ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಪೈಲ್ವಾನ್‌ ನಂಜಪ್ಪ

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಪೈಲ್ವಾನ್‌ ನಂಜಪ್ಪ

Bharatada Bavutaಸ್ವಾತಂತ್ರಕ್ಕಾಗಿ ಎಲ್ಲೆಡೆ ಹೋರಾಟ ನಡೆಯುತ್ತಿರುವಾಗ ಗಂಡುಮೆಟ್ಟಿನ ನಾಡು ಚಿತ್ರದುರ್ಗದಲ್ಲಿ ಮಾತ್ರ ರಣಕಹಳೆ ಮೊಳಗದಿರಲು ಸಾಧ್ಯವೆ ? ಇಂದಿನ ರಾಷ್ಟನಾಯಕ ನಿಜಲಿಂಗಪ್ಪನವರ ಗುಂಪು ಒಂದು ಕಡೆ ಚಳವಳಿ ಆರಂಭಿಸಿದ್ದರೆ, ರಾಜಕಾರಣಿ ಭೀಮಪ್ಪ ನಾಯಕರ ತಂಡ ಒಂದು ಕಡೆ ಸತ್ಯಾಗ್ರಹ ಪಿಕೆಟಿಂಗ್ ಇತಾದಿಗಳಲ್ಲಿ ತೊಡಗಿಸಿಕೊಂಡಿತು. ಇದೇ ದಿನಗಳಲ್ಲಿ ದೊಡ್ಡ ಗರಡಿ ಪೈಲಾನರ ದಂಡು ಪೈಲಾನ್ ನಂಜಪ್ಪನವರ ನೇತೃತ್ವದಲ್ಲಿ ಅಂಚೆ ಪೆಟ್ಟಿಗೆ ಸುಡುವುದು, ವಿದೇಶಿ ವಸ್ತುಗಳ ನಿಷೇಧ, ಸರ್ಕಾರಿ ವಸ್ತು ಲೂಟಿ ಇತ್ಯಾದಿ ಚಟುವಟಿಕೆಗಳನ್ನು ನಡೆಸುತ್ತಾ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿತ್ತು.

ಅಂದು ಪೈಲಾನ್ ನಂಜಪ್ಪ ಭಾರಿ ಕುಸ್ತಿಪಟುವಾಗಿ ಇಡೀ ಮೈಸೂರು ರಾಜ್ಯದಲ್ಲೇ ಹೆಸರುವಾಸಿಯಾಗಿದ್ದವರು. ದುರ್ಗದ ಬಂಡೆಗೆ ಕೈಕಾಲು ಮೂಡಿ ನಡೆದು ಬಂದಂತೆ ಭಾಸವಾಗುತ್ತಿದ್ದ ನಂಜಪ್ಪ ಐದು ಅಡಿ ಎತ್ತರದ ಮಟ್ಟಸವಾದ ಆಳು. ಮಹಾರಾಜರ ಅರಮನೆಗಳಲ್ಲಿ ಜಂಗಿ ಕುಸ್ತಿ ಮಾಡಿದಾತ, ದುರ್ಗದ ಹುಲಿಯೆಂದೇ ಪ್ರಖ್ಯಾತ.

ಸ್ವಾತಂತ್ರ ಹೋರಾಟದಲ್ಲಿ ಯುವಕರು ಪಾಲ್ಗೊಳ್ಳುತ್ತಿದ್ದ ಕಾಲವದು. ೨೦ರ ಹರೆಯದ ನಂಜಪ್ಪ ಕೂಡ ಗೆಳೆಯರ ಬಳಗ ಕಟ್ಟಿದರು. ಭೀಮಪ್ಪ ನಾಯಕರ ಬೆಂಬಲವೂ ಇತ್ತು. ಗರಡಿ ಹುಡುಗರಂತೂ ನಂಜಪ್ಪನವರ ಒಂದು ಇಶಾರಾಕ್ಕಾಗಿ ತುದಿಗಾಲ ಮೇಲೆ ನಿಂತಿರುತ್ತಿದ್ದರು. ದೇಶಪ್ರೇಮದ ತುಡಿತ ಬೇರೆ ನರನಾಡಿಗಳಲ್ಲಿ ಹರಿಯುತ್ತಿತ್ತು ೧೯೪೬-೪೭ ರಲ್ಲಿ ದೊಡ್ಡ ಗರಡಿ ದಂಡು ಸರ್ಕಾರದ ನಿದ್ದೆಗೆಡಿಸಿತು.

ಈ ದಂಡಿನ ಗಂಡುಗಳು ತಾಲ್ಲೂಕು ಕಚೇರಿಯ ಮೇಲಿನ ಬ್ರಿಟಿಷರ ಧ್ವಜ ಕಿತ್ತೆಸೆದು ಭಾರತದ ಧ್ವಜ ಹಾರಿಸುವ ಪಣ ತೊಟ್ಟರು. ಪೈಲಾನ್ ನಂಜಪ್ಪನವರ ಹಿಂದೆ ಸಾವಿರಾರು ಯುವಕರು ನದಿಯಂತೆ ಹರಿದುಬಂದರು. ಪೈಲಾನ್ ರಾಮಪ್ಪ, ಪಾಪಯ್ಯ, ಕೊಂಡಪ್ಪ, ಪುಟ್ಟಪ್ಪ, ವಸಂತ್, ಬಷೀರ್, ಶರಣಪ್ಪ ಅಂಬಾಜಿ ಪೈಲಾನರುಗಳು ಮೊದಲ ಸಾಲಿನಲ್ಲಿ ತೋಳು, ತೊಡೆ ತಟ್ಟಿ ಹೊರಟರು. ಜನವರಿ ೧೯೪೬ರಲ್ಲಿ ‘ದಂಡು ಬಂತು ದಂಡು ದೊಡ್ಡ ಗರಡಿ ದಂಡು’ ಎಂದು ಅಬ್ಬರಿಸುತ್ತ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ತಾಲ್ಲೂಕು ಕಚೇರಿ ಮೇಲೇರಿದ ಪೈಲಾನ್ ನಂಜಪ್ಪ ಪುಟ್ಟಪ್ಪ ಮತ್ತು ಪಾಪಯ್ಯ ಬ್ರಿಟಿಷರ ಧ್ವಜ ಕಿತ್ತು ಬೆಂಕಿ ಇಟ್ಟರು. ಅಷ್ಟರಲ್ಲಿ ಎಸ್.ಪಿ.ಭರಣಯ್ಯ ಜೀಪಿನಲ್ಲಿ ಪೊಲೀಸ್ ಪಡೆಯೊಂದಿಗೆ ಧಾವಿಸಿದರು. ಹೋರಾಟಗಾರರ ಮೇಲೆ ಲಾಠಿ ಪ್ರಹಾರ ನಡೆಯಿತು.

ಗುಂಪು ಹತೋಟಿಗೆ ಬಾರದೆ ಭಾರತದ ಧ್ವಜ ಹಾರಿಸುವ ಹುಮ್ಮಸ್ಸು ತೋರಿತು. ಡೆಪ್ಯೂಟಿ ಕಮೀಷನರ್ ಎಚ್.ಎನ್.ಪಾಳೇಗಾರ್ ಕಾರಿನಲ್ಲಿ ಬಂದಿಳಿದರು. ಪರಿಸ್ಥಿತಿ ಉಲ್ಬಣಿಸಿದ್ದರಿಂದ ಡಿ.ಸಿ. ಗೋಲೀಬಾರ್‌ಗೆ ಆಜ್ಞೆ ಹೊರಡಿಸಿದರು. ಬೆದರದ ದೊಡ್ಡ ಗರಡಿ ದಂಡು ಇಷ್ಟರಲಾಗಲೆ ತಾಲ್ಲೂಕು ಕಚೇರಿ ಮೇಲೆ ಭಾರತದ ದ್ವಜ ಹಾರಿಸಿಯಾಗಿತ್ತು. ಗೋಲಿಬಾರ್ ನಲ್ಲಿ ಪೈಲಾನ್ ಪಾಪಯ್ಯನವರಿಗೆ ಗುಂಡೇಟು ಬಿತ್ತು ಹಲವರು ಗಾಯಗೊಂಡರಾದರೂ ಪೈಲಾನ್ ನಂಜಪ್ಪ ಪುಟ್ಟಪ್ಪ ಅಲ್ಲಿಂದ ನೆಗೆದು ತಪ್ಪಿಸಿಕೊಂಡು ಎದುರಿನ ಪ್ರವಾಸಿ ಮಂದಿರ ಹೊಕ್ಕರು. ಅಲ್ಲಿದ್ದ ಮಿಲಿಟರಿ ಪಡೆ ಬಂಧಿಸುವ ಯತ್ನ ನಡೆಸಿತು. ಅಲ್ಲಿಂದ ತಪ್ಪಿಸಿಕೊಂಡ ಇವರು ವಾಸಣ್ಣನ ಹೋಟೆಲ್ (ಇಂದಿನ ಮೆಜೆಸ್ಟಿಕ್ ಸರ್ಕಲ್‌ ಬಳಿ) ಹೊಕ್ಕು ಕಕ್ಕಸುಗಳಲ್ಲಿ ಅವಿತಿದ್ದು ಕತ್ತಲಾಗುತ್ತಲೆ ರಂಗಯ್ಯನ ಬಾಗಿಲ ಸುತ್ತ ಇದ್ದ ಕಂದಕಗಳಲ್ಲಿ ಅಡಗಿ ಕೂತರು.

ತನ್ನ ಪೈಲಾನ್ ಗೆಳೆಯರಿಗೆ ಗುಂಡೇಟು ಬಿದ್ದಿದ್ದನ್ನು ಕಣ್ಣಾರೆ ಕಂಡಿದ್ದ ಪೈಲಾನ್ ನಂಜಪ್ಪ ಜ್ವಾಲಾಮುಖಿಯಾದರು. ಗೋಲಿಬಾರ್ ಗೆ ಆಜ್ಞಾಪಿಸಿದ ಎಚ್‌.ಎನ್. ಪಾಳೇಗಾರ್ ಸಾಹೇಬನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ನಿರ್ಧರಿಸಿ ಪುಟ್ಟಪ್ಪನನ್ನು ಅಲ್ಲೇ ಬಿಟ್ಟು ಮಧ್ಯರಾತ್ರಿಯಲ್ಲಿ ಡಿ.ಸಿ. ಬಂಗಲೇಗೆ ನುಗ್ಗಿ ಹಲ್ಲೆಗೆ ಇಳಿದರು. ಪೊಲೀಸರ ಮುತ್ತಿಗೆಯಲ್ಲಿ ಪ್ರಾಣಾಂತಿಕ ಏಟು ತಿಂದರೂ ಕಣ್ಣಪ್ಪಿಸಿ ಕತ್ತಲಲ್ಲಿ ಕರಗಿಹೋದ ನಂಜಪ್ಪ ದುರ್ಗಮವಾದ ಕೋಟೆಯಲ್ಲಿ ಸೇರಿಕೊಂಡು ಸರ್ಕಾರದೊಡನೆ ಕಣಾಮುಚ್ಚಾಲೆ ಆಟಕ್ಕೆ ನಿಂತರು. ಡಿ.ಸಿ.ಯಿಂದ ಬಂಧನದ ಆಜ್ಞೆ ಹೊರಬಿದ್ದಿತು.

ಕೋಟೆಯಲ್ಲಡಗಿದ್ದ ತಮ್ಮ ಉಸಾದ್ ಗೆ ಪೈಲಾನ್ ಪುಟ್ಟಪ್ಪ ಮತ್ತು ಯಾಶಿಕ್ ಹುಸೇನ್ ಕಳ್ಳತನದಿಂದ ಒಂದಷ್ಟು ದಿನ ಊಟ ಹೊತ್ತು ಕೊಟ್ಟರು. ಈ ಆಟ ಬಹಳ ದಿನ ಸಾಗಲಿಲ್ಲ. ಪೊಲೀಸ್ ಪಡೆ ಹಗಲು ರಾತ್ರಿ ನಂಜಪ್ಪನನ್ನು ಸೆರೆಹಿಡಿಯಲು ಕೋಟೆಯನ್ನೆಲ್ಲಾ ಬೆದಕಿತು. ಶತ್ರುಪಡೆಗಿರಲಿ ಮಿತ್ರರಿಗೂ ನಂಜಪ್ಪನವರ ಸುಳಿವು ಸಿಗದಂತಾಯಿತು. ನಂಜಪ್ಪ ಭೂಗತರಾದರು.

ದುರ್ಗದ ಕೋಟೆಯಲ್ಲಿ ತಿಂಗಳು ಕಳೆದು ಬೇಸತ್ತು. ದಾವಣಗೆರೆಗೆ ಬಂದ ಪೈಲಾನರಿಗೆ ಅಲ್ಲಿ ಪೈಲಾನ್ ಪರಪ್ಪನವರ ದುರ್ಗಪ್ಪ ರಕ್ಷಣೆ ಕೊಟ್ಟರು. ಮುಂದೆ ಉಚ್ಚಂಗಿದುರ್ಗ, ಮಹಾರಾಷ್ಟ್ರ ಗಡಿವರೆಗೂ ನಂಜಪ್ಪನವರ ಸಾಹಸ ಯಾತ್ರೆ ಸಾಗಿತು. ನಂಜಪ್ಪನವರಿಗೆ ದುರ್ಗದ ಗಾಳಿ ಕುಡಿಯದೆ ಸಮಾಧಾನವಿಲ್ಲದಾಯಿತು.

