“ಜಯಂತಾ, ನೀನು ಪಾಸಾಗಿಯೇ ತೀರುವಿ; ಮುಂದೇನು ಮಾಡ ಬೇಕೆಂದಿರುವಿ ? ನಿನ್ನ ದೊಡ್ಡಣ್ಣನಂತೂ ಚಳವಳಿಯಲ್ಲಿ ಸೇರಿಕೊಂಡ. ನಿನ್ನ ಮನಸ್ಸಿನಲ್ಲೇನಿದೆ ?” ಎಂದು ಯಜಮಾನರು ವಿಚಾರಿಸಿದರು.

“ಚಳವಳಿಯ ಭರವು ಕಡಿಮೆಯಾಗಿದೆ. ನನ್ನ ಲಕ್ಷವು ಅತ್ತ ಕಡೆಗೆ ವಿಶೇಷವಿರುವದಿಲ್ಲ. ನಾನಂತೂ ಸಣ್ಣ ಹುಡುಗ, ಎಲ್ಲಿಗೆ ಹೋಗುವದಿದೆ ? ಆದರೆ ನನಗೆ ಬಹಳಷ್ಟು ಕಲಿಯಬೇಕೆಂದಿದೆ.”

“ಕಾಲೇಜಿನ ವೆಚ್ಚವನ್ನು ಹೇಗೆ ಪೂರೈಸುವದು?”

“ಅಪ್ಪಾ, ನನಗೆ ನಾದಾರಿ (….) ಸಿಗಬಹುದು ನನಗೆ ಸಾಕಷ್ಟು ಗುಣಗಳು ದೊರೆಯುವವು. ಕಾಲೇಜಿನಲ್ಲಿ ಶಿಷ್ಯ ವೃತ್ತಿಯೂ ಸಿಕ್ಕರೂ ಸಿಕ್ಕಬಹುದು. ನನ್ನ ಕಾಲೇಜಿನ ವೆಚ್ಚವನ್ನು ನಿಮ್ಮ ಮೇಲೆ ಬೀಳಗೊಡುವದಿಲ್ಲ”

“ನಿನ್ನ ಶಿಕ್ಷಣದ ವೆಚ್ಚವು ನನ್ನ ತಲೆಯ ಮೇಲೆ ಬೀಳಲಾರದೆಂದು ಗ್ರಹಿಸಿದರೂ ನಿನ್ನಿಂದ ಮನೆತನ ಸಾಗಿಸಲು ಯಾವ ರೀತಿಯಿಂದಲೂ ನೆರವು ದೊರೆಯಲಾರದು. ನಾನೊಬ್ಬನೇ ಎಷ್ಟೆಂತು ದುಡಿಯಲಿ? ನನಗೆ ದುಡಿದು ಸಾಕಾಗಿ ಹೋಗಿದೆ. ಸರಕಾರಿಯ ಕೆಲಸ; ಅಲ್ಲದೆ ಮುಂಜಾನೆ ಖಾಸಗೀ ನೌಕರಿ. ತಿಂಗಳ ಕೊನೆಗೆ ಗಳಿಕೆ-ಬಳಿಕೆಗಳು ಬಾಯಗೂಡುಬೇಕಲ್ಲವೇ ? ಮನೆಯಲ್ಲಿ ನೀವು ನಾಲ್ಕೈದು ಜನ ಅಣ್ಣ ತಮ್ಮಂದಿರು. ದೊಡ್ಡವನು ದೇಶ ಸೇವೆಗೆ ತೆರಳಿದನು. ಬಿ. ಎ. ಆಗಿ ನೆರವಾದಾನು ಎಂದು ಆಶಾಭರಿತನಾಗಿದ್ದೆ ನಾನು. ಆದರೆ ಮನೆಯಲ್ಲಿ ಹೇಳದೆ ಕೇಳದೆ ಅವನು ಹೋಗಿಬಿಟ್ಟನು; ಹೋಗಲಿ, ದೇಶಕ್ಕೋಸ್ಕರ ಯಾರಾದರೂ ಒಬ್ಬರು ಹೋಗಲೇಬೇಕು. ಅದರೆ ನಿಮ್ಮೆಲ್ಲರನ್ನು ನಾನು ಹೇಗೆ ಸಂರಕ್ಷಿಸಲಿ ? ಜಯಂತಾ, ನೀನು ಕೆಲಸವನ್ನು ಹಿಡಿ. ರೇಶನಿಂಗ ಖಾತೆಯಲ್ಲಿ ಸಿಗಬಹುದು; ನಾನು ಹೇಳಿಟ್ಟಿದ್ದೇನೆ.”

“ನನಗಿನ್ನೂ ಹದಿನೈದು ವರುಷ; ನನಗಾರು ಕೆಲಸ ಕೊಡುವವರು!”

“ಅಲ್ಲಿ ವಯಸ್ಸಿನ ನಿರ್‍ಬಂಧವಿಲ್ಲ. ಮ್ಯಾಟ್ರಿಕ್ ಪಾಸಾಗಿದ್ದರೆ ಸಾಕು. ಎಳೆಯಳೇ ಹುಡುಗಿಯರೂ ಅಲ್ಲಿ ಕೆಲಸ ಮಾಡುತ್ತಿರುತ್ತಾರೆ.”

ಅಷ್ಟರಲ್ಲಿ ಜಯಂತನ ತಂಗಿಯು ಅಲ್ಲಿಗೆ ಬಂದು ಅಪ್ಪಾ, ನಾನು ನೌಕರಿಯನ್ನು ಮಾಡಲೇ? ಜಯಂತ ಕಲಿಯಲಿ ಅವನು ಬುದ್ಧಿವಂತನಾಗಿದ್ದಾನೆ. ನನಗೆಲ್ಲಿಯಾದರೂ ಒಂದು ಕೆಲಸ ಕೊಡಿಸಿಬಿಡು.”

“ನೀನು ಮ್ಯಾಟ್ರಿಕ್ ನಾಪಾಸಿರುವಿ. ಮೇಲಾಗಿ ನಿನ್ನ ಪ್ರಕೃತಿಯು ಸರಿಯಾಗಿ ಇರುವದೇ ಇಲ್ಲ.”

“ನೌಕರಿ ಮಾಡಿದರೆ ಸುಧಾರಿಸಬಹುದು. ನನ್ನಿಂದ ಏನಾದರೂ ಒಂದಿಷ್ಟು ಉಪಯೋಗವಾಯಿತಲ್ಲ ಎಂಬ ಸಮಾಧಾನವೂ ಎನಿಸಬಹುದು.”

“ಬೇಡ, ಗಂಗೂ, ನೀನು ನೌಕರಿ ಮಾಡಬೇಡ, ನಮ್ಮ ಅಣ್ಣ ತಮ್ಮಂದಿರಿಗೆ ನೀನೊಬ್ಬಳೇ ತಂಗಿಯಾಗಿರುವಿ. ನೀನು ಮೊದಲು ನಿನ್ನ ಪ್ರಕೃತಿಯನ್ನು ಸುಧಾರಿಸಿಕೊಂಡು ಸರಿಯಾಗು. ನಿನ್ನ ತೂಕವು ಹೆಚ್ಚಾಗಲಿ, ನಾನು ನೌಕರಿ ಮಾಡುತ್ತೇನೆ ಮುಂಜಾನೆ ಕಾಲೇಜಿಗೆ ಹೋಗುತ್ತೇನೆ ಸಾವಿರಾರು ಹುಡುಗರು ಈ ರೀತಿ ಮಾಡುತ್ತಿದ್ದಾರೆ?”

“ಆದರೆ ನೀನು ಅಶಕ್ತನಾಗಿರುವಿ; ನಿನ್ನಿಂದ ಇನ್ನು ಸಹಿಸುವದಾಗುವದೋ?”

“ಆಗದೇನು? ಮನಸಿನಲ್ಲಿ ಬಂದರೆ ಎಲ್ಲವೂ ಆಗುವದು”

ಮುಂದೆ ಜಯಂತನ ಪರೀಕ್ಷೆಯ ಫಲಿತಾಂಶ ಹೊರಬಿದ್ದಿತು. ಜಯಂತ ಉತ್ತೀರ್‍ಣನಾಗಿದ್ದ. ಅವನಿಗೆ ನೂರಕ್ಕೆ ೭ಂ ಗುಣಗಳು ದೊರೆತಿದ್ದವು. ಯಾವುದೇ ಕಾಲೇಜದಲ್ಲಾದರೂ ಅವನಿಗೆ ಶಿಷ್ಯ ವೃತ್ತಿ ದೊರಕ ಬಹುದಾಗಿತ್ತು. ಅವನು ಕಾಲೇಜಿಗೆ ಹೆಸರನ್ನು ಹಚ್ಚಿಸಿದನು. ಮುಂಜಾನೆ ಕಾಲೇಜು, ಮಧ್ಯಾಹ್ನ ನೌಕರಿ ಮಾಡುವವನಿದ್ದ. ಹದಿನೈದೇ ವಯಸ್ಸಿನ ಜಯಂತನು ತಾಸುಗಟ್ಟಲೆ ರೇಶನಿಂಗದ ಕೆಲಸವನ್ನು ಮಾಡಿ ಅವನು ದಣಿದು ಹೆಣವಾಗುತ್ತಿದ್ದನು. ಶರೀರವು ಬೆಳೆಯುವ ಕಾಲವದು; ಆದರೆ ಇವನು ಸವಿಯುತ್ತ ಸಾಗಿದ್ದನು. ಮಾಡಬೇಕೇನು?

ಜಯಂತನು ಮನೆಯಲ್ಲಿಯೂ ತನ್ನ ತಾಯಿಗೆ ಮನೆಗೆಲಸದಲ್ಲಿ ನೆರವಾಗುತ್ತಿದ್ದನು. ರವಿವಾರ ಮನೆ ಸಾರಿಸುವನು. ಉಳಿದ ಅಣ್ಣ ತಮ್ಮಂದಿರ ಬಟ್ಟೆ ಒಗೆಯುತ್ತಿದ್ದನು. ಅವನಿಗೆ ಒಂದು ಅರೆ ಕ್ಷಣವಾದರೂ ವಿಶ್ರಾಂತಿ ಇರಲೆ ಇಲ್ಲ. ಮನೆಯಲ್ಲಿ ವಿದ್ಯುತ್ ದೀಪವಿರಲಿಲ್ಲ. ಚಿಮಣಿ ಎಣ್ಣೆ ಯು ದೊರೆಯುತಿರಲಿಲ್ಲ. ಜಯಂತನು ಅಭ್ಯಾಸ ಮಾಡಲು ತನ್ನ ಸ್ನೇಹಿತನೊಬ್ಬನ ಮನೆಗೆ ರಾತ್ರಿಯ ಕಾಲಕ್ಕೆ ಹೋಗುತ್ತಿದ್ದನು.

