ಚಾಮರಾಜ ಒಡೆಯರ ತರುವಾಯ ಇಮ್ಮಡಿರಾಜ ಒಡೆಯ ರೆಂಬವರು ದೊರೆಗಳಾದರು. ಇವರು ವಯಸ್ಸಿನಲ್ಲಿ ಇನ್ನೂ ಚಿಕ್ಕವರಾಗಿದ್ದುದರಿಂದ ಅಧಿಕಾರವೆಲ್ಲವನ್ನೂ ದಳವಾಯಿ ಪದವಿಯಲ್ಲಿದ್ದ ವಿಕ್ರಮರಾಜನೇ ವಹಿಸಿದ್ದನು. ಆಡಳಿತವೆಲ್ಲವೂ ತನ್ನ ಕೈಯಲ್ಲಿಯೇ ಇದ್ದುದನ್ನು ಕಂಡು ವಿಕ್ರಮರಾಯನು ದುರಾಸೆಗೊಳಗಾದನು. ಸೈನ್ಯವು ತನ್ನ ಅಧೀನವಾಗಿತ್ತು; ಅರಮನೆಯಲ್ಲಿ ತಾನೇ ತಾನಾಗಿದ್ದನು. ಆದ್ದರಿಂದ ಚಿಕ್ಕ ದೊರೆಗಳನ್ನು ಅರಮನೆಯಲ್ಲಿಯೇ ಸೆರೆಯಿಟ್ಟನು. ಇಮ್ಮಡಿ ರಾಜ ಒಡೆಯರು ಚಿಕ್ಕವರಾದರೂ ಜಾಣರೂ ಸಮರ್ಥರೂ ಆಗಿದ್ದರು. ಅಧಿಕಾರವನ್ನು ತಾವೇ ಮಾಡಲುದ್ಯುಕ್ತರಾದರು. ಆಗ ವಿಕ್ರಮರಾಯನು ಗೋಪ್ಯವಾಗಿ ರಾಜರಿಗೆ ವಿಷವಿಡಿಸಿ ಕೊಲ್ಲಿಸಿದನು.
ಮುಂದೆ ಪಟ್ಟಕ್ಕೆ ಬರತಕ್ಕವರು ಬೆಟ್ಟದ ಚಾಮರಾಜ ಒಡೆಯರ ಮಕ್ಕಳು ಕಂಠೀರವ ನರಸರಾಜ ಒಡೆಯರವರು. ಇವರು ಮೈಸೂರಿನಲ್ಲಿರದೆ ತಂದೆಯವರೊಡನೆ ತೆರಕಣಾಂಬಿಯಲ್ಲಿರುತ್ತಿದ್ದರು. ಇಮ್ಮಡಿರಾಜ ಒಡೆಯರ ಮರಣವನ್ನು ಕೇಳಿ ಕಂಠೀರವ ಒಡೆಯರು ಮೈಸೂರಿಗೆ ಬಂದರು. ವಿಕ್ರಮರಾಯನು ಮುಂದೆ ರಾಜರಾಗುವವರನ್ನು ಯಥಾರೀತಿಯಲ್ಲಿ ಕಂಡು ರಾಜ್ಯಕೋಶಗಳನ್ನು ಒಪ್ಪಿಸುವುದನ್ನು ಬಿಟ್ಟು ಅವರನ್ನು ಹೊರಗಿನ ಮನೆಯೊಂದರಲ್ಲಿಳಿಸಿದನು. ಕೆಲವರು ಸೇವಕರನ್ನು ಮಾತ್ರ ಅವರ ಮರ್ಯಾದೆಗೆ ನಿಯಮಿಸಿದನು. ತಾನು ಬಂದು ಅವರನ್ನು ಕಾಣಲೇ ಇಲ್ಲ; ಪಟ್ಟಾಭಿಷೇಕದ ಮಾತನ್ನು ಎತ್ತಲಿಲ್ಲ. ಎಲ್ಲರಿಗೂ ತಿಳಿಯುವಂತೆ ಪ್ರಕಾಶವಾಗಿ ವಿಕ್ರಮರಾಯನು ಕಂಠೀರವ ಒಡೆಯರಿದ್ದುದನ್ನು ಅಸಡ್ಡೆ ಮಾಡಿ ತಾನು ನೆರೆಹೊರೆಯ ಪ್ರಾಂತಗಳಲ್ಲಿ ಸಂಚಾರಕ್ಕೆಂದು ಹೊರಟನು.
ಸಂಚಾರಮಾಡುತ್ತಿದ್ದಾಗ ವಿಕ್ರಮರಾಯನಿಗೆ ಅವನ ಬೇಹುಗಾರರು ಬಂದು “ಕಂಠೀರವ ಒಡೆಯರು ಅಸಮಾಧಾನಪಟ್ಟಿದ್ದಾರೆ. ರಾಜಪದವಿಗಾಗಿ ಪ್ರಯತ್ನ ಮಾಡುವಂತಿದೆ” ಎಂದು ಹೇಳಿದರು. ಆಗ ವಿಕ್ರಮನು ತಿರಸ್ಕಾರಭಾವದಿಂದ “ಊಹೂ! ಅವನಿಗೆ ಎಚ್ಚರ ತಪ್ಪಿದ ಹಾಗಿದೆ. ನಾವಿನ್ನೂ ಅವನಿಗೆ ಅಭಿಷೇಕಮಾಡಿಲ್ಲವೆಂಬುದು ಜ್ಞಾಪಕದಲ್ಲಿದ್ದರೆ ಅವನಿಗೊಳ್ಳೆಯದು” ಎಂದನು.
ವಿಕ್ರಮರಾಯನು ತಾನೇ ರಾಜನಾಗಬೇಕೆಂದಿದ್ದನು. ಇಮ್ಮಡಿರಾಜ ಒಡೆಯರನ್ನು ಆ ಕಾರಣದಿಂದಲೇ ಗೋಪ್ಯವಾಗಿ ಕೊಲ್ಲಿಸಿದ್ದನು. ಅರಮನೆಯಲ್ಲಿ ಎಲ್ಲರೂ ವಿಕ್ರಮರಾಯನನ್ನು ಕಂಡರೆ ಹೆದರುತ್ತಿದ್ದರು. ಎಲ್ಲರಿಗೂ ಚಿಕ್ಕರಾಜರು ವಿಷದಿಂದ ಸತ್ತರೆಂದು ಬಲವಾದ ಅನುಮಾನವಿತ್ತು. ಆದರೆ ಯಾರೂ ಪ್ರಕಾಶವಾಗಿ ಹೇಳಿಕೊಳ್ಳುತ್ತಿರಲಿಲ್ಲ. ಭಯದಿಂದ ಸುಮ್ಮನಿದ್ದರು. ಆದರೂ ವಿಕ್ರಮರಾಯನು ಸಂಚಾರದಲ್ಲಿದ್ದಾಗ ಇಬ್ಬರು ಸೇವಕರು ರಹಸ್ಯವಾಗಿ ಕಂಠೀರವ ಒಡೆಯರ ಬಳಿಗೆ ಹೋಗಿ, ಇಮ್ಮಡಿ ರಾಜಒಡೆಯರ ದುರ್ಮರಣದ ವೃತ್ತಾಂತವನ್ನು ತಿಳಿಸಿ, ವಿಕ್ರಮ ರಾಯನನ್ನು ಶಿಕ್ಷಿಸುವ ಕಾರ್ಯದಲ್ಲಿ ತಾವು ಸಿದ್ಧರಾಗಿರುವುದನ್ನು ಅರಿಕೆಮಾಡಿದರು. ವಿಕ್ರಮರಾಯನು ಹಿಂತಿರುಗಿ ಬರುವುದನ್ನು ಇವರು ನಿರೀಕ್ಷಿಸುತ್ತಿದ್ದರು.
ವಿಕ್ರಮರಾಯನು ಮೈಸೂರಿಗೆ ಹಿಂತಿರುಗಿದನು. ಸಂಜೆಯ ಸಮಯದಲ್ಲಿ ಕಂಠೀರವ ಒಡೆಯರನ್ನು ಕಾಣುವುದಕ್ಕೆ ಹೊರಟನು. ಉಪಚಾರದ ಮಾತುಗಳನ್ನಾಡಿ ವಿಕ್ರಮರಾಯನು ಪಂಜಿನವನೊಡನೆ ತನ್ನ ಮನೆಗೆ ಪುನಃ ಹೊರಟನು. ಇದನ್ನೇ ಆ ಇಬ್ಬರು ಭಟರು ಹೊಂಚುಹಾಕುತ್ತಿದ್ದು ವಿಕ್ರಮರಾಯನ ಮನೆಯ ಕೈಗೋಡೆಯನ್ನು ಹತ್ತಿ ಮುಂದಿನ ಅಂಗಳದಲ್ಲಿ ಅವಿತುಕೊಂಡಿದ್ದರು. ಸ್ವಲ್ಪ ಕಾಲದಲ್ಲಿಯೇ ವಿಕ್ರಮರಾಯನು ಪಂಜಿನವನನ್ನು ಮುಂದೆ ನಡೆಕೊಂಡು ಅಂಗಳವನ್ನು ಹೊಕ್ಕನು. ಆಗ ಅಲ್ಲಿ ಅವಿತುಕೊಂಡಿದ್ದ ಭಟರಲ್ಲೊಬ್ಬನು ಪಂಜಿನವನಮೇಲೆ ಹಾರಿ, ಕೆಳಕ್ಕೆ ಕೆಡವಿ ಕೊಂದುಬಿಟ್ಟನು. ಪಂಜು ಆರಿಹೋಯಿತು. ವಿಕ್ರಮರಾಯನು “ಯಾರು ನೀನು?” ಎಂದು ಗರ್ಜಿಸಿದನು. ಇನ್ನೊಬ್ಬ ಭಟರು “ನಿನ್ನ ಶತ್ರು!” ಎಂದು ಒಂದೇಟನ್ನು ಕೊಟ್ಟನು. ಆದರೆ ವಿಕ್ರಮರಾಯನು ಬಲಶಾಲಿಯಾಗಿದ್ದನು. ಏಟು ಕೊಟ್ಟವನನ್ನು ಹಿಡಿದು ನೆಲಕ್ಕೆ ಅಪ್ಪಳಿಸಿ ಕೆಡವಿ, ಅವನ ಎದೆಯಮೇಲೆ ಹಾರಿ ಕುಳಿತು, ಅವನ ಕುತ್ತಿಗೆಯನ್ನು ಹಿಸುಕಿದನು. ಕೆಳಗೆ ಬಿದ್ದವನು ತನ್ನ ಗೆಳೆಯನನ್ನು ಕೂಗಿದರು. ಆದರೆ ಕಗ್ಗತ್ತಲೆಯಾಗಿದ್ದಿತು; ಪಂಜಿನವನನ್ನು ಕೊಂದಿದ್ದ ಆ ಗೆಳೆಯನಿಗೆ ಯಾರು ಯಾರೆಂಬುದು ತಿಳಿಯಲಿಲ್ಲ. ಆದ್ದರಿಂದ ಅವನು ತನ್ನ ಗೆಳೆಯನನ್ನುದ್ದೇಶಿಸಿ “ನೀನು ಕೆಳಗೋ ಮೇಲೋ?” ಎಂದು ಕೇಳಿದನು. “ಕೆಳಗೆ” ಎಂದುತ್ತರ ಬಂತು. ಕೂಡಲೆ ತನ್ನ ಕಠಾರಿಯನ್ನು ಹಿರಿದು ಈತನು ವಿಕ್ರಮರಾಯನನ್ನು ಚನ್ನಾಗಿ ತಿವಿದುಬಿಟ್ಟನು, ಕುತ್ತಿಗೆಯ ಹಿಡಿತವನ್ನು ಬಿಟ್ಟು, ವಿಕ್ರಮರಾಯನು “ಹಾ” ಎಂದು ಒರಗಿದನು.
ಈ ರೀತಿಯಲ್ಲಿ ವಿಕ್ರಮರಾಯನು ಸತ್ತನು. ಕಂಠೀರವ ನರಸರಾಜ ಒಡೆಯರು ಮಾರನೇ ದಿನವೇ ಮೈಸೂರನ್ನು ವಶಪಡಿಸಿಕೊಂಡು ತರುವಾಯ ಶ್ರೀರಂಗಪಟ್ಟಣಕ್ಕೆ ಹೊರಟರು.
*****
[ವಿಲ್ಕ್ಸ್, ಪುಟ ೩೦-೩೧; ವಂಶರತ್ನಾಕರ ಪುಟ ೬೭; ವಂಶಾವಳಿ ಸಂ. ೧, ಪುಟ ೬೮]