ಕಾರಣ ಗೊತ್ತಿಲ್ಲ……..

ಕಾರಣ ಗೊತ್ತಿಲ್ಲ……..

ಆ ರಸ್ತೆಯ ಕೊನೆಯಲ್ಲಿರುವ ಮರ. ಏನಿಲ್ಲಾ ಅಂದ್ರೂ ಒಂದು ತಲೆಮಾರು ದಾಟಿರಬಹುದು. ಅದರ ಕೆಳಗೆ ನಿಂತರೆ ಆಕಾಶ ಕಾಣುತ್ತಿರಲಿಲ್ಲ. ತನ್ನನ್ನು ತಾನೆ ಸಿಂಗರಿಸಿಕೊಂಡಂತಿರುವ ಮರದ ಟೊಂಗೆಗಳಿಗೆ ಆವರಿಸಿರುವ ಎಲೆಗಳು ತನ್ನನ್ನು ಮೀರಿ ಮೇಲಿರುವುದು ಕಾಣದಷ್ಟು ದಟ್ಟವಾಗಿದ್ದವು. ಆ ಮರದ ಕೆಳಗೆ ಅವನು ಕಳೆದ ಹತ್ತೊಂಬೊತ್ತು ವರ್ಷಗಳಿಂದ ಬೈಕ್ ನಿಲ್ಲಿಸಿ, ಕೆಲ ನಿಮಿಷ ನಿಂತು ಏನನ್ನೋ ಧ್ಯಾನಿಸಿ, ಆ ಕ್ಷಣಕ್ಕೆ ಅದೇ ಜಾಗದಲ್ಲಿ ಸಿಕ್ಕವರೊಡೆನೆ ನಾಲ್ಕು ಮಾತಾಡಿ ತಿರುಗಾಡಲು ಹೊರಡುವುದು ರೂಢಿಯಾಗಿತ್ತು. ಎಂಥದೋ ಒಂದು ಬಗೆಯ ಭಾವಸಂಬಂಧ ಮರದೊಡನೆ ಬೆಳೆದಿತ್ತು. ಅದೇ ಮರದ ನೆರಳಲ್ಲಿ ಅವನು ಅವಳೊಡನೆ ಏನೆಲ್ಲಾ ಮಾತಾಡಿದ್ದಾನೆ. ಮುಂಗಾರು ಮಳೆ ಸಿನಿಮಾದ ಹಾಡನ್ನು ಮೊಬೈಲ್ ನಲ್ಲಿ ಹಾಕಿಕೊಂಡು ನೂರಾರು ಸಲ ಕೇಳುತ್ತಿದ್ದುದು, ಹರಟಲು ಬರುತ್ತಿದ್ದವಳಿಗೆ ಕೇಳಿಸಿದ್ದು ಇದೇ ಮರದ ಕೆಳಗೆ. ಸಂತಸ ಪಲ್ಲವಿಸಿದ ಆ ಜಾಗದ ಬಗ್ಗೆ ಅವಂಗೆ ವಿಶೇಷ ಆಕರ್ಷಣೆ ಬೆಳೆದಿದೆ.

ಅವಳ ಪರಿಚಯವಾದಗಿನಿಂದಲೂ ಮಾಮೂಲಿಯಾಗಿ ನಿಂತು ಗಂಟೆಗಟ್ಟಲೆ ಮಾತನಾಡುತ್ತಿದ್ದ ಆ ಪ್ರೀತಿಯ ಮರದ ಆವರಣದ ಗೇಟ್ ಬಳಿ ನಿಂತಿದ್ದ ಅವಳನ್ನ ಕೇಳಿದ ’ಯಾವಾಗ ಬಂದೆಯೇ ಮಾರಾಯ್ತಿ?’

’ಒಂದು ವಾರ ಆಯ್ತು ರಜೆಗೆ ಬಂದಿದ್ದು’ ಸ್ವರಗಿದಂತಿದ್ದ ಅವ್ಳು ನಿರುತ್ಸಾಹದಿಂದ ಪ್ರತಿಕ್ರಿಯಿಸಿದ್ಲು.

’ಊರಿಗೆ ಬಂದ್ರೂ ಪತ್ತೆಯಿಲ್ಲ ನಿಂದು, ಒಂದ್ ಕಾಲಾದ್ರು ಮಾಡ್ಬಾರ್ದ?’ ಎಂದದ್ದಕ್ಕೆ ’ಈಗ ಸಿಕ್ಕಿದ್ದೀನಲ್ಲಾ’ ಅಂದ್ಲು.

ಏನೋ ಎಡವಟ್ಟು ಆದಂತಿದೆ ಎಂದುಕೊಳ್ಳುತ್ತಾ… ಒಂದ್ ಮಾತು; ನೀನೀಗ
ಬದಲಾಗಿದ್ದೀಯಾ. ನಾನು ಎಂಥ ಮಾಡದ್ನೆ. ಜನೇ ಹೀಂಗೆ. ಮೊದ್ಲೆ ನಿನ್ಗೆ ಹೇಳಿದ್ದೇ. ’ಎಲ್ಲಾ ಹುಡ್ಗಿಯರಂತೆ ನೀನಿಲ್ಲ. ತುಂಬಾ ಬೋಲ್ಡ್ ಆಗಿದ್ದೀಯ. ಸ್ಟ್ರೈಟ್ ಫ಼ಾರ್ವರ್ಡ್ ಇದ್ದಿ. ಮನಸ್ಸಿಗೆ ಅನ್ನಿಸಿದ್ದು , ಅನ್ಸಿದಂಗೆ ಹೇಳ್ತಿ ಅಂಥ. ಈಗ ನೋಡ್ದಿದ್ರೆ’ ಎಂದು ಕ್ಷಣ ಅವ್ಳ ಮುಖಭಾವ ಗಮನಿಸಿ. ’ಅಂಥೂ ಕೊನೆಗೆ ನೀನು ಆ ಎಲ್ಲಾ ಹುಡ್ಗಿಯರ ಸಾಲ್ಗೆ ಸೇರ್ಬಿಟ್ಟಿ. ಹೌದು ನಿನ್ನ ಮೊಬೈಲ್ ನಂಬರ್ ಸಹ ಕೊಡದಷ್ಟು ಕೆಟ್ಟವ್ನಾ ನಾನು? ಏನಾಗಿದೆ ನಿಂಗೆ?’

ನಗುತ್ತಿದ್ದ ಅವಳು ನೀಡಿದ್ದು ಒಂದೇ ಉತ್ತರ ’ಗೊತ್ತಿಲ್ಲ’ ಅಂತ.

ನಂಜೊತೆ ಹೆಚ್ಚು ಮಾತು ಬೇಡ ಎಂಬ ನಿರ್ಬಂಧ ಇದೆಯಾ, ಹೆಂಗೆ?

’ಅಂಗೇನಿಲ್ಲಾ… ಸುಮ್ನೆ ಯಾಕೆ ಅಂಥಾ.’

’ಫ಼್ರೆಂಡ್ ಶಿಫ಼್ ಮಾಡುವ ಮೊದಲು ಯೋಚಿಸ್ಬೇಕಿತ್ತು, ಕೆಲ ತಿಂಗಳುಗಳ ಹಿಂದೆ ನಿನ್ನ ಚೆಲ್ಲಾಟ, ಆತುರದ ರೀತಿ, ತೋರಿದ್ದ ಪ್ರೀತಿ, ಆಡಿದ್ದ ಮಾತುಗಳನ್ನ ನೆನಪಿಸಿಕೋ. ನಿನ್ನ ವೇಗಕ್ಕೆ ಕಡಿವಾಣ ಹಾಕಿ ಬುದ್ಧಿ ಹೇಳಿದ್ದು, ಪರೀಕ್ಷೆ ಹತ್ತಿರವಿದ್ದ ದಿನಗಳಲ್ಲೂ ನಿನ್ನ ಬೇಡಿಕೆಗೆ ಬ್ರೆಕ್ ಹಾಕಿದ್ದು, ನಿನ್ನ ಹುಡುಗಾಟ……ಅತಿರೇಕ….. ನೆನಪಿದೆಯಾ?

’ಹೌದು, ನಂದೆ ತಪ್ಪು, ಸಾರಿ’ ಮುಖದಲ್ಲಿ ಯಾವುದೇ ವಿಷಾದವೂ ಇಲ್ಲದೆ ಮಾತು ಹೊರ ಬಂದಿತ್ತು.

’ನಂಗೆ ಸಿಕ್ಕು ಪರಿಚಯವಾಗಿ, ಪ್ರೀತಿ ಬೆಸೆದುಕೊಂಡವರೆಲ್ಲಾ ಹೀಗೆ ದೂರವಾಗ್ತಾರಲ್ಲಾ ಯಾಕೆ?’

ಅದು ನಿನ್ನ ಬ್ಯಾಡ್ ಲಕ್ಕು, ಮತ್ತೆ ಟ್ರೈ ಮಾಡು ಸಿಗ್ತಾರೆ’

’ನಂಬರ್ ಕೊಡೆ, ನಿನ್ನ ಮಿಸ್ ಕಾಲ್ ಬರ್ದೆ ನಾನು ರಿಂಗ್ ಮಾಡಲ್ಲ, ಪ್ರಾಮಿಸ್.’

’ನಾನೇ ಮಾಡ್ತೀನಿ, ಡೋಂಟ್ ವರಿ.’

’ಏನು ಕಾಲೇಜ್ ನಲ್ಲಿ ಲವ್ವಾ, ಹೊಸ ಅಫ಼ೇರ್ ಶುರು ಮಾಡ್ಕೊಂಡಿದಿಯಾ?’

’ನಾನು ಲವ್ ಮಾಡೋದಾ? , ನೆವರ್….’

’ಮದ್ವೆ ಆಗಲ್ವೇನೆ’

’ಹಂಗೆ ಅನಿಸ್ತಿದೆ. ನೋಡೋಣ. ಸದ್ಯಕ್ಕೆ ಓದೋದು’

’ಏನಾಯ್ತು ನಿಂಗೆ, ಚೇಂಜ್ ಆಗಿದಿಯಾ’

’ಹೌದು. ಕಾರಣ ಗೊತ್ತಿಲ್ಲ. ಮನ್ಗೆ ಬರ್ತಿಯೋ ಇಲ್ಲವೋ ಹೇಳು, ಅಮ್ಮ ಕೇಳ್ತಿದ್ರು. ನೀನು ಮನೆಕಡೆ ಬರೋದೇ ಇಲ್ವಂತೆ?’ ಮುನಿಸಿತ್ತು ಅವಳ ಮಾತಲ್ಲಿ.

’ಯಾಕೆ ಬರ್ಬೇಕು ಹೇಳು. ಮೊದಲು ನೀನಿದ್ದೆ. ಹರಟೆ ಹೊಡಿಯೋಕೆ ಬರ್ತಿದ್ದೆ’ ಎಂದು ಹುಸಿ ಮುನಿಸು ತೋರಿದನವ್ನು.

’ನಾಳೆ ಹೋಗ್ತಿದ್ದೀನಿ ಮತ್ತೆ ರಜೆಗೆ ಬರ್ತೆ.’

’ಕಾಲ್ ಮಾಡ್ತಿಯಲ್ಲಾ.’

’ನೋಡ್ತೆ.’ ಚುಟುಕು ಉತ್ತರ ನೀಡಿ ಹೊರಡಲು ಅನುವಾದ್ಲು. ಈ ಹುಡ್ಗಿ ಇಷ್ಟು ಬೇಗ ಚೇಂಜ್ ಆದ್ಲಾ ಅಂಥ ಅಚ್ಚರಿಯಿಂದ ಯೋಚಿಸುತ್ತಾ ನಡೆದ.
***
ಇದೆಲ್ಲಾ ಶುರುವಾದದ್ದು ವಿಚಿತ್ರ ಸಂದರ್ಭದಲ್ಲಿ. ಹೈಸ್ಕೂಲ್ ಕೊನೆಯ ವರ್ಷದಲ್ಲಿದ್ದ ಹುಡ್ಗಿ, ದಾರಿಯಲ್ಲಿ ಸಿಕ್ಕಾಗ ಕಿರುನಗೆ ಬೀರುವಷ್ಟೇ ಪರಿಚಯ. ಅಂವ ಕೆಲಸ ಮಾಡುವ ಆಫ಼ೀಸ್ ಪಕ್ಕದಲ್ಲೇ ಅವಳ ಮನೆ. ದಿನನಿತ್ಯ ನೋಡಿದ್ರು ಮಾತನಾಡುವಷ್ಟು ಸಲಿಗೆ ಬೆಳೆದಿರಲಿಲ್ಲ. ದಿನ ಬೆಳಿಗ್ಗೆ ಟ್ಯೂಶನ್ ಗೆ ತೆರಳುವಾಗ ಆ ಹುಡುಗಿ ಅವ್ನಿಗೆ ಸಿಗ್ತಿದ್ಲು. ಆಗಲೂ ಅಷ್ಟೆ. ಒಂದು ನಗೆ ಹೊರಬೀಳುವುದು ಖಚಿತವಾಗಿತ್ತು. ನಗು ಬೆಳೆದು ಬೆಳೆದು ದೊಡ್ಡದಾಗುತ್ತಾ ಮಾತಾಗಿ ಮಗ್ಗಲು ಬದಲಿಸಿತು. ಮಾತು… ಚಾಕ್ ಲೆಟ್ ವಿನಿಮಯದ ತನಕ ಹರಡಿಕೊಳ್ತು. ಆಕೆಯ ನಿರ್ಮಲ ಮನಸ್ಸು ಬೆಳಕಿನಷ್ಟು ಬಿಳಿಯತ್ತು. ಒಂದು ಶನಿವಾರ ಶಾಲೆ ಮುಗಿಸಿ ಮನೆಯತ್ತ ಹೊರಟಿದ್ದ ಅವ್ಳು. ಬೈಕ್ ಮೇಲೆ ಹೋಗುತ್ತಿದ್ದ ಅವನ್ನನ್ನು ನಿಲ್ಲುವಂತೆ ಸನ್ನೆ ಮಾಡಿದ್ಲು.

’ಏನು’ ಎಂದು ಕಣ್ಣಲ್ಲೇ ಪ್ರಶ್ನಿಸಿದ.

’ನಿಮ್ ಜೊತೆ ಮಾತಾಡ್ಬೇಕಿತ್ತು.’

’ಏನ್ ವಿಷ್ಯಾ?’

’ಪ್ರಬಂಧ ಸ್ಪರ್ಧೆಗೆ ಹೆಸರು ಕೊಟ್ಟಿದ್ದೆ, ಸ್ವಲ್ಪ ಮಾಹಿತಿ ಬೇಕಿತ್ತು. ಅಮ್ಮ ನಿಮ್ಮನ್ನ ಕೇಳಕ್ಕೆ ಹೇಳಿದ್ರು’ ಎಂದು ಗೆಳೆತನಕ್ಕೆ ನೆಪ ಬೆಸೆಯತೊಡಗಿದ್ದು ಅವಳ ಕಣ್ಣುಗಳಿಂದ ಸ್ಪಷ್ಟವಾಗುತ್ತಿತ್ತು.

’ಆಯ್ತು ಬಾ, ಆಫ಼ೀಸ್ ಕಡೆಗೆ ಹೊರಟಿದ್ದೀನ ಎಂದು ಬೈಕ್ ಸ್ಟಾರ್ಟ್ ಮಾಡ್ದ. ಕಚೇರಿಗೆ ಬಂದ ಹುಡುಗಿ ಪ್ರಬಂಧ ವಿಷ್ಯಾ ಮುಗಿಯುತ್ತಿದ್ದಂತೆ ಬದುಕಿನ ವಿವರಗಳಿಗೆ ಲಗ್ಗೆ ಇಟ್ಟಿದ್ಲು. ಮನುಷ್ಯ ಸಂಬಂಧದ ಬಳ್ಳಿಗಳನ್ನು ಚಿಗುರಿಸಿದ ಆಕೆ.’ ನಿಮ್ಮ ಬಗ್ಗೆ ನಂಗೆ ಗೊತ್ತು. ನೀವು ಇಂಟರ್ ಕಾಸ್ಟ್ ಮ್ಯಾರೇಜ್ ಆಗಿದ್ದೀರಲ್ಲಾ?’ ಎಂದು ಅವನ ಬಗ್ಗೆ ತುಂಬಾ ವಿವರ ಕಲೆಹಾಕಿದ ಹೆಮ್ಮೆಯಲ್ಲಿ ಬೀಗಿದಳು.

ಏನು ಹೇಳ್ಬೇಕೆಂದು ತಿಳಿಯದ ಆತ ’ಅದೆಲ್ಲಾ ನಿಂಗೆ ಯಾಕೆ?’ ಎಂದ. ಒಂದೇ ಏಟಿಗೆ ಬದುಕು ಪ್ರವೇಶಿಸುವ ಅವ್ಳ ವೇಗಕ್ಕೆ ತಡ ಹಾಕ್ಬೇಕೋ, ಬೇಡವೋ? ಇದೆಲ್ಲಾ ಹೊಸ ರದ್ಧಾಂತ ಹುಟ್ಟಿಸದಿದ್ದರೆ ಸಾಕು ಎಂದುಕೊಳ್ಳುತ್ತಾ ’ಈಗ ನಂಗೆ ಕೆಲ್ಸಾ ಇದೆ, ನೀ ಹೊರಡು’ ಎಂದು ಆಕೆಯನ್ನ ಸಾಗು ಹಾಕಿದ್ದಾತು.

ಮತ್ತೆ ಒಂದೆರಡು ದಿನದಲ್ಲಿ ಸಿಕ್ಕ ಆಕೆ ’ಅಪ್ಪ ಆರು ತಿಂಗಳ ಹಿಂದೆ ತೀರಿಹೋದರು. ಮಂಗಳೂರಿನ ಆಸ್ಪತ್ರೆಯಲ್ಲಿ. ಅಮ್ಮ ನನ್ನ ಮತ್ತು ಅಣ್ಣನ್ನ ನೋಡ್ಕೋತಾರೆ’ ಎಂದಾಗ, ಏನೂ ಹೇಳ ಬಯಸಿದ್ದಾಳೆ ಎಂಬುದ ಅರಿತ ಅವ್ನು ’ರೀನಾ ನಿನ್ಗೆ ಏನೋ ಮಾತಾಡ್ಬೇಕು ಅನ್ಸಿದೆ, ಅದನ್ನೆಲ್ಲಾ ಹೇಳು’ ಎಂದು ಬೆನ್ನು ತಟ್ಟಿದ. ಯಾವುದೋ ತಾಯ್ತನ ಬೆರಳುಗಳು ಆಕೆಯನ್ನು ಸಂತೈಸಿದ ಭಾವ ಅಲ್ಲಿತ್ತು.