ಕಾಲೇಜ ಬಿಟ್ಟ ನಂತರ ಅವನು ಈಗ ಮನೆಯ ಕಡೆಗೆ ಬರುವದೇ ಇಲ್ಲ. ಅಲ್ಲಿಯೇ ಎಲ್ಲಿಯಾದರೂ ರೈಸ್‌ಪ್ಲೇಟ್ ( ……. ) ತೆಗೆದುಕೊಂಡು ತಿಂದು ನೌಕರಿಗಾಗಿ ಹೋಗುತ್ತಿದ್ದನು. ಆದರೆ ಜಯಂತನು ಮಾತ್ರ ಅಶಕ್ತನಾಗುತ್ತ ಸಾಗಿದ್ದನು.

“ಜಯಂತಾ, ನಿನ್ನ ಮೈಯಲ್ಲಿ ಚೆನ್ನಾಗಿಲ್ಲವೇ?” ಎಂದು ಗಂಗೂ ವಿಚಾರಿಸಿದಳು.

“ಯಾಕೆ ನನಗೇನಾಗಿದೆ? ನೀನೇ ನಿನ್ನ ಪ್ರಕೃತಿಯನ್ನು ಒಪ್ಪಿಸಿಕೋ ಬೇಕಾದರೆ ನಿನಗೆ ಚುಚ್ಚು ಮದ್ದಿನ ಅವಶ್ಯಕತೆ ಇದೆ. ಅದಕ್ಕಾಗಿ ನಾನು ನಿನಗೆ ಹಣ ಸಂಗ್ರಹಿಸಿಟ್ಟಿದ್ದೇನೆ. ನೀನು ನಮ್ಮ ಮನೆತನದಲ್ಲಿ ಒಬ್ಬಳೇ ಹೆಣ್ಣು ಮಗಳು ನಾನು ದೇವರ ಕಡೆ ಹೋದರೂ ಉಳಿದ ಅಣ್ಣಂದಿರಿರುತ್ತಾರೆ. ಅದರೆ ನೀನು ಹೋದರೆ ಮಾತ್ರ ಇನ್ನೊಬ್ಬ ತಂಗಿ ಎಲ್ಲಿದ್ದಾಳೆ ?

“ಹೀಗೆ ಮಾತನಾಡಬೇಡ, ನೀನು ಕಲಿ, ನೀನು ಜಾಣನಿರುವಿ. ನಿಜವಾಗಿಯೇ ನೀನು ದೊಡ್ಡವನಾಗುವಿ”

“ನನಗೆ ಬಹಳಷ್ಟು ಕಲಿಯಬೇಕೆಂದೆನಿಸುತ್ತದೆ.”

“ಬೇಕಾದಷ್ಟು ಕಲಿ; ಪ್ರಕೃತಿಯನ್ನು ಮಾತ್ರ ಜಪ್ಪಿಸು.”

ಗಂಗೂ ಚುಚ್ಚು ಮದ್ದು ತೆಗೆದುಕೊಳ್ಳಲಾರಂಭಿಸಿದಳು. ಜಯಂತನ ಮಾತನ್ನು ಮುರಿಯುವದು ಅವಳಿಗೆ ಬೇಡವಾಗಿತ್ತು. ಆದರೆ ಜಯಂತ ಮಾತ್ರ ದಿನ ದಿನಕ್ಕೆ ಒಣಗುತ್ತ ನಡೆದಿದ್ದ.

“ಜಯಂತಾ, ನಿನಗೇನಾಗಿದೆ?” ಎಂದು ತಾಯಿ ವಿಚಾರಿಸಿದಳು.

“ಪರೀಕ್ಷೆ ಸಮೀಪಿಸುತ್ತಿದೆ. ರಾತ್ರಿ ಅಭ್ಯಾಸ ಮಾಡುತ್ತೇನೆ. ಆದ್ದರಿಂದ ನಾನು ಹೀಗೆ ಕಾಣುತ್ತಿರುವೆ. ಶರೀರವು ಕುಂದಿದರೂ ನನ್ನ ಮನಸ್ಸು ಉತ್ಸಾಹಭರಿತವಾಗಿದೆ. ಪರೀಕ್ಷೆ ಮುಗಿಯಿತೆಂದರೆ ಮುಂದೆ ಮೂರು ತಿಂಗಳು ಅಭ್ಯಾಸವಿಲ್ಲ. ಆಗ ನನ್ನ ಪ್ರಕೃತಿ ಸುಧಾರಿಸುವದು. ಅವ್ವಾ, ಎಷ್ಟೂ ಕಾಳಜಿ ಮಾಡಬೇಡ”

“ಅವನೋ ಅಲ್ಲಿ ಸೆರೆಮನೆಯಲ್ಲಿ; ನೀನೋ ಇಲ್ಲಿ ಈ ಅವಸ್ಥೆಯಲ್ಲಿ”

“ಅವ್ವಾ, ದೇಶದ ತುಂಬೆಲ್ಲ ಈ ಅವಸ್ಥೆಯಿದೆ ಅದರಲ್ಲಿಯೇ ನಾವು ಸುಖದಿಂದಿಲ್ಲವೇ?”

“ಹುಡುಗಾ, ನೀನು ಬಹಳ ಬುದ್ದಿವಂತನಿರುವಿಯಪ್ಪಾ”

ತಾಯಿಯ ಕಣ್ಣುಗಳು ನೀರಿನಿಂದ ತುಂಬಿದವು. ಜಯಂತನು ಪುಸ್ತಕ ತೆಗೆದುಕೊಂಡು ಹೊರಬಿದ್ದನು. ಪರೀಕ್ಷೆಯು ಕಾಲಲ್ಲಿಯೇ ಬಂದಿತ್ತು. ಗಂಗೂ, ಜಯಂತರು ಅಂದು ತಿರುಗಾಡಲು ಹೋಗಿದ್ದರು.

“ಗಂಗೂ, ಈಗ ನಿನಗೆ ಆರಾಮವೆನಿಸುವದಿಲ್ಲವೇ?”

“ನನಗೆ ನಿನ್ನದೇ ಚಿಂತೆಯಾಗಿದೆ.”

ನೀನು ಹುಚ್ಚಿಯಿರುವಿ! ನನಗೆ ಇತ್ತೀಚೆ ಬಹಳ ಆನಂದವೆನಿಸುತ್ತಿರುತ್ತದೆ. ಕಾಲೇಜಿಗೆ ಹೋಗುತ್ತಿರುತ್ತೇನೆ. ಅದರಿಂದ ಈ ವರ್‍ಷ ಪುಕ್ಕಟೆ ಹೋಗುವದಿಲ್ಲ. ನೌಕರಿಯನ್ನು ಮಾಡುತ್ತಿರುವೆನಾದ್ದರಿಂದ ಮನೆಗೆ ನೆರವಾದಂತಾಗುತ್ತದೆ. ಅಂದು ನಾನು ಅವ್ವನಿಗೆ ಸೀರೆಯನ್ನು ತೆಗೆದುಕೊಂಡು ಬಂದೆ ಅವಳಿಗೆ ಅಂದದೆಷ್ಟು ಆನಂದವೆನಿಸಿತು! ತಂದೆಗೂ ಅಂದು ಆನಂದವೆನಿಸಿರಲು ಸಾಕು. ಸಣ್ಣ ಸಣ್ಣವರೂ ಕೂಡ ಹಳ್ಳಿ ಹಳ್ಳಿಗಳಿಂದ ತಂತಮ್ಮ ತಾಯಿ ತಂದೆಗಳಿಗೆ ನೆರವಾಗುತ್ತಿರುತ್ತಾರೆ. ಏಳೆಂಟು ವರುಷದ ಹುಡುಗನು ದನ ಕಾಯುತ್ತಾನೆ. ಮನೆಗೆ ನೆರವಾಗುತ್ತಾನೆ. ಬಿಳಿಛಾಯೆಯ ಹುಡುಗರು ಮನೆಗೆ ಭಾರವಾಗುತ್ತಾರೆ. ನಾವೂ ಏನಾದರೂ ಮಾಡಬೇಕು. ವರ್‍ತಮಾನ ಪತ್ರಗಳನ್ನು ಮಾರಬೇಕು. ಇಲ್ಲವೆ ಎರಡನೆಯ ಯಾವುದಾದರೂ ಉದ್ಯೋಗ ಮಾಡಬೇಕು. ಬಿಳಿ ಛಾಯೆಯುಳ್ಳ ಮನೆತನದಲ್ಲಿ ಒಬ್ಬನು ತಂದು ಬಂದು ಹಾಕುವವನು; ಹತ್ತಾರು ಜನರು ಕೂತು ತಿನ್ನುವವರು! ಇಂಥ ಪರಿಸ್ಥಿತಿ ಬದಲಾಗಲೇಬೇಕು.

“ಜಯಂತ್ತಾ, ನನಗೊಂದು ಕೈರಾಟಿಯನ್ನು ತಂದುಕೊಡು. ನಾನು ಮನೆಯಲ್ಲಿ ಹೊಲಿಗೆಯ ಕೆಲಸವನ್ನು ಮಾಡುತ್ತ ಹೋಗುವೆನು.”

“ಮೊದಲು ನಿನ್ನ ಆರೋಗ್ಯ ಸುಧಾರಿಸಲಿ. ನಿನ್ನ ಮುಂದಿನ ಹುಟ್ಟು ಹಬ್ಬದ ಕಾಣಿಕೆಯೆಂದು ಅದನ್ನು ನಿನಗೆ ತಂದು ಕೊಡುವೆನು.”

ಇಬ್ಬರೂ ಮನೆಗೆ ಮರಳಿದರು. ಜಯಂತನ ಪರೀಕ್ಷೆ ಮುಗಿಯಿತು. ಪರೀಕ್ಷೆಗಾಗಿ ಅವನು ನಾಲ್ಕು ದಿನ ರಜೆಯನ್ನು ಪಡೆದುಕೊಂಡ. ಪ್ರಶ್ನೆ ಪತ್ರಿಕೆಗಳನ್ನು ಚನ್ನಾಗಿಯೇ ಬಿಡಿಸಿದ್ದ. ಇಂದು ಕೊನೆಯ ಪ್ರಶ್ನೆ ಪತ್ರಿಕೆಯ ದಿನ. ಮನೆಯಲ್ಲಿ ತಂಗಿಯು ದಾರಿಯನ್ನು ಕಾಯುತ್ತಲಿದ್ದಳು-ಇನ್ನೂ ಜಯಂತನು ಏಕೆ ಬಂದಿಲ್ಲೆಂದು.

ಜಯಂತನು ಪ್ರಶ್ನೆ ಪತ್ರಿಕೆ ಬರೆದು ಎದ್ದನು. ಎಲ್ಲ ಹುಡುಗರೂ ಹೊರಟರು; ಆದರೆ ಜಯಂತನು ಮೂರ್‍ಛಿತನಾಗಿ ಬಿದ್ದು ಬಿಟ್ಟನು. ಆವನ ಗೆಳೆಯರು ಓಡಿಬಂದರು. ಅವರು ಅವನನ್ನು ಎಬ್ಬಿಸಿ, ಒಂದು ಟ್ಯಾಕ್ಸಿಯನ್ನು ಮಾಡಿ ಮನೆಗೆ ಕರೆದುಕೊಂಡು ಬಂದರು.

“ಏನಾಯಿತು?” ಎಂದು ಗಾಬರಿಯಾಗಿ ಗಂಗೂ ಅವರನ್ನು ವಿಚಾರಿಸಿದಳು.

“ಮೂರ್‍ಛೆ ಬಂದು ಬಿದ್ದನು” ಎಂದು ಮಿತ್ರರು ಹೇಳಿದರು.

ಅವನ ಮಿತ್ರರೆಲ್ಲರೂ ಹೊರಟುಹೋದರು. ಗಂಗೂ ಅಣ್ಣನ ಹತ್ತಿರ ಕುಳಿತಳು. ಅವಳ ಕಣ್ಣು ನೀರಿನಿಂದ ತುಂಬಿದ್ದವು. ತಂದೆಯು ಕೆಲಸಕ್ಕೆ ಹೋಗಿದ್ದನು. ಅಣ್ಣ ತಮ್ಮಂದಿರು ಇನ್ನೂ ಶಾಲೆಯಿಂದ ಮರಳಿರಲಿಲ್ಲ. ತಾಯಿಯು ಕಾಳು ತೆಗೆದುಕೊಂಡು ಗಿರಣಿಗೆ ಹೋಗಿದ್ದಳು. ಹೀಗಾಗಿ ಗಂಗೂ ಒಬ್ಬಳೇ ಇದ್ದಳು.

“ಜಯಂತ, ಜಯಂತ?” ಎಂದು ಅವಳು ಕೂಗಿದಳು. ಕಣ್ಣು ನೀರಿನಿಂದ ತುಂಬಿದ್ದವು. ಸ್ವಲ್ಪ ಹೊತ್ತಿನಲ್ಲೇ ತಾಯಿ ಬಂದಳು.

“ಜಯಂತ” ಎಂದು ತಾಯಿ ಕೂಗಿದಳು.

ಜಯಂತನು ಶುದ್ಧಿಯ ಮೇಲೆ ಬಂದನು; ಕಣ್ಣು ತೆರೆದನು. ಚಟಕ್ಕನೆ ಎದ್ದು ಕುಳಿತನು. ತಾಯಿಯನ್ನು ತಬ್ಬಿಕೊಂಡನು.

“ಮೃತ್ಯುವು ನನ್ನನ್ನು ಒಯ್ಯಲಾರನು” ಎಂದು ಅವನೆಂದನು.

“ಮಲಗಿಕೊಂಡುಬಿಡು” ಎಂದಳು ತಾಯಿ.

“ನಿನ್ನ ತೊಡೆಯಮೇಲೆ ಮಲಗುತ್ತೇನೆ.”

“ಇಡು ತಲೆಯನ್ನು.”

“ಅವ್ವಾ, ಡಾಕ್ಟರರನ್ನು ಕರತರಲಾ?” ಎಂದು ಗಂಗೂ ವಿಚಾರಿಸಿದಳು.

“ಗಂಗೂ, ಡಾಕ್ಟರರು ಏತಕ್ಕೆ? ಬಡವರಿಗೇಕೆ ಡಾಕ್ಟರರು? ಡಾಕ್ಟರರಿಗೆ ಬಡಿಯುವ ಹಣವೇ ಮನೆಯ ಉಪಯೋಗಕ್ಕೆ ಬೀಳುವದು ಎಂದು ಜಯಂತನೆಂದನು.

“ಡಾಕ್ಟರರನ್ನು ಕರೆದುಕೊಂಡು ಬರಲಿ” ಎಂದು ತಾಯಿಯು ತಿಳಿ ಹೇಳಿದಳು. ಗಂಗೂ ತೆರಳಿದಳು. ಡಾಕ್ಟರರು ಬಂದು ಅವನ ಪ್ರಕೃತಿಯನ್ನು ಪರೀಕ್ಷಿಸಿದರು.

“ದಣಿವು ಬಹಳಾಗಿದೆ. ನಾನು ಚುಚ್ಚಿ ಔಷಧ ಹಾಕುತ್ತೇನೆ. ಆರಾಮ ಎನಿಸಬಹುದು. ಹೊಟ್ಟೆಯಲ್ಲೂ ತೆಗೆದುಕೊಳ್ಳಲು ಔಷಧ ಕೊಡುತ್ತೇನೆ. ನಾಲ್ಕು ತಾಸಿಗೊಮ್ಮೆ ಕೊಡುತ್ತ ಹೋಗಿರಿ, ನಿದ್ದೆ ಹತ್ತಿದರೆ ಮಾತ್ರ ಎಬ್ಬಿಸಬೇಡಿರಿ, ವಿಶ್ರಾಂತಿ ಬೇಕಾಗಿದೆ. ಮಿದುಳು ಬಹಳ ದಣಿದಿದೆ” ಎಂದು ಡಾಕ್ಟರರು ಹೇಳಿದರು. ಇಂಜೆಕ್ಷನ್ ಕೊಟ್ಟು ಡಾಕ್ಟರರು ತೆರಳಿದರು. ಅವರೊಡನೆ ಗಂಗೂ ಹೋಗಿ ಔಷಧವನ್ನು ತೆಗೆದುಕೊಂಡು ಬಂದಳು.

“ಜಯಂತಾ, ಬಾಯಿ ತೆಗೆ” ಎಂದು ಗಂಗೂ ಹೇಳಿದಳು.

ಅವನು ಬಾಯಿ ತೆರೆದನು. ಔಷಧ ಕುಡಿಸಿದಳು. ಅವನು ಮಲಗಿ ಬಿಟ್ಟನು. ಸಾಯಂಕಾಲದ ಹೊತ್ತಾಯಿತು. ತಾಯಿ ದೇವದರ್‍ಶನಾರ್‍ಥವಾಗಿ ಹೋಗಿದ್ದಳು. ತಂದೆ ಇನ್ನೂ ಬಂದಿರಲಿಲ್ಲ. ತಮ್ಮಂದಿರು ಆಟವಾಡಲು ಹೋಗಿದ್ದರು.

ಮನೆಯಲ್ಲಿ ಗಂಗೂ ಮತ್ತು ಜಯಂತ ಇಬ್ಬರೇ ಇದ್ದರು.

“ಗಂಗೂತಾಯಿ, ನನ್ನ ಜೇಬಿನಲ್ಲಿ ಹಣವಿದೆ. ನೀನು ಇಂಜೆಕ್ಷನ್ ತೆಗೆದುಕೋ, ಅವ್ವನಿಗೆ ಉಂಗುರದ ಆಶೆ ಇತ್ತು. ನೀನೂ ಹಾಗೆ ಯಾವಾಗಲೋ ಅಂದೂ ತೋರಿಸಿದ್ದೆ. ಉಂಗುರದ ಸಲುವಾಗಿಯೂ ನಾನು ಹಣವನ್ನು ಕೂಡಿಹಾಕಿದ್ದೇನೆ. ನೀನು ಅವಳಿಗೊಂದು ಉಂಗುರವನ್ನು ತಂದು ಕೊಡು.”

ಮುಂದೆ ಅವನಿಂದ ಮಾತನಾಡುವದಾಗಲಿಲ್ಲ. ಅವನಿಗೆ ಶ್ರಮವಾಯಿತು. ಕಣ್ಮುಚ್ಚಿ ಬಿದ್ದು ಕೊಂಡನು. ಈಗ ಎಲ್ಲರೂ ಮನೆಗೆ ಬಂದಿದ್ದಾರೆ. ಜಯಂತನಿಗೆ ಆರಾಮಾಗಿದೆ ಎಂದು ಎಲ್ಲರಿಗೂ ಅನಿಸುತ್ತಿತ್ತು. ಊಟಗೀಟ ಮುಗಿಯಿತು.

“ನೀನು ತುಸು ಹಾಲು ಕುಡಿ?” ಎಂದು ತಾಯಿ ಹೇಳಿದಳು. ಕೊಡು, ನಿನ್ನ ಕೈಯಿಂದಲೇ ಕೊಡು” ಎಂದು ಜಯಂತನೆಂದನು. ತಮ್ಮಂದಿರು ಮಲಗಿಕೊಂಡರು. ತಂದೆ, ತಾಯಿ, ಗಂಗೂ ಕುಳಿತಿದ್ದರು.

“ನೀವೂ ಮಲಗಿಕೊಳ್ಳಿರಿ. ನಾನು ಅವನ ಹತ್ತಿರ ಕುಳಿತುಕೊಳ್ಳುತ್ತೇನೆ. ಹನ್ನೆರಡು ಹೊಡೆಯಿತೆಂದರೆ ನಾನು ಗಂಗೂನನ್ನು ಎಬ್ಬಿಸುತ್ತೇನೆ” ಎಂದು ತಂದೆ ಎಂದರು.

“ಎರಡು ಬಡಿಯಿತೆಂದರೆ ನನ್ನನ್ನು ಎಬ್ಬಿಸು. ನಾನು ಕುಳಿತುಕೊಳ್ಳುತ್ತೇನೆ” ಎಂದು ತಾಯಿ ಹೇಳಿದಳು.

“ನೀವೆಲ್ಲರೂ ಮಲಗಿಕೊಳ್ಳಿರಿ. ನನಗೀಗ ಆರಾಮೆನಿಸುತ್ತಿದೆ. ನೀವು ಹೆಗಲೆಲ್ಲ ದುಡಿದು ದಣಿದಿದ್ದೀರಿ. ಮೇಲೆ ಈ ಜಾಗರಣೆ ಬೇಡ. ಮಲಗಿ ಕೊಳ್ಳಿರಿ” ಎಂದು ಜಯಂತ ಹೇಳಿದನು.

“ಜಯಂತ, ಹಗಲೆಲ್ಲ ದುಡಿಯುವ ರೂಢಿಯೇ ನನಗೆ ಬಿದ್ದಿದೆ. ಎತ್ತನ್ನು ಗಾಣಕ್ಕೆ ಹೂಡದಿದ್ದರೆ ಮಾತ್ರ ಅದು ಬೇನೆ ಬೀಳುವದು. ಆದರೆ ನನ್ನೊಡನೆ ಚಿಕ್ಕ ವಯಸ್ಸಿನವನಾದ ನಿನ್ನನ್ನು ಗಾಣಕ್ಕೆ ಹೂಡಬೇಕಾಗಿ ಬಂದಿರುವದರಿಂದ ನನಗೆ ಬಹಳೇ ಖೇದವಾಗುತ್ತದೆ.” ಎಂದರು ತಂದೆ.

“ಖೇದವೆನಿಸಿಕೊಳ್ಳ ಬೇಡಿರಿ, ಕರ್‍ತವ್ಯವೆಂದು ಆನಂದದಿಂದ ಎಲ್ಲವನ್ನು ಮಾಡಬೇಕಾಗುವದು, ತಾಯಿ ಎಷ್ಟು ದುಡಿಯುತ್ತಿದ್ದಾಳೆ. ಬೀಸುವದನ್ನು ಮನೆಯಲ್ಲಿಯೇ ಮಾಡಿಕೊಳ್ಳುತ್ತಿದ್ದಾಳೆ. ಗಂಗೂನ ಮೈಯಲ್ಲಿ ಆರಾಮಿದ್ದರೆ ಅವಳಷ್ಟು ಆಕೆಗೆ ನೆರವಾಗುತ್ತಾಳೆ. ನೀವು ಎಲ್ಲರೂ ಮಲಗಿಕೊಳ್ಳಿರಿ.”

“ನೀನು ಮಾತನಾಡಿ ಆಯಾಸ ಮಾಡಿಕೊಳ್ಳಬೇಡ. ಸುಮ್ಮನೆ ಮಲಗು” ಎಂದು ತಂದೆ ಅವನ ತಲೆಯಮೇಲೆ ಕೈಯಾಡಿಸುತ್ತ ಹೇಳಿದರು.

ಜಯಂತನು ಶಾಂತರೀತಿಯಿಂದ ಕಣ್ಮುಚ್ಚಿ ಮಲಗಿಕೊಂಡನು. ತಾಯಿ, ಗಂಗೂ ಹಾಸಿಗೆಯಲ್ಲಿ ಬಿದ್ದುಕೊಂಡರು. ತಂದೆ ಜಯಂತನ ಹತ್ತಿರ ಕುಳಿತರು.

ಹನ್ನೆರಡು ಬಡಿಯುವ ಹೊತ್ತಾಗಿರಬೇಕು ಸಿನೇಮಾ ಬಿಟ್ಟು ಜನರು ಮನೆಯ ಕಡೆಗೆ ಹೊರಟಿರುವ ಸಮಯ. ಜಯಂತನು ಕಣ್ಣು ತೆರೆದನು.

“ಅಪ್ಪಾ, ನಾನು ನೌಕರಿ ಹಿಡಿದೆ. ಎಷ್ಟು ಒಳ್ಳೆಯ ಕೆಲಸವನ್ನು ಮಾಡಿದೆನಲ್ಲವೇ? ನಿಮ್ಮ ಚಿಂತೆಯನ್ನು ಒಂದಿಷ್ಟು ಕಡಿಮೆ ಮಾಡಿದೆ. ಗಂಗೂತಾಯಿಗೆ ಇಂಜೆಕ್ಷನ್ ತೆಗೆದುಕೊಳ್ಳಲು ಹಣ ಸಾಕಾಗುವಷ್ಟಿದೆ.”

“ಆಹುದು. ನಿನಗೆ ಗುಣವಾಗಲಿ. ನೀನು ಮೊದಲು ನೆಟ್ಟಗಾಗು.”

“ನನಗೆ ನೆಟ್ಟಗಾಗದೆ ಹೋದರೂ ಗಂಗೂತಾಯಿಗೆ ಗುಣವಾಗಲಿ. ಅವಳು ನೆರವಾಗುವಳು.” ಕೋಣೆಯಲ್ಲಿ ಮತ್ತೆ ಶಾಂತತೆಯು ನೆಲೆಸಿತು. ಗಂಗೂ ಎದ್ದಳು.

“ಅಪ್ಪಾ, ನೀವು ಮಲಗಿಕೊಳ್ಳಿರಿ” ಗಂಗೂ ಹೇಳಿದಳು. ತಂದೆ ಮಲಗಿಕೊಂಡರು. ತಂಗಿ ಅಣ್ಣನ ಬದಿಗೆ ಕುಳಿತುಕೊಂಡಳು.

“ನೀನು ಅವನನ್ನು ಎಬ್ಬಿಸಬೇಡ” ಎಂದು ಜಯಂತ ಗಂಗೂನಿಗೆ ಹೇಳಿದನು.

“ಹಾಗೇ ಆಗಲಿ” ಗಂಗೂ ಉತ್ತರ ಕೊಟ್ಟಳು.

ಬೆಳಗಿನ ಜಾವ. ಜಯಂತನು ಒಮ್ಮೆಲೆ ಗಂಗೂನ ಕೈಯನ್ನು ಗಟ್ಟಿಯಾಗಿ ಹಿಡಿದ.

“ಏನೋ? ಯಾಕೋ?”

“ನಾನು ಹೋಗುತ್ತೇನೆ. ಸುಖದಿಂದ ಇರ್ರಿ.”

“ಜಯಂತ!”

ಅವನೇನು ಮಾತನಾಡಲಿಲ್ಲ. ಬೆಳಗು ಹರಿಯಿತು. ತಾಯಿ ಎದ್ದಳು. ತಂದೆಯೂ ಎದ್ದರು. ತಮ್ಮಂದಿರೂ ಎದ್ದರು. ಆದರೆ ಜಯಂತ ಮಾತ್ರ ಏಳುವ ಹಾಗಿರಲಿಲ್ಲ.

ಕೆಲವು ದಿನಗಳು ಕಳೆದವು. ಜಯಂತನ ಪರೀಕ್ಷೆಯ ಫಲಿತಾಂಶ ಹೊರಬಿದ್ದಿತು. ಆದರೆ ಅದನ್ನು ನೋಡಬೇಕೆಂದು ಯಾರ ಮನಸಿನಲ್ಲಿಯೂ ಬರಲಿಲ್ಲ. ಸಾಯಂಕಾಲ ಜಯಂತನ ಗೆಳೆಯನೊಬ್ಬನು ಬಂದನು. ಅವನ ಕೈಯಲ್ಲಿ ವರ್‍ತಮಾನಪತ್ರವಿತ್ತು.

“ಗಂಗೂತಾಯಿ?” ಎಂದವನು ಕೂಗಿದನು.

“ಏನು ನೀಳೂ?”

“ಜಯಂತನು ಒಂದನೆಯ ವರ್‍ಗದಲ್ಲಿ ಒಂದನೆಯವನು.”

“ಆದ್ದರಿಂದಲೆ ದೇವರು ಅವನನ್ನು ಒಯ್ದನು.”

ಗೆಳೆಯನು ಹೊರಟು ಹೋದನು. ಗಂಗೂ ಶೂನ್ಯಮನಸ್ಕಳಾಗಿ ಕಿಡಿಕಿಯೊಳಗಿಂದ ಎತ್ತಲೋ ನೋಡುತ್ತಿದ್ದಳು. ಅದೇನೆ ಇರಲಿ, ಅವಳ ಬೇನೆ ವಾಸಿಯಾಗಿದೆ. ಅವಳ ಬೆನ್ನ ನೋವು ಇಲ್ಲದಾಗಿದೆ. ಜಯಂತನು ಅವಳ ಬೇನೆಯನ್ನು ತೆಗೆದುಕೊಂಡು ಹೋದನೋ ಏನೋ? ಗಂಗೂ ಈಗ ನೌಕರಿ ಹಿಡಿದಿದ್ದಾಳೆ. ಮನೆಯ ಜನರಿಗೆಲ್ಲ ನೆರವಾಗುತ್ತಿದ್ದಾಳೆ.

ಜಯಂತನು ಗತಿಸಿ ಒಂದು ವರ್‍ಷವಾಗಿ ಹೋಗಿದೆ. ಗಂಗೂ ಸುಂದರವಾದುದೊಂದು ಉಂಗುರವನ್ನು ತಂದಿದ್ದಾಳೆ.

“ಅವ್ವಾ, ನಿನ್ನ ಬೆರಳಲ್ಲಿ ಹಾಕಿಕೋ.”

“ನನಗೇಕೆ ಉಂಗುರ? ನೀವು-ಮಕ್ಕಳೆಲ್ಲ ಸುಖವಾಗಿದ್ದರೆ ಅಷ್ಟೇ ನನಗೆ ಸಾಕು.”

“ಅವ್ವಾ, ಇದು ಜಯಂತನ ಕೊನೆಯ ಆಸೆಯಾಗಿತ್ತು.”

“ಅವನ ಇಚ್ಛೆಯಿತ್ತೇ? ಅವನ ಇಚ್ಛೆಯನ್ನು ಹೇಗೆ ಮುರಿಯಲಿ?” ಎಂದೆನ್ನುತ್ತ ಬೆರಳಿನಲ್ಲಿ ಉಂಗುರವನ್ನಿಟ್ಟುಕೊಂಡಳು. ಕಣ್ಣಲ್ಲಿ ನೀರು ಬಂದವು. ತಾಯಿಯು ಮಗನ ಶ್ರಾದ್ಧವನ್ನು ಮಾಡಿದಳು.
*****