ಈಶ್ವರ ಭಟ್ಟರ ಮಗ ಕೇಶವ ಮಾಣಿಯು ತನ್ನ ಕೊಳಕೆ ಗದ್ದೆಯ ಕಟ್ಟಪುಣಿಯಲ್ಲಿ ಕೂತು ಕೊನೆಯ ದಮ್ಮನ್ನು ಬಲವಾಗಿ ಎಳೆದು ಹೊಗೆಯನ್ನು ಚಕ್ರಾಕಾರವಾಗಿ ಬಿಡುತ್ತಾ ತುಂಡನ್ನು ಕೆಸರಿಗೆ ಎಸೆದ. ಅದು ಚೊಂಯ್‌ ಎಂದು ಸದ್ದು ಹೊರಡಿಸುತ್ತಾ ಕೊನೆಯುಸಿರನ್ನೆಳೆಯುವುದನ್ನು ವಿಚಿತ್ರ ಆನಂದದಿಂದ ನೋಡಿದ. ಜೇಬು ತಡಕಾಡಿದಾಗ ಏಳೆಂಟು ಬೀಡಿಗಳು ಕೈ ಬೆರಳುಗಳನ್ನು ಸ್ಪರ್‍ಶಿಸಿದವು. ನವಿರು ಭಾವನೆಯಲ್ಲಿ ಕ್ಷಣಕಾಲ ಮೈಮರೆತ. ಅವು ಪಾರ್‍ವತಿಯ ಕೈಯಲ್ಲಿ ರೂಪಾಂತರಗೊಂಡವು. ಎಲೆ ಅಡಿಕೆಯಿಂದಷ್ಟೇ ಸಂತೃಪ್ತನಾಗುತ್ತಿದ್ದ ಕೇಶವ ಮಾಣಿಯು ಬೀಡಿಗೆ ತನ್ನ ಅನುಭವ ಕ್ಷೇತ್ರವನ್ನು ವಿಸ್ತರಿಸಿಕೊಂಡದ್ದೇ ಪಾರ್ವತಿಯಿಂದಾಗಿ. ಅವಳಿಂದಾಗಿಯೇ ಬೀಡಿ ಸೇದುವುದು ಒಂದು ಮಧುರ ಅನುಭೂತಿಯಾದದ್ದು ಮತ್ತು ಹೊಸ ಪ್ರಪಂಚವೊಂದರ ಪರಿಚಯವಾದದ್ದು.

ಕೇಶವ ಮಾಣಿ ಇನ್ನೊಂದು ಬೀಡಿ ಸೇದುವುದೋ ಬೇಡವೋ ಎಂಬ ದ್ವಂದ್ವದಲ್ಲಿ ಮುಳುಗಿ ಆಕಾಶವನ್ನು ದಿಟ್ಟಿಸತೊಡಗಿದ. ಅವನು ತನ್ನೆದುರು ಬೀಡಿ ಸೇದುವಾಗೆಲ್ಲಾ ಪಾರ್ವತಿ ತಡೆಯುತ್ತಿದ್ದಳು. ಅವಳು ತಡೆಯಲಿ ಎಂದೇ ಅವನು ಒಮ್ಮೊಮ್ಮೆ ಬೀಡಿ ಸೇದಲು ಹೊರಟವನಂತೆ ಅಭಿನಯ ಮಾಡುತ್ತಿದ್ದುದುಂಟು. ಕಟ್ಟುಮಸ್ತಾದ ಕಂದು ಶರೀರದ, ಉಬ್ಬಿದ ಎದೆಯ, ಹೊಳೆಯುವ ಚಿಗರಿ ಕಣ್ಣುಗಳ, ಉದ್ದದ ಕೇಶರಾಶಿಯ, ವಿಶಾಲ ನಿತಂಬದ ಚೆಲುವೆ ಪಾರ್ವತಿ ತನ್ನ ಊರಿಗೇ ಒಂದು ಅಲಂಕಾರ ಎಂದು ಕೇಶವ ಮಾಣಿ ಭಾವಿಸಿದ್ದ.

ಅವಳು ತನ್ನ ಕೈಯನ್ನು ಹಿಡಿದು “ಅಣ್ಣೇರೇ, ಬೀಡಿ ಸೇದಲಾಗ ಎಂದು ಅಪ್ಪಂಗೆ ಡಾಕ್ಟರು ಹೇಳಿದ್ದ. ಬೀಡಿ ಸೇದಿರೆ ಟೀಬಿ ಬತ್ತಡ. ಎನ್ನ ಅಪ್ಪನಂಗೆ ನಿಂಗ ಕೆಮ್ಮಿ ಕೆಮ್ಮಿ ಕಫ ತುಪ್ಪುದು ಆನು ನೋಡೆಕ್ಕಾ?” ಎಂದು ಕೇಳುತ್ತಿದ್ದಳು. ಕೇಶವ ಮಾಣಿ “ಒಂದೇ ಒಂದು ಸೇದುತ್ತೆ ಆತೊ ಪಾರೂ” ಎಂದು ಮುಂದುವರಿಯುವಂತೆ ನಟಿಸಿದರೆ ಅವಳು ಅವನ ಕೈಗಳನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದಳು. “ಆತು. ಆದರೆ ನಿನ್ನ ನೆಂಪಪ್ಪಗ ಸೇದಲೆ ನಾಲ್ಕು ತೆಗೊಳ್ಳುತ್ತೆ ಆತೊ? ಇಲ್ಲ ಹೇಳಿ ಹೇಳಡ” ಎನ್ನುತ್ತಾ ಅವಳು ಕಟ್ಟಿದ ಏಳೆಂಟು ಬೀಡಿಗಳನ್ನು ಜೇಬಿಗೆ ಹಾಕಿಕೊಳ್ಳುವನು. “ಎನ್ನಿಂದಾಗಿ ಎನ್ನ ಪಾರುಗೆ ಕಮಾಯಿ ಕಡಿಮೆ ಅಪ್ಪಲಾಗ ಅಲ್ಲದಾ” ಎಂದು ಐದರ ಎರಡು ನೋಟುಗಳನ್ನು ಅವಳ ಬೀಡಿ ರಾಶಿಯ ಮೇಲೆ ಇರಿಸಿ ಹೊರಡುವನು.

ಪಾರ್‍ವತಿಯ ಅಪ್ಪ ಚಂದಪಾಟಾಳಿಗೆ ಕೇಶವ ಮಾಣಿ ತಾನಿಲ್ಲದಾಗಲೂ ಮನೆಗೆ ಬರುವುದು ಗೊತ್ತು. ಹುಟ್ಟುವಾಗಲೇ ಅಮ್ಮನನ್ನು ಕಳಕೊಂಡ ಪಾರ್ವತಿಗೆ ಒಂದು ಗಟ್ಟಿ ಮಾತು ಅವನು ಆಡಲಾರ. ಹೆಚ್ಚೆಂದರೆ ಕೇಶವ ಮಾಣಿ ಮಗಳು ಪಾರ್ವತಿಗಿಂತ ಮೂರು ವರ್ಷಕ್ಕೆ ದೊಡ್ಡವನು. ಅವನದೂ ಮಾತೃವಿಯೋಗದ ಯೋಗ. ತನ್ನ ಧನಿ ಈಶ್ವರ ಭಟ್ಟರು ಮರು ಮದುವೆಯಾದರೂ ಮತ್ತೆ ಮಕ್ಕಳಾಗಲಿಲ್ಲ. ಕೇಶವ ಮಾಣಿಗೆ ಚಿಕ್ಕಮ್ಮ ನೊಟ್ಟಿಗೆ ಹೊಂದಿಕೆ ಯಾಗಲೇ ಇಲ್ಲ. ತನ್ನ ಮಗಳು ಪಾರ್ವತಿಯೊಡನೆ ಆಟವಾಡಿಕೊಂಡೇ ಬೆಳೆದವನನ್ನು ಈಗ ಮನೆಗೆ ಬರಬೇಡವೆಂದು ಹೇಳಲು ಚಂದ ಪಾಟಾಳಿಗೆ ನಾಲಿಗೆ ಹೊರಳಲಿಲ್ಲ. ಎಳವೆಯಲ್ಲಿ ಪಾರ್ವತಿಯೊಟ್ಟಿಗೆ ಕೇಶವ ಮಾಣಿ ಕುಂಟಬಿಲ್ಲೆ, ಮುಟ್ಟಾಟ, ಗೋಲಿ ಮತ್ತು ಮದುವೆಯಾಟ ಆಡುವುದು ಕಣ್ಣಿಗೆ ಬಿದ್ದರೆ ಈಶ್ವರ ಭಟ್ಟರು ಗದರಿಸುತ್ತಿದ್ದರು. “ನಿನಗೆ ಸ್ವಯ ಇದ್ದ ಮಾಣಿ? ನೀನು ಧನಿ ಅದು ಒಕ್ಲು. ಆ ಸೂದ್ರ ಕೂಸಿನೊಟ್ಟಿಗೆ ನಿನ್ನದ್‌ ಎಂತದ್‌ ಆಟ?”

ಅವರ ಗದರಿಕೆಗೆ ಕೇಶವನ ಮೋರೆ ಚಿಕ್ಕದಾಗುವುದು. “ಬಿಡಿ ದನಿ. ಅಮ್ಮ ಇಲ್ಲದ ಮಕ್ಕಳು ಆಟ ಆಡಿಯಾದರೂ ಸಂತೋಷ ಪಡಲಿ” ಎಂದು ಚಂದ ಪಾಟಾಳಿ ಸಮಾಧಾನ ಮಾಡುವನು. ಮಕ್ಕಳು ಆಟದಲ್ಲಿ, ಹಿರಿಯರು ಮಾತಿನಲ್ಲಿ ಮೈಮರೆಯುತ್ತಿದ್ದರು.

ಕೇಶವ ಮಾಣಿ ಏಳರವರೆಗೆ ಹೇಗೋ ಓದಿದ. ಕುಂಬಳೆಗೆ ದಿನಾ ನಡಕೊಂಡು ಹೋಗಿ ಬರುವುದು ಮಾಣಿಯಿಂದ ಆಗದೆಂದು ಈಶ್ವರ ಭಟ್ಟರು ಅವನನ್ನು ಮುಂದಕ್ಕೆ ಓದಿಸಲಿಲ್ಲ. ಪಾರ್ವತಿ ಶಾಲೆ ಮೆಟ್ಟಲು ಹತ್ತಿದವಳಲ್ಲ. ಕೇಶವ ಮಾಣಿ ಅವಳನ್ನು ಶೂದ್ರ ಹೆಣ್ಣೆಂದು ಒಮ್ಮೆಯೂ ಭಾವಿಸಿದವನಲ್ಲ. ಅವನಿಗೆ ಗೊತ್ತಿದ್ದರೂ ಅವಳ ಮಲೆಯಾಳದಲ್ಲಿ ಮಾತಾಡದೆ ತನ್ನ ಹವ್ಯಕದಲ್ಲಿ ಅವಳೊಡನೆ ಮಾತಾಡುತ್ತಿದ್ದ. ಅವಳು ಹವ್ಯಕದಲ್ಲಿ ಮಾತಾಡುವುದನ್ನು ಕೇಳಿದರೆ ಅವಳನ್ನು ಶೂದ್ರ ಕೂಸೆಂದು ಹೇಳಲು ಯಾರಿಂದಲೂ ಸಾಧ್ಯವಿರಲಿಲ್ಲ. ಅವಳ ನಯ, ವಿನಯ, ಸುಸಂಸ್ಕೃತ ನಡವಳಿಕೆ ನೋಡಿದಾಗ ಇವಳು ತನ್ನ ಎರಡನೆಯ ಹೆಂಡತಿಯ ಹೊಟ್ಟೆಯಲ್ಲಿ ಹುಟ್ಟಬಾರದಿತ್ತೇ ಎಂದು ಈಶ್ವರಭಟ್ಟರಿಗೆ ಎಷ್ಟೋ ಸಲ ಅನ್ನಿಸಿದ್ದುಂಟು.

ಕೇಶವ ಮಾಣಿಗೆ ಇಪ್ಪತ್ತೈದರ ಹರೆಯ. ಗದ್ದೆಯಲ್ಲಿ ಗೈಮೆ ಮಾಡಿ, ದಿನಾ ಮೊಸರನ್ನ, ತುಪ್ಪ ತಿಂದು ಸದೃಢವಾದ ಶರೀರದಿಂದ ಹೆಣ್ಣುಗಳ ಮನ ಗೆಲ್ಲುತ್ತಿದ್ದ. ಅವನು ಈಗಲೂ ಪಾರ್ವತಿಯೊಟ್ಟಿಗೆ ಸದರದಿಂದಿರುವುದು ಈಶ್ವರ ಭಟ್ಟರಿಗೆ ಗೊತ್ತಿರಲಿಲ್ಲವೆಂದಲ್ಲ. ಇಪ್ಪತ್ತು ತುಂಬುವಾಗಲೇ ಅವನಿಗೊಂದು ಕೂಸನ್ನು ಗಂಟು ಹಾಕಿ ಬಿಡಬೇಕೆಂದು ಅವರು ಯೋಚಿಸಿದ್ದರು. ಕೇಶವ ಮಾಣಿಯ ಚಿಕ್ಕಮ್ಮ “ಇಷ್ಟು ಸಣ್ಣ ಪ್ರಾಯದಲ್ಲಿ ಮದುವೆ ಮಾಡುವ ಕಾಲ ಮುಗುದತ್ತು. ಮಾಣಿಗೆ ಇಪ್ಪತ್ತೈದು ದಾಟಲಿ. ಈಗಲೆ ಮಾಡಿದರೆ ಮಾಣಿ ರಸ ತೆಗೆದ ಕಬ್ಬಿನ ಜಲ್ಲೆ ಹಾಂಗೆ ಆವುತ್ತಂ” ಎಂದು ಹೆದರಿಸಿದ್ದಳು. ತನಗಿಂತ ಇಪ್ಪತ್ತು ವರ್ಷಕ್ಕೆ ಚಿಕ್ಕವಳಾದ ಮಡದಿಯ ಮನಸ್ಸನ್ನು ನೋಯಿಸಲು ಈಶ್ವರ ಭಟ್ಟರು ಸಿದ್ಧರಿರಲಿಲ್ಲ. ಕೇಶವ ಮಾಣಿ ತನಗೆ ಮದುವೆ ಬೇಕೆಂದು ಅಪ್ಪನಲ್ಲಿ ಒಮ್ಮೆಯೂ ಹೇಳಿರಲಿಲ್ಲ.

ಮೊದಲು ಪಾರ್ವತಿ ಗದ್ದೆಯ ಕೆಲಸಕ್ಕೆ ಬರುತ್ತಿದ್ದಳು. ನೀರ್ಚಾಲಿನಲ್ಲಿ ಪೊಡಿಯ ಬ್ಯಾರಿಯ ದಿಲ್‌ ಪುಕಾರು ಬೀಡಿ ಬ್ರಾಂಚು ಆರಂಭವಾದ ಮೇಲೆ ಅವಳು ಮನೆಯಲ್ಲೇ ಕೂತು ಬೀಡಿ ಕಟ್ಟತೊಡಗಿದಳು. ವಾರಕ್ಕೊಮ್ಮೆ ನೀರ್ಚಾಲು ದಿಲ್‌ ಪುಕಾರು ಬೀಡಿ ಬ್ರಾಂಚಿಗೆ ಹೋಗಿ ಕಟ್ಟಿದ ಬೀಡಿ ಕೊಟ್ಟು, ಎಲೆ, ಹೊಗೆ ಸೊಪ್ಪು, ನೂಲು ಜತೆಗೆ ಪೌಡರು, ಕಾಡಿಗೆ, ಸ್ನೋ ತರುತ್ತಿದ್ದಳು. ಅವಳು ಬೀಡಿ ಕಟ್ಟಲು ತೊಡಗಿದ ಮೇಲೆ ಚಂದ ಪಾಟಾಳಿ ಕೆಲಸಕ್ಕೆ
ಬರುವುದು ಅಪರೂಪವಾಯಿತು. “ಮಗಳ ಸಂಪಾದನೆಯಿರುವಾಗ ಇನ್ನ್ಯಾಕೆ ನೀನು ಗದ್ದೆ ಕೆಲಸಕ್ಕೆ ಬರುತ್ತೀ?” ಎಂದು ಈಶ್ವರ ಭಟ್ಟರು ಹಂಗಿಸಿದರೆ ಹಾಗೇನಿಲ್ಲ ಧನಿ. ನನಗೂ ಪ್ರಾಯವಾಯಿತಲ್ಲಾ? ಈ ಪ್ರಾಯದಲ್ಲಿ ಸೊಂಟ ನೋವು ಶುರುವಾಗಿದೆ. ಪೂರ್ತಿ ಹಾಸಿಗೆ ಹಿಡಿಯುವ ಮೊದಲು ಮನೆಯಳಿಯನೊಬ್ಬನನ್ನು ಹುಡುಕಬೇಕು” ಎನ್ನುತ್ತಿದ್ದ.

ಆಗ ಅವನ ಮನೆಯಲ್ಲಿ ಕೇಶವ ಮಾಣಿ “ಬೀಡಿ ಬಂತನ್ನೆ? ಇನ್ನು ಎನ್ನ ನಿನಗೆಲ್ಲಿ ಕಾಣುತ್ತು? ಎಂದು ಪಾರ್ವತಿಯನ್ನು ಛೇಡಿಸಿದರೆ ಅವಳು ಎಂತ ಮಾತು ಅಣ್ಣೇರೆ? ಅಪ್ಪಂಗೆ ಪ್ರಾಯ ಆತು. ಆನು ಗೆದ್ದೆ ಕೆಲ್ಸಕ್ಕೆ ಬಂದ್ರೆ ಅಪ್ಪಂಗೆ ಬೇಯಿಸಿ ಹಾಕೇಡದ? ಈಗ ನೋಡಿ, ಮನೆ ಕೆಲ್ಸ ಮಾಡಿಕೊಂಡೇ ಇಷ್ಟು ಸಂಪಾದಿಸಲಾವುತ್ತು” ಎಂದು ತನ್ನ ಗಳಿಕೆಯನ್ನು ಅವನಿಗೆ ತೋರಿಸುತ್ತಿದ್ದಳು. “ಅದು ಸರಿ. ಆದರೆ ಪೊಡಿಯ ಬ್ಯಾರಿ ಜನ ರಜ್ಜ ತಟಪಟ ಹೇಳಿ ಕೇಳಿದ್ದೆ. ನಿನ್ನ ಸುದ್ದಿಗೆ ಬಂದರೆ ಮತ್ತೆ ಅವನ ಬೀಡಿ ಬ್ರಾಂಚು ನೀರ್ಚಾಲಿಲಿ ಉಳಿಸೆ” ಎಂದು ಅವನು ಹೇಳುತ್ತಿದ್ದ. ಅದೇ ಮಾತು ಬೇರೆಯವರ ಮೂಲಕ ಪೊಡಿಯ ಬ್ಯಾರಿಯ ಕಿವಿಗೂ ಬೀಳುವಂತೆ ಮಾಡಿದ್ದ. “ಅಣ್ಣೇರೆ, ಒಂದು ನಿಂಗೊಗೆ ನೆಂಪಿರೇಕು. ಹೆಣ್ಣು ಇಷ್ಟಪಡದೆ ಗಂಡಿಂದ ಅಷ್ಟು ಸುಲಭದಲ್ಲಿ ಎಂತದೂ ಮಾಡಲಾವುತ್ತಿಲ್ಲೆ. ಹೆಣ್ಣು ಇಷ್ಟಪಟ್ಟರೆ ಯಾವ ಗಂಡಿದ್ಲೂ ಅದರ ತಡೆಯಲಾವುತ್ತಿಲ್ಲೆ. ಆನು ಇಷ್ಟ ಪಟ್ಟದ್ದು ಈ ಕೇಶವ ಮಾಣಿಯ ಮಾತ್ರ. ಆದ್ರೆಂತ ಮಾಡುದು? ಈ ಸೂದ್ರ ಕೂಸಿನ ಭಟ್ರ ಮಾಣಿ ಕಟ್ಟಿಕೊಂಬಲಿದ್ದೊ?”

ಕೇಶವ ಮಾಣಿಗೆ ಪಾರ್ವತಿಯ ಈ ಪ್ರಶ್ನೆಗೆ ಏನುತ್ತರಿಸಬೇಕೆಂದು ಹೊಳೆಯುತ್ತಿರಲಿಲ್ಲ. ಅವನು ಅಪ್ಪ ಮತ್ತು ಚಿಕ್ಕಮ್ಮನ ಸಂಸಾರವನ್ನು ನೆನೆದುಕೊಳ್ಳುತ್ತಿದ್ದ. ಅಮ್ಮ ಬದುಕಿರುತ್ತಿದ್ದರೆ ಅಪ್ಪ ಹೇಗಿರುತ್ತಿದ್ದರೊ? ಈಗ ಚಿಕ್ಕಮ್ಮ ಹೇಳಿದ ಹಾಗೆ ಕುಣಿಯುತ್ತಾರೆ. ಎಳವೆಯಲ್ಲಿ ಇವಳು ಕೊಟ್ಟ ಕೀಟಲೆ ಈಗಲೂ ನೆನಪಿದೆ. ಇವಳನ್ನು ಅಮ್ಮನೆಂದು ಒಮ್ಮೆಯೂ ಮನಸ್ಸು ಒಪ್ಪಿರಲಿಲ್ಲ. ನಾಳೆ ಮದುವೆಯಾದರೆ ಸೊಸೆಯನ್ನು ಎಷ್ಟು ಪೀಡಿಸುತ್ತಾಳೊ? ಇವಳ ಹೊಟ್ಟೆಯಲ್ಲಿ ಒಂದು ಹುಳ ಹುಟ್ಟುತ್ತಿದ್ದರೆ ಇನ್ನೇನೇನಾಗುತ್ತಿತ್ತೊ?

ಮನೆಗೆ ಮುಟ್ಟಿ ಕೇಶವ ಮಾಣಿಯ ಸ್ನಾನ ತೀರಿದ ಮೇಲೆ ಅಪ್ಪಕರೆದರು. ಚಿಕ್ಕಮ್ಮ ಅಪ್ಪನ ಹತ್ತಿರ ನಿಂತುಕೊಂಡಿದ್ದಳು. “ಮಾಣಿ ಶಂಕರಭಟ್ಟ ನಿನ್ನ ಕಾರುಬಾರೆಲ್ಲಾ ತಿಳಿಸಿದ್ದಂ. ನೀ ಆ ಸೂದ್ರ ಕೂಸಿನ ಮನೆಗೆ ದಿನಕ್ಕೆರಡು ಸರ್ತಿ ಹೋವುತ್ತೆಡಾ? ನಮ್ಮ ಮಾನ ಮರ್ಯಾದೆಗೆ ಎಂತಾವುತ್ತು ಹೇಳಿ ರಜ್ಜ ಯೋಚನೆ ಮಾಡ್. ಈ ಬೇಸಗೆ ಮುದ್ದ್ ಮಳೆಗಾಲ ಕಳ್ದ ಮೇಲೆ ಒಂದು ಶುಭ ಮೂರ್ತ ನೋಡಿ ಶಂಕರಭಟ್ಟನ ಕೂಸು ದೇವಕಿಯೊಟ್ಟಿಗೆ ನಿನಗೆ ಮದುವೆ ಮಾಡಿಸ್ತೇಯೋಂ” ಎಂದು ಅಪ್ಪ ಹೇಳಿದಾಗ ಕೇಶವ ಮಾಣಿ ಏನೂ ಹೇಳದೆ ತನ್ನ ಕೋಣೆ ಸೇರಿಕೊಂಡ.

ಕೋಣೆಯಲ್ಲಿ ಕೂತು ಆಕಾಶವಾಣಿ ಭದ್ರಾವತಿ ಕೇಳುತ್ತಿದ್ದವನಿಗೆ ಪಕ್ಕದ ಮನೆ ಶಂಕರ ಭಟ್ಟರ ಮಗಳು ದೇವಕಿಯ ನೆನಪಾಯಿತು. ಉಬ್ಬು ಹಲ್ಲಿನ ಮಂದಬುದ್ಧಿಯ ಸಿಡುಕಿ ದೇವಕಿ ಗೊಗ್ಗರು ದನಿಯಲ್ಲಿ ಅಬ್ಬೇ, ಅಬ್ಬೇ ಎಂದು ಕರೆಯುವಾಗ ಹಲ್ಲುಗಳೆಡೆಯಿಂದ ಲಾಲಾರಸ ಹೊರಗೆ ಹಣಕಿಕ್ಕುತ್ತದೆ. ಯಾರೆದುರು ಹೇಗೆ ಮಾತಾಡಬೇಕೆಂಬುದನ್ನು ತಾಯಿ ಪರಮೇಶ್ವರಮ್ಮ ಹೇಳಿಕೊಟ್ಟರೂ ಅವಳಿಗೆ ಅದು ನೆನಪಲ್ಲಿ ಉಳಿಯುತ್ತಿರಲಿಲ್ಲ. ಶಂಕರಭಟ್ಟರ ತೋಟದ ಅಡಿಕೆ ಕೊಂಡೊಯ್ಯಲು ಬರುತ್ತಿದ್ದ ಹಸಾನರಿ ಸಾವ್ಕಾರನ ಜತೆ ಸದಾ ತೋಟ ಸುತ್ತುತ್ತಿದ್ದ ದೇವಕಿ ಇದ್ದಕ್ಕಿದ್ದಂತೆ “ಅಬ್ಬೇ ಅಬ್ಬೇ, ಹಸ್ನಾರಿ ಕರ್ದಬ್ಬೆ. ಆನು ಎಂತಕೋ ಹೇಳಿ ಜಾನಿಸಿದೆ. ತೋಟಕ್ಕೆ ಬತ್ತೆಯಾ ಕೂಸೇ ಹೇಳಿದ. ಆನು ಎಂತಕೋ ಹೇಳಿ ಜಾನಿಸಿದೆ. ಸೋಗೆ ಮೇಲೆ ಮಲ್ಕೋ ಕೂಸೇ ಹೇಳಿದ. ಆನು ಎಂತಕೋ ಹೇಳಿ ಜಾನಿಸಿದೆ. ಆನು ಮಲ್ಕೂಂಡೆ ಅಬ್ಬೆ. ಅವಂ….” ಎಂದು ಎಲ್ಲರೆದುರು ಹಸ್ನಾರಿ ಪ್ರತಾಪ ವರ್‍ಣಿಸತೊಡಗಿದಳು. ಶಂಕರಭಟ್ಟರಿಗೆ ಇದೊಂದು ತಲೆ ನೋವಾಗಿ ಹಸೈನಾರ್‌ ಸಾವುಕಾರನಿಗೆ ಅಡಿಕೆ ಕೊಡುವುದನ್ನೇ ಬಿಟ್ಟುಬಿಟ್ಟರು. ಆಮೇಲೆ ಅವನೂ ಬರುವುದನ್ನು ನಿಲ್ಲಿಸಿದ. ಅಂದಿನಿಂದ ದೇವಕಿ “ಎನಗೆ ನಮ್ಮ ಕೇಶವ ಭಾವನೂ ಅಕ್ಕು” ಎನ್ನ ತೊಡಗಿದಳು. ಅವಳೆಲ್ಲಿ? ಆಹಾ, ಪಾರ್ವತಿ ಎಲ್ಲಿ?

ಮರುದಿನ ಶಂಕರ ಭಟ್ರು ಈಶ್ವರ ಭಟ್ಟರೊಡನೆ ಮದುವೆ ಬಗ್ಗೆ ಪ್ರಸ್ತಾಪಿಸಿದರು. ಈಶ್ವರ ಭಟ್ಟರು “ಎಂಗಳ ಕೇಶವ ಮಾಣಿ ಬರೇ ಬೆಪ್ಪ. ಆದರುದೆ ಬಂಗಾರದ ಸ್ವಭಾವದವ. ಈ ಬೇಸಗೆ ಮತ್ತು ಮಳೆಗಾಲ ಕಳೆಯಲಿ ಭಾವಾ. ಮತ್ತೆ ದೇವಕಿಯ ತಂದು ಮನೆ ತುಂಬಿಸಿಕೊಳ್ಳುತ್ತೆ” ಎಂದರು. ಶಂಕರ ಭಟ್ರು ತಲೆದೂಗುತ್ತಾ “ರಜ್ಜ ಜಾಗ್ರತೆ ಇರೇಕು ಭಾವಾ. ಪಾರ್ವತಿ ಮನೆಗೆ ದಿನಕ್ಕೆರಡು ಸರ್ತಿ ಇಂವ ಹೋಪದ್ದನ್ನು ಆನೇ ಕಂಡಿದ್ದೆ. ಬೆಂಕಿ ಹತ್ತಿರ ಬೆಣ್ಣೆಯ ಮಡಗಿದರೆ ಎಂತಕ್ಕು ಹೇಳಿ ಆನು ಎಂತಕೆ ಹೇಳೇಕು” ಎಂದು ಮಾತು ನಿಲ್ಲಿಸಿದರು. ಈಶ್ವರ ಭಟ್ಟರೂ ಮತ್ತೆ ಕೆದಕಲಿಕ್ಕೆ ಹೋಗಲಿಲ್ಲ.

ಕುಂಬಳೆ ಜಾತ್ರೆಯಂದು ಕೇಶವ ಮಾಣಿ ಸಂತೆ ತಿರುಗುತ್ತಿದ್ದಾಗ ಪಾರ್ವತಿ ಎದುರಾದಳು. ಅವನನ್ನು ಕಾಣುತ್ತಲೇ ತನ್ನ ಬೀಡಿ ಗೆಳತಿಯರನ್ನು ಬಿಟ್ಟು ಅವನಲ್ಲಿಗೆ ಬಂದು “ಆಗಳಿಂದ ನಿಂಗಳನ್ನೇ ಹುಡುಕುತ್ತಾ ಇತ್ತಿದ್ದೆ. ಇಂದು ಎನಗೆ ಕೇಶವ ಧನಿಗಳಿಂದ ಎಂತೆಲ್ಲಾ ಸಿಕ್ಕುತ್ತೊ?” ಎಂದು ಕೊಂಕಿದಳು. ಅವಳ ಕೈ ಹಿಡಿದುಕೊಂಡ ಕೇಶವ ಮಾಣಿ “ಆಹಾ, ಎನ್ನ ಪಾರು ಇಂದು ಎಷ್ಟು ಲಾಯಕ್ಕು ಕಾಣುತ್ತು? ನಿನ್ನ ಬಿಟ್ಟು ಆ ಹಸಾನರಿ ಕರ್ದ ದೇವಕಿಯ ಆನು ಮದುವೆ ಆಯೇಕಡ. ಅಪ್ಪಂಗೆ ಮರುಳು” ಎಂದ. ಅವಳನ್ನು ಕರಕೊಂಡು ಹೋಗಿ ಗಿರಗಿಟ್ಟಿ ತೊಟ್ಟಿಲಲ್ಲಿ ಕೂರಿಸಿ ತಾನು ಪಕ್ಕದಲ್ಲಿ ಕೂತು ನೂರು ಸುತ್ತು ಸುತ್ತಿಸಿದ. ಮೇಲಕ್ಕೆ ಹೋದ ತೊಟ್ಟಿಲು ಕೆಳಕ್ಕೆ ಬರುವಾಗ ಬೀಸಿ ಎಸೆದಂತಾಗಿ ಪಾರ್ವತಿ ಪ್ರತಿಸಲವೂ ಅಣ್ಣೇರೇ ಎಂದು ಬೊಬ್ಬೆ ಹಾಕಿ ಅವನನ್ನು ಅಪ್ಪಿಕೊಳ್ಳುತ್ತಿದ್ದಳು. ಅದಾಗಿ ಅವನು ಅವಳಿಗೆ ಬೇಕಾದಷ್ಟು ಬಚ್ಚಂಗಾಯಿ ಹಣ್ಣು ತಿನ್ನಿಸಿದ. ಹೊಟ್ಟೆ ತುಂಬಾ ಸೋಜಿ ಕುಡಿಸಿದ. ನಾಲ್ಕು ಡಜನ್ನು ಬಳೆ, ಮೂರು ಪೆಟ್ಟಿಕೋಟು, ಮೂರು ಬಾಡಿ, ಮೂರು ಸೀರೆ, ಮೂರು ರವಿಕೆ ಕಣೆ ಅವಳಿಷ್ಟದ ಬಣ್ಣದ್ದು ತೆಗೆಸಿಕೊಟ್ಟ. ಇದನ್ನೆಲ್ಲಾ ನೋಡುತ್ತಿದ್ದ ಶಂಕರಭಟ್ರು “ಮಾಣಿಗೆ ಮದ ಏರಿದ್ದು. ಈಶ್ವರ ಭಾವಂಗೆ ಹೇಳಿ ಮಾಡಿಸುತ್ತೆ” ಎಂದು ಅವಡು ಕಚ್ಚಿದರು.

ಮರುದಿನ ಈಶ್ವರ ಭಟ್ಟರು ಕೇಶವ ಮಾಣಿಯನ್ನು ಕರೆಸಿ ಜಬರದಸ್ತು ಮಾಡಿದರು. ನೀನು ಉಪನಯನ ಸಂಸ್ಕಾರ ಆದ ಮಾಣಿ. ಅದು ಸಂಸ್ಕಾರ ಇಲ್ಲದ ಸೂದ್ರ ಕೂಸು. ಅದರೊಟ್ಟಿಂಗೆ ನೀನು ಜಾತ್ರೆ ಸುತ್ತಿ ಎಂತೆಲ್ಲಾ ತೆಗೆದುಕೊಟ್ಟಿದ್ದೆಯಡಾ? ಗದ್ದೆ ಕೆಲ್ಸದ ಮಾಣಿಗೆ ಎಂಗಳ ಜಾತಿಲಿ ಕೂಸು ಆರು ಕೊಡುತ್ತವು? ಶಂಕರ ಭಾವ ದೊಡ್ಡ ಮನಸ್ಸು
ಮಾಡಿ ದೇವಕಿಯ ಕೊಡ್ಳೆ ಒಪ್ಪಿದ್ದ. ನೀನು ಮರ್ಯಾದೆ ತೆಗೆವ ಕೆಲ್ಸ ಮಾಡಿದ್ರೆ ಶಂಕರ ಭಾವ ಕೂಸಿನ ಕೊಡುತ್ತನಾ?”

ಅಲ್ಲಿದ್ದ ಶಂಕರಭಟ್ಟರು “ಅನು ಈ ಮಾಣಿಯ ಸೊಡ್ಡು ನೋಡಿ ಕೂಸಿನ ಕೊಡುವುದಲ್ಲ ಭಾವಾ. ನಿಂಗಳ ಮೋರೆಯ ನೋಡಿಕೊಡುವುದು. ಆನು ಬದುಕಿಪ್ಪಾಗಳೆ ಇಂವ ಶೂದ್ರ ಕೂಸಿನ ಒಟ್ಟಿಂಗೆ ತಿರುಗುತ್ತಾ. ನಾಳೆ ಎಂಗಳ ದೇವಕಿಯ ಗತಿ ಎಂತಕ್ಕು ದೇವರೇ” ಎಂದು ಪ್ರಲಾಪಿಸಿದರು.

ಕೇಶವ ಮಾಣಿ ಶಾಂತ ಸ್ವರದಲ್ಲಿ ಉತ್ತರಿಸಿದ: “ಆನು ಜಾತ್ರೆಗೆ ಹೋದ್ದದು ಅಪ್ಪು. ಅಲ್ಲಿ ಪಾರ್ವತಿ ಸಿಕ್ಕಿದ್ದೂ ಅಪ್ಪು. ಅದು ಎಂಗಳ ಒಕ್ಕಲು. ಜಾತ್ರೆಯಿಂದ ಬಳೆ ಸೀರೆ ಕೇಳಿದ್ದಕ್ಕೆ ಆನು ಕೊಡ್ಸಿದ್ದೂ ಅಪ್ಪು. ಅದ್ರಲ್ಲಿ ತಪ್ಪ ಎಂತದಿದ್ದು ಅಪ್ಪಯ್ಯಾ? ಆನು ಕಳ್ಳರಂಗೆ ಎಂತದ್ದೂ ಮಾಡಿದ್ದಿಲ್ಲನ್ನೆ?”

ಈಶ್ವರ ಭಟ್ಟರಿಗೆ ಮಗನ ವಿನಯದಿಂದ ಖುಷಿಯಾಯಿತು. “ಇದಕ್ಕೆ ಎಂತದ್ದೂ ಅರಡಿತ್ತಿಲ್ಲೆ ಭಾವಾ. ಮಾಣಿ ಬರೇ ಬೆಪ್ಪು ಎಂದಾಗ ಕೆರಳಿದ ಶಂಕರ ಭಟ್ಟರು “ಅಪ್ಪು, ಅಪ್ಪು, ಮಾಣಿ ಬರೆ ಬೆಪ್ಪ ಹೇಳಿ ಸಸಾರ ಮಾಡಿ. ಆನು ಮೊದಲೇ ಹೇಳುತ್ತಿದ್ದೆ ಬೆಂಕಿ ಹತ್ತಿರ ಬೆಣ್ಣೆ ಮಡಗಲಾಗ ಹೇಳಿ. ನಾಳೆ ಎಂತಾರ ಹೆಚ್ಚು ಕಡಿಮೆ ಆದರೆ ನಿಂಗಳ ಮರ್ಯಾದೆಯ ಗತಿ ಎಂತಕ್ಕು ಭಾವಾ?” ಎಂದು ಚುಚ್ಚಿದರು. ಈಶ್ವರ ಭಟ್ಟರು ಅದಕ್ಕೆ ನಗುತ್ತಾ “ನೀ ಎಂತ ಹೇಳ್ತೆ ಭಾವಾ? ಎಂಗಳ ಮಾಣಿಯ ಗುಣ ಎನಗೆ ಗೊಂತಿಲ್ಲೆಯಾ? ಮಳೆಗಾಲ ಕಳೆಯಲಿ. ಮತ್ತೆ ದೇವಕಿ ಈ ಮನೆಗೆ ಸೊಸೆಯಾಗಿ ಬಪ್ಪದು ತಪ್ಪದು” ಎಂದು ಶಂಕರಭಟ್ಟರ ಬಾಯಿ ಮುಚ್ಚಿಸಿದರು. ಹಸೈನಾರಿ ಕರೆದ ದೇವಕಿಯ ನೆನಪಾಗಿ ಕೇಶವ ಮಾಣಿಗೆ ನಗು ಬಂತು. ಅವನು ಅದನ್ನು ಕಷ್ಟಪಟ್ಟು ತಡಕೊಂಡ.

ಪತ್ತನಾಜೆಗೆ ಹತ್ತುದಿನ ಮೊದಲು ಕೂಡ್ಲು ಮೇಳದ ತಿರುಪತಿ ಮಹಾತ್ಮೆ ಯಕ್ಷಗಾನ ಆಟ ನೀರ್ಚಾಲಿನಲ್ಲಿತ್ತು. ಕೇಶವ ಮಾಣಿಗೆ ಯಕ್ಷಗಾನವೆಂದರೆ ಪ್ರಾಣ. ಈಸಿಚೇರಿನ ಟಿಕೆಟ್ಟು ತೆಗೆದು ಎರಡನೇ ಸಾಲಲ್ಲಿ ಕೂತುಕೊಂಡವನ ಕಣ್ಣಿಗೆ ನೆಲದ ಟಿಕೇಟು ತೆಗೆದು ಕೂತಿದ್ದ ಪಾರ್ವತಿ ಕಂಡಳು. ತಕ್ಷಣ ಹೊರಗೆ ಹೋಗಿ ಇನ್ನೊಂದು ಈಸಿ ಚೇರು ಟಿಕೇಟು ತೆಗೆದುಕೊಂಡು ಬಂದು ಅವಳನ್ನು ಹತ್ತಿರ ಕೂರಿಸಿಕೊಂಡು ಯಕ್ಷಗಾನದ ಆಸ್ವಾದನೆಯಲ್ಲಿ ತೊಡಗಿದ.

ಪ್ರಸಂಗ ಮುಂದುವರಿಯಿತು. ಮಾಧವ ಭಟ್ಟನು ದಲಿತೆ ಕುಂತಳೆಯಲ್ಲಿ ಪ್ರೇಮ ಯಾಚನೆ ಮಾಡುವಾಗ ಕೇಶವ ಮಾಣಿ ಪಾರ್ವತಿಯತ್ತ ದೃಷ್ಟಿ ಹಾಯಿಸಿದ. ಇವನನ್ನು ಕುಡಿನೋಟದಿಂದ ಗಮನಿಸುತ್ತಿದ್ದ ಪಾರ್ವತಿ ನಾಚಿಕೆಯಿಂದ ತಲೆತಗ್ಗಿಸಿದಾಗ ಇವನು ಅವಳ ಕೈ ಹಿಡಿದುಕೊಂಡ. ಆಟ ಮುಂದುವರಿಯಿತು.

ಶಂಕರ ಭಟ್ಟರು ಇದನ್ನು ಈಶ್ವರ ಭಟ್ಟರಲ್ಲಿ ಹೇಳಿದಾಗ ವಿಪರೀತ ಸಿಟ್ಟು ಬಂದು ಕೇಶವ ಮಾಣಿಯ ಮೇಲೆ ರೇಗಿದರು. ನೀನು ಉಪನಯನ ಆದ ಮಾಣಿ. ಆ ಸೂದ್ರ ಕೂಸಿನ ಹತ್ತರ ಕೂದು ಆಟ ನೋಡಲೆ ನಿಂಗೆ ನಾಚಿಕೆ ಆಯಿದಿಲ್ಲೆಯಾ? ಮಳೆಗಾಲ ಮುಗ್ದ ಮೇಲೆ ದೇವಕಿ ಯೊಟ್ಟಿಂಗೆ ನಿನ್ನ ಮದುವೆ ಮಾಡಿಸುತ್ತೆ. ಈಗ ರಜ್ಜ ಮರ್ಯಾದೆಂದ ಬದುಕಲೆ ಕಲಿ.”

ಕೇಶವ ಮಾಣಿ ತಲೆತಗ್ಗಿಸಿ ಮುಗ್ಧ ಸ್ವರದಲ್ಲಿ ಅಪ್ಪನಿಗೆ ಉತ್ತರಿಸಿದ : “ಆನು ಎಂತ ಮಣ್ಣಾಂಗಟ್ಟಿಯೂ ಮಾಡಿದ್ದಿಲ್ಲೆ ಅಪ್ಪಯಯ್ಯ? ಎನ್ನ ಹತ್ತರ ಇಸಿಚೇರು ಕಾಲಿಯಿದ್ದತ್ತು. ಕೂಸು ಅದಾಗಿಯೇ ಬಂದು ಕೂದತ್ತು. ಧನಿಯ ಹತ್ತರ ಒಕ್ಕಲು ಕೂದು ಆಟ ನೋಡಲಾಗ ಹೇಳಿ ಇದ್ದೊ ಅಪ್ಪಯ್ಯಾ?”

ಬೆಳೆದ ಮಗನ ಮುಗ್ಧ ಪ್ರಶ್ನೆಗೆ ಈಶ್ವರ ಭಟ್ಟರು ‘ಹ್ಹೊಹ್ಹೊಹ್ಹೋ’ ಎಂದು ನಕ್ಕರು. “ಇಲ್ಲದ ಸಂಶಯ ಮಾಡಲಾಗ ಭಾವಾ. ಮಾಣಿ ಬರೆ ಬೆಪ್ಪ, ಬೋದಾಳ”

“ಅಪ್ಪು, ಅಪ್ಪು, ಮಾಣಿಯ ಬೆಪ್ಪ, ಬೆಪ್ಪ ಹೇಳಿ ಸಸಾರ ಮಾಡಿ. ಒಂದಾರಿ ಮಾಣಿ ನಿಂಗೊಗೆ ಬತ್ತಿ ಮಡುಗಲೆಯಿದ್ದು” ಎಂದು ಗೊಣಗಿಕೊಂಡು ಶಂಕರಭಟ್ಟರು ಜಾಗ ಖಾಲಿ ಮಾಡಿದರು.

* * *

ಅಂದು ಈಶ್ವರ ಭಟ್ಟರು ನಿತ್ಯ ವಿಧಿ ಪೂರೈಸಿ, ಪೂಜೆ ಮುಗಿಸಿ ಫಳಾರಕ್ಕೆ ಕೂತಾಗ ಎಂಟು ದಾಟಿತ್ತು. ಕೇಶವ ಮಾಣಿ ಫಳಾರಕ್ಕೆ ಬಾರದ್ದನ್ನು ಕಂಡು ಇಂವ ಎಲ್ಲಿ ಸತ್ತು ಎಂದು ಹೆಂಡತಿಯಲ್ಲಿ ಪ್ರಶ್ನಿಸಿದರು.

ಅವರು ಏನೋ ಹೇಳಬೇಕೆಂದಿರುವಷ್ಟರಲ್ಲಿ ಯಾರೋ ಓಡಿಕೊಂಡು ಬರುತ್ತಿರುವುದು ಕಾಣಿಸಿತು. ತೇಕುತ್ತಾ ಬಂದವರು ಶಂಕರ ಭಟ್ಟರು: “ಮಾಣಿ ಬರೆ ಬೆಪ್ಪ ಹೇಳಿ ಹೇಳಿದರೆನ್ನೆ ಭಾವಾ? ಈಗ ನಿಂಗಳ ಬೆಪ್ಪ ಮಾಣಿ ಆ ಸೂದ್ರ ಕೂಸಿನೊಟ್ಟಿಂಗೆ ಗಟ್ಟಕ್ಕೆ ಓಡಿದನಡ.”
*****
[೧೯೭೦]