ತಸ್ಲೀಮಾ ಪ್ರಕರಣ

ತಸ್ಲೀಮಾ ಪ್ರಕರಣ

ಬಾಂಗ್ಲಾದೇಶದ ಬೀದಿಗಳಲ್ಲಿ ಬೆಂಕಿ ಬಿದ್ದಿದೆ. ಈ ಬೆಂಕಿ ನಕಾರಾತ್ಮಕ ಉರಿಯನ್ನು ಹರಡುತ್ತ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ ಅವರ ಪ್ರಾಣವನ್ನು ಕೇಳುತ್ತಿದೆ. ಹತ್ಯೆ ಮತ್ತು ಆತ್ಮಹತ್ಯೆಗೆ ಪ್ರಸಿದ್ಧರಾದ ಧಾರ್ಮಿಕ ಮೂಲಭೂತವಾದಿಗಳು ಯಾವುದೇ ಧರ್ಮಕ್ಕೆ ಸೇರಿದ್ದರೂ ಅಂತಿಮ ಗುರಿ ಪ್ರಾಣವೇ ಆಗಿರುತ್ತದೆ. ಬೀದಿಯಲ್ಲಿ ಬೆಂಕಿ ಹಾಕಿ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಯಸುವವರು ಬೇರೇನನ್ನೂ ಕೇಳಲು ಸಾಧ್ಯವಿಲ್ಲ. ಬೀದಿಯಲ್ಲಿ ಬದುಕು ಅರಳಬೇಕೆಂದು, ಬೀದಿ ಆತ್ಮಾನುಭವ ಭಾಗವಾಗಬೇಕೆಂದು, ಮನೆ ಮತ್ತು ಬೀದಿಗಳ ನಡುವೆ ಸಂವಾದ ಏರ್ಪಟ್ಟು ಸಂವೇದನೆಗೆ ಹೊಸ ಆಯಾಮ ಬರಬೇಕೆಂದು, ಯಾವ ಮೂಲಭೂತವಾದಿ ಬಯಸುವುದಿಲ್ಲ. ಈ ವಿಷಯದಲ್ಲಿ ಹಿಂದೂ-ಮುಸ್ಲಿಂ ಎಂಬ ವ್ಯತ್ಯಾಸವಿರುವುದಿಲ್ಲ.

ಭಾರತದಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಹಿಂದೂ ಮೂಲ ಭೂತವಾದಿಗಳಿಗಿಂತ ತಾವೇನು ಕಡಿಮೆ ಎನ್ನುವಂತೆ ಮುಸ್ಲಿಂ ಮೂಲಭೂತವಾದಿಗಳು ವರ್ತಿಸುತ್ತಾರೆ. ಸಲ್ಮಾನ್ ರಷ್ದಿ ಅವರನ್ನು ಭೂಗತವಾಗುವಂತೆ ಮಾಡಿದ ಮೂಲಭೂತವಾದಿಗಳು ಈಗ ತಸ್ಲೀಮಾರತ್ತ ಗುರಿ ಇಟ್ಟಿದ್ದಾರೆ. ಉರಿಯುವ ಬೀದಿಗೆ ಗುರಿಯಾದ ತಸ್ಲೀಮಾ ಭೂಗತರಾಗಿದ್ದಾರೆ. ಬಾಂಗ್ಲಾ ದೇಶದ ಫ್ರೆಂಚ್ ರಾಯಭಾರಿ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆಂಬ ವದಂತಿಗಳಿವೆಯಾದರೂ ಯಾವುದೂ ಖಚಿತಪಟ್ಟಿಲ್ಲ. ಭೂಗತ ನೆಲೆಯ ನಿಜಗಳು ಖಚಿತಗೊಳ್ಳುವುದಾದರೂ ಹೇಗೆ? ಒಟ್ಟಿನಲ್ಲಿ ಇಸ್ಲಾಂ ಧರ್ಮಕ್ಕೆ ಈಗ ಬಾಂಗ್ಲಾದಲ್ಲಿ ತಸ್ಲೀಮಾ ಅವರು ಉಸಿರು ಕಟ್ಟುವ ವಾತಾವರಣಕ್ಕೆ ಸಿಕ್ಕಿ ಸಂಕಟಪಡುತ್ತಿರುವಾಗ ಎಲ್ಲಾ ಮುಸ್ಲಿಮರು ಅವರ ವಿರುದ್ಧವಿದ್ದಾರೆಂದೂ ಭಾವಿಸಬಾರದು. ಬಾಂಗ್ಲಾದೇಶದ ಜಾತ್ಯತೀತ ವಿದ್ಯಾರ್ಥಿ ಸಮುದಾಯದವರು ತಸ್ಲೀಮಾ ಅವರನ್ನು ಬೆಂಬಲಿಸಿ ಮೂಲಭೂತವಾದಿಗಳನ್ನು ಎದುರಿಸಿದ್ದಾರೆ. ಕೆಲವು ಬುದ್ಧಿಜೀವಿಗಳು ಸರ್ಕಾರವನ್ನು, ಮೂಲಭೂತವಾದಿಗಳನ್ನು ಖಂಡಿಸಿದ್ದಾರೆ. ಜಸ್ಟಿಸ್ ಕೆ. ಎಂ, ಸೊಭಾನ್ ಮತ್ತು ಪ್ರೊ. ಕಬೀರ್ ಚೌಧರಿ ಅವರನ್ನು ಪ್ರಾತಿನಿಧಿಕವಾಗಿ ಹೆಸರಿಸಬಹುದು. ಹಿಂದುವಾಗಲಿ ಮುಸ್ಲಿಮ್ ಆಗಲಿ ತನಗೆ ತಾನೇ ಹುಟ್ಟಾ ಕೆಟ್ಟವರಲ್ಲ ಎಂಬುದಕ್ಕೆ ಈ ಅಂಶ ಒಂದು ಉದಾಹರಣೆಯಾಗಿದೆ.

ಇಲ್ಲಿಯೇ ಒಂದು ಮಾತನ್ನು ಹೇಳಿದರೆ ಅಪ್ರಸ್ತುತವಾಗಲಾರದು. ಮುಸ್ಲಿಂ ಮೂಲಭೂತವಾದಿಗಳ ವರ್ತನೆಯಿಂದ ತಸ್ಲೀಮಾ ಅವರು ಪ್ರಸಿದ್ಧರಾದರು. ಅದೇ ರೀತಿ ಮತ್ತಷ್ಟು ಪ್ರಬುದ್ಧರೂ ಆಗಬೇಕೆಂದು ಬಯಸ ಬೇಕಾಗುತ್ತದೆ. ಅಗತ್ಯಕ್ಕಿಂತ ಅತಿ ಹೆಚ್ಚು ಪ್ರಸಿದ್ಧಿ ಬಂದಾಗ ಸಮಸ್ಯೆಗಳಲ್ಲಿ ಸಂಕಟಪಡುವ ಗುಣ ಕಡಿಮೆಯಾಗುತ್ತೆ. ಪ್ರಸಿದ್ಧಿಯಲ್ಲಿ ಸಂಭ್ರಮಪಡುವ ಪ್ರವೃತ್ತಿ ಹೆಚ್ಚುವ ಅಪಾಯವೂ ಇರುವುದರಿಂದ ಈ ಮಾತು ಬರುತ್ತಿದೆ. ಅನೇಕರು ಹೇಳುವಂತೆ ಅಷ್ಟೇನೂ ಪ್ರಬುದ್ಧವಲ್ಲದ ತಸ್ಲೀಮಾ ಅವರ ‘ಲಜ್ಜಾ’ ಕಾದಂಬರಿಯು ತನ್ನಲ್ಲಿರುವ ವಿವಾದಗ್ರಸ್ತ ಸಂಗತಿಗಳಿಗಾಗಿ ಜನಪ್ರಿಯವೂ ಪ್ರಸಿದ್ಧವೂ ಆಗಿರುವುದರಿಂದ ಸಂಕಟ ಮತ್ತು ಸಂಭ್ರಮಗಳ ಉಚಿತಾನುಚಿತ ನೆಲೆಗಳ ಬಗ್ಗೆ ಎಚ್ಚರ ಇರಬೇಕಾಗುತ್ತದೆ. ತಸ್ಲೀಮಾ ಅವರು ಎಷ್ಟರ ಮಟ್ಟಿನ ಸಂಕಟವನ್ನು ಅನುಭವಿಸುತ್ತಿದ್ದಾರೆಂಬುದು ಊಹೆಯ ಸಂಗತಿಯಾದರೂ ಸಂಪೂರ್ಣ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂಬುದು ಸಂಪೂರ್ಣ ಸತ್ಯಸಂಗತಿ. ಆದ್ದರಿಂದ ಮೂಲಭೂತವಾದಿಗಳ ಉಪಟಳಕ್ಕೆ ಸಿಕ್ಕಿದ ತಸ್ಲೀಮಾ ಅವರ ಪರವಾಗಿ ಮಾನವೀಯ ಮನಸ್ಸುಳ್ಳವರೆಲ್ಲ ದನಿ ಎತ್ತಬೇಕು. ಅವರ ಕೃತಿಗಳನ್ನು ಮೆಚ್ಚದೆ ಇರುವವರೂ ಕ್ರಿಯೆಯನ್ನು ಮೆಚ್ಚಬೇಕು. ತಸ್ಲೀಮಾ ಪ್ರಕರಣವನ್ನು ಹಿಂದೂ-ಮುಸ್ಲಿಂ ನೆಲೆಯಲ್ಲಿ ನೋಡದೆ ಒಟ್ಟು ಮೂಲಭೂತವಾದದ ಪರಿಣಾಮವೆಂದು ಗ್ರಹಿಸುವ ಪ್ರಬುದ್ಧತೆ ತೋರಬೇಕು. ಇಲ್ಲದಿದ್ದರೆ ಇಸ್ಲಾಂ ಮೂಲಭೂತವಾದಿಗಳ ಬದಲು ಇಸ್ಲಾಮನ್ನೂ ಮುಸ್ಲಿಮರನ್ನೂ ಮುಸ್ಲಿಮರಿಗೆ, ಎಲ್ಲಕ್ಕಿಂತ ಹೆಚ್ಚಿನದಾಗಿ ಮತ್ತು ಮುಖ್ಯವಾಗಿ ಕುರಾನ್‌ಗೆ ಅಪಚಾರ ಮಾಡಿದರೆಂಬ ‘ಆಪಾದನೆ’ ಹೊತ್ತ ತಸ್ಲೀಮಾ ಅವರ ವಿರುದ್ಧ ಸಿಡಿದೆದ್ದ ಕೆಲವು ಮುಸ್ಲಿಂ ಮೂಲಭೂತವಾದಿಗಳು ಲೇಖಕಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕೇಳಿದ್ದರೆ, ಡಾಕಾ ಹೈಕೋರ್ಟ್, ಜಾಮೀನು ರಹಿತ ಬಂಧನಕ್ಕೆ ಆದೇಶ ಹೊರಡಿಸಿದೆ. ಮೂಲಭೂತವಾದಿಗಳ ತಾಳಕ್ಕೆ ಬಾಂಗ್ಲಾದೇಶ ಸರ್ಕಾರ ಕುಣಿಯುತ್ತಿದೆ. ಓಟಿನ ರಾಜಕಾರಣ ಎಲ್ಲಿಯವರೆಗೆ ಹೋಗುತ್ತದೆಯೆಂಬುದಕ್ಕೆ ಬಾಂಗ್ಲಾದೇಶದ ಯಾವ ರಾಜಕೀಯ ಪಕ್ಷವು ಸ್ಪಷ್ಟ ಮಾತುಗಳಲ್ಲಿ ಮೂಲಭೂತವಾದಿಗಳನ್ನು ಖಂಡಿಸಿ, ತಸ್ಲೀಮಾ ಪರ ನಿಲುವು ತಾಳಿಲ್ಲ. ಆದರೆ ವಿರೋಧ ಪಕ್ಷವು ತಸ್ಲೀಮಾ ಪ್ರಕರಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವದಾಗಿ ಸರ್ಕಾರವನ್ನ ಖಂಡಿಸಿದೆ. ಈ ಸಂದರ್ಭದಲ್ಲಿ ಹಿಂದೂ ಮೂಲಭೂತವಾದಿತನುವು ಓಟಿನ ರಾಜಕಾರಣ ಭಾಗವಾಗಿ ವಿಜೃಂಭಿಸಿದ್ದನ್ನು ನಾವು ಮರೆಯುವಂತಿಲ್ಲ: ಎರಡು ಪ್ರಕರಣಗಳ ಸ್ವರೂಪದಲ್ಲಿ ವ್ಯತ್ಯಾಸವಿದೆಯಾದರೂ ಮೂಲಭೂತ ವಾದಿಗಳ ಮನಸ್ಥಿತಿ ಒಂದೇ ಆಗಿರುತ್ತದೆಯೆಂಬುದನ್ನು ಅಲ್ಲಗಳೆಯುವಂತಿಲ್ಲ.

ಇಸ್ಲಾಂ ಧರ್ಮದ ಅನುಯಾಯಿಗಳು ಹಿಂದೂ ಧರ್ಮದ ಅನುಯಾಯಿಗಳಿಗಿಂತ ಹೆಚ್ಚು ಕಠಿಣ ನಿಷ್ಠೆ ಪಡೆದಿರುವುದಕ್ಕೆ ಶ್ರೇಣಿಗಳು ಕಡಿಮೆಯಿರುವುದು ಧಾರ್ಮಿಕ ನೆಲೆಯಲ್ಲಿ ಅಸಮಾನತೆಯಿಲ್ಲದಿರುವುದು ಮತ್ತು ಅಲ್ಲಾ ಒಬ್ಬನಿಗೆ ಭಕ್ತರಾಗಿರುವ ಏಕದೈವ ನಿಷ್ಠೆಯ ಕೇಂದ್ರೀಕೃತ ವ್ಯವಸ್ಥೆಯಿರುವುದೂ ಕಾರಣವಿರಬಹುದು. ಹಿಂದೂ ಧರ್ಮವೆಂದು ಕರೆಸಿಕೊಳ್ಳುತ್ತಿರುವ ಧಾರ್ಮಿಕ ಸಂಯೋಜನೆಯಲ್ಲಿ ಶ್ರೇಣಿಗಳ ಸಂಖ್ಯೆ ಜಾಸ್ತಿಯಾಗಿರುವುದು, ಧಾರ್ಮಿಕ ಅಸಮಾನತೆ ಸಂಪ್ರದಾಯವಿರುವುದು ಮತ್ತು ಏಕ ದೈವ ನಿಷ್ಠೆಯ ವ್ಯವಸ್ಥೆಯಿಲ್ಲದಿರುವುದು ಧಾರ್ಮಿಕ ಸಡಿಲ ನೀತಿಗೆ ಕಾರಣವಿರಬಹುದು. ಈ ಸಡಿಲ ನೀತಿಗಾಗಿ ಯಾರೂ ವ್ಯಥೆ ಪಡಬೇಕಾಗಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕವಾಗಿ ಸಹ ಕೇಂದ್ರೀಕೃತ ವ್ಯವಸ್ಥೆ ಅಂತಿಮವಾಗಿ ಅಪಾಯಕಾರಿಯಾಗುವುದರಿಂದ ಸ್ವತಂತ್ರವಾಗಿ ಉಸಿರಾಡುವ ವಾತಾವರಣವನ್ನು ಉಳಿಸಿ ಕೊಳ್ಳಬೇಕು. ವಿರೋಧಿಸಿರುವ ವಿಪರ್ಯಾಸವನ್ನು ಹಿಂದೂ ಮೂಲಭೂತವಾದಿಗಳು ಸೃಷ್ಟಿಸಲು ಸಾಧ್ಯ. ನಾವು ಮುಸ್ಲಿಂ ಮೂಲಭೂತವಾದಿಗಳ ವಿರೋಧಿಗಳೇ ಹೊರತು ಮುಸ್ಲಿಮರ ವಿರೋಧಿಗಳಲ್ಲ ಎಂಬ ಸೂಕ್ಷ್ಮವನ್ನು ಮನಗಂಡು ತಸ್ಲೀಮಾ ಅವರನ್ನು ಬೆಂಬಲಿಸಬೇಕು. ಹಿಂದೂಗಳ ವಿಷಯದಲ್ಲೂ ಮುಸ್ಲಿಮರು ಹೀಗೇ ನಡೆದುಕೊಳ್ಳಬೇಕು.

ಮೇಲಿನ ಮಾತನ್ನು ಹೇಳಲು ಒಟ್ಟು ಮೂಲಭೂತವಾದದ ಪರಿಣಾಮದ ಅರಿವಿಲ್ಲದೆ ನಿರ್ದಿಷ್ಟವಾಗಿ ತಸ್ಲೀಮಾ ಪ್ರಕರಣದ ಪ್ರೇರಣೆಯೂ ಇದೆ. ತಸ್ಲೀಮಾ ಅವರ ‘ಲಜ್ಜಾ’ ಕಾದಂಬರಿಯು ಇಂಡಿಯಾದಲ್ಲಿ ಬಾಬರಿ ಮಸೀದಿ ಧ್ವಂಸವಾದ ನಂತರ ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬವೊಂದು ಮುಸ್ಲಿಂ ಮೂಲಭೂತವಾದಿಗಳ ದಮನಕ್ಕೊಳಗಾದ ಕಥಾ ವಸ್ತುವನ್ನು ಹೊಂದಿದೆ. ನಿಜವಾದ ಮಾನವತಾವಾದಿಯು ಬಾಬರಿ ಮಸೀದಿ ಧ್ವಂಸಕ್ಕಾಗಿ ಹಿಂದೂ ಮೂಲಭೂತವಾದಿಗಳನ್ನೂ ಹಿಂದೂ ಕುಟುಂಬಗಳ ವಿರುದ್ಧ ಹಿಂಸೆಗಾಗಿ ಮುಸ್ಲಿಂ ಮೂಲಭೂತವಾದಿಗಳನ್ನು ಖಂಡಿಸುವುದಲ್ಲದೆ ಮುಸ್ಲಿಮರಿಗೆ ರಕ್ಷಣೆ ಕೊಟ್ಟ ಹಿಂದೂಗಳನ್ನು ಹಿಂದುಗಳಿಗೆ ರಕ್ಷಣೆ ಕೊಟ್ಟ ಮುಸ್ಲಿಮರನ್ನು ಮರೆಯಬಾರದು. ಅಂದರೆ ನಾವು ಏಕಮುಖವಲ್ಲದ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಇಂಥ ಸೂಕ್ಷ್ಮ ಸನ್ನಿವೇಶವನ್ನು ಯಾರೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು. ಆದರೆ ‘ಲಜ್ಜಾ’ ಕಾದಂಬರಿಯು ಕೆಲವರ ಸ್ವಾರ್ಥಕ್ಕೂ ಬಳಕೆಯಾಗಿದೆಯೆಂದು ಹೇಳಲಾಗುತ್ತಿದೆ. ಈ ಕಾದಂಬರಿ ಇಂಗ್ಲೀಷಿಗೆ ಅನುವಾದವಾಗಿ ಬಂದಾಗ ಅನೇಕ ಅನಧಿಕೃತ ಆವೃತ್ತಿಗಳು ಕಲ್ಕತ್ತಾದ ಬೀದಿಬೀದಿಗಳಲ್ಲಿ ಮಾರಾಟ ಗೊಂಡವು. ಹಿಂದೂ ಕುಟುಂಬದ ಮೇಲೆ ಮುಸ್ಲಿಮರು ಮಾಡಿದ ದಮನವನ್ನು ಪ್ರಚಾರ ಮಾಡಿ ಹಿಂದೂ ಮೂಲಭೂತವಾದವನ್ನು ಬೆಳೆಸಲು ಹೀಗೆ ಜನಪ್ರಿಯ ಆವೃತ್ತಿಗಳನ್ನು ಅನಧಿಕೃತವಾಗಿ ಮುದ್ರಿಸಿ ಹಂಚಲಾಯಿತು. ಇದು ಸದಭಿರುಚಿಯ ಕೆಲಸವಲ್ಲ. ಸ್ವಾರ್ಥ ಸಾಧನೆಯ ಕೆಲಸ.

ವಾಸ್ತವವಾಗಿ ಮುಸ್ಲಿಮರನ್ನು ಕೆರಳಿಸಿದ್ದು ‘ಲಜ್ಞಾ’ ಕಾದಂಬರಿಗಿಂತ ಕಲ್ಕತ್ತಾದ ‘ಸ್ಟೇಟ್ಸ್‌ಮನ್’ ಪತ್ರಿಕೆಯಲ್ಲಿ ಪ್ರಕಟವಾದ ತಸ್ಲೀಮಾ ಅವರ ಸಂದರ್ಶನದಲ್ಲಿದ್ದ ಕುರಾನ್ ಕುರಿತ ಮಾತುಗಳು. ತಸ್ಲೀಮಾ ಅವರು ಕುರಾನ್‌ನಲ್ಲಿರುವ ಕೆಲವು ಅಂಶಗಳು ಸರಿಯಿಲ್ಲವೆಂದೂ ಕುರಾನ್‌ನ್ನು ಪರಿಷ್ಕರಿಸಬೇಕೆಂದೂ ಕರೆಕೊಟ್ಟ ಮಾತು ಸಂದರ್ಶನದಲ್ಲಿ ದಾಖಲಾಗಿತ್ತು. ಅನಂತರ ತಸ್ಲೀಮಾ ಅವರು ಅದನ್ನು ನಿರಾಕರಿಸಿದರು ಮುಸ್ಲಿಮರ ಆಕ್ರೋಶ ಕಡಿಮೆಯಾಗಲಿಲ್ಲ. ಕುರಾನ್ ಬಗ್ಗೆ ಚಕಾರ ಎತ್ತಿದರೂ ಸಹಿಸದ ಧಾರ್ಮಿಕ ವಾತಾವರಣಕ್ಕೆ ಒಗ್ಗಿರುವ ಮುಸ್ಲಿಮರು ‘ಲಜ್ಜಾ’ ಕಾದಂಬರಿಯ ವಸ್ತುವಿಗಿಂತ ಹೆಚ್ಚಾಗಿ ಈ ವಿಷಯದಲ್ಲಿ ತಾಳ್ಮೆ ಕಳೆದುಕೊಂಡು ಸಿಟ್ಟಿಗೆದ್ದರು: ತಸ್ಲೀಮಾ ತಲೆಯನ್ನೇ ಕೇಳತೊಡಗಿದರು!

ತಸ್ಲೀಮಾ ಅವರು ಕುರಾನ್ ಬಗ್ಗೆ ಯಾವುದೇ ಅಭಿಪ್ರಾಯವಿಟ್ಟುಕೊಳ್ಳಲು ಸ್ವತಂತ್ರರು. ಅವರು ರಾಮಾಯಣ, ಮಹಾಭಾರತ, ಭಗವದ್ಗೀತೆ ಉಪನಿಷತ್ತುಗಳನ್ನು ಪರಿಷ್ಕರಿಸಬೇಕೆಂದು ಬಯಸುತ್ತಾರೆ. ಅಭಿಪ್ರಾಯಕ್ಕೆ ಅವರು ಸ್ವತಂತ್ರರು. ಆದರೆ ಮೂಲ ಕೃತಿಯ ವಿಚಾರಗಳನ್ನು ಪರಿಷ್ಕರಿಸಬೇಕೆಂದು ಬಯಸುವ ಅವರ ಅಭಿಪ್ರಾಯ ಸರಿಯಾದುದಲ್ಲ. ಮೂಲ ಪಠ್ಯವನ್ನು ತಿದ್ದುವ, ಪರಿಷ್ಕರಿಸುವ ಕೆಲಸವು ಸಾಧುವಾದುದೂ ಅಲ್ಲ, ಅದರ ಬದಲು ಅದೇ ವಸ್ತುವಿನ ಪುನರ್ ಸೃಷ್ಟಿಯಾಗಿ ಹೊಸ ಕೃತಿಗಳು ರಚನೆಯಾಗಬೇಕು. ರಾಮಾಯಣ, ಮಹಾಭಾರತಕ್ಕೆ ಸಂಬಂಧಿಸಿದಂತೆ ಈ ರೀತಿಯ ಹೊಸ ಸೃಷ್ಟಿಗಳು ಆಗುವುದನ್ನು ಇಲ್ಲಿ ನೆನೆಯಬಹುದು. ಆದ್ದರಿಂದ ಕುರಾನ್, ಭಗವದ್ಗೀತೆ ಮುಂತಾದ ಕೃತಿಗಳು ಸಾಲುಗಳನ್ನು ಪರಿಷ್ಕರಿಸುವ ಸ್ವಾತಂತ್ರ್ಯ ವಹಿಸುವ ಬದಲು ಅನಪೇಕ್ಷಿತ ಅಂಶಗಳನ್ನು ಬಯಲು ಮಾಡುವ ಸ್ವಾತಂತ್ರ್ಯವನ್ನಷ್ಟೇ ಚಲಾಯಿಸಬೇಕು. ಅವರು ತಿದ್ದುಪಡಿಯ ತಿಳುವಳಿಕೆ ಮೂಲ ಪಠ್ಯದ ಬದಲಾಗಿ ಒಟ್ಟು ಸಮಾಜಕ್ಕೆ ಅನ್ವಯವಾಗಬೇಕು. ತಸ್ಲೀಮಾ ಅವರೇನೋ ಇಂಥ ಕೃತಿಗಳು ಜನವಿರೋಧಿತನವನ್ನು ಬಯಲು ಮಾಡಬೇಕೆಂದು ಹೇಳುತ್ತಾರೆ. ಅದನ್ನು ಒಪ್ಪೋಣ. ಆದರೆ ತಿದ್ದುಪಡಿ ವಿಷಯ ಶಾಸ್ತ್ರೀಯವೂ ಅಲ್ಲ; ಸಾಮಾಜಿಕ ಬದಲಾವಣೆಯದೂ ಅಲ್ಲ. ಅವರ ಅಭಿಪ್ರಾಯದ ಹಿಂದಿನ ಆಕ್ರೋಶ ಮತ್ತು ಆಶಯಗಳನ್ನಷ್ಟೇ ನಾವು ಅರ್ಥಮಾಡಿಕೊಳ್ಳಬೇಕು. ರೇಪ್ ಮಾಡಲು ಗಂಡಸರನ್ನು ತಡೆಯಲು ಹೆಂಗಸರೇ ರೇಪ್ ಮಾಡಬೇಕೆಂಬ ತಸ್ಲೀಮಾ ಅವರ ಅಭಿಪ್ರಾಯದ ಬಗ್ಗೆಯೂ ಇದೇ ಮಾತನ್ನು ಹೇಳಬಹುದು. ವಾಚ್ಯಾರ್ಥದಲ್ಲಿ ಇವರ ಈ ಅಭಿಪ್ರಾಯಗಳು ಸಂಗತವಾದುವಲ್ಲ.

ಹೀಗೆ, ತಸ್ಲೀಮಾ ಅವರ ಅಭಿಪ್ರಾಯಗಳ ಬಗ್ಗೆ, ಕೃತಿಗಳ ಸಾಹಿತ್ಯಕ ಮೌಲ್ಯದ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದಾದರೂ ಅವರ ಹೋರಾಟ ಮನೋಧರ್ಮವನ್ನು ಬೆಂಬಲಿಸಲೇಬೇಕು. ಹೋರಾಟದ ವಿಚಾರಗಳಿಗೆ ಬದ್ಧವಾದ ಬರವಣಿಗೆಯನ್ನು ಅದರ ಆಶಯಗಳಿಗಾದರೂ ಸ್ವಾಗತಿಸಬೇಕು; ಚರ್ಚಿಸಬೇಕು, ಬೆಳೆಸಬೇಕು. ಎಲ್ಲ ರೀತಿಯ ಮೂಲಭೂತವಾದಿಗಳ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕು. ಈ ಆಪೇಕ್ಷೆಯನ್ನೇ ಅಭಿವ್ಯಕ್ತಿಸುವ ತಸ್ಲೀಮಾ ಅವರ ಮಾತುಗಳೊಂದಿಗೆ ಈ ಬರಹವನ್ನು ಮುಗಿಸುತ್ತೇನೆ.

“ನನ್ನ ಪಾಲಿನ ಮುಸ್ಲಿಮರಿಲ್ಲ; ಹಿಂದೂಗಳಿಲ್ಲ. ಇರುವವರೆಲ್ಲ ಮನುಷ್ಯರು. ನಾನು ಮನುಷ್ಯರನ್ನು ಪ್ರೀತಿಸುತ್ತೇನೆ. ಅವರಿಗಾಗಿ ಬರೆಯುತ್ತೇನೆ.”
*****
೧೦-೭-೧೯೮೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿಯಲ್ಲಿ ಹಗಲಿನ ಪಾಳಿ
Next post ನಿವೇದನೆ

ಸಣ್ಣ ಕತೆ

 • ಪ್ರಕೃತಿಬಲ

  ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…