ಮೂಡು ಕೆಂಪಿನಲಿ ಹಕ್ಕಿ ಬರಹದಲಿ
ಕಣ್ಣು ತುಂಬಿದೆ ಕನ್ನಡ
ಬೆಳ್ಳಿ ಹಸುರಿನಲಿ ಬಳ್ಳಿ ಒನಪಿನಲಿ
ಲಾಸ್ಯವಾಡಿದೆ ಕನ್ನಡ
ಜಗವೆ ನಗುವಲ್ಲಿ ತುಂಬಿ ಬರುತಲಿದೆ
ಎದೆಯ ಹಾಡು ಈ ಕನ್ನಡ
ಬನದೆ ಬೆಡಗಿನಲಿ ಮೊರವ ಕುಕಿಲಿನಲಿ
ಕುಣಿವ ಜಿಂಕೆಯಲಿ ಕನ್ನಡ
ನಗುವ ಹೂವಿನಲಿ ಹೊರಟ ಕಂಪಿನಲಿ
ಗಾಳಿ ಸುಳಿಯುವಲಿ ಕನ್ನಡ
ಹೃದಯ ತುಂಬಿದಾನಂದ ಹಾಡಿದೆ
ಏಳು ಸ್ವರಗಳಲಿ ಕನ್ನಡ
ತೆಂಗು ಬಾಳೆ ಹೊಂಬಾಳೆ ಬಳುಕಿನಲಿ
ಚೆಲುವ ಹೊಂಚಿನಲಿ ಕನ್ನಡ
ಗದ್ದೆಯಂಚಿನಲಿ ಹರಿವ ನೀರಿನಲಿ
ಬೆವರ ಉಸಿರಿನಲಿ ಕನ್ನಡ
ಎಂತು ಸವಿಯಲಿನ್ನೆಷ್ಟು ಹಾಡಲಿ
ಕವಿಯ ಸೋಲಿಸಿತು ಕನ್ನಡ
*****