ನಂದಾ ದೀಪ

ನಂದಾ ದೀಪ

ಒಣಿಯು ತಿರುಗುವೆಡೆ ಕೆರೆಯೇರಿಯ ಮೇಲಿರುವ ಆ ದೀಪ ಸ್ತಂಭಕ್ಕೆ ‘ನಂದಾದೀಪ’ ಎನ್ನುವ ಹೆಸರು ವಿಲಕ್ಷಣವಾಗಿ ಕಾಣುವುದಿಲ್ಲವೆ? ಆದರೆ ಹಲವು ವೇಳೆ ವಿಲಕ್ಷಣವಾದ ಹೆಸರೇ ಲಕ್ಷಣವಾಗಿದೆ. ಲಕ್ಷಣವಾಗಿ ತೋರುವ ಹೆಸರೇ ಪರ್ಯಾಲೋಚಿಸಿದರೆ ವಿಲಕ್ಷಣ. ಇದಕ್ಕೊಂದು ನಿದರ್ಶನವಾಗಿ ನಿಂತಿದೆ ರಾಮಯ್ಯ ನವರ ಈ ‘ನಂದಾದೀಪ’.

ರಾಮಯ್ಯನವರು ನಿಷ್ಟಾವಂತ ಶ್ರೀಮಂತರು, ಅವರದು ದೊಡ್ಡ ಮನೆ, ಅದಕ್ಕೆ ತಕ್ಕಂತೆ ದೊಡ್ಡ ಚಾವಡಿ, ಅದರ ಬಲ ಮಗ್ಗುಲಲ್ಲಿ ದೇವರ ಕೋಣೆ, ಚಾವಡಿಯಿಂದ ಕೋಣೆಯೊಳಗೆ ನೋಡಲಾಗುವಂತೆ ನಡುಗೋಡೆಯಲ್ಲಿ ಚಿತ್ರ ಕೋರದಿರುವ ರಂಧ್ರಮಯ ಗವಾಕ್ಷ. ಅದರಿಂದ ನೋಡಿದರೆ ಒಳಗೆ ದೇವರ ಕೋಣೆಯಲ್ಲಿ ಕಾಣುವುದು ಅಲಂಕಾರವಾಗಿ ಬೆಳ್ಳಿ ಮಡಾಯಿಸಿದ ದೇವರ ಪೀಠ; ಪೀಠದ ಮೇಲೆ ದೇವರ ಮೂರ್ತಿ; ಉಭಯ ಪಾರ್ಶ್ವಗಳಲ್ಲಿ ಸದಾ ಮಿನುಗುತ್ತಿರುವ ತೂಗು-ದೀಪಾವಳಿ. ದೇವರಿದಿರಲ್ಲಿ ನಂದದ ನಂದಾದೀಪವನ್ನು ತಪ್ಪದೆ ತುಪ್ಪದಿಂದುರಿಸಬೇಕೆಂಬುದು ರಾಮಯ್ಯನವರ ದೀಕ್ಷೆ. ಗಾಳಿ ಬೀಸಿ ದೀಪವು ನಂದದಂತೆ ರಕ್ಷಣಾರ್ಥವಾಗಿ ರಂದ್ರಮಯ ಗವಾಕ್ಷ. ಇನ್ನಿತರ ಕಾರಣಗಳಿಂದ ದೀಪವೆಲ್ಲಾದರೂ ನಂದಿಹೋದರೂ ಒಂದಿಲ್ಲದಿದ್ದರಿನ್ನೊಂದು ಉಳಿದೇ ಉಳಿಯುವಂತೆ ಉಭಯ ಪಾರ್ಶ್ವಗಳಲ್ಲಿ ತೂಗು-ದೀಪಾವಳಿ. ಬತ್ತಿಯು ಕರಿಗಟ್ಟಿ ಹೋಗಿ ದೀಪವು ಆರದಂತೆ ಒಳ್ಳೆಯ ಹತ್ತಿಯನ್ನು ತಂದು ತಾನೇ ಹಿಂಜಿ ಕಸಕಡ್ಡಿಗಳನ್ನು ತೆಗೆದು ಹದವಾಗಿ ತಿರುಸಿ ಬತ್ತಿಯನ್ನು ಮಾಡುವ ಕೆಲಸವು ರಾಮಯ್ಯನವರದೇ. ಇದೂ ಅವರ ನಿತ್ಯಾನುಷ್ಠಾನದಲ್ಲೊಂದು ಭಾಗ. ಅವರು ದಿನಾಲೂ ದೇವರ ಪೂಜೆಯನ್ನು ಮುಗಿಸಿ ಕೋಣೆಯಿಂದ ಹೊರಗೆ ಬರುವ ಮೊದಲೊಮ್ಮೆ, ಎಲ್ಲ ದೀಪಗಳಿಗೂ ತುಪ್ಪ ಸುರಿದು ಬತ್ತಿಗಳನ್ನು ಮುಂದೂಡಿ ಸೊಡರುಗಳನ್ನು ಸರಿಗೊಳಿಸುತ್ತಿದ್ದರು. ಲೌಕಿಕ ಕಾರ್ಯದಿಂದಾಗಿ ಹೊರಗೆಲ್ಲಾದರೂ ಹೋಗಿ ಹಿಂತಿರುಗಿ ಬಂದೊಡನೆ ಮೊದಲಾಗಿ ಆ ಕಿಂಡಿಯ ಬಳಿಗೆ ಹೋಗಿ ನಂದಾದೀಪವು ನಂದದೆ ಇದೆಯೋ ಎಂದು ನೋಡಬೇಕು ಅವರಿಗೆ. ಮನೆಯಲ್ಲಿದರೆಂತೂ ಆಗಾಗ ಗವಾಕ್ಷದ ಬಳಿಗೆ ಹೋಗಿ ಒಳಗೆ ಇಣಿಕಿನೋಡದೆ ಇರುತ್ತಿದ್ದಿಲ್ಲ. ಅಲ್ಲದೆ ಮನೆಯವರಿಗೆಲ್ಲರಿಗೂ ಈ ವಿಷಯದಲ್ಲಿ ಎಚ್ಚರಿಕೆಯಿಂದಿರುವಂತೆ ಅವರ ಕಟ್ಟಾಜ್ಞೆಯಿತ್ತು. ಆದುದರಿಂದ ರಾಮಯ್ಯನವರಲ್ಲಿ ನಂದಾದೀಪವು ನಂದದೆ ಹಲವು ವರುಷಗಳಿಂದಲೂ ಉರಿಯುತ್ತಲಿತ್ತು. ಸಾಯಂಕಾಲ ದೇವರ ಮುಂದೆ ದೀಪ ಹಚ್ಚುವಾಗ ಎಷ್ಟೋ ಮನೆಗಳಲ್ಲಿ ರಾಮಯ್ಯನವರ ಮನೆಯ ನಂದಾದೀಪದ ಮಾತು ಬಾರದೆ ಇರುತ್ತಿದ್ದಿಲ್ಲ. ಮನೆಮನೆಯ ಮುದಕಿಯರು ದೇವರ ಕೋಣೆಯ ಹೊಸ್ತಿಲ ಬಳಿ ಗೋಡೆಗೆ ಒರಗಿ ಕುಳಿತು ಆಕಳಿಸುತ್ತ ರಾಮನಾಮಸ್ಮರಣೆ ಮಾಡುವಾಗ ರಾಮಯ್ಯನವರ ಸಿರಿಸಂಪತ್ತಿಗೆಲ್ಲ ಅವರ ನಂದಾದೀಪವೇ ಕಾರಣವೆಂದು ಅಧಿಕಾರವಾಣಿಯಿಂದ ಮೊಮ್ಮಕ್ಕಳಿಗೆ ಹೇಳಿಬಿಡುತ್ತಿದ್ದರು. ಹೀಗಾಗಿ ಆ ಊರ ದನಮೇಯಿಸುವ ಹುಡುಗರೂ ಗೋಳಿಯ ಮರದಡಿ ಕುಳಿತು ಹುರಿದ ಹುಣಸೆಯ ಬೀಜವನ್ನು ಜಗಿಯುತ್ತ ಊರ ಹರಟೆ ಹೊಡೆಯುವಾಗ ‘ಅಯ್ಯನೋರ ನಂದಾದೀಪದಿಂದ ಸಿರಿಯೋ ಸಿರಿಯಿಂದ ನಂದಾದೀಪವೋ?’ ಎಂಬ ವಾದವೆಬ್ಬಿಸುವುದಿತ್ತು.

