ವಾಸ್ತವ

ವಾಸ್ತವ

ಚಿತ್ರ: ಜುನಿತ ಮುಲ್ಡರ್‍
ಚಿತ್ರ: ಜುನಿತ ಮುಲ್ಡರ್‍

ಸವಿತ ಇನ್ನೂ ಅಡುಗೆ ಮನೆಯಿಂದ ಹೊರಬರದೆ ಇರುವುದನ್ನು ನೋಡಿ ಸವಿತ ಇವತ್ತು ರಜೆ ಹಾಕಿದ್ದಿಯೇನೇ? “ಡೈನಿಂಗ್ ಹಾಲಿನಿಂದಲೇ ಸಂಜೀವ ಕೂಗು ಹಾಕಿದ.
ಕೈಲಿ ಕಾಫಿ ಲೋಟ ಹಿಡಿದು ಬಂದ ಸವಿತ “ಹ್ಹೂ, ರಜಾನೇ ಇನ್ನು ಮೇಲೆ ಪರ್ಮನೆಂಟ್ ರಜಾ, ತಗೊಳ್ಳಿ ಕಾಫೀನ” ಸಂಜೀವನ ಕೈಗೆ ಕಾಫಿ ಲೋಟ ವರ್ಗಾಯಿಸಿದಳು.

“ಏನ್, ತಮಾಷೆ ಮಾಡ್ತಾ ಇದ್ದೀಯಾ, ರಿಟೈರ್ಡ್ ಆಗೋಕೆ ಇನ್ನೂ ಇಪ್ಪತ್ತು ವರ್ಷ ಸರ್ವಿಸ್ಸಿದೆ. ಈಗ ಎಲ್ಲಿ ನಿಂಗೆ ಪರ್ಮನೆಂಟ್ ರಜಾ.”

“ಆವರೇ ಕೊಡೋಕೆ ಇಪ್ಪತ್ತು ವರ್ಷ ಇದೆ. ನಾನೇ ತಗೊಂಡರೇ ಯಾವಾಗ ಬೇಕಾದ್ರೂ ತಗೋಬಹುದಲ್ಲ” ಖಾಲಿಯಾದ ತಟ್ಟೆಗಳನ್ನು ಸಿಂಕ್‌ಗೆ ಹಾಕುತ್ತಾ ಹೇಳಿದಳು.

“ಅಂದ್ರೆ ವಿ.ಆರ್.ಎಸ್ ತಗೋತಾ ಇದ್ದೀಯಾ ಮಮ್ಮಿ. ವಾಹ್ ಮೊದ್ಲು ಆ ಕೆಲಸ ಮಾಡು, ನೀನು ಮನೇಲೇ ಇದ್ರೆ ಬೇಕ್ ಬೇಕಾದ ತಿಂಡಿ ಮಾಡಿಸ್ಕೊಂಡು ತಿನ್ನಬಹುದು.” ತಿಂಡಿಪೋತ ನಿಕ್ಕಿ ತಟ್ಟೆ ಬಡಿಯುತ್ತ ಜೋರಾಗಿ ಕೂಗಿದ.

“ಸದ್ಯ, ಮಮ್ಮಿ ವಿ.ಆರ್.ಎಸ್ ತಗೊಂಮ ಬಿಟ್ರೆ ಮನೆ ಕೆಲ್ಸಕಡಿಮೆ ಆಗುತ್ತೆ” ಕೆಲ್ಸ ಮಾಡಲ್ಲ ಅಂತ ಸದಾ ಬೈಯ್ಸಿ ಕೊಳ್ತಾ ಇದ್ದ ನಮಿತ ಖುಷಿಯಾದಳು.

“ಸರಿ ಸರಿ ಇವತ್ತಿನಿಂದಲೇ ನಿಕ್ಕಿ ಏನೇನು ಕೇಳ್ತಾನೋ, ಅದನ್ನೆಲ್ಲ ಮಾಡಿ ಹಾಕ್ತೀನಿ. ನಮಿತ ಇನ್ನು ಯಾವ ಕೆಲ್ಸಕ್ಕೂ ಬರೋ ಹಾಗಿಲ್ಲ, ನಾನೇ ಎಲ್ಲಾ ಮಾಡಿಕೊಳ್ತೀನಿ. ಆಯ್ತಾ, ಕಾಲೇಜಿಗೆ ಲೇಟಾಯ್ತು. ಹೊರಡಿ ಈಗ” ಖುಷಿಯಾಗಿದ್ದ ಮಕ್ಕಳನ್ನು ಹೊರಡಿಸಿದಳು.

“ಮೈ ಸ್ವೀಟ್ ಮಮ್ಮಿ, ಸಂಜೆ ಆಂಬೊಡೆ ಮಾಡಿರಬೇಕು ಆಯ್ತಾ” ಸವಿತಳನ್ನು ತಬ್ಬಿ ಮುತ್ತಿಕ್ಕಿ ಹೊರಗೋಡಿದ ನಿಶಿತ.

“ಯಾಕ್ರಿ, ಆಫೀಸಿಗೆ ಲೇಟಾಗಿಲ್ಲಿಲ್ಲವಾ” ಕುಳಿತೇ ಇದ್ದ ಸಂಜೀವನನ್ನು ಪ್ರಶ್ನಿಸಿದಳು.

“ಸವಿತ, ನೀನು ನಿಜವಾಗಿಯೂ ವಿ.ಆರ್.ಎಸ್ ತಗೊಂತಾ ಇದ್ದೀಯಾ” ಗಂಭೀರವಾಗಿ ಕೇಳಿದ.

“ಏನಾಯ್ತು ನಿಂಗೆ, ರಾಜೀನಾಮೆ ಕೊಡ್ತಾ ಇದ್ದೀನಿ ಆಂತ ಸಲೀಸಾಗಿ ಹೇಳ್ತಾ ಇದ್ದಿಯಲ್ಲ ಬಾಳೆಹಣ್ಣು ಸುಲಿದು ಬಾಯಿಗಿಟ್ಟುಕೊಂಡ ಹಾಗೆ, ನನ್ನ ಕೇಳದೇ ಅದು
ಹೇಗೆ ರಾಜೀನಾಮೆ ಕೊಡ್ತೀಯಾ”

“ಕೊಡ್ತೀಯಾ ಅಲ್ಲಾ, ಕೊಟ್ಟೇ ಆಯ್ತು. ದಿನಾ ನೀವು ತಾನೇ ನೀನು ಕೆಲ್ಸಕ್ಕೆ ಹೋಗಿ ಯಾರನ್ನ ಉದ್ಧಾರ ಮಾಡಬೇಕಿದೆ. ಕೆಲ್ಸ ಬಿಟ್ಟು ಮನೇಲಿ ಇರು ಅಂತಾ ಹೇಳ್ತಾ
ಇದ್ದಿದ್ದು. ಮನೇಲೂ ಕಷ್ಟಪಟ್ಟು ಅಲ್ಲೂ ಯಾಕೆ ಕಷ್ಟಪಡಬೇಕು ಮಕ್ಕಳ ಬಾಯಲ್ಲೂ ಅದೇ ಮಾತು ನಿಮ್ಮ ಬಾಯಲ್ಲೂ ಅದೇ ಮಾತು ಅದಕ್ಕೆ ಕೆಲ್ಸ ಬಿಟ್ಟು ಬಿಟ್ಟೆ.” ಮತ್ತೇನೂ ಮಾತು ಬೇಡ ಎಂಬಂತೆ ಒಳ ನಡೆದು ಬಿಟ್ಟಳು ಸವಿತ. ಅವಳು ಹೋದದನ್ನೇ ಬೆಪ್ಪಾಗಿ ನೋಡುತ್ತ ನಿಂತು ಬಿಟ್ಟ ಸಂಜೀವ. ಈ ಶಾಕಿನಿಂದ ತಕ್ಷಣವೇ ಅವನಿಗೆ ಹೊರಬರಲಾಗಲಿಲ್ಲ.

ಆಫೀಸಿಗೆ ಬಂದರೂ ಅದೇ ವಿಷಯ ಮನಸ್ಸಿನಲ್ಲಿ ಕೊರೆಯತೊಡಗಿತ್ತು. ಎಷ್ಟು ಸುಲಭವಾಗಿ ಕೆಲ್ಸ ಬಿಟ್ಟೆ ಅಂತ ಇದ್ದಾಳಲ್ಲ ಎಂಟುಸಾವಿರ ಅಂದ್ರೆ ಕಡಿಮೆನಾ, ಮುಂದೆ ಮುಂದೆ ಎಷ್ಟು ಸಂಬಳ ಜಾಸ್ತಿ ಆಗ್ತಾ ಇತ್ತು. ಏನಾಯ್ತು ಇವಳಿಗೆ. ಬಾಯಿ ಮಾತಿಗೆ ನಿನ್ನ ಸಂಬಳ ಯಾರಿಗೆ ಬೇಕು, ನೀನು ದುಡಿದು ಏನಾಗಬೇಕು ಅಂತ ಇದ್ದದ್ದೇನೋ ನಿಜಾ. ಅದ್ರೆ ಅವಳ ಸಂಬಳ ನೆಚ್ಚಿಕೊಂಡು ಕಾರ್ ಲೋನ್ ಅಪ್ಲೈ ಮಾಡಿದ್ದಿನಿ. ಫ್ರೆಂಡ್ ಹತ್ರ ಎಲ್ಲಾ ಕಾರ್ ತಗೋತಾ ಇದ್ದೀನಿ ಅಂತ ಕೊಚ್ಚಿಕೊಂಡು ಬಿಟ್ಟಿದ್ದೀನಿ. ಈಗ ಅವಳ ಸಂಬಳನೇ ಇಲ್ಲಾ ಅಂದ್ರೆ ಕಾರು ಎಲ್ಲಿ ತಗೊಳ್ಳಕ್ಕೆ ಸಾಧ್ಯ. ನನ್ನ ಸಂಬಳದಲ್ಲಿ ಮನೆಲೋನ್, ಮಕ್ಕಳ ಖರ್ಚು ಅಂತ ಹೊರಟು ಹೋಗ್ತಾ ಇತ್ತು. ಮನೆ ಖರ್ಚು ಎಲ್ಲಾ ಅವಳದೇ ಆಗಿತ್ತು. ಈಗ ಕಾರು ಇಲಿ, ಮನೆ ಖರ್ಚು ಹೇಗಪ್ಪ ನಿಭಾಯಿಸೋದು. ತಲೆ ಗಿರ್ರ್‌ಎಂದು ಸುತ್ತ ತೊಡಗಿದೊಡನೇ ಕೆಲಸ ಮಾಡಲು ಸಾಧ್ಯವೇ ಇಲ್ಲಾ ಎನಿಸಿ ರಜಾ ಗೀಚಿ ಮನೆಗೆ ಬಂದು ಬಿಟ್ಟ.

ಯಾವ ಚಿಂತೆಯೂ ಇಲ್ಲದೆ ಪುಸ್ತಕ ಹಿಡಿದು ಕುಳಿತಿದ್ದ ಸವಿತಳನ್ನು ಕಂಡು ಕೋಪ ಸಿಡಿಯಿತು. ಸಂಜೀವನನ್ನು ಕಂಡೊಡನೇ “ಯಾಕ್ರಿ, ಹುಶಾರಿಲ್ವಾ” ಹತ್ತಿರ ಬಂದವಳನ್ನು ಗಮನಿಸದವನಂತೆ ಒಂದೂ ಮಾತಾಡದೇ ರೂಮಿಗೆ ಬಂದು ಮಂಚದ ಮೇಲೆ ಉರುಳಿಕೊಂಡ.

“ಏಳಿ ಬಿಸಿ ಬಿಸಿಯಾಗಿ ಅಡುಗೆ ಮಾಡಿದ್ದೀನಿ. ಇನ್ನೂ ದಿನಾ ಊಟಕ್ಕೆ ಮನೆಗೆ ಬಂದು ಬಿಡಿ. ಇನ್ನು ಮೇಲೆ ಕ್ಯಾರಿಯರ್ ಊಟ ಕ್ಯಾನ್ಸಲ್” ಹಾಗೆಂದವಳನ್ನೇ ದುರುದುರು
ನೋಡಿ ‘ನಂಗೆ ಹಸಿವಿಲ್ಲ’ ಅತ್ತ ತಿರುಗಿಕೊಂಡ.

ಹಿಂದಿನ ದಿನದ್ದು ನೆನಪಾಯ್ತು. ಕ್ಯಾರಿಯರ್ ಊಟ ಮಾಡಿ ಬೇಸರ ಪಟ್ಟುಕೊಂಡು ತಾನು ಬಿಸಿ ಬಿಸಿ ಊಟ ಮಾಡೋ ದಿನ ಯಾವಾಗ ಬರುತ್ತೋ, ಎಲ್ಲದಕ್ಕೂ ಪುಣ್ಯ
ಮಾಡಿರಬೇಕು ಎಂದು ಅಂದುಕೊಂಡಿದ್ದು ಇಷ್ಟು ಬೇಗ ನೇರವೇತ ಇದ್ಯಾ. ಆದ್ರೆ ಬಿಸಿ ಬಿಸಿ ಊಟವೇ ಮುಖ್ಯ ಅಲ್ಲವಲ್ಲ. ಕಾರು, ಮನೆಲೋನ್, ಮನೆ ಖರ್ಚು ನೆನೆಸಿಕೊಂಡರೇ ಭಯವಾಗುತ್ತೆ. ಮುಂದೆ ಇಡೀ ಮನೆಯ ಸಮಸ್ತ ಖರ್ಚಿಗೂ ತನ್ನೊಬ್ಬನ ದುಡಿಮೆಯೊಂದೇ ಎಂಬ ಕಲ್ಪನೆಯೇ ಅವನನ್ನು ಅಧೀರನನ್ನಾಗಿಸ ತೊಡಗಿತು.

ಸವಿತನ್ನ ಮದುವೆಯಾದಾಗ ಅವಳಿನ್ನೂ ಕೊನೆಯ ವರ್ಷದ ಡಿಗ್ರಿಯಲ್ಲಿದ್ದಳು. ಎಷ್ಟೋ ಉದ್ಯೋಗಸ್ಥ ಹೆಣ್ಣುಗಳು ಬಂದಿದ್ದರೂ ಕೆಲಸದಲ್ಲಿರುವ ಹೆಣ್ಣು ಬೇಡಾ ಎಂದೇ ಸವಿತಳನ್ನು ಮದುವೆಯಾಗಿದ್ದು. ಇಬ್ಬರೂ ಕೆಲ್ಸಕ್ಕೆ ಹೋಗಿ ಮನೆ ಅನ್ನೋದು ಇಬ್ಬರ ವಿಶ್ರಾಂತಿ ತಾಣವಾಗಿರುವುದು ತನಗೆ ಒಲ್ಲದ ವಿಷಯವಾಗಿತ್ತು. ತಾನು ದುಡಿದು ಬಂದಾಗ ನಗ್ತಾ ಸ್ವಾಗತಿಸೋ ಹೆಂಡತಿ ಬೇಕು ಅಂತನೇ ಸವಿತಳಿಗೆ ಗಂಡನಾಗಿ ಬರುವ ಸಂಬಳದಲ್ಲಿ ನೆಮ್ಮದಿಯೊಗಿನೋ ಜೀವನ ನಡೆಸ್ತ ಇದ್ದೆ. ನಮಿತ, ನಿಕ್ಕಿ ಹುಟ್ಟಿದ ಮೇಲೆ ಖರ್ಚು ಜಾಸ್ತಿ ಆಗ್ತಾನೇ ಹೋಗ್ತಾ ಇದ್ದಾಗ, ಒಬ್ನೆ ಎಷ್ಟು ಅಂತ ಸಂಪಾದಿಸುವುದು, ಆರಾಮಾಗಿ ಮನೆಯಲ್ಲಿಯೆ ಇದ್ದಾಳಲ್ಲ ಅಂತ ಸವಿತಳ ಮೇಲೆ ಒಮ್ಮೊಮ್ಮೆ ಮುನಿಸು ಬತಾ ಇತ್ತು. ಆದ್ರೆ ಅದನ್ನ ಬಾಯಿ ಬಿಟ್ಟು ಆಡೋ ಹಾಗಿರಲಿಲ್ಲ. ಅವಳಂತೂ ಗೃಹಿಣಿಯ ಜೀವನಕ್ಕೆ ಬಹುವಾಗಿ ಹೊಂದಿಕೊಂಡು ಬಿಟ್ಟಿದ್ದಳು. ಉದ್ಯೋಗದ ಕನಸೂ ಕೂಡ ಕಾಣ್ತ ಇರಲಿಲ್ಲ. ಮನೆ ಗಂಡ ಮಕ್ಕಳು ಅಂತ ನೆಮ್ಮದಿಯಾಗಿದ್ದು ಬಿಟ್ಟಿದ್ದಳು. ಹಾಗಿರುವಾಗಲೇ ಎಂದೋ ಪಿ. ಯು. ಸಿ ಯಲ್ಲಿ ಶಿಕ್ಷಣ ಶಾಸ್ತ್ರ ತೆಗೆದುಕೊಂಡಿದ್ದು, ಗೆಳತಿಯರ ಒತ್ತಾಯಕ್ಕೆ ಆರುತಿಂಗಳ ಇಂಟರ್ನ್‌ಶಿಪ್ ಟ್ರೈನಿಂಗ್ ತೆಗೆದುಕೊಂಡಿದ್ದು, ನಂತರ ತನ್ನ ಹೆಸರನ್ನು ಉದ್ಯೋಗ ವಿನಿಮಯ ಕೇಂದ್ರದಲ್ಲಿ ದಾಖಲು ಮಾಡಿದ್ದು ಎಲ್ಲವನ್ನೂ ಮರೆತಿದ್ದ ಸವಿತಳಿಗೆ ಹಳ್ಳಿಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಲು ಉದ್ಯೋಗ ವಿನಿಮಯ ಕೇಂದ್ರದಿಂದ ಆರ್ಡರ್ ಬಂದಾಗ ತಬ್ಬಿಬ್ಬಾದಳು. ಜಸ್ಟ್ ಪಾಸಾಗಿದ್ದ ಸವಿತಳಿಗೆ ಈಗ ವಯೋಮಿತಿಯ ಆಧಾರದ ಮೇಲೆ ಸರ್ಕಾರ ಕೆಲಸ ಕೊಟ್ಟಿತ್ತು. ಹೋಗುವುದೋ ಬೇಡವೋ ದ್ವಂದ್ವದಲ್ಲಿ ಮುಳುಗಿದ್ದಳು. ತಾನೂ ತಕ್ಷಣವೇ ಬೇಡ ಎಂದೇ ಹೇಳಿದ್ದೆ. ಆದರೆ ಅವಳ ಮನೆಯವರ ಒತ್ತಾಯ, ಸ್ನೇಹಿತರ ಒತ್ತಾಯ, ಸರ್ಕಾರಿ ಕೆಲಸ ಎಂದೋ ಅವಳಲ್ಲಿ ಕೆಲಸಕ್ಕೆ ಹೋಗುವ ಹಂಬಲ ಹೆಚ್ಚಾಗಿ ಹಟ ಮಾಡಿ ಸೇರಿಕೊಂಡೇ ಬಿಟ್ಟಳು.

ಮನೆಯಲ್ಲಿ ಈಗ ಪರಿಸ್ಥಿತಿ ಬದಲಾಗಿತ್ತು. ಆರಾಮಾಗಿ ಕುಳಿತು ತಿನ್ನುವ ಕಾಲಕಳೆಯುವ ಹಾಗಿರಲಿಲ್ಲ. ನಿಕ್ಕಿ, ನಮಿತಾ ಪುಟ್ಟ ಮಕ್ಕಳು. ಅವರನ್ನು ಶಾಲೆಗೆ ಬಿಟ್ಟು, ಮನೆ ಕೆಲ್ಸದಲ್ಲಿ ಸವಿತಳಿಗೆ ಹೆಲ್ಪ್ ಮಾಡಿ, ಪುನಃ ಸಂಜೆ ಕರ್ಕೊಂಡು ಬಂದು, ರಾತ್ರಿ ಅಡುಗೆಗೆ ಸವಿತಳನ್ನು ಬಿಟ್ಟು ಮಕ್ಕಳಿಗೆ ಓದಿಸುವ ಹೊಣೆ ತಾನೂ ಹೊತ್ತು ಅಬ್ಬಬ್ಬಾ ಸಾಕು ಸಾಕಾಗುತ್ತಿತ್ತು. ಈ ಒತ್ತಡಗಳಿಂದ ರೋಸಿ ಕೆಲಸಕ್ಕೆ ಹೋಗುವ ಸವಿತಳ ಮೇಲೆ ರೇಗಾಡುತ್ತಿದ್ದುದು ನಿಜಾ. ಕೆಲ್ಸ ಬಿಟ್ಟು ಬಿಡು ನನ್ನಿಂದ ಸಾಧ್ಯ ಇಲ್ಲಾ. ನಿನ್ನ ಕೆಲಸದಿಂದ ಏನಾಗಬೇಕು. ನಿನ್ನ ಸಂಬಳ ಯಾರಿಗೆ ಬೇಕು ಅನ್ನುತ್ತಿದ್ದರೂ ಅವಳು ಸಂಬಳ ಕೈಗಿಟ್ಟ ಕೂಡಲೇ ಮನಸ್ಸು ಅರಳುತ್ತಿದ್ದುದು ನಿಜವೇ ಆಗಿತ್ತು. ಅವಳ ಸಂಬಳ ನೆಚ್ಚಿಯೇ ಸೈಟ್, ಮನೆ ಅಂತ ಲೋನ್ ತೆಗೆದು ಸ್ವಂತ ಮನೆಯ ಕನಸನ್ನು ನನಸಾಗಿಸಿ ಕೊಂಡಿದ್ದು. ಈಗ ಕಾರು, ಮುಂದೆ ಮಕ್ಕಳಿಗೆ ಹೈಯರ್ ಸ್ಟಡೀಸ್ ಎಂದೆಲ್ಲ ಕನಸು ಕಾಣುತ್ತಿರುವಾಗಲೇ ಸವಿತಾಳ ನಿರ್ಧಾರ ಎದೆಗೆ ಬಾಂಬ್ ಹಾಕಿದಂತಾಗಿದೆ.

ಎಂಟು ದಿನದ ಹಿಂದೆ ನಮಿತಳ ಹುಟ್ಟುಹಬ್ಬ. ಪ್ರತಿಬಾರಿಯೂ ಎಲ್ಲರನ್ನು ಕರೆದು ಮನೆಯಲ್ಲಿಯೇ ಆಚರಿಸುತ್ತಿದ್ದು, ಈ ಬಾರಿ ಸವಿತ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಳು. ಹೊರಗೆಲ್ಲಾದರೂ ಪಾರ್ಟಿ ಕೊಡಿಸಿಬಿಡು ನಿನ್ನ ಫ್ರೆಂಡ್ಗೆ. ನನ್ನ ಕೈಲಿ ಮನೆಯಲ್ಲಿ ಮಾಡೋಕೆ ಆಗಲ್ಲ ಎಂದಾಗ, ನಮಿತಾ “ಈ ವರ್ಷ ಕಾಲೇಜಿಗೆ ಸೇರಿದ್ದೀನಿ. ಹೊಸ ಫ್ರೆಂಡ್ಸ್ ಆಗಿದ್ದಾರೆ. ಅವನೂ ಒಂದು ಸಾರಿನಾದ್ರೂ ಮನೆಗೆ ಕರೆದು ಪಾರ್ಟಿ ಕೊಡಿಸಬೇಕಮ್ಮ, ನಾನು ಮೊದ್ಲೆ ಮನೆಯಲ್ಲಿಯೇ ಪಾರ್ಟಿ ಎಂದು ಬಿಟ್ಟಿದ್ದೀನಿ. ನೀನು ಎಲ್ಲಾ ಅರೆಂಜ್ ಮಾಡ್ಲೇ ಬೇಕು ಅಂತ ಹಟ ಹಿಡಿದು ಬಿಟ್ಟಳು.

ಶಾಲೆಯಲ್ಲಿ ಕೆಲ್ಸ ಜಾಸ್ತಿ ತನ್ನಿಂದ ಮನೆಯಲ್ಲಿ ಮಾಡಲು ಸಾಧ್ಯವೇ ಇಲ್ಲ ಅಂತ ಸವಿತಳೂ ಹಟ ಮಾಡಿದಾಗ ತನಗೆ ರೇಗಿತ್ತು. ಯಾರೂ ಮಾಡದ ಕೆಲಸ ಮಾಡ್ತೀಯಾ. ಮಗೂ ಆಸೆ ಪಡ್ತಾ ಇದೆ, ನಿನ್ನ ಕೆಲ್ಸಕ್ಕಿಂತ ನಂಗೆ ಮಗಳ ಆಸೆನೇ ಮುಖ್ಯ. ಕೆಲ್ಸಕ್ಕೆ ಹೋಗಿ ಕಷ್ಟಪಡು ಅಂತ ನಾನೇನು ನಿಂಗೆ ಹೇಳಿಲ್ಲ. ನಿನ್ನ ಸಾಕೋ ಯೋಗ್ಯತೆ ಇದ್ದೇ ನಿನ್ನ ಮದ್ವೆ ಆಗಿದ್ದು, ಕಷ್ಟ ಅನ್ನಿಸಿದ್ರೆ ಕೆಲ್ಸ ಬಿಟ್ಟು ಬಿಡು ಎಂದು ಖಾರವಾಗಿ ನುಡಿದಾಗ ದೀರ್ಘವಾಗಿ ಒಮ್ಮೆ ನೋಡಿ ಮತ್ತೇ ಮಾತಾಡದೇ ಒಳಸರಿದು ಬಿಟ್ಟಿದ್ದಳು. ಪಾರ್ಟಿ ಮನೆಯಲ್ಲಿಯೇ ಭರ್ಜರಿಯಾಗಿ ನಡೆದಿತ್ತು.

ಮನೆ ಕೆಲ್ಸದ ಹೊರೆ ಜಾಸ್ತಿ ಆದಾಗಲೆಲ್ಲ ಸವಿತ ಮಗಳ ಮೇಲೆ ರೇಗುತ್ತಿದ್ದಳು. ಸೋಮಾರಿಯಾದ ನಮಿತಾ ಸವಿತ ಬೈದಾಗ ಮಾತ್ರ ಗೊಣಗಿಕೊಳ್ಳುತ್ತಲೇ ಕೆಲ್ಸ
ಮಾಡ್ತಾ, ನೀನು ಮನೇಲಿ ಇದ್ದು ಎಲ್ಲಾ ಮಾಡ್ಕೋಬಾರದ ಮಮ್ಮಿ, ನಂಗೆ ಹೊರಗೆ ಸಾಕಾಗಿ ಹೋಗಿರುತ್ತೇ, ಎಷ್ಟೊಂದು ಓದೋದು ಇರುತ್ತೇ ಮನೆಕೆಲ್ಸನೂ ಮಾಡು ಅಂದ್ರೆ
ನಾನು ಒಳ್ಳೆ ನಂಬರ್ ತೆಗೆಯೋಕೆ ಹೇಗೆ ಸಾಧ್ಯ, ನೀ ಹೀಗೆ ರೇಗಾಡ್ತಾ ಇದ್ರೆ ನಾನು ಡಾಕ್ಟ್ರ ಆಗೋ ಕನಸು ಕನಸೇ ಆಗುತ್ತೆ” ಇದು ನಮಿತಾಳ ದಿನ ನಿತ್ಯದ ಹಾಡು.

ಇನ್ನೂ ನಿಕ್ಕಿಯೋ ತಿಂಡಿಪೋತ. ದಿನಕ್ಕೊಂದು ತರ ರುಚಿ ರುಚಿ ತಿಂಡಿ ಅಡುಗೆ ಬೇಕು. ಸವಿತ ಕೆಲ್ಸಕ್ಕೆ ಹೋಗಿ ಸುಸ್ತಾಗಿ ಬಂದು ಏನೋ ಒಂದು ಮಾಡಿಟ್ಟು ಬಿಡುತ್ತಿದ್ದಳು. “ಅಮ್ಮ ನೀನು ಮನೇಲಿ ಇದ್ದು ರುಚಿ ರುಚಿಯಾಗಿ ಮಾಡಿ ಹಾಕಮ್ಮ, ನೀನು ಸ್ಕೂಲಿಗೇ ಹೋಗ್ದೆ ಇದ್ರೆ ಯಾರು ಅಳ್ತಾರೆ, ದಿನಾ ಒಂದೇ ತರಾ ತಿಂದು ತಿಂದು ಸಾಕಾಗಿ ಹೋಗಿದೆ” ಅನ್ನುವ ಅವನ ಆಲಾಪ ಕೇಳುತ್ತಲೇ ಮಗನ ಆಸೆನಾ ಈಡೇರಿಸಲು ಪ್ರಯತ್ನಿಸುತ್ತಿದ್ದಳು. ಪ್ರತಿ ಭಾನುವಾರಗಳೂ ಅವನ ನಾಲಿಗೆ ಚಪಲ ತೀರಿಸುವಲ್ಲಿಯೇ ಕಳೆದು ಹೋಗುತ್ತಿತ್ತು. ಅಂತೂ ಎಲ್ಲವನ್ನೂ ಮನಸ್ಸಿಗೆ ತೆಗೆದುಕೊಂಡೇ ಈ ನಿರ್ಧಾರಕ್ಕೆ ಬಂದಿದ್ದಾಳೆ. ತನ್ನೆಲ್ಲ ಆಸೆ ಕನಸುಗಳಿಗೆ ತಿಲಾಂಜಲಿ ಇಟ್ಟು, ಎದೆ ಭಾರವಾಗಿ ಎದ್ದು ಕುಳಿತುಕೊಂಡ.

ರಾತ್ರಿ ಊಟ ಮಾಡುವಾಗ ನಮಿತ “ಡ್ಯಾಡಿ, ಕಾಲೇಜು, ಟ್ಯೂಷನ್ ಅಂತ ನಂಗೆ ಸೈಕಲ್ ತುಳಿಯೋಕೆ ಆಗಲ್ಲ ಡ್ಯಾಡಿ, ನಂಗೆ ಕೈನಿಟಿಕ್ ಕೊಡ್ರಿ. ಎಲ್ಲರೂ ಗಾಡೀಲಿ
ಬರ್ತಾರೇ ನಾನೊಬ್ಬಳು ಸೈಕಲ್ನಲ್ಲಿ ಹೋಗೋದು”

“ಹೂಂ, ಇನ್ನೂ ಗಾಡಿ ಕೊಡಿಸಿದಾ ಹಾಗೇ, ಮನೆ ಲೋನ್ ಕಟ್ಟಿಕೊಂಡು ನಿಮ್ಮ ಫೀಸು ಕಟ್ಟಿದರೆ ಸಾಕಾಗಿದೆ. ಗಾಡಿ ಆಸೆನೆಲ್ಲ ಬಿಟ್ಟುಬಿಡು.” ಸವಿತಳ ಕಡೆಗೊಮ್ಮೆ ನೋಡಿ ಮಗಳಿಗೆ ಹೇಳಿದ ಸಂಜೀವ.

“ಮತ್ತೇ, ಈ ತಿಂಗಳು ಕೊಡಿಸ್ತಿನಿ ಅಂತ ಹೇಳಿದ್ರಿ. ನಾನು ನನ್ನ ಫ್ರೆಂಡ್ಸ್‌ಗೆಲ್ಲ ಹೇಳಿಬಿಟ್ಟಿದ್ದೀನಿ” ಅಳು ನುಗ್ಗಿ ಬಂದೇ ಬಿಟ್ಟಿತು ನಮಿತಳಿಗೆ.

“ಹೀಗೆ ಅತ್ತು ಬಿಟ್ರೆ ದುಡ್ಡು ಆಕಾಶದಿಂದ ಉದುರಿ ಬಿಡುತ್ತಾ, ನಿಮ್ಮ ಮಮ್ಮಿನಾ ಕೇಳು ಕೊಡಿಸುತ್ತಾಳಾ ಅಂತಾ” ಬಿಗುವಾಗಿ ನುಡಿದ. ತಕ್ಷಣವೇ ಸವಿತ,

“ಅಯ್ಯೋ ನಾನೆಲ್ಲಿಂದ ಕೊಡಿಸ್ಲಿ. ಕೆಲ್ಸ ಬಿಟ್ಟಾದ ಮೇಲೆ ಸಂಬಳ ಬರುತ್ತಾ, ನಮಿತಾ ಸೈಕಲಲ್ಲಿಯೇ ಹೋಗು. ನಾವೆಲ್ಲ ನಡ್ಕೊಂಡೇ ಡಿಗ್ರಿ ಮುಗಿಸಲಿಲ್ಲವಾ”

ತಟ್ಟೆಯಲ್ಲಿಯೇ ಕೈತೊಳೆದು ಪೂರ್ತಿ ಊಟ ಮಾಡದೇ ಅಳುತ್ತಲೇ ಎದ್ದು ಕೋಣೆಗೆ ಓಡಿದಳು ನಮಿತ. ನಿಕ್ಕಿಗಂತೂ ಹಿಗ್ಗೂ ಹಿಗ್ಗು ಈಗ. ಅವನು ಏನು ಹೇಳಿದ್ರೂ ಸರಿ
ತಕ್ಷಣವೇ ಮಾಡಿ ಕೊಟ್ಟು ಬಿಡುತ್ತಿದ್ದಳು ಸವಿತ. ಪಾನಿಪೂರಿ, ಪರೋಟ, ನಾನ್, ಗೋಬಿಮಂಚೂರಿ, ಪೂರಿ ಸಾಗು ಹೀಗೆ ದಿನವೂ ಸೇವಾರ್ಥ ನಡೆಯುತ್ತಿತ್ತು. ಖರ್ಚು
ಹಾಗೆಯೇ ಏರುತ್ತಲೇ ಹೋಗತೊಡಗಿದಾಗ ಸಂಜೀವ ‘ಸಾಮಾನು ಪಟ್ಟಿನಾ ಕಡಿಮೆ ಮಾಡು, ಎಲ್ಲಿಂದ ತಂದು ಸುರೀಲಿ’ ರೇಗ ತೊಡಗಿದಾಗ ನಿಕ್ಕಿ ಪೆಚ್ಚಾದ. ಅಮ್ಮ
ಮನೆಯಲ್ಲಿಯೇ ಇದ್ರೂ ಬೇಕಾದ ಹಾಗೆ ಮಾಡಿಸಿಕೊಂಡು ತಿನ್ನುವಂತಿಲ್ಲ, ಈಗಲ್ಲದೆ ಇನ್ಯಾವಾಗ ನಾನು ತಿನ್ನೋದು ನಂಗೆ ಬೇಕೇ ಬೇಕು ಅಂತ ಹಟ ಹಿಡಿಯುತ್ತಿದ್ದ.

“ಮಮ್ಮಿ, ಗೀಟಾರ್ ಕಲಿಸೋರನ್ನ ಹುಡುಕ್ತ ಇದ್ದನಲ್ಲ, ಕಲ್ಸಿ ಕೊಡೋರು ಸಿಕ್ಕಿ ಬಿಟ್ರಮ್ಮ ತಿಂಗಳಿಗೆ ಐನೂರು ಫೀಸಂತೆ, ನಾಳೆಯಿಂದ್ಲೆ ಬಾ ಅಂದಿದ್ದಾರೆ. ಅಡ್ವಾನ್ಸ್ ಒಂದು ಸಾವಿರ ಕೊಡಬೇಕಂತೆ, ಸ್ವಂತಕ್ಕೆ ಗೀಟಾರ್ ಕೂಡ ತಗೋಬೇಕಂತೆ, ಯಾವತ್ತು ಕೊಡ್ತಿಯಾ ಗಿಟಾಗೆ ಹಣಾನ” ಗಿಟಾರ್ ಕಲಿಯುವ ಹುಚ್ಚಿನಿಂದ ಕಲಿಸುವವರನ್ನ ಒಂದು ವರ್ಷದಿಂದ ಹುಡುಕಿ ನಿರಾಶನಾಗಿದ್ದ ನಿಕ್ಕಿಯ ಆಸೆಯಂತೆ ಈಗ ಗುರುಗಳು ಸಿಕ್ಕಿದ್ದು ಅವನಿಗೆ ಖುಷಿಯಾಗಿತ್ತು. ಆ ಸಂತೋಷದಲ್ಲಿ ಬೇಗ ಮನೆಗೆ ಬಂದು ಸವಿತಳೂಂದಿಗೆ ತನ ಹಿಗ್ಗನ್ನು ಹಂಚಿಕೊಳ್ಳುತ್ತಿದ್ದ.

ಅಲ್ಲಿಯೇ ಇದ್ದ ನಮಿತಾ “ಹೂ, ಇದೊಂದು ಕಡ್ಮೆ ಆಗಿತ್ತು ಈ ಮಂಗನಿಗೆ, ಮೊದ್ಲು ಸರಿಯಾಗಿ ಓದದನ್ನ ಕಲಿತುಕೋ, ತಿಂಗಳಿಗೆ ಐನೂರು ಫೀಸು, ಗಿಟಾಗೆ
ದುಡ್ಡು, ಅಡ್ವಾನ್ಸಿಗೆ ಒಂದು ಸಾವಿರ ಅಷ್ಟೆಲ್ಲ ಡ್ಯಾಡಿಗೆ ಕೊಡೋಕೆ ಆಗುತ್ತಾ. ಮಮ್ಮಿ ಕೆಲ್ಸ ಬಿಟ್ಟಿರೋದು ಗೊತ್ತಿಲ್ವಾ. ಆ ಆಸೆನೆಲ್ಲ ಬಿಟ್ಟು ಸುಮ್ನೆ ಓದೋದನ್ನ ಕಲಿ” ನಿರಾಶೆಯಿಂದ ಪೆಚ್ಚಾಗಿ ಕುಳಿತು ಬಿಟ್ಟಾ ನಿಕ್ಕಿ.

ಸವಿತಾ ಕೆಲಸ ಬಿಟ್ಟು ಎರಡು ತಿಂಗಳು ಕಳೆದೇ ಹೋಯ್ತು. ಮನೆಯನ್ನು ನಿಭಾಯಿಸಲಾರದೆ ಸಂಜೀವ ದಿನದಿನಕ್ಕೂ ಮಂಕಾಗತೊಡಗಿದ. ಮೊದಲಿನ ಲವಲವಿಕೆ
ಇಲ್ಲಾ. ಮಕ್ಕಳೊಂದಿಗೆ ಸ್ನೇಹ ಇಲ್ಲಾ, ಸವಿತಳೊಂದಿಗೆ ಒಲುಮೆ ಇಲ್ಲಾ. ಯಾರು ಕಾರಲ್ಲಿ ಹೋಗ್ತಾ ಇದ್ದರೂ ಆಸೆಯಿಂದ ಕಣ್ಣರಳಿಸುವಂತಾಗುತ್ತಿತ್ತು. ತನ್ನಾಫೀಸಿನ
ಗಜೇಂದ್ರ ಹೊಸ ಕಾರಿನ ಸಿಹಿಯನ್ನು ಇಂದು ಆಫೀಸಿನಲ್ಲಿ ಹಂಚಿದಾಗಿನಿಂದ ಮನಸ್ಸು ರೋಸಿ ಹೋಗಿತ್ತು. ಎರಡು ತಿಂಗಳಿಂದ ತಡೆದ ಅಸಮಾಧಾನ, ನಿರಾಶೆ, ಕೋಪ ಎಲ್ಲವನ್ನು ಸವಿತಳ ಮುಂದೆ ಕಾರಿಕೊಂಡ.

“ಸವಿತ ನೀನು ತುಂಬ ತಪ್ಪು ಮಾಡಿಬಿಟ್ಟೆ. ನಾನೇನೇ ಹೇಳಿದ್ರೂ ನೀನು ಕೆಲ್ಸ ಬಿಡಬಾರದಿತ್ತು. ಯಾವ ಕನಸು ಕಂಡ್ರೂ ಕೈ ಎಟುಕಿಸಿಕೊಳ್ತ ಇದ್ದ ನಂಗೆ ನಿನ್ನ ಸಂಪಾದನೆ ಅನಿವಾರ್ಯವಾಗಿತ್ತು. ಈ ಮನೆ ಕಟ್ಟಿದ್ದು ನಿನ್ನಿಂದ, ಕಾರುಕೊಳ್ಳ ಬೇಕು ಅಂತ ಇದ್ದದ್ದು ನಿನ್ನ ಸಂಬಳ ನಂಬಿಕೊಂಡು, ಮಗಳ್ನ ಡಾಕ್ಟ್ರು, ಮಗನ್ನ ಇಂಚಿನಿಯರ್ ಮಾಡ್ತಿನಿ ಅಂತ ಆಸೆ ಪಟ್ಟಿದ್ದು ನಿನ್ನ ದುಡಿಮೆಯ ಫಲ ನಂಬಿ. ಆದ್ರೆ ನೀನು ನನ್ನಾಸೆನೆಲ್ಲ ಮಣ್ಣು ಪಾಲು ಮಾಡಿಬಿಟ್ಟೆ. ಈಗ ನೋಡು ನನ್ನ ಒಬ್ಬನ ಸಂಬಳದಲ್ಲಿ ಸಂಸಾರ ತೂಗಿಸಲಾರದೆ ಒದ್ದಾಡ್ತಾ ಇದ್ದೀನಿ. ಎಂಟು ಸಾವಿರ, ತಿಂಗಳಿಗೆ ಎಂಟು ಸಾವಿರ ಕಡಿಮೆ ಆದ್ರೆ ನಾನು ಹೇಗೆ ನಿಭಾಯಿಸಲಿ” ದೀನನಾಗಿ ಹೇಳಿಕೊಂಡು ಕುಸಿದು ಹೋದ.

“ಮಮ್ಮಿ, ಮನೆ ಕೆಲ್ಸ ಮಾಡಿದ್ರೂ ಪರ್ವಾಗಿಲ್ಲ. ಆದ್ರೆ ಗಾಡಿ ಇಲ್ದೆ ನಂಗೆ ಎಷ್ಟೊಂದು ಕಷ್ಟವಾಗ್ತ ಇದೆ ಗೊತ್ತಾ ಮಮ್ಮಿ. ನೀನು ಕೆಲ್ಸಕ್ಕೆ ಹೋಗ್ತಾ ಇದ್ದಾಗಲೇ
ಚೆನ್ನಾಗಿತ್ತು.”

“ಹೌದು, ಮಮ್ಮಿ, ತಿಂಡಿ ತಿಂಡಿ ಅಂತಾ ನಿನ್ನ ಗೋಳು ಹುಯ್ಕೊಂಡೆ, ನೀನು ತಿಂಡಿ ಮಾಡಿ ಕೊಡ್ದೆ ಇದ್ರೂ ಚಿಂತೆ ಇರಲಿಲ್ಲ. ಆದರೆ ನಂಗೆ ಗಿಟಾರ್ ಕಲಿಯೋಕೆ ಹಣ
ಕೊಟ್ಟಿದ್ರೆ ಸಾಕಾಗಿತ್ತು. ನೀನು ಯಾಕೆ ‌ಮಮ್ಮಿ ಕೆಲಸ ಬಿಟ್ಟು ಬಿಟ್ಟೆ.” ಮಕ್ಕಳಿಬ್ಬರ ಅಳಲು, ಗಂಡನ ದೀನತೆ, ಅವನ ಅಸಹಾಯಕತೆ, ಪಶ್ಚಾತ್ತಾಪ ಇವೆಲ್ಲವನ್ನು ಕಂಡ ಸವಿತ “ಈಗ ನನ್ನ ಕೆಲ್ಸದ ಮಹತ್ವ ಗೊತ್ತಾಗ್ತಾ ಇದ್ಯಾ. ನನ್ನ ದುಡಿಮೆನಾ ಅಸಡ್ಡೆಯಿಂದ ಕಾಣ್ತಾ ಇದ್ರಿ. ನನ ಶ್ರಮನಾ ನಿರ್ಲಕ್ಷಿಸುತ್ತಿದ್ದಿರಿ, ಜುಜುಬಿ ಸಂಬಳ ಅಂತ ಜರಿಸಿದ್ರಿ. ಈಗ ಬುದ್ಧಿ ಬಂತಾ, ಒಳಗೂ ಹೊರಗು ಕತ್ತೆಯಂತೆ ದುಡಿತಿದ್ರೂ ಒಂದು ದಿನನಾದ್ರೂ ಅನುಕಂಪ ತೋರಿಸಿ ಅಯ್ಯೋ ಅಂದ್ರಾ, ನಾನು ನನ್ನ ಸಲುವಾಗಿ ದುಡಿತಿದ್ದೆನಾ, ನಾನು ಕಷ್ಟಪಡ್ತಾ ಇದ್ದದ್ದು ನಿಮಗೋಸ್ಕರ ತಾನೆ, ಗಂಡ, ಮಕ್ಕಳು ಸಂಸಾರ ಅಂತಾ ಗಂಧದ ಹಾಗೆ ನನ್ನ ಜೀವನ ತೇಯ್ತಾ ಇದ್ರೂ ದುರಾಹಂಕಾರ ತೋರಿಸ್ತಾ ಇದ್ರಿ. ನಿಮ್ಮನ್ನ ನೋಡಿ ನಿಮ್ಮ ಮಕ್ಕಳೂ ಕೂಡ ನಿಮ್ಮ ಹಾಗೆ ಆಡ್ತಾ ಇದ್ದರು. ಸ್ಕೂಲ್ ಟೀಚರ್ ಅಂದ್ರೆ ನಿಮ್ಮ ಮಗಳಿಗೆ ಅವಮಾನ ಅಂತೆ, ಅಮ್ಮ ಹೊರಗಿನಿಂದ ಸುಸ್ತಾಗಿ ಬರ್ತಾಳೆ ಸ್ವಲ್ಪ ಸಹಾಯ ಮಾಡೋಣ ಅನ್ನೋ ವಿವೇಚನೆ ಇಲ್ದೆ ಕೆಲ್ಸ ಬಿಡಮ್ಮ ಕೆಲ್ಸ ಬಿಟ್ಟು ಬಿಡಮ್ಮ ಅಂತ ದಿನಕ್ಕೆರಡು ಸಲ ಹೇಳ್ತಾ ಇದ್ದಳು. ಇನ್ನು ಇವನಿಗೆ ಮಾಡಿಹಾಕೋ ಅಡಿಗೆಯವಳು ಅಂತ ತಿಳ್ಕೊಂಡಿದ್ದ ಈಗ ಗೊತ್ತಾಯ್ತಾ ನನ್ನ ಶ್ರಮದ ಬೆಲೆ, ನನ್ನ ದುಡಿಮೆಯ ಬೆಲೆ.” ರೋಷದಿಂದ ವೇದನೆಯಿಂದ ಹೇಳಿದಳು ಸವಿತ.

“ತಪ್ಪಾಯಿತು ಮಮ್ಮಿ, ನಾವು ತುಂಬಾ ತಪ್ಪು ಮಾಡಿ ಬಿಟ್ಟಿದ್ದೇವೆ. ನೀನು ವಿಧಿಸಿರೋ ಶಿಕ್ಷೆ ಸರಿಯಾಗಿ ಇದೆ. ನಿನ್ನ ಅರ್ಥಮಾಡಿಕೊಂಡು ನಿನ್ನ ಕೆಲ್ಸಕ್ಕೆ, ನಿನ್ನ ದುಡಿಮೆಗೆ ಗೌರವ ಕೊಟ್ಟಿದ್ರೆ ಅಪ್ಪ ಕಾರು ತಗೋತಾ ಇದ್ರು, ನಂಗೆ ಓಡಾಡೋಕೆ ಕೈನಿ ಸಿಗ್ತಾ ಇತ್ತು. ನಿಕ್ಕಿ ಗಿಟಾರ್ ಕಲಿಬಹುದಿತ್ತು. ಇನ್ನೂ ನಾನು ಡಾಕ್ಟ್ರ ಆಗೋ ಕನಸು ಕೂಡ ಕಾಣೋ ಹಾಗಿಲ್ಲ, ನಮ್ಮ ತಪ್ಪಿಗೆ ಸರಿಯಾದ ಶಿಕ್ಷೆ ಕೊಟ್ಟು ಬಿಟ್ಟಿದ್ದೀಯಾ ಮಮ್ಮಿ” ನಮಿತಾ ನೋವಿನಿಂದ ನುಡಿದಳು.

“ಹೋಗ್ಲಿ ಬಿಡು ಮಗಳೇ, ನಮ್ಮ ತಪ್ಪೇ ನಮ್ಮ ಕನಸು ಆಸೆಗಳನ್ನು ತಿಂದು ಹಾಕಿದೆ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲ ಏನು. ನಾವು ಎಷ್ಟು ಮಾತಾಡಿದ್ರೂ,
ಕ್ಷಮೆ ಕೇಳಿದ್ರೂ ನಿಮ್ಮ ಮಮ್ಮಿಗಾಗಿರೋ ನೋವನ್ನು ವಾಪಸ್ಸು ತಗೋಳೋದಕ್ಕೆ ಸಾಧ್ಯ ಇಲ್ಲಾ, ಹಾಗೆ ಕೊಟ್ಟಿರೋ ರಾಜೀನಾಮೆ ಪತ್ರ ಕೂಡ ವಾಪಸ್ಸು ಪಡಿಯೋದಿಕ್ಕೆ ಸಾಧ್ಯ ಇಲ್ಲಾ. ಇನ್ನಾದರೂ ವಾಸ್ತವವನ್ನು ಅರ್ಥ ಮಾಡಿಕೊಂಡು ಪರಸ್ಥಿತಿಗೆ ಹೊಂದಿಕೊಳ್ಳೋಣ, ಇನ್ನು ಮೇಲೆ ಯಾವುದೇ ಕಾರಣಕ್ಕೂ ನಾವು ಮಮ್ಮೀನಾ ನೋಯಿಸೋದು ಬೇಡಾ” ಎಂದ ಗಂಡನ ಕೈಹಿಡಿದು ಸವಿತಾ ಬಿಕ್ಕಳಿಸಿದಳು.

ಮಾರನೆ ದಿನ ಬೇಗನೇ ಎಲ್ಲವನ್ನು ಮಾಡಿಟ್ಟು ಸವಿತ ತನ್ನ ಬ್ಯಾಗಿಗೇ ಕ್ಯಾರಿಯರ್ ಇಟ್ಟುಕೊಳ್ಳುವುದನ್ನು ನೋಡಿ ಸಂಜೀವ ಪ್ರಶ್ನಿಸಲು  ಬಾಯ್ತೆರೆಯಬೇಕೆಂಬುವಷ್ಟರಲ್ಲಿ “ನಾನು ಸ್ಕೂಲಿಗೇ ಹೋಗ್ತಾ ಇದ್ದೀನಿ. ನನ್ನ ದುಡಿಮೆಯ ಮಹತ್ವ ಅರಿತ ದಿನ ನಾನು ಮತ್ತೇ ಕೆಲ್ಸಕ್ಕೆ ಹೋಗುವುದೆಂದು ಅಂದುಕೊಂಡಿದ್ದೆ. ನಾನು ರಜೆ ಹಾಕಿದ್ದೆ. ಇನ್ನೂ ರಾಜೀನಾಮೆ ಕೊಟ್ಟಿರಲಿಲ್ಲ. ಬೇಗ ನನ್ನ ಶ್ರಮದ, ದುಡ್ಡಿನ ಅರಿವು ನಿಮ್ಮೆಲ್ಲರಿಗೂ ಆಯಿತು. ಅದಾಗದೇ ಇದ್ದಿದ್ದರೇ ರಾಜೀನಾಮೆ ಖಂಡಿತಾ ಕೊಡುತ್ತಿದ್ದೆ. ಈಗ ನನಗೂ ಆತ್ಮತೃಪ್ತಿ ಸಿಕ್ಕಿದೆ. ಇನ್ನು ನೆಮ್ಮದಿಯಾಗಿ ಕೆಲ್ಸ ಮಾಡುತ್ತೇನೆ. ಬಲಾ ಬಸ್ಸಿಗೆ ಲೇಟಾಯ್ತು” ಎನ್ನುತ್ತಲೇ ಹೊರಗಡಿ ಇಟ್ಟಳು. ಭಾವನೆಗಳ ಸಮ್ಮಿಶ್ರದಲ್ಲಿ ಮಿಂದ ಸಂಜೀವ ಹೂನಗೆ ಚೆಲ್ಲಿ ಹೋ ಎಂದು ಕೂಗುತ್ತಾ ಮಕ್ಕಳ ರೂಮಿಗೆ ಓಡಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೯೦
Next post ಬೆಳಕಿನ ಮಕ್ಕಳು

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

cheap jordans|wholesale air max|wholesale jordans|wholesale jewelry|wholesale jerseys