನಾ?’ ಎಂದು ಅನೇಕ ಬಾರಿ ಕೇಳಿಕೊಳ್ಳುವಂತಾಗುತ್ತಿತ್ತು. ವೃತ್ತಿಗೆ ಸೇರುವಾಗ ಪ್ರಮಾಣವಚನ ಸ್ವೀಕರಿಸುವುದನ್ನು ಅಲ್ಲೇ ಮರೆತು ಬಂದುಬಿಟ್ಟಿದ್ದಾರೆಯೆ?

ಇವರ ನೈಮಣ್ಯವೆಲ್ಲಾ ಸಹೋದ್ಯೋಗಿಗಳನ್ನು ಬೆನ್ನ ಹಿಂದೆ ಹಂಗಿಸುವುದರಲ್ಲಿ, ರೋಗಿಗಳನ್ನು ಸರಿಯಾಗಿ ನೋಡದೆ ಕುಳಿತು ಕಾಡುಹರಟೆ ಹೊಡೆಯುತ್ತಾ ಕಾಲಹರಣಮಾಡುವುದರಲ್ಲೇ ವ್ಯರ್‍ಥವಾಗುತ್ತಿತ್ತು.

‘ಅಬ್ಬಾ… ಒಬ್ಬಳಿಗೇ ನೋಡಿ ಸಾಕಾಯ್ತು’ ಎಂದೇನಾದರೂ ಅಂದರೆ ಮುಗಿಯಿತು.

“ಏನ್ರಿ ಈ ವಯಸ್ಸಿನಲ್ಲಿ ಹೀಗಂತೀರಾ? ನಿಮ್ಮ ವಯಸ್ಸಿನಲ್ಲಿ ನಾವು ಇಪ್ಪತ್ತನಾಲ್ಕು ಗಂಟೇನೂ ದುಡೀತಿದ್ವಿ..

“…”

“ಇಂಥಾ ಕೇಸುಗಳನ್ನು ಸಾವಿರಾರು ಆಪರೇಷನ್ ಮಾಡಿ ಮುಗಿಸುತ್ತಿದ್ದಿ, ನಾವು ಓದುತ್ತಿದ್ದ ಕಾಲದಲ್ಲಿ ಹೀಗಿರಲಿಲ್ಲ.”

ಎಂದು ತಮ್ಮ ಗತಕಾಲದ ದಿನಗಳ ಸ್ಮರಣೆ ಮಾಡುತ್ತಾ ಉಳಿದವರ ತಲೆತಿನ್ನುವುದರ ಜೊತೆಗೆ, ಸಮಯವನ್ನು ಹಾಳು ಮಾಡುತ್ತಿದ್ದವರನ್ನು ಕಂಡು ಅಂಜನಾ ತುಟಿ ಬಿಗಿಹಿಡಿದು ಸಹನೆ ತಂದುಕೊಳ್ಳುತ್ತಿದ್ದರೆ ಮೀರಾ, “ನಿಮ್ಮ ಕಾಲದಲ್ಲಿ ಎರಡು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಬರಿತ್ತು ಮೇಡಂ… ಈಗ ಹದಿನಾಲ್ಕು ರೂಪಾಯಿಗಳಾಗಿವೆ. ಆಗ ನೀವು ತುಪ್ಪಾನಾ ನೀರು ಕುಡಿದ್ಹಾಗೆ ಕುಡೀತಿದ್ರಿ. ನಾವೀಗ ನೀರನ್ನೆ ತುಪ್ಪದ ರೀತಿ ಬಳಸಬೇಕಾಗಿದೆ… ಕಾಲ ಬದಲಾಗಿದೆ ಮೇಡಂ” ಎಂದು ಸೂಚ್ಯವಾಗಿ ಅವರ ಮಾತುಗಳನ್ನು ಖಂಡಿಸುವಂತೆ ಹೇಳುತ್ತಿದ್ದರೂ, ಅವರಿಗೆ ಮಾತಾಡುವ ಹುಮ್ಮಸ್ಸಿನಲ್ಲಿ ಅರ್‍ಥವಾಗದಾಗ ಮೀರಾ ತಟ್ಟನೆ ಅಲ್ಲಿಂದೆದ್ದು ಬಂದುಬಿಡುತ್ತಿದ್ದಳು.

ಈ ದಿನವೂ ಹಾಗೆಯೇ ಆಯಿತು. ಗರ್‍ಭಪಾತ ಮಾಡುವುದು ಕಾನೂನುಬದ್ಧವೆಂದ, ಪೇಪರಲ್ಲಿ, ದೂರದರ್‍ಶನದಲ್ಲಿಯೂ ಅಲ್ಲದೆ ಮನೆ ಮನೆಗೂ ಹೋಗಿ ಹೇಳುವ ಇಲಾಖೆಯ ಜನರೇ ಅಂತವರುಗಳು ಬಂದಾಗ ವಿಚಿತ್ರ ರೀತಿಯಲ್ಲಿ ವರ್‍ತಿಸುವುದು ಅದೆಷ್ಟು ನ್ಯಾಯಸಮ್ಮತ?

“ನಾನು ಮಾಡಲ್ಲಪ್ಪ ನಾನಿನ್ನೇನು ಆರು ತಿಂಗಳಲ್ಲಿ ರಿಟೈರಾಗಿಬಿಡ್ತೀನಿ ಮಾಡಿ ಮಾಡಿ ಸಾಕಾಗಿದೆ…”

“ನಾನೆಂದೂ ಮಾಡಲ್ಲ ಅಸಹ್ಯ…”

ಎನ್ನುವವರನ್ನು ಕಂಡ ಮೀರಾ,

“ಇವರನ್ನ ಕಂಡ್ರೆ ನಂಗೆ ಕಾಶಿಯಾತ್ರೆಗೆ ಹೋಗೋ ಬೆಕ್ಕುಗಳ ನೆನಪಾಗುತ್ತೆ.. ಕಣೆ, ದುಡಿದು ಕಾರು, ಮನೆ, ಒಡವೆ ವಸ್ತ್ರ ಎಲ್ಲಾ ಒಟ್ಟು ಮಾಡಿಕೊಂಡು ಈಗ ಸನ್ಯಾಸದ ಸೋಗು ಹಾಕ್ತಾರೆ” ಎಂದು ಟೀಕಿಸುತ್ತಿದ್ದಳು.

ರೋಗಿಗಳನ್ನು ಪರೀಕ್ಷಿಸುತ್ತಿದ್ದ ಮೀರಾಳ ಬಳಿಗೆ ಬಂದ ನರ್‍ಸ್,

“ಮೇಡಂ, ಆಕೆ ‘ಕಾಪರ್‌ಟೀ’ನೂ ಹಾಕಿಸ್ಕೋತಾಳಂತ… ಮೈನರ್ ಓ.ಟಿ.ಗೆ ಕಳುಹಿಸಲಾ?” ಎಂದು ಕೇಳಿದಳು.

“ಹೂಂ.. ಈಗ ರಷ್ ಜಾಸ್ತಿಯಿದೆ. ಮಧ್ಯಾಹ್ನ ಬರಲು ಹೇಳಿ” ಎಂದು,

“ಅದ್ಯಾರು.. ಆಕೆನಾ ಕರೀರಿ… ಆಗ್ಲಿಂದಾನೂ ನಿಂತೇ ಇದ್ದಾಳೇ… ಯಾರತ್ರಾನೂ ತೋರಿಸ್ಕೋತಾನೇ ಇಲ್ಲ…” ಗಂಗಾಳತ್ತ ನಿರ್‍ದೇಶಿಸಿ ಹೇಳಿದಳು.

“ಏನಮ್ಮ? ಬಂದು ತೋರಿಸ್ಕೋ” ಎಂದು ನರ್‍ಸ್ ಬಳಿ ಬಂದು ನಿಂತ ಗಂಗಾ, “ನಂಗೆ ದಿನಾ ತುಂಬಿದೆ ಅಡ್ಮಿಟ್ ಆಗ್ಬೇಕು. ಒಳ್ಳೆ ಡಾಕ್ಟ್ರು ಯಾರಿದ್ದಾರೆ?” ಎಂದು ಪಿಸುಗುಟ್ಟಿ ಕೇಳಿದಳು.

“ಒರಟಾಗಿ ಮಾತಾಡ್ತಾರೆ ಅಷ್ಟೆ ಎಲ್ರೂ ಒಳ್ಳೆಯವರೇ ಬಾ ತೋರಿಸ್ಕೋ” ಎಂದು ಕರೆದು ಮಲಗಿಸಿದಳು.

ಅವಳನ್ನು ಸ್ಥೂಲವಾಗಿ ಪರೀಕ್ಷಿಸಿದ ಅಂಜನಾ,

“ಲೇ ಮೀರಾ… ಇದು ಪ್ರಿವಿಯಸ್ ಸಿಝೇರಿಯನ್ ಸೆಕ್ಷನ್ ಕೇಸು ಕಣೆ ಈಗ್ಲೆ ಅಡ್ಮಿಟ್ ಮಾಡಿಬಿಡ್ತೀನಿ” ಎಂದು ಗಂಗಾಳತ್ತ ತಿರುಗಿದ ಅಂಜನಾ, “ದಿನ ತುಂಬಿದೇ ಏನಮ್ಮ?” ಎಂದು ಕೇಳಿದಳು.

“ಹೂಂ… ಮುಂದಿನ ಹತ್ತಕ್ಕೆ ಹೆರಿಗೆಯಾಗುತ್ತೇಂತಾ ಬರು ಕೊಟ್ಟಿದ್ದಾರೆ’ ಎಂದು ಗಂಗಾ ಹಳೆಯ ಚೀಟಿಗಳನ್ನೆಲ್ಲಾ ತೋರಿಸಿದಳು.

ಎಲ್ಲವನ್ನು ವಿವರವಾಗಿ ಓದಿಕೊಂಡ ಅಂಜನಾ, “ಈ ದಿನ ಇನ್ನೂ ಐದನೆಯ ತಾರೀಖು ಇದು ನಿಜವಾದ ಹೆರಿಗೆ ನೋವಲ್ಲ. ಆದ್ರೂ ಅಡ್ಮಿಟ್ ಆಗ್ಬಿಡಿ.. ಯಾವಾಗ ನೀವು ಸ್ವಲ್ಪ ನೋವು ಅ೦ದ್ರೂ.. ನಾವು ಆಪರೇಷನ್ ರೆಡಿ ಮಾಡ್ಬೇಕಾಗುತ್ತೆ” ಎಂದಳು.

“ಹಾಗೇ ಹೆರಿಗೆ ಆಗೋಲ್ವೇ ಡಾಕ್ಟರ್?” ಗಂಗಾ ಆತಂಕದಿಂದ ಕೇಳಿದಳು.

“ಊಹುಂ…. ಅರ್‍ಧ ಛಾನ್ಸ್ ಇದೆ ಅಷ್ಟೆ, ನನ್ನ ಪ್ರಕಾರ ಆಪರೇಶನ್ನೇ ಆಗ್ಬೇಕು. ನಿಮ್ಮವರಿಗೆ ಹೇಳಿಬಿಡಿ” ಎಂದ ಅಂಜನಾ.

“ಸಿಸ್ಟರ್ ಅಡ್ಡಿಶನ್ಗೆ ಕಳುಹಿಸಿ… ಎಲ್ಲಿ ಮತ್ತೊಂದು ಪೇಶಂಟ್ ಕಳುಹಿಸಿ” ಎಂದು ತನ್ನ ಕಾರ್‍ಯದಲ್ಲಿ ಮಗ್ನಳಾದಳು.

ಜನಸಂದಣಿ ನಿಧಾನವಾಗಿ ಮಧ್ಯಾಹ್ನವಾಗುವುದರಲ್ಲಿ ಕರಗುತ್ತಾ ಬಂದಿತ್ತು. ಗಂಗಾ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದಳು. ಪ್ರೀತಿಯ ಮಡದಿಯನ್ನು ವೈದ್ಯರ ಬಳಿ ಕಳುಹಿಸಿ ಭರವಸೆ ಆತಂಕ ಕಾತುರದಿಂದ ಚಿಕ್ಕ ಮಗುವಿನೊಂದಿಗೆ ಹೊರಗೆ ಕಾಯುತ್ತಾ ಚಿಕ್ಕಣ್ಣ ಕುಳಿತ.

ಮಧ್ಯರಾತ್ರಿಯಾಗಿತ್ತು,

ಸಿಝೇರಿಯನ್ ಸೆಕ್ಷನ್ ಆಪರೇಷನನ್ನು ಮುಗಿಸಿ, ಡಾಕ್ಟರ್ ಶಾಲಿನಿ ಹೋದ ಮೇಲೆ ವಾರ್‍ಡಿನ ಪುಸ್ತಕ ತೆರೆದು ಬರೆಯಲು ನರ್‍ಸ್ ಚಂದ್ರಾ ಕುಳಿತಳು. ರಾತ್ರಿಯ ಪಾಳಿಗೆ ಬಂದಾಗಿನಿಂದಲೂ ಬಿಡುವಿಲ್ಲದ ಹೆರಿಗೆ ವಾರ್‍ಡಿನ ಕೆಲಸದ ನಂತರ ಈಗಷ್ಟೆ ಸಮಯ ಸಿಕ್ಕಿದುದರಿಂದ ದಣಿದ ಮೈಯನ್ನು ಮುರಿದು ಆಕಳಿಸಿ ಬರೆಯಲು ಪೆನ್ನನ್ನು ಕೈಗೆತ್ತಿಕೊಂಡಳು.

ಹೆರಿಗೆ ವಾರ್‍ಡ್ ಪೋಸ್ಟಿಂಗ್ ಅಂದರೆ ಮುಗಿಯಿತು. ಒಮ್ಮೆ ಒಳಗೆ ಸೇರಿಬಿಟ್ಟರೆ, ಆಚೀಚೆ ಹೋಗುವ ಹಾಗೆಯೇ ಇರುವುದಿಲ್ಲ. ಯಾವ ಘಳಿಗೆಯಲ್ಲಿ ಯಾರಿಗೆ ನೋವು ಬರುತ್ತೋ ಯಾರು ಯಾವ ಸ್ಥಿತಿಯಲ್ಲಿ ಬರುತ್ತಾರೋ, ಹೇಳುವುದು ಕಷ್ಟ. ಹಾಗಾಗಿ ಕೇಸುಗಳಿರಲಿ, ಇಲ್ಲದಿರಲಿ, ಕುರ್‍ಚಿಗಂಟಿಕೊಂಡು ಕುಳಿತುಕೊಳ್ಳಬೇಕಾಗಿರುತ್ತಿತ್ತು.

“ಸಿಸ್ಟರ್ ನೀವು ಎಕ್ಸ್‌ಪರ್ಟ್ ಇದ್ದೀರಾ ನಾರ್‍ಮಲ್ ಡೆಲಿವರೀಸ್ ಇದ್ದರೆ ನೀವೇ ಮಾಡಿಬಿಡಿ…. ನಿಮಗೇನಾದ್ರೂ ಪ್ರಾಬ್ಲಮ್ ಅನ್ನಿಸಿದರೆ ಏಳಿಸಿ…” ಎಂದು ಡ್ಯೂಟಿ ರೂಮು ಸೇರಿ ಮಲಗಿಬಿಡುತ್ತಿದ್ದ ಡ್ಯೂಟಿ ಡಾಕ್ಟರುಗಳಿಗೆ ತಲೆಯಾಡಿಸಿ ಒಪ್ಪಿಗೆ ಸೂಚಿಸುತ್ತಿದ್ದಳು. ಯಾರು ಏನೇ ಮಾಡಿಕೊಳ್ಳಲಿ, ತನ್ನ ಕರ್‍ತವ್ಯವನ್ನು ತಾನು ಮಾತ್ರ ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದಳು. ಆದುದರಿಂದಲೋ ಏನೋ ಚಂದ್ರಾಳೆಂದರೆ ಎಲ್ಲಾ ವೈದ್ಯರುಗಳಿಗೂ ಒಂದು ವಿಧದ ಆದರ, ವಿಶ್ವಾಸ, ನರ್‍ಸಿಂಗ್ ವೃತ್ತಿಯವರಿಗೆಂದೇ ಮೀಸಲಗಿಡುತ್ತಿದ್ದ ನೈಟಿಂಗೇಲ್ ಪ್ರಶಸ್ತಿಯನ್ನು ಪಡೆದ ನಂತರ ತನ್ನ ಜವಾಬ್ದಾರಿಯೂ ಹೆಚ್ಚಾದಂತೆ ಭಾವಿಸಿದ್ದ ಚಂದ್ರಾ ಮತ್ತೂ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಮಾಡಿತ್ತು.

ನಿಧಾನವಾಗಿ ಯಾರೋ ತನ್ನತ್ತ ನಡೆದುಬಂದು, ನಿಂತಂತಾಗಿ ತಲೆ ಎತ್ತಿ ನೋಡಿದಳು.

ಹರಿಗೆಗಾಗಿ ಬಂದಿದ್ದ ತುಂಬುಗರ್‍ಭಿಣಿ ಗಂಗಾ ನಿಂತಿದ್ದಳು.

“ಏನು? ನೋವು ಬರ್‍ತಾ ಇದೆಯಾ?” ಕೇಳಿದಳು.

“ಹೂಂ… ಸ್ವಲ್ಪ ಸ್ವಲ್ಪ ಬಿಟ್ಟು ಬಿಟ್ಟು ಬರ್‍ತಾಯಿದೆ. ಬೆಳಿಗ್ಗೆ ನೋವಿರಲಿಲ್ಲ. ರಾತ್ರಿಯಿಂದ ಕಾಣಿಸ್ತಾಯಿದೆ… ಯಾವ ಡಾಕ್ಟ್ರೂ ಬಂದು ನೋಡೇ ಇಲ್ಲ…” ಎಂದಳು ಖಿನ್ನಳಾಗಿ.

“ಇನ್ನೂ ಟೈಂ… ಇದೆಯಲ್ಲ ನಾಳೆ ಸ್ಕ್ಯಾನಿಂಗ್ ಮಾಡಿಸಿದ ನಂತರ ತೀರ್‍ಮಾನ ಮಾಡಬಹುದು. ಜಾಸ್ತಿ ಓಡಾಡಬಾರದು ಹೋಗಿ ಮಲಗು” ಎಂದು ನಿಲ್ಲಿಸಿದ್ದ ಕೆಲಸವನ್ನು ಮುಂದುವರೆಯಿಸಿದಳು.

“ಸಿಸ್ಟರ್” ಸುತ್ತಮುತ್ತಲು ನೋಡಿದ ಗಂಗಾ ಮೆಲುವಾಗಿ ಕರೆದಳು.

ವಾರ್‍ಡಿನಲ್ಲಿ ನಾರ್‍ಮಲ್ ಡೆಲಿವರಿಯಾಗಿ ಬಂದಿದ್ದ ಒಂದೆರಡು ಕೇಸುಗಳನ್ನು ಬಿಟ್ಟರೆ ಮತ್ಯಾರೂ ಇರಲಿಲ್ಲ. ನಿದ್ದೆ ಬಂದ ಆಯಾಗಳು ಕುಳಿತಲ್ಲಿಯೇ ಒರಗಿಕೊಂಡಿದ್ದರು.

“ಏನು?” ಎನ್ನುವಂತೆ ಚಂದ್ರಾ ಅವಳತ್ತ ನೋಡಿದಳು.

“ಈ ರಾತ್ರಿಯಿಡೀ ನೀವೇ ಇರ್‍ತೀರಿ ಅಲ್ವಾ?” ಮಲುವಾಗಿ ಕೇಳಿದಳು.

“ಹೂಂ… ಯಾಕೆ?”

“ನೀವೇ ನಂಗೆ ಹೇಗಾದ್ರೂ ಹೆರಿಗೆ ಮಾಡಿಸಿಬಿಡಿ. ನೀವು-ತುಂಬಾ ಒಳ್ಳೇವ್ರು ಎಷ್ಟು ಚೆನ್ನಾಗಿ ಮಾತಾಡಿಸ್ತೀರಾ ನಿಮ್ಮ ಮುಖ ನೋಡಿದ್ರೆ ನೋವೇ ಮರ್‍ತುಹೋಗುತ್ತೆ… ಬೇರೆಯವರುಂದ್ರೆ ಯಾಕೋ ಭಯವಾಗುತ್ತೇ…”

ಚಂದ್ರಾ ಮೃದುವಾಗಿ ನಕ್ಕಳು.

“ಎಲ್ಲೂ ಒಳ್ಳೆಯವರೆ… ನೀನ್ಯಾರಿಗಾದ್ರೂ ಕೆಟ್ಟದ್ದು ಮಾಡಿದ್ದೀಯಾ?”

“ಊಹುಂ….?”

“ಹಾಗಾದ್ರೆ ನಿಂಗೆ ಯಾರೂ ಕೆಟ್ಟದ್ದು ಮಾಡಲ್ಲ. ಒಳ್ಳೆಯವರೋ ಕೆಟ್ಟವರೋ ಅದನ್ನು ತೆಗೆದುಕೊಂಡು ನೀನು ಮಾಡುವುದಾದರೂ ಏನು? ನಿಂಗೆ ಸುಖವಾಗಿ ಪ್ರಸವ ಮಾಡಿಸಿದ್ರೆ ಸಾಕುತಾನೆ?”

ಚಂದ್ರಾಳ ಮೃದುಮಾತು; ಮೆಲುನಗುವಿನಿಂದ, ಉತ್ತೇಜಿತಳಾದವಳಂತೆ ಗಂಗಾ ಇನ್ನು ಹತ್ತಿರ ಬಂದು ನಿಂತು.

“ನಿಮಗೆ.. ಗೊತ್ತಿಲ್ಲ ಸಿಸ್ಟರ್ ಹೆರಿಗೆ ಮಾಡಿಸಬೇಕಾದ್ರೆ ಏನೇನೋ ಬಯ್ತಾರಂತೆ ಹೊಡೀತಾರಂತೆ ಹೌದಾ?” ಆತಂಕದಿಂದ ಕಣ್ಣರಳಿಸಿ ಕೇಳಿದಳು.

ಚಂದ್ರಾಳ ಮುಖ ಗಂಭೀರವಾಯಿತು.

“ಹಾಗೆಲ್ಲಾ ನಿಂಗೆ ಹೇಳಿದ್ದು ಯಾರು?”

“ಎಲ್ರೂ ಹೇಳ್ತಾರೆ. ದುಡ್ಡು ಕೊಟ್ಟರೆ ಹೆರಿಗೆ ಮಾಡಿಸ್ತಾರಂತೆ ಇಲ್ಲದಿದ್ದರೆ ಕಾಯಿಸಿ ಕಾಯಿಸಿ ಕೊನೆಗೆ ಆಪರೇಷನ್ ಮಾಡಿಬಿಡ್ತಾರಂತೆ…”

“ನೀವುಗಳೇ ಹೀಗೆ ಬೇಡವಾದುದನ್ನೇ ತಲೇಲಿ ತುಂಬಿಸಿಕೊಂಡು ಬಂದು, ಇಲ್ಲಿ ನಮ್ಮ ತಲೇನೂ ಕೆಡಿಸಿಬಿಡ್ತೀರಾ… ಸುಮ್ಮಸುಮ್ಮನೆ ನಿಮಗೆ ತೊಂದ್ರೆ ಕೊಡೋಕೆ ನಾವೇನು ಹರಕೆ ಹೊತ್ತು ಬಂದಿರುತ್ತೇವಾ?” ಅವಳ ಮಾತನ್ನು ಅರ್‍ಧದಲ್ಲಿಯೇ ಕಡಿದು ಅಸಹನೆಯಿಂದ ಹೇಳಿದಳು.

“ತಪ್ಪು ತಿಳ್ಕೊಬೇಡಿ ಸಿಸ್ಟರ್.. ಬೆಳಿಗ್ಗೆಯಿಂದ ಹೊರಗಡೆ ನನ್ನ ಗಂಡ ಊಟವಿಲ್ಲದೆ ಕಾಯ್ತಾ ಇದ್ದಾರೆ. ಚಿಕ್ಕ ಮಗು ಬೇರೆ. ನಾವು ಬಡವರು ಜಾಸ್ತಿ ಹಣ ಕೊಡಲಾರೆವು. ನಂಗ್ಯಾಕೋ ಹೆದರಿಕೆಯಾಗ್ತಾ ಇದೆ…” ಹೇಳುತ್ತಾ ಹೋದಂತೆ ಗಂಗಾಳ ಕಣ್ಣುಗಳಲ್ಲಿ ನೀರು ತುಂಬಿ ಬರತೊಡಗಿತ್ತು.

ತುಂಬು ಗರ್‍ಭಿಣಿಯ ಕಣ್ಣುಗಳಲ್ಲಿ ಮಿಂಚಿದ ಕಂಬನಿ ಕಂಡು ಚಂದ್ರಾಳ ದನಿ ಮೃದುವಾಯಿತು.

“ಒಂದ್ನಿಮಿಷ ಕೂತ್ಕಮ್ಮ… ಎಲ್ಲೋ ಯಾರೋ ಹಣ ಕಿತ್ಕಂಡ್ರು ಅಂದ್ರೆ ಹಾಗೇಂತಾ ಯಾಕೆ ತಿಳ್ಕೊಬೇಕು?…”

“ಹಾಗಲ್ಲ….”

ಹಾಗೂ ಇಲ್ಲ… ಹೀಗೂ ಇಲ್ಲ. ನಿಮ್ಮ ಹತ್ರ ದುಡ್ಡು ಕಿತ್ಕೊಂಡು, ಸರಿಯಾಗಿ ನೋಡಿಕೊಳ್ಳದಿದ್ದವರನ್ನು ಹಿಡಿದು ದೂಷಿಸಿ, ದೂರು ನೀಡಿ… ಅದು ಬಿಟ್ಟು ಆಸ್ಪತ್ರೆಯಲ್ಲಿರೋ ಎಲ್ರೂ ಹಾಗೇಂತ ಭಾವಿಸ್ಕೊಂಡ್ರೆ ಹೇಗೆ?”

ಗಂಗಾಳ ಮುಖದಲ್ಲಿ ಭೀತಿ ಕಾಣಿಸಿಕೊಂಡಿತು, ತಾನು ಮಾತನಾಡಿದ್ದು ಅತಿಯಾಯಿತೆಂತೋ ಅಥವಾ ತನ್ನ ನೇರ ಮಾತುಗಳಿಂದ ತನಗೆಲ್ಲಿ ಅಪಾಯ ಮಾಡುವರೆಂದೋ ಏನೋ ಹಣೆಯಲ್ಲಿ ಬೆವರು ಕಾಣಿಸಿಕೊಂಡಿತು.

“ಇಲ್ಲಿ ನಿಂಗ್ಯಾರೂ ಅಪಾಯ ಮಾಡೋಲ್ಲ… ನಿಂಗೆ ನೋವು ಕಾಣಿಸಿಕೊಂಡ ಕೂಡ್ಲೆ ತಿಳಿಸು. ಡಾಕ್ಟರನ್ನು ಕರೆಯಿಸಿ ತೋರಿಸುತ್ತೇನೆ…” ಎಂದಳು ಚಂದ್ರಾ.

“ಡಾಕ್ಟ್ರು ಅಂದ್ರೆ ಯಾರು ಬರ್‍ತಾರೆ?”

“ನಿನ್ನನ್ನು ನೋಡಿ ಅಡ್ಮಿಷನ್ ಮಾಡಿರೋರು ಬತ್ತಾರೆ. ಇಲ್ಲದಿದ್ದರೆ ಡ್ಯೂಟಿಯ ಮೇಲಿದ್ದ ಯಾವ ಡಾಕ್ಟರಾದರೂ ಸರಿ ನೋಡ್ತಾರೆ.. ನೀನು ಧೈರ್‍ಯವಾಗಿರು. ಈಗ ನೀನು ಹೋಗು.” ಸಾಂತ್ವನಗೊಳಿಸಿದಷ್ಟು ಅವಳ ಅನುಮಾನ ಜಾಸ್ತಿಯಾಗತೊಡಗಿತ್ತು.

“ಅವರಿಗೇನಾದ್ರೂ ದುಡ್ಡು ಕೊಡ್ಬೇಕಾ? ಹಾಗಿದ್ರೆ ನಮ್ಮೆಜಮಾನ್ರಿಗೆ ಹೇಳ್ಬೇಕು…” ತನ್ನ ಆತಂಕವನ್ನಾಕೆ ವ್ಯಕ್ತಪಡಿಸಿದಳು.

“ನಾನು ಬರೀಲೋ ಬೇಡ್ವ?” ಎಂದು ಮುಖ ಗಂಟಿಕ್ಕಿದಾಗ, “ಇಲ್ಲ… ಬರೀರಿ… ನಾನು ಹೋಗ್ತಿನಿ…”

ಗಂಗಾ ಅಲ್ಲಿಂದ ಹೋದರೂ ನರ್‍ಸ್ ಚಂದ್ರಾಳಿಗೆ ಮುಂದೆ ಬರೆಯಲಾಗಲಿಲ್ಲ. ಗಟ್ಟಿ ನೆಲವೆಂದು ಆಶ್ರಯಿಸಿ ವಿಶ್ವಾಸದಿಂದ ಬರುವವರಿಗೆ ತಾವು ನಿಂತ ಜಾಗ ಕೆಸರಿನದು. ತಮ್ಮನ್ನು ನೆಲೆಯೂರದಂತೆ ಮಾಡದೆ ಮುಳುಗಿಸುವಂತಹುದು ಎಂಬುದು ತಿಳಿದಾಗ ಅವರ ಮುಖದಲ್ಲಿನ ತಾತ್ಸಾರ ಕಂಡು ಪಿಚ್ಚೆನಿಸುತ್ತಿತ್ತು. ತನ್ನ ಸಿಬ್ಬಂದಿ ವರ್‍ಗದವರ ಬಗ್ಗೆ ತೀರಾ ವಿಶ್ವಾಸದಿಂದ ಪರವಹಿಸಿ ಮಾತನಾಡಿದ್ದು ವ್ಯರ್‍ಥವೆನಿಸುತ್ತಿತ್ತು. ತನ್ನ ಸಹೋದ್ಯೋಗಿಗಳ ಮುಂದೆ ಬೇಸರದಿಂದ ಚಂದ್ರಾ ಆಡಿದರೆ,

“ಅಯ್ಯೋ.. ಬಿಡೇ… ನೀನ್ಯಾಕೆ ಈ ಆಸ್ಪತ್ರೆಯ ಬಗ್ಗೆ ತಲೆ ಕೆಡಿಸಿಕೊಳ್ತಿಯಾ?.. ದೊಡ್ಡವರೇ ತಿನ್ನಬೇಕಾದ್ರೆ.. ಚಿಕ್ಕವರದೇನು. ನರ್‍ಸ್ ಲೀಲಾ ತೇಲಿಸಿ ಹಗುರಾಗಿ ಮಾತನಾಡಿದ್ದಳು.

“ಹೀಗೆಲ್ಲಾ ಆಗಬಾರದು ಅಲ್ವಾ?”

“ಆಗಬಾರದೂಂದ್ರೆ? ನಾವು ಬೇಡಾಂದ್ರೂ ಏನೇನಾಗ್ಬೇಕೋ ಎಲ್ಲಾ ಆಗೇ ಆಗುತ್ತೆ. ನಾವೇನು ಬಿಡು ದೊಡ್ಡ ದೊಡ್ಡ ಡಿಗ್ರಿ ಹೊಂದಿದ ವೈದ್ಯರ ಕೈಕೆಳಗೆ ಕೆಲಸ ಮಾಡ್ತಿದ್ದೀವಿ. ಆದರೆ ಅವರೇ ಡಾಕ್ಟರುಗಳಾಗಿ, ಅಷ್ಟು ಓದಿದ್ದರೂ ಅಷ್ಟು ವಯಸ್ಸಾದರೂ ಒಬ್ಬರನ್ನೊಬ್ಬರು ಹೀಯಾಳಿಸಿ ಮಾತನಾಡಿಕೊಂಡು, ಸಾಧನೆಯ ತೃಪ್ತಿಪಟ್ಟುಕೊಂಡು ಮನೆಗೆ ಹೋಗುವುದನ್ನು ನೀನು ನೋಡಿಲ್ಲವಾ?”

“…”

“ಇವರುಗಳ ಕೊಳಕು ರಾಜಕೀಯದಿಂದ ರೋಗಿಗಳಿಗೆ ಆಗುವ ಅನಾನುಕೂಲದ ಬಗ್ಗೆ ಯೋಚಿಸುವುದು ಬೇಡವೆ? ಹಾಗಾಗಿಯೇ ಜನ ಬರೋಕೆ ಹೆದರೋದು” ಎಂದು ಚಂದ್ರಳ ಮುಖ ಮುರಿದಂತೆ ಹೇಳುತ್ತಿದ್ದಳು. ಅವಳು ಹೇಳಿದುದರಲ್ಲಿ ಯಾವುದೂ ಸುಳ್ಳಿರಲಿಲ್ಲ. ಆದರೆ ಜೀರ್‍ಣಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಮಾನವೀಯತೆ, ಕೋಮಲ ಭಾವನೆಗಳಿಗೆ ಹೆಚ್ಚು ಅವಕಾಶವಿರುವ ಈ ವೃತ್ತಿಯಲ್ಲಿ ಅವುಗಳ ಬಗ್ಗೆಯೇ ತಿಳಿಯದಂತೆ ವರ್‍ತಿಸುವಾಗ, ಆಶ್ಚರ್‍ಯದ ಜೊತೆಗೆ ಅಸಹ್ಯವೂ ಆಗುತ್ತಿತ್ತು. ಹಣಕ್ಕಾಗಿ ರಣಹದ್ದುಗಳಂತೆ, ಬಂದ ಶ್ರೀಮಂತ ರೋಗಿಗಳ ಸುತ್ತ ಹಾರಾಡುವುದನ್ನು ಕಂಡಾಗ, ಭೂಮಿ ಬಾಯಿ ತೆರೆದು, ತಮ್ಮನ್ನು ನುಂಗಬಾರದೇ ಎನ್ನಿಸುತ್ತಿತ್ತು. ನರ್‍ಸಾಗಿದ್ದ ತಮಗೆ ಇಷ್ಟವಾಗದಿದ್ದರೂ ಜೊತೆ ಜೊತೆಯಾಗಿ ಕೆಲಸ ಮಾಡಲೇಬೇಕಾಗುತ್ತಿತ್ತು. ಹಾಗೇನಾದರೂ, ಧಿಕ್ಕರಿಸುವಂತಹ ಮಾತುಗಳನ್ನಾಡಿದರೆ ದಢೀರನೆ ವಾರ್‍ಡುಗಳಿಂದ ಬೇರೆ ವಾರ್‍ಡುಗಳಿಗೆ ಕಳುಹಿಸಿಬಿಡುತ್ತಿದ್ದರು. ಎಲ್ಲೆಲ್ಲೋ… ಅದೇ ಹೆಸರು… ಭರವಸೆಯಿಂದ ಕಾಲೂರಲು ಬಂದವರನ್ನು ಹೂತುಹೋಗುವಂತೆ ಮಾಡುತ್ತಿದ್ದ ಕೆಸರಿನ ಜನರ ನಡುವೆ ತಾವರೆಯಂತಹ ಜನರೂ ಇದ್ದಾರೆ. ಅಂತಹವರನ್ನು ಮೂರ್‍ಖರೆಂದು ಹೀಯಾಳಿಸಿ, ಖಿನ್ನರನ್ನಾಗಿಸುವುದೇ ತಮ್ಮ ಆದ್ಯ ಕರ್‍ತವ್ಯವೆಂದು ಭಾವಿಸಿ ವೈದ್ಯಕೀಯ ವೃತ್ತಿಗೆ ಕಪ್ಪು ಚುಕ್ಕೆಯಾಗಬಹುದಾದಂತಹವರೂ ಇದ್ದರು. ವೈದ್ಯರೆಂದರೆ ಯಾರಿಗೆ ಏನು ಬೇಕಾದರೂ ಅನ್ನಬಹುದು ಎಂಬ ಅಹಂಭಾವ ತುಂಬಿದ ಕೃತಕ ಮೂರ್‍ತಿಗಳನ್ನು ಕಂಡು ಜಿಗುಪ್ಸೆಯಾಗುತ್ತಿತ್ತು.

“ಸಿಸ್ಟರ್” ಹತ್ತಿರದಲ್ಲೇ ಯಾರೋ ಕರೆದಂತಾಗಿ ಬೆಚ್ಚಿಬಿದ್ದು ಚಂದ್ರಾ ನೋಡಿದಳು.

ಡಾಕ್ಟರ್ ಮೀರಾ ನಿಂತಿದ್ದಳು. ಪಕ್ಕದಲ್ಲೇ ಸೊಂಟ ಹಿಡಿದುಕೊಂಡು ನೋವಿನಿಂದ ಮುಖ ಕಿವಿಚಿಕೊಂಡು ನಿಂತಿದ್ದ ತುಂಬು ಗರ್‍ಭಿಣಿಯೂ ನಿಂತಿದ್ದಳು. ಚಂದ್ರಾಳೀಗ ವಾಸ್ತವ ಲೋಕಕ್ಕೆ ಬಂದಳು.”

“ಏನು ಡಾಕ್ಟರ್? ನೀವೇ ಬಂದ್ಬಿಟ್ರಿ?….” ಎನ್ನುತ್ತಾ ಚಂದ್ರ ಎದ್ದು ನಿಂತಳು.

“ರಿಸೀವಿಂಗ್ ವಾರ್‍ಡ್‌ನಲ್ಲಿ ನಾನೊಬ್ಳೆ ಇರೋದು. ಲೇಬರ್ ಕೇಸಸ್ ಇದ್ರೆ ನಾವೇ ನೋಡ್ಕೋಬೇಕು… ಶಾಲಿನಿ ಏನೋ ಕೆಲಸವಿದೇಂತ ಹೋಗಿದ್ದಾಳೆ… ಅವಳು ಬರುವವರೆಗೂ ನನ್ನನ್ನೇ ಕರೀಬೇಕು ಸರೀನಾ?” ಎಂದ ಮೀರಾ.

“ಇದು ಸೂಪರಿಟೆಂಡೆಂಟ್ ಕಮಲಾಬಾಯಿಯವರು ಕಳುಹಿಸಿದ ಕೇಸು. ನಾರ್‍ಮಲ್ ಡೆಲಿವರಿಯಾಗಬಹದು. ಆದರೂ ಅವರೇ ಬಂದು ಮಾಡಿಸ್ತಾರಂತೆ. ಏನಾದ್ರೂ ಪ್ರಾಬ್ಲಮ್ ಅನ್ನಿಸಿದರೆ ಹೇಳಿ ಕಳುಹಿಸಿ ಇಂಟರ್‍ಕಾಮ್ ಫೋನು ಕೆಟ್ಟಿದೆ. ಒಮ್ಮೊಮ್ಮೆ ತಂತಾನೆ ಸರಿಯಾಗುತ್ತೆ. ಇಲ್ಲಿಯ ಜನರ ತರಹ ಇದೂ ವಿಚಿತ್ರವೇ” ಎನ್ನುತ್ತಾ ಬಂದು ನಿಂತ ರೋಗಿಯನ್ನು ಮಲಗಿಸಲು ಆಯಾಳನ್ನು ಕರೆದರು.

“ಇಲ್ಲಿಯೂ ಕೂಡಾ ನಾನೊಬ್ಳೆ ಇದ್ದೀನಿ…. ಮೇಡಂ… ನನ್ನ ಜೊತೆಯ ಸ್ಟಾಫ್… ರಜೆ ಹಾಕಿದ್ದಾರೆ…” ಎಂದ ಚಂದ್ರಾ ಮೀರಾಳ ಕೈಯಿಂದ ಕೇಸ್ ಷೀಟನ್ನು ತೆಗೆದುಕೊಂಡು ತಮಗಾಗಿ ಬರೆದಿದ್ದ ಇನ್ಸ್‍ಟ್ರಕ್ಷನ್‌ಗಳನ್ನು ಓದಿಕೊಳ್ಳತೊಡಗಿದಳು.

“ಎನಿಮಾ ಕೊಟ್ಟಾಗಿದೆ. ಪ್ರಿಪೇರ್ ಮಾಡಾಗಿದೆ… ಯಾರೋ ಮಿನಿಸ್ಟರ್ ಕಡೆಯವರಂತೆ. ಆದ್ದರಿಂದ ದೊಡ್ಡವರೇ ಹೆರಿಗೆ ಮಾಡಿಸೋಕೆ ಬರ್‍ತಾರೆ… ಡ್ರಿಪ್‌ಗೆ ರೆಡಿಮಾಡಿ ಅಷ್ಟರಲ್ಲಿ ಬರ್‍ತೀನಿ” ಎಂದ ಮೀರಾ ಮಲಗಿದ ಗರ್‍ಭಿಣಿಯನ್ನು ಪುನಃ ಪರೀಕ್ಷಿಸಿ ನೋಡಿ,

“ಹೆದರಬೇಡಿ. ಮಗು ಚೆನ್ನಾಗಿದೆ… ನೋವು ಇನ್ನೂ ಈಗ ಶುರುವಾಗಿದೆ. ಎರಡನೆಯದು ತಾನೇ. ಗಾಬರಿಗೆ ಅವಕಾಶವಿಲ್ಲ…’ ಎಂದು ಹೇಳಿ,

“ಸಿಸ್ಟರ್ ಬರ್‍ಲ್?…” ಎಂದು ಸ್ಟೆತಾಸ್ಕೋಪನ್ನ ಜೇಬಿನೊಳಗಿಟ್ಟುಕೊಳ್ಳುತ್ತಾ ಹೊರಟುಹೋದಳು.

“ಡಾಕ್ಟರ್..” ಚಂದ್ರಾ ಕರೆದಳು.

“ಏನು?… ಅಲ್ಲಿಂದಲೇ ತಿರುಗಿ ನಿಂತು ಕೇಳಿದ ಮೀರಾಳ ಮುಖ ನೋಡಿದ ಚಂದ್ರಾ,

ಈಗ ನೀವು ಕರ್‍ಕೊಂಡು ಬಂದಿರೋಳ ರೇಷ್ಮೆ ಸೀರೆ ಬದಲಾಯಿಸಿ, ಹಾಸ್ಪಿಟಲ್ ಗೌನ್ ಹಾಕ್ಲಾ?…” ಕೇಳಿದಳು.

“ಹೂಂ… ಹಾಗೆ ಮಾಡಿ…”

ಬೆಳಿಗ್ಗೆ ಅಡ್ಮಿಶನ್ ಮಾಡಿದ ಪೇಶಂಟ್ ಒಂದನ್ನು ನೋಡ್ಬೇಕಿತ್ತು. ಸ್ವಲ್ಪ ಸ್ವಲ್ಪ ನೋವು ಅಂತಾಳೆ…”

“ಜಾಸ್ತಿ. ನೋವು ಬರಲಿ ಬಿಡು…”

“ಇಲ್ಲ… ಅದು ಒಮ್ಮೆ ಸಿಝೇರಿಯನ್ ಆದ ಕೇಸು, ಅದಕ್ಕೆ ತಿಳಿಸಿದೆ.

“ಯಾರು ಅಡಿಶನ್ ಮಾಡಿದ್ದು?”

“ಡಾಕ್ಟರ್ ಅಂಜನಾ. ಅವರಿರ್‍ಬೇಕು…”

“ಸರಿ ಮಲಗಿಸಿರಿ… ಒಂದತ್ತು ನಿಮಿಷದಲ್ಲಿ ಬಂದು ಬಿಡ್ತೀನಿ, ಅಲ್ಲಿ ಯಾವುದಾದರೂ ಕೇಸು ಬಂದಿರ್‍ಬೇಕು…” ಎನ್ನುತ್ತಾ ವಾರ್‍ಡನ್ನು ದಾಟಿ ಹೋದಳು.

ಚಂದ್ರಾ ಬಂದ ರೋಗಿಯನ್ನು ಗೌನ್ ಹಾಕಿಸಿ ಮಲಗಿಸುವಷ್ಟರಲ್ಲಿ ‘ವ್ಹೀಲ್ ಚೇರ್ ಮೇಲೆ ಮತ್ತೊಂದು ಕೇಸನ್ನು ವೇಗವಾಗಿ ತಳ್ಳಿಕೊಂಡು ಬಂದರು. ಮಧ್ಯವಯಸ್ಸಿನ ಮಹಿಳೆ… ತುಂಬು ಗರ್‍ಭಿಣಿ, ನೋವಿನಿಂದ ಕಿರುಚಿಕೊಳ್ಳುತ್ತಿದ್ದಳು. ಹಿಂದೆಯೇ ಧಾವಿಸಿಬಂದ ಸಂಬಂಧಿಕರನ್ನು ಹೊರಗೆ ಬಲವಂತದಿಂದ ಕಳುಹಿಸಲಾಯಿತು.

ವೀಲ್ ಚೇರ್ ನಿಂದ ಏಳಿಸಿ, ಹೆರಿಗೆಯ ಟೇಬಲ್ಲಿನ ಮೇಲೆ ಮಲಗಿಸುವಷ್ಟರಲ್ಲಿ ಸಾಕುಸಾಕಾಯಿತು.

“ಬಸ್ರೀಂತಾ ಬರೀ ತಿನ್ನಿಸಿ ತಿನ್ನಿಸಿ ದಪ್ಪ ಮಾಡಿಬಿಡ್ತಾರೆ. ಇವರನ್ನು ಹೊತ್ತು ಹಾಕುವಷ್ಟರಲ್ಲಿ ನಮ್ಮ ಹೆಣ ಬಿದ್ದು ಹೋಗುತ್ತೆ…” ಬಂದವಳನ್ನು ಹೊತ್ತುಹಾಕಿದ ಆಯಾಗಳಿಬ್ಬರೂ ಗೊಣಗಿದರು… ಆಯಾಸದಿಂದ ಮೇಲುಸಿರು ಬಿಡುತ್ತಿದ್ದರು.

ಖಾಲಿ ಚೇರನ್ನು ತಳ್ಳಿಕೊಂಡು ಹೊರಟವರು ಬಾಗಿಲಲ್ಲಿ ಬಂದು ನಿಂತ ಗಂಗಾಳನ್ನು ಕಂಡು,

“ಏನಮ್ಮಾ?… ನೋವು ಶುರುವಾಯ್ತಾ?” ಎಂದು ಕೇಳಿದರು.

“ಸಿಸ್ಟರ್…” ಗಂಗಾ ಚಂದ್ರಾಳನ್ನು ಕರೆದಳು.

ಬಂದವಳ ಹೆರಿಗೆಗಾಗಿ ತಯಾರಿ ನಡೆಸಿದ್ದ ಚಂದ್ರಾ,

“ಏನೇ? ನೋವು ನಿಜವಾಗಿಯೂ ಬರ್‍ತಾ ಇದೆಯಾ? ಇಲ್ಲಾ… ಹೆದರ್‍ಕೊಂಡು ಬಂದಿದ್ದೀಯಾ?” ನಿಂತಲ್ಲಿಂದಲೇ ಕೇಳಿದಳು.

“ಊಹುಂ ಸ್ವಲ್ಪ ಸ್ವಲ್ಪ ನೊವೇನೋ ಬರ್‍ತಾಯಿದೆ ಆದರೆ… ರಕ್ತ ಹೋಗ್ತಾಯಿದೆ” ಎನ್ನುತ್ತಾ ಒಳಗೆ ಬಂದವಳು,

“ದೇವರ ದಯದಿಂದ ನೀವಿದ್ದಾಗಲೇ ಹೆರಿಗೆಯಾದ್ರೆ ಸಾಕು. ಇಲ್ಲದಿದ್ದರೆ ಸತ್ತೇಹೋಗ್ತಿನಿ” ಎಂದಳು.

ಅಷ್ಟರಲ್ಲಿ ಸ್ಕ್ರೀನಿನಾಚೆಯಿಂದ ಕಿಟಾರನೆ ಕಿರಿಚಿದ ದನಿ ಬಂದಿತು, ಹಿಂದೆಯೇ,

“ಅಯ್ಯೋ… ನಾ ತಡೀಲಾರೆನಪ್ಪ ದೇವರೇ” – ಅಳುವಿನೊಂದಿಗೆ ಬಂದ ಮಾತುಗಳನ್ನಾಲಿಸಿದ ಗಂಗಾ,

“ಅವಳ್ಯಾಕೆ ಅಷ್ಟು ಕಿರಿಡ್ತಾಳೆ.. ಅಷ್ಟೊಂದು ನೋವಾಗುತ್ತಾ? ನಂಗೆ ಅಷ್ಟು ನೋವು ಬರ್‍ತಾನೇ ಇಲ್ಲ…”

-ಚಂದ್ರಾಳ ತೋಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕೇಳಿದಳು. ಅವಳ ಕಣ್ಣುಗಳು ಭೀತಿಯ ಕೊಳಗಳಾಗಿದ್ದವು.

“ನಾವು ಹೇಳಿದ್ಹಾಗೆ ಕೇಳು ಸುಮ್ಮನೆ ಹೋಗಿ ಮಲಗಿಕೋ.. ಡಾಕ್ಟ್ರು ಬಂದ ಕೂಡಲೇ ಸೇರಿಸ್ತೀನಿ. ಕೇಸುಗಳು ಜಾಸ್ತಿ ಆಗ್ತಾ ಇವೆ” ಎನ್ನುತ್ತಾ ಚಂದ್ರಾ ಪ್ಲಾಸ್ಟಿಕ್ ಏಪ್ರನ್ ಧರಿಸಿ, ಕೈಗಳನ್ನು ತೊಳೆದು ರಬ್ಬರಿನ ಗ್ಲೌಸುಗಳನ್ನು ಧರಿಸಿ ಆಗತಾನೇ ಬಂದಿದ್ದರೋಗಿಯ ಬಳಿ ಬಂದು ನಿಂತಳು.

ಆಯಾಗಳಿಬ್ಬರೂ ಅಕ್ಕಪಕ್ಕದಲ್ಲಿ ಅವಳ ಕಾಲುಗಳನ್ನು ಹಿಡಿದು ನಿಂತಿದ್ದರು. ಆಕೆ ನೋವಿನಿಂದ ಕಿರಿಚುತ್ತಿದ್ದಳು.

“ಮೈ ಹಣೆ… ಮುಖವೆಲ್ಲಾ ಬೆವರ್‍ತಾ ಇದೆ… ಈಗ ಹೆರಿಗೆ ನೋವು ಜಾಸ್ತಿಯಾಗಿದೆ… ಆಯಾ ಹೇಳುತ್ತಿದ್ದಳು.

“ಈ ಸಲ ನಾನು ಉಳಿಯೋಲ್ಲ… ಸಿಸ್ಟರ್… ದಯವಿಟ್ಟು ಡಾಕ್ಟರನ್ನ ಕರೀರಿ… ನಾನೆಷ್ಟು ಬಡ್ಕೊಂಡೆ… ಇರೋಮಕ್ಳು ಸಾಕೂಂತ ಅವರಿಗೆ ಗಂಡು ಮಗೂನೇ ಬೇಕಂತೆ ಹಾಗಂತ ನಾನು ಎಷ್ಟೂಂತ ಹೆಣ್ಣು ಮಕ್ಕಳನ್ನು ಹೆರುತ್ತಾ ಕೂರಲಿ?” ಆಕೆ ಅಳುತ್ತಾ ಮಧ್ಯೆ ಮಧ್ಯೆ ನರಳುತ್ತಾ ಹೇಳುತ್ತಿದ್ದಳು.

“ಇದು ಎಷ್ಟನೆಯದು?” ಚಂದ್ರಾ ಕೇಳಿದಳು.

“ಐದನೆಯದು. ಐದೂ ಹೆಣ್ಣು ಮಕ್ಕಳೇ, ಗಂಡು ಮಗು ಬೇಕೂಂತ ಅದೇನು ಹೊರಿಸಿ ಕೊಡ್ತಾರೋ ಏನೋ… ಅಯ್ಯೋ ಅಮ್ಮಾ.. ತಡೀಲಾರೆ ನನ್ನ ಹೊಟ್ಟೆ ಸೀಳಿ ಹೋಗ್ತಾ ಇದೇಂತ ಅನ್ನಿಸ್ತಾಯಿದೆ… ಯಾರಾದ್ರೂ ಡಾಕ್ಟರನ್ನ ಕರೀರಿ… ಹೆಚ್ಚಾಗುತ್ತಿದ್ದ ನೋವಿನಿಂದ ಆಕೆ ಪ್ರಲಾಪಿಸುತ್ತಿದ್ದಳು. ಅವಳ ಕಣ್ಣುಗಳಿಂದ ನೀರು ಹರಿಯುತ್ತಿತ್ತು. ಹಣೆ, ಮುಖದ ತುಂಬಾ ಬೆವರು ಸುರಿಯುತ್ತಿತ್ತು. ಹೆದರಿಕೆಯಿಂದ ಆಕೆ ನಡುಗುತ್ತಿದ್ದಳು… ತಲೆಗೂದಲು ಕೆದರಿ ಹರಡಿತ್ತು. ತೊಟ್ಟಿದ್ದ ಸೀರೆಯ ಪರಿವೇ ಇಲ್ಲದವಳಂತೆ ಒದ್ದಾಡುತ್ತಿದ್ದಳು.

“ಗೌನ್ ಯಾಕೆ ಹಾಕಿಕೊಂಡು ಕರ್‍ಕೊಂಡ್ ಬರ್‍ಲಿಲ್ಲ. ಈಗ ನೋಡು…” ಚಂದ್ರಾ ಗದರಿದಳು.

“ನೀವೇನೋ ಹೇಳಿಬಿಡ್ತೀರಾ ‘ಎನಿಮಾ’ ಕೊಡ್ಸಿಕೊಳ್ಳೋಕೆ ಆಳೆತ್ತರ ಹಾರಾಡಿದಳು. ಇನ್ನು ಅಲ್ಲಿ ಹಡೆದುಬಿಟ್ಟಾಳೂಂತ ಕರ್‍ಕೊಂಡ್ ಬಂದ್ವಿ…”

ಆಯಾಳ ಮಾತಿನ್ನೂ ಮುಗಿದಿರಲಿಲ್ಲ. ಒಮ್ಮೆ ಇಡೀ ಲೇಬರ್ ವಾರ್‍ಡ್ ನಡುಗುವಂತೆ ಚೀರಿದ ಆಕೆಯ ಚೀತ್ಕಾರ ಅಡಗುವಷ್ಟರಲ್ಲಿ ಎಳೆಯ ಮಗುವಿನ ಆಕ್ರಂದನ ಲೇಬರ್ ವಾರ್‍ಡನ್ನು ತುಂಬಿಕೊಂಡಿತು.

ನಿಧಾನವಾಗಿ ಮಗುವನ್ನು ತಾಯಿಯಿಂದ ಬೇರ್‍ಪಡಿಸಿ, ಆಯಾಳತ್ತ ನೀಡಿದ ಚಂದ್ರಾ,

“ಬೇಬಿಗೆ ಈಗಲೇ ಸ್ನಾನ ಮಾಡಿಸ್ಬೇಡಿ… ಡಾಕ್ಟ್ರು ಬಂದು ನೋಡ್ಲಿ…” ಎಂದಳು.

ಹೆರಿಗೆಯ ನಂತರದಲ್ಲಿ ಆ ಮಹಿಳೆ ಅತ್ಯಂತ ದುರ್‍ಬಲಳಾಗಿದ್ದಳು. ಮುಖ ಗೋಡೆಯಂತೆ ಬಿಳಿಚಿಕೊಂಡಿತು. ಇಡೀ ಮೈ ಬೆವತು ಹೋಗಿತು ಅಂತಹದರಲ್ಲೂ ಆಕೆ.

“ಎಂತಹ ಮಗು ಸಿಸ್ಟರ್?” ಎಂದು ಕೇಳಿದಳು.

“ಗಂಡು ಮಗು”

ಬಿಳಿಚಿಕೊಂಡಿದ್ದ ಮುಖದಲ್ಲಿ ಕೆಂಪು ಮೂಡಿದಂತಾಯಿತು. ಬಳಲಿಕೆಯೆಲ್ಲಾ ಒಮ್ಮೆಲೇ ಮಾಯವಾದಂತಾಗಿ ಅವಳ ಮುಖ ಮಂದಹಾಸ ತೃಪ್ತಿಯಿಂದ ಪ್ರಜ್ವಲಿಸಿತು.

ನೋವೆಂದು ಬಂದಿದ್ದ ಗಂಗಾ ಯಾವಾಗಲೋ ಆ ಜಾಗದಿಂದ ಮಾಯವಾಗಿದ್ದಳು. ಡಾಕ್ಟರ್ ಮೀರಾ ಮತ್ತು ಡಾಕ್ಟರ್ ಶಾಲಿನಿ ಮಾತನಾಡುತ್ತಾ ಒಳಗೆ ಬಂದರು. ಮೀರಾಳ ಮುಖ ಉದ್ವೇಗದಿಂದ ಕೂಡಿತ್ತು.

“ರಾತ್ರಿಯಿಡೀ ಕೂತು ಮಾನಿಟರ್ ಮಾಡ್ತೀವಿ, ಆಮೇಲೆ ಬಂದು ಎಲ್ಲಾ ತಾವೇ ಮಾಡಿದ್ದೂಂತ ಕೊಚ್ಕೋತಾರೆ…”

– ಸಿಟ್ಟಿನಿಂದ ಹೇಳುತ್ತಿದ್ದಳು.

“ಹೆರಿಗೆಯಾಯ್ತು ಸಿಸ್ಟರ್… ಪ್ಲಾಸೆಂಟಾ ಬಂತಾ? ಏನೂ ಪ್ರಾಬ್ಲೆಮ್ ಇಲ್ಲಾ ತಾನೆ?…” ಎಂದು ಕೇಳುತ್ತಾ ಕುರ್‍ಚಿಯಲ್ಲಿ ಕುಳಿತುಕೊಂಡರು.

ಪುನಃ ಮಾತು ಮುಂದುವರೆಯಿತು. ಏನೇನೋ ವಿಷಯಗಳು, ಆಕ್ರೋಶ, ದೂರು, ಸಂದೇಹದ ವ್ಯಂಗ್ಯದ ಚರ್‍ಚೆಗಳು.

ಚಂದ್ರಾ ರೋಗಿಯು ಸಹಜಸ್ಥಿತಿಗೆ ಬಂದನಂತರ ಅವಳಿಂದ ದೂರ ಬಂದು,

“ಡಾಕ್ಟರ್ ಈ ಪೇಶೆಂಟ್ಗೆ ಕೆಲವು ಗಂಟೆಗಳಿಂದ ನೋವು ಶುರುವಾಗಿದೆ… ಬ್ಲೀಡಿಂಗ್ ಅಂತಾ ಹೇಳ್ತಾ ಇದ್ದಾಳೆ..” ಗಂಗಾಳನ್ನು ತೋರಿಸಿ ಹೇಳಿದಳು.

“ಏನು ಕೇಸದು?” ಶಾಲಿನಿ ತಿರುಗಿ ನೋಡಿ ಕೇಳಿದಳು.

“ಪ್ರೀವಿಯಸ್ ಸಿಝೇರಿಯನ್ ಕೇಸು ಇರ್‍ಬೇಕು ಬೆಳಿಗ್ಗೆ ಅಂಜನಾ ಅಡ್ಮಿಟ್ ಮಾಡಿದ್ದಳು… ಸಿಸ್ಟರ್ ಆಪರೇಷನ್ಗೆ ತಯಾರು ಮಾಡ್ಬಿಡಿ… ಹೇಗೂ ಮೇಡಂ ಬಾರ್‍ತಾರೆ… ತೋರಿಸಿದರಾಯ್ತು… ಅನುಕೂಲವೇ ಆಯ್ತು..” ಎಂದಳು ಮೀರಾ.

“ನಂಗೇ ಆಪರೇಷನ್ ಬೇಡಾ ಡಾಕ್ಟರ್” ಗಂಗಾ ಹೆದರಿ ನುಡಿದಿದ್ದಳು.

ಎದ್ದು ಬಂದು ಅವಳನ್ನು ಪರೀಕ್ಷಿಸಿದ ಮೀರಾ.

“ನಾರ್ಮಲ್ ಡೆಲಿವರಿಯಂತೂ ಖಂಡಿತಾ ಆಗೋಲ್ಲ. ಹಾಗೇನಾದ್ರೂ ಆಪರೇಷನ್ ಮಾಡೋದು ತಡವಾದರೂ ನಿನ್ನ ಜೀವಕ್ಕೆ ಅಪಾಯವಿದೆ…” ಎಂದು

“ಸಿಸ್ಟರ್.. ಆಕೆಯ ಗಂಡ ಬಂದಿದ್ದರೆ ಕನ್ಸೆಂಟ್ ಫಾರಂಗೆ ಸಹಿ ಮಾಡಿಸಿಕೊಂಡುಬಿಡಿ..” ಕೈ ತೊಳೆದುಕೊಳ್ಳಲು ಹೋದಳು. ಮೀರಾ ತಾನಾಗಿಯೇ ತಂದು ಬಿಟ್ಟಿದ್ದ ಯಾವುದೋ ಮಿನಿಸ್ಟರ್ ಕಡೆಯವರ ಯುವತಿಗೆ ನೋವು ತೀವ್ರವಾಗತೊಡಗಿತ್ತು. ವಾರ್‍ಡಿನ ಆಯಾಗಳು ಸಡಗರದಿಂದ ಓಡಾಡುತ್ತಿದ್ದರು. ದೊಡ್ಡವರ ಮನೆಯ ಕೇಸು ಖಂಡಿತಾ ಕೈತುಂಬಾ ಕೊಟ್ಟಂತೂ ಹೋಗಿಯೇ ಹೋಗುತ್ತಾರೆ… ಆ ಯುವತಿ ನೋವಿನಿಂದ ಚೀರತೊಡಗಿದಳು.

“ಮೀರಾ… ಎದ್ದು ಹೋಗಿ… ಫೋನು ಮಾಡು ಹೋಗು. ನೋವು ಜಾಸ್ತಿಯಾಗ್ತಾ ಇದೆ. ಮತ್ತೆಲ್ಲಿಯ ಗ್ರಹಚಾರ…”

ಶಾಲಿನಿಯ ಮಾತಿನ್ನೂ ಮುಗಿದಿರಲಿಲ್ಲ. ಉಟ್ಟುಕೊಂಡಿದ್ದ ನೈಟಿಯಲ್ಲಿಯೇ ಪ್ರಮುಖ ವೈದ್ಯೆ ಕಮಲಾಬಾಯಿ ಧಾವಿಸಿ ಬಂದಿದ್ದರು. ಹಿಂದೆಯೇ ಪಕ್ಕದ ವಾರ್‍ಡಿನ ನರ್‍ಸುಗಳೂ ಬಂದಿದ್ದರು. ಎಲ್ಲರೂ ನೋವು ತಿನ್ನುತ್ತಿದ್ದವಳ ಮೇಜಿನ ಸುತ್ತಲೂ ನಿಂತು, ಪ್ರೋತ್ಸಾಹ ಭರವಸೆಯ ನುಡಿಗಳನ್ನಾಡುತ್ತಿದ್ದರು.

ಚಂದ್ರಾಳ ದೃಷ್ಟಿ ಗಂಗಾಳತ್ತ ಹರಿಯಿತು. ನೋವಿನಿಂದ ಮುಖವನ್ನು ವಕ್ರ ಮಾಡಿಕೊಂಡು ಬಾಗಿಲೊರಗಿಕೊಂಡು ನಿಂತಿದ್ದಳು. ಮೀರಾ ಏನನ್ನೋ ಹೇಳುತ್ತಾ ಕೇಸ್ ಷೀಟನ್ನು ತೋರಿಸುತ್ತಿದ್ದಳು. ಅವಳು ದೈನ್ಯದಿಂದ ನರ್‍ಸ್ ಚಂದ್ರಾಳತ್ತ ನೋಡಿದಳು.

ಕನ್ಸೆಂಟ್ ಫಾರಂಗೆ ಸಹಿಮಾಡಿ ಹೋಗಿದ್ದ ಗಂಡನನ್ನು ಹೊರಗೆ ಹೋಗಿ ಸಮಾಧಾನಪಡಿಸಿ ಬಂದಿದ್ದಳು. ಎಲ್ಲವೂ ತಯಾರಾಗಿತ್ತು. ಆದರೆ ಅವಳನ್ನು ಗಮನಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.

ಅವಸರದಿಂದ ಕೇಸ್ ಷೀಟನ್ನು ನರ್‍ಸ್ ಕೈಗಿತ್ತ ಡಾಕ್ಟರ್ ಮೀರಾ,

“ಸಿಸ್ಟರ್ ವಾರ್‍ಡ್ ಡಾಕ್ಟರಿಗೆ ತೋರಿಸ್ಬಿಡಿ. ನಾನು ಆಕೆಯ ಗಂಡನಿಂದ ಸಹಿ ಮಾಡಿಸಿದ್ದೇನೆ. ನಾನು ನನ್ನ ವಾರ್‍ಡಿಗೆ ಹೋಗ್ತಿನಿ” ಎನ್ನುತ್ತಾ ಓಡುವ ನಡಿಗೆಯಲ್ಲಿ ವಾರ್‍ಡಿನಿಂದ ಹೊರಗೆ ಓಡಿದಳು.

ಚಂದ್ರಾ ಬಾಗಿಲತ್ತ ನೋಡಿದಳು. ನೋವಿನಿಂದ ಮುಖ ವಕ್ರ ಮಾಡುತ್ತಾ ಬಾಗಿಲೊರಗಿ ನಿಂತಿದ್ದ ಗಂಗಾ ಕಾಣಿಸಿದಳು. ಅವಳು ನೋವನ್ನು ನುಂಗಲು ತುಟಿ ಕಚ್ಚುತಾ, ಸೋತು – ಸೊರಗಿದವಳಂತೆ ಬಾಗಿಲೊರಗಿ ನಿಂತಿದ್ದಳು.

ಅವಳಿಗಾಗಿ ದೈನ್ಯದಿಂದ ಕೇಳುವವರು ಪಕ್ಕದಲ್ಲಿ ಯಾರೂ ಇರಲಿಲ್ಲ. ರಾತ್ರಿಯಾದುದರಿಂದ ಗಂಡ ಮತ್ತು ಮಗುವನ್ನು ಗೇಟಿನಿಂದಾಚೆ ಕಳುಹಿಸಲಾಗಿತ್ತು. ಆಸ್ಪತ್ರೆಯಲ್ಲಿನ ಹೆರ್‍ಇಗೆ ವಾರ್‍ಡಿನ ಸಿಬ್ಬಂದಿವರ್‍ಗದವರು ಎರಡನೆಯ ಹೆರಿಗೆಗಾಗಿ ನೋವು ಅನುಭವಿಸುತ್ತಿದ್ದ ಯಾವುದೋ ಮಂತ್ರಿಗಳ ಕಡೆಯವಳಾಗಿದ್ದ ಸುಮಾಳ ಸುತ್ತಾ ಗುಂಪು ಕೂಡು ನಿಂತಿದ್ದರು.

“ಧೈರ್‍ಯ ತಂದ್ಯೋ ಸುಮಾ… ನಾವೆಲ್ಲಾ ಇಲ್ಲೇ ನಿಂತಿದ್ದೇವೆ. ಸ್ವಲ್ಪ ಸಹಿಸ್ಕೊಂಡು ಬಿಡು” – ಡಾಕ್ಟರ್ ಕಮಲಾಬಾಯಿಯವರ ಸಾಂತ್ವನದ ನುಡಿಗಳಿಂದ ಏನೂ ಪ್ರಯೋಜನವಾಗಿಲ್ಲ. ನೋವು ಹೆಚ್ಚಾದಂತೆ, ಸುಮಾ ಕಿರಿಚಾಡತೊಡಗಿದ್ದಳು. ಕೈಗಳಿಗೆ ಡ್ರಿಪ್ ಹಾಕಿದ್ದು ಕಿತ್ತು ಬರತೊಡಗಿತ್ತು.

“ನೋಡಿ ಒದ್ದಾಡಬೇಡಿ ಪುನಃ ಪುನಃ ಚುಚ್ಚಬೇಕಾಗುತ್ತೆ… ನೋವಾಗುತ್ತೆ…” ಮೃದುವಾದ ಗದರಿಕೆಯ ಮಾತು.

ಸುಮಾ “ನಂ ಕೈಲಾಗೋಲ್ಲ ಡಾಕ್ಟ್ರೆ. ಆಪರೇಷನ್ ಮಾಡಿ ತೆಗೆದುಬಿಡಿ ಸತ್ತೇ ಹೋಗ್ತಿನೇನೋಂತ ಅನ್ನಿಸ್ತಾಯಿದೆ…” ಸೋತು ಹೇಳಿದಳು.

“ಧೈರ್ಯ ತಂದ್ಕೋ” ಭರವಸೆ ಧೈರ್‍ಯ ನೀಡುವ ನುಡಿಗಳು. ಸುತ್ತಲೂ ನಿಂತಿದ್ದ ಎಲ್ಲರ ಕಣ್ಣುಗಳಲ್ಲಿ ನಿದ್ದೆ ಹಾರಿಹೋಗಿತ್ತು. ಹೊರಗಡೆ ಮಂತ್ರಿಗಳ ಕಾರಿನಲ್ಲಿ ಮಂತ್ರಿಗಳಿರದಿದ್ದರೂ, ಮಂತ್ರಿಗಳಿದ್ದರೆಂಬಂತೆಯೇ, ಗಡಿಬಿಡಿ… ಓಡಾಟ ನಡೆದಿತ್ತು.

ಚಂದ್ರಾ…. ಗಂಗಾಳ ಬಳಿಗೆ ಹೋದಳು.

“ನೋವು ಜಾಸ್ತಿಯಾಯ್ತಾ?” ಕೇಳಿದಳು.

ಅವಳು ಮಾತನಾಡದೆ ತಲೆ ಅಲುಗಿಸಿದಳು. ಉಮ್ಮಳಿಸಿ ಬರುತ್ತಿದ್ದ ದುಃಖ ನೋವನ್ನು ತುಟಿಕಚ್ಚಿ ಹಿಡಿದು ತಡೆಹಿಡಿದುಕೊಳ್ಳುತ್ತಿದ್ದಳು. ಹತ್ತಿರ ಬಂದ ಚಂದ್ರಾಳನ್ನು ಬಿಗಿಯಾಗಿ ಹಿಡಿದುಕೊಂಡ ಗಂಗ.

“ಕೆಳಹೊಟ್ಟೆ ತುಂಬಾ ನೋಯ್ತಿದೆ. ಸೀಳಿಕೊಂಡು ಬರೋ ತರಹಾ ನೋವಾಗ್ತಿದೆ… ಡಾಕ್ಟರಿಗೆ ಹೇಳಿ…”

ಚಂದ್ರಾ ಅವಳನ್ನು ಕರೆದುಕೊಂಡು ಬಂದು ಪರೀಕ್ಷೆಯ ಮಂಚದ ಮೇಲೆ ಮಲಗಿಸಿದಳು.

ಡಾಕ್ಟರ್ ಕಮಲಾಬಾಯಿಯವರತ್ತ ಬಂದ ಚಂದ್ರಾ

“ಮೇಡಂ… ಅವಳಿಗೆ ನೋವು ಜಾಸ್ತಿಯಾಗ್ತಾಯಿದೆ…”

ಆತಂಕದಿಂದ ಹೇಳಿದಳು.

“ಇಲ್ಲಿ ನಾನು ಸುಮ್ಮನೆ ನಿಂತಿದ್ದೇನಾ? ನೋವು ಬಂದ್ರೆ ಹೆರಿಗೆ ಮಾಡ್ಸಿ… ಯಾಕೆ ಡ್ಯೂಟಿ ಡಾಕ್ಟರಿಲ್ವಾ?” ರೋಗಿಯತ್ತ ನೋಡದೆ, ಹತ್ತಿರ ಬಂದ ಚಂದ್ರಾಳನ್ನು ಗದರಿಸಿದರು.

“ಅದು ನಾರ್‍ಮಲ್ ಡೆಲಿವರಿ ಕೇಸ್ ಅಲ್ಲ ಮೇಡಂ.. ಒಮ್ಮೆ ಸಿಝೇರಿಯನ್ ಆಗಿದೆ…”

“ಅಡ್ಮಿಟ್ ಮಾಡಿದ್ದು ಯಾರು? ನಂಗೆ ಒಂದು ಮಾತನ್ನೂ ಹೇಳಿಲ್ಲ ನಾನು ಆ ಕೇಸಿನ ಮುಖಾನೂ ನೋಡಿಲ್ಲ ಏನು ಮಾಡಲಿ?”

ಮುಖ ಗಂಟಿಕ್ಕಿ ಹೇಳಿದರು. ಅವರ ಆಸಕ್ತಿ ಗಮನವೆಲ್ಲಾ ಸುಮಾಳ ಮೇಲೆ ಕೇಂದ್ರೀಕೃತವಾಗಿತ್ತು.

“ಬೆಳಿಗ್ಗೆ ಡಾಕ್ಟರ್ ಅಂಜನಾ ಅಡ್ಮಿಟ್ ಮಾಡಿದ್ದಾಳೆ ಮೇಡಂ..” ಶಾಲಿನಿ ಮಧ್ಯೆ ಬಾಯಿ ಹಾಕಿ ಹೇಳಿದಳು.

“ಹಾಗಾದ್ರೆ ಅದು ನಮ್ಮ ಯೂನಿಟ್ ಕೇಸ್ ಅಲ್ಲ… ಆ ಯೂನಿಟ್ಟಿನವರಿಗೆ ಫೋನ್ ಮಾಡಿ ತಿಳಿಸಿ… ಆಂಬುಲೆನ್ಸ್ ಕಳುಹಿಸಿ.. ಸುಮ್ಮನೆ ನನ್ನ ತಲೆ ತಿನ್ನಬೇಡಿ…” ಎಂದ ಕಮಲಾಬಾಯಿಯವರು ಸುಮಾಳ ಬಳಿ ಬಂದು ನಿಂತು,

“ಸಿಸ್ಟರ್… ಡೆಲಿವರಿ ಸೆಟ್ ರೆಡಿ ಮಾಡು…” ಎಂದು.

“ನೋಡಮ್ಮಾ ನೀನೀಗ ಕಿರಿಚಬಾರದು ಸಹಕಾರ ನೀಡಿದ್ರೆ ಸುಖವಾಗಿ ಹೆರಿಗೆಯಾಗುತ್ತೆ…” ಎನ್ನುತ್ತಾ ಕೈತೊಳೆಯಲು ಹೋದರು.

ಚಂದ್ರಾ ಶಾಲಿನಿಯತ್ತ ನೋಡಿದಳು. ಆಕೆಯೂ ಗಲಿಬಿಲಿಗೊಂಡಂತಿತ್ತು.

ಚಂದ್ರಾಳ ಆತಂಕ ತುಂಬಿದ ಮುಖ ನೋಡಿದ ಶಾಲಿನಿ.

“ನೀವ್ಯಾಕೆ ಇಷ್ಟು ಗಾಬರಿಯಾಗಿದ್ದೀರಿ ಸಿಸ್ಟರ್… ಫೋನ್ ಮಾಡಿಸಿ ಅವರು ಒಂದು ಮಾಡಿ ಹೋಗುತ್ತಾರೆ…” ಎಂದಳು.

ಚಂದ್ರಾಳ ಸಹನೆ ತಪ್ಪಿತು.

“ನಾನೀಗ ಫೋನ್ ಮಾಡಿ, ಆಮೇಲೆ ಆಂಬುಲೆನ್ಸ್ ಕಳುಹಿಸಿದ ನಂತರ ಅವರು ಬಂದು ಆಪರೇಷನ್ ಮಾಡುವಷ್ಟರಲ್ಲಿ ಆಕೆಗೇನಾದರೂ ಆದರೆ? ಅದೆಷ್ಟು ಕೂಲಾಗಿ ಹೇಳ್ತಾ ಇದ್ದೀರಾ? ಬೆಳಿಗ್ಗೆಯಿಂದ ಕಂಗಾಲಾಗಿದ್ದಾಳೆ… ನೀವೇ ಯಾರಾದ್ರೂ ಮಾಡಿ ಮುಗಿಸಿ ಬೆಳಿಗ್ಗೆ ಹೇಳಿದರಾಯ್ತು…” ಚಂದ್ರಾ ಅಸಹನೆಯಿಂದ ಹೇಳಿದಳು.

ಒಮ್ಮೆ ಶಸ್ತ್ರ ಚಿಕಿತ್ಸೆಯಾದ ರೋಗಿಯ ಆಲೋಚನೆಗಿಂತ, ಸಹಜವಾಗಿ ಹೆರಿಗೆಯಾಗುತ್ತಿರುವ ಶ್ರೀಮಂತರ ರೋಗಿಯೇ ಅವರಿಗೆ ಮುಖ್ಯವಾಗಿ ಕಂಡಿದ್ದು ಸಿಟ್ಟಿನ ಜೊತೆ ವೈದ್ಯರ ನೀತಿ ಸಂಹಿತೆಯ ಬಗ್ಗೆ ಜಿಗುಪ್ಸೆಯನ್ನು ಮೂಡಿಸಿತ್ತು… ಸಾವಿನಂಚಿನಲ್ಲಿರುವವರನ್ನು ಬದುಕಿಸಲು ಬಂದಿರುವ ಇವರುಗಳು ಹೀಗೇಕೆ ಅಮಾನವೀಯತೆಯಿಂದ ವರ್‍ತಿಸುತ್ತಿದ್ದಾರೆ?

ದೇವರ ಗುಡಿಗಳ ನಂತರ ಅತ್ಯಂತ ಪ್ರಾಮಾಣಿಕವಾಗಿ, ವಿಶ್ವಾಸ, ಭಕ್ತಿಯಿಂದ ಬರುವುದು ಆಸ್ಪತ್ರೆಗಳಿಗೆ. ಸಾವು ನೋವಿನ ಭಯದಲ್ಲಿ ಹೂತು ಹೋಗುವಂತಾಗಿದ್ದ ತಮ್ಮನ್ನು ಮೇಲೆತ್ತಿ ಗಟ್ಟಿಯಾದ ನೆಲದಲ್ಲಿ ನಿಲ್ಲಿಸಿ ಬದುಕಿಸುತ್ತಾರೆಂಬ ಭರವಸೆಯಿಂದ ಮಾತ್ರ ಬರುತ್ತಾರೆ. ಆದರೆ ಗಂಗಾ ಬಂದಿದ್ದು ಭರವಸೆಯಿಂದ ಜೀವದಾಸೆಗಾಗಿ ನಿಂತಿದ್ದು ಗಟ್ಟಿಮುಟ್ಟಾದ ನೆಲವಾಗಿರಲಿಲ್ಲ. ಮೇಲೆತ್ತುವವರೂ ಸರಿಯಾಗಿರಲಿಲ್ಲ.

ಗಂಗಾ… ನೋವಿನಿಂದ ರಕ್ತಸ್ರಾವದಿಂದ ನಿಧಾನವಾಗಿ ಕುಸಿಯತೊಡಗಿದ್ದಳು.. ಕೆಸರಿನ ಜನರ ನಡುವೆ ಆಸರೆಗಾಗಿ ಬಂದಿದ್ದವಳು ನಿಧಾನವಾಗಿ ಕ್ರಮೇಣದಲ್ಲಿ ಹೂತುಹೋಗತೊಡಗಿದ್ದಳು.

ಡಾಕ್ಟರ್ ಕಮಲಾಬಾಯಿಯವರು, ಸುಮಾಳ ಕೈಗೆ ಸುಖ ಪ್ರಸವ ಮಾಡಿಸಿ ಮಗುವನ್ನಿತ್ತರು. ಎಲ್ಲರ ಮುಖಗಳೂ ಅರಳಿದವು.

ಅವಳನ್ನು ಸ್ಪಷಲ್ ವಾರ್‍ಡಿಗೆ ಸಾಗಿಸಲು ಸಿದ್ಧತೆಗಳಾಗತೊಡಗಿದುವು… ಬಿಸಿಬಿಸಿಯಾದ ಹಾರ್ಲಿಕ್ಸ್ ಬಂದಿತು… ತಾ ಮುಂದು ನಾ ಮುಂದು ಎನ್ನುತ್ತಾ ಸುಮಾಳಿಗೆ ಹಾರ್‍ಲಿಕ್ಸ್ ಕುಡಿಸಲು ಬಂದವರನ್ನು ಕಂಡ ಚಂದ್ರಾಳ ಮೈ ಉರಿಯಿತು.

“ಮೇಡಂ.., ಈಕೆಗೇನು ಮಾಡಬೇಕು? ಧೈರ್‍ಯವಾಗಿ ಬಂದು ಪ್ರಮುಖ ವೈದ್ಯೆ ಕಮಲಾಬಾಯಿಯವರನ್ನೇ ಕೇಳಿದಳು.

“ಅಂದರೆ?” ಮನೆಗೆ ಹೊರಟವರು ತೀಕ್ಷ್ಮವಾಗಿ ನೋಡುತ್ತಾ ಕೇಳಿದರು.

“ನೀವೇತಾನೇ ಹೆಡ್ ಆಫ್ ದಿ ಡಿಪಾರ್‍ಟ್ಮೆಂಟ್ ನೀವೇ ನಿರ್‍ಧರಿಸಿ. ಒಬ್ಬ ನರ್‍ಸಾಗಿ ನಾನು ನಿಮಗೆ ಕರ್‍ತವ್ಯದ ಬಗ್ಗೆ ಹೇಳುತ್ತಿಲ್ಲ, ಆದರೆ ಆ ರೋಗಿಗಾಗಿ ನನ್ನ ಇತಿಮಿತಿಗಳನ್ನು ಮೀರಿ ಮಾತನಾಡಬೇಕಾಯಿತು…” ಚಂದ್ರಾ ಗಂಭೀರವಾಗಿ ಹೇಳಿದಳು. ಒಮ್ಮೆ ಆಕೆಯತ್ತ ತೀಕ್ಷ್ಣವಾಗಿ ನೋಡಿದ ಅವರು, “ನೀವು… ಪ್ರಶಸ್ತಿ ಪಡೆದ ನರ್‍ಸಾಗಿರಬಹುದು. ಅಂದಮಾತ್ರಕ್ಕೆ ಡಾಕ್ಟರಾಗಲು ಸಾಧ್ಯವಿಲ್ಲ. ಇಷ್ಟು ಹೊತ್ತು ನಾನು ಹೇಳಿದ್ದೇನು?… ಹೇಳಿದಷ್ಟು ಮಾಡಿ. ಅಷ್ಟು ಸಾಕು… ಬಂದ ಎಲ್ಲಾ ಕೇಸುಗಳನ್ನು ನಾನೇ ನೋಡಬೇಕೆಂದೇನು ಬಾಂಡ್ ಬರೆದು ಕೊಟ್ಟಿಲ್ಲ..’ ಎನ್ನುತ್ತಾ ದಢದಢನೆ ಲೇಬರ್ ವಾರ್‍ಡಿನಿಂದ ಹೊರಗೆ ಹೋದರು. ಹಿಂದೆಯೇ ಬಂದಿದ್ದವರೂ ತೆರಳಿದರು.

ವಾರ್‍ಡಿನ ಡಾಕ್ಟರ್ ಶಾಲಿನಿಯೂ ಅಸಹಾಯಕತೆಯನ್ನು ವ್ಯಕ್ತಪಡಿಸಿ ಕೈಚೆಲ್ಲಿದಳು.

“ವಾರ್‍ಡ್ ಡಾಕ್ಟರ್ ಮೀರಾಗೆ ಹೇಳಿ. ಫೋನ್ ಮಾಡಿಸಿ ಆ ಯೂನಿಟ್ಟ್‌ನವರನ್ನು ಕರೆಯಿಸಿ, ಅವಳೇ ನಿರ್‍ಧರಿಸುತ್ತಾಳೆ..” ಸಂತಾಪದಿಂದ ಚಂದ್ರಾಳ ಮೈ ಉರಿಯಿತು. ನಿಧಾನವಾಗಿ ನರಳುತ್ತಾ ಮಲಗಿದ್ದ ಗಂಗಾಳ ಬಳಿ ಬಂದು ನಿಂತಳು. ಕೈಹಿಡಿದ ನಾಡಿಮಿಡಿತ ನೋಡಿದಳು. ವೇಗವಾಗಿ ಬಡಿದುಕೊಳ್ಳುತ್ತಿತ್ತು. ಸಂದರ್‍ಭದ ಅರಿವಿನಿಂದಲೋ, ತನಗಾಗುತ್ತಿರುವ ಹಿಂಸೆಯಿಂದಲೋ ಏನೋ ಗಂಗಾ ಮಾತು ನಿಲ್ಲಿಸಿದಳು. ಆಗಾಗ್ಗೆ ಕ್ಷೀಣವಾಗಿ ನೋವಿನಿಂದ ಚೀರುತ್ತಿದ್ದಳು. ಕಣ್ಣುಗಳಲ್ಲಿ ನಿರಾಶೆ ತುಂಬಿತು.

“ನನ್ನ… ಮಗು ಚಿಕ್ಕದಿದೆ ಸಿಸ್ಟರ್… ನನ್ನ ಗಂಡನಿಗೂ ಈ ಊರಲ್ಲಿ ಯಾರೂ ಸಂಬಂಧಿಕರಿಲ್ಲ… ಹೇಗಾದ್ರೂ ಮಾಡಿ ನನ್ನನ್ನು ಉಳಿಸಿ, ಅಯ್ಯೋ.. ಅಮ್ಮಾ… ಬಿರಿದುಕೊಂಡು ಬರೋತರಹಾ ನೋವಾಗ್ತಾಯಿದೆ” ಬಹು ಪ್ರಯಾಸದಿಂದ ನುಡಿದ ಗಂಗಾ ಸುಸ್ತಾದವಳಂತೆ ಹಿಂದಕ್ಕೊರಗಿದಳು. ತುಟಿಗಳು ಬಿಳಿಚಿಕೊಂಡು ಒಣಗಿದ್ದವು. ಕೆಲವು ಗಂಟೆಗಳ ಹಿಂದೆ ಮಾತನಾಡಿದ್ದ ಗಂಗಾ ಅಪಗಾತಕ್ಕೊಳಗಾದವಳಂತೆ ಸೋತು ಮಲಗಿದ್ದಳು.

ಚಂದ್ರಾ ಡ್ರಿಪ್ಸ್ ರೆಡಿಮಾಡಿ, ಬಹುಕಷ್ಟದಿಂದ ಗಂಗಾಳ ಕೈಗಳಲ್ಲಿ ರಕ್ತನಾಳ ಹುಡುಕಲು ಪ್ರಾರಂಭಿಸಿದಳು. ಸ್ವಲ್ಪವಾದರೂ ಬಳಲಿಕೆ ಕಡಿಮೆಯಾದೀತೆಂಬ ಭರವಸೆ!

ಡಾಕ್ಟರ್ ಮೀರಾ ಬಂದಳು. ಪರೀಕ್ಷಿಸಿದಳು. ಅವಳ ಮುಖ ಗಂಭೀರವಾಯಿತು.

“ಸಿಸ್ಟರ್. ಬೇಗ ಓ.ಟಿ.ಗೆ ಷಿಪ್ಟ್ ಮಾಡಿಸಿ… ನಾನು ಫೋನ್ ಮಾಡಿ ಬರೀನಿ. ಆಕೆಯ ಗಂಡನಿಗೆ ಹೇಳಿ ಬೇಗ ಹೋಗಿ ಎರಡು ಬಾಟಲಿನಷ್ಟು ರಕ್ತ ತರಲಿ.

ಇಲ್ಲದಿದ್ದರೆ ಉಳಿಯಲಾರಳು… ಯುಟೆರಸ್ ರಪ್ಚರ್ ಆಗ್ತಾಯಿದೇರಿ…”

ಗಾಬರಿಯಿಂದ ಹೇಳಿದಳು.

“ನಾನು ಹೇಳ್ತಾ ಇದ್ದೀನಿ ಡಾಕ್ಟರ್… ಈಗ…”

“ಅದೆಲ್ಲಾ ನಿಮಗ್ಯಾಕ್ರಿ… ಹೇಳಿದಷ್ಟು ಮಾಡಿ, ಬ್ಲಡ್… ಡ್ರಾ ಮಾಡಿ ಕಳುಹಿಸಿ. ನಾನು ಫೋನು ಮಾಡಿ… ಓ.ಟಿ.ಯವರಿಗೆ ಹೇಳಿ ಬರ್‍ತೀನಿ… ಬೇಗ ಪ್ರಿಪೇರ್ ಮಾಡಿ. ಆಗಲೇ ಐದು ಗಂಟೆಯಾಗುತ್ತಾ ಬಂತು… ಒಂದು ಕ್ಷಣವೂ ಕಣ್ಣು ಮುಚ್ಚಿಲ್ಲ…” ಮೀರಾ… ಓ.ಟಿ.ಯತ್ತ ಧಾವಿಸಿದಳು.

ಚಂದ್ರಾ.. ಯಂತ್ರದಂತೆ ಚಕಚಕನೆ ಕೆಲಸಮಾಡಿ, ಕುಸಿಯುವಂತಾಗಿದ್ದೆ. ಗಂಗಾಳಿಗೆ ಧೈರ್‍ಯ ತುಂಬಿ… ಓ.ಟಿ.ಯತ್ತ ಸ್ಟೆಚರ್ ಮೇಲೆ ಸಾಗಿಸಿದಳು.

“ದೇವರೇ… ಅವಳು ಬದುಕಿ ಬರಲಿ” ಎಂದು ಹೃದಯ ಮೊರೆಯಿಟ್ಟಿತು. ಗಂಗಾಳನ್ನು ಹೆರಿಗೆ ವಾರ್‍ಡಿನಿಂದ ಆಪರೇಷನ್ ಥಿಯೇಟರಿಗೆ ಸಾಗಿಸಿದ ನಂತರ ಬಸವಳಿದವಳಂತೆ ಕುಳಿತುಬಿಟ್ಟಳು. ಒಂದು ವೇಳೆ… ಮೀರಾ ಹೇಳಿದಂತೆ. ಗರ್‍ಭಕೋಶಕ್ಕೆ ಧಕ್ಕೆಯಾಗಿ ಅತ್ಯಂತ ರಕ್ತಸ್ರಾವವಾಗಿದ್ದರೆ ಗಂಗಾಳ ಉಳಿವು ಅಷ್ಟು ಸುಲಭವಾಗಿರಲಿಲ್ಲ. ಹಾಗೇನಾದ್ರೂ ಅವಳು ತರಾತುರಿ ಮಾಡಿದ್ರೆ ಹೇಗೆ? ಅವನೆಲ್ಲಿಂದ ಅರ್‍ಧ ಗಂಟೆಯೊಳಗೆ ಅಷ್ಟು ರಕ್ತ ತಂದಾನು?” ಚಂದ್ರಾ ತಡೆಯಲಾರದೆ ಹೇಳಿದಳು.

ಎಲ್ಲರ ಕೈತಪ್ಪಿ ಜಾರಿದರೆ, ಅದೊಂದು ಬೀಕರ ಕೊಲೆಯೇ ಆದೀತು! ರೋಗಿಯು ಸತ್ತ ನಂತರ, ಯಾವುದೇ ಕಾರಣ ನೀಡಿ ಸರ್‍ಟಿಫಿಕೇಟ್ ಕೊಟ್ಟರೂ.. ಇದು ನಿರ್‍ಲಕ್ಷ್ಯದಿಂದ ಸಂಭವಿಸಿದ ಕೊಲೆಯೂ ಹೌದು…!

ಚಂದ್ರಾಳ ಮನಸ್ಸಿನಲ್ಲಿ ತಳಮಳ, ತಾಕಲಾಟ ಪ್ರಾರಂಭವಾಯ್ತು. ತಮ್ಮ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಹಂಚಿಕೊಂಡು ಲೆಕ್ಕಾಚಾರವಾಗಿ ಕೆಲಸ ಮಾಡುವ ವೈದ್ಯರುಗಳ ಮೇಲೆ ಅಗಾಧವಾದ ಸಿಟ್ಟು ಬಂದಿತ್ತು…

ಚಂದ್ರಾಳಿಗೆ ಓ.ಟಿ.ಯತ್ತ ಹೋಗಿ ನೋಡಿಕೊಂಡು ಬರಬೇಕೆನ್ನಿಸಿದರೂ ಲೇಬರ್ ವಾರ್‍ಡನ್ನು ತೊರೆದು ಹೋಗಲಾರದ ಅಸಹಾಯಕತೆಗಾಗಿ ಚಡಪಡಿಸುತ್ತಾ ಕುಳಿತಳು.

ಗಂಗಳನ್ನು ಆಪರೇಷನ್ ಥಿಯೇಟರಿಗೆ ಸಾಗಿಸಿದರು. ಅನಸ್ತೇಷಿಯಾ ಕೊಟ್ಟ ನಂತರ ಆಪರೇಷನ್ ಆರಂಭವಾಯಿತು. ಅಂಜನಾಳ ಕೈಚಳಕ, ಡಾಕ್ಟರ್, ಮೀರಾಳ ಸಹಕಾರದಿಂದ ಶಸ್ತ್ರಕ್ರಿಯೆ ಸುಸಂಬದ್ಧವಾಗಿ, ವೇಗವಾಗಿ ನಡೆಯಿತು. ಚಾಕು ಗಂಗಾಳ ಹೊಟ್ಟೆಯ ಮೇಲೆ ಚಕಚಕನೆ ಓಡಾಡಿತು.

ಚರ್‍ಮ. ಮಾಂಸದ ಪದರುಗಳನ್ನು ಬಿಡಿಸಿ, ಒಳಗೆ ಅವಲೋಕಿಸಿದ ಮೀರಾ,

“ಓಹ್! ಮೈ ಗಾಡ್ ಯುಟೆರಸ್ ರಪ್ಚರ್ ಆಗಿಬಿಟ್ಟಿದೇಯಲ್ಲೇ” ಗಾಬರಿಯಿಂದ ಉದ್ಗರಿಸಿದಳು, ಸಹಾಯ ಮಾಡುತ್ತಿದ್ದ ನರ್‍ಸುಗಳು ಇಣುಕಿದರು.

ಗರ್‍ಭಕೋಶವು ಒಡೆದು, ಹಳೆಯ ಗಾಯ ಸೀಳಿದಂತಾಗಿ ಅದರಿಂದ ಹೊರಗೆ ಬಂದ ಮಗುವಿನ ತಲೆ, ದೇಹ ಮುದುಡಿತ್ತು. ಮಗು ಸತ್ತುಹೋಗಿತ್ತು, ರಕ್ತಸ್ರಾವ ಗರ್‍ಭಾಶಯದ ಸುತ್ತಲೂ ಹೆಪ್ಪುಗಟ್ಟಿ ನಿಂತಿತ್ತು.

“ಸೀನಿಯರ್ ಮೇಡಂನ ಕರೆಯಿಸಬೇಕೇನೆ?” ಮೀರಾ ಕೇಳಿದಳು.

“ಬೇಡಾ… ಈಗ ಬಂದರೇನು ಮಾಡ್ತಾರೆ? ಎಲ್ಲಾ ಮುಗಿದುಹೋಗಿದೆಯಲ್ಲ. ಹೊಲಿಗೆ ಹಾಕೋದು ತಾನೆ?… ಅವರಿಗಿಂತ ಚೆನ್ನಾಗಿ ನಾನೇ ಮಾಡ್ತೀನಿ…” ಅಂಜನಾ ತನ್ನ ಕಾರ್‍ಯದಲ್ಲಿ ಮಗ್ನಳಾದಳು. ಬಹು ಕಷ್ಟದಿಂದ ಮೃತಪಟ್ಟಿದ್ದ ಶಿಶುವನ್ನು ಹೊರಗೆ ತೆಗೆದುಕೊಟ್ಟಳು.

“ಮಗು ಎಷ್ಟು ಮುದ್ದಾಗಿದೆ. ಬೆಳಿಗ್ಗೇನೇ ಮಾಡಿಬಿಡಬಹುದಿತ್ತು… ಆದರೆ ಇನ್ನು ಅವಳಿಗೆ ಒಂದು ವಾರ ಟೈಂ ಇತ್ತು. ಯಾವಾಗಲಾದರೂ ಸ್ವಲ್ಪ ನೋವು ಬಂದರೂ ತಾವು ಆಪರೇಷನ್ ಮಾಡಬಹುದೆಂಬ ಕಾರಣಕ್ಕಾಗಿಯೇ ಬೆಳಿಗ್ಗೇನೇ ಅಡ್ಮಿಟ್ ಮಾಡಿದ್ದೆ… ನಂಗೆ ಮೊದಲೇ ಯಾಕೆ ತಿಳಿಸಲಿಲ್ಲ…” ಕೆಲಸ ಮಾಡುತ್ತಲೇ ಅಂಜನಾ ಸಿಡುಕಿದಳು.

“ನನಗೆ ಗೊತ್ತಾದ ಕೂಡಲೇ… ನಾನು ತಿಳಿಸಿದ್ದೀನಿ… ದೊಡ್ಡವರು ಬಂದಿದ್ದರು ಮಾಡಿ ಹೋಗಬಹುದಿತ್ತು… ಆದರೆ ಏನೇನೋ ರೂಲ್ಸುಗಳನ್ನು ಹೇಳಿ ಹೋದರಂತೆ…” ಮೀರಾ ವಿವರಣೆ ನೀಡುತ್ತಾ ‘ಅಸಿಸ್ಟ್’ ಮಾಡುತ್ತಿದ್ದಳು.

ಗಂಗಾಳ ಸ್ಥಿತಿ ಕಂಡು ಅಂಜನಾಗೆ ಗಾಬರಿಯಾಯಿತು. ಗರ್‍ಭಕೋಶ ಹೊಲಿದಂತೆ ಹಿಂಜಿದಂತೆ ರಕ್ತಸ್ರಾವದಿಂದ ಮುಳುಗತೊಡಗಿತ್ತು.

ಅನೆಸ್ತೀಷಿಯಾ ಕೊಡುತ್ತಿದ್ದ ಗೋಪಾಲ್ ಕಡೆ ತಿರುಗಿದ ಅಂಜನಾ,

“ಡಾಕ್ಟರ್, ಬ್ಲಡ್ ಸ್ಟಾರ್‍ಟ್ ಮಾಡಿಬಡಿ.. ಪ್ಲೀಸ್” ಎಂದಳು.

ಅವಳ ಗಂಡ ತರೋಕೆ ಹೋದವನು ಇನ್ನೂ ಬಂದಿಲ್ಲ ಇವರುಗಳಿಗೆ… ಹೆದರಿಕೆ… ಜವಾಬ್ದಾರೀನೇ ಇಲ್ಲ…” ಡಾಕ್ಟರ್ ಹೇಳುತ್ತಿದ್ದಂತೆಯೇ ಮೀರಾ,

“ಡಾಕ್ಟರ್… ಗೋಪಾಲ್ ನಾವು ಹೇಳಿದ್ದೇ ಅವನಿಗೆ ತಡವಾಗಿ. ಹಣ ಜೋಡಿಸಿ ತರಬೇಡವೆ? ನಮ್ಮಾಸ್ಪತ್ರೆಯ ಬ್ಲಡ್‌ಬ್ಯಾಂಕ್ ಗಳಿರುವುದು ನೆಪಕ್ಕೆ ಮಾತ್ರ.. ಮತ್ತೇನೂ ಸಹಾಯವಿಲ್ಲ…” ಹೇಳಿದಳು.

“ಮೀರಾ… ಷಿ… ಈಸ್… ಸಿಂಕಿಂಗ್… ಬ್ಲೀಡಿಂಗ್ ಕಂಟ್ರೋಲ್ ಆಗ್ತಾಯಿಲ್ಲ… ಬ್ಲಡ್ ಇಲ್ಲದೆ ಏನೂ ಮಾಡೋಕಾಗಲ್ಲ..” ಅಂಜನಾಳ ಕೈಗಳು ಸಹಾಯಕರೊಂದಿಗೆ ಯಂತ್ರದಂತೆ ಓಡಾಡಿದವು. ಪ್ರಯತ್ನಪಟ್ಟು ಜಿನುಗತೊಡಗಿದ್ದ ರಕ್ತವನ್ನು ನಿಲ್ಲಿಸಿದ್ದಾಯಿತು.

ಆದರೆ ಸಾಕಷ್ಟು ರಕ್ತವನ್ನು ಕಳೆದುಕೊಂಡಿದ್ದ ಗಂಗಾಳಿಗೆ ಮೊದಲಿನ ಸ್ಥಿತಿ ಬರಲೇ ಇಲ್ಲ. ಅವಳಿಗೆ ಎಚ್ಚರ ಬರಲೇ ಇಲ್ಲ. ರಕ್ತದ ಬದಲು ಡ್ರಿಪ್ಗಳನ್ನು ಹಾಕಿ ಆಪರೇಷನ್ ಯಶಸ್ವಿಯಾಗಿ ಮುಗಿಸಿದರೂ, ರಕ್ತ ಸಮಯಕ್ಕೆ ಸಿಗದ ಕಾರಣ… ಗೋಡೆಯಂತೆ ಬಿಳಿಚಿಕೊಂಡಿದ್ದ ಗಂಗಾ… ಉಸಿರಿಗಾಗಿ ಚಡಪಡಿಸತೊಡಗಿದಳು.

“ಷಿ… ಈಸ್… ಗ್ಯಾಸ್ಪಿಂಗ್…” ಅಂಜನಾಳ ಹಣೆಯಲ್ಲಿ ಬೆವರು ಹರಿಯಿತು. ಎಲ್ಲರೂ ಅವಳ ಸುತ್ತಲೂ ತಮ್ಮ ಕೈಲಾದುದನ್ನು ಮಾಡುತ್ತಾ ನಿಂತಿದ್ದರು. ರಕ್ತ ತರಲು ಹೋದವನು ಬರುವಷ್ಟರಲ್ಲಿ ಗಂಗಾ ಎಲ್ಲರ ಕೈಯಿಂದ ಜಾರಿಹೋಗಿದ್ದಳು. ಕೆಸರಿನ ಜನರ ಸಹಾಯ ಬಯಸಿ ಬಂದ ತಪ್ಪಿಗಾಗಿ ಕೆಸರಿನಲ್ಲಿ ಹೂತುಹೋದಳು.

“ಡಾಕ್ಟರ್ ರಕ್ತ ತಂದಿದ್ದೀನಿ… ನನ್ನ ಹೆಂಡತಿ ಹೇಗಿದ್ದಾಳೆ?…” ಓ.ಟಿ.ಯ ಬಾಗಿಲು ಬಳಿ ನಿಂತಿದ್ದ ಚಿಕ್ಕಣ್ಣ ಕೇಳುತ್ತಿದ್ದ ದನಿ ಕೇಳಿಬಂದಿತು.

“ಎಲ್ಲಾ ಮುಗಿಯಿತು… ನೀನು ಬಂದಿದ್ದೇ ತಡವಾಯಿತು… ರಕ್ತ ತಗೊಂಡೋಗಿ ವಾಪಸ್ಸು ಕೊಡು…” ವಾರ್‍ಡ್ ಬಾಯ್ ಉತ್ತರ.

“ಅಯ್ಯೋ… ಗಂಗಾ… ಎಂಥಾ ಕೆಲ್ಸವಾಯಿತಲ್ಲೇ? ನಾನು ಇಲ್ಲಿಗೆ ಬರೋದು ಬೇಡವೆಂದೇ…. ನೀನೇ ಹಠ ಮಾಡಿದೆ… ನಾನೀಗ ಏನು ಮಾಡಲಿ?…” ಚಿಕ್ಕಣ್ಣನ ಎದೆಯೊಡೆಯುವಂತಹ ಆರ್‍ತನಾದ ಓ.ಟಿ.ಯೊಳಗೂ ಕೇಳಿಬರುತ್ತಿತ್ತು.

ಡಾಕ್ಟರ್ ಅಂಜನಾ ಸೋತವಳಂತೆ ಕುಳಿತಿದ್ದಳು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...