ಬ್ರಹ್ಮರಕ್ಕಸನ ಭೀತಿಯಿಂದ

ಬ್ರಹ್ಮರಕ್ಕಸನ ಭೀತಿಯಿಂದ

ಚಿತ್ರ: ಓಬರ್‌ಹೋಲ್ಸ್ಟರ್‍ ವೆನಿಟಾ
ಚಿತ್ರ: ಓಬರ್‌ಹೋಲ್ಸ್ಟರ್‍ ವೆನಿಟಾ

ಮಡಿಕೇರಿ ಕೋಟೆಯ ಕೆಳಗೆ ಅಗ್ರಹಾರ ಪ್ರದೇಶದಲ್ಲಿ ಸುಬ್ಬರಸಯ್ಯನೆಂಬ ಬ್ರಾಹ್ಮಣನೊಬ್ಬ ಪತ್ನಿ ರುಕ್ಮಿಣಿಯೊಡನೆ ವಾಸ ಮಾಡುತ್ತಿದ್ದ. ಅವನಿಗೆ ಪ್ರಾಯಕ್ಕೆ ಬಂದ ಇಬ್ಬರು ಗಂಡು ಮಕ್ಕಳಿದ್ದರು. ಸುಬ್ಬರಸಯ್ಯ ವೇದ, ಉಪನಿಷತ್ತು, ಗೀತೆ ಓದಿಕೊಂಡವನು. ಶಾಸ್ತ್ರವೇತ್ತನಾದ ಆತ ಪೌರೋಹಿತ್ಯದಿಂದ ಬದುಕು ಸಾಗಿಸುತ್ತಿದ್ದ. ಅವನು ಯಾವ್ಯಾವುದೋ ಗ್ರಹದೋಷಗಳ ಹೆಸರು ಹೇಳಿ, ಏನೇನೋ ಪೂಜೆ ಮಾಡಿಸಿ ಜನರನ್ನು ದೋಚುವ ಸ್ವಭಾವದವನಲ್ಲ. ಅದಕ್ಕೆಂದೇ ಜನರು ಅವನನ್ನು ಗೌರವಿಸುತ್ತಿದ್ದರು. ಅಗತ್ಯ ಬಿದ್ದಾಗ ನಾಡಿನ ದೊರೆ ಅವನನ್ನು ಕರೆಸಿಕೊಳ್ಳುತ್ತಿದ್ದ. ಸುಬ್ಬರಸಯ್ಯನಿಗೆ ಮಾಸಿಕದತ್ತಿ ಖಜಾನೆಯಿಂದ ನಿಯಮಿತವಾಗಿ ಸಲ್ಲುತ್ತಿತ್ತು. ಪ್ರಾಮಾಣಿಕನಾದ ಸುಬ್ಬರಸಯ್ಯ ನಾಡಿಗೆ ಮತ್ತು ಆಳುವ ಪ್ರಭುವಿಗೆ ನಿಷ್ಠನಾಗಿದ್ದ.

ಒಂದು ಸಂಜೆ ಅವನು ಈಗ ರಾಜಾಸೀಟು ಇರುವ ಪ್ರದೇಶದಲ್ಲಿ ನಿಂತು ಕಣಿವೆಯ ಸೊಬಗನ್ನು ವೀಕ್ಷಿಸುತ್ತಿದ್ದ. ಏನೋ ಚಲನೆ ಕಂಡಂತಾಗಿ ಕುತೂಹಲದಿಂದ ನೋಡಿದ. ಎರಡು ಆಕೃತಿಗಳು ಗುಡ್ಡವೇರಿ ಬರುತ್ತಿರುವುದು ಕಾಣಿಸಿತು. ಸ್ವಲ್ಪ ಹೊತ್ತಲ್ಲಿ ಆಕೃತಿಗಳು ಸ್ಪಷ್ಟವಾಗತೊಡಗಿದವು. ದಾರಿದ್ರ್ಯವೇ ಮನುಷ್ಯಾಕಾರ ತಾಳಿದೆಯೇನೋ ಎಂಬಂತಿರುವ ಒಬ್ಬ ವೃದ್ಧ ರತಿರೂಪಿನ ಪರಮ ಸುಂದರಿ ಹೆಣ್ಣೊಬ್ಬಳೊಡನೆ ತೇಕುತ್ತಾ ಗುಡ್ಡವೇರುತ್ತಿದ್ದ. ತುದಿಗೆ ಹೇಗೋ ಮುಟ್ಟಿದ ವೃದ್ಧ ಉಸ್ಸಪ್ಪ ಎಂದು ದೊಡ್ಡ ಉದ್ಗಾರವೆತ್ತಿ ಕೂತು ಬಾಯಲ್ಲಿ ಉಸಿರಾಡತೊಡಗಿದ. ಹೆಣ್ಣು ಅವನ ಒತ್ತಿನಲ್ಲಿ ಕಾಲು ಚಾಚಿ ಕೂತಳು. ಅವಳೂ ದಣಿದಿದ್ದಳು.

ಸುಬ್ಬರಸಯ್ಯನಿಗೆ ಅವರಲ್ಲೇನೋ ವಿಶೇಷವಿದೆಯೆಂದೆನಿಸಿತು. ಅವನು ವೃದ್ಧನ ಎದುರು ಹೋಗಿ ನಿಂತ. ವೃದ್ಧ ಅವನನ್ನು ಗಮನಿಸಿದರೂ ಆಯಾಸದಿಂದಾಗಿ ಮಾತಾಡುವ ಸ್ಥತಿಯಲ್ಲಿರಲಿಲ್ಲ. ಕುತೂಹಲ ತಾಳಿಕೊಳ್ಳಲಾಗದೆ ಸುಬ್ಬರಸಯ್ಯ ಕೇಳಿದ.

ನಿಮ್ಮನ್ನು ನಾನು ಈ ವರೆಗೆ ಕಂಡವನಲ್ಲ. ನೋಡಿದರೆ ಕೊಡಗರಂತಿಲ್ಲ. ಯಾವ ಊರಿನವರು? ಹೇಳಬಹುದು ಎಂದಾದರೆ ಯಾವ ಕಾರ್ಯಕ್ಕಾಗಿ ಬಂದಿರಿ? ಕೊಡಗನ್ನು ಆಳುವ ಮಹಾರಾಜರಿಗೆ ನಾನು ಸಮೀಪವರ್ತಿ. ನಿಮಗೆ ಮಹಾರಾಜರಿಂದ ಏನಾದರೂ ಕಾರ್ಯವಾಗಬೇಕಿದ್ದರೆ ನಾನು ಸಹಕರಿಸಬಲ್ಲೆ.
ವೃದ್ಧ ಅವನನ್ನು ಪಕ್ಕದಲ್ಲಿ ಕೂರುವಂತೆ ಸನ್ನೆ ಮಾಡಿದ. ತರುಣಿಯಲ್ಲಿ ನೀರು ಬೇಕೆಂದು ಕೈಸನ್ನೆಯಲ್ಲಿ ಕೇಳಿದ. ಅವಳು ಹೆಗಲ ಬಟ್ಟೆ ಚೀಲದೊಳಗಿನಿಂದ ತಿರುಗಣೆ ಚೆಂಬು ತೆಗೆದು ವೃದ್ಧನಿಗೆ ನೀಡಿದಳು. ಎರಡು ಹನಿ ನೀರು ಕುಡಿದು ವೃದ್ಧ ಸುಧಾರಿಸಿ ಕೊಂಡು ಸುಬ್ಬರಸಯ್ಯನನ್ನು ಮಾತಾಡಿಸಿದ.

ಗುರುತು ಪರಿಚಯವಿಲ್ಲದವರಲ್ಲಿ ನಮ್ಮ ಬಗ್ಗೆ ಹೇಳಿಕೊಳ್ಳಬಾರದು. ನಿಮ್ಮ ಪರಿಚಯ ಮೊದಲು ಆಗಲಿ. ಮತ್ತೆ ನಾವು ಬಂದ ಕಾರ್ಯವನ್ನು ನಿಮ್ಮಲ್ಲಿ ಹೇಳುತ್ತೇನೆ.

ಸುಬ್ಬರಸಯ್ಯನಿಗೆ ನಗು ಬಂತು.

ಅದೂ ಸರಿಯೇ. ನಾನು ಪೌರೋಹಿತ್ಯದಿಂದ ಬದುಕುವವನು. ಹೆಸರು ಸುಬ್ಬರಸಯ್ಯ. ಆಗಾಗ ಮಹಾಪ್ರಭು ಲಿಂಗರಾಜರು ನನ್ನನ್ನು ಅರಮನೆಗೆ ದೇವಕಾರ್ಯ ನಿಮಿತ್ತ ಕರೆಸುತ್ತಿರುತ್ತಾರೆ. ಅದಕ್ಕೇ ಕೇಳಿದೆ.

ಮೂಲತಃ ನಾವು ಪುತ್ತೂರಿನ ನರಿಕೊಂಬಿನವರು. ಈಗ ಸುಳ್ಯ ಸೀಮೆಯಲ್ಲಿ ವಾಸಿಸುತ್ತಿದ್ದೇವೆ. ಜನರು ನನ್ನನ್ನು ಈಗಲೂ ಕರಿಯೋದು ನರಿಕೊಂಬು ನರಸಿಂಹ ಭಟ್ಟರು ಎಂದೇ. ಇವಳು ಹಿರಿಮಗಳು ಸಾವಿತ್ರಿ. ನನ್ನದು ಕೂಡಾ ಪೌರೋಹಿತ್ಯ ವೃತ್ತಿ. ಗೊತ್ತಿರೋದು ನಾಲ್ಕು ಮಂತ್ರ. ಈಗ ವೃದ್ಧಾಪ್ಯ. ನಮ್ಮ ಸೀಮೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪುರೋಹಿತರಿದ್ದಾರೆ. ಈ ವೃದ್ಧನನ್ನು ಯಾರು ಕರೆಯುತ್ತಾರೆ? ಬದುಕು ಕಷ್ಟವಾಗಿದೆ. ಎರಡು ದಿನಗಳಾದವು ಸುಳ್ಯದಿಂದ ಹೊರಟು. ವಿಪರೀತ ದಣಿವು ಮತ್ತು ಹಸಿವು. ಇಂದು ಮಹಾರಾಜರು ಕಾಣಸಿಕ್ಕರೆ ನಾಳೆ ಊರಿಗೆ ಹೊರಟು ಬಿಡಬಹುದು.

ಚೆಲುವೆ ಯುವತಿಯೊಡನೆ ವೃದ್ಧ ಅಪ್ಪ, ಈ ಪರಮ ರಸಿಕ ಮಹಾರಾಜನನ್ನು ಕಾಣಲು ಬಂದಿದ್ದಾನೆ. ಸುಬ್ಬರಸಯ್ಯ ಅಂದುಕೊಂಡ. ಏನೋ ಕೇಡು ಕಾದಿದೆ!
ಲಿಂಗರಾಜರು ನಾಲ್ಕು ನಾಡು ಅರಮನೆಗೆ ಹೋಗಿದ್ದಾರೆ. ಯಾವಾಗ ಬರುತ್ತಾರೋ ಖಚಿತವಿಲ್ಲ. ನೀವು ಅವರಿಗಾಗಿ ಎರಡೋ, ಮೂರೋ ದಿನ ಕಾಯಬೇಕಾಗಿ ಬರಬಹುದು. ಇಲ್ಲಿ ನಿಮ್ಮ ನೆಂಟರ, ಪರಿಚಿತರ ಮನೆಗಳು ಇವೆಯೆ?

ಮಡಿಕೇರಿಗೆ ನಾನು ಬರುತ್ತಿರುವುದು ಇದೇ ಮೊದಲು. ನಮ್ಮಂಥ ಬಡವರನ್ನು ಯಾವ ನೆಂಟರು ಹತ್ತಿರ ಸೇರಿಸುತ್ತಾರೆ ಹೇಳಿ. ಇಷ್ಟಕ್ಕೂ ಇಲ್ಲಿ ನಮಗೆ ನೆಂಟರೂ ಇಲ್ಲ. ಮಹಾರಾಜನನ್ನು ಕಾಣಲೆಂದೇ ಬಂದ ನಾನು, ಕಾಣದೆ ಹಿಂದಕ್ಕೆ ಹೋಗುವಂತಿಲ್ಲ. ಏನು ಮಾಡಲಿ?
ಸುಬ್ಬರಸಯ್ಯನಿಗೆ ಅಪ್ಪಮಗಳ ಮೇಲೆ ಕರುಣೆಯುಕ್ಕಿತು.

ಯೋಚಿಸಬೇಡಿ. ಈಗ ನನ್ನ ಮನೆಯಲ್ಲಿ ಉಳಕೊಳ್ಳಿ. ಮಹಾರಾಜರು ಬಂದ ಮೇಲೆ ನಿಮ್ಮನ್ನು ನಾನೇ ಅರಮನೆಗೆ ಕರಕೊಂಡು ಹೋಗಿ ಭೇಟಿ ಮಾಡಿಸುತ್ತೇನೆ.
ನರಿಕೊಂಬು ನರಸಿಂಬ ಭಟ್ಟನಿಗೆ ಅನ್ಯದಾರಿ ಇರಲಿಲ್ಲ.

ಪತಿಯೊಂದಿಗೆ ಬಂದ ಅಪರಿಚತರನ್ನು ರುಕ್ಮಿಣಿ ಅಮ್ಮ ಆದರದಿಂದ ಬರಮಾಡಿ ಕೊಂಡಳು. ಅಪ್ಪಮಗಳು ಬೆಚ್ಚಗಿನ ಸ್ನಾನ ಮಾಡಿ ಹೊಟ್ಟೆ ತುಂಬಾ ಉಂಡರು. ಉಡಲು ಅವರಲ್ಲಿ ಬೇರೆ ಬಟ್ಟೆಗಳಿರಲಿಲ್ಲ. ಸುಬ್ಬರಸಯ್ಯನ ಪಂಚೆಯನ್ನು ನರಸಿಂಹಭಟ್ಟ ಉಟ್ಟು ಕೊಂಡು ಉತ್ತರೀಯವನ್ನು ಹೊದ್ದುಕೊಂಡ. ರುಕ್ಮಿಣಿ ಅಮ್ಮ ತನ್ನ ಸೀರೆಕುಪ್ಪಸಗಳನ್ನು ಸಾವಿತ್ರಿಗೆ ಕೊಟ್ಟಳು.
ಸಾವಿತ್ರಿಯ ರೂಪ, ನಡವಳಿಕೆ ರುಕ್ಮಿಣಿ ಅಮ್ಮನಿಗೆ ತುಂಬಾ ಇಷ್ಟವಾಗಿ ಪತಿಯ ಕಿವಿಯಲ್ಲಿ ಪಿಸುಗುಟ್ಟಿದಳು.
ಸಾಕ್ಷಾತ್‌ ಲಕ್ಷ್ಮೀದೇವಿಯಂತಿದ್ದಾಳೆ. ಹಿರಿಮಗನಿಗೆ ತಂದುಕೊಳ್ಳೋಣ
ಸುಬ್ಬರಸಯ್ಯನೂ ಪಿಸುಗುಟ್ಟಿದ.
ಅವರು ಬಂದ ಕಾರಣ ತಿಳಿಯಲಿ. ಮತ್ತೆ ಮುಂದಿನ ಮಾತು.
ವೃದ್ಧ ಬ್ರಾಹ್ಮಣ ಭೂರಿ ಭೋಜನದಿಂದ ಸಂತೃಪ್ತನಾಗಿದ್ದ.
ಒಂದು ದಿಂಬು ಕೊಟ್ಟರೆ ಸಾಕು. ಇಲ್ಲೇ ಬಿದ್ದುಕೊಳ್ಳುತ್ತೇನೆ.
ರುಕ್ಮಿಣಿ ಅಮ್ಮ ಹುಲ್ಲಚಾಪೆ ಮತ್ತು ಮೆತ್ತನೆಯ ದಿಂಬು ತಂದುಕೊಟ್ಟಳು. ವೃದ್ಧ ಬ್ರಾಹ್ಮಣ ತಲೆಗೆ ದಿಂಬು ಸೋಕಿದ ಸ್ವಲ್ಪ ಹೊತ್ತಲ್ಲಿ ಗೊರಕೆ ಹೊಡೆಯಲಾರಂಭಿಸಿದ.
ರುಕ್ಮಿಣಿ ಅಮ್ಮ ಸಾವಿತ್ರಿಯನ್ನು ಮಾತಿಗೆಳೆದಳು.
ನೀವು ರಾಜನನ್ನು ಕಾಣುವ ಕಾರಣವೇನು?
ಸಾವಿತ್ರಿಯ ಕಣ್ಣಲ್ಲಿ ನೀರಾಡಿತು.
ಎಂದೆಂದೂ ಮುಗಿಯದ ದಾರಿದ್ರ್ಯ. ಊಟಕ್ಕೆ, ಬಟ್ಟೆಗೆ ಇಲ್ಲದ ಬಡತನ. ಅಪ್ಪನಿಗೆ ಐದು ಹೆಣ್ಣು ಮಕ್ಕಳು. ನಾನೇ ಹಿರಿಯವಳು. ಅಪ್ಪನಿಗೀಗ ಪೌರೋಹಿತ್ಯವೂ ಸಿಗುತ್ತಿಲ್ಲ. ಕುಟುಂಬದ ಹೊಟ್ಟೆ ತುಂಬಿಸಲು ಕೈಯಲ್ಲಿ ಕಿಲುಬು ಕಾಸಿಲ್ಲ. ತಾನು ಸಾಯುವ ಮೊದಲು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಬೇಕೆಂದು ಅಪ್ಪ ನನ್ನನ್ನು ಇಲ್ಲಿಗೆ ಕರೆತಂದಿದ್ದಾನೆ.
ಲಿಂಗರಾಜರು ಮದುವೆಗೆ ಹಣ ಕೊಡುತ್ತಾರೆಂದು ನಿಮಗೆ ಹೇಳಿದ್ದು ಯಾರು?
ಸಾವಿತ್ರಿ ತಡೆಯಲಾರದೆ ಬಿಕ್ಕಿದಳು.

ಅಪ್ಪನಿಗೆ ಬೇರಾವ ದಾರಿಯೂ ಉಳಿದಿಲ್ಲ. ನನ್ನನ್ನು ಲಿಂಗರಾಜರಿಗೆ ಕೊಟ್ಟು, ಸಿಕ್ಕ ಹಣದಲ್ಲಿ ತಂಗಿಯರಿಗೆ ಮದುವೆ ಮಾಡಿಸ ಹೊರಟಿದ್ದಾನೆ.
ಸುಬ್ಬರಸಯ್ಯನ ಮುಖದಲ್ಲಿ ಚಿಂತೆಯ ಕಾರ್ಮೋಡಗಳು ಕಾಣಿಸಿಕೊಂಡವು. ಮಹಾರಸಿಕ ಲಿಂಗರಾಜ ಈ ಅನುಪಮ ರೂಪರಾಶಿಯನ್ನು ಬೇಡವೆನ್ನಲು ಸಾಧ್ಯವಿಲ್ಲ. ನಾಲ್ಕು ದಿನ ಅನುಭವಿಸಿ ಅರಮನೆಯ ಊಳಿಗಕ್ಕೆ ಇಟ್ಟುಕೊಳ್ಳುತ್ತಾನೆ. ಆಮೇಲೆ ದಿವಾನರು, ಕಾರ್ಯಕಾರರು ಅನುಭವಿಸುತ್ತಾರೆ. ಕೊನೆಗೆ ಕಾವಲು ಭಟರು. ಇವಳ ಬಾಳು ನರಕವಾಗಿ ಹೋಗಿ ಬಿಡುತ್ತದೆ. ಲೋಕ ಅರಿಯದ ಹುಡುಗಿ ಕೀಚಕರ ಮಧ್ಯೆ ಸಿಲುಕಿ ಸತ್ತೇ ಹೋಗುತ್ತಾಳೆ. ಈಗೇನು ಮಾಡುವುದು?
ಸುಬ್ಬರಸಯ್ಯ ಹೆಂಡತಿಯನ್ನು ಒಳಕೋಣೆಗೆ ಕರೆದು ಸಮಾಲೋಚನೆ ನಡೆಸಿದ.

ನೀವು ಹೇಳುವುದು ನಿಜ. ಈ ಹುಡುಗಿಯ ಬಾಳು ಹಾಗೆ ಮುದುಡಿ ಹೋಗಬಾರದು. ಇವಳನ್ನು ನಮ್ಮ ಹಿರಿಮಗನಿಗೆ ಮದುವೆ ಮಾಡಿಸಿದರೆ ಎಲ್ಲವೂ ಸರಿಹೋಗುತ್ತದೆ.
ಅದೇನೋ ಸರಿಯೇ. ಆದರೆ ಮದುವೆಯನ್ನು ಎರಡು ದಿನಗಳ ಒಳಗೆ ಮಾಡಿ ಮುಗಿಸಲಿಕ್ಕಾಗುತ್ತದೆಯೆ? ಅರಸನಿಗೆ ಸಂಶಯ ಬರುವುದಿಲ್ಲವೆ? ಅಲ್ಲದೆ ಉಕ್ಕುಡ ಹಾದು ಬರುವಾಗ ನರಸಿಂಹ ಭಟ್ಟ ಕಾವಲಿನವನಿಗೆ ತನ್ನ ಉದ್ದೇಶ ಹೇಳದೆ ಇರುತ್ತಾನೆಯೆ? ತನಗೆ ಸೇರ ಬೇಕಾದ್ದನ್ನು ಸುಬ್ಬರಸಯ್ಯ ಅವನ ಮಗನಿಗೆ ಕಟ್ಟಿದ ಎಂದು ಲಿಂಗರಾಜ ಮುನಿಸುಗೊಂಡರೆ ನಮ್ಮೆಲ್ಲರ ಕುತ್ತಿಗೆಗೆ ಬರುತ್ತದೆ. ಈಗ ಏನು ಮಾಡುವುದು?

ಏನಾದರೂ ಯೋಚಿಸಿ. ಮೋಸ ಅರಿಯದ ಮುಗ್ಧ ಹುಡುಗಿ. ಅವಳಿಗೆ ಬರಬಹುದಾದ ಆಪತ್ತುಗಳನ್ನು ನೆನೆದರೆ ನನ್ನ ಕರುಳೇ ಕಿತ್ತು ಬರುತ್ತದೆ.
ಸುಬ್ಬರಸಯ್ಯ ಒಂದಷ್ಟು ಹೊತ್ತು ಯೋಚಿಸಿದ.

ಇವರನ್ನು ವಾಪಾಸು ಕಳುಹಿಸಿ ಬಿಡುವುದೇ ವಾಸಿ ರುಕ್ಮಿಣೀ. ಆದರೆ ಬರಿಗೈಯಲ್ಲಿ ವಾಪಾಸಾಗಲು ನರಸಿಂಹ ಭಟ್ಟರು ಒಪ್ಪಲಾರರು. ಮಂಗಳ ಸೂತ್ರ ಮತ್ತು ಬೆಂಡೋಲೆ ಬಿಟ್ಟು ನಿನ್ನಲ್ಲಿರುವ ಎಲ್ಲಾ ಆಭರಣಗಳನ್ನು ಗಂಟು ಕಟ್ಟಿ ಇತ್ತ ಕೊಡು.
ರುಕ್ಮಿಣಿ ಅಮ್ಮ ತನ್ನ ಒಡವೆಗಳನ್ನೆಲ್ಲಾ ಗಂಟುಕಟ್ಟಿ ಸುಬ್ಬರಸಯ್ಯನ ಕೈಗಿತ್ತಳು. ಸುಬ್ಬರಸಯ್ಯ ಚಿನಿವಾರ ಪೇಟೆಗೆ ನಡೆದ. ಅವುಗಳನ್ನು ತೂಗಿಸಿ ಸಿಕ್ಕಷ್ಟು ಹಣವನ್ನು ತೆಗೆದುಕೊಂಡು ಬಂದ.
ಅಷ್ಟು ಹೊತ್ತಿಗೆ ಕತ್ತಲಾಗಿತ್ತು.
ವೃದ್ಧ ಬ್ರಾಹ್ಮಣ ನಿದ್ದೆ ತಿಳಿದೆದ್ದು ಗೆಲುವಾಗಿದ್ದ.
ನರಿಕೊಂಬು ನರಸಿಂಹ ಭಟ್ಟರಿಗೆ ಸುಖನಿದ್ದೆ ಬಂದಿರಬೇಕು.
ನಿಜ. ನಿಮ್ಮ ಊಟದ ಮಹಿಮೆ ನೋಡಿ.
ಸಾವಿತ್ರಿಯಿಂದ ಎಲ್ಲಾ ತಿಳಕೊಂಡೆ. ನೀವು ಲಿಂಗರಾಜನಿಗೆ ಮಗಳನ್ನು ಮಾರ ಹೊರಟಿದ್ದು ಸರಿಯಾ ಭಟ್ಟರೇ?
ವೃದ್ಧ ಬ್ರಾಹ್ಮಣನ ಮುಖ ಬಾಡಿತು.
ಸರಿಯಲ್ಲವೆಂದು ನನ್ನ ಅಂತರಾತ್ಮ ಚುಚ್ಚುತ್ತಲೇ ಇದೆ. ಇಂದೋ ನಾಳೆಯೋ ಬಿದ್ದು ಹೋಗುವ ದೇಹ ಇದು. ಅದಕ್ಕೆ ಮೊದಲು ಹೆಣ್ಣು ಮಕ್ಕಳಿಗೆ ಒಂದು ವ್ಯವಸ್ಥೆ ಯಾಗಬೇಡವೆ?
ಅರಮನೆಯೆಂದರೆ ಸ್ವರ್ಗವೆಂದು ನೀವು ತಿಳಿದಿರುವಂತಿದೆ. ಅದು ಹೆಣ್ಣುಮಗಳ ಪಾಲಿನ ನರಕ. ಅಲ್ಲಿ ಕೀಚಕರ ಮಧ್ಯದಲ್ಲಿ ನಿಮ್ಮ ಮಗಳ ಬಾಳು ಹೇಗಿರಬಹುದೆಂಬ ಕಲ್ಪನೆಯಾದರೂ ನಿಮಗಿದೆಯೆ?
ಈ ಪ್ರಾಯದಲ್ಲಿ, ಈ ಸ್ಥತಿಯಲ್ಲಿ ನನಗೆ ಇನ್ನಾವ ಹಾದಿಯೂ ಗೋಚರಿಸಲಿಲ್ಲ. ಇದನ್ನು ಮನೆಯಲ್ಲಿ ಪ್ರಸ್ತಾಪಿಸಿದ ಮೇಲೆ ನನಗೇ ಸರಿ ಕಾಣದೆ ಹಿಂದೇಟು ಹಾಕಿದೆ. ಸಾವಿತ್ರಿಯೇ ಒತ್ತಾಯ ಮಾಡಿ ಇಲ್ಲಿಗೆ ಬರುವಂತೆ ಒತ್ತಾಯ ಮಾಡಿದ್ದು. ಪಾಪ, ತನಗಿಲ್ಲದ ಬಾಳು ತಂಗಿಯರಿಗಾದರೂ ಸಿಗಲಿ ಎಂದು ಅವಳು ತೀರ್ಮಾನಿಸಿದಂತಿದೆ.
ಸುಬ್ಬರಸಯ್ಯ ಕರಗಿ ಹೋದ. ರುಕ್ಮಿಣಿ ಅಮ್ಮ ಕಣ್ಣೊರಸಿಕೊಂಡಳು.
ಚಿಂತಿಸಬೇಡಿ. ರುಕ್ಮಿಣಿಯ ಚಿನ್ನ ಮಾರಿ ಸಿಕ್ಕ ಹಣ ಎರಡು ಸಾವಿರವನ್ನು ನಿಮಗೆ ಕೊಡುತ್ತಿದ್ದೇನೆ. ನಾಳೆ ಚುಮುಚುಮು ಬೆಳಕಿಗೆ ನೀವು ನಿಮ್ಮ ಊರಿಗೆ ಹೋಗಿ ಬಿಡಬೇಕು. ನಾಡಿದ್ದು ಸಂಜೆಯೊಳಗೆ ಸಾವಿತ್ರಿಗೆ ಮದುವೆಯಾಗಿಬಿಡಬೇಕು. ಮುಂದಿನದನ್ನು ನಿಮ್ಮ ಅಳಿಯ ನೋಡಿಕೊಳ್ಳುತ್ತಾನೆ. ಮದುವೆ ತಡ ಆದರೆ ನಿಮ್ಮ ತಲೆ ಹೋಗುತ್ತದೆ. ಸಾವಿತ್ರಿ ಶಾಶ್ವತವಾಗಿ ವೇಶ್ಯೆಯಾಗಿ ಬಿಡುತ್ತಾಳೆ. ನಾನು ಹಣ ಕೊಟ್ಟ ವಿಷಯವನ್ನು ತಪ್ಪಿಯೂ ಎಲ್ಲೂ ಬಾಯಿ ಬಿಡಬೇಡಿ.
ಹಣದೊಂದಿಗೆ ತನ್ನೆರಡು ಪಂಚೆ, ಎರಡು ಉತ್ತರೀಯ ನೀಡಿ ಸುಬ್ಬರಸಯ್ಯ ವೃದ್ಧ ಬ್ರಾಹ್ಮಣನ ಪಾದಕ್ಕೆ ನಮಸ್ಕರಿಸಿದ.
ದಾನ ನೀಡಿದ್ದೇನೆ. ವಿಪ್ರೋತ್ತಮರ ಆಶೀರ್ವಾದ ಬೇಕು.
ನರಸಿಂಹ ಭಟ್ಟ ಗದ್ಗದಿತನಾದ.
ಪಾದ ನಮಸ್ಕಾರ ಮಾಡಬೇಕಾದವನು ನಾನು. ಏನು ಮಾಡೋಣ? ವಯಸ್ಸಲ್ಲಿ ನಾನು ಹಿರಿಯವನು. ಆಶೀರ್ವಾದಕ್ಕೆ ಯಾವ ಶಕ್ತಿಯೂ ಇಲ್ಲವೆಂದು ನನಗೆ ಎಂದೋ ಅರ್ಥವಾಗಿದೆ ಸುಬ್ಬರಸಯ್ಯನವರೇ. ಆದರೇನು ಮಾಡುವುದು ನನ್ನಿಂದ ಧಾರಾಳವಾಗಿ ಕೊಡಲು ಸಾಧ್ಯವಿರುವುದು ಅದೊಂದನ್ನು ಮಾತ್ರ. ಇಷ್ಟು ದಿನ ದೇವರ ಪೂಜೆ ಮಾಡುತ್ತಿದ್ದೆ. ಇಂದು ನಿಜವಾದ ದೇವರನ್ನು ಕಂಡೆ.
ಬೆಳಿಗ್ಗೆ ಅಪ್ಪಮಗಳು ಹೊರಟು ನಿಂತಾಗ ರುಕ್ಮಿಣಿ ಅಮ್ಮ ಸಾವಿತ್ರಿಗೆ ಎರಡು ಸೀರೆ ಮತ್ತು ಕುಪ್ಪಸಗಳನ್ನು ಕೊಟ್ಟಳು. ಹಾದಿ ಖರ್ಚಿಗೆಂದು ತಿಂಡಿಯ ಕಟ್ಟದೊಂದನ್ನು ಕೈಗಿತ್ತಳು. ಸಾವಿತ್ರಿ ರುಕ್ಮಿಣಿ ಅಮ್ಮನ ಕಾಲು ಹಿಡಕೊಂಡಳು. ರುಕ್ಮಿಣಿ ಅಮ್ಮನಿಗೆ ಅವಳನ್ನು ಕಳುಹಿಸುವ ಮನಸ್ಸೇ ಇರಲಿಲ್ಲ.
ಸಾವಿತ್ರಿ ಇಲ್ಲೇ ಇರಲಿ. ದೊಡ್ಡವನಿಗೆ ಇವಳಿಗಿಂತ ಒಳ್ಳೆಯ ಹೆಣ್ಣು ಎಲ್ಲಿ ಸಿಕ್ಕಾಳು?
ಇಲ್ಲ ರುಕ್ಮಿಣಿ. ತಂಟೆಕೋರರೂ, ಚಾಡಿಕೋರರೂ ಸುತ್ತ ಮುತ್ತ ತುಂಬಿ ಹೋಗಿದ್ದಾರೆ. ನನ್ನ ಪ್ರತಿಯೊಂದು ಚಲನ ವಲನವನ್ನು ಅವರು ಗಮನಿಸುತ್ತಿದ್ದಾರೆ. ಸಾವಿತ್ರಿ ಇಲ್ಲಿದ್ದರೆ ನಾನೇ ಅವಳನ್ನು ಕೈಯಾರೆ ಲಿಂಗರಾಜನಿಗೆ ಒಪ್ಪಿಸಬೇಕಾಗುತ್ತದೆ. ಅದಕ್ಕಿಂತ ಮರಣವೇ ಲೇಸು.
ಅಪ್ಪಮಗಳು ನಸುಕು ಹರಿಯುವ ಮೊದಲೇ ಹೊರಟು ಹೋದರು. ಸುಬ್ಬರಸಯ್ಯ ನಿಡಿದಾಗಿ ಉಸಿರು ಬಿಟ್ಟ.
ಒಂದು ವಾರ ಉರುಳಿತು. ಎಂಟನೆಯ ದಿನ ಸುಬ್ಬರಸಯ್ಯನಿಗೆ ಅರಮನೆಯಿಂದ ಕರೆ ಬಂತು.
ಸುಬ್ಬರಸಯ್ಯ ರುಕ್ಮಿಣಿ ಅಮ್ಮನನ್ನು ನೋಡಿದ.
ನಾನು ಶಂಕಿಸಿದ್ದು ನಿಜವಾಗುವಂತಿದೆ ರುಕ್ಮಿಣಿ. ಲಿಂಗರಾಜ ನಿನ್ನೆ ನಾಲ್ಕು ನಾಡಿ ನಿಂದ ವಾಪಾಸಾಗಿದ್ದಾನೆ. ಅವನಿಗೆ ಎಲ್ಲವೂ ವರದಿಯಾಗಿದೆ. ಮನಸ್ಸನ್ನು ಕಲ್ಲಾಗಿಸಿಕೋ. ಕಾವೇರಿಯ ತಟದಲ್ಲಿ ಅಂತ್ಯಕ್ರಿಯೆ ನಡೆಸಿ ಭಾಗಮಂಡಲದಲ್ಲಿ ಅಸ್ಥ ವಿಸರ್ಜನೆ ಮಾಡಿಬಿಡಿ.
ರುಕ್ಮಿಣಿ ಅಮ್ಮ ಗರ ಬಡಿದವಳಂತೆ ನಿಂತವಳು ತನ್ನನ್ನು ಸಾವರಿಸಿಕೊಂಡು ದೇವರ ಕೋಣೆಗೆ ನಡೆದಳು. ತುಪ್ಪದ ದೀಪ ಬೆಳಗಿ ತನ್ನ ಮಾಂಗಲ್ಯಕ್ಕೆ ಪ್ರಸಾದ ಹಚ್ಚಿಕೊಂಡಳು. ಹೊರಬಂದು ಗಂಡನ ಹಣೆಗೆ ತಿಲಕ ಇರಿಸಿದಳು. ಗಂಡನ ಪಾದಗಳಿಗೆ ಸಾಷ್ಟಾಂಗ ವಂದಿಸಿ ಬೀಳ್ಕೂಟ್ಟಳು. ಸುಬ್ಬಪ್ಪಯ್ಯನ ಗಂಡು ಮಕ್ಕಳಿಬ್ಬರು ಮಾತೇ ತೋಚದೆ ಸುಮ್ಮನೆ ನಿಂತಿದ್ದರು.
ಲಿಂಗರಾಜನ ಭಟರು ಸುಬ್ಬರಸಯ್ಯನನ್ನು ಅರಸನೆದುರು ತಂದು ನಿಲ್ಲಿಸಿದರು.
ಸುಬ್ಬರಸಯ್ಯನವರಿಗೆ ಅರಮನೆಯಿಂದ ಮಾಸಿಕ ದತ್ತಿ ಸರಿಯಾಗಿ ದೊರೆಯುತ್ತಿದೆಯೆಂದು ಭಾವಿಸುತ್ತೇನೆ.
ಬಲಗೈಯನ್ನು ಎದೆಯ ಮೇಲಿರಿಸಿ ಲಿಂಗರಾಜನಿಗೆ ವಂದಿಸಿ ಸುಬ್ಬರಸಯ್ಯ ಪಡಿನುಡಿದ.
ಹೌದು ಪ್ರಭೂ. ಎಲ್ಲವೂ ಮಹಾರಾಜರ ಕೃಪೆ.
ಅಂತಹ ಮಹಾರಾಜರಿಗೆ ದ್ರೋಹ ಬಗೆಯಲು ಈ ಇಳಿಗಾಲದಲ್ಲಿ ನಿಮಗೆ ಮನಸ್ಸು ಹೇಗೆ ಬಂತು ಸುಬ್ಬರಸಯ್ಯ?
ಏನು ಮಾತು ಮಹಾಪ್ರಭೂ. ನಾನೆಲ್ಲಿ ನಿಮಗೆ ದ್ರೋಹ ಬಗೆದೆ?
ನಮ್ಮನ್ನು ನೋಡಲು ಘಟ್ಟದ ಕೆಳಗಿನಿಂದ ಒಬ್ಬ ವೃದ್ಧ ಬ್ರಾಹ್ಮಣ ತನ್ನ ಮಗಳೊಡನೆ ಬಂದು ನಿಮ್ಮಲ್ಲಿ ಉಳಕೊಂಡಿದ್ದರಂತೆ.
ಹೌದು ಪ್ರಭೂ. ಒಂದು ವಾರದ ಹಿಂದೆ ಅವರು ಬಂದು ನಮ್ಮಲ್ಲಿ ಉಳಕೊಂಡವರು, ಮರುದಿನವೇ ಹೊರಟು ಹೋದರು ಪ್ರಭೂ.
ನಮ್ಮನ್ನು ಭೇಟಿಯಾಗಲು ಬಂದವರನ್ನು ಹಿಂದಕ್ಕೆ ಕಳುಹಿಸುವ ಅಧಿಕಾರವನ್ನು ನಾವು ನಿಮಗೆ ಕೊಟ್ಟಿದ್ದೇವೆಯೇ ಸುಬ್ಬರಸಯ್ಯ?
ತಪ್ಪಾಗಿದ್ದರೆ ಮಹಾಪ್ರಭುಗಳು ಮನ್ನಿಸಬೇಕು. ನಾನು ಅವನನ್ನು ಬರ ಹೇಳಲಿಲ್ಲ. ಹೋಗಲೂ ಹೇಳಲಿಲ್ಲ. ಆ ವೃದ್ಧ ಬ್ರಾಹ್ಮಣ ಉಬ್ಬಸರೋಗಿ. ಇಲ್ಲಿಯ ಹವೆಗೆ ಅವನ ಉಬ್ಬಸ ಉಲ್ಬಣಿಸಿ ಹೊರಟು ಹೋದ. ಅಷ್ಟೇ ನಡೆದದ್ದು.
ಉಕ್ಕುಡದವ ನನಗೆ ವರದಿ ಒಪ್ಪಿಸಿದ್ದಾನೆ. ವೃದ್ಧ ಬ್ರಾಹ್ಮಣ ಬಂದದ್ದು ಅವನ ಮಗಳನ್ನು ನನಗೆ ಒಪ್ಪಿಸಲೆಂದು. ಅವನು ಹೋದರೆ ಹೋಗಲಿ. ಅವನ ಮಗಳನ್ನು ನೀವು ನನಗಾಗಿ ಉಳಿಸಿಕೊಳ್ಳಬೇಕಿತ್ತು. ಅವಳನ್ನು ಅಪ್ಪನೊಡನೆ ಹೋಗಗೊಟ್ಟದ್ದು ರಾಜದ್ರೋಹ. ಹೋಗಿ ಅವಳ ಮನ ಒಲಿಸಿ ನನಗಾಗಿ ಕರೆತಂದರೆ ನಿಮ್ಮ ರಾಜದ್ರೋಹವನ್ನು ಕ್ಷಮಿಸಲಾಗುತ್ತದೆ.
ಮಹಾಸ್ವಾಮಿಗಳು ಮನ್ನಿಸಬೇಕು. ಸ್ವಯಂ ಇಚ್ಛೆಯಿಂದ ಬಂದ ಅಪ್ಪ ಮಗಳು ಅವರಾಗಿಯೇ ಹೊರಟು ಹೋದುದರಲ್ಲಿ ನನ್ನ ಅಪರಾಧವೇನಿದೆ?
ಲಿಂಗರಾಜ ಕುಹಕ ನಗೆ ನಕ್ಕ.
ಚಿನಿವಾರ ಪೇಟೆಯಲ್ಲಿ ಆಭರಣ ಮಾರಿ ಪಡೆದ ಎರಡು ಸಾವಿರವನ್ನು ಏನು ಮಾಡಿದಿರಿ ಸುಬ್ಬರಸಯ್ಯನವರೇ?
ಸುಬ್ಬರಸಯ್ಯ ತಲ್ಲಣಿಸಿ ಹೋದ. ಅದೂ ರಾಜನಿಗೆ ವರದಿಯಾಗಿದೆ!
ಆ ವೃದ್ಧ ಬ್ರಾಹ್ಮಣ ಗೋಳೋ ಎಂದು ಅತ್ತು ತನ್ನ ದಾರಿದ್ರ್ಯದ ಕತೆ ಹೇಳಿಕೊಂಡ. ಮಕ್ಕಳ ಮದುವೆಗೆ ನೆರವಾಗಲು ಬೇಡಿಕೊಂಡ. ನನ್ನಿಂದಾದ ಸಹಾಯವನ್ನು ನಾನು ಮಾಡಿದ್ದು ನಿಜ ಮಹಾಪ್ರಭೂ.
ಸಹಾಯ ಮಾಡಲು ನೀವಾರು, ಮಹಾರಾಜರೆ? ಅವನೇನು ನಿಮ್ಮ ಭಾವನೇ, ನೆಂಟನೆ?
ಅಸಹಾಯ ಸ್ಥತಿಯಲ್ಲಿರುವವರಿಗೆ ಸಹಾಯ ಮಾಡಬೇಕುನ್ನುವುದು ಶಾಸ್ತ್ರ ನಿಯಮ. ಅದು ತಪ್ಪೆಂದು ಮಹಾರಾಜರು ಭಾವಿಸುವುದಾದರೆ, ನನ್ನ ತಪ್ಪಿಗೆ ಸನ್ನಿಧಾನದ ಕ್ಷಮೆ ಬೇಡುತ್ತಿದ್ದೇನೆ.
ನಿಮ್ಮನ್ನು ಕ್ಷಮಿಸಲು ನಾವು ಸಿದ್ಧರಿದ್ದೇವೆ. ಆದರೆ ಒಂದು ಶರತ್ತು. ಆ ವೃದ್ಧ ಬ್ರಾಹ್ಮಣನ ಮಗಳನ್ನು ಕರೆತಂದು ನೀವು ನಮಗೆ ಒಪ್ಪಿಸಬೇಕು. ಹ್ಞೂಂ, ತಕ್ಷಣ ಹೊರಡಿ. ನಿಮ್ಮ ಪಯಣಕ್ಕೆ ಒಂದು ಕುದುರೆಯನ್ನು ಒದಗಿಸುತ್ತೇನೆ.
ಬೇಡಿ ಪ್ರಭೂ. ಹೆಣ್ಣಿಗಾಗಿ ಈ ಹಿಂದೆ ರಾಮಾಯಣ ಮಹಾಭಾರತ ನಡೆದು ಹೋಯಿತು. ದಟ್ಟ ದಾರಿದ್ರ್ಯದಲ್ಲಿರುವ ಪ್ರಜೆಗಳ ಅಸಹಾಯ ಪರಿಸ್ಥತಿಯ ದುರ್ಲಾಭವನ್ನು ಆಳುವವರು ಪಡಕೊಳ್ಳುವುದಕ್ಕೆ ಶಾಸ್ತ್ರದ ಸಮ್ಮತಿಯಿಲ್ಲ. ನಿಮ್ಮ ಮಗಳು ದೇವಮ್ಮಾಜಿಯ ಪ್ರಾಯವಾದೀತು ಆ ವೃದ್ಧ ಬ್ರಾಹ್ಮಣನ ಮಗಳಿಗೆ. ಬಡವರಿಗೆ ಅನ್ಯಾಯ ಮಾಡಬೇಡಿ. ನನ್ನಿಂದ ಅವಳನ್ನು ಕರೆತರಲು ಸಾಧ್ಯವೇ ಇಲ್ಲ.
ಲಿಂಗರಾಜನಿಗೆ ತಾಳಿಕೊಳ್ಳಲಾಗದಷ್ಟು ಸಿಟ್ಟು ಬಂತು.
ರಾಜದ್ರೋಹ ಮಾಡಿದ್ದಲ್ಲದೆ ಈಗ ರಾಜಾಜ್ಞೆಯನ್ನು ಉಲ್ಲಂಘಿಸುತ್ತಿದ್ದೀರಿ. ಇವೆರಡು ಅಪರಾಧಗಳಿಗೆ ಮರಣ ದಂಡನೆಯೇ ಶಿಕ್ಷಯೆಂಬುದನ್ನು ಸುಬ್ಬರಸಯ್ಯ ಚೆನ್ನಾಗಿ ಬಲ್ಲಿರೆಂದು ಭಾವಿಸುತ್ತೇನೆ.
ಅಂತಃಕರಣ ಒಲ್ಲದ ಕಾರ್ಯವನ್ನು ನಾನೆಂದೂ ಮಾಡಲಾರೆ ಪ್ರಭೂ. ಧರೆ ಹತ್ತಿ ಉರಿದಡೆ ಎಲ್ಲಿ ಬದುಕುವರಯ್ಯ? ನನ್ನ ತಲೆ ತೆಗೆದು ಬಿಡಿ ಪ್ರಭೂ.
ಓ, ಸುಬ್ಬರಸಯ್ಯನಿಗೆ ವಚನವೂ ಬರುತ್ತದೆ. ರಾಜನಿಗೆ ಸಲ್ಲಬೇಕಾದ್ದನ್ನು ತಪ್ಪಿಸಿದ್ದು ತಪ್ಪು ಎಂದೇಕೆ ಅರಿವಾಗುವುದಿಲ್ಲ? ಕೊನೆಯ ಸಲ ಆಜ್ಞೆ ಮಾಡುತ್ತಿದ್ದೇನೆ. ತಕ್ಷಣ ಹೊರಡಿ ಸುಬ್ಬರಸಯ್ಯ. ಆ ತರುಣಿಯನ್ನು ಕರಕೊಂಡು ಬಂದು ನನಗೊಪ್ಪಿಸಿ.
ಇಲ್ಲ ಪ್ರಭೂ. ಧರ್ಮಕ್ಕೆ ವಿರುದ್ಧವಾದುದನ್ನು ಮಾಡಲು ನನ್ನಿಂದ ಸಾಧ್ಯವೇ ಇಲ್ಲ.
ಲಿಂಗರಾಜ ಕೋಪದಿಂದ ಕಂಪಿಸಿದ.
ನಿಮ್ಮಿಂದ ಹೇಗೆ ಮಾಡಿಸುವುದೆಂದು ನಮಗೆ ಗೊತ್ತು.
ಲಿಂಗರಾಜ ಸುಬ್ಬರಸಯ್ಯನ ಇಬ್ಬರು ಪುತ್ರರನ್ನು ಬಂಧಿಸಿ ತರಲು ಆಜ್ಞಾಪಿಸಿದ.
ಆಸ್ಥಾನದಲ್ಲಿ ಸ್ಮಶಾನ ಮೌನ. ಅಲ್ಲಿದ್ದವರಿಗೆ ಕಾಲದ ಚಲನೆ ನಿಂತ ಅನುಭವ.
ಭಟರು ಸುಬ್ಬರಸಯ್ಯನ ಮಕ್ಕಳು ಬಂಧಿಸಿ ಕರೆತಂದು ಲಿಂಗರಾಜನೆದುರು ನಿಲ್ಲಿಸಿದರು.
ಸುಬ್ಬರಸಯ್ಯ, ನಿಮ್ಮ ಕರುಳ ಕುಡಿಗಳು ಬಂದಿವೆ. ಇವರಿಗಿಂತ ಆ ಹುಡುಗಿ ದೊಡ್ಡದಲ್ಲ. ಇದು ಕೊನೆಯ ಅವಕಾಶ. ಅವಳನ್ನು ತಂದೊಪ್ಪಿಸದಿದ್ದರೆ ಇವರ ತಲೆಗಳು ಉರುಳುತ್ತವೆ.
ಮಹಾರಾಜ, ಪ್ರಾಯಶ್ಚಿತ್ತವೇ ಇಲ್ಲದ ಮಹಾಪಾಪ ಮಾಡಿ ಅನಾಹುತುಗಳನ್ನು ಆಹ್ವಾನಿಸಿಕೊಳ್ಳಬೇಡಿ. ಒಲ್ಲದ ಹುಡುಗಿಯನ್ನು ಬಯಸುವುದು ಪಾಪ. ಅವಳು ಸಿಗಲಿಲ್ಲವೆಂದು ನಿರಪರಾಧಿ ನಿಷ್ಪಾಪಿಗಳ ಜೀವ ತೆಗೆಯ ಹೊರಟಿರುವುದು ಮಹಾಪಾಪ. ನಿಮಗೆ ಸಿಟ್ಟಿದ್ದರೆ ನನ್ನ ತಲೆಯನ್ನು ಬಲಿ ತೆಗೆದುಕೊಳ್ಳಿ. ಇವರೇನು ಮಾಡಿದ್ದಾರೆ ನಿಮಗೆ?
ದುಡುಕಿ ಮಹಾಪಾಪ ಮಾಡಿದರೆ ಬದುಕಿರುವವರೆಗೆ ನೆಮ್ಮದಿಯಿಂದ ಬಾಳಲು ನಿಮಗೆ ಸಾಧ್ಯವಾಗಲಾರದೆಂದು ಎಚ್ಚರಿಸುತ್ತಿದ್ದೇನೆ. ಬೇಡಿ ಪ್ರಭೂ.
ಲಿಂಗರಾಜ ನಿರ್ಲಕ್ಷ್ಯದಿಂದ ಅವನನ್ನು ನೋಡಿದ.
ಇದೇ ನಿನ್ನ ಕೊನೆಯ ಮಾತೇ ಸುಬ್ಬರಸಯ್ಯ?
ಹೌದು ಪ್ರಭೂ.
ಲಿಂಗರಾಜ ಎದ್ದು ನಿಂತು ಆದೇಶಿಸಿದ.
ಅವರಲ್ಲಿ ಕಿರಿಯನ ತಲೆ ಕಡಿಯಿರಿ.
ಸಿದ್ಧಿ ಕಾವಲುಗಾರ ರಾಜಾಜ್ಞೆಯನ್ನು ಪಾಲಿಸಿದ.
ಸುಬ್ಬರಸಯ್ಯ ಕಣ್ಣು ಮುಚ್ಚಿಕೊಂಡು ತನಗೆ ತಾನೇ ಹೇಳಿಕೊಂಡ.
ದೇಹನೋಸ್ಮಿನ್‌ ಯಥಾ ದೇಹೇ ಕೌಮಾರಂ ಯವ್ವನಂ ಜರಾ
ತಥಾ ದೇಹಾಂತರ ಪ್ರಾಪ್ತೀರ್ಧೀರೋಸ್ತ್ರತ್ರನ ಮುಹ್ಯತೇ.
ಒಬ್ಬ ಹೋಗಿಬಿಟ್ಟ ಸುಬ್ಬರಸಯ್ಯ. ಪುತ್ರಶೋಕಂ ನಿರಂತರ. ಇನ್ನುಳಿದಿರುವವನು ನಾಳೆ ನಿನಗೆ ಪಿಂಡ ಪ್ರದಾನ ಮಾಡಬೇಕಾದವನು. ಹೋಗು ಸುಬ್ಬರಸಯ್ಯ ಅವಳನ್ನು ಕರಕೊಂಡು ಬಂದು ಇವನನ್ನು ಉಳಿಸಿಕೋ.
ಸುಬ್ಬರಸಯ್ಯ ಮುಚ್ಚಿದ ಕಣ್ಣನ್ನು ತೆರೆಯದೆ ಹೇಳಿದ.
ನನಗಿರುವುದು ಒಂದೇ ನಾಲಿಗೆ ಪ್ರಭೂ.
ಉರಿವ ಕೆಂಡಂದಂತಾಗಿದ್ದ ಲಿಂಗರಾಜ ಆದೇಶಿಸಿದ.
ಹಿರಿಯ ಮಗನ ತಲೆ ಹೋಗಲಿ.
ಚೀತ್ಕಾರದೊಡನೆ ರುಂಡ ಕೆಳಗೆ ಬಿದ್ದ ಸದ್ದು ಸುಬ್ಬರಸಯ್ಯನಿಗೆ ಕೇಳಿಸಿತು. ಅವನು ತನ್ನಲ್ಲೇ ಹೇಳಿಕೊಂಡ.
ದುಖೇಶು ಅನುದ್ವಿಗ್ನ ಮನಾ | ಸುಖೇಷು ವಿಗತಸೃಹಾಃ
ವೀತರಾಗ ಭಯ ಕ್ರೋಧಃ | ಸ್ಥತಧೀರ್ಮುನಿರುಚ್ಯತೇ
ಲಿಂಗರಾಜ ಸುಬ್ಬರಸಯ್ಯನನ್ನು ನೋಡಿದ.
ಈಗ ಉಳಕೊಂಡಿರುವುದು ನಿನ್ನ ತಲೆ ಮಾತ್ರ ಸುಬ್ಬರಸಯಯ್ಯ. ಪಿಂಡ ಪ್ರದಾನ ಭಾಗ್ಯವನ್ನು ಕಳಕೊಂಡೆ. ನಿನ್ನ ಪತ್ನಿಗೆ ವೈಧವ್ಯ ದುಃಖವನ್ನು ತಂದೀಯ ಬೇಡ. ಹೋಗು, ಆ ತರುಣಿಯನ್ನು ಹುಡುಕಿಕೊಂಡು ಬಾ.
ಇಹವನ್ನು ಮರೆತು ಕಣ್ಣುಮುಚ್ಚಿ ಕಲ್ಲಂತೆ ನಿಂತಿದ್ದ ಸುಬ್ಬರಸಯ್ಯ ಮಣಮಣಿಸುತ್ತಿದ್ದ.
ಜಾತಸ್ಯಹಿ ಧ್ರುರ್ವೊ ಮೃತ್ಯುಧ್ರ್ರುವೋ ಜನ್ಮ ಮೃತಸ್ಯಚ.
ತಸ್ಮಾದ್‌ ಅಪರಿಹಾರ್ಥೇಶು ನಾನು ಶೋಚಂತಿ ಪಂಡಿತಾಃ
ಲಿಂಗರಾಜ ಕೋಪದಿಂದ ಕುರುಡಾಗಿದ್ದ.
ಕಡಿಯಿರಿ ಆ ರಾಜದ್ರೋಹಿಯ ತಲೆಯನ್ನು. ರಾಜ ದ್ರೋಹಕ್ಕೆ ಏನು ಶಿಕ್ಷೆ ಎನ್ನುವುದು ಎಲ್ಲರಿಗೂ ಗೊತ್ತಾಗಲಿ.
ಸಿದ್ಧಿ ಭಟರು ಸುಬ್ಬರಸಯ್ಯನ ತಲೆಯನ್ನು ಕಡಿದುರುಳಿಸಿದರು.
ಲಿಂಗರಾಜ ದುಡು ದುಡು ನಡೆದು ಅಂತಃಪುರ ಸೇರಿಕೊಂಡ. ಅವನನ್ನು ಮಾತಾಡಿಸಲು ಪಟ್ಟದ ರಾಣಿ ದೇವಕಿಗೆ ಧೈರ್ಯ ಬರಲಿಲ್ಲ. ಯುವರಾಜ ಚಿಕ್ಕವೀರ ಭಯದಿಂದ ಅಪ್ಪನ ಬಳಿ ಸುಳಿಯಲಿಲ್ಲ.
ರಾತ್ರಿ ಊಟ ಮಾಡಲೆಂದು ಅನ್ನದ ಬಟ್ಟಲಿಗೆ ಕೈ ಹಾಕಿದ ರಾಜ ಕಿರುಚಿಕೊಂಡ.
ಇದೇನಿದುಲ ಅನ್ನದಲ್ಲಿ ರಕ್ತ ಬೆರೆಸಿದವರು ಯಾರು?
ಪಕ್ಕದಲ್ಲೇ ಕೂತು ಉಣ್ಣುತ್ತಿದ್ದ ಪಟ್ಟದ ರಾಣಿ ದೇವಕಿ ಉತ್ತರಿಸಿದಳು.
ಇಲ್ಲವಲ್ಲಾ ಪ್ರಭೂ. ನಾನು ಉಣ್ಣುತ್ತಿದ್ದೀನಲ್ಲಾ?
ಲಿಂಗರಾಜನಿಗೆ ಅದನ್ನು ಉಣ್ಣಲು ಮನಸ್ಸು ಬರಲಿಲ್ಲ.
ಇದರಲ್ಲಿ ಬೇಡ. ಬೇರೆ ಬಟ್ಟಲಲ್ಲಿ ಅನ್ನಹಾಕಿ ತನ್ನಿ.
ರಾಜ ಅನ್ನಕ್ಕೆ ಹೊಯ್ದ ಸಾರನ್ನು ಬಿಡುಗಣ್ಣುಗಳಿಂದ ನೋಡಿದ.
ಛೀಛೀ, ಇದಾರು ಸಾರಿನ ಬದಲು ರಕ್ತವನ್ನು ಅನ್ನಕ್ಕೆ ಹೊಯ್ದವರು?
ರಾಣಿಗೆ ಈಗ ರಾಜನ ಮನಃಸ್ಥತಿಯ ಬಗ್ಗೆ ಅರಿವಾಯಿತು.
ಪ್ರಭೂ, ನೀವು ಬಟ್ಟಲಿಂದ ಕೈ ತೆಗೆಯಿರಿ. ನಾನು ನಿಮಗೆ ಉಣ್ಣಿಸುತ್ತೇನೆ
ರಾಜ ಅವಳನ್ನು ಕೆಂಡಗಣ್ಣುಗಳಿಂದ ನೋಡಿದ.
ನಿನ್ನ ಕೈ ತುತ್ತು ತಿನ್ನಲು ನಾನೇನು ಎಳೆಯ ಮಗುವೆ? ಬೇಡ ದೇವಕೀ ನಾನೇ ಉಣ್ಣುತ್ತೇನೆ.
ರಾಜ ಅನ್ನಕ್ಕೆ ಸಾರು ಕಲಸಿ ಉಣ್ಣಲು ನೋಡಿದ.
ದೇವಕೀ ನೋಡು. ಊಟ ಮಾಡಲಾಗದಂತೆ ಯಾರೋ ನನ್ನ ಗಂಟಲನ್ನು ಒತ್ತಿ ಹಿಡಿದಿದ್ದಾರೆ. ನನ್ನ ಉಸಿರು ಕಟ್ಟುತ್ತಿದೆ. ನನ್ನನ್ನು ಯಾರೋ ಕೊಲ್ಲುತ್ತಿದ್ದಾರೆ. ದೇವಕೀ…. ಮುಷ್ಠಿ ಅನ್ನವನ್ನು ಬಟ್ಟಲಿಗೆ ಹಾಕಿ ರಾಜ ಎದ್ದುನಿಂತ. ರಾಣಿ ಅವನನ್ನು ತಬ್ಬಿ ಹಿಡಕೊಂಡು ಅಂತಃಪುರಕ್ಕೆ ಕರೆತಂದು ಮಲಗಿಸಿದಳು.
ಒಂದು ಒಳ್ಳೆಯ ನಿದ್ದೆ ಮಾಡಿ ಪ್ರಭೂ. ಎಲ್ಲಾ ಸರಿಹೋಗುತ್ತದೆ.
ಲಿಂಗರಾಜ ಕಣ್ಣುಮುಚ್ಚಿಕೊಂಡ. ಸ್ವಲ್ಪ ಹೊತ್ತಲ್ಲಿ ದಢಕ್ಕನೆ ಎದ್ದು ಕೂತ.
ನೋಡು ದೇವಕೀ, ಈ ಮಂಚವನ್ನು ಮೂರು ತಲೆಗಳು ಹೊತ್ತುಕೊಂಡು ಹೋಗುತ್ತಿವೆ. ಅವು ನನ್ನನ್ನು ಎತ್ತಿ ಒಗೆಯುವುದರಲ್ಲಿದ್ದಾವೆ. ದೇವಕೀ, ನನ್ನನ್ನು ಹಿಡಕೋ.
ರಾಣಿ ಅವನನ್ನು ಮತ್ತೆ ಮಲಗಿಸಿ ಆಲಂಗಿಸಿಕೊಂಡಳು.
ರಾಜ ಕಣ್ಣು ಮುಚ್ಚಿ ನಿದ್ದೆ ಮಾಡಲು ಯತ್ನಿಸಿದ.
ಇದ್ದಕ್ಕಿದ್ದಂತೆ ರಾಣಿಯ ಕೈಯನ್ನು ತನ್ನ ಮೇಲಿನಿಂದ ಕಿತ್ತೊಗೆದು ಬೊಬ್ಬಿಟ್ಟ.
ನೋಡು ದೇವಕೀ, ಆ ಮೂರು ತಲೆಗಳು ತೇಲಿಕೊಂಡು ಬರುತ್ತಿವೆ. ನನ್ನನ್ನು ದುರುಗುಟ್ಟಿ ನೋಡುತ್ತಿವೆ. ಹತ್ತಿರ ಬರುತ್ತಿವೆ. ನನ್ನನ್ನು ಕೊಲ್ಲುತ್ತಿವೆ. ಅಯ್ಯೋ.
ರಾಣಿ ಅರಮನೆ ವೈದ್ಯರಿಗೆ ಕರೆ ಕಳುಹಿಸಿದಳು.
ಅವರು ಕೊಟ್ಟ ಕಷಾಯ ಕುಡಿದ ಅರಸ ನಿದ್ರಾವಶನಾದ.
ಮಹಾರಾಣಿ ದೇವಕಿ ದಿವಾನ ಅಪ್ಪಾರಂಡ ಬೋಪುವನ್ನು ಕರೆಸಿದಳು.
ದಿವಾನ ಸಲಹೆ ನೀಡಿದ.
ಆಗಬಾರದ್ದು ಆಗಿ ಹೋದದ್ದಕ್ಕೆ ಮಹಾರಾಜರ ಮನಸ್ಸು ಕೆಟ್ಟಿದೆ. ಇದಕ್ಕೆ ನೀಲೇಶ್ವರದ ತಂತ್ರಿಗಳನ್ನು ಕರೆಸಿ ಪ್ರಶ್ನೆ ಕೇಳುವುದೇ ಪರಿಹಾರ.
ಮಹಾರಾಣಿ ದೇವಕಿ ಸಹಮತಿ ಸೂಚಿಸಿದಳು.
ತಡಮಾಡಬೇಡಿ. ಈಗಲೇ ನೀಲೇಶ್ವರಕ್ಕೆ ಯಾರನ್ನಾದರೂ ಕಳಿಸಬೇಕು. ಯಾರನ್ನಾದರೂ ಯಾಕೆ? ನಮ್ಮ ಅಳಿಯಂದಿರು ಚೆನ್ನಬಸಪ್ಪನವರೇ ಹೋಗಲಿ. ಬೆಂಗಾವಲಿಗೆ ಇಬ್ಬರು ಕುದುರೆ ಸವಾರರಿರಲಿ.

*    *    *

ನೀಲೇಶ್ವರ ತಂತ್ರಿಗಳು ಪ್ರಶ್ನೆ ಹಾಕಿ ನೋಡಿ ಹೇಳಿದರು.
ಬ್ರಹ್ಮಹತ್ಯಾ ದೋಷ ಲಿಂಗರಾಜರನ್ನು ಬಾಧಿಸುತ್ತಿದೆ. ಅವರಿಂದಹತ್ಯೆಗೊಳ ಗಾದವರು ಬ್ರಹ್ಮರಾಕ್ಷಸರಾಗಿ ಬಾಧಿಸುತ್ತಿದ್ದಾರೆ. ಸುಬ್ಬರಸಯ್ಯನವರ ಮನೆ ಇರುವ ಪ್ರದೇಶದಲ್ಲಿ ಒಂದು ದೇವಾಲಯ ನಿರ್ಮಾಣವಾಗಬೇಕು. ಅದರಲ್ಲಿ ಕಾಶಿಯಿಂದ ಶಿವಲಿಂಗವನ್ನು ತಂದು ಪ್ರತಿಷ್ಠಾಪಿಸಬೇಕು. ಸುಬ್ಬರಸಯ್ಯನವರ ಮನೆಯಲ್ಲಿರುವ ಶಿವಲಿಂಗಕ್ಕೆ ನಿತ್ಯಾರ್ಚನೆಯ ವ್ಯವಸ್ಥೆಯಾಗಬೇಕು. ದೇವಾಲಯದ ಉತ್ತರ ಭಾಗದಲ್ಲಿ ಸಂಪಿಗೆ ಮರನೆಟ್ಟು ಬ್ರಹ್ಮರಕ್ಕಸರಿಗೆ ನೆಲೆ ಕಲ್ಪಿಸಬೇಕು. ಸ್ವಲ್ಪ ದೂರದಲ್ಲಿ ಅಶ್ವತ್ಥಮರ ನೆಟ್ಟು ಬುಡದಲ್ಲಿ ನಾಗರಕಟ್ಟೆ ನಿರ್ಮಿಸಿ, ಪ್ರತಿದಿನ ನಾಗಪೂಜೆ ಮಾಡಿದರೆ ಲಿಂಗರಾಜರ ದೋಷ ಪರಿಹಾರವಾಗುತ್ತದೆ.

ತಂತ್ರಿಗಳ ಸಲಹೆಯಂತೆ ದೇವಾಲಯ ನಿರ್ಮಾಣವಾಯಿತು. ಸುಬ್ಬರಸಯ್ಯನ ಶಿವಲಿಂಗಕ್ಕೆ ನಿತ್ಯಾರ್ಚನೆ ವ್ಯವಸ್ಥೆ ಮಾಡಲಾಯಿತು. ಅಶ್ವತ್ಥ ಮರ ನೆಟ್ಟು ನಾಗರಕಟ್ಟೆ ರಚಿಸಿ, ನಿತ್ಯಪೂಜೆಗೆ ಪುರೋಹಿತರೊಬ್ಬರ ನೇಮಕವಾಯಿತು. ಬ್ರಹ್ಮರಕ್ಕಸನಿಗೊಂದು ನೆಲೆ ಕಲ್ಪಿಸಲು ಸಂಪಿಗೆ ಮರವನ್ನು ರಾಜ ನೆಡಿಸಿದ. ಶಿವಾಲಯ ಸಿದ್ಧಗೊಂಡು ಪ್ರತಿಷ್ಠಾ ಮುಹೂರ್ತ ಸನ್ನಿಹಿತವಾದರೂ ಕಾಶಿಯ ಶಿವಲಿಂಗ ಬರಲಿಲ್ಲ. ಸಮಯಕ್ಕೆ ಸರಿಯಾಗಿ ತಂತ್ರಿಗಳು ಮುಹೂರ್ತ ಮೀರುತ್ತದೆಂದು ಶಿವಲಿಂಗ ಪ್ರತಿಷ್ಠಾಪಿಸಬೇಕಾದ ಸ್ಥಳದಲ್ಲಿ ಓಂ ಬರೆದು ಪ್ರತಿಷ್ಠಾ ಕ್ರಿಯೆಗಳನ್ನು ನೆರವೇರಿಸಿಬಿಟ್ಟರು. ಶಿವಲಿಂಗ ಬಂದ ಮೇಲೆ ಅದನ್ನು ಓಂಕಾರದ ಮೇಲೆ ಪ್ರತಿಷ್ಠಾಪಿಸಲಾಯಿತು. ಹೀಗೆ ಶಿವ ಓಂಕಾರೇಶ್ವರನಾದನೆಂದು ಕೊಡಗಿನ ಹಿರಿಯರು ಹೇಳುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವುದೀ ಹೊಸ ಸಂಚು
Next post ನಗೆ ಡಂಗುರ – ೬೯

ಸಣ್ಣ ಕತೆ

 • ಜೋತಿಷ್ಯ

  ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…