ಬೀಜ

ಬೀಜ

ಘನ ರಾಜ್ಯ ಸರ್ಕಾರದಿಂದ ಕಪಿಲಳ್ಳಿ ಪಂಚಾಯತಿಗೆ ಸುತ್ತೋಲೆಯೊಂದು ಬಂದಿದೆಯೆಂದೂ, ಅದರ ಬಗ್ಗೆ ಚರ್ಚಿಸಲು ರೈತರೆಲ್ಲಾ ಸಂಜೆ ಪಂಚಾಯತ್‌ ವಠಾರದಲ್ಲಿ ಸೇರಬೇಕೆಂದೂ ಉಗ್ರಾಣಿ ನರ್ಸಪ್ಪ ಕಂಡ ಕಂಡವರಿಗೆಲ್ಲಾ ಹೇಳುತ್ತಾ ಹೋದುದರಿಂದ ಎಂದಿಗಿಂತ ಹೆಚ್ಚು ಮಂದಿ ಅಂದು ಸೇರಿದ್ದರು. ಊರಿಗೊಂದು ಪಂಚಾಯತಿಗಾಗಿ, ಅಲ್ಲಿಗೆರಡು ದಿನಪತ್ರಿಕೆ ಮತ್ತು ಒಂದು ಸಂಜೆಪತ್ರಿಕೆ ಬರತೊಡಗಿದಂದಿನಿಂದ ಊರಿನ ರಂಗೇ ಬದಲಾಗಿ ಹೋಗಿತ್ತು. ದಿನಪತ್ರಿಕೆಗಿಂತಲೂ ಸಂಜೆಪತ್ರಿಕೆ ದಪ್ಪ ಅಕ್ಷರಗಳಲ್ಲಿ ಹೊತ್ತು ತರುತ್ತಿದ್ದ ರಂಗು ರಂಗಿನ ವಾರ್ತೆ ಓದಲೆಂದೇ ಸಂಜೆ ಹೊತ್ತು ಜನ ಜಮಾಯಿಸಿ ಬಿಡುತ್ತಿದ್ದರು. ಈ ಮೊದಲು ದುಡಿತ, ಕುಡಿತ, ಬಡಿತ, ಮೈಥುನಗಳಿಗೆ ಮಾತ್ರ ಸೀಮಿತವಾಗಿದ್ದ ಚರ್ಚೆಗಳು ಈಗ ದೇಶದ ಪಾಲಿಟಿಕ್ಸು, ಅಮೇರಿಕಾದ ಅಧ್ಯಕ್ಷನ ಶೋಕಿ, ಕ್ರಿಕೆಟ್ಟು, ಫುಟುಬಾಲು, ಒಲಿಂಪಿಕ್ಸ್ ವರೆಗೂ ವಿಸ್ತರಿಸಿಬಿಡುತ್ತಿದ್ದವು. ಏಳೆಂಟು ಅನುಕೂಲಸ್ಥರ ಮನೆಗಳಲ್ಲಿ ಟಿ.ವಿ. ಇದ್ದುದರಿಂದ ವಂಡೇ ಕ್ರಿಕೆಟ್ಟನ್ನು ಕಣ್ಣಾರೆ ಕಂಡು ಧನ್ಯರಾಗುವ ಯಥೇಚ್ಛ ಅವಕಾಶ ಬೇರೆ ಲಭ್ಯವಾಗಿತ್ತು. ಆದರೆ ಇತ್ತೀಚೆಗೆ ಸರಕಾರ ದಿನಕ್ಕೊಂದು ಸುತ್ತೋಲೆ ಕಳುಹಿಸಿ ಕಪಿಲಳ್ಳಿ ಕಂಗಾಲಾಗುವಂತೆ ಮಾಡುತ್ತಿತ್ತು. ಇಂದೇನು ಕಾದಿದೆಯೋ ಎಂಬ ಆತಂಕದಿಂದಲೇ ನರ್ಸಪ್ಪನ ಆಮಂತ್ರಣಕ್ಕೆ ಓಗೊಟ್ಟವರು ಒಬೊಬ್ಬರಾಗಿ ಬರುತ್ತಿದ್ದಂತೆ ಪಂಚಾಯತು ಆವರಣ ರೈತರಿಂದ ತುಂಬಿಹೋಯಿತು.

ಕೆಲವು ವಾರಗಳ ಹಿಂದೆ ಒಂದು ದಿನ ಇದ್ದಕ್ಕಿದ್ದಂತೆ ಒಂದು ಕಾರು ಮತ್ತು ಎರಡು ಜೀಪುಗಳಲ್ಲಿ ಕಪಿಲಳ್ಳಿಗೆ ಬಂದಿಳಿದ ಅಪರಿಚಿತರು ಕಪಿಲೇಶ್ವರನ ದೇವಾಲಯಕ್ಕಿಂತ ಸ್ವಲ್ಪ ಕೆಳಗೆ ಚೈನೆಳೆದು ತಪಸ್ವಿನಿಯ ಸರ್ವೆ ಮಾಡತೊಡಗಿದ್ದರು. ವಿಷಯ ಗೊತ್ತಾಗಿ ಪಂಚಾಯತ್‌ ಅಧ್ಯಕ್ಷೆ ಕೀರ್ತಿ ಸಾಲಿಯಾನರು ಸದಸ್ಯರನ್ನು ಕರಕೊಂಡು ಸ್ಥಳಕ್ಕೆ ದುಡುದುಡು ಧಾವಿಸಿದ್ದರು. ಆಗ ಎರಡನೇ ಜೀಪಿನಲ್ಲಿದ್ದ ಬಂದೂಕು ಧಾರಿ ಪೋಲಿಸರು ಕೆಳಕ್ಕಿಳಿದು ಯಾವುದೇ ಪ್ರತಿಭಟನೆ ಎದುರಿಸಲು ಸನದ್ಧರಾಗಿ ಕಾದು ನಿಂತರು. ಗಾಬರಿಯಾದರೂ ಅದನ್ನು ತೋರ್ಪಡಿಸದೆ, ಅಸಾಧಾರಣ ಧೈರ್ಯವಂತೆ ಕೀರ್ತಿ ಸಾಲಿಯಾನರು “ಯಾರು ನೀವು? ಇದೇನು ಕೆಲಸ ನಡೆಸುತ್ತಿದ್ದೀರಿ ಇಲ್ಲಿ? ನಾವು ಬಂದಿರುವವರು ಜನಪ್ರತಿನಿಧಿಗಳು. ನಮ್ಮಲ್ಲಿ ಒಂದು ಮಾತು ಕೇಳದೆ ಇಲ್ಲಿ ನೀವೇನೇನೋ ಮಾಡುತ್ತಿದ್ದೀರಿ. ಎಷ್ಟು ಧೈರ್ಯ ನಿಮಗೆ? ಕೈಯಲ್ಲಿ ಬಂದೂಕಿದೆಯೆಂದು ಏನಾದರೂ ಅಧಿಕಪ್ರಸಂಗ ಮಾಡಿದಿರೋ ನಿಮ್ಮಲ್ಲಿ ಒಂದು ನರಪಿಳ್ಳೆ ಜೀವಸಹಿತ ಕಪಿಲಳ್ಳಿಯಿಂದ ಹೊರಬೀಳುವುದಿಲ್ಲ. ತಿಳ್ಕಳ್ಳಿ” ಎಂದು ಏರುದನಿಯಲ್ಲಿ ಹೇಳಿದರು.

