ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವದು ಎಂದು ತಪ್ಪುವದು ದೇವರೆ?” ಎಂದು ಅವಳು ಉದ್ಗಾರ ತೆಗೆಯುವಳು. ಸರಲಾಕ್ಷನಾದರೇನು, ಹೊತ್ತಿಲ್ಲದ ಹೊತ್ತಿನಲ್ಲಿ ಕಂಡಕಂಡದ್ದು ಬೇಡುವನು. ಮನಸ್ಸಿಗೆ ತಿಳಿದದ್ದು ಮಾಡುವನು. ಸರಿರಾತ್ರಿಯಲ್ಲಿ ಅವನಿಗೆ ರಾಗಗಳೇಳುತ್ತಿದ್ದವು. ಊಟದ ಹೊತ್ತಿನಲ್ಲಿ ಗುರುಗುರು ನಿದ್ದೆ, ಅಡಿಗೆಯ ಮನೆಯಲ್ಲಿ ನಿಂತು ಅವನು ತುಬಾಕಿಯನ್ನು ಹಾರಿಸಿ ಗುರಿಹೊಡೆಯುವ ಸಾಧಕವನ್ನು ಮಾಡುವನು. ಒಮ್ಮೊಮ್ಮೆ ಮನ ತುಂಬ ಇಡುಗುವಂಥ ದುರ್ಗಂಧಮಯವಾದ ರಸಾಯನ ಕ್ರಿಯೆಗಳನ್ನು ನಡಿಸುವನು, ಮನೆಬಿಟ್ಟು ಬೇರೊಂದು ಮನೆ ನೋಡಿಕೊಳ್ಳೆಂದು ಹೇಳುವಳೇ? ಸರಲಾಕ್ಷನಂಥ ಕೊಡಗಯ್ಯನನ್ನು ಕಾಣುವದು ದುರ್ಲಭ. ವರ್ಷದ ರೊಕ್ಕವನ್ನು ತಿಂಗಳೊಂದಕ್ಕೆ ಕೊಡುವನು. ರಾಯರೆ, ನಿಮ್ಮ ಗಡಿಯಾರ ಚನ್ನಾಗಿದೆ ಎಂದು ಅವಳು ಹೇಳುವಷ್ಟರಲ್ಲಿಯೇ ಅವನು ಅವಳಿಗೆ ಆ ಗಡಿಯಾರದ ದಾನ ಮಾಡಿದನೇ!
ಸರಲಾಕ್ಷನ ಔದಾರ್ಯಕ್ಕೆ ಮೆಚ್ಚಿಯೂ ಅವನ ಮಿತಭಾಷಣಕ್ಕೆ ಹೆದರಿಯೂ ಆ ವಸತಿಗೃಹದ ಸ್ವಾಮಿನಿಯು ಅವನ ಹೆಸರೇ ತೆಗೆಯುತ್ತಿದ್ದಿಲ್ಲ. ಅವನು ಏನನ್ನಾದರೂ ಕೆಡಿಸಿದರೂ ಚಂತೆಯಿಲ್ಲ, ಚಲ್ಲಿ ಉಕ್ಕಿದರೂ ಚಿಂತೆಯಿಲ್ಲ, ಅವಳು ಬಾಯಿಬಿಚ್ಚಿ ಮಾತಾಡುತ್ತಿದ್ದಿಲ್ಲ. ಆದರೂ ಅವಳಿಗೆ ಅವನಲ್ಲಿ ಭಕ್ತಿ ಮಮತೆಗಳು ಹೆಚ್ಚು. ಮಿತಭಾಷಿಯಾಗಿದ್ದರೂ ಅವನು ಮೃದುಭಾಷಿಯೂ, ಉಪ್ಪು ಸಪ್ಪಗೆಂದು ಅವನು ಅಡಿಗೆಗೆ ಒಮ್ಮೆ ಯಾದರೂ ಹೆಸರಿಟ್ಟವನಲ್ಲ. ಅಂಥವನಿಂದ ತನಗೆ ತೊಂದರೆಯಾಯಿತಂದು ಹೇಳಲು ಲೀಲಾಬಾಯಿಗೆ ಧೈರ್‍ಯವಾದರೂ ಬರುವದು ಹೇಗೆ?
ಒಂದು ದಿವಸ ಅವಳು ನನ್ನ ಮನೆಗೆ ಬಂದು ಅಂದದ್ದು : “ವಾತಾತ್ಮಜರೆ, ಎಂಥ ಗಿರಾಕಿಯನ್ನು ತಂದು ಹಾಕಿದಿರಿ ನನ್ನ ಮನೆಗೆ ಸರಲಾಕ್ಷನೊಡನೆ ನಿತ್ಯ ತಲೆಯೊಡಕೊಂಡು ಗೋಳಾಡಿಹೋದೆನು.”
“ಏನಾಯಿತಮ್ಮ ಪೀಡೆ ನಿನಗೆ?”
“ನನಗೆ ಏನೂ ಆಗಿಲ್ಲ – ಅವನಂಥ ದಾನಶೂರನು ಎಷ್ಟು ಮಾಡಿದರೂ ಸಹಿಸಬಹುದು. ಆದರೆ ಈಗ ಮೂರು ದಿವಸ ಅವನು ಹಾಸಿಗೆ ಹಿಡಿದು ಮಲಗಿಕೊಂಡವನು ತುತ್ತು ಕೂಳು ತಿಂದಿಲ್ಲ. ಬಾಯಿಯಲ್ಲಿ ನಿರೂ ಹಾಕಿಲ್ಲ. ಈ ದಿನ ಮುಂಜಾವಿನಿಂದಂತೂ ಅವನ ಲಕ್ಷಣವೇ ಚನ್ನಾಗಿ ತೋರುವದಿಲ್ಲ. ಈಗ ಸಾಯುವನೋ, ಈ ಗಳಿಗೆಗೆ ಸಾಯುವನೋ ಹೇಳಲಾಗದು. ಮಾತಿಗೊಮ್ಮೆ ತೇಕುತ್ತಾನೆ. ಮೋರೆ ಎಣ್ಣೆಣ್ಣೆ ಬಸಿಯುತ್ತಾ ಬರಿಗಣ್ಣಿನಿಂದ ನೋಡಿದನೆಂದರೆ ಅಂಜಿಕೆ ಸಾವು ಬರುತ್ತದೆ.”
“ಲೀಲಾಬಾಯಿ, ನೀವಾದರೂ ವೈದ್ಯರನ್ನು ಕರಿಸಿ ತೋರಿಸಬಾರದಿತ್ತೆ?” ಎಂದು ವ್ಯಥಿತನಾಗಿ ನಾನು ಅಂಗಿ ರುಮಾಲುಗಳನ್ನು ಲಗುಬಗೆಯಿಂದ ಹಾಕಿಕೊಳ್ಳುತ್ತೆ ಕೇಳಿದೆನು.
“ಹಟಮಾರಿಯವನು, ವೈದ್ಯರನ್ನು ಕರೆಯುವೆನೆಂದರೆ ಅವನು ವಿಚ್ಛಿನ್ನ ಬೇಡವೆಂದು ಹೇಳುವನು. ಅವನ ಮಾತು ಮೀರಿ ವೈದ್ಯರನ್ನು ಕರೆಯಲು ನನಗೆ ಧೈರ್ಯವಾಗಿದ್ದಿಲ್ಲ. ಇಂದಿನ ಅವ್ಯವಸ್ಥೆಯನ್ನು ನೋಡಿ ನಾನು ವೈದ್ಯನನ್ನು ಕರೆದೇ ಬಿಡುವೆನು; ನಿನ್ನ ಮಾತು ಕೇಳುವದಿಲ್ಲವೆಂದು ನಿಷ್ಟುರವಾಗಿ ನಾನು ಅವನಿಗೆ ಹೇಳಿದಾಗ ಅವನು ನಿಮ್ಮನ್ನು ವಾತಾತ್ಮಜರನ್ನು ಕರೆಯೆಂದು ಹೇಳಿದನು?” ಎಂದು ಲೀಲಾಬಾಯಿಯು ಚಿಂತಾಕುಂತಳಾಗಿ ಹೇಳಿದಳು.
“ಏನು ಬೇನೆ? ನಿಮಗೆ ತಿಳಿದಿರುವದೋ?”
“ಏನು ಮಣ್ಣೋ! ಅಪರಾಧಿಯೋರ್ವನ ಶೋಧಕ್ಕಾಗಿ ಬಳೆಗಾರ ಪೇಟೆಯಲ್ಲಿರುವ ಕೆಟ್ಟದೊಂದು ಓಣಿಯಲ್ಲಿ ಅಡ್ಡಾಡಿ ಬಂದ ನೆವಕ್ಕಾಗಿ ಅವನಿಗಿಂಥ ಕೆಟ್ಟ ಬೇನೆಯು ಅಡರಿತೆಂದು ನಾನು ನಂಬುತ್ತೇನೆ. ಬುಧವಾರ ಮಲಗಿದ್ದಾನೆ. ಬುಧವಾರ, ಗುರುವಾರ, ಶುಕ್ರವಾರ ಇಂದಿಗೆ ಮೂರು ದಿವಸಗಳಾದವು, ಅನ್ನೋದಕದ ಸ್ಪರ್ಶವಿಲ್ಲ.”
“ಮುಂದೆ ಗತಿಯೇನಮ್ಮ?”
ದೇವರೇ ಗತಿ! ಇಂದಿನ ದಿನವನ್ನು ಅನನು ಕಳೆಯುವನೋ ಇಲ್ಲವೋ ಅನ್ನುವಂತಾಗಿದೆ. ವೈದ್ಯರೇ ಇದ್ದೀರಲ್ಲ. ನೋಡಬನ್ನಿರಿ.”
ಲಗುಬಗೆಯಿಂದ ನಾನು ಲೀಲಾಬಾಯಿಯ ಮನೆಗೆ ಹೋದೆನು. ಸರಲಾಕ್ಷನು ಮಲಗಿರುವ ಕೋಣೆಯನ್ನು ಅವಳು ತೆಗೆದ ಕೂಡಲೆ. ಅವನ ಶೋಚನೀಯವಾದ ಸ್ಥಿತಿಯನ್ನು ಕಂಡು ನಾನು ಅತಿಶಯವಾಗಿ ವ್ಯಥಿತನಾದೆನು. ಅವನ ಮೊರೆಯು ಒಣಗಿ ಸಂಡಿಗೆಯಾಗಿತ್ತು. ಕಣ್ಣು ಒಳ ನಟ್ಟು ಹೋಗಿದ್ದವು. ತುಟಿಗೆಲ್ಲ ಮುಸರಿ ಬಡಿದಂತಾಗಿತ್ತು. ಧ್ವನಿಯು ಬೇನೆಯ ಬೆಕ್ಕಿಗಿಂತಲೂ ಕ್ಷೀಣವಾಗಿತ್ತು. ಅಂಗಾತವಾಗಿ ಮಲಗಿದವನು ಅಹುದೋ ಅಲ್ಲವೋ ಎಂಬಷ್ಟು ಮೋರೆ ತಿರಿವಿ ಸರಲಾಕ್ಷನು ನನ್ನನ್ನು ಬಿರಿಗಣ್ಣಿನಿಂದ ನೋಡಿದನು.
“ಸರಲಾಕ್ಷರಾಯರೆ, ಏನು ನಿಮ್ಮವಸ್ತೆ?” ಎಂದು ನಾನು ದುಃಖಿತನಾಗಿ ಕೇಳಿದನು.
“ವಾತಾತ್ಮಜ ವೈದ್ಯರೇನು? ದರ್ಶನವು ಅಪರೂಪವಾಯಿತು!” ಎಂದು ಅವನು ತಳಮನೆಯಲ್ಲಿ ಬಿದ್ದವನ ಧ್ವನಿಯಿಂದ ಬಹು ಪ್ರಯಾಸದೊಂದಿಗೆ ನುಡಿದನು.
“ಏನಾಗಿದೆ ನಿಮಗೆ?” ಎಂದು ಕೇಳಕೇಳುತ್ತೆ ನಾನು ಸರಲಾಕ್ಷನ ಮೈ ಹಿಡಿದು ನೋಡಬೇಕೆಂದು ಅವನ ಹಾಸಿಗೆಯ ಬಳಿಗೆ ನಡೆದೆನು.
“ಹಾಂ! ತಡೆಯಿರಿ ವೈದ್ಯರೆ, ಒಂದು ಹೆಜ್ಜೆಯನ್ನು ನೀವು ಮುಂದಕ್ಕೆ ಇಟ್ಟರೆ ಸರಿ ಬೀಳಲಿಕ್ಕಿಲ್ಲ!” ಎಂದು ಅವನು ಬೇನೆಯ ಬೆಕ್ಕಿನಂತೆ ಚೀರಿ ಒಸಕ್ಕನೆ ಹರುಕೊಳ್ಳಲಿಕ್ಕೆ ಬಂದಂತೆ ಮಾಡಿ ನುಡಿದನು.”
“ಹೀಗೇಕೆ, ಹೀಗೇಕೆ ರಾಯರೆ? ನನ್ನ ಗುರುತವಾದರೂ ಹತ್ತಿತೋ ಇಲ್ಲವೊ?” ಎಂದು ನಾನು ಚಕಿತನಾಗಿ ಕೇಳಿದೆನು.
“ಏಕೆ! ನನ್ನ ಇಚ್ಛೆ; ಜೋಕೆ!”
“ಹಾಗಂದರೇನು? ನಿಮ್ಮ ಪ್ರಕೃತಿಯನ್ನು ನೋಡಬೇಡವೆ?”
“ವಾತಾತ್ಮಜ, ನನ್ನ ಮಾತು ಕೇಳಿ ನೀವು ಹಾಗೆ ದೂರ ನಿಂತು ಕೊಂಡರೆ ನನ್ನ ಮೇಲೆ ನೀವು ದೊಡ್ಡ ಕೃಪೆ ಮಾಡಿದರೆಂದು ತಿಳಿಯುವೆನು.”
“ನಾಡಿಯನ್ನಾದರೂ ಹಿಡಿದು ನೋಡೋಣ.”
“ಸುಮ್ಮನೆ ಇರಿರಿ ವೈದ್ಯರೆ, ಸಾಯಬೇಕೆನ್ನುವಿರೇನು?” ಎಂದು ಸರಲಾಕ್ಷನು ನೆರಳುತ್ತಲೂ ಉಸುರು ಬಡುಕೊಳ್ಳುತ್ತಲೂ ಬಲು ಕಷ್ಟದಿಂದ ನುಡಿದನು.
“ಯಾಕೆ? ನನಗೇನಾಗಬೇಕಾಗಿದೆ?” ಎಂದು ನಾನು ಕೇಳಿದೆನು.
“ವಾತಾತ್ಮಜ, ನನಗೆ ‘ಕೂಲಿಯ ರೋಗ’ ಎಂಬ ಪ್ರಾಣಘಾತಕವಾದ ಜ್ವರ ಬಂದಿದೆ. ಬಲು ಕೆಟ್ಟ ಬೇನೆ! ನನ್ನ ಮೈ ಮುಟ್ಟಿದ ಕೂಡಲೆ ಈ ಜ್ವರವು ನಿಮಗೆ ಅಂಟಿಕೊಳ್ಳದೆ ಬಿಡದು. ಜ್ವರ ಬಂದ ಮೇಲೆ ಮನುಷ್ಯನ ಮೂರು ದಿವಸ ಕೂಡ ಬದುಕಲಾರನು.”
“ಸರಲಾಕ್ಷರಾಯರೆ, ಇಂಥ ಮಾತುಗಳನ್ನು ನೀವು ನನಗೆ ಕಲಿಸಬರುವಿರೇನು? ನಾನೂ ವೈದ್ಯನಿದ್ದೇನೆ.”
“ನನ್ನೊಡನೆ ಮಾತಾಡ ಬೇಕಾಗಿದ್ದರೆ ನೀವು ಹಾಗೆ ದೂರ ನಿಂತೆಯೇ ಮಾತಾಡಿರಿ. ಒಲ್ಲದಿದ್ದರೆ ನಿಮ್ಮ ಮನೆಯ ಹಾದಿಯನ್ನು ಹಿಡಿಯಿರಿ.” ಎಂದು ಸರಲಾಕ್ಷನು ಕೈ ಕಾಲುಗಳನ್ನು ಚೆಲ್ಲುತ್ತಲೂ ತಲೆಯನ್ನು ಗಾದಿಗೆ ಹೊಸೆಯುತ್ತಲೂ ಶ್ರಮದಿಂದ ನುಡಿದನು.
“ರಾಯರೆ, ನಾನು ವೈದ್ಯನು, ನೀವು ರೋಗಿಗಳು. ರೋಗಿಯು ವೈದ್ಯನ ಮಾತನ್ನು ರಾಜಾಜ್ಞೆಯಂತೆ ಮನ್ನಿಸತಕ್ಕದ್ದು.”
ಸರಲಾಕ್ಷನು ನನ್ನನ್ನು ಕೆಟ್ಟಗಣ್ಣಿಲೆ ನೋಡಿ ತಿರಸ್ಕಾರದಿಂದ “ಘನವೈದ್ಯರು ನೀವು! ನಿಮ್ಮ ಅಜ್ಞೆಯನ್ನು ಮನ್ನಿಸದವರಾರು? ವಾತಾತ್ಮಜ ಕುಂಟಗಾಲ ವೈದ್ಯರೆ, ಶುಂಠಿ- ಬೆಲ್ಲವೇ ನಿಮ್ಮ ಔಷಧ, ಯಾವ ದೊಡ್ಡ ಹೆಸರಾದ ವೈದ್ಯರು ನೀವು?” ಎಂದು ಅವನು ಸನ್ನಿಪಾತದ ಆವೇಶದಿಂದ ನುಡಿದನು.
“ಎಂಥ ಸೌಜನ್ಯ ರಹಿತವಾದ ಮಾತುಗಳನ್ನಾಡಿದಿರಿ! ಸ್ನೇಹಕ್ಕಾಗಿ ನಾನು ಕರಳು ಹರಕೊಳ್ಳುತ್ತಿರುವಾಗ ನೀವು ಕಟುವಚನಗಳನ್ನಾಡಬರುವಿರಿ. ಆದರೂ ನೀವು ಸಂತಾಪ-ಸನ್ನಿ ಪಾತಗಳಿಗೀಡಾಗಿ ಹೀಗೆ ಮಾತಾಡುವಿರೆಂದು ಮನಗಂಡು ನಾನು ಸುಮ್ಮನಿದ್ದೇನೆ. ನನ್ನ ಜಾಣತನವು ಹಾಗಿರಲಿ, ಸರ ದೇಶಮುಖ, ಡಾಕ್ಟರ ರಾವ, ಡಾಕ್ಟರ ನಾಡಗೀರ ಈ ಮೂವರಲ್ಲಿ ಯಾರನ್ನು ಕರಿಸಲಿ? ನಾಡಗೀರ ಯಶವಂತರಾಯರನ್ನು ಕರಿಸಲೆ? ಇಂಥ ಭಯಂಕರವಾದ ಅಂಟುಬೇನೆಗಳ ಉಗಮಗಳನ್ನು ಅವರು ಬಹು ಚನ್ನಾಗಿ ಅಭ್ಯಸಿದ್ದಾರೆ.” ಸರಲಾಕ್ಷನು ಮಾತನಾಡದೆ ಸುಮ್ಮನೆ ನನ್ನನ್ನು ಪಿಳಿಪಿಳಿ ನೋಡುತ್ತೆ ಒರಗಿದನು.
“ಒಡನುಡಿಯಿರಿ. ಯಾರನ್ನು ಕರಿಸಲಿ ಹೇಳಬಾರದೆ? ಏನು ಎಂತು ಮಾಡಲಿ ಎನ್ನುವದರೊಳಗಾಗಿ ಪ್ರಾಣವನ್ನು ಬಿಡುವಿರಿ. ನೀವು ಹೇಳದಿದ್ದರೆ ನಾನೇ ನನ್ನ ಮನಸ್ಸಿಗೆ ಬಂದವರನ್ನು ಕರೆಸುವೆನು” ಎಂದು ನಾನು ಹೇಳಿದೆನು.
“ಯಾರನ್ನು ಕರೆಯಬೇಕೆಂಬ ಜ್ಞಾನವು ನಿಮಗಿಲ್ಲ. ಸುಮ್ಮನೆ ಒಟಗುಡುವಿರಿ? ನನ್ನ ಜ್ವರದ ಮೂಲವನ್ನು ಈ ಊರಲ್ಲಿ ಯಾರು ಬಲ್ಲರು?”
“ಸರಿ, ನೀವು ನಿಮ್ಮ ಪ್ರಕೃತಿಯನ್ನು ತೋರಿಸುವದೇ ಇಲ್ಲ. ಮೂಲ ಹಿಡಿಯುವದು ಹೇಗೆ?”
“ಸುಜ್ಞರಂತೆ ಮಾತಾಡಿದಿರಿ. ಒಳ್ಳೇದು ನಿಮ್ಮ ಬಳಿಯಲ್ಲಿ ಬೆಳ್ಳಿಯ ನಾಣ್ಯಗಳಿರುವವೋ?” ಎಂದವನು ನೆರಳುತ್ತೆ ಕೂಗಿ ಕೇಳಿದನು.
“ಇವೆ. ಎಷ್ಟು ಬೇಕು?” ಎಂದು ನಾನು ಕೇಳಿದೆನು.
“ಅರ್ಧ ರೂಪಾಯಿಗಳಷ್ಟು ಇವೆ. ನಾಲ್ಕಾಣೆಯ ನಾಣ್ಯಗಳೆಷ್ಟು?”
“ನಾನು ನನ್ನ ಚೀಲವನ್ನು ತೆಗೆದು ತೋರಿಸಿದೆನು, ಅದರಲ್ಲಿ ಇಪ್ಪತ್ತು ರೂಪಾಯಿಗಳಿದ್ದವು. ಮೂವತ್ತೈದು ನಾಲ್ಕಾಣೆಯ ನಾಣ್ಯಗಳಿದ್ದವು. “ವಾತಾತ್ಮಜ,” ಎಂದವನು ಮಗ್ಗಲಾಗಿ ನನ್ನನ್ನು ದಿಟ್ಟಿಸಿ “ವಾತಾತ್ಮಜ, ಇಷ್ಟೇಯೋ? ನಿಮ್ಮಂಥ ಸಂಪನ್ನರಲ್ಲಿ ಇದು ಬಗೆಯ ನೂರು ನೂರು ನಾಣ್ಯಗಳಿರಬೇಕು. ಆಗಲಿ, ರೂಪಾಯಿಗಳನ್ನೆಲ್ಲ ಈಚೆಯ ಜೇಬಿನಲ್ಲಿ ಹಾಕಿರಿ; ಉಳಿದವುಗಳನ್ನು ಆ ಜೇಬಿನಲ್ಲಿರಿಸಿರಿ. ಅಂದರೆ ಸಮತೋಲವಾಗಿ ನೀವು ಸಹಜವೇ ಹೌಹಾರುವಿರಿ!”
ಉರಿಯು ಹೆಚ್ಚಾಗಿ ಸರಲಾಕ್ಷನು ಬಡಬಡಿಸಲಾರಂಭಿಸಿದನೆಂದು. ನಾನು ಕಂಡು “ಸಠಲಾಕ್ಷ, ಜ್ವರದ ತೀವ್ರತೆ ಹೆಚ್ಚಾಗುತ್ತಲಿದೆ, ನಾನೀಗಲೆ ವೈದ್ಯನನ್ನು ಕರತರಲು ಹೋಗುತ್ತೇನೆ” ಎಂದು ನುಡಿದು ನಾನು ನನ್ನ ರುಮಾಲವನ್ನು ಸುತ್ತಿಕೊಳ್ಳಲಾರಂಭಿಸಿದೆನು.
ಅಷ್ಟರಲ್ಲಿ ಅಕೋ ಸರಲಾಕ್ಷನು ತನ್ನ ಹಾಸಿಗೆಯನ್ನು ಬಿಟ್ಟು ಟಣ್ಣನೆ ಹಾರಿ ಕೋಣೆಯ ಒಳಚಿಲಕವನ್ನಿಕ್ಕಿ ಬೀಗವನ್ನು ಪಡೆದು ಕೈಯನ್ನು ತನ್ನ ಜೇಬಿನಲ್ಲಿಟ್ಟು ಕೊಂಡವನೇ ತತ್ತರಿಸುತ್ತಲೂ ಉಸರು ಬಡಕೊಳ್ಳುತ್ತಲೂ ನೆರಳುತ್ತಲೂ ತನ್ನ ಹಾಸಿಗೆಗೆ ಬಂದು ಬಿದ್ದು ಕೊಂಡನು.
“ಇದೇನು ಸರಲಾಕ್ಷ, ನಾನು ನಿಮ್ಮ ಮೈ ಹಿಡಿದು ಜ್ವರವನ್ನಾದರೂ ನೋಡುವೆನು” ಎಂದು ನಾನು ಅವನ ಸಮೀಪಕ್ಕೆ ಹೋಗುವಷ್ಟರಲ್ಲಿ ಅವನು ಸಾಯುವವನ ಹಾಗೆ ಕೂಗಿಕೊಂಡು “ನನ್ನ ಮೈ ಮುಟ್ಟಬಂದರೆ ಇಲ್ಲಿಯೇ ಕುತ್ತಿಗೆಯನ್ನು ಹಿಚಕಿಕೊಳುವೆನು!” ಎಂದು ನುಡಿದು ಲಟಪಟನೆ ಕಾಲು ಜಾಡಿಸಲಾರಂಭಿಸಿದನು.
“ಹಾಗಾದರೆ ಬಾಗಿಲಕ್ಕೆ ಬೀಗವನ್ನೇಕೆ ಹಾಕಿದಿರಿ?”
“ಇನ್ನೆರಡು ತಾಸಿನ ಮೇಲೆ ಯಾವ ವೈದ್ಯನನ್ನು ಕರಿಸಬೇಕೆಂಬದನ್ನು ಹೇಳುವೆನು. ಅಲ್ಲಿಯವರೆಗೆ ನೀವು ಮೇಜಿನ ಮೇಲಿದ್ದ ಪುಸ್ತಕ ವರ್ತಮಾನಪತ್ರಗಳನ್ನೊದುತ್ತ ಕಾಲಕಳೆಯಿರಿ” ಎಂದು ಹೇಳಿ ಸರಲಾಕ್ಷನು ಮುಸುಗಿಟ್ಟುಕೊಂಡು ಮಲಗಿದನು.
ನಾನು ವಿಚಾರಗ್ರಸ್ತನಾಗಿಯೂ ಚಿಂತಾಕುಲನಾಗಿಯೂ ಕೋಣೆಯಲ್ಲಿ ಎಡೆಯಾಡುತ್ತಿದ್ದೆನು. ಆಗ ಮಾಡದಲ್ಲಿ ಒಂದು ಹಂತದ ಕರಡಿಗೆಯನ್ನು ಕಂಡು ಅದನ್ನು ಮೆಲ್ಲನೆ ಕೈಯಲ್ಲಿ ತೆಗೆದುಕೊಂಡೆನು.
ಸರ್‍ಪದಂತೆ ತೀಕ್ಷ್ಣವಾದ ಶ್ರವಣೇಂದ್ರಿಯವುಳ್ಳವನಾದ ಹುಲಿ ದೊಸೆಯ ಭರದಿಂದ ತನ್ನ ಮುಸುಗನ್ನು ಹಿರಿದೊಗೆದು “ವಾತಾತ್ಮಜ, ಆ ಕರಡಿಗೆಯನ್ನು ಸುಮ್ಮನೆ ಇದ್ದಲ್ಲಿರಿಸಿರಿ, ಮಂದಿಯ ಒಡವೆಗಳಿಗೆ ಕೈಯಿಕ್ಕುವದು ದುರ್‍ನಡತೆಯು. ಇರಿಸಿ ಎರಡನೆಯ ಕೆಲಸ ಮಾಡಿರಿ. ಏನು ಹೇಳುತ್ತೇನೆ!” ಎಂದು ಸರಲಾಕ್ಷನು ಉಚ್ಚ ಉಚ್ಚತರವಾದ ಧ್ವನಿಗಳನ್ನು ತೆಗೆದು ಅಧಿಕ್ಷೇಪಿಸಿ ನುಡಿದನು.
ನನಗೆ ಅಪ್ರತಿಷ್ಠೆಯಾದಂತಾಗಿ ನಾನು ಒಳಿತಾಗಿ ನೊಂದುಕೊಂಡೆನು, ಮಾಡಲಿನ್ನೇನು? ಕರಡಿಗೆಯನ್ನು ಮೆಲ್ಲನೆ ಇದ್ದಲ್ಲಿ ಇರಿಸಿ ತಲೆ ಚಿಟ್ಟಿರಿಸಿಕೊಂಡು ಕೆಳಕ್ಕೆ ನೋಡುತ್ತೆ ಕುಳಿತೆನು.
ಎರಡು ತಾಸಿನ ಅವಧಿ ಮುಗಿದಿತು. ಸರಲಾಕ್ಷನು ಗಡಿಯಾರವನ್ನು ನೋಡಿ “ವೈದ್ಯರೆ, ಏಳಿರಿನ್ನು, ನೋಡಿದಿರಾ, ಆಯಾಸದಿಂದಲೂ, ಮನಸ್ತಾಪದಿಂದಲೂ ಜ್ವರದ ಭರಕ್ಕಾಗಿ ನನ್ನ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿದೆ. ಬೇಗನೆ ಕಾಮಾಠಿಪುರಕ್ಕೆ ಹೋಗಿ ಅಲ್ಲಿ ಪರೋಡೆಯವರ ಬಂಗಲೆಯ ಎದುರಿಗೆ ಇರುವ ಮನೆಯಲ್ಲಿ ಕಲ್ಯಾಣಸುಂದರಂ ಮುದಲಿಯರ್ ಎಂಬ ಗೃಹಸ್ಥನಿದ್ದಾನೆ. ಅವನಿಗೆ ಈ ರೋಗದ ನಿದಾನ ಚಿಕಿತ್ಸೆಗಳ ಜ್ಞಾನ ಚನ್ನಾಗಿದೆ, ತಡಮಾಡಬೇಡಿರಿ. ಹೊತ್ತುಗಳೆಯುವಂತಿಲ್ಲ” ಎಂದು ಹೇಳಬೇಕಾದರೆ ಕ್ಷೀಣನಾದ ಸರಲಾಕ್ಷನಿಗೆ ಸಾಕುಬೇಕಾಗಿ ಹೋಯಿತು.
“ಎಲ್ಲವೂ ವಿಪರೀತವೇ. ಎಲ್ಲಿಯ ಕಲ್ಯಾಣಸುಂದರನವನು? ಹೆಸರನ್ನು ಕೂಡಾ ನಾನು ಕೇಳಿಲ್ಲ. ವೈದ್ಯಕವಿದ್ಯೆಯಲ್ಲಿ ಅವನು ಪದವೀಧರನಾಗಿ ತೋರುವದಿಲ್ಲ. ಅಂಥವನ ಕಡೆಯಿಂದ ನೀವು ಔಷಧ ತೆಗೆದುಕೊಳ್ಳುವವರೆ? ಚನ್ನಾಗಿದೆ.”
“ಚೀನ, ಜಪಾನ, ಸುಮಾತ್ರಾ, ಕೊರಿಯಾ ಮುಂತಾದ ದೇಶಗಳಲ್ಲಿ ಉದ್ಭವಿಸುವ ಚಮ – ಚಮತ್ಕಾರವಾದ ಜ್ವರಗಳ ನಿದಾನವನ್ನು ನಮ್ಮ ವೈದ್ಯ ಶಾಸ್ತ್ರಿಗಳು ಅರಿತವರಲ್ಲ. ಆಯಾ ದೇಶಗಳಲ್ಲಿ ಸಂಚರಿಸಿ ಆಸ್ಥೆಯಿಂದ ಆಯಾ ರೋಗಗಳ ಮೂಲವನ್ನು ಕಂಡುಹಿಡಿದ ಜಾಣನೇ ನನ್ನ ಜ್ವರದ ಪರಿಹಾರ ಮಾಡಬಲ್ಲನು. ಕಲ್ಯಾಣಸುಂದರನು ಲಾರ್ಡ ಕಾವರ್ಡ ದೊರೆಗಳ ಸೈನ್ಯದ ಪಡೆಯೊಂದಿಗೆ ಚೀನ ಕೋರಿಯಾ ಸುಮಾತ್ರಾ ಮುಂತಾದ ದೇಶಗಳಲ್ಲಿ ಸಂಚಾರ ಮಾಡಿ ಅಲ್ಲಲ್ಲಿ ಅಂಟುಬೇನೆಗಳ ಕ್ರಿಮಿಗಳನ್ನು ಹಿಡಿದು ನಿರೀಕ್ಷಿಸಿ ಅವುಗಳಲ್ಲಿರುವ ವಿಷವನ್ನೂ ಆ ವಿಷಕ್ಕೆ ಪ್ರತೀಕಾರವನ್ನೂ ಪರಿಶ್ರಮ ಮಾಡಿ ಕಂಡುಕೊಂಡಿದ್ದಾನೆ. ಹೋಗು, ಕಲ್ಯಾಣ ಸುಂದರನಿಗೆ ನನಗಾದ ಅವಸ್ಥೆಯನ್ನು ಸವಿಸ್ತರವಾಗಿ ನಿವೇದಿಸಿ ತಕ್ಕದಾದ ಔಷಧವನ್ನು ತರಹೇಳು.”
“ಆಗಲಿ, ಈಗಲೆ ಅವನನ್ನು ಕರತರುವೆನು. ಇಲ್ಲಿಂದಲೇ ಒಂದು ಮೋಟರಗಾಡಿಯನ್ನು ತೆಗೆದುಕೊಂಡು ಹೋಗಿ ಅವನನ್ನು ಅದರಲ್ಲಿಯೇ ಕುಳ್ಳಿರಿಸಿಕೊಂಡು ಬರುವೆನು.”
“ಅಷ್ಟು ಮಾತ್ರ ಮಾಡಬೇಡ. ನೀನು ಕಲ್ಯಾಣನ ಬಳಿಗೆ ಹೋಗಿ, ನಾನು ಅತ್ಯವಸ್ಥನಾಗಿರುವೆನೆಂದು ಹೇಳಿ ಅವನನ್ನು ಇತ್ತ ಕಳಿಸಿಕೊಡು. ಅವನೂ ನಾನೂ ಕೂಡಿ ಮಾತಾಡುವಾಗ ಹೊರಗಿನವರಿದ್ದರೆ ಅವನಿಗೆ ಸಹಿಸದು. ಕಲ್ಯಾಣ ಸುಂದರನಿಗೆ ಸುದ್ದಿಯನ್ನು ಹೇಳಿದವನೇ ನೀನು ನಿನ್ನ ಮೋಟರದಲ್ಲಿ ಕುಳಿತು ಬಾ, ಅವನು ತನ್ನ ರಥದಲ್ಲಿ ಕುಳಿತು ಯಥಾವಕಾಶವಾಗಿ ಬರುವನು” ಎಂದು ಸರಲಾಕ್ಷನು ಹೇಳಿದನು.
“ಆಗಲಿ, ನೀವು ಹೇಳಿದಂತೆಯೇ ಮಾಡುವೆನು” ಎಂದು ಹೇಳಿ ನಾನು ಹೊರಡಲು ಸಿದ್ದನಾದೆನು.
“ವಾತಾತ್ಮಜರೆ, ವೈದ್ಯರೆ, ನನಗಾದ ಅವಸ್ಥೆಯನ್ನು ಅವನಿಗೆ ಚನ್ನಾಗಿ ವಿವರಿಸಿ ಹೇಳಿರಿ, ನಾನು ಬಹುಪರಿಯಾಗಿ ಹೇಳಿಕೊಂಡಿರುವೆನೆಂದೂ ಅವನು ಬರದಿದ್ದರೆ ಇಂದೆಯೇ ನಾನು ನಿಶ್ಚಯವಾಗಿ ಸತ್ತು ಹೋಗುವೆನೆಂದೂ ಹೇಳಿ ಅವನ ಹೊಟ್ಟೆಯಲ್ಲಿ ಅಂತಃಕರಣ ಬರುವಂತೆ ಮಾಡಿರಿ ಕಂಡಿರೋ?”
“ಚಿಂತೇಬಿಡಿರಿ. ಹೇಗಾದರೂ ಮಾಡಿ ಅವನ ಕೈ ಕಾಲು ಹಿಡಿದುಕೊಂಡು ಹೇಳಿಕೊಳ್ಳುವೆನು ನಿಮ್ಮ ಜೀವ ಉಳಿದರೆ ಸಾಕು” ಎಂದು ಹೇಳಿ ನಾನು ಹೊರಟೆನು.
“ತಡೆಯಿರಿ, ವೈದ್ಯರೆ, ಆ ಗ್ಯಾಸ್ ಲ್ಯಾಂಪಕ್ಕೆ ದೀಪವನ್ನು ಅಂಟಿಸಿರಿ, ಕಣ್ಣು ಕುಕ್ಕುವಷ್ಟು ಬೆಳಕು ಮಾಡಬೇಡಿರಿ, ಆರೆವಾಸಿಯಾಗಿರಲಿ” ಎಂದು ಸರಲಾಕ್ಷನು ಹೇಳಿಕೊಂಡ ಮೇರೆಗೆ ನಾನು ದೀಪವನ್ನು ಅಂಟಿಸಿ ಹೊರಟುಹೋದೆನು.
ಕಲ್ಯಾಣಸುಂದರನ ಮನೆಯು ದೊಡ್ಡದಾಗಿಯೂ ಅಂದವಾಗಿಯೂ ಇದ್ದಿತು. ನಾನು ಅವನ ಮನೆಯ ಬಾಗಿಲಕ್ಕೆ ಹೋದ ಕೂಡಲೆ ಅಲ್ಲಿಯ ಜವಾನನು ನನಗೆ ಕೈ ಮುಗಿದು “ಬುದ್ಧೀ, ಯಾರು ದಯಮಾಡಿರುವರೆಂದು ಯಜಮಾನರಿಗೆ ತಿಳಿಸಲಿ?” ಎಂದು ಕೇಳಿದನು. ನಾನು ನನ್ನ ಹೆಸರು ಉದ್ಯೋಗಗಳನ್ನು ಅವನಿಗೆ ತಿಳಿಸಿದೆನು. ಜವಾನನು ಒಳಗೆ ಹೋದಕೂಡಲೆ ಕಲ್ಯಾಣಸುಂದರನು ಅವನನ್ನು ಕುರಿತು “ಯಾಕೆ ಕಂಡ ಕಂಡವರನ್ನು ಹೀಗೆ ಮನೆಗೆ ಬರಗೊಡುತ್ತೀರೋ, ಅವನನ್ನು ಆವಾರದಲ್ಲಿಯೇ ಬಿಡಬಾರದಾಗಿತ್ತು” ಎಂದು ನುಡಿದನು.
“ದೇವರೂ, ಯಾರೋ ಜ್ವರಪೀಡಿತರಾಗಿರುವರಂತೆ. ಜೀವಕ್ಕೆಯೇ ಗಂಡಾಂತರವಿರುವ ಮೂಲಕ ಆತುರರಾಗಿ ತಮ್ಮ ಕಡೆಗೆ ಬಂದಿದ್ದಾರೆ. ಅವರಿಗೆ ನಾಲ್ಕು ಸಮಾಧಾನದ ಮಾತು ಹೇಳುವದೇ ವಿಹಿತವಾಗಿ ತೋರುತ್ತದೆ.” ಎಂದು ಸೇವಕನಂದನು.
“ನಡೆ, ದಿನಾಲು ಸಾವಿರಾರು ಜನರು ಸಾಯುತ್ತಾರೆ. ಅವರೆಲ್ಲರ ಮನೆಗೆ ಹೋಗಬೇಕಾದರೆ ನಮ್ಮದೇ ಇತಿಶ್ರೀಯಾದೀತು. ನಾನು ಮನೆಯಲ್ಲಿಲ್ಲವೆಂದು ಹೇಳು.”
ಈ ಸಮಾಚಾರವನ್ನೆಲ್ಲ ನಾನು ಹೊರಗಿನಿಂದಲೇ ಕೇಳಿ ಇನ್ನು ಉಪೇಕ್ಷೆ ಮಾಡುವದು ಸರಿಯಲ್ಲವೆಂದು ನೆನೆದು ನಾನು ನೆಟ್ಟನೆ ಮನೆಯ ಯಜಮಾನನಿದ್ದ ಕೋಣೆಗೆ ಹೋದೆನು.
ಕಲ್ಯಾಣಸುಂದರ ಮುದಲಿಯಾರನು ಸುಮಾರು ಐವತ್ತೈದು ವರ್ಷದ ಪ್ರಾಯದವನಾದ ಮನುಷ್ಯನು. ಅವನ ಮೋರೆಯ ಮೇಲಿನ ಬಿಳಿ ಮೀಸೆಗಳು ಸಾಲಿಗ್ರಾಮದಂತೆ ಕಪ್ಪಾಗಿರುವ ಅವನ ಮೈ ಬಣ್ಣಕ್ಕಾಗಿ ಎದ್ದು ಕಾಣಿಸುತ್ತಿದ್ದವು. ತಲೆಯ ಕೂದಲು ಉಚ್ಚಿ ಹೋಗಿದ್ದರಿಂದ ಅವನ ನೆತ್ತಿಯು ಮಿರಿಮಿರಿಯಾಗಿ ಮಿಂಚುತ್ತಿತ್ತು. ಅವನ ದೊಣ್ಣೆ ಮೂಗು ಗುಳ್ಳೆಗಣ್ಣುಗಳನ್ನು ನೋಡಿದರೆ ಅಂಜಿಕೆ ಬರುವಂತೆ ಇತ್ತು. ಚಂಗಾಳಿಯ ಪಂಚೆಯನ್ನುಟ್ಟು ಇಸ್ತ್ರಿಯ ಶರ್ಟನ್ನು ಹಾಕಿಕೊಂಡು ಅವನೊಂದು ಆರಾಮ ಕುರ್ಚಿಯಲ್ಲಿ ಸೆಟೆಯಿಂದ ಕುಳಿತುಕೊಂಡಿದ್ದನು. ನನ್ನನ್ನು ಕಾಣುತ್ತಲೆ ಅವನು ಕ್ರುದ್ಧನಾದಂತೆ ನಟಿಸಿ, ಯಾರು ನೀವು, ಹೀಗೇಕೆ ಹೇಳದೆ ಕೇಳದೆ ಬಂದಿರಿ? ಏನು ಕೆಲಸ ನಿಮ್ಮದು, ಹೊರಗೆ ನಡಿಯಿರಿ!” ಎಂದು ಹೆಬ್ಬಟ್ಟಿ ನಗಲವಾದಂಥ ಬಂಗಾರದ ಪಾಟಲಿಯುಳ್ಳ ತನ್ನ ಕೃಷ್ಣ ವರ್ಣದ ಹಸ್ತವನ್ನು ಚಾಚಿ ನನಗೆ ಹೊರಗೆ ಹೋಗಲು ಆಜ್ಞಾಪಿಸಿದನು.
“ಮುದಲಿಯಾರರೆ, ಪ್ರಖ್ಯಾತನಾದ ಗೃಹಸ್ಥನೋರ್ವನು ಗಂಡಾಂತರದಲ್ಲಿದ್ದಾನೆ. ಅವನ ಪ್ರಾಣವನ್ನು ಉಳಿಸುವುದು ನಿಮ್ಮ ಕೈಯಲ್ಲಿ ಇದೆ ಎಂದು ನಂಬಿ ನಾನು ಬಂದೆನು, ಒಣ ಉಪಚಾರದ ಮಾತುಗಳಲ್ಲಿ ಸಮಯವನ್ನು ಕಳೆಯಲು ಅವಕಾಶವಿಲ್ಲಾದ್ದರಿಂದ ನಾನು ಆತುರನಾಗಿ ತಮ್ಮ ಬಳಿಗೆ ಬಂದಿರುವೆನು. ದಯಮಾಡಿ ನನ್ನ ಪ್ರಾರ್ಥನೆಯನ್ನು ಮನ್ನಿಸಬೇಕು.”
“ಯಾರು ಗಂಡಾಂತರದಲ್ಲಿ ಇರುವರು?” ಎಂದು ಮುದಲಿಯಾರನು ಆಢ್ಯತೆಯಿಂದ ಕೇಳಿದನು.
“ಹುಲಿಮೀಸೆ ಸರಲಾಕ್ಷರಾಯರು” ಎಂದು ನಾನು ನಿವೇದಿಸಿದನು.
“ಸರಲಾಕ್ಷ ಹುಲಿಮೀಸೆ!” ಎಂದು ಕಲ್ಯಾಣಸುಂದರನು ಚಕಿತನಾಗಿ ಉದ್ಗಾರ ತೆಗೆದನು.
“ಆಹುದು, ಅವರೇ ಸುಮಾತ್ರಾದಲ್ಲಿಯ ‘ಕೂಲೀ’ ಜ್ವರದಿಂದ ಪೀಡಿತರಾಗಿರುವರು. ಬದುಕುವರೋ ಇಲ್ಲವೋ ಎಂಬ ಶಂಕೆಯುಂಟಾಗಿದೆ. ತಾವು ದಯಮಾಡಿ ಈಗಲೆ ಬಂದರೆ ಒಳಿತಾಗುವದು.”
“ಇಂಥ ಅತ್ಯವಸ್ಥೆಯೇ? ಪಾಪ! ಸರಲಾಕ್ಷರಾಯರು ಅಪರಾಧಿಗಳ ತುಬ್ಬು ಹಚ್ಚುವದರಲ್ಲಿ ಒಳ್ಳೆ ನಿಪುಣರೂ ದಕ್ಷರೂ ಆಗಿರುವರು, ನಾನಾದರೂ ಬೇನೆಗಳ ಮೂಲವನ್ನು ಶೋಧಿಸಿ ತೆಗೆಯುವದರಲ್ಲಿ ಅರ್ಧ ಆಯುಷ್ಯವನ್ನೇ ಕಳೆದಿರುವೆನು. ಸರಲಾಕ್ಷರ ಪ್ರತ್ಯಕ್ಷವಾದ ಪರಿಚಯವು ನನಗಿಲ್ಲದಿದ್ದರೂ ಕೆಲಕೆಲವು ಪ್ರಕರಣಗಳ ಸಂಬಂಧವಾಗಿ ನಾನೂ ಅವರೂ ಅನೇಕಾವರ್ತಿ ಕೂಡಿದ್ದೆವು. ತಾವು ವೈದ್ಯ ವಾತಾತ್ಮಜರೆಂದು ನಮ್ಮ ಮನುಷ್ಯನು ಹೇಳಿದನು. ಕುಳಿತುಕೊಳ್ಳಿರಿ.”
“ಬೇಗನೆ ಏಳಿರಿ” ಎಂದು ಹೇಳಿ ನಾನು ಕುರ್ಚಿಯ ಮೇಲೆ ಕುಳಿತನು.
ಕಲ್ಯಾಣ ಸುಂದರನು ಒಂದು ಕಪಾಟವನ್ನು ತೆರೆದು ಅದರಲ್ಲಿರುವ ಅನೇಕವಾದ ಕುಪ್ಪೆಗಳಲ್ಲಿಯದೊಂದು ಕುಪ್ಪೆಯನ್ನು ತೆಗೆದು, “ಇದು ನೋಡಿರಿ, ‘ಕೂಲೀ’ ಜ್ವರದ ಕ್ರಿಮಿಗಳ ಸಂಚಯವನ್ನು ಮಾಡಿಟ್ಟಿದ್ದೇನೆ. ಈ ಹುಳದ ರಸಿಕೆ ತಗಲಿದರೆ ಸಾಕು ತತ್‌ಕ್ಷಣವೇ ಜ್ವರ ಬರುವದು. ಹೀಗೆಯೇ ಬೇರೆ ಬೇರೆಯಾದ ಕುಪ್ಪೆಗಳಲ್ಲಿ ಬೇರೆ ಬೇರೆ ಜಾತಿಯ ವಿಷ ಕ್ರಿಮಿಗಳನ್ನು ಹಿಡಿದಿಟ್ಟಿದ್ದೇನೆ. ಇದು ನೋಡಿರಿ……..”
“ಇರಬಹುದು, ಅವುಗಳನ್ನೆಲ್ಲ ನೋಡುತ್ತ ಹೊತ್ತು ಗಳೆಯುವಂತಿಲ್ಲ, ಅಲ್ಲಿ ಸರಲಾಕ್ಷನ ಅವಸ್ಥೆ ಏನಾಗಿರುವುದೋ ಕಾಣೆನು,” ಎಂದು ನಾನು ಆತುರನಾಗಿ ನುಡಿದೆನು.
“ಇಷ್ಟು ಅತ್ಯವಸ್ಥೆಯೇ? ಸರ೮: ಕನಿಗೆ ಈ ಘಾತಕವಾದ ಬೇನೆ ಬಂದು ಎಷ್ಟು ದಿವಸಗಳಾದವಂತೆ?”
“ಮೂರು ದಿವಸಗಳಾದವೆಂದು ಅವರೇ ಹೇಳಿದರು.”
“ಭ್ರಮ ಸನ್ನಿ ಪಾತಾದಿಗಳೇನಾದರೂ ಆಗಿರುವವೇನು?”
“ಕಂಡಕಂಡಂತೆ ಚೀರುತ್ತಾರೆ. ಅರಿವೇ ಹರಿಯುತ್ತಾರೆ. ಇದಕ್ಕೂ ಹೆಚ್ಚಿನ ಸನ್ನಿ ಪಾಶದ ಲಕ್ಷಣವೇನಿರಬೇಕು?”
“ಪಾಪ! ಸರಲಾಕ್ಷನಂಥ ಅಪರೂಪವಾದ ಜೀವನಕ್ಕೆ ಎಂಥ ಭಯಂಕರವಾದ ಗಂಡಾಂತರವು ಬಂದೊದಗಿರುವದು. ಆರಿಸಿ ಒಳ್ಳೇ ಜೀವನಕ್ಕೆಯೇ ಇಂಥ ಬೇನೆ.” ಎಂದು ಖಿನ್ನನಾಗಿ ನುಡಿದನು.
“ಏಳಿರಿ, ಅಂಗಿ ರುಮಾಲುಗಳನ್ನು ಹಾಕಿಕೊಳ್ಳಿರಿ.” ಎಂದು ಕುರ್‍ಚಿಯಿಂದ ಎದ್ದು ನಿಂತೆನು.
“ಏಳಿರಿ, ನನ್ನ ಮೋಟಾರವು ಸಿದ್ದವೇ ಇದೆ.”
“ತಾವು ಸರಲಾಕ್ಷರ ಮನೆ ನೋಡಿರುವಿರಂತೆ. ದಯಮಾಡಬೇಕು. ನಾನು ಅವರ ಅಣ್ಣಂದಿರಾದ ಅರವಿಂದಾಕ್ಷರನ್ನು ಕರತರುವೆನು, ಮೃತ್ಯು ಪತ್ರವನ್ನು ಮಾಡಿಸಬೇಕಾಗಿದೆ.” ಎಂದು ನಾನು ನಿವೇದಿಸಿದೆನು.
“ಆಗಲಿ, ನೀವು ಹೋಗಿರಿ. ನಾನು ಇನ್ನೊಂದು ಹದಿನೈದು ನಿಮಿಷಗಳಲ್ಲಿ ಸರಲಾಕ್ಷರ ಮನೆಯಲ್ಲಿಯೇ ಇರುವೆನು.” ಎಂದು ನುಡಿದು ಕಲ್ಯಾಣಸುಂದರನು ತನ್ನ ರುಮಾಲವನ್ನು ಅಡ್ಡತಿಡ್ಡಾಗಿ ಸುತ್ತಿಕೊಳ್ಳಲು ಆರಂಭಿಸಿದನು.
ನಾನು ಲಗುಬಗೆಯಿಂದ ನನ್ನ ಮೋಟರದಲ್ಲಿ ಕುಳಿತು ಸರಲಾಕ್ಷನ ಮನೆಗೆ ಬಂದೆನು.
“ಏನು ಮಾಡಿದಿರಿ ವಾತಾತ್ಮಜರೇ?” ಎಂದು ಅವನು ಬಲು ಹಗುರಾದ ಧ್ವನಿಯಿಂದ ದೀನನಾಗಿ ಕೇಳಿದನು.
“ಓಹೋ, ಹೋಗಿದ್ದೆನು. ಕಲ್ಯಾಣಸುಂದರನಿಗೆ ನಿಮ್ಮ ದೀನವಾದ ಅವಸ್ಥೆಯನ್ನು ತಿಳಿಸಿದನು. ಅವನಿಗೆ ಕನಿಕರ ಬಂದು “ಈಗಲೆ ಬರುವೆ” ನೆಂದು ಹೇಳಿದ್ದಾನೆ. ಇನ್ನೊಂದು ಹದಿನೈದು ನಿಮಿಷಗಳಲ್ಲಿ ಬರುವನು.”
“ಸತ್ಯವೇ? ಪುಣ್ಯ ಕಟ್ಟಿ ಕೊಂಡಿರಿ ಕಂಡಿರಾ. ಆದರೆ ಆ ಮುದಲಿಯಾರನು ನನ್ನೊಡನೆ ಮಾತಾಡುತ್ತಿರುವಾಗ ನೀವು ಇಲ್ಲಿ ಇರಲಾಗದು.”
“ಆದೊಂದು ಮಾತು ಬಿಟ್ಟು ಬಿಡಿರಿ. ಇಂಥ ಗಂಡಾಂತರದ ಸಮಯದಲ್ಲಿ ನಾನು ನಿಮ್ಮನ್ನು ಅಗಲಿ ಇರಲಾರೆನು. ಕುವೈದ್ಯನಾದ ಕಲ್ಯಾಣ ಸುಂದರನಿಂದ ನಿಮ್ಮ ರೋಗದ ಚಿಕಿತ್ಸೆಯಾಗದಿದ್ದರೆ ಅವನನ್ನು ಹೊರಗೆ ಹಾಕಿ ನಾನೇ ಉಪಚಾರ ಮಾಡ ಬೇಕಲ್ಲವೆ?” ಎಂದು ನಾನು, ಚೋಳ ರಾಜನು ತಲೆಯೊಡಕೊಂಡ ಶ್ರೀನಿವಾಸನ ಮುಂದೆ ನಿಂತು ಪ್ರಾರ್ಥಿಸಿದೆನು.
“ನಿನ್ನ ಆಗ್ರಹವಿದ್ದರೆ ನನ್ನಿ ಬೆನ್ನಿನ ಹಿಂದೆ ಇರುವ ಹಾಸಿಗೆಯ ಸುರುಳೆಯಲ್ಲಿ ಸುತ್ತಿಕೊಂಡು ಕುಳ್ಳಿರು, ತ್ವರೆಮಾಡು, ಮುದಲಿಯು ಬಂದನೆಂದು ಕಾಣುತ್ತದೆ; ಪಾವಟಿಗೆಯ ಮೇಲೆ ಕಾಲಸಪ್ಪಳವಾಗುತ್ತದೆ.”
ನಾನು ಅಡಗಿಕೊಂಡು ಒಂದೆರಡು ನಿಮಿಷಗಳಾಗಿದ್ದಿಲ್ಲ, ಆಗಲೆ ಕಲ್ಯಾಣಸುಂದರನು ಒಳಗೆ ಬಂದನು.
“ಯಾರೂ ಇಲ್ಲವೇ?” ಎಂದು ಅವನು ಚಕಿತನಾಗಿ ಉದ್ಗಾರ ತೆಗೆದು “ಸರಲಾಕ್ಷರಾವ! ಸರಲಾಕ್ಷರಾವ!” ಎಂದು ಮೆಲ್ಲನೆ ಕೂಗಿದನು.
ಉತ್ತರ ಬರಲಿಲ್ಲ. ಕಲ್ಯಾಣ ಸುಂದರನು ಸರಲಾಕ್ಷನ ಭುಜವನ್ನು ಹಿಡಿದು ಅಲ್ಲಾಡಿಸಿ ಎಚ್ಚರಿಸಿದನು…
“ಯಾರಲ್ಲಿ? ನನ್ನ ಪ್ರಾಣ ಹೋಗಿದೆಯೋ ಇನ್ನೂ ಇದೆಯೋ? ಪರೀಕ್ಷಿಸಿ ಹೇಳಿರಿ.” ಎಂದು ಸರಲಾಕ್ಷನು ನುಡಿದನು, ನಾನು ಅವನ ಚಮತ್ಕಾರವಾದ ನುಡಿ ಕೇಳಿ ಬೆರಗಾದೆನು.
“ಸರಲಾಕ್ಷ, ಹೀಗೆ ನನ್ನ ಮೊರೆಯನ್ನು ನೋಡಿರಿ, ಕಲ್ಯಾಣ ಸುಂದರನ ಗುರುತು ಹತ್ತಿತೆ?” ಎಂದು ಮುದಲಿಯಾರನು ಕೇಳಿದನು.
“ದಂಡಂ! ಅಯ್ಯಾ, ಹಾಗೆ ಕುರ್ಚಿಯ ಮೇಲೆ ಕುಳಿತುಕೊಳ್ಳಿರಿ. ನನ್ನ ಪ್ರಾರ್ಥನೆಯನ್ನು ಮನ್ನಿಸಿ ತಾವು ಬಂದದ್ದು ಭಗವತ್ ಕೃಪಾ ಪ್ರಸಾದವೇ.”
“ನಿಮ್ಮ ಪ್ರಕೃತಿ ಹೇಗಿದೆ?”
“ನನ್ನ ಕಥೆ ಮುಗಿದಂತಾಯಿತು ಮುದಲಿಯಾರರೆ. ನಾಮಾಂಕಿತರಾದ ವೈದ್ಯರು ಕೈ ಬಿಟ್ಟು ಬಿಟ್ಟರು. ನಿಮ್ಮ ಪುಣ್ಯದಿಂದಲೇ ನಾನು ಬದುಕಿ ಉಳಿಯತಕ್ಕವನು ಏನು ಉಪಾಯ ಮಾಡುವಿರೋ ನೋಡಿರಿ.” ಎಂದು ನುಡಿದ ಸರಲಾಕ್ಷನ ದೀನವಾಣಿಯನ್ನು ಕೇಳಿ ನನಗೆ ವ್ಯಸನವಾಯಿತು.
“ವೈದ್ಯರು ನಿಮ್ಮ ಬೇನೆಗೆ ಏನು ಹೆಸರಿಟ್ಟರು?”
“ನಿಶ್ಚಿತಾತ್ಮಕವಾದ ನಿದಾನವಾಗಿಲ್ಲ. ನನ್ನ ಜ್ವರವು ಸುಮಾತ್ರಾದ ‘ಕೂಲೀ’ ಜ್ವರವಾಗಿರಬಹುದೆಂದು ಡಾಕ್ಟರ ನಾಡಗೀರರ ಅಭಿಪ್ರಾಯವು. ನಿಮ್ಮ ವಿಜಯರಂಗನಾದರೂ ಇಂಥ ಜ್ವರದಿಂದಲೇ ತೀರಿಕೊಂಡನೆಂದು ನೀವೇ ಹೇಳಿರುವಿರಿ. ನನ್ನ ಜ್ವರದ ಲಕ್ಷಣಗಳಾದರೂ ಅಂಥವೇ ಆಗಿವೆ.”
