ಕರಿ ನಾಗರಗಳು

ಕರಿ ನಾಗರಗಳು

ಚಿತ್ರ: ಆಂಬರ್‍ ಕ್ಲೇ

ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ ಕೂದಲನ್ನು ಕೊಡವುತ್ತಲೇ ಅಮ್ಮೀ…… ಅಮ್ಮೀ ಎಂದು ಕಿರುಚಿದಳು, ಒಣ ಬಂಗಡೆಯನ್ನು ಕೆಂಡದ ಮೇಲಿಟ್ಟು ಹದವಾಗಿ ಸುಡುತ್ತಿದ್ದ ರಫಿಯು ಉತ್ತರಿಸಲಿಲ್ಲ. ತರನ್ನುಮ್ ಓಡುತ್ತಲೇ ಬಂದು “ಅಮ್ಮೀ….. ಹಸೀನ ಮತ್ತೆ ಅವಳ ತಾಯಿ ಮಸೀದೀಲಿ ಕೂತಿದಾರೆ……” ಎಂದಳು.

“ಆಂ……. ಯಾಕಂತೆ ?”

“ಅದೇನೋ ಅವರ ಫೈಸಲ ಇದೆಯಂತಲ್ಲಾ…”

“ಓ….. ಹೌದಾ…..”

ಅರಬ್ಬಿ ಮದ್ರಸಕ್ಕೆ ಓದಲು ಕಳಿಸಿದರೂ ಕುಳಿತಲ್ಲೇ ನಿದ್ರೆ ಮಾಡಿ, ಪುಸ್ತಕವನ್ನೂ ಮರೆತು ಟೋಪಿಯನ್ನೂ ಬೀಳಿಸಿಕೊಂಡು ಮನೆ ಸೇರುತ್ತಿದ್ದ ರಫಿಯನ್ನು ಹಿಡಿದು ಬಲವಂತವಾಗಿ ತುತ್ತನ್ನು ಬಾಯಿಗಿಡಲು ಪ್ರಯತ್ನಿಸುತ್ತಿದ್ದ ವಸೀಮಳ ಕೈಯನ್ನು ತಳ್ಳಿ ಅವನು ಹೇಳಿದ.

“ಅಮ್ಮಿ…. ಹಸೀನ ಜೊತೇಲಿ ಅವರಮ್ಮ ಆವಾಗ್ನಿಂದ ಮಸೀದೀಲೇ ಕೂತಿದಾರೆ.”

“ಇಷ್ಟೊತ್ನಲ್ಲಿ…ಯಾಕೆ?”

“ಅದೇನೋ….. ಅವರ ಫೈಸಲ ಇದೆಯಂತಲ್ಲಾ.”

“ಓ…..ಅದಾ…..”

ಮದ್ರಸದ ಮಕ್ಕಳಿಗೆಲ್ಲಾ ಕಡ್ಡಿಪೆಟ್ಟಿಗೆಯ ಲೇಬಲ್, ನಟ ನಟಿಯರ ಚಿತ್ರಗಳನ್ನು ಬಳಪಕ್ಕೊಂದರಂತೆ ವಿನಿಮಯಗೊಳಿಸಿ ಜೇಬು ಭರ್ತಿ ಮಾಡಿಕೊಂಡರೂ ಹುಳುಕು ಹಲ್ಲಿನ ಬಾಧೆಯಿಂದ ಅಳುತ್ತ ಮನೆ ಸೇರಿದ ಹಮೀದ್ ತಾಯಿಗೆ ಹೇಳಿದ,

“ಅಮ್ಮಿ…….ಹಸೀನಳ…..”

ಹೀಗೆಯೇ ಒಬ್ಬೊಬ್ಬರೂ ವರದಿ ಒಪ್ಪಿಸುತ್ತಿದ್ದಂತೆಯೇ ಮಾಜಿದ ಕೂಡ ಜೋಪಾನವಾಗಿ ಕೊಚ್ಚಹಾರದಂತೆ ಪಾಯಿಜಾಮವನ್ನು ಎಡಗೈಲಿ ಮೇಲೆತ್ತಿ ಹಿಡಿದು ಕುರ್‌ಆನನ್ನು ಬಲಗೈಲಿ ಎದೆಗವಚಿ ಹಿಡಿದು ಮನೆಯೊಳಗೆ ಕಾಲಿಟ್ಟಳು.

ಹಜಾರದಲ್ಲಿ ಆರಾಮವಾಗಿ ಕುಳಿತ ತಂದೆಯನ್ನು ನೋಡಿ ಗಕ್ಕನೆ ನಿಂತಳು. ಕುರ್‌ಆನನ್ನು ಎರಡು ಕೈಯಲ್ಲಿ ಹಿಡಿದು ಕಣ್ಣಿಗೊತ್ತಿ ಟೇಬಲ್ಲಿನ ಮೇಲಿಟ್ಟು,

“ಅಬ್ಬಾ…… ನೀವು ಮಸೀದಿಗೇಕೆ ಹೋಗಲಿಲ್ಲ?” ಎಂದು ಕೇಳಿದಳು.

“ಹಾಂ….. ಈಗ ಇಶಾಂ ನಮಾಜಿನ ಹೊತ್ತಾಯ್ತಲ್ಲ…… ಇನ್ನೂ ಜಮಾ‌ಅತ್‌ ಕೂಡಲು ಸ್ವಲ್ಪ ಸಮಯ ಉಂಟು. ಹೊಗ್ತೀನಿ” ಎಂದರು. ಮಸೀದಿಯ ಮುತವಲ್ಲಿಯಾದ ಅಬ್ದುಲ್ ಖಾದರ್ ಸಾಹೇಬರು…… ಟೀಪಾಯಿ ಮೇಲಿದ್ದ ಟೋಪಿಯನ್ನು ನಿಧಾನವಾಗಿ ತಲೆಯ ಮೇಲಿಡುತ್ತ, ಮಾಜಿದ ಸೆಟೆದಳು…..”ನಾನು ನಮಾಜಿಗಲ್ಲ ಹೇಳಿದ್ದು…… ಅಲ್ಲಿ…. ಮಸೀದಿಯಲ್ಲಿ ಹಸೀನ ಮತ್ತೆ ಅವಳ ತಾಯಿ ಕೂತಿದ್ದಾರಲ್ಲ…… ನಿಮ್ಮನ್ನು ಕಾಯ್ಕೊಂಡು…. ಇವತ್ತು ಅವರ ಫೈಸಲ ಇದೆಯಂತಲ್ಲ.”

“ಓ.. ಹಾಂ! ಅದೊಂದು.. ಆಂ ಏನಂದೆ ? ಆ ಹೆಂಗಸು ಮಸೀದೀಲಿ ಕೂತಿದಾಳಾ? ಎಲ್ಲಿದಾಳೆ ಮಸೀದೀಲಿ……?

ಪಂಚಾಯ್ತಿ ಸೇರಲು ಹೇಳಿದ್ದನ್ನು ತಾವೇ ಮರತ್ತಿದ್ದ ಮುತವಲ್ಲಿ ಸಾಹೇಬರು ಕಪ್ಪನೆಯ ದಟ್ಟ ಗಡ್ಡವನ್ನು ಬೆರಳ ತುದಿಯಲ್ಲಿ ಕೆರೆಯುತ್ತ ಯೋಚನಾಮಗ್ನರಾದರು.

“ಓ…. ಅಬ್ಬಾಜಾನ್…. ನೀವೊಬ್ರು…. ಅಲ್ಲೇ ಜನಾಜವನ್ನು ಇಡ್ತಾರಲ್ಲಾ…. ಅದರ ಪಕ್ಕದಲ್ಲೇ ಕೂತಿದಾರೆ…. ಹಸೀನ…. ಅವಳ ತಾಯಿ…. ಅವಳ ಇಬ್ಬರು ತಂಗೀರು ಎಲ್ಲಾ ಅಲ್ಲೇ ಕೂತಿದ್ದಾರೆ…. ನೀವು ಬೇಗ ಹೋಗ್ಬೇಕು…. ಅಬ್ಬಾಜಾನ್…. ಪಾಪ! ಅವ್ರೆಲ್ಲಾ ಚಳೀಲಿ ನಡಗ್ತಿದಾರೆ….”

“ಮಳೆ…. ಚಳಿ…. ಬೆಚ್ಚಗಾಗಲು ಎಷ್ಟೊಂದು ಕಾತುರತೆ? ಇದೀಗ ಮಜ ಬರಬೇಕಾದರೆ…. ಸಿಲೋನಿ ಪರೋಟ, ಮೆಣಸು ಹಾಕಿ ಮಾಡಿದ ಫಾಲ್, ಚಿಕನ್ ಕಬಾಬ್ ಕಂಡೂ ಕಾಣದಂತೆ ನಶೆ ಏರುವಂತೆ ಸುಡುತ್ತಾ ಗಂಟಲಲ್ಲಿಳಿಯಲು ಸ್ವಲ್ಪವೇ….”

ಅದರೊಟ್ಟಿಗೆ ಮದುವೆಯಾದ ಹತ್ತು ವರ್ಷಗಳಲ್ಲೇ ಏಳು ಮಕ್ಕಳ ತಾಯಾದರೂ ಹೂರ್‌ನಂತಿರುವ ಆಮಿನಾಳ, ರೂಪು…. ಬೆಳ್ಳುಳ್ಳಿ, ಹಸಿಶುಂಠಿ, ಗರಮ್ ಮಸಾಲೆಯ ಸುವಾಸನೆಯಿಂದ ಕೂಡಿದ ಅವಳ ಸೆರಗು, ಕೈಕೂಸಿಗಿನ್ನೂ ಹಾಲೂಡಿಸುತ್ತಿದ್ದುದರಿಂದ ತುಂಬಿಕೊಂಡಿದ್ದ ಅವಳ ಮೊಲೆಗಳು….

ಮುತವಲ್ಲಿ ಸಾಹೇಬರ ಕಲ್ಪನೆ ಇನ್ನೂ ಗರಿಗೆದರುತ್ತಿತ್ತೇನೋ ಅಷ್ಟರಲ್ಲಿ ಹಜಾರದ ಬಾಗಿಲಲ್ಲಿ ಅವಳೇ ಪ್ರತ್ಯಕ್ಷಳಾದಳು. ಮಸಾಲೆ ಭರಿತ ಕೈಯನ್ನು ಸೆರಗಿಗೆ ಒರೆಸಿಕೊಳ್ಳುತ್ತಾ ಕಾಲು ಕೆದರಿ ಜಗಳಕ್ಕೆ ಬರುವ ಹುಂಜದಂತೆ ಬಾಗಿಲಲ್ಲಿ ನಿಂತು ಅವಳು ಒಮ್ಮೆ ಕತ್ತು ಕೊಂಕಿಸಿ, ಮಲ್ಲಗೆ ಕೆಮ್ಮಿದಳು.

ಮುತವಲ್ಲಿ ಸಾಹೇಬರು ಕುಳಿತಲ್ಲಿಯೇ ಅವಳತ್ತ ಕಣೋಡಿಸಿದರು. “ನನಗೆ ಸಾಕಾಗಿ ಹೋಯಿತು. ನಾನ್ಹೇಳಿದ್ರೂ ನೀವು ಕಿವಿ ಮೇಲೆ ಹಾಕ್ಕೊಳೊದೇ ಇಲ್ಲ. ನನ್ ವಯಸ್ಸಿಗೆ ಇನ್ನೂ ಯಾರೂ ಮದ್ವೇನೇ ಮಾಡ್ಕೊಂಡಿರೋಲ್ಲ. ನಾನಂತೂ ಮುದುಕಿಯಾದೆ….”

“ಏನಾಯ್ತೀಗ…?”

“ಆಗೋದೇನು…..? ನನ್ ಸೊಂಟ ಬಿದ್ದೋಗಿದೆ. ಈ ಮಕ್ಕು….ಮನೆ….. ಸಂಸಾರ….. ಒಂದ್ ನಿಮಿಷನಾದ್ರು ಬಿಡುವಿದ್ಯಾ ನಂಗೆ….. ವರ್ಷಕ್ಕೊಂದು ಮಗೂನ ಹೆತ್ರೆ ನಾನೂ ಒಬ್ಳು….. ಈ ಮಕ್ಳಿಗೆ ತಾಯಿಯಾಗಾದ್ರು ಉಳಿತೀನೇನ್ರಿ…..”

“ಹುಷ್….. ಈಗ್ಯಾಕೆ ಆ ಮಾತು ? ನಿನಗೇನ್ ಕಡಿಮೆ ಮಾಡಿದೀನಿ…. ಏನೇ ಆದ್ರೂ ನೀನೇಳೋ ಮಾತು ನಡಿಯೋದಿಲ್ಲ…. ತಿಳ್ಕೋ….. ನಾನು ಮುತವಲ್ಲಿ ನನ್ಮನೆ ಹೆಂಗಸ್ರಿಗೆ ನಾನೇ ಆಪರೇಷನ್ ಮಾಡ್ಸಿದ್ದೀನಿ ಅಂತ ನಾಕು ಜನರಿಗೆ ತಿಳಿದ್ರೆ….. ನಾನು ಅವ್ರಿಗೆ ಜವಾಬು ಕೊಡೋಕಾಗುತ್ತಾ….. ಆಂ….”

ಮಾತು ಇನ್ನೂ ಮುಂದುವರಿಯುತ್ತಿತ್ತೇನೋ….. ಹೊರ ಬಾಗಿಲ ಬಳೆ ಸದ್ದಾದರಿಂದ ಆಮಿನ ಬಾಗಿಲ ಹಿಂದೆ ಮರೆಯಾದಳು.

“ಅಸ್ಸಲಾಮ್ ವ ಆಲೈಕುಮ್ ಮುತವಲ್ಲಿ ಸಾಬ್.”

“ವ ಅಲೈಕುಮ್ ಸಲಾಮ್… ಅರೆ ಯಾಕೂಬ್… ಈಗ ಬಂದೆಯಾ…. ಅಲ್ಲವೋ ಮಾರಾಯ… ಅವಳು ಆಗ್ಲೆ ಬಂದು ಸುಮಾರು ಹೊತ್ತಿಂದ ಕಾಯ್ತಿದಾಳಲ್ಲಪ್ಪ…. ಏನಾದ್ರು ಒಂದ್ ತೀರ್ಮಾನ ಮಾಡ್ಬೇಕೋ….. ಬೇಡ್ವೋ….”

“ತಾವಿದೀರಲ್ಲ….. ಮಗ ಗೊತ್ತಿಲ್ಲದ್ ಕಾನೂನು ಅವ್ಳಿಗೆ ಗೊತ್ತಾಗುತ್ತಾ….. ತಾವು ಅಪ್ಪಣೆ ಕೊಡಿಸಿದ್ದಂಗಾಗ್ಲಿ….. ತಾವು ಸ್ವಲ್ಪ ಊಟ ಮಾಡ್ಕೊಂಡ್ರೆ……”

“ಊಟ ಅದೇನೋ ಒಂದಾಗತ್ತೆ ಬಿಡು….” ಮುತವಲ್ಲಿ ಸಹೇಬರು ಹೇಳಿದರು.

“ಅಧೆಂಗಾಗತ್ತೆ… ಮೊದ್ಲು ಊಟ… ಆಟೋ ತಂದಿದೀನಿ ಊಟ ಮುಗಿಸ್ಬಿಟ್ರೆ ಆಮೇಲೆ ಮಾತಾಡೋದು”

“ಓ! ಏನ್ ಊಟಾನೋ.. ಏನ್ಕತೇನೋ… ಮುತವಲ್ಲಿ ಅಂದ್ರೆ ಮುಗೀತು…. ನಾವೆಲ್ಲಾ ಮನೆ, ಸಂಸಾರ ಎಲ್ಲಾ ಬಿಟ್ಟಿರ್‍ಬೇಕು. ಅರ್ಧರಾತ್ರಿಗೆ ಬಂದ್ ಕರದ್ರೂ ನಿಮ್ ಖಿದ್ಮತ್‌ಗೆ ಹಾಜರಾಗ್ಬೇಕು…..ಏನು…?” ಎಂದು ಹೂಂಕರಿಸಿದರು.

“ಛೆ!….. ಛೆ! ತಾವು ತಪ್ಪು ತಿಳೀಬಾರ್‍ದು….. ದೇವರ್ದು ಕಾನೂನು ಒಂದಲ್ಲ….. ನಾಲಕ್ಕು ಮಾಡ್ಕೊ ಅಂತೈತೆ. ಅದ್ರೆ ಹೆಂಗಸ್ರು ಮಾನ, ಮರ್ಯಾದೆ ಬಿಟ್ಟು ಮಸೀದಿಗೆ ಬರೇಕ?…. ಒಂದಲ್ಲ ಹತ್ ವರ್ಷ ನೋಡ್ದೆ…. ಒಂದೂಂತ ಗಂಡ್ ಮಗ ಆಯ್ತ ಅವ್ಳಿಗೆ….? ಅದರ ಮೇಲೆ ಏನು ಬಾಯ್ ಮಾಡ್ತಾಳೆ ಅಬ್ಬಬ್ಬಾ….. ಮರ್ಯಾದಸ್ತರ ಮನೆ ಹೆಣ್ಮಕ್ಕಳ ಲಕ್ಷಣಾನ ಇದು ? ಇನ್ನೊಂದು ಮಾಡ್ಕೊಂಡೆ. ಏನಾಯ್ತು ? …. ಈಗ ಆಗಬಾರದ್ದು…. ನನ್ಗೆ ಮನ್ಸು ಬಂದಾಗ ಹೋಗಿ ಅವಳ್ನ ನೋಡ್ತಿರಿಲ್ವಾ ?….. ಆವತ್ತು ರಸ್ತೇಲಿ ಹೋಗ್ತಿದ್ದೆ. ಹಸೀನ ಹೋಗ್ತಿದ್ಲು….. ನನ್ ಆಟೋಗೇನೇ ಕೂರಿಸ್ಕೊಂಡ್ ಹೋಗಿ ಮನೆ ಹತ್ರ ಬಿಟ್ಬಿಟ್ಟು ಹತ್ರೂಪಾಯಿ ಕೈಗೆ ಕೊಟ್ಬಂದೆ. ನಾವೇನ್ ಮನುಷ್ರಲ್ವ ? ಹೆಂಗಸ್ರಾಗಿ ಅಷ್ಟೂ ಅನುಸರಿಸಿಕೊಳ್ಳಕಾಗಲ್ಲ…. ಅಂದ್ರೆ….”

ಬಾಗಿಲ ಹಿಂದೆ ನಿಂತು ಇವರ ಮಾತನ್ನು ಕೇಳುತ್ತಿದ್ದ ಆಮಿನ, ಹಿಡಿಶಾಪ ಹಾಕಿದಳು. “ಆಹ! ಏನು ಬೆಣ್ಣೆ ಮಾತಾಡ್ತಾನೆ. ಇವ್ನಿಗೆ ಸುಖ ಬೇಕಂದ್ರೆ…. ದೇವ್ರನ್ನೂ ಎಳೀತಾನೆ. ಕುರ್‌ಆನ್‌ನ್ನೂ ತರ್ತಾನೆ. ಹದೀಸನ್ನೂ ಹೇಳ್ತಾನೆ. ಅದೇ ಆ ಪಾಪದವಳಿಗೆ ಹೊಟ್ಟಿಗಿಷ್ಟು ಕೊಡು ಅಂದ್ರೆ ಕಳ್ಳಾಟ ಮಾಡ್ತಾನೆ. ದೇವ್ರೆ! ಇವ್ರಿಗೆ ಯಾವಾಗ ಬುದ್ಧಿ ಕೊಡ್ತೀಯ……. ಮೌನವಾಗಿಯೇ ಆಮಿನ ಬಾಗಿಲ ಹಿಂದೆ ಸರಿದು ಹೋದಳು.

“ಸ್ಸರಿ ಬಿಡು….. ನೀನು ಆರಂಭಿಸಿ ಬಿಟ್ರೆ….. ನಾನ್‌ಸ್ಟಾಪ್…… ಆಗಿಬಿಡ್ತೀಯ….”

ಮುತವಲ್ಲಿ ಸಾಹೇಬರು ಕೋಟು ಏರಿಸಿಯಾಗಿತ್ತು. ಚಪ್ಪಲಿ ಮೆಟ್ಟಿಯಾಗಿತ್ತು. ಬೀದಿಗಿಳಿದಾಗ ಯಾಕೂಬ್ ಹೇಳಿದ,

“ಪ್ರಿನ್ಸೆಸ್ ಹೋಟ್ಲಿಗೊಗೋಣ. ಫ್ಯಾಮಿಲಿ ರೂಮ್‌ನೊಳ್ಗೆ ನಮ್ಮವ್ರು ಯಾರೂ ಇಣುಕಿ ನೋಡೋದಿಲ್ಲ.”

“ಸ್ವಲ್ಪ ಒಳ್ಳೆ ಜಾಗಕ್ಕೆ ಹೋಗೋಣ. ಆಮೇಲೆ ಯಾರಾದ್ರು ನೋಡಿ….. ಗೀಡಿ…..ತಕರಾರಾದ್ರೆ ಏನು ಗತಿ? ಅವ್ರಿಗೆ ಜವಾಬು ಹೇಳೋರ್‍ಯಾರು ?….. ಮೊದ್ಲೇ ಈ ಜನ ಹೆಂಗಾಡ್ತಾರೆ ನಿಂಗೊತ್ತು. ಈ ಮಳೆ…. ಅಬ್ಬಾ ಈ ಚಳಿ….ಏ…..ಆಮಿನ….. ನಾನು ಹೊರಗೋಗ್ತಾ ಇದೀನಿ……ಬರೋದು ತಡವಾಗುತ್ತೆ….. ಬಾಗಿಲು ಹಾಕ್ಕೊ….”

ಪ್ರತ್ಯುತ್ತರವಾಗಿ ಒಳಗಿನಿಂದ ಪಾತ್ರೆ ಕುಕ್ಕಿದ ಸದ್ದು ಮತ್ತು ಹಿನ್ನೆಲೆಯಲ್ಲಿ ಆಮಿನಳ ಗೊಣಗಾಟ….. “ಮುತವಲ್ಲಿಯಂತೆ….. ಮುತವಲ್ಲಿ…. ಎಂಥ ಮನುಷ್ಯ …..? ಮುತವಲ್ಲಿಯಾದ ಮೇಲಾದ್ರೂ ಐದು ಹೊತ್ತು ಸರಿಯಾಗಿ ನಮಾಜ್ ಮಾಡ್ತಾರ? ಸಿನೆಮಾಗೆ ಹೋಗೋದ್ನ ಬಿಟ್ಟಿದ್ದಾರ ? ಅದೆಲ್ಲಾ ಇರ್ಲಿ….. ಸೈತಾನನ ಮೂತ್ರವನ್ನಾದರೂ ಕುಡಿಯೋದನ್ನ ಬಿಟ್ಟಿದ್ದಾರ….? ಇವ್ರ ಮುತವಲ್ಲಿತನಕ್ಕೆ ಇಷ್ಟ್ ಬೆಂಕಿಹಾಕ….”

ಈ ಗೊಣಗಾಟವನ್ನು ಕೇಳುವುದಕ್ಕೆ ಮೊದಲೇ ಮುತವಲ್ಲಿ ಮತ್ತು ಯಾಕೂಬ್‌ನ ಆಟೋರಿಕ್ಷ ಬೀದಿಗುಂಟ ಓಡಿದ ಸದ್ದು ಅವಳಿಗೆ ಕೇಳಿಸಿತು. ಈ ಚಳಿಯಲ್ಲಿ….. ಮಸೀದಿಯ ಆ ನೀರವ ಶಾಂತತೆಯಲ್ಲಿ ದೆವ್ವದಂತೆ ಕೂತಿರಬಹುದಾದ ನಿರ್ಭಾಗ್ಯೆ ಅಶ್ರಫ್, “ಪಾಪ! ಅವಳದಾದರೂ ತಪ್ಪೇನಿದೆ ? ಸಾಲಾಗಿ ಮೂರು ಹೆಣ್ಣು ಮಕ್ಕಳು ಹುಟ್ಟಿದ್ದು ಅವಳ ತಪ್ಪೇ? ಅದೇನಾದರೂ ರೊಟೀನಾ…… ನಮಗೆ ಹೇಗೆ ಬೇಕೋ ಹಾಗೆ ಲಟ್ಟಿಸುವುದಕ್ಕೆ….. ಥೂ!……” ಅವಳ ಮನಸ್ಸೆಲ್ಲಾ ಕಹಿಯಾಯಿತು.

ಅವಳು ಹಿಂಬಾಗಿಲಿನಿಂದ ಅಂಗಳಕ್ಕಿಳಿದು, ಅದರ ದಕ್ಷಿಣಕ್ಕಿದ್ದ ಮಸೀದಿಯ ಎತ್ತರವಾದ ಗೋಡೆಯ ಬಳಿ ಬಂದಳು. ಮಸೀದಿಯಲ್ಲಿ ಪ್ರವಚನವೇನಾದರೂ ಆದಲ್ಲಿ ಅವಳಿಗೆ ಬಿಡುವಿದ್ದಲ್ಲಿ ಕೇಳಲು ಅಥವಾ ಮಸೀದಿಯ ಹೌಸ್‌ನಿಂದ ನಾಲ್ಕಾರು ಬಿಂದಿಗೆ ನೀರು ತರಿಸಿಕೊಳ್ಳಲು ಅನುಕೂಲವಾಗುವಂತೆ ಮಸೀದಿಯ ಕಾಂಪೌಂಡಿನ ಗೋಡೆಯ ಬದಿಗೆ ಒಂದಿಷ್ಟು ಸೈಜುಕಲ್ಲನ್ನು ಒತ್ತರಿಸಿಟ್ಟಿದ್ದಳು. ತಲೆಯ ಮೇಲೆ ಸೆರಗೆಳೆದು ಅವಳು ಆ ಸೈಜುಕಲ್ಲುಗಳ ಮೇಲೆ ಹತ್ತಿ ಮುಖ ಕಾಣಿಸದಂತೆ ಮರೆ ಮಾಡಿಕೊಂಡು, ಆಕೆಗೆ ಮಾತ್ರ ಮಸೀದಿಯ ಒಳ ಆವರಣ ಕಾಣುವಂತೆ ಹಣಕಿದಳು. ಇಶಾಂ ನಮಾಜ್ ಮುಗಿಸಿ ಎಲ್ಲರೂ ಮಸೀದಿಯ ವಿಶಾಲವಾದ ಕಾಂಪೌಂಡಿನ ಮುಖ್ಯ ದ್ವಾರದಿಂದ ಹೊರಗೆ ಹೋಗುತ್ತಿದ್ದರು. ಅವಳು ಇನ್ನಷ್ಟು ಬಾಗಿ ಹಣಕಿದಳು. ಓ…. ಅದೋ….. ಮಸೀದಿಯ ಉತ್ತರಕ್ಕೆ ಕಟ್ಟಿದ್ದ ಪಡಸಾಲೆಯ ಮುಂಭಾಗದಲ್ಲಿ ಅಶ್ರಫ್ ಮುದುರಿಕೊಂಡು ಕುಳಿತಿದ್ದಳು. ಅವಳು ಮಾಸಿದ ಸೀರೆಯ ಸೆರಗನ್ನು ತಲೆಯ ಮೇಲೆ ಹೊದ್ದಿದ್ದಳು. ಮಡಿಲಲ್ಲಿದ್ದ ಕೂಸನ್ನು ಜೀರ್ಣವಾದ ಆ ಸೀರೆಯ ಸೆರಗಿನಲ್ಲಿ ಮುಚ್ಚಿಕೊಂಡಿದ್ದಳು. ತಾಯಿಯ ಪಕ್ಕದಲ್ಲಿ ಹಸೀನ ಕಾಲುಚಾಚಿ ಆ ಥಂಡಿ ನೆಲದ ಮೇಲೆ ಒರಗಿದ್ದಳು. ಮೂರು ವರ್ಷದ ಹಬೀಬ ಅರ್ಧ ನೆಲದ ಮೇಲೆ ಅರ್ಧ ತಾಯಿಯ ಮಡಿಲಲ್ಲಿ ಹುದುಗಲು ಪ್ರಯತ್ನಿಸುತ್ತಿದ್ದಳು.

ನಮಾಜ್‌ಗೆ ಬಂದವರೆಲ್ಲರೂ ಅವಳತ್ತ ಒಂದು ಪ್ರಶ್ನಾರ್ಥಕ ನೋಟ ಬೀರಿ ಒಬ್ಬೊಬ್ಬರಾಗಿ ಖಾಲಿಯಾಗಿದ್ದರು. ಒಬ್ಬನ ಮನೆಯಲ್ಲಿ ಗಮ್ಸಾಲಕ್ಕಿಯ ಬಿರಿಯಾನಿ ಪರಿಮಳವನ್ನು ಸೂಸುತ್ತಿತ್ತು. ಇನ್ನೊಬ್ಬನ ಮನೆಯಲ್ಲಿ ಮೀನಿನ ಸಾರು ಮರಳುತಿತ್ತು. ಮತ್ತೊಬ್ಬನ ಹೊಸ ಹೆಂಡತಿ ಕಾಯುತ್ತಿದ್ದಳು. ಮಗದೊಬ್ಬನ ಮಗ ಹೊಸದಾಗಿ ನಡೆಯಲು ಕಲಿತಿದ್ದು ತಪ್ಪು ಹೆಜ್ಜೆ ಹಾಕುತ್ತಿದ್ದ. ಹೀಗೆಯೇ ಎಲ್ಲರೂ ಕಷ್ಟ ಕೋಟಲೆಗಳ ಜಂಜಾಟದ ಹಣಾಹಣಿಯಿಂದ ಮುಕ್ತರಾಗುವ ಓಟದ ನಡಿಗೆಯೊಡನೆ ತಮ್ಮ ಸುಖಸಂತೋಷಗಳ ಕಾತುರದ ನಿರೀಕ್ಷೆಯೊಡನೆ ಮಸೀದಿಯಿಂದ ನಿರ್ಗಮಿಸಿದರು. –

ಅಶ್ರಫ್…. ಕುಳಿತೇ ಇದ್ದಳು. ಎರಡು ದಿನದಿಂದಲೂ ನಿರಂತರವಾಗಿ ಸಣ್ಣಗೆ ಹನಿಯುತ್ತಿದ್ದ ಮಳೆ, ಅವಳ ಕೆಚ್ಚನ್ನು ತಂಪಾಗಿಸಿರಲಿಲ್ಲ. ದೇಹದೊಳಗೆ ಹೊಕ್ಕು ಮೂಳೆಯನ್ನು ಕೊರೆಯತ್ತಿದ್ದ ಚಳಿ ಅವಳ ಚೇತನವನ್ನು ಕುಗ್ಗಿಸಿರಲಿಲ್ಲ, ಚೂಪಾದ ನಖಗಳಿಂದ ಕರುಳನ್ನು ಬಗೆಯುತ್ತಿದ್ದ ಹಸಿವು ಅವಳನ್ನು ಕಂಗೆಡಿಸಿರಲಿಲ್ಲ. ಅವಳು ಅಲ್ಲಾಹುವಿನ ಮನೆಯ ದುರ್ಗಮವಾದ ಬಾಗಿಲನ್ನು ಬಡಿಯುತ್ತಿದ್ದಳು. ತನಗಾಗಿ ಯಲ್ಲ…. ಅವಳದೇನು ನಾಯಿ ಹೊಟ್ಟೆ ಎಲ್ಲಿಯಾದರೂ ತುಂಬೀತು, ತನ್ನ ಮಕ್ಕಳಿಗಾಗಿ ನ್ಯಾಯ ಬೇಡಲು…. ತಮ್ಮ ಬದುಕುವ ಹಕ್ಕನ್ನು ಮರಳಿ ಪಡೆಯಲು ಅವಳು ಸನ್ನದ್ಧಳಾಗಿದ್ದಳು. ತನ್ನದಲ್ಲದ ತಪ್ಪಿಗೆ ತನಗೇಕೆ ಶಿಕ್ಷೆ ಎಂದು ಗಟ್ಟಿಸಿ ಕೇಳಲು ಏಕಾಂಗಿಯಾಗಿ ನಿಂತಿದ್ದಳು. ಆದರೆ…. ಅಲ್ಲಾಹನ ಮನೆಯ ಬಾಗಿಲು ಅವಳಿಗಿನ್ನೂ ತೆರೆದಿರಲಿಲ್ಲ. ಅವಳ ಜೊತೆಯಲ್ಲಿದ್ದ ಮಕ್ಕಳ ಕಂದಿದ ಮೋರೆಗಳು ಅವಳನ್ನು ಛಲಗಾತಿಯನ್ನಾಗಿಸಿದ್ದವು. ಧ್ವನಿ ಉಡುಗಿ ಕೈಸೋತು ಹೋದಾಗ ಅವಳೀಗ ತಮಟೆ ಬಡಿ ಯುತ್ತಿದ್ದಳು.

ಮಡಿಲಲ್ಲಿ ಮಲಗಿದ್ದ ಮಗು ಸ್ವಲ್ಪವೇ ಮಿಸುಕಿತು, ಜೋಮು ಹಿಡಿದ ಕಾಲನ್ನು ಒಂದು ಸಾರಿ ಕುಟ್ಟಿ ಅವಳು ಸೆರಗನ್ನು ಸರಿಸಿ ಮಗುವಿನ ಮೊರೆಯನ್ನು ನೋಡಿದಳು. ಖಾಯಿಲೆಯಿಂದ ನರಳುತ್ತಿದ್ದ ಆ ಮಗುವಿನ ಕಂದು ಬಣ್ಣ ಮಂದ ಬೆಳಕಿನಲ್ಲಿ ಇನ್ನಷ್ಟು ಕಪ್ಪಾಗಿ ಕಂಡಿತು. ಆ ಮಗುವಿನ ಮೂಗು ಕಟ್ಟಿ ಕೊಂಡಿತ್ತು. ಉಸಿರಾಟದ ಗತಿಯನ್ನನುಸರಿಸಿ ಅದರ ಎದೆಗೂಡು ವಿಸ್ತಾರವಾಗಿ ಅರಳಿದಾಗ ಪಕ್ಕೆಲಬುಗಳ ಕೆಳಭಾಗದಲ್ಲಿ ಆಳವಾದ ಎರಡು ಗುಂಡಿಗಳು ಕಂಡುಬರುತ್ತಿದ್ದವು. ಎರಡು ಕಣ್ಣುಗಳೂ ಮುಚ್ಚಿದ್ದು ರಪ್ಪೆಗಳ ಮೇಲೆ ಪಿಸಿರು ಕೆನೆಗಟ್ಟಿತ್ತು. ಮಗುವಿನ ಮೈ ಸುಡುತ್ತಿತ್ತು. ಮಗುವನ್ನೊಮ್ಮೆ ಅವಳು ದಿಟ್ಟಿಸಿ ನೋಡಿದಳು…..

ಅವಳ ಆ ಮಗು ಮುನ್ನಿ….. ಅವಳು ಹುಟ್ಟಿದ ನಂತರವೇ ಅವಳ ಕಷ್ಟಗಳೆಲ್ಲಾ ಪರಾಕಾಷ್ಠತೆಯನ್ನು ಮುಟ್ಟಿದ್ದು…. ಮೊದಲೆರಡು ಹೆಣ್ಣು ಹುಟ್ಟಿದಾಗ ಬೇಸರ ಪಟ್ಟುಕೊಂಡಿದ್ದರೂ ಯಾಕೂಬ್ ಮನೆಯವನಾಗಿದ್ದ. ಅವನು ತಂದುಕೊಡುತ್ತಿದ್ದ ಹಣದಲ್ಲೇ ಉಳಿತಾಯ ಮಾಡಿ, ಅವಳು ಒಂದಿಷ್ಟು ಚಿನ್ನ-ಗಿನ್ನ ಮಾಡಿಸಿಕೊಂಡಿದ್ದಷ್ಟೇ. ಅಲ್ಲದೇ….. ಕಾಲಿಗೆ ಎರಡು ಬೆರಳಿನಗಲದ ಝಾಲರ್ ಪಟ್ಟಿಯಲ್ಲಿ ಬೆಳ್ಳಿಯ ಚೈನನ್ನೂ ಛಮ್… ಛುಮ್ ಎಂದು ಸದ್ದು ಮಾಡಿಕೊಂಡು ಬಳುಕುತ್ತ ನಡೆದಾಡುತ್ತಿದ್ದಳು. ಮೂರನೆಯದು ಕೂಡ ಹೆಣ್ಣಾದಾಗ ಅವನು ನಾಪತ್ತೆಯಾದ. ಆಸ್ಪತ್ರೆಯ ಕಡೆಗೂ ತಲೆ ಹಾಕಲಿಲ್ಲ. ಮನೆಯ ಬಾಗಿಲನ್ನು ತುಳಿಯಲಿಲ್ಲ…. ಬದಲಿಗೆ ತನ್ನ ತಾಯಿಯ ಮನೆ ಸೇರಿಕೊಂಡ.

ಅಶ್ರಫ್ ಬದುಕಿ ಉಳಿಯಲು ಕುಂಬಳ ಸೊಪ್ಪನ್ನು ಬೇಯಿಸಿ ತಿಂದಳು. ಟೀ ಪುಡಿಯನ್ನು ಎರಡು ಮೂರು ದಿನಗಳವರೆಗೆ ಬೇಯಿಸಿ ಟೀ ಕುಡಿದು ಜೀವ ಹಿಡಿದಳು. ಅದರೊಡನೆಯೇ ಗಂಡನನ್ನು ಒಲಿಸಿ ಹಿಂದೆ ತರಲು ಇನ್ನಿಲ್ಲದ ಪ್ರಯತ್ನ ಪಟ್ಟಳು. ಎಳೆಕೂಸನ್ನು ಹೆಗಲ ಮೇಲೆ ಹಾಕಿಕೊಂಡು ಮಾರ್ಕೆಟ್ ಬಳಿ ಹೋಗಿ, ಅಲ್ಲಿ ಆಟೋರಿಕ್ಷದಲ್ಲಿರುತ್ತಿದ್ದ ಇಬ್ರಾಹಿಮ್‌ನ ಕಾಲಿಗೆ ಬಿದ್ದಳು; ಅತ್ತಳು…. ಕರುಣೆ ತೋರು ಎಂದು ಬೇಡಿಕೊಂಡಳು. ‘ಅಲ್ಲಾಹು ನಿನ್ನನ್ನು ನಾಶ ಮಾಡುತ್ತಾನೆ’, ಎಂದು ಹೆದರಿಸಿದಳು…. ಏನೂ ಪ್ರಯೋಜನವಾಗಲಿಲ್ಲ.

ಮುಂದೇನೂ ದಾರಿ ಕಾಣದಿದ್ದಾಗ, ಜುಲೇಖ ಬೇಗಮ್‌ಳ ಮನೆಯಲ್ಲಿ ಕೆಲಸಕ್ಕೆ ಹೋಗಲಾರಂಭಿಸಿದಳು. ಕೆಲಸವೇನೂ ಹೊರೆ ಎನಿಸಲಿಲ್ಲ ಅವಳಿಗೆ. ಆದರೆ…. ಬೆಳಗಿನಿಂದ ರಾತ್ರಿಯವರೆಗೂ ಕೆಲಸವಿರಲಿ ಇಲ್ಲದಿರಲಿ ಅಲ್ಲಿಯೇ ಇರಬೇಕಾಗುತ್ತಿತ್ತು, ಜುಲೇಖ ಬೇಗಮ್‌ಳ ಗಂಡ ಅದ್ಯಾವುದೋ ಆಫೀಸಿನಲ್ಲಿ ಕೆಲಸಕ್ಕಿದ್ದ. ಇಬ್ಬರೇ ಮಕ್ಕಳು. ಕಾಲೇಜಿನಲ್ಲಿ ಓದುತ್ತಿದ್ದರು. ಜುಲೇಖ ಬೇಗಮ್ ಇಡೀ ದಿನ ಒಂದಲ್ಲ ಒಂದು ಪುಸ್ತಕವನ್ನು ಹಿಡಿದೇ ಇರುತ್ತಿದ್ದಳು.

ಒಮ್ಮೆ….. ಪುಸ್ತಕದಿಂದ ತಲೆ ಎತ್ತಿದ ಅವಳು ಅಶ್ರಫ್‌ಳನ್ನು ಕೇಳಿದಳು, “ನಿನ್ನ ಗಂಡ ಏನು ಕೆಲಸ ಮಾಡ್ತಾನೆ?”

“ಆಟೋರಿಕ್ಷ ನಡೆಸ್ತಾನೆ ಆಪ…..”

“ಮತ್ತೆ…. ಸಂಸಾರ ನಡೆಸುವಷ್ಟು ದುಡಿಮೆಯಾಗತ್ತಲ್ಲ?”

“ಹೂಂ…. ಆಗ್ತಿತ್ತು” ಅನ್ಯಮನಸ್ಕಳಾಗಿ ಉತ್ತರಿಸಿದಳು.

ಅವಳ ಮನಸ್ಸೆಲ್ಲಾ ಪುಟ್ಟ ಹಸೀನಾಳ ಕೃಪಾಕಟಾಕ್ಷದಲ್ಲಿ ಬಿಟ್ಟು ಬಂದಿದ್ದ ಮುನ್ನಿಯದೇ ಜ್ಞಾಪಕ. ಅವಳ ಮೊಲೆಗಳು ಬಿರಿಯುತ್ತಿದ್ದವು. ರವಿಕೆಯ ಮುಂಭಾಗ ಒದ್ದೆ ಯಾಗಿ ಜಿನುಗುತ್ತಿತ್ತು. ‘ಮಗು ಹಸಿದಿರಬಹುದು….’ ಅವಳಿಗೆ ದುಃಖ ಒತ್ತರಿಸಿ ಬಂದಿತು.

“ಮತ್ತೆ ನೀನ್ಯಾಕೆ ಇಲ್ಲಿ ಕೆಲಕ್ಕೆ ಬರ್ತೀಯ?”

ಅಶ್ರಫ್‌ಳ ಕಥೆ ಕೇಳಿ, ಜುಲೇಖ ಬೇಗಮ್‌ಗೆ ಆಶ್ಚರ್ಯ. ಈಗಲೂ….. ಇಂದಿನ ಯುಗದಲ್ಲೂ….. ಇಂತಹ ಜನರಿದ್ದಾರೆಯೇ?

“ನಿನಗೆ ಗೊತ್ತ ಅಶ್ರಫ್…. ಹೆಣ್ಣು ಹುಟ್ಟಿದರೆ ಆ ಮನೆಗೆ ಪ್ರವಾದಿ ಯವರ ಸಲಾಮ್ ಬಂದಂತೆ……”

“ಓ….. ಬಿಡಿ…. ಆಪ…… ನನ್ನಂತಹ ಬಡವಿಯ ಮನೆಗೆ ಪ್ರವಾದಿ ಯವರ ಸಲಾಮ್ ಎಷ್ಟು ಸಲ ಬರಬೇಕು….?”

“ಹುಚ್ಚಿ……ನೀನು…. ಸ್ವತಃ ಪ್ರವಾದಿಯವರಿಗೆ ಬರೀ, ಹೆಣ್ಣು ಮಕ್ಕಳು ಮಾತ್ರ ಇದ್ದದ್ದು. ಒಂದು ಗಂಡು ಮಗು ಆಗಿ ಬಾಲ್ಯದಲ್ಲಿಯೇ ತೀರಿಹೋದದ್ದು…. ಹೆಣ್ಣು ಮಕ್ಕಳನ್ನು ಅವರೆಷ್ಟು ಪ್ರೀತಿಸುತ್ತಿದ್ದರು ಓದಿದೀಯ ನೀನು… ತಿಳ್ಕೊಂಡಿದ್ದೀಯ… ಬೀಬಿ ಫಾತಿಮ ಅವರ ಪ್ರಾಣವಾಗಿದ್ದರು. ತಂದೆ-ಮಗಳ ಅದ್ಭುತ ಬಾಂಧವ್ಯದ ಜೀವಂತ ಪ್ರತೀಕವಾಗಿದ್ದರು.”

ಅಶ್ರಫ್‌ಗೆ ಏನೂ ಅರ್ಥವಾಗಲಿಲ್ಲ. ಮುನ್ನಿಯ ಸುತ್ತಲೇ ಅವಳ ಮನಸ್ಸು ಸುತ್ತುತ್ತಿತ್ತು.

ಕೊನೆಗೆ ಜುಲೇಖ ಬೇಗಮ್ ನುಡಿದಳು. “ಇದಂತೂ ತೀರಾ ಅನ್ಯಾಯ, ನೀನು ಮಸೀದಿಗೆ ಅರ್ಜಿ ಯಾಕೆ ಕೂಡಬಾರದು?”

‘ಅರೆ!’ ಅಶ್ರಫ್ ಎಗರಿಬಿದ್ದಳು. “ನನಗ್ಯಾಕೆ ಹೊಳೀಲಿಲ್ಲ…… ಆಪ…” ಅವಳು ಗೋಗರೆದಳು.

“ನನಗೊಂದು ಅರ್ಜಿ ಬರೆದುಕೊಡಿ.”

ಅರ್ಜಿ ಕೈಯಲ್ಲಿ ಹಿಡಿದು ಅವಳು ನಾಲ್ಕೈದು ಸಾರಿ ಮುತವಲ್ಲಿ ಸಾಹೇಬರ ಮನೆಗೆ ಸುತ್ತಿದರೂ, ಅವರು ಸಿಗಲಿಲ್ಲ. ಅದೊಂದು ದಿನ….. ಅವಳು ಓಡೋಡಿ ಬಂದು ಮುತವಲ್ಲಿ ಸಾಹೇಬರ ಕೈಗೆ ಅರ್ಜಿ ನೀಡುವುದಕ್ಕೂ, ಅವರು ಮನೆಯಿಂದ ಹೊರಡುವುದಕ್ಕೂ ಸರಿ ಹೋಯಿತು. ಎಡಗೈಯಿಂದ ಕೋಟಿನ ಜೇಬಿನೊಳಗೆ ನಿರ್ಲಕ್ಷ್ಯವಾಗಿ ಅರ್ಜಿಯನ್ನು ತೂರಿಸಿ, ಅವರು ಹೊರಗಡಿ ಇಟ್ಟರು. ಬೆಳಗಿನ ಹೊತ್ತು ನಲ್ಲಿಯಲ್ಲಿ ನೀರು ಬಂದಿತ್ತು, ಕಡ್ಡಿ ಪೊರಕೆ ಹಿಡಿದು ರಸ್ತೆಯ ಅರ್ಧ ಭಾಗದವರೆಗೂ ಗುಡಿಸುತ್ತಿದ್ದ ಹನೀಫ ಚಿಕ್ಕಮ್ಮ ಪೊರಕೆ ಹಿಡಿದಂತೆಯೇ ಮೋಟು ಗೋಡೆಯ ಹಿಂಬದಿಯಲ್ಲಿ ಮರೆಯಾದಳು. ನಲ್ಲಿಯ ಕಳಗೆ ಬಿಂದಿಗೆ ಇಡಲು ಬಂದ ರಫಿಯಾ ಹನೀಫ ಚಿಕ್ಕಮ್ಮನ ಶ್….. ಶ್… ಎಂಬ ಸಂಜ್ಞೆಯನ್ನು ಗಮನಿಸಿದವಳೇ ಬಿಂದಿಗೆ ಬೀಳುತ್ತಿರುವುದನ್ನೂ ಬಿಟ್ಟು ಮನೆಗೋಡಿದಳು. ಮೊಹಲ್ಲದುದ್ದಕ್ಕೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದ ಹೆಂಗಸರೆಲ್ಲರೂ, ಬೀದಿಯಿಂದ ಮರೆಯಾದರು. ಮುತವಲ್ಲಿ ಸಾಹೇಬರು ತಮಗೆ ಸಿಗುತ್ತಿದ್ದ ಗೌರವದಿಂದ ತೃಪ್ತರಾಗಿ, ಯಾರಾದರೂ ಹೆಂಗಸರು ನಿರ್ಭೀತಿಯಿಂದ ಕೆಲಸ ಮುಂದುವರೆಸಿರುವರೇ ಎಂದು ಓರೆಗಣ್ಣಿನಿಂದ ಗಮನಿಸುತ್ತಾ ಗಂಭೀರವಾಗಿಯೇ ನಡೆದುಹೋದರು.

ಮುತವಲ್ಲಿ ಸಾಹೇಬರಿಂದ ಹದಿನೈದು ದಿನ ಕಳೆದರೂ ಕರೆ ಬಾರದಿದ್ದರಿಂದ ಅಶ್ರಫ್ ಮತ್ತೊಮ್ಮೆ ಅವರ ಮನೆಗೆ ಹೋದಳು. ಮುತವಲ್ಲಿ ಸಾಹೇಬರು ಎಂದಿನಂತೆ ಮನೆಯಲ್ಲಿರಲಿಲ್ಲ. ಕಾಯುತ್ತ ಕುಳಿತಿದ್ದ ಅಶ್ರಫ್‌ಳನ್ನುದ್ದೇಶಿಸಿ ಆಮಿನ ಕೇಳಿದಳು.

“ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡರೆ ಅಂಥವರಿಗೆ ಜನ್ನತ್‌ ಸಿಗೋ ದಿಲ್ಲವಂತೆ… ಹೌದಾ ಅಶ್ರಫ್?”

“ಏನೋ ಅಮ್ಮ…. ನನಗೆ ಗೊತ್ತಿಲ್ಲ. ಜುಲೇಖ ಆಪಾನ ಕೇಳ್ಬೇಕು…. ಯಾವಾಗೂ ಅವ್ರು ತುಂಬಾ ದಪ್ಪ ದಪ್ಪ ಪುಸ್ತಕಾನಾ ಓದ್ತಿರ್‍ತಾರೆ….”

ಆಮಿನ ಅವಳಿಗೆ ತೀರ ಸಮೀಪ ಬಂದು ರಹಸ್ಯವಾಗೆನ್ನುವಂತೆ ಪಿಸುಗುಟ್ಟಿದಳು, “ಹಾಗಿದ್ರ…. ಕೇಳ್ಕೊಂಡ್ ಬಂದು ಮುಂದಿನ್ ಸಾರಿ ನನಗ್ಹೇಳ್ತೀಯಾ?….”

“ಆಯಿತಮ್ಮ…. ಅವ್ರು ಇನ್ನೂ ಏನೇನೋ ತುಂಬಾ ವಿಚಾರಾನ ಹೇಳಿದ್ದಾರೆ….. ನಾನು ದಡ್ಡಿ…..ನನ್ ತಲೆಗೆ ಹೋಗತ್ತ?…”

ಅಶ್ರಫ್‍ಳ ಮಾತು ಮುಗಿಯುವುದಕ್ಕೆ ಮೊದಲೇ ಒಳಗೆ ಬಂದ ಮುತವಲ್ಲಿ ಸಾಹೇಬರು ಮುಖ ಸಿಂಡರಿಸಿದರು.

“ಓ….. ನಿನ್ನ ಅರ್ಜಿ ಎಲ್ಲೋ ಕಳೆದು ಹೋಗಿದೆ. ಬೇಕಿದ್ರೆ….. ಇನ್ನೊಂದ್ ಬರ್‍ಕೊಂಬಾ” ಎಂದು ಅವರು ಕೋಣೆಯೊಳಗೆ ಹೊರಟೇಹೋದರು.

ಬೇಕಿದ್ರೆ…..ಓ… ನನ್ಗೇನು ಗಂಡ ಬೇಕಿಲ್ಲ…. ಆದ್ರೆ ಮಕ್ಕಿಗೆ ಹೊಟ್ಟೆಗೆ ಬೇಕಲ್ಲ…… ಅಶ್ರಫ್‌ಳ ಅಷ್ಟೆಲ್ಲಾ ಕಷ್ಟಕೋಟಲೆಗಳ ನಡುವೆಯೂ ಮೈ ತುಂಬಿಕೊಂಡಿದ್ದ ಮುನ್ನಿ ಈಗ್ಯಾಕೋ ಬಡಕಲಾಗತೊಡಗಿದಳು. ಕೈಕಾಲು ಸಣ್ಣಗಾಗಿ ಹೊಟ್ಟೆ ದಪ್ಪಗಾಯಿತು. ಯಾವಾಗಲೂ ಸಿಂಬಳ ಸುರಿಸುತ್ತಾ ಇಡೀ ಜಗತ್ತನ್ನೇ ತಿನ್ನುವ ಹಸಿವಿನಿಂದ ಕೂಡಿ, ಹಗಲು-ರಾತ್ರಿ ಎನ್ನದೇ ಒಂದೇ ಮಟ್ಟದ ರಾಗ ಎಳೆಯುತ್ತಾ ವಕ್ಕರಿಸಿದ್ದ ಮುನ್ನಿಯನ್ನು ಅವಳೆಂದಿಗೂ ಶನಿ ಎಂದೆಣಿಸಲಿಲ್ಲ. ಅವಳ ಹಿರಿಯ ಎರಡು ಮಕ್ಕಳಿಗಿಂತಲೂ ಹೆಚ್ಚಾಗಿ ಅವಳು ಮುನ್ನಿಗೆ ಪ್ರೀತಿಯನ್ನೂ, ಅನ್ನವನ್ನೂ ಇಕ್ಕಿದ್ದಳು. ಆದರೆ….. ಮುನ್ನಿಗೆ ಅಗತ್ಯವಾಗಿ ಕೊಡಲೇಬೇಕಾದ ಔಷಧಗಳು, ಅವುಗಳಿಗೆ ಅವಳ ಬಳಿ ಹಣವಾದರೂ ಎಲ್ಲಿತ್ತು ? ಪ್ರತಿದಿನ ಇಂಜೆಕ್ಷನ್….. ಗುಳಗೆ, ಟಾನಿಕ್….. ಡಾಕ್ಟರ್ ಫೀಜು…. ಅದರೊಡನೆ ಅವಳ ಸರದಿ ಬರುವವರೆಗೆ ಕಾಯುವುದು ಬೇರೆ. ಯಾವಾಗಲೋ ಒಮ್ಮೆ ಅವಳ ಬಾಯಿಗಿಡುವ ಗುಳಿಗೆ….. ಯಾವುದೇ ಪರಿಣಾಮವನ್ನು ಬೀರದೆ ಅವಳ ರೋಗವನ್ನು ಹೆಚ್ಚಿಸುವಲ್ಲಿ ಸಹಾಯಕವಾದವಷ್ಟೆ.

ಮತ್ತೆ ಜುಲೇಖ ಬೇಗಮ್‌ಳಿಂದ ಅರ್ಜಿ ಬರೆಯಿಸಿಕೊಂಡು, ಮುತವಲ್ಲಿಯ ಮನೆಯನ್ನು ನಾಲ್ಕೈದು ಸುತ್ತು ಹಾಕುವುದರೂಳಗೆ ಹಾರಿ ಬಂದ ಸುದ್ದಿ ಅವಳ ಕಿಚ್ಚನ್ನು ಸೂರೆಗೊಂಡಿತು. ‘ಯಾಕೂಬ್ ಊರಿನಲ್ಲೇ ಇಲ್ಲ, ಊರು ಬಿಟ್ಟಿದ್ದಾನೆ. ಗಂಡ್ಸಲ್ಲವೇ ಅವ್ನು….. ಇದ್ದರೂ….. ಎದ್ದರೂ…. ಹೊತ್ತರೂ…. ಹೊರದಿದ್ದರೂ… ಅವನನ್ನು ಕೇಳೋರು ಯಾರು ? ಅವನು ಯಾರಿಗೆ ಉತ್ತರಿಸಬೇಕು ? ಲಂಗೋಟಿ ಯಾರ್ ಅವನು…. ಅವನ ಭೂತ ಎದ್ದೆದ್ದು ಕುಣಿಯುವುದಿಲ್ಲ. ವರ್ತಮಾನ ಅವನಿಗೆ ತಾಗುವುದಿಲ್ಲ. ಭವಿಷ್ಯತ್ತು ಅಣಕಿಸುವುದಿಲ್ಲ…. ನಿಗೂಢವಾಗುವುದಿಲ್ಲ. ಯಾರು ? ಎಂದು ನಾಚಬೇಕಾದ್ದಿಲ್ಲ….. ಯಾರದ್ದು ಎಂದು ಉತ್ತರಿಸಬೇಕಾದ್ದಿಲ್ಲ. ಅವನಿಗೆ ಕ್ಷಮಯೇ ಬೇಕಾಗಿಲ್ಲ. ಏಕೆಂದರೆ ಅವನವು ಯಾವುದೂ ತಪ್ಪಲ್ಲ.

ಅಶ್ರಫ್‌ಗೆ ಬಹಳ ದುಃಖವಾಯಿತು, ಮಡಿಲಲ್ಲೇ ಕರಗುತ್ತಿರುವ ಮುನ್ನಿ ಅವಳೆದೆಗೆ ಇನ್ನಷ್ಟು ಹತ್ತಿರವಾದಳು. ಆದರೆ ಮುನ್ನಿಗೆ ಬೇಕಾದದ್ದು ತಾಯಿಯ ಪ್ರೀತಿ ಮಾತ್ರವಲ್ಲ….. ಚಿಕಿತ್ಸೆ…. ಆರೈಕೆ….. ಆರು ತಿಂಗಳು ಕಳೆಯುವಷ್ಟರಲ್ಲಿ ಮುನ್ನಿ ಮೂಳೆ ಚಕ್ಕಳವಾದಳು.

ಆಗಲೇ….. ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯಂಬಂತೆ ಯಾಕೂಬ್ ಊರಿಗೆ ಬಂದಿದ್ದಾನೆಂದು ಅವಳಿಗೆ ತಿಳಿದು ಬಂದಿತು. ಅವಳು ನಾಗಾಲೋಟದಿಂದ ಆಟೋ ಸ್ಟಾಂಡಿಗೆ ಓಡಿದಳು. ಅವಳನ್ನು ನೋಡಿದವನೇ ಯಾಕೂಬ್ ಕಣ್ಮರೆಯಾಗಿ ಹೋದ. ಇನ್ನೊಮ್ಮೆ ಅವಳು ಚಾಲಾಕಿಯಾದಳು. ಆಟೋ ಹಿಂಬದಿಯಿಂದ ಬಂದು ಮಕ್ಕಳ ಸಮೇತ ಆಟೋವನ್ನೇರಿ ಕುಳಿತಳು. ಅವನು ಮರುಮಾತಿಲ್ಲದೆ ಆಟೋ ರಿಕ್ಷವನ್ನೋಡಿಸಿದ. ಅವಳ ಗುಡಿಸಿಲಿನೆದುರಿಗೆ ನಿಲ್ಲಿಸಿ, ‘ಬರೀ ಹೆಣ್ಣು ಹಿಂಡನ್ನು ಹಡಕೊಂಡು ನಾಯಿಯ ಹಾಗೆ ಅಲಿತಿದೀಯಲ್ಲ…. ಸ್ವಲ್ಪವಾದರೂ ಮರ್ಯಾದೆ ಯಾಗಿರೋದನ್ನ ಕಲಿ’ ಎಂದು ಉಗಿದು ಮಕ್ಕಳಿಬ್ಬರನ್ನೂ ನೆಲದ ಮೇಲೆ ಕುಕ್ಕಿ…. ಅವಳು ಗಾಬರಿಯಾಗಿ ಇಳಿಯುತ್ತಿದ್ದಂತೆಯೇ…. ‘ಭರ್’ ಎಂದು ಮಾಯವಾದ. ಅವಳು ಹನಿ ಗೂಡಿದ ಕಣ್ಣುಗಳಿಂದ ಬಿಕ್ಕಳಿಸುತ್ತಿದ್ದ ಮಕ್ಕಳಿಬ್ಬರನ್ನು ಎದೆಗವಚಿದಳು.

ಮುಂದೆ ದಾರಿ ಕಾಣದೆ ಅವಳು ಮಸೀದಿಯ ಕಮಿಟಿಗೆ, ಮುತವಲ್ಲಿಗೆ ಹಲವು ಹತ್ತು ಅರ್ಜಿಗಳನ್ನು ಗುಜರಾಯಿಸಿದಳು. ಮಗುವಿನ ಔಷಧೋಪಚಾರದ ಖರ್ಚಿಗೆ ಅವನಿಂದ ಸ್ವಲ್ಪವಾದರೂ ಹಣ ಕೊಡಿಸಿ ಎಂದು ಕೈಮುಗಿದು ಬೇಡಿದಳು. ಅವಳಿಗೆ ಸಿಕ್ಕ ಉತ್ತರವೊಂದೇ….. ಆಗ ಬಾ….. ಈಗ ಬಾ….. ಹೋಗಿ ಬಾ….. ಈ ಮಧ್ಯ ರೆಕ್ಕೆ ಪುಕ್ಕ ಕಟ್ಟಿಕೊಂಡು ವೇಗವಾಗಿ ಧಾವಿಸಿತೊಂದು ಸುದ್ದಿ ! ‘ಯಾಕೂಬ್ ಇನ್ನೊಂದು ಮದುವೆಯಾಗಲಿದ್ದಾನೆ. ಅವನಿಗೆ ಆಟೋರಿಕ್ಷ ಓಡಿಸಲು ಗಂಡು ಮಗ ಬೇಕಂತೆ’. ಅಶ್ರಫ್‍ಳ ಅಳಿದುಳಿದ ಪ್ರಪಂಚ ಅವಳ ಕಣ್ಣೆದುರಿಗೆ ಕುಸಿಯತೊಡಗಿತು. ರಾತ್ರಿಯಿಡೀ ಅಳುತ್ತಿದ್ದ ಅವಳು ಮುತವಲ್ಲಿ ಸಾಹೇಬರ ಮನೆ ಬಾಗಿಲಲ್ಲಿ ಹೋಗಿ ಕುಳಿತಳು. ಒಂಭತ್ತರ ಸುಮಾರಿಗೆ ಆಕಳಿಸುತ್ತ ಹೊರಬಂದ ಮುತವಲ್ಲಿ ಸಾಹೇಬರು ಮುಖ ಸಿಂಡರಿಸಿ ಕೇಳಿದರು…. “ಏನು….?”

ಅಶ್ರಫ್ ತನ್ನ ಮಾಮೂಲಿಗಳನ್ನೆಲ್ಲಾ ಸವಿಸ್ತಾರವಾಗಿ ಬಣ್ಣಿಸಿದಳು. ಮುತವಲ್ಲಿ ಸಾಹೇಬರು ಒಮ್ಮೆ ಕೆಮ್ಮಿ ಕ್ಯಾಕರಿಸಿ ಉಗುಳಿ ಬಂದರು. “ಮಾಡಬಾರದ ಯಾವ ಕೆಲಸಾನ ಅವನು ಮಾಡ್ತಿದ್ದಾನೆ? ಇನ್ನೊಂದು ನಿಕಾಹ್ ತಾನೆ ಅವ್ನು ಮಾಡಿಕೊಳ್ತಿರೋದು….. ಯಾರನ್ನು ಓಡಿಸಿಕೊಂಡು ಹೋಗ್ತಾ ಇಲ್ವಲ್ಲಾ….? ಹರಾಮ್ ಕೆಲಸವನ್ನೇನು ಮಾಡ್ತಿಲ್ವಲ್ಲಾ….? ಮಾಡ್ಲಿಬಿಡು. ನಾಲ್ಕು ಜನ ಹೆಂಗಸ್ರನ್ನ ಮದ್ವೆಯಾಗ್‌ಬಹುದೂಂತ ಶರೀಯತ್ ಕಾನೂನು ಐತೆ ಗೊತ್ತಾ ? ಅದ್ಕೆ ನಿಂಗೆ ಯಾಕೆ ಹೊಟ್ಟೆ ಉರಿ ? ಈ ಹೆಂಗಸ್ರೇ ಹಿಂಗೆ….. ಬರೀ ಹೊಟ್ಟೆಕಿಚ್ ಪಡೋರು….” ಎಂದು ಓರೆಗಣ್ಣಿನಿಂದ ಆಮಿನಳತ್ತ ದೃಷ್ಟಿಹರಿಸಿದರು. ಎಳ ಮಗವಿಗೆ ಮೊಲೆಯೂಡಿಸುತ್ತಾ ಕುಳಿತ್ತಿದ್ದ ಆಮಿನ ‘ಎಲಾ ಗಂಡಸೆ’ ಎಂದುಕೊಂಡರೂ ಯಾಕೋ ಮನಸ್ಸಿನಲ್ಲಿ ಮುಳ್ಳು ಮುರಿದಂತಾಗಿತ್ತು. ಮಕ್ಕಳನ್ನು ಸಾಲಾಗಿ ನಿಲ್ಲಿಸಿಕೊಂಡು ಅಶ್ರಫ್‌ಳಂತೆ ತಾನೂ ನಿರ್ಗತಿಕಳಾಗಿ ಬೇಡುವ ದಿನ ದೂರವಿಲ್ಲವೆನಿಸಿತು ಅವಳಿಗೆ.

ಶುಷ್ಕ ದನಿಯಲ್ಲಿ ಅಶ್ರಫ್ ಹೇಳಿದಳು, “ಅವರು….. ಒಂದಲ್ಲ…… ಸಾವಿರ ಮಾಡ್ಕೊಳ್ಳಿ. ನಂಗೇನೂ ಹೊಟ್ಟೆ ಉರಿ ಇಲ್ಲ. ಅವರು ಸಂತೋಷವಾಗಿದ್ರೆ ಸಾಕು. ನಾನೇನೂ ಅವ್ರಿಗೆ ತೊಂದರೆ ಮಾಡೋಲ್ಲ. ಆದ್ರೆ… ಮುತವಲ್ಲಿ ಸಾಹೇಬ್ರೆ…. ಈ ಮಗು ಸಾಯ್ತಾ ಇದೆ…. ಇದಕ್ಕೆ ಔಷಧನಾದ್ರು…”

ಅವಳ ಮಾತನ್ನು ಅರ್ಧದಲ್ಲೇ ತುಂಡು ಮಾಡಿದ ಮುತವಲ್ಲಿ ಸಾಹೇಬ್ರು ಗುಡುಗಿದರು. “ನೋಡು ಮೂರ್ಖಳಂತೆ ಮಾತಾಡ್ಬೇಡ…. ಮೌತ್-ಹಯಾತ್ ಅಲ್ಲಾಹನ ಕೈಯಲ್ಲಿದೆ. ತಲೆಮೇಲೆ ಕಲ್ಲು ಎತ್ತಿ ಹಾಕಿದ್ರು ಕೆಲವರೂ ಸಾಯೋದೇ ಇಲ್ಲ. ಯಾಕೆ ಅಂದ್ರೆ…. ಅವರು ಬದುಕಬೇಕು ಅನ್ನೋದೇ ಅಲ್ಲಾಹನ ಇಚ್ಛೆಯಾಗಿರುತ್ತೆ, ಹಾಗೇನೇ…. ಇದು ಬದುಕಬೇಕನ್ನೊದು ಅಲ್ಲಾಹನ ಇಚ್ಛೆ ಇದ್ರೆ ಬದುಕುತ್ತೆ, ಇಲ್ದಿದ್ರೆ ಸಾಯುತ್ತೆ…. ಅದಕ್ಯಾಕೆ ನೀನು ಅವ್ನ ಜೀವ ಹಿಂಡಬೇಕು?”

ಅಶ್ರಫ್ ಇಂತಹ ಪ್ರಶ್ನೆಗಳೆದುರು ನಿರುತ್ತರಳಾಗುತ್ತಿದ್ದಳು. ಹೌದಲ್ಲ….! ದೇವರ ಇಚ್ಚೆ ಇದ್ದಂತೆ ಆಗುತ್ತೆ ಎಂದು ಸಮಾಧಾನ ತಂದುಕೊಳ್ಳಲೆತ್ನಿಸಿದಳು. ಆದರೆ ಒಂದೇ ಸಮನೆ ಭೇದಿ ಮಾಡುತ್ತಿದ್ದ ಮಗುವನ್ನು ನೋಡಿ ಅಲ್ಲಾಹನ ಮೇಲೆ ಭಾರ ಹಾಕಿ ಕೂರುವುದು ಅವಳಿಂದ ಸಾಧ್ಯವಿರಲಿಲ್ಲ. ಆದರೆ ಕೇಳುವುದಾದರೂ ಯಾರು ? ಯಾಕೂಬ್ ಮದುವೆ ಮಾಡಿಕೊಂಡು ಹೊಸ ಹೆಂಡತಿಯ ಊರಿಗೆ ನಡೆದಿದ್ದ.

ಮತ್ತೊಮ್ಮೆ ಅಶ್ರಫ್ ಅವನನ್ನು ಕಂಡಾಗ….. ಉಗುರುಗಳಿಗೆಲ್ಲಾ ಮೆಹಂದಿ ಹಚ್ಚಿದ್ದ….. ಎಡಗೈಲಿ ಕಟ್ಟಿದ್ದ ವಾಚು ಹೊಳೆಯುತ್ತಿತ್ತು, ಹೊಸ ಶೂ ಮೆಟ್ಟಿ, ಆಟೋರಿಕ್ಷ ಪಕ್ಕದಲ್ಲಿ ನಿಂತು, ಸ್ಟೈಲಾಗಿ ತಲೆಯ ಮೇಲೆ ಬಾಚಣಿಗೆ ಆರಿಸುತ್ತಿದ್ದ ಯಾಕೂಬ್ ಅಪರಿಚಿತನಂತೆ ಕಂಡ. ತನ್ನ ಸಂಭ್ರಮದಲ್ಲಿ ಮುಳುಗಿದ್ದ ಯಾಕೂಬ್ ಯಾರೋ ಭಿಕ್ಷುಕಳ ಕೈಗೆ ನೀಡುವಂತೆ ಹತ್ತು ರೂಪಾಯಿಯನ್ನು ಅಶ್ರಫ್‌ಳ ಕೈಗೆ ತುರುಕಿ ಮಾಯವಾದ.

ಅಶ್ರಫ್ ತನ್ನ ಬದುಕಿನ ಬಗ್ಗೆ ಕಲ್ಲಾದಳು. ಆದರೆ ಮುನ್ನಿಯ ಸಾವು-ಬದುಕಿನ ಪ್ರಶ್ನೆ ಅವಳಲ್ಲಿ ಛಲವನ್ನು ಹುಟ್ಟಿಸಿತ್ತು. ಜುಲೇಖ ಬೇಗಮ್ ಕೂಡ ಪುಸ್ತಕದಿಂದ ತಲೆ ಎತ್ತಿ, “ನೋಡು…. ಯಾವನೇ ಗಂಡಸು ನಾಲ್ಕು ಮದ್ವೆಯಾಗಬೇಕಾದ್ರೂ…. ಅದಕ್ಕೆ ಸರಿಯಾದ ಕಾರಣ ಇರಬೇಕಾಗುತ್ತದೆ. ಯುದ್ಧದ ಕಾಲವಿದ್ದು, ಅನೇಕ ಜನ ಗಂಡಸರು ಯುದ್ಧದಲ್ಲಿ ಸತ್ತಿದ್ದರೆ….. ಆಗ ಗಂಡಸು ಒಂದಕ್ಕಿಂತ ಹೆಚ್ಚು ಮದುವೆಯಾಗಬಹುದು…. ಹೆಂಡತಿ ದೀರ್ಘಕಾಲದಿಂದ ವಾಸಿಯಾಗದ ಕಾಯಿಲೆಯಿಂದ ನರಳ್ತಾ ಇದ್ರೆ ಅಥವ ಬಂಜೆಯಾದ್ರೆ ಇನ್ನೊಂದು ಮದ್ವೆಯಾಗಬಹುದು…. ಅಥವ ಒಬ್ಳಿಂದ ಸಾಕಷ್ಟು ತೃಪ್ತಿ ಸಿಗದಿದ್ರೆ….” ಜುಲೇಖ ಬೇಗಮ್‌ಳಿಗೇ ಮಾತು ಪೂರೈಸುವುದಕ್ಕಾಗಲಿಲ್ಲ.

ಅಶ್ರಫ್ ಸಿಡಾರನೆ ಉರಿದು ಬಿದ್ದಳು….”ನಾನು ಇದರಲ್ಲಿ ಯಾವ ಗುಂಪಿಗೂ ಬರೋಲ್ಲವಲ್ಲ…. ನಂಗೇನು ಮಕ್ಕಳಿಲ್ವ……. ನನ್ನನ್ನು ಬಿಟ್ಟಿದ್ದು ತಪ್ಪಲ್ವಾ ? ನನ್ ಮಕ್ಕಳ ಬೀದಿ ಪಾಲು ಮಾಡಿರೋದು ತಪ್ಪಲ್ವಾ….?

“ನೋಡು… ಷರೀಯತ್ ಪ್ರಕಾರ ಏನಿದೆ ಅಂದ್ರೆ ಅವನು ಇನ್ನೊಂದು ಮದುವೆಯಾದ್ರೂ ಕೂಡ ಇಬ್ರ ಜೊತೇಲೂ ಒಂಚೂರು ಕೂಡ ವ್ಯತ್ಯಾಸ ಬರದಂತೆ ಸಮಾನವಾಗಿ ನಡ್ಕೊಬೇಕು…..”

“ಅಂದ್ರೆ….. ಹೆಂಗೆ ಆಪ…..?”

“ಅಂದ್ರೆ…. ನಿನಗೊಂದು ಮನೆ ಕಟ್ಟಿಕೊಟ್ರೆ… ಅವ್ಳಿಗೂ ಹೆಚ್ಚು ಕಮ್ಮಿ ಅಂಥದೇ ಮನೆ ಮಾಡಿಕೊಡಬೇಕು. ನಿನಗೊಂದು ಸೀರೆ ತಂದ್ರೆ ಅವ್ಳಿಗೊಂದು….. ನಿನ್ಜೊತೆ ಒಂದ್ ರಾತ್ರಿ ಇದ್ರೆ….. ಅವಳ್ಜೊತೆ ಒಂದ್ ರಾತ್ರಿ….”

ಅಶ್ರಫ್‌ಳ ಕಣ್ಣು ತುಂಬಿ ಬಂದಿತು.

“ಅದೆಲ್ಲಾ….. ಬೇಡ ಆಪ…. ಬರೀ ನನ್ ಮಗೂಗೆ ಒಂದಿಷ್ಟು ಖರ್ಚು ಮಾಡಿ ಪ್ರಾಣ ಉಳಿಸ್ಬಿಟ್ರೆ… ಅವರಡೆ ತಿರುಗಿ ನೋಡೋಲ್ಲ ನಾನು…. ಆದ್ರೂ….. ಅವ್ರು ಮಾಡ್ತಿರೋದು ತಪ್ಪಲ್ವಾ….. ಆಪ…..?”

“ಖಂಡಿತವಾಗಿ…. ನೂರಕ್ಕೆ ನೂರರಷ್ಟು ಅವನ್ದೇ ತಪ್ಪು.”

“ಮತ್ತೆ ಮುತವಲ್ಲಿ ಸಾಹೇಬರು ಅದನ್ನ ಯಾಕ್ ಹೇಳೊಲ್ಲ……?” “ನೋಡು ಅದೇ ದೊಡ್ಡ ಲೋಪ ಆಗ್ತಿರೋದು. ನಮ್ ಅನೇಕ ಜಮಾತ್‌ನವರು, ಮುತವಲ್ಲಿಗಳು ಕಾನೂನೇನು ಅನ್ನೋದ್ನ ತಿಳ್ಕೊಂಡಿಲ್ಲ… ಎರೆಡ್ನೇದು…. ಇವ್ರಿಗೆ ಕಾನೂನನ್ನ ಜಾರಿಗೊಳಿಸೋ ಅಧಿಕಾರಾನೂ ಇಲ್ಲ…. ಮೂರ್‍ನೇದು ಅವ್ರ ಮಾತನ್ನ ಯಾರೂ ಕೇಳೋದೂ ಇಲ್ಲ…. ಹೋಗ್ಲಿ…. ಅಂದ್ರೆ ದೇಶದ್ ಕಾನೂನು ತಮಗೆ ಅನುಕೂಲವಾದದ್ದನ್ನು ಮಾತ್ರ ಒಪ್ಕೊತಾರೆ…. ಈ ಶರೀಯತ್‌ನ ಕಾನೂನು ಎಲ್ಲಿ ಉಳ್ಕೊಂಡಿದೆ ಯಂದ್ರೆ….. ನಿನ್ನಂಥ ಹೆಣ್ಮಕ್ಕಳ ಮಡಿಲಲ್ಲಿ….. ಈ ಮುನ್ನಿ ಥರ….”.

“ಅದ್ಕೆ ಔಷಧಿ ಇಲ್ಲವೇನು ಆಪ?”

“ಇದೆ, ಯಾಕಿಲ್ಲ…? ಹೆಣ್ಣು ಮಕ್ಕಳ ಮೇಲೆ ಬರೀ ಕಟ್ಟಳೆ ಮಾಡೋಕೆ ಬರುವ ವಿದ್ವಾಂಸರು. ಅವರಿಗೆ ಇರೋ ಅವಕಾಶಗಳನ್ನ ಯಾಕೆ ಎತ್ತಿ ಹೇಳಲ್ಲ? ಇಡೀ ಪ್ರಪಂಚಾನೇ ಹೆಣ್ಮಕ್ಕಳ ಬಗ್ಗೆ ಏನಾದ್ರು ಒಂದ್ ಒಳ್ಳೇದು ಮಾಡ್ಬೇಕೂಂತ ಹೇಳೋ ಮಟ್ಟಿಗಾದ್ರೂ ಬಂದಿದೆ. ಇವ್ರು….. ಕುರಾನನ್ನು ಹದೀಸನ್ನು ಗುತ್ತಿಗೆಗೆ ತಗೊಂಡಿರೋರು….. ಅದರ ಆದೇಶ ಪ್ರಕಾರಾನೇ ನಡ್ಕೊಳ್ಲಿ ಸಾಕು……. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೂಡಿಸಿ….. ಬರೀ ಮದ್ರಸದ ವಿದ್ಯೆ ಮಾತ್ರವಲ್ಲ… ಸ್ಕೂಲು ಕಾಲೇಜಿನದು ಕೂಡ.
ಗಂಡನ ಆಯ್ಕೆಯ ಹಕ್ಕು ಅವಳದ್ದು…. ಅದೂ ಕೊಡ್ಲಿ. ಈ ಷಂಡರೆಲ್ಲಾ ವರದಕ್ಷಿಣೆಯ ಎಂಜಲನ್ನು ನೆಕ್ಕದೆ, ಮಹರ್ ಕೊಟ್ಟು ಮದ್ವೆಯಾಗ್ಲಿ….. ತವರಿನವರು ಅವಳ ಹಕ್ಕಿನ ಆಸ್ತಿಯನ್ನು ಅವಳಿಗೆ ಕೊಡ್ಲಿ….. ಗಂಡ-ಹೆಂಡಿರಲ್ಲಿ ಸರಿಹೋಗದಿದ್ದಲ್ಲಿ ವಿಚ್ಛೇದನ ಕೊಡುವ ಅವಳ ಹಕ್ಕನ್ನು ಮಾನ್ಯ ಮಾಡಲಿ. ಅವಳು ವಿಚ್ಛೇದಿತಳಾದರೆ…… ಅವಳಿಗೆ ಬದುಕುಕೊಡಲು ಇನ್ನೊಬ್ಬ ಮುಂದೆ ಬರುವಂತಾಗಲಿ ; ವಿಧವೆಯಾದಲ್ಲಿ ಅವಳಿಗೆ ಬಾಳು ಕೂಡುವವ ಸಂಗಾತಿ ಸಿಗುವಂತಾಗಲಿ.”

“ಆಪ…. ಆಪ…. ಇದೆಲ್ಲಾ ನೀವು ಹೇಳ್ತಿರೋದು ಏನು?….” ಅಶ್ರಫ್‌ಗೆ ತಲೆ ಕೆಟ್ಟಂತಾಯಿತು.

“ನಾನು ಸರಿಯಾಗಿಯೇ ಹೇಳ್ತಿದೀನಿ ಅಶ್ರಫ್…. ಇಸ್ಲಾಂನಲ್ಲಿ ಇಷ್ಟೆಲ್ಲಾ ಹಕ್ಕುಗಳು ಹೆಣ್ಣಿಗಿವೆ. ಅವಳು ಶಾಲೆಗೆ ಹೋಗಬಹುದು…. ಅಂಗಡಿಗೆ ಹೋಗಬಹುದು…. ಉದ್ಯೋಗ ಮಾಡಬಹುದು…. ಹೊರಗಿನ ಬದುಕು ಕೂಡ ಅವಳಿಗಿದೆ. ಆದರೆ…. ತನ್ನ ದೇಹ ಸಿರಿಯ ಪ್ರದರ್ಶನ ಮತ್ತು ಬಿನ್ನಾಣದ ಪ್ರದರ್ಶನವನ್ನು ಮಾತ್ರ ಮಾಡಬೇಡಿ ಎಂಬ ಆದೇಶವೂ ಇದೆ….” ಜುಲೇಖ ಬೇಗಮ್ ಆವೇಶದಿಂದ ಭಾಷಣವನ್ನೇ ಪ್ರಾರಂಭಿಸಿದರು.

ಅಶ್ರಫ್ ನಿರಾಶೆಯಿಂದ ತಲೆಯಲ್ಲಾಡಿಸಿಬಿಟ್ಟಳು. ಅವಳಿಗೆ ಅದೆಲ್ಲಾ ಬೇಕಿರಲಿಲ್ಲ.

“ನಾನ್ ನನ್ನ ಮುನ್ನಿಯ ಬಗ್ಗೆ ಏನ್ ಕೇಳಬಹುದು ?”

“ಏನ್ ಕೇಳ್ತೀಯ?….. ನಿನ್ನ ಊಟ ಬಟ್ಟೆ ಖರ್ಚು, ನಿನ್ನ ಮಕ್ಕಳ ಖರ್ಚು ನಿನಗೆ ಮನೆ…. ಮತ್ತೆ ದಿನ ಬಿಟ್ಟು ದಿನ ಅವನ್ಜೊತೆ ಒಂದು ರಾತ್ರೆ….. ಇದಿಷ್ಟು ನಿನ್ನ ಹಕ್ಕು, ಅವ್ರು ಕೂಡ್ಡಬೇಕಾಗುತ್ತೆ, ಕೊಡದಿದ್ರೆ ನಾಕು ಜನರೆದುರು ಆ ಲೋಫರ್‌ನ ಕಾಲರ್ ಹಿಡಿದು ದಬಾಯಿಸಿ ಕೇಳು, ಆ ಮುತವಲ್ಲಿ ಅನ್ನೋನಿಗೆ ನಿನ್ನ ಕಾಲಿಂದು ಕೈಗೆ ತಗೊಂಡು ಬಾರಿಸಿ ಕೇಳು. ನೀನು ಭಿಕ್ಷೆ ಬೇಡ ಬೇಡ, ನ್ಯಾಯ ಕೇಳು. ನ್ಯಾಯ ಸಿಗೋದು ಯಾರಿಗೆ ಗೊತ್ತ ? ಜುಟ್ಟು ಹಿಡಿದು ಕೇಳೋರಿಗೆ ಮಾತ್ರ. ನಿನ್ನಂಥವರಿಗೆಲ್ಲಾ ನ್ಯಾಯ ಸಿಗೋದಿಲ್ಲ. ಮಸೀದಿಗೆ ಅರ್ಜಿ ಕೊಟ್ಟು, ಪಂಚಾಯ್ತಿ ಸೇರಿ ನನ್ನ ಕರಿ….. ನಿನ್ ಗೆಂಡನ್ಗೂ ಆ ಮುತವಲ್ಲಿಗೂ ಶರೀಯತ್ ಅಂದ್ರೆ ಏನು…. ನ್ಯಾಯ ಏನು ಅನ್ನೋದನ್ನ ಹೇಳ್ತೀನಿ…. ಮಾತು ಬಾರದ ಹೆಣ್ಮಕ್ಕಳೆದುರು ಕುರಾನ್, ಹದೀಸ್ ಎಲ್ಲಾ ತಮಗೆ ಬೇಕಾದ ಹಾಗೆ ತಿರುಚೋದು ನ್ಯಾಯ ಅಲ್ಲ….”

ಅಶ್ರಫ್‌ಗೆ ಸಿಕ್ಕಾಬಟ್ಟೆ ಹೆದರಿಕೆಯಾಗಿ ಕೈಕಾಲೇ ತಣ್ಣಗಾದಂತೆನಿಸ ತೊಡಗಿತ್ತು. ಬರೀ ತನ್ನ ಹೊಟ್ಟೆ ಪಾಡಾಗಿದ್ದರೆ ಈ ಹಗರಣವೇ ಬೇಕಾಗಿರಲಿಲ್ಲ…. ‘ಹುಟ್ಟಿದ ದೇವರು ಹೇಗೋ ಹುಲ್ಲು ಮೇಯಿಸ್ತಾನೆ ಅಂತ ಸುಮ್ಮನಿರಬಹುದಾಗಿತ್ತು…. ಆದ್ರೆ…. ಈ ಮುನ್ನಿ….’

ಅಶ್ರಫ್ ಈಗ ಕೈ ಮುಗಿದು ನ್ಯಾಯ ಬೇಡಲು ಅಲ್ಲ…. ನ್ಯಾಯ ಕಸಿದು ತನ್ನದಾಗಿಸಿಕೊಳ್ಳಲು ಪಣ ತೊಟ್ಟು ನಿಂತಿದ್ದಳು…… ಅವಳ ಮಡಿಲಲ್ಲಿದ್ದ ಮುನ್ನಿ ಈಗ ಮುಲುಗತೊಡಗಿದ್ದಳು. ಆ ಧ್ವನಿ ಮೀರಿದಂತಿದ್ದ ಅವಳ ಉಸಿರಾಟದಲ್ಲಿದ್ದ ಗೊರಗೊರ ಸದ್ದು… ಹಣೆಯ ಮೇಲೆ ಬೆವರ ಹನಿಗಳು….. ಮುನ್ನಿಯ ಕತ್ತು ತೊಯ್ದು ತೊಪ್ಪ ಯಾಗಿತ್ತು, ಅಶ್ರಫ್…. ತನ್ನ ಸೆರಗಿನಿಂದಲೇ ಆ ಮಗುವಿನ ಕತ್ತು, ಕಂಕಳು ಎಲ್ಲಾ ಒರೆಸಿದಳು. ಮುಟ್ಟಿ ನೋಡಿ ಜ್ವರ ಕಡಿಮೆಯಾಗುತ್ತಿದೆ ಎಂದು ಆ ಸಂಕಟದಲ್ಲೂ ಸಮಾಧಾನಪಟ್ಟಳು. “ಅಮ್ಮಿ…. ಹಸಿವು…. ಹಸಿವು….” ಎಂದು ಸಂಕಟ ಪಡುತ್ತಿದ್ದ ಹಸೀನ ಎಲ್ಲಿ ಎಂದು ಆ ಮಂದ ಬೆಳಕಿನಲ್ಲಿ ಕಣ್ಣಾಡಿಸಿ ನೋಡಿದಾಗ ಅವಳೆದೆ ಜಲ್ಲಂದಿತು. ಹಸೀನ ಥಂಡಿ ನೆಲದ ಮೇಲೆ ಕೈಕಾಲು ಚಾಚಿದ್ದವಳು, ಚಳಿಯನ್ನು ತಡೆಯಲಾರದೆ ಎದ್ದು ಅಲ್ಲಿಯೇ ಇದ್ದ ಜನಾಜದೂಳಗಿದ್ದ ಚಾಪೆಯ ಮೇಲೆ ಮಲಗಿ ಮತ್ತರ್ಧ ಚಾಪೆಯನ್ನು ಸುರುಳಿ ಸುತ್ತುವಂತ ಹೊದ್ದುಕೊಂಡಿದ್ದಳು. ಹಬೀಬ ಆ ನೆಲದ ಮೇಲೆಯೇ ಮುದುಡಿದ್ದಳು.

‘ಮಸೀದಿಯ ವರಾಂಡದ ಹಸಿರು ಬೆಳಕಿನ ಶಾಂತ ನೀರವತೆ, ಧಾರಾಕಾರವಾಗಿ ಬೀಳುತ್ತಿದ್ದ ಮಳೆಯ ಕುಳಿರ್ಗಾಳಿ ನಿರ್ಜನ ವಾತಾವರಣ….. ಮಸೀದಿಯ ಪವಿತ್ರ ಆವರಣದಲ್ಲೂ ಅವಳಿಗೆ ವಿಚಿತ್ರ ಭಯವುಂಟಾಗತೊಡಗಿತು. ವೇಳೆ ಎಷ್ಟಾಗಿದೆಯಂಬುದೇ ಅವಳಿಗೆ ತಿಳಿಯಲಿಲ್ಲ. ಹೊರಜಗತ್ತಿನ ವ್ಯಾಪಾರವೆಲ್ಲಾ ಸಂಪೂರ್ಣವಾಗಿ ನಿಂತು ಹೋಯಿತೇನೋ ಎಂದು ಹೆದರಿಕೆಯಾಯಿತವಳಿಗೆ. ಬೆಳಗಿನಿಂದ ಸಂಜೆಯವರೆಗೂ ಅವಿರತ ವಾಗಿ ಪ್ರತಿ ಮುಸ್ಲಿಮನು ಪಠಿಸುವ ‘ಬಿಸ್ಮಿಲ್ಲಾ ಹಿರ್ರಹಮಾನಿರ್ರಹೀಮ್’…. ಪರಮ ದಯಾಳುವೂ ಕರುಣಾನಿಧಿಯೂ ಆದ ಅಲ್ಲಾಹನ ಎದೆ ಕೂಡ ಬಿರಿಯುವಂತಹ ಸನ್ನಿವೇಶ….. ಈ ಮುನ್ನಿಗಾದರೂ ಬೆಚ್ಚಗಿನ ಒಡಲಿದೆ. ಆ ಇಬ್ಬರು ಮಕ್ಕಳಿಗೋ ಮೈ ಮುಚ್ಚುವಷ್ಟು ಬಟ್ಟೆಯೂ ಇಲ್ಲ. ಏಕಕಾಲದಲ್ಲಿ ಸಾವಿರ ಕತ್ತರಿಗಳಾಡುತ್ತಿದ್ದವು, ಅವಳ ಕರುಳಿನ ನಡುವೆ, ಆಳವಾದ ನಿಟ್ಟುಸಿರೊಂದು ಹೊರಬಿದ್ದಿತು. ಅವಳದೆಯಿಂದ, “ಹೇ! ಅಲ್ಲಾ….!” ಅಲ್ಲಾಹ್ ಉತ್ತರಿಸಲಿಲ್ಲ. ದೂರದಲ್ಲೆಲ್ಲೋ ಇದ್ದ….. ಬೆಚ್ಚಗಿದ್ದ…. ನೀರವ ವಾಗಿದ್ದ ಈಗ ಹೊಟ್ಟೆಯೊಳಗಡೆ ಮಂಜುಗಡ್ಡೆ ಸುತ್ತುತ್ತಿತ್ತು. ಅವಳ ರಕ್ತವೆಲ್ಲಾ ತಣ್ಣಗಾಗಿ, ನರನಾಡಿಗಳಲ್ಲಾ ಸ್ತಬ್ಧವಾಗಿ ನಡುಗಲೂ ಸಾಧ್ಯವಾಗದೆ ಹೆಪ್ಪುಗಟ್ಟಿದ್ದಳು. ಆ ಕಾರಣದಿಂದಲೇ ಯಾರೂ ತನ್ನನ್ನು ಕರೆಯುತ್ತಿದ್ದಾರೆ ಎನ್ನುವುದನ್ನೂ ಗುರುತಿಸಲು ಅವಳಿಂದ ಅಸಾಧ್ಯವಾದುದು. ಕೊನೆಗೂ, ಆಮಿನಳ ಕೂಗು ಅವಳಿಗೆ ದೂರದಿಂದ ಕೇಳಿಬಂದಿತು.

ಕೊಳದ ಆಚೆಯ ಕಾಂಪೌಂಡಿನ ಹಿಂದೆ ಇದ್ದ ಆಮಿನಳ ಕೈಯಲ್ಲಿ ತಟ್ಟೆ ಇತ್ತು. ಅವಳು ಕರೆಯುತ್ತಿದ್ದಳು.

“ಅಶ್ರಫ್….. ತಗೋ….. ಇದನ್ನ….. ರೊಟ್ಟಿ….. ಇದೆ….. ಬೇಗ ಬಾ…. ಹಿಡಿ…”

ಅಶ್ರಫ್ ಬಹುನಿಧಾನವಾಗಿ ವಾಸ್ತವತಗೆ ಮರಳಿದಳು, ಈ ನಿರ್ದಯ ಪ್ರಪಂಚದ ಕಾನೂನಿನಂತೆ ಮಳೆ ನಿರಂತರವಾಗಿ ಸುರಿಯುತ್ತಲೇ ಇತ್ತು. ಅದರಾಚೆ ದೂರ…. ರೊಟ್ಟಿ….. ಅವಳಲ್ಲಿ ದೈತ್ಯ ಶಕ್ತಿ ಸಂಚಾರವಾಯಿತು. ಮುನ್ನಿಯನ್ನು ಎರಡು ಕೈಗಳಲ್ಲೂ ಎದೆಗವಚಿ ಅವಳು ಛಕ್ಕನೆ ನಿಂತಳು. ಆಗಲೇ…..

ಮಸೀದಿಯ ಗೇಟ್ ಕಿರುಗುಟ್ಟಿತು. ಸುಖದ ತುತ್ತ ತುದಿಯಲ್ಲಿದ್ದ ಮುತವಲ್ಲಿ ಸಾಹೇಬರು ಮತ್ತು ಯಾಕೂಬ್ ಬರುತ್ತಿದ್ದರು. ಮುತವಲ್ಲಿ ಸಾಹೇಬರು ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ನಿಧಾನವಾಗಿ ತೇಗಿದರು. ಜರ್ದ ಬೀಡ ಜಗಿಯುತ್ತ ಕೆಂಪೇರಿದ್ದ ತುಟಿಗಳಿಂದ, ಪಿಚಕ್ಕೆಂದು ಪಕ್ಕದಲ್ಲಿ ಉಗಿದು ನಿಧಾನವಾಗಿ ನಡೆದು ಬಂದು, ಮಸೀದಿಯ ಆವರಣವನ್ನು ಮೆಟ್ಟಿಲುಗಳ ಮೇಲೆ ನಿಂತರು. ಯಾಕೂಬ್ ಕೂಡ ಅಷ್ಟೇ ವಿರಾಮವಾಗಿ ಬಂದು ಅನತಿ ದೂರದಲ್ಲಿ ನಿಂತ. ‘ಎಲಾ ಇವಳ….. ಇನ್ನೂ ಹೋಗಿಲ್ಲವಲ್ಲ ಇಲ್ಲಿಂದ’ ಎನ್ನುವ ಅಚ್ಚರಿಯ ಭಾವವೂ ಸುಳಿದುಹೋಯಿತು. ರೊಟ್ಟಿ ಹಿಡಿದಿದ್ದ ಆಮೀನಳ ಕೈ ಹಾಗೆಯೇ ಮಲ್ಲನ ಹಿಂದಕ್ಕೆ ಸರಿಯಿತು.

ಮಸೀದಿಯ ಕಾಂಪೌಂಡಿನ ಸುತ್ತಲಿದ್ದ ಬಹುತೇಕ ಮನೆಗಳಲ್ಲಿ ರಾತ್ರೆ ಯೂಟ ಮುಗಿದಿತ್ತು. ಗಂಡಸರೆಲ್ಲಾ ಟಿವಿ ನೋಡುತ್ತಲೋ ಮಲಗಿಯೋ ಆಗಿತ್ತು. ಹೆಂಗಸರಲ್ಲಾ ಅಳಿದುಳಿದ ಕಲಸದ ನೆವದಲ್ಲಿ ತಮ್ಮ ತಮ್ಮ ಮನೆಯ ಆವರಣದ ಗೋಡೆಯ ಬಳಿ ಮಸೀದಿಯೊಳಗೆ ಆಗಾಗ್ಯ ಹಣಕಲು ಮಾಡಿಕೊಂಡಿದ್ದ ಎತ್ತರದ ವ್ಯವಸ್ಥೆಯ ಮೇಲೆ ಕಾಲೂರಿ ನಿಂತು ಮಸೀದಿಯ ಕಾಂಪೌಂಡಿನ ಒದ್ದೆ ಗಾರೆಯ ಮೇಲೆ ಕೈಗಳನ್ನೂರಿ ತಲೆಯ ಮೇಲೆ ಸೆರಗಳದು ಕೊಂಡು ಇಣುಕುತ್ತಿದ್ದರು.

ಅಶ್ರಫ್ ತನ್ನ ಹೋರಾಟದ ಕೆಚ್ಚಿನ ಸ್ಫೂರ್ತಿಯಾದ ಮುನ್ನಿಯನ್ನು ಎದೆಗವಚಿ ನಿಧಾನವಾಗಿ ನಡೆದು ಅವರಿಬ್ಬರ ಬಳಿ ಬಂದಳು ಎತ್ತರದ ಮೇಲಿನ ಮೆಟ್ಟಿಲಿನ ಮೇಲೆ ಮುತವಲ್ಲಿ ಸಾಹೇಬರು ಕುಳಿತಿದ್ದರು. ಅವರ ಎಡಭಾಗದಲ್ಲಿ ಒಂದು ಮಟ್ಟಿಲು ಕೆಳಗೆ ಯಾಕೂಬ್ ನಿಂತಿದ್ದ. ಅವರ ಬಲಭಾಗದಲ್ಲಿ ಒಂದಿಷ್ಟು ದೂರದಲ್ಲಿ ಮೂರ್‍ನಾಲ್ಕು ಮೆಟ್ಟಿಲ ಕೆಳಗಡೆ ಅಶ್ರಫ್ ನಿಂತಿದ್ದಳು ಆ ಭಾಗಕ್ಕೆ ಮೇಲ್ಮಾವಣಿ ಇದ್ದುದ್ದರಿಂದ ಮಳೆ ಅಷ್ಟೇನೂ ಬೀಳುತ್ತಿರಲಿಲ್ಲ. ಆದರೂ ಬೀಸಿ ಬಂದ ತೇವ ಮಿಶ್ರಿತ ಗಾಳಿ ಅವಳ ನಿಲ್ಲುವ ಶಕ್ತಿಯನ್ನೂ ಕಸಿದುಕೊಂಡಿತ್ತು. ಯಾಕೂಬ್ ತಿವಿಯುವ ಹೋರಿಯಂತೆ ಸನ್ನದ್ಧನಾಗಿದ್ದ. ಸೂರಿನಿಂದ ಹರಿಯುತ್ತಿದ್ದ ನೀರು ಅವಳ ಬೆನ್ನಿಗೆ ತಾಗಿ ಸೆರಗಿನಿಂದ ತೊಟ್ಟಿಕ್ಕುತ್ತಿತ್ತು, ಓಹ್! ಈ ಮಳೆ ಕೂಡ ಗಂಡಸರನ್ನು ಸೋಕದೆ ಎಷ್ಟು ನಯ-ವಿನಯ, ಭಯಭಕ್ತಿಯಿಂದ ನಡೆದುಕೊಳ್ಳುತ್ತಿದೆಯಲ್ಲಾ….. ಅವಳಿಗೆ ಆ ಗಳಿಗೆಯಲ್ಲೂ ಆಶ್ಚರ್ಯವಾಯಿತು.

ಮುತವಲ್ಲಿ ಸಾಹೇಬರು ಮಾತನ್ನಾರಂಭಿಸಲು ಅವರಿಗೆ ಸ್ವಲ್ಪ ತೊಂದರೆ ಇತ್ತು. ಬಾಯಲ್ಲಿ ಸಾಕಷ್ಟು ಜರ್ದಾ ಬೀಡದ ರಸ ಶೇಖರವಾಗುತ್ತಿತ್ತು, ಈ ಪವಿತ್ರ ಮೆಟ್ಟಿಲುಗಳನ್ನಂತೂ ಅಪವಿತ್ರಗೊಳಿಸುವಂತಿರಲಿಲ್ಲ. ಅಲ್ಲಿಂದ ಎದ್ದು ದೂರದಲ್ಲಿ ಕಾಂಪೌಂಡಿನ ಬುಡದಲ್ಲಿ ಪಿಚಕಾರಿಯಂತೆ ಉಗುಳಿ ಬರಬೇಕಿತ್ತು. ಅವರು ಇನ್ನೇನು ಏಳಬೇಕು ಅನ್ನುವಷ್ಟರಲ್ಲಿ, ಯಾಕೂಬ್ ಬೆಂಕಿಯುಗುಳುವಂತ, ಪೂತ್ಕರಿಸಿದ್ದ.

“ಮುತವಲ್ಲಿ ಸಾಹೇಬರೇ….. ಏನಂತೆ….. ಆ ರಂಡೆಗೆ….?”

ಮುತವಲ್ಲಿ ಸಾಹೇಬರು ಒಮ್ಮೆಲೇ ಜಾಗೃತರಾದರು. ಗಕ್ಕನೆ ಆ ತಾಂಬೂಲ ರಸವನ್ನು ನುಂಗಿದ್ದರಿಂದ, ಒಂದು ಗಳಿಗೆ ತಲೆ ಗಿಮ್ಮಂದಿತು. ಅಂತಹ….. ಅಂತಹ ಪ್ರಸಂಗದಲ್ಲೂ ಅವರ ಚೇತನ ಜಾಗೃತವಾಯಿತು. ಕಾಂಪೌಂಡಿನ ಸುತ್ತಲೂ ಪ್ರಸರಿಸಿರುವ ಕತ್ತಲಿನಲ್ಲಿ ಕೈಯೂರಿ, ಉಂಗುಷ್ಟದ ಮೇಲೆ ನಿಂತಿದ್ದ ಹೆಂಗಸರ ರೂಪದಲ್ಲಿದ್ದ ಹಲ್ಲಿಗಳು ಒತ್ತರಿಸಿಕೊಂಡಿವೆ ಎಂಬುದು ಆ ಗಳಿಗೆಯಲ್ಲೂ ಅವರಿಗೆ ಅರಿವಾಯಿತು. ಅದರಲ್ಲಿಯಂತೂ ಆಮೀನ ಎಂಬ ಹಲ್ಲಿಯಂತೂ ಈಗ ಗೋಡೆಗಂಟಿಕೊಂಡೇ ಅವರನ್ನು ನುಂಗಿ ಹಾಕುವಂತೆ ದುರುಗುಟ್ಟಿ ನೋಡುತ್ತಿದೆ ಎನ್ನುವುದು ಅವರಿಗೆ ಖಚಿತವಾಗಿದ್ದ ಮಾಹಿತಿ. ಹೀಗಾಗಿ ಅವರ ಅಸ್ತಿತ್ವದ ಉಳಿವಿಗಾಗಿ ಅವರ ಅಧಿಕಾರ ಪ್ರಜ್ಞೆಯು ಜಾಗೃತವಾಗಿ, ಯಾಕೂಬ್ ಕೊಡಿಸಿದ್ದ ಅನ್ನ ಪಾನಾದಿಗಳು ಗಂಟಲಲ್ಲಿ ಒತ್ತರಿಸಿ ನಿಂತವು.

“ಏ…. ಯಾಕೂಬ್…. ಹಾಗೆಲ್ಲಾ ಮಾತಾಡಬಾರ್‍ದು…” ಎಂದರು.

ಆದರೆ, ಯಾಕೂಬ್‌ನಾದರೋ ಕೇಳುವ ಸ್ಥಿತಿಯಲ್ಲಿರಲಿಲ್ಲ. ಈ ಹೆಣ್ಣು… ಅವನ ಬದುಕನ್ನು ನರಕವಾಗಿಸಿದ್ದವಳು. ಪಾದಕ್ಕಂಟಿದ ಹೊಲಸು ಪಾಯಿಖಾನೆಯಂತೆ!….. ಆ ಮೂವರು ಹೆಣ್ಣುಗಳ ಹೊರೆಯನ್ನು ತಾನು ಹೊತ್ತು ನಾಶವಾಗುವಂತೆ ಮಾಡಿರುವ ಪಾತಕಿ! ಏನೋ ಹೊಸ ಹೆಂಡತಿಯ ಮಡಿಲಲ್ಲಿ ಸುಖವನ್ನು ಪಡೆದು ಒಂದು ಗಂಡಾದ್ರೂ ಹುಟ್ಟಿ, ತನ್ನ ಆಟೋರಿಕ್ಷಾಗೆ ಮುಂದೆ ವಾರಸುದಾರನೇನಾದರೂ ಹುಟ್ಟುವವನೇನೋ ಎಂಬ ಆಶಯದಲ್ಲಿ ಹಂಬಲಿಸುತ್ತಿರುವ ತನಗೆ ನಿರಂತರ ಕಾಡುತ್ತಿರುವ ರಾಕ್ಷಸಿ! ಈ ಗಪೂರ್, ಇದ್ರೀಸ್, ನಾಸಿರ್ ಎಲ್ಲಾ ಎರಡೆರಡು ಮದುವೆಯಾಗಿ ಏನು ಮಜವಾಗಿದ್ದಾರೆ…. ಅವರ ಹೆಂಡತಿಯರಾರೂ ಹೀಗೆ ಕಾಡಿಸ್ತಿಲ್ಲವಲ್ಲ… ತೆಪ್ಪಗೆ ತವರು ಮನೆ ಸೇರ್‍ಕೊಂಡಿದ್ದಾರೆ…. ಇಲ್ಲಾ…. ಕೂಲಿ-ನಾಲಿ ಮಾಡ್ತಿದ್ದಾರೆ. ಈ ಹೆಣ್ಣು ನಾಯಿಯಾದರೋ ಎರಡು ವರ್ಷದಿಂದ ತನ್ನ ಹಿಂದೆ ಸುತ್ತಿದ್ದಲ್ಲದೆ ನ್ಯಾಯ ಕೇಳಿ ಮಸೀದಿ ಮೆಟ್ಟಲನ್ನೂ ಹತ್ತಿಸಿಬಿಟ್ಟಳಲ್ಲ… ‘ಇವಳನ್ನ….. ಇವಳ….’ ತಡೆಯಲಸಾಧ್ಯವಾದ ಕೋಪದಿಂದ ಯಾಕೂಬ್ ಆ ಚಳಿಯಲ್ಲೂ ಹೊತ್ತಿ ಉರಿದುಬಿಟ್ಟ.

“ಲೇಯ್ ! ಕೂತು ಒಂದ ಮಾಡೋ ನಿನಗೇನೇ ಇಷ್ಮೆ ಕೊಬ್ಬಿದ್ರೆ….. ನಿಂತು ಒಂದ ಮಾಡೋ ನಂಗೆ ಎಷ್ಟು ಕೊಬ್ಬಿರಬೇಡ್ವೇ…? ಎಂದು ತನ್ನ ಶ್ರೇಷ್ಠತೆಯ ಕೂಗು ಹಾಕಿದ.

ಅಶ್ರಫ್‌ಳ ಬಾಯಿಂದ ಒಂದು ಮಾತೂ ಹೊರಟಿರಲಿಲ್ಲ ಅವಳು ಸ್ಥಬ್ಧಳಾಗಿಬಿಟ್ಟಳು. ಈ ಮಾತಿಗೆ ಏನು ಉತ್ತರ ಕೊಡಬೇಕೆಂದು ಜುಲೇಖ ಬೇಗಮ್ ಅವಳಿಗೆ ಹೇಳಿಕೊಟ್ಟಿರಲಿಲ್ಲ. ಇಂತಹ ಪ್ರಶ್ನೆ ಬರಬಹುದೆಂಬ ನಿರೀಕ್ಷೆಯೇ ಅವಳಿಗೆ ಇರಲಿಲ್ಲ. ಅವಳು ತಬ್ಬಿಬ್ಬಾಗಿ ಮುನ್ನಿಯನ್ನು ಇನ್ನಷ್ಟು ಬಲವಾಗಿ ಎದೆಗವಚಿದಳು. ಆದರೆ…. ಅಷ್ಟರಲ್ಲಿಯೇ ಕೋಪದಿಂದ ಕುದಿಯುತ್ತಿದ್ದ ಯಾಕೂಬ್ ಧಡಧಡನೆ ಅವಳೆದುರಿಗೆ ಬಂದವನೇ ಅವನ ಶಕ್ತಿಯನ್ನೆಲ್ಲಾ ಬಿಟ್ಟು, ಅವಳನ್ನು ಬಲವಾಗಿ ಒದ್ದುಬಿಟ್ಟ. ಮೇಲಿನ ಮೆಟ್ಟಲಿನಲ್ಲಿ ನಿಂತಿದ್ದ ಅವನ ಆಕ್ರಮಣದಿಂದ ಕೆಳಗಡೆ ನಿಂತಿದ್ದ ಅಶ್ರಫ್ ಒಂದು ಕಡೆ ಎಗರಿಬಿದ್ದಳು. ಹಾಗೆ ಬೀಳುತ್ತಿರಬೇಕಾದರೂ, ಮುನ್ನಿಯನ್ನು ರಕ್ಷಿಸಬೇಕೆಂಬ ಅವಳ ಪ್ರಯತ್ನ ಫಲಕಾರಿಯಾಗಲಿಲ್ಲ. ಅವಳಿಂದ ಮುನ್ನಿ ದೂರ ಸಿಡಿದು ಬೀಳುವುದಕ್ಕೂ ಅವಳ ಹಣೆ ನೆಲಕ್ಕೆ ಘಟ್ಟಿಸುವುದಕ್ಕೂ ಸರಿಯಾಗಿ ಎಂದೂ…. ಯಾವ ಮಸೀದಿಯೂ ಕೇಳಿರದಂತಹ ಅತ್ಯಂತ ದಯಾದ್ರ್‍ಅ ನೋವಿನ ಧ್ವನಿ ಅವಳಿಂದ ಹೊರಟಿತು. ಅವಳ ಕೂಗಿಗೆ ಅವಳ ಮಕ್ಕಳಿಬ್ಬರೂ ಎದ್ದರು. ಶವವಾಹಕ ದೊಳಗೆ ಮಲಗಿದ್ದ ಹಸೀನ ಕೂಡ! ಬಹುಶಃ ಆ ಶವವಾಹಕದೊಳಗಿನಿಂದ ಸಾಗಿಸಲ್ಪಟ್ಟು ಅಭೇದ್ಯ ಮಣ್ಣಿನ ಪದರಗಳೊಳಗೆ ಕರಗಿಹೋಗಿದ್ದ ಸಹಸ್ರಾರು ಶವಗಳೂ ಎಚ್ಚೆತ್ತಿರಬಹುದು….. ಆದರೆ…. ಅಶ್ರಫ್ ಪ್ರಜ್ಞೆ ತಪ್ಪಿದಳು.

ಮುತವಲ್ಲಿ ಸಾಹೇಬರು ದಿಗ್ಭ್ರಾಂತರಾಗಿದ್ದರು. ಅವರ ನಶೆಯೆಲ್ಲ ಇಳಿದು ಹೋಗಿತ್ತು, ಆ ಕತ್ತಲೆಯ ತೆರೆಯೊಳಗಿಂದ ಭೇದಿಸಿಕೊಂಡು ಚಳಿ, ಮಳೆಯ ಆಕ್ರಮಣ ವನ್ನೆದುರಿಸುತ್ತಾ, ಪಾದಕ್ಕಂಟಿದ್ದ ಕೆಸರನ್ನು ಕೊಡವುತ್ತ, ತಲೆಯ ಮೇಲೆ ಸೆರಗು ಹಾಕಿಕೊಂಡು ಬಂದ ಅಸಂಖ್ಯ ಸ್ತ್ರೀಯರು…. ಎಲ್ಲಿದ್ದರು ಇವರೆಲ್ಲಾ… ಯಾರು ಇವರೆಲ್ಲಾ… ಎಲ್ಲಿಂದ ಬಂದರು… ಇಲ್ಲಿ…. ಇವರಲ್ಲಿ… ಆಮಿನ ಇದ್ದಾಳೆಯೇ…..? ಕೆಲವರು ಅಶ್ರಫ್‌ಳನ್ನೆತ್ತಿದ್ದರು…. ಇನ್ನು ಕೆಲವರು ಮುನ್ನಿ ಬಳಿ ಸಾರಿದರು. ಮುನ್ನಿಯ ಜ್ವರ ಇಳಿದಿತ್ತು. ಉಸಿರಾಟದ ಆವೇಗ ವಿರಲಿಲ್ಲ. ಸಂಕಟವಿರಲಿಲ್ಲ. ನೋವಿರಲಿಲ್ಲ. ಅವಳು ಈ ಪ್ರಪಂಚದ ಎಲ್ಲಾ ನೋವಿನಿಂದಲೂ ಮುಕ್ತಳಾಗಿದ್ದಳು.

ಮುತವಲ್ಲಿ ಸಾಹೇಬರು ನಿಚ್ಚೇಷ್ಟಿತರಾಗಿ ಕುಳಿತೇ ಇದ್ದರು. ಅಶ್ರಫ್‍ಳನ್ನೂ ಅವಳ ಮಕ್ಕಳನ್ನೂ ಹನೀಫ ಚಿಕ್ಕಮ್ಮ ತನ್ನ ಮನೆಗೆ ಕರೆದೊಯ್ದಳು, ಮುನ್ನಿಯ ಹೆಣ ಮಸೀದಿಯಲ್ಲೇ ಉಳಿಯಿತು. ಇಡೀ ಮಸೀದಿಯ ದೀಪಗಳೆಲ್ಲಾ ಉರಿದವು. ಮಸೀದಿಯ ಹಿಂದೆ ಕೊಠಡಿಯಲ್ಲಿದ್ದ ನೀರಿನ ಹಂಡೆ ಉರಿಯಿತು. ಮಲಗಿದ್ದ ಗಂಡಸರೆಲ್ಲಾ ನಿಧಾನವಾಗಿ ಎದ್ದು ಬಂದರು. ಬಟ್ಟೆ ಅಂಗಡಿಯ ಮತೀನ್ ಸಾಹೇಬರು ಮಾತಿಲ್ಲದೆ, ಅಷ್ಟು ಹೊತ್ತಿನಲ್ಲಿ ತಮ್ಮ ಅಂಗಡಿಯನ್ನು ತೆರೆದು, ಕೆಂಪು ಅಲ್‌ವಾನಿನ ಬಟ್ಟೆಯ ಕಫನ್ನನ್ನು ತಂದಿಟ್ಟರು. ಸಾಂಗವಾಗಿ ಮುನ್ನಿಗೆ ಸ್ನಾನ ಮಾಡಿಸಿ, ಕೆಂಪು ಬಟ್ಟೆ ತೊಡಿಸಿ, ಅತ್ತರು, ಅಬೀರ್ ಬಳಿದು, ಕಬರಸ್ತಾನಿಗೆ ಸಾಗಿಸಿದರು.

ಅಶ್ರಫ್ ಮುನ್ನಿಯನ್ನು ತಬ್ಬಿ ಹಿಡಿದು ಘನ ಘೋರವಾಗಿ ಅತ್ತಳು. ಆದರೂ ಮನದ ಮೂಲೆಯಲ್ಲೆಲ್ಲೋ ಸಮಾಧಾನದ ಒಂದು ಶಾಂತ ಎಳೆ…. ಯಾವ ಸುಖ ಸೂರೆಗೊಳ್ಳಲು ಅವಳು ಇಲ್ಲಿರಬೇಕಿತ್ತು… ನೋವಿನಿಂದ ಬಿಡುಗಡೆಯಾಗಿ ತನಗೂ ಬಿಡುಗಡೆಯನ್ನು ಕೊಡಿಸಿದ ಮುನ್ನಿ…. ಇನ್ನು ತಾನು ಅವನ ಹಿಂದೆ ಹೋಗಿ ಗೋಗರೆಯಬೇಕಾದ್ದಿಲ್ಲ….. ಈ ಮುತವಲ್ಲಿಯ ಹಿಂದೆ ಹೋಗಿ ಬೇಡಬೇಕಾದ್ದಿಲ್ಲ….. ಅಮಾನವೀಯ ಪ್ರಶ್ನೆಗಳಿಗೆ ಉತ್ತರಿಸಬೇಕಾದ್ದಿಲ್ಲ…. ತಾನುಂಟು ತನ್ನ ಎರಡು ಮಕ್ಕಳುಂಟು…. ಆದರೂ ಪಾಪದ ಮುನ್ನಿ…. ಒಂದು ಹೊಸ ಬಟ್ಟೆ ಅಂತ ಉಡಲಿಲ್ಲ….. ಒಂದು ಬೊಂಬೆ ಕೈಯಲ್ಲಿ ಹಿಡಿದು ಆಟವಾಡಲಿಲ್ಲ. ಹುಟ್ಟಿದಾಗಿನಿಂದ ಸೂಜಿ ಚುಚ್ಚಿಸಿಕೊಂಡು ಕಹಿ ಔಷಧವನ್ನು ನುಂಗುತ್ತ….. ಒಮ್ಮೆಲೇ ಅವಳ ಮಾತೃತ್ವ ಜಾಗೃತವಾಗಿ ಮತ್ತೊಮ್ಮೆ ಅಳುವಿನ ಮಹಾಪೂರ…..

ಮುತವಲ್ಲಿ ಸಾಹೇಬರು, ಇಡೀ ರಾತ್ರಿ ನಿದ್ರೆ ಇಲ್ಲದಂತೆ ಕಳೆದರು. ಆ ರಾತ್ರೆ ಆಮಿನ ಅವರ ಬಳಿ ಸುಳಿಯಲಿಲ್ಲ ಕೂಡ. ಬೆಳಗಿನ ನಮಾಜಿಗೆ ಹೋದರು. ಯಾರೊಡನೆಯೂ ಮಾತಾಡಲು ಅವರಿಗೆ ಮನಸ್ಸಾಗಲಿಲ್ಲ. ಮಸೀದಿಯ ಆವರಣದ ಮೊದಲ ಮೆಟ್ಟಿಲ ಮೇಲೆ ಕುಳಿತರು. ರಾತ್ರಿಯ ಘಟನೆ ಕನಸೇ, ನನಸೇ….. ಅಥವಾ ಯಾವುದಾದರೂ ಚಲನಚಿತ್ರವೇ….. ತುಂಬಾ ಹೊತ್ತಿನ ನಂತರ ಮಸೀದಿಯ ಮುಂದಿನ ಗೇಟನ್ನು ಸರಿಸಿ ಮನೆಯ ಕಡೆ ಹೊರಟರು. ಮಸೀದಿಯ ಗೇಟಿನ ಸದ್ದು ಕೇಳಿದೊಡನೆಯೇ ಅಡಗುತ್ತಿದ್ದ ಇಡೀ ಮೊಹಲ್ಲದ ಹೆಂಗಸರು….. ಆ ದಿನ ತಮ್ಮ ಕೆಲಸ-ಕಾರ್ಯಗಳಲ್ಲಿ ತನ್ಮಯತೆಯಿಂದ ನಿರತರಾಗಿದ್ದರು.

ಮುತವಲ್ಲಿ ಸಾಹೇಬರು ನಿಧಾನವಾಗಿ ಹೆಜ್ಜೆಗಳನ್ನಿಡತೊಡಗಿದರು…. ಕಡ್ಡಿ ಪೊರಕೆ ಹಿಡಿದು ಬೀದಿಯ ಅರ್ಧಭಾಗದವರೆಗೂ ಗುಡಿಸುತ್ತಿದ್ದ ಹನೀಫ ಚಿಕ್ಕಮ್ಮ ನಿರ್ದಾಕ್ಷಿಣ್ಯವಾಗಿ ಕೊಚ್ಚೆಯನ್ನು ಮನಸ್ಸಿಗೆ ಬಂದಂತೆ ಗುಡಿಸುತ್ತಾ, ಮುತವಲ್ಲಿ ಸಾಹೇಬರ ಮೇಲೆ ಕೆಲವು ಹನಿಗಳು ಹಾರಿದರೂ ಲೆಕ್ಕಿಸದೆ ಬಲಗೈಲಿ ಪೊರಕೆಯನ್ನು ಚಾಮರದಂತೆ ಹಿಡಿದು, ಎಡ ಅಂಗೈ ಮೇಲೆ ಕುಟ್ಟುತ್ತಾ, “ಅಲ್ಲಾಹನ ಶಾಪ ನಿನ್ನ ಮೇಲೆ ಎರಗಲಿ…. ಶೈತಾನನನ್ನು ಮುಖತಃ ಕಂಡಂತಾಯಿತಲ್ಲ…” ಎಂದು ಗಾಳಿಯನ್ನುದ್ದೇಶಿಸಿ, ನುಡಿಯುತ್ತ ಪೊರಕೆಯನ್ನು ನಿಟ್ಟಿಸಿ ನೋಡಿದಳು. ನಲ್ಲಿಯ ಕೆಳಗೆ ಬಿಂದಿಗೆಯನ್ನಿಡಲು ಬಂದ ರಫಿಯಾ….. ಬಿಂದಿಗೆಯನ್ನಿಟ್ಟು ಕೆಳಗೆ ಬಿದ್ದಿದ್ದ ಕಲ್ಲೊಂದನ್ನು ಕೈಗೆತ್ತಿಕೊಂಡು, ಸುತ್ತಲಲ್ಲಿ ಎಲ್ಲೂ ಇರದಿದ್ದ ನಾಯಿಯನ್ನುದ್ದೇಶಿಸಿ, ಪಕ್ಕದ ಚರಂಡಿಯ ಕೊಚ್ಚೆಗೆ ಕಲ್ಲೆಸೆದು, “ನಾಯಿ ಅಂದ್ರೆ ನಾಯಿ….!” ಎಂದು ಪಕಪಕನೆ ನಕ್ಕಳು.

ಬೆನ್ನ ಮೇಲೆ ಅಗಲವಾಗಿ ಹರವಿಕೊಂಡಿದ್ದ ಬೂದು ಬಿಳಿಯ ಪುಕ್ಕಗಳಿಂದಲೂ, ಸುಪುಷ್ಟ ತೊಡೆಗಳನ್ನು ಹೊಂದಿದ್ದು ಗಿಡ್ಡ ಕಾಲಿನಿಂದಲೂ ಕೂಡಿ ಬಿಂಕದಿಂದ ನಡೆಯುತ್ತಿದ್ದ ಹಮೀದಳ ಮನೆಯ ಕೋಳಿಯನ್ನು ಓಡಿಸಿಕೊಂಡು ಹೋಗಿ ಅದರ ಜುಟ್ಟನ್ನು ಕೊಕ್ಕಿನಲ್ಲಿ ಹಿಡಿದು ಅದರ ಬೆನ್ನ ಮೇಲೇರಿದ ತನ್ನ ಮನೆಯ ಹುಂಜವನ್ನು ದ್ವೇಷ ದಿಂದ ನಿಟ್ಟಿಸಿದ ನಸೀಮ ‘ಹೇ! ಅಲ್ಲಾ…. ನಿನ್ನ ಕೃಪೆಯಿಂದ ಈ ದರಿದ್ರ ಹುಂಜಗಳ ವಂಶ ನಾಶವಾಗಲಿ; ಮಾನ ಮರ್ಯಾದೆ ಇಲ್ಲ… ಅಲ್ಲಾಹುವಿನ ಭಯವಿಲ್ಲ… ಗೋರಿಯ ಹುಳುಗಳಿಗಾಗಿ ದೇಹ ಬೆಳೆಸ್ತಿರೋ….. ಕತ್ತೆ ಮುಖದವನೇ ಹಾಳಾಗಿ ಹೋಗು….” ಎಂದು ತಾನೇ ಸಾಕಿದ ಹುಂಜಕ್ಕ ಧಾರಾಳವಾಗಿ ಬಯ್ದು ನೆಟಿಗೆ ಮುರಿದಳು.

ಮದುವೆಯಾಗಿ ಎರಡು ವರ್ಷಗಳಾಗಿದ್ದರೂ, ಮನೆಯ ಮುಂಬಾಗಿಲಿಗೂ ಬಾರದೆ ಇದ್ದ, ಮೂಲೆಮನೆಯ ಖಾಜಿ ಸಾಹೇಬರ ಸೊಸೆ ಆ ದಿನ ಕಾಂಪೌಂಡಿನ ಗೇಟಿನ ಬಳಿ ಬಂದು ನಿಂತು ಗಂಡ ಸ್ಕೂಟರ್ ಮೇಲೆ ಹೋಗುತ್ತಿದ್ದುದನ್ನು ನೋಡುತ್ತಿದ್ದವಳು, ಮುತವಲ್ಲಿ ಸಾಹೇಬರನ್ನು ಕಂಡವಳೇ ಕಂಕುಳಲ್ಲಿದ್ದ ಮಗುವನ್ನುದ್ದೇಶಿಸಿ ರಮಿಸುತ್ತ “ಗೊರಿಲ್ಲಾ ನೋಡಬೇಕಾ ನನ್ನ ಚಿನ್ನ…. ನೋಡು ! ಅದೇ ಗೊರಿಲ್ಲಾ…” ಎಂದು ಹೇಳುತ್ತಿದ್ದವಳು ಮುತವಲ್ಲಿ ಸಾಹೇಬರು ತಿರುಗಿ ನೋಡಿದಾಕ್ಷಣ ಕಿಸಕ್ಕನೆ ನಕ್ಕು ಬಾಗಿಲು ಬಡಿದುಕೊಂಡಳು.

ದೂರದಲ್ಲೆಲ್ಲೋ ಇದ್ದ ಜಮೀಲಾ ಅತ್ತೆ ಯಾರನ್ನೋ ಉದ್ದೇಶಿಸಿ ಎತ್ತರದ ದನಿಯಲ್ಲಿ ಬಯ್ಯುತ್ತಿದ್ದಳು. “ನಿನಗೆ ಒಳ್ಳೇದಾಗೋಲ್ಲ….. ಖಿಯಾಮತ್‌ನ ದಿನ ನೀನು ಹಂದಿ ಮೋರೆಯಿಂದ ಹುಟ್ತೀಯಾ…. ಕರಿನಾಗರಗಳು ನಿನ್ನನ್ನು ಸುರುಳಿ ಸುತ್ತಿರಲಿ; ಸಾಯೋ ಕಾಲಕ್ಕೆ ನಿನ್ನ ನಾಲಿಗೆಯ ಮೇಲೆ ಕಲಿಮ ಬಾರದೆ ಇರಲಿ…” ಪುಂಖಾನು ಪುಂಖವಾಗಿ ಹೊರಡುತ್ತಿದ್ದ ಅವಳ ಶಾಪಗಳು ಸಿಡಿಮದ್ದಿನಂತೆ ಹಾರುತ್ತಿದ್ದವು.

ತುಂಬಿ ತುಳುಕುತ್ತಿದ್ದ ಕಸದ ಬುಟ್ಟಿಯೊಡನೆ ಹೊರಬಂದ ಆಸಿಫ, ತಲೆಯ ಮೇಲಿನ ಸೆರಗು ಜಾರಿದರೂ ಅದನ್ನು ಸರಿಪಡಿಸಿಕೊಳ್ಳದೆ ನಿರ್ಭಿತಿಯಿಂದ ನಿಂತಿದ್ದು, ಕಸವನ್ನು ಸುರಿಯುತ್ತ ಗಂಟಲಿನ ಪಸೆಯಲ್ಲಾ ಆರಿ ಹೋಗುವಂತ…. ಹೊಲಸು ಕಂಡವಳಂತೆ ಗಳಿಗೆ ಗಳಿಗೆಗೂ ಥೂ….! ಥೂ….! ಎಂದು ಉಗುಳುತ್ತಿದ್ದಳು. ಹಾರಿತೋ…. ಏನೋ….!

ಮುತವಲ್ಲಿ ಸಾಹೇಬರಿಗೆ ಕೆಂಪು ಅಲ್ಬಾನಿನಲ್ಲಿ ಸುತ್ತಿದ್ದ ಮುನ್ನಿಯ ಮುಖ ಮರೆಯಲು ಸಾಧ್ಯವೇ ಆಗಿರಲಿಲ್ಲ. ಅವಳ ಕಣ್ಣುಗಳು ಮುಚ್ಚಿದ್ದರೂ ಅವಳು ತಮ್ಮನ್ನೇ ದಿಟ್ಟಿಸುತ್ತಿರುವಂತೆ ಭಾಸವಾಗುತ್ತಿತ್ತು. ಎತ್ತಲೂ ಧ್ವನಿಗಳು ಮುತ್ತಿದ್ದವು, ಎದೆ ಭಾರವಾಗಿ ಕಾಲುಗಳು ನಡೆಯಲು ನಿರಾಕರಿಸಿ ತಿಂದಿದ್ದ ಬಿರಿಯಾನಿಯ ಒಂದೊಂದು ಅಗುಳೂ ಕೂಡ ಕಬ್ಬಿಣದ ಗುಂಡಾಗಿ ಒಳಗಿನಿಂದಲೇ ಗುದ್ದಿದಂತೆ ಅನಿಸತೊಡಗಿತು. ಕುಡಿದಿದ್ದೆಲ್ಲವೂ…. ಆಮಿನ ಹೇಳಿದಂತೆ ಸೈತಾನನ ಮೂತ್ರದಂತೆ ಕಂಡುಬಂದು, ಅದರ ದುರ್ವಾಸನೆ ಬಡಿದಂತಾಗಿ, ಆ ದುರ್ವಾಸನೆಯಲ್ಲೇ ತಾನು ಮುಳುಗುವಂತಹ ಭಯ ವ್ಯಾಪಿಸಿ ಹೊಟ್ಟೆಯಲ್ಲಿ ಕೆಟ್ಟ ಸಂಕಟವಾಗತೊಡಗಿತು.

ಕಷ್ಟಪಟ್ಟು ಮನೆಯ ಮಟ್ಟಿಲೇರುತ್ತಿದ್ದಂತೆಯೇ ಆಮಿನ ತನ್ನ ತಾಯಿಯೊಂದಿಗೆ ಎಲ್ಲೋ ಹೊರಡಲು ಸಿದ್ಧವಾಗುತ್ತಿದ್ದು, ಅವರ ಕಣ್ಣೆದುರಿಗೆ ಮಸುಕು ಮಸುಕಾಗಿ ಕಂಡುಬಂದಿತು. ಮುತವಲ್ಲಿ ಸಾಹೇಬರು ಬೆವರೊರೆಸಿಕೊಳ್ಳುತ್ತ ಪಸೆಯಾಗಿದ್ದ ಗಂಟಲಿ ನಿಂದ ಮಾತನಾಡಲಸಾಧ್ಯವಾಗಿ ಸತ್ತಸ್ವರದಲ್ಲಿ ಕೇಳಿದರು “ಎಲ್ಲಿಗೆ…?”

“ಇನ್ನೆಲ್ಲಿಗೆ….?” ಅವಳು ಕವಕ್ಕನೆ ಹಾರಿಬಿದ್ದಳು. “ಹತ್ತು ಹಡೆದು ಕೊಟ್ಟಿದೀನಲ್ಲಾ…. ಇನ್ನಾದರೂ ಆಪರೇಷನ್ ಮಾಡಿಸಿಕೊಳ್ಳೋಣಾಂತ….”

ಅವಳನ್ನು ತಡೆಯಲು ತ್ರಾಣ ಸಾಲದೆ….. ಅವಳಿಗೆ ಮರು ನುಡಿಯಲು ಯಾವ ಶಬ್ದಗಳೂ ಇಲ್ಲದೆ…. ಮುತವಲ್ಲಿ ಸಾಹೇಬರು ಕುಳಿತಿರುವಾಗಲೇ…. ಆಮಿನ ಥೇಟ್ ಅವರ ಶೈಲಿಯಲ್ಲೇ ನುಡಿದಳು,
“ನೋಡಿ….. ಬಾಗಿಲು ಹಾಕ್ಕೊಂಡು ಮಕ್ಕಳನ್ನು ನೋಡ್ಕೊಳಿ….. ನಾನು ಬರೋದು ಒಂದು ವಾರದ ಮೇಲಾಗುತ್ತೆ.”


Previous post ಬರ್ಬರ
Next post ಕಣ್ಣೀರಿನ ಕಡಲಿನ ಮೇಲೆ!

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys