ಶಂಕೆಯೆಂಬ ಬೆಂಕಿ ಸೋಕಿ
ಬೇಯುವಾ ಮನ
ಮೌನವಾಗಿ ನರಳುತಿದೆ
ಉರಿದು ಹೂ ಬನ

ಪಚ್ಚೆ ಕಾಡ ನಡುವೆ ಹರಿವ
ಸ್ವಚ್ಛಧಾರೆಗೆ
ನೂರು ತಿರುವು ನೂರು ಇಳಿವು
ಒಲುಮೆ ಬಾಳಿಗೆ!

ಜೀವ ಜೀವ ಹಾಡಿ ಹೆಣೆದ
ಒಲುಮೆ ಗೂಡಿದು
ಬರಿದಾಗಿದೆ ಹೊಯ್ದಾಡಿದೆ
ಸಣ್ಣ ಗಾಳಿಗೂ!

ದುಃಖದ ಹಿಮ ಸುರಿದು ಕುಸಿದ
ಮೊಲ್ಲೆ ಹೂವನು
ಪ್ರೇಮದ ಹೊಂಬಿಸಿಲು ಹರಿಸಿ
ಕಾಯ್ದುಕೊಳುವೆನು
*****

ಪುಸ್ತಕ: ನಿನಗಾಗೇ ಈ ಹಾಡುಗಳು