ಅಪ್ಪ ಆಸ್ಪತ್ರೆಯ ಹಾಸಿಗೆಯಲ್ಲಿದ್ದಾಗ ನಂಗೆ ಪರೀಕ್ಷೆ ಸಮಯ. ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದ ಅಪ್ಪ ತೀರಿಹೋದ ದಿನ ವಿಷ್ಯಾ ಮುಚ್ಚಿಟ್ಟಿದ್ರು. ಮರುದಿನ ಕುಮ್ಟಾ ಅಜ್ಜನ ಮನೆಯ ಹತ್ತಿರದ ಅಘನಾಶಿನಿ ನದಿಯ ದಂಡೆಯ ಮೇಲೆ ಅಪ್ಪನ ಶವಸಂಸ್ಕಾರ ಮಾಡಿದ್ದು ಇಂದಿಗೂ ಕಣ್ಮುಂದಿದೆ. ಅಪ್ಪ ಇಂದಿಗೂ ಕಾಡುವ ಪ್ರತಿಮೆಯಾಗಿದ್ದಾನೆ. ಬಾಲ್ಯದಿಂದ ಅಚ್ಚಳಿಯದ ನೆನಪುಗಳ ಸರಕು ಬಿಟ್ಟುಹೋಗಿದ್ದಾನೆ. ಬಾಲ್ಯದಿಂದ ಅಚ್ಚಳಿಯದ ನೆನಪುಗಳ ಸರಕು ಬಿಟ್ಟುಹೋಗಿದ್ದಾನೆ. ಅಪ್ಪ ಇಷ್ಟು ಬೇಗ ಹೊರಟು ಹೋಗ್ತಾನೆ ಅಂತ ಅಂದ್ಕೊಂಡಿರಲಿಲ್ಲ. ಹಿಂದೊಮ್ಮೆ ಆದ ಅಪರೇಶನ್ ವೇಳೆ ಜೋಡಿಸಿದ್ದ ಪೈಪ್ ತೆಗೆಯಬೇಕಾದ ಸೂಚನೆ ನೀಡದೆ ಆಸ್ಪತ್ರೆಯವರು ಅಪ್ಪನ್ನ ಬಲಿ ತಕ್ಕೊಂಡ್ರು ಅಂಥ ಹಲವು ಸಲ ಅನ್ಸಿದೆ. ’ದಿನ ನಿತ್ಯ ಮನದ ರೇಖೆಯಲ್ಲಿ ಹಾದು ಹೋಗುವ ಬಿಂದುವಾಗಿದ್ದಾನೆ ಅಪ್ಪಾ’ ಎಂದು ಭಾವುಕಳಾಗಿದ್ಲು. ಈ ಭೇಟಿಯ ಬಳಿಕ ತಾಯಿ ಮತ್ತು ಅಜ್ಜಿಯ ಜೊತೆ ರೀನಾ ದೇವಸ್ಥಾನಕ್ಕೆ ಹೋಗಿದ್ದನ್ನ ಒಮ್ಮೆ ಗಮನಿಸಿದ್ದ. ದಾರಿಯಲ್ಲಿ ಸಿಕ್ಕಾಗ ’ಏನು ಮೂರು ತಲೆಮಾರುಗಳು ಒಟ್ಟಾಗಿ ಸವಾರಿ ಮಾಡಿದಂತಿತ್ತು.’ ಎಂದು ನಗುತ್ತಲೇ ಛೇಡಿಸಿದ್ದ.
***
ಅದೇಕೋ ರೀನಾ ಮತ್ತಳ ತಾಯಿ ಅವನ ಮನದಲ್ಲಿ ಕಾಡತೊಡಗಿದ್ರು. ತಂದೆ ಕಳೆದು ಕೊಂಡ ರೀನಾ, ಇಂಜನಿಯರಿಂಗ್ ಕಲಿವ ಅವಳಣ್ಣ, ವಯಸ್ಸಾದ ಅಜ್ಜಿ…. ತಣ್ಣಗೆ ಬದುಕಿನ ಸೂತ್ರ ಹಿಡಿದು ಸಾಗುವ ದಿನಚರಿ. ಯಾರೊಂದಿಗೂ ಧ್ವನಿ ಏರಿಸಿ ಮಾತನಾಡದ, ತಮ್ಮಷ್ಟಕ್ಕೆ ತಾವು ಇದ್ದು ಬಿಡುವ ಸಾಮಾನ್ಯ ಜೀವಗಳು ಎಂಬ ಯೋಚ್ನೆ…. ಕಿತ್ತು ತಿನ್ನುವ ವಂಚಕರ ನಡುವೆ ಅಮಾಯಕಜೀವಗಳಂತೆ ರೀನಾ ಮತ್ತವಳ ಸುತ್ತಣ ಜಗತ್ತು ದಟ್ಟೈಸತೊಡಗಿತು. ಹೀಗಿರುವಾಗ ರೀನಾಳ ಅಜ್ಜಿ ವಾಸವಿದ್ದ ಮನೆ ಮಾರಲು ಮನೆಯ ಮುಂದಿನ ಪ್ರಭಾವಿ ಕುಳ ಪುಂಡಲೀಕ ತಕರಾರು ತೆಗೆದ ಸಮಸ್ಯೆ ಢಳಾಯಿಸಿತು. ಒಂದೇ ಕಾಂಪೌಂಡನಲ್ಲಿದ್ದ ಬಂಗಲೆ ಖಾಸಗಿ ಕಂಪನಿಯೊಂದರ ಮಾಲೀಕನ ಆಸ್ತಿಯಾಗಿತ್ತು. ಕಂಪನಿ ಮಾಲಿಕ ಬ್ಯಾಂಕ್ ಗೆ ಬಂಗಲೆ ಅಡವಿಟ್ಟು ಪಡೆದ ಸಾಲ ಚುಕ್ತಾ ಮಾಡದ ಕಾರಣ ಬಂಗ್ಲೆ ಹರಾಜಿಗೆ ಬಂದಿತ್ತು. ಮುಂಬೈನಲ್ಲೇ ಸಾಕಷ್ಟು ಆಸ್ತಿ ಹೊಂದಿದ್ದ ಮಾಲೀಕ ಪುಟ್ಟ ನಗರದ ಬಂಗ್ಲೆಯನ್ನು ನಿರ್ಲಕ್ಷಿಸಿದ್ದ. ಶ್ರೀಮಂತ ಗುತ್ತಿಗೆ ದಾರರು ಅಲೆಮಾರಿ
ಜನಾಂಗದಂತೆ ದೊಡ್ಡ ನಗರಗಳಲ್ಲಿ ಕೆಲಸವಿದ್ದಷ್ಟು ದಿನ ಠಿಕಾಣಿ ಹೂಡಿ ಕಾಲ್ಕೀಳುವುದು ವಾಡಿಕೆ. ಹಾಗೆಯೇ ಈ ಪುಟ್ಟನಗರದ ದಶಕದ ಒಡನಾಟ ಕಳೆದ ನಂತರ ಮುಂಬೈ ಮಾಲೀಕನಿಗೆ ಬಂಗ್ಲೆ ಮತ್ತು ಔಟ್ ಹೌಸ್ ಸಂಪರ್ಕವೂ ಮರೆತು ಹೋಗಿತ್ತು ಎನ್ನುವುದಕ್ಕಿಂತ ಕಡಿದು ಹೋಗಿತ್ತು. ಈ ಕಾರಣವೂ ಸೇರಿ ಹರಾಜಿಗೆ ಬಂದಿದ್ದ ಬಂಗ್ಲೆಯನ್ನು ಪುಂಡಲೀಕ ಖರೀದಿಸಿದ್ದ.

ಬಂಗ್ಲೆಯ ಹಿಂದಿದ್ದ ಓಟ್ ಹೌಸ್ ರೀನಾ ಅಜ್ಜಿಯ ಹೆಸರಲ್ಲಿತ್ತು. ಕಾರಣ ಬಂಗ್ಲೆಯ ಮಾಲೀಕನಿಗೂ, ಅಜ್ಜಿಗೂ ಯೌವ್ವನದ ದಿನಗಳಲ್ಲಿ ಅದೆಂತದ್ದೂ ಸಂಬಂಧ. ಅದರ ಬಳುವಳಿಯಾಗಿ ಅಜ್ಜಿಯ ಹೆಸರಿಗೆ ಔಟ್ ಹೌಸ್ ಉಳಿದಿತ್ತು. ಪುಂಡಲೀಕ ಬಂಗ್ಲೆ ಖರೀದಿಸುವಾಗ ಔಟ್ ಹೌಸ್ ಸಹಿತ ಬಂಗ್ಲೆ ತನ್ನದು ಎಂದು ಭಾವಿಸಿದ್ದ. ಬ್ಯಾಂಕ್ ನಿಂದ ತನ್ನ ಹೆಸರಿಗೆ ಬಂಗ್ಲೆ ರಿಜಿಸ್ಟರ್ಡ್ ಮಾಡಿಕೊಳ್ಳು ವಾಗ ಕಾಗದ ಪತ್ರ ಪರಿಶೀಲನೆಯಲ್ಲಿ ಔಟ್ ಹೌಸ್ ಸೇರಿಲ್ಲ ಎಂಬ ಅಂಶ ತಿಳಿದು ಕುದಿಯತೊಡಗಿದ್ದ. ಹೇಗಾದರೂ ಮಾಡಿ ಅಜ್ಜಿಯನ್ನು ಹೊರಹಾಕ್ಬೇಕು ಎಂದು ಕುತಂತ್ರಗಳನ್ನು ಮಾಡುತ್ತಲೇ ಇದ್ದ.

ಅಜ್ಜಿಯ ಮಗ ಮುಂಬಯಿಗೆ ವಲಸೆ ಹೋಗಿ ಅಲ್ಲಿಯೇ ನಿಂತು ಸೆಟ್ಲ ಆಗಿದ್ದ. ಮಗಳ ಮನೆ ಅದೇ ಊರಲ್ಲಿದ್ದರೂ ಅಜ್ಜಿ ಪತಿಯ ಸಾವಿನ ನಂತರವೂ ಏಕಾಂಗಿಯಾಗಿ ಔಟ್ ಹೌಸ್ ಎಂಬ ಮುರುಕು ಮನೆಯಲ್ಲಿ ಹಳೆಯ ಸರಕುಗಳೊಂದಿಗೆ ಉಳಿದುಕೊಂಡಿತ್ತು. ಮಹಾ ಸ್ವಾಭಿಮಾನಿ. ಜಿಗುಟುತನದ ಅಜ್ಜಿಗೆ ಸಾಯುವುದರೊಳಗೆ ಮನೆ ಮಾರಿ ಬಂದ ಹಣವನ್ನು ಮೊಕ್ಕಳಿಗೆ ಹಂಚಿ ಕಣ್ಮುಚ್ಚಿಕೊಳ್ಳಬೇಕೆಂಬ ಬಯಕೆ. ಔಟ್ ಹೌಸ್ ಗೆ ದಾರಿ ಬಂಗಲೆಯ ಪಕ್ಕದಲ್ಲೇ ಹಾದು ಹೋಗ್ಬೇಕು. ಸುತ್ತಲು ಮನೆಗಳು ಮುತ್ತಿಕೊಂಡಿದ್ದ ಪರಿಣಾಮ ಬೆರ್ಯಾವ ದಾರಿಯೂ ಔಟ್ ಹೌಸ್ ಗೆ ಇರ್ಲಿಲ್ಲ. ಇದೆ ನೆಪದಲ್ಲಿ ’ಔಟ್ ಹೌಸ್ ಮಾರುವುದಿದ್ದರೆ ನನಗೆ ಮಾರು. ಎರಡು ಲಕ್ಷ ಕೊಡ್ತೇನೆ. ಅದ್ಯಾವ್ ಬೋಳಿಮಗ ನನ್ನ ಶೆಡ್ ಖರೀದಿ ಮಾಡ್ತಾನ್ ನೋಡ್ತೇನೆ, ನೀ ಯಾರ್ಗೆ ಮಾರಿದ್ರೂ ದಾರಿಗೆ ನನ್ನ ಹತ್ರನಾ ಬರ್ಬೇಕೆಂದು’ ಪುಂಡಲೀಕ ಆಗಾಗ ಅಜ್ಜಿಗೆ ಧಮ್ಮಿ ಕೊಡುತ್ತಿದ್ದ. ಈ ಧಮ್ಕಿಯಲ್ಲಿ ಅಜ್ಜಿ ಸವೆದುಹೋದದ್ದು, ಮಾರಲಾಗದ ಮನೆಯ ಚಿಂತೆಯಲ್ಲಿ ಮುದ್ಕಿಗೆ , ಮತ್ತಷ್ಟು ಮುದಿತನ ಆವರಿಸಿದ್ದು ಅವನ ಗಮನಕ್ಕೆ ಬಂತು. ಭಾರ ಹೊರಲು ಸಜ್ಜಾದ್ರೆ ಇಡೀ ಕಷ್ಟನಾ ತಲಿಮ್ಯಾಲ ಹೊರಿಸುವಂತೆ ಅಜ್ಜಿ ’ತಮ್ಮಾ ನಾ ಸಾಯೋದ್ರೊಳಗಾ ಮನೆ ಮಾರಿ ಕಣ್ಮುಚ್ಚಿಕೊಳ್ತೇನೆ. ಗಿರಾಕಿ ಹುಡ್ಕಪಾ’ ಎಂದು ದುಂಬಾಲು ಬಿತ್ತು. ’ಆಯ್ತು ಬಿಡಜ್ಜಿ ನೋಡುವಾ’ ಎಂದದ್ದೇ ಸಾಕಾಯ್ತು. ಅಜ್ಜಿ ಅಂವ ಎಲ್ಲೇ ಸಿಕ್ರು ’ತಮ್ಮಾ ಯಾರಿಗಾದ್ರೋ ಕೇಳಿದ್ಯಾ, ಮನಿ ನೋಡಕಾ ಯಾವಾಗ ಬರ್ತಾರೆ’ ಎಂದು ಪ್ರಶ್ನಿಸತೊಡಗಿತು. ಅಜ್ಜಿಗೆ ಮಾತು ಕೊಟ್ಟದ್ದಕ್ಕ ಒಂದೆರಡು ಹಣವಿದ್ದ ಕುಳಗಳನ್ನ ವಿಚಾರಿಸಿದ್ದ ಅವ್ನಿಗೆ ಅವರಿಂದ ಮನೆ ಖರೀದಿಸುವ ಉತ್ಸಾಹ ಕೇಳಿ ಬಂದಿದ್ದರೂ ನಂತರ ’ದಾರಿ ಸಮಸ್ಯೆ’ ಕೇಳಿ ಹಿಂದೆ ಸರಿದಿದ್ದರು.

ಒಮ್ಮೆಯಂತೂ ಅಜ್ಜಿ ಮನೆಯ ಕೋಣೆಗೆ ಪುಂಡಲೀಕ ಕೀಲಿ ಹಕ್ಯಾನಾ ಎಂದು ಮಟಮಟ ಮಧ್ಯಾಹ್ನ ಮಗಳ ಮನೆಮುಂದೆ ಬಂದು ಗುಲ್ಲೆಬ್ಬಿಸಿತು. ಕೆಣೆಗಾರ ಕೆಂಚನನ್ನು ಕರೆತಂದು ಬೀಗ ಹೊಡ್ಸಿಹಾಕಿದ್ದೂ ಆತು. ರಂಪ ರಾಮಾಯ್ಣ ಆದ ಮ್ಯಾಲ ’ಕೀಲಿ ಕೈ ಮನೆಯ ಅಕ್ಕಿ ಡಬ್ಬಿ ಹಿಂದೆ ಸಿಕ್ತು. ಅಂತಾ ಸಂಜೀಕ ಕರ್ತಿ ಹೇಳ್ತು. ಅಜ್ಜಿಯ ಕಣ್ಣು ಮಂಜೋ, ಅರಳು ಮರಳೂ ಅಥವಾ ಪುಂಡಲೀಕ ಕಾಟದ ಭ್ರಮೆಯೋ ತಿಳಿಯದಾಗಿತ್ತು.

ಅಜ್ಜಿಯ ಕಿರಿಕಿರಿಯಿಂದ ಕೊನೆಗೆ ಅವ್ನು ಅಜ್ಜಿಯ ಕಣ್ಣತಪ್ಪಿಸಿ ಓಡಾಡಿದ್ದು ಆಯ್ತು. ರೀನಾಳ ಮನೆಗೆ ಹೋದಾಗ ಅಜ್ಜಿ ಸಿಕ್ರೆ ’ಮನೆಗೆ ಗಿರಾಕಿ ಸಿಕ್ತಾ’ ಎಂಬ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಅವನು ಆ ಕಡೆ ಹೋಗುವುದನ್ನು ಕಡಿತಗೊಳಿಸಿದ್ದ.

’ಹಚ್ಚಿಕೊಳ್ಳಲು ಹೋದ್ರೆ ಜೀವವನ್ನೇ ಸವೆಸುವ ಸುಳಿ’ಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡಬೇಕಾದ ಪ್ರಸಂಗಗಳಿಂದ ಅನೇಕ ಪಾಠಗಳನ್ನು ಕಲಿತಾಗಿತ್ತು. ಜೊತೆಗೆ ರೀನಾಳ ಜೊತೆಗಿನ ಸಲಿಗೆಯ ವರ್ತನೆಯಿಂದ ಹೊಸ ಪುಕಾರುಗಳು ಅವನ ಕಿವಿಗೆ ಬೀಳತೊಡಗಿದ್ದವು. ಆಕೆ ಕಳಿಸುತ್ತಿದ್ದ ಎಸ್ ಎಂ ಎಸ್ ಗಳನ್ನು ಮೊಬೈಲ್ ನಲ್ಲಿ ಕದ್ದು ಓದಿದ್ದ ಪತ್ನಿ ಇಲ್ಲದ ರದ್ಧಾಂತ ಮಾಡಿಯಾಗಿತ್ತು. ’ಈ ಕಾಲದ ಹುಡುಗಿಯರೇ ಹಾಗೆ. ಸುಮ್ನೆ ಟೈಮ್ ಪಾಸ್ ಗೂ ಯಾರ್ಯಾರ್ದೋ ಮೆಸೇಜ್ ಕಳುಹಿಸಿ ಥ್ರಿಲ್ ತಗೋತಾರೆ’ ಎಂದು ಹೇಗೋ ಪತ್ನಿಯನ್ನು ನಿಭಾಯಿಸಿಕೊಂಡಾಗಿತ್ತು.

ಹೆಸರು ಕೆಡೆಸಲು ಸದಾ ತುದಿಗಾಲಲ್ಲಿ ನಿಂತಂತೆ ಇರುತ್ತಿದ್ದ ಕಚೇರಿಯ ಒಳಗಿನವ್ರು, ರೀನಾಳ ಭೇಟಿಗಳ ಕುರಿತು ದಿನಕ್ಕೊಂದು ಬಣ್ಣ ಕಟ್ಟಿ ಆಡಿಕೊಳ್ಳತೊಡಗಿದ್ರು. ಹೆಸರು ಕಟ್ಟಿ ಖುಷಿ ಪಡುವ ಪಡೆಯಿಂದ ’ಗಾಸಿಪ್’ ಹಬ್ಬತೊಡಗಿದ್ದ ಸುಳಿವು ರೀನಾಳ ತಾಯಿಗೂ ಸಿಕ್ಕಿತ್ತು. ಈ ಸಂಬಂಧವಾಗಿ ರೀನಾಳಿಗೆ ’ಕ್ಲಾಸ್ ಗಳು’ ತಾಯಿಯಿಂದ ನಡೆದಿದ್ದವು. ರೀನಾ ಸಹ ಊಟಬಿಟ್ಟು ತಾಯಿ ಜೊತೆ ವಾಗ್ವಾದ ಮಾಡಿದ್ದೂ ಆಗಿತ್ತು.

ತಂದೆಯ ನೆನಪು ಇಂಥ ವಿಚಿತ್ರ ಸಂದರ್ಭಗಳಲ್ಲಿ ತೀರಾ ಒತ್ತರಿಸಿ ಬರುತ್ತಿತ್ತು ಆಕೆಗೆ. ಒತ್ತಡಕ್ಕೆ ಸಿಲುಕಿದಾಗಲೆಲ್ಲಾ ಅವಳು ತನ್ನದೇ ಕ್ಲಾಸ್ ನಲ್ಲಿದ್ದ ಎದುರು ಮನೆಯ ಬಾಲ್ಯದ ಗೆಳೆಯ ಬಷೀರ್ ನ ಮೊರೆ ಹೋಗಿಬಿಡ್ತಿದ್ಲು. ಬಷೀರ್ ನ ಜೊತೆ ಒಡನಾಟಗಳನ್ನು ಬಿಚ್ಚು ಮನಸ್ಸಿಂದ ಆಕೆ ಹೇಳಿಕೊಂಡದ್ದು ಇದೆ. ಬಷೀರ್ ನನ್ನೇ ಮದ್ವೆ ಆಗಿ ಬಿಡು ಎಂದು ಒಮ್ಮೇ ಛೇಡಿಸಿದ್ದಕ್ಕೆ ’ಅಯ್ಯೋ ಆ ಕೋತಿ ಮುಖದವ್ನಾ?’ ಎಂದು ರಾಗ ಎಳೆದದ್ದು ಇದೆ.

ತಾಯಿ ’ಕ್ಲಾಸ್’ ತೆಗೆದುಕೊಂಡ ಮಾಹಿತಿ ರೀನಾಳಿಂದ ಲಭ್ಯವಾಗಿತ್ತಾದರೂ, ಅದಕ್ಕೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಅವಳ ಮನೆಯ ಅನೇಕ ಸಮಸ್ಯೆಗಳ ಪರಿಹಾರದಲ್ಲಿ ಅವ್ನು ನೆರವಾಗಿದ್ದ ಕಾರಣ ಆಡಿಕೊಳ್ಳುವವರ ಬಗ್ಗೆ ನಿರ್ಲಕ್ಷ್ಯ ತಾಳಿಯಾಗಿತ್ತು. ಗಾಸಿಪ್ ಹಬ್ಬಿದ್ದ ಸ್ವಲ್ಪ ದಿನದಲ್ಲೇ ಮಂಗಳೂರು ಫ಼ಿಲೋಮಿನಾ ಕಾಲೇಜಿಗೆ ರೀನಾ ಸೇರಿಯಾದ ಕಾರಣ ಅವಳು ಊರಿಗೆ ಬರುತ್ತಿದ್ದುದು ರಜೆಗೆ ಮಾತ್ರವಾಗಿತ್ತು. ರೀನಾ ಸಹ ಸಂಬಂಧವನ್ನು ಮೊದಲಿನಂತೆ ಉಳಿಸಿಕೊಳ್ಳದೇ ದೂರವಾಗತೊಡಗಿದ್ಲು. ಊರಿಗೆ ಬಂದ್ರೂ ವಿಶೇಷವಾಗಿ ಸಮಯ ನಿಗದಿ ಮಾಡಿಕೊಂಡು ಮಾತುಕತೆಯಾಡುವುದು ಇಲ್ಲವಾಯ್ತು. ಎಷ್ಟೋ ಸಲ ಅವ್ಳು ಊರಿಗೆ ಬಂದು ಹೋದದ್ದು ಅವ್ನ ಕಚೇರಿಯ ಸಹಾಯಕನಿಂದ ತಿಳಿಯುತ್ತಿತ್ತು.

ಊರಿಗೆ ಬಂದಾಗ ಅಪರೂಪಕ್ಕೆ ಅವ್ಳು ಎದುರಾದ್ರೆ ಮಾತ್ರ ಪರಿಚಯ ವಾಗುವ ಮೊದಲಿನಂತೆ ತುಟಿಯಲ್ಲೇ ನಸುನಕ್ಕು ಮರೆಯಾಗುವುದಷ್ಟೇ ಉಳಿದುಕೊಂಡಿತ್ತು. ಆ ಕಿರುನಗೆ ಮಧ್ಯದಲ್ಲೇ ’ನಾವು ಹತ್ತಿರವಾಗಿದ್ದೆವು’ ಎಂಬುದು ನಿಜವೇ ಅಲ್ಲ ಎನ್ನುವಂತಿತ್ತು.
*****

(ಅಕ್ಟೋಬರ್ ೨೦೦೯)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆಕ್ಲೇಸ್
Next post ಇಲ್ಲದಿರೆ ಏನಿರುತ್ತೆ ?

ಸಣ್ಣ ಕತೆ

 • ಬೆಟ್ಟಿ

  ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…