ಭಯನಿವಾರಣೆ

ಭಯನಿವಾರಣೆ

ಭಯ, ದಿಗಿಲು, ಅಂಜಿಕೆ, ಹೆದರಿಕೆ-ಇವು ಎಲ್ಲವೂ ಒಂದೇ ಭಾವದ ಶಾಖೋಪಶಾಖೆಗಳು. ಯಾವಾಗ್ಗೆ ಮನುಷ್ಯನಲ್ಲಿ ಭಯವು ಹುಟ್ಟಿತೋ ಆಗ್ಗೆ ಮನುಷ್ಯನು ಮೃತನಂತೆ.
“ಭಯೇ ವ್ಯಾಪಿಲೇ ಸರ್‍ವ ಬ್ರಹ್ಮಾಂಡ ಅಹೇ!
ಭಯಾತೀತ ತೇ ಸಂತ ಆನಂದ ಪಾಹೇ!”

ಹೀಗೆಂದು ರಾಮ ಸಮರ್‍ಥರು ಶ್ರೀ ಶಿವಾಜಿಗೆ ಹೇಳಿದ್ದಾರೆ. “ಭಯಾತೀತನಾಗಬೇಕು ಆನಂದ ಬರಲು ಬಯಸಿದರೆ!” ಹೀಗೆಲ್ಲ ಹೇಳಿದ ರಾಣೋಜೀ ರಾಯ. ಸುಂದರ ತರುಣಿ ಆತನ ಸತಿ ಎಲ್ಲಮ್ಮ ಕೇಳಿದಳು. ನೀಳವಾಗಿ ನಿಂತಿದ್ದವಳು ಸರ್ರನೆ ಆತನ ಕಡೆಗೆ ಸರಿದು ಬಂದು ಅವನ ಕೈಲಿದ್ದ ಪುಸ್ತಕವನ್ನು ಕಿತ್ತು ಬಿಸಾಟು ಮಲ್ಲಿಗೆಯ ಅಂಟಾಗಿ ಒಲಿದೊಲಿದು ಆತನ ಮೈಗೆಲ್ಲ ಹಬ್ಬಿಕೊಂಡಳು.

“ನೋಡಿ! ನಿಮ್ಮಂಥ ಕೊಲೆ ಘಾತುಕರನ್ನೇ ತಬ್ಬಿಕೊಂಡು ಹಣ್ಣು ಮಾಡಿಬಿಟ್ಟೆ-ಕ್ರೂರ ಯುದ್ಧದಲ್ಲಿ! ನನಗೆಲ್ಲಿಯ ಭಯ? ಎಂಥೆಂಥವರ ಎದೆಯಲ್ಲಿ ಭಯಹುಟ್ಟಿಸುವ ಮೃಗರಾಜ ಸಿಂಹನನ್ನು ಬೆನ್ನು ತಟ್ಟಿ ಎಬ್ಬಿಸಿ- ಅದು ‘ಆಂ’ ಎಂದು ಆರ್‍ಭಟಿಸಿದಾಗ ಅದರ ಬಾಯೊಳಗೆ ಕೈ ಹೋಗಿಸಿ ಅದರ ಹೃದಯವನ್ನು ಕಿತ್ತು ತೆಗೆಯುವ ನಿಮ್ಮಂಥವರನ್ನು ಮಿದುವುಮಾಡುವ ಶಕ್ತಿ ನನಗೆ ಇದೆ. ಭಯವೆಲ್ಲಿಯದು ನನಗೆ ? ನಿಮ್ಮನ್ನು ಅಂಜಿಸುವ ಬೆಂಕಿಯನ್ನು ನಾನು ಹೇಗೆ ಇಟ್ಟಾಡಿಸುವೆನು ನೋಡಿರಿ. ಯಾವಾಗ ಏನು, ಹುರಿ-ಕರಿಸಯಿಸೆಂದರೆ ಅವೆಲ್ಲ ತತ್‍ಕ್ಷಣವೇ ಮಾಡುವುದಿಲ್ಲವೆ?- ಆ ಬೆಂಕಿ ನನ್ನ ಸರಿಯಾಳಾಗಿ!

ಈ ಮಾತಿಗೆ ರಾಣೋಜಿ “ಜಾಣೆಯೇ ಸರಿ ನನ್ನಾಕೆ! ತಬ್ಬಿ ಕೊಂಡು ತಬ್ಬಿಬ್ಬು ಮಾಡಿದೆ. ಫಣಿವೇಣಿಯಿಂದ ಕೈಗಳನ್ನು ಬಿಗಿದುಬಿಟ್ಟೆ. ಈಗ ನೆಟ್ಟ ದಿಟ್ಟಿಯಿಂದ ನನ್ನ ಎದೆಯನ್ನು ಚುಚ್ಚುತಲಿರುವೆ-ಸರಿ, ಎನ್ನು-ಆದರೆ ಹೀಗೇ, ಇಂಥಾದ್ದೆ, ಒಂದು ಸರ್‍ಪಬಂದಿತು ಎನ್ನೋಣ-ನಿನ್ನ ಮೈಗೆ ಹೀಗೆ ಸುತ್ತಿತು ಎನ್ನೋಣ-ಆಗ?”

ಎಲ್ಲಮ್ಮ “ಮಾಡುವುದೇನು? ನೀವು ಇರುತ್ತೀರಲ್ಲ ಹತ್ತಿರ, ಚಾಕು ಬಿಚ್ಚಿ ಪಡುವಲ ಕಾಯಿ ಹೆಚ್ಚಿದಂತೆ ಹೆಚ್ಚಿ ಬಿಡಿ ಎನ್ನುವೆನು. ನೀವು….”

ರಾಣೋಜಿ “ಆಹಾ, ನಾನಿರಲಿಲ್ಲ ಎಂದುಕೊ” ಎಲ್ಲಮ್ಮ ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಕಂಡಿರ!”

ರಾಣೋಜಿ “ಮಸಲ, ದೊಡ್ಡ ಆನೆ ಬಂತು! ಸೊಂಡಿಲು ಅಲ್ಲಾಡಿ ಸುತ್ತ ಹೆಜ್ಜೆ ಹೆಜ್ಜೆಗೂ ಭೂಮಿಯನ್ನು ನಡುಗಿಸುತ್ತ ಬಂದಿತು ಎಂದು ಕೋ, ಆಗ್ಗೆ!”

ಎಲ್ಲಮ್ಮ “ಸೊಂಡಿಲ ಒಳಗೆ ಕಟ್ಟಿರುವೆಯಾಗಿ ಹೋಗಿ ಕಚ್ಚುವೆನು. ಆಗ ಎಂತಿದ್ದರೂ ಸತ್ತೇ ಸಾಯುವುದು.”

ರಾಣೋಜಿ “ಹೀಗೆಲ್ಲ ಅಡ್ಡಾದಿಡ್ಡಿಯಾಗಿ ಮಾತಾಡಲಿಕ್ಕೇ ಸರಿ, ಎಲ್ಲಿ ಹೇಳು, ಉತ್ತರಕುತ್ತರ ಸರಿಯಾಗಿ ಹೇಳಬೇಕು. ಹೂ !”

“ಹೂಂ ಕೇಳುವಂಥವರಾಗಿ, ಹೆದರುವರಾರು!” ಎಂದು ಉತ್ತರ ಕೊಡಲು ಸಿದ್ದಳಾದ ಕಾಂತೆಯು, ತನ್ನ ಅರಳೇಪೇಟೆ ಸೀರೆ ನೆರಿಗೆಯನ್ನು ನವಿಲು ಬಾಲದಂತೆ ಕೆದರಿಕೊಂಡು ಕುಳಿತಳು, ಹೇಳಿ ನೇಯಿಸಿಕೊಂಡದ್ದು ಆ ಸೀರೆ ಬೆಂಗಳೂರಿನದು. ಸೆರಗಿನಲ್ಲಿ ಮೋಡ ಮುಸುಕಿದ ಆಕಾಶ, ಒಡಲೆಲ್ಲ ಜರತಾರಿ ನವೀಲಕಣ್ಣು, ಯಾವ ಹೆಂಗಸೂ ಎಂದೂ ಉಡದಂಥ ಸೀರೆ.

ರಾಣೋಜಿ ಚಪ್ಪಾಳೆ ತಟ್ಟಿಕೊಂಡು ಕುಣಿದುಬಿಟ್ಟ. “ಯಾಕೇಂದ್ರೆ ಇದೇನು ಕುಣಿತ!”‘ “ಸಿಂಹದ ಮೇಲೆ ನವಿಲು ಕುಳಿತುಬಿಟ್ಟಿವೆ. ಹಾ, ಹಾಹಾ!” ಎಂದು ಮತ್ತೆ ಕುಣಿದ. ಚಪ್ಪಾಳೆ ತಟ್ಟಿದ. ಎಲ್ಲಮ್ಮ ತಿರುಗಿ ನೋಡಿದಳು. ಹೌಹಾರಿ ಬೆದರಿ ಎದ್ದೋಡಿದಳು. ಸಿಂಹದ ತಲೆಯ ಮೇಲೆ ಕುಳಿತುಬಿಟ್ಟಿದ್ದಳು ಆಕೆ. ರಾಣೋಜಿ ತತ್ಕ್ಷಣವೇ ಮೇಜಿನ ಮೇಲಿದ್ದ ಬಂದೂಕನ್ನು ತೆಗೆದು ಕೈಲಿ ಕೊಡಹೋದನು. “ಹಿಡಿ! ಶೂರಾಗ್ರಣೀ, ಇದು ಬಾರುಮಾಡಿದ ಬಂದೂಕು, ಹೊಡೆದು ಕೊಂದುಬಿಡು ಆ ಸಿಂಹವನ್ನು! ಹೀಗೆ ಹಿಡಿ, ಗುರಿ ಇಡು, ಕುದುರೆ ಎಳಿ, ಸುಟ್ಟು ಬಿಡು-ಆ ಸಿಂಹವನ್ನು ಅಬ್ಬಬ್ಬ ಎಷ್ಟೊಂದು ಧೈಯ ಆ ಕರುಳಿಲ್ಲದ ಸಿಂಹಕ್ಕೆ?”

ಎಲ್ಲಮ್ಮ ಸಿಟ್ಟಾದಳು. ಆ ಸಿಟ್ಟು ಅವಳ ಸೌಂದರ್‍ಯವನ್ನು ಇನ್ನೂ ಹೆಚ್ಚಿಸಿತು. ಝರಿಯು ಜಲಪಾತವಾದ ಹಾಗೆ! “ಕರುಳೂ ಇಲ್ಲ, ಎದೆಯ ಇಲ್ಲ. ನೀವು ಇಂಥ ಸತ್ಯ ಸಿಂಹಗಳನ್ನೆಲ್ಲ ತಂದಿಟ್ಟು ನಿಮ್ಮ ಕೋಣೆಯ ಸೌಂದರ್‍ಯವನ್ನೆಲ್ಲ ಕೊಂದೇ ಬಿಟ್ಟಿದ್ದೀರಿ. ಇಷ್ಟಕ್ಕೆಲ್ಲ ಹೆದರಲೇಕೆ?” ರಾಣೋಜಿ “ಹೌದೌದು! ನೀನೀಗನೋಡು, ಅಂಜಿಲ್ಲ. ನಿನ್ನ ಮೈ ನಡುಗಲಿಲ್ಲ. ಕಣ್ಣುಗಳಲ್ಲಿ ನೀರೂ ಸಹ ತುಂಬಿಲ್ಲ. ಪಾಪ! ಆ ಸಿಂಹವೇ ತಾನೆ, ನಿನ್ನ ಸೋಂಕಿಗೆ ಸತ್ತು ಒಣಗಿ ಚರ್ಮವಾಗಿ ಹೋಗಿಬಿಟ್ಟಿದೆ.” ಎಲ್ಲಮ್ಮನೇನೂ ಹೇಳಲಿಲ್ಲ. ಗೇರುಸೊಪ್ಪೆ ಜಲಪಾತದ ಚಿತ್ರವೊಂದನ್ನು ನೋಡುತ ನಿಂತಳು.

ಮತ್ತೆ ರಾಣೊಜಿಯೇ ಆಕೆಯ ಹತ್ತಿರಕ್ಕೆ ನಡೆದನು. “ಬಾ ಹೆಣ್ಣೆ! ನನ್ನ ಪ್ರಯತ್ನವೆಲ್ಲ ವ್ಯರ್‍ಥವಾಯಿತು. ಹೆಂಗುಸಲ್ಲವೆ ನೀನು ? ವೀಣೆ ಹಿಡಿಯುವುದೇ ಹೆಚ್ಚಿನ ಕೆಲಸ ನಿನ್ನದು, ಬಾರಿಸು ನಿನ್ನ ವೀಣೆ, ಭಯ ಭ್ರಾಂತಿ ಹೋಗಲಿ. ಸೆರಗು ಹೊದ್ದಿಸಲಾದರು ಹತ್ತಿರ ಬರಬಹುದೇ ರಾಣಿ ಸಾಹೇಬರೇ! ಚಂಚು! ಇವರಿಗೆ ಸಂಗೀತ ಮಂದಿರದ ದಾರಿ ತೋರಿಸು.”

ಎಲ್ಲಮ್ಮ ಕಸರಿಕೊಂಡು ಹಿಂತಿರುಗಿದಳು. “ಸಂಗೀತ ಮಂದಿರವಂತೆ, ನಾಟ್ಯ ಶಾಲೆಯಾಕಾಗಬಾರದು! ಮೃತ್ಯುವಿಗೆ! ನೆಟ್ಟಗೊಂದು ಅಡುಗೆಮನೆಯಿಲ್ಲ ನನ್ನ ಭಾಗ್ಯಕ್ಕೆ ಈ ಕಾಡಲ್ಲಿ! ನಮ್ಮ ದೇಶದ ಗೋಂಡಾರಣ್ಯವೇ ವಾಸಿ. ದೇಶವಲ್ಲದ ದೇಶ! ಕಾಡಲ್ಲದ ಕಾಡು. ಇಂಥಾ ಬಳಿಗೆ ಹೊತ್ತು ತಂದಿದ್ದೀರಿ ನನ್ನ, ಸೀತಮ್ಮನವರಿಗಾದರೂ ಇಷ್ಟು ಕಷ್ಟವಿತ್ತೋ ಇಲ್ಲವೋ ಆ ಕಾಡಲ್ಲಿ! ಆ ಲಂಕೆಯಲ್ಲಿ! ಊಳಿಗಕ್ಕೆ ಈ ನೀಗ್ರೋ ರಾಕ್ಷಸರು. ನರಭಕ್ಷಕರು ! ಈ ನನ್ನ ಬಾಳಿನ ಬಳಗಕ್ಕೆ ಪೀತಾಂಬರದ ಸಿಂಗವ್ವ, ಬೇಂಗಟೇ ಬೇತಾಳ ಜಿರಾಫೆ, ಕೋಡುಮುಸುಡಿ ಎಮ್ಮೆ. ಓಹೋಹೋ ಏನೂಂತ ಕೊಚ್ಚಿ ಕೊಳ್ಳುವಿರೇಂದ್ರೇ! ನಿಮ್ಮ ಹೆಮ್ಮೆ ಹಲಸಿನಕಾಯ!”

ಇಷ್ಟೆಂದ ಮೇಲೆ ಸಹ ಕೋಪ ಮಾಡದಿದ್ದರೆ ಅವನೆಂಥಾ ಗಂಡಸು! ರಾಣೋಜಿಗೆ ತನ್ನ ದೇಶದ ನೆನಪು ಬಂತು. ಕಿಟಕಿಯಿಂದಾಚೆ ನೋಡುತ್ತ ನಿಂತ. ಹೇಳಿದ “ನಿನ್ನ ಉಡಿಗೆ ತೊಡಿಗೆಯ ಅತ್ಯಾಶೆಗಾಗಿಯೇ ಇಲ್ಲಿಗೆ ಬಂದದ್ದು, ಈ ಆಫ್ರಿಕಕ್ಕೆ, ನಿನ್ನ ರತ್ನದ ಕಂಠಿ, ನಿನ್ನ ಬೆಡಗಿನ ಸೀರೆ-ಆ ನಿನ್ನ ಬೆಳ್ಳಿ ಬಂಗಾರವೆಲ್ಲ ಬರುತ್ತೆ ನಿನ್ನ ದೇಶದಲ್ಲಿದ್ದಿದ್ದರೆ? ಇಂಡಿಯದಲ್ಲಿ? ಕನ್ನಡ ನಾಡಿನಲ್ಲಿ! ಅದೂ ಮೈಸೂರಲ್ಲಿ! ಆ ನೂಕು ನುಗ್ಗಲಲ್ಲಿ! ಆ ಬಡತನದಲ್ಲಿ! ನಡಿ, ವೀಣೆ ಬಾರಿಸುತ್ತ ಕುಳಿತಿರು-ಊಟದ ಹೊತ್ತಿಗೆ ನಾನೊಂದಿಷ್ಟು ಅಡ್ಡಾಡಿ ಬರುವೆನೆಂದು ಕೈಲಿ ಬಂದೂಕು ಹಿಡಿದು ಹೊರಗೆ ಹೊರಟೇಬಿಟ್ಟನು.

ಮಧ್ಯ ಆಫ್ರಿಕದ ಕಾಡು! ಕಾಡಿನ ನಡುವೆ ರಾಣೋಜಿಯ ಮರ ಮಟ್ಟುಗಳ ಬಂಗಲಿ. ಸುತ್ತಣ ಕಾಡು ಕತ್ತರಿಸಿ ಆರು ತಿಂಗಳಾಗಿಲ್ಲ. ಈಗಾಗಲೆ ಬಂಗಲಿಯನ್ನು ಬಳಸಿ ಬಂದಿದೆ ಕಾಡುಪೊದೆ. ಸ್ವಲ್ಪ ದೂರ ಹೋದ ರಾಣೋಜಿಯು ಒಂದು ಮರವನ್ನು ಹತ್ತಿ ಕುಳಿತುಕೊಂಡನು. ಇತ್ತ ಜೇಡನೊಂದು ಪುಟ್ಟ ಹಕ್ಕಿಯನ್ನೆ ಹಿಡಿದು ಹೀರುತಲಿದೆ ರಕ್ತ. ಅತ್ತ ಕೋತಿಯೊಂದು ಬಾಲವನ್ನು ದೊಡ್ಡ ಬಳ್ಳಿಯೊಂದಕ್ಕೆ ಸುತ್ತಿ ಜೋಕಾಲೆ ಯಾಡುತಲಿದೆ. ಅದೋ ಅಲ್ಲಿ ನೀರಿನ ಬಳಿ ಪಟ್ಟೆಕತ್ತೆಗಳು ಹಿಂಡುಹಿಂಡಾಗಿ ಮೇಯುತಲಿವೆ. ಕಣ್ಣಿಗೆ ದುರ್‍ಬೀನು ಹಿಡಿದು ನೋಡಿದನು-ದೂರದ ಬೆಟ್ಟ-ಅದರ ಇಳಿಜಾರಲ್ಲಿ ನಾಲ್ಕೈದು ಖಡ್ಗ ಮೃಗಗಳು ಮೇಯುತಲಿವೆ. ಅದರಾಚೆ-ಕೆಸರು – ಅಲ್ಲಿ ನೀರ್‍ಗುದುರೆಗಳು ಹಾಯಾಗಿ ಮಲಗಿವೆ. ಇತ್ತ ದಕ್ಷಿಣ ದಿಕ್ಕಿನಲ್ಲಿದೆ ಆ ನಗರ. ಅದಕ್ಕೆ ನೀರಿನ ವ್ಯವಸ್ಥೆ ಮಾಡಲಿಕ್ಕಾಗಿಯೇ ರಾಣೋಜಿಯು ಬಂದುದು. ಇಂಜನಿಯರಾಗಿ ಇಂಡಿಯದಲ್ಲಿ ಇರಲೊಲ್ಲದೆ ಆಫ್ರಿಕಕ್ಕೆ ಬಂದಿದ್ದನು. ಕೆನಿಯಕ್ಕೆ ಬಂದು, ಅಲ್ಲಿಂದ ಲಕ್ಷ್ಮಿಯ ಹೆಜ್ಜೆಯ ಜಂಡನ್ನು ಹಿಡಿದು ಇಲ್ಲಿಗೆ ಬಂದಿದ್ದನು. ಈಗಾಗಲೆ ಒಂದೆರಡು ಬಾರಿಯ ಕೆಲಸಗಳನ್ನು ಮಾಡಿ ಹಣವಂತನಾಗಿರುವನು. ಬೇಟೆಯಲ್ಲಿ ಸಿಕ್ಕಿದ ಮೃಗಗಳ ಚರ್ಮಗಳಿಂದಲೇ ಬಹಳ ಬಂಗಾರ ಬಂದಿದೆ. ಇಲ್ಲಿಯ ಜೀವನವಾಗಲೀ, ಕೆಲಸವಾಗಲೀ ಕಷ್ಟ ತರವಾಗಿರಲಿಲ್ಲ. ರಾಣೋಜಿಗೆ ಕಷ್ಟವಾಗಿ ತೋರಿದ್ದು ಹೆಂಡತಿಯ ಭಯನಿವಾರಣೆ, ಅವಳು ಧೈರ್ಯ ಕಲಿತು ಕಾಡಿನಲ್ಲಿ ಓರ್‍ವಳೇ ಇರುವಳಾದರೆ, ಅನುಕೂಲ ಹಚ್ಚು. ಇನ್ನು ಮುಂದಿನ ಠಾವಾದರೋ ಸಿಂಹ ಹೆಬ್ಬಾವುಗಳ ಬೀಡು. ಎಲ್ಲಮ್ಮ ಧೈರ್‍ಯಕಲಿಯದೆಲೆ ಏನೇನೂ ಆಗುವಂತಿಲ್ಲ. ಅದಕ್ಕಾಗಿ ಎಲ್ಲಾ ಜಾತಿಯ ಮೃಗಗಳ ಚರ್‍ಮಗಳನ್ನೂ ತಂದು ತನ್ನ ಕೋಣೆಯಲ್ಲಿ ಅಲಂಕಾರವಾಗಿ ಹರಡಿರುವನು. ಇಷ್ಟು ದಿನಗಳಾದರೂ ಕೂಡ ಸತ್ತ ಮೃಗಗಳನ್ನು ಕಣ್ಣೆತ್ತಿ ನೋಡುವ ಧೈರ್‍ಯ ಸಹ ಎಲ್ಲಮ್ಮನಿಗೆ ಬರಲಿಲ್ಲ. ಮುಂದಿನ್ನೇನು ಉಪಾಯ ಹೂಡಲೆಂದು ಯೋಚಿಸುತ್ತಿರುವಲ್ಲಿ-ಊಟದ ತುತ್ತೂರಿ ಕೇಳಿಬಂತು. ಕೊಂಬೆಯಿಂದ ಕೊಂಬೆಗೆ ಇಳಿದಿಳಿದು ಮನೆಗೆ ಬಂದನು. ಯಾರನ್ನೂ ಮಾತನಾಡಿಸದೆಲೆ ತನ್ನ ಅರ್‍ಧಾಂಗಿಯನ್ನು ಕಾಣಲು ಭೋಜನ ಶಾಲೆಗೆ ನಡೆದನು. ಅಂದು ಸರಸ ಸಲ್ಲಾಪಗಳಿಲ್ಲದೆಲೆ ಊಟದ ರುಚಿ ಕೆಟ್ಟು ಹೋಯಿತು.

-೨-

ಉರಿ ಬಿಸಿಲಿನ ಹಗಲೊಂದು, ಉದ್ವೇಗದ ರಾತ್ರಿಯೊಂದು ಕಳೆದವು. ಭಾಮಿನಿಗೆ ಭಯನಿವಾರಣೆಯಾಗಲಿಲ್ಲವೆಂದು ಯೋಚನೆಯು ಅತ್ಯುತ್ಕಟವಾಯಿತು ರಾಣೋಜಿಗೆ. ಇನ್ನೂ ಮುಂದೆ ಭಯಂಕರವಾದ ಕಾನನಗಳಿಗೆ ಹೋಗಬೇಕು, ನದಿಯ ನೀರು ಎಲ್ಲಿ ಎತ್ತರದಲ್ಲಿದೆಯೋ ಅಲ್ಲಿಂದ ಕಾಲುವೆ ತೋಡುವ ವ್ಯವಸ್ಥೆ ಮಾಡಬೇಕು. ಆ ಸ್ಥಳಗಳನ್ನು ಹುಡುಕುತ್ತಾ ಇನ್ನೆಲ್ಲೆಲ್ಲಿಗೆ ಹೋಗಬೇಕಾದೀತೋ ಬಲ್ಲವರಾರು! ಸುತ್ತ ಪಹರೆಗಳನ್ನು ಹೆಚ್ಚಿ ಸೋಣವೆ ಸತಿಯ ಸೌಖ್ಯಕ್ಕೆ? ಯಾರನ್ನು ನಂಬಿ ಬಿಟ್ಟು ಹೋಗಬೇಕು? ಇಬ್ಬರು ನೀಗ್ರೊಗಳನ್ನು ಕಾಡಿನ ಮಧ್ಯೆ ನಂಬುವುದಕ್ಕೆ ಸಾಧ್ಯವಿಲ್ಲ.

“ಎಲ್ಲಮ್ಮ ನೋಡಲಿಕ್ಕೆ ಬಲು ಸೌಮ್ಯ-ಸುಂದರ, ಮಂದರ-ಮಧುರ, ಕೋಮಲ-ಯಾರ ಬಾಯಿಗಾದರೂ ತುತ್ತಾದಾಳು. ಇಲ್ಲಿ ಯಾಕಾದರೂ ಈಕೆಯನ್ನು ಕರೆತಂದೆನೋ, ಬಂದೂಕು ಹಿಡಿಯಲಿಕ್ಕೆ ಕೂಡ ಇವಳಿಗೆ ಬರಲಿಲ್ಲವಲ್ಲ. ಮುಂದೇನು ಮಾಡಲಿ? ಕೆನಿಯ ದೇಶದಲ್ಲಿರುವ ನೆಂಟರಲ್ಲಿಗಾದರೂ ಹೋಗೆಂದರೆ ಹೋಗಳಲ್ಲ. ಆಗಲಿ, ಇನ್ನೂ ಮುನ್ನ ಪ್ರಯತ್ನ ಮಾಡಿ ಸತ್ತ ಪ್ರಾಣಿಗಳನ್ನು ತಂದು ಮುಂದಿಟ್ಟು ಆಕೆಗೆ ಭಯ ಹೋಗುವುದೇನೋ ನೋಡುವೆನು. ಮನುಷ್ಯನು ತನ್ನ ಎಚ್ಚರದಲ್ಲಿದ್ದರೆ ದುಷ್ಟ ಜಂತುಗಳೇನು ಮಾಡಿಯಾವು? ಅವುಗಳಿಗೆ ಯಥಾ ಪ್ರಕೃತಿವಿಧಿಯಾದ ಒಂದೊಂದೇ ಮಾರ್‍ಗಗಳು. ನಮಗಾದರೆ ಬುದ್ಧಿ ವಿಕಾಸದ ಹಲವು ಮಾರ್‍ಗಗಳು, ಜೀವಿಗಳು ಆತ್ಮರಕ್ಷಣೆಗೆ ದುಷ್ಟತನ ತೋರಿಸುವವು-ಮನುಷ್ಯ ಜೀವಿಯು ತನ್ನ ಹಿರೇತನವನ್ನು ತೋರಿಸಿಕೊಳ್ಳಬೇಕು. ಈ ಯುದ್ಧದಲ್ಲಿ ಆದಿಯಿಂದಲೂ ಮನುಷ್ಯನೇ ಜಯಿಸಿ ನಿಂತು ಬದುಕಿ ಬಂದವನು. ಎಲ್ಲಮ್ಮನ ಭಯ ನಿವಾರಣೆಗೆ ಉಪಾಯವಿದ್ದೇ ಇದೆ. ಸತ್ತ ಸಿಂಹಗಳನ್ನೂ ಹೆಬ್ಬಾವುಗಳನ್ನೂ ತಂದು ಕೋಣೆಯಲ್ಲಿ ಜೋಡಿಸಿ ಇಡಬೇಕು. ಸತ್ತವನ್ನು ಮುಟ್ಟಿ ಅಭ್ಯಾಸವಾದರೆ ಸಾಕು. ಆಕೆಗೆ ಆ ಕೋಣೆಯಲ್ಲಿರುವಷ್ಟು ಧೈರ್‍ಯ ಬಂದರೆ ಸಾಕು. ಎಲ್ಲಿಯಾದರೂ ಹೋಗಿ ಬರುವವರೆಗೆ ಹೆಂಡತಿ ಬದುಕಿರುವಳೆಂದು ಧೈರ್‍ಯದಿಂದಿರಬಹುದು. ಆಳುಗಳು ಯಾರೂ ಆ ಕೋಣೆಗೆ ಬರುವುದಿಲ್ಲ. ಬಲು ಹೆದರುವರು. ಕಾಡಿನಲ್ಲಿ ಆರ್‍ಭಟಿಸುವ ಮೃಗಗಳಿಗೆ ಅವರು ಹೆದರುವುದಿಲ್ಲ. ಆದರೆ ಈ ನನ್ನ ಸತ್ತ ಪ್ರಾಣಿಗಳನ್ನು ಕಂಡರೆ ಬಲು ಭಯಪಡುವರು. ನನಗೆ ಅದ್ಭುತವಾದ ಮಂತ್ರ ಶಕ್ತಿಯಿದೆಯೆಂದು ಅವರು ಭಾವಿಸಿರುವರು. ಏನು ಮಾಡಿದರೂ ಒಬ್ಬೊಬ್ಬರೇ ನನ್ನ ಕೋಣೆಗೆ ಇಲ್ಲಿಯವರಾರೂ ಬರುವುದಿಲ್ಲ. ಈ ಭಾಗದಲ್ಲಿ ಎಲ್ಲಮ್ಮನಿಗೆ ಕ್ಷೇಮ. ನಾನಿಲ್ಲದಾಗ ಆಕೆ ಅಲ್ಲಿರುವುದಾದರೆ ಯಾವದೊಂದು ಭಯವೂ ಇರದು. ಸತ್ತ ಮೃಗಗಳ ಸಂಗಡವಾದರೂ ಆ ಪುಣ್ಯಾಗಿ ಇರುವುದಾದರೆ ಧೈರ್‍ಯದಿಂದ ಸುತ್ತುತ್ತ ಹೋಗಬಹುದು” ಎಂದು ಮುಂತಾಗಿ ಅಲೆ ಅಲೆಯಾಗಿ ಆಲೋಚನೆಗಳು ಬಂದುವು.

ರಾತ್ರಿ ಕಳೆಯಿತು; ರಾಣೋಜಿಯ ಮುಖ ಕಳೆಗೂಡಿತು. ನಗುನಗುತ ಎಲ್ಲಮ್ಮನನ್ನು ಎಬ್ಬಿಸಿ ‘ಕೋಕೋ’ ಮಾಡ ಹೇಳಿದನು. ಹೊರಗೆ ಹೋಗಿ ನೀಗ್ರೊ ಆಳುಗಳನ್ನೆಲ್ಲ ಸಿದ್ದವಾಗಿರ ಹೇಳಿದನು. ಗಿಣಿಯ ಬಳಿ ನಿಂತು ಮಾತಾಡಿಸಿದನು. ಉಷ್ಟ್ರ ಪಕ್ಷಿಯನ್ನು ಎತ್ತಿ ನಿಲ್ಲಿಸಿದನು-ಅದು ಕೊಕ್ಕು ಬಿಚ್ಚಲು ಅದರ ಬಾಯಿಗೆ ಒಂದು ಪೆಪರ್‌ಮಿಂಟು ಹಾಕಿದನು ಈ ವೇಳೆಗೆ ನಾಯಿಗಳು ಮೋರೆ ನೋಡಿ ನೆಗೆಯಲಾರಂಭಿಸಿದವು. ಅವುಗಳನ್ನು ಬಿಚ್ಚಿ ಬಿಟ್ಟು ಬೆನ್ನು ತಟ್ಟಿ ಕಳಿಸುವ ಹೊತ್ತಿಗೆ ಚಿಂಪಾಂಸೀ ಹ್ಯಾಟುಗಾಲು ಹಾಕುತ್ತ ಅವನ ಬಳಿಗೆ ಬಂದು ಕೈ ಕೊಟ್ಟು ನಡುವೇರಿತು. ಕಡೆಗೆ ಬೇರೆ ಮೃಗ ಶಾಬಕಗಳನ್ನು ಮಾತನಾಡಿಸಲು ಕೈಸಾಲೆಗೆ ಹೋದನು. ಅಂತು ಆ ದಿನ ಒಂದು ಬಗೆಯ ಆನಂದದಿಂದ ಕಾಡು ತಿರುಗಿಬರಲು ಹೂರಟನು ರಾಣೋಜಿರಾಯ.

ಬಹಳ ಬಿಸಿಲಾಗುತ್ತ ಬಂದಿತು. ಕಾಡಿನಿಂದ ಹವೆಯೇರಲು ಆರಂಭ ವಾಯಿತು. ಕೊಳೆತ ಸೊಪ್ಪು ಸದೆಯ ವಾಸನೆ ಅಲ್ಲಲ್ಲಿ ಎದ್ದಿತು. ಎಷ್ಟೋ ಕಡೆ ಆಕಾಶವೂ ಕಾಣದು, ನೆಲವೂ ಕಾಣದು. ಮೇಲೆ ಸೊಪ್ಪು ಹೂ ಹಣ್ಣುಗಳ ಹಂದರ; ಕೆಳಗೆ ಎಳೆ ಬಳ್ಳಿಗಳ ಪಂಜರ. ಹೂವಿಗೊಂದು ಚಿಟ್ಟೆ, ಎಲೆಗೊಂದು ಇರುವೆ, ಕೊಂಬೆಗೊಂದು ಕೋತಿ, ರೆಂಬೆಗೊಂದು ಪಕ್ಷಿ-ಝೇಂ ಯಂದು ಶಬ್ದ. ಕಾಲಿಟ್ಟು ತೆಗೆದರೆ ಸೊಳ್ಳೆಗಳು, ನೊಣಗಳು ಎದ್ದು ಹಾರುವವು. ಮರಗಳ ಮೇಲೆ ಅಲ್ಲೊಂದಿಲ್ಲೊಂದು ಕೊಡಲಿಯ ಗುರುತು ಮಾಡಿ ಕೊಂಡು ಹೊರಟನು. ಬರಬರುತ್ತ ಕಾಡು ದಟ್ಟವಾಯಿತು. ಯಾವದು ಬಳ್ಳಿಯೊ ಮತ್ತಾವುದು ಹೆಬ್ಬಾವೊ ತಿಳಿಯಲು ಕಷ್ಟ. ಹಸುರು ಮುಸುಕಿದ ಪಂಕಗಳು ಗಟ್ಟಿ ನೆಲದ ಭ್ರಾಂತಿ ಹುಟ್ಟಿಸುವವು. ದೂರದಿಂದ ಸೊಗಡು ವಾಸನೆ ಬರುತಲಿದೆ-ಅದು ರಕ್ಕಸ ಕಮಲದ ಕಂಪು. ಮೃಗ-ಪಕ್ಷಿಗಳ ಕಲಕಲದಲ್ಲಿ ತಾನಾಡಿದ್ದು ತನಗೇ ಕೇಳಿಸದು. ಕಾಲಿಟ್ಟು ತೆಗೆದರೆ ಮಂಡಿ ಯುದ್ಧದ ದರಗು-ಅದರ ಝರಝರ ಶಬ್ದ-ಆ ಶಬ್ದಕ್ಕೆ ಹಲವು ಹದಿನೆಂಟು ಜಾತಿ ಪ್ರಾಣಿಗಳು ಎದ್ದೋಡುವವು. ಸೂರ್‍ಯನು ನೆತ್ತಿಯ ಮೇಲೆ ಬಂದರೂ ಕೂಡ ಈ ಆಫ್ರಿಕದ ಕಾಡಿನಲ್ಲಿ ಗಾಂಢಾಂಧಕಾರದ ಭಯಂಕರ ಕನಸು.

ರಾಣೋಜಿಯು ಹಿಂತಿರುಗಿ ಕಣ್ಣಮೇಲೆ ಕಣ್ಣು ಪಹರೆ ಇಟ್ಟು ನಡೆದು ಬಂದನು. ಮನೆಯ ಹತ್ತಿರ ಬಂದಿತು. ದೂರದಲ್ಲಿ ಅತ್ತ ಕಡೆ ಏನೋ ಕಂಡನು, ನಿಂತು ನೋಡಿದನು. ಏನೋ ಯೋಚನೆ ಹೊಳೆಯಿತು. ಮೊಗ ದಲ್ಲಿನಗೆ ಕಂಡಿತು. ಅರ್‍ಧ ಗಂಟೆಯ ಕಾಲ ನಡೆದಿರಬಹುದು. ಅವನ ಗಮನಕ್ಕೆ ನಡಿಗೆಯೆಂದು ಹೇಳುವುದು ತಾನೆ ಹೇಗೆ ? ಯಾಕೆಂದರೆ- ಹತ್ತಿ, ಇಳಿದು, ಹಾರಿ, ಜಾರಿ ದೂರಸಾಗಬೇಕಾಗಿತ್ತು. ಅಲ್ಲೊಂದು ಮಾರು ದೂರದಲ್ಲಿ ಎರಡುವರೆ ಮಾರು ಉದ್ದದ ಹೆಬ್ಬಾವಿತ್ತು. ಮರದ ಕೂಂಬೆಗೆ ಬಾಲ ಸುತ್ತಿಕೊಂಡು ನೇತಾಡುತ್ತಲಿತ್ತು. ಒಂದೊಂದು ಬಾರಿ ನಲಿದಾಡಿ ಬಾಯಿ ಕಳೆಯುವುದು. ನಾಲಿಗೆ ಸುರಿಯುವುದು. ರಾಣೋಜಿಯು ನಿಂತನು, ನೋಡಿದನು, ಹೊಂಚು ಹಾಕಿದನು. ತೊಡೆಯ ಗಾತ್ರಕ್ಕಿತ್ತು. ಮೈಮೇಲೆ ಹಳದಿ ಬಣ್ಣ, ಬೆನ್ನ ಮೇಲೆ ನೀಲಿಯ ಪದ್ಮಗಳು. ಆ ಪದ್ಮದಳಗಳನ್ನು ಕೂಡಿಕೊಂಡು ಹಬ್ಬಿರುವ ಬಂಗಾರದ ಸರಿಗೆಯ ಬಳ್ಳಿ. ನೋಡಿ ಹಲವು ಬಗೆಯ ಆನಂದದ ಯೋಚನೆಗಳು ಅಂಕುರಿಸಿದವು. ಹತ್ತಿರದ ಮರಕ್ಕೆ ಒರಗಿದನು. ಕೋವಿಯನ್ನು ಹಿಡಿದೆತ್ತಿ ಗುರಿಯಿಟ್ಟನು. ತಲೆಹಿಂಭಾಗಕ್ಕೆ ಗಂಟಲ ಬಳಿಗೆ ಹೊಡೆದುಬಿಟ್ಟನು. ಆ ಶಬ್ದವು ನೂರು ಬಾರಿ ಪ್ರತಿಧ್ವನಿತವಾಗಿ ಕಾಡೆಲ್ಲ ನಡುಗಿಸಿತು. ಇತ್ತ ಸರ್‍ಪವು ಸುರುಳಿಸುರುಳಿಯಾಗಿ, ಮುರಳಿ ಮುರಳಿಯಾಗಿ, ತಿರುವಿ ತಿರುವಿ, ಏರಿ ಇಳಿದು ಕೆಳಗೆ ಬಿದ್ದಿತು. “ಹೆಂಡತಿಯ ಭಯ ಬಿಡಿಸಲು ಇದು ಸಹಕಾರಿಯಾಗಬಹುದು. ಆಳುಗಳಿಗೆ ಭಯ ಹೆಚ್ಚಿಸಲು ಮನೆಯಲ್ಲಿ ಇಡಬಹುದು. ಕಡೆಗೆ ಬೇಕಾದರೆ ಚರ್‍ಮವನ್ನು ಮಾರ ಬಹುದು, ಅಥವಾ ಇಂಡಿಯದಲ್ಲಿರುವ ಸ್ನೇಹಿತರಿಗೆ ಕಾಣಿಕೆಯಾಗಿ ಕಳುಹ ಬಹುದು.” ಹೀಗೆಂದು ಭಾವಿಸುವಷ್ಟರಲ್ಲಿ ಒರಗಿದ ಮರವು ಪಕ್ಕಕ್ಕೆ ಸರಿದ ಹಾಗಾಯಿತು. ತಿರುಗಿ ನೋಡಿ ಗಾಬರಿಯಾದನು. ಆ ಮರಕ್ಕೆ ಸುತ್ತಿ ಕೊಂಡಿದ್ದ ಇನ್ನೊಂದು ಹೆಬ್ಬಾವಿನ ಮೇಲೆ ಭಾರ ಬಿಟ್ಟು ಒರಗಿ ನಿಂತಿದ್ದನ್ನು, ಹಿಂದೆ ಮುಂದೆ ತಿರುಗಿ ನೋಡಿದನು. ಸರ್‍ಪವು ಯಾವುದೋ ಪ್ರಾಣಿಯನ್ನು ನುಂಗಿ ಮರಕ್ಕೆ ಸುತ್ತಿಕೊಂಡಿದ್ದಿತು. ನಿದ್ದೆಯೋ ಏನೋ ಪಾಪ! ಭೋಜನಾನಂತರ ಕಣ್ಣು ಮುಚ್ಚಿತ್ತು.

ಸೂರ್ಯನೇನೊ ನಡು ನೆತ್ತಿಯಲ್ಲಿ ನಿಂತಿದ್ದನು. ರಾಣೋಜಿಗೆ ಮನೆಯ ನೆನಪಾಯಿತು. ಸತ್ತ ಹಾವಿನ ಬಾಲವನ್ನು ಕೈಗೆ ಸುತ್ತಿಕೊಂಡು ಹೊರಟನು. ಮತ್ತೆ ನಿಂತನು. ನೆಲದ ಮೇಲೆ ಎಳೆದು ತಲೆಯು ಕೆಟ್ಟು ಹೋಗುವುದೆಂದು ಅದರ ಸುತ್ತ ಸೊಪ್ಪು ಸುತ್ತಿದನು ಮತ್ತೆ ಹೊರಟನು. ಮನೆ ಸೇರುವ ಹೊತ್ತಿಗೆ ಹೊರಗೆ ಯಾರೂ ಇರಲಿಲ್ಲ. ಕಿಟಕಿಯ ಬಳಿಗೆ ಹೋದನು. ಹಾವಿನ ತಲೆಯನ್ನೆತ್ತಿ ಒಳಗೆಸೆದನು. ಕೋಣೆಯೊಳಕ್ಕೆ ಹೋಗಿ ಹಾವನ್ನು ಎಳೆದುಕೊಂಡನು. ಆ ಚಿಕ್ಕ ಕೋಣೆಯಲ್ಲಿ ಆ ಭಾರಿಯ ಘಟಸರ್ಪವು ಇಲ್ಲಿ ಹತ್ತಿ, ಅಲ್ಲಿಳಿದು, ಕೆಳಗೆ ಸುರುಳಿಯಾಗಿ, ಮೇಲೆ ಬಿಲ್ಲಾಗಿ ಸೋಫದ ಮೇಲೆ ಹೊಟ್ಟೆ ಇಟ್ಟು ಪುಟ್ಟ ಮೇಜಿನ ಮೇಲೆ ವಿವೇಕಾನಂದರ ಚಿತ್ರದ ಮುಂದೆ ಹಾಸಿ ಗಾಂಧಿಯವರ ಪ್ರತಿಮೆಯ ಹಿಂದಾಗಿ, ಪುಸ್ತಕ ಬೀರೂಬಳಿ ಬಂದು ಮೇಲೇರಿ ಕನ್ನಡ ಪುಸ್ತಕಗಳು ಇರುವ ಬಳಿ ಬಂದು “ಯಮನ ಸೋಲಿ”ನ ಬಳಿ ಬಾಯಿ ತೆರೆದುಕೊಂಡಿತ್ತು. ಹೀಗೆಲ್ಲ ಅಲಂಕಾರಮಾಡಿ ಅಲ್ಲಿ ನಿಂತು ಇಲ್ಲಿ ನಿಂತು, ಕಿಟಕಿಯ ಪರದೆ ತುಸವಾಗಿ ಎಳೆದು-ಆನಂದದ ಚಿತ್ರವನ್ನು ನೋಡಿ ಹಿಗ್ಗಿ ಬಾಗಿಲೆಳೆದುಕೊಂಡು ಹೊರಟನು. ಇಂಥಾ ಸುಂದರವಾದ ಹಾವು ಎಲ್ಲಿಯೂ ಇದ್ದಿಲ್ಲ. ಮತ್ತೆ ಇದ್ದರೂ ಹೊಡೆದು ತರು ವಂಥವರು ಯಾರಿದ್ದಾರೆ! ತಂದರೂ ಹೀಗೆಲ್ಲ ಅಲಂಕಾರವಾಗಿಟ್ಟು ತನ್ನ ಅರ್‍ಧಾಂಗಿಗೆ ತೋರಿಸಿ ನಲಿಯುವ ಭಾಗ್ಯ ಎಷ್ಟು ಮಂದಿಗೆ ಒದಗಿತು!

ಊಟವಾಯಿತು. ಮಾತುಕಥೆಯಲ್ಲಿ ಇಂಡಿಯ ಆಫ್ರಿಕಗಳು ಒಂದಕ್ಕೊಂದು ಹಣೆದುಕೊಂಡುಬಿಟ್ಟವು. ಮುಳ್ಳಯ್ಯನ ಗಿರಿ, ಕಿಲಿಮಾಂಜೀರೋ; ವಿಕ್ಟೋರಿಯಸರಸ್ಸು, ಅಯ್ಯನಕೆರೆ; ತಮ್ಮ ಜನ, ನೀಗ್ರೊ ಜನ ಮುಂತಾದ್ದೆಲ್ಲ ಬಂದು ನಿಂದು ಚಿತ್ರಿತವಾಗಿ, ಅಳಿಸಿ ಹೋದುವು. ಭೋಜನಸಮಯದ ಈ ಸಲ್ಲಾಪವು ನೀಗ್ರೊ ಚಂಚೂಗೆ ಕೊಂಚವೂ ಅರ್‍ಥವಾಗಲಿಲ್ಲ. ಹೊಟ್ಟೆ ತುಂಬಿಕೊಂಡರು ಇವರಿಬ್ಬರು ಎಂಬುದು ಮಾತ್ರ ಅರಿವಾಯಿತು.

ಪಂಜರದ ಮೃಗಪಕ್ಷಿಗಳ ಸಂಗಡ ಮಾತನಾಡಿದರು. ಉಷ್ಟ್ರ ಪಕ್ಷಿಯು ಬಂದು ಎಲ್ಲಮ್ಮನ ತರುಬಿನ ಹೂವನ್ನು ಕಿತ್ತು ಕಿತ್ತು ನುಂಗಿತು. ಕಾಡು ಮನುಷ್ಯ ಚಿಂಪಾಂಸೀ ಬಂದು ಹಕ್ಕಿಯನ್ನು ಓಡಿಸಿ ತಾನು ನಿಂತಿತು ಅವರಿಬ್ಬರ ನಡುವೆ. ಅವರಿಬ್ಬರ ಕೈಗಳನ್ನೂ ತೆಗೆದು ತನ್ನ ಒರಟು ಮುಖಕ್ಕೆ ಒತ್ತಿಕೊಂಡಿತು. ಅವರಿಬ್ಬರೂ ಕುರ್ಚಿಗಳ ಮೇಲೆ ಕುಳಿತುಕೊಂಡರು. ಕಾಡುಮನುಷ್ಯ ಸಡಗರದಿಂದ ಅತ್ತಿತ್ತ ಓಡಾಡಹತ್ತಿತು. ರಾಣೋಜಿಗೆ ಕೋಣೆಯ ನೆನಪು ಬಂತು. ಕಳಿಸಿ ನೋಡೋಣ ಹೆಂಡತಿಯನ್ನು ಆ ಬಳಿಗೆ ಎಂದುಕೊಂಡನು. “ಅದೇನು ಹೊಸ ಯೋಚನೆ” ಎಂದು ಇಂಗಿತವರಿತು ಆಕೆ ಕೇಳಿದಳು. “ಏನೂ ಇಲ್ಲ! ನಿನ್ನ ದನಿಯಲ್ಲಿ ಕನ್ನಡದ ಮೇಲಿನ ಆ ಹೊಸ ಹಾಡನ್ನು ಕೇಳಬೇಕೆನಿಸಹತ್ತಿದೆ-‘ಮನವ ತಣಿಸುವ ಮೋಹನ’- ಹೇಳು, ಹೂ!” ಈ ಮಾತಿಗೆ ಎಲ್ಲಮ್ಮ “ನನಗೇನು ಅನ್ನಿಸಿದೆ ಬಲ್ಲಿರಾ? ನಿಮ್ಮ ನಾಲಿಗೆಯಲ್ಲಿ ಒಂದಿಷ್ಟು ಕನ್ನಡ ಓದಿಸಿ ಕೇಳಬೇಕೆಂದು.” ರಾಣೋಜಿಗೆ ಅನುಕೂಲವಾಯಿತು. ಆ ಮೇಲೆ ಹಾಡು ಹೇಳುವಿಯಂತೆ! ನಾನೇ ಮೊದಲು ಓದಿಬಿಡುತ್ತೇನೆ. ತೆಗೆದುಕೊಂಡು ಬಾ. ಹಾಗಾದರೆ ನಮ್ಮನಲವಿನ ಮಲೆನಾಡಿನಾತ ಬರೆದ ಪುಸ್ತಕ. ನಿನ್ನಂಥವಳು ಓದಬೇಕಾದ್ದು, ಹೊಸದಾಗಿ ಬಂದಿದೆ-‘ಯಮನ ಸೋಲು’ ನಾನೇ ಓದಿ ಹೇಳುವೆ.”

“ತಪಸ್ವಿನೀ!- ಬೇಡವೋ!” ಎಂದುಕೊಂಡು ಎಲ್ಲಮ್ಮನು ಕೋಣೆಯ ಕಡೆ ನಡೆದಳು. ಜಡೆ ತೂಗಾಡಿತು. ಸೆರಗು ಹಾರಿಹಾರಿತು. ಕೈಬಳೆಗಳು ಥಳಥಳಿಸಿದವು, ಕಾಲುಂಗುರಗಳು ಮಾತಾಡಿದವು. ರಾಣೋಜಿಯ ಆತುರದಿಂದ ಆ ಕಡೆಯೇ ನೋಡುತ ಕುಳಿತನು. ಮರೆಯಾದಳು ಎಲ್ಲಮ್ಮ. ರಾಣೋಜಿಯು ಆಲೈಸುತ್ತ ಕುಳಿತ. ಬಾಗಿಲು ತೆರೆದ ಶಬ್ದ. ಇಷ್ಟು ಹೊತ್ತಿಗೆ ಒಳಕ್ಕೆ ಹೋಗಿರಬಹುದು. ಆಲೈಸಿದ ರಾಣೋಜಿ. ಇನ್ನೇನು ಕಿರುಚಿಕೊಳ್ಳುವಳು. ಆಗ ಕೂಗಿ ಹೇಳಬೇಕು_”ಸತ್ತ ಹಾವೆಂದು”- ಆ ಮೇಲೆ ಅವಳ ಪುಕ್ಕಲತನಕ್ಕೆ ಚಪ್ಪಾಳೆ ತಟ್ಟಿ ನಗಬೇಕು!

ಇಷ್ಟು ಹೊತ್ತಿಗೆ ಎಲ್ಲಮ್ಮ ಕಿರುಚಿಕೊಂಡಳು. ಕುಳಿತಲ್ಲಿಂದಲೇ ರಾಣೋಜಿ ಕೂಗಿದನು “ಸತ್ತ ಹಾವು ಕಣೇ ಅದು, ಹೆದರಬೇಡ, ಪುಸ್ತಕವನ್ನು ಬೇಗನೇ ತೆಗೆದುಕೊಂಡು ಬಂದುಬಿಡು.” ಇನ್ನೊಮ್ಮೆ ಕೂಗು! ದನಿಯು ಕಠೋರವಾಗಿತ್ತು. ನೆಲದ ಒಡಲಿಂದ ಬಂದಹಾಗಿತ್ತು. “ಸತ್ತ ಹಾವಿಗೆ ಹೆದರುವಿಯಾ! ಅಂಜುಬುರುಕಿ! ನಾನೇ ಬಂದೆ ಬಿಡು” ಹೀಗೆನ್ನುತ ಹೊರಟನು. ಮತ್ತೆ ಕೂಗು! ಈ ಬಾರಿ ಕುಗ್ಗಿದ ಕಂಠ, ಬಾಗಿಲ ಬಳಿ ಸೇರುವ ಹೊತ್ತಿಗೆ, ಇನ್ನೆರಡು ಮೂರು ಬಾರಿ ದೊಡ್ಡದಾಗಿ ನಿಟ್ಟುಸಿರು ಬಿಟ್ಟ ಶಬ್ದ! ಈ ದಿನ ಬಹಳ ಅಂಜಿ ಬಿಟ್ಟಳಂದು ಎರಡು ಬಾಗಿಲೂ ತೆಗೆದನು. ತಿಟಕಿಗಳನ್ನೆಲ್ಲಾ ತೆರೆದನು. ಹೆಂಡತಿಯ ಸುಳಿವಿಲ್ಲ. ಚಿಂಪಾಂಸೀ ಒಳಗೆ ಬಂತು. ರಾಣೋಜಿಯು ಚಂಚೂ ಕರೆದನು. ಉಳಿದ ಆಳುಗಳೆಲ್ಲರೂ ಓಡಿಬಂದರು. ಮೇಜಿನ ವಸ್ತ್ರ, ಸಿಂಹದ ತೊಗಲು, ಕರಡಿ ಚರ್‍ಮಗಳೆಲ್ಲವೂ ಸುರುಳಿ ಸುಪ್ಪಟ್ಟೆ ಯಾಗಿದ್ದವು. ಅಲ್ಲಲ್ಲಿ ರಕ್ತ ಚುಮುಕಿಸಿದ ಹಾಗಿತ್ತು. ಎಲ್ಲಮ್ಮ ಹೊರಗೆ ಹೋಗಿಲ್ಲ! ಒಳಗಂತೂ ಕಾಣಲಿಲ್ಲ! ಕೂಗಿದನು. ಗಾಬರಿಯಾದನು. ಪುಸ್ತಕಗಳನ್ನೆಲ್ಲಾ ಕಿತ್ತಾಡಿದನು. ಬೀರುವನ್ನು ಉರುಡಿಸಿದನು ಬುಡದಲ್ಲೇನೋ ಇತ್ತು. ಒಮ್ಮೆಲೆ ಹಾರಿ ಎಳೆದು ತೆಗೆದನು…….ಎಲ್ಲಮ್ಮನ ದೇಹ ! ರಕ್ತ ಸಿಕ್ತವಾಗಿದ್ದಿತು. ತಲೆಯಾವುದೋ ಮುಖವಾವುದೋ ಕಾಣುವಂತಿರಲಿಲ್ಲ. ಗುರುತು ಕೂಡ ಅಳಿಸಿತ್ತು. ಅಂಥಾ ಅಂದವಾದ ಮೋರೆ ಅವಳದು, ಏನಾಗಿದ್ದೀತು!
* * *

ಕಾಡುಮನುಷ್ಯ ಏನನ್ನೋ ಹಿಡಿದೆಳೆದುಕೊಂಡು ಬಂದಿತು. ಎಳೆಯಲಾರದು ಪಾಪ! ಚಂಚು ಸಹಾಯಕ್ಕೆ ಹೋದನು. ಬೆಳಕಲ್ಲಿ ನೋಡಿದರೆ ಎರಡು ಹೆಬ್ಬಾವುಗಳು! ಒಂದಕ್ಕೊಂದು ಹೊಸೆದುಕೊಂಡಿವೆ! ಒಂದಕ್ಕೆ ಜೀವವಿದೆ, ಇನ್ನೊಂದಕ್ಕೆ ಜೀವವಿಲ್ಲ. ಜೀವದ ಹಾವು ಸತ್ತ ಹಾವಿನ ಬಾಯೊಳಗೆ ತನ್ನ ಬಾಯಿಟ್ಟುಕೊಂಡಿದೆ. ಕಿತ್ತಳೆದರೂ ತಗೆಯಲೊಲ್ಲದು. ಅದೇನು ಪ್ರಣಯ! ಹಾವುಗಳಲ್ಲಿ ಕೂಡ! ಕೊಂದ ಹಾವಿನ ಹೆಂಡತಿಯೆ ಅದು! ಪ್ರಕೃತಿ ವೈಚಿತ್ರ ಹೇಗಿದೆಯೋ ಬಲ್ಲರಾರು! ಬಣ್ಣಿಸುವರಾರು! ಮನುಜರ ಪ್ರಣಯ ಬರಿಮಾತು, ಪಕ್ಷಿಪ್ರಾಣಿಗಳ ಪ್ರಣಯವೇ ಶ್ರೇಷ್ಠವೆನಿಸದೆ ನಿಮಗೆ!

ಈ ಕಥೆಯನ್ನು ಹೇಳಿದವನು ರಾಣೋಜಿರಾಯ! ನುಡಿನುಡಿಗಳನ್ನು ಕಣ್ಣೀರಲ್ಲಿ ನೆನೆನೆನೆಸಿ ನನ್ನ ಹೃದಯದಲ್ಲಿಟ್ಟನು. ಈಗೆ ನಮ್ಮ ನಾಡಿನಲ್ಲೇ ನೆಲೆಸಿರುವನು. ವಿದೇಶ ಗಮನ ದ್ರವ್ಯದಾಶೆಗೆ! ಮೃಗ ಚರ್‍ಮ ಸಂಪಾದನೆ ಭಯ ನಿವಾರಣೆಗೆ, ಆಫ್ರಿಕದಲ್ಲಿ!

ಆಯಿತೆ ಭಯನಿವಾರಣೆ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೫
Next post ಕವಿಯ ಸೋಲಿಸಿದ ಕನ್ನಡ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys