ಅನ್ನ ಮತ್ತು ಸ್ವಾತಂತ್ರ್ಯ

ಅನ್ನ ಮತ್ತು ಸ್ವಾತಂತ್ರ್ಯ

ಜಾನ್ ರಸ್ಕಿನ್ (೧೮೧೯-೧೯೦೦) ತನ್ನ ‘ಸೇಸಮೆ ಮತ್ತು ಲಿಲಿಹೂಗಳು’ (Sesame and lilies) ಎಂಬ ಎರಡು ಭಾಷಣಗಳ ಮೊದಲನೆಯದರ ಮಧ್ಯೆ ಅಚಾನಕ ಎಂಬಂತೆ ೧೮೬೭ರ ಡೈಲಿ ಟೆಲಿಗ್ರಾಫ್ ಪತ್ರಿಕೆಯಿಂದ ವರದಿಯೊಂದನ್ನು ಉದ್ದರಿಸುತ್ತಾನೆ. ಅದೊಂದು ಸಾವಿಗೆ ಸಂಬಂಧಿಸಿ ಉಪ ವಿಚಾರಣಾಧಿಕಾರಿಯೊಬ್ಬ ನಡೆಸಿದ ಪಂಚನಾಮೆಯ ವರದಿ. ಸತ್ತವನ ಹೆಸರು ಮೈಖೆಲ್ ಕೋಲಿನ್ಸ್, ವಯಸ್ಸು ೫೮, ಹತಭಾಗಿನಿಯಂತೆ ಕಾಣಿಸುವ ಸಾಕ್ಷಿ ಅವನ ಪತ್ನಿ ಮೇರಿ ಕೋಲಿನ್ಸ್ ಹೇಳಿದ್ದೆಂದರೆ: ‘ತಾನು ಮೃತನ ಮತ್ತು ಆತನ ಮಗನೊಂದಿಗೆ ಕ್ರೈಸ್ಟ್ ಚರ್ಚಿನ ಕೋಬ್ಸ್ ಕೋರ್ಟಿನ ಎರಡನೆಯ ನಂಬರಿನ ಕೋಣೆಯಲ್ಲಿ ಜೀವಿಸುವವಳು. ಮೃತನು ಬೂಟುಗಳ ‘ಭಾಷಾಂತರಕಾರ’ನಾಗಿದ್ದ (`translator of boots’) ಸಾಕ್ಷಿ ಹೊರಗೆ ಹೋಗಿ ಹಳೆ ಬೂಟುಗಳನ್ನು ಖರೀದಿಸುವಳು; ಮೃತ ಮತ್ತು ಅವನ ಮಗ ಅವನ್ನು ಒಳ್ಳಯದಾಗಿ ಮಾಡುವರು, ಆಮೇಲೆ ಸಾಕ್ಷಿ ಅವನ್ನು ಅಂಗಡಿಗಳಿಗೊಯ್ದು ಸಿಕ್ಕ ಬೆಲೆಗೆ ಮಾರುವಳು, ಹಾಗೆ ಸಿಗುತ್ತಿದ್ದುದು ನಿಜಕ್ಕೂ ಅತ್ಯಲ್ಪ. ಮೃತನೂ ಮಗನೂ ದಿನ ರಾತ್ರಿ ದುಡಿಯುವವರು, ಚೂರು ಬ್ರೆಡ್ಡು ಮತ್ತು ಚಹಾಕ್ಕಾಗಿ, ಹಾಗೂ ಕೋಣೆ ಬಾಡಿಗೆ (ವಾರಕ್ಕೆ ೨ ಶಿಲಿಂಗ್) ಕೊಡುವುದಕ್ಕೆ, ಹೇಗಾದರೂ ಮಾಡಿ ಮನೆ ಉಳಿಸುವುದಕ್ಕೆ. ಕಳೆದ ಶುಕ್ರವಾರದಂದು, ಮೃತ ತನ್ನ ಬೆಂಚಿನಿಂದೆದ್ದು ನಡುಗಲು ಸುರುಮಾಡಿದ. ‘ನಾನು ಹೋದ ಮೇಲೆ ಇನ್ನು ಯಾರಾದರೂ ಇವನ್ನು ಮುಗಿಸಬೇಕು, ನನ್ನಿಂದ ಇನ್ನು ಆಗದು,’ ಎಂದು ಬೂಟುಗಳನ್ನು ಕೆಳಕ್ಕೆ ಹಾಕಿದ. ಚಳಿಕಾಯಿಸಲು ಬೆಂಕಿಯಿರಲಿಲ್ಲ, ‘ಬೆಂಕಿಯಿದ್ದರೆ ಆಗುತ್ತಿತ್ತು’ ಎಂದ. ಆದ್ದರಿಂದ ಸಾಕ್ಷಿ ಎರಡು ಜತೆ ‘ಭಾಷಾಂತರಿತ’ ಬೂಟುಗಳನ್ನು ಎತ್ತಿಕೊಂಡು ಮಾರುವುದಕ್ಕೆ ಅಂಗಡಿಗೆ ಹೋದಳು. ಆದರೆ ಎರಡು ಜತೆಗೆ ಅವಳಿಗೆ ಸಿಕ್ಕಿದ್ದು ೧೪ ಪೆನ್ನಿಗಳು ಮಾತ್ರ, ಯಾಕೆಂದರೆ ಅಂಗಡಿಯ ಜನ ಲಾಭಾಂಶ ಬೇಕು ನಮಗೆ ಎಂದರು. ಸಾಕ್ಷಿ ೧೪ ರಾತಲು ಇದ್ದಿಲು, ಸ್ವಲ್ಪ ಚಹಾಪುಡಿ ಮತ್ತು ಬ್ರೆಡ್ ಕೊಂಡುಕೊಂಡಳು. ಅವಳ ಮಗ ಇಡೀ ಇರುಳು ‘ಭಾಷಾಂತರ’ ಮಾಡುವುದಕ್ಕೆ ಎದ್ದುಕುಳಿತೇ ಇದ್ದ, ದುಡ್ಡು ಗಳಿಸುವುದಕ್ಕೆಂದು, ಆದರೆ ಮೃತನು ಶನಿವಾರ ಮುಂಜಾನೆ ತೀರಿಹೋದ. ಕುಟುಂಬಕ್ಕೆ ಸಾಕಷ್ಟು ತಿನ್ನುವುದಕ್ಕೆ ಎಂದೂ ಇರಲಿಲ್ಲ. ಅಧಿಕಾರಿ: ‘ನೀವು ಶ್ರಮಾಗಾರಕ್ಕೆ (workhouse) ಹೋಗದೆ ಇದ್ದುದು ದುರದೃಷ್ಟಕರ. ಸಾಕ್ಷಿ: ‘ನಮಗೆ ನಮ್ಮ ಪುಟ್ಟ ಮನೆಯ ಸುಖಗಳು ಬೇಕಿದ್ದುವು.’ ಆ ಸುಖಗಳು ಯಾವುವೆಂದು ಪಂಚರಲ್ಲಿ ಒಬ್ಬ ಕೇಳಿದ, ಯಾಕೆಂದರೆ ಅವನಿಗೆ ಕಾಣಿಸಿದ್ದು ಕೋಣೆಯ ಒಂದು ಮೂಲೆಯಲ್ಲಿ ಸ್ವಲ್ಪ ಒಣಹುಲ್ಲು, ಕೋಣೆಯ ಕಿಟಿಕಿಯೂ ಒಡೆದಿತ್ತು. ಸಾಕ್ಷಿ ಅಳುವುದಕ್ಕೆ ಸುರುಮಾಡಿದಳು, ತಮ್ಮಲ್ಲೊಂದು ಕೌದಿ ಮತ್ತೆ ಕೆಲವು ಪುಟ್ಟ ವಸ್ತುಗಳಿವೆ ಎಂದಳು. ಮೃತನಿಗೆ ಶ್ರಮಾಗಾರಗಳಿಗೆ ಹೋಗುವುದು ಎಂದೂ ಇಷ್ಟವಿರಲಿಲ್ಲ. ಬೇಸಿಗೆಯಲ್ಲಿ, ಕಾಲ ಅನುಕೂಲಕರವಿದ್ದಾಗ, ಕೆಲವೊಮ್ಮೆ ಅವರು ವಾರದಲ್ಲಿ ೧ಂ ಶಿಲ್ಲಿಂಗುಗಳಷ್ಟು ಲಾಭ ಗಳಿಸುತ್ತಿದ್ದರು. ಆಗ ಅವರು ಯಾವಾಗಲೂ ಮುಂದಿನ ವಾರಕ್ಕೆ ಉಳಿಸುತ್ತಿದ್ದರು. ಯಾಕೆಂದರೆ ಮುಂದಿನ ವಾರ ಸಾಮಾನ್ಯವಾಗಿ ಹೆಚ್ಚು ಕಷ್ಟಕರವಾಗಿತ್ತು. ಚಳಿಗಾಲದಲ್ಲಿ ಅದರ ಅರ್ಧದಷ್ಟೂ ಸಂಪಾದನೆಯಾಗುತ್ತಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಅವರ ಬದುಕು ಹೆಚ್ಚೆಚ್ಚು ಬಿಗಡಾಯಿಸುತ್ತ ಬಂದಿತ್ತು. -೧೮೪೭ರಿಂದಲೂ ತಾನು ಅಪ್ಪನಿಗೆ ಸಹಾಯ ಮಾಡುತ್ತ ಬಂದಿದ್ದೇನೆ ಎಂದ ಕೋರ್ನೀಲಿಯಸ್ ಕೋಲಿನ್ಸ್. ಅವರು ರಾತ್ರಿ ಇಳಿಹೊತ್ತಿನ ತನಕ ಕೆಲಸ ಮಾಡುತ್ತಿದ್ದರು, ಆದ್ದರಿಂದ ಅವರ ದೃಷ್ಟಿಯೂ ಏಕದೇಶ ಹೊರಟುಹೋಗಿತ್ತು. ಸಾಕ್ಷಿಯ ಕಣ್ಣುಗಳಿಗೀಗ ಪರೆ ಬಂದಿತ್ತು. ಐದು ವರ್ಷಗಳ ಹಿಂದೆ ಮೃತನ ಸಹಾಯಕ್ಕೆಂದು ಹತ್ತಿರದ ಚರ್ಚಿಗೆ ಅರ್ಜಿ ಹಾಕಿದ್ದಿತ್ತು. ಅಲ್ಲಿನ ವಿತರಣಾಧಿಕಾರಿ ಅವನಿಗೆ ೪ ರಾತಲಿನಷ್ಟು ಬ್ರೆಡ್ ಕೊಟ್ಟು, ಇನ್ನು ಬಂದರೆ ‘ಸಿಗುವುದು ಕಲ್ಲು’ ಎಂದ. ಇದು ಮೃತನ ಮನ ನೋಯಿಸಿತು. ಮುಂದೆ ಅವರ ಗೊಡವೆಯೇ ಬೇಡ ಎಂದುಕೊಂಡ. ಅವರ ಸ್ಥಿತಿ ದಿನೇ ದಿನೇ ಕೆಡುತ್ತಾ ಬಂತು, ಕಳೆದ ಶುಕ್ರವಾರ ಒಂದು ಕಂದೀಲು ಕೊಳ್ಳುವುದಕ್ಕೆ ಅರೆಕಾಸು ಕೂಡಾ ಅವರ ಬಳಿ ಇರಲಿಲ್ಲ. ಮೃತನು ಆಗ ಹುಲ್ಲಿನ ಮೇಲೆ ಮಲಗಿ, ತಾನಿನ್ನು ಮುಂಜಾನೆತನಕ ಬದುಕಿರುವುದಿಲ್ಲ ಎಂದ. -ಪಂಚರಲ್ಲಿ ಒಬ್ಬ: ‘ನೀನೇ ಆಹಾರವಿಲ್ಲದೆ ಸೊರಗಿರುವಿ, ನೀನು ಬೇಸಿಗೆವರೆಗೆ ಶ್ರಮಾಗಾರದಲ್ಲಿ ಹೋಗಿ ಇದ್ದಿರಬೇಕು.’ ಸಾಕ್ಷಿ: ‘ನಾವಲ್ಲಿಗೆ ಹೋದರೆ ಸಾಯುತ್ತೇವೆ. ಬೇಸಿಗೆಯಲ್ಲಿ ನಾವಲ್ಲಿಂದ ಹೊರಬಂದಾಗ ಆಕಾಶದಿಂದ ಕೆಳಬಿದ್ದವರ ಹಾಗಿರುತ್ತೇವೆ. ನಾವು ಯಾರಿಗೂ ಗೊತ್ತಿರುವುದಿಲ್ಲ, ನಮಗೊಂದು ಕೊಠಡಿ ಕೂಡಾ ಇರುವುದಿಲ್ಲ. ತಿನ್ನುವುದಕ್ಕಿದ್ದರೆ ನಾನೀಗ ದುಡಿಯಬಲ್ಲೆ, ಯಾಕೆಂದರೆ ನನ್ನ ದೃಷ್ಟಿ ಸರಿಯಾದೀತು.’ ಡಾಕ್ಟರ್ ವಾಕರ್ ಹೇಳಿದ್ದು ಮೃತನು ಸತ್ತದ್ದು ಬವಳಿ, ನಿತ್ರಾಣ ಮತ್ತು ನಿರಾಹಾರದಿಂದ ಎಂದು. ಮೃತನಿಗೆ ಮಲಗುವುದಕ್ಕೆ ಹಾಸಿಗೆಬಟ್ಟೆಯಿರಲಿಲ್ಲ. ನಾಲ್ಕು ತಿಂಗಳ ಕಾಲ ತಿನ್ನುವುದಕ್ಕೆ ಬ್ರೆಡ್ ಅಲ್ಲದೆ ಬೇರೇನೂ ಇರಲಿಲ್ಲ. ಅವನ ದೇಹದಲ್ಲಿ ಕೊಬ್ಬಿನ ಲವಲೇಶವೂ ಇದ್ದಿರಲಿಲ್ಲ. ಅವನಿಗೆ ರೋಗವೇನೂ ಇರಲಿಲ್ಲ, ಆದರೆ ವೈದ್ಯಕೀಯ ಸೌಲಭ್ಯ ದೊರಕಿದ್ದರೆ ಅವನು ಬವಳಿಯಿಂದ ಬಚಾವಾಗುತ್ತಿದ್ದ. ವಿಚಾರಾಣಾಧಿಕಾರಿ ಈ ವಿಷಯದ ದಾರುಣತೆಯ ಕುರಿತು ಮಾತಾಡಿದ ಮೇಲೆ ಪಂಚರು ನೀಡಿದ ತೀರ್ಪೆಂದರೆ: ‘ಮೃತನು ನಿತ್ರಾಣದಿಂದಲೂ ಆಹಾರ ಮತ್ತು ಸಾಮಾನ್ಯ ಜೀವನಾವಶ್ಯಕತೆಗಳ ಕೊರತೆಯಿಂದಲೂ ಸತ್ತ; ಅದೇ ರೀತಿ ವೈದ್ಯಕೀಯ ಸಹಾಯದ ಅಭಾವದಿಂದಲೂ.’

ಬಡವರು ಯಾಕೆ ಶ್ರಮಾಗಾರಗಳಿಗೆ ಹೋಗಲು ಇಷ್ಟಪಡುವುದಿಲ್ಲ ಎಂದು ಕೇಳುತ್ತಾನೆ ರಸ್ಕಿನ್. ಈ ಪ್ರಶ್ನೆಗೆ ಅವನು ನೀಡುವ ಉತ್ತರವೆಂದರೆ, ಬಡವರಿಗೆ ಶ್ರಮಾಗಾರಗಳ ಕುರಿತಾಗಿ ಪೂರ್ವಾಗಹಗಳಿವೆ ಎನ್ನುವುದು. ಶ್ರೀಮಂತರೂ ‘ಪಿಂಚಣಿ’ ತೆಗೆದುಕೊಳ್ಳುತ್ತಾರೆ; ಆದರೆ ಅವರು ಹೋಗುವುದು ಲೀಲಾಗೃಹಗಳಿಗೆ, ಶ್ರಮಾಗಾರಗಳಿಗಲ್ಲ! ಆದರೆ ಬಡವರಿಗೆ ಸ್ವತಂತ್ರವಾಗಿ ಸತ್ತರೂ ಸರಿಯೇ. ಬಹುಶಃ ಅವರ ಶ್ರಮಾಗಾರಗಳನ್ನು ಇನಷ್ಟು ಆಕರ್ಷಕಗೊಳಿಸಿದರೆ, ಅಥವಾ ಅವರವರು ಇದ್ದಲ್ಲೇ ಅವರಿಗೆ ಪಿಂಚಣಿ ಒದಗಿಸಿದರೆ, ಅಥವಾ ಸಾರ್ವಜನಿಕ ಹಣಕಾಸಿನಿಂದ ಸ್ವಲ್ಪ ಮುಂಗಡ ನೀಡಿದರೆ ಅವರಿಗೆ ಜೀವನ ಸಹ್ಯವಾದೀತು. ವಿಷಯವೇನೆಂದರೆ, ನಾವು ಈ ಸಹಾಯಧನವನ್ನು ಅವರಿಗೆಷ್ಟು ಅವಮಾನದ ಇಲ್ಲವೇ ನೋವಿನ ಸಂಗತಿಯಾಗಿ ಮಾಡುತ್ತೇವೆಂದರೆ, ಅವರು ನಮ್ಮ ಕೈಯಿಂದ ಅದನ್ನು ಸ್ವೀಕರಿಸುವುದಕ್ಕಿಂತ ಸಾಯಲು ಇಷ್ಟಪಡುತ್ತಾರೆ. ಅಥವಾ ಮೂರನೇಯ ಉಪಾಯವಾಗಿ, ನಾವವರನ್ನು ಎಷ್ಟೊಂದು ಮುಗ್ಧರನ್ನಾಗಿಯೂ ಮೂರ್‍ಖರನ್ನಾಗಿಯೂ ಇರಿಸುತ್ತೇವೆಂದರೆ, ಏನು ಮಾಡುವುದು ಅಥವಾ ಏನು ಕೇಳುವುದೆಂದು ಗೊತ್ತಿರದೆ, ಅವರು ಮೂಕ ವನ್ಯಮೃಗಗಳಂತೆ ಹಸಿವಿನಿಂದ ನರಳುತ್ತಾರೆ.

ರಸ್ಕಿನ್ ಈ ಮಾತುಗಳನ್ನು ಹೇಳಿದುದು ಸಾಹಿತ್ಯದ ಓದಿನ ಕುರಿತಾದ ತನ್ನ ಭಾಷಣದಲ್ಲಿ ಎನ್ನುವುದು ಕೆಲವರಿಗೆ ವಿಚಿತ್ರವೆನಿಸಬಹುದು. ಯಾಕೆಂದರೆ ಸಾಹಿತ್ಯದ ಓದಿಗೂ ಇದಕ್ಕೂ ಸಂಬಂಧವೇನು ಅಲ್ಲವೇ? ಈ ಮಾತುಗಳನ್ನು ಹೇಳುತ್ತ ಅಡಿಟಿಪ್ಪಣಿಯಲ್ಲಿ ರಸ್ಕಿನ್ ೧೮೬೫ರ ಮಾರ್‍ನಿಂಗ್ ಪೋಸ್ಟ್ ಎಂಬ ಇನ್ನೊಂದು ಪತ್ರಿಕೆಯಿಂದ ಶ್ರೀಮಂತ ಮಹಿಳಾಮಣಿಯೊಬ್ಬಳ ಮೇಜವಾನಿಗಳ ಕುರಿತು ಪ್ರಕಟವಾದ ವರದಿಯೊಂದನ್ನು ಸಹಾ ಉದ್ಧರಿಸುತ್ತಾನೆ-ಪ್ರಧಾನವಾಗಿ ಅವಳ ಔತಣಕೂಟಗಳಲ್ಲಿ ಕಾಣಿಸುವ ಸಮಾಜಪಮುಖರು ಮತ್ತು ಅವರಿಗೆ ಉಣಬಡಿಸುವ ತಿಂಡಿತೀರ್ಥಗಳ ಬಗೆಗಿನ ವಿವರಗಳು. ನಮ್ಮ ‘ಬೂಟು ಭಾಷಾಂತರಕಾರ’ನ ಪುಟ್ಟ ಕುಟುಂಬ ಅನ್ನವಿಲ್ಲದೆ ಸಾಯುತ್ತಿದ್ದ ಅದೇ ಕಾಲಕ್ಕೆ ಸಂಬಂಧಿಸಿದ್ದು ಈ ಔತಣಕೂಟಗಳೂ ಎನ್ನುವುದು ಗಮನಾರ್‍ಹ. ನಿಮಗೆ ಅನುಕಂಪವೇ ಇಲ್ಲ ಎನ್ನುತ್ತಾನೆ ರಸ್ಕಿನ್ ತನ್ನ ಸಭಿಕರನ್ನು ಉದ್ದೇಶಿಸಿ. ಸಾಹಿತ್ಯ, ವಿಜ್ಞಾನ, ಕಲೆ, ನಿಸರ್ಗ ಮುಂತಾದುವನ್ನು ಪ್ರೀತಿಸದವರು ಓದುವುದಾದರೂ ಹೇಗೆ ಎನ್ನುವುದು ರಸ್ಕಿನ್ನ ಪ್ರಶ್ನೆ. ಇವುಗಳ ಜತೆಯಲ್ಲೇ ಆತ ಅನುಕಂಪವನ್ನೂ ಇರಿಸುತ್ತಾನೆ. ಅನುಕಂಪವಿಲ್ಲದೆ ಓದುವುದರಲ್ಲಿ ಅರ್ಥವಿಲ್ಲ.

ಅನುಕಂಪವೊಂದೇ ಸಾಕೇ? ಎಂದು ನಾವು ಕೇಳಬಹುದು. ಕ್ರಿಯೆ ಬೇಡವೇ? ಇಲ್ಲದಿದ್ದರೆ ಒಂದೆಡೆ ‘ಬೂಟು ಭಾಷಾಂತರಕಾರ’ನಂಥವರು ದಿನವೂ ಸಾಯುತ್ತಲೇ ಇರುತ್ತಾರೆ, ಇನ್ನೊಂದೆಡೆ ಶ್ರೀಮಂತರ ಮೇಜವಾನಿ ಸಾಗುತ್ತಲೇ ಇರುತ್ತದೆ. ನಿಜ, ರಸ್ಕಿನ್‌ನ ಇಂಗ್ಲೆಂಡಿನಲ್ಲಿ ಈಗ ಇಂಥ ಪರಿಸ್ಥಿತಿಯಿಲ್ಲ. ಆದರೆ ಭಾರತದಂಥ ದೇಶದಲ್ಲಿ ಇದೆ. ಇಂಥ ನಿರ್ಲಜ್ಜ ಅನ್ಯಾಯದ ಸನ್ನಿವೇಶದಲ್ಲಿ ಆಯುಧವನ್ನು ಕೈಗೆತ್ತಿಕೊಳ್ಳುವುದೊಂದೇ ಮಾರ್‍ಗವೇ? ಇದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ಸಂವೇದನಾಶೀಲ ಲೇಖಕರಿಗೆ ಧರ್ಮಸಂಕಟದ ಪ್ರಶ್ನೆ.

ಈ ಉಲ್ಲೇಖದ ಜತೆಗೇ ನಾನು ಇನ್ನೊಂದನ್ನೂ ನೀಡಬಯಸುತ್ತೇನೆ. ಇದು The God that Failed (‘ಕೈಕೊಟ್ಟ ದೇವರು’) ಎಂಬ ೧೯೬೫ರ ಪ್ರಸಿದ್ದ ಪುಸ್ತಕದಿಂದ. ಕ್ರಾಂತಿಗಾಗಿ ಕಮ್ಯೂನಿಸಂ ಸೇರಿದ ಕೆಲವು ಲೇಖಕರು ಕಲಾವಿದರು ನಂತರದ ಪಕ್ಷದ ಬಗೆಗಿನ ತಮ್ಮ ಭ್ರಮನಿರಸನವನ್ನು ವಿವರಿಸುವ ಲೇಖನಗಳ ಸಂಗ್ರಹ. ಇವರಲ್ಲೊಬ್ಬನಾದ ಇಂಗ್ಲಿಷ್ ಕವಿ ಸ್ಪೀಫನ್ ಸ್ಪೆಂಡರ್‌ನ ಈ ಕೆಳಗಿನ ಮಾತುಗಳು ಅವನ ಲೇಖನದಿಂದ:

‘ನನ್ನನ್ನು ಮುಂದೊಯ್ದುದು ಸಾಮಾಜಿಕ ಮತ್ತು ವೈಯಕ್ತಿಕವಾದ ಒಂದು ಪಾಪ ಬೋಧೆ, ಅದು ನನ್ನನ್ನು ಪಕ್ಷವಹಿಸಬೇಕೆಂದು, ಕಾರ್ಮಿಕ ಚಳುವಳಿಯ ಜತೆ ಸಹಕರಿಸುವ ಮೂಲಕ ನಾನು ನನ್ನ ಅಸಾಧಾರಣ ವ್ಯಕ್ತಿಕೇಂದ್ರತ್ವದಿಂದ ಮುಕ್ತನಾಗಬೇಕೆಂದು ಅನಿಸುವಂತೆ ಮಾಡಿತು.

ನಾನು ಕಮ್ಮೂನಿಸ್ಟರ ಜತೆ ಸೇರುವ ಅಗತ್ಯವಿರಲಿಲ್ಲ ಎನ್ನುವುದು ನನಗೀಗ ಸ್ಪಷ್ಟವಾಗಿದೆ, ಯಾಕೆಂದರೆ ನಾನು ಆಗಲೇ ಪಕ್ಷವಹಿಸಿದ್ದಾಗಿತ್ತು. ಸಾಮಾಜಿಕ ನ್ಯಾಯದಲ್ಲಿ, ಸ್ವಾತಂತ್ರ್ಯದಲ್ಲಿ. ಮತ್ತು ಈ ಧ್ಯೇಯಗಳನ್ನು ಸಾಧಿಸಲು ಅಗತ್ಯವಾದ ಕ್ರಮಗಳ ಬಗೆಗಿನ ಸತ್ಯವನ್ನು ಹೇಳುವುದರಲ್ಲಿ ಯಾರಿಗೆ ವಿಶ್ವಾಸವಿದೆಯೋ ಅವರು ಯಾರೇ ಆಗಲಿ, ನನ್ನದು ಆ ಪಕ್ಷವಾಗಿತ್ತು. ರಾಜಕಾರಣಿಗಳು ವಿಶ್ವಾಸಾರ್‍ಹವೂ ಮುಕ್ತವೂ ಆದ ಇಂಥದೊಂದು ಪಕ್ಷ ಆಗಲಾರರು ಎಂದಾದರೆ, ಬುದ್ಧಿಜೀವಿಗಳು ಇದ್ದುದರಲ್ಲಿ ಅತಿ ಕಡಿಮೆ ಆತ್ಮವಂಚಕರಾದ ರಾಜಕಾರಣಿಗಳನ್ನು ಬೆಂಬಲಿಸಬೇಕು, ಅವರಿಗೆ ಸಹಕರಿಸುವ ಜತೆ ಜತೆಗೇ ಅವರನ್ನು ವಿಮರ್‍ಶಿಸುತ್ತಲೂ, ಹಿಂಸೆಯ ಮತ್ತು ಸುಳ್ಳುಗಳ ಅವರ ಕ್ರಮಗಳನ್ನು ಎಲ್ಲರೆದುರು ತೆರೆದಿಡುತ್ತಲೂ.

‘೧೯೩ಂರಲ್ಲಿ ಸನ್ಮನಸ್ಸಿನ ಮನುಷ್ಯರ ಉದಾರವಾದಿ ಮನಸ್ಸಾಕ್ಷಿಯ ಒಳತೋಟಿ ಧ್ಯೇಯ ಮತ್ತು ಮಾರ್ಗಗಳ ಸಮಸ್ಯೆಯ ಮೇಲೆ ಕೇಂದ್ರೀಕೃತವಾಗಿತ್ತು. ಅಧಿಕಾರ ಗಳಿಸುವುದಕ್ಕೆ ವಾಮ ಮಾರ್ಗಗಳನ್ನು ಉಪಯೋಗಿಸಬೇಕಾಗುತ್ತದೆ ಎಂದು ವಾದಿಸುತ್ತಲೇ ತಾವು ಅಂಥ ಮಾರ್ಗಗಳನ್ನು ಉಪಯೋಗಿಸುವುದಿಲ್ಲ ಎಂದು ಕಟುವಾಗಿ ನಿರಾಕರಿಸುವುದು ಒಂದು ವಾದವಾಗಿತ್ತು. ಒಬ್ಬ ಲೇಖಕನಾಗಿ ಮತ್ತು ಬುದ್ಧಿಜೀವಿಯಾಗಿ ನನ್ನ ಕರ್ತವ್ಯ ಈ ದ್ವಂದ್ವವನ್ನು ಪ್ರಕಟಪಡಿಸುವುರಾಗಿತ್ತು.

‘ಸ್ವಲ್ಪಮಟ್ಟಿಗೆ, ನನ್ನ ಆರಂಭದ ತಪ್ಪಿನ ನಂತರ, ನಾನದನ್ನು ಪ್ರಕಟಪಡಿಸಿದೆ. ಆದರೂ, ನನ್ನಲ್ಲಿ ಅಮೂಲ್ಯವಾದ್ದಕ್ಕೆ ಮಾತ್ರವಲ್ಲ, ನನ್ನ ಕರ್ತವ್ಯವೂ ಆಗಿದ್ದುದಕ್ಕೆ ನಾನು ನನ್ನನ್ನೇ ವಿಮರ್ಶಿಸಿದೆ, ಹಳಿದುಕೊಂಡೆ: ಇದೊಂದು ಸಾಮಾಜಿಕ ಕಳಕಳಿಯಾಗಿತ್ತು. ಹಾಗೂ ಸಮಾಜಿಕ ಚಳುವಳಿಗೆ ಹೇಳಿಸದಂಥ ನನ್ನೊಳಗಿನ ನನ್ನ ನಿಗೂಢ ವ್ಯಕ್ತಿತ್ವದ ವಾಸ್ತವತೆ.

‘ನನ್ನದೇ ಅನಿಶ್ಚಿತತೆಗಾಗಿ ಮಾತ್ರವಲ್ಲ, ಪ್ರೀತಿ ಮತ್ತು ದಯೆ ಹಾಗೂ ನನ್ನನ್ನು ಕಮ್ಯುನಿಸಮಿನ ಹತ್ತಿರ ತಂದಿದ್ದಂಥ ವೈಯಕ್ತಿಕ ಸ್ವಾತಂತ್ರ್ಯದ ಕುರಿತಾದ ವಾಂಛಲೆಗಾಗಿಯೂ ಪಾಪಬೋಧೆ ತಳೆಯುವುದಕ್ಕೆ ನನ್ನನ್ನು ನಾನೇ ಬಲವಂತಪಡಿಸಲು ಬಿಟ್ಟೆ. ಆ ಭಾವನೆಗಳು ‘ಬೂರ್ಜ್ವಾ’ ಎಂಬುದಾಗಿ ಕಮ್ಯುನಿಸ್ಪರು ನನಗೆ ಹೇಳಿದರು. ಕಮ್ಯುನಿಸ್ಟನು ತಾನು ಕಮ್ಯುನಿಸ್ಟನಾದ ಕಾರಣಗಳಿಂದ ತನ್ನನ್ನು ತಾನು ನಿರ್ವೀರ್ಯನನ್ನಾಗಿ ಮಾಡಿಕೊಳ್ಳಬೇಕು.

‘ಈಗ ನನಗೆ ಸ್ಪಷ್ಟವಾಗಿದೆ. ನಾನು ಬೆಂಬಲಿಸುವುದನ್ನು ಪಕ್ಷ ವಹಿಸದೆ ಉಲ್ಲೇಖಿಸುವುದೇ ನನ್ನ ಕರ್ತವ್ಯ. ಜಗತ್ತಿನ ಸಮಸ್ಯೆಗಳಿಗೆ ಏಕಮಾತ್ರ ಪರಿಹಾರವೆಂದು ನಾನು ನಂಬುವುದನ್ನು, ಸದ್ಯದ ಜಾಗತಿಕ ಧ್ರುವೀಕರಣದಲ್ಲಿ, ಎರಡರಲ್ಲಿ ಯಾವುದೇ ಪಕ್ಷವೂ ಪ್ರತಿನಿಧೀಕರಿಸುವುದಿಲ್ಲ. ಅದೆಂದರೆ: ಸ್ವಾತಂತ್ರ್ಯವನ್ನು ಪ್ರೀತಿಸುವ ಜನರು ಮತ್ತು ರಾಷ್ಟ್ರಗಳು ಸ್ವಾತಂತ್ರಕ್ಕಿಂತ ಹೆಚ್ಚಾಗಿ ಅನ್ನವನ್ನು ಪ್ರೀತಿಸುವಂಥ ಮಿಲಿಯಗಟ್ಟಳೆ ಮಂದಿಯ ಅವಸ್ಥೆಯನ್ನು ಸುಧಾರಿಸುವುದಕ್ಕೆ ಜಗತ್ತಿನಾದ್ಯಂತ ಚಳುವಳಿಯೊಂದರ ನೇತೃತ್ವ ವಹಿಸುವುದು. ಜಗತ್ತಿನಲ್ಲಿ ಸ್ವಾತಂತ್ರ್ಯದ ಮೌಲ್ಯಗಳ ಕುರಿತಾಗಿ ಕಾಳಜಿಯಿರುವ ಕೆಲವೇ ಕೆಲವು ಜನರ ಹಿತಾಸಕ್ತಿಗಳು ಅನ್ನದ ಅಗತ್ಯವಿರುವ ಹಲವರ ಹಿತಾಸಕ್ತಿಗಳ ಜತೆ ಗುರುತಿಸಲ್ಪಡಬೇಕು, ಇಲ್ಲದಿದ್ದರೆ ಸ್ವಾತಂತ್ರ ಕಳೆದುಹೋಗುತ್ತದೆ.’
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೯
Next post ಅನಂತರ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…