ಒಂದು ಕೊಲೆ

ಒಂದು ಕೊಲೆ

ಏಳು ವರ್ಷದ ಮಗನ ಕೈಯಿಂದ ಚಿತೆಗೆ ಕೊಡಿಸಿದ ಬೆಂಕಿ ಸರಿಯಾಗಿ ಹತ್ತಿಕೊಳ್ಳಲು ನಾಕುಶಿಯನ್ನು ತೋರಿಸುತ್ತಿತ್ತು. ತೊಯ್ದ ಕಟ್ಟಿಗೆಯ ಕೊಳ್ಳಿ ಮತ್ತೆ ಮತ್ತೆ ತುಪ್ಪವನ್ನು ಬೇಡುತ್ತಿತ್ತು. ಸಂಬಂಧಪಟ್ಟವರು ಅದರ ಮೇಲೆ ಉಪ್ಪು ತುಪ್ಪವನ್ನು ಎರಚಿದರು. ಆಗೊಮ್ಮೆ ಬೆಂಕಿ ಬುಗ್ಗೆಂದು ಉರಿದು ಸಂಜೆಯನ್ನು ಸುತ್ತಲೂ ಬೆಳಗುವಂತೆ ಮಾಡಿ ಅಲ್ಲಿ ಸೇರಿರುವವರ ಮುಖ ಪರಿಚಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಿತ್ತು.

ಶಿವಾಜಿ ಪಾರ್ಕಿನ ಸ್ಮಶಾನದ ತುಂಬೆಲ್ಲ ಮರಣಕ್ಕೆ ಬಂದವರು. ಸತ್ತವನು ತುಂಬಾ ಪ್ರತಿಷ್ಟಿತನಿರಬೇಕೆಂದು ಅದರಿಂದ ಅಂದಾಜು ಮಾಡುವಂತಿತ್ತು. ಅಲ್ಲಲ್ಲಿ ಸಣ್ಣಪುಟ್ಟ, ಗುಂಪುಗಳನ್ನು ಮಾಡಿಕೊಂಡು ಉರಿಯುವ ಚಿತೆಯ ಕುರಿತಲ್ಲದೆ, ಬಹುಶಃ ಸತ್ತ ವ್ಯಕ್ತಿಯ ಖಾಸಗಿ ವಿಷಯಗಳ ಕುರಿತು ಮಾತಾಡುತ್ತಿದ್ದಂತಿತ್ತು. ಗುಂಪು ವರ್ಗಭೇಧದಿಂದ ಕೂಡಿತ್ತು. ಕೆಲವು ಗುಂಪಿನವರು ೪೫ದರ ಪ್ರಾಯವನ್ನು ದಾಟಿದ ಶುಭ್ರ ವಸನದ, ಕುತ್ತಿಗೆಯಲ್ಲಿ ಎರಡೆಳೆಯ ಬಂಗಾರದ ಚೈನು ಧರಿಸಿಕೊಂಡ, ಬೇರೆಬೇರೆ ಪ್ರಮಾಣದಲ್ಲಿ ಹೊಟ್ಟೆಬೆಳೆಸಿಕೊಂಡ ಎರಡೆರಡು ಉಂಗುರ ಧರಿಸಿದ ಕೈ ಬೆರಳುಗಳಲ್ಲಿ ತಮ್ಮ ಕಾರಿನ ಚಾವಿಗೊಂಚಲನ್ನು ಕುಣಿಸುತ್ತ ತಾವಾಡುವ ಮಾತಿನ ಸ್ಪಷ್ಟಿಕರಣಕ್ಕೆ ಉಪಯೋಗಿಸುತ್ತಿರುವುದು ಕಾಣುತ್ತಿತ್ತು. ಕೆಲವು ಗುಂಪಿನಲ್ಲಿ ಸುದೃಢ, ಜೀನ್ಸ್ ಮತ್ತು ಅಗಲದ ಬಣ್ಣ ಬಣ್ಣದ ಅಂಗಿಗಳನ್ನು ಧರಿಸಿಕೊಂಡ, ವಿಚಿತ್ರ ರೀತಿಯಲ್ಲಿ ತಲೆಕೂದಲೂ ಮೀಸೆ ಬೆಳೆಸಿದ ೨೫ ರಿಂದ ೪೦ ರ ವರೆಗಿನ ವಯೋಮಾನದ ತರುಣರು ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. ೨೫ರ ಪ್ರಾಯವನ್ನು ಮೀರದ ತರುಣರ ಕೆಲವು ಗುಂಪಿನಲ್ಲಿ ಇತರ ವಿಷಯಗಳ ಜೊತೆಗೆ ಸಾವಿನ ಕುರಿತಾದ ಗಹನ ವಿಚಾರವೂ ಮಾತಿನ ಸಂಘರ್ಷಕ್ಕೆ ಸಿಕ್ಕು ಬಿಸಿಯೆಬ್ಬಿಸಿತ್ತು. ಅಲ್ಲಲ್ಲಿ ಇತರ ಅನೇಕ ಮಿಶ್ರ ಗುಂಪಿನವರು ಮೌನವಾಗಿ ತಮ್ಮ ತಮ್ಮೊಳಗೆಯೆ ತರ್ಕವಿತರ್ಕಗಳನ್ನು ಮಾಡಿಕೊಳ್ಳುವ ಮುಖ ಮುದ್ರೆಯಲ್ಲಿದ್ದರು. ಇವರೆಲ್ಲರ ಮುಖ ಚರ್ಯೆಯನ್ನು ಚಿತೆಯ ಬೆಂಕಿಯ ತೀವ್ರ ಪ್ರಕಾಶದಲ್ಲಿ ಕಂಡಾಗ ವಿಶೇಷವಾದ ಏನನ್ನೂ ಓದಲು ಆಗುವಂತಿರಲಿಲ್ಲ. ಬಹುತೇಕ ಎಲ್ಲರೂ ಸ್ಮಶಾನದ ಈ ನಿತ್ಯ ವಿಧಿಯನ್ನು ಮನುಷ್ಯನ ಬದುಕಿನ ಈ ನಿರ್ಣಾಯಕ ಸ್ಥಿತಿಯ ಸತ್ಯದ ಅರಿವಿನ ಅಭ್ಯಾಸವನ್ನು, ನಿಶ್ಚಿಂತತೆಯನ್ನು ಸರಳವಾಗಿ ಸ್ವೀಕರಿಸಿಕೊಂಡ ಭಾವವನ್ನೇ ವ್ಯಕ್ತಪಡಿಸುತ್ತಿದ್ದರು. ನಡೆದು ಹೋದ ಈ ದುರಂತದ ಪರಿಣಾಮ ಯಾರ ಮನಸ್ಸನ್ನೂ ಕದಡಿದ, ಮುಂಬಯಿ ಜೀವನದ ಆತಂಕ ಯಾವದೇ ರೀತಿಯ ಯೋಚನೆಗೆ ತೊಡಗಿಸಿದ ಭಾವ ಕಾಣಿಸಲಿಲ್ಲ. ಚಿತೆಯ ಸುತ್ತ ಕೆಲವು ಅನುಭವಿಕರು ಸತರ್ಕರಾಗಿದ್ದು ಕ್ರಿಯಾಕರ್ಮಗಳನ್ನು ಮಾಡುತ್ತಿದ್ದರು. ಗಂಡಸರಲ್ಲಿ ಯಾರೇ ಅಳುವುದಾಗಲೀ, ಬಿಕ್ಕಳಿಸುವುದಾಗಲೀ ಕಾಣಿಸುತ್ತಿರಲಿಲ್ಲ. ಬಹುಶಃ ಸ್ಮಶಾನದಲ್ಲಿ ಅಳುವನ್ನು, ಭಾವನೆಯನ್ನು ಎಲ್ಲರೂ ಹತ್ತಿಕ್ಕಿಕೊಳ್ಳತ್ತಾರೋ ಏನೋ.

ಆದರೂ ಸ್ಮಶಾನದ ಗೇಟಿನ ಹತ್ತಿರ, ಚಿತೆಯಿಂದ ಬಹುದೂರದಲ್ಲಿ ಮಹಿಳೆಯರ ಸಣ್ಣದೊಂದು ಗುಂಪು ಕಾಣಿಸಿಕೊಂಡಿತು. ಅದರಲ್ಲಿ ಒಬ್ಬ ನಡುವಯಸ್ಸಿಗೆ ಸರಿದ ಹೆಂಗಸನ್ನು ಇತರರು ಹಿಡಿದುಕೊಂಡಿದ್ದು ಅವಳ ರೋದನವನ್ನು, ಉದ್ವೇಗವನ್ನು ತಡೆಯುವ ಪ್ರಯತ್ನ ಮಾಡುತ್ತಿರುವುದು ಕಾಣುತ್ತಿತ್ತು. ಪುರುಷ ಪ್ರಧಾನವಾದ ಈ ಸ್ಮಶಾನ ವ್ಯವಸ್ಥೆಯಲ್ಲಿ ಈ ಹೆಂಗಸು ಹೇಗೆ ಬಂದಳು, ಯಾರು ಮತ್ತು ಏಕೆ ಬಿಟ್ಟರು ಎನ್ನುವುದೇ ಅರ್ಥವಾಗದಂತಿತ್ತು. ಸಂಜೆಗತ್ತಲಿನಲ್ಲಿ ಚಿತೆಯಿಂದ ಮೇಲಕ್ಕೆ ಹೊರಟು ಹಬ್ಬುವ ಬೆಳಕಿನಲ್ಲಿ ಅವಳು ತನ್ನ ಉದ್ವೇಗವನ್ನು ತಡೆಯುವ ಸ್ಥಿತಿಯಲ್ಲಿಲ್ಲ ಎನ್ನುವುದು ಕಾಣುತ್ತಿತ್ತು. ಬಿಚ್ಚಿದ ಹರಡಿದ ದಪ್ಪ ಕೂದಲೂ, ಅಸ್ತವ್ಯಸ್ತಗೊಂಡ ಮೈ ಬಟ್ಟೆ, ಕಣ್ಣೀರಿನಿಂದ ತೊಯ್ದ ಮುಖವಲಯ, ಬಿಕ್ಕಳಿಕೆಯಿಂದ ಅವಳು ಈ ಧಗಧಗಿಸುವ ಚಿತೆಗೂ ತನಗೂ ಇರುವ ಸಂಬಂಧ ಸಾಕ್ಷ್ಯವನ್ನು ಕೊಡುವಂತಿತ್ತು.

ಯಾವ ಸಂಬಂಧವೋ, ಬಾಯಿಯಂದ ಏನೋ ಹೇಳಲು ಚಡಪಡಿಸುವ ಒಳಗಿನಿಂದ ಧುಮುಕುವ ಭಾವೋದ್ವೇಗವನ್ನು ತಡೆಯಲಾರದೆ ಸಂಕಟ ಪಡುವ ಅವಳ ವಿವಶತೆಯನ್ನು ಹತ್ತಿರ ಬಂದು ‘ಅಕ್ಕ ಸುಮ್ಮನಿರು, ತಡೆದುಕೋ’ ಎಂದು ಮತ್ತೆ ಮತ್ತೆ ಹೇಳುವಾಗ ಅವಳ ದುಃಖ ಹತೋಟಿ ತಪ್ಪಿದಂತೆ ‘ಇಲ್ಲ…. ನಾನೇ….ನಾನೇ’ ಎನ್ನುತ್ತ ಮುಂದೆ ಹೇಳಲಾರದೆ ಕಷ್ಟ ಪಡುವಾಗ ಆ ಹುಡುಗರು ‘ಅಕ್ಕ ತಡಕೊಳ್ಳು, ಮಾತಾಡಬೇಡ, ಮನೆಗೆ ಹೋಗುವುದಾ…’ ಎಂದಾಗ ‘ಬೇಡ, ಬೇಡ, ಮನೆಗೆ ಬೇಡ, ನಾನು ಇದೆಲ್ಲ ಮುಗಿದ ನಂತರವೆ ಹೊರಡುವೆ, ನನಗೆ ಇದನ್ನೆಲ್ಲ ನೋಡಬೇಕು’ ಎನ್ನುತ್ತ ಅವಳು ತುಸು ಧೈರ್ಯ ತೋರಿಸಿದಾಗ ಅವರು ಬೇರೆ ಕಡೆಗೆ ಹೋದರು. ಹೆಣಕ್ಕೆ ಬೆಂಕಿ ಹಿಡಿದಿತ್ತು. ಅಗ್ನಿಗೆ ಮತ್ತೆ ಮತ್ತೆ ಉಪ್ಪು, ತುಪ್ಪಗಳನ್ನು ಹಾಕುವಾಗ ಬೆಂಕಿ ಬುಗ್ಗೆಂದು ಎದ್ದು ಆಕಾಶದ ಕಡೆಗೆ ತನ್ನ ಕೆಂಪು ನಾಲಗೆಯನ್ನು ಚಾಚಿದಾಗ, ಗಾಳಿ ಬೀಸಿ ಆ ಜ್ವಾಲೆಯ ನಾಲಗೆಯನ್ನು ಅಲುಗಾಡಿಸಿ ಭಯಂಕರ ಭೂತ ತನ್ನ ರಕ್ತಮಯ ನಾಲಗೆಯನ್ನೂ ನಾಲ್ದೆಸೆಗೂ ಚಾಚಿ ಕುಣಿಯುತ್ತಿರುವ ಅಭಾಸವನ್ನು ಹುಟ್ಟಿಸಿ, ಭಯಗೊಳಿಸಿತು. ಆದರೆ ಸ್ಮಶಾನಕ್ಕೆ ಬರುವ ಅನೇಕರಿಗೆ ಇಂಥ ಭಯದ ಕಲ್ಪನೆಯಾಗಲಿ, ರುದ್ರಭೂಮಿಯು ಬಿಚ್ಚುವ ಮನುಷ್ಯನ ಭಾವುಕತೆಯೆಲ್ಲವು ಸ್ವಂತದ ಅನುಭೂತಿಗಳ ಪಾತಳಿಯಲ್ಲಿ ಮಾತ್ರ ಹುದುಗಿಕೊಂಡು ಇತರ ಎಲ್ಲವೂ ವ್ಯಾವಹಾರಿಕ ಸ್ವರೂಪವನ್ನಷ್ಟೆ ಪಡೆಯುತ್ತದೆ. ಈ ಸ್ಮಶಾನದಲ್ಲಿ ನಿತ್ಯವೂ ಬಂದು ಸುಟ್ಟು ಕೊಳ್ಳುವ ಮನುಷ್ಯ ಶರೀರಗಳಿಗೆ ಲೆಕ್ಕವಿಲ್ಲ. ಅಲ್ಲಿ ದುಡಿಯುವ ಮನುಷ್ಯರು ನಾವು ತುಂಬಾ ನಾಜೂಕಾಗಿ ಸಾಕಿದ ಶರೀರದ ಮೇಲೆ ದೊಡ್ಡ ದೊಡ್ಡ ಕಟ್ಟಿಗೆ ತುಂಡುಗಳನ್ನು ಯಾವ ವಿಕಾರವೂ ಇಲ್ಲದೆ ಹೇರಿಸುತ್ತಾರೆ. ಈ ನಿತ್ಯ ಕರ್ಮದೊಂದಿಗೆ ಅವರ ಬದುಕಿನ ಬವಣೆ ಎಷ್ಟು ಕೂಡಿ ಕೊಂಡಿದೆಯಲ್ಲ! ಶವದ ಜೊತೆ ಬಂದವರೂ ಹೆಚ್ಚು ಕಡಿಮೆ ಹಾಗೆಯೆ. ಮನುಷ್ಯ ಸಂಬಂಧದ ಮರ್ಮಗಳನ್ನೆಲ್ಲ ‘ಎಲ್ಲರೂ ಒಂದು ದಿನ ಸಾಯಲೇಬೇಕು’ ಎಂಬ ಶುಷ್ಕ ತತ್ವದ ಮರೆಗೆ ಹಾಕಿ ವ್ಯವಹಾರಿಕವಾದ, ತೋರಿಕೆಯ ಸಂಬಂಧಗಳನ್ನು ತೋರಿಸಿ ತಮ್ಮ ತಮ್ಮ ಕಾರ್ಯ ಕ್ಷೇತ್ರಕ್ಕೆ ಹೋಗಿ ಬಿಡುತ್ತಾರೆ. ಎಲ್ಲವೂ ಔಪಚಾರಿಕ, ಕೃತಕ ಭ್ರಾಮಕ.

ಸದಾನಂದ ಜೀವಂತ ಇರುವಾಗ ಅವನ ಹಿಂದು ಮುಂದು ಇದ್ದವರೆಲ್ಲ ಅವನ ಸಾಹಸದ, ಸಂಪತ್ತಿನ, ಉದಾರತನದ ಲಾಭ ಪಡೆಯಲು ಪೈಪೋಟಿ ನಡೆಸುತ್ತಿದ್ದರು. ಜೀವನದ ಉಚ್ಚಾಕಾಂಕ್ಷೆ ಸಮಪ್ರಾಯದ ದೃಢಕಾಯ ಮಿತ್ರರ ಸಂಪರ್ಕದಿಂದ ಲಭಿಸಿದ ನೈತಿಕ ಉತ್ತೇಜನ, ಮುಂಬಯಿಯ ಹದಗೆಡುತ್ತಿರುವ ಜೀವನ ಕ್ರಮ ಆರ್ಥಿಕ, ಅಸಿರತೆಗಳಿಂದ ಉಂಟಾದ ಮಾನಸಿಕ ಭೀತಿಗಳೇ ಕಾರಣವಾಗಿ ಅವನು ಸಹಜ ಜೀವನದಿಂದ ಒಂದು ಮರೀಚಿಕೆಯ ಬೆನ್ನು ಹತ್ತಿ ಓಡುತ್ತಿದ್ದು ಕೊನೆಗೆ ಎಲ್ಲಿಯೋ ಆಪತ್ತಿನ, ಅಭದ್ರ, ಅಮಾನುಷ ಲೋಕವನ್ನು ಪ್ರವೇಶಿಸಿ ಅದರಲ್ಲಿ ಕರಗಿ ಹೋದದ್ದರ ಅರಿವು ಅವನಿಗೆ ಆಗಿರಲೇ ಇಲ್ಲ. ಅವನನ್ನು ಅಡ್ಡಗಟ್ಟುವ ಬುದ್ದಿ ಹೇಳಿ ಜ್ಞಾನ ಹುಟ್ಟಿಸುವ, ಪ್ರೀತಿ-ವಾತ್ಸಲ್ಯದ ಬಂಧನದಿಂದ ಕಟ್ಟಿ ಹಾಕುವ ಯಾವುದೇ ಶಕ್ತಿ ಅವನ ಸಮೃದ್ದ ತನ್ನದೇ ಆದ ಒಂದು ಜಗತ್ತನ್ನು ನಿರ್ಮಿಸುವ ನಿರ್ಧಾರದ ಎದುರು ನಿಲ್ಲಲೇ ಇಲ್ಲ. ತಂದೆಗಳಿಸಿಟ್ಟ ಸಂಪತ್ತು, ವಾತ್ಸಲ್ಯ, ಮಾರ್ಗದರ್ಶನರಹಿತ ಪರಿಸರ, ಸಂಘಿನಿಯ ಸಿರಿವಂತಿಕೆಯ ದರ್ಪದ ಅಪೇಕ್ಷಗಳು ಅವನನ್ನು ಸಂಪೂರ್ಣವಾಗಿ ದಿಕ್ಕುಗೆಡಿಸಿದ್ದವು. ಅವನು ಹೆಣ್ಣಿನ ರೋಮಾಂಚಕ ಪ್ರೇಮದಿಂದ ವಂಚಿತನಾದನು. ನಗರದ ಥಳಕು, ಸಂಪತ್ತು, ಪ್ರತಿಷ್ಠೆ ಅವನ ಮೇಲೆ ಅಧಿಕಾರ ನಡೆಸತೊಡಗಿದವು. ಅವನು ನನ್ನ ಸಹಪಾಠಿಯಾಗಿಯೂ ಬದುಕಿನ ನಮ್ಮ ಮಾರ್ಗ ಬೇರೆಯಾಯಿತು. ಬಿ.ಎ. ಮುಗಿಸುವ ತನಕ ನಮ್ಮ ದೋಸ್ತಿ ಇದ್ದಿತು. ಅವನ ಒಲವು ಹೆಚ್ಚೆಚ್ಚು ಚಾರ್ವಾಕತನದ ಕಡೆ ಓಡುತ್ತಿದ್ದಂತೆ ನನ್ನದು ಸರಳ-ಸಾಮಾನ್ಯವಾಗತೊಡಗಿತು. ನಮ್ಮ ನಡುವಿನ ಕಂದರ ಬೆಳೆದು ಕ್ರಮೇಣ ನಾನು ಅವನೆದುರು ಸಣ್ಣತನದ ಅನುಭವ ಪಡೆಯತೊಡಗಿ, ಸಂಪರ್ಕವೇ ನಿಂತು ಹೋಯಿತು. ಅವನ ಹೆಂಡತಿ ತುಂಬಾ ವರದಕ್ಷಿಣೆ ತಂದವಳು. ಬಹಳ ಚೆಲುವೆಯೂ ಹೌದು. ಅವನ ಕಣ್ಣಿಗೆ, ಶರೀರಕ್ಕೆ ಅಪಾರ ಸುಖವನ್ನು ಕೊಡಲು ಆಕೆಯಲ್ಲಿ ಸಾಮರ್ಥ್ಯವಿತ್ತು. ಆದರೆ ಅವನ ಮನಸ್ಸನ್ನು ಮಾತ್ರ ಆಕೆ ತುಂಬಲಿಲ್ಲ.

ಮುಂಬಯಿಯಂತಹ ಮಹಾನಗರದಲ್ಲಿ ಬೆನ್ನು ಹತ್ತಲು ಒಡ್ಡುವ ಪ್ರಲೋಭನೆಗಳು ಹತ್ತಾರು. ಸಂಪತ್ತಿನ ರಾಶಿಯೇ ಇಲ್ಲಿರುವಾಗ ಮತ್ತು ಇದು ಸುಖ ಚೈನಿಯ ಅಮೂಲ್ಯ ಸಾಧನವಾಗಿರುವಾಗ, ಇದನ್ನು ಗಳಿಸಲು, ಸಂಗ್ರಹಿಸಲು, ಕೋಟ್ಯಾಧೀಶನಾಗಿ ಪ್ರತಿಷ್ಟೆ ಪಡೆಯಲು ಬಯಸದವರು ವಿರಳ. ನಿರ್ಭಯ ಮತ್ತು ಕುಶಾಗ್ರ ಬುದ್ದಿಯ ಪ್ರತಿಯೊಬ್ಬನೂ ಈ ನಗರದಲ್ಲಿ ಶ್ರೀಮಂತನಾಗಿ ಜಯಶಾಲಿಯಾಗಿದ್ದಾನೆ. ಕೈಲಾಗದ ಹೇಡಿ ಬದುಕುವ ಹೋರಾಟವನ್ನು ಸತತವಾಗಿ ನಡೆಸಿದ್ದಾನೆ.

ಈಚಿನ ದಿನಗಳಲ್ಲಿ ಭ್ರಷ್ಟಾಚಾರ ಮತ್ತು ಭೂಗತ ಪಾಪ ವ್ಯಾಪಾರಗಳ ಮೂಲಕ ಅಲ್ಪಾವಧಿಯಲ್ಲಿ ಧನಿಕರಾಗುವ ಕನಸಿನೊಂದಿಗೆ ಎಷ್ಟೊಂದು ಯುವಕರು ಈ ಕೂಪಕ್ಕೆ ಧುಮುಕುತ್ತಿದ್ದಾರೆ. ಸಾಮಾಜಿಕ ವ್ಯವಸ್ಥೆಯೇ ಕೆಟ್ಟು, ಆಡಳಿತೆಯಲ್ಲಿ ರಕ್ಕಸನಂತೆ ಬೆಳೆದ ದುರ್ನಿತಿ, ದುರಾಗ್ರಹಗಳು ಇಂದಿನ ಯುವಕರ ಜೀವನದ ಆದರ್ಶಗಳನ್ನು ಕಲುಷಿತಗೊಳಿಸಿವೆ. ಕಲಿತವರಲ್ಲಿಯ ನಿರುದ್ಯೋಗ, ನಿರಾಶೆಗಳು ಅವನ ಬದುಕುವ ಇಚ್ಚೆಯನ್ನು ಹಿಚುಕಿಬಿಟ್ಟಿದೆ. ಭವಿಷ್ಯ ಕಾರ್ಮೊಡದಂತೆ ಹತಾಶತೆಯ ಭವಂಡರಕ್ಕೆ ಸಿಕ್ಕು ದಿಕ್ಕುಗೆಟ್ಟಿದೆ. ಇಂದಿನ ಶಿಕ್ಷಣದಲ್ಲಿ ಸರಕಾರದ ನೀತಿಯಲ್ಲಿ, ಕಾನೂನಿನಲ್ಲಿ ವ್ಯಕ್ತಿಯ ವಿಶ್ವಾಸ ಹೋಗಿ ಬಿಟ್ಟಿದೆ. ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ ಇಂದಿನ ಬದುಕಿನ ಆದರ್ಶವಾಗಿದೆ. ಭೂಗತ ವ್ಯಾಪಾರೀ ಗ್ಯಾಂಗುಗಳು ಇಂದು ಪ್ರಬಲವಾಗಿ ಮುಂಬಯಿಯನ್ನು ಆಳ ಹತ್ತಿವೆ. ಪ್ರದೇಶದ ಪ್ರಮುಖ ವ್ಯಾಪಾರ, ಆಡಳಿತೆ, ಚುನಾವಣೆಯ ಮೇಲೆ ಅವುಗಳ ಹಸ್ತಕ್ಷೇಪ ಚಿರಗೊಳಿಸುವಷ್ಟಿದೆ. ಸಂಪೂರ್ಣ ದೇಶದ ಅರ್ಥವ್ಯವಸ್ಥೆಯ ಮುಖ್ಯ ಸೂತ್ರವನ್ನು ತಮ್ಮ ಮುಷ್ಟಿಯಲ್ಲಿಟ್ಟು ಜನಸಾಮಾನ್ಯನ ಜೀವನ ಅಧೀರ, ಅನಾಥವಾಗುವಂತೆ ಮಾಡಿದೆ. ಪ್ರತಿಯೊಬ್ಬ ಸಭ್ಯನನ್ನೂ ಭೀತಿಯ ಮುಖದಲ್ಲಿ ಬದುಕಲು ವಿವಶಗೊಳಿಸಿದೆ.

ಸದಾನಂದನಂತಹ ಅನೇಕ ಸುದೃಢ ಯುವಕರು ಇಂಥಾ ಗ್ಯಾಂಗುಗಳಿಗೆ ಶಾಮಿಲಾಗಿ, ತಮ್ಮ ಬುಟ್ಟಿ ತುಂಬಿಕೊಳ್ಳುವ ಇರಾದೆಯಿಂದ ದುರ್ಮರಣಕ್ಕೀಡಾದ ಸುದ್ದಿಗಳು ಇಂದು ಪ್ರತಿ ದೈನಿಕದ ವಿಷಯವಾಗಿದೆ. ಕೆಲವರು ಅದೃಷ್ಟವಂತರು ಈ ಕರಾಳ ಸಮುದ್ರದಲ್ಲಿ ಈಜಿ ಪಾರಾದರೆ ಕೆಲವು ಅಭಾಗರು ಅರ್ಧದಲ್ಲಿಯೇ ಮುಳುಗಿ ಸಮುದ್ರ ಪಾಲಾದರು. ಸದಾನಂದ ಹೀಗೆ ಕಣ್ಮರೆಯಾದವರಲ್ಲಿ ಒಬ್ಬ. ಮುಂಜಾನೆಯೆ ಜೆ.ಜೆ.ಯಿಂದ ಸಿಗಿದು ಬಂದ ಅವನ ಹೆಣವನ್ನು ನೋಡುವ ಸಾಹಸ ಯಾರಿಗೂ ಆಗಿರಲಿಲ್ಲ. ಆರಡಿಯ ಪುಷ್ಟ, ಭಯ ಹುಟ್ಟಿಸುವ ದೇಹಾಕೃತಿ ರಕ್ತಮಯವಾಗಿ ಭೀಭತ್ಸಗೊಂಡಿತ್ತು. ಶರೀರದ ಒಂದು ಭಾಗದಲ್ಲಿ ಎಲ್ಲೋ ಚಲಿಸುವ ಕ್ಷೀಣ ಉಸಿರಿನ ಬಲದಿಂದ ಮನುಷ್ಯ ಏನೆಲ್ಲ ಮಾಡುತ್ತಾನೆ! ತನ್ನಂತಹ ಇನ್ನೊಬ್ಬ ಮನುಷ್ಯನಿಗೆ ಪ್ರೀತಿಯನ್ನು ಹಂಚಿಕೊಡುವ ಬದಲು ಭಯಂಕರವಾದ ಆಘಾತವನ್ನು ಮಾಡುವ ಕ್ರೌರ್ಯ ಅವನ ಶರೀರದ ಮುಷ್ಟಿಯ, ರಕ್ತದ ಬಿಸಿಯ ಇಲ್ಲವೆ ಒಟ್ಟು ಸಂಸ್ಕಾರದ ಗುಣವೇ ತಿಳಿಯದಾಗಿದೆ. ತಾನು ಗಳಿಸಿದ ಯಾವದೂ ಈ ಪ್ರಪಂಚದಲ್ಲಿ ಶಾಶ್ವತವಲ್ಲವೆಂಬ ಅರಿವಿದ್ದೂ ಮನುಷ್ಯ ತನ್ನ ಸ್ವಭಾವದ ಈ ದುಷ್ಟ ಪಕ್ಷವನ್ನು ಸರಿಪಡಿಸಲು ಏಕೆ ಮನಸ್ಸು ಮಾಡುವುದಿಲ್ಲ!

ಅವನ ಶರೀರ ಬಾತು ಹತ್ತು ಮಣಕ್ಕಿಂತಲೂ ಹೆಚ್ಚು ಭಾರವಾಗಿ ಹತ್ತು ಸಮರ್ಥ ತರುಣರಿಂದ ಸುಲಭವಾಗಿ ಎತ್ತಲೂ ಆಗದಂತಿತ್ತು. ಮೋಹಕವಾದ ಸುಂದರ ಮುಖ ವಿಕಾರಗೊಂಡಿತ್ತು. ಕಣ್ಣು ಗೊಂಬೆಗಳು ಉರುಳಿ ಭಯೋತ್ಪಾದಕವಾಗಿದ್ದವು. ಹರಿದ ಹೊಟ್ಟೆಯನ್ನು ಸೀತಿದ್ದರೂ ಸುತ್ತಿದ ಬಟ್ಟೆ ಕೆಂಪುಗಟ್ಟಿತ್ತು. ನೋಡಲು ಅಸಹ್ಯವಾಗಿರುವ ಈ ಶರೀರದ ಚಂದಕ್ಕೆ ಹುಚ್ಚಾಗಿದ್ದ, ಅಭಿಮಾನ ಪಡುತ್ತಿದ್ದ ಅವನ ಸುಂದರ ಹೆಂಡತಿಯ ಕಣ್ಣು ಇಂಗಿಹೋಗಿತ್ತು. ಮುಖದಲ್ಲಿ ಗಾಬರಿಗೊಳಿಸುವ ಒಂದು ಗೂಢ ಮೌನ ಯಾವದೋ ಶೋಧಗ್ರಸ್ತವಾದಂತಿತ್ತು.

ಸದಾನಂದನ ಕೊಲೆಯಾಗಿತ್ತು. ಇಂಥ ಬರ್ಬರ ಕೊಲೆ ಭಾರತದ ತುಂಬ ಇಂದು ಹಬ್ಬಿಕೊಂಡಿರಲು ಭೀತಿಯೇ ಮೂಲಭೂತ ಕಾರಣವೆನ್ನಬೇಕು. ಸಮರ್ಥನೇ ಬದುಕ ಬಲ್ಲ. ಹಿಂದಿನ ಯಾವದೇ ಸಂಸ್ಕೃತಿಯಲ್ಲಿ ಮನುಷ್ಯ ಇಷ್ಟೊಂದು ಕ್ರೂರಿ, ಭೀತ ಎಂದೂ ಆಗಿರಲಿಲ್ಲ. ತನ್ನ ಸುಖೋಪಭೋಗದ ಅಪೇಕ್ಷೆ ಬುಡದಲ್ಲಿಯೆ ಕ್ಷೀಣಿಸತೊಡಗಿದಾಗ, ಮನುಷ್ಯ ಸ್ವಂತದ ಅಸ್ತಿತ್ವದ ಕುರಿತು ಭೀತನಾಗುತ್ತಾನೆ. ತಾನು ಹಾಕಿದ ಬುನಾದಿ ಯಾವುದೂ ಭದ್ರವಾಗಿಲ್ಲ ಎಂಬ ಹೆದರಿಕೆಯಿಂದ ಅವನು ಆತಂಕಗೊಳ್ಳುತ್ತಾನೆ.

ಸದಾನಂದ ಸಿಕ್ಕಿಕೊಂಡಿದ್ದ ಗ್ಯಾಂಗಿನಿಂದ ಅವನಿಗೆ ಬಿಡುಗಡೆಯಿರಲಿಲ್ಲ. ಕಳೆದ ಹತ್ತು ವರ್ಷಗಳಿಂದ ಅವನು ಹತ್ತಾರು ಕಡೆಯಲ್ಲಿ ತನ್ನ ಗಳಿಕೆಯನ್ನು ವ್ಯಾಪಾರಕ್ಕೆ ವಿನಿಯೋಗಿಸಿದ್ದಾನೆ. ಇಂದು ಆಗರ್ಭ ಶ್ರೀಮಂತನಾಗಿ ಅವನಿಗೆ ಸಮಾಜದಲ್ಲಿ ಗೌರವವಿತ್ತು. ಅವನ ಹೆಂಡತಿ ಅವಳ ಅಣ್ಣಂದಿರ ಸಂಪತ್ತಿನ ಕುರಿತು ಬಡಾಯಿ ಕೊಚ್ಚುವದನ್ನು ನಿಲ್ಲಿಸಿದ್ದಾಳೆ. ಕರಾರುಗಳು, ವಿಶಾಲವಾದ ಮನೆ, ಸುಖದ ಸಕಲ ಸಾಧನಗಳು ಅವನ ಕಾಲಡಿಯಲ್ಲಿ ಇಂದು ಬಿದ್ದುಕೊಂಡಿದ್ದವು. ಜಾತೀಯ, ವ್ಯವಹಾರಿಕ ಜಗಳಗಳನ್ನು ಅವನು ತನ್ನ ಹಾಜರಿ ಮಾತ್ರದಿಂದ ಪರಿಹರಿಸಲು ಶಕ್ತನಾಗಿದ್ದನು. ಅವನ ಹೆಸರು ಹೇಳಿಯೆ ಕೆಲವರು ಕಾರ್ಯ ಸಾಧಿಸಿಕೊಳ್ಳುತ್ತಿದ್ದರು. ಮನುಷ್ಯನಿಗೆ ಅಮಲು ಹುಟ್ಟಿಸುವ ಈ ಸಾಮಾಜಿಕ ಪ್ರತಿಷ್ಠೆಯೆ ಅವನ ಬುದ್ಧಿಭ್ರಮೆಗೆ ಕಾರಣವಾಗುತ್ತದೆ. ಜನರ ನಮಸ್ಕಾರ, ಆದರ ಗೌರವ ಆ ವ್ಯಕ್ತಿಗಾಗಿರದೆ ಅವನ ಪ್ರಬಲತೆ, ಅವನು ಹುಟ್ಟಿಸುವ ಭಯಕ್ಕಾಗಿಯೆ ಇದೆ. ಈ ಸತ್ಯವನ್ನು ಜನರು ದೂರ ಸರಿದು ನಿಂತಾಗ ಅರಿವರು. ಇದು ಸಮಾಜಕ್ಕೆ, ತಮಗೆ ಮಾಡಬಹುದಾದ ಅಪಾಯ ಎಷ್ಟೆಂಬ ಕಲ್ಪನೆಯಲ್ಲಿ ಕೆಲವೊಮ್ಮೆ ತತ್ತರಿಸುವರು.

ಅವನ ಹೆಂಡತಿ ಒಮ್ಮೆ ಹೇಳಿದ್ದಳು ‘ಇನ್ನು ನೀವು ಆ ಗ್ಯಾಂಗನ್ನು ಬಿಡಿ. ತುಂಬಾ ಅಪಾಯಕಾರಿ ಅದು. ಈಗ ಸಾಕಷ್ಟು ಸಂಪತ್ತಾಯಿತು, ಹೆಸರಾಯಿತು’ ಅವಳ ಮಾತು ಸದಾನಂದನಿಗೆ ಹಿಡಿಸಿತ್ತು. ಅವಳು ತುಂಬಾ ತಡವಾಗಿ ಹೇಳಿದ ಮಾತದು. ಆದರೆ ಈಗ ಮಾತ್ರ ಆ ಮಾತಿಗೆ ಅರ್ಥವೂ ಇರಲಿಲ್ಲ. ತೆಂಗಿನ ಮರದ ತುದಿಯೇರಿ ಕೈಬಿಟ್ಟಂತೆ, ಆ ಜಾಲರಿಯಲ್ಲಿ ಸಿಕ್ಕಿಕೊಂಡ ಯಾವಾತನೂ ಸುರಕ್ಷಿತ ಹೊರಬರಲು ಸಾಧ್ಯವಿಲ್ಲ. ಇದರ ವಿವರಗಳನ್ನು ಅವಳಿಗೆ ಕೊಟ್ಟಿದ್ದ. ತನ್ನ ಒಂಭತ್ತು ವರ್ಷಗಳ ದಾಂಪತ್ಯದಲ್ಲಿ ಎಂದೂ ಉಂಟಾಗದ ಒಲವು ಅಂದು ತನ್ನ ಹೆಂಡತಿಯಲ್ಲಿ ಉಂಟಾಗಿತ್ತು. ಅವಳನ್ನು ಬಿಗಿಯಾಗಿ ಅಪ್ಪಿ ಮುತ್ತುಗಳ ಮಳೆಗರೆದು ಹಾಸಿಗೆಗೆ ಎಳೆದಿದ್ದ. ಜೀವನದಲ್ಲಿ ಅವಳು ಮೊದಲ ಸಲವೆ ತನ್ನನ್ನು ಈ ರೀತಿ ಆಕರ್ಷಿಸಿದ ಬಗೆ ಅವನಲ್ಲಿ ಬೆರಗು ಹುಟ್ಟಿಸಿತ್ತು. ಆಗ ಅವನಿಗೆ ತಕ್ಷಣ ನೆನಪಿಗೆ ಬಂದುದು ಸಂಧ್ಯಾ ಮಾತ್ರ.

ಸಂಧ್ಯಾ ಅವನ ಗೆಳತಿಯಲ್ಲ, ಯಾವುದೇ ರೀತಿಯ ರಕ್ತ ಸಂಬಂಧಿಕಳೂ ಅಲ್ಲ. ದೂರದವಳಾದರೂ ಅವನ ವ್ಯಕ್ತಿತ್ವದಲ್ಲಿದ್ದ ದೌರ್ಜನ್ಯವನ್ನು ತೆಗೆದು ಸ್ನಿಗ್ಧ ಸುಕುಮಾರ ಭಾವವನ್ನು ತರಲು ಪ್ರಯತ್ನಿಸುತ್ತಿದ್ದಳು. ಅವಳ ನಗು ಮುಖ, ತೃಪ್ತಿಯ ಕಳೆ ಆಧ್ಯಾತ್ಮಿಕ ಮೆರಗು ಅವನನ್ನು ಪ್ರತಿಸಾರಿಯು ಸಾಧುಗೊಳಿಸುತ್ತಿತ್ತು. ಅವಳ ಮಾತಿನಲ್ಲಿರುತ್ತಿದ್ದ ಮಾರ್ದವತೆ, ವರ್ಚಸ್ಸು ಅವನನ್ನು ಪರವಶಗೊಳಿಸುತ್ತಿತ್ತು. ಅವಳಿರುವ ಮಾಲಾಡಿನ ಮನೆಗೆ ಅದಕ್ಕೆಂದೆ ಮತ್ತೆಮತ್ತೆ ಹೋಗುವ ಸಾಹಸವಾಗುತ್ತಿದ್ದಿಲ್ಲ. ಅವಳ ಮನೆಗೆ ಹೋದ ಸಂದರ್ಭವೆಲ್ಲ ಅನಪೇಕ್ಷಿತವಾಗಿತ್ತು.

ಸಂಧ್ಯಾ ವಿಧವೆ. ಅವನಿಗಿಂತ ಐದು ವರ್ಷಕ್ಕೆ ಸಣ್ಣವಳು. ಅವಳ ಗಂಡ ಸದಾನಂದನ ಜೊತೆಗೆ ಗ್ಯಾಂಗಿನಲ್ಲಿ ಕೆಲಸಮಾಡುತ್ತಿದ್ದ. ಒಂದು ಹೊಟೇಲೂ ಇದ್ದಿತ್ತು. ಇತ್ತೀಚೆಗೆ ಅವನು ಗ್ಯಾಂಗು ಬಿಟ್ಟು ದೂರವಾಗಿದ್ದು ಈ ಗ್ಯಾಂಗಿನ ಇಬ್ಬರು ಪ್ರಮುಖರು ಪೋಲಿಸರ ಗುಂಡಿಗೆ ಬಲಿಯಾಗುವುದಕ್ಕೆ ಕಾರಣವೆಂಬ ತಿಳುವಳಿಕೆಯಲ್ಲಿ ಅವನ ಕೊಲೆಯ ಹಿಂದೆ ಸದಾನಂದನ ಕೈಯಿರಬಹುದೆಂಬ ಅನುಮಾನವನ್ನು ಅವನಿಗೆ ಬೇಡದವರು ಹಬ್ಬಿದಾಗ, ಪತ್ರಿಕೆಗಳು ಇಂಥ ಸುದ್ದಿಗಳು ಬಿಸಿಯೆಬ್ಬಿಸಿದಾಗ ಸಂಧ್ಯಾನ ಮನೆಗೆ ಒಮ್ಮೆ ಹೋಗಿದ್ದ. ಅವಳಿಗಾದ ನಷ್ಟದ ಛಾಯೆ ಅವಳ ಮುಖದಲ್ಲಿ ತುಳುಕುತ್ತಿತ್ತು. ಯಾವ ದೂರನ್ನೂ ಕೊಡದೆ, ಯಾವ ಸಂಶಯವನ್ನೂ ವ್ಯಕ್ತಪಡಿಸದೆ ಸ್ನೇಹ ಭಾವದಿಂದ, ನಿಂತ ನೆಲದಷ್ಟು ಸಂಯಮದಿಂದ ಅವಳು ಮಾತಾಡಿದ್ದಳು.

‘ಹಬ್ಬಿದ ಸುದ್ದಿಯಲ್ಲಿ ನನಗೆ ನಂಬಿಕೆಯಿಲ್ಲ. ಈ ಕೊಲೆಯಲ್ಲಿ ನಿನ್ನ ಶಾಮೀಲು ಏಕೆ ಎಂಬ ಶೋಧದ ಗೋಜಿಗೂ ನಾನು ಹೋಗುವವಳಲ್ಲ. ಈ ದಂಧೆ, ಈಜನರ ಸಂಪರ್ಕ ಬೇಡವೆಂದು, ಇದ್ದ ಒಂದು ಹೋಟೇಲನ್ನು ಸರಿಯಾಗಿ ನೋಡಿಕೊಳ್ಳಿರೆಂದು ನಾನು ಯಾವಾಗಲೂ ಹೇಳುತ್ತಿದ್ದೆ. ಅವರಿಗೆ ನೀನು ಆದರ್ಶ. ನಿನ್ನ ಉದಾಹರಣೆ ಕೊಡುತ್ತ ಹಣದ ಹಿಂದೆ ಹೋದರು. ಮರಳಿ ಬರದ ಹಾಗೆ ಇದಕ್ಕೆ ಯಾರು ಹೊಣೆ. ನಮ್ಮ ನಶೀಬು, ನಮ್ಮ ದುರಾಶೆ. ನಾನೀಗ ವಿಧವೆ. ನೌಕರಿ ಮಾಡಿ ಹೊಟ್ಟೆ ತುಂಬುವಷ್ಟು ಶಿಕ್ಷಣವಿದೆ. ಆದರೆ ಮೂವತ್ತು ಮೀರಿತಲ್ಲ. ಒಂದು ಮಗುವೂ ಇದೆ. ನೌಕರಿ ಯಾರೂ ಕೊಡಲಾರರು. ಇರುವ ಹೋಟೇಲಿನ ಹಕ್ಕಿದೆ. ಆದರೆ ಅಣ್ಣ ದಾವೆ ಹಾಕಿದ್ದಾರೆ’ ಸದಾನಂದ ಕುಳಿತು ಕೇಳುತ್ತಿದ್ದ. ಮಾತು ಹೊರಡುತ್ತಿರಲಿಲ್ಲ. ಅವಳ ಆತ್ಮ ವಿಶ್ವಾಸದ ಕುರಿತು ವಿಚಾರ ಮಾಡಿದ. ಅವಳ ಮಾತುಗಳೆಲ್ಲ ತನ್ನನ್ನು ತಿವಿಯುವ ತೀಕ್ಷ್ಣ ಅನುಭವ ಅವನಿಗಾಗುತ್ತಿತ್ತು. ಅವಳು ತನ್ನ ಮಾತಿನ ಪರಿಣಾಮವನ್ನು ಇನ್ನಷ್ಟು ತೀವ್ರ ಮಾಡುವ ಮನಸ್ಸಿನಿಂದ ಮತ್ತೆ ಹೇಳಿದ್ದಳು…..

“ನೀನೂ ಈ ಗುಂಪನ್ನು ಬಿಡು. ಇದರಿಂದ ಯಾರಿಗೂ ಸುಖವಿಲ್ಲ. ನಾವು ಮಂಗಳೂರಿನ ಯಾವದೋ ಒಂದು ಹಳ್ಳಿಯಿಂದ ಬಂದು ಈ ಪರವೂರಿನಲ್ಲಿ ಮಾಯವಾಗುವುದು ಏಕೆ ? ಯಾರದೋ ಗುಂಡಿಗೆ ಬಲಿಯಾಗಿ, ದಾರಿಯಲ್ಲಿ ಬಿದ್ದು ಹೆಣವನ್ನು ಎತ್ತುವ ದಾತುವರಿಯೂ ಇಲ್ಲದೆ ಏಕೆ ಸಾಯಬೇಕು? ನೀನು ಅವರಿಗಿಂತ ಗಟ್ಟಿಗ, ಬುದ್ಧಿವಂತ, ಪ್ರಬಲ, ಜಾತಿಯಲ್ಲಿ, ನಿನ್ನ ಕ್ಷೇತ್ರದಲ್ಲಿ ನಿನ್ನನ್ನು ಮೀರುವ ಛಾತಿ ಯಾರಿಗೂ ಇಲ್ಲ. ನನಗೆ ಗೊತ್ತಿಲ್ಲವೇ? ಆದರೆ ಈಗ ನಡೆಯುತ್ತಿರುವ ಗ್ಯಾಂಗು ಯುದ್ಧ ಅತಿ ಭಯಂಕರವಾಗಿದೆ. ಇದರ ಒಳಗಿರುವ ಯಾವ ವೀರನಿಗೂ ಉಳಿಗಾಲವಿಲ್ಲ. ಇದೊಂದು ಚಕ್ರವ್ಯೂಹ?’ ಸದಾನಂದನಿಗೆ ಅನಿಸುತ್ತಿತ್ತು ಇಷ್ಟೊಂದು ಸ್ಪಷ್ಟವಾದ ಮಾತುಗಳನ್ನು ಅವನು ಯಾರಿಂದಲೂ ಕೇಳಿರಲಿಲ್ಲ. ಅದರಲ್ಲೂ ಒಬ್ಬ ದುರ್ಬಲ ಅರೆ ಪರಿಚಯದ ಹೆಂಗಸು ನೇರವಾಗಿ ನಿರ್ಭಿಡೆಯಾಗಿ ಹೇಳಿದ್ದನ್ನು ಕೇಳಿಕೊಂಡು ಕೂತದ್ದೆ ಆಶ್ಚರ್ಯ, ತನ್ನ ಹೆಸರಿನಿಂದ, ತನ್ನ ಗ್ಯಾಂಗಿನ ಪರಿಚಯದಿಂದ ಮಾತಾಡಲೂ ಹೆದರುವ ಜನರನ್ನು ಮೀರಿ ನಿಲ್ಲುವ ಇವಳ ವ್ಯಕ್ತಿತ್ವ, ಅವನು ತನ್ನ ಎದೆಗೆ ಕೈಯಿಟ್ಟು ಬಡಿತ ನೋಡಿದ್ದ. ಈ ಹೆಂಗಸಿನ ಮಾತಿನ ಪರಿಣಾಮ ತನ್ನ ಸ್ವಭಾವದ ಮೇಲೆ ಆಗಬಹುದೆ ಎಂದು ಶಂಕಿಸಿದ್ದ. ಆಗ ಅವಳೆಂದಿದ್ದಳು….

‘ನಾನು ನಿನಗೆ ಬುದ್ದಿ ಹೇಳುವ ಅಧಿಕಾರದವಳಲ್ಲ. ನೀನಿರುವ ಗ್ಯಾಂಗಿನವರಿಂದ ನನ್ನ ಬದುಕು ಉದ್ವಸ್ತವಾಗಿರುವುದರಿಂದ, ಒಬ್ಬ ಅಸಹಾಯ ಸ್ತ್ರಿಯಾಗಿ ಹೇಳುತ್ತಿದ್ದೇನೆ. ನಿನ್ನ ಅಕ್ಕನೋ ತಂಗಿಯೋ, ತಾಯಿಯೋ, ಗೆಳತಿಯೋ ಎನಿಸುವ ಭಾವನೆಯಿಂದ ಹೇಳುತ್ತಿದ್ದೇನೆ. ನೀನು ಈ ಗ್ಯಾಂಗಿನಿಂದ ಹೊರಗೆ ಬಾ, ಈ ವರೆಗೆ ಮಾಡಿರುವದರಲ್ಲಿ ತೃಪ್ತಿ ಪಡೆ. ನಂಬಿಕೊಂಡಿರುವವರ ನಿರಂತರ ದುಃಖದ ಹೇತುವಾಗ ಬೇಡ.’ ಮಾತನ್ನು ಯೋಗ್ಯ ಉತ್ತರದಿಂದ ಕಡಿದು ಹಾಕಬಹುದಿತ್ತು. ಆದರೆ ಮನಸ್ಸಾಗಲಿಲ್ಲ. ಅವಳಾಡುವುದನ್ನು ಇನ್ನಷ್ಟು ಕೇಳಬೇಕೆಂದು ಅನಿಸಿ ತಂದಿರಿಸಿದ್ದ ಚಾ ತಿಂಡಿಯನ್ನು ಸೇವಿಸುತ್ತ ಸುಮ್ಮನೆ ಕುಳಿತಿದ್ದ.

“ನನ್ನ ಗಂಡನ ಅಣ್ಣನಿಗೆ ಒಂದು ಪರ್‌ಮಿಟ್ ಬಾರ್ ಇದೆ. ಒಳ್ಳೆಯ ಸಂಪಾದನೆಯಿದೆ. ಆದರೆ ಈಗ ಅವರ ತಂದೆಯ ಹೆಸರಿನಲ್ಲಿ ಇರುವ ನಮ್ಮ ಅಧೀನದ ಹೋಟೇಲನ್ನು ಬಗಲಿಗೆ ಹಾಕಿಕೊಳ್ಳುವ ಯತ್ನ ನಡೆದಿದೆ. ನಮಗೆ ಅವರೆಂದೂ ಸಹಾಯ ಮಾಡಿದವರಲ್ಲ. ಈ ಕೆಲವು ತಿಂಗಳಿಂದ ನಮ್ಮ ಹೋಟೇಲಿನ ವ್ಯಾಪಾರಕ್ಕೂ ಹೊಂದಿಕೊಂಡ ಕೆಟ್ಟ ಹೆಸರು ತಟ್ಟಿದೆ. ಮೊನ್ನೆ ಒಂದು ದಿನ ಭಾವನ ಸವಾರಿ ಇಲ್ಲಿ ಬಂದಿತ್ತು. ಆ ಹೋಟೇಲನ್ನು ಬಿಟ್ಟು ಕೊಡಲು ಹೇಳಿದರು. ಅದನ್ನು ಬೀರ್‌ಬಾರ್‌ ಮಾಡಲಿದೆ ಎಂದರು. ನನಗೆ ಸಲ್ಲತಕ್ಕ ಅಂಶವನ್ನು ಕೊಡುವ ಮಾತೆತ್ತಿದರು. ನಾವು ಕಟ್ಟಿಕೊಂಡ ಸಂಬಂಧಗಳಿಂದ ನಂಬಿದವರಿಗೆ ಈ ರೀತಿಯ ದುಸ್ಥಿತಿ ಬರಬಾರದಲ್ಲ ಅದಕ್ಕಾಗಿ ಹೇಳಿದೆ. ನಿನ್ನ ಹಿಂದೆಯೂ ಪೋಲೀಸಿರುವುದು ನನಗೆ ತಿಳಿದಿದೆ. ಗ್ಯಾಂಗಿನಲ್ಲಿರುವ ಯಾರಿಗೂ ಕ್ಷೇಮವಿಲ್ಲ ತಿಳಿದುಕೋ’.

ಸದಾನಂದ ಕೇಳುತ್ತಿದ್ದ ಪ್ರತಿಯೊಂದು ಮಾತಿನ ಕೊನೆ ಮಾತ್ರ ತನ್ನ ಕಡೆಗೆ ತಿರುಗುವುದು ಅವನ ಗಮನಕ್ಕೆ ಬರುತ್ತಿತ್ತು. ಅಂದು ಎದ್ದು ಹೋದವನು ಮತ್ತೆ ಕೆಲವು ತಿಂಗಳ ನಂತರ ಬಂದಿದ್ದ. ಕೈಯಲ್ಲಿದ್ದ ಒಂದು ಲಕೋಟೆಯನ್ನು ಅವಳಿಗೆ ಕೊಡುತ್ತಾ..

‘ಹೊಟೇಲನ್ನು ನಿನ್ನ ಹೆಸರಿಗೆ ಮಾಡಿಸಿದ್ದೇನೆ. ಇದು ಅದರ ಕಾಗದ ಪತ್ರಗಳು ಅದನ್ನು ರಪೇರಿ ಮಾಡಿ ಬೀರ್‌ಬಾರ್‌ ಮಾಡಲು ರಾಜನಿಗೆ ಹೇಳಿದ್ದೇನೆ. ನಿನಗೆ ಚಿಂತೆ ಬೇಡ’ ಎಂದಿದ್ದ. ಅದಕ್ಕವಳು – ಭಾವನನ್ನು ಹೆದರಿಸಿ, ಸೊಂಟ ಮುರಿವ ಧಮ್ಕಿಕೊಟ್ಟು ನೀನು ಇದನ್ನೆಲ್ಲಾ ಮಾಡಿಸಿದಿ. ಉಪಕಾರವಾಯಿತು. ಆದರೆ ಸದಾನಂದ, ಭಾವ ತುಂಬಾ ಕೆಟ್ಟವರು. ನೀನು ಇಲ್ಲಿ ಬರುವದಕ್ಕೂ ಆತ ಅನೀತಿ ಪರಸಂಬಂಧ ಜೋಡಿಸಿ ಮೊನ್ನೆ ಪೋನ್ ಮಾಡಿದ್ದರು. ಹೊಟೇಲಿಗೆ ಬಂದು ರಾಜುವಿಗೆ ಬೈದು ಹೋಗಿದ್ದರಂತೆ.

ನೀನು ಯಾವದಕ್ಕೂ ಹೆದರುವುದು ಬೇಡ. ನಿನ್ನ ಸುದ್ದಿಗೆ ಯಾರೂ ಬರುವುದಿಲ್ಲ. ನನ್ನ ಅಗತ್ಯ ಬಿದ್ದಾಗ ಒಂದು ಫೋನ್ ತಿರುಗಿಸು ಎಂದು ಅವನು ಪೋನಿನ ಹತ್ತಿರ ಹೋಗಿ ಹೆಂಡತಿಗೆ ಮತ್ತು ಇತರರಿಗೆ ಫೋನ್ ತಿರುಗಿಸಿದ್ದ. ಅವಳು ಮನಸ್ಸಿನ ತೃಪ್ತಿಯನ್ನು ತೋರ್ಪಡಿಸಿರಲಿಲ್ಲ. ಅವನು ಫೋನಿನಲ್ಲಿ ಮಾತಾಡುತ್ತಿದ್ದಾಗ ಅವನ ಮುಖಾವಲೋಕನದಿಂದ ಆತನ ಭಾವಗಳನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದಳು. ಅಂಗಾಂಗಗಳ ಚೆಲುವನ್ನು ಅವಿಚಲ ಮನಸ್ಸಿನಿಂದ ನೋಡುತ್ತಿದ್ದಳು. ಈತ ದಾರಿ ತಪ್ಪಿದ ಮಗ, ದುಷ್ಟನಲ್ಲ. ಅವನಿರುವ ವಲಯದಲ್ಲಿ ಭಯ ಹುಟ್ಟಿಸುವ ವ್ಯಕ್ತಿಯಾದರೂ ತನ್ನೆದುರು ಕಠೋರವಾದ ಒಂದು ಮಾತನ್ನು ಆಡದಿದ್ದುದು ಸೋಜಿಗವೆ. ಬಹುಶಃ ಇದುವೆ ಅವನ ಮೂಲ ಸ್ವಭಾವವಾಗಿರಬೇಕು ಎಂದು ಸ್ವಭಾವ ಮೂಲ್ಯಾಂಕನದ ತರ್ಕದಲ್ಲಿ ತೊಡಗಿರುವಾಗ ಅವನು ಹೊರಡಲು ಎದ್ದು ನಿಂತಿದ್ದ. ಅವನು ಮತ್ತೊಮ್ಮೆ ಕಾಣಿಸಿದ್ದು ಬಿರುಮಳೆಯ ಒಂದು ದಟ್ಟ ರಾತ್ರಿಯಲ್ಲಿ. ಅವನ ಕೋಲೆಯ ಒಂದುವರೆ ದಿನದ ಮೊದಲು ರಾತ್ರಿಯ ಹನ್ನೆರಡು ಮೀರಿತ್ತು. ಧೋ ಧೋ ಎಂಬ ಮಳೆಯಲ್ಲಿ ಮನೆಯ ಕರೆಗಂಟೆಯಾದಾಗ ಹಾಲಿನಲ್ಲಿ ಮಲಗಿದ್ದ ರಾಜು ಎದ್ದು ಬಾಗಿಲು ತೆರೆದಿದ್ದ. ಸದಾನಂದ ಒಳಗೆ ಬಂದಿದ್ದ ತೊಯ್ದ ಶರೀರ, ಉದ್ದುದ್ದ ತಲೆಯಕೂದಲು ಒದ್ದೆಯಾಗಿ ನೀರು ಮೂಗು, ಮುಖ ಮಾರ್ಗವಾಗಿ ಕೆಳಗೆ ಸುರಿಯುತ್ತಿತ್ತು. ಹೊರಗೆ ಬಂದು ಸಂಧ್ಯಾ ಅವನನ್ನು ನೋಡಿ ಮಾತಾಡಿಸಿದ್ದಳು. ಹೀಗೆ ಅವನು ಬರುವುದು ಆಶ್ಚರ್ಯವೇನೂ ಅಲ್ಲ. ಆದರೂ ಈ ಮಳೆಯ ರಾತ್ರಿಯಲ್ಲಿ ಹೀಗೆ ಬರುವುದರ ಹಿಂದಿನ ಪರಿಸ್ಥಿತಿಯ ಅಂದಾಜು ಅವಳಿಗಾಗುತ್ತಿತ್ತು. ಪೋಲೀಸಾಗಲೀ, ಗ್ಯಾಂಗಿನವರಾಗಲೀ ಇವನ ಹಿಂದೆ ತಾಗಿದ್ದಾರೆ ಎಂಬ ವಿಚಾರ ಅವಳಿಗೆ ಹೊಳೆದು ಹೋಗಿತ್ತು. ಅವನಿಗೆ ಒಣ ವಸ್ತ್ರ ತಂದು ಕೊಟ್ಟು ಸ್ನಾನಕ್ಕೆ ಕಳುಹಿಸಿ ತಾನು ಅಡಿಗೆ ಮನೆಗೆ ಹೋದಳು. ಸ್ವಲ್ಪ ಹೊತ್ತಿನಲ್ಲಿ ಸದಾನಂದ ತಲೆಬಾಚೂತ್ತ ಲುಂಗಿ ಸುತ್ತಿಕೊಂಡು ಹೊರಬಂದು ಉದ್ದ ಕನ್ನಡಿಯ ಎದುರಿಗೆ ಹೋಗಿ ಮೈ-ಮುಖಕ್ಕೆ ಪೌಡರು ಬಳಿದು ಕುತ್ತಿಗೆಯಲ್ಲಿ ನೇತಾಡುವ ಒಂದು ಸ್ವಸ್ತಿಕದ ಮತ್ತೊಂದು ಲಕ್ಷ್ಮಿಯ ಲೊಕೆಟ್ಟು ಇರುವ ಬಂಗಾರದ ಸುರುಳಿಯ ಸರಗಳನ್ನು ತಿರುಗಿಸುತ್ತ ಅಡಿಗೆ ಮನೆಯ ಕಡೆಗೆ ಹೋಗಿ ಸಂಧ್ಯಾ ತಯಾರಿಸುತ್ತಿದ್ದ ಊಟದ ಥಾಲಿಯನ್ನು ನೋಡಿದ. ‘ಇಂದೇನೂ ಮಾಡಲಿಲ್ಲ. ರಾಜು ಹೊಟೇಲಿನಿಂದ ತಂದದ್ದೆ. ಸಿಂಪಲ್ ಊಟ. ಅಲ್ಲದೆ ತುಂಬಾ ರಾತ್ರಿಯೂ ಆಯಿತಲ್ಲ’ ಎಂದ ಸಂಧ್ಯಾನ ಮಾತಿಗೆ ಹನ್ನೆರಡು ಗಂಟೆಗೆ ನಮಗೆ ರಾತ್ರಿಯಾಗುವುದಿಲ್ಲ, ಶುರುವಾಗುವುದು. ನೀನೇನು ನಿದ್ರಿಸುತ್ತಿದ್ದಿಯಾ’ ಎಂದ.

‘ಇಲ್ಲಪ್ಪಾ, ರಾಜು ಸಹ ಹತ್ತು ಗಂಟೆಯ ನಂತರವೇ ಬಂದದ್ದು. ಶುಕ್ರವಾರವಂತೆ, ಟಿ.ವಿ. ಯಲ್ಲಿ ಏನೋ ಇಂಗ್ಲೀಶ್ ಪಿಕ್ಚರ್‌ ಇತ್ತು. ಸ್ವಲ್ಪ ನೋಡಿ ಬೋರಾಯಿತು.’ ಎನ್ನುತ್ತ ಒಟ್ಟಿಗೆಯೆ ಹೊರಗೆ ಊಟದ ಮೇಜಿಗೆ ಬಂದರು.

ಸದಾನಂದ ಊಟ ಮಾಡುತ್ತಿದ್ದಾಗ ರಾಜುವನ್ನು ಮಾತಾಡಿಸಿದ, ಸಂಧ್ಯಾನ ಜೊತೆ ಮಾತಾಡಿದ. ಹೊಟೇಲಿನ ವ್ಯಾಪಾರದ ಕುರಿತು ವಿಚಾರಿಸಿದ. ಮಗುವನ್ನು ಆಗಲೇ ಒಳಗೆ ನೋಡಿ ಬಂದಿದ್ದ. ಹೊಟೇಲಿನ ರಿಪೇರಿ ಬೇಗ ಮುಗಿಸಿ ಬೀರ್‌ ಬಾರ್‌ ಆರಂಭಿಸಲು ಹೇಳಿದ, ತಾನೀಗ ತುಂಬಾ ವ್ಯಸ್ತನೆಂದೂ ಹೇಳಿದ. ಆಗ ರಾಜು ಮಾತಿನ ನಡುವೆ ‘ನಿಮ್ಮನ್ನು ಕೇಳಿಕೊಂಡು ಇಬ್ಬರು ಹೊಟೇಲಿಗೆ ಬಂದಿದ್ದರು. ಅವರು ಯಾರೆಂದು ಗುರುತಾಗಲಿಲ್ಲ. ಅವರಾಗಿ ಗುರುತು ಹೇಳಲಿಲ್ಲ. ಬಿಳಿ ಮಾರುತಿಯಲ್ಲಿ ಬಂದಿದ್ದರು. ನಿಮ್ಮ ಯಾವದಾದರೂ ಹೊಟೇಲಿನಲ್ಲಿ ವಿಚಾರಿಸಲಿಕ್ಕೆ ಹೇಳಿದೆ’ ಎಂದು ಹೇಳಿದ.

‘ನಾನು ಊರಲ್ಲಿರಲಿಲ್ಲ. ಕೆಲಸದ ತುಂಬಾ ಒತ್ತಡ ಅಲ್ಲದೆ ನಮ್ಮ ಕೂಟದಲ್ಲಿ ತುಂಬಾ ಕಾರಸ್ತಾನ ನಡೆದಿದೆ. ಯಾವಾಗ ಏನಾಗುತ್ತದೆ ಹೇಳಲು ಬರುವದಿಲ್ಲ. ಈಚೆಗೆ ಎರಡು ಸಾರಿ ಪೋಲಿಸರು ಇಬ್ಬರನ್ನು ಹಿಡಿದಿದ್ದರಲ್ಲ, ಅವರು ನಮ್ಮ ಗ್ಯಾಂಗಿನವರು ಅವರಿಗೆ ಬೈಲೂ ಮಂಜೂರಾಗಲಿಲ್ಲ. ಅವನು ಊಟ ಮುಗಿಸಿ ಎದ್ದ. ಕೈತೊಳಕೊಂಡು ಮತ್ತೆ ಹೇಳಿದ ‘ನಾನು ಇಲ್ಲಿಗೆ ಬಂದ ವಿಷಯ ಯಾರಿಗೂ ಗೊತ್ತಿಲ್ಲ. ಹೆಂಡತಿಗೂ ಸಹ. ಈ ಒಂದು ಜಾಗಕ್ಕೆ ನಾನು ಬರುವ ವಿಷಯ ಯಾರಿಗೂ ತಿಳಿಯಬಾರದು ನೀನು ನನ್ನ ಕುರಿತು ಯಾವುದೇ ವಿಚಾರ, ಯಾರಲ್ಲಿಯೂ ಎಲ್ಲಿಯೂ ಮಾತಾಡಬೇಡ. ನಮ್ಮ ಗ್ಯಾಂಗಿನ ಒಳ ಭೇದದಿಂದ ಈಗ ಪರಿಸ್ಥಿತಿ ತುಂಬ ನಾಜೂಕಾಗಿದೆ. ಬೇರೆ ಬಲಶಾಲಿಗುಂಪುಗಳು ಪೈಪೋಟಿಗೆ ತೊಡಗಿ ವಾತಾವರಣ ಹದಗೆಟ್ಟಿದೆ. ಅಲ್ಲದೆ ಹೊಸ ಸರಕಾರದ ಕೆಲವು ಹೊಸನೀತಿಯಿಂದ ನಮ್ಮ ದಂಧೆಗೆ ತುಂಬಾ ಪೆಟ್ಟು ಬಿದ್ದಿದೆ. ಹಣದ ಮಾರ್ಕೆಟ್ ಟೈಟಾಗಿದೆ. ಈ ಸ್ಥಿತಿಯಲ್ಲಿ ಸ್ಮಗಲಿಂಗ್ ಗ್ಯಾಂಗುಗಳ ಪರಸ್ಪರ ದುಷ್ಮನಿ ಹೆಚ್ಚಾಗಿದೆ.’ ಎಂದು ಹೇಳುತ್ತ ಸುಮ್ಮನಾದಾಗ ಸಂಧ್ಯಾಗೆ ಪರಿಸ್ಥಿತಿಯ ಗಾಂಭೀರ್ಯದ ಅರಿವಾಗುತ್ತಿತ್ತು. ಊಟದ ಬಟ್ಟಲನ್ನು ಎತ್ತಿ ಒಳಗಿಟ್ಟು ಬರುವಾಗ ಅವನು ಮತ್ತೆ ಹೇಳಿದ್ದ…. ಧ್ವನಿಯಲ್ಲಿ ಚಿಂತೆ ತುಂಬಿರುವ ಅನುಭವ ಅವಳಿಗಾಯಿತು.

‘ಸಂಧ್ಯಾ, ಈಗ ನಾನು ಹಿಟ್‌ಲಿಷ್ಟಿನಲ್ಲಿದ್ದೇನೆ. ಪೋಲೀಸು ಇಲ್ಲವೆ ಗ್ಯಾಂಗು ನನ್ನನ್ನು ಬಿಡುವಂತೆ ಕಾಣುವುದಿಲ್ಲ. ಪೋಲೀಸಾದರೆ ಹಿಡಿಯುತ್ತಾರೆ. ಗ್ಯಾಂಗಾದರೆ ಕೊಲ್ಲುತ್ತಾರೆ. ನಾಲ್ಕು ದಿನದಿಂದ ನಾನು ಮನೆಯ ಕಡೆಗೆ ಸುಳಿಯಲಿಲ್ಲ. ನಿನ್ನೆ ಫೋನ್ ಮಾಡಿ ಹೆದರಬೇಡವೆಂದು ಹೆಂಡತಿಗೆ ಹೇಳಿದೆ. ಪರಿಸ್ಥಿತಿ ಸುಧಾರಿಸುವ ತನಕ ದೂರವಿರುತ್ತೇನೆ. ಎಲ್ಲಿ ಎಂದು ಕೇಳಬೇಡ ಅಂತ ಹೇಳಿದ್ದೇನೆ. ನನ್ನ ಚಲನವಲನದ ಸೂಕ್ಷ್ಮ ನಿರೀಕ್ಷಣೆ ಆಗುತ್ತಿದೆ. ಅವಳಿಗೆ ಗಾಬರಿಯಾಗಿದೆ. ಇನ್ನೊಂದು ನಾಲ್ಕು ದಿವಸಗಳಲ್ಲಿ ಪೊಲೀಸರಿಗೆ ಶರಣಾಗತನಾಗುವ ಯೋಚನೆ ನನ್ನದು.’ ಆಧೀರತೆಯ ಅವನ ಸ್ವರ ಸಂಧ್ಯಾನ ಕಾಳಜಿಯನ್ನು ಬಡಿದೆಬ್ಬಿಸುತು. ‘ಒಮ್ಮೆಲೆ ಹೀಗೆಲ್ಲ ಏಕಾಯಿತು’ ಎಂದಳು. ‘ಒಮ್ಮೆಲೆ ಆದದ್ದಲ್ಲ. ಈಗ ಸುಮಾರು ಒಂದು ವರ್ಷದಿಂದ ನನ್ನ ಪಕ್ಷದಲ್ಲಿ ನಾನು ಕೆಲಸಮಾಡುತ್ತಿಲ್ಲ. ನನ್ನ ಜನರನ್ನು ಈ ವೃತ್ತಿಯಿಂದ ಆದಷ್ಟು ದೂರವಿರಲು ಪ್ರೋತ್ಸಾಹಿಸುತ್ತಿದ್ದೇನೆ. ನನ್ನ ಈ ರೀತಿಯ ಅಲಕ್ಷ್ಯ ನನ್ನ ಬೋಸ್‌ಗಳ ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ. ನನ್ನ ಅಜಾಗ್ರತೆಯಿಂದಲೆ ಗ್ಯಾಂಗಿನ ಮೂವರ ಕೊಲೆ, ಕೆಲವರ ಬಂಧನ ಆಗಿದೆ ಎಂದು ಅವರ ತಿಳುವಳಿಕೆ. ಇದು ತುಂಬಾ ಅಪಾಯಕಾರಿ. ನಿನಗೆ ಗೊತ್ತಿಲ್ಲ. ಅವರಿಗೆ ಬೇಡವಾದವರನ್ನು ಮುಗಿಸುವದೆ ಈ ಗ್ಯಾಂಗ ಬೋಸ್‌ಗಳ ಕಾನೂನು. ಆ ಕಡೆಯಲ್ಲಿ ಪೊಲೀಸರಿಗೆ ನನ್ನ ಶೋಧನೆ. ನನ್ನನ್ನು ಹಿಡಿಯುವುದರಿಂದ ಗ್ಯಾಂಗಿನ ಮೂಲಕ್ಕೆ ಹೋಗಬಹುದೆಂಬ ಭರವಸೆ’ ಸದಾನಂದ ಎದ್ದು ಪಂಖದ ವೇಗ ಹೆಚ್ಚಿಸಿದ. ಬೈರಾಸಿನಿಂದ ಮುಖವರೆಸಿಕೊಂಡ. ಜೀವನದಲ್ಲಿ ಅವನು ಮೊದಲ ಬಾರಿಗೆ ಹೆದರಿಕೊಂಡಿರುವ ಅನುಭವವಾಯಿತು. ರಾಜು ಕೂತಲ್ಲೇ ಒರಗಿದ್ದ. ಸಂಧ್ಯಾ ಸದಾನಂದನ ಹತ್ತಿರ ಬಂದು ಅವನ ಕೈ ಬೆರಳುಗಳನ್ನು ಹಿಡಿದು ‘ಸದೂ ಚಿಂತಿಸಬೇಡ. ನೀನು ಊರಿಗೆ ಹೋಗಿಬಿಡು, ಅದರ ವ್ಯವಸ್ಥೆ ನಾನು ಮಾಡುತ್ತೇನೆ. ಅಲ್ಲಿ ತನಕ ಇಲ್ಲೇ ಇರು. ನಾನು ನಿನ್ನನ್ನು ಬಚ್ಚಿಡುತ್ತೇನೆ’ ಎಂದು ಹೇಳಿ ಅವನ ಮುಖವನ್ನು ಕಾತರಳಾಗಿ ವೀಕ್ಷಿಸಿದಳು. ಕಣ್ಣು ತುಂಬಿ ಬಂದು ಮರುಕ್ಷಣ ಕಣ್ಣೀರು ಇಳಿಯಿತು. ನಿನ್ನ ಪರಿಚಯವಾದ ನಂತರವೆ ನಾನು ಈ ಗೊಂಡ್ಯಾರಣ್ಯದಿಂದ ದೂರ ಸರಿದದ್ದು. ಆದರೆ ಒಮ್ಮೆ ಈ ಮೃಗಾಲಯವನ್ನು ಹೊಕ್ಕವನು ಹಿಂದೆ ಬದುಕಿ ಬರುವಂತಿಲ್ಲ. ನೀನೇ ಹೇಳಿದಂತೆ. ಇದು ಚಕ್ರವ್ಯೂಹ. ಬಹುಶ ಒಳಗೆಯೇ ಹೋರಾಡುತ್ತ ಇದ್ದಿದ್ದರೆ ಈ ರೀತಿಯ ಹೊರಗಿನ ಆಕ್ರಮಣದ ಭಯವಿರುತ್ತಿದ್ದಿಲ್ಲ. ನಾನು ಸಾಯುವದಕ್ಕೆ ಅಂಜುತ್ತಿಲ್ಲ. ಆದರೆ ಈ ದಿನಗಳಲ್ಲಿ ಯಾಕೋ ಬದುಕುವ ಇಚ್ಚೆ. ಎಲ್ಲ ಲಫಡಾಗಳನ್ನು ಬಿಟ್ಟು ಹೆಂಡತಿ ಮಕ್ಕಳೊಂದಿಗೆ ಸುಖವಾಗಿರುವ ಇಚ್ಚೆಯಾಗುತ್ತಿದೆ. ಈ ದಿನಗಳಲ್ಲಿ ನನ್ನ ಹೆಂಡತಿಯೂ ತುಂಬ ಪ್ರಿಯವಾಗಿ ಕಾಣಿಸುತ್ತಿದ್ದಾಳೆ, ನಿನ್ನಂತೆಯೆ ಮಾತಾಡುತ್ತಾಳೆ. ಭಾವುಕಳಂತೆ. ನೀನೆ ಏನಾದರೂ ಅವಳಿಗೆ ಹೇಳಿಕೊಟ್ಟಿದ್ದೀಯಾ…. ಅವನು ಸಂಧ್ಯಾನ ಅಂಗೈಯನ್ನು ಮೃದುವಾಗಿ ಒತ್ತಿದ್ದ. ಹೆಗಲಿಗೆ ಕೈ ಹಾಕಿ ಹತ್ತಿರಕ್ಕೆ ಎಳೆದುಕೊಂಡ.

‘ನನ್ನ ಪರಿಚಯವೇ ಅವಳಿಗಿಲ್ಲ. ನೀನೇ ಎಂದಾದರೂ ನನ್ನ ಬಗ್ಗೆ ಹೇಳಿದ್ದಿಯೋ ಗೊತ್ತಿಲ್ಲ. ಏನಿದ್ದರೂ ಇದು ತುಂಬಾ ಖುಷಿಯ ವಿಷಯ. ನಿನ್ನವರು ಎಂದೆಂದಿಗೂ ನಿನ್ನವರು. ನನ್ನ ನಿನ್ನ ಸಂಬಂಧವಾದರೂ ಏನು. ಒಂದು ಪರಿಚಯ ಅಷ್ಟೆ.’

ಈ ಪರಿಚಯ ನನಗೆ ಹತ್ತು ವರ್ಷಗಳ ಮೊದಲೆ ಆಗಬೇಕಿತ್ತು. ಹಣ ಸಂಪಾದನೆ ಮಾಡಿ ಒಳ್ಳೆಯ ಭಯ ರಹಿತ ಜೀವನ ನಡೆಸುತ್ತಿದ್ದೆ. ಈಗಿನಂತೆ ಸಮಾಜದ ದುಷ್ಟ ಶಕ್ತಿಯಾಗಿ, ಭಯಭೀತನಾಗಿ ಸತ್ತು-ಸತ್ತು ಬದುಕುವ ದುರ್ದೆಶೆ ಬರುತ್ತಿರಲಿಲ್ಲ. ನಮ್ಮ ಬದುಕಿನಲ್ಲಿ ನಾವು ಕೆಲವೊಮ್ಮೆ ಹಿತವರನ್ನು ಭೆಟ್ಟಿಯಾಗುವುದೆ ತಡವಾಗಿ ಅಲ್ವ?

‘ಹೌದೋ-ಏನೋ. ನನಗೆ ಮಾತ್ರ ನೀನು ಬೇಕು ಬೇಕಾದಾಗ ಭೆಟ್ಟಿಯಾಗಿದ್ದಿ. ನನ್ನ ಜೀವನಕ್ಕೊಂದು ಗತಿ ಒದಗಿಸಿದ್ದಿ. ಆದರೆ ನಾನು ನಿನಗಾಗಿ ಏನು ಮಾಡಲೂ ಅಶಕ್ತಳಾಗಿದ್ದೇನೆ… ಎಷ್ಟೊಂದು ದುರ್ದೈವ’ ಅವಳ ಅಳು ಮತ್ತೆ ತುಂಬಿ ಬಂತು.

‘ಅದಕ್ಕಾಗಿ ನೀನು ಅಳುವುದು ಬೇಡ. ನಿಮಗೆ ಯಾವದೇ ರೀತಿಯ ತೊಂದರೆ ಕೊಡ ಬಯಸುವುದಿಲ್ಲ. ನಾಳೆ ಸಂಜೆಗೆ ನಾನು ಹೋಗಿ ಬಿಡುತ್ತೇನೆ. ಇಲ್ಲಿರುವ ಸುಳಿವು ಸಿಕ್ಕಿದರೂ ನಿಮಗೆಲ್ಲ ತ್ರಾಸು. ನನ್ನ ಮುಂದಿನ ವ್ಯವಸ್ಥೆಯಾಗಿದೆ’ ಹೀಗೆಂದು ಎದ್ದು ಸದಾನಂದ ಗೋಡೆಯ ಗಡಿಯಾರ ನೋಡಿದ. ಆಗ ಟೆಲಿಫೋನಿನ ಗಂಟೆ ಬಾರಿಸಿತು. ಒಂದು ಗಂಟೆ ರಾತ್ರಿಗೆ ಯಾರೆಂದು ಇಬ್ಬರೂ ಮುಖ ಮುಖನೋಡಿಕೊಂಡರು. ಅದರ ಸದ್ದಿನೊಂದಿಗೆ ಇಬ್ಬರ ಎದೆ ಬಡಿತವೂ ವೇಗ ಹಿಡಿಯಿತು. ಅವನ ಮುಖ ವಿವರ್ಣವಾಗುತ್ತಿದ್ದಂತೆ ಸಂಧ್ಯಾ ಫೋನಿನ ಹತ್ತಿರ ಹೋಗಿ ಎತ್ತಿದಳು. ಮಾತಾಡದೆ ಕಿವಿಗೆ ತಾಗಿಸಿ ಆ ಕಡೆಯ ಮಾತಿಗಾಗಿ ಕಾದಳು. ಸದಾನಂದ ಪ್ರಶ್ನಾರ್ಥಕವಾಗಿ ಅವಳನ್ನು ದೃಷ್ಟಿ ಬದಲಿಸದೆ ನೋಡಿದ. ಅವಳು ಫೋನ್ ಇಟ್ಟು ಬಿಟ್ಟಳು. ಆಕಡೆಯಿಂದ ಯಾರೂ ಮಾತಾಡಲಿಲ್ಲ. ಅವನು ರಾಜುನ ಹಾಸಿಗೆಯಲ್ಲಿ ಮಲಗಿಕೊಂಡ. ಸಂಧ್ಯಾ ಹಾಲಿನ ದೀಪ ಆರಿಸಲು ಹೋಗುವಾಗ ಅವಳಿಗೊಂದು ಮುದ್ದಾದ ನಗೆಯನ್ನು ಕೊಟ್ಟ. ಅವಳು ಅದನ್ನು ಸ್ವೀಕರಿಸಿ ದೀಪ ಆರಿಸಿ ಒಳ ರೂಮಿನಲ್ಲಿ ಹೋಗಿ ಮಲಗಿಕೊಂಡಳು. ಎಷ್ಟೋ ಹೊತ್ತು ನಿದ್ರೆ ಬಂದಿರಲಿಲ್ಲ. ಅವನ ಕುರಿತ ಯೋಚನೆಗಳು ಅವನ ಬದುಕನ್ನು ಈಗ ಅವರಿಸಿಕೊಂಡಿರುವ ವಿಪತ್ತುಗಳ ಕಲ್ಪನೆಯಿಂದಲೆ ಅವಳು ನಡುಗಿದಳು. ಕತ್ತಲೆಯಲ್ಲಿ ಕಣ್ಣರಳಿಸಿ ಅವನು ಶೂನ್ಯದಲ್ಲಿ ತನ್ನ ನಾಳೆಗಳನ್ನು ಕಾಣುವ ಜತನ ಮಾಡುತ್ತಿರಬೇಕೆಂದು ಎಣಿಸಿದಳು. ತನ್ನಿಂದ ಯಾವ ರೀತಿಯ ಪ್ರಯೋಜನವಾಗಬಹುದು ಎಂದು ಹೊಳೆಯದೆ ಹಾಸಿಗೆಯಲ್ಲಿ ಹೊರಳಾಡಿದಳು.

ಕಟ್ಟಿಗೆಯ ರಾಶಿಯನ್ನು ಸುಡುತ್ತಿರುವ ಬೆಂಕಿ ಈಗ ಸ್ಮಶಾನದ ಆಕಾಶಕ್ಕೆ ಏರುತ್ತಿತ್ತು. ಹರಡಿದ ಬೆಂಕಿಯ ಸೆರಗಿನಲ್ಲಿ ಸಂಧ್ಯಾಗೆ ಮೊನ್ನೆ ರಾತ್ರಿಯಲ್ಲಿ ಕಂಡ ಸದಾನಂದನ ಆಕೃತಿ ಸ್ಪುಟವಾಗಿ ಕಂಡಿತು. ತಳಮಳ ಹೆಚ್ಚಾಯಿತು. ಕತ್ತಲು ಒಂದೇ ಸವನೆ ಕವಿಯುತ್ತಿರುವ ಆ ಹೊತ್ತಿನಲ್ಲಿ ಒಂದು ದಟ್ಟವಾದ ಶಬ್ದ ಚಿತೆಯ ಒಳಗಿನಿಂದ ಹೊರಟು ಅವಳ ಕಿವಿಯನ್ನು ನುಗ್ಗಿತು. ಸಂಧ್ಯಾ ಹೌಹಾರಿದಳು. ತಲೆ ಬುರುಡೆ ಒಡೆದ ಸದ್ದು. ಅವನ ಮೈಸುಡುವ ಜ್ವಾಲೆಯ ಶೆಕೆ ಎಷ್ಟು ತೀವ್ರವಾಗಿದೆಯಲ್ಲ. ನಾನೆ ಈ ಬೆಂಕಿಗೆ ಅವನ ಸಾವಿಗೆ ಕಾರಣ. ಒಂದು ದಿನ ನನ್ನಲ್ಲಿ ಉಳಿಯಲು ಬಂದವನನ್ನು ಕಾಪಾಡುವ ಶಕ್ತಿ ಬರಲಿಲ್ಲ ನನಗೆ. ಎಷ್ಟು ಖಾತ್ರಿಯಾಗಿತ್ತು ಅವನಿಗೆ ತನ್ನ ಸಾವು! ಕುಳಿತು ಮಾತಾಡುತ್ತಿದ್ದವನು ಸಿಗರೇಟು ತರಲು ಹೋದ. ಕಾದುಕೊಂಡೇ ಇದ್ದ ಕ್ರೂರಿಗಳು ಅವನ ಮೇಲೆ ಗುಂಡುಗಳ ಮಳೆಸುರಿದು ಹೋಗಿದ್ದರು. ಅನಾಥ, ಅಂಗಾತ, ರಕ್ತದ ಹೊಳೆಯಲ್ಲಿ ಬಿದ್ದ ಶರೀರ ಈ ಮಾಯಾನಗರದ ಅನಿಶ್ಚಿತತೆಗೆ, ಮನುಷ್ಯನ ಬರ್ಬರತೆಗೆ ಎಂಥ ಸಾಕ್ಷಿಯಾಗಿತ್ತಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿವೇದನೆ
Next post ಮುಂಜಾವು

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys