ಪೀಠಿಕೆ
ನನ್ನ ಬಡಗುಡಿಸಲ ಹೆಸರು “ಆನಂದಕುಟೀರ”.
ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು. ಹೃದಯವು ನಿರಾಶೆಯಿಂದ ಬಿರಿಯುತಿತ್ತು. ಎಷ್ಟು ಆಸೆಗಳು! . . . ಎಷ್ಟು ಉದ್ಯಮ!! ಒಂದೂ ನೆರವೇರಲಿಲ್ಲವಲಾ!- ಎಂಬ ನೋವೊಂದು ಉಳಿದಿತ್ತು.
ಅಸೆಯೋ, ಆಕಾಶವನೇ ಆವರಿಸುವಂತಹುದು!– ಕಡಲನೇ ಹೀರಿ ಕುಡಿಯುವಂತಹುದು!! ಶಕ್ತಿ ಮಾತ್ರ ಇಲ್ಲ! ಇದೆಂತಹ ವಿಚಿತ್ರ! ಇಷ್ಟು ದುರ್ಬಲದ ದೇಹದಲಿ ಅದೆನಿತು ಪ್ರಬಲದಾಸೆಗಳು!
ನಿರಾಶೆ-ಬೇಸರ ಎಲ್ಲ, ಕುಟೀರದ-ಆನಂದಕುಟೀರದ-ಒಳಗೆ. ಕಿಟಕಿಯ ಹೊರಗೆ ಎಷ್ಟು ನೋಡಿದರೂ, ಎಲ್ಲಿ ನೋಡಿದರೂ ಆಸೆ ಭರವಸೆಗಳೇ ಕಣ್ಣನು ಒತ್ತುತಿವೆ! ಕಿವಿಯಲಿಳಿಯುತಿವೆ!
ದೂರದ ಕಡಲತೀರದಿಂದ, ಅಲೆಯ ಫೋಷೆ ಅವಿಚ್ಛಿನ್ನವಾಗಿ ಭರವಸೆಯ ಸಂದೇಶವನು ಬೀರುತಿದೆ.
ಅದೋ ಆ ಮರ, ಈ ಗಿಡ, ಅಲ್ಲಿರುವ ಬಳ್ಳಿ, ಇಲ್ಲಿ ಕಾಣುವ ಪೊದೆ ಪ್ರತಿಯೊಂದರಲೂ ಉಕ್ಕುತಿದೆ ಆಸೆ! ತೋರುತಿದೆ ಚಿಗುರಿ ಹೂಬಿಟ್ಟು ಹಣ್ಣಾಗುವ ಭರವಸೆ!
ಅದೋ ಆ ಹಸುರುಕ್ಕಿ ಹಬ್ಬಿರುವ ಪೊದೆಯಲೊಂದು ಪುಟ್ಟಹಕ್ಕಿ ಕುಳಿತು ಹಾಡುತಿದೆ. ಅದರ ಹೆಸರೇನೋ ನಾನರಿಯೆ. ನನಗೆ ಕಾಣುತಿರುವುದು ಅದರ ಬಣ್ಣ; ನನಗೆ ಕೇಳುತಿರುವುದು ಅದರ ಗಾನ. ಏನು ಸೊಗಸಿನ ಬಣ್ಣ! ಅದೆಷ್ಟು ತೆರನ ರಾಗ! ಒಂದು ಸಲ ಚಿಮ್ಮುವುದು ತಿಳಿನೀರ ಚಿಲುಮೆಯಂತೆ! ಒಂದು ಸಲ ಉರುಳುರುಳಿ ಹೊಮ್ಮುವುದು ಕಿರುಝರಿಯಂತೆ!! ಬಣ್ಣದ ಪುತ್ಥಳಿಯಲಿ ಗಾನದಮೃತ! ಅದರ ಕೋಮಲವಾದ ಕಂಠದಲಿ ಹುಟ್ಟಿ ಹರಿಯುತಿದೆ ಭರವಸೆ! ಆಹಾ! ಯಾರಿಗಾಗಿ ಈ ಗಾನಮಧು….?
ನಿರಾಶೆ ನಿರ್‍ನಾಮವಾಗಿ ಶಾಂತಿ ಮೊಳೆಯತೊಡಗಿತು.
“ಪಕ್ಷೀ, ನಿನ್ನ ಹೆಸರೇನು?” ಎಂದು ಕೇಳಿದೆ.
“ನಾನರಿಯೆ” ಎಂದು ಹಾಡಿತು ಹಕ್ಕಿ.
ಆಹಾ! ಹೆಸರಿಲ್ಲದ ಪಕ್ಷಿ! ಆದರೇನು? ಕಾಗೆಗೆ ಹೆಸರಿದೆ! ಗೂಗೆಗೆ ಹೆಸರಿದೆ! ನನಗೂ ಹೆಸರಿದೆ!- ಬಂತೆ ಭಾಗ್ಯ? ಖ್ಯಾತನಾಮರೆನಿತು ಜನ ನಿರ್‍ನಾಮರಾಗಿಲ್ಲ! ಹೆಸರಿಲ್ಲದಿರೇನು? ತರತರದ ರಾಗ ರುಚಿಯಿರೆ!-ಗಾನದಿಂಪಿರೆ!
“ಓ! ಹೆಸರಿಲ್ಲದ ಪಕ್ಷಿಯೇ, ಇಲ್ಲಿ ಬಾ” ಎಂದೆ.
ಪಕ್ಷಿಯು ಹಾರಿಬಂದು ಕಿಟಕಿಯಲ್ಲಿ ಕುಳಿತು,-
“ಕರೆದುದೇಕೆ?” ಎಂದಿತು,
“ಅನಾಮಿಕ, ಯಾರಿಗಾಗಿ-ನಿನ್ನ ಗಾನ?” ಎಂದು ಕೇಳಿದೆ.
“ಯಾರು ಮನವಿಟ್ಟು, ಕಿವಿಗೊಟ್ಟು ಎದೆತೆರೆದು ಆಲಿಸುವರೋ ಅವರಿಗೆ”.
“ಆಹಾ! ಇದೊ-ಇದೋ ನನ್ನ ಕಿವಿ, ನನ್ನ ಮನ, ನನ್ನ ಹೃದಯ ನಿನ್ನವು. ನನಗೆ ಗಾನ ಮಾಡುವೆಯಾ?”
“ಓಹೊ! ಮಾಡುವೆ”.
“ದಿನದಿನವೂ ಹಾಡುವೆಯಾ?”
“ದಿನದಿನವೂ ಹಾಡುವೆ. ದಿನದಿನವೂ ಹಾಡುತಿರುವೆ!”
“ಆಹಾ? ಇದೆ ಮೊದಲು ನಾ ಕೇಳಿದುದು!”
“ಅದು ನನ್ನ ತಪ್ಪೆ? ನಿನ್ನೆಡೆಯಲಾಸೆಗೆಡೆಗೊಟ್ಟೆ! ಕಡಲ ಹೀರಿ ಅಂಬರವನಪ್ಪುವ ಆಸೆ! ನಿನ್ನ ಮನ ಮುದುರಿ ಕಿವಿ ಮುಚ್ಚಿತು! ಇಂತಿರಲು ಹೆಸರಿಲ್ಲದ ಬಡಪಾಯಿಯ ಗಾನವ ಕೇಳಲು ಸಮಯವೆಲ್ಲಿ?”
“ಇಲ್ಲ, ಇಲ್ಲ! ಹಾಗೆನ್ನದಿರು ಕಾಯ ತಳೆದ ಕಾಮನ ಬಿಲ್ಲೇ! ಈಗ ಎಲ್ಲ ಆಸೆಗಳೂ ಕರಗಿ, ಆರಿ ಗುರುತಿಲ್ಲದಾದುವು. ಹೊಸತೊಂದು ಆಸೆ ಮೂಡುತಿದೆ ಎದೆಯಲಿ!”
“ಏನದು?”
“ನಿನ್ನ ಗಾನದಮೃತದಲಿ ತೋಯಚಬೇಕೆಂದು-ತಣಿಯ ಬೇಕೆಂದು!”
“ನಿನ್ನಾಸೆ ಫಲಿಸಿತೆಂದು ತಿಳಿ! ಬಯಕೆ ತೋರಲು, ಇಲ್ಲಿ ಬಂದು ಕುಳಿತು ಒಂದು ಸಲ ನೆನೆ ನನ್ನ; ತೋಯಿಸುವೆನು-ತಣಿಸುವೆನು ನಿನ್ನ!”
“ಸುಖಿಯಾದೆ!….. ಇರಲ್ಲಿ ನಿನ್ನ ಗಾನಕೇನ ಕೊಡಲಿ?”
“ನಿನ್ನ ಕಿವಿ, ನಿನ್ನ ಮನ, ನಿನ್ನ ಎದೆ!”
* * *
ನಾನಂದಿನಿಂದಾ ಪಕ್ಷಿಯ ಗೆಳೆಯನಾದೆ!
ಯಾವ ದಿನವಾದರೂ ಸರಿಯೆ, ಯಾವ ಹೊತ್ತಾದರೂ ಸರಿಯೆ, ಮುರುಕು ಕಿಟಿಕಿಯ ಬಳಿ ನಾ ಕುಳಿತು ಗೆಳೆಯನನೊಮ್ಮೆ ನೆನೆಯೆ ಅವನು ಎಲ್ಲಿಂದಲೋ ಮೂಡಿ ಬರುತಾನೆ! -ಹಾಡಿಕೊಂಡೇ ಬರುತಾನೆ! ಎನಿತು ದಿನ ಕೇಳಿರುವೆನೋ! ಏನೇನು ಕೇಳಿರುವೆನೋ! ಎಣಿಕೆಯುಂಟೆ? ಎಂತಹ ಗಾನರಸಲಹರಿ! ಅದರಲೇನು ರಾಗದೂರ್‍ಮಿ ಮಾಲೆ! ಒಂದೊಂದು ಗಾನವೂ ಒಂದೊಂದು ಕಥೆ! ಆ ಗಾನ ಕಥೆಗಳ ಸುಖವೋ ದುಃಖವೋ!-ಧೈರ್‍ಯವೋ ದೈನ್ಯವೊ!- ಪ್ರಣಯವೋ ಪ್ರೇಮವೋ!- ಚೆಲುವೋ ಒಲವೊ!
ಇದೋ, ಇವು ನನಗೆ ಆ ಪುಟ್ಟ ಅನಾಮಿಕ ಅಂಬರವಿಹಾರಿಯು ಹಾಡಿದ ಅಮರಗಾನಗಳಲಿ ಕೆಲವು. ಅದರ ಕಂಠಸಿರಿಯನೀ ಬಡ ನುಡಿಗಳಲಿ ವರ್‍ಣಿಸಲೆತ್ಲಿಸಿರುವೆನು.
ರಸಿಕರೂ ಸಹೃದಯರೂ ಆದ ಶ್ರೋತೃಗಳಿರಾ, ಮನವಿಟ್ಟು, ಕಿವಿಗೊಟ್ಟು ಕೇಳಿ-ಎದೆದೆರೆದು. ತುಂಬಿಕೊಳಿ. ನೀವು ಮೆಚ್ಚಿ ತಲೆ ದೂಗಿದರೆ, ನಾನು ಕಿಟಿಕಿಯ ಬಳಿ ಕುಳಿತುದು ಸಾರ್‍ಥಕವಾಯ್ತು- ಪಕ್ಷಿಯು ಹಾಡಿದುದೂ ಸಾರ್‍ಥಕವಾಯ್ತು.
ಇಂತು-
ಕುಟೀರವಾಸಿ
ಆನಂದ.
*****