ಆಗ ಉದ್ದನೆಯ ಬಿಳಿ ಕಾರಿನೆದುರು ನಿಂತಿದ್ದ ಟೈ ಕಟ್ಟಿ, ಕೋಟು ತೊಟ್ಟು, ತಂಪು ಕನ್ನಡಕ ಹಾಕಿ ಠಾಕುಠೀಕಾಗಿದ್ದ ವ್ಯಕ್ತಿ ಕೀರ್ತಿ ಸಾಲಿಯಾನರಲ್ಲಿಗೆ ಬಂದು, “ತಪ್ಪು ತಿಳೀಬೇಡಿ ಮೇಡಂ. ನಾವಿಲ್ಲಿ ಸರ್ವೆ ಮಾಡುತ್ತಿದ್ದೇವೆ. ತಪಸ್ವಿನಿಗೆ ಈ ಜಾಗದಲ್ಲಿ ಸೇತುವೆ ಯಾಗಬೇಕೆಂದು ಬಹಳ ಹಿಂದೆ ಅರ್ಜಿಯೊಂದು ಬಂದಿತ್ತು. ಸ್ಥಳ ಪರಿಶೀಲನೆ ಮಾಡಲು ಬಂದವರು ನಾವು. ಇಲ್ಲೊಂದು ಬ್ಯಾರೇಜು ಮಾಡಿದರೆ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಸೇತುವೆ ಮಾಡಿದರೆ ಮಳೆಗಾಲದಲ್ಲೂ ಕಪಿಲೇಶ್ವರನ ದರ್ಶನ ಭಾಗ್ಯ ಎಲ್ಲರಿಗೂ ಸಿಗುತ್ತದೆ ಎಂಬ ಇರಾದೆ ಸರಕಾರದ್ದು. ತಪಸ್ವಿನಿಯಲ್ಲಿ ಮಹಶೀರ್‌ ಜಾತಿಯ ಮೀನುಗಳು ತುಂಬಾ ಇವೆ. ಬ್ಯಾರೇಜು ಕಟ್ಟಿ ಆ ತಳಿಯನ್ನು ಅಭಿವೃದ್ಧಿಪಡಿಸುವ ಯೋಚನೆ ನಮಗಿದೆ. ಇದು ಅರ್ಜಂಟು. ಮಾರ್‍ಚ್ ಒಳಗೆ ಫಂಡ್‌ ಬಳಕೆಯಾಗದಿದ್ದರೆ ಸ್ಯಾಂಕ್ಷನ್ ಆದ ಹಣ ಹಿಂದಕ್ಕೆ ಹೋಗುತ್ತದೆ. ನಿಮ್ಮ ಊರು ಒಂದು ಟೂರಿಸ್ಟ್ ಕಂ ಪಿಲಿಗ್ರಿಮೇಜ್‌ ಸೆಂಟರಾಗಿ ನೀವೆಲ್ಲಾ ಡೆವಲಪ್ಪಾಗ ಬೇಕೆಂಬ ತುರ್ತು. ಹಾಗಾಗಿ ಪ್ರೊಟೋಕಾಲ್‌ ಅನುಸರಿಸಿಲ್ಲ. ಸ್ಸಾರಿ. ನಿಮ್ಮ ಊರಿನ ಡೆವಲಪ್‌ಮೆಂಟಿಗೆ ನಿಮ್ಮ ಕೋಪರೇಶನ್‌ ಬೇಕುು ಎಂದು ಕೈ ಕುಲುಕಿತು.

ತಬ್ಬಿಬ್ಬಾದ ಅಧ್ಯಕೆ ಕೀರ್ತಿ ಸಾಲಿಯಾನರು ಉಪಾಧ್ಯಕ ತಿಮ್ಮಣ್ಣ ನಾಯ್ಕರನ್ನು ನೋಡಿದರು. ತಿಮ್ಮಣ್ಣ ನಾಯ್ಕರು ಹೆಗಲ ಬೈರಾಸಿನಿಂದ ಹಣೆಯೊರಸಿಕೊಂಡು ಯಾರ್‍ಯಾರ್‍ಅನ್ನೋ ಓಡಿಸಿ ಒಂದಷ್ಟು ಎಳನೀರನ್ನು ತರಿಸಿದರು. ಅವನ್ನು ಕೆತ್ತಿ ಕೊಡುವಾಗ ಠಾಕುಠೀಕು ವ್ಯಕ್ತಿ “ಒಳ್ಳೇದು… ಒಳ್ಳೇದು….. ನೀವು ಪಾಪ ಹಳ್ಳಿಯೋರು ಇನ್ನೂ ಎಳನೀರಲ್ಲೇ ಇದ್ದೀರಿ. ಪೆಪ್ಸಿ, ಕೋಕೋ ಕೋಲಾ ಕುಡಿಬೇಕು ಮೇಡಂ. ಅದು ಸಿವಿಲೈಜೇಶನ್ನು. ಇರಲಿ, ಮೊದಲಿಗೆ ಇಲ್ಲೊಂದು ಬ್ಯಾರೇಜಾಗಿ, ಸೇತುವೆಯಾದ ಮೇಲೆ ಕಪಿಲಳ್ಳಿ ಒಂದು ಪಿಲಿಗ್ರಿಮೇಜು, ಟೂರಿಸ್ಟ್ ಸೆಂಟರ್‌ ಎಂದು ಡಿಕ್ಲೇರ್‌ ಆದಾಗ ಇಲ್ಲೇ ಒಂದು ಸ್ಟಾರ್‌ ಹೋಟೆಲ್‌ ಎಬ್ಬಿಸಿ ಬಿಡುತ್ತೇನೆ. ಅದರಲ್ಲೊಂದು ಸ್ವಿಮ್ಮಿಂಗ್‌ ಪೂಲ್‌. ಮೇಡಂ ನಾಚ್ಕೋಬೇಡಿ. ಲೇಡೀಸ್‌ಗೆ ಸೆಪರೇಟ್ ವ್ಯವಸ್ಥೆ ಇರುತ್ತೆ. ಅದರ ಓಪನಿಂಗ್‌ ಸೆರಮನಿಗೆ ಸೆಂಟ್ರಲ್ಲಿಂದ ಟೂರಿಸಂ ಮಿನಿಸ್ಟ್ರನ್ನು, ಸ್ಟೇಟಿನಿಂದ ಸೀಯೆಮ್ಮನ್ನೇ ಕರ್ಸೋದು. ಆಗ ಕಪಿಲಳ್ಳಿಯವರಿಗೆ ಪೆಪ್ಸಿ, ಕೋಕ್, ಮಿರಿಂಡಾ, ಫಾಂಟಾ – ಏನು ಬೇಕು ಅದು. ಇನ್ನು ಎರಡೇ ವರ್ಷ. ಮತ್ತೆ ಕಪಿಲಳ್ಳಿ ಹೋಗಿ ಕಪಿಲಾಪುರ್‌ ಆಗುತ್ತೆ. ಮುಖ್ಯ ಬೇಕಾದ್ದು ನಿಮ್ಮ ಕೋಪರೇಶನ್ನು” ಎಂದು ಈ ಬಾರಿ ಉಪಾಧ್ಯಕ್ಷ ತಿಮ್ಮಣ್ಣ ನಾಯ್ಕರ ಕೈಕುಲುಕಿತು.

ಕಪಿಲೇಶ್ವರನ ಸರ್ವ‌ಋತು ದರ್ಶನಕ್ಕೆ ತಪಸ್ವಿನಿಗೊಂದು ಸೇತುವೆಯಾಗುತ್ತದಲ್ಲಾ ಎಂಬ ಸಂತೋಷದಿಂದ ಪಂಚಾಯತ್‌ ಅಧ್ಯಕ್ಷೆ ತನ್ನ ತಂಡದೊಡನೆ ವಾಪಾಸಾದರು. ತಿಮ್ಮಣ್ಣ ನಾಯ್ಕರ ತಲೆಯಲ್ಲಿ ಮಾತ್ರ ಅನುಮಾನದ ಗುಂಗೀಹುಳ ಕೊರೆಯ ತೊಡಗಿ ನಿದ್ರೆ ಬಾರದೆ ಸರಿರಾತ್ರಿಯಲ್ಲಿ ಅಧ್ಯಕೆ ಕೀರ್ತಿ ಸಾಲಿಯಾನರಿಗೆ ಫೋನು ಮಾಡಿ, “ಏನಿದ್ದರೂ ಸರಕಾರ ಮಾಡಿದ್ದು ತಪ್ಪೇ. ಕಪಿಲಳ್ಳಿ ಪಂಚಾಯತಿನ ಗಮನಕ್ಕೆ ತಾರದೆ ತಪಸ್ವಿನಿಗೆ ಬ್ಯಾರೇಜು ಮತ್ತು ಸೇತುವೆ ನಿರ್ಮಾಣಕ್ಕೆ ಹೊರಟದ್ದು ಸರಿಯಲ್ಲವೆಂದು ಜಿಲ್ಲಾಧಿಕಾರಿಗಳಿಗೆ ನೀವು ತಿಳಿಸಬೇಕು. ನಾಳೆ ಅದಕ್ಕೊಂದು ತುರ್ತು ಮೀಟಿಂಗು ಇರಿಸಿಕೊಳ್ಳಿ” ಎಂದು ಸಲಹೆ ನೀಡಿ ತಲೆಭಾರ ನೀಗಿದಂತಾಗಿ ಆರಾಮವಾಗಿ ನಿದ್ದೆ ಹೋದರು. ಕೀರ್ತಿ ಸಾಲಿಯಾನರು ಪಾಪ ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದರು.

ಮರುದಿನ ಕೀರ್ತಿ ಸಾಲಿಯಾನರು ತುರ್ತು ಸಭೆ ಕರೆದರು. ಪಂಚಾಯತಿಯ ಗಮನಕ್ಕೆ ತಾರದೆ ಕಪಿಲಳ್ಳಿಯಲ್ಲಿ ಬ್ಯಾರೇಜು ಮತ್ತು ಸೇತುವೆ ನಿರ್ಮಿಸ ಹೊರಟ ಬಗ್ಗೆ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವ ನಿರ್ಣಯ ಅಂಗೀಕಾರವಾಯಿತು.

ಮಾನ್ಯ ಜಿಲ್ಲಾಧಿಕಾರಿಗಳ ಸನ್ನಿಧಾನಕ್ಕೆ –

ಕಪಿಲಳ್ಳಿ ಪಂಚಾಯತಿನ ಗಮನಕ್ಕೆ ತಾರದೆ ತಾವು ಕಪಿಲೇಶ್ವರ ದೇವಸ್ಥಾನದ ಬಳಿಯಲ್ಲಿ ಒಂದು ಬ್ಯಾರೇಜನ್ನು ಮತ್ತು ಸೇತುವೆಯನ್ನು ನಿರ್ಮಿಸುವ ಕಾಮಗಾರಿಗೆ ತೊಡಗಿದ್ದೀರಿ. ಇಂತಹ ಕಾಮಗಾರಿಗಳು ನಡೆಯುವಾಗ ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳ ಗಮನಕ್ಕೆ ತಾರದೆ ಮುಂದುವರಿಯುವುದು ಅಪ್ರಜಾಸತ್ತಾತ್ಮಕವಾಗುತ್ತದೆ. ನಿಮ್ಮ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಮರುಟಪ್ಪಾಲಿನಲ್ಲಿ ನಮಗೆ ನೀವು ವಿವರಣೆ ನೀಡಬೇಕಾಗಿ ಅಪೇಕಿಸುತ್ತೇವೆ.

(ಸಹಿ) ಕೀರ್ತಿ ಸಾಲಿಯಾನ್
ಅಧ್ಯಕ್ಷರು, ಕಪಿಲಳ್ಳಿ ಗ್ರಮ ಪಂಚಾಯತ್

ಪ್ರತಿಗಳು:
೧. ಸಚಿವರು, ಲೋಕೋಪಯೋಗಿ ಇಲಾಖೆ
೨. ಮಾನ್ಯ ಶಾಸಕರು, ಹಸಿರಂಗಡಿ
ಕಪಿಲಳ್ಳಿ ಗ್ರಾಮ ಪಂಚಾಯತಿನಿಂದ ಹೋದ ಈ ಪತ್ರಕ್ಕೆ ಎರಡೇ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಂದ ಉತ್ತರ ಬಂತು.

-ಗೆ,

ಅಧ್ಯಕ್ಷರು ಮತ್ತು ಸರ್‍ವಸದಸ್ಯರು
ಕಪಿಲಳ್ಳಿ ಗ್ರಾಮ ಪಂಚಾಯತ್

ನಿಮ್ಮ ಪತ್ರ ನೋಡಿ ನಮಗೆ ಸಖೇದಾಶ್ಚರ್‍ಯವಾಯಿತು. ಕಪಿಲಳ್ಳಿಯಲ್ಲಿ ಬ್ಯಾರೇಜು ಮತ್ತು ಸೇತುವೆ ನಿರ್‍ಮಿಸುವ ಯಾವುದೇ ಯೋಜನೆ ಸರಕಾರಕ್ಕೆ ಸದ್ಯಕ್ಕಿಲ್ಲ. ಚುನಾಯಿತ ಜನಪ್ರತಿನಿಧಿಗಳು ಆಧಾರವಿಲ್ಲದ ಆಪಾದನೆ ಮಾಡಿ ಆಡಳಿತ ಯಂತ್ರಕ್ಕೆ ಅನಗತ್ಯ ತೊಂದರೆ ನೀಡಬಾರದಾಗಿ ಅಪೇಕ್ಷಿಸುತ್ತೇವೆ.

(ಸಹಿ)
ಜಿಲ್ಲಾಧಿಕಾರಿಗಳು

ಪತ್ರ ಓದಿ ಕೀರ್ತಿ ಸಾಲಿಯಾನರು ಭೂಮಿಗಿಳಿದು ಹೋದರು. ಗಾಬರಿಯಿಂದ ಅವರು ಹಸಿರಂಗಡಿಯಲ್ಲಿರುವ ಶಾಸಕರನ್ನು ದೂರವಾಣಿ ಮೂಲಕ ಸಂಪರ್‍ಕಿಸಿದಾಗ ಕಪಿಲಳ್ಳಿಗೆ ಇನ್ನೂ ಸೇತುವೆ ಮಂಜೂರಾಗಿಲ್ಲವೆಂದೂ, ಅದಕ್ಕಾಗಿ ಚಿಂತೆ ಬೇಡವೆಂದೂ, ತನ್ನ ಶಾಸಕಗಿರಿ ಮುಗಿಯುವ ಮೊದಲೇ ಒಂದು ಸೇತುವೆ ಮಾಡಿಸಿಯೇ ಬಿಡುತ್ತೇನೆಂದೂ ಅವರು ಭರವಸೆ ನೀಡಿದರು. “ಇನ್ನು ಮಾಡೋದೇನು ತಿಮ್ಮಣ್ಣ ನಾಯ್ಕರೇ?” ಕೀರ್ತಿ ಸಾಲಿಯಾನರ ಪ್ರಶ್ನೆಗೆ ಏನುತ್ತಿರಿಸುವುದೆಂದು ತಿಳಿಯದೆ ತಿಮ್ಮಣ್ಣ ನಾಯ್ಕರು ಸುಮ್ಮನಾಗಿಬಿಟ್ಟಿರು.

ಕಂಗಾಲಾಗಿ ಕುಳಿತಿದ್ದ ಕಪಿಲಳ್ಳಿಗೆ ಒಂದು ಮಧ್ಯಾಹನದ ಬಸ್ಸಲ್ಲಿ ಬಂದಿಳಿದ ಬಿಳಿ ಜುಬ್ಬ, ಹಸಿರು ಶಾಲು, ಕಪ್ಪು ಬಿಳುಪು ಗಡ್ಡಧಾರಿಯೊಬ್ಬ ಪಂಚಾಯತು ಕಛೇರಿ ಹೊಕ್ಕು ಅಧ್ಯಕ್ಷರೆಲ್ಲೆಂದು ಕೇಳಿದ. ಕಾರ್ಯದರ್ಶಿಯು ಅಧ್ಯಕ್ಷೆಯ ಮನೆಗೆ ಫೋನು ಮಾಡಿದರೆ ಅವರು ತವರುಮನೆಗೆ ಹೋಗಿದ್ದಾರೆಂಬ ಉತ್ತರ ಬಂತು. ಉಪಾಧ್ಯಕ್ಷರಿಗೆ ಫೋನು ಮಾಡಿದ್ದಕ್ಕೆ ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದ ತಿಮ್ಮಣ್ಣ ನಾಯ್ಕರು ಕಂಬಯಿ, ಅಂಗಿ, ಬೈರಾಸುಗಳಲ್ಲೇ ಬಂದುಬಿಟ್ಟರು. ಕಪ್ಪು ಬಿಳುಪು ಗಡ್ಡಧಾರಿ ತಾನು ಹಸಿರಂಗಡಿಯ ರೈತ ಸಂಘದ ಮುಖಂಡನೆಂದು ಪರಿಚಯಿಸಿಕೊಂಡ. “ಕೆಲವು ದಿನಗಳ ಹಿಂದೆ ಇಲ್ಲಿಗೆ ಕಾರಲ್ಲೊಬ್ಬ ಶೋಕಿ ಅಸಾಮಿ ಬಂದು ತಪಸ್ವಿನಿಯ ಸರ್ವೆ ಮಾಡಿ ಹೋದನಲ್ಲಾ ಅವನು ತಿಂಗಳೂರಲ್ಲೊಂದು ಆಯಿಲ್‌ ರಿಫೈನರಿ ನಡೆಸುತ್ತಿದ್ದಾನೆ. ಅಲ್ಲಿಗೆ ಎಷ್ಟು ನೀರಿದ್ದರೂ ಸಾಕಾಗೋದಿಲ್ಲ. ಅದಕ್ಕೆ ಇಲ್ಲೊಂದು ಬ್ಯಾರೇಜು ಮಾಡಿ ದೊಡ್ಡ ಪೈಪುಗಳಲ್ಲಿ ಡೈರೆಕ್ಟಾಗಿ ರಿಫೈನರಿಗೆ ನೀರು ಸಾಗಿಸುವ ಯೋಜನೆ ಅವನದ್ದು. ಅವನು ಅಂದುಕೊಂಡಂತೆ ನಡೆದರೆ ಇನ್ನು ಮೂರು ತಿಂಗಳಲ್ಲಿ ಕಪಿಲಳ್ಳಿ ಪೂರ್ತಿಯಾಗಿ ಮುಳುಗಿ ಹೋಗುತ್ತದೆ. ನಿಮ್ಮ ಊರನ್ನು ಉಳಿಸಿಕೊಳ್ಳಬೇಕೆಂದಿದ್ದರೆ ಈಗಲೇ ಯೋಜನೆ ಹಾಕಿಕೊಳ್ಳಿ. ನೀವೆಲ್ಲಾ ರೈತರಾದುದರಿಂದ ನಮ್ಮ ಬಂಧುಗಳು ಅಂದ್ಕೊಂಡು ಬಂದಿರೋನು ನಾನು. ನಿಮ್ಮನ್ನು ಎಚ್ಚರಿಸಲೆಂದೇ ಅರ್ಜೆಂಟಾಗಿ ನಾನು ಬಂದಿರೋದು. ಮೊದಲಿಗೆ ನೀವೊಂದು ರೈತ ಸಂಘವನ್ನು ಆರಂಭಿಸಬೇಕು. ತಾಲ್ಲೂಕು ಮಟ್ಟದಲ್ಲಿ ನಿಮಗೆ ನಮ್ಮ ಬೆಂಬಲವಿದೆ. ನಮಗೆ ಜಿಲ್ಲಾ ಮಟ್ಟದಲ್ಲಿ ಬೆಂಬಲಿಗರಿದ್ದಾರೆ. ಯಾವುದಕ್ಕೂ ಹೆದರದೆ ಮುಂದುವರಿಯಿರಿ. ಇದು ನನ್ನ ವಿಸಿಟಿಂಗು ಕಾರ್ಡು. ಈ ನಂಬರಲ್ಲಿ ನನ್ನನ್ನು ಕಾಂಟಾಕ್ಟು ಮಾಡಿ. ಮುಂದಿನ ಬಸ್ಸಲ್ಲಿ ನಾನು ಹಸಿರಂಗಡಿಗೆ ವಾಪಾಸಾಗಬೇಕು. ತುಂಬಾ ತುರ್ತು.”

ಕಪ್ಪು ಬಿಳುಪು ಗಡ್ಡದವನ ಮಾತು ಪೂರ್ತಿಯಾಗಿ ತನಗೇ ಅರ್ಥವಾಗಲಿಲ್ಲ. ಇನ್ನು ತಾನು ಹೇಳಿದ್ದು ಕಪಿಲಳ್ಳಿ ಜನಗಳಿಗೆ ಎಷ್ಟು ಅರ್ಥವಾದೀತೆಂದು ಕಂಗಾಲಾದ ತಿಮ್ಮಣ್ಣ ನಾಯ್ಕರು, “ನೀವು ಅವಸರಪಡಬಾರದು. ಇಂದು ಸಂಜೆಯೇ ಒಂದು ಸಭೆ ಕರೆದುಬಿಡುತ್ತೇನೆ. ಕಪಿಲಳ್ಳಿ ಜನಗಳಿಗೆ ನೀವೇ ಎಲ್ಲಾ ಡೀಟೇಲ್ಸು ಹೇಳಿಬಿಡಬೇಕು. ನಾಳೆ ಬೆಳಗ್ಗೆ ಫಸ್ಟು ಬಸ್ಸಲ್ಲಿ ನಿಮ್ಮನ್ನು ಬಿಟ್ಟುಬಿಡುತ್ತೇನೆ” ಎಂದು ಕೈ ಮುಗಿದರು.

ಸಂಜೆ ಕಪಿಲಳ್ಳಿ ಶಾಲಾ ಆಟದ ಮೈದಾನದಲ್ಲಿ ಸೇರಿದ ಜನಕ್ಕೆ ಕಪ್ಪು ಬಿಳುಪು ಗಡ್ಡದ ರೈತ ಸಂಘದವ ವಿಷಯ ವಿವರಿಸಿದ. “ಈಗ ತಪಸ್ವಿನಿಗೆ ಸೇತುವೆ ಕಟ್ಟುವ ಪ್ರಸ್ತಾಪ ಸರಕಾರದ ಮುಂದಿಲ್ಲ. ಬ್ಯಾರೇಜು ಕಟ್ಟಲು ಹೊರಟವನು ತಿಂಗಳೂರಿನ ತೈಲ ಕಂಪೆನಿಯವನು. ಇಲ್ಲಿ ಬ್ಯಾರೇಜು ಕಟ್ಟಿದರೆ ಕಪಿಲೇಶ್ವರ ಮುಳುಗಿ ಹೋಗುತ್ತಾನೆ. ಕಪಿಲಳ್ಳಿ ಮುಕ್ಕಾಲು ಭಾಗ ಮುಳುಗಡೆಯಾಗಲಿದ್ದು ನಿರ್ವಸಿತರಾಗಲಿರುವವರಿಗಾಗಿ ಮಣ್ಣಗುಡ್ಡೆಯಲ್ಲಿ ತಗಡಿನ ಸಾಮೂಹಿಕ ಗೃಹಗಳು ನಿರ್ಮಾಣವಾಗುತ್ತಿವೆ. ತಲೆತಲಾಂತರದಿಂದ ನಿಮ್ಮದಾಗಿದ್ದ ಭೂಮಿ, ನಿಮ್ಮನ್ನು ರಕ್ಷಿಸಿಕೊಂಡು ಬಂದಿದ್ದ ದೇವಸ್ಥಾನ ನೀರು ಪಾಲಾಗುತ್ತದೆ. ಇಲ್ಲಿ ಎಂದಲ್ಲ ದೇಶದ ಉದ್ದಗಲಕ್ಕೆ ಇದೇ ನಡೆಯುತ್ತಿರೋದು. ಸರಕಾರ ಉದಾರ ನೀತಿಯನ್ನು ಒಪ್ಪಿಕೊಂಡಿದ್ದು ಕೃಷಿಗೆ ಇನ್ನು ಮುಂದೆ ಯಾವುದೇ ಸಬ್ಸಿಡಿ ಮತ್ತು ಸಹಾಯ ದೊರೆಯುವುದಿಲ್ಲ. ನದಿ ಇರುವಲ್ಲೆಲ್ಲಾ ಬ್ಯಾರೇಜು ನಿರ್ಮಿಸಿ ಕೈಗಾರಿಕೆಗಳಿಗೆ ಮಾತ್ರ ನೀರೊದಗಿಸುವುದು ಸರಕಾರದ ಉದ್ದೇಶ. ಅದಕ್ಕಾಗಿ ನದಿಗಳ ಹರಿವನ್ನೇ ಬದಲಾಯಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ತಪಸ್ವಿನಿ ಬ್ಯಾರೇಜು ಆ ಯೋಜನೆಯ ಒಂದು ಭಾಗ. ಈಗ ನೀವು ಎಚ್ಚೆತ್ತು ಸಂಘಟಿತ ಹೋರಾಟ ನಡೆಸದಿದ್ದರೆ ನಿಮ್ಮೆಲ್ಲರ ಬದುಕು ಮತ್ತು ಸಂಸ್ಕೃತಿ ಮುಳುಗಿ ಹೋಗುತ್ತದೆ.”

ಕಪ್ಪು ಬಿಳುಪು ಗಡ್ಡದ ರೈತ ಸಂಘದವನ ಮಾತನ್ನು ಕಪಿಲಳ್ಳಿ ಜನ ಮೌನವಾಗಿ ಆಲಿಸಿದರು. “ನೀವು ಹೇಳಿದ್ದು ಸರಿ. ನಾವು ಹೋರಾಟ ನಡೆಸಲು ಸಿದ್ಧರಿದ್ದೇವೆ. ಆದರೆ ಹೋರಾಟ ಮಾಡುವುದು ಹೇಗೆಂದೇ ನಮಗೆ ಗೊತ್ತಿಲ್ಲ.”

