ಮೊದಲು ಹವೆಯ ಬಗ್ಗೆ ಮಾತಾಡಿದೆವು
ಬಿಸಿಲ ಬೇಗೆ-ನೆಲದ ಧಗೆ-ಧೂಳು ಸುಳಿಗಾಳಿ
ಪಕೋಡಾ ಮಸಾಲೆ ಮೆಣಸು
ಕಾಯಿಸುವ ಹೊಗೆ
ಸೈಕಲು ರಿಕ್ಷಾಗಳ ಅಗತ್ಯ-ಅನಗತ್ಯ
ಎಮ್ಮೆಗಳ ಅಸಾಂಗತ್ಯ
ಹೈದರಾಬಾದಿನ ರಚನೆಯ ಕುರಿತು ಮಾತಾಡಿದೆವು
ವಾಸ್ತುಶಿಲ್ಪದ ಪ್ರಕಾರ
ಇದಕ್ಕೆ ಆಕಾರವಿಲ್ಲ ಆದರೆ
ನಡೆದಲ್ಲಿ ಬೆಳೆಯುವ
ನೋಡಿದಲ್ಲಿ ಏಳುವ
ಪವಾಡವಿದೆ
ನಿಜಾಮನನ್ನು ಬಯ್ದೆವು

ಒಬ್ಬರು ಹೇಳಿದರು-
ಹತ್ತು ವರ್ಷಗಳ ಕೆಳಗೆ
ನಾನೀ ನಗರವನ್ನು ಪ್ರೀತಿಸಿದ್ದೆ ಆಗ
ಗಾಳಿ ಬೆಳಕು ಮಳೆಯಿತ್ತು.  ಇಷ್ಟು ಜನ ಇರಲಿಲ್ಲ.
ಇನ್ನೊಬ್ಬರೆಂದರು-
ಹಿಂದೆ ಇದರ ಹೆಸರು ಭಾಗ್ಯನಗರ
ಒಂದು ಸಣ್ಣ ಪೇಟೆ
ಅದಕ್ಕೂ ಮೊದಲು ಇಲ್ಲಿ ಜನರೇ ಇರಲಿಲ್ಲ.
ಮೊತ್ತೊಬ್ಬರು ಕೇಳಿದರು-
ಹಾಗಾದರೆ ಈ ಶತಮಾನದ ಮೇಲೆ
ಇದರ ಅವಸ್ಥೆ ಏನು?
ಹೀಗೆ ಪ್ರಾಕ್ತನಾದ ರಹಸ್ಯ ಮತ್ತು
ಭವಿಷ್ಯದ ಆತಂಕದ ಮಧ್ಯೆ
ಹೈದರಾಬಾದಿಗಾಗಿ ನಾವು ಪರಿತಪಿಸಿದೆವು.

ನಾನೆಂದೆ-
ನನಗೆ ಈ ಹೈದರಾಬಾದು ಸುತ್ತಬೇಕು
ಇದರ ಆರಂಭ ಮತ್ತು ಅಂತ್ಯವನ್ನು ನೋಡಬೇಕು
ಇದರ ಜೋತುಬಿದ್ದ ಮಹಡಿಗಳನ್ನೂ
ಮತಾಡುತ್ತ ನಿಂತ ಮನುಷ್ಯರನ್ನೂ ದಾಟಿ
ಆಂಧ್ರಕ್ಕೆ ಆಂಧ್ರದಿಂದ ಹೊರಕ್ಕೆ
ತಲುಪುವ ದಾರಿಯನ್ನು ಕಂಡು ಹುಡುಕಬೇಕು.
ಆಚೆಗೆ ಕುಳಿತಿದ್ದ ವ್ಯಕ್ತಿಯೊಬ್ಬ ನಕ್ಕು ಹೇಳಿದ-
ಆಂಧ್ರವೆಂದರೆ ಇಂದಿರಾಗಾಂಧಿಯ ಸೀರೆ
ತೆಲಂಗಾಣ ಮಾತ್ರ ಬೇರೆ.
ನಾನು ತೆಲಂಗಾಣದ ಕವಿ.
ಯಾರೋ ಎತ್ತರದ ಧ್ವನಿಯಲ್ಲಿ ಹೇಳಿದರು-
ಎಲೆ ಕವಿ,
ನಿನಗೆ ಪ್ರಣಾಮ.  ನಿನಗಾಗಿ ನಾವು
ಎಷ್ಟು ಕಾಲದಿಂದ ಕಾಯುತ್ತಿಲ್ಲ!
ನಕ್ಸಲೀಯ,
ನಿನ್ನ ಗಡ್ಡ ಮೀಸೆಯ ಹಿಂದೆ ಮನುಷ್ಯ ಜನಾಂಗದ ಎಷ್ಟು
ಸಂಕಟವನ್ನು ಹಿಡಿದಿಟ್ಟಿದ್ದೀಯ.
ಅವನೆಂದ-
ನನ್ನ ನಕ್ಸಲೀಯ ಗೆಳೆಯನೊಬ್ಬ
ಮುಶೀರಾಬಾದ್ ಜೈಲಿನಿಲ್ಲಿದ್ದಾನೆ.
ಆತ ಕವಿತೆ ಬರೆಯಲಿಲ್ಲ.
ಆದರೂ ಕವಿಯಾಗಿದ್ದ.
ಆಮೇಲೆ ಎಲ್ಲರೂ ಕವಿತೆಯ ಬಗ್ಗೆ ಮಾತಾಡುತ್ತ ಕೂತರು.
ನಾನೆಂದೆ-
ನನಗೆ ಈ ಕೂಡಲೇ ಮುಶೀರಾಬಾದಿಗೆ ಹೋಗಬೇಕು.
ಯಾರು ಕೇಳಿಸಿಕೊಳ್ಳಲಿಲ್ಲ.

ಮತ್ತೆ ಹೊರ ಬಂದಾಗ ರಾತ್ರಿ ಬಹಳ ಸರಿದಿತ್ತು
ಅಬೀಡ್ಸಿನಿಂದ ಕೋಠಿಯ ನಡುವೆ
ಏನಿತ್ತು ಏನಿರಲಿಲ್ಲ
ಬೀದಿಯಲ್ಲಿ ಜನರಿದ್ದರೆ
ಇವರ ಕಣ್ಣುಗಳಲ್ಲಿ ಕಲ್ಲಿದ್ದಲೆ
ಯಾರೋ ನನ್ನನ್ನು ಕೂಗಿದರೆ
ನೆನಪಿಲ್ಲ
ಮಧ್ಯೆ ಒಂದೆರಡು ಬಾರಿ ಕಕ್ಕಿದ್ದು ಮಾತ್ರ ಗೊತ್ತು
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)