ಒಲವೇ… ಭಾಗ – ೧

ಒಲವೇ… ಭಾಗ – ೧

ಆವಗಷ್ಟೇ ಸುರಿದು ಹೋದ ಮಳೆಯ ಅಬ್ಬರ ಸಂಪೂರ್ಣ ಕ್ಷೀಣಗೊಂಡು ಜನರು ನಿಟ್ಟುಸಿರು ಬಿಡುವಷ್ಟರೊಳಗೆ ಆಗಸದಲ್ಲಿ ಒಮ್ಮಿಂದೊಮ್ಮೆಲೆ ಮತ್ತೆ ದಟ್ಟ ಕಾರ್ಮೋಡ ಕವಿದುಕೊಳ್ಳಲು ಪ್ರಾರಂಭಿಸಿ ಮಳೆಯ ಮುತ್ತಿನ ಹನಿಗಳು ಭುವಿಗೆ ಮುತ್ತಿಕ್ಕಲು ಪ್ರಾರಂಭಿಸಿತು.

ಮಳೆಯ ಹನಿಗಳ ಸಿಂಚನದಿಂದ ಮನಸೋತ ಪ್ರಕೃತಿಯು ನವ ವಧುವಿನಂತೆ ಶೃಂಗಾರಗೊಳ್ಳಲು ಅಣಿಯಾಗುತ್ತಿದ್ದಳು. ಮುಂಗಾರು ಮಳೆಯ ಮೋಡಿಗೆ ಪ್ರಕೃತಿ ಹಚ್ಚಹಸಿರಿನಿಂದ ಕಂಗೊಳಿಸಲು ಪ್ರಾರಂಭಿಸಿತು. ಮಡಿಕೇರಿಯ ಮಳೆಯೇ ಅಂಥದ್ದು. ಒಮ್ಮೆ ಸುರಿಯಲು ಪ್ರಾರಂಭಿಸಿದರೆ ಮತ್ತೆ ಕೊನೆಯಾವಗೆಂದು ಎಣಿಸುತ್ತಲೇ ಇರಬೇಕು.

ಪಶ್ಚಿಮಘಟ್ಟ ಶ್ರೇಣಿಯ ತುತ್ತತುದಿಯಲ್ಲಿರುವ ಮಡಿಕೇರಿಯಲ್ಲಿ ಮಳೆ ಪ್ರಾರಂಭವಾದೊಡನೆ ವರುಣ ವಾಯು ದೇವನನ್ನೂ ಜೊತೆಗೆ ಕರೆತರದೆ ಇರಲಾರ. ಮಳೆಯನ್ನು ಹೇಗಾದರೂ ಸಹಿಸಿಕೊಳ್ಳಬಹುದು, ಈ ಹಾಳಾದ ಗಾಳಿಯಿಂದ ನೆಮ್ಮದಿಯಾಗಿ ನಡೆದಾಡಲೂ ಸಾಧ್ಯವಾಗೋದಿಲ್ಲ. ಬೆಚ್ಚನೆಯ ಉಡುಪು ಧರಿಸಿದರೂ ಚಳಿಯನ್ನಂತು ದೂರ ಇಡಲು ಸಾಧ್ಯವೇ ಇಲ್ಲ ಎಂದು ಅಲ್ಲಲ್ಲಿ ಗುಂಪು ಗುಂಪಾಗಿ ನಿಂತ ಜನರು ಮಳೆಯ ಬಗ್ಗೆ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಮುಂಗಾರು ಮಳೆಯ ಆರ್ಭಟವನ್ನು ಮಡಿಕೇರಿಯ ಜನತೆ ದಂಗಾಗಿ ನೋಡುತ್ತಿದ್ದರು. ಭುವಿ-ಬಾನನ್ನು ಒಂದು ಮಾಡುವ ತವಕದಲ್ಲಿ ಮಳೆ ಸುರಿಯಲು ಪ್ರಾರಂಭಿಸಿತು.

ಅಯ್ಯೋ…, ಆಕಾಶಕ್ಕೇನಾದ್ರು ತೂತ ಬಿದ್ದುಂಟಾ? ಇದ್ಯಾಕೆ ಮಳೆ ಹೀಗೆ ಒಂದೇ ಸಮನೆ ಸುರಿತಾ ಇದೆ. ಅರೆಕ್ಷಣವಾದರೂ ಬಿಡುವು ನೀಡೋದು ಬೇಡ್ವ? ಹಾಳಾದ ಮಳೆ ಅಭಿಮನ್ಯು ಗೊಣಗಿಕೊಂಡ. ಇದ್ಯಾಕೋ ಮಳೆ ನಿಲ್ಲೋ ಲಕ್ಷಣ ಕಾಣುತ್ತಿಲ್ಲ. ಚಳಿಯಂತೂ ಸಹಿಸೋದಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ಪೆಗ್ ಏರಿಸಿದರೆ ಎಲ್ಲಾ ಸರಿ ಹೋಗುತ್ತದೆ ಅಂದುಕೊಂಡ ಅಭಿಮನ್ಯು ಬಾರ್‌ನೆಡೆಗೆ ನಡೆದ.

ಮದ್ಯದ ನಶೆ ತಲೆಗೇರಿದೊಡನೆ ವಾತಾವರಣ ಹಿತ ಅನ್ನಿಸತೊಡಗಿತು. ಒಂದರಮೇಲೊಂದು ಪೆಗ್ ಏರಿಸಿಕೊಳ್ಳುತ್ತಿದ್ದಂತೆ ನಿಧಾನವಾಗಿ ಅವನ ಮನದಾಳದಲ್ಲಿ ಹುದುಗಿದ್ದ ಹಳೆಯ ನೆನಪುಗಳೆಲ್ಲ್ಲ ಮತ್ತೆ ಕಾಡಲು ಪ್ರಾರಂಭಿಸಿತು. ಅಭಿಮನ್ಯುವಿನ ಜೀವನದಲ್ಲಿ ಪ್ರೇಮದ ಅಕ್ಷರ ಬರೆದು ಹೋದ ಅಕ್ಷರ ಎಂಬ ಮುದ್ದಾದ ಹುಡುಗಿ ಹಾಗೆ ಮನದಲ್ಲಿ ಒಮ್ಮೆ ಹಾದು ಹೋದಳು.

ಅಕ್ಷರ ಅಭಿಮನ್ಯುವಿನ ಜೀವನದಿಂದ ದೂರ ಸರಿದು ಒಂದೂವರೆ ತಿಂಗಳು ಸದ್ದಿಲ್ಲದೆ ಸರಿದು ಹೋಗಿತ್ತು. ಈ ಅವಧಿಯಲ್ಲಿ ಅಭಿಮನ್ಯು ಸಾಕಷ್ಟು ಬದಲಾಗಿ ಹೋದ. ಮತ್ತೆ ಹಳೆಯ ಚಟಗಳನ್ನೆಲ್ಲ ಮೈಗೂಡಿಸಿಕೊಂಡ. ಆಕೆಯ ಅಗಲಿಕೆ ಅವನ ಮನದಲ್ಲಿ ಕಾರ್ಮೋಡ ಕವಿದುಕೊಳ್ಳುವಂತೆ ಮಾಡಿತು. ಮನದಲ್ಲಿ ದಟ್ಟವಾಗಿ ಕವಿದುಕೊಂಡಿರುವ ಕಾರ್ಮೋಡ ಮಳೆಯಾಗಿ ಸುರಿದು ಮನದಲ್ಲಿ ಹುದುಗಿರುವ ದುಗುಡವನ್ನೆಲ್ಲ ದೂರ ಮಾಡಿಬಿಡಲಿ ಎಂದು ಕಾಯುತ್ತಾ ಕುಳಿತ್ತಿದ್ದ. ಆದರೆ, ಅದ್ಯಾವುದೂ ಕೈಗೂಡಲಿಲ್ಲ. ಅಕ್ಷರ ತನ್ನ ಜೀವನದಲ್ಲಿ ಮತ್ತೆ ತಂಗಾಳಿಯಾಗಿ ಬೀಸಲು ಪ್ರಾರಂಭಿಸಿದಾಗ ಮಾತ್ರ ಮನದಲ್ಲಿ ಮಳೆ ಸುರಿದು ಉಲ್ಲಾಸಗೊಳ್ಳಲು ಸಾಧ್ಯ. ಆದರೆ ಆಕೆ ಮತ್ತೆ ತನ್ನ ಜೀವನದಲ್ಲಿ ಕಾಲಿಡಲು ಸಾಧ್ಯವೇ? ಈ ಪ್ರಶ್ನೆ ಆತನಲ್ಲಿ ಮತ್ತೆ ಮತ್ತೆ ಕಾಡಲು ಪ್ರಾರಂಭಿಸಿತು.

ಪ್ರೀತಿ ಸತ್ತು ಸುಡುಗಾಡು ಸೇರಿದರೂ ಅಭಿಮನ್ಯು ಆಕೆಯ ಕನವರಿಕೆಯಲ್ಲಿಯೇ ಕಾಲ ಕಳೆಯತೊಡಗಿದ. ಅಷ್ಟೊಂದು ನಿರ್ಮಲವಾದ ಪ್ರೀತಿ, ಅಷ್ಟೊಂದು ಜೋಪಾನವಾಗಿ ವರ್ಷಾನುಗಟ್ಟಲೇ ಕೂಡಿಟ್ಟ ನೂರಾರು ಕನಸುಗಳು, ಕಲ್ಪನೆಗಳು ಒಮ್ಮಿಂದೊಮ್ಮೆಲೆ ಮಡಿಕೇರಿಯ ಮಂಜಿನ ಹನಿಯಂತೆ ಕರಗಿ ಹೋಯಿತು. ಇದ್ದಕ್ಕಿದ್ದಂತೆ ಒಂದು ದಿನ ಇನ್ನೆಂದೂ ಕೂಡ ನಿನ್ನ ಪ್ರೀತಿಸೋದಕ್ಕೆ ಸಾಧ್ಯವಿಲ್ಲ ಅಭಿ, ಮನಸ್ಸು ಮುರಿದು ಹೋಗಿದೆ. ಪ್ರೀತಿ ಎಷ್ಟು ಸುಂದರ ಅಂದುಕೊಂಡಿದ್ದೇನೋ ಅಷ್ಟೇ ಕಠೋರ ಅನ್ನುವ ಅನುಭವ ಈಗ ಆಗುತ್ತಿದೆ. ಇನ್ನೆಂದೂ ನಿನ್ನವಳಾಗಲು ನನ್ನಿಂದ ಸಾಧ್ಯವಿಲ್ಲ. ಐ ~ಆಮ್ ವೆರಿ ಸಾರಿ. ನನ್ನ ಕನವರಿಕೆಯಲ್ಲಿಯೇ ಕಾಲ ಕಳೀಬೇಡ. ನಿನ್ನದೇ ಆದ ಒಂದು ಸುಂದರ ಬದುಕು ಕಟ್ಟಿಕೋ. ಹಾಗಂತ ಹೇಳಿ ಹಿಂತಿರುಗಿಯೂ ನೋಡದೆ ಹೊರಟು ಹೋದವಳ ಮನದಲ್ಲಿ ಮತ್ತೆ ಪ್ರೀತಿ ಮೊಳಕೆಯೊಡೆಯಬಹುದೆ? ಮೊಳಕೆಯೊಡೆದು ಗಿಡವಾಗಿ, ಮರವಾಗಿ ಬೆಳೆದು ಪ್ರೀತಿಯ ಫಲ ನೀಡಬಹುದೇ? ಎಂಬ ಪ್ರಶ್ನೆ, ಒಂದಷ್ಟು ಭರವಸೆಯೊಂದಿಗೆ ಕಾಲಕಳೆಯ ತೊಡಗಿದ. ಆದರೆ, ಇನ್ನೆಷ್ಟು ದಿನಾಂತ ಹೀಗೆ ಅವಳ ಕನವರಿಕೆಯಲ್ಲಿ ಕಾಲ ಕಳೆಯೋದಕ್ಕೆ ಸಾಧ್ಯ? ಕೇವಲ ಒಂದೂವರೆ ತಿಂಗಳು ಮಾತ್ರ. ಇನ್ನು ಪ್ರೀತಿಯ ಅಂತಿಮ ಪರೀಕ್ಷೆಗೆ ಉಳಿದಿರುವುದು ಕೇವಲ ಒಂದು ತಿಂಗಳು ಹದಿನೈದು ದಿನಗಳು ಮಾತ್ರ. ಅದರಲ್ಲಿ ಇಂದು ಒಂದು ದಿನ ಉರುಳಿ ಹೋಗುವ ತವಕದಲ್ಲಿದೆ. ಇನ್ನುಳಿದಿರುವುದು ಕೇವಲ ಒಂದು ತಿಂಗಳು ಹದಿನಾಲ್ಕು ದಿನಗಳು ಮಾತ್ರ. ಇನ್ನು ಒಂದು ತಿಂಗಳು ಹದಿನಾಲ್ಕು ದಿನಗಳು ಉರುಳಿದ ನಂತರ ಅಕ್ಷರ ಹಸೆಮಣೆಯೇರುತ್ತಾಳೆ, ಹೊಸ ಬದುಕು ಕಂಡುಕೊಳ್ಳೋದಕ್ಕೆ, ಹೊಸ ಹುಡುಗನೊಂದಿಗೆ…!

ಇನ್ನು ಉಳಿದಿರುವ ಕೆಲವೇ ಕೆಲವು ದಿನಗಳಲ್ಲಿ ಆಕೆಯಲ್ಲಿ ಪ್ರೀತಿ ಉಕ್ಕಿ ಬರಲು ಸಾಧ್ಯವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟು ಕೊಂಡು ಅಭಿಮನ್ಯು ಮರುಭೂಮಿಯಲ್ಲಿ ನೀರಿಗಾಗಿ ಹುಡುಕಾಟ ನಡೆಸುವಂತೆ ಪ್ರೀತಿಗಾಗಿ ಹುಡುಕಾಟ ನಡೆಸಲು ಪ್ರಾರಂಭಿಸಿದ. ಒಂದೆಡೆ ಆಕೆಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇನೆಂಬ ದುಃಖ ಕಾಡಲು ಪ್ರಾರಂಭಿಸಿತು. ಆದರೆ, ಆ ದುಃಖವನ್ನು ಸ್ವೀಕರಿಸಲು ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ಆತ ಮತ್ತೊಮ್ಮೆ ಪ್ರೀತಿಯಲ್ಲಿ ಭರವಸೆ ಇಡಲು ಪ್ರಾರಂಭಿಸಿದ. ಆಕೆಯನ್ನು ಕಳೆದುಕೊಳ್ಳುತ್ತೇನೆಂಬ ಮಾತು ಅವನಿಂದ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗದೆ ಹೋಯಿತು. ಆಕೆಯನ್ನು ಮನಸ್ಸಿನಿಂದ ಕಿತ್ತೊಗೆಯಲು ಪಟ್ಟ ಪ್ರಯತ್ನ ಕೇವಲ ವ್ಯರ್ಥ ಕಸರಸ್ತು ಅಷ್ಟೆ…!

ಅವನ ಪಾಲಿಗೆ ಅದು ಮರೆಯುವಂಥ ಪ್ರೀತಿ ಆಗಿರಲಿಲ್ಲ. ಪ್ರೀತಿಯನ್ನು, ಪ್ರೀತಿಸಿದವಳನ್ನು ಮರೆತು ಮತ್ತೊಂದು ಬದುಕು ಕಟ್ಟಿಕೊಳ್ಳುವುದು ಅವನಿಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗದ ಮಾತಾಯಿತು. ಆಕೆ ತನ್ನನ್ನು ಅಗಲಿ ಹೋಗುವುದಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟ ಅಭಿಮನ್ಯುವಿಗೆ ಸಿಕ್ಕ ಉತ್ತರ: ಬಡತನ. ಹೌದು, ಅದೊಂದೆ ಕಾರಣ. ತನ್ನಲ್ಲಿ ಕೊರತೆ ಇರುವುದು ಅದೊಂದೇ. ಪ್ರೀತಿಯನ್ನು ಪಡೆದುಕೊಳ್ಳುವುದಕ್ಕೆ ಕೇವಲ ಪ್ರೀತಿಸುವ ಮನಸ್ಸೊಂದಿದ್ದರೆ ಮಾತ್ರ ಸಾಲದು. ಜೊತೆಗೆ ಹಣ ಕೂಡ ಬೇಕೆಂಬ ಕಠೋರ ಸತ್ಯ ಅಭಿಮನ್ಯುವಿಗೆ ಕೊನೆಗೂ ಮನವರಿಕೆಯಾಯಿತು. ಏನೇ ಆದರೂ ಪ್ರೀತಿ ಅನ್ನೋದು ಮರೆಯುವಂತಹ ವಿಷಯವಾ? ತನ್ನಿಂದ ದೂರವಾಗಲು ತಾನು ಮಾಡಿದ ತಪ್ಪಾದರೂ ಏನು? ಅಷ್ಟೊಂದು ಸುಂದರವಾಗಿ ಕಳೆದ ದಿನಗಳು ಮರೆತು ಮತ್ತೊಂದು ಸುಂದರ ಬದುಕು ಕಟ್ಟಿಕೋ ಅನ್ನೋದಕ್ಕೆ ಬಹುಶಃ ನಿರ್ದಯಿಗಳಿಂದ ಮಾತ್ರ ಸಾಧ್ಯ. ಇಷ್ಟು ಹೊತ್ತಿಗಾಗಲೇ ಆಕೆ ಎಲ್ಲವನ್ನು ಮರೆತು ನಿರಾಳವಾಗಿಬಿಟ್ಟಿರಬಹುದು. ಆಕೆ ಎಲ್ಲವನ್ನೂ ಮರೆತಿರಬೇಕು. ಮರೆತ್ತಿಲ್ಲದಿದ್ದರೆ ಯಾವನೋ ಒಬ್ಬನೊಂದಿಗೆ ಮದುವೆಯಾಗುವ ಮನಸ್ಸು ಮಾಡುತ್ತಿರಲಿಲ್ಲ. ಒಂದೂವರೆ ತಿಂಗಳ ಅವಧಿಯಲ್ಲಿ ಒಂದೇ ಒಂದು ದಿನ ಮಾತನಾಡುವ ಮನಸ್ಸು ತೋರಲಿಲ್ಲ, ಹಾಳಾದವಳು. ಎಲ್ಲವನ್ನು ಮರೆತು ಅದ್ಯಾವನೋ ಅಮೆರಿಕದ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಇನ್ನು ಮದುವೆಯೊಂದೇ ಬಾಕಿ. ಅದು ಆದಷ್ಟು ಬೇಗ ನಡೆದು ಹೋಗಲಿ. ಹಾಳಾದವಳು ಮನಸ್ಸಿನಿಂದ ತೊಲಗಿ ಹೋಗಲಿ ಮನದಲ್ಲಿ ಆಕೆಯನ್ನು ನಿಂದಿಸಿದ ಅಭಿಮನ್ಯು ಮತ್ತೆ ಒಂದು ಪೆಗ್ ಏರಿಸಿಕೊಂಡ.

ಸಂಜೆಗತ್ತಲು ಆವರಿಸಿಕೊಳ್ಳತೊಡಗಿತು. ಬಾರ್‌ನಲ್ಲಿ ಉರಿಯುತ್ತಿದ್ದ ವಿದ್ಯುತ್ ದೀಪಗಳ ಮಂದ ಬೆಳಕು ಕತ್ತಲೆಯನ್ನು ದೂರ ಸರಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದವು. ಎಷ್ಟೊಂದು ಸುಂದರವಾಗಿತ್ತು ಆ ದಿನಗಳು!? ಆ ಸುಂದರ ನೆನಪುಗಳನ್ನು ಮರೆಯಲಾದಿತೇ? ಮರೆಯುವಂಥ ದಿನಗಳು ಅದಾಗಿರಲಿಲ್ಲ. ಜೀವನದಲ್ಲಿ ಎಂದೂ ಸಿಗದಷ್ಟು ಪ್ರೀತಿಯನ್ನು ಮೊಗೆದು ಕೊಟ್ಟು ಹಿಂತಿರುಗಿಯೂ ನೋಡದೆ ಹೊರಟು ಬಿಟ್ಟಳು. ಅಭಿಮನ್ಯುವನ್ನು ಇನ್ನಿಲ್ಲದಂತೆ ತನ್ನ ಹೃದಯದೊಳಗೆ ಜೋಪಾನವಾಗಿಟ್ಟು ಪೂಜಿಸುತ್ತಿದ್ದ ಅಕ್ಷರ ಇದ್ದಕ್ಕಿದ್ದಂತೆ ಒಂದು ದಿನ ಇನ್ನೆಂದೂ ಕೂಡ ನಿನ್ನ ಪ್ರೀತಿಸೋದಕ್ಕೆ ಸಾಧ್ಯವಿಲ್ಲ ಅಭಿ ಎಂದು ನಿರ್ದಯವಾಗಿ ಹೇಳಿ ಹೊರಟು ಹೋದಳು.

ಅಷ್ಟಕ್ಕೂ ತಾನು ತೋರಿದ ಪ್ರೀತಿ ಕಡಿಮೆಯಾಯಿತಾ? ಮೊನ್ನೆ, ಮೊನ್ನೆ ತನಕವೂ ಇದ್ದ ಪ್ರೀತಿ ಇಂದು ಇಲ್ಲ ಅಂದರೆ ಆ ಪ್ರೀತಿಗೇನು ಬೆಲೆ? ಈ ಜಗತ್ತಿನಲ್ಲಿ ಪ್ರೀತಿಗೆ ಹೆಣ್ಣು ಅರ್ಹಳಲ್ಲ ಎಂದು ತನ್ನೊಳಗೆ ಸಿಡುಕುತ್ತಾ ಮತ್ತೆ ಮತ್ತೆ ಕುಡಿದು ನೆಮ್ಮದಿ ಕಂಡುಕೊಳ್ಳುವ ಪ್ರಯತ್ನ ಮಾಡಿದ.

ಅದ್ಯಾಕೋ ಕುಡಿದಷ್ಟೂ ಆಕೆಯ ನೆನಪುಗಳೇ ಮನದೊಳಗೆ ಗಟ್ಟಿಯಾಗಿ ನೆಲೆಗೊಳ್ಳಲು ಪ್ರಾರಂಭಿಸಿತು. ಅದೊಂದು ಕುಡಿತದ ಚಟ ಇಲ್ಲದೆ ಹೋಗಿದ್ದರೆ ಅಭಿಮನ್ಯುವಿನ ಜೀವನದಲ್ಲಿ ಅಕ್ಷರ ಕಾಲಿಡುತ್ತಾ ಇರಲಿಲ್ಲವೋ ಏನೋ.!? ಅವನ ಕುಡಿತದ ಚಟವೇ ಅವರಿಬ್ಬರನ್ನು ಒಂದು ಮಾಡಿತು. ಈ ಕುಡಿತದ ಚಟ ತಾನೇ ನಮ್ಮಿಬ್ಬರನ್ನು ಒಂದು ಮಾಡಿದ್ದು. ನನ್ನ ಕುಡಿತದ ಚಟ ಕಂಡಾದರೂ ಆಕೆ ನನ್ನ ಮತ್ತೊಮ್ಮೆ ಪ್ರೀತಿಸುವ ಮನಸ್ಸು ಮಾಡಲಿ ಅಂದುಕೊಂಡ ಅಭಿಮನ್ಯು ಸಾಮರ್ಥ್ಯಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ಮತ್ತೊಂದು ಪೆಗ್ ಕಷ್ಟದಲ್ಲಿ ಏರಿಸಿಕೊಂಡ.

ಅಭಿಮನ್ಯುವಿನ ಕುಡಿತದ ಚಟ ಅಕ್ಷರ ಎಂಬ ಮುದ್ದಾದ ಹುಡುಗಿಯ ಮನದಲ್ಲಿ ಪ್ರೀತಿ ಮೊಳಕೆಯೊಡೆಯಲು ಒಂದು ವೇದಿಕೆಯೊದಗಿಸಿತು. ಅಕ್ಷರ ಅಭಿಮನ್ಯುವಿನ ಬದುಕಿನೊಳಗೆ ಕಾಲಿಟ್ಟ ಕ್ಷಣದಿಂದ ಅವನ ಬದುಕಿನ ದಿಕ್ಕೇ ಬದಲಾಗಿ ಹೋಯಿತು. ಅಕ್ಷರಳನ್ನು ಪ್ರೀತಿಸಲು ಪ್ರಾರಂಭ ಮಾಡಿದ ನಂತರ ಕುಡಿತದ ಚಟದಿಂದ ಸಾಕಷ್ಟು ದೂರ ಸರಿದು ಸುಂದರ ಬದುಕು ಕಂಡುಕೊಂಡಿದ್ದ. ಆದರೆ, ಇಂದು ಆಕೆ ಪ್ರೀತಿಯನ್ನೇ ತಿರಸ್ಕರಿಸಿ ಆತನ ಬದುಕಿನಲ್ಲಿ ಮತ್ತೊಂದು ಅಧ್ಯಯನಕ್ಕೆ ಮುನ್ನುಡಿ ಬರೆದು ಹೊರಟು ಹೋದಳು.

ಕುಡಿದು ಹಾಳಾಗಿ ಹೋಗಿದ್ದ ಅಭಿಮನ್ಯುವಿಗೆ ಒಂದು ನೆಮ್ಮದಿಯ ಬದುಕು ತೋರಿಸಿಕೊಟ್ಟವಳೇ ಆಕೆ. ಆ ಬಾರ್‌ವೊಳಗಿನ ಮಂದ ಬೆಳಕಿನಲ್ಲಿ ಪ್ರತಿಯೊಂದು ಪೆಗ್ಗನ್ನು ಗಂಟಲಿನೊಳಗೆ ಇಳಿಸಿಕೊಳ್ಳುವಾಗಲೂ ಕೂಡ ಆಕೆಯ ನೆನಪು ಕಾಡದೆ ಇರುತ್ತಿರಲಿಲ್ಲ. ಎಲ್ಲಾ ಕಡೆ ಆಕೆ ಬೆರೆತು ಹೋಗಿದ್ದಳು. ಬಾರ್‌ವೊಳಗೆ ಕುಳಿತು ಚಿಂತಕನಂತೆ ಏನೋ ಯೋಚಿಸುತ್ತಾ ಸುರುಳಿ ಸುರುಳಿ ಯಾಗಿ ಸೇದಿ ಬಿಡುತ್ತಿದ್ದ ಸಿಗರೇಟಿನ ಹೊಗೆ, ಹೊರಗೆ ಕವಿದುಕೊಂಡ ದಟ್ಟ ಮಂಜು, ಆಹ್ಲಾದಕರ ವಾತಾವರಣದಿಂದ ಕೂಡಿರುವ ರಾಜಾಸೀಟ್ ಉದ್ಯಾನವನ, ಮಡಿಕೇರಿಯ ಆ ತಿರುವು ರಸ್ತೆಗಳು, ರಾತ್ರಿಯಾಗುತ್ತಿದ್ದಂತೆ ಕತ್ತಲೆಯನ್ನು ಸರಿಸಲು ಸಣ್ಣ ಪ್ರಯತ್ನ ನಡೆಸುವ ಬುಡ್ಡಿ ದೀಪಗಳಂತೆ ಉರಿಯುವ ಮಡಿಕೇರಿ ನಗರದ ಬೀದಿ ದೀಪಗಳು. ಇವೆಲ್ಲವೂ ಆಕೆಯ ನೆನಪು ಹೊತ್ತು ತರುವಂತದ್ದೇ. ಎಲ್ಲದರಲ್ಲೂ ಆಕೆಯ ನೆನಪು ಬೆರೆತು ಹೋಗಿತ್ತು. ಇನ್ನು ಮರೆಯುವುದಾದರೂ ಹೇಗೆ? ಇತ್ತೀಚೆಗಂತೂ ಹುಚ್ಚು ಹಿಡಿದವನಂತೆ ಕಡುನೀಲಿ ಚೂಡಿದಾರ್ ತೊಟ್ಟು ಓಡಾಡುವ ಅದೆಷ್ಟೋ ಹುಡುಗಿಯರ ಹಿಂದೆ ಬಿದ್ದು ಆಕೆ ತನ್ನವಳಿರಬಹುದೆಂದು ಊಹಿಸಿಕೊಂಡು ಹಿಂಬಾಲಿಸಲಿಲ್ಲ? ಆಕೆಯಲ್ಲ ಎಂದು ಮನವರಿಕೆಯಾದೊಡನೆ ಮತ್ತೆ ನಿರಾಸೆ ಯಿಂದ ಹಿಂತಿರುಗಿ ಬಿಡುತ್ತಿದ್ದ. ಆ ಬಣ್ಣದಲ್ಲಿಯೂ ಆಕೆ ಬೆರೆತು ಹೋಗಿದ್ದಳು. ಅಕ್ಷರ ತೊಡುತ್ತಿದ್ದ ಕಡುನೀಲಿ ಬಣ್ಣದ ಚೂಡಿದಾರ್ ಆಕೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಅಭಿಮನ್ಯು ಆಕೆಯನ್ನು ಆ ಡ್ರೆಸ್‌ನಲ್ಲಿಯೇ ನೋಡಲು ಹೆಚ್ಚಾಗಿ ಆಸೆ ಪಡುತ್ತಿದ್ದಾಗ ದಿನಾ ಇದೇ ನೀಲಿ ಚೂಡಿದಾರ್ ಹಾಕ್ಕೊಂಡಿದ್ರೆ ವಾಸನೆ ಬಂದೋಗ್ತಿನಿ ಕಣೋ ಅಭಿ ಎಂದು ಆಕೆ ತಮಾಷೆ ಮಾಡುತ್ತಿದ್ದಳು. ಅಭಿಮನ್ಯು ಬಯಸಿದಾಗಲೆಲ್ಲ ಆ ಡ್ರೆಸ್‌ನಲ್ಲಿಯೇ ಬಂದು ಎದುರಿಗೆ ನಿಲ್ಲುತ್ತಿದ್ದ ಅಕ್ಷರ ಇಂದು ತನ್ನವಳಲ್ಲ ಎಂಬ ಒಂದೇ ಒಂದು ಮಾತು ಹೃದಯಕ್ಕೆ ಚೂರಿ ಇರಿದಂತಾಗುತಿತ್ತು.

ಸಾಕಷ್ಟು ಕುಡಿದು ದಣಿದ ಬಳಿಕ ತಾನೇ ಎದ್ದು ಕ್ಯಾಶ್‌ಕೌಂಟರ್‌ವರೆಗೆ ಹೋಗಿ ಬಿಲ್ ಕೊಟ್ಟು ನೇರ ರಾಜಾಸೀಟ್ ಉದ್ಯಾನವನದ ಕಡೆಗೆ ನಡೆದ. ಮಳೆಗಾಲವಾದ್ದರಿಂದ ರಾಜಾಸೀಟ್‌ನಲ್ಲಿ ಜನರು ಹೆಚ್ಚಾಗಿ ಇರಲಿಲ್ಲ. ಆವಗಷ್ಟೇ ಮಳೆ ನಿಂತಿತ್ತು. ಸುತ್ತಲೂ ದಟ್ಟವಾಗಿ ಮಂಜು ಕವಿದುಕೊಂಡಿತ್ತು. ಆ ಮಂಜಿನ ವೈಭವವನ್ನು ಇದ್ದ ಕೆಲವೇ ಕೆಲವು ಜನ ಒಂದೆಡೆ ನಿಂತು ಸವಿಯುತ್ತಿದ್ದರೆ, ಮತ್ತೊಂದೆಡೆ ಅಭಿಮನ್ಯು ಕಲ್ಲುಹಾಸಿನ ಬೆಂಚಿನ ಮೇಲೆ ಕುಳಿತು ಕಳೆದು ಹೋದ ಪ್ರೀತಿಯನ್ನು ನೆನೆಯುತ್ತಾ ಕುಳಿತುಬಿಟ್ಟ.

ಇಲ್ಲೇ ತಾನೇ ಪ್ರೀತಿ ಅರಳಿ ನಿಂತದ್ದು. ಆ ಪ್ರೀತಿಗೊಂದು ಸಮಾಧಿಯನ್ನು ಇಲ್ಲಿಯೇ ಕಟ್ಟಿಬಿಡಬೇಕು. ಅದರೊಳಗೆ ಆಕೆಯ ನೆನಪುಗಳನ್ನೆಲ್ಲ ಹೂತಿಡಬೇಕು. ಒಂದು ಕಾಲದಲ್ಲಿ ರಾಜಾಸೀಟ್ ಬ್ರಿಟೀಷರ ಸಮಾಧಿಗಳನ್ನೊಳಗೊಂಡ ರುದ್ರಭೂಮಿ. ಅಂತಹ ಜಾಗದಲ್ಲಿ ಪ್ರೀತಿ ಅರಳೋದಕ್ಕೆ ಹೇಗೆ ತಾನೇ ಸಾಧ್ಯ? ಸಮಾಧಿ ಕಟ್ಟೋದಕ್ಕೆ ಮಾತ್ರ ಲಾಯಕ್ಕು ಅಂದುಕೊಂಡ. ಪ್ರೀತಿಗೊಂದು ಸಮಾಧಿಕಟ್ಟಿ ಪ್ರೀತಿಯ ಸಿಹಿ-ಕಹಿ ನೆನಪುಗಳನ್ನೆಲ್ಲ ಅದರೊಳಗೆ ಹೂತಿಡುವ ಪ್ರಯತ್ನವನ್ನು ಅಭಿಮನ್ಯು ಈ ಒಂದೂವರೆ ತಿಂಗಳ ಅವಧಿಯೊಳಗೆ ಸಾಕಷ್ಟು ಬಾರಿ ಮಾಡಿದರೂ ನೆನಪೆಂಬುದು ಸಮಾಧಿಯೊಳಗಿಂದ ಭೂತದಂತೆ ಎದ್ದು ಬಂದು ಮತ್ತೆ ಕಾಡಲು ಪ್ರಾರಂಭಿಸುತಿತ್ತು.

ಮತ್ತೆ ಮಳೆ ಸುರಿಯಲು ಪ್ರಾರಂಭಿಸಿತು. ಇದ್ದ ಬೆರಳೆಣಿಕೆಯಷ್ಟು ಜನ ರಾಜಾಸೀಟ್‌ನಿಂದ ಕಾಲ್ತೆಗೆದರು. ಧೋ ಎಂದು ಸುರಿಯುತ್ತಿದ್ದ ಮಳೆಯ ನಡುವೆ ಅವನ ಮನದೊಳಗಿದ್ದ ನೋವುಗಳು ಸ್ಫೋಟಗೊಂಡು ಕಣ್ಣೀರಧಾರೆ ಹರಿಯಲು ಪ್ರಾರಂಭಿಸಿತು. ಅಬ್ಬರಿಸುತ್ತಿದ್ದ ಮಳೆಯು ಅವನ ಕಣ್ಗಳಿಂದ ಹರಿಯುತ್ತಿದ್ದ ಕಣ್ಣೀರನ್ನು ತೊಡೆದು ಸಂತೈಸುತಿತ್ತು.

ಇದೇ ಜಾಗದಲ್ಲಿ ತಾನೇ ಪ್ರೀತಿ ಅರಳಿ ನಿಂತದ್ದು. ಇಲ್ಲೇ ಆಕೆಯ ನೆನಪುಗಳು ಹೆಚ್ಚಾಗಿ ಉಳಿದುಕೊಂಡಿದೆ. ಆ ನೆನಪುಗಳಿಗೆಲ್ಲ ಸಮಾಧಿ ಕಟ್ಟಲು ಇದೇ ಸೂಕ್ತವಾದ ಜಾಗ. ಕಣ್ಗಳಿಂದ ಸುರಿಯುವ ಪ್ರತಿಯೊಂದು ಕಣ್ಣೀರ ಹನಿಯೂ ಕೂಡ ಆಕೆಯ ನೆನಪನ್ನು ಇಲ್ಲದಂತೆ ಮಾಡಬೇಕು. ಪ್ರೀತಿ ಎಂಬ ಹೆಸರಿನಲ್ಲಿ ಅನುಭವಿಸಿದ ನೋವು, ಅವಮಾನಗಳು ಕಣ್ಣೀರಿನಲ್ಲಿ ಕರಗಿ ಸುರಿಯುವ ಮಳೆಯಲ್ಲಿ ತೊಳೆದು ಹೋಗಬೇಕೆಂದು ನಿರ್ಧರಿಸಿ ಮತ್ತೆ ಮತ್ತೆ ಬಿಕ್ಕಳಿಸಿ ಅಳಲು ಪ್ರಾರಂಭಿಸಿದ. ರಾಜಾಸೀಟ್ ಉದ್ಯಾನವನದಲ್ಲಿ ಕತ್ತಲು ಆವರಿಸಿಕೊಳ್ಳುತ್ತಿದ್ದಂತೆ ಕತ್ತಲನ್ನು ದೂರ ಸರಿಸಲು ವಿದ್ಯುತ್ ದೀಪಗಳು ಬೆಳಗಲಾರಂಭಿಸಿದವು.

ಸರಿಸುಮಾರು ಎಂಟು ಗಂಟೆಯಾದರೂ ಹೊರಡುವ ಮನಸ್ಸಾಗಲಿಲ್ಲ. ಮಳೆ ಸಂಪೂರ್ಣ ನಿಂತು ತಂಪಾದ ಗಾಳಿ ಬೀಸಲು ಪ್ರಾರಂಭಿಸಿತು. ಚಳಿ ತೀವ್ರಗೊಂಡಿತು. ಚಳಿಯ ತೀವ್ರತೆಗೆ ಮೈ ನಡುಗುತ್ತಿದ್ದರೂ ಅಲ್ಲಿಂದ ಕದಲಲು ಮನಸ್ಸಾಗಲಿಲ್ಲ. ಕಲ್ಲುಬಂಡೆಯಂತೆ ಅಲುಗಾಡದೆ ಕುಳಿತುಬಿಟ್ಟ. ಇಡೀ ರಾತ್ರಿಯನ್ನು ಇಲ್ಲೇ ಕಳೆದು ಬಿಡಬೇಕೆಂದು ನಿರ್ಧರಿಸಿಕೊಂಡು ಬಂದವನಂತೆ ಆ ಕಲ್ಲು ಹಾಸಿನ ಬೆಂಚಿನ ಮೇಲೆ ಕುಳಿತು ನೆನಪುಗಳನ್ನು ಕೊಲ್ಲುವ ಪ್ರಯತ್ನ ನಡೆಸಿ ಮತ್ತೆ ಮತ್ತೆ ಸೋಲನುಭವಿಸುತ್ತಿದ್ದ. ನೆನಪುಗಳು ಮತ್ತೆ ಸಮಾಧಿಯೊಳಗಿನಿಂದ ಭೂತದಂತೆ ಎದ್ದು ಬಂದು ಕಾಡಲು ಪ್ರಾರಂಭಿಸುತಿತ್ತು.

ರಾಜಾಸೀಟ್ ಮುಂಭಾಗದಲ್ಲಿ ಮನುಷ್ಯನ ಆಕೃತಿಯೊಂದನ್ನು ಗಮನಿಸಿದ ವಾಚ್‌ಮ್ಯಾನ್ ಆ ಆಕೃತಿಯ ಕಡೆಗೆ ನಡಿಗೆ ಹಾಕಿದ. ಅಭಿಮನ್ಯು ಅಲ್ಲಿ ಕುಳಿತ್ತಿದ್ದ. ಏಯ್, ಏನ್ ಮಾಡ್ತಾ ಇದ್ದೀಯ ಇಲ್ಲಿ? ಉಳ್ಕೊಳ್ಳೋದಕ್ಕೆ ಬೇರೆ ಯಾವ ಜಾಗ ಸಿಗ್ಲಿಲ್ವ ನಿನ್ಗೆ ಎಂದು ಗದರಿಸಿ ಅಭಿಮನ್ಯುವನ್ನು ರಾಜಾಸೀಟ್‌ನಿಂದ ಹೊರಗಟ್ಟಿ ಗೇಟ್‌ಬಂದ್ ಮಾಡಿದ.

ದೇಹದಲ್ಲಿ ಉಸಿರಿರುವವರೆಗೂ ನಿನ್ನೊಂದಿಗೆ ಇರುತ್ತೇನೆ. ಇದು ಸೂರ್ಯ, ಚಂದಿರ ಇರುವಷ್ಟೇ ಸತ್ಯವೆಂದು ಪದೇ ಪದೆ ಹೇಳುತ್ತಿದ್ದ ಹುಡುಗಿ ಪ್ರೀತಿಯನ್ನು ಮುಂದುವರೆಸುವ ಮನಸ್ಸು ತೋರದೆ ಅರ್ಧ ದಾರಿಯಲ್ಲಿಯೇ ಕೈ ಬಿಟ್ಟು ಹೊರಟು ಬಿಟ್ಟಳು. ಅದೊಂದು ಸಾಮಾನ್ಯವಾದ ಪ್ರೀತಿಯಾಗಿದ್ದರೆ ಮರೆತು ಬಿಡಬಹುದಿತ್ತೋ ಏನೋ!? ಬಾಳಿಗೊಂದು ಅರ್ಥ ಹುಡುಕಿಕೊಟ್ಟು ಬಾಳನ್ನು ಬೆಳಗಿದ್ದು ಮಾತ್ರವಲ್ಲದೆ, ಇನ್ನಿಲ್ಲದಂತೆ ಪ್ರೀತಿಸಿದ ಹುಡುಗಿ ಇಂದು ತನ್ನವಳಲ್ಲ ಅನ್ನುವ ಮಾತು ಅವನಿಂದ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರೀತಿ ತುಂಬಿದ ಹೂ ತೋಟದಲ್ಲಿ ಮುಳ್ಳು ಕೂಡ ಇರುವುದನ್ನು ಮರೆತು ಆ ಹೂವನ್ನಷ್ಟೇ ದೇವರಂತೆ ಪ್ರೀತಿಸಿದ ಅಭಿಮನ್ಯು ಇಂದು ಏಕಾಂಗಿ. ಕುಡಿತವೊಂದೇ ಅವನ ಸಂಗಾತಿ.

ಮಳೆಯಿಂದ ತೊಯ್ದುಹೋದ ಅಭಿಮನ್ಯು ಮನೆಗೆ ಕಾಲಿಡುವಾಗ ಗಂಟೆ ಒಂಭತ್ತಾಗಿತ್ತು. ಮಗನ ಸ್ಥಿತಿ ಕಂಡು ಕಂಗಾಲದ ವಾತ್ಸಲ್ಯ ಏನಾಯ್ತು ನಿನ್ಗೆ, ಮಳೆಯಲ್ಲಿ ನೆನ್ಕೊಂಡು ಬಂದಿದ್ದೀಯಲ್ಲ? ಜ್ವರ ಗಿರ ಬಂದ್ರೆ ಏನು ಗತಿ? ಎಂದು ಗದರಿಸಿ ಅಭಿಮನ್ಯುವನ್ನು ಕುರ್ಚಿಯ ಮೇಲೆ ಕುಳ್ಳಿರಿಸಿ ತಲೆ ಒರೆಸಿದರು. ಮಗನ ಪರಿಸ್ಥಿತಿ ಆಕೆಗೂ ಗೊತ್ತು. ಆಕೆಯೂ ಕೂಡ ಅವನ ವಯಸ್ಸು ದಾಟಿ ಬಂದವಳಲ್ಲವೇ. ಪ್ರೀತಿಯ ಹುಚ್ಚು ಹಿಡಿದವರು ಹೀಗೆಲ್ಲ ವರ್ತಿಸುತ್ತಾರೆ. ವಯಸ್ಸಾಗುತ್ತಾ ಹೋದಂತೆ ಪ್ರೀತಿ ಕೂಡ ಒಂದು ಹುಚ್ಚಾಟ ಅನ್ನಿಸಿ ಬಿಡುತ್ತದೆ. ಕಾಲವೇ ಅವನನ್ನ ಬದಲಾಯಿಸೋದಕ್ಕೆ ಸಾಧ್ಯ. ಒಂದಷ್ಟು ವರ್ಷಗಳು ಸರಿದು ಹೋದ ನಂತರ ಅವನೇ ಸರಿದಾರಿಗೆ ಬರುತ್ತಾನೆಂಬ ವಿಶ್ವಾಸದೊಂದಿಗೆ ಆಕೆ ಮಗನ ಬಳಿ ಕಳೆದು ಹೋದ ಪ್ರೀತಿಯ ಬಗ್ಗೆ ಮಾತನಾಡುವ ಉತ್ಸಾಹ ತೋರಲಿಲ್ಲ.

ಆ ರಾಜಾಸೀಟ್‌ನಲ್ಲಿ ಕಳೆದ ನಾಲ್ಕೈದು ಗಂಟೆಗಳು ಅಭಿಮನ್ಯುವಿಗೆ ಸ್ವಲ್ಪ ನೆಮ್ಮದಿ ತಂದುಕೊಟ್ಟಿತು. ಅಮ್ಮ ಅಕ್ಕರೆಯಿಂದ ಬಡಿಸಿದ ಊಟವನ್ನು ತಿಂದು ಮಲಗಿದವನಿಗೆ ನಿದ್ರೆ ಬಳಿಗೆ ಬಂದದ್ದೇ ಅರಿವಾಗಲಿಲ್ಲ. ಆ ರಾತ್ರಿ ಅಭಿಮನ್ಯುವಿನ ಮನದಲ್ಲಿ ಅಕ್ಷರ ಸುಳಿಯಲಿಲ್ಲ, ಕನಸಿನಲ್ಲಿ ಬಂದು ಕಾಡಲಿಲ್ಲ. ಹಲವು ದಿನಗಳ ಬಳಿಕ ಅಭಿಮನ್ಯು ಸುಖವಾದ ನಿದ್ರೆಯನ್ನು ಅನುಭವಿಸಿದ.

ಮನದೊಳಗೆ ಹುದುಗಿರುವ ದುಃಖವನ್ನೆಲ್ಲ ರಾಜಾಸೀಟ್‌ನಲ್ಲಿ ಕಳೆದು ಬಿಡುವ ಸಂಕಲ್ಪದೊಂದಿಗೆ ದಿನನಿತ್ಯ ಸಂಜೆ ರಾಜಾಸೀಟ್‌ಗೆ ತಪ್ಪದೆ ಭೇಟಿ ಕೊಡುತ್ತಿದ್ದ. ಒಂದಷ್ಟು ಹೊತ್ತು ಕುಳಿತು ಪ್ರೀತಿ ಸತ್ತು ಸುಡುಗಾಡು ಸೇರಲು ಕಾರಣವಾದ ಅಂಶಗಳ ಬಗ್ಗೆ ತನ್ನೊಂದಿಗೆ ತಾನು ಚರ್ಚಿಸುತ್ತಾ ಉತ್ತರ ಹುಡುಕಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ. ದಿನಗಳುರುಳುತ್ತಿದ್ದಂತೆ ಮನಸ್ಸಿನ ಪುಟಗಳಿಂದ ಆಕೆ ಅಳಿಸಿ ಹೋಗಲು ಪ್ರಾರಂಭಿಸಿದಳು. ಇನ್ನೆಂದೂ ಆಕೆಯ ಮುಖ ನೋಡ ಕೂಡದೆಂದು ನಿರ್ಧರಿಸಿದ.

ಅಂದು ಭಾನುವಾರ. ಮಳೆಯು ಕೂಡ ತನ್ನ ಆರ್ಭಟಕ್ಕೆ ರಜೆ ಹಾಕಿ ಎತ್ತ ಕಡೆಯೋ ಹೊರಟು ಹೋಗಿತ್ತು. ಹಿತವಾಗಿ ಹರಡಿಕೊಂಡ ಬಿಸಿಲಿನಿಂದ ವಾತಾವರಣ ಹಿತಕರವಾಗಿತ್ತು. ಈ ಹಾಳಾದ ಮಳೆ ಯಾವಾಗ ನಿಲ್ಲುತ್ತದೆಯೋ ಎಂದು ಶಾಪ ಹಾಕಿಕೊಂಡು ಬಿಸಿಲಿಗೆ ಎದುರು ನೋಡುತ್ತಿದ್ದ ಜನರು ಸೂರ್ಯನ ದರುಶನವಾಗುತ್ತಿದ್ದಂತೆ ಸಂತೋಷದಲ್ಲಿ ರಾಜಾಸೀಟ್ ಕಡೆಗೆ ಹೆಜ್ಜೆ ಹಾಕಿದರು. ಹತ್ತಾರು ಜೋಡಿಗಳು ಅಲ್ಲಲ್ಲಿ ಕುಳಿತು ತಮ್ಮದೇ ಪ್ರಪಂಚದಲ್ಲಿ ಕಲ್ಪನೆಗಳನ್ನು ಹರಡಿ ಕುಳಿತು ಹರಟೆಯಲ್ಲಿ ತಲ್ಲೀನರಾಗಿದ್ದರು. ಅಭಿಮನ್ಯು ಏಕಾಂಗಿಯಾಗಿ ಕಲ್ಲು ಹಾಸಿನ ಬೆಂಚಿನ ಮೇಲೆ ಕುಳಿತು ರಾಜಾಸೀಟ್ ಎದುರಿಗಿನ ಪ್ರಕೃತಿ ಸೌಂದರ್ಯ ಸವಿಯುತ್ತಾ ಕುಳಿತುಬಿಟ್ಟ. ಸ್ವಲ್ಪ ಹೊತ್ತು ಕಳೆದು ತನ್ನ ಎಡಭಾಗಕ್ಕೆ ತಿರುಗಿ ನೋಡಿದವನಿಗೆ ಆಕಾಶವೇ ಕಳಚಿ ಬಿದ್ದ ಅನುಭವ…!?

ಯಾಕೋ ಏನೋ ಅಕ್ಷರ… ಎಂದು ಕೂಗಿ ಕರೆಯಬೇಕೆನ್ನಿಸಿತು. ಕೆಲವು ದಿನಗಳ ಹಿಂದಷ್ಟೇ ಆಕೆಯ ಮುಖ ನೋಡಬಾರದೆಂದು ನಿರ್ಧರಿಸಿದ್ದ ಅಭಿಮನ್ಯು ಆಕೆಯನ್ನು ನೋಡುತ್ತಿದ್ದಂತೆ ಕಹಿ ನೆನಪುಗಳನ್ನೆಲ್ಲ ಕ್ಷಣಕಾಲ ಮರೆತು ಆಕೆಯನ್ನೇ ನೋಡುತ್ತಾ ಕುಳಿತುಬಿಟ್ಟ. ಆಕೆಯನ್ನು ತೋಳಲ್ಲಿ ಬಳಸಿದ್ದ ಭಾವಿಪತಿ ನಿಖಿಲ್ ಆಕೆಯೊಂದಿಗೆ ಏನೋ ಹರಟ್ಟುತ್ತಾ ಕುಳಿತ್ತಿದ್ದ. ಛೇ.. ಹಾಳಾದವಳು. ಇಲ್ಲಿಗ್ಯಾಕೆ ಬಂದ್ಲು? ನಾಚಿಕೆಯಾಗೋದಿಲ್ವ ಅವಳಿಗೆ? ಅದೇ ಜಾಗದಲ್ಲಿ ಕುಳಿತು ತಾನೇ ನಾವಿಬ್ಬರು ಪ್ರೀತಿಯ ಸವಿಯನ್ನು ಸವಿದದ್ದು, ಮುಂದಿನ ಜೀವನದ ಬಗ್ಗೆ ಕಲ್ಪನೆ ಕಟ್ಟಿಕೊಂಡು ಪುಳಕಿತರಾದದ್ದು. ಈಗ ಅದೇ ಜಾಗದಲ್ಲಿ ಮತ್ತೊಬ್ಬನೊಂದಿಗೆ…. ಈ ಹೆಣ್ಣು ಜಾತಿಗೆ ನಾಚಿಕೆ ಅನ್ನೋದು ಎಲ್ಲಿದೆ? ತೋರ್ಪಡಿಕೆಗಷ್ಟೇ ನಾಚಿಕೆ. ಗಂಡಸರಿಗಿಂತ ಹೊಲಸು ಜಾತಿಯವರು ಮನದೊಳಗೆ ಆಕೆಯನ್ನು ಶಪಿಸತೊಡಗಿದ.

ಅಕ್ಷರಳನ್ನು ನೋಡಿ ಮತ್ತೆ ಮನಸ್ಸು ಕೆಡಿಸಿಕೊಂಡ ಅಭಿಮನ್ಯು ಇನ್ನು ಆಕೆಯನ್ನು ಮಾತ್ರವಲ್ಲ, ರಾಜಾಸೀಟನ್ನೇ ನೋಡಕೂಡದು ಎಂದು ನಿರ್ಧರಿಸಿ ಆಕೆಯ ಕಡೆಗೆ ದೃಷ್ಟಿ ಕೂಡ ಹಾಯಿಸದೆ ಹೊರಟು ಬಿಟ್ಟ. ಅಭಿಮನ್ಯುವಿಗೆ ಪ್ರೀತಿ ಎಂಬ ಎರಡಕ್ಷರದಲ್ಲಿ ಗೆಲುವಿನ ಸವಿಯನ್ನು ಜೀವನದುದ್ದಕ್ಕೂ ಸವಿಯಲು ಸಾಧ್ಯವಾಗಲಿಲ್ಲ. ಕೈ ಹಿಡಿಯಲು ಬಂದ ಹುಡುಗಿಯರೆಲ್ಲ ಕೈ ಕೊಟ್ಟು ತೆರಳಿದರು. ಆದರೆ, ಹೆಚ್ಚು ಕಾಲ ಬಾಳಿ ಬದುಕಿದ ಪ್ರೀತಿ ಅಂದರೆ ಅದು ಅಕ್ಷರ ನೀಡಿದ ಪ್ರೀತಿ ಮಾತ್ರ. ಆದರೆ, ಅದು ಕೂಡ ಇಂದು ಇಲ್ಲದಂತಾಯಿತು.
* * *

ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಅಮ್ಮ ವಾತ್ಸಲ್ಯ ಬಿಟ್ಟರೆ ಅಭಿಮನ್ಯುವಿಗೆ ಬೇರಾರೂ ಇಲ್ಲ. ಇರುವ ನೆಂಟರು ಇದ್ದೂ ಸತ್ತಂತೆ. ಒಂದೇ ಒಂದು ದಿನ ಮನೆಗೆ ಬಂದು ಕಷ್ಟ-ಸುಖ ವಿಚಾರಿಸಿದವರಲ್ಲ. ಹೀಗಾಗಿ ಅಭಿಮನ್ಯುವಿಗೆ ಅಮ್ಮ ಹಾಗೂ ಸ್ನೇಹಿತರನ್ನು ಬಿಟ್ಟರೆ ಬೇರೊಂದು ಪ್ರಪಂಚ ಗೊತ್ತಿರಲಿಲ್ಲ.

ಮನೆಯಲ್ಲಿ ಬಡತನ ತುಂಬಿಕೊಂಡಿದ್ದರೂ ವಾತ್ಸಲ್ಯ ಶ್ರೀಮಂತರ ಮಕ್ಕಳು ಓದುತ್ತಿದ್ದ ಆಂಗ್ಲಮಾಧ್ಯಮ ಶಾಲೆಗೆ ಅಭಿಮನ್ಯುವನ್ನು ಸೇರಿಸಿದರು. ನಮ್ಮ ಬದುಕು ಮುಗಿದು ಹೋಯಿತು ಅವನ ಬದುಕಾದರೂ ಸುಂದರವಾಗಿ ಅರಳಲಿ ಎಂಬ ಉದ್ದೇಶದಿಂದ ಹಲವು ಕಷ್ಟ ಎದುರಾದರೂ ಮಗನಿಗೆ ಆಂಗ್ಲಮಾಧ್ಯಮ ಶಿಕ್ಷಣ ಕೊಡಿಸಿದರು. ಅಭಿಮನ್ಯು ಶಾಲೆಯಲ್ಲಿ ಗಣಿತ ವಿಷಯವೊಂದನ್ನು ಹೊರತು ಪಡಿಸಿ ಉಳಿದೆಲ್ಲ ವಿಷಯಗಳಲ್ಲೂ ಅತ್ಯಂತ ಚುರುಕಿನ ಹುಡುಗ. ಬದುಕಿನಲ್ಲಿ ಅನುಭವಿಸಿದ ಪ್ರತಿಯೊಂದು ಯಾತನೆಗಳು ಅವನನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯಲು ಪ್ರಾರಂಭಿಸಿತು. ಯಾವಾಗ ಕಾಲೇಜು ಮೆಟ್ಟಿಲು ಹತ್ತಿದನೋ ಅಲ್ಲಿಂದ ಅವನ ಬದುಕಿನ ಶೈಲಿಯೇ ಬದಲಾಗಿ ಹೋಯಿತು. ಕಾಲೇಜಿಗೆ ಬರುತ್ತಿದ್ದ ಶ್ರೀಮಂತ ಹುಡುಗರೊಂದಿಗೆ ಸ್ನೇಹ ಬೆಳೆಸಿದ. ಅವರು ನೀಡುತ್ತಿದ್ದ ಬಿಟ್ಟಿ ಹೆಂಡವನ್ನು ಕಂಠಪೂರ್ತಿ ಕುಡಿದು ಸಂತುಷ್ಟನಾಗುವುದೇ ಅವನ ನಿತ್ಯದ ಕಾಯಕವಾಗಿ ಹೋಯಿತು.

ಅಭಿಮನ್ಯುವಿಗೆ ನಾಲ್ಕು ವರ್ಷ ಇರುವಾಗಲೇ ಅಪ್ಪ ತೀರ್ಥಕುಮಾರ್ ಶಿವನಪಾದ ಸೇರಿಕೊಂಡರು. ಆತ ಲಾರಿ ಡ್ರೈವರ್, ದುಡಿಮೆಯ ಹಣ ಬಹುತೇಕ ಸಾರಾಯಿ ಅಂಗಡಿಯಲ್ಲಿ ಠೇವಣಿ ಇಟ್ಟು ಬರುತ್ತಿದ್ದ. ಕುಡಿದು, ಕುಡಿದು ಸಾಕಾಗಿ ಹೋದಾಗ ಒಂದಷ್ಟು ಮನೆಯ ಕಡೆಗೆ ಗಮನ ಹರಿಸುತ್ತಿದ್ದ. ಪತ್ನಿ ಮುಂದೆ ಕೈ ಮುಗಿದು ನಿಂತು ಇನ್ನು ಮುಂದೆ ಕುಡಿಯೋದಿಲ್ಲ ಕಣೆ. ದೇವರಾಣೆಗೂ, ನಿನ್ನಾಣೆಗೂ. ಈಗ ನಿನ್ಗೆ ಖುಷಿ ಆಯ್ತಲ್ಲ… ಅನ್ನುತ್ತಿದ್ದ. ಜೀವನದಲ್ಲಿ ಅಂತಹ ಆಣೆಗಳನ್ನು ಎಷ್ಟು ಬಾರಿ ಪತ್ನಿಯ ಮುಂದೆ ಮಾಡಿದನೋ ಬಹುಶಃ ಆತನಿಗೆ ಲೆಕ್ಕ ಇಡಲು ಸಾಧ್ಯವಾಗಲಿಲ್ಲ. ಆಣೆ ಮಾಡಿದ ಮರುದಿನವೇ ಮತ್ತೆ ಬದಲಾಗಿ ಹೋಗುತ್ತಿದ್ದ. ಕುಡಿತದಿಂದ ದೂರ ಇರಲು ಆತನಿಂದ ಕಡೆ ತನಕವೂ ಸಾಧ್ಯವಾಗಲೇ ಇಲ್ಲ.

ತೀರ್ಥಕುಮಾರ್‌ಗೆ ಸಾಯುವಂತಹ ವಯಸ್ಸೇನು ಆಗಿರಲಿಲ್ಲ. ಹಾಳಾದ ಕುಡಿತದ ಚಟ ಆತನನ್ನು ಬಲಿ ತೆಗೆದುಕೊಂಡಿತು. ಅದ್ಯಾವ ಘಳಿಗೆಯಲ್ಲಿ ಅವರಪ್ಪ ತೀರ್ಥಕುಮಾರ್ ಅಂತ ಹೆಸರಿಟ್ಟರೋ ದೇವರೇ ಬಲ್ಲ. ತೀರ್ಥ ಸೇವನೆ ಒಂದು ದಿನವೂ ತಪ್ಪದ ಹಾಗೆ ನೋಡಿಕೊಂಡ. ಆಣೆ ಮಾಡುತ್ತಿದ್ದ ದಿನವೊಂದನ್ನು ಬಿಟ್ಟು! ಸಾಯುವ ದಿನ ಮಾತ್ರ ಕುಡಿಯೋದಕ್ಕೆ ಸಾಧ್ಯವಾಗಲಿಲ್ಲ. ಬದುಕಿದ್ದಷ್ಟು ದಿನ ತಾನೊಬ್ಬನೇ ನೆಮ್ಮದಿಯಾಗಿ ಬದುಕಿದ. ಕುಟುಂಬದ ಕಡೆಯಂತೂ ಗಮನವಿರಲಿಲ್ಲ. ತಾನಾಯ್ತು, ಕುಡಿತವಾಯ್ತು ಎಂಬಂತೆ ಬದುಕಿದ ಮನುಷ್ಯ. ಸಾಯುವ ಸಂದರ್ಭ ಕೂಡ ಯಾರಿಗೂ ತೊಂದರೆ ಕೊಟ್ಟವನಲ್ಲ, ಹಾಸಿಗೆ ಹಿಡಿದು ನರಳಿದವನಲ್ಲ, ಒಂದೇ ಏಟಿಗೆ ಶಿವನಪಾದ ಸೇರಿಕೊಂಡ. ದೇವರು ಎಂಥಾ ಒಳ್ಳೆ ಸಾವು ಕೊಟ್ಟ. ತುಂಬಾ ಒಳ್ಳೆಯ ಮನುಷ್ಯ ಸಾಮಾನ್ಯವಾಗಿ ಯಾರೇ ಸತ್ತರೂ ಜನರು ಆಡುವ ಸಹಜ ಮಾತು ತೀರ್ಥಕುಮಾರ್‌ನ ಸಾವಿನ ಸಂದರ್ಭದಲ್ಲೂ ಕೇಳಿ ಬಂತು.

ತೀರ್ಥಕುಮಾರ್‌ನ ಅಪ್ಪ ದೇವರಾಜು ಕೂಡ ಲಾರಿ ಡ್ರೈವರ್. ತನ್ನ ದುಡಿಮೆಯಿಂದಲೇ ಒಂದು ಮನೆ ಕೊಂಡುಕೊಂಡಿದ್ದ. ತೀರ್ಥಕುಮಾರ್ ತನ್ನ ಅಪ್ಪ ಗಳಿಸಿದ ಮನೆಯನ್ನು ಮಾತ್ರ ಉಳಿಸಿ ಸಾಯುವಾಗ ಹೆಂಡತಿ, ಮಗನ ತಲೆಮೇಲೊಂದು ಸೂರು ಬಿಟ್ಟು ಹೊರಟು ಹೋದ. ಅದೊಂದೇ ಆತ ಮಾಡಿದ ಒಳ್ಳೆಯ ಕೆಲಸಗಳಲ್ಲೊಂದು.

ತೀರ್ಥಕುಮಾರ್ ಮೃತಪಟ್ಟ ನಂತರ ಮಗನ ಸಂಪೂರ್ಣ ಜವಾಬ್ದಾರಿ ವಾತ್ಸಲ್ಯಳ ಹೆಗಲೇರಿ ಕುಳಿತುಕೊಂಡಿತು. ಅವರಿವರ ಮನೆಯ ಮೊಸರೆ ತಿಕ್ಕಿ ಅದರಿಂದ ಬರುತ್ತಿದ್ದ ಒಂದಷ್ಟು ಹಣವನ್ನು ಜೋಪಾನವಾಗಿ ಕುಟುಂಬದ ನಿರ್ವಹಣೆಗೆ ಬಳಸಿ ಉಳಿದ ಹಣವನ್ನು ಮಗನ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿದ್ದರು. ಉಳಿಕೆಯಾಗುವ ಪುಡಿಗಾಸನ್ನು ಜೋಪಾನವಾಗಿ ಕೂಡಿಡುತ್ತಿದ್ದರು. ವಾತ್ಸಲ್ಯ ಮಗನಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುವುದರ ಜೊತೆಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದರು. ದೇಹದಲ್ಲಿ ಶಕ್ತಿ ಇರುವವರೆಗೂ ಮಗನಿಗೆ ಯಾವುದೇ ತೊಂದರೆ, ಯಾವುದೇ ಕೊರತೆಯಾಗದಂತೆ ನೋಡಿಕೊಂಡರು. ಆಕೆಗೆ ವೃದ್ಧಾಪ್ಯ ಆವರಿಸಿಕೊಳ್ಳುತ್ತಿದ್ದಂತೆ ಮನೆಯ ಜವಾಬ್ದಾರಿ ಅಭಿಮನ್ಯುವಿನ ಹೆಗಲೇರಿ ಕುಳಿತುಕೊಂಡಿತು.

ಅದೊಂದು ದಿನ ಮಗನನ್ನು ಕರೆದು ಇನ್ನೆಷ್ಟು ದಿನಾಂತ ಹೀಗೆ ಅಲೆದಾಡ್ತಿಯ? ನನ್ಗಂತೂ ವಯಸ್ಸಾಯಿತು. ದುಡಿಯುವ ಶಕ್ತಿಯಂತೂ ದೇಹದಲ್ಲಿ ಉಳಿದಿಲ್ಲ. ಜೀವನದಲ್ಲಿ ಪಡಬಾರದ ಕಷ್ಟಪಟ್ಟು ನಿನ್ನ ಓದಿಸಿದ್ದಾಯ್ತು. ಮನೆಯಲ್ಲಂತೂ ಒಪ್ಪೊತ್ತಿಗೆ ಗತಿಯಿಲ್ಲ. ನೀನು ಯಾವುದಾದರೊಂದು ನೌಕರಿಗೆ ಸೇಕೋಬಾದ? ನಿನ್ನ ಸ್ನೇಹಿತರನ್ನೇ ನೋಡು ಬೆಂಗಳೂರು, ಮೈಸೂರು ಅಂತ ಓಡೋಗಿ ನೌಕರಿಗೆ ಸೇಕೊಂಡು ನೆಮ್ಮದಿ ಜೀವನ ನಡೆಸ್ತಾ ಇದ್ದಾರೆ. ಓದಿದವರಿಗೆಲ್ಲ ಒಳ್ಳೆಯ ಕೆಲ್ಸ ಸಿಗೋದು ಕಷ್ಟ ಮಗ. ಪ್ರಯತ್ನ ಪಟ್ಟರೆ ಸಣ್ಣಪುಟ್ಟ ನೌಕರಿಗಾದ್ರು ಸೇಕೋಬಹುದಲ್ವ? ನನ್ನ ಆಯುಷ್ಯ ಮುಗಿತಾ ಬಂತು. ಆದಷ್ಟು ಬೇಗ ಶಿವನ ಪಾದ ಸೇಕೋತ್ತಿನಿ ಅನ್ನಿಸ್ತಾ ಇದೆ. ಅಷ್ಟರೊಳಗೆ ನಿನ್ಗೊಂದು ಒಳ್ಳೆಯ ದಾರಿ ಆ ದೇವರು ತೋರಿಸಲಿ ವಾತ್ಸಲ್ಯ ಮಗನ ಭವಿಷ್ಯದ ಬಗ್ಗೆ ಮರುಗಿದರು.

ಮೊದಲೇ ನಿರುದ್ಯೋಗಿಯಾಗಿ ತಲ್ಲಣಗೊಂಡಿದ್ದ ಅಭಿಮನ್ಯುವಿನ ಮನಸ್ಸು ಅಮ್ಮನ ಮಾತಿನಿಂದ ಮತ್ತಷ್ಟು ಚಿಂತೆಗೆ ಒಳಗಾಯಿತು. ಒಮ್ಮೊಮ್ಮೆ ಈ ಬದುಕೇ ಸಾಕು. ಸತ್ತು ಬಿಡುವ ಅಂಥ ನಿರ್ಧರಿಸಿ ಮನಸ್ಸಿಗೆ ತೋಚಿದ ಕಡೆಗೆ ನಡೆದು ಬಿಡುತ್ತಿದ್ದ. ಆದರೆ, ಯಾರೋ ಆಗಿಂದಾಗೆ ತಡೆದು ನಿಲ್ಲಿಸುತ್ತಿದ್ದ ಅನುಭವವಾಗುತಿತ್ತು. ನೀನು ಸತ್ತರೆ ನಿನ್ನ ಅಮ್ಮನನ್ನು ನೋಡಿಕೊಳ್ಳುವವರು ಯಾರು? ಎಂದು ಅಶರೀರವಾಣಿಯೊಂದು ಕೇಳಿಸಿದ ಅನುಭವವಾಗಿ ಆತ್ಮಹತ್ಯೆಯ ತೀರ್ಮಾನದಿಂದ ಹಿಂದೆ ಸರಿದು ಮತ್ತೆ ಸುಧಾರಿಸಿಕೊಳ್ಳುತ್ತಿದ್ದ. ಆ ಮಾತು ಸ್ವರ್ಗದಲ್ಲಿರುವ ತನ್ನ ಅಪ್ಪನೇ ಹೇಳುತ್ತಿರಬಹುದೆಂದು ಆಕಾಶದ ಕಡೆಗೊಮ್ಮೆ ದಿಟ್ಟಿಸಿ ನೋಡಿ ಕಣ್ಣೀರು ಸುರಿಸುತ್ತಿದ್ದ. ಕಣ್ಗಳಿಂದ ಒಂದಷ್ಟು ಕಣ್ಣೀರ ಹನಿ ಹರಿದು ಹೋದ ನಂತರ ಮನಸ್ಸು ಹಗುರ ಅನ್ನಿಸಿ ಸಹಜ ಸ್ಥಿತಿಗೆ ಮರಳುತ್ತಿದ್ದ.

ವಿದ್ಯಾಭ್ಯಾಸ ಮುಗಿಸಿದ ನಂತರ ಅಭಿಮನ್ಯು ಕೈ ಕಟ್ಟಿ ಕುಳಿತುಕೊಂಡವನಲ್ಲ. ಒಳ್ಳೆಯ ನೌಕರಿ ಪಡೆದುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ. ಆದರೆ ಅದೃಷ್ಟವೆಂಬುದು ಅವನ ಬೆನ್ನು ಹತ್ತಲಿಲ್ಲ. ಅದೃಷ್ಟವೆಂಬುದು ದೂರದಲ್ಲಿ ನಿಂತು ಅವನನ್ನು ನೋಡಿ ಅಣಕಿಸಿ ನಗುತಿತ್ತು. ನೌಕರಿಗಾಗಿ ಅಲೆಯದ ಜಾಗವಿಲ್ಲ, ಕಾಣದ ಜನರಿಲ್ಲ. ಎಲ್ಲಿ ಹೋದರೂ ಭರವಸೆಯ, ತಿರಸ್ಕಾರದ ಮಾತುಗಳೇ. ನೌಕರಿಗಾಗಿ ನಡೆಸಿದ ಹುಡುಕಾಟದಿಂದ ಕೂಡಿಟ್ಟಿದ್ದ ಒಂದಷ್ಟು ಹಣ ಖರ್ಚಾಯಿತೇ ವಿನಃ ನೌಕರಿ ಕೈಗೆಟುಕಲಿಲ್ಲ. ನೌಕರಿಯ ವಿಚಾರವೆಲ್ಲ ಮನದೊಳಗೆ ನುಸುಳಿ ನೋವು ನೀಡಲು ಪ್ರಾರಂಭಿಸಿದಾಗಲೆಲ್ಲ ಮನೆಯಲ್ಲಿ ಇರಲು ಬಯಸದೆ ಸವೆದು ಹೋದ ಚಪ್ಪಲಿ ಹಾಕಿಕೊಂಡು ನೇರ ಮಡಿಕೇರಿಯ ಕಡೆಗೆ ನಡೆದುಬಿಡುತ್ತಿದ್ದ. ನಗರದಲ್ಲಿ ಸ್ನೇಹಿತ ರೊಂದಿಗೆ ಒಂದಷ್ಟು ಹೊತ್ತು ಪ್ರಯೋಜನಕ್ಕೆ ಬಾರದ ಹರಟೆ ಹೊಡೆದು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದ. ಸಂಜೆಯಾಗು ತ್ತಿದ್ದಂತೆ ಗೆಳೆಯರೆಲ್ಲರು ಬಾರ್‌ನಲ್ಲಿಯೇ ಕಾಲ ಕಳೆಯುತ್ತಿದ್ದರು. ಮಡಿಕೇರಿಗೆ ಮಳೆಗಾಲದಲ್ಲಿ ಮಳೆ ಬರುವುದು ತಪ್ಪಿದರೂ ಅಭಿಮನ್ಯು ಬಳಗದ ಕುಡಿತ ಮಾತ್ರ ತಪ್ಪೋದಿಲ್ಲ ಎಂಬ ಮಾತು ನಾಣ್ಣುಡಿಯಾಗಿ ಮಾರ್ಪಡುವಷ್ಟರ ಮಟ್ಟಿಗೆ ಒಂದು ದಿನವೂ ತಪ್ಪದೆ ಕುಡಿಯುತ್ತಿದ್ದರು.

ಅದೊಂದು ದಿನ ಮಳೆಯಲ್ಲಿ ತೊಯ್ದು ಹೋಗಿದ್ದ ಗೆಳೆಯರೆಲ್ಲರು ಎಂದಿನಂತೆ ಮೈ ಬೆಚ್ಚಗೆ ಮಾಡಿಕೊಳ್ಳುವ ಅವರ ನಿತ್ಯದ ಕೇಂದ್ರ ಬಾರ್‌ಗೆ ತೆರಳಿದರು. ಮನಸ್ಸಿಗೆ ಎಷ್ಟು ಕುಡಿಯಬೇಕು ಅನ್ನಿಸುತ್ತದೋ ಅದಕ್ಕಿಂತ ಎರಡು ಪೆಗ್ ಹೆಚ್ಚಿಗೇ ಕುಡಿದರು. ಬಹುಶಃ ಮಳೆಯಲ್ಲಿ ತೊಯ್ದು ಹೋಗಿದ್ದರಿಂದ ಸ್ವಲ್ಪ ಹೆಚ್ಚಿಗೆ ಕುಡಿದು ಸಂತುಷ್ಟರಾದರು. ಅಭಿಮನ್ಯು ಈ ಒಂದು ವಿಚಾರ ದಲ್ಲಿ ಮಾತ್ರ ತುಂಬಾ ಅದೃಷ್ಟವಂತ. ಹುಟ್ಟುವಾಗಲೇ ಬಡತನವನ್ನು ಹೊತ್ತುಕೊಂಡು ಬಂದರೂ ಕುಡಿತದ ವಿಚಾರದಲ್ಲಿ ಆಗರ್ಭ ಶ್ರೀಮಂತ! ಗೆಳೆಯರು ಕುಡಿಯುವ ವಿಚಾರದಲ್ಲಿ ಅಭಿಮನ್ಯುವಿಗೆ ಒಂದಿಷ್ಟು ಕೊರತೆ ಇಲ್ಲದಂತೆ ನೋಡಿಕೊಂಡರು. ಒಂದು ದಿನ ಕೂಡ ಕುಡಿದ ಹೆಂಡಕ್ಕೆ ಪಾಲು ಹಾಕು ಎಂದು ಕೇಳಿದವರಲ್ಲ, ವೈಟರ್‌ಗೆ ಒಂದೈದು ರೂ. ಟಿಪ್ಸ್ ಕೂಡ ಕೊಡಲು ಬಿಟ್ಟವರಲ್ಲ. ಅದನ್ನೂ ಕೂಡ ಸ್ನೇಹಿತರೇ ಕೊಡುತ್ತಿದ್ದರು. ಅವರಿಗೆ ಅಭಿಮನ್ಯುವಿನ ಬಡತನದ ತೀವ್ರತೆಯ ಅರಿವಿತ್ತು. ಆದರೆ ಅಭಿಮನ್ಯುವಿಗೆ ಸಹಕಾರ ನೀಡುವಷ್ಟು ಹಣ ಅವರಲ್ಲಿ ಇರಲಿಲ್ಲ. ಅಪ್ಪ, ಅಮ್ಮನಿಗೆ ಸುಳ್ಳು ಹೇಳಿ ಒಂದಷ್ಟು ಹಣ ಮನೆಯಿಂದ ಕಸಿದುಕೊಂಡು ಬರುತ್ತಿದ್ದರು. ಆ ಹಣವನ್ನೇ ಕುಡಿತದ ಚಟಕ್ಕೆ ವಿನಿಯೋಗಿಸುತ್ತಿದ್ದರು. ಅಭಿಮನ್ಯು ಕೆಲಸಕ್ಕಾಗಿ ಅಲೆದಾಡುವಾಗ ಕೈಲಾದಷ್ಟು ಸಹಕಾರ ಮಾಡಿದ್ದೂ ಉಂಟು. ಗೆಳೆಯರಾದ ರಾಹುಲ್, ಸಂಜಯ್, ಅರುಣ, ಪುರುಷೋತ್ತಮ್ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದರೂ ತೀರಾ ಬಡವನಾದ ಅಭಿಮನ್ಯುವಿನ ಬಗ್ಗೆ ಎಲ್ಲಿಲ್ಲದ ಪ್ರೀತಿ ಇಟ್ಟುಕೊಂಡಿದ್ದರು.

ಒಂದರ ಮೇಲೊಂದರಂತೆ ಪೆಗ್ ಏರುತ್ತಲೇ ಇತ್ತು. ಯಾರಿಗೂ ಮೇಲೇಳುವ ಮನಸ್ಸಾಗುತ್ತಿಲ್ಲ. ಕುಡಿದು, ಕುಡಿದು ಕಿವಿ ಮಂಕಾಯಿತು, ತಲೆ ಭಾರವಾಯಿತು. ಅಗತ್ಯಕ್ಕಿಂತ ಹೆಚ್ಚಾಗಿಯೇ ಜೋರಾಗಿ ಮಾತನಾಡಿಕೊಳ್ಳುತ್ತಿದ್ದರು. ಏಯ್, ಇವತ್ತಿಗೆ ಸಾಕು ಕಣ್ರೋ. ನನ್ಗಂತೂ ಸಾಕಾಗಿ ಹೋಗಿದೆ. ಇನ್ನೇನಿದ್ದರೂ ನಾಳೆಗೆ ಇಟ್ಟುಕೊಳ್ಳುವ ಎಂದು ರಾಹುಲ್ ಎಬ್ಬಿಸುವವರೆಗೂ ಎಲ್ಲರೂ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು.

ಮಳೆ ನಿಂತು ಸಾಕಷ್ಟು ಹೊತ್ತಾಗಿತ್ತು. ಬಾನಂಗಳದಲ್ಲಿ ಭಾಸ್ಕರ ಆಗೊಮ್ಮೆ ಈಗೊಮ್ಮೆ ಭುವಿಯನ್ನು ಇಣುಕಿ ನೋಡುವ ಸಣ್ಣ ಪ್ರಯತ್ನ ನಡೆಸುತ್ತಿದ್ದ. ಆದರೆ, ದಟ್ಟ ಕಾರ್ಮೋಡಗಳು ಸೂರ್ಯನನ್ನು ಅಡ್ಡಗಟ್ಟಿ ನಿಲ್ಲುವ ಪ್ರಯತ್ನ ಮುಂದುವರೆಸುತ್ತಲೇ ಇದ್ದವು. ಮಳೆ ನಿಂತ ಬಳಿಕ ವಾತಾವರಣ ಆಹ್ಲಾದಕರವಾಗಿತ್ತು. ಅದಾಗಲೇ ಸುರಿದು ಹೋದ ಮಳೆಯ ನೀರು ಚರಂಡಿಯಲ್ಲಿ ಜುಳು ಜುಳು ನಿನಾದಗೈಯುತ್ತಾ ಹರಿಯುತಿತ್ತು. ಹೊತ್ತು ಸರಿಯುತ್ತಿದ್ದಂತೆ ಕತ್ತಲು ಆವರಿಸಿಕೊಳ್ಳತೊಡಗಿತು. ವಾಹನ ಸಂಚಾರ ವಿರಳವಾಯಿತು. ಚರಂಡಿಯಲ್ಲಿ ಹರಿದು ಹೋಗುತ್ತಿದ್ದ ಮಳೆ ನೀರಿನ ಕಲರವ ಮಾತ್ರ ಅಲ್ಲಿ ಕೇಳಿಸುತಿತ್ತು. ಸಂಜೆಯಾಗುತ್ತಿದ್ದಂತೆ ಎಲ್ಲರೂ ಮನೆ ಸೇರಿಕೊಳ್ಳುವ ಆತುರದಲ್ಲಿದ್ದರು. ಮಳೆ ಮತ್ತೆಲ್ಲಿ ಬಂದು ಬಿಡುತ್ತದೆಯೋ ಎಂಬ ಆತಂಕದಲ್ಲಿ ಎಲ್ಲರು ಬಿರುಸಾಗಿ ಹೆಜ್ಜೆ ಹಾಕುತ್ತಿದ್ದರು. ಸರಕಾರಿ ಕಚೇರಿಯಲ್ಲಿ ಕುಳಿತು ಅದೇ ಹಳೆಯ ಕಡತಗಳನ್ನೆಲ್ಲ ತಿರುವಿಹಾಕಿ ಸುಸ್ತಾಗಿದ್ದ ಅಕ್ಷರ ಮನೆ ಕಡೆಗೆ ಮೆಲ್ಲನೆ ತೆರಳುತ್ತಿದ್ದಳು. ಮಾರ್ಗದ ಮಧ್ಯ ಎದುರಾದ ಅಭಿಮನ್ಯುವನ್ನು ಕಂಡು ಅಲ್ಲೇ ನಿಂತಳು.

ಅಭಿಮನ್ಯುವಿನ ಸ್ಥಿತಿ ಕಂಡು ಆಕೆಯ ಮನ ಕರಗಿ ಹೋಯಿತು. ಎಷ್ಟೊಂದು ಚೆನ್ನಾಗಿದ್ದ ಹುಡುಗ ಇಷ್ಟೊಂದು ಬದಲಾಗಿ ಬಿಟ್ಟನಲ್ಲ? ಅಪ್ಪ ಕುಡಿದು, ಕುಡಿದು ಸತ್ತೋದ. ಮಗ ಕೂಡ ಅದೇ ಹಾದಿ ತುಳಿಯತ್ತಾ ಇದ್ದಾನಲ್ಲ! ಅಂದುಕೊಂಡು ಮರುಗಿದಳು.

ಅಭಿಮನ್ಯು ಯಾಕೆ ಹೀಗೆ ಕುಡಿದು ಜೀವನ ಹಾಳು ಮಾಡ್ಕೋತ್ತಾ ಇದ್ದೀಯ? ಇಷ್ಟೊಂದು ಸಣ್ಣ ವಯಸ್ಸಿನಲ್ಲಿ ಕುಡಿದು ತೂರಾಡಿದ್ರೆ ಹೇಗೆ? ಅಬ್ಬಬ್ಬಾ… ನನ್ನಿಂದ ಕಲ್ಪನೆ ಸಹ ಮಾಡ್ಕೊಳ್ಳೋದಕ್ಕೆ ಸಾಧ್ಯವಾಗ್ತಾ ಇಲ್ಲ. ಕಾಲೇಜಿನಲ್ಲಿ ಓದ್ತಾ ಇದ್ದಾಗ ಅದೆಷ್ಟೊಂದು ಡೀಸೆಂಟಾಗಿ ಇದ್ದೆ. ಆದರೆ, ಇವತ್ತು ನಿನ್ನ ಈ ಅವತಾರನ ನನ್ನಿಂದ ನೋಡ್ಲಿಕ್ಕೆ ಸಾಧ್ಯ ಆಗ್ತಾ ಇಲ್ಲ. ನನ್ಗೆ ಬತಾ ಇರೋ ಕೋಪಕ್ಕೆ ಜಾಡಿಸಿ ಒದ್ದು ಬಿಡೋಣ ಅನ್ನಿಸ್ತಾ ಇದೆ ಬಂದ ಕೋಪವನ್ನು ತನ್ನಲ್ಲೇ ಅದುಮಿಟ್ಟುಕೊಂಡು ಅಭಿಮನ್ಯು ವಿನ ಮಾರ್ಗದರ್ಶಕಳಾಗಿ ಕೆಲಸ ಮಾಡಲು ಮುಂದಾದಳು.

ಕುಡಿದು ತೂರಾಡಿ ಬರುತ್ತಿದ್ದ ಅಭಿಮನ್ಯುವಿಗೆ ಯಾರ ಹಿತವಚನವೂ ಬೇಕಾಗಿರಲಿಲ್ಲ. ಕುಡಿಯೋದೇ ಮನಸ್ಸಿನ ನೆಮ್ಮದಿಗೋಸ್ಕರ. ಈ ಹಾಳಾದ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ. ಪರಿಹಾರ ಏನಿದ್ದರೂ ಕುಡಿತದಲ್ಲಿ ಮಾತ್ರ ಎಂಬ ನಂಬಿಕೆ ಇತ್ತೀಚೆಗಂತೂ ಅವನ ಮನದಲ್ಲಿ ಆಳವಾಗಿ ಬೇರೂರಿತ್ತು. ಕುಡಿತದ ವಿರುದ್ಧ ಯಾರೇ ಮಾತನಾಡಿದರೂ ಅದನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಆಕೆಯ ಹಿತವಚನ ಕೇಳಲು ಇಷ್ಟವಿಲ್ಲದೆ ಸ್ಥಳದಿಂದ ಕಾಲ್ತೆಗೆಯಲು ಅಣಿಯಾಗುತ್ತಿದ್ದ ಅಭಿಮನ್ಯುವಿನ ಕೈ ಹಿಡಿದೆಳೆದು ನಿಲ್ಲಿಸಿದಳು.

ಎಲ್ಲಿಗೆ ಹೋಗ್ತಾ ಇದ್ದೀಯ? ಬೇಸರ ಆಯ್ತಾ…!?
ಹಾಗೇನಿಲ್ಲ ಅಂದ ಅಭಿಮನ್ಯು ಮುನ್ನಡೆಯಲು ಹೆಜ್ಜೆ ಇಡುತ್ತಿದ್ದಂತೆ ಅಡ್ಡ ಬಂದು ನಿಂತಳು.
ನಿನ್ನ ಈ ಅವಸ್ಥೆಗೆ ಏನು ಕಾರಣ ಅಂಥ ನೀನು ಹೇಳ್ಲೇ ಬೇಕು. ಇವತ್ತು ನೀನು ಕಾರಣ ಹೇಳದಿದ್ದರೆ ಬೆಳಗ್ಗೆ ತನಕ ನಿನ್ನ ಬಿಡೋದಿಲ್ಲ ಹಟಹಿಡಿದು ನಿಂತುಬಿಟ್ಟಳು.

ಅಭಿಮನ್ಯು-ಅಕ್ಷರ ಇಬ್ಬರು ಒಟ್ಟಿಗೆ ಆಡಿ ಬೆಳೆದವರು. ಒಟ್ಟಿಗೆ ಒಂದೇ ತರಗತಿಯಲ್ಲಿ ಓದಿದವರು. ಶಾಲೆಯಲ್ಲಾಗಲಿ, ಬಿಡುವಿನ ಅವಧಿಯಲ್ಲಾಗಲಿ ಇಬ್ಬರು ಒಬ್ಬರನ್ನೊಬ್ಬರು ಅಗಲಿ ಇದ್ದದ್ದೇ ಅಪರೂಪ. ಅವರಿಬ್ಬರಲ್ಲಿ ಅಂತಹ ಒಂದು ನಿರ್ಮಲವಾದ ಗೆಳೆತನ ಬೆಳೆದಿತ್ತು. ಕಷ್ಟ, ಸುಖಗಳನ್ನು ದಿನಾ ಹಂಚಿಕೊಳ್ಳುತ್ತಿದ್ದರು. ಗಣಿತದ ಬಗ್ಗೆ ಮೇಷ್ಟ್ರು ಎಷ್ಟೇ ಹೇಳಿ ಕೊಟ್ಟರೂ ಅಭಿಮನ್ಯುವಿಗೆ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಬಿಡುವಿನ ವೇಳೆ ಅಕ್ಷರ ಅಭಿಮನ್ಯುವಿಗೆ ಮೇಷ್ಟ್ರಾಗುತ್ತಿದ್ದಳು.

ತನಗೆ ತಿಳಿದಷ್ಟು ಅಭಿಮನ್ಯುವಿಗೆ ಅಕ್ಕರೆಯಿಂದ ಹೇಳಿಕೊಡುತ್ತಿದ್ದಳು. ಆಕೆಯ ಗೆಳೆತನ ಇಲ್ಲದಿದ್ದರೆ ಅಭಿಮನ್ಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಂತೂ ಉತ್ತೀರ್ಣನಾಗುವ ಯಾವುದೇ ಭರವಸೆ ಇರಲಿಲ್ಲ. ಅಭಿಮನ್ಯುವಿನ ಪ್ರತಿಯೊಂದು ಸಮಸ್ಯೆಗೂ ಆಕೆಯ ಸ್ಪಂದನ ಇರುತಿತ್ತು. ಅವರಿಬ್ಬರ ಗೆಳೆತನ ನೋಡಿ ಸಹಪಾಠಿಗಳೆಲ್ಲ್ಲ ಲವ್ವಸ್ ನೋಡ್ರೋ ಒಟ್ಟಿಗೆ ಕೂತ್ತಿದ್ದಾರೆ ಎಂದು ದೂರದಲ್ಲಿ ನಿಂತು ಗೇಲಿ ಮಾಡುತ್ತಿದ್ದರು. ಆದರೆ ಸಹಪಾಠಿಗಳ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ ತಾವಾಯ್ತು, ತಮ್ಮ ಪಾಡಾಯ್ತು ಎಂಬಂತೆ ಶಿಕ್ಷಣ ಮುಗಿಸಿದರು.

ಶಾಲಾ, ಕಾಲೇಜು ದಿನಗಳಲ್ಲಿ ಬದುಕಿನ ಬಗ್ಗೆ ಅಭಿಮನ್ಯುವಿಗೆ ಅದೆಂತಹಾ ಶ್ರದ್ಧೆ ಇತ್ತು. ಆದರೆ ಇಂದು ಕುಡಿದು ತೂರಾಡುವುದೇ ಒಂದು ಜೀವನ ಅಂದುಕೊಂಡು ಬದುಕು ಸವೆಸುತ್ತಿದ್ದಾನೆ. ಎಲ್ಲಾ ಅವನ ಅಪ್ಪನ ಹಾಗೆ. ಶಾಲಾ, ಕಾಲೇಜು ದಿನಗಳಲ್ಲಿ ಅಭಿಮನ್ಯುವಿನ ಮೊಗದಲ್ಲಿ ಅದೆಂತಹಾ ಮುಗ್ಧತೆ ಇತ್ತು. ಆದರೆ, ಅವನ ಈಗಿನ ಅವತಾರ ಕಂಡು ಆಕೆಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಭಿಮನ್ಯುವಿನ ಕೈಯನ್ನು ಅಕ್ಕರೆಯಿಂದ ಹಿಡಿದು ಅಭಿಮನ್ಯು, ಕುಡಿದು ಜೀವನ ಹಾಳು ಮಾಡ್ಕೋ ಬೇಡ. ನೀನು ಯಾವುದಕ್ಕೂ ಭಯ ಪಡ್ಬೇಡ. ನಿನ್ನೊಂದಿಗೆ ನಾನಿದ್ದೇನೆ. ನನ್ನಿಂದ ಏನು ಸಹಕಾರ ಬೇಕೋ ಕೇಳು ಅಂದಳು.

ಸಾಕಷ್ಟು ಜನರ ಕೈಕಾಲು ಹಿಡಿದುಕೊಂಡರೂ ಯಾರೂ ಒಂದು ನೌಕರಿ ಕೊಡಿಸಲಿಲ್ಲ. ಕೇವಲ ಭರವಸೆಗಳ ಮಾತುಗಳನ್ನಷ್ಟೇ ಆಡುತ್ತಿದ್ದರು. ಇನ್ನು ಈಕೆಯ ಬಳಿ ಹೇಳಿಕೊಂಡರೇನು ಪ್ರಯೋಜನ ಏನು? ಸಾಕಷ್ಟು ಓದಿದರೂ ಒಂದೊಳ್ಳೆಯ ನೌಕರಿ ಸಿಗಲಿಲ್ಲ. ಒಟ್ಟಿನಲ್ಲಿ ವಿದ್ಯಾಸಂಸ್ಥೆಗಳೆಲ್ಲ ನಿರುದ್ಯೋಗಿಗಳನ್ನು ಸೃಷ್ಟಿ ಮಾಡುವ ಕೇಂದ್ರಗಳಾಗಿ ಬಿಟ್ಟಿವೆ. ಎಷ್ಟು ಓದಿದರೂ ಪ್ರಯೋಜನ ಏನೂ ಇಲ್ಲ. ನೌಕರಿ ಪಡೆದುಕೊಳ್ಳಬೇಕಾದರೆ ಲಂಚವೇ ಪ್ರಮುಖ ಪಾತ್ರ ವಹಿಸುತ್ತದೆ. ಅದರೊಂದಿಗೆ ಒಂದಿಷ್ಟು ಪ್ರಭಾವನೂ ಬೇಕು. ಲಂಚ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳುವಷ್ಟು ಶಕ್ತನಲ್ಲ ಅಭಿಮನ್ಯು. ಕೆಲಸಕೋರಿ ಅರ್ಜಿ ಸಲ್ಲಿಸಲು ಸಹ ಅವನ ಬಳಿ ಹಣ ಇರುತ್ತಿರಲಿಲ್ಲ. ಹೀಗಿರುವಾಗ ಲಂಚ ನೀಡಿ ಕೆಲಸ ಗಿಟ್ಟಿಸಿಕೊಳ್ಳುವ ಪ್ರಸಂಗವನ್ನು ಕಲ್ಪನೆ ಸಹ ಮಾಡಿಕೊಳ್ಳಲು ಅವನಿಂದ ಸಾಧ್ಯವಿರಲಿಲ್ಲ. ಕುಂತರೂ, ನಿಂತರೂ ಏನೇ ಮಾಡಿದರೂ ಚಿಂತೆ ಮಾತ್ರ ಅವನಿಂದ ದೂರ ಆಗುತ್ತಿರಲಿಲ್ಲ. ಚಿಂತೆ ಎಂಬುದು ಅವನ ಸಂಗಾತಿಯಾಗಿತ್ತು. ಒಂದಷ್ಟು ಕುಡಿದರೆ ಮನಸ್ಸಿಗೆ ಏನೋ ಹಿತ ಅನ್ನಿಸಲು ಪ್ರಾರಂಭಿಸಿದ್ದಲ್ಲಿಂದ ನಿತ್ಯದ ಕುಡುಕನಾಗಿ ಮಾರ್ಪಾಡು ಹೊಂದಿದ. ಕುಡಿಯುವುದಕ್ಕೂ ಕೈಯಲ್ಲಿ ಕಾಸಿಲ್ಲ. ಗೆಳೆಯರು ಕೊಡಿಸಿದರೆ ಅದು ಅವನ ಭಾಗ್ಯ.

ಇಷ್ಟು ವರ್ಷ ಅಭಿಮನ್ಯುವನ್ನು ವಾತ್ಸಲ್ಯ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು. ಆದರೆ ಇಂದು ಆಕೆಗೆ ವೃದ್ಧಾಪ್ಯ ಆವರಿಸಿಕೊಂಡಿದೆ. ಸಂಸಾರದ ಜವಾಬ್ದಾರಿ ಹೊತ್ತುಕೊಳ್ಳಬೇಕಾದ ಸಮಯದಲ್ಲಿ ಅಭಿಮನ್ಯು ನಿರುದ್ಯೋಗಿಯಾಗಿ ಅಲೆಯುತ್ತಿದ್ದಾನೆ. ಮಗನ ಮೇಲೆ ವಾತ್ಸಲ್ಯ ತುಂಬಾ ಭರವಸೆ ಇಟ್ಟಿದ್ದರು. ಇಂದಲ್ಲ ನಾಳೆಯಾದರೂ ಮಗ ಉದ್ಧಾರ ಆಗುತ್ತಾನೆ, ದೊಡ್ಡ ಸಾಧನೆ ಮಾಡುತ್ತಾನೆ ಅಂತ ಅಂದುಕೊಂಡಿದ್ದಳು. ಅದರೆ, ಅಭಿಮನ್ಯುವಿನ ಕಣ್ಣ ಮುಂದೆ ಭರವಸೆಗಳೆಂಬುದು ಹಿಂಗಿ ಹೋಗಿ ಮುಂದಿನ ಜೀವನದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯೊಂದು ಮಾತ್ರ ಸ್ಪಷ್ಟವಾಗಿ ಗೋಚರಿಸುತಿತ್ತು. ಜೀವನವೇ ಸಾಕಾಗಿ ಹೋಗಿತ್ತು. ಆದರೆ, ಅವನ ಜೀವ ಉಳಿದಿರುವುದು ಕೇವಲ ಅಮ್ಮನಿಗೋಸ್ಕರ. ಅಮ್ಮ ಇಲ್ಲದಿದ್ದರೆ ಅವನು ಎಂದೋ ಇಹಲೋಕ ತ್ಯಜಿಸಿಬಿಡುತ್ತಿದ್ದ. ಆಕೆ ಒಬ್ಬಂಟಿಯಾಗಬಾರದೆಂದು ನೋವನ್ನೆಲ್ಲ ನುಂಗಿ ಬದುಕು ಸವೆಸುತ್ತಿದ್ದ.

ಅಭಿಮನ್ಯುವಿನ ಮನದಲ್ಲಿ ತುಂಬಿಕೊಂಡಿರುವ ನೋವುಗಳನ್ನು ದೂರ ಮಾಡಲು ಕೇವಲ ಸಾಂತ್ವನದ ಮಾತುಗಳು ಮಾತ್ರ ಸಾಕಾಗೋದಿಲ್ಲ. ಅವನಿಗೊಂದು ಒಳ್ಳೆಯ ಮಾರ್ಗ ತೋರಿಸಬೇಕು. ಕೆಲಸಕ್ಕಾಗಿ ಅಲೆದು ನಿರಾಸೆಗೊಂಡವನ ಮನದಲ್ಲಿ ಹತಾಶೆಯ ಭಾವನೆ ಮನೆ ಮಾಡಿಕೊಂಡಿದೆ. ಎಲ್ಲವನ್ನೂ ವಿಷದವಾಗಿ ಹೇಳಿದರೆ ಸರಿದಾರಿಗೆ ಬರುತ್ತಾನೆ. ನಿರುದ್ಯೋಗ ಎಂಬುದು ಕೇವಲ ಅಭಿಮನ್ಯುವನ್ನು ಮಾತ್ರ ಕಾಡುತ್ತಿರುವ ಸಮಸ್ಯೆಯಲ್ಲ. ಕೋಟ್ಯಾಂತರ ಯುವ ಜನತೆ ಆ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಆದರೆ, ಎಲ್ಲರೂ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅಭಿಮನ್ಯು ಕುಡಿತದಲ್ಲಿ ನೆಮ್ಮದಿ ಹಾಗೂ ಪರಿಹಾರ ಕಾಣೋದಕ್ಕೆ ಪ್ರಾರಂಭ ಮಾಡಿದ್ದಾನೆ. ಅದು ಅವನ ಬದುಕನ್ನೇ ಅಂತ್ಯಗೊಳಿಸಿ ಬಿಡುತ್ತದೆ ಅಂದುಕೊಂಡ ಅಕ್ಷರ ಒಂದುಕ್ಷಣ ತೀವ್ರ ಕಳವಳಕ್ಕೊಳಗಾದಳು.

….. ಮುಂದುವರೆಯುವುದು

ಕಾದಂಬರಿ ಪುಟ ೧-೧೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಸ್
Next post ಬಣ್ಣದ ಹಬ್ಬ

ಸಣ್ಣ ಕತೆ

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…