ಮನಸ್ಸು,
ನಾನು ನೋಡ್ತಾ ಇರ್‍ತೀನಿ
ಕಣ್ಸೆಳೆವ
ಹೂವು, ಹಣ್ಣು, ಎಲೆ
ಲೋಕದ ಯಾವುದೋ ಒಂದು
ಕಣ್ಮುಂದೆ ಹಾದು ಹೋದರೆ
ಮೆಚ್ಚಲಿ ತೊಂದರೆಯಿಲ್ಲ!
ಅದು ಬಿಟ್ಟು … ಕೆಟ್ಟದ್ದು
ಪುಸಕ್ಕನೆ
ಕಣ್ಣಿ ಹರಿದ ದನದಂತೆ ಹಾರಿ
ತನ್ನದೇಯೆಂಬಂತೆ
ಮನಸ್ವಿ ಅನುಭವಿಸಿ
ಕದ್ದು, ಗಡದ್ದಾಗಿ ಕುಡಿದು
ಕೆಂಪಾದ ಹುರುಳಿ ಎಲೆಯಂತ ನಾಲಿಗೆಯಲಿ
ಹಾಲು ಮೆತ್ತಿದ ಬಾಯಿ ಒರೆಸಿಕೊಳ್ಳುತ್ತಾ
ಠೀವಿಯಿಂದ ಹೊರಬರುವ ಬೆಕ್ಕಿನಂತೆ
ಮಗುಮ್ಮಾಗಿ ವಾಪಸ್ಸು ಬಂದು ಸೇರುತ್ತೆ
ಕಸಿವಿಸಿ ತರುತ್ತೆ
ಒಂದು ಅಳಿ ಘಳಿಗೆಯಲಿ
ನಾನು ಜಾರಿದರೆ ಇರಬಹುದೆ
ನಡುವೆ ಗೌರವಯುತವಾಗಿ.

ಈ ವಿಚಿತ್ರ
ಮನೋ ಲೀಲೆಯಲಿ
ಜನ್ಮಕ್ಕೆ ನೆಮ್ಮದಿಯಿಲ್ಲದಂತಾಗಿದೆ.
*****