scan0073
ಚಿತ್ರ: ಅಪೂರ್ವ ಅಪರಿಮಿತ

ಸದಾಶಿವರಾಯರು ಆ ಮಗುವನ್ನೇ ನೋಡುತ್ತಿದ್ದರು. ಅಂಬೆಗಾಲಿಟ್ಟು ತೆವಳುವ ಮಗುವಿನ ಚಲನವಲನಗಳು ಸೃಷ್ಟಿಸುವ ಭಾವನೆಗಳನ್ನು ಅವರು ಈವರೆಗೆ ಅನುಭವಿಸಿರಲಿಲ್ಲ. ನಿಧಾನವಾಗಿ ತೆವಳುತ್ತಾ ಒಮ್ಮೊಮ್ಮೆ ಹಿಂದಕ್ಕೆ ನೋಡುತ್ತಾ ತಾಯಿಯ ಮೆಚ್ಚುಗೆಗಾಗಿ ಹಂಬಲಿಸುತ್ತಿದ್ದ ಆ ಮಗು ಎಷ್ಟೊಂದು ಭಾವನೆಗಳನ್ನು ತನ್ನಲ್ಲಿ ಸೃಷ್ಟಿಸುತ್ತಿದೆ! ಜೀವನದಲ್ಲಿ ತಾನು ಈವರೆಗೆ ಸಾಧಿಸಿದ್ದೆಲ್ಲವೂ ಒಂದು ಮಗುವಿನ ಚಲನೆಯ ಮುಂದೆ ಏನೇನೂ ಅಲ್ಲ ಎಂಬಂತಾಗುತ್ತಿದೆಯಲ್ಲಾ? ಮಗು ಎಲ್ಲಾದರೂ ಹಾಗೆ ಅಂಬೆಗಾಲಿಕ್ಕುತ್ತಾ ಮನೆಯೊಳಕ್ಕೆ ಬಂದುಬಿಟ್ಟರೆ?!

ರಾಯರಿಗೆ ನಗು ಬಂತು. ಹತ್ತು ವರ್ಷಗಳ ಹಿಂದೆ ತಾನು ಕೈ ಹಿಡಿದು ಈ ಮನೆಗೆ ಸುಶೀಲಳನ್ನು ಕರೆತಂದದ್ದು, ಅವಳಿಂದ ತನಗೊಂದು ಗಂಡು ಸಂತಾನವಾಗಲೆಂದು ಹರೈಸಿದ್ದು, ಕೊನೆಗೂ ಹಾರೈಕೆ ನಿಜವಾಗದೆ ಆಕೆ ಯಾವುದೋ ಕಾಯಿಲಿಯಿಂದ ತೀರಿಕೊಂಡಿದ್ದು, ಈ ಜೀವನ ಎಷ್ಟು ವಿಚಿತ್ರ, ಹೀಗಾಗುತ್ತದೆ ಯಾದರೂ ಯಾಕೆ? ಒಂದುವೇಳೆ ಸುಶೀಲ ಬದುಕಿ ಅವಳದೇ ಮಗು ಹೀಗೆ ಅಂಬೆಗಾಲಿಕ್ಕುತ್ತಿದ್ದರೆ ಈ ಮನೆಯಲ್ಲಿ ಎಷ್ಟು ನಗು ತುಂಬಿರುತ್ತಿತ್ತು? ಈಗ ಅದರ ಸ್ಥಾನದಲ್ಲಿ ಗಾಬರಿ. ಈ ಮಗು ಎಲ್ಲಾದರೂ ಒಳಗೆ ಬಂದು ಬಿಟ್ಟರೆ?!

ಮಗುವಿನ ತಾಯಿ ಅದೆಲ್ಲಿದ್ದಾಳೋ ಓಡಿಕೊಂಡು ಬಂದು ಮಗುವನ್ನೆತ್ತಿಕೊಂಡಳು. ಗಾಬರಿಯಿಂದ ರಾಯರ ಮುಖವನ್ನು ನೋಡಿದಳು. ಅವಳಿಗೆ ಹೇಳಿ ಏನೂ ಪ್ರಯೋಜನವಿಲ್ಲವೆಂದು ರಾಯರಿಗೆ ಗೊತ್ತು. ಅವಳದ್ದೂ ಒಂದು ದರಂತ ಕತೆಯೇ!

ಅತಿ ಶೂದ್ರಳನ್ನು ಯಾವುದೋ ಊರಿನಿಂದ ತನ್ನ ಊರಿನ ಶೂದ್ರನೊಬ್ಬ ಕರಕೊಂಡು ಬಂದಿದ್ದ. ಅವಳಿಗೆ ಒಂದು ಮಗುವನ್ನು ದಯಪಾಲಿಸಿ ಒಂದು ರಾತ್ರಿ ಇದ್ದಕಿದ್ದ ಹಾಗೆ ಊರಿಂದ ಕಣ್ಮರೆಯಾಗಿದ್ದ. ಅವಳು ಒಂದು ತನಗೆ ಅಡ್ಡಬಿದ್ದು ಒಂದು ಕೆಲಸ ಕೊಡಲು ಗೋಗರೆದಿದ್ದಳು. ತನ ಜಾಗದ ಹೊರಗಿನ ಪರಾಂಬೋಗ್ ಜಾಗದಲ್ಲಿ ಅವಳಿಗೊಂದು ಮನೆಕಟ್ಟಿಸಿ ರಾಯರು ಇರಲೊಂದು ನೆಲೆ ಕಲ್ಪಿಸಿ ಕೊಟ್ಟಿದ್ದರು. ಊರ ಸೂಲಗಿತ್ತಿ ಹೆರಿಗೆಗೆ ಸಹಾಯ ಮಾಡಿದ್ದಳು. ಆಗ ಖರ್ಚಿಗೆಂದು ರಾಯರು ಧಾರಾಳವಾಗಿ ಹಣ ಖರ್ಚು ಮಾಡಿದ್ದರು. ರಾಯರಿಗೆ ನೆನಪಾಯಿತು. ತಾನು ಹಾಗೆ ಮಾಡಿದ್ದಾದರೂ ಯಾಕೆ?

ತನ್ನ ಸುಶೀಲಳ ಜಾಗದಲ್ಲಿ ಈ ಜಾನಕಿಯನ್ನು ಇಟ್ಟು ನೋಡಿದ್ದೇನೆಯೆ? ಸುಶೀಲ ಗರ್ಭಿಣಿಯಾಗಿರುತ್ತಿದ್ದರೆ ಅವಳಿಗೆ ಹೆರಿಗೆಗೆ ಅದೆಷ್ಟು ಸಂಭ್ರಮವಿರುತ್ತಿತ್ತು? ತನ್ನ ಕಡೆಯವರು, ಸುಶೀಲಳ ಕಡೆಯವರು, ಅದೆಷ್ಟು ಮಂದಿ ಬಂದು ಹೋಗುತ್ತಿದ್ದರು? ಪೇಟೆಯ ದೊಡ್ಡ ಆಸ್ಪತ್ರೆಯಲ್ಲಿಯೇ ಅವಳ ಹೆರಿಗೆಯನ್ನು ತಾನು ಮಾಡಿಸುತ್ತಿರಲಿಲ್ಲವೇ? ಆದರೆ ಜಾನಕಿಯದೆಂತ ಪಾಡು? ಸೊಲಗಿತ್ತಿಯೂ ಬರದಿರುತ್ತಿದ್ದರೆ ಅವಳ ಕತೆಯೇನಾಗುತ್ತಿತ್ತೋ!

ರಾಯರು ಜಾನಕಿಯನ್ನು ನೋಡಿದರು. ಮಗುವನ್ನು ಎತ್ತಿಕೊಂಡು ಮುದ್ದಿಸುವಾಗ ಅವಳ ಮುಖದಲ್ಲಿ ಅದೆಂತ ಸಾರ್ಥಕ ಕಳೆ? ಹೆಣ್ತನ ಸಾಥಕವಾಗೋದು ಮಗುವನ್ನು ಪಡೆದಾಗ ಎಂದು ಸುಶೀಲ ಅದೆಷ್ಟು ಬಾರಿ ಹೇಳುತ್ತಿದ್ದಳು? ಸಾರ್ಥಕತೆ ಅಂದರೆ ಇದೇ ಇರಬೇಕಲ್ಲವೇ? ತಾನೆಂದಾದರೂ ಒಂದು ಮಗುವನ್ನು ಪಡೆಯಲು ಸಾಧ್ಯವೇ?

ರಾಯರಿಗೆ ರಾಜಮ್ಮನ ನೆನಪಾಯಿತು. ಅದೆಲ್ಲಿಂದ ಅವರ ಚಿಕ್ಕಪ್ಪ ಆ ಘಟವಾಣಿಯನ್ನು ತನಗೆ ಗಂಟು ಹಾಕಿದ್ದರೋ? ಅವಳಿಗೆ ಸೀರೆ ಚಿನ್ನ ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಸುಶೀಲನ ಜಾಗವನ್ನು ಅವಳು ತುಂಬಲೇ ಇಲ್ಲ. ತನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕೊನೆಗೂ ಆಕೆ ಸೋತಿದ್ದಳು. ಅಲ್ಲ , ತಾನೇ ಅವಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತೆನೆ? ಇಲ್ಲದಿದ್ದರೆ ಅವಳ್ಯಾಕೆ ತನ್ನ ತೋಟದ ಕೆಲಸದವ ಚನಿಯನೊಟ್ಟಿಗೆ ಅಷ್ಟೂ ಒಡವೆಗಳನ್ನು ಕಟ್ಟಿಕೊಂಡು ಓಡಿಹೋಗಬೇಕಿತ್ತು? ಅಥವಾ ತನ್ನಿಂದ ಅವಳನ್ನು ತೃಪ್ತಿಪಡಿಸಲು ಸಾಧ್ಯವಾಗಲಿಲ್ಲವೇ? ಸುಶೀಲಳಿಗೂ ಇವಳಿಗೂ ಎಷ್ಟು ವ್ಯತ್ಯಾಸ? ಸುಶೀಲಳೊಡನೆ ಕಳೆದ ಆ ಕ್ಷಣಗಳು ಅದೆಷ್ಟು ಮಧುರ? ಇವಳೊಂದಿಗೆ? ಒಮ್ಮೆಯೂ ತನಗೆ ಆ ಮಧುರವಾದ ಅನುಭವ ಧಕ್ಕಿದ್ದಿಲ್ಲ. ಹಣವನ್ನು ಬಯಸಿ ಬಂದವಳು ಮೆಚಿಲ್ಲಿದಂತೆ ರಾಜಮ್ಮನ ನಡವಳಿಕೆ, ತನಗೆ ಕೊರಡಿನೊಂದಿಗೆ ಇದ್ದ ಅನುಭವ.

ಈಗ ಜಾನಕಿಯ ಮಗು ಅಂಗಳದಲ್ಲಿ ಆಡುತ್ತಿತ್ತು. ಅದಕ್ಕಿಂದೇ ಒಂದು‌ಅಷ್ಠು ಗೊಂಬೆಗಳನ್ನು ರಾಯರು ತಂದುಕೊಟ್ಟಿದ್ದರು. ಅದಕ್ಕಾಗಿ ಜಾನಕಿ ತುಂಬಾ ಖುಷಿಪಟ್ಟಿದ್ದಳು. ಅವಳಿಗೂ ಗೊತ್ತಿತ್ತು. ಅಂತಹ ಗೊಂಬೆ ತಂದು ಕೊಡಲು ಅವಳಿಂದ ಸಾಧ್ಯವಿಲ್ಲವೆಂದು, ರಾಯರಿಗೆ ಅವಳು ಭಾವ ಅರ್ಥವಾಗಿತ್ತು. ಅದರ ಜೊತೆಗೊಂದು ಆತಂಕವೂ ಅವರನ್ನು ಕಾಡತೊಡಗಿತ್ತು. ತನ್ನ ಬಾಳಲ್ಲಿ ಪ್ರವೇಶಿಸಿದ ಸುಶೀಲ ಒಂದು ಮಗುವನ್ನು ಕೊಡದೇ ಸತ್ತು ಹೋದಳು. ರಾಜಮ್ಮ ತಾನಾಗಿಯೇ ಯಾರದೋ ಹಿಂಎ ಓಡಿಹೋದಳು. ಅಂದರೆ ತನ್ನ ಜೀವನ ಇಲ್ಲಿಗೆ ನಿಂತು ಬಿಡಿತ್ತದೆಯೇ? ಅದು ಕೊನರುವುದಿಲ್ಲ. ತನ್ನ ಬಳಿಕ ಈ ಆಸ್ತಿಗಾಗಿ ಯಾರ್ಯಾರೋ ಕಚ್ಚಾಡುತ್ತಾರೋ? ತನ್ನದೂ ಅಂತ ತನ್ನ ಬಳಿಕ ಏನೇನೂ ಇರುವುದಿಲ್ಲ. ಏನೇನೂ ಇರುವುದಿಲ್ಲ.!! ಇಂದು ಆ ಭಾವ ಅವರನ್ನು ತೀವ್ರವಾಗಿ ಕಾಡತೊಡಗಿತು.

ಈಗ ಮಗು ನಿಧಾನವಾಗಿ ಅಂಗಳದಿಂದ ಮೆಟ್ಟಲು ಹತ್ತುವ ಪ್ರಯತ್ನ ಮಾಡುತ್ತಿತ್ತು. ಜಾನಕಿ ಗಾಬರಿಯಿಂದ ಮತ್ತೆ ಓಡಿಬಂದಳು. ರಾಯರು ಮಾತಿನಲ್ಲೇ ತಡೆದರು. “ಇರಲಿ ಜಾನಕಿ ಮಗು ಮನೆಯನ್ನು ನೋಡಲಿ.”

ಜಾನಕಿ ಆಶ್ಚರ್ಯದಿಂದ ಅವರ ಮುಖವನ್ನೇ ದಿಟ್ಟಿಸಿದಳು. “ಯಾವ ಕಾಲಕ್ಕೂ ನಿನ್ನ ಮಗು ಈ ಮನೆ ಯನ್ನು ಪ್ರವೇಶಿಸದಂತೆ ನೋಡಿಕೋ” ಎಂದು ಹೇಳಿದ ರಾಯರು ಇವರೇನಾ?  ಇಂದು ಇವರಿಗೆ ಏನಾಗಿದೆ? ರಾಯರಂದರು “ಮಗು ಇವತ್ತು ಇಲ್ಲೇ ಇರಲಿ.”

ಜಾನಕಿ ಗಾಬರಿ ಯಿಂದ ಬಾಯಿ ತೆರೆದಳು.”ಏನು ಹೇಳುತ್ತಿದ್ದೀರಿ ಒಡೆಯಾ?ನನ್ನ ಮಗು ನಿಮ್ಮ ಮನೆಯಲ್ಲಾ? ನೀವದನ್ನು ನಿಮ್ಮೊಟ್ಟಿಗೆ ಮಲಗಿಸಿಕೊಳ್ಳುತ್ತೀರಾ? ನೀವು ಹಾಲು ಹೇಗೆ ಕೊಡುತ್ತೀರಿ?”

ರಾಯರು ಇದನ್ನು ಯೋಚಿಸಿರಲಿಲ್ಲ. ಮನೆಯಲ್ಲಿ ಹಾಲಿಗೆ ತೊಂದರೆಯಿರಲಿಲ್ಲ. ಅದನ್ನೇ ಕೊಟ್ಟರಾಯಿತಲ್ಲಾ?”ಇರಲಿಬಿಡು ಜಾನಕಿ. ಒಂದು ದಿವಸ ಏನಾಗುತ್ತದೆಂದು ನೋಡೋಣ. ಹಾಲು ನಾನು ಕುಡಿಸುತ್ತೇನೆ. ಯಾಕೋ ಮನೆಯಿಡೀ ಖಾಲಿಯಾದ ಹಾಗೆ ಅನ್ನಿಸುತ್ತಿದೆ.”

ಜಾನಕಿಗೆ ಏನು ಹೇಳಬೇಕೆಂದೇ ತೋಚಲಿಲ್ಲ. ದನಿಯ ಮಾತನ್ನು ಮೀರುವಂತೆಯೂ ಇರಲಿಲ್ಲ. ಒಲ್ಲದ ಮನಸ್ಸಿನಿಂದ ಅವಳು ಮನೆಗೆ ಬಂದಳು. ರಾತ್ರಿ ತೋಟದ ಕಾವಲುಗಾರ ಓಡಿಕೊಂಡು ಬಂದ. “ಮಗು ಅಳು ನಿಲ್ಲಿಸುತ್ತಿಲ್ಲ. ನೀನು ಬರಬೇಕಂತೆ” ಎಂದ, ಅವಳು ತಡಬಡಾಯಿಸಿ ಎದ್ದು ಓಡಿದಳು. ಮಗು ಅವಳ ಕೈಯಲ್ಲಿ ಅಳು ನಿಲ್ಲಿಸಿದನ್ನು ರಾಯರು ಆಶ್ಚರ್ಯದಿಂದ ನೋಡಿದರು. ಅಲ್ಲೇ ಮೂಲೆಯಲ್ಲಿ ಮಗುವಿಗೆ ಮೊಲೆ ಯೂಡಿಸಿ ಜಾನಕಿ “ಮಗುವನ್ನು ಮನೆಗೆ ಕರೆದುಕೊಂಡು ಹೋಗಲಾ ಒಡೆಯಾ” ಎಂದು ಕೇಳಿದಳು.

ಅಷ್ಟು ಹೊತ್ತಿಗೆ ಮಗುವಿಗೆ ನಿದ್ರೆ ಬಂದಿತ್ತು. ರಾಯರು “ಇನ್ಯಾಕೆ ಕರಕೊಂಡು ಹೋಗುತ್ತೀಯಾ? ಇಂದು ಇಲ್ಲೇ ಇರಲಿ”  ಅಂದರು. ಜಾನಕಿ ತನ್ನ ಗುಡಿಸಲಿಗೆ ಹಿಂತಿರುಗಿದಳು. ಅವಳಿಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ.

ಬೆಳಿಗ್ಗೆ ಹೋಗಿ ನೋಡುವಾಗ ಮಗು ಉಚ್ಚೆ-ಕಕ್ಕ ಮಾಡಿ ರಂಪ ಮಾಡಿಹಾಕಿತ್ತು. ರಾಯರು ಏನು ಮಾಡಬೇಕೆಂದು ತೋಚದೇ ಸುಮ್ಮನೆ ನಿಂತಿದ್ದರು. “ಇವಳೆಲ್ಲ ವನ್ನೂ ಬಳಿದು ಮಗುವನ್ನು ಮೀಯಿಸಿ ಹಾಗೆಯೇ ಎದೆಗವಚಿಕೊಂಡಳು.

ಅಂದು ರಾತ್ರಿ ಹಿಂದಿನದೇ ಘಟನೆ ಮರುಕಳಿಸಿತು. ರಾಯರು ಒತ್ತಾಯ ಮಾಡಿ ಮಗುವನ್ನು ಮನೆಯಲ್ಲಿ ನಿಲ್ಲಿಸಿಬಿಟ್ಟರು. ರಾತ್ರಿ ಮತ್ತೆ ತಿಮ್ಮಪ್ಪ ಓಡಿಕೊಂಡು ಬಂದ. ಇವಳು ದಿಗಿಲುಬಿದ್ದು ಹೋಗಿ ಮಗುವನ್ನು ಸಂತೈಸಿದಳು. ಮಗು ನಿದ್ರೆ ಹೋದಾಗ “ಒಡೆಯಾ ನಿನ್ನೆ ರಾತ್ರಿ ಯಿಡೀ ನಾನು ಕಣ್ಣು ಮುಚ್ಚಿಲ್ಲ. ನನ್ನ ಕರುಳಿನ ಕುಡಿ ಇಲ್ಲಿರುವಾಗ ಅಲ್ಲಿ ನನಗೆ ಹೇಗೆ ನಿದ್ದೆ ಬಂದೀತು?ಈ ಮಗು ಉಚ್ಚಿ ಕಕ್ಕ ಮಾಡಿದರೆ ಏನು ಮಾಡಬೇಕೆಂದು ನಿಮಗೂ ಗೊತ್ತಾಗುವುದಿಲ್ಲ. ಯಾಕೆ ನನಗೆ ಮತ್ತು ಮಗುವಿಗೆ ಈ ಶಿಕ್ಷೆ ಕೊಡುತ್ತೀರಿ? ನಿಮ್ಮ ದಮ್ಮಯ್ಯ ಇವನನ್ನು ನಾನು ಕರಕೊಂಡು ಹೋಗುತ್ತೇನೆ” ಎಂದು ಹೋಗಿಯೇ ಬಿಟ್ಟಳು.

ರಾಯರು ನಿದ್ದೆ ಮಾಡಲು ಯತ್ನಿಸಿದರು. ಎಷ್ಟು ಹೊರಳಾಡಿದರೂ ಕಣ್ಣುರೆಪ್ಪೆ ಮುಚ್ಚಲು ಅವರಿಂದ ಸಾಧ್ಯವಾಗಲಿಲ್ಲ. ಇಷ್ಟು ಹೊತ್ತಿನವರೆಗೂ ಇನ್ನೊಂದು ಜೀವತನ್ನ ಒತ್ತಿನಲ್ಲೇ ಹಾಸಿಗೆಯಲ್ಲಿತ್ತಲ್ಲಾ? ಏನು ಮೃದು ಅದರ ಅಂಗಾಲು? ಏನು ಮುಗ್ಧತೆ ಅದರ ನಗುವಿನಲ್ಲಿ? ಅದು ತನ್ನನು ಹಚ್ಚಿಕೊಂಡಿತ್ತಲ್ಲಾ, ತನ್ನನ್ನು‌ಅದು ಏನೆಂದು ಭಾವಿಸಿರಬಹುದು? ಓಹೋ! ಸುಶೀಲ ಬದುಕಿರುತ್ತಿದ್ದರೆ ತನಗೂ ಒಂದು ಇಂತಹುದೇ ಮಗು ಇರುತ್ತಿತ್ತಲ್ಲಾ? ತನ್ನ ಬಾಳಿಗೆ ಅರ್ಥವೇ ಇಲ್ಲ. ಜಾನಕಿಯ ಆ ತುಂಟ ಪೋರ ನನ್ನ ಮನಸ್ಸನ್ನೇ ಕದ್ದುಕೊಂಡು ಹೋಗಿಬಿಟ್ಟನಲ್ಲಾ? ಏನು ಮಾಡುವುದು?”

ರಾಯರು ಮೂರು ಸೆಲ್ಲಿನ ಲೈಟನ್ನು ಕೈಯಲ್ಲಿ ಹಿಡಿದುಕೊಂಡರು. ಮನೆಗೆ ಬಾಗಿಲೆಳೆದುಕೊಂಡು ನೇರವಾಗಿ ಜಾನಕಿಯ ಮನೆಗೆ ಹೋದರು. ಅವರ ಗೊಗ್ಗರು ಧ್ವನಿ ಕೇಳಿ ನಿದ್ರೆ ಕಣ್ಣಿನಿಂದ ಹೊರಬಂದ ಜಾನಕಿ ಅವಾಕ್ಕಾಗಿ ಅವರನ್ನೇ ನೋಡಿದಳು. “ನನಗೆ ನಿದ್ದೆ ಮಾಡಲಾಗುತ್ತಿಲ್ಲ ಜಾನಕಿ. ಬೆಳಗ್ಗೆ ಬಂದು ನೀನು ಅದರ ಉಚ್ಚಿ-ಕಕ್ಕಗಳನ್ನು ಬಳಿದರೂ ಚಿಂತಿಲ್ಲ. ಅವನನ್ನು ನನಗೆ ಕೊಡು.”

“ಇದೆಂತಹ ಹುಚ್ಚು ನಿಮ್ಮದು ಒಡೆಯಾ? ಈ ಹೊತ್ತಲ್ಲಿ ನೀವು ಇಲ್ಲಿಗೆ ಬಂದದ್ದೇ ತಪ್ಪು. ಅದರ ಮೇಲೆ ನನ್ನ ಮಗುವನ್ನು ಕೇಳುತ್ತಿದ್ದೀರಿ. ನಿಮಗೆ ಬೇಕೇಬೇಕು ಎಂದಿದ್ದರೆ ಎಲ್ಲಾದರೂ ಅನಾಥಾಲಯದಲ್ಲಿ ಮಗು ಸಿಗುವುದಿಲ್ಲವೇ? ನನ್ನ ನೆಮ್ಮದಿಯನ್ನೇಕೆ ಹಾಳು ಮಾಡುತ್ತೀರಿ?”

ರಾಯರು ಅವಳ ಮಾತನ್ನು ಗಮನಿಸದವರಂತೆ ನೇರವಾಗಿ ಒಳನುಗ್ಗಿದರು. ಅಲ್ಲಿ ಚಾಪೆಯಲ್ಲಿ ಮಲಗಿದ್ದ ಅವಳ ಮಗುವನ್ನು ಹಾಗೆ ಎತ್ತಿಕೊಂಡು ಎದೆಗವಚಿಕೊಂಡು ಹೊರಡುವಾಗ ಜಾನಕಿ ತಡೆದಳು. “ಅನ್ಯಾಯ ಮಾಡಬೇಡಿ ಒಡೆಯಾ? ಆ ಮಗು ನಾನಿಲ್ಲದೆ ಬದುಕಲಾರದು. ಯಾಕೆ ಇಲ್ಲ ಪಾಪಕ್ಕೆ ಗುರಿಯಾಗುತ್ತೀರಿ? ನಾನು ಯಾವ ತಪ್ಪು ಮಾಡಿದ್ದೇನೆಂದು ಈ ಶಿಕ್ಷೆ? ಆ ಮಗು ಬೇಕೆ ಬೇಕೆಂದರೆ ಅದಕ್ಕೆ ನೀವು ಅಪ್ಪನಾಗ ಬೇಕು. ಅದರ ಅಮ್ಮನನ್ನೂ ಒಪ್ಪಿಕೊಳ್ಳಬೇಕು. ” ಎಂದು ಹೇಳಿಬಿಟ್ಟಳು.

ಒಂದು ಕ್ಷಣ ರಾಯರು ದಿಗ್ಭ್ರಾಂತರಂತೆ ನಿಂತು ಬಿಟ್ಟರು. ಮರುಕ್ಷಣದಲ್ಲೇ ಅದೇನೋ ನಿರ್ಧರಿಸಿ, ಒಂದುಕೈಯಲ್ಲಿ ಜಾನಕಿಯ ಕೈಯನ್ನು ಹಿಡಿದುಕೊಂಡು ಗುಡಿಸಲಿನಿಂದ ಹೊರ ಬಂದು ತನ್ನ ಮನೆಯತ್ತ ಹಿಜ್ಜೆ ಹಾಕಿದರು.
*****

Latest posts by ಪ್ರತಿಮಾ ಪನತ್ತಿಲ (see all)