ಆಪಾದಿತೆ

ಆಪಾದಿತೆ

ಮುಂಜಾನೆಯ ಒಂಬತ್ತರ ಸುಮಾರಿಗೆ ಕರೆಗಂಟೆ ಕೇಳಿಸಿತು. ಯಾವುದೋ ಕೇಸ ಪೇಪರನ್ನು ತಿರುವುತ್ತ ಕುಳಿತಿರುವ ಶ್ರೀನಿವಾಸರಾಯ ಬಾಗಿಲ ತೆರೆಯಲು ಬಂದ. ಬರುವಾಗ ಈ ಹೊತ್ತಿನಲ್ಲಿ ಮತ್ತೆ ಯಾರಿರಬಹುದು ಹಾಲಿನವ, ಪೇಪರಿನವ, ಅಗಸರೆಲ್ಲ ಬಂದು ಹೋಗಿದ್ದಾರೆ. ಯಾರಾದರೂ ಗಿರಾಕಿ (ಕ್ಲಾಯಿಂಟ್) ಆಗಿರಬಹುದು. ಆದರೆ ತಾನಿಂದು ಯಾರನ್ನು ಕರೆದಿಲ್ಲವಲ್ಲ ಎಂದು ಯೋಚಿಸಿದ, ಒಳಮನೆಯಿಂದ ಬಾಗಿಲವರೆಗೆ ಬರುವ ಕಾಲಾವಧಿಯಲ್ಲಿ ಇನ್ನೊಮ್ಮೆ ಕರೆಗಂಟೆಯಾಯಿತು. ಹಕ್ಕಿಯ ಸ್ವರದ ಕರೆಗಂಟೆಯ ನಿನಾದ ಅಷ್ಟೇನೂ ಹಿತವೆನಿಸಲಿಲ್ಲ. ಇಂದು ಕೋರ್ಟಿಗೆ ಹೋಗುವ ಮಾನಸಿಕ ತಯಾರಿಯೇ ಇರಲಿಲ್ಲವಾದ್ದರಿಂದ ಮತ್ತು ಮೊನ್ನೆ ತಾನೆ ಪ್ರಕಟವಾದ ತನ್ನ ಹೊಸ ಕಾದಂಬರಿಯನ್ನು ಪುನಃ ಓದಿ ಸಮಾಲೋಚಿಸಬೇಕೆಂದು ಮನಸ್ಸು ಮಾಡಿರುವುದರಿಂದ ತನ್ನ ಕ್ಲಾಯಿಂಟಾದರೂ ಯಾಕೆ ಬಂದನೋ, ನೆಪಹೇಳಿ ಕೂಡಲೆ ಕಳಿಸಿ ಬಿಡಬೇಕೆಂದು ಲೆಕ್ಕ ಹಾಕುತ್ತ ಬಾಗಿಲು ತೆರೆದ.

ಎದುರಿಗೆ ಸುಂದರವಾದೊಬ್ಬ ತರುಣಿ ನಿಂತುಕೊಂಡು ಮುಗುಳ್ನಗು ಸೂಸುತ್ತಿದ್ದಾಳೆ. ಕೈಯಲ್ಲೊಂದು, ಹೆಗಲಲ್ಲೊಂದು, ಕೆಳಗೊಂದು ಬ್ಯಾಗು, ಚೆಲುವಾದ ಮುಖದಲ್ಲಿ ಧೂಳು, ಕೆದರಿದ ಕೂದಲು, ಅಸ್ತವ್ಯಸ್ತಗೊಂಡ ಸೀರೆ ಇವುಗಳಿಂದ ಅವಳು ದೂರದ ಪ್ರಯಾಣ
ಮಾಡಿಕೊಂಡು ಬಂದಿರುವಳೆಂದು ದೃಢವಾಯಿತು…. ಅವಳನ್ನು ನೇರವಾಗಿ ನೋಡಿ ‘ಎಸ್…..’ ಎಂಬ ಅಪರಿಚಿತ ಪ್ರಶ್ನೆಯಿಂದ ಕನ್ನಡಕದೊಳಗಿನ ಕಣ್ಣುಗಳನ್ನು ಅರಳಿಸಿದ. ಅವಳೂ ಒಂದು ಕ್ಷಣ ಈ ಗಂಭೀರ ಭಂಗಿಯಲ್ಲಿ ಪ್ರಶ್ನೆಹಾಕಿ ನಿಂತ ಮುದುಕನನ್ನು ಅಡಿಯಿಂದ ಮುಡಿವರೆಗೆ ನೋಡಿ ತುಟಿಯ ಮೇಲಿನ ನಗೆಯನ್ನು ಬಿಡಿಸಿ ಅವನ ಕೈಗೊಂದು ಚೀಟಿಯನ್ನು ಇರಿಸಿದಳು. ಆ ಚೀಟಿಯನ್ನು ಬಿಡಿಸಿ ನೋಡಿ ‘ಹೌದು ನಾನೇ, ಆದರೆ ನೀನು ಯಾರು’ ಎಂದು ಇಂಗ್ಲೀಷಿನಲ್ಲಿ ಕೇಳಿದ.

‘ನಾನು ಜ್ಯೋತಿ, ಒಳಗೆ ಬರಲಾ….’ ಎಂದವಳು ನಿರ್ಭಿಡೆಯಿಮದ ಕೇಳಿ ಒಳಗೆ ಪ್ರವೇಶ ಮಾಡಿದಾಗ ಶ್ರೀನಿವಾಸರಾಯ ಭಾವಹೀನವಾಗಿ ಸುಮ್ಮನಾದ.

‘ಆ ಬ್ಯಾಗನ್ನು ಒಳಗೆ ತಂದಿಡು, ಬೆರಗಾಗಬೇಕಾದದ್ದಿಲ್ಲ. ಬಾಗಿಲ ಹಾಕಿ ಈಚೆ ಬಾ’ ಎಂದು ಆಕೆ ಆಜ್ಞಾಪಿಸಿದಾಗ ಅವನು ಬೆರಗಾಗದೆಯೇ ಬ್ಯಾಗನ್ನು ಒಳಗಿರಿಸಿ ಬಾಗಿಲ ಹಾಕಿದ, ಸೋಫಾದಲ್ಲಿ ಕುಳಿತು ಅವಳನ್ನು ನೋಡಿದ. ಅವಳ ದಣಿದ ಮುಖದಲ್ಲಿ ಉಲ್ಲಾಸ ತಿಳಿಯಾಗಿ ಕಂಡಿತು, ತುಂಟ ನಗೆ ಕಾಣಿಸಿತು. ಪಕ್ಕದ ತೂಗು ಕುರ್‍ಸಿಯಲ್ಲಿ ಒರಗಿ ‘ನೋಡು, ಹೇಳಿದೆನಲ್ಲ ನಾನು ಜ್ಯೋತಿ ಅಂತ, ಪ್ರಯಾಣದಿಂದ ಆಯಾಸಗೊಂಡಿದ್ದೇನೆ. ಮೊದಲು ಸ್ನಾನ, ಹೊಟ್ಟೆಗೊಂದಿಷ್ಟು ಚಾ…ತಿಂಡಿ, ಸ್ವಲ್ಪ ವಿಶ್ರಾಮ, ನಂತರ ನನ್ನ ಪರಿಚಯ ಓಕೆ?’ ಎಂದು ಆವಳು ಎದ್ದು ಬ್ಯಾಗ ತೆರೆದು, ವಸ್ತ್ರಗಳನ್ನು ಹೊರತೆಗೆದು ಸ್ನಾನಗೃಹವನ್ನು ಹುಡುಕಿಕೊಂಡು ಒಳಹೋದಳು.

ಅವನಿಗೆ ಆಶ್ಚರ್ಯವಾಯಿತು. ಅವಳು ಹೋದ ದಿಕ್ಕನ್ನೇ ನೋಡುತ್ತ ಕುಳಿತ. ಏನೂ ಹೊಳೆಯದ ಹಲವಾರು ವಿಚಾರಗಳು ತಲೆಯನ್ನು ಹೊಕ್ಕವು. ಇಷ್ಟೊಂದು ಸಲಿಗೆಯಿಂದ ಒಳಗೆ ಸೇರಿಕೊಂಡ ಇವಳಾರೆಂಬ ಕುತೂಹಲ ಬಲವಾಗತೊಡಗಿತು. ತನ್ನ ಸಂಬಂಧದಲ್ಲಿರುವ ಹುಡುಗಿಯರನ್ನು ನೆನಸಿಕೊಂಡು, ಕ್ಲಯಿಂಟಗಳ ಪೈಕಿ ಯಾರಾದರೂ ಇರಬಹುದೆ ಎಂದು ತಲೆ ಕೆರೆದುಕೊಂಡ, ಯಾರ ನೆನಪೂ ಬರಲಿಲ್ಲ. ಈ ವೃದ್ದನನ್ನು ಮುಂಜಾವಿನಲ್ಲಿಯೇ ಯಾರಾದರೂ ಮೋಸಮಾಡಲು, ದೋಚಲು ಮಾಡಿದ ಸೋಗೇ…. ಹೆಚ್ಚು ವಿಚಿತ್ರವೆನಿಸಿದಂತೆ ಇಂದಿನ ಬೆಳಗಿನ ಈ ಪ್ರರಂಭವೇ ರಮ್ಯವೆನಿಸಿತು.
ರಹಸ್ಯಮಯವೆನಿಸಿತು.

ಎದ್ದು ಅಡಿಗೆ ಮನೆಗೆ ಹೋದ. ಚಾದಕಣವನ್ನು ಬಿಸಿಯಾಗಲು ಇಟ್ಟ, ಮಾಡಿಟ್ಟ ಟೋಸ್ಟಿಗೆ ಬೆಣ್ಣೆ-ಜಾಮು ಹಚ್ಚತೊಡಗಿದಂತೆ ತನ್ನ ಏಕಾಕಿತನದ ನೆನಪಾಗಹತ್ತಿತು. ಇಂಥ ಪ್ರಸಂಗದಲ್ಲಿ ಮನೆಯಲ್ಲಿ ಹೆಂಗಸಿನ ಅಗತ್ಯದ ಸುಳಿವು ಬಂದು ಕ್ಷಣ ಹೊತ್ತು ಕಸಿವಿಸಿಯಾಯಿತು. ಇಷ್ಟು ದೀರ್ಘ ಕಾಲದ ಒಂಟಿತನಕ್ಕೆ ರೂಢಿಯಾಗಿ ಬೆಳೆಸಿಕೊಂಡ ನೆಮ್ಮದಿ ಒಮ್ಮೆಲೆ ಸಡಿಲಗೊಂಡಂತಾಯಿತು. ಬಿಸಿಯಾದ ಚಾವನ್ನು ಕಿಟ್ಲಿಗೆ ಸುರಿದು ಅದೇ ಗುಂಗಿನಲ್ಲಿ ಸ್ಟಡಿ ರೂಮಿಗೆ ಬಂದ. ಎದುರಿನ ಡೈರಿಯನ್ನು ತೆರೆದು ಬರೆಯಲು ಕುಳಿತ. ಸ್ವಲ್ಪ ಹೊತ್ತಿನಲ್ಲಿಯೇ ಜ್ಯೋತಿ ಬಂದು ಅವನ ಹತ್ತಿರ ನಿಂತು ‘ಗುಡ್ ಹೆಬಿಟ್’ ಎಂದು ನಕ್ಕಳು. ಸ್ನಾನ ಮುಗಿಸಿ ಸ್ವಚ್ಛ ವಸನಧಾರಿಯಾಗಿ ಬಂದು ಹೆರಳನ್ನು ಇಳಿಬಿಟ್ಟು ಸ್ನಿಗ್ಧವಾಗಿ ಮಾತಾಡಿದ ಆ ಹಸನ್ಮುಖಿಯನ್ನು ನೋಡಿ ಅವನ ಮೈ ಮನಸ್ಸಿನೊಳಗೊಂದು ಹರ್ಷದ ಎಳೆ ಹರಿದು ಸಂಚರಿಸಿ ರೋಮಾಂಚನವನ್ನು ಎಬ್ಬಿಸಿತು. ಡೈರಿ ಮುಚ್ಚಿ ಎದ್ದು ಅವಳ ಭುಜಕ್ಕೆ ಕೈಹಾಕಿ ‘ಬಾ ಚಾ ಕುಡಿ’ ಎನ್ನುತ್ತ ಕರಕೊಂಡು ಡೈನಿಂಗ ಟೇಬಲ್ಲಿಗೆ ಬಂದ. ‘ನನ್ನ ಕುರಿತಾದ ಕುತೂಹಲ ಹೆಚ್ಚಾಗುತ್ತಿರಬೇಕಲ್ಲ’ ಅವಳು ಚಾ ಹೀರುತ್ತ ಅವನ ಮುಖ ನೋಡಿ ಮಾತಾಡಿದಳು. ‘ಅದು ಸಹಜವೆ…. ಆದರೆ ಇಷ್ಟರಲ್ಲೇ ನೀನು ಬೆರೆತುಕೊಂಡಿರುವ ರೀತಿ ನೋಡಿದರೆ ಹಿತವೆನಿಸುತ್ತದೆ. ನೀನು ಯಾರೆಂಬ ರಹಸ್ಯ ತಿಳಿದು ನಿರಾಸೆಯಾಗುವುದಾದರೆ….. ಅವನ ಮಾತಿನ ಧಾಟಿಯು ಜ್ಯೋತಿಯ ಕಣ್ಣುಗಳಲ್ಲಿ ಹೊಳಪನ್ನು ಎಬ್ಬಿಸಿತು. ಎದುರಿಗೆ ನಿರ್ಲಿಪ್ತನೆನ್ನುವಂತೆ ಕುಳಿತ ಮುದುಕನನ್ನು ನಿಟ್ಟಿಸಿ ನೋಡುವ ಮನಸ್ಸಾಯಿತು. ಕನ್ನಡಕದೊಳಗಿಂದ ಹೊಳೆವ ಭಾವ ತುಂಬಿದ ಕಣ್ಣುಗಳು, ಹಣೆ ಮತ್ತು ಕೆನ್ನೆಯ ಎರಡೂ ಪಕ್ಕಗಳಲ್ಲಿ ಎದ್ದು ಕಾಣುವ ಮುಪ್ಪಿನ ಗೆರೆಗಳು, ನೇರ, ದೃಢಶರೀರ ವಯಸ್ಸನ್ನು ತೋರಿಸುತ್ತಿದ್ದರೆ, ಮುಖ ಒಳಗುದಿಯನ್ನು ಹೊರಪಡಿಸಲು ತವಕಿಸುವಂತಿತ್ತು. ದಪ್ಪ ಬಿಳಿ ಮೀಸೆ, ಹಿಂದಕ್ಕೆ ನಯವಾಗಿ ಬಾಚಿದ ಕಪ್ಪು-ಬಿಳಿ ಕೂದಲು ಹಣೆಯ ಮೇಲ್ಬಾಗವನ್ನು ಎತ್ತರದವರೆಗೆ ತೋರಿಸುತ್ತಿತ್ತು. ನಿಲುವಂಗಿ-ಧೋತಿಯಲ್ಲಿ ಆಕರ್ಷಕವಾಗಿ ಕಾಣುವ, ಈ ವೃದ್ದ ಯವ್ವನದಲ್ಲಿ ಸುಂದರನಾಗಿ ಇದ್ದಿರಲೇಬೇಕೆಂದು ಎಣಿಸಿ ಮೋಹಕವಾಗಿ ನಕ್ಕಳು ಮತ್ತು ತನ್ನ ಎಣಿಕೆಗೆ ಯಾವ ಪ್ರತಿಕ್ರಿಯೆಯನ್ನೂ ನಿರೀಕ್ಷಿಸದೇ ಅವಳೆಂದಳು-

“ನನ್ನ ಬಗ್ಗೆ ಸಂದೇಹ ಅನುಮಾನ ಬೇಡ, ನಾನು ಯಾವ ದೆವ್ವವೂ ಅಲ್ಲ. ನಿನ್ನನ್ನು ವಂಚಿಸಲು ಬಂದ ನಗರ ವಧುವೂ ಅಲ್ಲ. ನಿನ್ನ ಪರಿಚಯ ನನಗಿರುವುದರಿಂದ ಹೀಗೆ ಸರಳವಾಗಿ ನಡೆದುಕೊಂಡಿದ್ದೇನೆ. ನಿನ್ನಲ್ಲಿ ಅಗತ್ಯದ ಕೆಲವು ಸವಾಲುಗಳನ್ನು ಹಾಕಲು ಬಂದಿದ್ದೇನೆ. ನಿನ್ನ ಈ ಸಲದ ಕಾದಂಬರಿಯ ಪುಟಗಳಿಂದ…..’

ಈ ಎಳೆಯಳ ಮಾತನ್ನು ಕೇಳಿ ಅವನಿಗೆ ಮೋಜೆನಿಸಿ ನಗು ಬಂದಿತು. ಬುದ್ದಿಗೆ ಸ್ವಲ್ಪ ಬಲಕೊಟ್ಟು ‘ಯಾರಿವಳು’ ಎಂದು ಯೋಚಿಸಿ ‘ಅದರಲ್ಲಿ ಯಾರು ನೀನು…..ಏಕೆ ಬಂದೆ’ ಎಂದು ಕೇಳಿದ ‘ನಿನಗೆ ನೆನಪಿಲ್ಲ. ಕತೆಯನ್ನು ಬರೆದು ನೀನು ಮರೆತು ಬಿಡುತ್ತಿ. ನನ್ನದು ಮಹತ್ವದ ಪಾತ್ರ, ಉತ್ತರ ಭಾಗದಲ್ಲಿ ತುಂಬಾ ಮೈ ಮರೆತು ಚಿತ್ರಿಸಿರುವಿ. ಆ ಭಾವಾವೇಶದಲ್ಲಿ ನನ್ನ ಪಾತ್ರ ಮಾತ್ರ ಗೌಣವಾಯಿತು. ಕಥೆಯ ಮಹತ್ವದ ಪಾತ್ರವನ್ನು ಹೀಗೆ ಕೆಡಿಸುವ ಅಧಿಕಾರ ನಿನಗಿದೆಯೇ.’ ಅವಳ ಪ್ರಶ್ನೆಗೆ ಬೆಚ್ಚಲಿಲ್ಲ. ಲೇಖಕನ ಮೂಲಭೂತ ಸೃಜನಶೀಲತೆಯನ್ನೇ ಪ್ರಶ್ನಿಸುವ ಈ ಹುಡುಗಿಯ ರೀತಿಗೆ ಅವನು ಮೆಚ್ಚಿದ.

‘ಓಹೋ…. ನೀನು ಕಾದಂಬರಿಯನ್ನು ಓದಿ ನಿನ್ನ ಅಭಿಪ್ರಾಯವನ್ನು ತಿಳಿಸಲು ಬಂದವಳು. ಸಂತೋಷ, ನನ್ನ ಕಥೆಗಳ ಪಾತ್ರ ಹೀಗೆ ಸಾಮಾಜಿಕರನ್ನು ಕೆರಳಿಸಿ ನನ್ನಲ್ಲಿಗೆ ಬರುವಂತೆ ಮಾಡಿದೆ…. ಇದಕ್ಕಿಂತ ಖುಷಿ ಕೊಡುವ ಸಂಗತಿ ಬೇರೇನು….’ ‘ಅಹಂ…. ಅಷ್ಟರಲ್ಲೇ ನೀನು ತುಷ್ಟನಾಗಬೇಡ, ನೀನು ಪಾತ್ರವನ್ನು ಕಲ್ಪಿಸಿ ಕಥೆಯಲ್ಲಿ ಹಾಕುತ್ತಿ. ಪಾತ್ರ ಪ್ರಾಣ ಪಡೆದು ಸ್ಪಂದಿಸುವದನ್ನು ನೀನು ಅನುಭವಿಸಿಲ್ಲ. ಇದಕ್ಕೆಂದೆ ನನಗೆ ಅನ್ಯಾಯವಾಗಿದೆ.’

ಅಂದರೆ ನೀನು ಆ ಕಥೆಯ ಹುಡುಗಿಯನ್ನು ಕಂಡಿದ್ದೀಯ. ಕಂಡಿದ್ದಷ್ಟೇ ಅಲ್ಲ….. ಆ ಹುಡುಗಿ ನಾನೇ’ ಎಂದಳು…..

‘ನಿನ್ನ ಹೆಸರು ಜ್ಯೋತಿ. ಆದರೆ ಆ ಹುಡುಗಿಯನ್ನು ನಾನು ಬಲ್ಲೆ. ಅವಳ ತಂದೆ ತಾಯಿಯನ್ನೂ ಬಲ್ಲೆ-ಅವಳೂ ತಾಯಿಯಂತೆಯೆ ಪರಜಾತಿಯ ಯಾರನ್ನೋ ಕಟ್ಟಿಕೊಂಡು ಕುಟುಂಬ ಬಾಹಿರವಾದಳು-ಎಂಬ ನಿನ್ನ ಆರೋಪ ತಪ್ಪು’. ‘ಆ ಕುರಿತು ಈಗ ಚರ್ಚೆಬೇಡ. ಆದರೆ ನನ್ನ ಕಥೆಯಲ್ಲಿ ಜಗತ್ತಿನ ವ್ಯಕ್ತಿಗಳು ಜೀವಂತವಾಗಿದ್ದಾರೆ. ಉಸಿರಾಡಿಸುತ್ತಾರೆ. ಎಂದ ಹಾಗಾಯಿತು ಅಲ್ಲ? ಸರಿ ಆ ವಿಷಯ ಬಿಡು’ ಎನ್ನುತ್ತ ಶ್ರೀನಿವಾಸರಾಯ ಎದ್ದು ಹೊರ ಕೋಣೆಗೆ ಬಂದು ಆರಾಮ ಕುರ್ಚಿಯಲ್ಲಿ ಕುಳಿತ. ಜ್ಯೋತಿಯೂ ಹೊರಗೆ ಬಂದಳು ಪಕ್ಕದ ಸೋಫಾದ ತುದಿಗೆ ಕುಳಿತು ಇಳಿ ಬಿಟ್ಟ ಕೂದಲನ್ನು ಜಾಡಿಸಿ ಹಿಂದಕ್ಕೆ ಸುತ್ತಿ ಕಟ್ಟಿದಳು.

‘ನೀನು ನ್ಯಾಯವಾದಿ, ಜೊತೆಗೆ ಲೇಖಕ, ಸಹೃದಯಿಯಾದರೂ ನಿನ್ನ ಅನುಭವ ಯೋಚನೆ ಏಕಪಕ್ಷವಾಗಿದೆ ಎಂದೇ ನನಗನಿಸುತ್ತದೆ.’

ಇವಳು ಯಾರೋ ಸಾಹಿತ್ಯದ ವಿದ್ಯಾರ್ಥಿಯಾಗಿರಬೇಕು ಎಂದು ಅವನಿಗನಿಸಿ ‘ಏಕೆ, ನೀನು ನನ್ನ ಎಷ್ಟು ಕತೆಗಳನ್ನು ಓದಿರುವಿ’ ಎಂದು ಕೇಳಿದ.

‘ಹೇಳಿದೆನಲ್ಲ…. ನಾನೊಬ್ಬಳು ಕಥೆಯ ಪಾತ್ರ, ನೇರವಾಗಿ ನಿನ್ನ ಪುಸ್ತಕದ ಪುಟಗಳಿಂದ ಬಂದಿದ್ದೇನೆ. ನನ್ನನ್ನು ಚಿತ್ರಿಸುವಾಗ ನೀನು ಎಡವಿದ್ದಿ, ಯಾವದೋ ಒಂದು ಪೂರ್‍ವಗ್ರಹ ನಿನ್ನನ್ನು ಅದಕ್ಕಾಗಿ ಪರವಶ ಮಾಡಿದೆ. ಅವಳ ತರ್‍ಕದ ದಿಶೆಯನ್ನು ಗುರುತಿಸಲು ಪ್ರಯತ್ನಿಸದೆ ಅವನೆಂದ ‘ಮೈ ಡಿಯರ್, ನೀನಿನ್ನೂ ಚಿಕ್ಕವಳು. ಭಾವನೆಯ ಗೊಂದಲವಾಗಿದೆ ನಿನಗೆ, ನಿನಗಿನ್ನು ಪ್ರಪಂಚದ ಜ್ಞಾನವಿಲ್ಲ. ಲೋಕವನ್ನು ನೀನು ಕಂಡಿಲ್ಲ. ಇರಲಿ…. ನೀನು ಬಂದ ವಿಷಯ ಹೇಳು….’

‘ನಾನು ನಿನ್ನ ಕಾದಂಬರಿಯ ಹುಡುಗಿ, ಆಪಾದಿತಳು. ನನಗೆ ನ್ಯಾಯ ಬೇಕು. ನಿನ್ನ ನಾಯಕಿಯಂತೆಯೆ ನಾನೆಂದು ಆರೋಪಿಸುವುದಕ್ಕೆ ಏನರ್‍ಥ’ ಅವಳ ಉದ್ವೇಗದ ಧ್ವನಿಯ ಕಳಕಳಿ ಅವನ ಮುದ್ರೆಯನ್ನು ತುಸು ಗಂಭೀರಗೊಳಿಸಿತು. ಅವಳನ್ನು ತದೇಕ ಚಿತ್ತನಾಗಿ ಪರಿಶೀಲಿಸಿ, ಏನೋ ಹೊಳೆದು ‘ಮಗು ಕತೆ-ಕಾದಂಬರಿ ಕಾಲ್ಪನಿಕವಾಗಿರುತ್ತದೆ. ಅಲ್ಲಿಯ ಪಾತ್ರಗಳಲ್ಲಿ ಓದುಗರು ಸಾಮ್ಯತೆಯನ್ನು ಕಂಡರೆ ಕಥೆಗಾರ ಧನ್ಯ. ಆದರೆ ಅಷ್ಟಕ್ಕೆ ಮಾತ್ರ ಅಲ್ಲಿಯ ಭಾವನೆಯ, ವಿಚಾರದ, ಚಿತ್ರಣದ ಕೊರತೆಯನ್ನು ಅವನ ದೌರ್ಬಲ್ಯದ ದೋಷವೆಂದು ತಿಳಿಯುವುದು ಸಮಂಜಸವಲ್ಲ. ಲೇಖಕನೂ ಮನುಷ್ಯನಾಗಿದ್ದಾನೆ. ಅವನ ಅನುಭವ, ನೋವುಗಳನ್ನು ಅವನು ಯಾರಲ್ಲಿ ಹೇಳಬೇಕು…..’ ಎನ್ನುತ್ತ ಎದ್ದು ಜ್ಯೋತಿಯ ಹತ್ತಿರ ಬಂದ. ತಲೆಸವರಿ ‘ದಣಿದಿದ್ದೀಯ, ಹೋಗು ಮಲಗು, ಮತ್ತೆ ಮಾತಾಡುವ, ನೀನು ಕತೆಯವಳೆಂದು ತಿಳಿಯುತ್ತೀಯಲ್ಲ. ನಾನೂ ಆ ಕತೆಯವನೆ…..’ ಎಂದು ಒಳಗೆ ಹೋದ. ಸ್ವಲ್ಪ ಹೊತ್ತಿನಲ್ಲಿ ಒಳ್ಳೇ ಪೋಷಾಕು ಧರಿಸಿ, ಬ್ರೀಫ್‌ಕೇಸ್ ಹಿಡಿದುಕೊಂಡು ಹೊರಬಂದಾಗಲೂ ಜ್ಯೋತಿ ಹಾಗೇ ಕುಳಿತು ಕೊಂಡಿದ್ದಳು. ಮುಖದಲ್ಲಿ ದಣಿವು, ಕಣ್ಣಿನಲ್ಲಿ ನಿದ್ರೆ, ಮೈಯಲ್ಲಿ ಅಮಲು ಗೋಚರಿಸಿದರೂ ಬಲವಂತವಾಗಿ ಬುದ್ದಿ ಮನಸ್ಸನ್ನು ಚುರುಕಾಗಿಸುವ ವ್ಯರ್ಥ ಪ್ರಯಾಸ ನಡೆಸುತ್ತಿರುವದನ್ನು ಗಮನಿಸಿ ಅವನು ‘ಜ್ಯೋತಿ, ನಾನು ಕೋರ್ಟಿಗೊಂದಿಷ್ಟು ಹೋಗಿ ಬರುತ್ತೇನೆ. ಬರುವಾಗ ತಿಂಡಿ ತರುತ್ತೇನೆ. ನೀನು ವಿಶ್ರಮಿಸು’ ಎಂದು ನಕ್ಕು ಬಾಗಿಲ ತನಕ ಹೋದನು. ಜ್ಯೋತಿ ತಾನೂ ಎದ್ದು ಬಂದು ಅವನ ಕೈ ಹಿಡಿದು ‘ಬೇಗ ಬಾ, ನಿನ್ನ ಕಥೆ ಕೇಳಬೇಕು. ನನಗೂ ತುಂಬಾ ಹೇಳಬೇಕಾಗಿದೆ. ಹಂ….’ ಎಂದು ಕಳಿಸಿ ಕೊಟ್ಟ ಹತ್ತು ನಿಮಿಷಗಳ ತನಕ ಮನೆಯನ್ನೆಲ್ಲ ಕೆದಕಿ ಹುಡುಕಿ ಮಲಗುವ ಕೋಣೆಗೆ ಬಂದಳು. ಮಂಚಕ್ಕೆ ಮಲಗುವ ಭಂಗಿಯಲ್ಲಿ ಒರಗಿ ಭಾರವಾದ ರೆಪ್ಪೆಯನ್ನು ಮುಚ್ಚಬೇಕೆನ್ನುವಾಗ ಎದುರಿಗೆ ಗೌರವರ್ಣದ ಸುಂದರ ಮಹಿಳೆಯ ಭಾವಚಿತ್ರ ಮುಸಿನಕ್ಕಿತು. ಸಂಜೆಯಲ್ಲಿ ಇಬ್ಬರೂ ಕುಳಿತು ಮಾತಾಡುತ್ತಿದ್ದಾಗ ಅವನೆಂದ ‘ಜ್ಯೋತಿ, ನಾನು ಕಥೆಯವನೆಂದು ಹೇಳಿದೆನಲ್ಲ…… ನನ್ನ ಅನುಭವದಿಂದ ಸ್ಪುಟಿದ ಪಾತ್ರಗಳವು. ಕತೆಗಾರ ಅವನು ಬರೆಯುವ ಕಥೆಯಲ್ಲಿ ಉಸಿರಾಡಿಸುತ್ತಿರುತ್ತಾನೆ. ಮಿಡಿಯುವ ಜೀವನಾಡಿಗಳೆಲ್ಲ ಅವನದಾಗಿರುತ್ತವೆ. ನೀನು ಒಪ್ಪದಿದ್ದರೆ ಬೇಡ. ಈ ಚಿತ್ರ ನೋಡಿದಿಯಾ ನನ್ನ ಮಗಳದು. ಒಬ್ಬಳೇ ಮಗಳು ವರದಿಂದ ಹುಟ್ಟಿರುತ್ತಾರೆ ಅಂತಾರಲ್ಲ ಹಾಗೆ ಅಪರೂಪವಾಗಿ ಹುಟ್ಟಿದವಳು. ನನ್ನ ಜೀವದ ಗಂಟು….’

‘ನಾನು ಆ ಫೋಟೋ ನೋಡಿದ್ದೇನೆ. ನೀನು ಅವಳನ್ನು ಎತ್ತಿಕೊಂಡು ಕುಣಿಸುವುದನ್ನು ನೋಡಿ ನಾನೆ ಅತ್ತು ಬಿಟ್ಟೆ.’

‘ನಮಗೆ ಬೇರೆ ಮಕ್ಕಳೇ ಆಗಲಿಲ್ಲ. ಅವಳ ತಾಯಿಗೆ ಗರ್ಭದ ಕಾಯಿಲೆ ಶುರುವಾಗಿ ಗರ್ಭಧಾರಣೆ ಸಾಧ್ಯವಿರಲಿಲ್ಲ. ಈ ಮಗಳಿಗೆ ಚೆನ್ನಾಗಿ ಕಲಿಸಿ ದೊಡ್ಡ ಡಾಕ್ಟರ ಮಾಡಬೇಕೆಂದು ನಮ್ಮ ಆಕಾಂಕ್ಷೆ, ಮನೆಯಲ್ಲಿ ಅವಳೇ ಯಜಮಾನಿ, ಅವಳ ಅನುಮತಿ ಇಲ್ಲದೆ ಎಲೆ ಅಲುಗಾಡುತ್ತಿರಲಿಲ್ಲ. ಗಾಳಿ ಬೀಸುತ್ತಿರಲಿಲ್ಲ. ಅವಳ ಖುಷಿಯಲ್ಲಿ ನಮ್ಮ ಪ್ರಾಣ ವಾಸ ಮಾಡಿಕೊಂಡಿತ್ತು. ಅವಳು ಬಿಟ್ಟು ಹೋದಾಗ ಹೃದಯ ವಿಕಾರದಿಂದ ನಾನು ಸಾಯಲಿಲ್ಲ.’ ಮುದುಕನ ಕಣ್ಣು ತುಂಬಿ ಬಂತು. ಧ್ವನಿ ಭಾರವಾಗಿ ಶಬ್ದಗಳು ಹೊರಡುವುದು ಕಷ್ಟವಾಯಿತು.

‘ಅವಳ ವಿಷಯ ನನಗೆ ಗೊತ್ತಾಗಿದೆ. ನೀನು ಹೇಳುವದು ಬೇಡ’ ಎಂದು ಜ್ಯೋತಿ ಮುದುಕನ ಕೈಬೆರಳುಗಳನ್ನು ಹಿತವಾಗಿ ಹಿಡಿದಳು. ‘ಅವಳಿಗಾಗ ಇಪ್ಪತ್ತರ ಹರೆಯ. ವೈದ್ಯಕೀಯದ ಎರಡನೆಯ ವರ್ಷ, ಒಂದು ದಿನ ಇದೇ ಹೊತ್ತಿನಲ್ಲಿ ಒಬ್ಬ ವ್ಯಕ್ತಿಯ ಜೊತೆಗೂಡಿ ಬಂದಳು. ‘ಪಪ್ಪ ಇವರು ಡಾ. ಸಯ್ಯದ ನಮ್ಮ ಪ್ರೊಫೆಸ್ ಎಂದು ಪರಿಚಯಿಸಿ ಒಳಹೋಗಿ ಅಮ್ಮನ ಜೊತೆ ಹೊರಗೆ ಬಂದಳು. ಚಾ-ಪಾನಿಯಾದ ಮೇಲೆ ಅವಳು ಮೆಲ್ಲನೆ-ಪಪ್ಪ, ನಾವಿಬ್ಬರೂ ಲಗ್ನ ಮಾಡಿಕೊಂಡಿದ್ದೇವೆ, ನಿಮ್ಮ ಆರ್ಶಿರ್‍ವಾದ ಬೇಕು-ಎಂದು ಹೇಳಿದಳು. ಒಮ್ಮೇಲೆ ಕಣ್ಣು ಕತ್ತಲೆ ಬಂದ ಅನುಭವ, ಹೃದಯ ಪ್ರಪಂಚ ಸಿಡಿಲ ಹೊಡೆತಕ್ಕೆ ಸಿಲುಕಿದ ಅನುಭವ, ಅಸಹ್ಯ ನೋವು ಉಸಿರನ್ನು ಅಮುಕಿದಂತೆ…. ಕುಸಿಯುವ ಮೊದಲು ಅವಳ ಕೆನ್ನೆಗೆ ಬೀಸಿ ಹೊಡೆದೆ. ಒಂದು ವಾರವನ್ನು ಆಸ್ಪತ್ರೆಯಲ್ಲಿ ಕಳೆದು ಮನೆಗೆ ಬಂದಾಗ ನೋವಿನ ಪ್ರಮಾಣದ ಅರಿವಾಯಿತು. ನಮಗಾದ ನಷ್ಟದ ಕಲ್ಪನೆಯಾಯಿತು.

ಆ ನಂತರ ಈವರೆಗೆ ನಾನು ನಿಸ್ಸಂತಾನವಾಗಿ ಬದುಕುತ್ತಿದ್ದೇನೆ. ಅವಳು ಗಂಡನೊಂದಿಗೆ ಹೋದ ಎರಡು ವರ್ಷಗಳವರೆಗೆ ಹಿಂತಿರುಗಿ ಬರಲಿಲ್ಲ. ಅವಳ ತಾಯಿ ಸುಧಾರಿಸಿಕೊಳ್ಳದೆ ನನ್ನನ್ನು ಒಂಟಿಯಾಗಿ ಬಿಟ್ಟು ಮೂರನೆಯ ವರ್ಷದಲ್ಲಿಯೇ ಹೊರಟುಹೋದಳು. ನನ್ನ ವಕಾಲತ್ತು ಕುಂಠಿತಗೊಂಡಿತು. ಲಾ ಕಾಲೇಜಿನಲ್ಲಿ ಪಾಠ ಹೇಳುತ್ತಿದ್ದೆ. ಅದನ್ನಷ್ಟು ಮಾಡಿ ಬದುಕಿನ ಅಪಾರ ಶೂನ್ಯವನ್ನು ಕಣ್ಣು-ಮನಸ್ಸುಗಳಲ್ಲಿ ತುಂಬಿಕೊಂಡು ದಿವಸಗಳನ್ನು ಕಳೆಯುತ್ತಿದ್ದೆ. ಏನೂ ಬೇಡವಾಗಿತ್ತು, ಮೋಹ-ಮಮತೆಯ ಬಂಧನದಿಂದ ಮುಕ್ತಿ, ಸುಖ-ಸಂಪರ್ಕದಿಂದ ಮುಕ್ತಿಯನ್ನು ಕಾಯುತ್ತ…..’

‘ಅದೇ…ನಿನ್ನ ಭಾವನೆಯೆಲ್ಲ ಒನ್‌ಸೈಡೆಡ್ ಇದೆ. ಮಗಳ ತಪ್ಪನ್ನು ಕ್ಷಮಿಸುವ ಉದಾರ ಸಂಸ್ಕೃತಿಯನ್ನು ತೋರಿಸದೆ ನೀನು ದುಃಖಿಯಾದೆ…..ಅವಳಿಗೂ ದುಃಖದ
ಪರಂಪರೆಯನ್ನು ಕೊಟ್ಟೆ…..ಇದರಿಂದ ಯಾರಿಗೆ ಸುಖ…..’

‘ಅವರು ಮದುವೆಯಾಗಿ ಬಂದಿದ್ದರು. ಅವನು ಮುಸಲ್ಮಾನ, ಧರ್ಮ ಬೇರೆ, ನೀತಿ ಬೇರೆ. ನನ್ನ ಹೂವಿನಂತೆ ಬೆಳೆಸಿದ ಮಗು….ಒಮ್ಮೆಲೆ ಉಂಟಾದದ್ದು ಉದ್ವೇಗದ ಆಘಾತ, ಸರಿಯಾದ ಪರಿಸ್ಥಿತಿಯಲ್ಲಿ, ನಿಧಾನವಾಗಿ ನಾನು ಒಪಬಹುದಿತ್ತೇನೋ….ಆದರೆ ನನ್ನ ಪ್ರೀತಿಯ ಮಗುವನ್ನು ಎಂದೆಂದಿಗೂ ಕಳಕೊಂಡ, ಯಾರೋ ಅಪರಿಚಿತರು ಬಂದು ಅಪಹರಿಸಿ, ನಮ್ಮನ್ನು ಅನಾಥ ಮಾಡಿದ ಪರಿಸ್ಥಿತಿಯ ಕ್ರೂರ ಹೊಡೆತಕ್ಕೆ ನಾನು ತತ್ತರಿಸಿ ಹೋಗಿದ್ದೆ. ಅದರಿಂದ ಸುಧಾರಿಸಿಕೊಳ್ಳಲು ಈ ಜನ್ಮವೇ ಸಾಲದು ಎನ್ನುವಂತೆ’ ಕ್ಷಣ ಹೊತ್ತು ಸುಮ್ಮನಾಗಿ ಅವನು ಎದ್ದು ಅಡಿಗೆ ಮನೆಗೆ ಹೋದ ಅಲ್ಲಿ ಅವನು ಚಾದ ವ್ಯವಸ್ಥೆ ಮಾಡುವಂತೆ ಅನಿಸಿ ಜ್ಯೋತಿ ತಾನೂ ಎದ್ದು ಬಂದಳು. ‘ಚಾದಲ್ಲಿ ನೀನು ಎಕ್ಸಪರ್ಟ ಎಂದು ಕಾಣಿಸುತ್ತದೆ. ಇಂದು ನಾನು ಚಾ ಮಾಡಿದರೆ ಹೇಗೆ…ಮಧ್ಯಾಹ್ನದ ಊಟವೂ ನಿನಗೆ ಹಿಡಿಸಿತಲ್ಲ’ ಅವನನ್ನು ಪಕ್ಕಕ್ಕೆ ಸರಿಸಿ ಅವಳು ಚಾದಲ್ಲಿ ತೊಡಗಿದಳು.

‘ಕಥೆಯ ಹುಡುಗಿ ನೀನು ಇಷ್ಟೆಲ್ಲಾ ಈ ಮುದುಕನಿಗಾಗಿ ಮಾಡಿದರೆ ಬದುಕುವ ಲಾಲಸೆಯಾಗಬಹುದು. ಇಂದೋ ನಾಳೆಯೋ ಹೋಗಿಬಿಡುವವಳು’ ಎಂದ ಭಾವುಕನಾಗಿ.

‘ಹಾಗೆ ಸುಲಭದಲ್ಲಿ ಹೋಗುವವಳಲ್ಲ ನಾನು. ನಿನ್ನ ಕಥೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ. ನಿನ್ನಲ್ಲಿರುವ ಕಥೆಗಾರನಿಗೆ ತಪ್ಪಿನ ಅರಿವಾಗುವಂತಾಗಬೇಕು. ಬೇಕಾದ ಹಾಗೆ ಪಾತ್ರವನ್ನು ಕೆಡಿಸಲು ಅವನೇನು ಬ್ರಹ್ಮನಲ್ಲ ಎನ್ನುವುದು ಕ್ಲೀಯರ್ ಆಗಬೇಕು.’ ಅವಳ ಮಾತಿನ ಧಾಟಿಯಲ್ಲಿ ಹಠ ಕಂಡು ಮುದುಕನಿಗೆ ಚಿಂತೆಯಾಯಿತು. ಇವಳು ನಿಜವಾಗಿಯೂ ಅದರ ಬಗ್ಗೆ ಸೀರಿಯಸ್ ಆಗಿರುವಳೆ…. ಎನ್ನುವ ಗುಂಗಿನಲ್ಲೇ ಹೊರಗೆ ಬಂದು ಕುಳಿತ. ಅವಳು ಚಾ ತಂದು ಇಟ್ಟು ಕಣ್ಸನ್ನೆಯಿಂದ ಅವನಿಗೆ ತೆಗೆದುಕೊಳ್ಳಲು ಹೇಳಿ ತಾನೂ ಒಂದು ಲೋಟವನ್ನು ಎತ್ತಿಕೊಂಡು ಸೋಫಾದ ತುದಿಯಲ್ಲಿ ಕುಳಿತಳು.

‘ಹುಡುಗೀ….ನಾನು ಇಪ್ಪತ್ತು ವರ್ಷಗಳಿಂದ ಒಂಟಿಯಾಗಿದ್ದೇನೆ. ಮನುಷ್ಯ ಇಷ್ಟೊಂದು ದೀರ್ಘಕಾಲದ ಏಕಾಂತದಲ್ಲಿ ಜೀವಿಸುವ ಕಲ್ಪನೆಯನ್ನು ನೀನು ಮಾಡಬಲ್ಲೆಯಾ…ನನ್ನ ಮಗಳು ನನ್ನನ್ನು ಬಿಟ್ಟು ಹೋದ ನಂತರ ಪತ್ನಿಯೂ ಹೊರಟು ಹೋದಳು. ಇದು ನನ್ನ ಕರ್‍ಮ. ನನ್ನ ತಂಗಿ, ಅವಳ ಮಕ್ಕಳು ಬಂದು ಇರುತ್ತಾರೆ-ಹೋಗುತ್ತಾರೆ. ವೃದ್ಧನಾಗಿದ್ದೇನೆ. ದುಡಿಯುವ ಶಕ್ತಿ ಕಡಿಮೆಯಾಗಿದೆ. ಮೈ ಮನಸ್ಸು ಸಂಪೂರ್‍ಣ ಸೋತುಹೋಗಿದೆ. ಆದರೂ ಬದುಕಿದ್ದೇನೆ. ಒಂದಿಷ್ಟು ಹೆಸರಿದೆ ಎಂದು, ಕೈಯಲ್ಲಿ ಕೆಲಸವಿದೆಯೆಂದು; ಅನುಭವಗಳನ್ನು ಬರೆಯಬಲ್ಲೆನೆಂದು, ಬಹುಶಃ….ನನ್ನ
ಮಗು ಒಂದು ದಿನ…ಅವನಿಗೆ ಮಾತನ್ನು ಮುಂದುವರಿಸುವ ಮನಸ್ಸಾಗಲಿಲ್ಲ. ಬೇಡವೆನಿಸಿ ಸುಮ್ಮನಾದ. ‘ನಿನ್ನ ಮಗಳು ಎರಡು ಸಲ ಬಂದು ಕ್ಷಮೆ ಬೇಡಿದಾಗ ನಿನ್ನ ಅಂತಃಕರಣ ಕರಗಲಿಲ್ಲ. ಅವಳ ಪತಿ ಬಂದು ವಿಷಯ ಬಿಡಿಸಿ ಹೇಳುವ ಯತ್ನ ಮಾಡಿದ ನೀನು ಅವನನ್ನು ಹಿಂಸಿಸಿ ಕಳಿಸಿದೆ. ಅವನು ಪರಧರ್ಮದವನೆಂದು… ಅವನ ಯೋಗ್ಯತೆಗೆ ಮನುಷ್ಯತ್ವಕ್ಕೆ ಬೆಲೆ ಕೊಡುವ ವಿವೇಕ ನಿನಗೆ ಬರಲಿಲ್ಲ. ತಾನಾಗಿ ನೀನೆಂದೂ ಅವಳೊಡನೆ ಮಮತೆಯ ಒಪ್ಪಂದ ಮಾಡಿಕೊಳ್ಳಲು ಮುಂದಾಗಲಿಲ್ಲ. ಇದು ನಿನ್ನ ಹಟ, ಸ್ವಾಭಿಮಾನ, ಮಕ್ಕಳ ಒಂದು ತಪ್ಪಿಗೆ ಈ ರೀತಿಯ ಶಿಕ್ಷೆ ಯಾವ ನ್ಯಾಯ….’ ಜ್ಯೋತಿಯ ವಿವರ್ಣಗೊಳ್ಳುತ್ತಿರುವ ಮುಖವನ್ನು ದುರುಗುಟ್ಟಿ ನೋಡಿದ. ಉಸಿರು ಬಿಗಿಗೊಳ್ಳುವ ಅನುಭವವಾಗಿ ಅವನೆಂದ…

‘ಎಲ್ಲಾ…ಹಟ ಆಸೆಗಳನ್ನೆಲ್ಲ ತ್ಯಜಿಸಿ ಬದುಕುತ್ತಿದ್ದೇನೆ. ಅದಕ್ಕೆ ಅರ್ಥ ಹುಡುಕುವ ಸಾಧ್ಯತೆಗಾಗಿ.

‘ಅರ್ಥವನ್ನು ಸಿಟ್ಟಿನ ಕೈಗೆ ಕೊಟ್ಟು ನೀನೇ ಕೆಡಿಸಿಕೊಂಡಿರುವುದರ ಅರಿವು ನಿನಗೇಕೆ ಆಗಲಿಲ್ಲ. ನಿನ್ನ ಮಗಳು ತಂದೆ-ತಾಯಿಯಿಂದ ದೂರ, ಹಲವಾರು ವರ್ಷಗಳನ್ನು ಪರಕೀಯನಾದೊಬ್ಬ ಪುರುಷನ ಜೊತೆಗೆ ಬಾಳ್ವೆ ನಡೆಸಿಕೊಂಡಿರುವಾಗ ಅವಳ ಹೃದಯ ಮನಸ್ಸಿಗೆ ಆಗಿರಬಹುದಾದ ವೇದನೆಯ ಕಲ್ಪನೆ ನಿನಗಾಗಲಿಲ್ಲ. ತಂದೆ ತಾಯಿಗಳ ಅದರಲ್ಲೂ ನಿನ್ನಂಥ ತಂದೆಯ ಭಾವನೆಯನ್ನು ಘಾಸಿಗೊಳಿಸಿದ ಪಾಪ ಪ್ರಜ್ಞೆಯಲ್ಲಿ ಅವಳು ಬದುಕಿರುವ ಸೂಕ್ಷ್ಮಗಳನ್ನು ತಿಳಿಯುವ ಮನಸ್ಸು ನಿನಗಾದುದುಂಟೆ? ಅವನೇನೂ ಮಾತಾಡಲಿಲ್ಲ. ಅವಳ ಸವಾಲುಗಳಿಗೆ ಉತ್ತರವಿಲ್ಲವೆಂಬಂತೆ ಮೂಕನಾಗಿ ಬಿಟ್ಟ. ತಾನು ಮಗಳನ್ನು ಕಾಣಲು, ಮಣಿಪಾಲ, ಮಂಗಳೂರುಗಳನ್ನು ಸುತ್ತಿದ್ದು, ಅವರ ಮನೆಯವರೆಗೆ ಹೋಗಲು ಧೈರ್ಯ ಸಾಲದೆ ಮರಳಿ ಬಂದದ್ದು ಯಾವ ತುಡಿತದಿಂದ ಎಂಬುದನ್ನು ಹೇಳುವ ಮನಸ್ಸಾಗಲಿಲ್ಲ. ಯೋಚನೆಗೊಳಗಾದ ಮುದುಕನನ್ನು ಜ್ಯೋತಿ ಎಚ್ಚರಿಸಿದಳು….

‘ಹೋಗಲಿ ಬಿಡು, ನಾನು ಯಾರೆಂದು ನಿನಗೀವರೆಗೆ ಗೊತ್ತಾಗಿರಬಹುದು…. ಅದಕ್ಕೆಂದೆ ನಿನ್ನನ್ನು ಹೆಚ್ಚು ಗೊಂದಲಕ್ಕೆ ಒಳಪಡಿಸುವ ಇಚ್ಛೆಯಿಲ್ಲ…’

‘ಗೊತ್ತಾಗಿದೆ…ಮಗು, ಅದರಿಂದಲೇ ನಿನ್ನನ್ನು ಬಿಟ್ಟೆ ನಾನು ಹೊರಗೆ ಹೋಗಿದ್ದು, ಅಲ್ಲದೆ ಕತೆಯ ವ್ಯಕ್ತಿ ಕತೆಗಾರನ ಮನೆಗೆ ಬಂದದ್ದುಂಟೆ…’

‘ಆದರೆ ಅಜ್ಜ….ನಾನು ಕತೆಯನ್ನು ಓದಿದ್ದೇನೆ. ನಿನ್ನ ವರ್ತನೆಯೇ ಸರಿಯಂದು ಸಾಧಿಸಲು ನೀನು ಇತರರಿಗೆ ಅನ್ಯಾಯ ಮಾಡಿರುವೆ. ಅಮ್ಮ ನಿನ್ನ ಕತೆಯನ್ನು ತಪ್ಪದೇ ಓದುತ್ತಾಳೆ. ಅದರಲ್ಲಿ ನಿನ್ನ ಅಂತರಂಗವನ್ನು ವಿವಿಧ ರೀತಿಯಲ್ಲಿ ಬಿಚ್ಚಿಕೊಳ್ಳುತ್ತೀ ಎಂದು ಅವಳು ಹೇಳುತ್ತಾಳೆ.’

‘ಜ್ಯೋತಿ’ ನಿನ್ನಮ್ಮ ಹೇಗಿದ್ದಾಳೆ. ನನ್ನ ವಿಷಯ ನಿನಗೆ ತಿಳಿಸುತ್ತಿದ್ದಾಳೆ….’

‘ಅಮ್ಮ ನಿನ್ನನ್ನು ಮರೆತದ್ದೆ ಇಲ್ಲ. ನಿನ್ನದೊಂದು ಫೋಟೊ ಇದೆ ಅವಳಲ್ಲಿ. ಅದನ್ನು ಜೋಪಾನವಾಗಿಟ್ಟಿದ್ದಾಳೆ….ಶೋಕೇಸಿನಲ್ಲಿ. ೪-೫ ವರ್ಷಗಳ ಹಿಂದೆ ಒಮ್ಮೆ ಅದನ್ನು ನೋಡಿ, ನೋಡಿ ಅಳುತ್ತಿದ್ದಾಗ ಅಷ್ಟು ನೆನಪಾದರೆ ಹೋಗಿ ನೋಡಿಕೊಂಡು ಬರಬಾರದೇ ಅಮ್ಮ ಎಂದು ಹೇಳಿದ್ದಕ್ಕೆ ನೀನು ಹುಟ್ಟಿ ಇಷ್ಟು ವರ್ಷವಾಯಿತು. ಒಂದು ಸಲವಾದರೂ ಮಗುವನ್ನು ನೋಡುವ ಎಂದು ಬಂದಿದ್ದಾನೆಯೇ? ಅವನಿಗೆ ಕರುಳಿಲ್ಲ. ಸ್ವಾಭಿಮಾನ ಮಾತ್ರ-ಎಂದಿದ್ದಳು. ನಿನ್ನನ್ನು ಎಲ್ಲಾ ರೀತಿಯಲ್ಲಿ, ಎಲ್ಲಾ ಸಂದರ್ಭದಲ್ಲಿ ಹೋಗಳುತ್ತಾಳೆ. ನಿನ್ನ ಒಂಟಿ ಜೀವನದ, ಊಟ ತಿಂಡಿಯ ಚಿಂತೆ ಅವಳಿಗೆ ಯಾವಾಗಲೂ ಇರುತ್ತಿತ್ತು.’ ಅವಳು ಎದ್ದು ಅವನ ಹಿಂಭಾಗಕ್ಕೆ ಬಂದು ಹೆಗಲಿಗೆ ಎರಡೂ ಕೈಗಳನ್ನೂ ಎಸೆದು ಗಲ್ಲವನ್ನು ಅವನ ನೆತ್ತಿಯಲ್ಲಿ ಇರಿಸಿದಳು. ಆದರೂ ಅವಳು ಒಮ್ಮೆ ಬರಲಿಲ್ಲ ಈ ಮುದುಕನಲ್ಲಿಗೆ….’ ಅವನು ಭಾರವಾಗಿ ಉಸುರಿದ ದೂರುವಂತೆ.

‘ಅಭಿಮಾನ, ನಿನ್ನ ಹಾಗೆಯೆ…ಅಲ್ಲದೆ…’

‘ಏನು ಅಲ್ಲದೆ… ಅವಳ ಗಂಡನ ಹೆದರಿಕೆಯೆ…’

‘ಉಹೂಂ …. ….ನನ್ನ ಡ್ಯಾಡಿ ಜೆಮ್ ಒಫ್ ಎ ಮ್ಯಾನ್, ನಾನು ಹೇಳಿದ್ದನ್ನು ಮೀರುವುದಿಲ್ಲ. ಅಮ್ಮ ಅಂದರೆ ಅವನಿಗೆ ಜೀವ. ಅವಳಿಗೆ ಒಮ್ಮೆಯಾದರೂ ಸಿಟ್ಟುಮಾಡಿದ್ದು ನನಗೆ ತಿಳಿಯದು. ಅವನ ಕಡೆಯಿಂದ ಯಾವ ತೊಡಕೂ ಇಲ್ಲ.’

‘ಹಾಗಾದರೆ ನೀನು ಜ್ಯೋತಿ ಸಯ್ಯದ್ ಅಲ್ಲವೇ?’ ಜ್ಯೋತಿ ಅವನನ್ನು ಬಿಟ್ಟು ಮತ್ತೆ ಸೋಫಾದ ತುದಿಯಲ್ಲಿ ಬಂದು ಕುಳಿತಳು- ‘ನೋಡು, ಎಷ್ಟು ಮೀನ್ ಇದ್ದಿ ನೀನು.’ ಎನ್ನುತ್ತ ಸಿಟ್ಟಿನಿಂದ ‘ಫೋರ್ ಯುವರ್ ಇನ್ಫ಼ರ್‌ ಮೇಶನ್ ಅಜ್ಜ, ನಾನು ಡಾ. ಜ್ಯೋತಿರಾವ್, ಎಂ.ಬಿ.ಬಿ‌ಎಸ್‌’ ಡಾ. ಸಯ್ಯದ್ ನನ್ನ ಡೀಯರ್, ಡ್ಯಾಡಿ. ಅವನ ಹೆಸರನ್ನು ನಮ್ಮ ಹೆಸರಿನ ಜೊತೆಗೆ ಉಪಯೋಗಿಸಬೇಕೆಂಬ ಬಂಧನವಿಲ್ಲ. ಈ ತನಕ….ತಿಳಿಯಿತಾ….?’ ಎಂದಳು, ಶ್ರೀನಿವಾಸರಾಯನ ದೃಷ್ಟಿ ಸರಕ್ಕನೆ ಮೊಮ್ಮಗಳ ಕಡೆಗೆ ಹರಿಯಿತು. ಕನ್ನಡಕ ಸರಿಸಿ ಕಣ್ಣುಗಳನ್ನು ಒತ್ತಿಕೊಂಡ. ಹಾಗೆಯೆ ಎದ್ದು ಅವಳ ಹತ್ತಿರ ಬಂದು ಕುಳಿತು ಅವಳ ಹೆಗಲಿಗೆ ಕೈ ಹಾಕಿದ. ‘ಹಾಗಾದರೆ ನೀನು ಸಂದಾನ ಮಾಡಲು ಬಂದವಳೆ…’ ಸಂಧಾನವೇನೂ ಇಲ್ಲ. ನಾನು ಇಂಟರ್‍ನಶಿಪ್ ಮಾಡಲು ಬಂದವಳು. ಕಳೆದ ತಿಂಗಳಿನಲ್ಲಿ ಡ್ಯಾಡಿ ನನ್ನ ಎಡ್ಮಿಶನ್ ಕೆ.ಇ.ಎಮ್.ನಲ್ಲಿ ಕನ್ಫರ್‍ಮ್ ಮಾಡಿದ್ದಾರೆ. ಅವರು ಕೆ.ಇ.ಇಮ್ ನಲ್ಲಿ ಕಲಿಸುತ್ತಿದ್ದರು ನಿನಗೆ ಗೊತ್ತಿದೆಯಲ್ಲ.’

‘ಇಲ್ಲಿ ಏಕೆ….ಬೆಂಗಳೂರು-ಮಣಿಪಾಲ ಬಿಟ್ಟು…’

‘ಇಲ್ಲಿ ನೀನಿರುವೆಯೆಂದು, ನನ್ನ ಅಪ್ಪ-ಅಮ್ಮನ ಐಡಿಯಾ ಇದು. ನನಗು ಸಂತೋಷವೆ. ಮುಂಬಯಿ ನನಗೆ ಇಷ್ಟ, ಅಲ್ಲದೆ ಇನ್ನು ನಿನ್ನೊಬ್ಬನನ್ನೇ ಬಿಡುವಂತಿಲ್ಲ’ ಜ್ಯೋತಿ ತುಂಟವಾಗಿ ಅವನನ್ನು ನೋಡಿದಳು. ಅವನ ಮನಸ್ಸು ಹಗುರವಾಯಿತು. ತನ್ನ ಮಗಳ ಎಷ್ಟೋ ವರ್‍ಷಗಳ ಹಿಂದಿನ ತುಂಟತನದ ನೆನಪಾಯಿತು. ಮುಖದ ಗೆರೆಗಳು ಮಾಯವಾಗಿ ಯವ್ವನ ಮರಳಿ ಬಂದಂತೆ ಮುದಿ ನರನಾಡಿಗಳಲ್ಲಿ ಬಿಸಿ ಸಂಚರಿಸಿದ ಅನುಭವವಾಯಿತು. ಅವಳ ಗಲ್ಲ ಎತ್ತಿ ‘ಡಾ. ಜ್ಯೋತಿ ರಾವ್’ ಎಂದ. ಅಭಿಮಾನವೆನಿಸಿತು. ‘ಬರುವಾಗ ಅಮ್ಮ ಏನು ಹೇಳಿದ್ದಾಳೆ ಗೊತ್ತಾ…’ ಅದೇ ಮೂಡಿನಲ್ಲಿ ಅವಳು ಹುಬ್ಬು
ಎರಿಸಿದಳು.

-ನೋಡು ಜ್ಯೋತಿ, ನಾನು ನನ್ನಪ್ಪನನ್ನು ಏಕಾಕಿ ಮಾಡಿದವಳು. ಅವನ ಮಗಳನ್ನು ಕಸಿದುಕೊಂಡ ಖೇದ ನನಗಿದೆ. ಅವನ ಒಳ್ಳೆಯ ದಿನಗಳನ್ನು ಇಳಿವಯಸ್ಸನ್ನು ಬರಿದು ಮಾಡಿದ ದೋಷವಿದೆ. ನೀನು ಹೋಗಿ ಅವನ ಜೊತೆಗಿರು, ಅವನ ಆಸೆ ಇಚ್ಛೆಗಳನ್ನು ಪೂರೈಸು, ನೀನೂ ಅಜ್ಜ-ಅಜ್ಜ ಎನ್ನುತ್ತಿಯಲ್ಲ. ಅವನು ನಿನ್ನನ್ನು ಕಣ್ಣಗೊಂಬೆಗಳಿಂದ ಇಳಿಸಲಿಕ್ಕಿಲ್ಲ-ಹೇಳುತ್ತಿದ್ದಂತೆ ಜ್ಯೋತಿಯ ಕಣ್ಣು ತೇವಗೊಂಡಿತು. ಈವರೆಗೂ ತುಂಟತನದಿಂದ ವರ್ತಿಸಿದ ಅವಳ ಭಾವನೆ ವಯಸ್ಸು ವಿದ್ಯೆಗಳನ್ನು ಮೀರಿ ಹೊರ ಬಂದು ಗದ್ಗದ ಗೊಂಡಿತು. ಅಜ್ಜ ಅವಳ ಕಣ್ಣು ಒರೆಸಿದ, ತಲೆ ಸವರಿದ, ಸುತ್ತ ಕೈಬಳಸಿ ಎದೆಗವಚಿಕೊಂಡ. ಯಾವದೇ ರೀತಿಯ ಮಾತಿನ ಅಗತ್ಯವೆನಿಸಲಿಲ್ಲ. ತಾನು ಕಳಕೊಂಡ ಗಂಟನ್ನು ಮರಳಿ ಪಡೆದ ಸುಖದ ಗುಂಗಿನಲ್ಲಿರುವಾಗ ‘ನಾಳೆ ನಿನ್ನ ಮಗಳು ಮತ್ತು ನನ್ನ ಡ್ಯಾಡಿ ಇಲ್ಲಿಗೆ ಬರುತ್ತಾರೆ’ ಎಂಬ ಮಾತು ಪಂಖದ ಗಾಳಿಯಲೆಯಲ್ಲಿ ತೇಲಿ ಬಂದು ಅವನ ಕಿವಿ ಹೊಕ್ಕಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಯ ಟೈಲರ್
Next post ತಾಯಿ ಮಗುವಿನ ಆಟ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…