“ಅಸಾಧ್ಯವಾದ ಬೇನೆ! ನೋಡಿರಿ, ನಮ್ಮ ಹುಡುಗನು ನನ್ನ ಕಣ್ಣಾರೆ ಸತ್ತು ಹೋಗಲಿಲ್ಲವೆ?” ಎಂದು ಮುದಲಿಯು ಗದ್ಗದಿತ ಕಂಠನಾಗಿ ನುಡಿದನು.
“ವಿಜಯರಂಗನ ದೈವವು ವಿಜಯರಂಗನ ಸುತ್ತೆ. ಆದರೆ ನಿಮ್ಮ ಉಪಾಯಗಳಿಂದ ನನಗೇಕೆ ವಾಸಿಯಾಗಬಾರದು? ದಯಮಾಡಿ ನೀವು ಮನಸ್ಸಿನ ಮೇಲೆ ತೆಗೆದುಕೊಂಡು ನನಗೆ ಪ್ರಾಣದಾನ ಕೊಟ್ಟರೆ ನಿಮ್ಮ ಉಪಕಾರವನ್ನು ಎಳೇಳು ಜನ್ಮಗಳಲ್ಲಿ ಮರೆಯಲಿಕ್ಕಿಲ್ಲ.”
“ಈ ರೋಗವು ನನಗೆ ಅಸಾಧ್ಯವಾಗಿ ತೋರುತ್ತದೆ” ಎಂದು ಮುದಲಿಯಾರನಂದನು.
“ಹಾಗೆನ್ನ ಬೇಡಿರಿ, ಕೃಪೆಮಾಡಿರಿ. ನಾನು ಹಿಂದಕ್ಕೆ ನಿಮಗೆ ವಿರೋಧಿಯಾಗಿ ನಡೆದೆನೆಂದು ಸಿಟ್ಟು ಹಿಡಿಯಬೇಡಿರಿ. ಇನ್ನು ಮೇಲೆ ನಾವೂ ನೀವೂ ಸಖ್ಯದಿಂದಲೇ ಇರತಕ್ಕದ್ದೆಂದು ನಾನು ಬಯಸುತ್ತೇನೆ. ಅಯ್ಯಯ್ಯೋ! ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ಕಾಲು ಭಾರವಾಗಿದೆ; ಎಳಕೊಳ್ಳಲಿಕ್ಕೆ ಬರಲೊಲ್ಲದು ಸಾಯುತ್ತೇನೆ. ಕಲ್ಯಾಣಸುಂದರರೆ, ಹೊಟ್ಟೆಯಲ್ಲಿ ಹಾಕಿಕೊಳ್ಳಿರಿ!” ಎಂದು ಸರಲಾಕ್ಷನು ಚೀರಿದನು.
“ಇದೋ ಸರಲಾಕ್ಷ, ಮರಣದ ಚಿಹ್ನಗಳು ತೋರಲಾರಂಭಿಸಿದವು. ನೀನು ಇನ್ನೊಂದು ತಾಸೆರಡು ತಾಸಿನ ಜೊತೆಗಾರನು. ದುರಾತ್ಮಾ, ನೀನು ನನ್ನ ಕೊರಳಿಗೆ ಉರಲು ತರಬೇಕೆಂದು ಮಾಡಿದ್ದಿಯಲ್ಲವೆ? ಆದರೆ ಫಲಭೋಗವನ್ನು ಈಗ ನೀನು ಉಣ್ಣು!”
“ಹಾಗೆ ನಿರ್ದಯರಾಗಬೇಡಿರಿ, ನನ್ನನ್ನು ಉಳಿಸಿಕೊಳ್ಳಿರಿ.”
“ನಿನ್ನನ್ನು ಉಳಿಸಿಕೊಳ್ಳುವದು ಇನ್ನು ಧನ್ವಂತರಿಗೂ ಅಸಾಧ್ಯವು! ದುಷ್ಟನೆ, ನಿನಗೆ ವಿಜಯರಂಗನ ಮರಣದ ಶೋಧ ಬೇಕಾಗಿತ್ತಲ್ಲವೆ? ನಾನೇ ಅವನನ್ನು ಕೊಂದೆನು. ನೀನೇನು ಮಾಡುವಿ ಇನ್ನು?”
“ನಿಮ್ಮ ಹುಡುಗನನ್ನು ನೀವೇ ಕೊಂದಿರೆಂಬುವದು ಅಸಾಧ್ಯವು. ‘ಕೂಲಿ’ ಜ್ವರವನ್ನು ಮನುಷ್ಯನ ಹೊಟ್ಟೆಯಲ್ಲಿ ನೀವು ಹೇಗೆ ಹಾಕಬಲ್ಲಿರಿ?”
“ಸರಲಾಕ್ಷ, ನೀನು ಜಾಣನೆಂದು ನಾನು ತಿಳಿದಿದ್ದೆನು. ಇಕೋ, ಈ ಮಾಡದಲ್ಲಿಯ ಜಂತದ ಕರಡಿಗೆಯನ್ನು ನೋಡು, ಇದರಲ್ಲಿ ಒಂದು ಸೂಕ್ಷ್ಮವಾದ ತಂತಿಯ ಸುರುಳೆಯಿದೆ. ಆದರೆ ಕೊನೆಗೆ ಆ ಜ್ವರದ ಕೀಟಕದ ರಸವನ್ನು ತಗಲಿಸಿದ್ದೆನು, ಇದೇ ಕರಡಿಗೆಯನ್ನು ಅಂಚೆಯವನು ಬುಧವಾರ ದಿವಸ ಪ್ರಾತಃಕಾಲಕ್ಕೆ ತಂದು ಕೊಟ್ಟನಷ್ಟೆ? ಅದನ್ನು ನಾನೇ ನಿನಗೆ ಕಳಿಸಿದ್ದೆನು.”
“ಆಹುದೇನು? ಆ ಕರಡಿಗೆಯನು ನಾನು ಕೈಯಲ್ಲಿ ತೆಗೆದುಕೊಂಡ ಕೂಡಲೆ ಒಳಗಿನ ತಂತಿಯು ನನ್ನ ಕೈಗೆ ನಟ್ಟಿತು” ಎಂದು ಸರಲಾಕ್ಷನು ನುಡಿದನು.
“ಅದೇ ತಂತಿಯ ತುದಿಗೆ ವಿಷವಿತ್ತು. ಆ ವಿಷವು ನಿನ್ನ ಕೈಯಲ್ಲಿ ಸೇರಿದಾಗಿನಿಂದ ನಿನಗೆ ಜ್ವರ ಬಂದಿತಲ್ಲವೆ? ಈ ರೀತಿಯಾಗಿಯೇ ನಾನು ನನ್ನ ಅಣ್ಣನ ಮಗನಾದ ವಿಜಯರಂಗನನ್ನು ಕೊಂದೆನು. ನನ್ನ ವೈರಿಯಾದ ನಿನ್ನನ್ನು ಈಗ ಯಮಸದನಕ್ಕೆ ಆಟ್ಟುವೆನು. ವಿಜಯರಂಗನನ್ನು ಕೊಂದವನ ಶೋಧವು ನಿನಗೆ ಬೇಕಾಗಿತ್ತಲ್ಲವೆ? ಈಗ ಶೋಧವಾಯಿತಲ್ಲ! ಹೊಡೆ ಪಾಂಚಜನ್ಯವನ್ನು!”
“ಅಯ್ಯೋ! ನಾನಿನ್ನೇನು ಮಾಡಲಿ? ಹೊಟ್ಟೆಯೊಳಗೆ ಸಂಕಟವು ಹೆಚ್ಚಾಯಿತು! ಕಲ್ಯಾಣ ಸುಂದರಂ, ವಿಜಯರಂಗನನ್ನು ನೀವು ಕೊಂದಿರಲಿ ಕೊಲ್ಲದಿರಲಿ, ಆ ಬಗ್ಗೆ ನಾನಿನ್ನು ಯತ್ಕಿಂಚಿತ್ತಾದರೂ ಮನಸ್ಸು ಹಾಕುವದಿಲ್ಲ. ನನ್ನನ್ನು ಉಳಿಸಿಕೊಳ್ಳಿರಿ. ಆಹಾ! ಆಹಾ!’ ಎಂದು ಕೆಮ್ಮಿ “ಗಂಟಲು ಒಣಗುತ್ತದೆ, ತುಸು ನೀರು ಕೊಡಿರಿ.”
“ತೆಗೆದುಕೊಳ್ಳು, ನೀರು ಕುಡಿದು ಸಾಯಿ. ಇನ್ನು ನೀನು ಎರಡು ಗಳಿಗೆಯಲ್ಲಿ ಪ್ರೇತನಾಗುವಿ.”
ಸರಲಾಕ್ಷನು ನೀರು ಕುಡಿದು ಉಗುಳಿ “ನೀರು ಗಂಟಲಿನಲ್ಲಿ ಇಳಿಯಲೊಲ್ಲದು. ಕಣ್ಣು ಕತ್ತಲೆಗುಡಿಸುತ್ತವೆ. ಕಲ್ಯಾಣಸುಂದರಂ, ದೀಪವನ್ನು ನಿಚ್ಚಳವಾಗಿ ಮಾಡಿರಿ.”
“ಆಗಲಿ, ಈ ಪ್ರಕಾಶವು ಕೂಡ ನಿನ್ನ ಕಣ್ಣಿಗೆ ಬೆಳಕು ಕೊಡಲಾರದು” ಎಂದು ಹೇಳಿ ಮುದಲಿಯಾರನು ಗ್ಯಾಸದ ದೀಪವು ಚನ್ನಾಗಿ ಉರಿಯುವಂತೆ ಎತ್ತಿದನು.
ಪ್ರಕಾಶವು ಸಂಪೂರ್‍ಣವಾಗಿ ಬಿದ್ದ ಕೂಡಲೆ ಸರಲಾಕ್ಷನು ಟಣ್ಣನೆ ಎದ್ದು ಕುಳಿತು “ಶಾಬಾಸ್ ಮುದಲಿಯಾರನೆ, ಚನ್ನಾಗಿ ಮಾಡಿದಿ. ಇನ್ನು ನಾಲ್ಕಾರು ಸಿಗರೆಟ್ಟುಗಳನ್ನು ಕೊಡು, ಒಳ್ಳೇ ಹುರುಪಿನಿಂದ ಸೇದುವೆನು.” ಎಂದು ರೋಗರಹಿತನ ದನಿ ತೆಗೆದು ಗಂಟೆ ಹೊಡೆದಂತೆ ನುಡಿದನು.
“ಸರಲಕ್ಷ, ಹೀಗೇಕೆ ಮಾಡುವಿ? ಎದ್ದು ಕೂಡಬೇಡ, ನಿನ್ನ ಜೀವಕ್ಕೆ ಈಗಲೇ ಆಪಾಯವಾದೀತು” ಎಂದು ಮುದಲಿಯು ತನ್ನ ಕುರ್ಚಿಯಿಂದೆದ್ದು ಸರಲಾಕ್ಷನ ಹಾಸಿಗೆಯ ಸಮೀಪಕ್ಕೆ ಬಂದನು.
“ದೂರದಲ್ಲಿರು ನೀಚನೆ, ನನ್ನ ಮೈ ಮೇಲೆ ಬಂದರೆ ನಿನ್ನನ್ನು ಕಾಲಿಲೊದ್ದು ಕೆಡಹುವೆನು, ವೈದ್ಯ ವಾತಾತ್ಮಜರೆ, ಅಡಗಿಕೊಂಡ ಮೆಟ್ಟು ಬಿಟ್ಟು ಹೊರಗೆ ಬನ್ನಿರಿ” ಎಂದು ಹುಲಿಮೀಸೆಯು ಹುರುಪಿನಿಂದ ನುಡಿದನು.
ನಾನು ಹೊರಬಿದ್ದು ಬಂದೆನು. ಅಷ್ಟರಲ್ಲಿ ಬಾಗಿಲವನ್ನು ತೆರೆದು ಗೋವಿಂದರಾವ ಪೋಲೀಸ್ ಇನ್ಸ್ಪೆಕ್ಟರರೂ ಬಂದರು. ಮುದಲಿಯು ಓಡಿ ಹೊಗಬೇಕೆಂದು ಪ್ರಯತ್ನ ಮಾಡುವಷ್ಟರಲ್ಲಿಯೇ ಪೋಲಿಸರು ಅವನನ್ನು ಹಿಡಿದು ಚತುರ್ಭುಜನನ್ನಾಗಿ ಮಾಡಿದರು.
ಕಲ್ಯಾಣಸುಂದರನು ಮನೆ ಆದ ರುವಂತೆ ಗದ್ದರಿಸುತ್ತೆ “ಯಾರು ನೀವು? ನನಗೆ ಬೇಡಿಯನ್ನು ಹಾಕಲಿಕ್ಕೆ ನಿಮಗೇನು ಅಧಿಕಾರ? ನನ್ನ ಅಪರಾಧವೇನು?” ಎಂದು ಕೇಳಿದನು.
ಸರಲಾಕ್ಷನು ಹಾಸಿಗೆಯಿಂದೆದ್ದು ನಿಂತು, “ಕಲ್ಯಾಣಸುಂದರಂ, ನಿನ್ನ ಅಪರಾಧವೇನೆಂದು ಕೇಳುವಿಯಾ? ಇನ್‌ಸ್ಪೆಕ್ಟರ ಸಾಹೇಬರಿಗೆ ಈಗಲೇ ಹೇಳುವೆನು” ಎಂದು ನುಡಿದು ಇನ್ಸ್‍ಪೆಕ್ಟರರನ್ನು ಕುರಿತು,
“ಗೋವಿಂದರಾವಜಿ, ಈ ನರಾಧಮನ ಅಣ್ಣನಾದ ಸೋಮಸುಂದರನು ವ್ಯಾಪಾರದಲ್ಲಿ ಘನತೆಯನ್ನು ಹೊಂದಿ ಮೂರುನಾಲ್ಕು ಲಕ್ಷ ರೂಪಾಯಿಗಳನ್ನು ಸಂಪಾದಿಸಿ ಸತ್ತು ಹೋದನು. ಅವನು ಸತ್ತ ಬಳಿಕ ಅವನ ಮಗನಾದ ವಿಜಯರಂಗನು ಈ ಪಾಪಿಯ ಆಶ್ರಯಕ್ಕೆ ಬಂದನು. ಈ ಕೊಲೆಗೆಡುಕನು ಹೇಗಾದರೂ ಮಾಡಿ ಆ ಮಗುವನ್ನು ಕೊಂದು ಸೋಮಸುಂದರನ ಹಣವನ್ನೆಲ್ಲ ಅಪಹರಿಸಬೇಕೆಂಬ ದುರ್ಬುದ್ಧಿಯಿಂದ ‘ಕೂಲೀ’ ಜ್ವರದ ಕ್ರಿಮಿಗಳನ್ನು ತರಿಸಿ ಅವುಗಳ ರಸಿಕೆಯನ್ನು ವಿಜಯರಂಗನ ಮೈಗೆ ತಗಲಿಸಿದನು. ಪಾಪ, ಆ ಕೂಸು ಭಯಂಕರವಾದ ಆ ಜ್ವರದ ಬಾಧೆಗೆ ಈಡಾಗಿ ಮೂರೇ ದಿವಸಗಳಲ್ಲಿ ಮಡಿದುಹೋಯಿತು. ಕಲ್ಯಾಣ ಸುಂದರನು ತನ್ನ ಪಾಪ ಕೃತ್ಯವನ್ನು ಈಗಲೇ ನನ್ನ ಮುಂದೆ ಒಪ್ಪಿಕೊಂಡಿದ್ದನ್ನು ಈ ವಾತಾತ್ಮಜ ವೈದ್ಯರು ಕೇಳಿದ್ದಾರೆ. ಇದೇ ವಿಷದ ಕರಡಿಗೆಯು” ಎಂದು ಆ ಜಂತದ ಕರಡಿಗೆಯನ್ನು ಪೊಲೀಸರ ಸ್ವಾಧೀನ ಮಾಡಿದನು. ಪೋಲೀಸರು ಆರೋಪಿಯನ್ನು ಜಗ್ಗಿಕೊಂಡು ನಡೆದರು.
ಇನ್ಸ್‍ಪೆಕ್ಟರ ಗೋವಿಂದರಾಯರೂ ನಾನು ಕುಳಿತುಕೊಂಡು ಇದೇನು ಚಮತ್ಕಾರವೆಂದು ಸರಲಾಕ್ಷನನ್ನು ಕೇಳಿದೆವು.
“ಇದೊಂದು ಶೋಧಕನ ಜಾಣ್ಮೆಯ ಚಮತ್ಕಾರವು” ಎಂದು ನುಡಿದು ಸರಲಾಕ್ಷನು ನಕ್ಕನು.
“ನಿಮ್ಮ ಬೇನೆ ಸುಳ್ಳು!” ಎಂದು ನಾನು ಚಕಿತನಾಗಿ ಕೇಳಿದೆನು.
“ಎಲ್ಲಿಯ ಬೇನೆ ಏನು ಕಥೆ, ಬೇನೆಯ ಸೋಗು ಹಾಕಿಕೊಂಡಿದ್ದೆನು. ಮೂರು ದಿವಸ ಮಾತ್ರ ವಿಷ್ಣು ಪಂಚಕವನ್ನು ಮಾಡಿ ಮೈಯಲ್ಲಿ ನಿತ್ರಾಣವನ್ನು ತಂದುಕೊಂಡು ಮೋರೆಗೆ ವ್ಯಾಸಿಲಿನ್ ಎಣ್ಣೆಯನ್ನು ಸವರಿ ತುಟಿಗೆ ಮೇಣವನ್ನು ಹಚ್ಚಿಕೊಂಡು ಸಜ್ಜನಾಗಿ ಕೂತಿದ್ದೆನು. ಕಲ್ಯಾಣನಿಗೆ ಸಂಶಯ ಬರಲೇ ಇಲ್ಲ, ಹೇಗೆ ಬರುವದು?” ಎಂದು ಸರಲಾಕ್ಷನು ಹೇಳಿದನು.
ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಗೆ ಈ ವರ್ತಮಾನವು ತಿಳಿದ ಕೂಡಲೆ ಆನಂದದಿಂದ ಕುಣಿದಾಡಿದಳು. “ರಾಯರೆ, ನೀವು ಇಷ್ಟು ಕೃತ್ರಿಮರಾಗಿರುವಿರಾ?” ಎಂದು ಬಾಯ ಮೇಲೆ ಕೈ ಇಟ್ಟುಕೊಂಡಳು.
“ಹೋಗಮ್ಮಾ, ಹಸಿವೆಯಾಗಿದೆ, ವಿಲಕ್ಷಣವಾದ ಹಸಿವೆಯಾಗಿದೆ. ಸಮೀಚೀನವಾದ ಉಪಹಾರವನ್ನು ನೀನೀಗಲೆ ತರದಿದ್ದರೆ ನಿನ್ನನ್ನೇ ಮುರಿದು ತಿನ್ನುವೆನು” ಎಂದು ಸರಲಾಕ್ಷನು ನಗುತ್ತೆ ನುಡಿದನು.
ಲೀಲಾಬಾಯಿಯು ಮೂರು ಬೆಳ್ಳಿಯ ತಾಟುಗಳಲ್ಲಿ ಘಮಘಮಿಸುವ ಪಕ್ವಾನ್ನಗಳನ್ನೂ ಹಾಲು ಕಾಫಿಗಳನ್ನೂ ಅವರೆಲ್ಲರ ಮುಂದಿರಿಸಿ ತಿನ್ನಿತಿನ್ನಿರೆಂದು ಆಗ್ರಹ ಮಾಡುತ್ತಲೂ ಸಂತೋಷದಿಂದ ನಗುತ್ತಲೂ ಅಲ್ಲಿಯೇ ನಿಂತಿದ್ದಳು.
*****

