ಕಪ್ಪು ಬಿಳುಪು ಗಡ್ಡದ ರೈತ ಸಂಘದವ ಹೇಳಿದ. “ಅದಕ್ಕಾಗಿಯೇ ನಾವು ರೈತ ಸಂಘ ಸ್ಥಾಪಿಸಿದ್ದು. ನನ್ನ ಹೆಗಲ ಮೇಲಿದೆಯಲ್ಲಾ ಈ ಹಸಿರು ಶಾಲು. ಇದು ಪ್ರಕೃತಿ ಮಾತೆಯ ಸಂಕೇತ. ನಮಗೆ ಸರಕಾರದ ನೆರವು ಬೇಕಾಗಿಲ್ಲ. ಪ್ರಕೃತಿಯನ್ನು ನಂಬಿ ಬದುಕುತ್ತಿರುವವರು ನಾವು. ಈಗ ಸರಕಾರ ವ್ಯಾಪಾರಿಗಳಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ನೆರವು ನೀಡುವ ಭರಾಟೆಯಲ್ಲಿ ರೈತರ ಬದುಕುವ ಹಕ್ಕನ್ನು ಕಸಿದುಕೊಳ್ಳಲು ನಾವು ಬಿಡಬಾರದು. ಹಿಂದೆ ಗ್ಯಾಟು ಅಂತ ಎಲ್ಲಾ ದೇಶಗಳು ಸೇರಿ ಒಪ್ಪಂದ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಆಗ ಭಾರತದಂಥ ಹಿಂದುಳಿದ ದೇಶಗಳಿಗೆ ಕೆಲವು ರಿಯಾಯಿತಿ ಸಿಗುತ್ತಿತ್ತು. ಈಗ ವಿಶ್ವ ವ್ಯಾಪಾರ ಸಂಸ್ಥೆ ಅಂತ ಮಾಡಿಕೊಂಡು ಅಮೇರಿಕಾದವರು ಬಡ ರಾಷ್ಟ್ರಗಳ ರಿಯಾಯಿತಿ ಎಲ್ಲಾ ತೆಗೆದು ಬಿಟ್ಟಿದ್ದಾರೆ. ಪೆಪ್ಸಿ, ಕೋಕ್ ಕಂಪೆನಿಗಳಂತಹ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಡಬ್ಲೂ ಟಿ ಓ ಒಪ್ಪಂದ ರೂಪಿಸಲಾಗಿದೆ. ಹೀಗಾದರೆ ಮುಂದೊಂದು ದಿನ ನಮ್ಮ ದೇಶದ ಒಂದೇ ಒಂದು ಕಂಪೆನಿ ಉಳಿಯುವುದಿಲ್ಲ. ಎಳನೀರನ್ನು ಯಾರೂ ಕುಡಿಯಬಾರದೆಂದು ತೆಂಗಿನ ಮರಕ್ಕೆ ಬರುತ್ತಿರುವ ನುಸಿಪೀಡೆಯನ್ನು ಆ ಕಂಪೆನಿಗಳೇ ಹಬ್ಬಿಸಿದ್ದಂತೆ. ಅವು ಮಾರುವ ಡ್ರಿಂಕ್ಸಿನಲ್ಲಿರೋದು ಡಿಡಿಟಿ ಮತ್ತು ಸಂಡಾಸು ಕ್ಲೀನು ಮಾಡುವ ಕೆಮಿಕಲ್ಸಂತೆ. ನಮ್ಮ ರಾಜಧಾನಿಯಲ್ಲೇ ಅಮೇರಿಕಾದ ಕಂಪೆನಿಯೊಂದು ಮಸಾಲೆ ಕೋಳಿ ಮಾರೋ ಹೋಟೆಲೊಂದನ್ನು ತೆರೆಯಿತಲ್ಲಾ! ನಮಗೆ ಮಸಾಲೆ ಕೋಳಿ ಮಾಡೋದನ್ನು ಆ ಅಮೇರಿಕಾದವ್ರು ಹೇಳಿಕೊಡಬೇಕಾ? ನಮ್ಮ ರೈತ ಸಂಘದವರು ಒಳಗೆ ನುಗ್ಗಿ ಹೋಟೆಲು ಪುಡಿ ಪುಡಿ ಮಾಡಿ ಆ ಅಮೇರಿಕಾದೋರ ತಿಕಕ್ಕೊದ್ದು ಓಡ್ಸಿಬಿಟ್ಟೆವು. ನೀವೂ ರೈತ ಸಂಘ ಮಾಡ್ಕೂಳ್ಳಿ. ಇನ್ನೊಮ್ಮೆ ಪಂಚಾಯಿತಿಗೆ ತಿಳಿಸ್ದೇ ಬ್ಯಾರೇಜು, ಸೇತುವೆ ಅಂತೇನಾದ್ರೂ ಯಾರಾದ್ರೂ ಬಂದ್ರೆ ಒದ್ದು ಓಡ್ಸಿ. ಮೊನ್ನೆ ಪೋಲಿಸ್ರನ್ನು ಕರ್ಕಂಬಂದಾಗ್ಲೇ ನಿಮಗೆ ಅವರ ಹಿಕಮತ್ತೇನೆಂದು ಗೊತ್ತಾಗಬೇಕಿತ್ತು. ನೀವು ಪ್ರತಿಭಟಿಸಿದರೆ ಮಾತ್ರ ನಿಮ್ಮ ಊರು ಮತ್ತು ಸಂಸ್ಕೃತಿ ಉಳಿಯೋದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಲಾತ್ಕಾರ ದಿಂದ ಯಾರೂ ಏನನ್ನೂ ಮಾಡುವಂತಿಲ್ಲ. ಅಲ್ಲದೆ, ನಾವು ಸರಕಾರದ ವಿರುದ್ಧ ಹೋರಾಡುವುದಿಲ್ಲ ನಮ್ಮ ಬದುಕುವ ಹಕ್ಕನ್ನು ಕಸಿದುಕೊಳ್ಳುವವರ ವಿರುದ್ಧ ಮಾತ್ರ ನಮ್ಮ ಹೋರಾಟ. ಆದ್ದರಿಂದ ನಾನು ಹೇಳುತ್ತಿದ್ದೇನೆ. ನೀವೆಲ್ಲಾ ಭಯವನ್ನು ಬಿಟ್ಟು ಧೈರ್ಯ ದಿಂದ ಒಗ್ಗೂಡಿ ಬರುವುದನ್ನೆಲ್ಲಾ ಒಟ್ಟಾಗಿ ಎದುರಿಸಬೇಕು.”

ಕಪಿಲಳ್ಳಿಯಲ್ಲಿ ಹಾಗೆ ಹುಟ್ಟಿಕೊಂಡ ರೈತ ಸಂಘ ಮೊದಲಿಗೆ ಮಾಡಿದ ಕೆಲಸ ವೆಂದರೆ ತಪಸ್ವಿನಿಯನ್ನು ಸರ್ವೆ ಮಾಡಿದವರು ಅಲ್ಲಲ್ಲಿ ಹಾಕಿದ್ದ ಕಲ್ಲುಗಳನ್ನು ಕಿತ್ತು ಬಿಸಾಡಿದ್ದು. ಆದರೆ ಸದಾ ಹಸಿರು ಬಣ್ಣದ ಶಾಲುಗಳನ್ನು ಹೆಗಲಲ್ಲಿ ಹಾಕಿಕೊಂಡು ಶೋಷಣೆಯ ವಿರುದ್ಧ ಪ್ರತಿಭಟನೆ ಎಂದುಕೊಂಡು ತಿರುಗುತ್ತಿದ್ದ ರೈತ ಸಂಘದವರನ್ನು ನೋಡಿ ಧರ್ಮ ಸಂರಕ್ಷಣಾ ಪರಿಷತ್ತಿನ ಮುಖಂಡ ವೆಂಕಟಸುಬ್ಬ ರಾಯರಿಗೆ ತುಂಬಾ ಖೇದವಾಯಿತು. ಅವರ ಪ್ರಕಾರ ಈ ದೇಶದ ಸಮಸ್ಯೆ ಎಂದರೆ ಗೋಹತ್ಯೆ ಮತ್ತು ಮತಾಂತರ ಮಾತ್ರ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ನಮ್ಮ ಸಂಸ್ಕೃತಿಗೆ ವಿರುದ್ಧವಾದುದೆಂದು ಅವರು ಸಂದರ್ಭ ಸಿಕ್ಕಾಗೆಲ್ಲಾ ಹೇಳುತ್ತಿದ್ದರು. ಸದಾ ಹಳದಿ ಬಣ್ಣದ ಶಾಲು ಹಾಕಿಕೊಂಡು ತಿರುಗಾಡುತ್ತಾ ತುರುಕರು ಬರುವ ಮೊದಲು ನಮ್ಮದು ರಾಮರಾಜ್ಯವಾಗಿತ್ತೆಂದೂ, ನಮ್ಮ ಸಮಸ್ತ ಕಷ್ಟಕೋಟಲೆಗಳಿಗೆ ಅವರ ಆಗಮನವೇ ಕಾರಣವೆಂದೂ, ಗೋಹತ್ಯೆ ಮತ್ತು ಮತಾಂತರ ನಿಷೇಧಿಸಿದರೆ ನಮ್ಮದು ಮೊದಲಿನಂತೆ ರಾಮರಾಜ್ಯವಾಗಿ ಬಿಡುತ್ತದೆಂದೂ ಹೇಳುತ್ತಿದ್ದವರಿಗೆ ರೈತ ಸಂಘದ ಶಾಲಿನ ಹಸಿರು ಬಣ್ಣ ಏನೇನೂ ಇಷ್ಟವಾಗಲಿಲ್ಲ. ಆದರೆ ಕಪ್ಪು ಬಿಳುಪು ದಾಡಿಯವನು ಭಾಷಣದಲ್ಲಿ ಹೇಳಿದ ವಿಷಯಗಳು ಅವರನ್ನೂ ಕೊರೆಯುತ್ತಿದ್ದವು. ಛೇ! ಇರಲಿಕ್ಕಿಲ್ಲ. ಅಮೇರಿಕಾವೇ ನಮ್ಮ ಮಿತ್ರ ರಾಷ್ಟ್ರ. ರಶಿಯಾ ಎಷ್ಟೆಂದರೂ ಸಮಾನತೆಗಾಗಿ ಹೋರಾಡಿದ ಕಮ್ಯುನಿಸ್ಟ್ ದೇಶವಾದುದರಿಂದ ಅದರೊಂದಿಗೆ ಮಿತ್ರತ್ವ ಕೂಡದು. ಅಮೇರಿಕಾದವರು ತುರುಕರ ವಿರುದ್ಧ ಇಸ್ರೇಲಿಗೆ ಬೆಂಬಲ ಕೊಡುತ್ತಾರೆ. ನಮಗೂ ಅವರ ಬೆಂಬಲ ಖಂಡಿತಾ ಇದ್ದೇ ಇದೆ. ಈಗ ರೈತ ಸಂಘದವರು ಅಂಥಾ ಅಮೇರಿಕಾದ ವಿರುದ್ಧವೇ ಹೋರಾಟ ಆರಂಭಿಸಿದ್ದಾರೆ. ಇದು ತುರುಕರ ಶಕ್ತಿಯನ್ನು ಹೆಚ್ಚಿಸಿಬಿಡುತ್ತದೆ. ಆದರೆ ಯಾರ್ಯಾರೋ ಬಂದು ತಪಸ್ವಿನಿಯನ್ನು ಸರ್ವೆ ಮಾಡಿದ್ದು ನಿಜ. ಈಗೇನು ಮಾಡುವುದು ಎಂದು ವೆಂಕಟಸುಬ್ಬಯ್ಯನವರಿಗೆ ಹೊಳೆಯದೆ ಹಗಲಿರುಳು ಕೊರಗತೊಡಗಿದರು.

ಕಪಿಲಳ್ಳಿಯಲ್ಲಿ ರೈತ ಸಂಘ ಸ್ಥಾಪನೆಯಾದದ್ದು, ತಪಸ್ವಿನಿ ಬ್ಯಾರೇಜಿನ ಸರ್ವೆಕಲ್ಲುಗಳನ್ನು ಕಿತ್ತು ಬಿಸಾಡಿದ್ದು ಪತ್ರಿಕೆಗಳಲ್ಲಿ ಪ್ರಕಟವಾದಾಗ ತಿಂಗಳೂರು ರಿಫೈನರಿಯವನು ಈಗ ಕಪಿಲಳ್ಳಿಗೆ ಹೋದರೆ ಜೀವಕ್ಕೇ ಸಂಚಕಾರ; ಪರಿಸ್ಥಿತಿ ತಿಳಿಯಾಗಲಿ ಎಂದು ಸುಮ್ಮನಾಗಿದ್ದನು. ಮತ್ತೆ ಯಥಾಸ್ಥಿತಿಗೆ ಕಪಿಲಳ್ಳಿ ಮರಳಿದಾಗ ವೆಂಕಟಸುಬ್ಬಯ್ಯನವರು ರೈತ ಸಂಘದ ಮುಖಂಡ ತಿಮ್ಮಣ್ಣ ನಾಯ್ಕರಲ್ಲಿಗೆ ಬಂದು, ನಾನು ಮೊದಲೇ ಹೇಳಿದ್ದೆ. ಬೇರೆ ಎಲ್ಲಾ ಸಮಸ್ಯೆಗಳು ಕೇವಲ ತಾತ್ಕಾಲಿಕ. ನಮ್ಮ ದೇಶದ ನಿಜವಾದ ಸಮಸ್ಯೆ ಎರಡು ಮಾತ್ರ. ಗೋಹತ್ಯೆ ಮತ್ತು ಮತಾಂತರ. ಅದೀಗ ನಿಜವಾಯಿತೋ, ಇಲ್ಲವೋ? ಇನ್ನು ನೀವು ಆ ತುರ್ಕರ ಸಂಕೇತ ವಾದ ಹಸಿರು ಶಾಲು ತೆಗೆದಿಟ್ಟು ನಮ್ಮ ಹಳದಿ ಶಾಲು ಹಾಕಿ ಕೊಳ್ಳಬೇಕು. ನಿಮ್ಮ ಸರ್ವಶಕ್ತಿ ಗೋಹತ್ಯೆ ಮತ್ತು ಮತಾಂತರ ನಿಷೇಧಿಸಲು ಬಳಕೆಯಾಗ ಬೇಕು” ಎಂದರು.

ತಿಮ್ಮಣ್ಣ ನಾಯ್ಕರು ಹಿರಿಯರ ಮಾತನ್ನು ತಳ್ಳಿ ಹಾಕಲಾರದೆ, “ಆಗಲಿ ವೆಂಕಟ ಸುಬ್ಬಯ್ಯನವರೇ. ಇಷ್ಟು ವರ್ಷದ ಇತಿಹಾಸದಲ್ಲಿ ಕಪಿಲಳ್ಳಿಯಲ್ಲಿ ಒಂದೇ ಒಂದು ಗೋಹತ್ಯೆಯಾಗಲೀ, ಮತಾಂತರವಾಗಲೀ ನಡೆದಿಲ್ಲ. ನಡೆದಂದು ಈ ಹಸಿರು ಶಾಲು ತೆಗೆದುಬಿಡೋಣ. ಮತ್ತೆ ಬಣ್ಣ ಪ್ರಕೃತಿಯ ಸೃಷ್ಟಿಯಲ್ವಾ ವೆಂಕಟಸುಬ್ಬಯ್ಯನವರೇ? ಅದನ್ನು ಯಾವುದೋ ಕೋಮಿನ ಸಂಕೇತವೆಂದು ಹಿರಿಯರಾದ ನೀವೂ ತಿಳಿದುಕೊಳ್ಳುವುದಾ? ನಾವೆಲ್ಲಾ ಸಣ್ಣ ಮನುಷ್ಯರು. ಮೊದಲು ನಮ್ಮ ಊರನ್ನು ಸರಿಪಡಿಸಿಕೊಂಡರೆ ಸಾಕು. ಎಲ್ಲಾ ಊರುಗಳು ಸರಿಯಾದರೆ ದೇಶ ತಾನಾಗಿಯೇ ಸರಿಯಾಗುತ್ತದಲ್ಲಾ?” ಎಂದು ಹೇಳಿದ್ದು ವೆಂಕಟಸುಬ್ಬಯ್ಯನವರಿಗೆ ಏನೇನೂ ಇಷ್ಟವಾಗದಿದ್ದರೂ ಏನುತ್ತರಿಸಬೇಕೆಂದು ತಿಳಿಯದೆ ಬಾಯಿಮುಚ್ಚಿ ಸುಮ್ಮನಾದರು.

ಸದ್ಯಕ್ಕೇನೂ ತೊಂದರೆ ಇರಲಾರದೆಂದು ಯಥಾಸ್ಥಿತಿಗೆ ಒಗ್ಗಿಕೊಂಡಿದ್ದ ಕಪಿಲಳ್ಳಿ ಹೊಸದೊಂದು ಸುತ್ತೋಲೆಗೆ ದಿಗಿಲುಬಿದ್ದು, ಜನ ಪಂಚಾಯತಿಯೆದುರು ಜಮಾಯಿಸಿ ಬಿಟ್ಟರು. ಅವರೆದುರು ನಿಂತು ಗಂಟಲು ಸರಿಪಡಿಸಿಕೊಂಡು ಕಾರ್ಯದರ್ಶಿ ಹೊಸ ಸುತ್ತೋಲೆ ಓದತೊಡಗಿದ.

“ಘನ ಭಾರತ ಸರ್ಕಾರವು ಗ್ಯಾಟು ಒಪ್ಪಂದಕ್ಕೆ ಸಹಿ ಹಾಕಿ ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯ ರಾಷ್ಟ್ರವಾಗಿರುತ್ತದೆ. ಗ್ಯಾಟು ಒಪ್ಪಂದದ ಪ್ರಕಾರ ನಮ್ಮ ದೇಶದವರು ವಿಶ್ವದ ಯಾವುದೇ ದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ. ನಮ್ಮ ದೇಶದ ಕೈಗಾರಿಕೆ, ವ್ಯಾಪಾರ, ವಹಿವಾಟುಗಳಲ್ಲಿ ವಿದೇಶೀಯರು ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ.

ಬಿತ್ತನೆ ಬೀಜದ ಹೊಸ ತಳಿಗಳ ಬಳಕೆ ಗ್ಯಾಟು ಒಪ್ಪಂದದ ಬಹು ಮುಖ್ಯ ಅಂಶವಾಗಿರುತ್ತದೆ. ಅದರ ಪ್ರಕಾರ ಇನ್ನು ಮುಂದೆ ರೈತರು ತಮ್ಮ ಹೊಲಗಳಲ್ಲಿ ತಮ್ಮ ಸ್ವಂತ ಬೀಜ ಬಿತ್ತುವಂತಿಲ್ಲ. ಸರ್ಕಾರದ ಕೃಷಿ ಇಲಾಖೆಯು ಬಿತ್ತನೆಗಾಗಿ ಅಮೇರಿಕಾದ ಮಾನ್ಸೆಂಟೋ ಬೀಜಗಳನ್ನು ಪೂರೈಕೆ ಮಾಡುತ್ತದೆ. ಇದು ಅತ್ಯಂತ ಸುಧಾರಿತ, ಬಹು ಇಳುವರಿಯ ಬಿತ್ತನೆ ಬೀಜವೆಂದು ವಿಶ್ವ ವ್ಯಾಪಾರ ಒಕ್ಕೂಟದ ಕೃಷಿ ತಜ್ಞರು ಪ್ರಯೋಗಗಳ ಮೂಲಕ ಸಿದ್ಧಪಡಿಸಿದ್ದಾರೆ. ರೈತರು ತಮ್ಮ ಹೊಲಗಳಲ್ಲಿ ಅಮೇರಿಕಾದ ಮಾನ್ಸೆಂಟೋ ಬೀಜಗಳ ಬದಲು ತಮ್ಮ ಸ್ವಂತ ಬೀಜಗಳನ್ನು ಬಿತ್ತುವುದು ಗ್ಯಾಟ್ ಒಪ್ಪಂದಕ್ಕೆ ವಿರುದ್ಧವಾಗಿರುತ್ತದೆ. ಹಾಗೇನಾದರೂ ಮಾಡಿದರೆ ಬೆಳೆ ನಾಶ ಮಾಡುವ ಅಥವಾ ಫಸಲನ್ನು ಕೊಯ್ದು ಕೊಂಡೊಯ್ಯುವ ಅಧಿಕಾರವನ್ನು ಮಾನ್ಸೆಂಟೋ ಬೀಜ ಕಂಪೆನಿ ಹೊಂದಿರುತ್ತದೆ. ಯಾವುದೇ ಕಾರಣಕ್ಕೆ ಈ ಆಜ್ಞೆಯನ್ನು ಉಲ್ಲಂಘಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.”

(ಸಹಿ) ಕೃಷಿ ಮಂತ್ರಿ, ಘನ ರಾಜ್ಯ ಸರ್ಕಾರ

ಸೆಕ್ರಟರಿ ಓದು ನಿಲ್ಲಿಸಿದಾಗ ಜನ ಮುಖ ಮುಖ ನೋಡಿಕೊಂಡರು. ಸುತ್ತೋಲೆ ಸುದ್ದಿಯಿಂದ ಕೆಂಡಾಮಂಡಲವಾದ ಪುಟ್ಟಣ್ಣ ತಕ್ಷಣ ಹೇಳಿದ. “ಅದ್ಯಾವ ಮಗಂದು ಆ ಮಾನ್ಸೆಂಟೋ ಬೀಜ ಅಂದ್ರೆ? ನಮ್ಮ ಬೀಜಗಳಲ್ಲಿ ಇಲ್ದೇ ಇರೋದು ಏನಿದೆಯಂತೆ ಅವನ ಬೀಜದಲ್ಲಿ? ಇಷ್ಟು ವರ್ಷ ನಮ್ಮ ಗದ್ದೆಗಳಲ್ಲಿ ನಮ್ಮದೇ ಬೀಜ ಹಾಕ್ಲಿಲ್ವಾ, ಫಸ್ಲಿಗೇನಾಗಿತ್ತು? ಗದ್ದೆ ನಮ್ದು, ಬೀಜ ಅಮೇರಿಕಾದ್ದು ಅಂದ್ರೇನರ್ಥ? ನಮ್ಮ ಮಣ್ಣು, ನೀರು, ಮಳೆಗೆ ತಕ್ಕಂತೆ ನಾವು ಬೀಜ ಬಿತ್ಬೇಕಾ, ಅಲ್ಲಾ ಆ ಅಮೇರಿಕಾದ ಕಳ್ಳ ನನ್ಮಕ್ಳು ಹೇಳಿದ ಹಾಗೆ ಕೇಳ್ಬೇಕಾ? ನಮ್ಮ ಗದ್ದೆಗೆ ಎಂಥಾ ಬೀಜ ಬೇಕೆಂದು ಅವ್ರೇನು ಕಪಿಲಳ್ಳಿಗೆ ಬಂದು ಮಣ್ಣು ಪರೀಕ್ಷೆ ಮಾಡಿದ್ದಾರಾ? ಇಲ್ಲಿನ ಬೆಳೆಗಳಿಗೆ ಬರೋ ರೋಗ ಅಲ್ಲಿನವರಿಗೆ ಹೇಗೆ ಗೊತ್ತಾಗ್ಬೇಕು? ಒಪ್ಪಂದವೋ, ಸುಡುಗಾಡೋ? ಇಂಥಾ ಒಪ್ಪಂದ ಮಾಡೋವಾಗ ನಮ್ಮಂಥ ರೈತರಲ್ಲಿ ಒಂದು ಮಾತು ಕೇಳಿದ್ರಾ?”

ಸೆಕ್ರಟರಿ ತಗ್ಗಿದ ಸ್ವರದಲ್ಲಿ ಸಮಜಾಯಿಸಿ ನೀಡಿದ. “ನೀವು ಹೇಳೋದು ನ್ಯಾಯವೆ. ಆದ್ರೆ ಈ ಗ್ಯಾಟು ಒಪ್ಪಂದದ ಪ್ರಕಾರ ಎಲ್ಲಾ ಉತ್ಪನ್ನಗಳನ್ನು ರಿಜಿಸ್ಟ್ರು ಮಾಡಿಸಿಕೊಳ್ಳಲೇ ಬೇಕಾಗುತ್ತದೆ. ಹಾಗಾದ್ರೆ ಮಾತ್ರ ಉತ್ಪನ್ನಗಳ ಹಕ್ಕು ಉತ್ಪಾದಕರಿಗೆ ಸಿಗೋದು. ಆ ಮಾನ್ಸೆಂಟೋ ಕಂಪೆನಿಯೋರು ಬಿತ್ತನೆ ಬೀಜಕ್ಕೆ ರಿಜಿಸ್ಟ್ರು ಮಾಡ್ಸಿಕೊಂಡಿದ್ದಾರೆ. ಅದಕ್ಕೇ ನಮ್ಮ ಹೊಲಗಳಲ್ಲಿ ಅವ್ರ ಬೀಜ ಬಿತ್ತನೆಯಾಗೋದು. ನಾವೇ ಮೊದ್ಲು ರಿಜಿಸ್ಟ್ರು ಮಾಡಿಸ್ಕೊಂಡಿದ್ರೆ ಅಮೇರಿಕಾ ದೋರ ಹೊಲಗಳಲ್ಲಿ ಭಾರತದೋರ ಬೀಜ ಬಿತ್ತನಯಾಗೋದು. ನಮ್ಮ ಯೋಗ್ಯತೆಗೆ ಅದಾಗಲಿಲ್ಲ. ಈಗ ನೋಡಿ ನಾವೆಲ್ಲಾ ಪ್ರತಿಫಲ ಅನುಭವಿಸೋ ಹಾಗಾಗಿದೆ.”

ಸಣ್ಣ ಮತ್ತು ಅಂಚಿನ ರೈತರ ನಾಯಕ ಶಿವಣ್ಣ ಸೆಕ್ರಟರಿಗೆ ಸುಮ್ಮನಿರುವಂತೆ ಸೂಚಿಸಿ ಪ್ರಶ್ನಿಸಿದ. “ಬಿತ್ತನೆ ಬೀಜಕ್ಕೆ ಅದೆಂತದ್ದು ರಿಜಿಸ್ಟ್ರು? ಇಲ್ಲಿವರೆಗೆ ಯಾವ ಗದ್ದೆಗೆ ಯಾವ ಬೀಜ ಅಂತ ನಿರ್ಧರಿಸುತ್ತಿದ್ದೋರು ಬಿತ್ತನೆ ಮಾಡುವವರು. ಈಗ ಎಲ್ಲಿಂದ ಬಂತು ಈ ಕಂಪ್ನಿ? ಅಮೇರಿಕಾದೋರಿಗೆ ಕಪಿಲಳ್ಳಿಯ ಮಣ್ಣಿನ ಗುಣ ಹೇಗೆ ಗೊತ್ತಾಗಬೇಕು? ಇದೆಲ್ಲಾ ಮೋಸ. ನಾವು ರೈತ ಸಂಘದವರು ದೊಡ್ಡ ರೀತಿಯಲ್ಲಿ ಇದರ ವಿರುದ್ಧ ಪ್ರತಿಭಟನೆ ಮಾಡಬೇಕು.”

ಅದಕ್ಕೂ ಸೆಕ್ರಟರಿಯೇ ಉತ್ತರಿಸಿದ. “ಯಾವ ಮಣ್ಣಿಗೆ ಯಾವ ಬೀಜ ಅನ್ನೋ ಪ್ರಯೋಗವನ್ನ ಕಂಪ್ನಿಯೋರು ಮಾಡಿ ಅದಕ್ಕೆ ಸಾಕ್ಷ್ಯಾಧಾರ ತಂದು ವಿಶ್ವ ವ್ಯಾಪಾರ ಸಂಸ್ಥೆಗೆ ತೋರಿಸಿದ್ದಕ್ಕೇ ಅದ್ರ ಹೆಸ್ರಲ್ಲಿ ಬಿತ್ತನೆ ಬೀಜ ರಿಜಿಸ್ಟ್ರು ಆಗಿರೋದು. ಇನ್ನು ಅದನ್ನು ಯಾರೂ ಪ್ರಶ್ನಿಸುವಂತಿಲ್ಲ.”

ಪುಟ್ಟಣ್ಣನಿಗೆ ವಿಪರೀತ ಸಿಟ್ಟು ಬಂತು. “ಏ ಸುಮ್ನಿರಿ ಸೆಕ್ರೆಟ್ರಿಗಳೇ ನೀವು. ಇದೆಲ್ಲಾ ಪೇಪರಲ್ಲಿ ನಾನು ಓದಿರೋನೇ. ಸರ್ಕಾರ ಅಂದ್ರೆ ಯಾರು? ನಾವು ಓಟು ಹಾಕಿ ಗೆಲ್ಲಿಸಿ ಕಳಿಸ್ದೋರು. ಹಾಗಿದ್ಮೇಲೆ ಇಂಥಾ ಒಪ್ಪಂದವಾಗೋವಾಗ ರೈತ್ರಲ್ಲಿ ಒಂದು ಮಾತು ಯಾಕೆ ಕೇಳಿಲ್ಲಾ ಇವ್ರು? ಇವ್ರಿಗಿಷ್ಟ ಬಂದಂತೆ ಒಪ್ಪಂದವೆಂದರೆ ನಮ್ಮದೇನು ಸರ್ವಾಧಿಕಾರದ ದೇಶವೇ? ಪ್ರಜಾಪ್ರಭುತ್ವದಲ್ಲಿ ಅನ್ಯಾಯವನ್ನು ಪ್ರಶ್ನಿಸೋ ಹಕ್ಕಿಲ್ವಾ? ನಮ್ಮ ಸ್ವಂತ ಹೊಲಗಳಲ್ಲಿ ಆ ಅಮೇರಿಕಾದ ಕೆಂಪು ಮೂತಿಯೋರ ಬೀಜ ಬಿತ್ತೋದು ಅಂದ್ರೆ ಅದು ಹಾದ್ರ ಮಾಡಿದಂಗಾ ಗೋದಿಲ್ವಾ? ಆ ಸುತ್ತೋಲೆ ಇಲ್ಲಿ ಕೊಡಿ. ಅದಕ್ಕೆ ಬೆಂಕಿ ಕೊಟ್ಟು ಬೀಡಿ ಸೇದಿ ಬಿಡ್ತೇನೆ.”

ಜನಗಳಲ್ಲಿ ಗುಜುಗುಜು ಆರಂಭವಾದಾಗ ಹಿರಿಯ ರೈತ ಮುಂಡಪ್ಪ ಗೌಡರು ಸೆಕ್ರಟರಿಯವರ ಹತ್ತಿರಹೋಗಿ ಎರಡೂ ಕೈಯೆತ್ತಿ ಎಲ್ಲರನ್ನೂ ಮೌನವಾಗಿರುವಂತೆ ಸೂಚಿಸಿದರು. “ಸುತ್ತೋಲೆ ಸುಟ್ಟು ಹಾಕಿದ್ರೆ ಸಮಸ್ಯೆ ಪರಿಹಾರವಾಗೋದಿಲ್ಲ. ಆದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ಪ್ರಶ್ನಿಸುವ ಹಕ್ಕು ಇರೋದು ನಿಜ. ನಮ್ಮ ಹೊಲಗಳಿಗೆ ಅಮೇರಿಕಾದ ಬೀಜವೇ ಎನ್ನುವುದು ನೈತಿಕ ಪ್ರಶ್ನೆಯಲ್ಲ. ಅದು ಈ ಮಣ್ಣಿನ ರೈತರ ಅಸ್ತಿತ್ವದ ಪ್ರಶ್ನೆ. ಇದು ಸುಲಭದಲ್ಲಿ ಪರಿಹಾರವಾಗುವ ಸಮಸ್ಯೆಯಲ್ಲ. ನಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡದೆ ನಮಗೆ ವಿಧಿಯಿಲ್ಲ. ನಾವು ರೈತ ಸಂಘದವರು ಮೊದಲು ಕೃಷಿ ಮಂತ್ರಿಯನ್ನು ನೋಡಿ ಮಾತಾಡಬೇಕು. ಆಮೇಲೂ ಸರ್ಕಾರ ಸುತ್ತೋಲೆ ಹಿಂದಕ್ಕೆ ಪಡೆಯದಿದ್ರೆ ಹೋರಾಟಕ್ಕೆ ಇಳಿಯಲೇಬೇಕಾಗುತ್ತದೆ. ಆದ್ರೆ ಈಗ್ಲೇ ನಾವು ಕಾನೂನನ್ನು ಕೈಗೆತ್ತಿಕೊಳ್ಳೋದು ತಪ್ಪು.”

ಜನ ಚಪ್ಪಾಳೆ ತಟ್ಟಿ ಒಪ್ಪಿಗೆ ಸೂಚಿಸಿತು. ಹಸಿರಂಗಡಿ ಎಮ್ಮೆಲ್ಯೆ ಗೋಪಾಲ ಗೌಡ, ರೈತ ಮುಖಂಡ ಮುಂಡಪ್ಪ ಗೌಡ ಮತ್ತು ಪಂಚಾಯತಿ ಉಪಾಧ್ಯಕ ತಿಮ್ಮಣ್ಣ ನಾಯ್ಕರ ಮುಖಂಡತ್ವದಲ್ಲಿ ನಿಯೋಗವೊಂದು ರಾಜಧಾನಿಗೆ ಹೋಗಿ ಕೃಷಿಮಂತ್ರಿಯನ್ನು ಭೇಟಿಯಾಗುವುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
* * *

ರಾಜಧಾನಿಗೆ ನಿಯೋಗ ಬಂದಿಳಿದು ಕೃಷಿ ಸಚಿವಾಲಯಕ್ಕೆ ಹೋದಾಗ ಕೃಷಿ ಸಚಿವರು ಬರಪೀಡಿತ ಪ್ರದೇಶದ ಕೃಷಿ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕೇತ್ರಾಧ್ಯಯನಕ್ಕಾಗಿ ಸ್ವಿಜರ್ಲಂಡಿಗೆ ಹೋದ ವಿಷಯ ತಿಳಿಯಿತು. ಸಚಿವರ ಪ್ಯಾದೆ, “ಇನ್ನು ಮೂರು ವಾರ ಅವ್ರು ಸಿಗಂಗಿಲ್ಲ ಬುಡಿ” ಎಂದು ಕೈ ತಿರುವಿದಾಗ ಗೋಪಾಲ ಗೌಡರು ಮುಂಡಪ್ಪ ಗೌಡರ ಮುಖ ನೋಡಿದರು. ಅವರು ತಿಮ್ಮಣ್ಣ ನಾಯ್ಕರನ್ನು ನೋಡಿದರು.

ತಿಮ್ಮಣ್ಣ ನಾಯ್ಕರು, “ಇದು ಬಿತ್ನೆ ಕಾಲ. ಇನ್ನೂ ಮೂರು ವಾರ ಕಾಯೋದ ಕ್ಕಾಗೋದಿಲ್ಲ. ಕೃಷಿ ಮಂತ್ರಿ ಇಲ್ದೆ ಇದ್ರೆ ಅವ್ರಿಗಿಂತ ಮೇಲಿನೋರು ಸೀಯೆಮ್ಮೇ ಇದ್ದಾರಲ್ಲಾ? ಅವ್ರನ್ನೇ ನೋಡಿ ಮಾತಾಡಿ ಬಿಡೋದು” ಎಂದು ಪರಿಹಾರ ಸೂಚಿಸಿದರು.

ಆ ಮಾತು ಕೇಳಿಸಿಕೊಂಡ ಪ್ಯಾದೆ ನಗುತ್ತಾ ಗುಟ್ಟು ಎಂಬಂತೆ ಸಣ್ಣ ಸ್ವರದಲ್ಲಿ ಹೇಳಿದ. “ಪತ್ರಿಕೆಗಳಿಗೂ ಸುದ್ದಿ ತಿಳಿಸ್ದೆ ಸೀಯೆಮ್ಮು ತುರ್ತಾಗಿ ಬೆಳಗ್ಗಿನ ಫ್ಲೈಟಿಗೆ ಅಮೇರಿಕಾಗೆ ಹೊರಟೋದ್ರು. ಅದೇನೋ ಕಾಯ್ಲೆ ವಾಸಿ ಮಾಡಿಕೊಂಡು ಬರಾಕೆ. ಅಮೇರಿಕಾಕ್ಕೋದೋರು ಅಷ್ಟು ಬೇಗ ಬರೋದುಂಟಾ?” ಕಂಗಾಲಾದ ಮುಂಡಪ್ಪ ಗೌಡರು ಕೇಳಿದರು. “ಅದ್ಯಾವ ದೊಡ್ಡ ಕಾಯ್ಲೆ ಅಷ್ಟು ಗುಟ್ಟಾಗಿ ಸೀಯೆಮ್ಮಿಗೆ ಬಂದಿರೋದು?”

ಪ್ಯಾದೆ ಪಿಸುಗುಟ್ಟಿದ. “ನಂನಂ ಒಲಾಗಳಲ್ಲಿ ನಂನಂ ಬೀಜ ಬಿತ್ನೆ ಮಾಡೋದು ಧರ್ಮ. ಕಂಡ್ಕಂಡ ಒಲಾಗಳ್ಗೆಲ್ಲಾ ಬಿತ್ನೆ ಮಾಡೋಕೋದ್ರೆ ಇನ್ನೆನಾಗುತ್ತೆ? ಬೀಜಕ್ಕೇ ಅದೇನೋ ರೋಗ ಅಂಟ್ಕೂಂಬುಟ್ಯದೆಯಂತೆ!”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಗಮಾಯ
Next post ಅಡಗುದಾಣ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

cheap jordans|wholesale air max|wholesale jordans|wholesale jewelry|wholesale jerseys