ತರಗತಿ ವಿಕೇಂದ್ರೀಕರಣ

ತರಗತಿ ವಿಕೇಂದ್ರೀಕರಣ

ಇಂಗ್ಲಿಷಿನಲ್ಲಿ ಎರ್ಗೊನೋಮಿಕ್ಸ್ (ergonomics) ಎಂಬ ಒಂದು ಪದವಿದೆ. ಇದನ್ನು ಬೇಕಾದರೆ ‘ಸಾಮರ್ಥ್ಯಶಾಸ್ತ್ರ’ (ಅಥವಾ ಕಾರ್ಯಕ್ಷಮತಾ ಶಾಸ್ತ್ರ) ಎಂದು ಕನ್ನಡದಲ್ಲಿ ಕರೆಯಬಹುದೇನೊ. ಕೆಲಸದ ವಾತಾವರಣದಲ್ಲಿ ಕಾರ್ಯಸಾಮರ್ಥ್ಯವನ್ನು ಅಧ್ಯಯನ ಮಾಡುವ ಪ್ರಕಾರ ಇದು. ಮೂಲತಃ ಗ್ರೀಕ್ ಭಾಷೆಯಿಂದ ಬಂದುದು. ಉದಾಹರಣೆಗೆ ಅಡುಗೆ ಕೋಣೆಯಲ್ಲಿ ಬೇಕು ಬೇಕಾದ ವಸ್ತುಗಳನ್ನು ಎಲ್ಲೆಲ್ಲಿ ಯಾವ ರೀತಿ ಇರಿಸುವುದರಿಂದ ಅತ್ಯಂತ ಕಡಿಮೆ ಶ್ರಮದಲ್ಲಿ ಅಡುಗೆ ಕೆಲಸವನ್ನು ಮಾಡಿಕೊಳ್ಳಬಹುದು ಎಂಬುದರ ಅಧ್ಯಯನ “ಸಾಮರ್‍ಥ್ಯಶಾಸ್ತ್ರ’ಕ್ಕೆ ಸಂಬಂಧಿಸಿದುದಾಗಿದೆ. ಫ್ರಿಜ್ ಎಂಬ ಸಾಧನ ಅಡುಗೆ ಕೋಣೆಗೆ ಅತಿ ಸಮೀಪ ಇರಬೇಕು. ಯಾಕೆಂದರೆ ಅಡುಗೆ ಮಾಡುವ ವ್ಯಕ್ತಿ ಫ್ರಿಜ್‌ನ ಬಳಿ ಹೋಗುವುದು ಬಹಳ ಸಲ. ಇದೇ ರೀತಿ ನಾವು ನಮ್ಮ ಕಚೇರಿಯನ್ನೂ ಸರಿಯಾಗಿ ವ್ಯವಸ್ಥೆಗೊಳಿಸುವ ಅಗತ್ಯವಿದೆ. ನಾವು ಕೂತುಕೊಳ್ಳುವ ಮೇಜು, ಕುರ್ಚಿ, ಶೆಲ್ಫು ಎಲ್ಲವೂ ನಮ್ಮ ಕಾರ್ಯಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ.

ನಾನಿಲ್ಲಿ ಮುಖ್ಯವಾಗಿ ಹೇಳಬೇಕೆಂದಿರುವುದು ನಮ್ಮ ಶಾಲಾಕಾಲೇಜುಗಳ ತರಗತಿಗಳ ವಿನ್ಯಾಸಕ್ಕೆ ಸಂಬಂಧಿಸಿ. ಶಿಕ್ಷಣ ರಂಗದಲ್ಲಿ ಹೊಸ ಕ್ರಾಂತಿಗಳು ಆಗುತ್ತಾ ಇವೆ. ಇದರಲ್ಲಿ ಪ್ರಧಾನವಾದ್ದು ‘ವಿದ್ಯಾರ್ಥಿಕೇಂದ್ರಿತ’ ಪಾಠ. ಇದರ ಹಿಂದೆ ದೊಡ್ಡದೊಂದು ಸಿದ್ಧಾಂತವೇ ಅಡಗಿದೆ. ಸ್ವಲ್ಪದರಲ್ಲಿ ಹೇಳುವುದಿದ್ದರೆ: ವಿದ್ಯೆಯನ್ನು ಯಾರೂ ‘ಕಲಿಸು’ವುದಿಲ್ಲ, ಅದನ್ನು ಜನ ‘ಕಲಿ’ಯುತ್ತಾರೆ. ಆದ್ದರಿಂದ ಅಧ್ಯಾಪಕನ ಕೆಲಸ ಸಹಾಯಕನದು, ಮಾರ್ಗದರ್ಶಿಯದು, ತಪ್ಪುತಿದ್ದುವವನದು. ಪಾಠವೆಂದರೆ ವಿದ್ಯಾರ್ಥಿಗಳನ್ನು ಕೂಡಿಹಾಕಿಕೊಂಡು ಅಧ್ಯಾಪಕರು ಭಾಷಣ ಮಾಡುವುದಲ್ಲ; ಬದಲಿಗೆ ವಿದ್ಯಾರ್ಥಿಗಳಲ್ಲಿ ವಿಚಾರಗಳನ್ನು ಹುಟ್ಟಿಸುವುದು, ಆಸಕ್ತಿ ಮೂಡಿಸುವುದು. ಇಲ್ಲಿ ಪ್ರಶ್ನೋತ್ತರ, ಸಾಮೂಹಿಕ ಚರ್ಚೆ, ಗುಂಪುಕೆಲಸ, ಸಹಕಾರ, ಸ್ವಾನುಭವ ಮುಂತಾದುವು ಪ್ರಧಾನ ಕಾರ್ಯವಹಿಸುತ್ತವೆ. ತರಗತಿಯಲ್ಲೇ ಕ್ಷಣಿಕ ಪರೀಕ್ಷೆಗಳು ಅಗತ್ಯವಾಗುತ್ತವೆ. ಇವು ವಿದ್ಯಾರ್ಥಿಗಳು ಯಾವ ರೀತಿ ಚಿಂತಿಸುತ್ತಿದ್ದಾರೆ ಎನ್ನುವುದನ್ನು ಕಂಡುಕೊಳ್ಳುವುದಕ್ಕೆ. ವಿಷಯವೊಂದರ ಕುರಿತಾದ ಸ್ವಯಮಭ್ಯಾಸವನ್ನು ವಿದ್ಯಾರ್ಥಿಗಳಿಗೆ ಹಚ್ಚುವುದು ಅಪೇಕ್ಷಣೀಯ ಮಾತ್ರವಲ್ಲ, ವಿದ್ಯಾರ್ಥಿಗಳು ಗುಂಪಿನಲ್ಲಿ ಪರಸ್ಪರ ಸಹಕರಿಸುತ್ತ ಕಲಿಯುವ ಅಭ್ಯಾಸ ಕೂಡಾ ಒಳ್ಳಯದೇ.

ಇಂಥ ಹೊಸ ಶಿಕ್ಷಣ ವಿಧಾನವೊಂದನ್ನು ತರಗತಿಯಲ್ಲಿ ಕಾರ್ಯಗತವಾಗಬೇಕಿದ್ದರೆ ತರಗತಿ ಅದಕ್ಕೆ ತಕ್ಕಂತೆ ಇರಬೇಕಾದ್ದು ಅಗತ್ಯ. ನನಗೆ ಸ್ವಲ್ಪಮಟ್ಟಿಗೆ ಪರಿಚಯವಿರುವ ಶಾಲೆಯೊಂದಿದೆ. ತಮ್ಮ ಶಾಲೆಯಲ್ಲಿ ಹೊಸ ಶಿಕ್ಷಣ ಕ್ರಮವನ್ನು ಜಾರಿಗೆ ತರಬೇಕೆಂಬ ಉತ್ಸಾಹ ಆಡಳಿತದವರಿಗೆ ಇದೆ. ಆದರೆ ಅವರ ತರಗತಿ ಕೋಣೆಗಳು ಮಾತ್ರ ಹಳೆಯ ಕಾಲದವೇ ಆಗಿವೆ. ಉದಾಹರಣೆಗೆ, ಅಧ್ಯಾಪಕರಿಗೆ ಒಂದು ವೇದಿಕೆ. ಆ ವೇದಿಕೆಯ ಹಿಂದೆ ಒಂದು ಚಿಕ್ಕದಾದ ಕರಿಹಲಗೆ. ಮಕ್ಕಳಿಗೆ ಕೂತುಕೊಳ್ಳಲು ಒಂದರ ಹಿಂದೆ ಒಂದಾಗಿ ಡೆಸ್ಕುಗಳು ಮತ್ತು ಬೆಂಚುಗಳು. ಆದರೆ ಇವು ಎರಕಕಬ್ಬಿಣದಲ್ಲಿ ಮಾಡಿದ ಕಾರಣ ಡೆಸ್ಕಿನಿಂದ ಬೆಂಚನ್ನು ಪತ್ಯೇಕಿಸುವಂತಿಲ್ಲ. ಹಾಗೂ ಈ ಡಬಲ್ ಸಾಧನ ಘನಭಾರವಾಗಿರುವುದರಿಂದ ಸುಲಭದಲ್ಲಿ ಆಚೀಚೆ ಸರಿಸಿಕೊಳ್ಳುವಂತೆಯೂ ಇಲ್ಲ. ಕ್ಲಾಸಿನ ಮಕ್ಕಳು ಸರಿಸುಮಾರು ಒಂದೇ ವಯಸ್ಸಿನವರಾಗಿದ್ದರೂ ಕೆಲವರು ಕುಳ್ಳರೂ ಕೆಲವರು ಎತ್ತರದವರೂ ಆಗಿರುವುದು ಸಹಜ. ಆದರೂ ಎಲ್ಲರೂ ಈ ಡೆಸ್ಕ್-ಬೆಂಚಿಗೆ ಹೊಂದಿಕೊಳ್ಳಲೇಬೇಕು! ಚಿಕ್ಕ ಕೋಣೆಯ ತುಂಬಾ ಮಕ್ಕಳು ಹೀಗೆ ಒತ್ತೊತ್ತಿಗೆ ಇಕ್ಕಟ್ಟಾಗಿ ಕೂತೋ ನಿಂತೋ ಇರುತ್ತಾರೆ. ಸಂಜೆಯ ವೇಳೆಗೆ ಅವರಿಗೆ ಬೆನ್ನು ನೋವಾಗುವುದರಲ್ಲಿ ಸಂಶಯವಿಲ್ಲ. ಇಡೀ ದಿನ ಈ ಮಕ್ಕಳು ಪರಸ್ಪರರ ಮುಖ ನೋಡುವುದಕ್ಕೆ ಅವಕಾಶ ಕಡಿಮೆ. ಹೆಚ್ಚೆಂದರೆ ಹಿಂದಿನವರು ತಮ್ಮ ಮುಂದೆ ಕುಳಿತವರ ಬೆನ್ನು ನೋಡಬಹುದು. ಆದರೂ ಎಲ್ಲರೂ ಅಧ್ಯಾಪಕರನ್ನು ನೋಡುತ್ತಾರೆ. ಹಾಗೂ ಅಧ್ಯಾಪಕರು ಎಲ್ಲರನ್ನೂ ನೋಡುತ್ತಾರೆ. ಇಂಥದೊಂದು ವ್ಯವಸ್ಥೆ ನಮಗೆ ಏನನ್ನು ಸೂಚಿಸುತ್ತದೆ? ಸಾರ್ವಜನಿಕ ವೇದಿಕೆ, ಹಳೆಯ ನಾಟಕ ರಂಗ, ಇಗರ್ಜಿ ಮುಂತಾದ ಕಡೆಗಳನ್ನಲ್ಲವೇ? ಇಂಥ ಕಡೆ ಅಧ್ಯಾಪಕರು ವಿದ್ಯಾರ್ಥಿಗಳ ಜತೆ ಬೆರೆಯುವುದಾಗಲಿ, ಅವರ ಕೆಲಸವನ್ನು ಹತ್ತಿರದಿಂದ ಗಮನಿಸುವುದಾಗಲಿ, ಯಾರಿಗಾದರೂ ಪ್ರತ್ಯೇಕ ಗಮನ ನೀಡುವುದಾಗಲಿ, ಮಕ್ಕಳಿಂದ ಗುಂಪು ಕೆಲಸ ಮಾಡಿಸುವುದಾಗಲಿ, ಅವರನ್ನು ಕರಿಹಲಗೆಯ ಸಮೀಪಕ್ಕೆ ಕರೆದು ಅವರಿಂದ ಅದರಲ್ಲಿ ಬರೆಯಿಸುವುದಾಗಲಿ ಸಾಧ್ಯವೇ ಇಲ್ಲ.

ರಾಣಿ ವಿಕ್ಟೋರಿಯಾಳ ಕಾಲಕ್ಕೆ ಸೇರಿದ ಕೆಲವು ಕಾಲೇಜು ಮತ್ತು ಯೂನಿವರ್ಸಿಟಿಗಳ ಕ್ಲಾಸುಗಳು ನಾಟಕ ರಂಗಮಂದಿರದ ತರವೇ ಇರುತ್ತವೆ. ಎಂದರೆ ಕ್ಲಾಸಿನ ಪ್ರವೇಶದ್ದಾರದಲ್ಲೇ ಮೂರು ನಾಲ್ಕು ಅಡಿ ಎತ್ತರದ ಒಂದು ವೇದಿಕೆ-ಇದು ಅಧ್ಯಾಪಕರಿಗೆ. ಇದರ ಹಿಂದುಗಡೆ ಒಂದು ಕರಿಹಲಗೆ. ಮುಂದುಗಡೆ ಕ್ರಮಾಗತವಾಗಿ ಮೇಲು ಮೇಲಕ್ಕೆ ಏರುವ ಅಂಕರಿಕೆಗಳ ಪ್ರದೇಶ. ವಿದ್ಯಾರ್ಥಿಗಳಿಗೆ ಹಾಕಿರುವ ಹೆಚ್ಚಾಗಿ ಎರಕಕಬ್ದಿಣದ್ದೇ ಆಗಿರುವ-ಡೆಸ್ಕ್ ಮತ್ತು ಬೆಂಚುಗಳು ಒಟ್ಟಿಗೇ ಸೇರಿರುವ ರಚನೆಗಳು. ಇಂಥ ವೇದಿಕೆಯಲ್ಲಿ ನಿಂತ ಯಾವ ಅಧ್ಯಾಪಕ ತಾನೇ ಭಾಷಣ ಸ್ಥೂರ್ತಿಯನ್ನು ಬಿಟ್ಟುಕೊಡುತ್ತಾನೆ? ಇಂಥ ಸಭಾಗೃಹಗಳು ಸಭೆ ನಡೆಸುವುದಕ್ಕೆ ಸರಿ, ಆದರೆ ಪಾಠ ಹೇಳುವುದಕ್ಕೆ ನಾಲಾಯಖ್ಖು. ಇಂಥ ಕಟ್ಟಡಗಳನ್ನೆಲ್ಲ ಕೆಡವಿ ಹೊಸಮಾದರಿಯ ಕಟ್ಟಡಗಳನ್ನು ಕಟ್ಟಬೇಕಾಗಿದೆ. ದುರದೃಷ್ಟದ ಸಂಗತಿಯೆಂದರೆ ಈಚೆಗೆ ಕಟ್ಟಿದ ಕೆಲವು ಶಾಲಾ ಕಾಲೇಜು ಕಟ್ಟಡಗಳಲ್ಲಿ ಕೂಡಾ ಇಂಥದೇ ಬುದ್ಧಿಹೀನತೆಯನ್ನು ಕಾಣುತ್ತೇವೆ.

ಇದಕ್ಕೆ ಬದಲು ಕ್ಲಾಸಿನಲ್ಲಿ ಊಟದ ಟೇಬಲ್ ತರದ ಐದಾರು ಟೇಬಲುಗಳು, ಅವುಗಳ ಸುತ್ತ ಕೂರಲು ಕುರ್ಚಿಗಳು ಇದ್ದರೆ ಅವನ್ನು ಬೇಕು ಬೇಕಾದಂತೆ ಆಗಾಗ್ಗೆ ಬದಲಿಸಲು, ಮರುವ್ಯವಸ್ಥೆಗೊಳಿಸಲು ಬರುತ್ತದೆ. ಅಧ್ಯಾಪಕರೂ ವಿದ್ಯಾರ್ಥಿಗಳ ಕೆಲಸವನ್ನು ಹತ್ತಿರದಿಂದ ಗಮನಿಸಬಹುದು. ಯಾರಿಗಾದರೂ ಪತ್ಯೇಕ ಸಹಾಯ ಬೇಕಿದ್ದರೆ ಅದನ್ನು ಒದಗಿಸುವುದಕ್ಕೆ ಬರುತ್ತದೆ. ಮಕ್ಕಳನ್ನು ಕರಿಹಲಗೆಯಲ್ಲಿ ಬರೆಯಲು ಪ್ರೇರೇಪಿಸಲಿಕ್ಕೆ ಸಾಧ್ಯವಾಗುತ್ತದೆ. ಗುಂಪು ಕೆಲಸಗಳಿಗಂತೂ ಇದು ಅತ್ಯುತ್ತಮ ವ್ಯವಸ್ಥೆ. ಈ ಕರಿಹಲಗೆಗಳ ಬಗ್ಗೆ ಒಂದು ಮಾತು. ಅದು ಕ್ಲಾಸಿಗೆ ಒಂದೇ ಇರಬೇಕೆಂದೇನೂ ಇಲ್ಲ! ಅಕ್ಕ ಪಕ್ಕದ ಗೋಡೆಗಳಲ್ಲೂ ಇನ್ನೂ ಒಂದೆರಡನ್ನು ಹಾಕಿಕೊಳ್ಳಬಹುದು. ಇಂಥ ಕ್ಲಾಸ್‌ರೂಮುಗಳಲ್ಲಿ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಹೆಚ್ಚಿನ ಚಲನೆಗಳಿರುತ್ತವೆಯಾದ್ದರಿಂದ ಎಂದೂ ಬೋರೆನಿಸುವುದಿಲ್ಲ. ವಿದ್ಯಾರ್ಥಿಗಳು ದಿನವಿಡೀ ಕೂತಲ್ಲೇ ಇರಬೇಕೆಂದು ಬಯಸುವುದು ಸರಿಯಲ್ಲ. ತಾಂತ್ರಿಕ ಸಲಕರಣೆಗಳು ಸಾಕಷ್ಟು ಲಭ್ಯವಾಗುತ್ತಿರುವ ಈ ದಿನಗಳಲ್ಲಿ ಕ್ಲಾಸ್‌ರೂಮಿಗೆ ಒಂದರಂತೆ ಅಂತರ್ಜಾಲಯುಕ್ತವಾದ ಕಂಪ್ಯೂಟರ್ ಹಾಗೂ ಎಲ್‌ಸಿಡಿ ಪ್ರೊಜೆಕ್ಟರುಗಳಿದ್ದರೆ ಇವುಗಳಿಂದ ಎಷ್ಟೋ ಲಾಭ ಪಡೆದುಕೊಳ್ಳಬಹುದಾಗಿದೆ. ನಾನು ಈಗಾಗಲೇ ಹೆಸರಿಸಿದ ಶಾಲೆಯಲ್ಲಿ ಕ್ಲಾಸಿಗೊಂದರಂತೆ ಟೀವಿ ಕ್ಯಾಮರಾ ತಗಲಿಸಿ ಅಧ್ಯಾಪಕರ ಪಾಠಗಳನ್ನು ಕಣ್ಣೆಚ್ಚರದಿಂದ ನೋಡಿಕೊಳ್ಳುವ ವ್ಯವಸ್ಥೆಯಿದೆ; ಆದರೆ ಕ್ಲಾಸಿಗೊಂದರಂತೆ ಆಧುನಿಕ ಕಂಪ್ಯೂಟರ್ ಒದಗಿಸೋಣವೆಂದು ಆಡಳಿತಕ್ಕೆ ಅನಿಸಿಯೇ ಇಲ್ಲ! ಹಾಗೂ ಈ ಎರಕಕಬ್ಬಿಣದ ಎಡವಟ್ಟುಗಳ ಕುರಿತು ಆಡಳಿತಕ್ಕೆ ಕಿಂಚಿತ್ತೂ ಪರಿಜ್ಞಾನವಿರುವಂತೆ ತೋರುವುದಿಲ್ಲ. ನಿಜ, ಇಂಥ ಕ್ಲಾಸುಗಳಲ್ಲಿ ಮನಬಂದಂತೆ ವಿದ್ಯಾರ್ಥಿಗಳನ್ನು ತುರುಕುವುದು ಸಾಧ್ಯವಾಗದು. ಒಂದು ಕ್ಲಾಸಿಗೆ ಇಪ್ಪತ್ತು-ಇಪ್ತತ್ತೈದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದರೆ ಇದು ಕಷ್ಟವೇ ಸರಿ.

ಒಂದು ವೇಳೆ ಕ್ಲಾಸಿಗೊಂದರಂತೆ ಕಂಪ್ಯೂಟರ್ ಮತ್ತು ಪ್ರೊಜೆಕ್ಟರುಗಳಂಥ ಆಧುನಿಕ ತಾಂತ್ರಿಕ ಸಲಕರಣೆಗಳನ್ನು ಒದಗಿಸುವ ಆರ್ಥಿಕ ಶಕ್ತಿ ಶಾಲೆ ಕಾಲೇಜುಗಳಿಗೆ ಇಲ್ಲದಿದ್ದರೂ ನಾನು ಸೂಚಿಸಿದಂಥ ಕನಿಷ್ಠ ಮೇಜು ಕುರ್ಚಿ ಕರಿಹಲಗೆ ಮುಂತಾದ ಮೂಲಭೂತ ಸೌಕರ್ಯಗಳನ್ನಾದರೂ ಸರಿಯಾದ ರೀತಿಯಲ್ಲಿ ಒದಗಿಸುವುದು ಅಗತ್ಯ. ಅದಲ್ಲದಿದ್ದರೆ ವಿದ್ಯಾರ್ಥಿಕೇಂದ್ರಿತ ಶಿಕ್ಷಣಕ್ರಮವನ್ನು ಕಾರ್ಯಗತಗೊಳಿಸುವುದು ಹೇಗೆ? ನಾವು ಮಾದರಿ ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ, ಆದರೆ ಅವುಗಳ ಕಾರ್ಯಪ್ರಾಪ್ತಿಗೆ ಬೇಕು ಬೇಕಾದ ಸೌಲಭ್ಯಗಳ ಕುರಿತು ಚಿಂತಿಸುವುದಿಲ್ಲ. ಯೋಜನೆಗಳು ಸರಿಯಾಗಬೇಕಾದರೆ ಅಧ್ಯಾಪಕರು, ಹೆತ್ತವರು, ಆಡಳಿತದವರು ಮತ್ತು ಶಿಕ್ಷಣತಜ್ಞರು ಒಟ್ಟಿಗೆ ಕೂತು ಯೋಚಿಸುವುದು ಅಗತ್ಯ. ಅಗತ್ಯವಿದ್ದರೆ ವಿದ್ಯಾರ್ಥಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಉತ್ತಮ.

ಕೆಲವು ಸಲ ಹೆಚ್ಚಿನ ಸೌಲಭ್ಯಗಳಿಲ್ಲದೆ ಇದ್ದರೂ ಕೆಲವೊಂದು ಸಣ್ಣ ಪುಟ್ಟ ಕ್ರಾಂತಿಗಳನ್ನು ತರುವುದು ಸಾಧ್ಯ. ನನ್ನ ಅನುಭವಕ್ಕೆ ಬಂದ ಸಂಗತಿಯೊಂದನ್ನು ಇಲ್ಲಿ ಉಲ್ಲೇಖಿಸುವುದು ಉಚಿತವಾಗಬಹುದು. ನಾನು ಸನಾ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕನಾಗಿದ್ದಾಗ ನಡೆದ ಸಂಗತಿಯಿದು-ಯೆಮೆನ್ ದೇಶದ ರಾಜಧಾನಿ ಸನಾ. ಸ್ನಾತಕ ತರಗತಿಗಳು ನಡೆಯುವ ಕಡೆ ಅಧ್ಯಾಪಕರಿಗೆ ಒಂದು ವೇದಿಕೆ, ಹಿಂದುಗಡೆ ಕರಿಹಲಗೆ ಇದ್ದುವು. ಅದೃಷ್ಟವಶಾತ್ ಈ ಕರಿಹಲಗೆ ಗೋಡೆಯ ಕೊನೆಯಿಂದ ಕೊನೆಯ ತನಕ ಇದ್ದ ಕಾರಣ ಅದರಲ್ಲಿ ಎಷ್ಟು ಬೇಕಾದರೂ ಬರೆಯಬಹುದಿತ್ತು. ಅಲ್ಲಿ ಇನ್ನೊಂದು ಅನುಕೂಲವೂ ಇತ್ತು. ವಿದ್ಯಾರ್ಥಿಗಳ ಕುರ್ಚಿಗೇ ಬಲಕೈಗೆ ಬರೆಯುವ ಹಲಗೆಯನ್ನೂ ಜೋಡಿಸಲಾಗಿತ್ತು. ಆದ್ದರಿಂದ ಮಂಚ, ಡೆಸ್ಕುಗಳ ತೊಡಕು ಇರಲಿಲ್ಲ. ಅವಗುಂಠನ (ಬುರ್ಖಾ) ಧರಿಸಿದ್ದ ವಿದ್ಯಾರ್ಥಿನಿಯರೇ ಹೆಚ್ಚಿದ್ದ ಕ್ಲಾಸುಗಳು ಪ್ರತಿಯೊಂದೂ! ಹುಡುಗರು ಒಂದು ಉದ್ದಸಾಲಿನಲ್ಲಿ ಹುಡುಗಿಯರು ಇನ್ನೊಂದು ಉದ್ದ ಸಾಲಿನಲ್ಲಿ ಕೂತುಕೊಳ್ಳುತ್ತಿದ್ದರು. ಇವರ ಮಧ್ಯೆ ನಡೆಯುವುದಕ್ಕೆ ಸ್ವಲ್ಪ ಸ್ಥಳ ಇತ್ತು. ಆದರೆ ವಿದ್ಯಾರ್ಥಿನಿಯರ ಸಾಲು ವೇದಿಕೆಗೆ ಒತ್ತಿಕೊಂಡು ಕೆಳಗಡೆಯೇ ಇದ್ದುದರಿಂದ ಅಧ್ಯಾಪಕ ಕೆಳಗಿಳಿದು ವಿದ್ಯಾರ್ಥಿಯರ ಜತೆ ಬೆರೆಯುವುದಕ್ಕೆ ಅನಾನುಕೂಲವಾಗುತ್ತಿತ್ತು. ಅಂಥ ಅಭ್ಯಾಸವೂ ಅಲ್ಲಿ ಇಲ್ಲದ ಕಾರಣ ಇದೊಂದು ಅನಾನುಕೂಲತೆಯೆಂದು ಬಹುಶಃ ಯಾರೂ ಭಾವಿಸಿರಲೇ ಇಲ್ಲ. ಆದರೆ ಬೇರೆ ರೀತಿಗೆ ಒಗ್ಗಿದ್ದ ನನಗೆ ಇದು ಸರಿಬರಲಿಲ್ಲ. ನಾನು ಕಲಿಸುತ್ತಿದ್ದುದು ಇಂಗ್ಲಿಷ್ ಭಾಷಾವಿಜ್ಞಾನ. ಪದಗಳಿಗೆ ವಾಕ್ಯಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಬಿಡಿಸುವ ಕೆಲಸವಿತ್ತು. ನಾನೇನೋ ಕರಿಹಲಗೆಯಲ್ಲಿ ಮಾದರಿಗಳನ್ನು ಮಾಡಿತೋರಿಸುತ್ತಿದ್ದೆ. ಆದರೆ ನನಗೆ ವಿದ್ಯಾರ್ಥಿಗಳ ಕೈಯಿಂದಲೇ ಇಂಥವನ್ನು ಮಾಡಿಸುವ ಅಭ್ಯಾಸ. ಇದಕ್ಕೆ ಕ್ಲಾಸ್ ರೂಮಿನ ಓರಣ ಸರಿಯಾಗಿರಲಿಲ್ಲ. ನಾನು ವಿದ್ಯಾರ್ಥಿಗಳಿಗೆ ಇನ್ನು ಮುಂದೆ ನನ್ನ ಕ್ಲಾಸಿನಲ್ಲಿ ಮೂರು ಉದ್ದದ ಸಾಲುಗಳನ್ನು ಮಾಡಬೇಕು, ಅರ್ಥಾತ್ ವಿದ್ಯಾರ್ಥಿನಿಯರು ಎರಡು ಸಾಲುಗಳಲ್ಲಿ ಕೂತುಕೊಳ್ಳಬೇಕು, ಸಾಲುಗಳ ಮಧ್ಯೆ ನಡೆದಾಡಲು ನನಗೆ ಸಾಕಷ್ಟು ಜಾಗ ಬೇಕು, ವೇದಿಕೆಯ ಕೆಳಗೆ ಕೂಡಾ ಅಡ್ಡಕ್ಕೆ ನಡೆದಾಡಲು ಸ್ಥಳ ಬಿಡಬೇಕು ಎಂದೆಲ್ಲ ಸೂಚಿಸಿದೆ. ಅವರ ಕೈಯಿಂದ ಹಾಗೇ ಮಾಡಿಸಿ ತೋರಿಸಿದೆ. ನಂತರ ನನಗೆ ಅವರ ಮಧ್ಯೆ ನಡೆದಾಡಲು ಸಾಧ್ಯವಾಯಿತು. ನಾನು ಕೊಟ್ಟ ಸಮಸ್ಯೆಗಳನ್ನು ಅವರು ಹೇಗೆ ಬಗೆಹರಿಸುತ್ತಿದ್ದಾರೆ ಎಂದು ಹೋಗಿ ನೋಡುತ್ತಿದ್ದೆ. ಮಾತ್ರವಲ್ಲ, ವಿದ್ಯಾರ್ಥಿಗಳನ್ನು ಕರಿಹಲಗೆಗೆ ಕರೆದು ಅವರ ಕೈಯಿಂದಲೇ ಹಲಗೆ ಮೇಲೆ ಸಮಸ್ಯೆ ಬಿಡಿಸಿತೋರಿಸುವಂತೆ ಹೇಳುತ್ತಿದ್ದ. ಯಾರಾದರೊಬ್ಬರು ಮಾಡಿದ್ದು ತಪ್ಪಾದರೆ ಇತರ ವಿದ್ಯಾರ್ಥಿಗಳು ಹೇಳುವಂತೆ, ಅವರೇ ಮುಂದೆ ಬಂದು ಸರಿಪಡಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದೆ. ಮೊದ ಮೊದಲಿಗೆ ಇದೆಲ್ಲವೂ ಅವರಿಗೆ ವಿಚಿತ್ರವಾಗಿ ಕಾಣಿಸುತ್ತಿತ್ತು. ಆದರೆ ಬಹಳ ಬೇಗನೆ ಅವರು ಈ ಕ್ಲಾಸ್ ಮರುಜೋಡಣೆಯ ಉಪಯೋಗವನ್ನು ಆಸ್ವಾದಿಸತೊಡಗಿದರು. ಯಾವ ವಿದ್ಯಾರ್ಥಿಯಾಗಲಿ ‘ಡಾಕ್ಟರ್’ ಎಂದು (ಸನಾದಲ್ಲಿ ವಿದ್ಯಾರ್ಥಿಗಳು ಪುರುಷ ಅಧ್ಯಾಪಕರನ್ನು ಸಂಬೋಧಿಸುವುದು ಹಾಗೆ) ಕರೆದು ಸಹಾಯ ಕೋರುವುದು ಸಾಧ್ಯವಾಯಿತು. ಮಾತ್ರವಲ್ಲ ಕರಿಹಲಗೆಗೆ ಬಂದು ಸಮಸ್ಯೆಗಳನ್ನು ಬಿಡಿಸುವುದಕ್ಕೆ ಪೈಪೋಟಿಯೂ ಸುರುವಾಯಿತು! ಇಬ್ಬಿಬ್ಬರೋ, ಒಂದು ಹಂತಿಯವರೋ ಒಟ್ಟಿಗೆ ಅಭ್ಯಾಸ ಮಾಡುವುದಕ್ಕೂ ನಾನು ಅವರನ್ನು ಪ್ರೇರೇಪಿಸಿದೆ. ಅವರ ಕಲಿಕೆಯ ಪ್ರಮಾಣದಲ್ಲಿ ಗಣನೀಯವಾದ ಸುಧಾರಣೆ ಕಾಣಿಸತೊಡಗಿತು ಮಾತ್ರವಲ್ಲ ಪಾಠ ಎಂದರೆ ಎಲ್ಲರಿಗೂ ಒಂದು ಖುಷಿಯ ವಿಷಯವಾಯಿತು.

ಸನಾದಲ್ಲಿ ಒಂದು ಪಿರಿಯಡ್ ಎಂದರೆ ಒಂದೂವರೆ ಗಂಟೆಯ ಕಾಲಾವಧಿ. ವಿದ್ಯಾರ್ಥಿಗಳು ದೂರ ಪ್ರದೇಶಗಳಿಂದ ಬಸ್ಸಿನಲ್ಲೋ ಕಾರಿನಲ್ಲೋ ಬೆಳಿಗ್ಗೆ ಎಂಟು ಗಂಟೆಗೇ ಕ್ಲಾಸಿಗೆ ಬರಬೇಕಾಗಿತ್ತು. ಇಂಥ ಪರಿಸರದಲ್ಲಿ ದೀರ್ಘಾವಧಿಯ ಕ್ಲಾಸಿನಲ್ಲಿ ಕೂತುಕೊಳ್ಳುವುದೆಂದರೆ ಬೇಸರ, ನಿದ್ದೆ ಬರುವುದು ಸಾಧಾರಣ. ಪಿರಿಯಡ್‌ನ ಅರ್ಧದಲ್ಲಿ ಮೈ ಮನಸ್ಸು (ಮಾತು ಕೂಡಾ!) ಸಡಿಲಿಸಿಕೊಳ್ಳುವುದಕ್ಕೆ ಐದು ನಿಮಿಷಗಳ ವಿರಾಮವನ್ನೂ ನಾನು ನನ್ನ ಕ್ಲಾಸಿನಲ್ಲಿ ಜಾರಿಗೆ ತಂದೆ. ವಿರಾಮ ಸಮಯವೆಂದರೆ -ಹಾಗೂ ಆಗಲೂ ನಾನು ವಿದ್ಯಾರ್ಥಿಗಳೊಂದಿಗೆ ಬೆರೆತೇ ಇರುತ್ತಿದ್ದೆ. ಹೀಗೆ ಕ್ಲಾಸಿನ ರೀತಿಯನ್ನೇ ಬದಲಾಯಿಸಿದ ಮೇಲೆ ವಿದ್ಯಾರ್ಥಿಗಳು ಇದೊಂದು ಕ್ಲಾಸು ಎನ್ನುವುದನ್ನೇ ಮರೆತು ಕಲಿಯುವ ವಿಷಯದಲ್ಲಿ ಹೆಚ್ಚು ಆಸಕ್ತಿ ಉತ್ಸಾಹ ತೋರಿಸತೊಡಗಿದರು ಎನ್ನುವುದನ್ನು ನಾನು ಕಂಡುಕೊಂಡೆ. ಪ್ರತಿಯೊಬ್ಬ ಅಧ್ಯಾಪಕನೂ ಹೀಗೆ ತನ್ನ ಸನ್ನಿವೇಶದಲ್ಲೇ ಏನಾದರೂ ಸಣ್ಣ ಪುಟ್ಟ ಬದಲಾವಣೆಗಳು ಸಾಧ್ಯವೋ ಎಂದು ಪ್ರಯತ್ನಿಸಿ ನೋಡಬೇಕು. ಯಾಕೆಂದರೆ ಸಣ್ಣ ಪುಟ್ಟ ಬದಲಾವಣೆಗಳು ಕೂಡಾ ದೊಡ್ಡ ಪಮಾಣದ ಪರಿಣಾಮ ಉಂಟುಮಾಡಬಲ್ಲವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವು ಬಂದಾಗ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪

ಸಣ್ಣ ಕತೆ

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys