ಪ್ರಶಸ್ತಿ

ಪ್ರಶಸ್ತಿ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಊರ ಚೇರುಮನ್ನರಿಗೆ ರಾಷ್ಟ್ರಪ್ರಶಸ್ತಿ ಬಂದದ್ದಕ್ಕೆ ಊರಿಗೆ ಊರೇ ರೋಮಾಂಚನಗೊಂಡಿತ್ತು. ತೀರಾ ಸಣ್ಣ ಊರದು. ಭಾರತದ ಭೂಪಟದಲ್ಲಿ ಅದಕ್ಕೊಂದು ಸ್ಥಾನವೇ ಇರಲಿಲ್ಲ. ಸಂತೋಷಪಡಲು ಅದಕ್ಕೊಂದು ಕಾರಣವೂ ಇರಲಿಲ್ಲ. ಈಗ ಅದು ದೊರಕಿತ್ತು.

ಚೇರುಮನ್ನರ ಹೆಸರು ಊರಿನವರಿಗೂ ಮರೆತು ಹೋಗಿತ್ತು. ಹಿಂದೆ ಅವರು ಪಂಚಾಯತು ಸದಸ್ಯರಾಗಿ ಆಯ್ಕೆ ಯಾಗಿದ್ದರು. ಆಮೇಲೆ ಅವಿರೋಧವಾಗಿ ಚೇರುಮನ್ನರ ಸ್ಥಾನ ಪಡೆದಿದ್ದರು. ಅದಕ್ಕೆ ಅವರು ಹಂಚಿದ ತೊಟ್ಟೆಗಳೇ ಕಾರಣವೆಂದು ಜನರು ಆಡಿಕೊಂಡಿದ್ದರು. ಆಮೇಲೆ ಅವರನ್ನು ತೊಟ್ಟೆ ಚೇರುಮನ್ನು ಎಂದು ಕರೆಯತೊಡಗಿದರು. ಈಗವರು ಜಿಲ್ಲಾ ಪಂಚಾಯತು ಸದಸ್ಯರಾಗಿದ್ದಾರೆ. ಆದರೆ ಜನ ಅವರನ್ನು ಚೇರುಮನ್ನರೆಂದೇ ಕರೆಯುತ್ತಾರೆ.

ಚೇರುಮನ್ನರಿಗೆ ರಾಷ್ಟ್ರಪ್ರಶಸ್ತಿ ಬಂದದ್ದು ದೊಡ್ಡ ಸುದ್ದಿಯಾಯಿತು. ಅದರೊಟ್ಟಿಗೆ ರಾಜಕೀಯ ರತ್ನವೆಂಬ ಬಿರುದು ಕೂಡಾ ಬರಲಿಕ್ಕಿದೆಯೆಂದು ಊರ ಪತ್ರಿಕೆಗಳು ವರದಿ ಮಾಡಿದವು. ಪರಿಸರ ಕಾಪಾಡುವಲ್ಲಿ ಚೇರುಮನ್ನರು ಅಮೋಘ ಸೇವೆ ಸಲ್ಲಿಸಿದ್ದಕ್ಕೆ ಬಂದ ಪ್ರಶಸ್ತಿ ಇದು ಎಂಬ ಸುದ್ದಿ ಹರಡಿತು.

ಚೇರುಮನ್ನರಿಗೆ ಪ್ರಶಸ್ತಿ ಬಂದದ್ದೇ ತಡ, ಸ್ಥಳೀಯ ಪತ್ರಿಕೆಗಳು ಊರ ದೊಡ್ಡ ಮನುಷ್ಯರನ್ನು ಭೇಟಿ ಮಾಡಿದವು. ಪ್ರಶಸ್ತಿಯ ಬಗ್ಗೆ ತಮ್ಮ ಅಭಿಪ್ರಾಯವೇನು? ಎಂದು ಮಾತಿಗಾರಂಭಿಸಿ ಒಂದು ಸಾವಿರ ಕೊಟ್ಟರೆ ನಿಮ್ಮ ಹೆಸರಲ್ಲಿ ಚೇರುಮನ್ನರಿಗೊಂದು ಶುಭ ಹಾರೈಕೆ ಹಾಕುತ್ತೇವೆ ಎಂದು ಮಾತು ನಿಲ್ಲಿಸಿದವು. ದೊಡ್ಡ ಮನುಷ್ಯರು ಸಂಕಟ ಪಟ್ಟರು. ಒಂದು ಸಾವಿರ ಕೊಟ್ಟು ಪ್ರತಿಷ್ಠೆ ಉಳಿಸಿಕೊಂಡರು. ರಾಷ್ಟ್ರ ಪ್ರಶಸ್ತಿ ಪಡೆದ ಚೇರುಮನ್ನರು ಸ್ಥಳೀಯ ಪತ್ರಿಕೆಗಳನ್ನು ತರಿಸಿಕೊಂಡರು. ತಮಗೆ ಶುಭಾಶಯ ತಿಳಿಸಿದ ಮಂದಿಗಳ ಪಟ್ಟಿ ತಯಾರಿಸಿದರು. ಅವರಿಗೆಲ್ಲ ವಂದನಾರ್ಪಣೆ ತಿಳಿಸುವ ಪತ್ರವನ್ನು ಸಿದ್ಧಪಡಿಸಿದರು.

“ನಮ್ಮ ಪುಟ್ಟ ಊರಿಗೆ ಮೊದಲು ಬಾರಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ನನ್ನನ್ನು ರಾಜಕೀಯರತ್ನವೆಂದು ರಾಷ್ಟ್ರವು ಗುರುತಿಸಿದೆ. ಈ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ನನಗೆ ಅನೇಕರು ಅಭಿನಂದನೆ ತಿಳಿಸಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಊರಿಗೆ ಇನ್ನಷ್ಟು ಸೇವೆ ಸಲ್ಲಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದೀರಿ. ನಿಮ್ಮೆಲ್ಲರ ಆಶೀರ್ವಾದ ದಿಂದ ಇನ್ನಷ್ಟು ಪ್ರಶಸ್ತಿಗಳು ನನಗೆ ಬರಲೆಂದು ನಾನು ಹಾರೈಸುತ್ತೇನೆ. ನಿಮ್ಮ ಅಭಿಮಾನಕ್ಕಾಗಿ ನನ್ನ ಭಾವ ಚಿತ್ರದ ಪ್ರತಿಯೊಂದನ್ನು ತಮಗೆ ಕಳಿಸಿಕೊಡುತ್ತಿದ್ದೇನೆ. ಇದನ್ನು ಫ್ರೇಮು ಹಾಕಿಸಿ ಮನೆಯಲ್ಲಿ ತೂಗು ಹಾಕಬೇಕಾಗಿ ವಿನಂತಿಸುತ್ತೇನೆ.”

ಪೇಪರಲ್ಲಿ ಅಭಿನಂದನೆ ಹಾಕಿದಲ್ಲಿಗೆ ವಿಷಯ ಮುಗಿಯಿತು ಎಂದುಕೂಂಡಿದ್ದ ಊರಿನ ಪ್ರತಿಷ್ಠಿತ ಆಢ್ಯರಿಗೆ ಈಗ ಹೊಸ ಸಂಕಟ ಎದುರಾಯಿತು. ಅವರ ಮನೆಗೀಗ ಚೇರುಮನ್ನರು ಪ್ರಶಸ್ತಿ ಸ್ವೀಕರಿಸುವ ಭಾವಚಿತ್ರ ಬಂದು ಬಿಟ್ಟಿದೆ. ಅದನ್ನೆಲ್ಲಿಡುವುದು? ಮುಂದಿನ ಬಾರಿ ಓಟುಕೇಳಲು ಬರುವಾಗ ಚೇರುಮನ್ನರು ಪೋಟೋ ಎಲ್ಲೆಂದು ಕೇಳಿಯೇ ಕೇಳುತ್ತಾರೆ. ಏನು ಮಾಡುವುದು? ಇದನ್ನು ಹಾಗೆ ತೂಗು ಹಾಕಿದರೆ ನಾಲ್ಕು ದಿನಗಳಲ್ಲಿ ಮಸಿ ಹಿಡಿದು ಹಾಳಾಗಿ ಬಿಡುತ್ತದೆ. ಇದಕ್ಕಿನ್ನು ಫ್ರೇಮು ಹಾಕಬೇಕು. ಛೀ! ಇದೆಲ್ಲಿಗೆ ಬಂತಪ್ಪಾ ಎಂದು ಪೇಚಾಡಿಕೊಂಡರು.

ಚೇರುಮನ್ನರಿಗೊಬ್ಬ ಏಜೆಂಟನಿದ್ದ. ಅವನೆದುರು ಚೇರುಮನ್ನರು ತನಗೆ ಅಭಿನಂದನೆ ಹಾಕದ ಪ್ರತಿಷ್ಠಿತರ ಪಟ್ಟಿಯನ್ನು ತೋರಿಸಿದರು. “ಕಲಿಸ್ತೇನೆ ನನ್ನ ಮಕ್ಕಳಿಗೆ. ನನಗೆ ಅಭಿನಂದನೆ ಹಾಕದವರ ಅಂಗಡಿ ಲೈಸೆನ್ಸು ಕಾನ್ಸಲು ಮಾಡಿಸುತ್ತೇನೆ. ಹೋಟೇಲು ಮುಚ್ಚಿಸುತ್ತೇನೆ. ಏನೆಂದು ಕೊಂಡಿದ್ದಾರೆ ನನ್ನನ್ನು?”ಎಂದು ಹಾರಾಡಿದರು.

ಏಜೆಂಟನು ತಲೆಸವರುವ ಮಾತಾಡಿದ.”ನೀವ್ಯಾಕೆ ದನಿ ಯೋಚನೆ ಮಾಡುತ್ತೀರಿ? ನಾನಿದ್ದೇನೆ. ಎಲ್ಲಾ ಸರಿಮಾಡುತ್ತೇನೆ. ಆದರೆ ಇದಕ್ಕಿಂತ ಮುಖ್ಯವಾದದ್ದು ಬೇರೊಂದು ವಿಷಯವಿದೆ. ನಿಮ್ಮ ಜಿಲ್ಲಾ ಪಂಚಾಯತು ಕ್ಷೇತ್ರದಲ್ಲಿ ಬರುವ ಗವರ್ನಮೆಂಟು ಶಾಲೆಗಳ ಮೇಸ್ಟ್ರುಗಳು ಯಾರೂ ನಿಮಗೆ ಅಭಿನಂದನೆ ಹಾಕಿಲ್ಲ. ನಿಮ್ಮ ಆಶೀರ್ವಾದ ಸಿಕ್ಕಿದರೆ ಸಾಕು. ಅಭಿನಂದನೆ ಹಾಕದವರನ್ನು ಟ್ರಾನ್ಸ್ಫರ್ ಮಾಡುಬಿಡುತ್ತೇನೆ.”

ಚೇರುಮನ್ನರಿಗೆ ಏಜೆಂಟನು ತನ್ನ ಹೆಸರು ಹೇಳಿ ಹಣ ಮಾಡುವ ವಿಷಯ ಗೊತ್ತಿತ್ತು. ಆದರೆ ಅದರಲ್ಲಿ ಅವನು ಸ್ವಲ್ಪ ಪರ್ಸಂಟೇಜನ್ನು ಅವರಿಗೆ ಕೊಟ್ಟು ಬಿಡುತ್ತಿದ್ದನು. ಇಷ್ಟಾದರೂ ಇವನು ಕೊಡುತ್ತಾನಲ್ಲಾ? ಉಳಿದ ಕಳ್ಳ ನನ್ನ ಮಕ್ಕಳು ಏನು ಕೊಡುತ್ತಾರೆ ಎಂದು ತಮಗೆ ತಾವೇ ಹೇಳಿಕೊಂಡು ಅವನನ್ನು ತುಂಬಾ ಹತ್ತಿರ ಮಾಡಿಕೊಂಡಿದ್ದರು. ಅವನು ಆಗಾಗ ಅವನ ಮನೆಯಿಂದ ಗೇರುಬೀಜ ತುಪ್ಪ, ಹಪ್ಪಳ, ಉಪ್ಪಿನಕಾಯಿ ತಂದುಕೊಟ್ಟು ಚೇರುಮನ್ನರ ಧರ್ಮಪತ್ನಿ ಯವರ ಕೃಪಾಕಟಾಕ್ಷಕ್ಕೆ ಪಾತ್ರನಾಗಿದ್ದನು. ಅವನ ಟೂವೀಲರು ಆಗಾಗ ಚೇರುಮನ್ನರ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿತ್ತು.

ಚೇರುಮನ್ನರಿಗೆ ಊರಲ್ಲಿ ಎದುರಲ್ಲಿ ಎಲ್ಲರೂ ಗೌರವ ನೀಡುತ್ತಿದ್ದರು. ಹಿಂದಿ ನಿಂದ ಬೈಯುತ್ತಿದ್ದರು. ಯಾವುದೇ ಕೆಲಸವಾಗಬೇಕಾದರೂ ಚೇರುಮನ್ನರು ತುಂಬಾ ಹಣ ತೆಗೆದುಕೊಳ್ಳುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ಬಡಜನ ಎಲ್ಲಿಂದ ಹಣ ತರುತ್ತಾರೆ? ಚೆನ್ನ-ಪನ್ನ ಮಾರಿ ಹೇಗೋ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಚೇರುಮನ್ನರಿಗೆ ಇಂಗ್ಲೀಷ್, ಹಿಂದಿ ಬರುತ್ತಿರಲಿಲ್ಲ. ರಾಜಧಾನಿಯಲ್ಲಿ ಯಾವುದೇ ಕೆಲಸವಾಗಬೇಕಾದರೂ ಇವೆರಡು ಭಾಷೆ ಬಲ್ಲ ಏಜೆಂಟನನ್ನು ಕಳುಹಿಸುತ್ತಿದ್ದರು. ಅವನು ರಾಜಧಾನಿಯ ದೊಡ್ಡ ಜನರಿಗೆ ಗೇರುಬೀಜ, ತುಪ್ಪ, ಉಪ್ಪಿನಕಾಯಿ, ಹಪ್ಪಳ ಕೊಂಡೋಗಿ ಕೊಡುತ್ತಿದ್ದ. ಅವರು ಕೇಳಿದಷ್ಟು ಅಲ್ಲದಿದ್ದರೂ ಸ್ವಲ್ಪ ಹಣಕೊಟ್ಟು ಕೈ ಹೊಸಕುತ್ತಿದ್ದ. ಅವನ ಬ್ರಹನ್ನಳೆ ಅವತಾರಕ್ಕೆ ಮನಕರಗಿ ರಾಜಧಾನಿಯ ದೊಡ್ಡವರು ಕೆಲಸ ಮಾಡಿಕೊಡುತ್ತಿದ್ದರು. ಹೇಗಾದರೂ ಕೆಲಸ ಮಾಡಿಸುತ್ತಾನಲ್ಲ ಎಂದು ಚೇರು ಮನ್ನರು ಏಜೆಂಟ ಕೇಳಿದಷ್ಟು ಹಣವನ್ನು ಕೊಟ್ಟು ಬಿಡುತ್ತಿದ್ದರು.

ಈಗ ಇವನು ಹೊಸ ಐಡಿಯಾ ಹಾಕಿದ್ದಾನೆ. ತನ್ನ ಜಿಲ್ಲಾ ಪಂಚಾಯತು ಕ್ಷೇತ್ರದಲ್ಲಿ ಎರಡು ಸರಕಾರಿ ಹೈಸ್ಕೂಲು ಮತ್ತು ಹದಿನಾಲ್ಕು ಸರಕಾರಿ ಹೈಯರ್ ಪ್ರೈಮರಿ ಶಾಲೆ ಬರುತ್ತದೆ. ಅಲ್ಲಿಗೆ ಪತ್ರಿಕೆಗಳಲ್ಲಿ ಹದಿನಾರು ಅಭಿನಂದನೆಗಳು ಪ್ರಕಟವಾಗುತ್ತವೆ. ಚೇರುಮನ್ನರಿಗೆ ಖುಷಿ ಯಾಯಿತು. ಅವರಿಗೆ ಪತ್ರಿಕೆಗಳಲ್ಲಿ ಅವರ ಮುಖವನ್ನು ಕಂಡರೆ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. ಹದಿನಾರು ಅಭಿನಂದನೆಗಳ ಕಮಿಷನ್ನು ಎರಡು ಸಾವಿರ ದಾಟಬಹುದು. ಅದು ಏಜೆಂಟನ ಕಿಸಗೇ ಹೋಗುತ್ತದೆ. ಹೋದರೆ ಹೋಗಲಿ ತನ್ನ ಅಭಿನಂದನೆ ಪ್ರಕಟವಾಗುತ್ತದಲ್ಲ ಎಂದು ಏಜಂಟನಿಗೆ ಮುಂದುವರೆಯಲು ಆಶೀರ್ವಾದ ನೀಡಿದರು.

ಏಜಂಟನಿಗೆ ಅದೇ ಬೇಕಾಗಿತ್ತು. ಅವನು ಮೊದಲು ಸರಕಾರಿ ಹೈಸ್ಕೂಲು ಹೆಡ್ ಮಾಸ್ತರಿಗೆ ಫೋನು ಮಾಡಿದ. “ಏನು ಮೇಸ್ಟ್ರೆ, ನೀವು ಈ ಊರಲ್ಲೇ ಉಳಿಬೇಕಾ? ಗುಲ್ಬರ್ಗಕ್ಕೊ, ಬಿಜಾಪುರಕ್ಕೋ ಎತ್ತಂಗಡಿಯಾಗಬೇಕಾ?”

ಹೆಡ್ ಮಾಸ್ತರಿಗೆ ಕಕ್ಕಾಬಿಕ್ಕಿ ಯಾಯಿತು. ಅವರಿಗೆ ಏಜೆಂಟನ ಎಲ್ಲಾ ಕಲ್ಯಾಣ ಗುಣಗಳು ತಿಳಿದದ್ದವು. ಅವನು ಚೇರುಮನ್ನರ ಹೆಸರು ಹೇಳಿ ಆಗಾಗ ದುಡ್ಡು ಕೇಳುತ್ತಿದ್ದ, ಒಂದು ಸಲ ಚೇರುಮನ್ನರ ವಿಜಯೋತ್ಸವ, ಇನ್ನೊಂದು ಸಲ ಚೇರುಮನ್ನರಿಗೆ ಅರುವತ್ತು ತುಂಬಿದಸಂಭ್ರಮ. ಮತ್ತೊಂದು ಸಲ ಚೇರುಮನ್ನರ ಮಗಳ ಮದುವೆ. ಮಗದೊಂದು ಸಲ ಚೇರುಮನ್ನರ ಮಗನಿಗೆ ಪುತ್ರೋತ್ಸವ. ಮತ್ತೆ ಇನ್ನೊಂದು ಸಲ ಊರ ಪಂಚಾಯತು ಕಟ್ಟಡದ ಸುವರ್ಣ ಮಹೋತ್ಸವ. ಇವುಗಳೊಂದಿಗೆ ಪ್ರತಿ ವರ್ಷ ಬರುವ ಗಣೇಶೋತ್ಸವ, ಶಾರದೋತ್ಸವ, ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ, ಗಣರಾಜ್ಯೋತ್ಸವ ಎಂದು ಏಜೆಂಟನಿಗೆ ಹಣ ಸಂಗ್ರಹಿಸಲು ಸಾಕಷ್ಟು ಅವಕಾಶಗಳು ಒದಗಿ ಬರುತ್ತಿದ್ದವು. ಉತ್ಸವಗಳು ನಡೆಯುತ್ತಿದ್ದವು ಲೆಕ್ಕಪತ್ರ ಕೇಳುವವರಿಲ್ಲ. ಹಾಗಾಗಿ ಹುಚ್ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಇವ ಇದೇನು ವರಾತ ಹಚ್ಚಿದ್ದಾನೆಂದು ಹೆಡ್ ಮಾಸ್ತರರಿಗೆ ಗಾಬರಿಯಾಯಿತು.

“ಅಲ್ಲ ರಾಯರೆ, ನೀವು ಏನು ಹೇಳುತ್ತಿದ್ದೀರೆಂದು ನನಗೆ ಗೊತ್ತಾಗುತ್ತಿಲ್ಲ. ನಾನು ಚೇರುಮನ್ನರ ಅಭಿಮಾನಿ. ನೀವು ಹೇಳಿದಂತೆ ಕೇಳುವವನು. ನೀವು ಅಂದದ್ದಕೆ ಒಂದು ಒಂದು ಸಲವಾದರೂ ಇಲ್ಲ ಅಂದದ್ದುಂಟಾ? ಟ್ರಾನ್ಸ್ ಫರಾಗಲು ನಾನೇನು ತಪ್ಪು ಮಾಡಿದ್ಡೇ”ನೆಂದು ವಿನಯದಿಂದ ಪ್ರಶ್ನಿಸಿದರು.

“ಅಲ್ರೀ ಹೆಡ್ ಮಾಸ್ಟ್ರೇ, ನಮ್ಮ ಚೇರುಮನ್ನರಿಗೆ ರಾಜಕೀಯ ರತ್ನ ರಾಷ್ಟ್ರಪ್ರಶಸ್ತಿ ಬಂದು ಮೂರು ವಾರವಾಯಿತು. ಊರಿನ ಪೇಪರುಗಳಲ್ಲಿ ಅಭಿನಂದನೆ ಬಂತು. ನಿಮ್ಮ ಶಾಲೆ ಚೇರುಮನ್ನರ ಕ್ಷೇತ್ರಕ್ಕೆ ಸೇರುತ್ತದೆ. ನೀವು ಅಭಿನಂದನೆ ಹಾಕದೆ ಕೂತಿದ್ದೀರಿ.ತಪ್ಪಲ್ವಾ?” ಏಜೆಂಟು ಕೇಳಿದನು.

ಹೆಡ್ ಮಾಸ್ತರರು ಹೇಳಿದರು”ಆಯಿತು ರಾಯರೆ ತಪ್ಪಾಯಿತು. ಬಡವನ ತಪ್ಪನ್ನು ಹೊಟ್ಟಿಗೆ ಹಾಕಿಕೊಳ್ಳಿ. ನೀರಿಲ್ಲದ ಊರಿಗೆ ಎತ್ತಂಗಡಿ ಮಾಡಿಸಬೇಡಿ. ಮುಂದಿನ ವಾರ ಊರ ಪೇಪರಲ್ಲಿ ಅಭಿನಂದನೆ ಹಾಕಿಸುತ್ತೇನೆ.”

ತಕ್ಷಣ ಏಜೆಂಟನೆಂದ. “ನೀವು ಹಣ ಮಾಡಿ ಕೂಡಿ. ಒಂದು ಅಭಿನಂದನೆಗೆ ಐದುಸಾವಿರ. ಪೇಪರಿನವರಿಗೆ ನಾನು ಕೊಡುವುದು. ನೀವಲ್ಲ. ನಾಳೆ ಸಿಗುತ್ತೇನೆ. ಹಣ ರೆಡಿ ಮಾಡಿ ಇಡಿ.”

ಹೆಡ್ ಮಾಸ್ತರರು ತಲೆಗೆ ಕೈ ಹೊತ್ತು ಕೂತರು. ಅವರೂ ಸೇರಿದಂತೆ ಶಾಲೆಯಲ್ಲಿ ಇರುವುದು ನಾಲ್ಕು ಜನ ಮೇಸ್ಟ್ರುಗಳು. ಒಬ್ಬೊಬ್ಬರು ಸಾವಿರದ ಇನ್ನೂರ ಐವತ್ತರಂತೆ ಕೊಡಬೇಕು. ಅದನ್ನು ತಮ್ಮ ಸಂಬಳದಿಂದಲೇ ಕೊಡಬೇಕು. ಅಭಿನಂದನೆಗೆ ಮೂರು ಸಾವಿರ ಆದೀತು. ಉಳಿದ ಎರಡು ಸಾವಿರ ಈ ಏಜೆಂಟು ನುಂಗುತ್ತಾನೆ. ಏನು ಮಾಡುವುದು ಇದೊಂದು ಪ್ರಾರಬ್ಧ ಕರ್ಮ ವಾಯಿತಲ್ಲ ಎಂದು ಗೊಣಗಿ ಕೊಂಡರು.

ಏಜೆಂಟನು ಹೀಗೆ ಇನ್ನೊಂದು ಹೈಸ್ಕೂಲಿನ ಹೆಡ್ ಮಾಸ್ತರರಿಗೂ ಫೋನು ಮಾಡಿದನು. ಮತ್ತೆ ಹದಿನಾಲ್ಕು ಹೈಯರ್ ಪ್ರೈಮರಿ ಶಾಲೆಗಳ ಹೆಡ್ ಮಾಸ್ತರುಗಳಿಗೂ ವಿಷಯ ತಿಳಿಸಿದ. ತನ್ನ ಕೈಗೆ ನಾಳೆ ಐದು ಸಾವಿರ ತಂದು ಕೊಡದಿದ್ದರೆ ಗ್ರಹಚಾರ ಬಿಡಿಸುತ್ತೇನೆಂದು ಧಮಕಿ ಹಾಕಿದನು. ಬೇರೇನನ್ನೂ ಮಾಡಲು ಅವನಿಂದ ಆಗದಿದ್ದರೂ ನೀರಿಲ್ಲದ ಊರಿಗೆ ಎತ್ತಂಗಡಿ ಮಾಡಿಸಲು ಸಾಧ್ಯವಿದೆ ಎಂದು ಮೇಸ್ಟ್ರುಗಳಿಗೆ ಗೊತ್ತಿತ್ತು. ಅವರು ಸದ್ದಿಲ್ಲದೆ ಅವನು ಹೇಳಿದಷ್ಟು ತಂದೊಪ್ಪಿಸಿ ಕೈ ತೊಳೆದುಕೊಂಡರು.

ಏಜೆಂಟನು ಸ್ಥಳೀಯ ಪತ್ರಿಕೆಗಳಲ್ಲಿ ವಾರಕ್ಕೊಂದು ಅಭಿನಂದನೆ ಬರುವಂತೆ ನೋಡಿಕೊಂದನು. ಚೇರುಮನ್ನರು ತಮ್ಮೂರಿನ ಪತ್ರಿಕೆ ತೆಗೆದು ನೋಡುತ್ತಾರೆ. ಪ್ರತಿವಾರ ಅವರ ವದನಾರವಿಂದ ಅರಳುತ್ತದೆ. ಏಜೆಂಟನು ಸರಿಯಾದ ಸಮಯ ನೋಡಿಕೊಂದು ತಿದಿಯೂದುತ್ತಿದ್ದನು. “ನೋಡಿ ಗುರುಗಳೆ ಈಗ ನೀವು ಜಿ.ಪಂ. ಮೆಂಬರು. ಮುಂದಿನ ಸಲ ಎಂ ಎಲ್ಯೆ ಸೀಟನ್ನು ಎಲ್ಲಾ ಪಾರ್ಟಿಗಳು ಕರೆಕರೆದು ಕೊಡುತ್ತವೆ. ನೋಡುತ್ತಿರಿ ನಿಮ್ಮ ಹೆಸರು ರಾಜಧಾನಿಗೆ ಕೇಳಿಸುತ್ತದೆ. ನಿಮ್ಮನ್ನು ಮಂತ್ರಿ ಮಾಡುವವರೆಗೂ ನಾನು ವಿಶ್ರಮಿಸುವುದಿಲ್ಲ.”

ಚೇರುಮನ್ನರು ಉಬ್ಬಿ ಹೋದರು. ರಾಜಕಾರಣದಷ್ಟು ಪವಿತ್ರ ಕೆಲಸ ಈ ಭೂಮಿ ಯಲ್ಲಿ ಬೇರೊಂದಿಲ್ಲವೆಂದು ಅವರು ತಿಳಿದಿದ್ದರು. ಪಂಚಾಯತು ಚಯರ್ ಮೆನ್ನು ಆಗುವುದಕ್ಕೆ ಮೊದಲು ಅವರು ಮರಿ ಪುಢಾರಿಗಳಿಗೂ ದೇಹ ಬಗ್ಗಿಸಿ ನಮಸ್ಕರಿಸುತ್ತಿದ್ದರು. ಏಜೆಂಟನು ಪುಢಾರಿಗಳ ಸ್ಥಾನಮಾನ ತಿಳಿಸಿದ ಮೇಲೆ ಯಾರಿಗೆ ಹೇಗೆ ನಮಸ್ಕಾರ ಹಾಕಿದರೆ ಎಷ್ಟು ಲಾಭ ಎನ್ನುವುದನ್ನು ಲೆಕ್ಕ ಹಾಕಿ ನಮಸ್ಕರಿಸುವುದನ್ನು ಅಭ್ಯಾಸ ಮಾಡಿಕೊಂಡರು.

ಇದೀಗ ಪ್ರತಿವಾರ ಪತ್ರಿಕೆಗಳಲ್ಲಿ ತಮ್ಮ ಮುಖ ಪ್ರಕಾಶಿಸುವುದನ್ನು ಕಂಡು ಅವರಿಗೆ ಎಲ್ಲಿಲ್ಲದ ಸಂಭ್ರಮವಾಯಿತು. ಪ್ರತಿ ಅಭಿನಂದನೆಯಲ್ಲಿ ಅರ್ಧಾಂಶ ಹಣ ಏಜೆಂಟನ ಜೇಬಿಗೆ ಹೋಗುತ್ತದೆಂದು ಅವರಿಗೆ ಸಂಶಯವಿತ್ತು. ಹೋದರೆ ಹೋಗಲಿ ದೊಡ್ಡದಲ್ಲ. ತಾನು ಇಪ್ಪತ್ತು ವರ್ಷದಿಂದ ರಾಜಕಾರಣ ಮಾಡುತ್ತಿರುವುದಕ್ಕೆ ಜನ ಇಷ್ಟಾದರೂ ಕೃತಜ್ಞತೆ ತೋರಿಸಲಿ ಎಂದು ಹೇಳಿಕೊಂಡರು. ಏಜೆಂಟ ಹಣ ತಿನ್ನುತ್ತಾನೆ. ಆದರೆ ಅವನಿಲ್ಲದಿದ್ದರೆ ತನ್ನ ಮುಖ ಆಗಾಗ ಪೇಪರಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದವರು ಸಮಾಧಾನ ಪಟ್ಟುಕೊಂಡರು.

ಊರಿನ ಪತ್ರಿಕೆಗಳಿಗೂ ಸುಗ್ಗಿ. ಅವೆಲ್ಲ ಊರಿನ ಗಡಿದಾಟಿ ಆಚೆ ಹೋಗದ ಪತ್ರಿಕೆಗಳು. ಚೆಯರುಮನ್ನರು ಈ ಬಗ್ಗೆ ಅವರೆಗೆ ಯೋಚಿಸಿದವರಲ್ಲ. ಊರಿನ ಪತ್ರಿಕೆಗಳನ್ನು ಬಿಟ್ಟರೆ ಬೇರೆ ಪತ್ರಿಕೆಗಳನ್ನು ಅವರು ಓದುತ್ತಿರಲಿಲ್ಲ. ಆಗಾಗ ಈ ಪತ್ರಿಕೆಗಳಲ್ಲಿ ತನ್ನ ಮುಖ ಕಾಣಿಸಿಕೊಳ್ಳಬೇಕೆಂಬುದು ಅವರ ಮಹತ್ವಾಕಾಂಕ್ಷೆ ಯಾಗಿತ್ತು. ಅದೀಗ ಏಜೆಂಟ ನಿಂದಾಗಿ ಈಡೇರುತ್ತಿದೆ. ಅದಕ್ಕೆ ಅವರಿಗೆ ಮಹದಾನಂದ ವಾಯಿತು. ತನ್ನ ಬಾಳು ಪಾವನ ವಾಯಿತು. ತಾನು ಬಹಳ ಬೇಗ ಮಂತ್ರಿಯಾಗಲಿದ್ದೇನೆ ಎಂದು ಕನಸು ಕಾಣತೊಡಗಿದರು.

ಚೇರುಮನ್ನರ ಊರಲ್ಲಿದ್ದ ಪ್ರತಿಪಕ್ಷದವರಿಗೆ ಇದನ್ನೆಲ್ಲ ಸಹಿಸುವುದು ಕಷ್ಟವಾಯಿತು. ಅವರ ನಾಯಕ ರಾಜಧಾನಿಯ ಕೇಂದ್ರ ಕಛೇರಿಗೆ ಫೋನು ಮಾಡಿದ. ಚೇರುಮನ್ನರಿಗೆ ರಾಜಕೀಯ ರತ್ನ ರಾಷ್ಟ್ರಪ್ರಶಸ್ತಿ ಬಂದದ್ದನ್ನು ತಿಳಿಸಿದ. ಅವರ ಜನಪ್ರಿಯತೆ ಹೆಚ್ಚುತ್ತಿದೆಯೆಂದೂ, ಹೀಗಾದರೆ ಮುಂದಿನ ಚುನಾವಣೆಯಲ್ಲಿ ಪ್ರತಿಪಕ್ಷಕ್ಕೆ ಠೇವಣಿಯೂ ಉಳಿಯಲಾರದೆಂದು ಹೇಳಿದ.

ರಾಜಧಾನಿಯ ಕೇಂದ್ರ ಕಚೇರಿಯು ರಾಜ್ಯಮಟ್ಟದ ಪತ್ರಿಕೆಗಳನ್ನು ಸಂಪರ್ಕಿಸಿತು. ರಾಜಕೀಯ ರತ್ನ ರಾಷ್ಟ್ರಪ್ರಶಸ್ತಿಯ ಬಗ್ಗೆ ಮಾಹಿತಿ ಕೇಳಿತು. ಅವುಗಳಿಗೂ ಮಾಹಿತಿ ಗೊತ್ತಿರಲಿಲ್ಲ. ಅವರಲ್ಲೊಬ್ಬ ವರದಿಗಾರ ರಾಷ್ಟ್ರಮಟ್ಟದ ವರದಿಗಾರ ಮಿತ್ರನನ್ನು ಸಂಪರ್ಕಿಸಿದ. ಅವನು ರಾಜಧಾನಿಯನ್ನು ಜಾಲಾಡಿ ರಾಜಕೀಯ ರತ್ನ ರಾಷ್ಟ್ರಪ್ರಶಸ್ತಿ ಜಾತಕ ಹೊರಗೆಳೆದ. ಅದು ಇಪ್ಪತ್ತೈದು ಸಾವಿರ ರೂಪಾಯಿ ಕೊಟ್ಟವರಿಗೆ ಸಿಗುವ ಪ್ರಶಸ್ತಿ ಎನ್ನುವುದು ಜಗಜ್ಜಾಹೀರಾಯಿತು.

ವಿಷಯ ತಿಳಿದ ಏಜೆಂಟನು ಕಕ್ಕಾಬಿಕ್ಕಿಯಾದ. ಇದನ್ನು ಸ್ಥಳೀಯ ಪತ್ರಿಕೆಗಳಲ್ಲಿ ಬಾರದಂತೆ ಮಾಡುವುದು ಹೇಗೆ ಎಂದು ತಲೆ ತುರಿಸುತ್ತಾ ಚೇರುಮನ್ನರಲ್ಲಿಗೆ ಓಡಿದ. ಪತ್ರಿಕೆ ಗಳು ಐವತ್ತು ಸಾವಿರ ಕೊಟ್ಟರೆ ಇದನ್ನು ಪ್ರಕಟಿಸುವುದಿಲ್ಲವಂತೆ. ಊರ ನಾಲ್ಕು ಪತ್ರಿಕೆಗಳಿಗೆ ಎರಡು ಲಕ್ಷವಾಗುತ್ತದೆ. ಪತ್ರಿಕೆಗಳ ಸಹವಾಸ ಕಷ್ಟ. ಕೊಟ್ಟು ಬಿಡುವುದು ಒಳ್ಳೆಯದು.”

ಚೇರುಮನ್ನರಲ್ಲಿ ಒಳ್ಳೆಯ ಕಾರೊಂದಿತ್ತು. ಊರಲ್ಲಿ ಬೇರೆ ಯಾರಲ್ಲೂ ಅಂತಹ ಕಾರು ಇರಲಿಲ್ಲ. ಅದು ಬಿಟ್ಟರೆ ಅವರಲ್ಲಿ ಬೇರೆ ಉಳಿತಾಯದ ಹಣ ಇರಲಿಲ್ಲ. ನಾಲ್ಕು ಪತ್ರಿಕೆಗಳಿಗೆ ಎರಡು ಲಕ್ಷ ಕೊಡಬೇಕು. ಸದ್ಯಕ್ಕೆ ಇದೊಂದೇ ದಾರಿ ಎಂದುಕೊಂಡು ಕಾರು ಮಾರುವ ಪ್ರಸ್ತಾಪ ಮಾಡಿದರು. ಏಜೆಂಟ ಅದನ್ನು ತಾನೇ ವಿಲೇವಾರಿ  ಮಾಡುತ್ತೇನೆಂದು ಹೇಳಿದ. ನೀವಿನ್ನು ನಿಶ್ಚಿಂತೆಯಿಂದಿರಿ ಎಂದು ಚೇರುಮನ್ನರ ತಲೆ ಸವರಿದೆ.

ಪತ್ರಿಕೆಗಳಲ್ಲಿ ರಾಜಕೀಯರತ್ನ ಪ್ರಶಸ್ತಿಯ ಇತಿಹಾಸದ ಸುದ್ದಿ ಪ್ರಕಟವಾಗಲಿಲ್ಲ. ಚೇರುಮನ್ನರ ಮರ್ಯಾದೆ  ಉಳಿಯಿತು. ಆದರೆ ಅವರಲ್ಲೀಗ ಕಾರು ಇಲ್ಲ. ಅದನ್ನು ಏಜೆಂಟನೇ ಕೊಂಡಿದ್ದಾನೆ. ದಾರಿಯಲ್ಲಿ ಚೇರುಮನ್ನರು ನಡಕೊಂಡು ಹೋಗುವಾಗ ಕಾರು ಬಂದರೆ , ಸೀಟು ಇದ್ದರೆ ಏಜೆಂಟು ಹತ್ತಿಸಿಕೊಂಡು ಹೋಗುತ್ತಾನೆ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನ್ನಿ ಓ ತಾರೆಗಳೆ!
Next post ಸೂರ್ಯ ಹೇಳಿದ್ದು

ಸಣ್ಣ ಕತೆ

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…