ಬನ್ನಿ ಓ ತಾರೆಗಳೆ ನೆಲಕಿಳಿದು ಬನ್ನಿ
ಆಗಸದ ಕಾಂತಿಯನು ಭೂಮಿಗೂ ತನ್ನಿ,
ಕೋಟಿ ಮೈಲಿಗಳಾಚೆ ಹೊಳೆವ ತೇಜಗಳೆ
ಬಂದು ನಮ್ಮನು ಹರಸಿ ಕಾಂತಿಗೋಳಗಳೆ.

ಸೂರ್ಯ ಚಂದಿರ ಮುಗಿಲ ಜೊತೆ ಬಾಳುವವರೆ
ಗಾಳಿ ಉಯ್ಯಾಲೆಯಲಿ ತೂಗಿಕೊಳುವವರೆ,
ಎಂದೂ ಆರದೆ ಉರಿವ ನಂದಾದೀಪಗಳೆ
ನಮ್ಮ ಜೊತೆ ಆಡಿರಿ ಒಂದೆರಡು ಗಳಿಗೆ.

ನಿಮ್ಮ ಬಾಳಿನೊಳಿದೆ ಸ್ವರ್ಗೀಯ ಕಾಂತಿ
ಪ್ರೇಮ ಶುಭ್ರತೆ ದೇವ ಸನ್ನಿಧಿಯ ಶಾಂತಿ,
ಇಲ್ಲಿಗೂ ತನ್ನಿರಿ ನಿಮ್ಮ ಸಂಪತ್ತು
ತಂದು ಹೆಚ್ಚಿಸಿ ನಮ್ಮ ಲೋಕದಂತಸ್ತು.

ಮೀಯಿಸಿರಿ ನಿಮ್ಮ ಬೆಳಕಿಂದ ಭೂಮಿಯನು
ಹಾಯಿಸಿರಿ ಜಗದೆದೆಗೆ ಕರುಣೆ ಪ್ರೇಮವನು,
ಪ್ರಾಣಿ ಪರಿಸರ ಎಲ್ಲ ಕ್ಷೇಮದಲಿ ಬಾಳಿ
ನಲಿವೆ ನಂದನ ಆಗಲೆಮ್ಮ ಈ ಭೂಮಿ.
*****