ಬೂಬೂನ ಬಾಳು

ಬೂಬೂನ ಬಾಳು

ಚಿತ್ರ: ರೋಹಿತ್ ಭೂಷಣ

ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು, ಅವುಗಳ ಎಡ ಬಲಕ್ಕೆ ನೀಳವಾಗಿ ನಿಂತುಕೊಂಡ ಹುಣಿಸೆ -ಬೇವಿನ ಮರಗಳು, ಇವೆಲ್ಲ ದೂರದಿಂದ ಬರುವವರಿಗೆ ರಮ್ಯವಾಗಿ ಕಾಣುವುವು. ಊರ ಹತ್ತಿರವೇ ಹಾಲು ತುಂಬಿಟ್ಟಂತೆ ಒಪ್ಪುವ ಪುಟ್ಟ ಕೆರೆ; ಅದರ ದಡದಲ್ಲಿ ದೊಡ್ಡದಾದ ಆಲದ ಮರ ಅದರ ರೆಂಬೆಗಳು ನೀಳವಾಗಿ ಜೋಕಾಲಿ ಕಟ್ಟಿದಂತೆ ಅಲೆದಾಡುವುವು. ಈ ಕೆರೆಯ ದಂಡೆಯ ಮೇಲಿಂದ ಹಾಯ್ದು ಹೋಗಲು, ಗಿಡಗಳ ಗುಂಪಿನಲ್ಲಿ ಅಡಗಿಕೊಂಡು ನಮ್ಮೂರ ಶಾಲೆಯಿದೆ. ತುಸು ದೂರ ಹೋಗಲು, ಮುಂದೆ ಬರುವುದು ರೇಲ್ವೆ ಸ್ಟೇಶನ್ನು, ಬಿಸಿಲುಗಾಲದಲ್ಲಿ ಕೆರೆಯ ನೀರನ್ನು ಕುಡಿದು, ಜನರಿಗೆ ಹಾಯಾಗಿ ಮಲಗಿಕೊಳ್ಳಲು ನೆಳಲು ಕೊಡುವ ಈ ಆಲದ ಮರವನ್ನು ಯಾರು ಕೊಂಡಾಡಲಿಕ್ಕಿಲ್ಲ ? ನಾನು ಸಣ್ಣವನಿರುವಾಗಲೇ ಈ ಆಲದ ಮರದ ಪರಿಚಯ ನನಗೆ, ಶಾಲೆಗೆ ಹೋಗುವಾಗ ಅದರಡಿಯಲ್ಲಿಯೆ ಹಾಯ್ದು ಹೋಗುವುದರ-ಶಾಲೆ ತಪ್ಪಿಸಿ ಅದರ ರೆಂಬೆಗಳನ್ನು ಹಿಡಿದು ಉಯ್ಯಾಲೆ ಆಡಿ ಹರ್ಷಪಟ್ಟು ದರ-ನೆನಪು, ಈಗಲೂ ನನಗೆ ಮೈಯಲ್ಲಿ ಹುರುಪನ್ನುಂಟು ಮಾಡುವುದು. ಅಷ್ಟೇಕೆ ? ಆ ರೆಂಬೆ ಕೈತಪ್ಪಿ ಬಿದ್ದಾಗ ಮುಖ ಒಡೆದುಕೊಂಡು, ಕೈ ತರೆಸಿಕೊಂಡು ಅಳುತ್ತ ನಿಂತಾಗ “ಬೂಬೂ” ಬಂದು ಎತ್ತಿಕೊಂಡು, ಮೈದಡವಿ ಮುದ್ದಿಟ್ಟು ಮನೆಗೆ ಕರೆದುಕೊಂಡು ಹೋದ ನೆನಪು ಮನದಲ್ಲಿ. ಇಣಿಕಿದಾಗೆಲ್ಲ ನನ್ನ ಮುಖದಲ್ಲಿ ಒಂದು ಹರ್ಷದ ನಗೆಯು ಮಿನುಗುವುದು?

“ಬೂಬೂ” ಎಂದು ಬಾಯಿತುಂಬ ಹೇಳಿಕೊಂಡು ಬಿಟ್ಟೆ ನೆಂದ ಬಳಿಕ ಅವಳ ವಿಷಯದಲ್ಲಿ ನಿಮಗೆ ತುಸು ಪರಿಚಯ ಮಾಡಿಕೊಡುವ ಅವಶ್ಯಕತೆ ಎನಿಸುವುದೀಗ. ಬೂಬೂನ ಸಮಾಚಾರ ನನಗೂ ನಿಮ್ಮಂತೆ ಅಲ್ಪವೇ ; ಏಕೆಂದರೆ ನಾನು ಹುಟ್ಟಿ ತಿಳಿವು ಮೂಡುವುದಕ್ಕೆ ಮೊದಲೇ ಅವಳು ನಮ್ಮ ವಠಾರದಲ್ಲಿ ವಾಸಿಸುತ್ತಿದ್ದಳು. ಪೂರ್ವದ ಇತಿಹಾಸ ಮಸುಕು ಮಸಕು! ಇತಿಹಾಸವೆಂದ ಕೂಡಲೆ ನೀವು ಬಾಬರ್- ಹುಮಾಯನರ ಚರಿತ್ರೆಯಂತೆ, ಎಂದು ಕೊಳ್ಳಬಹುದು. ಇತಿಹಾಸ ಬೇಡ, ಸಮಾಚಾರ ಎನ್ನಿರಿ; ತುಸು ನನಗೂ ಹಗುರಾಗುವುದು. ಅಲ್ಲದೆ ಹೇಳಲು ಸರಳವಾಗುವುದು. ಇತಿಹಾಸ ದಲ್ಲಿಯ ವ್ಯಕ್ತಿಗಳ ಚರಿತ್ರೆ ಹೇಳುವಾಗ ತಪ್ಪಿ ನಾನು ಮೊಳಕೈ ಮುರಿಸಿ ಕೊಂಡಿದ್ದೇನೆ, ನಮ್ಮ ಮೇಸ್ಟರಿ೦ದ ! ಅಕಬರನು ಹುಟ್ಟಿದ ಇಸ್ವಿ ಹೇಳುವ ಬದಲು ನಮ್ಮ ಕರ್ನಾಟಕ ಧುರೀಣನಾದ ಹರಿಹರನ ಇಸ್ವಿ ಹೇಳಿ, ಗಲ್ಲವನ್ನು ಹಿಂಡಿಸಿಕೊಂಡಿದ್ದೇನೆ. ಈಗ ಹೇಳಿದ್ದೆಲ್ಲವೂ ಹಾಳು ಹರಟೆಯಾಯಿತು. ಇನ್ನು ನಮ್ಮ ಬೂಬೂನ ಸಮಾಚಾರ; ಬೂಬೂ ಯಾವ ಊರವಳೆಂಬದನ್ನು ನಾನರಿಯೆ. ಆದರೆ ಅವಳು ನಮ್ಮೂರಿಗೆ ಬಂದು ಇರಹತ್ತಿದುದು ನಮ್ಮ ತಾಯಿಯವರು ಚಿಕ್ಕವರಿದ್ದಾಗ, ಮಾತಾಡುತ್ತ ಮಾತಾಡುತ್ತ ತಮ್ಮೂರ ಸುದ್ದಿಯನ್ನು ಅವಳು ಒಮ್ಮೊಮ್ಮೆ ಹೇಳುವಳು. ಅಂತೂ ಬುಬೂನಿಗೂ ನಮಗೂ ಸಂಬಂಧ ಬಹಳ ದಿನಗಳದೆಂದು ಹೇಳಲಿಕ್ಕೆ ಯಾವುದರ ಅಭ್ಯಂತರವಿಲ್ಲ. ಬೂಬೂ ಬಡವಿ; ಗಂಡು ಹೆಣ್ಣು ಯಾವ ಸಂತತೆಯ ಇಲ್ಲ. ಗಂಡನನ್ನು ಕಳೆದುಕೊಂಡದ್ದು ಎಂದೊ; ಅವಳಿಗೂ ಮರೆತಿರಬೇಕು! ಅಂತೂ ಏಕಾಕಿಯಾಗಿ ಜೀವಿಸುವ ವ್ಯಕ್ತಿ. ಆದರೂ ಅವಳ ಜೀವನವು ಬಹು ಸೊಗಸಾಗಿರುವಂತೆ ನನಗೆನಿಸುತ್ತಿತ್ತು. ನಮ್ಮ ಮನೆಯ ಅಂಗಳದಲ್ಲಿ ಅವಳಿಗೊಂದು ವಾಸಕ್ಕಾಗಿ ಚಿಕ್ಕ ಕೋಣೆಯನ್ನು ಕೊಡಲಾಗಿತ್ತು. ಅವಳ ಜೀವನವನ್ನು ಸಾಗಿಸಲಿಕ್ಕೆ, ಮಕ್ಕಳಂತಿರುವ ನಾಲ್ಕಾರು ಮೇಕೆಗಳು, ಮುಂಜಾವಿನಲ್ಲಿ ಎದ್ದು ಹೊರಟಳೆಂದರೆ ಸಂಜೆಗೆ ಮನೆಗೆ ಬರುವ ರೂಢಿ. ಮನೆಗೆ ಬರುವಾಗ ತಲೆಯಮೇಲೆ ಹುಲ್ಲ ಹೊರೆ ಅಥವಾ ಕಟ್ಟಿಗೆಯ ಹೊರೆ ತರುವಳು. ಒಂದೊಂದು ದಿನ ಬೇಸರವಾದಾಗ ಅಡವಿಗೆ ಹೋಗುವುದನ್ನು ಬಿಡುವಳು. ವರ್ಷಕ್ಕೊಮ್ಮೆ ಬರುವ ಮೊಹರಮ ಹಬ್ಬದಲ್ಲಿ ಬೂಬೂನ ಉತ್ಸಾಹ ನೋಡುವಂತಹದು. ಇದ್ದ ತನ್ನ ಹಸಿರು ಸೀರೆಯನ್ನು ಉಟ್ಟು, ಯಾರ ಸಣ್ಣ ಮಕ್ಕಳನ್ನಾದರೂ ಎತ್ತಿಕೊಂಡು ಉತ್ಸವ ನೋಡಲು ಹೋಗುವಳು. ನಾನೇ ಅವಳ ಬಗಲಲ್ಲಿ ಕುಳಿತು ಎಷ್ಟೋ ಸಲ ಆಟ ನೋಟಗಳನ್ನು ನೋಡುವುದಕ್ಕೆ ಹೋಗಿದ್ದೇನೆ. ಆದರೂ ಆಕೆ ಸ್ವತಂತ್ರ ಜೀವಿ! ಒಬ್ಬರ ಹಂಗೂ ಅವಳಿಗೆ ಬೇಡ. ಹೀಗೆ ಅವಳ ಜೀವನ ಏರು ಇಳಿತವಿಲ್ಲದೆ ಸಾಗುತ್ತಿತ್ತು. ಸಂಜೆಗೆ ಬೆಳದಿಂಗಳ ದಿನಗಳಲ್ಲಿ ಕಟ್ಟೆಯ ಮೇಲೆ ಕುಳಿತು ರೊಟ್ಟಿ ತಿನ್ನುತ್ತ ಹರಟುವಳು. ಅವಳ ಕರಟೆಯಲ್ಲಿ, ತನ್ನ ಬಾಳನ್ನು ಕುರಿತು ಯಾವ ವಿಚಾರಗಳೂ ಹೊರಹೊಮ್ಮುತ್ತಿರಲಿಲ್ಲ.

ನಾನು ದೊಡ್ಡವನಾದಂತೆ ಬಬೂನಿಗೂ ನನಗೂ ಸಂಬಂಧ ತಪ್ಪ ತೊಡಗಿತು. ಏಕೆಂದರೆ ನಾನು ಕಲಿತು ದೊಡ್ಡವನಾಗಿ ನೌಕರನಾಗ ಬೇಕಾಗಿದ್ದಿತು! ಬೂಬೂನ ಸಂಗಡ ರಾತ್ರಿ ಬೆಳದಿಂಗಳಲ್ಲಿ ಹರಟುತ್ತ ಕುಳಿತುಕೊಂಡರೆ ನನ್ನ ಅಭ್ಯಾಸ ನಿಲ್ಲುವದಲ್ಲ ! ನನ್ನ ತಾಯಿ ಕೂಗಿಕೊಂಡು ನನ್ನನ್ನು ಓದುವುದಕ್ಕೆ ಕುಳ್ಳಿರುಸುತ್ತಿದ್ದರು. ನಾನು ಹೇಗೋ ಕಸವಿಸಿ ಗೊಳ್ಳುತ್ತ ಅಕಬರನ ಇತಿಹಾಸವನ್ನೊ, ಧಾರವಾಡ ಜಿಲ್ಲೆಯ ಭೂಗೋಲವನ್ನೋ ಓದುತ್ತಿದ್ದೆ. ಆದರೆ ಬಬೂ, ನನ್ನ ತಾಯಿ, ಇನ್ನುಳಿದ ಹೆಂಗಳೆಯರು ಒಳ್ಳೆ ಸವಿಯಾಗಿ ಹೊರಗೆ ಹರಟೆ ಹೊಡೆಯುತ್ತಿರುವ ಧ್ವನಿ ನನಗೆ ಒಳಗೆ ಕೇಳಿಸುವುದು. ನನಗೆ ಅದನ್ನು ಕೇಳುವ ಪುಣ್ಯವಿಲ್ಲವಲ್ಲ! ಎಂದು ನನ್ನ ಎಳೆಯ ಮನಸ್ಸು ಆಗ ನೋಯುವುದು. ಆದರೂ ಹೊರಗೆ ಬರುವಂತಿರಲಿಲ್ಲ- ಕಾರಣ ನನ್ನ ಅಭ್ಯಾಸ!

ನಾನು ಮೊದಲೇ ಹೇಳಿದ್ದೆನಲ್ಲ-ನಮ್ಮೂರು ಹಳ್ಳಿಯೆಂದು. ಹಳ್ಳಿಯಲ್ಲಿ ಕತ್ತಲು ದಿನಗಳಲ್ಲಿ ಬೀದಿ ದೀಪಗಳನ್ನು ಹಚ್ಚುವವರಾರು? ಮೇಲೆ ಪ್ರತಿಯೊಬ್ಬರ ಮನೆಯ ಮುಂದೆ ಸಿಂಹದಂತಹ ನಾಯಿಗಳು ಬೇರೆ! ಗುರುತಿಲ್ಲದ ಜನ ಅಡ್ಡಾಡುವುದೇ ತೊಂದರೆ, ಕತ್ತಲೆ ಮುತ್ತಿದ್ದರೂ ನಕ್ಷತ್ರಗಳ ಬೆಳಕನ್ನು ನೋಡುತ್ತ ತಾಯಿ-ಅಕ್ಕನ ಜೊತೆಗೆ, ಕಟ್ಟೆಯ ಮೇಲೆ ಏನನ್ನೋ ಮಾತನಾಡುತ್ತ ಕುಳಿತುಕೊಂಡಿದ್ದೆ. ಆಗ ನನಗೆ ಬಿಡುವಿನ ದಿನ. ಅದರಲ್ಲಿ ಕನ್ನಡ ನಾಲ್ಕನೆಯ ಈಯತ್ತೆ ಪಾಸಾಗಿದ್ದೇನೆ! ಎಂದ ಬಳಿಕ ನನ್ನನ್ನು ಕೇಳುವವರಾರು? ಮನೆಯಲ್ಲಿ ಇಂಗ್ಲೀಷು ಶಾಲೆಗೆ ಕಳಿಸುವ ವಿಚಾರ ತುಂಬ ರಭಸದಿಂದ ನಡೆದಿತ್ತು. ಅಂದು ಯಾಕೋ ಬೂಬೂ ಇನ್ನೂ ಮನೆಗೆ ಬಂದಿರಲಿಲ್ಲ. ತಾಯಿ ನುಡಿದರು: “ಯಾಕೊ ಬೂಬೂ ಇನ್ನೂ ಬರಲಿಲ್ಲ ಮನೆಗೆ; ಕತ್ತಲೆಯ ದಿವಸ!” ಎಂದು ಉದ್ಧಾರ ತೆಗೆಯುವದರಲ್ಲಿಯೇ ಬುಬೂನ ಮೇಕೆಗಳು ಅಂಗಳವನ್ನು ಸೇರಿದುವು. ಬೂಬೂ ಬಹಳ ರಸಿಕಳು. ತಲೆಯ ಮೇಲಿನ ಹೊರೆ ಚೆಲ್ಲಿ, ಮೇಕೆಗಳನ್ನು ಕಟ್ಟಿ ನನ್ನ ಹತ್ತಿರ ಬಂದವಳೇ ಉಡಿಯಲ್ಲಿ ಕಟ್ಟಿಕೊಂಡಿದ್ದ ನಾಲ್ಕು ಎಳೆಯ ಸವತೇಕಾಯಿಕೊಟ್ಟು, ಯಾರಿಗೂ ಕೊಡಬೇಡ, ನೀನೇ ತಿನ್ನು!” ಎಂದಳು. ನನಗೆ ಆಗ ಆದ ಹಿಗ್ಗನ್ನು ಎಷ್ಟು ಹೇಳಿದರೂ ಸಾಲದು. ಆ ನೆನಹು ಬೂಬೂನ ವ್ಯಕ್ತಿತ್ವ ಚಿತ್ರಿಸಲು ಈಗಲೂ ಯಾವಾಗಲೂ ಸಹಾಯ ಮಾಡುವಂತಹದು. ಮಕ್ಕಳ ಮೇಲೆ ಬೂಬೂ ಬಹಳ ಲೋಭಿ! ಒಂದು ದಿನ ರಾತ್ರಿ ನಾವೆಲ್ಲರೂ ಹೊರಗೆ ಕುಳಿತಿದ್ದೆವು. ಕತ್ತಲು ದಟ್ಟವಾಗಿತ್ತು. ಬೂಬೂ ಹಿಂದಿನ ದಿನಗಳ ರಮ್ಯ ನಿಮಿಷಗಳನ್ನು ಎತ್ತಿಕೊಂಡು ಬಹು ಸವಿಯಾಗಿ ಹರಟುತ್ತಿದ್ದಳು. ಒಮ್ಮೆಲೇ ನಾಯಿ “ಗುರ್ ಗುರ್” ಎಂದಿತು. ಬೂಬೂ ಓಡಿಹೋಗಿ “ಯಾರವರು?” ಎಂದು ಕೂಗಿ ಕೊಂಡಳು. ಮತ್ತೆ ತಾನೇ ಒಳ್ಳೆ ಹರ್ಷದ ಧ್ವನಿಯಿಂದ “ನಿನ್ನ ಅಣ್ಣ ಬಂದ!” ಎಂದು ಹಿಗ್ಗಿನಿಂದ, ನನ್ನ ಅಣ್ಣನ ಬ್ಯಾಗು ಮೊದಲಾದ ಸಾಮಾನುಗಳನ್ನು ಎತ್ತಿಕೊಂಡು ಬಂದಳು. ಎಂತಹ ಪ್ರಸಂಗವೇ ಬರಲಿ, ಬೂಬೂ ಹೆರವರ ಸುಖ ದುಃಖಗಳಲ್ಲಿ ಕೂಡಲೆ ಬೆರೆತು ಬಿಡವಳು. ಓಣಿಯ ಮಕ್ಕಳಂತೂ ಅವಳನ್ನು ಕಂಡರೆ ಪಂಚಪ್ರಾಣ! ನಮ್ಮ ಹಳ್ಳಿಯ ಹೆಣ್ಣು ಮಕ್ಕಳಿಗೆ ಕೆಲಸ ಬಹಳ. ತಮ್ಮ ಕೆಲಸದ ಗಡಿಬಿಡಿಯಲ್ಲಿ ಮಕ್ಕಳ ಯೋಗ ಕ್ಷೇಮ ಕೂಡ ಮರೆಯುತ್ತಾರೆ. ಮಕ್ಕಳನ್ನು ಅಳಿಸುತ್ತಾರೆ. ಆದರೆ ಬೂಬೂ, ಯಾವ ಮಕ್ಕಳೇ ಅಳುತ್ತಿರಲಿ-ಕೂಡಲೇ ಹೋಗಿ ಸಮಾಧಾನ ಮಾಡುವಳು. ಅದರ ಹಿಡಿತ ಅವಳಿಗೆ ಗೊತ್ತು. ಅಳುವ ಹುಡುಗರು ನಗ ಹತ್ತುವುವು-ಅವಳ ಆ ಮಾಟಕ್ಕೆ!

ಬೂಬೂ ಹೆಣ್ಣು ಹುಡಿಗಿಯರ ಮೇಲೆ ಬಹಳ ಮಮತೆ ಮಾಡುತ್ತಿದ್ದಳು, ಹಿಂದಕ್ಕೆ ಒಂದು ಸಂಗತಿ ಜರುಗಿತು; ನಮ್ಮ ಹಿತ್ತಲಮನೆ ಈರಪ್ಪ ತನ್ನ ಮಗಳನ್ನು ಗಂಡನ ಮನೆಗೆ ಕಳಿಸದೆ ಕುಳಿತುಕೊಂಡಿದ್ದ. ಅದಕ್ಕೆ ಕಾರಣ ದುಡ್ಡಿನ ಕೊರತೆಯೇ ಇರಬೇಕು. ಬೂಬೂ ಇದನ್ನು ತಿಳಿದುಕೊಂಡಳು. ಹೇಗಾದರೂ ಗಂಗವ್ವನನ್ನು ಗಂಡನ ಮನೆಗೆ ಕಳಿಸಬೇಕೆಂದು ಹಂಚಿಕೆ ಹಾಕಿ, ಕೊನೆಗೆ ಆ ಸಲ ಸುಗ್ಗಿಯಲ್ಲಿ ದುಡಿದು, ಗಂಗಮ್ಮನಿಗಾಗಿ ತಾನೇ ಒಂದು ಹಸಿರು ಸೀರೆ ತಂದು, ಈರಪ್ಪನಿಗೆ ಏನೋ ಬುದ್ದಿ ಹೇಳಿ, ಗಂಗವ್ವನನ್ನು ಕರೆದುಕೊಂಡು ಹೋಗಿ ಬಿಟ್ಟು ಬಂದಳು. ಗಂಗಮ್ಮ ಈಗ ಎರಡು ಮಕ್ಕಳ ತಾಯಿ. ಆಕೆ ಮೊನ್ನೆ ನಮ್ಮೂರಿಗೆ ಬಂದಾಗ, ಬೂಬೂನನ್ನು ಹೊಗಳಿ ಏನನ್ನೋ ಕೊಡಹೋದರೆ, ಬೂಬೂ ಅವಳ ಬಾಯಿಮುಚ್ಚಿ ಅಲ್ಲಿಂದ ಎದ್ದು ಹೋದಳು. ಯಾರ ಮನೆಯಲ್ಲಾಗಲಿ ಕೇಡಾದರೆ ತಾನೇ ಓಡಿ ಹೋಗಿ, ತನ್ನ ಮೈ ಕೈಗಳ ಎಚ್ಚರಿಕೆ ಇಲ್ಲದೆ ದುಡಿಯುವಳು. ಬಣಜಿಗರ ಶಿವಪ್ಪನ ಹೆಂಡತಿ, ಎರಡು ಮಕ್ಕಳನ್ನು ಬಿಟ್ಟು ತೀರಿಕೊಂಡಳು. ಬೂಬೂ ಅ೦ದು ಅತ್ತು ಅತ್ತು ಹಣ್ಣಾಗಿ, ಕೊನೆಗೆ ಆ ಮಕ್ಕಳನ್ನು ಕರೆದು ಕೊಂಡು ಮನೆಗೆ ಬಂದಳು. ತನ್ನ ಮಕ್ಕಳ ಹಾಗೆ ಜೋಪಾನ ಮಾಡಿದ್ದಾಳೆ. ಆ ಹುಡುಗರು ಅವಳನ್ನು ‘ಅವ್ವಾ’ ಎಂದು ಕೂಗುತ್ತವೆ!

ಜಾತ್ರೆಯ ದಿನಗಳಲ್ಲಿ ಸಣ್ಣ ಸಣ್ಣ ಹುಡುಗರನ್ನು ಕೂಡ ಹಾಕಿ ಹಾಡು ಹೇಳುವುದು, ತನ್ನ ಮನೆಯಲ್ಲಿಯ ತಿನಿಸನ್ನು ಮಕ್ಕಳಿಗೆ ಹಂಚುವುದು ಹೀಗೆ ಏನನ್ನಾದರೂ ಮೋಜಿನ ಸಂಗತಿ ಬೂಬೂ ಮಾಡುತ್ತಲೇ
ಇರುತ್ತಿದ್ದಳು.

* * *
ಅಂದು ರಾತ್ರಿ ನನ್ನನ್ನು ಇಂಗ್ಲಿಷ್ ಶಾಲೆಗೆ ಕಳಿಸುವುದನ್ನು ನಿಶ್ಚಯ ಮಾಡಿದರು. ನಾನು ಎರಡು ಮೂರು ದಿನಗಳಲ್ಲಿ ಧಾರವಾಡಕ್ಕೆ ಹೋಗುವವ, ಮರುದಿವಸದಿಂದ ಬೂಬೂ ಬಹಳ ಸಣ್ಣ ಮೋರೆ ಮಾಡಿಕೊಂಡು ಅಡ್ಡಾಡಹತ್ತಿದಳು. ಆದರೆ ನನಗೆ ಅವಳ ಒಳನೋವು ಆಗ ತಿಳಿಯಲಿಲ್ಲ. ನಾನು ಹೊರಡುವ ದಿನ ಅವಳು ನಸುಕಿನಲ್ಲಿಯೆ ಅಡವಿಗೆ ಹೋಗಿ ಬಿಟ್ಟಿದ್ದಳು. ಯಾಕೋ, ದೇವರೇ ಬಲ್ಲ! ಮುಂದೆ ವರುಷಕ್ಕೆ ಒಮ್ಮೆ ಅಥವಾ ಎರಡು ಸಲ ಹಳ್ಳಿಗೆ ಹೋಗುವ ರೂಢಿ ನನ್ನದಾಯಿತು. ಬರಬರುತ್ತಾ ಹಳ್ಳಿಯ ಜೀವನ ಸೇರದಾಯಿತು. ಬೂಬನ ನೆನಹು ನನಗೆಲ್ಲಿ? ಹಳ್ಳಿಗೆ ಹೋದಾಗ ಬೂಬೂ ಬಂದು ನನ್ನನ್ನು ಮಾತನಾಡಿಸುವಳು. ಆದರೆ ನಾನು ಹಿಂದೆ ಕೇಳಿದಾಗ ಅನೇಕ ರಮ್ಯ ಕಥೆಗಳನ್ನು ಅವಳು ಹೇಳುತ್ತಿದ್ದಳು; ಈಗ ನನಗೆ ಕಥೆ ಕೇಳುವ ಹವ್ಯಾಸವೇ ಉಳಿದಿರಲಿಲ್ಲ. ಮೇಲಾಗಿ ನಾನು ಈಗ ಕಲಿತು ಸುಧಾರಿಸಿದವ ಬೇರೆ! ಅವಳ ಬಗ್ಗೆ ನಾನೀಗ ಅಷ್ಟು ಆಸಕ್ತಿಯನ್ನು ತೋರಿಸುತ್ತಿರಲಿಲ್ಲ. ಬೂಬೂ ನಿತ್ಯ ತೃಪ್ತಿ ಹೊಂದಿದವಳು. ನನ್ನ ಜೀವನದಲ್ಲಿ ಅನೇಕ ಮಾರ್ಪಾಡುಗಳು ಆದಂತೆ, ಅವಳ ಜೀವನದಲ್ಲಿ ಯಾವ ಬದಲಾವಣೆಗಳೂ ಆಗಿರಲಿಲ್ಲ. ತುಸು ಬಡಕಲಾಗಿದ್ದಳು ಮಾತ್ರ!

ಕಾಲವು ಯಾರಿಗೂ ಅರಿವು ಇರದಂತೆ ಜಾರಿ ಹೋಗುತ್ತೆದೆ. ನಾನು ಜೂನಿಯರ್ ಬಿ. ಎ. ತರಗತಿಯಲ್ಲಿ ಓದುತ್ತಿದ್ದೆ, ಪರೀಕ್ಷೆಯ ಗದ್ದಲವಂತೂ ಇರಲಿಲ್ಲ. ಹಾಗೂ ಹೀಗೂ ಮಾಡಿ ಪರೀಕ್ಷೆಯ ಕಾಟ ತೀರಿಸಿಕೊಂಡು ಊರಿಗೆ ಹೊರಟೆ. ನಾನು ಊರಿಗೆ ಹೋಗುವಾಗ ರಾತ್ರಿಯ ಗಾಡಿಯನ್ನು ಹಿಡಿಯುತ್ತಿದ್ದೆ. ಅಂದು ಕೂಡ ರಾತ್ರಿಯ ಗಾಡಿಗೆ ಹೊರಟೆ. ನಮಗೆ ಗಾಡಿ ಸರಿಯಾಗಿ ಹತ್ತು ಗಂಟೆಗೆ ತಲುಪಿತು. ಕಗ್ಗತ್ತಲು ಸುತ್ತಿತ್ತು. ಗಾಡಿಯಿಂದ ಇಳಿದವರೇ ಕೆಲವು ಜನ ಕಗ್ಗತ್ತಲೆಯಲ್ಲಿ ಎಡಹುತ್ತ, ನಾಯಿಗಳ ಬೊಗಳಾಟಕ್ಕೆ ಮನದಲ್ಲಿಯೇ ಅಂಜುತ್ತ, ಮನೆಯನ್ನು ಸಮೀಪಿಸಿದೆ. ಮನೆಯ ಮುಂದೆ ದೀಪದ ಬೆಳಕು ಕಂಡು ತುಸು ಮನಕ್ಕೆ ಹಗುರೆನಿಸಿತು. ತಾಯಿ, ಅಕ್ಕ ನನ್ನನ್ನು ಅಕ್ಕರೆಯಿಂದ ಬರಮಾಡಿಕೊಂಡರು. ಕೂಡಲೆ ಊಟದ ಸಿದ್ದತೆ ನಡೆಯಿತು. ನನ್ನನ್ನು ಅನೇಕ ವಿಷಯದ ಬಗ್ಗೆ ಕೇಳಿದರು, ಆಗ ಬಬೂನ ವ್ಯಕ್ತಿ ಮಾತ್ರ ನಡುವೆ ಇರಲಿಲ್ಲ! ಇರಬೇಕಾದವಳು. ನಾನು ಒಮ್ಮೆಲೇ ಅವಳ ಕೋಣೆಯ ಕಡೆಗೆ ನೋಡಿದೆ; ಬಾಗಿಲು ಇಕ್ಕಿತ್ತು. ನಮ್ಮ ತಾಯಿಯವರನ್ನು ಕೇಳಿದೆ: “ಬೂಬೂ ಎಲ್ಲಿದ್ದಾಳೆ?” ಎಂದು. ತಾಯಿ ದೀರ್ಘವಾಗಿ ಉಸಿರನ್ನೊಂದು ಬಿಟ್ಟು “ಬಬೂ ಹೋಗಿ ಹಳೆಯ ಮಾತಾಯಿತು” ಎಂದರು. ಅವರ ಕಣ್ಣಲ್ಲಿ ಹನಿಕಂಡಿತು! ಈ ಮಾತು ಹೊರಡಬೇಕಾದರೆ ಅವರ ಹೃದಯ ತುಂಬಿ ಬಂದಿತ್ತು. ಬೂಬೂ ಅವರ ಬಾಳಿನುದ್ದಕ್ಕೂ ಗೆಳತಿಯಂತೆ ಬಾಳಿ ಹೋದಳು. ನನಗೂ ಸಹ ಒಮ್ಮೆಲೇ ಕೈಯಲ್ಲಿಯ ವಸ್ತುವನ್ನು ಕಳೆದುಕೊಂಡು ಹುಡುಕುವ ಮನುಷ್ಯನ ಗತಿಯುಂಟಾಯತು. ಆಗ ತಾಯಿ ಸಮಾಧಾನವಾಗಿ ಹೇಳಿದರು “ಅವಳು ಸತ್ತಾಗ ನೆರೆದಷ್ಟು ಜನರನ್ನು ಇನ್ನಾವಾಗಲೂ ನಾನು ನೋಡಲಿಲ್ಲ. ಎಲ್ಲರೂ ಬಬೂನನ್ನು ನೆನಸಿ ಹಾಡಿ ಅಳುವವರೇ, ಬಹಳ ಗುಣವಂತಿ! ನಮ್ಮ ವಠಾರದಲ್ಲಿ ಇಪ್ಪತ್ತೆರಡು ವರುಷ ಇದ್ದರೂ, ಒಬ್ಬರಿಗೂ ಬೇಡವಾಗಿರಲಿಲ್ಲ. ಪ್ರತಿಯೊಬ್ಬರ ಸುಖ-ದುಃಖಗಳಲ್ಲಿ ಕಲೆತು ಒಂದಾಗುವವಳು” ಎಂದು ಅವರು ಹೇಳುತ್ತಿರುವಾಗಲೇ, ನಾನು ಕುತೂಹಲದಿಂದ “ಅವಳ ಊರು ಯಾವುದು? ಗಂಡ ಇಲ್ಲವೇ ಅವಳಿಗೆ?” ಎಂದೆ. ಬಹಳ ದಿನಗಳಿಂದಲೂ ಕೇಳಬೇಕೆನಿಸಿದ ಪ್ರಶ್ನೆ. ನಮ್ಮ ತಾಯಿಗೆ ಅವಳು ಹೇಳಿದ ಸಂಗತಿಯ ಸಾರಾಂಶ ಹೀಗಂತೆ. ಅವಳಿಗೆ ತಿಳಿವು ಬರುವ ಮೊದಲು ಅವಳ ತಂದೆ ತಾಯಿ ತಿರಿದ್ದರಂತೆ! ಅವಳು ಹನ್ನೆರಡು ವರುಷದವಳಾದಾಗ, ಅವಳ ಅಜ್ಜಿ ಅವಳನ್ನು ಒಬ್ಬನಿಗೆ ಕೊಟ್ಟು ಮದುವೆ ಮಾಡಿದಳು. ಗಂಡ ತೀರಿದ; ಯಾವುದೂ ಜೀವಕ್ಕೆ ಸೊಗಸೆನಿಸಲಿಲ್ಲ. ಸುಗ್ಗಿಯ ಜನರ ಗುಂಪಿನಲ್ಲಿ ಸೇರಿ ಇಲ್ಲಿಗೆ ಬಂದು ಜೀವಿಸಿದವಳಂತೆ. ಮಾಡಿಕೊಂಡಿದ್ದರೆ ಮತ್ತೊಂದು ಮದುವೆ ಮಾಡಿಕೊಳ್ಳಬಹುದಾಗಿತ್ತು. ಆದರೂ -ಬೂಬೂ ಅದನ್ನು ಒಪ್ಪಲಿಲ್ಲವೇಕೆ! ನಾನು ಮೂರು ವರುಷದವನಿದ್ದನಂತೆ! ಅವಳು ನನ್ನನ್ನು ಎತ್ತಿ ಆಡಿಸಿ ಹರ್ಷ ಪಡುತ್ತಿದ್ದಳಂತೆ. ತಾನು ತೀರುವ ಮೊದಲು ಆಕೆ ನನ್ನ ಮದುವೆಯ ಬಗ್ಗೆ ಮೇಲಿಂದ ಮೇಲೆ ಕೇಳುತ್ತಿದ್ದಳೆಂದು ತಾಯಿ ಹೇಳುತ್ತಿರುವಾಗಲೇ ತನ್ನದೆನ್ನುವುದೇನೂ ಇಲ್ಲದಿದ್ದರೂ ಎಲ್ಲವೂ ತನ್ನದೆಂದು ದುಡಿದು, ಬಾಳಿ, ಎಲ್ಲಿಯೋ ಹುಟ್ಟಿ ಎಲ್ಲಿಯೋ ತೀರಿಹೋದ ಅವಳ ಬಗ್ಗೆ ಕನಿಕರ ಹುಟ್ಟಿ ನಾನು ಒಂದು ಬಿಸಿಯುಸಿರನ್ನು ವಾತಾವರಣದಲ್ಲಿ ಒಂದು ಗೂಡಿಸಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೈತನ್ಯ ಸೆಲೆ ಶಿಷ್ಯ
Next post ಹಗಲಿದೊ ಮುಗಿಯುತ ಬಂತು

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys