ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,

ಅವನು ಇಷ್ಟು ದಿನ ಬದುಕಿದ್ದೇ ಸುಳ್ಳೆಂಬಂತೆ ಸತ್ತು ಮಲಗಿದ್ದಾನೆ. ಕೊನೆಯದಾಗಿ ಅವನ ನಿರ್ಜೀವ ದೇಹವನ್ನು ನೋಡಲೆಂದೇ ಈ ಅವನ ಗೆಳೆಯ ಬಂದಿದ್ದಾನೆ. ಎರಡು ದೇಹ ಒಂದು ಜೀವವೆಂಬಂತಿದ್ದ ಈ ಗೆಳೆಯರಲ್ಲಿ ಒಬ್ಬ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದೇ ನೆವವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೋಡಲು ಬಂದವನೂ ನಪಾಸಾಗಿದ್ದಾನೆ. ಸತ್ತ ಗೆಳೆಯನನ್ನು ನೋಡುತ್ತಾ ಇವನು ಯೋಚಿಸುತ್ತಿದ್ದಾನೆ. ಈಗ ಬದುಕಿನಲ್ಲಿ ಎಲ್ಲಾ ಮುಗಿದುಹೋಯಿತೆಂದು ಆತ್ಮಹತ್ಯೆ ಮಾಡಿಕೊಳ್ಳಬೇಕೇ?

ಒಮ್ಮೆ ಬದುಕಿನಲ್ಲಿ ಸೋತರೆ ಅದೇ ಕಟ್ಟಕಡೆಯ ಸೋಲೆ? ಮುಂದೆ ಗೆಲುವೇ ಇಲ್ಲವೇ ? ಅಥವಾ ಇದನ್ನು ಹೊರತು ಪಡಿಸಿ ಬೇರೆ ಬದುಕೇ ಇಲ್ಲವೇ ? ಬದುಕೆಂದರೆ ಇಷ್ಟೆಯೇ? ಒಂದು ಯಕಶ್ಚಿತ್ ಪರೀಕ್ಷೆಯಲ್ಲಿ ಫೇಲಾದೊಡನೆ ಬದುಕೇ ಮುಗಿದಂತೆಯೇ? ಬದುಕಿನಲ್ಲಿ ಒಮ್ಮೆ ಒಂದು ಬಾಗಿಲು ಮುಚ್ಚಿತೆಂದಾದರೆ ಅದೆಂದೂ ತೆರೆಯುವುದೇ ಇಲ್ಲವೇ ? ಅಥವಾ ಬದುಕಿಗೆ ಅದೊಂದೇ ಬಾಗಿಲೆ ? ಕಣ್ಣು ತೆರೆದು ನೋಡಿದರೆ ಸುತ್ತಲೂ ಅದೆಷ್ಟು ಅವಕಾಶಗಳಿವೆ. ವಿಭಿನ್ನ ಸಾಧ್ಯತೆಗಳಿವೆ. ಯಾಕಿಂಥಾ ಮೌಢ್ಯ ನನ್ನ ಗೆಳೆಯನನ್ನು ಆವರಿಸಿತು?

ಕಳೆದ ತಿಂಗಳಷ್ಟೇ ಮನೆಯವರು ಬೈಕ್ ಕೊಡಿಸಲಿಲ್ಲವೆಂದು ಸಹಪಾಠಿಯೊಬ್ಬ ವಿಷ ಕುಡಿದು ಸತ್ತದ್ದು ನೆನಪಾಯ್ತು. ನೀನು ಬದುಕಿದ್ದರೆ ಇಂದಲ್ಲ ನಾಳೆ ಬೈಕ್ ಕೊಳ್ಳಬಹುದಿತ್ತು. ನಿಜ ಬದುಕು ಎಷ್ಟೊಂದು ದೊಡ್ಡದಿದೆ. ಸಾಧಿಸುವ ಛಲವಿದ್ದರೆ ಇಂದಲ್ಲ ನಾಳೆ ಗುರಿ ಸೇರಬಹುದು. ಅದು ಬಿಟ್ಟು ಸಣ್ಣ ಪುಟ್ಟ ಸೋಲಿಗೆ ಹೆದರಿ ಹೇಡಿಯಂತೆ ಸತ್ತರೇನು ಬಂತು?

ಕರುಳು ಬಿರಿಯುವಂತೆ ರೋಧಿಸುತ್ತಿರುವ ಗೆಳೆಯನ ತಂದೆ, ತಾಯಿ, ಅಕ್ಕತಮ್ಮ, ಬಂಧು ಬಳಗದವರ ಮಧ್ಯೆ ಇರುವ ಗೆಳೆಯನ ಕಳೇಬರಹವನ್ನೊಮ್ಮೆ ಇವನು ಮರುಕ, ತಿರಸ್ಕಾರದಿಂದ ನೋಡಿದ. ಗೆಳೆಯ ನಿನಗಾಗಿ ಎಷ್ಟೊಂದು ಪ್ರೀತಿ ತುಂಬಿಕೊಂಡಿದ್ದ ಜೀವಗಳನ್ನು ಘಾಸಿಗೊಳಿಸಿದ್ದೀಯೇ, ನೀನು ಘೋರ ತಪ್ಪು ಮಾಡಿಬಿಟ್ಟೆಯೋ. ಬದುಕೆಂದರೆ ಇಷ್ಟೇ ಎಂದು ಅದಕ್ಕೊಂದು ಪೂರ್ಣ ವಿರಾಮ ಹಾಕಿ ಬಿಟ್ಟೆಯಲ್ಲಾ. ಅದಕ್ಕೆ ಎಷ್ಟೊಂದು ಮಗ್ಗುಲುಗಳಿತ್ತು. ನೀನೇಕೆ ಕಣ್ತೆರೆದು ನೋಡಲಿಲ್ಲ? ಇಷ್ಟಕ್ಕೆ ಅಮೂಲ್ಯ ಬದುಕನ್ನು ವಿವೇಚನೆ ಇಲ್ಲದ ಹುಂಬನಂತೆ ಕೊನೆಗೊಳಿಸಿಬಿಟ್ಟೆಯಲ್ಲಾ. ಬದುಕು ನಿನ್ನನ್ನೆಂದೂ ಕ್ಷಮಿಸುವುದಿಲ್ಲ. ನಿನ್ನನ್ನು ನನ್ನ ಗೆಳೆಯನೆಂದು ಹೇಳಿಕೊಳ್ಳಲೇ ನನಗೆ ನಾಚಿಕೆಯಾಗುತ್ತಿದೆ. ಬದುಕಿನಲ್ಲಿ ಈ ಕ್ಷಣಕ್ಕೆ ಸೋತಿದ್ದೇನೆ. ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧಿಸಿ ತೋರಿಸುತ್ತೇನೆ. ನಿನ್ನಂಥಹ ಹೇಡಿಗಳಿಗೆ ಇದೋ ನನ್ನ ಧಿಕ್ಕಾರ ಎಂದು ಮನದಲ್ಲೇ ಉದ್ಗರಿಸಿಕೊಂಡವನೇ ಸರಸರನೆ ಹೊರ ನಡೆದುಬಿಟ್ಟ.
*****