
ಮರಕ್ಕೆ ಸದ್ಯ ಬಾಯಿಲ್ಲ
ಹಾಗೇನಾದ್ರೂ ಇದ್ದಿದ್ರೆ
ಹಣ್ಣನ್ ತಾನೇ ನುಂಗ್ತಿತ್ತು
ನಮಗೆಲ್ ಹಣ್ಣು ಕೊಡ್ತಿತ್ತು?
ಗಿಡಕ್ಕೆ ಸದ್ಯ ಜಡೆಯಿಲ್ಲ
ಇದ್ದಿದ್ರೆ ಅದು ಹೂವನ್ನ
ತಾನೇ ಮುಡ್ಕೊಂಡ್ ಬಿಡ್ತಿತ್ತು
ನಮಗೆಲ್ ಹೂವು ಸಿಗ್ತಿತ್ತು?
ಗುಡಿಲಿರೋ ದೇವ್ರಿಗೆ
ರುಚಿ ಅನ್ನೋದೇ ಗೊತ್ತಿಲ್ಲ!
ಇದ್ದಿದ್ದಿದ್ರೆ ಪ್ರಸಾದ
ನಮಗೆಲ್ ತಾನೇ ದಕ್ತಿತ್ತು?
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.