ನಾವೆಲ್ಲ ಕುಬ್ಜರು
ಮನಸ್ಸು, ಬುದ್ಧಿ, ಭಾವನೆಯಿಂದ
ಚೇತನ, ಚಿಂತನ, ವಿವೇಕದಿಂದ
ನಾವು ವಿಶಿಷ್ಟರಲ್ಲ
ಸಾಮಾನ್ಯರು, ಅದಕೆಂದೆ
ಎಲ್ಲ ಕಾಲದಲ್ಲಿಯು
ಕುಬ್ಜರಿರ ಬೇಕೆಂದೆ
ಲೋಕದ ಬಯಕೆ.
ವಕ್ತಾರರಿಗೆ ಶೋತೃಗಳಾಗಿ
ನೇತಾರರಿಗೆ ಹಿಂಬಾಲಕರಾಗಿ
ಭೋಧಕರಿಗೆ ಪಾಠಕರು
ಅಂದೋಲನಕೆ ಗುಂಪು
ಧರ್ಮಕ್ಕೆ ಭಕ್ತರಾಗಿ,
ಸಂಪ್ರದಾಯಗಳಿಗೆ ಮತಿಮಂದರಾಗಿ
ಆಡಳಿತೆಗೆ ಬಾಬುಗಳು
ಗಿರಣಿಗಳಿಗೆ ಕಾರ್ಮಿಕರಾಗಿ
ತೋಪುಗಳಿಗೆ ಕಾರ್ತೂಸ್
ಪಕ್ಷದೊಡೆಯರಿಗೆ ಯಸ್‌ಮೆನ್
ಆಳುವವರಿಗೆ ಗುಲಾಮರಾಗಿ
ವ್ಯವಸ್ಥೆಗೆ ಭ್ರಷ್ಟರು
ಡೆಮೊಕ್ರಸಿಗೆ ಮಿಡಿಯೊಕರು
ಮತವಾದಿಗಳಿಗೆ ಮೂರ್ಖರು
ಪಾರ್ಟಿಯ ಅಂಧ ಅನುಯಾಯಿಗಳಾಗಿ
ನಾವೆಲ್ಲ
ಯುಗ ಯುಗದಿಂದ
ಅವರಿಗಾಗಿಯೆ ಬದುಕಿ ಬಂದಿದ್ದೇವೆ
ಕ್ರೀತದಾಸರು ನಾವು
ಇತಿಹಾಸದ ಚಿಂದಿ ಹೊಲಿಯುತ್ತೇವೆ
ಇತಿಹಾಸ ಅವರದು
ನಾವು ಶಾಯಿ ಮಾತ್ರ
ವಿಜಯ ಅವರದು
ನಾವು ಗಾಯಾಳುಗಳು
ಎಂದೆಂದಿಗೂ
ಗಾಯಗೊಂಡ ಸಿಪಾಯಿಯಾಗಿ
ಆ ದೈತ್ಯರ ಸೇವೆಗೈಯುತ
ಬದುಕ ಬೇಕಾಗಿದೆ
ಕುಬ್ಜರಾಗಿ.
*****
ಮೂಲ: ಗಿರಿಜಾ ಕುಮಾರ ಮಾಥುರ್
(ಹಿಂದಿ)