ರೈಲು ಏರಿದರು. ಈ ಸುದ್ದಿಯನ್ನು ಪತ್ತೆಹಚ್ಚಿದ ಬೇಹುಗಾರಿಕೆ ದಳ ದಾವಣಗೆರೆಯ ಇನ್ಸ್ಪೆಕ್ಟರ್ ಖುರ್ಲಿಯವರಿಗೆ ಆದೇಶ ಕಳಿಸಿತು. ಖುರ್ಲಿ ಅವರು ನಂಜಪ್ಪನನ್ನು ರೈಲಿನಲ್ಲೇ ಬಂಧಿಸಿದರು. ನಂಜಪ್ಪ ಹುಲಿಯಂತೆ ಹೋರಾಡಿದರಾದರೂ ಅಪಾರ ಸಿಬ್ಬಂದಿಯ ಎದುರು ಅವರ ಶಸಾಸ್ತ್ರಗಳ ಎದುರು ಬಳಲಿ ಬೆಂಡಾದರು.

ಬಂಧಿತರಾಗಿ ಕಾರಾಗೃಹ ಸೇರಿದ ನಂಜಪ್ಪನವರ ಮೇಲೆ ಮೊಕದ್ದಮೆ ಹೂಡಲಾಯಿತು. ಎಂಟು ತಿಂಗಳ ಕಠಿಣ ಶಿಕ್ಷೆಯೂ ಜಾರಿಯಾಯಿತು. ಮೇ ೧೯೪೬ರಲ್ಲಿ ಬೆಂಗಳೂರಿನ ಸೆಂಟ್ರಲ್ ಜೈಲ್‌ಗೆ ರವಾನಿಸಲಾಯಿತು. ಪೈಲಾನ್ ಗಳಾದ ಬಷೀರ್, ಶರಣಪ್ಪ ಮತ್ತು ಅಂಬಾಜಿಯವರಿಗೆ ಆರು ತಿಂಗಳ ಸಜೆಯಾಗಿತ್ತು.

ಎಂಟು ತಿಂಗಳ ಕಾರಾಗೃಹ ಶಿಕ್ಷೆ ಅನುಭವಿಸಿ ಜನವರಿ ೧೯೪೭ರಲ್ಲಿ ದುರ್ಗಕ್ಕೆ ಬಂದ ನಂಜಪ್ಪನವರದು ಮತ್ತದೇ ಸಂಗ್ರಾಮ, ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆಯೇ ಈ ಪೈಲಾನರ ಹೋರಾಟಕ್ಕೆ ವಿರಾಮ. ಅಲ್ಲಿಯವರೆಗೂ ಹಸಿದ ಹುಲಿಯಂತೆ ಸರ್ಕಾರ ವಿರುದ್ಧ ಸಮರ ಸಾರಿದ್ದ ನಂಜಪ್ಪ ದುರ್ಗಕ್ಕೆ ದೊಡ್ಡ ಗರಡಿಗೆ ಬಹುದೊಡ್ಡ ಹೆಸರು ತಂದುಕೊಟ್ಟ ವ್ಯಕ್ತಿ.

೧೯೨೪ರಲ್ಲಿ ಜನಿಸಿದ ನಂಜಪ್ಪ ತಮ್ಮ ೪೦ರ ಪ್ರಾಯದಲ್ಲೇ ಅಸುನೀಗಿದರು. ಈತನ ಬಗ್ಗೆ ದುರ್ಗದ ಜನತೆಯ ಅಭಿಮಾನ ಇಂದಿಗೂ ಬತ್ತಿಲ್ಲ. ಪೈಲ್ವಾನ್ ನಂಜಪ್ಪನವರ ಕಂಚಿನ ಪ್ರತಿಮೆ ಕೋಟೆಯ ಎದುರೇ ಮಹಾರಾಣಿ ಕಾಲೇಜಿನ ಪಕ್ಕದಲ್ಲೆ ಕುಸ್ತಿ ಭಂಗಿಯಲ್ಲಿ ನಿಂತಿದ್ದು ಇಂದಿಗೂ ಯುವ ಪೈಲ್ವಾನರಿಗೂ ದುರ್ಗದ ಜನತೆಗೂ ಸ್ಪೂರ್ತಿಯ ಸೆಲೆಯಾಗಿದೆ.

ಪ್ರತಿ ವರ್ಷವೂ ನೂಲು ಹುಣ್ಣಿಮೆಯಲ್ಲಿ ನಡೆವ ದೊಡ್ಡ ಗರಡಿ ಉತ್ಸವದಲ್ಲಿ ಪೈಲಾನ್ ನಂಜಪ್ಪನವರ ಆಳೆತ್ತರದ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದನ್ನು ಗರಡಿ ಹುಡುಗರು ಇಂದಿಗೂ ಮರೆತಿಲ್ಲ- ಮರೆಯುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೀಗೂ ಇದ್ದಾರೆ
Next post ಮುತ್ತು

ಸಣ್ಣ ಕತೆ

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ದಿನಚರಿಯ ಪುಟದಿಂದ

  ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

 • ಬೋರ್ಡು ಒರಸುವ ಬಟ್ಟೆ

  ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…