ಅನಾವರಣ

ಅನಾವರಣ

ಚಿತ್ರ: ಗರ್ಡ್ ಆಲ್ಟ್‌ಮನ್ನ್‌
ಚಿತ್ರ: ಗರ್ಡ್ ಆಲ್ಟ್‌ಮನ್ನ್‌

ಆಟೋ ಇಳಿಯುತ್ತಿದ್ದಂತೆ ಮೊದಲು ಕಂಡ ಮುಖವೇ ರಂಗಣ್ಣನದು. ಮನೆಯ ಒಳಗೆ ಹೆಜ್ಜೆ ಇಡಲೇ ಜಿಗುಪ್ಸೆ ಉಂಟಾಯಿತು. ಸತ್ತವರ ಮನೆಯ ಮುಂದೆ ಬೆರಣಿಯ ಹೊಗೆ ಹಾಕೋದು ತಪ್ಪಬಹುದು. ಆದರೆ ರಂಗಣ್ಣ ಬರೋದು ತಪ್ಪಲ್ಲ.  ಬಂಧು ಬಾಂಧವರ ಸಂಸ್ಕಾರಗಳಿಗಷ್ಟೇ ಅಲ್ಲ ಮಿತ್ರರು ಅಕ್ಕಪಕ್ಕದ ಮನೆಯವರ ಸಾವಿಗೂ ಹಾಜರಿ ಹಾಕಿಬಿಡುತ್ತಿದ್ದ. ಅವನ ಸಿ‌ಎಲ್, ಇಯಲ್ ರಜೆಗಳೆಲ್ಲ ಈ ಕಾರ್ಯಕ್ಕೇ ಬಹಳಷ್ಟು ಮೀಸಲು. ಮದುವೆ ಮುಂಜಿ ಗೃಹಪ್ರವೇಶ ಧಾರ್ಮಿಕ ಕಾರ್ಯಕ್ರಮಗಳಿಗೆ ಇಂವಾ ಯಾವತ್ತೂ ಗೈರು ಹಾಜರಿ. ಎಲ್ಲಿ ಯಾರು ಸತ್ತರೂ ಹಾಜರು.

ಹೆಣಕ್ಕೆ ಮೀಯಿಸಿ ಹೊಸ ಬಟ್ಟೆ ತೊಡಿಸಿ ತಲೆಗೆ ಪೇಟ ಸುತ್ತಿಟ್ಟು ಹಣೆಗೆ ಮೂರೆಳೆ ಈಬತ್ತಿ ಹಚ್ಚಿ, ಮೈ ಕೈಗೆಲ್ಲಾ ಮೂರೆಳೆ ಎಳೆದು ಹೂಹಾರಗಳನ್ನು ಹಾಕಿ ಅದ್ಭುತವಾಗಿ ಅಲಂಕಾರ ಮಾಡುತ್ತಿದ್ದ.  ಸಂಬಂಧಪಟ್ಟ ಮನೆಯೋರು ದುಃಖದಲ್ಲಿರುತ್ತಾರೆ. ಕೆಲವರು ಸಾವಿನ ಮನೆಗೆ ಬಂದರೂ ಹೆಣ ಮುಟ್ಟೋದಿರಲಿ ದೂರದೂರ. ಹಲವರಿಗೆ ನೋಡೋಕು ಭಯ. ಮೂಗಿನ ಹೊಳ್ಳೆಗಳಲ್ಲಿ ಹತ್ತಿ ತುರುಕಿ ಬಾಯಲ್ಲಿ ಅಕ್ಕಿ ಸುರಿದು ಉದ್ದಕೆ ಕುಂಕುಮ ಬಳಿದು ಅದಕ್ಕೊಂದು ವಿಕಾರ ರೂಪ ತಂದುಬಿಟ್ಟಿರುತ್ತಾರಲ್ಲವೆ. ಇಂಥ ಜನರ ಮಧ್ಯೆ ಹೆಣ ಶೃಂಗಾರ ಮಾಡುವ, ಹೆಣ ಹೊರುವ ರಂಗಣ್ಣ ಹೀರೋ ಆಗಿಬಿಡುತ್ತಿದ್ದ.

ಇಂಥ ಯಾವುದೇ ಸಂದರ್ಭ ಜರುಗಲಿ, ‘ರಂಗಣ್ಣ ಬಂದಿದ್ದಾನೇನ್ರಯ್ಯ?’ ಅಂತ ಹಿರಿಯರು ಕೇಳೋದೇ ಈ ಪೀಡೆಯನ್ನು. ಅವನಿದ್ದನೋ ಚಟ್ಟ ಕಟ್ಟುವುದರಿಂದ ಹಿಡಿದು ಚಿತೆಗೆ ಏರಿಸೋವರ್ಗೂ ನಂತರ ಧಾರ್ಮಿಕ ಕ್ರಿಯೆಗಳನ್ನು ಪೂರೈಸುವವರೆಗೂ ಅವನದೇ ಪಾರುಪತ್ಯ. ಬ್ರಾಹ್ಮಣ ಕೈ ಕೊಟ್ಟರೆ ಮಂತ್ರ ಹೇಳಲೂ ಹಿಂಜರಿವನಲ್ಲ. ಶೂದ್ರನಾದರೂ ಬ್ರಾಹ್ಮಣ ಬುದ್ದಿ ಬ್ರಾಹ್ಮಣ ಶವಗಳ ಗೊಡವೆಗೆ ಮಾತ್ರ ಇವ ಹೋದದ್ದಿಲ್ಲ ಅಥವಾ ಅವರು ಇವನನ್ನೇಕೆ ಹತ್ತಿರ ಬಿಟ್ಕೋತಾರೆ.  ಊರಲ್ಲಿ  ಹೊರಲೆಂದೇ ಬ್ರಾಹ್ಮಣ ಯುವಕರ ಸಂಘ ಇದೆ. ನಮ್ಮವಕ್ಕೋ ಸತ್ತವನೆಲ್ಲಿ ಗಾಳಿಯಾಗಿ ಬಡ್ಕೋತಾನೋ ಅಂಬೋ ಹಲಬು. ಹೀಗಾಗಿ ಧೈರ್ಯಶಾಲಿಯಂತೆ ತೋರುವ ರಂಗಣ್ಣ ಊರು ಕೇರಿಯವರಿಗೆ ಪರಮಾಪ್ತ. ‘ಭಾರಿ ಸರಳ ಅದಾನ್ರಿ, ಒಂದೀಟ್ಟಾರ ಆಹಂಕಾರ್ವೆ ಕೈಯಿಂದ ಕಾಸು ಖರ್ಚು ಮಾಡಿಯಾದ್ರೂ ಸತ್ತವರಿಗೆ ಸದ್ಗತಿ ಕಾಣಿಸ್ತಾನೆ. ಧಾರಾಳಿ. ದೇವರಂಥ ಮನುಷ್ಯ’ ಅಂಬೋ ಪ್ರಶಸ್ತಿ ದಕ್ಕಿದೆ.

ಮಂದಿ ಅವನನ್ನು ಹಾಡಿ ಹೊಗಳುವಾಗ ನನಗೂ ಮೈ ಪರಚಿಕೊಳ್ಳುವಷ್ಟು ಕಿರಿಕಿರಿ. ಏಕಂದರೆ ರಂಗಣ್ಣ ಇವರು ತಿಳಿದಷ್ಟು ಸಾಚಾ ಅಲ್ಲವೇ ಅಲ್ಲ. ಕೈ ಬಾಯಿ ಕಚ್ಚಿ ಯಾವುದೂ ನಭದ್ರ. ಮಹಾತಲುಬಿನ ಮನುಷ್ಯ. ನಾನು ದುಡಿಯುವ ಕಚೇರಿಯಲ್ಲೇ ಗುಮಾಸ್ತನಾದರೂ ಸಾಹೇಬನನ್ನು ಬುಕ್‌ಮಾಡಿಕೊಂಡು ಚೆನ್ನಾಗಿ ಕಮಾಯಿಸ್ತಾ ಹಾಯಾಗಿದಾನೆ. ಹೊಸ ಸಾಹೇಬ ಬಂದನೆಂದಿಟ್ಟುಕೊಳ್ಳಿ ಅವನ ಮಕ್ಕಳಿಗೆ ಕಾನ್ವೆಂಟಿನಲ್ಲಿ ಕಾಲೇಜಿನಲ್ಲಿ ಹೆಂಗಾರ ಸೀಟ್ ಕೊಡಿಸಿ ಸೇರಿಸೋ ಚಾಣಾಕ್ಷ. ಸಾಹೇಬನ ಹೆಂಡ್ರು ಮಕ್ಕಳನ್ನು ಸಿನಿಮಾಕ್ಕೆ ಕರೆದೊಯ್ದು ಕೂರಿಸಿ, ತಾನು ಮಾತ್ರ ಹೊರಗೇ ಜೀಪಿನಲ್ಲಿದ್ದು ಅವರು ಚಿತ್ರ ನೋಡಿ ಬಂದ ನಂತರ ಜೋಪಾನವಾಗಿ ಮನೆ ತಲುಪಿಸೋ ಪ್ರಾರ್ಟ್ ಟೈಮ್ ಡ್ರೈವರ್, ಸಾಹೇಬನ ಹೆಂಡತಿಯನ್ನು ಶಾಪಿಂಗ್‌ಗೆ ಕರೆದೊಯ್ಯುವ ಚಪರಾಸಿ. ಸಾಹೇಬನಿಗೆ ಕಂಟ್ರ್ಯಾಕ್ಟರ್‌ಗಳಿಂದ ಕಮಿಷನ್ ಕೊಡಿಸುವ ಮೀಡಿಯೇಟರ್. ವ್ಯವಹಾರ ಕುದಿರಿಸುವ ದಳ್ಳಾಳಿ ರಂಗಣ್ಣನ ಮೇಲೆ ಯಾವ ಸಾಹೇಬನೂ ಎಂದೂ ಗರಂ ಆಗಿದ್ದನ್ನು ಈವರಿಗೆ ಕಂಡವರಿಲ್ಲ. ಯಾವುದೇ ಸಾಹೇಬ ಬರಲಿ ರಂಗಣ್ಣನಿಲ್ಲದೆ ಅವನ ಬೇಳೆ ಬೇಯದು. ಇಂವಾ ಮಹಾ ಲಂಚಕೋರ ಅಂತೆಲ್ಲಾ ಲೋಕಲ್ ಪತ್ರಿಕೆನೋರು ಬರೆದಿದ್ದನ್ನು ಓದಿದ ಕೆಲ ಸಾಹೇಬ್ರು ಇವನನ್ನು ದೂರೀಕರಿಸಿದ್ದುಂಟು.

‘ರಂಗಣ್ಣನ್ನ ಸರಿ ಮಾಡ್ಕಳಿ ಸ್ವಾಮಿ. ಮನೆಗೆ ಹೊಗುವಾಗ ಕೈ ತುಂಬಾ ತಕ್ಕೊಂಡು ಹೊಕ್ಕಿರಿ’ ಆಫೀಸಿನ ಜವಾನರೇ ಸಾಹೇಬರಿಗೆ ತಲೆ ಕೆಡಿಸೋದುಂಟು. ಮನೆಗೆ ಹೋದೊಡನೆ ಪರ್ಸ್ ಚೆಕ್ ಮಾಡುವ ಹೆಂಡ್ರಿಗೆ ಪುಡಿ ನೋಟು ದೂರೆತಾಗ ಅವರೇ, ರಂಗಣ್ಣ ಅಂತ ಇದಾನಂತಲ್ರಿ! ಅವನ್ನ ಯಾಕೆ ದೂರ ಇಟ್ಟೀರಿ ಅಂತ ದಬಾಯಿಸೋದುಂಟು. ಸಾಹೇಬರ ಹೆಂಡ್ರಿಗೆ ಜವಾನರಿಗಿಂತ ಅಪ್ತರು ಉಂಟೆ? ದಿನವೆಲ್ಲ ಪುಡಿಗಾಸು ಕೈಲಿಡುವ ರಂಗಣ್ಣನಿಗಾಗಿ ಜವಾನರು ಇಷ್ಟೂ ಮಾಡರೆ. ದೂರವಿಟ್ಟು ದಮ್ಮಡಿ ಕಾಣದ ಸಾಹೇಬ ರಂಗಣ್ಣನನ್ನು ಆಗಾಗ ಚೇಂಬರಿಗೆ ಕರೆದು ಡಿಸ್ಕಸ್ ಮಾಡಲೂ ಚಾಲೂ ಮಾಡಿದವನೆಂದರೆ ಅಲ್ಲಿಗೆ ತೀರಿತು, ರಂಗಣ್ಣ ಸಾಹೇಬ ಇಬ್ಬರು ದುಂಡುಗಾದಂತೆಯೆ. ಸಾಹೇಬನಿಗೆ ತಲೆಹಿಡಿಯಲೂ ಹೇಸದ. ಲಂಚವಿಲ್ಲದೆ ಫೈಲನ್ನೆಂದೂ ಟಚ್ ಮಾಡದ ಕಡು ಭ್ರಷ್ಟ ದೇವತಾ ಮನುಷ್ಯನೇ? ನಾನೇನು ಪರಮ ಸಾಚಾ ಅಂತೇನು ಹೇಳಿಕೊಳ್ಳೋಲ್ಲ ಬಿಡಿ. ಯಾರಾದರೂ ತಾವಾಗಿಯೇ ಕೊಟ್ಟರೆ ತಗೋತಿನಿ. ಆದರೆ ಡಿಮ್ಯಾಂಡ್ ಮಾಡೋನಲ್ಲ ದುಡ್ಡು ಕೈಗಿಟ್ಟ ಮೇಲೂ ಸತಾಯಿಸೋನಲ್ಲ. ಆಸಾಮಿ ಕಾಸು ಬಿಚ್ಚೋನಲ್ಲವೆಂದು ಖಾತರಿಯಾದ ಮೇಲೂ ಸುಖಾಸುಮ್ಮನೆ ಕ್ವಯರಿಗಳ್ನ ಹಾಕ್ತಾ ಹಿಂಸಿಸುವ ರಂಗಣ್ಣನಂತೆ ಅಲ್ಲವೇ ಅಲ್ಲ ‘ಹಾಳಾಗಿ ಹೋಗಿ’ ಅಂತ ಅಂಥೋರ ಫೈಲ್ನ ಮೂವ್ ಮಾಡಿಬಿಡ್ತೇನೆ. ಆದರೂ ಪಬ್ಲಿಕ್ ಹೆದರೋದು ಅವನ್ನೇ, ಏಕೆಂದರೆ ಸಾಹೇಬ ಅವನು ಹೇಳಿದ ಗೆರೆ ದಾಟಲ್ಲ ಎಂದವನೇ ಸುದ್ದಿ ಹಬ್ಬಿಸಿಬಿಟ್ಟರುತ್ತಾನಲ್ಲ.

ಹೂವಿನ ಹಾರದ ಪಟ್ಟಣ ಬಿಚ್ಚಿ ಶವಕ್ಕೆ ಹಾರ ಹಾಕಿ ನಮಸ್ಕರಿಸಿ ಮೂಲೆಗೆ ಹೋಗಿ ದೂರ ನಿಲ್ಲುತ್ತೇನೆ. ‘ಶರಣರ ಸಾವು ಮರಣ್ಯಾಗ ನೋಡಿ ಅಂದಾರೆ.’ ರಾಮಯ್ಯ ಕಾಫೀ ಕುಡಿದು ಲೋಟ ಕೆಳಗಿಟ್ಟಿದಾರೆ. ಪತ್ರಿಕೆ ಕೈಯಲ್ಲೇ ಇದೆ ಟಿ.ವಿ.ನಾಗೆ ಪ್ರೋಗ್ರಾಮ್ ಚಾಲೂ ಆಗ್ತಾನೆ ಇದೆ, ಆದ್ರೆ… ಹೋಗಿಬಿಟ್ಟವರೇ! ಕಾಫೀ ಲೋಟ ಎತ್ಕೊಂಡು ಹೋಗಾಕೆ ಬಂದ ಸೊಸಿ ನೋಡಿಕೊಳ್ದೆ ಹೋಗಿದ್ರೆ ಏಟು ಹೊತ್ಗೆ ತಿಳಿಯೋದೋ ಏನ್ ಕಥೇಯೋ. ರಾಮಯ್ಯ ಬಾಳ ಪುಣ್ಯ ಮಾಡಾನ್ರಿ. ಎಲ್ಲರ್ಗೂ ಇಂಥ ಸುಖವಾದ ಸಾವು ಎಲ್ಲಿ ಬರುತ್ತೇಳ್ರಿ? ಯಾರ ಕೈಲೂ ಸೇವೆ ಮಾಡಿಸ್ಕಣ್ದಂಗೆ ಹೇಲು ಹುಚ್ಚೇಲಿ ಬಿದ್ದು ಒದ್ದಾಡದಂಗೆ ತಟ್ಟಂತ ಹೋದ್ನಲ್ಲ – ರಂಗಣ್ಣನ ಗುಣಗಾನ ನಡೆದಿದೆ. ನನಗೋ ಮೈ ಉರಿತದೆ.

ಶರಣರ ಸಾವು ಮರಣದಲ್ಲಿ ಅನ್ನೋ ಮಾತನ್ನು ನಾನಂತೂ ಶರಣರಾಣೆಗೂ ನಂಬೋನಲ್ಲ ಈ ರಾಮಯ್ಯ ಹತ್ತಿರ ಸಂಬಂಧಿ. ಸುಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆಗಿದ್ದೋನು. ಸೇವೆಯಲ್ಲಿದ್ದಾಗ ಊರಿಗೊಂದು ಬಂಗಲೆ ಕಟ್ಟಿದ ಖದೀಮ. ಎಸ್‌ಸಿ, ಎಸ್‌ಟಿ. ವಿದ್ಯಾರ್ಥಿಗಳಿಗೆ ಕೊಳೆತ ತರಕಾರಿ ಹುಳತ ಧಾನ್ಯಗಳ ಸಪ್ಲೆ ಮಾಡಿಸಿಯೇ ಸೊಂಪಾದವ. ನೂರು ವಿದ್ಯಾರ್ಥಿಗಳು ಇದ್ದರೆ ನೂರೈವತ್ತು ವಿದ್ಯಾರ್ಥಿಗಳಿಗೆ ಊಟ ಒದಗಿಸಿದ ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡಿಯೇ ಲಕ್ಷಗಟ್ಟಲೆ ದೋಚಿ ತನ್ನ ಇಬ್ಬರು ಹೆಣ್ಣು ಮಕ್ಕಳ ಲಗ್ನ ಮಾಡಿದ್ದ. ಇಲಾಖೆ ನೆರವು ಕೇಳಿ ಬರೋ ಹೆಂಗಸರನ್ನು ಅವರ ಸೀರೆ ಗಂಟಿನಲ್ಲಿ ಇರಿಸಿಕೂಂಡಿರುವ ಪುಡಿನೋಟುಗಳ ಸುಮೇತ ನುಂಗಿ ನೊಣದ ಬಕಾಸುರ. ಇಂಥವ ಹಾರ್ಟ್ ಅಟಾಕ್ ಆಗಿ ಸತ್ತನೆಂದ ಮಾತ್ರಕ್ಕೆ ಶರಣನೆ? ನಿಜಕ್ಕೂ ತುಂಬಾ ಒಳ್ಳೆಯವರು  ತಿಂಗಳುಗಟ್ಟಲೆ ಹಾಸಿಗೆ ಹಿಡಿದು ಹೆಂಡ್ರು ಮಕ್ಕಳೆಲ್ಲರ ತಿರಸ್ಕಾರಕ್ಕೆ ಗುರಿಯಾಗಿ ಮಲಗಿದ್ದಲ್ಲೇ ಎಲ್ಲಾ ಮಾಡಿಕೊಂಡು ವಾಸನೆ ನಾರುತ್ತಾ ಹುಳುಬಿದ್ದು ಸತ್ತಿದ್ದನ್ನೂ ನೋಡಿದ್ದೇನೆ. ತಿಂದು ಕುಡಿದು ಮಜಾ ಉಡಾಯಿಸೋ ದುರಾಚಾರಿಗಳು ವ್ಯಭಿಚಾರಿಗಳು ಕಂಡೋರಗಂಟು ಲಪಟಾಯಿಸುವ ಅಯೋಗ್ಯರು ತತ್ತಂತ ಹೋಗಿ ಬಿಡೋದುಂಟು ಇಂಥೋರು ಮಂದಿ ನಾಲಗೆಯ ಮೇಲೆ ಶರಣರಾಗಿ ನಲಿವಾಗ ಎದೆಯಲ್ಲಿ ತಳಮಳ.

‘ಅಯ್ಯೋ ಇವನೆಂಥ ದುಷ್ಟ ಗೊತ್ತೇನ್ರಿ’ ಅಂತ ಅವನ ಚರಿತ್ರಯನ್ನೆಲ್ಲಾ ಸಾರಾಸಗಟಾಗಿ ಒದರಿಬಿಡುವಷ್ಟು ಕೋಪ ಉಕ್ಕೇರುತ್ತದೆ. ಸತ್ತ ಎಮ್ಮೆಗೆ ಸೇರು ತುಪ್ಪ ಅಂದುಕೊಂಡು ಜಗಲಿ ಮೇಲೆ ಕೂರುತ್ತೇನೆ. ರಾಮಯ್ಯ ಬಂದೋರೆಲ್ಲಾ ಕೊಂಡಾಡುವವರೆ. ಸಾವಿಗೂ ಸಹ ಹುಸಿ ಗೌರವ ತಂದುಕೊಡಬಲ್ಲ ಶಕ್ತಿ ಇದೆಯಂತೆ. ಇಂತಹ ಸಂದರ್ಭದಲ್ಲಿ ಅನ್ನಿಸೋದಿದೆ. ಪಕ್ಕದ ಮನೆ ಸಜ್ಜನ ಮುದುಕ ಮಲ್ಲಾರಿಗೌಡ ಸ್ಟ್ರೋಕ್ ಆಗಿ ತಿಂಗಳಾನುಗಟ್ಲೆ ಮಲಗಿರೋ ವಿಷಯ ಬೇಕೆಂದೇ ಪ್ರಸ್ತಾಪಿಸುತ್ತೇನೆ.  ಹಲವರು ಪಾಪ ಒಳ್ಳೆಯ ಮನುಷ್ಯ ಕಣ್ರಿ ಅಂತಾರೆ. ‘ಅಯ್ಯೋ ಹೋದ ಜನ್ಮದಾಗೆ ಏನು ಪಾಪ ಮಾಡಿದ್ನೋ ಯಾರಿಗ್ಗೊತ್ರಿ?’ ಅಂದು ಕೊಕ್ಕನೆ ನಗುತ್ತಾನೆ ರಂಗಣ್ಣ.

ವೃದ್ಧರೊಬ್ಬರು ಬರುಬರುತ್ತಲೇ ರಂಗಣ್ಣನನ್ನು ನೋಡಿ ಉಲ್ಲಸಿತರಾಗುತ್ತಾರೆ. ‘ಬಂದಿದ್ದೀಯೇನಯ್ಯಾ ದೊರೆ, ಬೇಗ ಕೆಲಸ ಮುಗಿಸಿಬಿಡ್ರಪ್ಪ ಶವ ಭಾಳ ಹೊತ್ತು ಇಟ್ಕೋಬಾರ್ದು’ ಎಂದು ಸಂಭ್ರಮಿಸುತ್ತಾರೆ. ತಾನೇ ಹೋಟೆಲ್ಗೆ ಹೋಗಿ ಅಳುತ್ತಾ ಕೂತ ರಾಮಯ್ಯನ ಮಡದಿ ಮಕ್ಕಳಿಗೆಲ್ಲಾ ತಿಂಡಿ ಕಟ್ಟಿಸಿ ತಂದು ಬಲವಂತ ಮಾಡುತ್ತಾನೆ. ‘ಎಷ್ಟೇ ಪ್ರೀತಿ ಇದ್ರೂ ಸತ್ತೋರ ಹಿಂದೆ ಯಾರು ಸಾಯ್ತಾರಮ್ಮಾ?  ತಿನ್ರಮ್ಮ… ಎಷ್ಟು ದಿನ ಉಪಾಸ ಮಾಡ್ತೀರಾ… ಹಿಂಗೆ ಕುಂತ್ರೆ ಮಕ್ಕಳು ಮರಿ ನೋಡೋಕಾರ ನಿಮ್ಗೆ ಶಕ್ತಿ ಬ್ಯಾಡ್ವಾ.. ತಿನ್ನಿ ಈವತ್ತು ಅವನು, ನಾಳೆ ನಾವು ಹೋಗ್ತಿರೋದೆಯಾ ಇಲ್ಲಿ ಯಾರೂ ಪರ್ಮನೆಂಟ್ ಅಲ್ಲ ರಂಗಣ್ಣನೀಗ ವೇದಾಂತಿಯಾಗಿ ಹೋದ, ಪರ್ಮನೆಂಟ್ ಅಲ್ಲ ಅಂತ ಗೊತ್ತಿದ್ದೂ ಈ ಪಾಟಿ ದೋಚ್ತಿದಿಯಲ್ಲಾ ಇನ್ನು ಗೂಟ ಹೊಡ್ಕೊಂಡು ಇಲ್ಲೇ ಇರೋ ಹಂಗಿದ್ದಿದ್ರೆ ಎಷ್ಟು ಮನೆ ಮುರಿತಿದ್ಯೋ ಬದ್ಮಾಷ್? ದಬಾಯಿಸಲು ಮುಂದಾಗುತ್ತೇನೆ.

ನಾಲಿಗೆಯೇ ಹೊಳ್ಳದ ರಂಗಣ್ಣ ಶವವನ್ನು ಹೊರ ತಂದು ಸ್ನಾನ ಮಾಡಿಸುವ ಕಾಯಕಕ್ಕೆ ಚಾಲನೆ ಕೊಡುತ್ತಾನೆ. ಕೆಲವರು ನೆರವಾಗುತ್ತಾರೆ. ದುಃಖದಲ್ಲಿರುವ ಹೆಣ್ಣು ಮಕ್ಕಳನ್ನು ತಾನಾಗಿಯೇ ಮುಂದಾಗಿ ಸಂತೈಸೋ ನೆಪದಲ್ಲಿ ತಬ್ಬೋದು ಮೈ ಸವರೋದು ನೋಡುವಾಗ ಎದ್ದುಹೋಗಿ ನಾಕು ಬಾರಿಸಲೇ ಅನಿಸುತ್ತದೆ. ವಿಧವೆಯೊಬ್ಬಳಿಗೆ ಅವಳ ಗಂಡನಿಂದ ಬರಬೇಕಾದ ಪೆನ್ಷನ್ ಇತರೆ ಬಾಬ್ತಿನ ಹಣ ಸ್ಯಾಂಕ್ಷನ್ ಮಾಡಿಸುವ ನೆಪದಲ್ಲಿ ಹೆಡ್ ಆಫೀಸಿಗೆ ಅವರ ಖರ್ಚಿನಲ್ಲೇ ಕರೆದೂಯ್ದು ಬೆಂಗಳೂರು ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುವ ಈ ಪ್ರಚಂಡ ಅದೆಷ್ಟು ವಿಧವೆಯರನ್ನು ತಿಂದು ತೇಗಿದ್ದಾನೋ, ಆದರೂ ಅವನೇ ಎಲ್ಲರಿಗೂ ಬೇಕಲ್ಲ! ‘ನನ್ಮಗ ದುಡ್ಡು ತಿಂತಾನೆ ಆದ್ರೆ ನಿಯತ್ತಿನಿಂದ ಕೆಲ್ಸ ಮಾಡಿಕೊಡ್ತಾನ್ರಿ’ ಅವನ ನಿಯತ್ತಿನ ಬಗ್ಗೆ ಹೀಗೆಲ್ಲಾ ಹೊಗಳೋರನ್ನ ಸುಟ್ಟುಬಿಡಬೇಕು ಎನಿಸುತ್ತದೆ.

ಇತ್ತೀಚೆಗೆ ನಾನೊಬ್ಬನೇ ಏನೋ ಅವನನ್ನು ನಿಂದಿಸೋನು ಎಂಬ ಭಯ ಕಾಡಿದಾಗ ಅವರಿವರ ಬಳಿ ಹೇಳಿಕೊಂಡಿದ್ದೇನೆ, ನನ್ಮಗನಿಗೆ ಎಂತದೂ ಆಗಿಲ್ಲ ನೋಡ್ರಿ ಎಂದು ಅಸಹನೆ ತೋರಿದಾಗ ಮೇನೇಜರ್ ಅಂದಿದ್ದು ನೆನಪಿಗೆ ಬರುತ್ತದೆ ‘ನೋಡ್ತಿರಿ ಅವನಿಗಿಲ್ಲದಿದ್ದರೆ ಅವನ ಮಕ್ಕಳು ಮರಿಗಾರ ಬಡವರ ನಿಟ್ಟುಸಿರು ತಟ್ಟದೇ ಇದ್ದೀತಾ? ಆದರೆ ಅವನ ಮಕ್ಕಳಿಗೇನಾಗಿದೆ? ಎಲ್ಲಾ ಮೆರಿಟ್ಟು ಸ್ಟೂಡೆಂಟ್ಸ್ ಒಬ್ಬ ಮಗನಾಗಲೇ ಸಾಫ್ಟ್‌ವೇರ್ ಎಂಜಿನೀಯರ್, ಒಬ್ಬ ಮೆಡಿಕಲ್ಲು, ಮಗಳು ಡೆಂಟಲ್ಲು ಹಾಗೆ ನೋಡಿದರೆ ನನ್ನ ಮಕ್ಕಳಿಬ್ಬರೂ ಅವರೇಜಲ್ಲಿ ಡಿಗ್ರಿ ಮುಗಿಸಿ ಜಾಬ್ ಇಲ್ದೆ ಅಲೀತಿವೆ. ಒಳ್ಳೆಯವರಿಗೆ ಒಳ್ಳೆದಾಗುತ್ತೆ ಅನ್ನೋ ಮಾತು ಕೂಡ ಆಡೋಕೆ ಅದೆಷ್ಟು ಹಿತ.

‘ರಂಗಣ್ಣಾ ಚಟ್ಟ ಬಲವಾಗಿ ಕಟ್ಟಿದ್ದಿಯೇನಯ್ಯ?’ ಯಾರೋ ವಿಚಾರಿಸುತ್ತಾರೆ. ‘ಬೇಕಾದರೆ ಮಲ್ಕಂಡ್ ನೋಡ್ರಿ. ಎರಡು ಹೆಣ ಹಾಕಿ ಹೊತ್ತರೂ ಚಟ್ಟ ಪಿಟಕ್ ಅನ್ನಲ್ಲ’ ಧಿಮಾಕಿನ ಜೋಕ್ ಹೊಡೆದು ನಗುತ್ತಾನೆ. ಶವ ಹೊರಗೆ ಕೂರಿಸಿ ಅಲಂಕಾರ ಮಾಡೇ ಮಾಡುತ್ತಾನೆ. ನಿಂತು ನೋಡಿ ಬೀಗುತ್ತಾನೆ. ಹೆಂಗ್ರಿ ಗೌಡ್ರೆ. ರಾಮಯ್ಯ ಎದ್ದು ಬರಂಗೆ ಕಾಣ್ತಾನ್ ನೋಡ್ರಿ’ ಅಂದು ಬರುವ ಪ್ರಶಂಸೆಗಾಗಿ ಅತ್ತಿತ್ತ ನೋಡುತ್ತಾನೆ. ‘ಊರೂ ಉಪಕಾರ ಅರೀದು ಶವ ಶೃಂಗಾರ ಅರೀದು ಸುಮ್ನೆ ಎತ್ತಯ್ಯ ಹೆಣನಾ’ ಅಂತ ಚೀರಬೇಕು ಎನ್ನಿಸುತ್ತದೆ. ಶವಯಾತ್ರೆ ಸಾಗಿದಾಗ ನೆಂಟನಾದ ನಾನೇ ಹೆಗಲು ಕೂಡಲು ಅಂಜಿದರೂ ಇಂವಾ ಹೆಗಲು ಕೊಡುತ್ತಾನೆ. ‘ಇದು ಶಿವನ ಬಿಟ್ಟಿ ಪುಣ್ಯದ ಕೆಲ್ಸ’ ಅಂತ ತಿಣುಕುತ್ತಾನೆ. ಅದೇನೋ ಶವಗಳಿಂವ ನಾನೊಂದಿಷ್ಟು ದೂರವೇ ಇದ್ದು ಬಿಡುತ್ತೇನೆ. ಭಯ ಅಂತೇನಿಲ್ಲ ಮನಸ್ಸಿಗೆಂತದೋ ಬೇಜಾರು.

ಸಾಮಾನ್ಯವಾಗಿ ಶವಕ್ಕೆ ಹಾರ ಹಾಕಿ ಕ್ಷಣ ಅಲ್ಲಿ ಇದ್ದಂತೆ ಮಾಡಿ ಹಿಂದಿರುಗಿ ಬಿಡೋದೆ ಹೆಚ್ಚು. ಸ್ಮಶಾನಕ್ಕೆ ಹೋಗೋದೆಯಾದರೆ ಈ ವಯಸ್ಸಿನಲ್ಲೂ ಅದೆಂತದೋ ಹಿಂಜರಿತ. ಭಯ ಅಂತೇನಿಲ್ಲ. ತೀರಾ ಹತ್ತಿರದ ನೆಂಟನಾದ್ದರಿಂದ ಸ್ಮಶಾನದತ್ತ ಮೌನವಾಗಿ ಹೆಜ್ಜೆ  ಹಾಕುತ್ತೇನೆ. ‘ಯಾರ ಕಷ್ಟಕ್ಕಾದರೂ ಸರಿ ರಂಗಣ್ಣ ಭಾಗಿಯಾಗಿ ಬಿಡ್ತಾನವ. ದೇವರು ಅವನಿಗೆ ಮಸ್ತ್ ಆಯುಸ್ಸು ಕೊಡ್ಲಿ, ಹೆಂಡ್ರು ಮಕ್ಕಳು ಚೆಂದಗಿಟ್ಟಿರ್ಲಿ’ ಮುದುಕಿಯೊಬ್ಬಳ ಪ್ರಶಂಸೆ ಕೇಳಿ ಬರುತ್ತದೆ. ಇವನ ಅಸಲಿ ರೂಪ ಯಾರಿಗೆ ಗೊತ್ತು? ಇವನ ಅಪ್ಪ ತೀರಿಕೊಂಡಾಗ ಇವನೆಲ್ಲಿದ್ದ? ಇಸ್ಪೀಟ್ ಕ್ಲಬ್‌ನಲ್ಲಿದ್ದ. ನಾನೇ ಹೋಗಿ ಕರೆದಿದ್ದೆ. ಹೋಗಯ್ಯಾ ಎಲ್ಲಾ ರೆಡಿ ಮಾಡ್ಕೊಳಿ ಬರ್ತೀನಿ ಅಂದಿದ್ದ. ಅವನ ಆಣ್ಣಂದಿರೇ ಮುಂದೆ ನಿಂತು ಕಾರ್ಯ ಮಾಡಿದರು. ಮತ್ತೊಮ್ಮೆ ಅವನನ್ನು ಕರೆತರಲು ನಾನೇ ಹೋಗಿದ್ದೆ.  ಹೊಯ್ಯರಿ, ಹೋಯ್ದು ಅಲ್ಲಿ ಇಡೋದ್ರಾಗ ಬಂದು ಬಿಡ್ತೀನಿ ಹೋಗಯ್ಯ’ ಗದರಿಕೊಂಡಿದ್ದ.

ಇಂತ ಹೈವಾನನಿಗೆ ನಾಕು ಬುದ್ಧಿ ಮಾತು ಹೇಳಿದ್ದೆ. ‘ಹೋಗಲೆ ಹೆಂಡ್ತಿಗೆ ಹೆದರಿ ತಾಯಿನ ಓಡಿಸಿದೋನಿದ್ದಿ. ಸಾಯಾಕಾಲಲ್ದಾಗ ಮುದ್ಕಿ ಪಾಳು ಬಿದ್ದು ಗುಡಿಯಾಗ ಸಾಯ್ತು’ ಅಂತ ಎಲ್ಲರ ಎದುರು ಮಾನ ಕಳೆದಿದ್ದ ರಾಸ್ಕಲ್. ಮನಸು ಕಹಿಯಾಗುತ್ತೆ ಇವನೆಷ್ಟು ಫೇಮಸ್ ಆಗಿದ್ದಾನೆಂದರೆ ಈಗ ಇಂವಾ ಯಾರ ಮನೆಯಲ್ಲಾದರೂ ಕಂಡನೆಂದರೆ ಆ ಮನೆಯಲ್ಲಿ ಯಾರೋ ತಣ್ಣಗೆ ಮಲಗಿದ್ದಾರೆಂದೇ ಅರ್ಥ. ಏಕೆಂದರೆ ಇವನ ಸವಾರಿ ಚಿತ್ತೈಸುವುದು ಕೇವಲ ಸಾವಿನ ಮನೆಯತ್ತ.  ‘ಯಮ ಬಂದಾಗ್ಲೆ ನಿಂತಾನಲ್ರಿ!’ ಅಂತ್ಲೆ ನನ್ನ ಗೆಳೇರು ತಮಾಷೆ ಮಾಡೋದುಂಟು.

ಸ್ಮಶಾನದಲ್ಲಿ ಸುಡುವಾಗ ಮಾಡಬೇಕಾದ ಕೆಲ ಸಂಸ್ಕಾರಗಳನ್ನೆಲ್ಲ ರಂಗಣ್ಣ ಮುಂದೆ ನಿಂತು ಜಾಚೂ ತಪ್ಪದೇ ಮಾಡಿಸುತ್ತಾನೆ. ಶವದ ಮೇಲಿನ ಹೂ, ಬಟ್ಟೆ ಬರೆ ಎಲ್ಲಾ ತೆಗೆದು ಬೆತ್ತಲೆ ಮಾಡಿ ಚಿತೆಯ ಮೇಲೆ ಇಡುವ ತರಾತುರಿ ಇವನದು. ನಂತರ ನೀರಿನ ಮಡಿಕೆ ಹೊರಿಸಿ ಚಿತೆ ಸುತ್ತುವುದು ಮಡಿಕೆಗೆ ಮೂರು ತೂತು ಹಾಕುವುದು ಮಡಿಕೆ ಒಡೆವ ಶಾಸ್ತ್ರ, ಅಗ್ನಿ ಸ್ಪರ್ಶ ಯಾವ ಕಡೆಗೆ ಮಾಡಬೇಕು ಎಂಬುದರಿಂದ ಹಿಡಿದು ಶವದ ತಲೆ ಒಡೆದ ಶಬ್ದ ಬರೋವರ್ಗೂ ಜನರನ್ನು ಹೋಗಲೂ ಬಿಡದೇ ಕಾಡುತ್ತಾನೆ. ದೇವರ ನಾಮಗಳನ್ನು ಬೇರೆ ಹಾಡುತ್ತಾನೆ ಪಾಪಿ. ಶವ ಹೂಳುವ ಪದ್ಧತಿ, ಆಗ ಅನುಸರಿಸಬೇಕಾದ ಕ್ರಿಯೆಗಳು ಗೊತ್ತು ಭಡವನಿಗೆ. ಶವ ಹೇಗೆ ಗುಂಡಿಗೆ ಇಳಿಸಬೇಕು ಮುಚ್ಚಬೇಕು ಮಣ್ಣು ಸಲಿಕೆಯಿಂದ ಯಾವ ಬದಿಗೆ ಏಳೆದರೆ ಶುಭಾಶಯ ಎಂದೆಲ್ಲಾ ಸೂಚಿಸುವ ರಂಗಣ್ಣ ಹೆಣ್ಣುಮಕ್ಕಳ ಬಳೆ ಒಡೆವ ತಾಳಿ ತೆಗೆಸುವುದರಲ್ಲೂ ನಿಸ್ಸೀಮ.

ಈಗ ಇದೆಲ್ಲಾ ಮಾಡಿಸಬಾರದಯ್ಯ ಕೆಟ್ಟಸಂಪ್ರದಾಯ ಇನ್ನಾದರೂ ಬಿಟ್ಟುಬಿಡಿ ಅಂತ ತಿಳಿಹೇಳಬೇಕು ಎಂದುಕೊಂಡವನು ಮೌನಿಯಾಗುತ್ತೇನೆ, ಸತ್ತಾಗ ಏನ್ ಹೊತ್ಕೊಂಡು ಹೋಗ್ತಾರ್ರಿ? ಭಾರಿ ಬಂಗಲೆ ಕಟ್ಟಿಸ್ದೋನು ಒಂದು ಇಟ್ಟಿಗೆ ಕೂಡಾ ತಗೊಂಡೋಗಂಗಿಲ್ಲ ಪೆಟಾರಿ ತುಂಬಾ ನೋಡಿದ್ರೂ ಚಿಲ್ಲರೇನು ಒಯ್ಯಂಗಿಲ್ಲ ಉಸಿರು ಇರೋವರೆಗು ಹೆಂಡ್ರು ಮಕ್ಕಳು ಅಂತ ಬಡಿದಾಡಿದ್ದೇ ಆಡಿದ್ದು ಅವರಾದ್ರೂ ಹಿಂದ್ ಬರ್ತಾರ?’ ಎಂದು ಪ್ರಶ್ನಿಸುತ್ತಾ ರಂಗಣ್ಣ ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲವೋ ಹರಿಯೆ’ ಅಂತ ಹಾಡು ಶುರು ಹಚ್ಕೋತಾನೆ. ಮುದುಕರು ತಲೆ ದೂಗಿದರೆ ಹೆಂಗಸರು ಸೆರಗಿನಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾರೆ. ಅವನ ಮೊಬೈಲ್ ಮೊಳಗುತ್ತದೆ ಕಿವಿಗಿಡುತ್ತಾನೆ. ಹ್ಹಿ ಹಿ ಹಿ ಎಂದು ನಗಾಡುತ್ತಾ ಸಾಹೇಬ್ರತಾವ ಸೈನ್ ಹಾಕಿಸಿ ಇಟ್ಟೀನ್ರಿ ಸಾ, ‘ಬ್ಯಾಲೆನ್ಸ್ ಅಮೌಂಟ್ ಬರಲಿಲ್ಲವಲ್ರಿ’ ಗಡಸಾಗುತ್ತಾನೆ. ಸೆಟ್ಲ್ ಮಾಡಿ ನಾಳೆನೇ ಆರ್ಡರ್ ಕಾಫಿ ಒಯ್ಯಿರಪ್ಪಾ.. ಇರ್ಲಿ ಇಲ್ಲಿಲ್ಲ ನಂದೇ ಬ್ಯಾರೆ ಸಾಹೇಬರದೇ ಬ್ಯಾರೆ.. ಯಸ್ ಯಸ್ ಬಟನ್ ಒತ್ತುತ್ತಾನೆ. ‘ಅದೇ ಕಣೋ ಫ್ಯಾಕ್ಟರಿ ಶಿವರಾಮನ ಎನ್.ಓ.ಸಿ.’ ನನ್ನತ್ತ ನೋಡಿ ಹಲ್ಲು ಗಿಂಜುತ್ತಾನೆ.

ಇವನಿಗದಿನ್ನೆಂತ ಸಾವು ಕಾದಿರಬಹುದು. ಕುಡಿದು ತಿಂದು ಹೆಂಗಸರೊಡನೆ ಮಲಗೇಳುವ, ದುಡ್ಡಿನಲ್ಲೇ ಮುಳಗೇಳುವ ಅನಾಚಾರಿ ಭ್ರಷ್ಟಾಚಾರಿಗೆ ಅಂತ ಯೋಚಿಸ್ತೇನೆ. ಆಚ್ಚಿರಿ ಎಂದರೆ ನನಗಿರುವಂತಹ ಗ್ಯಾಸ್ಟ್ರಿಕ್, ಪೈಲ್ಸ್, ಬಿಪಿಯಾಗಲಿ, ಶುಗರ್ ಆಗಲಿ ಇವನಿಗಿಲ್ಲ ಗಟ್ಟಿ ಮುಟ್ಟಾಗಿದ್ದಾನೆ. ಆಫೀಸಿನಲ್ಲಿ ಅವನ ಮಾತಿಗೇ ಗೆಲುವು. ಇಸ್ಸೀಟಿನಲ್ಲೂ ಗೆಲುವು ಅವಂದೇ. ಹಾಗೆ ನೋಡಿದ್ರೆ ನಾನು ಗೆದ್ದಿದ್ದೇ ಅಪರೂಪ. ನೈಂಟಿ ಕುಡಿದ್ರೆ ಬೆಳಿಗ್ಗೆ ತಲೆ ಹಿಡಿದಿರುತ್ತೆ. ಇವನಿಗೆ ಒಂದು ಸಣ್ಣ ತಲೆ ನೋವು ಬಂದದ್ದು ಕಾಣೆ!

‘ಇಂತೋರ್ಗೆಲ್ಲಾ ಏನೂ ಬರೋಲ್ಲ- ಬಂದ್ರೆ ಒಂದೇ ಸಲ ಹೊತ್ಕೊಂಡು ಹೋಗೋದೆ ಬರೋದು’ ಅಂತ ವಿಷ್ಣುವರ್ಧನ್ ಯಾವುದೋ ಸಿನಿಮಾದಲ್ಲಿ ಹೊಡೆದ ಡೈಲಾಗ್  ನೆನಪಾಗಿ ಮನಸ್ಸಿಗೆಷ್ಟೋ ನಿರಾಳವಾಗುತ್ತೆ. ಸ್ಮಶಾನದಲ್ಲೇ ಶಾಸ್ತ್ರವೆಂಬಂತೆ ಕೋಳಿಮೊಟ್ಟೆ ಬಾಟಲಿಗಳನ್ನಿಟ್ಟು ನೇವೇದ್ಯ ಮಾಡುತ್ತಾರೆ ಸ್ಮಶಾನದಲ್ಲೇ ಪುಟ್ಟ ಬಾರ್ ತಲೆ ಎತ್ತುತ್ತದೆ ‘ತಲೆ ಡಬ್ ಅನ್ನದೆ ಯಾರೂ ಹೋಗಬ್ಯಾಡ್ರಿ ಕೂಡ್ರಪಾ’ ಆರ್ಡರ್ ಮಾಡುತ್ತಾನೆ ರಂಗಣ್ಣ. ಯಾಕಿಂಗ್ ತಿಂದು ಕುಡಿತೀರ್ರಲೆ… ಹಾರ್ಟೊ ಲಿವರ್ರೋ ಎನ್‌ಲಾರ್ಜ್ ಆಗಿ ನೆಗೆದು ಬಿದ್ದು ಹೋಗ್ತೀರಾ ಎಂದು ಗದರಲುದ್ಯಕ್ತನಾಗುತ್ತಾನೆ. ಅದನ್ನರಿತವನಂತೆ ‘ಕುಡಿಯದೆ ತಿಂದೆ ಇರೋರೇನು ಗೂಟ ಹೊಡ್ಕೊಂಡು ಇರ್ತಾರ? ನೆಗೆದು ಬೀಳಲ್ವೆ? ನಾವಾರ ತಿಂದು ಕುಡಿದು ಮಜಾ ಉಡಾಯಿಸ್ತೇವಪ್ಪಾ’ ಹಲ್ಲು ಗಿಂಜುತ್ತಾ ಮಾನವ ಜನ್ಮ ಬಲು ದೊಡ್ಡದು…  ಕೊಳ್ಳಬ್ಯಾಡ ಹುಚ್ಚಪ್ಪಗಳಿರಾ ಅಂತ ದಾಸರ ಪದ ಒದರುವಾಗ ಹಲವರು ತಾಳ ಹಾಕುವ ಸ್ಟೇಜಿಗೆ ಆಗಲೆ ತಲುಪಿರುತ್ತಾರೆ.

ಸತ್ತೋರ ಸಂಸಾರಕ್ಕೆಂದು ಬರೋರೆಲ್ಲಾ ಚಿರಂಜೀವಿಗಳಂತೆ ವರ್ತಿಸೋದು ಕಂಡವರ ಕಷ್ಟಕ್ಕೆ ಮರುಗೋದು ಸಂತೈಸೋದನ್ನು ನೋಡುವಾಗ ಇವರ ಹಿಂದೆಯೇ ಸಾವು ಹೊಂಚು ಹಾಕುತ್ತಿದೆ ಅಂಬೋದನ್ನ ಇವನ್ಯಾಕೆ ಮರೀತಾರಪ್ಪ? ನಗು ಬರುತ್ತದೆ. ಶವ ಸಂಸ್ಕಾರ ಮುಗಿಸಿ ಮನೆಗೆ ಬಂದು ದೀಪ ನೋಡಿಕೊಂಡು ಹುಲ್ಲು ಗರಿಕೆ ಇಟ್ಟು ಹೊರಟಾಗ ತಡಿಯಯ್ಯಾ ನಾನೂ ಬರ್ತೀನಿ ಎಂದು ರಂಗಣ್ಣ ಬೆನ್ನು ಬೀಳುತ್ತಾನೆ. ಮೈ ಚಿಟುಗುಟ್ಟುತ್ತದೆ ಜೊತೆಯಾಗಿ ನಡಯುತ್ತೇವೆ. ನಾನಂತೂ ತುಟಿ ಬಿಚ್ಚುವುದಿಲ್ಲ ‘ಆಟೋದಲ್ಲಿ ಹೋಗೋನಯ್ಯ ಬಸ್ ಸ್ಟಾಂಡ್ ದೂರ’ ಅನ್ನುವ ಅವನು ಆಟೋ ಕರೆಯುತ್ತಾನೆ. ನನಗೋ ತುಂಬಾ ದಣಿವಾಗಿರುತ್ತದೆ. ವಿಪರೀತ ಬಿಸಿಲು ಬೇರೆ, ಎದುರಾಡದೆ ಆಟೋ ಏರುತ್ತೇನೆ. ರಂಗಣ್ಣ ಹಾಯಾಗಿ ಸಿಳೆ ಹಾಕುತ್ತಾ ‘ಎಲ್ಲಾ ತುಂಬಾ ಚೆನ್ನಾಗಾಯ್ತು’  ಅಂತಾನೆ. ನನಗೆ ರೇಗುತ್ತದೆ. ‘ಇದೇನು ನಾಮಕರಣವೇ ಮದುವೆ ಮುಂಜೆ?’ ನಾಲಿಗೆಯ ತುದಿಯ ಮೇಲೆ ಬಂದ ಮಾತನ್ನು ನುಂಗಿಕೋತೇನೆ ಕಂತ್ರಿಗಳ ಹತ್ತಿರ ಎಂತಹ ಮಾತೆಂದು ಅಲಕ್ಷಿಸುತ್ತೇನೆ. ಬಸ್ಸಲ್ಲಿ ರಶ್ಶೋ ರಶ್ಶು ಸೀಟು ಹಿಡಿಯಲು ನನ್ನಿಂದಾಗದು ಎನಿಸುತ್ತದೆ. ಇವನು ಕಿಟಕಿಯಿಂದ ಟವೆಲ್ ಹಾಕಿ ನುಗ್ಗಿ ಸೀಟು ಹಿಡಿದು ‘ಹಂಗೆ ನಿಂತ್ರಾಗಲ್ಲ ಬಾರಯ್ಯ’ ಅಂತ ಬೀಗುತ್ತಾನೆ. ನಾನೇಕೋ ತುಂಬಾ ಬಳಲಿರುತ್ತೇನೆ. ಬಸ್ ವೇಗ ಹೆಚ್ಚಿಸಿಕೊಳ್ಳುತ್ತದೆ. ನನ್ನ ಮೈ ಪೂರಾ ಬೆವರೊಡೆದಿದೆ. ನಾನು ಬಸವಳಿಯೋದನ್ನು ನೋಡಲಾರದ ರಂಗಣ್ಣ ಕಿಟಕಿ ಕಡೆ ಕೂರಿಸಿ ತಾನು ನನ್ನ ಸೀಟಲ್ಲಿ ಕೂರುತ್ತಾನೆ. ಸೀಟಿನ ಕಂಬಿಗೆ ತಲೆ ಕೊಟ್ಟು ಕಣ್ಣು ಮುಚ್ಚಿದ್ದೇ ಗೊತ್ತು.

ಉಳಿಯೋ ಚಾನ್ಸೇ ಇಲ್ಲ ಮನೆಗೆ ಕರ್ಕೊಂಡು ಹೋಗಿ ಅಂದರು ಡಾಕ್ಟರು. ಆರು ದಿನದಿಂದಲೂ ಎಚ್ಚರವೇ ಇಲ್ಲ. ಬ್ರೇನ್ ಹ್ಯಾಮರೇಜಂತೆ… ಯಾವ ಸೆಕೆಂಡಲ್ಲಾದ್ರು ಜೀವ ಹೋಗಬಹುದು ಅಂದಿದಾರೆ. ರಿಲೇಶನ್ಸ್‌ಗೆಲ್ಲಾ ಫೋನ್ನಲ್ಲಿ ಕಾಂಟಾಕ್ಟ್ ಮಾಡಿದೇನೆ ಅನ್ನುತ್ತಿದ್ದಾನೆ. ಇದು ನನ್ನ ಮಗನದೇ ಧ್ವನಿ. ನನಗೂ ಮಿಸುಗಾಡಲೂ ಆಗುತ್ತಿಲ್ಲ ಸಣ್ಣಗೆ ಅಳೋದು ಕೇಳುತ್ತೆ. ನನ್ನ ಹೆಂಡ್ತಿ ಅಳ್ತಿದಾಳೆಯೇ ಗಾಬರಿಯಾಗುತ್ತೆ. ಕಣ್ಣು ತೆರೆದು ನೋಡಲು ಯತ್ನಿಸುತ್ತೇನೆ ಆಗುತ್ತಿಲ್ಲ. ದೇವರೇ ಹೀಗ್ಯಾಕೆ ಮಾಡಿದೆ ನನ್ನ ಮಕ್ಕಳ ಸ್ಟಡೀಸೇ ಮುಗಿದಿಲ್ಲ ನೌಕರಿ ಸಿಕ್ಕಿಲ್ಲ ಹೆಂಡ್ತಿಗಿನ್ನೂ ಚಿಕ್ಕ ವಯಸ್ಸು ವಿಲಿವಿಲಿಗುಟ್ಟುತ್ತಾ ಮೈನ ಸರ್ವಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ರೆಪ್ಪಗೆ ತಂದುಕೊಂಡು ತೆರೆದೊಡನೆ ಕಂಡ ದೊದಲ ಮುಖವೇ ರಂಗಣ್ಣಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಗ್ಧರ ಬಲಿ
Next post ಮಿಂಚುಳ್ಳಿ ಬೆಳಕಿಂಡಿ – ೨೧

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys