ಇಲ್ಲೇ ಇರು
ಆಡಿಕೊಂಡಿರು
ಎಲ್ಲಿಯೂ ಹೋಗದಿರು

ಹೂಂಗುಟ್ಟಿತು ಮಗು
ಮುಖದ ತುಂಬ ನಗು

ಹೊರಳುತ್ತಾ ಉರುಳುತ್ತಾ…
ಅಂಬೆಗಾಲನು ಇರಿಸಿತು
ಲಜ್ಜೆ ಬಟ್ಟೆಯ ತೊಟ್ಟು
ತಿಪ್ಪ ಹೆಜ್ಜೆಗಳನಿಟ್ಟಿತು
ಬಾಯಿಗೆ ಬೆರಳು ಕಣ್ಣಿಗೆ ಮರಳು
ಹೋ… ಎಂದಿತು ಹಾ… ಎಂದಿತು
ಆಟ ಶುರುವಾಯಿತು

ತಾಯಿ ಮಗುವಿನ ಆಟ-
ಬೊಂಬೆ ಮಗುವಾಯಿತು
ಮಗು ತಾಯಾಯಿತು

ಬೊಂಬೆ, ಅಲ್ಲಲ್ಲ ಮಗು
ರಚ್ಚೆ ಹಿಡಿಯಿತು, ಉಚ್ಚೆ ಮಾಡಿತು

ಮಗು, ಅಲ್ಲಲ್ಲ ತಾಯಿ
ಹಾಲೂಡಿದಳು, ಜೋಗುಳ ಹಾಡಿದಳು

ಬೊಂಬೆ, ಅಲ್ಲಲ್ಲ ಮಗು
ಕೈಕಾಲು ಬಡಿದು ಉದ್ದ ರಾಗ ಎಳೆದು
ಅತ್ತು ಕರೆಯಿತು, ಬೋರಾಡಿತು

ತಾಯಿಗೆ, ಅಲ್ಲಲ್ಲ ಮಗುವಿಗೆ
ಸಹನೆ ಮೀರಿತು, ಸಾಕೆನಿಸಿತು
ಹೋ… ಎಂದರಚಿತು

ಅಗೋ ಬಂದಳು ಮಹದಾಯಿ
ಬೆವರನೊರೆಸುತ್ತ, ಸೀರೆ ಕೊಡವುತ್ತ…
ಬೊಂಬೆಯನೆತ್ತಿಟ್ಟಳು
ಮಗುವಿಗೆ ಮುತ್ತಿಟ್ಟಳು

ಸಾಕಿನ್ನು ಆಟ…
ಎತ್ತಿಕೊಂಡಳು, ಎದೆಗೆ ಒತ್ತಿಕೊಂಡಳು
ಮರೆಯಾದಳು.
*****