ನವರಾತ್ರಿಯು ಬಂತೆಂದರೆ ರಾಮಯ್ಯನವರಲ್ಲಿ ರಾತ್ರಿ ಪೂಜೆಯು ಬಹಳ ವಿಜೃಂಭಣೆಯಿಂದ ನಡೆಯುತ್ತಲಿತ್ತು. ನೋಡುವುದಕ್ಕಾಗಿ ಊಟಕ್ಕಾಗಿ ಎಂದು ಊರೆಲ್ಲ ಬಂದು ಕೂಡುತ್ತಿತ್ತಲ್ಲಿ. ರಾಮಯ್ಯನವರು ನಂದಾದೀಪಗಳ ಬತ್ತಿಗಳನ್ನೆಲ್ಲ ಮುಂದೂಡಿ ಸರಿಗೊಳಿಸಿ ಇನ್ನೂ ಹಲವು ಬೆಳಕುಗಳನ್ನು ಹೊತ್ತಿಸಿ ಮಂಗಳಾರತಿಯನ್ನೆತ್ತುವಾಗ ಆ ಕೋಣೆಯಲ್ಲಿ ದಿವ್ಯ ಸನ್ನಿಧಿಯುಂಟಾಗಿದೆ ಎಂದು ತಿಳಿದುಕೊಳ್ಳುತ್ತಿದ್ದರು. ಅದರ ಆರಾಧನೆಯಲ್ಲವರು ತಲ್ಲೀನರಾಗುತ್ತಿದ್ದರು. ಅವರು ಪೀಠದ ಮೇಲೆ ನೆಟ್ಟ ದೃಷ್ಟಿಯು ಅಲ್ಲಿ ಆವಾಹಿತವಾಗಿದ್ದ ದೇವತೆಯನ್ನು ತನ್ನ ಹೃದಯಪೀಠದಲ್ಲಿ ಉಪಸ್ಥಿತವಾಗುವಂತೆ ಆಕರ್ಷಿಸುವಂತಿತ್ತು. ಅದೊಂದು ಆವೇಶಸರವಾದ ನೋಟ.

ಮಂಗಳಾರತಿಯು ಮುಗಿದಿತ್ತು. ಅದನ್ನು ನೋಡುತ್ತಿದ್ದ ಜನರು ಪುನಃ ಗುಜುಗುಜು ಮಾತಾಡಹತ್ತಿದ್ದರು. ರಾಮಯ್ಯನವರು ಮೂರ್ತಿಯ ಕಡೆ ಏಕಾಗ್ರತೆಗೊಂಡಿದ್ದ ತನ್ನ ಮನಸ್ಸನ್ನು ತಿರುಗಿಸಿ ಗುಜುಗುಜು ಮಾತಿನ ಕಡೆಗೆ ಕಿವಿಗೊಟ್ಟಿದ್ದರಷ್ಟೆ. ‘ಇಲ್ಲಿಯದೊಂದು ದೀಪ ಅಲ್ಲಿದಿದ್ದರೆ’ ಎಂಬ ಅಸ್ಪಷ್ಟವೂ ಅಸಂಪೂರ್ಣವೂ ಆದ ಮಾತು ಅವರ ಕಿವಿಗೆ ಬಿತ್ತು. ತಾನು ದೇವರ ಮುಂದೆ ಹಚ್ಚಿದ್ದ ಯಾವುದೋ ಒಂದು ದೀಪವು ತಕ್ಕ ಸ್ಥಾನದಲ್ಲಿದ್ದಿಲ್ಲವೆಂದೂ ಅದು ಬೇರೊಂದು ಸ್ಥಾನದಲ್ಲಿದ್ದಿದ್ದರೆ ಒಳ್ಳಿ ತಾಗುತ್ತಿದ್ದಿತೆಂದೂ ಪ್ರೇಕ್ಷಕರಲ್ಲಿ ಯಾರೋ ಮಾತಾಡಿಕೊಳ್ಳುತ್ತಿದ್ದರೆಂದು ರಾಮಯ್ಯನವರು ತಿಳಿದುಕೊಂಡರು. ‘ಏನು? ಎಲ್ಲಿಯ ದೀಪ? ಎಲ್ಲಿದ್ದಿರ ಬೇಕಿತ್ತು?’ ಎಂದರು. ತಮ್ಮಲ್ಲೊಬ್ಬ ಸುಧಾರಕರ ಗಾಳಿತಾಗಿದ ತರುಣನಾಡಿದ ಅನುಚಿತವಾದ ಹುಚ್ಚು ಮಾತು ರಾಮಯ್ಯನವರ ಕಿವಿಗೆ ಬಿತ್ತೆಂದು ಜನರು ಅವಾಕ್ಕಾದರು. ಅದರಿಂದಾಗಿ ಅವರ ಮೋರೆಯಲ್ಲಾದ ಕಳವಳದ ಕುರುಹು ರಾಮಯ್ಯನವರಿಗೆ ತಿಳಿಯದೆ ಇರಲಿಲ್ಲ. ಅವರ ಕಣ್ಣು ಬಿದ್ದ ಕೆಲವರು, ‘ಏನೂ ಇಲ್ಲ, ಏನೂ ಇಲ್ಲ, ಎಲ್ಲ ಸರಿ!’ ಎಂದುಬಿಟ್ಟರು. ರಾಮಯ್ಯನವರಿಗೆ ಅಸಮಾಧಾನವಾಗುತ್ತಿರುವುದನ್ನು ಕಂಡು ಪುರೋಹಿತ ಭಟ್ಟರು ಅಲ್ಲಿದ್ದೊಂದು ದೀಪವನ್ನು ತುಸು ದೂರಕ್ಕೂ ಹಿಂದಕ್ಕೂ ದೂಡಿಟ್ಟು ‘ಈ ದೀಪವು ಇಲ್ಲಿದ್ದಿದ್ದರೆ ದೇವರ ಮುಖದ ಮೇಲೆ ಮತ್ತಷ್ಟು ಪ್ರಭೆ ಬಿದ್ದು ಕಳೆಯೇರುತ್ತಿತ್ತೆಂದು ಮಾತಾಡಿಕೊಳ್ಳುತ್ತಿದ್ದ ರವರು’ ಎಂದರು. ರಾಮಯ್ಯನವರು ಮೂರ್ತಿಯ ಕಡೆಗೆ ನೋಡಿದರು; ದೀಪದ ಸ್ಥಾನಾಂತರದಿಂದ ಅದರ ಮೇಲೆ ಪ್ರಭಾವಿಶೇಷವೇನೂ ಬಿದ್ದ ಹಾಗೆ ತೋರಲಿಲ್ಲ. ಆದರೆ ಆ ಮಾತಿಗೇ ಸೈಗುಟ್ಟಿದಂತೆ ಜನರು ಮೋರೆಮಾಡಿದ್ದರು. ಅಂತೂ ಜನರು ದಾಕ್ಷಿಣ್ಯವರ್ತಿಗಳಾಗಿ ಹೇಳಬೇಕಾಗಿದ್ದೊಂದು ವಿಷಯವನ್ನು ತನ್ನಿಂದ ಮರೆಮಾಜಿರಬೇಕೆಂಬ ಸಂಶಯವು ರಾಮಯ್ಯನವರ ಮನಸ್ಸಿನಲ್ಲಿ ಉಳಿಯಿತು. ‘ಇಲ್ಲಿಯದೊಂದು ದೀಪ ಅಲ್ಲಿ ಇದ್ದಿದ್ದರೆ’ – ಎಲ್ಲಿ ಇದ್ದಿದ್ದರೆ? ಏನಾಗುತ್ತಿತ್ತು? ಎಂಬುದೊಂದು ಸಮಸ್ಯೆಯಾಯಿತು ಅವರಿಗೆ. ಅದನ್ನೇ ತಿರು ತಿರುಗಿ ಯೋಚಿಸುತ್ತಿದ್ದರು ಅವರು.

ಬಂದವರೆಲ್ಲರೂ ಊಟಕ್ಕೆ ಕುಳಿತರು. ಊಟವಾಗುತ್ತಿದ್ದಾಗ ತುತ್ತು ತುತ್ತಿಗೊಂದರಂತೆ ಮಾತುಕತೆಗಳು ಬರುತ್ತ, ಹಿಂದಿನ ರಾತ್ರಿ ಊಟವಾಗಿ ಹೋಗುತ್ತಿದ್ದಾಗ ಸುಬ್ಬಣ್ಣನು ಹೆಜ್ಜೆ ತಪ್ಪಿ ಕೆರೆಗೆ ಬಿದ್ದ ಪ್ರಸ್ತಾಪವು ಬಂತು. ‘ಈಜು ಗೊತ್ತಿದ್ದುದರಿಂದ ಬದುಕಿಕೊಂಡ!’ ‘ಬರೇ ಒಂದು ಕೋಲು ಅಗಲದ ಹಾದಿ!’ ‘ಆಚೆ ಹಿತ್ತಲ ಗೋಡೆ ಈಚೆ ಕೆರೆ!’ ‘ಕತ್ತಲಲ್ಲಿ ಒಂದು ಹೆಜ್ಜೆ ತಪ್ಪಿ ಇಟ್ಟರೆ ಪ್ರಾಣಕ್ಕೆ ಬಂತು!’ ‘ಹಳ್ಳಿಯಿಂದ ಬರುವ ಹಾದಿಯೂ ಅದೊಂದೇ!’ ಹೀಗೆ ಒಬ್ಬೊಬ್ಬರು ಒಂದೊಂದು ಮಾತು ಸೇರಿಸುತ್ತಿದ್ದಾಗ ರಾಮಯ್ಯನವರ ಮನಸ್ಸಿನಲ್ಲಿ ಮಿಂಚಿನಂತೆ ಹೊಂಚಿತು ಆ ಸಮಸ್ಯೆ. ‘ಇಲ್ಲಿದ್ದೊಂದು ದೀಪ ಅಲ್ಲಿ ಇದ್ದಿದ್ದರೆ!’ ಆಗ ಎಲ್ಲವೂ ಸ್ಪಷ್ಟವಾಯಿತು. ಆ ಮೇಲೆ ಅದು ಸಮಸ್ಯೆಯಾಗಿ ಉಳಿಯಲಿಲ್ಲ. ‘ಇಲ್ಲಿದ್ದೊಂದು ದೀಪ ಅಲ್ಲಿ ಇದ್ದಿದ್ದರೆ ಎಷ್ಟೋ ಅವಘಡಗಳು ಸಂಭವಿಸುತ್ತಿದಿಲ್ಲ’ ಎಂದು ಪೂರ್ಣಗೊಂಡಿತು. ‘ಹೌದು ಮಹತ್ತಾದ ಪರೋಪಕಾರ ಕಾರ್ಯವಾಗುತ್ತಿತ್ತು! ಪರೋಪಕಾರವೇ ಪುಣ್ಯ! ಅದೇ ಉತ್ತಮವಾದ ದೇವರ ಸೇವೆ!’ ಎಂದಿತು ಅವರ ಹೃದಯ.

ಎಷ್ಟೊಂದು ಚಿಕ್ಕ ಮಾತು! ಯಾರೋ ಹುಡುಗಾಟಿಕೆಯಿಂದ ಏನೋ ಹೇಳಿದ ಅಸಂಪೂರ್ಣವಾದ ಮಾತು! ಎಷ್ಟೊಂದು ಸಾಮಾನ್ಯ ಸಂದರ್ಭ! ಆದರೆ ಇವುಗಳಿಂದಲೇ ರಾಮಯ್ಯನವರ ಹೃದಯಪರಿವರ್ತನೆಯಾಯಿತು. ಅವರಿಗಂದು ನಿದ್ದೆ ಹತ್ತಲಿಲ್ಲ. ಬೆಳಗಿನ ತನಕವೂ ಯೋಚಿಸುತ್ತ ಮಲಗಿದ್ದರು. ಎಂದೂ ತೋರದ ಹೊಸ ವಿಚಾರವು ಅವರ ಮನಸ್ಸನ್ನು ತುಂಬಿತ್ತು. ಅದೇ ದಿವ್ಯ ಜ್ಞಾನದ ಅರುಣೋದಯ! ಅಜ್ಞಾನದ ಪರಾಜಯ! ‘ದೀಪವು ಬೇಕಾಗಿದ್ದುದು ಕೆರೆದಂಡೆಯಲ್ಲಿ; ಆದರೆ ನಾನು ಉರಿಸಿದುದು ಕೋಣೆಯಲ್ಲಿ! ಶತಕೋಟಿ ಸೂರ್ಯರನ್ನು ನಿರ್ಮಿಸಿರುವ ದೇವನಿಗೆ ನನ್ನ ನಂದಾದೀಪ!! ಹಸಿವಿಲ್ಲದ ದೇವರ ಮುಂದೆ ಬಗೆಬಗೆಯ ಭಕ್ಷ, ಭೋಜ್ಯಗಳನ್ನಿಟ್ಟೆ; ಆದರೆ ಹಸಿದವರಿಗೇನಿತ್ತೆ? ಸೇವೆ ಬೇಡಾದವನ ಬಳಿಯಲ್ಲಿ ಕಾಲ ಕಳೆದೆ; ಆದರೆ ಬೇಕಾದವರ ಕಡೆಗೆ ನೋಡಿಲ್ಲ! ಗೊಂಬೆಯಲ್ಲಿ ಚೇತನಶಕ್ತಿಯನ್ನು ಕಲ್ಪಿಸಿಕೊಂಡು ಮಗುವು ಆಡುವ ಕಾಲಕ್ಕೂ ಮಿತಿ ಯೊಂದಿದೆ. ಆ ಮೇಲೆ ಅದು ವಿಚಾರದ ಮಟ್ಟಕ್ಕೇರಿ ಗೊಂಬೆಯನ್ನು ಗೊಂಬೆಯಾಗಿಯೇ ತಿಳಿಯುವುದು. ನಾನಾದರೋ ಕೋಣೆಯಲ್ಲಿ ಕುಳಿತು ದೇವರ ಪೂಜೆಯೆಂಬ ಗೊಂಬೆಯಾಟವನ್ನು ಕೂದಲು ನರೆಯುವವರೆಗೂ ಆಡುತ್ತಲಿದ್ದೆ! ಹೌದು, ನಾನೊಬ್ಬ ನರೆತಕೂದಲ ದೊಡ್ಡ ಮಗುವಾಗಿದ್ದೆ!….’ ಎಂದು ಮುಂತಾಗಿ ರಾಮಯ್ಯನವರಲ್ಲಿ ದಿವ್ಯ ಜ್ಞಾನದ ಭಾವನಾತರಂಗಗಳು ಏಳುತ್ತಲಿದ್ದುವು.

ಪರಿಣಾಮವಾಗಿ ಈಗ ರಾಮಯ್ಯನವರು ಸ್ಥಾಪಿಸಿರುವ ಅನಾಥ ಬಾಲಕರ ಪಾಲನಾಗೃಹವಿದೆ; ಅದರ ಹೆಸರು ‘ಬಾಲಕೃಷ್ಣ ಗುಡಿ’! ವೃದ್ದಾತುರರ ರಕ್ಷಣಾಲಯವಿದೆ; ಅದನ್ನು ‘ಜನಾರ್ದನ ಸನ್ನಿಧಿ’ ಎಂದು ಕರೆಯುವರು, ನಿರ್ಬಲರಿಗೂ ಅಂಗಹೀನರಿಗೂ ಅನ್ನ ದಾನದ ವ್ಯವಸ್ಥೆಯಿದೆ; ಅದರ ಹೆಸರು ‘ದೇವರ ಸೇವೆ’! ಆ ಕೆರೆಯೇರಿಯಲ್ಲಿರುವ ದೀಪ ಸಂಭಕ್ಕೇನು ಹೆಸರೆಂದು ರಾಮಯ್ಯನವರನ್ನು ಯಾರಾದರೂ ಕೇಳಿದರೆ ಮುಗುಳು ಮುಗುಳಾಗಿ ನಗುತ್ತ ಅವರು ಹೇಳುವುದು ‘ನಂದಾದೀಪ’!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನಿಹ
Next post ಮನೋಲೀಲೆ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…