ಪುಂಸ್ತ್ರೀ – ೬

ಪುಂಸ್ತ್ರೀ – ೬

ಕ್ಷಾತ್ರವಚನದಿ ಗೆಲಿದನಾರಣವ

ಭೀಷ್ಮರು ಮಗ್ಗುಲು ಬದಲಾಯಿಸಿದರು. ಎದೆಯ ನೋವು ತೀವ್ರವಾಗುತ್ತಾ ಹೋಗುತ್ತಿದೆ. ಯುದ್ಧ ಹದಿನಾಲ್ಕನೆಯ ದಿನಕ್ಕೆ ಕಾಲಿಟ್ಟಿದೆ. ಇನ್ನು ಎಷ್ಟು ದಿನವೊ? ಈ ಬಾಣ ಅದಾಗಿಯೇ ಯಾವತ್ತು ಬಿದ್ದು ಹೋಗುತ್ತದೆಯೊ? ದೇಹಕ್ಕೆ ಸುಖವಿಲ್ಲ, ಮನಸ್ಸಿಗೆ ನೆಮ್ಮದಿಯಿಲ್ಲ. ಇಂದು ಜಯದ್ರಥನ ಕತೆ ಏನಾಗುತ್ತದೆಯೋ ಎಂಬ ಆತಂಕ ಬೇರೆ ಸೇರಿಕೊಂಡು ಸುಮ್ಮನೆ ಮಲಗುವುದು ಹಿಂಸೆಯೆನಿಸುತ್ತಿದೆ. ಮಾತಾಡೋಣವೆಂದರೆ ಬಿಡದಿಯಲ್ಲಿರುವುದು ವೈದ್ಯರು ಮತ್ತು ಪ್ರತೀಹಾರಿ ಮಾತ್ರ. ಅವರಲ್ಲಿ ಏನನ್ನು ಮಾತಾಡುವುದು? ಅಲ್ಲಿ ಕುರುಕ್ಷೇತ್ರದಲ್ಲಿ ಏನು ನಡೆಯಿತೆನ್ನುವುದು ಅವರಿಗೂ ಗೊತ್ತಿರುವುದಿಲ್ಲ.

ಕತ್ತಲಾವರಿಸುತ್ತಿದ್ದಂತೆ ಬಿಡದಿಗೆ ದುರ್‍ಯೋಧನನ ಆಗಮನವಾಯಿತು. ಅವನ ಹಿಂದಿದ್ದವನು ದುಶ್ಯಾಸನ. ಅವನು ಬಿಡದಿಗೆ ಈವರೆಗೆ ಬಂದವನಲ್ಲ. ಒಮ್ಮೆಯೂ ಸಲಹೆ ಕೇಳಿದವನಲ್ಲ. ಅವನನ್ನು ನೋಡಿದಾಗಲೆಲ್ಲ ಅವನ ತಲೆಯೊಳಗೆ ಮಿದುಳು ಎಂಬುದಿದೆಯೇ ಎಂಬ ಸಂಶಯ ಪ್ರತಿ ಬಾರಿ ಭೀಷರನ್ನು ಕಾಡುತ್ತಿತ್ತು. ಅವನ ನಿಷ್ಠೆ ಮತ್ತು ಸೇವೆ ಏನಿದ್ದರೂ ಅವನ ಅಣ್ಣ ದುರ್‍ಯೋಧನನಿಗೆ ಮಾತ್ರ. ಅಣ್ಣ ಹೇಳಿದನೆಂದು ಅಂದು ಅತಿಥಿಗೃಹಕ್ಕೆ ಗೂಳಿಯಂತೆ ನುಗ್ಗಿ ರಜಸ್ವಲೆಯಾಗಿದ್ದ ದ್ರೌಪದಿಯ ತುರುಬಿಗೆ ಕೈಯಿಕ್ಕಿ ತುಂಬಿದ ಸಭೆಗೆ ಎಳಕೊಂಡು ಬಂದಿದ್ದ. ಸಂಸ್ಕೃತಿ ಹೀನನಾಗಿ ಅವಳ ಸೆರಗಿಗೆ ಕೈಹಾಕಿ ಅಷ್ಟು ಜನರೆದುರು ಅಪಮಾನಿಸಿದ್ದ. ಆ ಅಕೃತ್ಯವನ್ನು ದುರ್ಯೋಧನನ ಒಬ್ಬ ತಮ್ಮ ವಿಕರ್ಣನ ಹೊರತಾಗಿ ಬೇರೆ ಯಾರೂ ಪ್ರತಿಭಟಿಸಿರಲಿಲ್ಲ. ದ್ಯೂತದಲ್ಲಿ ತನ್ನನ್ನು ಸೋತ ಯುಧಿಷ್ಠಿರನಿಗೆ ಮಡದಿ ದ್ರೌಪದಿಯನ್ನು ಪಣವಾಗಿಡುವ ಅಧಿಕಾರವಿಲ್ಲವೆಂದು ವಿಕರ್ಣ ವಾದಿಸಿದ್ದ. ದುಶ್ಶಾಸನನಿಗೆ ವಿಕರ್ಣನ ಬುದ್ಧಿ ಇರುತ್ತಿದ್ದರೆ ಈ ಮಹಾಯುದ್ಧ ಸಂಭವಿಸುತ್ತಲೇ ಇರಲಿಲ್ಲ. ಎಂದೂ ಬಾರದ ದುಶ್ಶಾಸನ ಇಂದೇಕೆ ಬಂದ? ಭೀಷ್ಮರ ಮನದಲ್ಲಿ ಸಂಶಯದ ಅಲೆಗಳೆದ್ದವು.

ದುರ್ಯೋಧನ ಪಾದಮುಟ್ಟಿ ನಮಸ್ಕರಿಸಿದ. ಸುಮ್ಮನೆ ನಿಂತಿದ್ದ ದುಶ್ಶಾಸನನನ್ನು ಗದರಿಕೊಂಡದ್ದಕ್ಕೆ ಅವನೂ ಅಣ್ಣನ ಹಾಗೆ ವಂದಿಸಿದ. ಮಂದ ಬೆಳಕಿನಲ್ಲೂ ದುರ್ಯೋಧನನ ಮುಖದ ಕ್ಲೇಶ ಎದ್ದು ಕಂಡಿತು. ಇನ್ನು ಯುದ್ಧದ ಫಲಿತಾಂಶ ಕೇಳಬೇಕಾಗಿಲ್ಲ. ದುಶ್ಶಲೆ ವಿಧವೆಯಾಗಿರಬೇಕು ಎಂದು ಭೀಷ್ಮರಂದುಕೊಂಡರು.

ದುರ್ಯೋಧನ ಮಾತಿಲ್ಲದೆ ಸುಮ್ಮನೆ ನಿಂತಿದ್ದ. ಅವನಿಂದ ಮಾತಾಡಲಾಗುತ್ತಿಲ್ಲ ವೆಂಬುದರಿವಾಗಿ ಭೀಷ್ಮರು ಕೇಳಿದರು: “ಮಗೂ, ಗುರು ದ್ರೋಣರಿದ್ದು, ಆಪ್ತ ಕರ್ಣನಿದ್ದು, ಬಲಾಢ್ಯ ಸೋದರರಿದ್ದು ಜಯದ್ರಥನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವೆ? ಕುರುಸೇನೆ ಅಷ್ಟೂ ದುರ್ಬಲವಾಯಿತೆ?”

ದುರ್ಯೋಧನ ನಿಡುಸುಯ್ದ. ಕಂಪಿಸುವ ಸ್ವರದಲ್ಲಿ ಅವನೆಂದ: “ಜಯದ್ರಥನನ್ನು ವಂಚನೆಯಿಂದ ವಧಿಸಲಾಯಿತು ತಾತಾ. ಪಾಂಡವರು ಇಂದು ಧರ್ಮಯುದ್ಧ ಮಾಡಲೇ ಇಲ್ಲ. ನಿಮ್ಮ ಮಾರ್ಗದರ್ಶನದಂತೆ ಇಂದು ಬೆಳಿಗ್ಗೆ ವ್ಯೂಹ ರಚಿಸಿ ದ್ರೋಣಾಚಾರ್ಯರು ಅರ್ಜುನನಿಗಾಗಿ ಕಾದಿದ್ದರು. ಅವನು ಬಂದವನೇ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ಎಂದು ನಮಸ್ಕರಿಸಿದ. ಅಲ್ಲಿಗೇ ಗುರುಗಳು ವಿಚಲಿತರಾಗಿರಬೇಕು. ಅವರ ಎಡಗೈ ಹೆಬ್ಬೆರಳು ತುಂಡಾಗಿ ಹೋಗಿತ್ತಲ್ಲಾ? ಅಸಾಧ್ಯ ನೋವು ಅನುಭವಿಸುತ್ತಿದ್ದರು. ಆದರೂ ಕಾದಾಡಿದರು. ಜಯಾಪಜಯ ನಿರ್ಣಯವಾಗುವ ಮೊದಲೇ ಕೃಷ್ಣನ ಸೂಚನೆಯಂತೆ ಅರ್ಜುನ ಯುದ್ಧವಿರಾಮ ಘೋಷಿಸಿದ. ‘ಗುರುರ್ಭವಾನ್‌ ನಮೇ ಶತ್ರುಃ ಶಿಷ್ಯಃ ಪುತ್ರ ಸಮ್ಮೋಸ್ಮಿತೇ, ಗುರುಗಳು ಶಿಷ್ಯರ ಹಗೆಗಳಲ್ಲ. ನಿಮಗೆ ನಾನು ಪುತ್ರ ಸಮಾನನು. ನಿಮ್ಮನ್ನು ಗೆಲ್ಲಲು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಆಶೀರ್ವಾದ ನನಗಿರಲಿ’ ಎಂದು ಕೈಮುಗಿದ. ಅಭ್ಯಾಸ ಬಲದಿಂದ ಗುರುಗಳು ‘ವಿಜಯೀಭವ’ ಎಂದು ಕೈಯೆತ್ತಿ ಆಶೀರ್ವದಿಸುವಾಗ ಕುತಂತ್ರಿ ಕೃಷ್ಣ ಸರಕ್ಕನೆ ವ್ಯೂಹದೊಳಕ್ಕೆ ರಥವನ್ನು ನುಗ್ಗಿಸಿದ. ಅರ್ಜುನ ಜಯದ್ರಥನನ್ನು ಹುಡುಕುತ್ತಾ, ಎದುರಾದವರನ್ನು ಮಾರಣಹೋಮಗೈಯುತ್ತಾ ಮುಂದುವರಿದ. ಅವನ ಜತೆಯಲ್ಲಿ ಭೀಮ ಅಟ್ಟಹಾಸಗೈಯುತ್ತಾ ನನ್ನ ತಮ್ಮಂದಿರನ್ನು ಸದೆಬಡಿದು ರಕ್ತದೋಕುಳಿ ಹರಿಸಿದ. ಎಲ್ಲೆಲ್ಲೂ ಹೆಣಗಳೇ ಹೆಣಗಳು.

ದುರ್ಯೋಧನನ ಭೀಭತ್ಸ ವಿವರಣೆಯಿಂದ ಭೀಷ್ಮರಿಗೆ ಆಶ್ಚರ್ಯವಾಯಿತು: “ಆದರೆ ಮಗೂ, ಸ್ವಯಂ ನಿನ್ನಿಂದ, ದುಶ್ಶಾಸನನಿಂದ ಮತ್ತು ಮಹಾವೀರ ಕರ್ಣನಿಂದ ಅರ್ಜುನನನ್ನು ತಡೆಯಲಾಗಲಿಲ್ಲವೆ? ಜಯದ್ರಥನ ಮಹಾಬಲಾಢ್ಯ ಸಹೋದರರು ನಿನ್ನೆ ಭೀಮಾದಿಗಳನ್ನು ವ್ಯೂಹದ ಬಾಗಿಲಲ್ಲೇ ತಡೆದು ನಿಲ್ಲಿಸಿದ್ದರಲ್ಲಾ? ಅವರಿಂದ ಇಂದು ಏನನ್ನೂ ಮಾಡಲಾಗಲಿಲ್ಲವೆ? ಸ್ವಯಂ ಮಹಾ ಪರಾಕ್ರಮಿಯಾದ ಜಯದ್ರಥನಿಗೆ ಅರ್ಜುನನಿಂದ ತನ್ನನ್ನು ಕಾಪಾಡಿ ಕೊಳ್ಳಲು ಸಾಧ್ಯವಾಗಲಿಲ್ಲವೆ?”

ದುರ್ಯೋಧನ ನಕಾರಾತ್ಮಕವಾಗಿ ತಲೆಯಾಡಿಸಿದ. ಅರ್ಜುನನ ಪ್ರತಿಜ್ಞೆಯನ್ನು ಕೇಳಿದ ಕ್ಷಣದಿಂದ ಮನೋಬಲ ಕುಸಿದುಹೋಗಿದ್ದ ಜಯದ್ರಥನಲ್ಲಿ ಹೋರಾಟದ ಕೆಚ್ಚು ಇರಲಿಲ್ಲ ತಾತಾ. ನಿನ್ನೆ ರಾತ್ರೆ ಗುರುದ್ರೋಣರ ನೇತೃತ್ವದಲ್ಲಿ ತುಂಬಾ ಹೊತ್ತು ಮಂತ್ರಾಲೋಚನೆ ನಡೆಸಿದೆವು. ಮಧ್ಯೆ ಮಧ್ಯೆ ಜಯದ್ರಥ ತಾನು ಸಿಂಧೂ ನಗರಿಗೆ ರಾತ್ರೋರಾತ್ರಿ ಪಲಾಯನಗೈದು ಜೀವವುಳಿಸಿಕೊಳ್ಳುತ್ತೇನೆಂದು ಹಲುಬುತ್ತಿದ್ದ. ಯುದ್ಧರಂಗದಿಂದ ಹಾಗೆ ಓಡಿ ಹೋಗುವುದು ಕ್ಷತ್ರಿಯ ಧರ್ಮಕ್ಕೆ ವಿರುದ್ಧವಾದುದೆಂದು ನಾವೆಷ್ಟೇ ಹೇಳಿದರೂ ‘ಪ್ರಾಣಕ್ಕಿಂತ ಧರ್ಮ ಮೇಲಲ್ಲ’ ಎಂದು ಬಿಟ್ಟ? ‘ಇದು ಕೌರವಪಾಂಡವರ ಯುದ್ಧ. ತನಗೂ ಇದಕ್ಕೂ ಸಂಬಂಧವಿಲ್ಲ. ದಾಯಾದಿಗಳ ಕಲಹದಲ್ಲಿ ಯಾರೊಬ್ಬರ ಪಕ್ಷ ವಹಿಸುವುದೂ ತಪ್ಪು’ ಎಂದು ಹೇಳುತ್ತಲೇ ಇದ್ದ. ನನಗೇನು ಮಾಡಬೇಕೆಂದೇ ತೋಚಲಿಲ್ಲ.”

ಭೀಷ್ಮರಿಗೆ ಆಶ್ಚರ್ಯವಾಗಲಿಲ್ಲ. ಜಯದ್ರಥ ದುರಾಚಾರಿಯೆಂಬುದಕ್ಕೆ ಅವನು ಪಾಂಡವರ ಅರಣ್ಯವಾಸ ಕಾಲದಲ್ಲಿ ದ್ರೌಪದಿಯನ್ನು ಹೊತ್ತೊಯ್ದದ್ದು ಸಾಕ್ಷಿಯಾಗಿತ್ತು. ನಿನ್ನೆ ಅವನು ಭೀಮನನ್ನು ತಡೆಯದಿರುತ್ತಿದ್ದರೆ ಅಭಿಮನ್ಯು ಹತನಾಗುತ್ತಿರಲಿಲ್ಲ. ಅಂಥವನ ಬಾಯಿಯಿಂದ ದಾಯಾದಿ ಕಲಹದಲ್ಲಿ ಯಾರೊಬ್ಬರ ಪಕ್ಷ ವಹಿಸುವುದೂ ತಪು? ಎಂಬ ಮಾತು ಬಂತು! ಅವನು ತನ್ನ ಅಂತ್ಯವನ್ನು ಮುಂದಾಗಿ ಕಂಡಿದ್ದ. ಅಂತಿಮ ಕಾಲಕ್ಕೆ ಅವನಲ್ಲಿ ವಿವೇಕ ಉದಯವಾಗಿದೆ. ಸಾವಿನೆದುರು ಮನುಷ್ಯ ಸತ್ಯವನ್ನೇ ನುಡಿಯುತ್ತಾನೆ. ನಿನ್ನೆ ಜಯದ್ರಥನಾಡಿದ ಸತ್ಯ ಯುದ್ಧಾರಂಭಕ್ಕೆ ಮುನ್ನ ಆಚಾರ್ಯ ದ್ರೋಣರಿಂದ, ದುರ್ಯೋಧನನ ಪ್ರಾಣಸಖ ಕರ್ಣನಿಂದ, ಎಲ್ಲರಿಗಿಂತ ಹಿರಿಯವನಾದ ತನ್ನಿಂದ ಬರುತ್ತಿದ್ದರೆ ಯುದ್ಧ ಸಂಭವಿಸುತ್ತಲೇ ಇರಲಿಲ್ಲವೆಂದು ಭೀಷ್ಮರಿಗನ್ನಿಸಿತು.

“ಹಾಗಾದರೆ ಅವನು ಇಲ್ಲೇ ಉಳಿಯುವಂತಾದದ್ದು ಹೇಗೆ?”

‘ನನ್ನಿಂದ ತಾತಾ’ ದುಶ್ಶಾಸನನೆಂದ : “ನಾನು ಅವನನ್ನು ಉಳಿಯುವಂತೆ ಮಾಡಿದೆ. ಜಯದ್ರಥ ಇನ್ನೇನು ಪಲಾಯನ ಮಾಡಬೇಕು ಎನ್ನುವಷ್ಟರಲ್ಲಿ ನಾನು ತಡೆದು ನಿಲ್ಲಿಸಿದೆ. ‘ಅರ್ಜುನ ನಿನ್ನನ್ನು ಕೊಲ್ಲಲಿರುವುದು ನಾಳೆ. ನೀನು ಇಲ್ಲಿಂದ ಓಡಿಹೋಗುತ್ತಿ ಎಂದಾದರೆ ಈಗ ಈ ಕ್ಷಣದಲ್ಲಿ ನಿನ್ನನ್ನು ನಾನು ಕೊಂದು ಬಿಡುತ್ತೇನೆ. ತಂಗಿ ವಿಧವೆಯಾಗುತ್ತಾಳೆಂದು ನಾನು ಚಿಂತಿಸುವವನಲ್ಲ. ಆ ಭೀಮಸೇನ ನನ್ನನ್ನು ಏನೇನೋ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿದ್ದಾನೆ. ಏನು ಮಾಡಲಿಕ್ಕಾಗಿದೆ ಅವನಿಂದ? ನಿನ್ನ ಹಾಗೆ ಯೋಚಿಸುತ್ತಿದ್ದರೆ ನಾನು ಹಸ್ತಿನಾವತಿಯಿಂದ ಎಂದೋ ಓಡಿಹೋಗಬೇಕಾಗಿತ್ತು. ಯುದ್ಧರಂಗದಿಂದ ಪಲಾಯನ ಮಾಡಿ ಬದುಕಿದರೂ ಅದು ಸತ್ತಂತೆಯೇ. ಎಂದೋ ಒಂದು ದಿನ ಸಾಯಲೇಬೇಕಲ್ಲಾ? ಇಂದೇ ಸತ್ತುಬಿಡು’ ಎಂದೆ. ಅವನ ಕಾಲುಗಳ ಬಲ ಉಡುಗಿ ಕುಸಿದು ಕುಳಿತುಬಿಟ್ಟ.”

ಭೀಷ್ಮರಿಗೆ ದುಶ್ಶಾಸನನ ಮಾತುಗಳು ಮೆಚ್ಚುಗೆಯಾದವು. ಈತನ ತಲೆಯೊಳಗೆ ಜೇಡಿ ಮಣ್ಣು ತುಂಬಿರಬೇಕೆಂದು ಅವರು ಎಷ್ಟೋ ಸಲ ಅಂದುಕೊಂಡದ್ದಿತ್ತು. ಅಂತಹ ದುಶ್ಶಾಸನ ಅದೆಂತಹ ಮಾತಾಡಿದ್ದಾನೆ! ಇವನು ಹೇಡಿಯಾಗಲಿಲ್ಲ. ಬುದ್ಧಿಹೀನನಾಗಿದ್ದರೆ ಜಯದ್ರಥನಲ್ಲಿ ಅಂತಹ ಮಾತಾಡಲು ಸಾಧ್ಯವಿರಲಿಲ್ಲ. ದ್ರೌಪದಿಯ ತುರುಬಿಗೆ ಕೈಹಾಕಿ ಹಸ್ತಿನಾವತಿಯ ರಾಜಸಭೆಗೆ ಅವಳನ್ನು ಎಳೆದು ತರುವಂತೆ ಅವನನ್ನು ಮಾಡಿದ್ದೇ ಭ್ರಾತೃನಿಷ್ಠೆ. ಅಣ್ಣ ಹೇಳಿದರೆ ವಿಷವನ್ನೂ ಕುಡಿದಾನು. ಸಾಮ್ರಾಜ್ಯವೊಂದನ್ನು ಉಳಿಸಲು ಇಂತಹ ಕುರುಡುನಿಷ್ಠರೂ ಬೇಕಾಗುತ್ತಾರೆ. ಹಾಗೆ ನೋಡಿದರೆ ಅಪ್ಪ ಶಂತನು ಚಕ್ರವರ್ತಿಗಳಿಗಾಗಿ ತಾನು ಮಾಡಿದ ಪ್ರತಿಜ್ಞೆಯೂ ಕುರುಡು ನಿಷ್ಠೆಯಾಗುವುದಿಲ್ಲವೆ?

ಅವರು ಸಹಜ ದನಿಯಲ್ಲಿ ಹೇಳಿದರು “ದುಶ್ಶಾಸನಾ, ನೀನು ಸರಿಯಾದ ಕೃತ್ಯವನ್ನೇ ಮಾಡಿರುವೆ. ಜಯದ್ರಥ ಸಿಂಧೂ ನಗರಿಗೆ ಪಲಾಯನಗೈಯಲೆತ್ನಿಸುತ್ತಿದ್ದರೆ ನಿನ್ನೆ ರಾತ್ರಿಯೇ ಪಾಂಡವರ ಗೂಢಚರರ ಕೈಗೆ ಸಿಕ್ಕಿಬೀಳುತ್ತಿದ್ದ. ತಕ್ಷಣ ಅರ್ಜುನ ಅವನ ತಲೆ ಕಡಿದುಬಿಡುತ್ತಿದ್ದ. ಆದರೆ ಇಂದು ಜಯದ್ರಥನನ್ನು ಕೊಲ್ಲಲು ಅರ್ಜುನನಿಂದ ಹೇಗೆ ಸಾಧ್ಯವಾಯಿತು?”

ಈಗ ದುರ್ಯೋಧನ ಉತ್ತರಿಸಿದ : “ಇಂದು ಸಂಜೆಯವರೆಗೂ ಜಯದ್ರಥನೆಲ್ಲಿದ್ದಾನೆಂದು ಕಂಡುಹಿಡಿಯಲು ಅರ್ಜುನನಿಂದಾಗಿರಲಿಲ್ಲ. ನಾವು ಜಯದ್ರಥನ ಸುತ್ತ ಬಲವಾದ ರಕ್ಷಣಾವ್ಯೂಹವನ್ನು ನಿರ್ಮಿಸಿದ್ದೆವು. ಕಾಮ್ಯಕವನದಲ್ಲಿ ಭೀಮಸೇನ ಅವನ ತಲೆಬೋಳಿಸಿ ಸುಣ್ಣದ ಬೊಟ್ಟಿಟ್ಟು ಪೃಷ್ಠಕ್ಕೆ ಒದ್ದುದನ್ನು ನೆನಪಿಸಿ ಅವನಲ್ಲಿ ಪ್ರತೀಕಾರದ ಕಿಚ್ಚು ಪ್ರಜ್ವಲಿಸುವ ಪ್ರಯತ್ನ ಮಾಡಿದೆವು. ದ್ರೌಪದಿಯ ಸ್ವಯಂವರ ಕಾಲದಲ್ಲಿ ನಾವು ಅರ್ಜುನನೊಡನೆ ಹೋರಾಟಕ್ಕಿಳಿದಾಗ ಜಯದ್ರಥನ ಮಗನ ಹತ್ಯೆಯಾದುದನ್ನು ನೆನಪಿಸಿದೆವು. ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಅವನ ಕೈಯ ಬಿಲ್ಲು ಆಗಾಗ ಜಾರಿ ಕೆಳಗೆ ಬೀಳುತ್ತಿತ್ತು. ಕ್ಷಣದಿಂದ ಕ್ಷಣಕ್ಕೆ ಅವನ ಮನೋಬಲ ಕುಗ್ಗುತ್ತಾ ಹೋಗುತ್ತಿತ್ತು.”

ದುರ್ಯೋಧನ ಮಾತು ನಿಲ್ಲಿಸಿ ದೀರ್ಘವಾಗಿ ಉಸಿರೆಳೆದುಕೊಂಡ. ಅವನು ಮುಂದುವರಿಸುವ ಲಕ್ಷಣ ಕಾಣದಾದಾಗ ಭೀಷ್ಮರು ಪ್ರಶ್ನಿಸಿದರು: “ಮತ್ತೆ ಜಯದ್ರಥನ ಅಂತ್ಯವಾದದ್ದು ಹೇಗೆ?”

ದುರ್ಯೋಧನ ಭಾವನೆಗಳನ್ನು ನಿಯಂತ್ರಿಸಿಕೊಂಡು ಮುಂದುವರಿಸಿದ : “ಸೂರ್ಯ ಪಡುವಣ ಕಡಲಿನತ್ತ ಧಾವಿಸುತ್ತಿದ್ದ. ಇದ್ದಕ್ಕಿದ್ದಂತೆ ಕತ್ತಲೆಯಾವರಿಸಿದಂತಾಯಿತು. ಎರಡೂ ಸೇನೆಗಳು ಯುದ್ಧ ನಿಲ್ಲಿಸಿದವು. ಆಗ ಪಾಂಡವರ ಪಾಳಯದಿಂದ ‘ಸೂರ್ಯಾಸ್ತವಾಯಿತು. ಜಯದ್ರಥ ಬದುಕಿಕೊಂಡ’ ಎಂಬ ಬೊಬ್ಬೆ ಕೇಳಿಸಿತು. ಅದಕ್ಕೆ ನಮ್ಮ ಕಡೆಯವರು ‘ಅರ್ಜುನ ತನ್ನ ಶಪಥದಂತೆ ಅಗ್ನಿ ಪ್ರವೇಶ ಮಾಡಲಿ’ ಎಂದು ಬೊಬ್ಬಿಟ್ಟರು. ಉಭಯ ಸೇನೆಗಳ ಮಧ್ಯೆ ಪಾಂಡವ ಸೈನಿಕರು ಕ್ಷಣ ಮಾತ್ರದಲ್ಲಿ ಚಿತೆ ನಿರ್ಮಿಸಿಬಿಟ್ಟರು. ಅರ್ಜುನ ಸಾಯುವುದನ್ನು ನೋಡಿ ಆನಂದಿಸಲು ಮೂರ್ಖನಂತೆ ಜಯದ್ರಥ ನನ್ನ ಮಾತನ್ನು ಮೀರಿ ಚಿತೆಯ ಬಳಿಗೆ ಹೋಗಿಬಿಟ್ಟ. ಅದನ್ನೇ ನಿರೀಕ್ಷಿಸುತ್ತಿದ್ದ ಅರ್ಜುನ ತಕ್ಷಣ ಬಾಣ ಪ್ರಯೋಗಿಸಿ ಅವನ ಶಿರಚ್ಛೇದನ ಮಾಡಿದ. ಕುರು ಸೇನೆ ‘ಇದು ಅನ್ಯಾಯ, ಇದು ಅನ್ಯಾಯ ಎಂದು ಹೇಳುತ್ತಿರುವಾಗ ಪಡುವಣದಲ್ಲಿ ಸೂರ್ಯ ದುಂಡಗೆ, ಕೆಂಪಗೆ ಕಾಣಿಸಿಕೊಂಡ. ಅಸ್ತಮಿಸುತ್ತಿರುವ ಸೂರ್ಯನನ್ನು ಸ್ವಲ್ಪ ಹೊತ್ತು ಮೋಡ ವೊಂದು ಮರೆ ಮಾಡಿತ್ತು. ಪಾಪಿ ಅರ್ಜುನ ಬದುಕಿಕೊಂಡ.”

ತಕ್ಷಣ ಭೀಷ್ಮರೆಂದರು: “ಅವನು ಪಾಪಿಯಾಗಿರುತ್ತಿದ್ದರೆ ಬದುಕುತ್ತಿರಲಿಲ್ಲ. ನೋಡಿ ದೀಯಾ ಮಗೂ? ಸೂರ್ಯಾಸ್ತಕ್ಕೆ ಸ್ವಲ್ಪ ಮುಂಚೆ ಮೋಡವೊಂದು ಸೂರ್ಯನಿಗೆ ಅಡ್ಡ ಬಂದು ಕತ್ತಲೆಯ ಭ್ರಮೆಯನ್ನು ಹುಟ್ಟಿಸುತ್ತದೆಂದರೆ ಪ್ರಕೃತಿ ಪಾಂಡವ ಪಕ್ಷಪಾತಿಯೆಂದಂತಾಯಿತಲ್ಲಾ? ಅದನ್ನೇ ಹಿರಿಯರು ದೈವಮುನಿಯುವುದೆಂದು ಹೇಳುವುದು. ಅಂತೂ ಅರ್ಜುನ ಅಭಿಮನ್ಯು ವಧೆಗೆ ಪ್ರತೀಕಾರಗೈದಂತಾಯಿತು. ಈಗ ಯುದ್ಧ ನಿಲ್ಲಿಸಲು ಪಾಂಡವರು ಸಮ್ಮತಿಸಬಹುದು. ನಿಲ್ಲಿಸಿ ಬಿಡೋಣವೇ ಮಗೂ?”

ದುರ್ಯೋಧನನ ಸ್ವರ ಏರಿತು: “ತಾತಾ, ಪ್ರಕೃತಿ ಪಾಂಡವ ಪಕ್ಷಪಾತಿ ಎಂದಾಗಿರುತ್ತಿದ್ದರೆ ನಾನು ನಿಮ್ಮಲ್ಲಿಗೆ ಬರುತ್ತಲೇ ಇರಲಿಲ್ಲ. ನಡೆದದ್ದೊಂದು ದೊಡ್ಡ ಮೋಸ ತಾತಾ. ಕುರುಕ್ಷೇತ್ರದ ಪಶ್ಚಿಮ ತುದಿಯಲ್ಲಿ ಸೂಯಾಸ್ತದ ದಿಕ್ಕಿನಲ್ಲಿ ಕರ್ಪೂರದ ರಾಶಿಗೆ ಬೆಂಕಿ ಕೊಟ್ಟು ದಟ್ಟವಾದ ಹೊಗೆಯೆಬ್ಬಿಸಿ ಕೃತಕ ಕರಿಮೋಡ ಸೂರ್ಯನನ್ನು ಮರೆಮಾಚುವಂತೆ ಪಾಂಡವರು ಮಾಡಿದ ತಂತ್ರಕ್ಕೆ ಜಯದ್ರಥ ಬಲಿಯಾದ. ಪಾಂಡವ ಸೈನಿಕರು ಚಿತೆ ನಿರ್ಮಿಸಿದ್ದು, ಅರ್ಜುನ ಅದಕ್ಕೆ ಪ್ರದಕ್ಷಿಣೆ ಹಾಕಿದ್ದು ಆ ತಂತ್ರದ ಮುಂದುವರಿದ ಭಾಗ. ಇದನ್ನೆಲ್ಲಾ ಮಾಡಿಸಿದವನು ಆ ಕಳ್ಳ ಕೃಷ್ಣ. ಈಗ ಹೇಳಿ ತಾತಾ, ಇದು ಅಧರ್ಮವಲ್ಲವೆ? ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಇಂತಹ ಮೋಸ ಮಾಡಬಹುದೇ?”

ಭೀಷ್ಮರು ತಕ್ಷಣ ಉತ್ತರಿಸಲಿಲ್ಲ. ಅಭಿಮನ್ಯುವಿನ ವಧೆಯೇ ಅಧರ್ಮವೆಂದು ಅವರ ಮನಸ್ಸು ಹೇಳುತ್ತಿತ್ತು. ಅದನ್ನು ಪ್ರಕಟಪಡಿಸಿದರೆ ತನ್ನ ಮಗ ಲಕ್ಷಣಕುಮಾರನ ವಧೆಯನ್ನು ಉಲ್ಲೇಖಿಸಿ ಅಭಿಮನ್ಯು ವಧೆ ಅದಕ್ಕೆ ಪ್ರತೀಕಾರವೆಂದು ದುರ್ಯೋಧನ ಹೇಳುತ್ತಾನೆ. ಮೋಸದಿಂದ ಅಭಿಮನ್ಯು ವಧೆಯಾಗಿರದಿದ್ದರೆ ಜಯದ್ರಥನನ್ನು ಹಾಗೆ ಅರ್ಜುನ ವಧಿಸುತ್ತಿರಲಿಲ್ಲವೇನೊ ದ್ರೋಣಾಚಾರ್ಯರು ಸೇನಾಧ್ಯಕ್ಷರಾದ ಮೇಲೆ ಉಭಯ ಕಡೆಯವರಿಗೆ ಜಯ ಮುಖ್ಯ ವಾಗುತ್ತಿದೆ; ಜಯದ ಹಾದಿಯಲ್ಲ. ಇದನ್ನು ನಿಲ್ಲಿಸಬೇಕಾಗಿದೆ.

ನಿರ್ಧಾರದ ಸ್ವರದಲ್ಲಿ ಭೀಷ್ಮರೆಂದರು: “ಮಗೂ, ಮೋಸವೋ, ಅಧರ್ಮವೋ, ಇನ್ನು ಮಾತಾಡಿ ಪ್ರಯೋಜನವೇನು ಹೇಳು? ಕೃಷ್ಣನಂತಹ ವ್ಯೂಹತಜ್ಞನ ಬೆಂಬಲ ಪಡೆದಿರುವ ಪಾಂಡವರನ್ನು ಮಣಿಸುವುದು ಸುಲಭವಲ್ಲವೆನ್ನುವುದು ನಿನಗೀಗ ಮನವರಿಕೆಯಾಗಿರಬಹುದು. ಧರ್ಮಯುದ್ಧ ಇಂತಹ ವಿಕಾರಗಳನ್ನು ಪಡೆದುಕೊಳ್ಳುತ್ತದೆ ಎಂದಾದರೆ ಯುದ್ಧ ಮುಂದುವರಿಸುವುದರಲ್ಲಿ ಅರ್ಥವಿಲ್ಲ ಮಗೂ. ಸಂಧಾನದ ಪ್ರಯತ್ನ ಮಾಡೋಣ. ಇನ್ನೂ ಹೆಚ್ಚಿನ ಅನಾಹುತಗಳಾಗುವುದನ್ನು ತಪ್ಪಿಸೋಣ. ಕುರುಪಾಂಡವ ಪಕ್ಷದಲ್ಲಿರುವವರೆಲ್ಲರೂ ನನಗಿಂತ ಎಳೆಯರು. ಸುಖವಾಗಿ ಬದುಕಿ ಕುರುಸಾಮ್ರಾಜ್ಯ ಉಳಿಸಬೇಕಾದವರ ಮರಣ ವಾರ್ತೆಯನ್ನು ಕೇಳುವಾಗ ಈ ವೃದ್ಧಜೀವ ತಲ್ಲಣಿಸುತ್ತದೆ. ಇನ್ನು ಸಾಕು. ಹೇಗಾದರೂ ಯುದ್ಧ ನಿಲ್ಲಿಸೋಣ.”

ದುರ್ಯೋಧನ ಸಮ್ಮತಿಸಲಿಲ್ಲ: “ಎಲ್ಲಾಗುತ್ತದೆ ತಾತಾ? ಲಕ್ಷಣಕುಮಾರನ ವಧೆಗೆ ಪ್ರತೀಕಾರವಾಗಿ ಅಭಿಮನ್ಯುವನ್ನು ಕೊಲ್ಲಬೇಕಾಯಿತು. ನಮ್ಮ ಜಯದ್ರಥನ ವಧೆಗೆ ಪ್ರತೀಕಾರ ಬೇಡವೆ? ಕುರುವಂಶದ ನಿಜಪುತ್ರನಾಗಿದ್ದರೆ ಅವನಿಗೆ ಜಯದ್ರಥನನ್ನು ಕೊಲ್ಲಲು ಮನಸ್ಸು ಬರುತ್ತಿರಲಿಲ್ಲ. ದುಶ್ಶಳೆಯನ್ನು ಅವನು ತನ್ನ ತಂಗಿ ಎಂದುಕೊಂಡಿದ್ದರೆ ಹಾಗೆ ಮೋಸದಿಂದ ಜಯದ್ರಥನನ್ನು ಕೊಂದುಬಿಡುತ್ತಿದ್ದನೆ? ಇಷ್ಟಕ್ಕೂ ಅಭಿಮನ್ಯುವನ್ನು ಕೊಂದವನು ಜಯದ್ರಥನಲ್ಲ. ಕುರುವಂಶದ ಕೊನೆಯಾಗಬೇಕೆಂದೇ ಅವನು ದುಶ್ಶಳೆಯ ಗಂಡನನ್ನು ಕೊಂದಿದ್ದಾನೆ. ಈ ವಧೆಗೆ ಪ್ರತೀಕಾರವಾಗದೆ ನಾನು ದುಶ್ಶಳೆಗೆ ಮುಖ ತೋರಿಸುವಂತಿಲ್ಲ.”

ಭೀಷ್ಮರು ಅಂತರ್ಮುಖಿಯಾದರು. ಎಳವೆಯಲ್ಲಿ ಶಂತನು ಚಕ್ರವರ್ತಿಗಳು ಚಂದ್ರವಂಶದ ಮಹಾಮಹಿಮರ ಇತಿಹಾಸವನ್ನು ಹೇಳಿ ತನ್ನನ್ನು ನಿದ್ದೆ ಮಾಡಿಸುತ್ತಿದ್ದುದು ಅವರ ನೆನಪಿಗೆ ಬಂತು. ಕುರುವಂಶಾವಳಿಯ ನಕ್ಷೆಯನ್ನು ತೋರಿಸಿ ಹೆಮ್ಮೆಯಿಂದ ಶಂತನು ಚಕ್ರವರ್ತಿಗಳು ವಿವರಿಸುತ್ತಿದ್ದರು. “ಕುರು ಮಹಾರಾಜನ ಐದನೆಯ ತಲೆಮಾರಿನ ಪರ್ಯಾಶ್ರವಸರು ನಿನ್ನ ಪಿತಾಮಹ. ನೀನು ಕುರುವಂಶದ ಏಳನೆಯ ತಲೆಮಾರಿನವನು. ಈ ನಕ್ಷೆಯನ್ನು ನಿನ್ನ ಪುತ್ರ, ಪೌತ್ರರಿಗೆ ಅಭಿಮಾನದಿಂದ ತೋರಿಸು. ಕುರುವಂಶ ಆಚಂದ್ರಾರ್ಕವಾಗಿರಲಿ.” ಶಂತನು ಚಕ್ರವರ್ತಿಗಳ ಆಶಯ ಫಲಿಸಲೇ ಇಲ್ಲ. ಕುರುವಂಶ ವಿಚಿತ್ರವೀರ್ಯನಲ್ಲಿಗೆ ನಿಂತು ಹೋಯಿತು. ಧೃತರಾಷ್ಟ್ರ ಮತ್ತು ಪಾಂಡು ಬೀಜ ಕ್ಷೇತ್ರ ವಾದದ ಪ್ರಕಾರ ಕುರುವಂಶೀಯರಾಗುವುದಿಲ್ಲ. ಈ ದುರ್ಯೋಧನ ಅರ್ಜುನನನ್ನು ಕುರುವಂಶದ ನಿಜಪುತ್ರನಲ್ಲವೆನ್ನುತ್ತಾನೆ. ಹಾಗೆ ನೋಡಿದರೆ ದುರ್ಯೋಧನನೂ ಕುರುವಂಶದ ನಿಜಪುತ್ರನಲ್ಲ!

ಈಗ ಇವನು ದುಶ್ಶಳೆ ವಿಧವೆಯಾದುದಕ್ಕೆ ಪ್ರತೀಕಾರ ಮಾಡಹೊರಟಿದ್ದಾನೆ. ಏನು ಮಾಡಲಾದೀತು ಇವನಿಂದ? ಮಗನನ್ನು ಕಳಕೊಂಡದ್ದಾಗಿದೆ. ಸೋದರರನ್ನು ಒಬ್ಬೊಬ್ಬರನ್ನೇ ಕಳಕೊಳ್ಳುತ್ತಿದ್ದಾನೆ. ಈಗ ತಂಗಿಯ ಗಂಡನನ್ನು ಕಳಕೊಂಡಿದ್ದಾನೆ. ಹಟವನ್ನು ಮಾತ್ರ ಕಳಕೊಂಡಿಲ್ಲ. ಪ್ರತೀಕಾರ ಮಾಡುತ್ತಾನಂತೆ. ಏನು ಮಾಡಿಯಾನು? ಲಕ್ಷಣಕುಮಾರನ ವಧೆಗೆ ಪ್ರತೀಕಾರವಾಗಿ ಅಭಿಮನ್ಯುವನ್ನು ಅಧರ್ಮ ಮಾರ್ಗದಲ್ಲಿ ಹೇಗೋ ಕೊಲ್ಲಿಸಿದ. ಜಯದ್ರಥನ ವಧೆಗೆ ಪ್ರತೀಕಾರವಾಗಿ ಇವನು ಅರ್ಜುನನನ್ನು ಕೊಲ್ಲಿಸುತ್ತಾನಾ? ಅರ್ಜುನನನ್ನು ಕೊಲ್ಲಬಲ್ಲ ಧನುರ್ವಿದ್ಯಾ ನಿಪುಣರು ವರ್ತಮಾನದಲ್ಲಿ ಆರ್ಯಾವರ್ತದಲ್ಲಿ ಯಾರಾದರೂ ಇದ್ದಾರಾ?

ಭೀಷ್ಮರು ಆತಂಕದಿಂದ ಪ್ರಶ್ನಿಸಿದರು: “ಏನು ಮಾಡುತ್ತಿ ಮಗೂ? ಜಯದ್ರಥನನ್ನು ಕೊಂದವನು ಅರ್ಜುನ. ನೀನು ಅರ್ಜುನನನ್ನು ಕೊಲ್ಲಿಸುತ್ತೀಯಾ?”

ದುರ್ಯೋಧನನೆಂದ: “ಒಂದು ಪ್ರಯತ್ನ ತಾತಾ. ಇಂದು ರಾತ್ರಿ ಪಾಂಡವ ಪಾಳಯಕ್ಕೆ ನಮ್ಮ ಸೇನೆಯನ್ನು ನುಗ್ಗಿಸಬೇಕೆಂದಿದ್ದೇವೆ. ಈ ರಾತ್ರಿ ಯುದ್ಧದ ಸಲಹೆ ನೀಡಿದ್ದು ಇವ ದುಶ್ಶಾಸನ. ಗುರು ದ್ರೋಣಾಚಾರ್ಯರ ಮತ್ತು ಕರ್ಣನ ಮುಂದೆ ಈ ಸಲಹೆಯನ್ನು ಮಂಡಿಸಿದಾಗ್ ‘ಪಿತಾಮಹರಲ್ಲಿ ಒಂದು ಮಾತು ಕೇಳಿ ಮುಂದುವರಿಯುವಾ’ ಎಂದರು. ನನಗೂ ಅದು ಸರಿ ಕಂಡದ್ದಕ್ಕೆ ನಿಮ್ಮಲ್ಲಿಗೆ ಬಂದಿದ್ದೇವೆ. ಅಪ್ಪಣೆ ಕೊಡಬೇಕು ತಾತಾ.”

ಭೀಷ್ಮರಿಗೆ ಎಲ್ಲವೂ ಸ್ಪಷ್ಟವಾಗತೊಡಗಿತು. ದುರ್ಯೋಧನನೊಡನೆ ಇಂದು ಎಂದೂ ಬಾರದ ದುಶ್ಶಾಸನ ಬಂದ. ಗುರು ದ್ರೋಣರು, ಮಿತ್ರ ಕರ್ಣ, ಶಲ್ಯ ಭೂಪತಿ – ಯಾರೂ ಬರಲಿಲ್ಲ. ನಿಯಮದ ಪ್ರಕಾರ ಕುರುಕ್ಷೇತ್ರದಲ್ಲಿ ರಾತ್ರಿಯುದ್ಧ ನಿಷಿದ್ಧ. ವಿಶ್ರಾಂತಿಯ ಸಮಯದಲ್ಲಿ ಆಕ್ರಮಣ ಮಾಡಕೂಡದೆನ್ನುವುದು ಯುದ್ಧ ಪೂರ್ವದಲ್ಲಾದ ನಿರ್ಣಯ. ಈಗ ದುರ್ಯೋಧನ ರಾತ್ರಿಯುದ್ಧದ ಮಾತುಗಳನ್ನಾಡುತ್ತಿದ್ದಾನೆ. ಖಾಲಿ ತಲೆಯವನೆಂಬ ಸಂದೇಹಕ್ಕೊಳಗಾಗಿದ್ದ ದುಶ್ಶಾಸನನ ತಲೆಯಲ್ಲಿ ಪ್ರಳಯಾಂತಕ ಯೋಚನೆಯೊಂದು ರೂಪುಗೊಂಡಿದೆ. ದುರ್ಯೋಧನನಿಗದು ಇಷ್ಟವಾಗಿದೆ. ದ್ರೋಣರಿಗೆ, ಕರ್ಣನಿಗೆ ಇದು ಪಥ್ಯವಾಗದ ವಿಚಾರವಾಗಿರಬೇಕು. ಅದಕ್ಕೇ ಇಲ್ಲಿಗೆ ಬರುವುದನ್ನೂ ತಪ್ಪಿಸಿ ಸಮಸ್ತ ಭಾರವನ್ನು ನನ್ನ ಮೇಲೆ ಹೇರಿದ್ದಾರೆ. ನಾನು ಒಪ್ಪಿಬಿಟ್ಟರೆ ಸಮರ ನಿಯಮೋಲ್ಲಂಘನೆಯ ಅಪವಾದವನ್ನು ನನಗೆ ವರ್ಗಾಯಿಸುತ್ತಾರೆ. ರಾತ್ರಿ ಯುದ್ಧ ಧರ್ಮಬಾಹಿರವೆಂಬುದನ್ನು ಪರೋಕ್ಷವಾಗಿ ಹೀಗೆ ಸೂಚಿಸಿದ್ದಾರೆ. ದುರ್ಯೋಧನನೆದುರು ಅದನ್ನು ಹೇಳಲು ಹಿಂಜರಿದಿದ್ದಾರೆ. ದುರ್ಯೋಧನನಿಗೆ ಅವರ ಭಾವವನ್ನು ಅರ್ಥ ಮಾಡಿ ಕೊಳ್ಳಲಾಗಿಲ್ಲ. ಈಗ ಧರ್ಮಬದ್ಧತೆಯ ಮಾತುಗಳನ್ನಾಡಿದರೆ ಲಕ್ಷಣಕುಮಾರನನ್ನು, ಜಯದ್ರಥನನ್ನು ಕಳಕೊಂಡಿರುವ ದುರ್ಯೋಧನ ಕಿವಿಗೊಡುವ ಸ್ಥತಿಯಲ್ಲಿರಲು ಸಾಧ್ಯವಿಲ್ಲ.

ಬಹಳ ಎಚ್ಚರದಿಂದ ಭೀಷ್ಮರು ಮಾತಾಡಿದರು: “ಮಗೂ, ಈಗ ಕುರುಸೇನಾಧಿಪತಿಯಾಗಿರುವವರು ಗುರುದ್ರೋಣರು. ಯುದ್ಧದ ಈ ಹಂತದಲ್ಲಿ ಸೇನಾಧಿಪತಿಯೇ ನಿರ್ಣಯ ಕೈಗೊಳ್ಳಬೇಕು. ಬದಲಾಗುತ್ತಿರುವ ಸಮರ ಪರಿಸ್ಥತಿಗನುಗುಣವಾಗಿ ಸಾಮಯಿಕ ತೀರ್ಮಾನ ಕೈಗೊಳ್ಳಲು ಈಗ ಅವರಿಂದ ಮಾತ್ರ ಸಾಧ್ಯ. ಅವರು ಹೇಳಿದಂತೆ ನೀವು ನಡೆದು ಕೊಳ್ಳಬೇಕು. ನನ್ನ ದೇಹ, ಮನಸ್ಸು ಎರಡೂ ಜರ್ಜರಿತವಾಗಿವೆ. ನನ್ನನ್ನು ಯಾಕೆ ಅನಾವಶ್ಯಕ ಮಧ್ಯಕ್ಕೆಳೆಯುತ್ತೀಯೆ?”

ದುರ್ಯೋಧನ ಮೆಲುದನಿಯಲ್ಲೆಂದ: “ತಾತಾ, ಹೆಬ್ಬೆರಳನ್ನು ಕಳಕೊಂಡ ಗುರುಗಳು ಮಾನಸಿಕ ಕ್ಷೋಭೆಗೆ ತುತ್ತಾಗಿದ್ದಾರೆ. ನಿನ್ನೆ ಸೇನಾಧಿಪತ್ಯವನ್ನು ಕರ್ಣನಿಗೆ ನೀಡುತ್ತೇನೆಂದರು. ಕರ್ಣ ಒಪ್ಪಲಿಲ್ಲ. ಅಂತರಂಗದ ಮಾತುಗಳನ್ನು ಹೇಳುತ್ತಿದ್ದೇನೆ ತಾತಾ. ನೀವಿರುವವರೆಗೆ ಕುರುಸೇನೆಗೆ ಅನ್ಯರು ಅಧಿಪತಿಗಳಾಗಲು ಹೇಗೆ ಸಾಧ್ಯ? ನೀವು ರಾತ್ರಿಯುದ್ಧಕ್ಕೆ ಅನುಮತಿ ನೀಡಬೇಕು. ಕುರುಸೇನೆಯ ವಿಜಯಕ್ಕೆ ನಿಮ್ಮ ಆಶೀರ್ವಾದ ಬೇಕು.”

ಭೀಷ್ಮರಿಗೆ ತಳಮಳವಾಯಿತು. ಈ ದುರ್ಯೋಧನನಿಗೆ ಬುದ್ಧಿಯ ಮಾತು ಇಷ್ಟ ವಾಗುವುದಿಲ್ಲ. ಅವನ ಕೃತ್ಯಗಳಿಗೆ ನನ್ನ ಒಪ್ಪಿಗೆಯ ಮುದ್ರೆ ಮಾತ್ರ ಸಾಕು. ಏನು ಮಾಡುವುದು? ಪರಿಸ್ಥತಿಯನ್ನು ಉಪಾಯದಿಂದ ನಿಭಾಯಿಸಬೇಕೆಂದುಕೊಂಡು ಭೀಷ್ಮರೆಂದರು: “ಮಗೂ, ನಿನ್ನ ತಾತ ಏನನ್ನು ಹೇಳಬಹುದೆಂಬುದು ಗೊತ್ತಿದ್ದೂ ನನ್ನ ಅನುಮತಿ ಯಾಚಿಸುತ್ತಿದ್ದಿ. ಯುದ್ಧಪೂರ್ವದಲ್ಲಿ ನಾವು ಮಾಡಿಕೊಂಡ ಒಪ್ಪಂದದ ಪ್ರಕಾರ ರಾತ್ರಿಯುದ್ಧಕ್ಕೆ ಅವಕಾಶವಿಲ್ಲ. ಶತ್ರು ವಿಶ್ರಾಂತಿಯಲ್ಲಿರುವಾಗ ಆಕ್ರಮಣ ಮಾಡುವುದು ಅಧರ್ಮವಾಗುತ್ತದೆ.”

ದುರ್ಯೋಧನ ಮತ್ತೆ ಸಿಡುಕಿದ: “ಜಯದ್ರಥನನ್ನು ಕೊಲ್ಲುವುದಕ್ಕೆ ಪಾಂಡವರು ವಾಮ ಮಾರ್ಗವನ್ನು ಹಿಡಿದರಲ್ಲಾ, ಅದು ಅಧರ್ಮವಲ್ಲವೇ ತಾತಾ? ಅವರು ಧರ್ಮಬಾಹಿರ ಕೃತ್ಯದಿಂದ ವಿಜಯಿಗಳಾಗುತ್ತಾರೆ ಎಂದಾದರೆ ನಾವ್ಯಾಕೆ ರಾತ್ರಿಯುದ್ಧ ಮಾಡಿ ವಿಜಯಿಗಳಾಗಬಾರದು? ಪ್ರೇಮದಲ್ಲಿ ಮತ್ತು ಯುದ್ಧದಲ್ಲಿ ಎಲ್ಲವೂ ಕ್ಷಮ್ಯ ಎಂಬ ಮಾತು ನಿಮಗೂ ಗೊತ್ತಿದೆ. ನಾವು ಹೇಗಾದರೂ ಗೆಲ್ಲಲೇಬೇಕು.”

ಅವನಿಗೇನು ಉತ್ತರ ನೀಡುವುದೆಂದು ಭೀಷ್ಮರಿಗೆ ತಕ್ಷಣ ಹೊಳೆಯಲಿಲ್ಲ. ಅವನ ದುಷ್ಕೃತ್ಯಗಳಲ್ಲಿ ತನ್ನನ್ನು ಪಾಲುದಾರನನ್ನಾಗಿಸುವ ಅವನ ಯತ್ನದ ಬಗ್ಗೆ ಅವರಲ್ಲಿ ಖೇದ ಮೂಡಿತು. ಅಧರ್ಮಕೃತ್ಯಕ್ಕೆ ತಾತನ ಸಮ್ಮತಿಯಿಲ್ಲವೆನ್ನುವುದು ಗೊತ್ತಾದ ಬಳಿಕವೂ ಒತ್ತಡ ಹಾಕುತ್ತಿದ್ದಾನೆ. ಹಸ್ತಿನಾವತಿಯ ರಾಜಸಭೆಗೆ ಮೃಗೀಯವಾಗಿ ದ್ರೌಪದಿಯನ್ನು ಎಳೆದು ತರಿಸುವಾಗ, ವಸ್ತ್ರಾಪಹರಣಗೈದು ಅಪಮಾನಿಸಲೆಳಸುವಾಗ ಜಾಗೃತವಾಗದ ಪಾಪಪ್ರಜ್ಞೆ ಈಗ ಕಾಡಿತೆ? ಅಥವಾ ರಾತ್ರಿ ಯುದ್ಧದಲ್ಲಿ ಉಭಯ ಪಾಳಯದಲ್ಲಿ ಸಂಭವಿಸಬಹುದಾದ ಸಾವುಗಳ ಪಾಪವನ್ನು ವರ್ಗಾಯಿಸಲು ಇವನಿಗೆ ಬಲಿಪಶುವೊಂದು ಬೇಕಾಗಿದೆಯೆ?

ಈಗಲೂ ಭೀಷ್ಮರು ತಾಳ್ಮೆಯಿಂದಲೇ ಹೇಳಿದರು: “ಮಗೂ, ಪಾಂಡವರು ಮಾಡಿದ್ದು ಧರ್ಮವೆಂದಾಗಲೀ, ಸರಿಯೆಂದಾಗಲೀ ನಾನೆಲ್ಲಿ ಸಮರ್ಥಿಸಿದೆ? ಜಯದ್ರಥನ ವಧೆಗೆ ಅವರು ಅನುಸರಿಸಿದ ವಿಧಾನ ಸರಿಯಲ್ಲ. ಪ್ರತಿಪಕ್ಷೀಯರ ಅಧರ್ಮ ಕೃತ್ಯಗಳು ನಮ್ಮ ಧರ್ಮಬಾಹಿರ ಕೃತ್ಯಗಳಿಗೆ ಸಮರ್ಥನೆಯಾಗಬಾರದು. ಪಾಂಡವರು ಈಗಲೂ ಜನಸಾಮಾನ್ಯರು. ನೀನಾದರೋ ನಾಡನ್ನಾಳುವ ಚಕ್ರವರ್ತಿಯ ಸುಪುತ್ರ. ಮುಂದೆ ಕುರು ಚಕ್ರಾಧಿಪತ್ಯದ ಸಿಂಹಾಸನವನ್ನು ಅಲಂಕರಿಸಲಿರುವವನು. ಪ್ರಜೆಗಳು ಮಾಡುವ ತಪ್ಪಿಗೆ ಶಿಕ್ಷಯಿದೆ, ಕ್ಷಮೆಯಿದೆ. ಪ್ರಭುಗಳು ಮಾಡುವ ತಪ್ಪಿಗೆ ಶಿಕ್ಷ ನೀಡುವವರು ಯಾರು? ಪ್ರಭುಗಳ ತಪ್ಪುಗಳು ಅಕ್ಷಮ್ಯ ಮತ್ತು ಅನಾಹುತಕಾರಿ. ಆ ತಪ್ಪುಗಳು ಸಾರ್ವತ್ರಿಕತೆಯನ್ನು ಪಡೆದು ಆಚರಣೆಯಲ್ಲಿ ಉಳಿದು ರೂಢಧರ್ಮವಾಗಿ ಬಿಡುತ್ತವೆ. ಶಾಸ್ತ್ರವನ್ನು ಬದಲಾಯಿಸಬಹುದು. ರೂಢಿಯನ್ನು ಅಷ್ಟು ಸುಲಭವಾಗಿ ಬದಲಾಯಿಸಲು ಸಾಧ್ಯವೆ? ಮಗೂ, ನೀನು ಹಟ ಮಾಡಕೂಡದು. ರಾತ್ರಿ ಯುದ್ಧಕ್ಕೆ ನನಗೆ ಒಂದೇ ಒಂದು ಸಮರ್ಥನೆ ಕಾಣಿಸುತ್ತಿಲ್ಲ.”

ದುರ್ಯೋಧನ ಸೋಲೊಪ್ಪಿಕೊಳ್ಳಲಿಲ್ಲ: “ತಾತಾ, ಕುರು ಸಾಮ್ರಾಜ್ಯದ ಭಾವೀ ಸಾರ್ವಭೌಮನನ್ನು ನಿರ್ಧರಿಸುವ ಮಹಾಯುದ್ಧವಿದು. ಲೆಕ್ಕಹಾಕಿ ನೋಡಿ. ಪಾಂಡವರು ಕಳಕೊಂಡದ್ದು ಒಬ್ಬ ಅಭಿಮನ್ಯುವನ್ನು ಮಾತ್ರ. ನಾನು ಮಗನನ್ನು, ತಮ್ಮಂದಿರನ್ನು ಮತ್ತೀಗ ಜಯದ್ರಥನನ್ನು ಕಳಕೊಂಡೆ. ಸಿಂಹಾಸನ ಕುರುವಂಶೀಯರಲ್ಲದವರ ಪಾಲಾಗುವುದನ್ನು ತಪ್ಪಿಸುವ ನನ್ನ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಬೇಕು ತಾತಾ. ಪಾಂಡವರಲ್ಲಿ ಒಬ್ಬ ಸತ್ತರೆ ನಾವು ಗೆದ್ದಂತೆಯೆ. ರಾತ್ರಿಯುದ್ಧದಲ್ಲಿ ಒಬ್ಬನನ್ನಾದರೂ ಕೊಲ್ಲಬಹುದು. ಕುರುಸಾಮ್ರಾಜ್ಯ ಪಾಂಡುವಿನ ವೀರ್ಯಕ್ಕೆ ಜನಿಸದವರ ಪಾಲಾಗುವುದನ್ನು ತಪ್ಪಿಸಬಹುದು.”

ಇವನ ಅಪ್ಪ ಧೃತರಾಷ್ಟ್ರ ಅಂಬಿಕೆಯಲ್ಲಿ ದ್ವೈಪಾಯನರಿಗೆ ಜನಿಸಿದವನು. ಅಂಬಿಕೆ ಕುರು ವಂಶೀಯಳಲ್ಲ. ದ್ವೈಪಾಯನರು ಪರಾಶರ ಮಹಾಮುನಿಗಳ ಪುತ್ರ. ಪರಾಶರರು ಶೂದ್ರರೋ, ಬ್ರಾಹ್ಮಣರೋ ಯಾರಿಗೆ ಗೊತ್ತು? ಋಷಿಮೂಲವನ್ನು ಕೆದಕುವುದು ತಪ್ಪು. ಪಾಂಡು ಅಂಬಾಲಿಕೆಯ ಹೊಟ್ಟೆಯಲ್ಲಿ ದ್ವೈಪಾಯನರಿಗೆ ಜನಿಸಿದವ. ಅವನೂ ಕುರುವಂಶೀಯನಾಗುವುದಿಲ್ಲ. ಹುಟ್ಟು ಕುರುಡ ಧೃತರಾಷ್ಟ್ರ ಜನಿಸುವಾಗ ಆರೋಗ್ಯಪೂರ್ಣನಾಗಿದ್ದ. ಕಣ್ಣು ಕಾಣುವುದಿಲ್ಲವೆಂಬುದನ್ನು ಬಿಟ್ಟರೆ ಅವನಲ್ಲಿ ಬೇರಾವ ಊನವೂ ಇರಲಿಲ್ಲ. ಹುಟ್ಟಿನಲ್ಲಿ ಹಿರಿಯವನಾದ ಧೃತರಾಷ್ಟ್ರ ಕುರು ಸಾಮ್ರಾಜ್ಯದ ಚಕ್ರವರ್ತಿಯಾದ. ಗಾಂಧಾರರಾಜ ಸಬಲನ ಹನ್ನೊಂದು ಪುತ್ರಿಯರನ್ನು ವಿವಾಹವಾಗಿ ನೂರಾ ಒಂದು ಮಕ್ಕಳನ್ನು ಪಡೆದ. ಅರಮನೆಯ ದಾಸಿಯರಿಗೂ ಸಂತಾನ ಭಾಗ್ಯ ಕರುಣಿಸಿದ್ದ. ಅವನಿಂದ ಸಾಧ್ಯವಾಗುತ್ತಿದ್ದುದು ಅದೊಂದು ಕಾರ್ಯ ಮಾತ್ರ. ಆದರೆ ದುರ್ದೈವಿ ಪಾಂಡು ರೋಗಿಷ್ಠನಾಗಿ ಹುಟ್ಟಿ, ರೋಗಿಷ್ಠನಾಗಿಯೇ ಬೆಳೆದ. ಕುಂತೀ ಭೋಜನ ಸಾಕು ಮಗಳು. ಕುಂತಿಯನ್ನು ವಿವಾಹವಾದ. ಮಕ್ಕಳಾಗಲಿಲ್ಲ. ಕ್ಷೇತ್ರ ದೋಷವಿರಬಹುದೆಂದು ಮದ್ರದೇಶದ ರಾಜಕುಮಾರಿ ಮಾದ್ರಿಯೊಡನೆ ವಿವಾಹವೇರ್ಪಡಿಸಿದರೂ ಪ್ರಯೋಜನವಾಗಲಿಲ್ಲ. ದೋಷ ಬೀಜದ್ದೇ. ಪಾಂಡುವಿಗೆ ಸಂತಾನ ಶಕ್ತಿಯೇ ಇರಲಿಲ್ಲ. ಬಹಳ ಶ್ರಮಪಟ್ಟು ಮಾಡಿಸಿದ ಕಾಯಕಲ್ಪ ಚಿಕಿತ್ಸೆ ಫಲಕಾರಿಯಾಗಲಿಲ್ಲ. ದ್ವೈಪಾಯನರ ಬೀಜದ ಫಲಗಳಲ್ಲಿ ಒಂದು ಇನ್ನೊಂದಕ್ಕಿಂತ ಯಾಕೆ ಹೀಗೆ ಭಿನ್ನವಾಯಿತು? ಪಾಂಡುವಿನ ಅಪ್ಪಣೆಯಿಂದಲೇ ಕುಂತಿ ಅನ್ಯರಿಂದ ಯುಧಿಷ್ಠಿರ, ಭೀಮಸೇನ ಮತ್ತು ಅರ್ಜುನರನ್ನು ಪಡೆದದ್ದು; ಮಾದ್ರಿ ನಕುಲಸಹದೇವರನ್ನು ಪಡೆದು ಕ್ಷೇತ್ರಕ್ಕೆ ನ್ಯಾಯವೊದಗಿಸಿದ್ದು. ಪತಿಗೆ ಸಂತಾನಶಕ್ತಿ ಇಲ್ಲದಿರುವಾಗ ಅನ್ಯರಿಂದ ಪಡೆಯುವ ಮಕ್ಕಳನ್ನು ಧರ್ಮಬಾಹಿರ ಸಂತಾನವೆನ್ನುವಂತಿಲ್ಲ. ಪಾಂಡವರನ್ನು ಅನೈತಿಕ ಸಂತಾನವೆಂದು ಜರೆಯುವುದರಲ್ಲಿ ದುರ್ಯೋಧನ ಸಂತೋಷ ಕಾಣುತ್ತಿದ್ದ. ಸೃಷ್ಟಿಕ್ರಿಯೆ ಸಹಜವಾದದ್ದು. ಅದರಲ್ಲಿ ನೈತಿಕ‌ಅನೈತಿಕ ಎಂಬುದಿರಲು ಸಾಧ್ಯವಿಲ್ಲವೆಂದು ಭೀಷ್ಮರಿಗೆ ಯಾವಾಗಲೂ ಅನ್ನಿಸುತ್ತಿತ್ತು. ಪಿತೃತ್ವ ಅನ್ನುವುದು ನಂಬಿಕೆ. ಮಾತೃತ್ವ ಮಾತ್ರ ವಾಸ್ತವವಾದುದು ಎಂದು ಅವರೆಷ್ಟು ಬಾರಿ ಹೇಳಿದ್ದರೂ ದುರ್ಯೋಧನ ಪಾಂಡವರನ್ನು ಅನೈತಿಕ ಸಂತಾನವೆಂದು ಕರೆಯುವುದನ್ನು ನಿಲ್ಲಿಸಿರಲಿಲ್ಲ.

ದೃಢವಾದ ಧ್ವನಿಯಲ್ಲಿ ಭೀಷ್ಮರೆಂದರು. “ಮಗೂ, ಜೀವನದಲ್ಲಿ ಛಲ ಸಾಧಿಸುವುದನ್ನು ಮಹತ್ತಾದುದೆಂದು ಭಾವಿಸಿದವನು ನೀನು. ವಿವೇಕಕ್ಕೆ ಕಿವಿಗೊಟ್ಟವನಲ್ಲ. ಆಚಾರ್ಯನೆಂದು ಕರೆಸಿಕೊಳ್ಳುವ ನಾನು ಅಧರ್ಮವೆಂದು ತಿಳಿದೂ ರಾತ್ರಿಯ ಹೊತ್ತು ಪಾಂಡವ ಪಾಳಯಕ್ಕೆ ಮುತ್ತಿಗೆ ಹಾಕುವುದಕ್ಕೆ ಅನುಮತಿ ಕೊಡಲು ಹೇಗೆ ಸಾಧ್ಯ? ಇಂತಹ ವಿನಾಶಕಾರೀ ಯೋಚನೆಯನ್ನು ಬಿಡು. ಮೋಸದಿಂದ ತಾತ್ಕಾಲಿಕ ವಿಜಯ ಗಳಿಸಬಹುದು. ಆದರೆ ಅದರಿಂದ ಸುಖ ಸಿಗಲಾರದು. ಸುಖವೇ ಇಲ್ಲದ ಮೇಲೆ ಆನಂದವೆಲ್ಲಿಂದ ಸಿಕ್ಕೀತು? ಸುಮ್ಮನೆ ನನ್ನಿಂದ ಹೇಳಿಸಿಕೊಳ್ಳಬೇಡ. ನಾಳೆ ಪ್ರಾತಃಕಾಲ ಧರ್ಮಯುದ್ಧ ಆರಂಭಿಸು. ನಿನ್ನದು ಧರ್ಮವೆಂದಾದರೆ ನಿನಗೆ ವಿಜಯ ಸಿಕ್ಕಿಯೇ ಸಿಗುತ್ತದೆ.”

ದುರ್ಯೋಧನ ಕಾಲಿಗೆರಗಿದ. “ತಾತಾ, ಆ ಪಾಂಡವರಿಗಾದರೆ ತಂತ್ರ, ಪ್ರತಿತಂತ್ರ, ಯುದ್ಧವ್ಯೂಹಗಳನ್ನು ಹೇಳಿಕೊಡಲು ಒಬ್ಬ ಕೃಷ್ಣನಿದ್ದಾನೆ. ನೀವು ಅವನಿಗಿಂತ ವಿದ್ಯೆ, ವಯಸ್ಸು, ಅನುಭವ ಮತ್ತು ಜ್ಞಾನದಲ್ಲಿ ಹಿರಿಯರು. ನಿಮ್ಮಷ್ಟು ಧರ್ಮಸೂಕ್ಷ್ಮಗಳು ಗುರುಗಳಿಗೆ, ಕರ್ಣನಿಗೆ ತಿಳಿದಿಲ್ಲ. ನೀವು ರಾತ್ರಿಯುದ್ಧಕ್ಕೆ ಅನುಮತಿ ನೀಡಲಾರಿರೆಂದು ನನ್ನ ಮನಸ್ಸು ಹೇಳುತ್ತಿತ್ತು. ಆದರೆ ತಾತಾ, ನೈತಿಕ ನೆಲೆಗಟ್ಟು ಇಲ್ಲದೆ ಯಾವುದೇ ಕಾರ್ಯಕ್ಕೆ ಮುಂದಾಗಲು ಸಾಧ್ಯವಾಗುವುದಿಲ್ಲ. ನೀವು ಹಸ್ತಿನಾವತಿಯ ನೈತಿಕ ನೆಲೆಗಟ್ಟು. ನಿಮ್ಮನ್ನು ಬಿಟ್ಟರೆ ನನ್ನನ್ನು ಉದ್ಧರಿಸಬಲ್ಲವರು ಯಾರಿದ್ದಾರೆ ತಾತಾ? ರಾತ್ರಿಯ ಯುದ್ಧಕ್ಕೆ ಅನುಮತಿ ನೀಡಲು ನಿಮ್ಮ ಮನಸ್ಸು ಒಪ್ಪದಿದ್ದರೆ ಬೇಡ. ಕೊನೆಯ ಪಕ್ಷ ಒಂದು ಆಶೀರ್ವಾದವನ್ನಾದರೂ ಮಾಡಿ ನಮ್ಮನ್ನು ಕಳುಹಿಸಿಕೊಡಿ.”

ಭೀಷ್ಮರು ದುರ್ಯೋಧನನ ತಲೆ ಸವರಿ ಧರ್ಮಕ್ಕೆ ಜಯವಾಗಲಿ ಎಂದು ಆಶೀರ್ವದಿಸಿದರು. ಬಿಡಾರದಿಂದ ಹೊರಹೋಗುವಾಗ ದುರ್ಯೋಧನನ ಮುಖ ಗಂಭೀರವಾಗಿತ್ತು. ಈವರೆಗೆ ಮಾಯವಾದಂತಿದ್ದ ಭೀಷ್ಮರ ಎದೆನೋವು ಮತ್ತೆ ಕಾಣಿಸಿಕೊಂಡಿತು. ಅದರೊಂದಿಗೆ ನೆನಪುಗಳು ಹಿಂದಕ್ಕೋಡಿ ಆ ಮಾತುಗಳು ಗುಂಯಿಗುಡತೊಡಗಿದವು: “………. ಗಂಡೂ ಅಲ್ಲದ ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ.”
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ದೆಸೆ ತಿರುಗಿ ಮೇಲೆದ್ದ ಜನ ತಮಗೆ ಗಿಟ್ಚಿರುವ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys